Dec 152011
 

ಪದ್ಯ ಪಕ್ಷದ ಮುಂದಿನೀ ಕಂತಿನಲಿ ನೀವು
ಹೃದ್ಯ ಕವಿತಾಪಾಕವನ್ನೆರೆವಿರ |
ವಿದ್ಯಾವರೇಣ್ಯರೇ ಶಾರದೆಯ ಕಂದಗಳೆ
ಮದ್ಯಪಾನಿಸಿರೋದುಗರ ಚಿತ್ತಕೆ ||

ಪದ್ಯಪಕ್ಷದ ರಸಿಕರಿಗೆ ಒಂದು ನಿವೇದನೆ:
ಇಲ್ಲಿ ನೀಡುವ ಸಮಸ್ಯೆ, ದತ್ತಪದಿ, ಲಹರಿ, ಚಿತ್ರಕ್ಕೆ ಕವಿತೆ ಇತ್ಯಾದಿ ಅಂಶಗಲನ್ನೆಲ್ಲವನ್ನೂ ಎಲ್ಲರೂ ಪೂರೈಸಲೇಬೇಕೆಂಬ ನಿರ್ಬಂಧವಾಗಲಿ, ವ್ರತವಾಗಲಿ, ಗೆಲ್ಮೆಯ ಬಲ್ಮೆಯ ಗುರಿಯಾಗಲಿ ಇಲ್ಲ. ಆಯ್ಕೆಗೆ ಅನೇಕ ಅವಕಾಶಗಳಿರಲೆಂದು  ಈ ಹೊಸ ಯತ್ನ. ದಯಮಾಡಿ ಸ್ನೇಹದಿಂದ ಸಹಕರಿಸಿರಿ, ಸಲಹೆಗಳನ್ನೂ ಸರಿಕಂಡಂತೆ ನೀಡಿರಿ. ನಿಮ್ಮ ರುಚಿಗೊಗ್ಗಿದ ಅಡುಗೆಯನ್ನು  ನಾವಿತ್ತ ಸಾಮಗ್ರಿಗಳ ಪರಿಮಿತಿಯಲ್ಲಿ ಅಟ್ಟು ಸವಿಯಿರಿ,  ನಮಗೂ ಉಣಬಡಿಸಿರಿ:-)

೧. ಸಮಸ್ಯೆ: ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ
(ಇದು ಕಂದದ ಕಡೆಯ ಸಾಲು)

೨.ದತ್ತಪದಿ:  ಕರಿ, ಹರಿ, ಗಿರಿ, ಸಿರಿ ಎನ್ನುವ ಪದಗಳನ್ನು ಬಳಸಿ ವಿಘ್ನೇಶ್ವರನನ್ನು ಚತುರ್ಮಾತ್ರಾಗಣದ ಚೌಪದಿಯಲ್ಲಿ ಸ್ತುತಿಸಬೇಕು ಗಣಪತಿಯ ವಂದನೆ ಮಾಡದೆ ಪದ್ಯಪಾನ/ಪಕ್ಷಗಳು ಮೊದಲಾದುಷ್ಟೆ! ಹೀಗಾಗಿ ಎದರುಗಳು ಬರಬಾರೆಂದು ಎಡರ್ಗೇಡಿಯನ್ನು ಮೊತ್ತಮೊದಲು ನಮಿಸೋಣ:-)
(ಈ ಚೌಪದಿಯಲ್ಲಿ ಮೊದಲ ಹಾಗೂ ಮೂರನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳೂ ಎರಡನೆಯ ಮತ್ತು ನಾಲ್ಕನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ಮೂರು ಗಣಗಳೂ ಕಡೆಯಲ್ಲೊಂದು ಗುರುವೂ — ಇದು ಲಘ್ವಕ್ಷರವು ಪಾದಾಂತ್ಯದಲ್ಲಿ ಗುರುವಾಗುವ ಬಗೆಯಲ್ಲಿಯೂ ಇರಬಹುದು — ಇರಬೇಕು. ಆದಿಪ್ರಾಸ ಕಡ್ಡಾಯ. ಈ ಪದಗಳನ್ನು ಪಾದಗಳ ಯಾವುದೇ ಎಡೆಯಲ್ಲಾದರೂ ಬಳಸಿಕೊಳ್ಳಬಹುದು;  ನೇರವಾಗಿ ಆದಿಪ್ರಾಸಕ್ಕೂ ಬಳಸಿಕೊಳ್ಳಬಹುದು)

೩.  ವರ್ಣನೆ: ಕುಸುಮಷಟ್ಪದಿಯಲ್ಲಿ ಹೇಮಂತದ ಸೊಗಸನ್ನು ಕಟ್ಟಿಕೊಡಬೇಕು.

೪.  ಲಹರಿ:  ನಿಮ್ಮ ಖಯಾಲಿಯ ವಸ್ತು-ಛಂದಸ್ಸುಗಳನ್ನು ಬಳಸಿ ಕಲ್ಪನಾನುಶೀಲಿತವಾದ ಕವಿತೆಯ ನಿರ್ಮಾಣ.

೫. ಚಿತ್ರಕ್ಕೆ ಪದ್ಯ: ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು ನಿಮಗಿಷ್ಟವಾದ ಚಂದಸ್ಸಿನಲ್ಲಿ ಬರೆಯಿರಿ

 

ಯೇಸು ಕ್ರಿಸ್ತನ ಜನ್ಮ

ಕ್ರಿಸ್ಮಸ್ - ಯೇಸು ಕ್ರಿಸ್ತನ ಜನ್ಮ

  185 Responses to “ಪದ್ಯ ಪಕ್ಷ – ೨”

 1. ಸಮಸ್ಯಾ ಪೂರಣ ::
  ಆ ಸುಂದರಿ ತಾನೋಡುತ –
  ಲೀಸನಿಯಕೆ ಬಂದು ನಕ್ಕು ಸೆಳೆದಳ್ ಮದನನ್ ಸೆಳೆದಳಿನಿಯನಂ |
  ಆಸೆಯದುಟಿಮೇಲ್ ಬೆಮರಿನ
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ ||

  • ಪರಿಹಾರ ತುಂಬ ಚೆನ್ನಾಗಿದೆ. ಕಲ್ಪನೆಯ ನಾವೀನ್ಯ ಹಾಗೂ ಪರಿಶೀಲನಶಕ್ತಿ ಕೂಡ ಸೊಗಸಾಗಿದೆ. ಅಂತೆಯೇ ಪದ್ಯಪಕ್ಷದ ಈ ಎರಡನೆಯ ಕಂತಿನ ಮದಲಿಗೆ ನೀವು ಬರೆದಿರುವ ಪದ್ಯವೂ ಸೊಗಸಾಗಿದೆ, ಅನವದ್ಯವಾಗಿದೆ.
   ಆದರೆ ಸದ್ಯದ ಸಮಸ್ಯಾಪೂರಣದಲ್ಲಿ ಸ್ವಲ್ಪ ಅನ್ವಯಕ್ಲೇಶವಿದೆ. ಉಳಿದವರಿಗಿದು ಹೇಗೆ ಅವಗತವಾಗುವದೋ ನೋಡಿ ಆ ಬಳಿಕ ಸವರಿಸಬಹುದೇನೋ.

   • ಧನ್ಯವಾದಗಳು.
    ಮದನನನ್ನು (ಅಥವಾ ಮದನನಂ) ಎಂದಾಗಬೇಕಿದ್ದದ್ದು ಮದನನ್ ಎಂದಾಗಿ ಅನ್ವಯಕ್ಲೇಶವಾಗಿತ್ತು. ಈಗ ಸರಿಪಡಿಸಿದ್ದೇನೆ.

 2. ಚಿತ್ರಕ್ಕೆ ಪದ್ಯವಾಗಿ ನನ್ನದೊಂದು ರಚನೆ:

  ಪುಟ್ಟಿದೊಡಂ ತುರುಮಂದೆಯ
  ಕೊಟ್ಟಿಗೆಯೊಳ್ ತಾರೆ ನಿನಗಮಿತ್ತುದೊಸಗೆಯಂ|
  ಕಟ್ಟಿದೆಯಯ್ ತೊಂಡಲೆಯುವ
  ಗೊಟ್ಟಿಗರಂ ನಲ್ಮೆಯೊಲ್ಮೆಗಣ್ಣಿಯ ಬಲದಿಂ||

  ಅವತರಣಂ ಹೇಮಂತದೆ
  ಭವತರಣಂ ಸಂದುದಯ್ ವಸಂತದೆ ನಿನಗಂ|
  ಭವತರಣಂ ವಾಸಂತದೊ-
  ಳವತರಣಂ ನಮ್ಮ ಬಾಳ್ಗೆ ಹೇಮಂತದೊಳಯ್!!

  (ಕ್ರಿಸ್ತನ ಹಟ್ಟು ಹಟ್ಟಿಯಲ್ಲಾದರೂ ಆತನು ಆಗಸದ ತಾರೆಗಳಿಂದ ನೀರಾಜಿತನಾದನೆಂದು ಬೈಬಲ್ ಒಕ್ಕಣಿಸುತ್ತದೆ. ಅಲ್ಲದೆ ಆತನು ನಲ್ಮೆಯ ಹಗ್ಗದಿಂದಲೇ ದುಷ್ಟರನ್ನು ಕಟ್ಟಿದ. ಅವನ ಜನನ ಹೇಮಂತದ ಚಳಿಗಾಲದಲ್ಲಿ. ಆದರೆ ಆತನ ಮರಣ ವಸಂತದಲ್ಲಿ. ಮಹನೀಯರ ಬಾಳಿನ ಬಗೆಯೇ ಹೀಗೆ; ಅವರ ಹುಟ್ಟು ಸಂಕಷ್ಟಗಳ ನಡುವೆ, ಸಾವು ಮಾತ್ರ ಜಗತ್ತಿಗೇ ನೆಮ್ಮದಿಯನ್ನು ನೀಡಿದ ಬಳಿಕ. ನಮ್ಮಂಥವರ ಬದುಕಿನ ಬಗೆ ಹೀಗಲ್ಲ. ನೆಮ್ಮದಿಯಲ್ಲಿ ಲೋಕವಿದ್ದಾಗ ಜನಿಸಿ ಅದರ ನೆಮ್ಮದಿ ಕೆಡಿಸಿಯೇ ಸಾಯುತ್ತೇವೆ:-)

 3. 1,
  ಸಾಸಿರಸಲ ತಾ ನೋಡಿದ
  ನಾ ಸಾಗರ ಮಥನ ತಾಳಮದ್ದಲೆಯನ್ನಂ
  ಖಾಸಿಮ ಮೌಢ್ಯದಿ ಪೇಳ್ದಂ
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ||

  (ತಾಳಮದ್ದಲೆ- ವೇಷಭೂಷಣಗಳಿಲ್ಲದೇ ಯಕ್ಷಗಾನ ಪದ್ಯಗಳಿಗೆ ಕೇವಲ ಅರ್ಥಧಾರಿಗಳು ಅರ್ಥ ಹೇಳುತ್ತಾರೆ,
  ಖಾಸಿಮ ಕೇವಲ ಪ್ರಾಸದ ತ್ರಾಸನ್ನು ಹೋಗಿಸಲು ಬಂದಿದ್ದಾನೆ!)

  2
  ಕರಿಮುಖ ವಿಘ್ನೇಶ್ವರನೆ ಕವಿಗಳೆಡೆ
  ಹರಿಸೈ ಕೃಪೆಯ ಕಟಾಕ್ಷವನಂ
  ಬರೆಸೌ ಗಿರಿಜಾತನುಭವ ನನ್ನಿಯ
  ಸಿರಿಯಂ ಕೊಡುನುಡಿಯೊಳ್ ಮುದದಿಂ||

  3
  ಇಬ್ಬನಿಯು ಸುರಿದಿರಲು
  ಮಬ್ಬಾಯ್ತು ಜಗವೆಲ್ಲ
  ಹಬ್ಬವೆನೆ ಹೇಮಂತನ ತೊಡಲಯ್ದೆ
  ಅಬ್ಬರವದಿಲ್ಲದೇ
  ಕಬ್ಬವಂ ರಚಿಸಿಹನು
  ಕಬ್ಬಿಗನು ದೇವನೀ ಪೃಥ್ವಿಯೊಳಗೆ||

  4
  ಪಾನಗೊಟ್ಟಿಯು ನಡೆಯಲ್
  ಪಾನೋನ್ಮತ್ತರ್ಗೆ ತಾಣವದು ಭಾಷಣಕಂ
  ಮೌನಿಗಳಿಲ್ಲರ್ ಸಕಲರ
  ಮೌನವ ಮುರಿದಿಹುದು ಪದ್ಯರಸದಾ ಪಾನಂ||

  5
  ವಿದಿತರ್ ಪುಣ್ಯದ ಫಲವಂ
  ಸುದೈವವೆಂದು ಬಗೆದ ಮೇರಿ ಜೋಸೆಫರುಂ
  ಮುದಪೊಂದಿದರಾ ಕ್ರಿಸ್ತನ
  ಬದುಕಲ್ ತಾಯ್ತಂದೆಯಾದ ಭಾಗ್ಯವಿದೆಂದುಂ||

  • ಕೊಪ್ಪಲತೋಟದ ಗಣೇಶರೆ,
   ಪೂರಣವು ಸೊಗಸಿಹುದು ಮೋಹಿನಿಯ ಮೀಸೆಯದು
   ತೋರಣವು ಗಣಪನಾ ಸ್ತುತಿ ದತ್ತದಿ |
   ಕೋರಿಕೆಯ ಹೇಮಂತದಾ ವರ್ಣನೆಯು ನಿಜದಿ
   ಸೇರಿಹುದು ಕಬ್ಬಿಗನ ಸುಮಹಾರವ ||

   • ರಾಮಚಂದ್ರರ ನುಡಿಗೆ ಸಾಧುವಾದಂ ಸೇರೆ
    ಪ್ರೇಮದಿಂದೋಂಕಾರದ ಪುರಸ್ಸರಂ|
    ರಾಮಣೀಯಕಮಾಯ್ತು ಕವಿತೆಯೆಂದೆಂಬೆನಾಂ
    ಭೂಮಿಸಿಂ ಕಬ್ಬವಟ್ಟೆಯೊಳೀ ಪರಿ||
    ( ಯಾವುದೇ ಒಪ್ಪಿಗೆಗೆ ನಮ್ಮ ವೈದಿಕರಲ್ಲಿ ಓಂಕಾರವನ್ನು ಬಳಸುವುದು ರೂಢಿ; ಭೂಮಿಸುವುದೆಂದರೆ ಅತಿಶಯಿಸುವುದೆಂದರ್ಥ)
    ನೀವು ಕೆಲವೊಂದು ವ್ಯಾಕರಣಸಂಬಂಧಿತವಾದ ನಯ-ನೇರ್ಪುಗಳನ್ನು ಮಾಡಿಕೊಂಡರೆ ಒಳಿತು.
    ಇಲ್ಲಿಯ ಪದ್ಯಗಳಲ್ಲಿ ಅಲ್ಲಲ್ಲಿ ಛಂದೋವ್ಯಾಕರಣದೋಳಿವೆ. ಎಲ್ಲವನ್ನೂ ಬರೆಯಲು ಸಮಯಾಭಾವ ನನಗೆ:-).

 4. ಸಮಸ್ಯೆ

  ಸೂಸಿರೆ ಕುಡಿಯಲ್ ಕೆನೆಪಾಲ್-
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ
  ಘಾಸಿಯುಮಾಗಿರ್ಪನಿವಂ
  ಬೀಸಿರಳವಳಿಂದನಂಗನಂ ಬಾಣಗಳುಂ

  • ತುಂಬ ಸೊಗಸಾದ ಪರಿಹಾರ. ಕೆನೆವಾಲ್ ಎನ್ನುವುದು ಮತ್ತೂ ಒಳ್ಳೆಯ ಹಳಗನ್ನಡದ ರೂಪ. ಕಡೆಯ ಸಾಲಲ್ಲಿ “ಬೀಸಿರಲವಳತ್ತಣಿಂ ಸ್ಮರಂ ಸುಮಶರಮಂ” ಎಂದರೆ ಯಾಕರಣ-ಛಂದಸ್ಸು ಮತ್ತೂ ಸರಿಯಾದಾವು.

   • ಗಣೇಶ್ ಸರ್,

    ತಿದ್ದಿದ್ದೇನೆ:)

    ಸೂಸಿರೆ ಕುಡಿಯಲ್ ಕೆನೆವಾಲ್-
    ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ
    ಘಾಸಿಯುಮಾಗಿರ್ಪನಿವಂ
    ಬೀಸಿರಳವಳತ್ತಣಿಂ ಸ್ಮರಂ ಸುಮಶರಮಂ

 5. ಹೇಮಂತನ ವರ್ಣನೆ
  ಭೂಮಿ ಮಂಜ ಹೊದಿಕೆ ಹೊದೆದು
  ಯಾಮಿನಿಂಗೆ ಪೇಳ್ವಳಿದನು
  ವ್ಯೋಮ ಬೆಳಗುವವನ ತಡೆಯೆ ಗೆಳತಿ ನಿದ್ರಿಪೆ
  ಭೂಮಿಯವೊಲು ಜೀವಿಗಳೊಳು
  ತಾಮಸಗುಣ ಹರಡುತಿರ್ಪ
  ಹೇಮಂತನ ಕಾಲವೆನ್ನ ಮನಕತಿಪ್ರಿಯವು (ಶಿಥಿಲ ದ್ವಿತ್ವ)

  • ಅರಿಸಮಾಸ ಸರಿಪಡಿಸಿದ್ದೇನೆ:

   ಭೂಮಿ ಮಂಜ ಹೊದಿಕೆ ಹೊದೆದು
   ಯಾಮಿನಿಂಗೆ ಪೇಳ್ವಳಿದನು
   ಭಾಮನನ್ನು ಕೊಂಚ ತಡೆಯೆ ಗೆಳತಿ ನಿದ್ರಿಪೆ
   ಭೂಮಿಯವೊಲು ಜೀವಿಗಳೊಳು
   ತಾಮಸಗುಣವನ್ನು ಸಾರ್ವ
   ಹೇಮಂತನ ಕಾಲವೆನ್ನ ಮನಕತಿಪ್ರಿಯವು (ಶಿಥಿಲ ದ್ವಿತ್ವ)

   ಭಾಮ – ಸೂರ್ಯ

  • ಸೋಮ,
   ಚೆನ್ನಾಗಿದೆ. ಆದರೆ ಒಂದು ಪ್ರಶ್ನೆ ::
   ಭಾಮ ಬರಲು, ಬಿಸಿಲ ತರಲು
   ಭೂಮಿ ತಾಯ ಜೀವಿಗಳಿಗೆ
   ಹೇಮ ಚಳಿಯ ಬಾಧೆ ಕೊಂಚ ಶಮನವಾಗದೆ ?

   [ಕುಸುಮ ಷಟ್ಪದಿಯಲ್ಲಿರಬೇಕಿತ್ತು, ಭೋಗ ಷಟ್ಪದಿಯಲ್ಲಿ ಬರೆದಿದ್ದೀರ :-)]

   • ರಾಮ್ :),
    ಸುಮ ಮತ್ತು ಭೋಗ ಎರಡರಲ್ಲೂ ನಾನು ಪದ್ಯವನ್ನು ಬರೆದಿರಲಿಲ್ಲ… ಹಾಗಾಗಿ ತಿಳಿಯದೆ ಪಲ್ಲಟ ಮಾಡಿದ್ದೇನೆ… ಈಗ ತಿಳೀತು:)

    ತಾಮಸಿಗೆ ಭೋಗವೇ
    ತಾ ಮಿಗಿಲು ಸುಮಕಲ್ತೆ?
    ಸೀಮೆಯನು ಮೀರಿದಕೆ ಕ್ಷಮೆಬೆಡುವೆ
    ಭಾಮ ಬೇಕೇ ಬೇಕು
    ಹೇಮಂತದಲಿ, ಕೊಂಚ-
    ವೇಮವನು ತಡಬರ್ಪುದನು ಬಯಸುವೆ:)

    ಕೊಂಚವೇಂ ಅವನು

    • ಸೋಮ – ನಿಮ್ಮ ಇಚ್ಛೆ ಅರ್ಥವಾಯಿತು. ಅದು ಸಮಂಜಸವೂ‌ ಹೌದು. ಆದರೂ,
     ಅರಳು ಬೆಳಗಿನ ಸಮಯ
     ತಿರುಗಾಡೆ ಹೊರನೆಡೆಯೆ
     ಕೊರಗುವೆನು ನಾ ರವಿಯ ತಡಬರವನು |
     ಕೊರೆವ ಚಳಿಯಲ್ನಡುಗಿ
     ಕುರುಡುಗತ್ತಲಲೆಡವಿ
     ಮರಮರಳಿ ದಿನಕರನ ನಾ ಕರೆವೆನು ||
     🙂
     ಅರಳು ಬೆಳಗಿನ ಸಮಯ = ಆರು ಘಂಟೆ
     { ಒಂದು ವಿಷಯ – ನನ್ನ ಮನೆಯ ಹತ್ತಿರ ಉದ್ಯಾನದಲ್ಲಿ ಒಬ್ಬರು ಹಿರಿಯರು ದಿನವೂ ಸೂರ್ಯೋದಯಕ್ಕೆ ಕಾದು ಬೆಂಚಿನ ಮೇಲೆ ಕುಳಿತಿರುತ್ತಾರೆ. ಬೆಳಗಿನ ಅಂಚು ಕಾಣುತ್ತಲೇ, ವಿವಿಧ ವ್ಯಾಯಾಮಗಳನ್ನು ಮಾಡತೊಡಗುತ್ತಾರೆ – ಎಲ್ಲವೂ‌ ಸೂರ್ಯನಿಗರ್ಪಣೆಯೆಂಬಂತೆ. ಮೋಡ ಕವಿದ ದಿನಗಳಲ್ಲಿ ಅವರಿಗೆ ಸಮಾಧಾನವೇ ಇಲ್ಲ ಎಂಬುದು ಸರ್ವರಿಗೂ ವಿದಿತವಾಗಿರುತ್ತದೆ. ಈ ಪದ್ಯ ಅವರ ಭಾವನೆಯನ್ನೂ ಒಳಗೊಂಡಿದೆ 🙂 }

     • ರಾಮ್ :),

      ಅರುಣೋದಯವುಮಾಗಿ
      ಕಿರಣಗಳ್ ಪ್ರಜ್ವಲಿಸೆ
      ಸರಸರನೆ ಕೆಲಸವುಂ ಮೊಂದೋಡ್ಪುದು
      ಅರುಣನಾಗಮನವನೆ-
      ದಿರುನೋಡುವರುಕೆಲರು
      ಪರಿಹರಿಪರೇಮವರು ನನ್ನ ದುಗುಡ?

  • ಚೆನ್ನಾಗಿದೆ. ಸ್ವಲ್ಪ ಸವರಣೆ:
   …ಯಾಮಿನಿಯೊಳು ಪೇಳ್ವಳಿದನು…..
   ……………….ಮನಕತಿಪ್ರಿಯಂ||
   ಅಕಾರಾಂತೇತರ ಶಬ್ದಗಳಿಗೆ ದ್ವಿತೀಯವಿಭಕ್ತಿಯಲ್ಲಿ ಬಿಂದುವು ಬಾರದು.( ಯಾಮಿನಿಗೆ, ಗುರುವಿಗೆ, ಇತ್ಯಾದಿ)

   • ಗಣೇಸ್ ಸರ್,

    ಧನ್ಯವಾದಗಳು, ಸವರಿಸಿದ್ದೇನೆ

    ಭೂಮಿ ಮಂಜ ಹೊದಿಕೆ ಹೊದೆದು
    ಯಾಮಿನಿಯೊಳು ಪೇಳ್ವಳಿದನು
    ಭಾಮನನ್ನು ಕೊಂಚ ತಡೆಯೆ ಗೆಳತಿ ನಿದ್ರಿಪೆ
    ಭೂಮಿಯವೊಲು ಜೀವಿಗಳೊಳು
    ತಾಮಸಗುಣವನ್ನು ಸಾರ್ವ
    ಹೇಮಂತನ ಕಾಲವೆನ್ನ ಮನಕತಿಪ್ರಿಯಂ

 6. ಕ್ರಿಸ್ತನ ಜನ್ಮ

  ನಿನ್ನ ಪುಟ್ಟದು ಪುರುಷವೀರ್ಯದಿಂದಾಗಿಲ್ಲ
  ಮುನ್ನ ನಿನತಂದೆ ತಾಯ್ ಸಂಧಿಸಿಲ್ಲ
  ನನ್ನಿಯೆಂಬುದಿದನ್ನು ಲೀಲೆಯೆನೆ ಬಣ್ಣಿಪರು
  ಚೆನ್ನ ನಿನ್ನುಪದೇಶ ಜಗಕೆ ಸಂತ

  • ಕಲ್ಪನೆ-ರಚನೆಗಳೆರಡೂ ಸೊಗಸಾಗಿವೆ.

  • ಸೋಮ, ನಿಮ್ಮ ಪದ್ಯವು ತುಂಬ ಸೊಗಸಾಗಿದೆ…ನನ್ನ ಕನ್ನಡ ಭಾಷೆಯ ವ್ಯಾಪ್ತಿಯು ಸಿಮಿತದಲ್ಲಿ ಇರುವುದರಿಂದ ಇಷ್ಟು ಮಾತ್ರ ಹೇಳ ಬಲ್ಲೆ…:)

 7. ಮಾಸದನಂಗದೆಸೆಯುತಾ
  ನ್ಕೇಸರಭೂಷಣದೊಳ್ಮಿಗುವಂತೆ ಪಾಲೊಳ್
  ಕಾಸಾರದಬಿಂಬವಿರಲ್
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ

  (ನನ್ನ ಕಲ್ಪನೆಯು ಬಹುಶಃ ಅತಿದೂರವಾಯಿತೇ ಎನ್ನಿಸುತ್ತೆ)

  ಚಿತ್ರಕ್ಕೆ ಪದ್ಯ: (ಇದೂ ಒಂದು ರೀತಿಯಲ್ಲಿ ಲಹರಿಯೇ)
  ಕರುಣೆದಯೆನಿನ್ನೊಸಗೆ ಲೋಕಕೆ
  ನಿರುತಕೇಳಿರೆ ನಿನ್ನ ಮಾತಿದು
  ಪರರ ಮತವೇಕೆಂದು ಬೋಧಿಸಿ ರಾಜ್ಯ ಬೆಳೆಸಿರಲುಂ
  ಬರುತಲಾಗಲೆ ಸೈನ್ಯ ಬಗಲೊಳು
  ಕೊರತೆಯುಳ್ಳವರೆಲ್ಲರಿಗು ಧನ
  ಚರಿತೆ ಸಾಲದೆ ನಿನ್ನ ಜೀವದ, ಚರ್ಚು ಪೋಪರಿಗೆ ?

  ಲಹರಿ: (ನಿನ್ನೆಗೆ ಭೈರಪ್ಪನವರ ನೆಲೆಯನ್ನು ಇನ್ನೊಮ್ಮೆ ಓದಿ ಮುಗಿಸಿದಾಗ ಅನ್ನಿಸಿದ್ದು, ಕಗ್ಗದ ಛಂದಸ್ಸಿನಲ್ಲಿ)

  ಸಾವಿಗುಂ ಮಿಗಿಲಾದ ದಿಟವುಂಟೆ ಲೋಕದಲಿ
  ಕೇವಲದ ಸೃಷ್ಟಿಸ್ಥಿತಿಯದೊಂದೆ ಜೀವಕೆ
  ನೋವುನಿಟ್ಟುಸಿರ ಭಾರವನು ಮರೆಯಲ್ಕೆ
  ಪಾವಕದಸರಣಿಯಿದು ಖಂಡಚತುರ |

  • ನಿಮ್ಮ ಪೂರಣದ ಇಂಗಿತವು ನನಗೆ ಸ್ಪಷ್ಟವಾಗಲಿಲ್ಲ. ದಯಮಾಡಿ ವಿವರಿಸಿರಿ. ಅಲ್ಲದೆ ಎರಡನೆಯ ಪಾದದಲ್ಲಿ ಛಂದೋಲಕ್ಷಣವು ಪೂರ್ತಿಯಸಗಿ ಪಾಲಿತವಾಗಿಲ್ಲ. ಲಹರಿಯ ದ್ವಿತೀಯ-ತೃತೀಯಪಾದಗಳ ಮಾತ್ರಾವ್ಯವಸ್ಥೆಯೂ ತುಸು ದಾರಿತಪ್ಪಿದೆ. ಚಿತ್ರಕ್ಕ ಕವಿತೆ ಮಾತ್ರ ಅನವದ್ಯವೂ ವಿನೂತನವೂ ಆಗಿದೆ.

   • (ನೀವು ಹೇಳಿದಂತೆ ಎರಡನೆಯ ಪಾದವನ್ನು ತಿದ್ದಿದ ಬಳಿಕ)

    ಮಾಸದನಂಗದೆಸೆಯುತಾ
    ನ್ಕೇಸರಭೂಷಣದೊಳತಿಮಿಗುವವೋಲ್ಪಾಲೊಳ್
    ಕಾಸಾರದಬಿಂಬವಿರಲ್
    ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ

    (ಪ್ರಿಯಕರನನ್ನು ಕಾಣಲು ಕಾಸಾರದ ಬಳಿಗೆ ಪ್ರಾಯಶಃ ಮೊದಲೆ ಬಂದಿರುವ ಯುವತಿಯು ಅಕಸ್ಮಾತ್ ಕೆರೆಯಲ್ಲಿ ತನ್ನ ಬಿಂಬ ನೋಡಿಕೊಂಡಳು. ಕೆರೆಯಲ್ಲಿ ತೇಲುತ್ತಿದ್ದ ಹುಲ್ಲು-ದಂಟುಗಳು ಹಾಲಿನಲ್ಲಿ ಹಾಕಿದ ಕೇಸರದಂತೆ ಇದ್ದುವಷ್ಟೆ. ಅಂತಹ ಒಂದು ಹುಲ್ಲಿನ ಎಳೆ ಅವಳ ಬಿಂಬದ ನಡುವೆ ಬರಲು ಅದು ಮೀಸೆಯಂತೆ ಕಂಡಿತಂತೆ. ಅಷ್ಟರಲ್ಲಿನ್ನೂ ಗೆಳೆಯ ಬಂದಿರಲಿಲ್ಲ; ಪ್ರೀತಿಯ ಜೊತೆಗೆ ಕೋಪವೂ ಸೇರಿಕೊಂಡಿತ್ತು. ಬಿಂಬದಲ್ಲಿ ಮೂಡಿದ ಮೀಸೆಯು ಅದಕೊಪ್ಪುವಂತೆ ಸೊಗಸಾಗಿತ್ತು.)

    ಸಾವಿಗುಂ ಮಿಗಿಲಾದ ದಿಟವುಂಟೆ ಲೋಕದಲಿ ?
    ಕೇವಲದ ಸೃಷ್ಟಿಸ್ಥಿತಿಯುಮದಕೆ ಸಮವೆ ?
    ನೋವುನಿಟ್ಟುಸಿರ ಶವಭಾರವನು ಮರೆಯಲ್ಕೆ
    ಪಾವಕದಸರಣಿಯಿದು ಖಂಡಚತುರ |

    (ಹೇಗೋ ಶವ ಬಿಟ್ಟು ಹೋಗಿತ್ತು. ಎರಡನೆಯ ಪಾದದಲ್ಲಿ ಊನಗಣಕ್ಕೆ ಒಂದು ಮಾತ್ರೆ ಕಡಮೆಯೆಂದು ತಿಳಿದಿದ್ದೆ. ಈಗ ಸಾವರಿಸಿದ್ದೇನೆ.)

    • ಇದೀಗ ಉಭಯರಚನೆಗಳೂ ಅನವದ್ಯವಾಗಿವೆ. ಆದರೂ ಮೊದಲ ಪದ್ಯವಾದ ಕಂದದ ಎರಡನೆಯ ಪಾದವು ಲಘುಬಾಹುಲದಿಂದ ಸ್ವಲ್ಪ ಬಳಲಿದಂತಿದೆ:-)..ಇಲ್ಲಿ ಜಗಣವಿಲ್ಲದ ಕಾರಣ
     ಈ ಸಾಲಿನ ಮೂರನೆಯ ಗಣದ ಮೊದಲ ಮಾತೆಯ ಬಳಿಕ ಬರಲೇಬೇಕಾದ ಯತಿಯು ಮರೆಯಾಗಿರುವುದು ಇಂಥ ಶ್ರಮಕ್ಕೆ ಮುಖ್ಯಕಾರಣ. ಆದರೆ ನಿಮ್ಮ ಕಲ್ಪನೆ ತುಂಬ ಸೊಗಸಾಗಿದೆ. ಇದನ್ನೇ ನಾನು ಮತ್ತಷ್ಟು ಸುಬೋಧವಾಗಿ ಹೇಳಿದರೆ ನೀವು ತಪ್ಪಾಗಿ ತಿಳಿಯುವುದಿಲ್ಲವೆಂಬ ಭರವಸೆಯಿಂದ ಇಲ್ಲೊಂದು ಯತ್ನ ಮಾಡಿದ್ದೇನೆ:

     ಕಾಸಾರದ ಹಾವಸೆಯಿಂ
     ಮಾಸಿದ ಜಲದಲ್ಲಿ ಮೂಡಿರೆ ನಿರೀಕ್ಷಿಕೆಯಾ|
     ಭಾಸುರವದನಂ, ಬಗೆದೆಂ
     ಮೀಸೆಯು ಮೋಹಿನಿಯ ಮೊಗದೆ ಚೆಲ್ವೆನಿಸಿರ್ಕುಂ

 8. ಭಸ್ಮಾಸುರ ತನ್ನ ಸತಿಯನ್ನು ಚುಂಬಿಸುವಾಗ, ಮೀಸೆಬಾಧೆಯು ಅವಳಿಗೇ ಗೌಣವಾಗಿರುವಾಗ, ಕವಿಗೇನು ಸಮಸ್ಯೆ? ಅದು ಅವನಿಗೆ ಸಾಮಗ್ರಿ.

  ಆಸುರಭಸ್ಮನು ಸಾರಲ್
  ಮೀಸೆ ಕೊರೆದೊಡಂ ಗಣಿಸದೆಲವನರ್ಧಾಂಗ್ಯ|
  ಳೇ ಸುಮ್ಮನಿರೆ ಕವಿವರಗೆ
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ||

 9. ಎರಡನೆಯ ಪಾದಾಂತ್ಯದಲ್ಲಿ ಒಂದು ಮಾತ್ರೆ ಕಡಿಮೆ ಇತ್ತು.
  ಆಸುರಭಸ್ಮನು ಸಾರಲ್
  ಮೀಸೆ ಕೊರೆದೊಡಂ ಗಣಿಸದೆಲವನಸತಿಯಳೇ
  ತಾ ಸುಮ್ಮನಿರೆ ಕವಿವರಗೆ
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ

  • ಪ್ರಸಾದರೇ, ದಯಮಾಡಿ ಕಂದದ ಲಕ್ಷಣವನ್ನೆಲ್ಲ ಮತ್ತೊಮ್ಮೆ ಚೆನ್ನಾಗಿ ಗಮನಿಸಿಕೊಂಡು ನಿಮ್ಮ ಸಮಸ್ಯಾಪೂರಣದ ಪದ್ಯವು ಛಂದೋಬಂಧದ ದೃಷ್ಟಿಯಲ್ಲಿ ಎಲ್ಲೆಲ್ಲಿ ಎಡವಿದೆಯೆಂದು ಗುರುತಿಸಿ ತಿದ್ದಿಕೊಳ್ಳಿರಿ:-)
   ಪರಿಹಾರದ ಕಲ್ಪನೆಯೇನೋ ಅಭಿರಾಮವಾಗಿದೆ.

 10. ಮೂರನೆಯ ಪಾದದ ಆದಿಪ್ರಾಸದಲ್ಲಿ ಲೋಪವುಂಟೆ?

 11. ಆಸೆ ಮೊಳೆತು ಜವ್ವನದ ಪಿ-
  ಪಾಸೆಯಧಿಕವಾಗಿ ಮೇಲ್ಡುಟಿಯೊಳಂ ಚಿಗುರಾ
  ಶ್ವಾಸದಿ ಹುದುಗಿದ ತರುಣನ
  ಮೀಸೆಯು, ಮೋಹಿನಿಯ ಮೊಗದಿ ಚೆಲುವೆನಿಸಿರ್ಕುಂ ||

  • ಅದ್ಭುತವಾದ ಪರಿಹಾರ. ಅನ್ವಯವೈಚಿತ್ರ್ಯದ ಬಗೆಯಿಂದ ನೀವು ಸಮಸ್ಯಾಪೂರಣ ಮಾಡಿದ ಬಗೆ ದಿಟವಾಗಿ ಅಭಿರಾಮ.

 12. ಇನ್ನೆರಡು ಸಮಸ್ಯಾ ಪರಿಹಾರಂಗಳು ::
  ಸೂಸುವ ಮುಗುಳ್ನಗೆಯಿಂ ಪೂನಗೆಯಿಂದಂ
  ಗ್ರೀಸಿನ ದೇವನವನೆಂದು ಬಗೆದಳ್ ಸೊಗದೊಳ್ |
  ಆಸುಮ ಬಾಲೆಯ ಕಣ್ಗಂ
  ಮೀಸೆಯುಂ, ಓಹ್! ಇನಿಯ ಮೊಗದಿ ಚೆಲುವೆನಿಸಿರ್ಕುಂ ||

  ಸೂಸುತ ವಿಶ್ವಾಸಗಳಂ
  ಆಸಖಿಯರ್ ಗುಂಪಲಾಡಿದರ್ ನಾಟಕಮಂ |
  ಮೋಸದ ನಗೆಯಾ ಭಸ್ಮನ
  ಮೀಸೆಯು ಮೋಹಿನಿಯ ಮೊಗದಿ ಚೆಲುವೆನಿಸಿರ್ಕುಂ ||
  [ಇಲ್ಲಿ ಮೋಹಿನಿ ಎಂಬುವಳು ಭಸ್ಮಾಸುರನ ಪಾತ್ರ ಮಾಡುತ್ತಿದ್ದಾಳೆ :-)]

  • ಮೊದಲ ಪದ್ಯದ ಮೊದಲ ಸಾಲಿನಲ್ಲಿ ಸ್ವಲ್ಪ ಛಂದೊದೋಷವಿದೆ. ಅದನ್ನು ಹೀಗೆ ಸವರಿಸಬಹುದು:
   ಸೂಸುವ ಮುಗುಳ್ನಗೆಯಿಂದಂ…..(ಇಲ್ಲಿ ಶಿಥಿಲದ್ವಿತ್ವದ ಪ್ರಯೋಗವಿದೆ ಮತ್ತದು ಶಾಸ್ತ್ರಸಂಮತ್. ಆಅದರೆ ಈ ಪಾಡು ಬೇಡವೆನ್ನುವವರಿಗೆ ಮತ್ತೊಂದು ಬಗೆಯ ರಚನೆ: ಸೂಸುವ ಪೂನಗೆಯಿಂದಂ…..)
   ರಾಮಚಂದ್ರರೆ! ನಿಮ್ಮ ಎರಡು ಬಗೆಯ ಪರಿಹಾರಗಳೂ ತುಂಬ ಚೆಲುವಾಗಿವೆ. ವಿಶೇಷತಃ ಮೊದಲ ಪರಿಹಾರವಂತೂ ಾನು ಊಹಿಸದ ರೀತಿಯಲ್ಲಿ ಸಮಸ್ಯೆಯ ಪಾದದಲ್ಲಿಯೇ ವಿನೂತನಪ್ರಕಾರದ ಪದಚ್ಛೇದವನ್ನು ಮಾಡಿಕೊಂಡ ಅಪ್ಪಟ ಪ್ರತಿಭಾವಿಲಾಸ. ತುಂಬ ಧನ್ಯವಾದಗಳು.

  • ರಾಮ್,

   “ಮೀಸೆಯುಂ, ಓಹ್! ಇನಿಯ” ಎಂಬ ಬಿಡಿಸುವಿಕೆ ತುಂಬಾ ಚೆನ್ನಾಗಿದೆ:)

  • ಧನ್ಯವಾದಗಳು. 🙂 ಗಣೇಶರ ಸಲಹೆಯಂತೆ ಸರಿಪಡಿಸಿದ್ದೇನೆ.

 13. ಚಿತ್ರಕ್ಕೆ ಪದ್ಯ
  ಕೃಷ್ಣ-ಕ್ರಿಸ್ತರಿಬ್ಬರೂ ಮಹಾತ್ಮರು. ಆದರೆ ಇಬ್ಬರ ಜನನ ಸಮಯವೂ ಸಡಗರದ್ದೇನಲ್ಲ. ಒಬ್ಬ ಕಾರಾಗೃಹದಲ್ಲಿ ಜನಿಸಿದ, ಮತ್ತೊಬ್ಬ ಕೊಟ್ಟಿಗೆಯಲ್ಲಿ. ಮನುಜರ ಜನನವೂ ಮೃಗಗಳದಂತೆಯೆ.

  ಪ್ರಸವವೇಳೆಯೊಳೆನಿತಿಹುದೊ ವೆವಸ್ಥೆಯದನಿತೆ
  ವಸುದೇವಸೂನುವೇನೇಸುವೇನು|
  ತುಸುವು ಸಡಗರವಿಲ್ಲವೀ ಮಹಾಜನನದೊಳ್
  ಹೊಸಲೊಳ್ಮಿಗಗಳೆನಿತೊ ಮನುಜರನಿತೇ||
  (ಕೊಟ್ಟಿರುವ ಚಿತ್ರದಲ್ಲಿ ೫ ಪ್ರಾಣಿಗಳೂ ೫ ಮನುಷರೂ ಇರುವರು)

  • ಅತ್ಯದ್ಭುತಪದ್ಯಮಿದಂ
   ಪ್ರತ್ಯಕ್ಚಿಂತನವಿತಾನಸುಮನೋಮಯಮಂ|
   ಸತ್ಯದ ಸೌಂದರ್ಯದ ಸಾಂ-
   ಗತ್ಯಮೆನಲ್ ಕಂಡು ಮೋದಮಾಂತೆಂ ದಿಟದಿಂ||

   • ಮಾ,
    I am touched.
    ಪ್ರತ್ಯಕ್ ಎಂದರೇನು?
    ನನ್ನ ಉದ್ಧಟತನವನ್ನು ಮನ್ನಿಸುವಿರಾದರೆ, ಒಂದು ಅನುಮಾನಪರಿಹಾರ ಕೋರುವೆ: ಸಾಂಗತ್ಯಮೆನಲ್ ~ ಸಾಂಗತ್ಯಮಿದಂ – ಇಲ್ಲಿ ಯಾವುದು ಸೂಕ್ತ? ಈ ಸಾಲಿನಲ್ಲಿ ಬಹಳಷ್ಟು ಅನುನಾಸಿಕಗಳಿರುವುದರಿಂದ, ಇನ್ನೊಂದನ್ನು contribute ಮಾಡಿದಂತೆಯೂ ಆಗುತ್ತದೆ.
    ನನ್ನ ಪದ್ಯದ ಎರಡನೆಯ ಪಾದದಲ್ಲಿ ’ದೇ’ ಎಂಬ ಅಕ್ಷರ ಬಿಟ್ಟರೆ, ಉಳಿದೆಲ್ಲ ವ, ಸ, ನ ಗಳು. ಅದನ್ನೂ ವ,ಸ,ನ ಮಾಡಲು ಸಾಧ್ಯವೆ? ದೇವ = ಸುವ ಆಗುತ್ತದೆಯೆ?

    • ಪ್ರತ್ಯಕ್ ಎಂದರೆ ಒಳಗೆ ಎಂದರ್ಥ. ಸಾಂಗತ್ಯಮೆನಲ್ ಎನ್ನುವುದೇ ಹೆಚ್ಚು ಸರಿ. ಏಕೆಂದರೆ ಎನಲ್ ಎಂದಾಗ ಇಂಥ ಸಾಂಗತ್ಯವಿದೆಯೆನ್ನುವುದಾದುದರಿಂದಲೇ…ಎಂಬ ಅರ್ಥ ಬರುತ್ತದೆ…ಈ ಬಗೆಗೆ ಮತ್ತೆ ವಿಶದವಾಗಿ ಚರ್ಚಿಸೋಣ:-)
     ಇನ್ನು ವಸುದೇವ ಬದಲಾಗಲು ಸಾಧ್ಯವಿಲ್ಲ. ಅದು ಅಂಕಿತನಾಮವಲ್ಲವೇ!
     I know, it is too big a loss to missa tryakshara paada here:-)

  • ಪ್ರಸಾದ್,

   ತುಂಬಾ ಚೆನ್ನಾಗಿದೆ ಕಲ್ಪನೆ:)

 14. ದತ್ತಪದಿ: ಗಿರಿ-ಕರಿ-ಸಿರಿ-ಹರಿ. ಪರೀಕ್ಷಾಸಮಯ ಹತ್ತಿರ ಬಂತು. ೨೧ ಸಾಷ್ಟಾಂಗ ನಮಸ್ಕಾರ ಮಾತ್ರ ಮಾಡಬಲ್ಲೆ, ಅಷ್ಟನ್ನು ಮಾತ್ರ ಸ್ವೀಕರಿಸಿ (ಕೊಂಡು), ಪ್ಯಾಸು ಮಾಡಿಸು.

  ಶಿರವೇರುವುದು ಪರೀಕ್ಷೆ-ಗಿರಿ ವೈಶಾಖದೊಳ್
  ಪರಿಶೀಲಕರಿಗೆ ಕಾಪಿಟ್ಟು ಗೆಲ್ಲಲ್|
  ಸಿರಿತನವ ನೀಡದಿಹೆ ಮಾತ್ರಮಿದಕೊಂಡು ಪರಿ
  ಹರಿಸೈ ತೊಡರ್ಗಂಡ ದಂಡವಿದೆಕೊ||

  • ನಿಜವಾಗಲೂ ಸಲೆಸೊಗಸಾದ ಪದ್ಯ. ಕೇವಲ ಒಂದೇ ಒಂದು ಸವರಣೆ ಬೇಕಾಗಿದೆ.
   ಪರೀಕ್ಷೆ ಎನ್ನುವುದು ಆಕಾರಾಂತಸ್ತ್ರೀಲಿಂಗಶಬ್ದ. ಹೀಗಾಗಿ ಸಮಾಸದಲ್ಲಿ ಬರುವಾಗ ಪರೀಕ್ಷಾಗಿರಿ ಎಂದಾಗಬೇಕು. ಆದರೆ ಇದು ಛಂದಸ್ಸನ್ನು ಕೆಡವುತ್ತದೆ! ಆದುದರಿಂದ
   “ಶಿರವೇರುವುದು ಪರೀಕ್ಷಾಗಿರಿ ವಿಶಾಖದೊಳ್” ಎಂದು ಸವರಿಸಬಹುದು. ಕರಿ ಪದವನ್ನು ತಂದ ಬಗೆ, ಹರಿ ಪದವನ್ನು ಹಿಡಿದ ಪರಿ, ತೊಡರ್ಗಂಡ ಶಬ್ದದ ಬಳಕೆ…ಎಲ್ಲ ತುಂಬ ಚೆನ್ನಾಗಿದೆ.

  • ತೊಡರ್ಗಂಡ = ತೊಡರ್ + ಗಂಡ. ತುಂಬಾ ಚೆನ್ನಾಗಿದೆ.

 15. ಚಿತ್ರಕ್ಕೆ ಪದ್ಯ ::
  ಕೊರೆವ ಚಳಿಯಲ್ಲಿ ಪುಟ್ಟ ಕೊಟ್ಟಿಗೆಯಲಿಳಿದು ಬಂದ ತಂದೆ
  ತರಳೆ ತಾನು ಕೌಮಾರ್ಯದಲ್ಲೆ ಬಸಿರುಟ್ಟ ಮೇರಿಯಿಂದೆ |
  ಅರೆದೆ ನಿನ್ನ ಜೀವನ ಪ್ರೇಮದಾ ತ್ಯಾಗದಲ್ಲಿಯಂದೆ
  ಹರುಷ ಹರಿಸೊ ಹಬ್ಬವಿದು ನಿನ್ನ ಸಂದೇಶ ಸಾರಲೆಂದೆ ||

  ಇದು ಸಂತುಲಿತಮದ್ಯಾವರ್ತಗತಿಯಲ್ಲಿದೆ (ಪದ್ಯಪಕ್ಷ – ೧ ರಲ್ಲಿ ಗಣೇಶರ ೨ ಪದ್ಯಗಳು ಈ ಶೈಲಿಯಲ್ಲಿವೆ – http://padyapaana.com/?p=759#comment-2431). ಪ್ರತಿ ಸಾಲಿನಲ್ಲಿಯೂ ೩+೫, ೩+೫, ೩+೫, ೩+೫, ೨ ಎಂದು ಸಾಗುತ್ತದೆ. ಬೇಂದ್ರೆಯವರು ಮೇಘದೂತದ ಅನುವಾದವನ್ನು ಈ ಛಂದೋಗತಿಯಲ್ಲೇ ಮಾಡಿದ್ದಾರೆ. ಗಣೇಶರ ಧೂಮದೂತ ಕಾವ್ಯವೂ ಇದೇ ಶೈಲಿಯಲ್ಲಿದೆ.
  ಇವೆಲ್ಲ ಇಂದು ಗಣೇಶರಿಂದ ಕಲಿತದ್ದು 🙂

 16. ಹೇಮಂತದ ಸೊಗಸು – ’ಹೇಮಂತರ್ತು’ ಎಂದು ಹೇಳಿಲ್ಲ. ಹೇಮಂತ ಎಂದರೆ ಹೇಮವಲ = ಮುತ್ತು ಎಂಬ ಅರ್ಥವೂ ಇದೆ (Monier williams). ಆದರೆ ಇದು ಬಳಕೆಯಲ್ಲಿಲ್ಲ ಎಂದು ತಿಳಿದು ಬಂದುದರಿಂದ (ಡಾ|| ಆರ್. ಶಂಕರ್), ಋತುವರ್ಣನೆಯನ್ನೇ ಮಾಡುತ್ತೇನೆ.

  ನನ್ನದು ಪಿತ್ಥಪ್ರಕೃತಿ. ಸಾಧಾರಣವಾಗಿ ಛಳಿಯಾಗದು; ಕಂಬಳಿ ಬೇಕಾಗದು. ನೀವು ಊಹಿಸಿದುದು ಸರಿ, ಇವಳದು ತದ್ವಿರುದ್ಧ!

  ಹೇಮಂತದಾದಿಯೊಳ್
  ಕೋಮಲಾಂಗಿ ರಜಾಯಿ
  ಯಾ ಮುಸುಗುಮಾನು ಸರಿಸುಗುಮಾವಗಂ | (ಇವಳು ಮುಸುಗುಂ, ನಾನು ಸರಿಸುಗುಂ, ಯಾವಾಗಲುಂ)
  ನಾ ಮೂಲಪೈತ್ಥ್ಯನಿ
  ದ್ದಾ ಮುಸುಕೊಗೆಯಲೆಲರಿ
  ಗೀ ಮತಿಯು ಕಾವ ಕಾವನು ಬಯಸುವಳ್|| (ಮತಿ = ಶ್ರೀಮತಿ. ಕಾವ ಕಾವು = ಜಗಳದ ಕಾವೂ ಸೇರಿ ಇನ್ನೂ ಬೆಚ್ಚಗಾಗಲಿ ಎಂದು ಇವಳ ಲೆಕ್ಕಾಚಾರ!)

  ಮಾನ್ಯರೆ, ಮೊದಲ ಕರಡು ಹಾಕಿದಾಗ ವಾರ್ಧಕ್ಕಾಗುವಷ್ಟು ಮಾತ್ರೆಗಳಿದ್ದವು. ಕುಸುಮಕ್ಕೆ ಅಳವಡಿಸಲು (ಬೈ 2 ಮಾಡಲು) ಬಹಳ ತ್ರಾಸ ಪಡಬೇಕಾಯಿತು. ಒಳ್ಳೆಯ ಪಾಠ. ನನ್ರಿ.

  • ಈ ಪದ್ಯವೂ ಚೆನ್ನಾಗಿದೆ. ವಾರ್ಧಕವು ಕುಸುಮವಾದದ್ದು ಹೇಮಂತದ ಪ್ರಭಾವದಿಂದಲೋ? ಅಂತೂ ಈ ತೆರನಾದ precise writing ತುಂಬ ಒಳ್ಳೆಯ exercise:-) ಅಂದಹಾಗೆ ಇಲ್ಲೊಂದು ವೈನೋದಿಕಚಾಟುಪದ್ಯ;

   ರಜಾಯಿಯಂ ನಚ್ಚುವ ಜಾಯೆ ಸಂದಿರಲ್
   ಸಜಾ ಇದೆಂಬ ಪ್ರಿಯನುಂ ಸಮಂತಿರಲ್|
   ಮಜಾ ಗಡಂ ಸಲ್ಲದೆ ಮಾರ್ಗಶೀರ್ಷದೊಳ್
   ರಜಯಿಯಂತಾಗೆ ಧವಂ ಕಳತ್ರಕಂ?

   (ಜಾಯೆ=ಪತ್ನಿ, ಧವ=ಪತಿ, ಕಲತ್ರ=ಪತ್ನಿ)

   • ಕೊನೆಯ ಸಾಲಿನಲ್ಲಿ “ರಜಾಯಿ……….” ಎಂದಾಗಬೇಕು…ದಯಮಾಡಿ ತಿದ್ದಿಕೊಳ್ಳಿರಿ.

    • Byoootiful.
     ’ಧವ’ದ ನಿಷ್ಪತ್ತಿ ಹೇಗೆ ಎಂದು ಯೋಚನೆಗೆ ತೊಡಗಿದೆ. ಒಡನೆಯೇ ಹೊಳೆಯಿತು. ಪಶ್ಯಕ ಕಶ್ಯಪನಾದಂತೆ, ವಧ ಧವ ಆಗಿದೆಯಲ್ಲವೆ? ಜಾಯೆಯದೂ ಅಂತೆಯೇ ಇರಬೇಕು. ಯೆಜಾ> ಯಜಮಾಂತಿ.

   • ಗಣೇಶರೆ,
    ಚಾಟು ಪದ್ಯದ ಛಂದ ಹೇಗೆ? ಇಲ್ಲಿ ಆದಿಪ್ರಾಸದಲ್ಲಿ “ಲಗಂ” ಗೆ ಅವಕಾಶವುಂಟೆ?

    • ಕಂಚನ ಅವರೇ,
     ಚಾಟುಪದ್ಯವೆಂಬುದೊಂದು ಛಂದಸ್ಸಲ್ಲ. ಯಾವುದೇ ಚಮತ್ಕಾರಜನಕವಾದ ಪದ್ಯವು ಚಾಟುವೆನಿಸುತ್ತದೆ. ಚಾಟು ಎನ್ನುವ ಶಬ್ದವು ಚಟು ಎಂಬ ಧಾತುವಿನಿಂದ ಬಂದಿದ್ದು ಇದರ ಅರ್ಥವು ಸ್ವಾರಸ್ಯ, ಚಮತ್ಕಾರ, ಚಾತುರ್ಯ, ವೈಚಿತ್ರ್ಯ ಎಂದಾಗಿದೆ. ಆಂಗ್ಲಭಾಷೆಯ epigrammatic ಎಂಬುದಕ್ಕೆ ಚಾಟು ಪದವು ಸಂವಾದಿ ಎನ್ನಬಹುದು. ಈ ನಮ್ಮ ಪದ್ಯಪಾನದಲ್ಲೇ ಹಲವು ಬಾರಿ ನಾವು ಗೆಳೆಯರು ವಿನೋದ-ಚಮತ್ಕಾರಗಳಿಂದ ಪರಸ್ಪರ ವಿನಿಮಯಿಸಿಕೊಂಡ ಪದ್ಯಗಳೇ ಚಾಟುಗಳೆನ್ನಬಹುದು.
     ಪದ್ಯದ ಮೊದಲಿಗೆ “ಲಗಂ” ವಿನ್ಯಾಸಕ್ಕೆ ಮಾತ್ರಾಛಂದಸ್ಸಿನಲ್ಲಿ (ಬಹುಮಟ್ಟಿಗೆ)ಅವಕಾಶವಿಲ್ಲವಾದರೂ ಅಕ್ಷರವೃತ್ತಗಳಲ್ಲಿ ಅವಕಾಶವಿದೆ. ಉದಾ:- ವಂಶಸ್ಥ, ಉಪೇಂದ್ರವಜ್ರ, ಪೃಥ್ವೀ, ಶಿಖರಿಣೀ,
     ಭುಜಂಗಪ್ರಯಾತ ಇತ್ಯಾದಿ ಅನೇಕವೃತ್ತಗಳಿವೆ. ಮಾತ್ರಾಗಣಗಳ ಪೈಕಿ ಚತುರ್ಮಾತ್ರಾಗಣಗಳಲ್ಲಿ, ಸಂತುಲಿತಮಧ್ಯಾವರ್ತಗತಿಯಲ್ಲಿ, ಹಲವೊಮ್ಮೆ ತ್ರಿಮಾತ್ರಾಗಣಗಳಲ್ಲಿ ಕೂಡ ಲಗಂ ಗತಿ ಬರಬಹುದು.

 17. ಪದ್ಯ ಪಾನದ ನನ್ನ ಮೊದಲ ಪ್ರಯತ್ನ. ರಸವಿಲ್ಲದ ಮೊದಲ ಪದ್ಯ ಬರೆವದಕ್ಕೆ ಪಂಡಿತರ ಕ್ಷಮೆಯಿರಲಿ.

  ಹೊಸೆಯಲ್ಕೆ ಹೊಟ್ಟೆಯಂ ನಾಂ
  ಹಸೆಮಣೆಯ ಗಣಪನು ಪೊರೆಯ ಲ್ ನನ್ನಂ ಕರುಣದಿ
  ಆಸೆಯಲಿ ಬಿಡಿಪೆನು ಇದರ
  “ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ”

  ನನ್ನಂ ಎನ್ನುವುದ ಸರಿಯಾದ ಪ್ರಯೋಗವೇ ಅಂತ ಗೊತ್ತಿಲ್ಲ.

  • ನಿಜವಾಗಿಯೂ ೧ ಗಂಟೆಗೂ ಮೇಲೆ ಪ್ರಯತ್ನ ಮಾಡಿ ಏನೂ ಹೋಳೆಯದೆ ಇದನ್ನು ಬರೆದಿದ್ದೇನೆ.

   • ಕೃಷ್ಣಪ್ರಸಾದರೇ! ಪದ್ಯಪಾನಂ ನಿಮಗೆ ನಲ್ಬರವನೀಯುವುದು ಕವನಿಸಲ್ಕೆ
    ತೃಷ್ಣೆಯಿಲ್ಲದೆ ಜಗದ ಸೊಗವನನುಭವಿಸಲೀ ಪದ್ಯಕಾವ್ಯದ ಕಲೆಯು ಸಲ್ವುದಲ್ತೇ!

    ನಿಮ್ಮ ಮೊದಲ ಯತ್ನ ಸ್ತವನೀಯ. ಇದಕ್ಕಾಗಿ ಅರುವತ್ತು ನಿಮಿಷಗಳನ್ನು ಮೀಸಲಿಸಿದ ನಿಮ್ಮ ತಾಳ್ಮೆ-ನಲ್ಮೆಗಳೂ ನಮನೀಯ. ಸದ್ಯದ ಪದ್ಯದ ಕೆಲವು ಲೋಪಗಳನ್ನು ಗೆಳೆಯ ಪ್ರಸಾದು ತೋರ್ಪಡಿಸಿದ್ದಾರೆ. ಮತ್ತೆ ಕೆಲವನ್ನಿಲ್ಲಿ ಸೂಚಿಸುತ್ತಿದ್ದೇನೆ. ದಯಮಾಡಿ ಬೇಸರಿಸದಿರಿ; ಧೃತಿಗೆಡುವುದೂ ಬೇಡ:-) ಹಿಗ್ಗಿನಿಂದ ಮುನ್ನುಗ್ಗಿ, ಮತ್ತೆ ಮತ್ತೆ ಪದ್ಯಪಾಠಗಳನ್ನೂ ಮಹಾಕವಿಗಳ ರಚನೆಗಳನ್ನೂ ಪರಿಶೀಲಿಸಿರಿ.
    ನಿಮ್ಮ ರಚನೆಯ ಮೊದಲ ಮೂರು ಸಾಲುಗಳಲ್ಲಿ ಸಿಂಹಪ್ರಾಸ ಬಂದಿದೆ. ಆದರೆ ಸಮಸ್ಯೆಯಿರುವುದು ಗಜಪ್ರಾಸದಲ್ಲಿ:-) ( ಈ ಪ್ರಾಸದ ವಿವರಗಳಿಗಾಗಿ ನಮ್ಮ ವಿಡಿಯೋ ಪಾಠಗಳಿಗೆ ಭೇಟಿ ನೀಡಿ)
    ಮುಖ್ಯವಾಗಿ ನಿಮ್ಮ ಪದ್ಯದ ಆಶಯವೇನೆಂದು ತಿಳಿಯುತ್ತಿಲ್ಲ. ಅದು ಗೊತ್ತಾದರೆ ನಾವು ಗೆಳೆಯರು ಮತ್ತೂ ಪರಿಷ್ಕಾರಕ್ಕಾಗಿ ನೆರವೀಯಬಹುದು.

    ಪದ್ಯಪಾನಸಖರೆಲ್ಲ ಕೇಳಿರಯ್!
    ಹೃದ್ಯಮಪ್ಪ ರಚನಾರ್ಥಮೆಲ್ಲರುಂ|
    ಸದ್ಯಮೇ ಸದಸದರ್ಥಚಿಂತನ-
    ಕ್ಕಾದ್ಯಮಪ್ಪ ನುಡಿಯಂ ನಿರೂಪಿಸಿಮ್||

    ಎಲ್ಲ ಗೆಳೆಯರಿಗೆ ನಿವೇದನೆ: ಯೆಲ್ಲರೂ ದಯವಿಟ್ಟು ಸ್ವಲ್ಪ ಬಿಡುವು ಮಾಡಿಕೊಂಡು ಉಳಿದವರ ರಚನೆಗಳ ಗುಣ-ದೋಷಗಳನ್ನು ಹದವಾಗಿ ತಿಳಿಸಿರಿ; ಎಲ್ಲರ ರಚನೆಗಳೂ ಮತ್ತಶ್ಃಟು ಚೆನ್ನಾಗಲು ಸಲಹೆ-ಸವರಣೆಗಳನ್ನೂ ನೀಡಿರಿ:-) ಯಾರಿಗೂ ಸಂಕೋಚ ಬೇಡ. ಇದೊಂದು ವಿನೂತನಪ್ರಯತ್ನ. ಕನ್ನಡಕ್ಕಿರಲಿ, ಪ್ರಾಯಶಃ ಭಾರತೀಯಭಾಷೆಗಳಿಗೇ ಮೊದಲು! ಎಲ್ಲರ ಸಕ್ರಿಯಪಾತ್ರವಹನವೇ ಇಲ್ಲಿ ಯಶಸ್ಸೀಯಬೇಕು. (“ಉಪದೇಶ” ಹೆಚ್ಚಾದಲ್ಲಿ ನನ್ನನ್ನು ಮನ್ನಿಸಿರಿ:-)

    • ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

     >> (“ಉಪದೇಶ” ಹೆಚ್ಚಾದಲ್ಲಿ ನನ್ನನ್ನು ಮನ್ನಿಸಿರಿ:-)
     ದಯವಿಟ್ಟು ಹೀಗೆ ಹೇಳಬೇಡಿ. ಬರೇ ಗದ್ಯ ಬರೆಯುತ್ತಿದ್ದ ನನಗೆ ಪದ್ಯದ ಸೊಗಸನ್ನು ತಿಳಿಹೇಳಿದ ಗುರು ನೀವು (ವೀಡಿಯೋ ದ ಮುಖಾಂತರ). ಬಹುಶಹ ನೀವು ಹೇಳಿದಷ್ಟು ಚೆನ್ನಾಗಿ ಛಂದಸ್ಸಿನ ವಿವರ ನನಗೆ ಪ್ರೌಢಶಾಲೆಯಲ್ಲೇ ಸಿಕ್ಕಿದ್ದರೆ ಇನ್ನು ಚೆನ್ನಾಗಿ ಕಲಿಯುತ್ತಿದ್ದೆ. ಆಗ ಭಾಷಾ ವಿಷಯವನ್ನು ಉಪೇಕ್ಷೆ ಮಾಡಿದ್ದಕ್ಕೆ ಪಶ್ಚಾತ್ತಾಪ ಇದೆ.
     ನನ್ನ ಮನಸ್ಸು ಇನ್ನೂ ಪದ್ಯದ ಹದಕ್ಕೆ ಹೊಂದಿಕೆ ಆಗಿಲ್ಲ. ಅದಕ್ಕೆ ಕಷ್ಟಪಟ್ಟು ಗದ್ಯವನ್ನೇ ಹೇಗೋ ಪದ್ಯ ಮಾಡುವ ಪ್ರಯತ್ನ.

     ಈ ಪದ್ಯದ ಆಶಯ ಹೀಗಿದೆ :
     ಗಣೇಶರ ವೀಡಿಯೋ ನೋಡಿದ ಮೇಲೆ ಇಲ್ಲಿನ ಸಮಸ್ಯೆಗೆ ಪದ್ಯ ಬರೀಬೇಕು ಅಂತ ಅಂದ್ಕೊಂಡಿದ್ದೆ. ಏನೂ ಬರಿಲಿಕ್ಕೆ ಗೊತ್ತಾಗದೆ ಹೊಟ್ಟೆ ಹೊಸ್ಕೊಳೊದೇ ಆಯಿತು. ಗಣೇಶನ ದಯೆಯಿಂದ ಈ ಸಮಸ್ಯೆಯಲ್ಲಿ ಬಿಡಿಸ್ಲಿಕ್ಕೆ ಹೊರಟೆ ಅಂತ ಹೇಳುವ ಪದ್ಯ ಇದು.

     ಹಸೆಮಣೆಯ ಗಣಪ – ಪೀಠದ ಮೇಲಿರುವ ಗಣಪತಿ ದೇವರು. ಮೊದಲ ಪದ್ಯ ಬರೆಯುವಾಗ ಗಣಪತಿಯ ನೆನಪು ಮಾಡುವ ಕ್ರಮ.
     ಇನ್ನೊಂದು ಅರ್ಥ ಹೀಗಿದೆ. ನಿನ್ನೆ ನಾನು ಮನೆಯಲ್ಲಿ ಚಾಪೆಯ ಮೇಲೆ “ಲಾಪ್ ಟಾಪ್” ಇಟ್ಕೊಂಡು ಗಣೇಶ್ ಅವರ ವೀಡಿಯೊ ಗಳನ್ನು ನೋಡಿದ್ದೆ. ಅವರ ಪ್ರೇರಣೆಯಿಂದ ಸಮಸ್ಯೆ ಬಿಡಿಸ್ಲಿಕ್ಕೆ ಹೊರಡ್ತಾ ಇದ್ದೇನೆ ಅಂತ ಹೇಳುವ ಇನ್ನೊಂದು ಅರ್ಥ. “ಹಸೆ ಮಣೆ” – ಚಾಪೆ ಮೇಲಿನ ಲಾಪ್ ಟಾಪ್ ನಲ್ಲಿರುವ ಶತಾವಧಾನಿ ಗಣೇಶರು. ಆ ಅರ್ಥದಲ್ಲಿ ಮೊದಲ ಪದ್ಯ ಬರೆಯುವಾಗ ಗುರುವಿನ ನೆನಪು.

 18. ೨ನೇ ಸಾಲಿನ ಕೊನೆಯ ಪದ – “ಕರುಣದಿ” ಇದು ಸರಿಯಲ್ಲ. ಅಂತ್ಯ ಗುರುವಿಲ್ಲ. ಇದನ್ನು “ದಯೆದಿಂ” ಎಂದು ತಿದ್ದಿಕೊಂಡು:

  ಹೊಸೆಯಲ್ಕೆ ಹೊಟ್ಟೆಯಂ ನಾಂ
  ಹಸೆಮಣೆಯ ಗಣಪನು ಪೊರೆಯಲ್ ನನ್ನಂ ದಯೆದಿಂ
  ಆಸೆಯಲಿ ಬಿಡಿಪೆನು ಇದರ
  “ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ”

  ದಯೆದಿಂ – ದಯೆಯಿಂದ.

  • ಸ.ಕೃ.ಪ್ರಸಾದರೆ,
   ಪಾನಕೂಟಕ್ಕೆ ಸ್ವಾಗತ. ಯೋಚಿಸದಿರಿ, ನನ್ನ ಮೊದಲ ಪದ್ಯವೂ ಹೀಗೆಯೇ ಇತ್ತು; ಈಗಲೂ ಹೆಚ್ಚುಕಡಿಮೆ ಹೀಗೆಯೇ ಇದೆ. ಶ್ರೀ ಗಣೇಶ್‍ರವರು ಹಿಂದೆಯೇ ಹೇಳಿದ್ದಾರೆ: ಕಲಿಯತೊಡಗುವವರು ಪದ್ಯದ ಆಶಯವನ್ನು ಸ್ಪಷ್ಟಪಡಿಸಬೇಕು ಎಂದು.
   peripherally ಹೇಳಬಹುದಾದರೆ, ೨ನೆಯ ಪಾದದ ಮಧ್ಯಗಣದಲ್ಲಿ ೧ ಮಾತ್ರೆ ಹೆಚ್ಚು ಇದೆ. ೩ನೆಯ ಪಾದದ ಕೊನೆಯ ಗಣದಲ್ಲಿ ಪಾದಾದಿಸ್ವರಾಕ್ಷರವಿದೆ – ಇದರ. ಯಾವುದರ?

   • ಪ್ರಸಾದು ರವರೆ ಧನ್ಯವಾದಗಳು ನಿಮ್ಮ ಸ್ವಾಗತಕ್ಕೆ ಹಾಗು ಬಾಲಿಶವಾದ ಪದ್ಯವನ್ನು ಓದಿದ ಪ್ರಯತ್ನಕ್ಕೆ.

    ೧. ಲ್ ಗೆ ಮಾತ್ರೆ ಇದೆಯ? ಅದು ಇಲ್ಲ ಅಂತ ತಿಳ್ಕೊಂಡು ಎರಡನೆ ಸಾಲು ಮಾಡಿದ್ದೆ.

    ೨. ೩ನೆಯ ಪಾದದ ಕೊನೆಯ ಗಣದಲ್ಲಿ ಪಾದಾದಿಸ್ವರಾಕ್ಷರವಿದೆ
    ಇದು ಯಾವ ನಿಯಮ ಅಂತ ಅರ್ಥ ಆಗಲಿಲ್ಲ. ದಯವಿಟ್ಟು ಮತ್ತೊಮ್ಮೆ ತಿಳಿಸಿ.

    ೩. ಇದರ – ಈ ಸಮಸ್ಯೆಯ

    ಪದ್ಯದ ಅಶಯವನ್ನು ಈ ಕೆಳಗೆ ತಿಳಿಸಿದ್ದೇನೆ.

  • ಪ್ರಸಾದರೆ,

   ಹಸೆಮಣೆ|ಯ ಗಣಪ|ನು ಪೊರೆಯೆ| ನನ್ನಂ| ದಯೆದಿಂ|
   ಎಂದು ಮಾಡಬಹುದು.
   [ಇಲ್ಲಿ ಪಂಚಮಾತ್ರಾಗತಿ ಬಂದಿದೆ. ಮತ್ತೆ ತಿಳಿಸುತ್ತೇನೆ.]

   ಸ್ವರಗಳನ್ನು ಆದಷ್ಟೂ ಸಂಧಿಮಾಡಬೇಕು.
   …..ದಯೆದಿಂ-
   ಬಾಸೆಯ|ಲಿ ಬಿಡಿಪೆ|ನಿದರಿಂ
   ಎಂದು ಮಾಡಬಹುದು. ಪದ್ಯದಾಶಯ ತಿಳಿಸಿ. ಇನ್ನಷ್ಟು ಸವರೋಣ.

   • ಪ್ರಸಾದರೇ,
    ಇಲ್ಲಿ ನಾನೊಂದು ತಪ್ಪು ಮಾಡಿದ್ದೇನೆ. ದಯೆದಿಂಬಾಸೆಯಲಿ – ಪ್ರಯೋಗ ಸರಿಯಿಲ್ಲ. ದಯೆದಿಂ + ಎಂಬ + ಆಸೆಯಲಿ = ದಯೆದಿಮೆಂಬಾಸೆಯಲಿ ಎಂದಾಗುತ್ತದೆ. ಆದರೆ ಅದು ಕಂದಕ್ಕೆ ಕೂಡಿಬರುವುದಿಲ್ಲ.
    ಜೊತೆಗೆ, ‘ದಯೆದಿಂ’ ಕಿಂತಲೂ ‘ದಯೆಯಿಂ’ ಎನ್ನುವುದು ಉತ್ತಮವೆನಿಸುತ್ತದೆ.

   • ಲ್ ಗೆ ಮಾತ್ರೆ ಇದೆಯ? ಅದು ಇಲ್ಲ ಅಂತ ತಿಳ್ಕೊಂಡು ಎರಡನೆ ಸಾಲು ಮಾಡಿದ್ದೆ.

    ಈ ಪದ್ಯದ ಆಶಯ ಹೀಗಿದೆ :
    ಗಣೇಶರ ವೀಡಿಯೋ ನೋಡಿದ ಮೇಲೆ ಇಲ್ಲಿನ ಸಮಸ್ಯೆಗೆ ಪದ್ಯ ಬರೀಬೇಕು ಅಂತ ಅಂದ್ಕೊಂಡಿದ್ದೆ. ಏನೂ ಬರಿಲಿಕ್ಕೆ ಗೊತ್ತಾಗದೆ ಹೊಟ್ಟೆ ಹೊಸ್ಕೊಳೊದೇ ಆಯಿತು. ಗಣೇಶನ ದಯೆಯಿಂದ ಈ ಸಮಸ್ಯೆಯಲ್ಲಿ ಬಿಡಿಸ್ಲಿಕ್ಕೆ ಹೊರಟೆ ಅಂತ ಹೇಳುವ ಪದ್ಯ ಇದು.

    ಹಸೆಮಣೆಯ ಗಣಪ – ಪೀಠದ ಮೇಲಿರುವ ಗಣಪತಿ ದೇವರು. ಮೊದಲ ಪದ್ಯ ಬರೆಯುವಾಗ ಗಣಪತಿಯ ನೆನಪು ಮಾಡುವ ಕ್ರಮ.
    ಇನ್ನೊಂದು ಅರ್ಥ ಹೀಗಿದೆ. ನಿನ್ನೆ ನಾನು ಮನೆಯಲ್ಲಿ ಚಾಪೆಯ ಮೇಲೆ “ಲಾಪ್ ಟಾಪ್” ಇಟ್ಕೊಂಡು ಗಣೇಶ್ ಅವರ ವೀಡಿಯೊ ಗಳನ್ನು ನೋಡಿದ್ದೆ. ಅವರ ಪ್ರೇರಣೆಯಿಂದ ಸಮಸ್ಯೆ ಬಿಡಿಸ್ಲಿಕ್ಕೆ ಹೊರಡ್ತಾ ಇದ್ದೇನೆ ಅಂತ ಹೇಳುವ ಇನ್ನೊಂದು ಅರ್ಥ. “ಹಸೆ ಮಣೆ” – ಚಾಪೆ ಮೇಲಿನ ಲಾಪ್ ಟಾಪ್ ನಲ್ಲಿರುವ ಶತಾವಧಾನಿ ಗಣೇಶರು. ಆ ಅರ್ಥದಲ್ಲಿ ಮೊದಲ ಪದ್ಯ ಬರೆಯುವಾಗ ಗುರುವಿನ ನೆನಪು. 🙂

  • “ಆಸೆಯಲಿ ಬಿಡಿಪೆನು ಇದರ” ಎನ್ನುವುದು ಹಳೆಗನ್ನಡದಂತೆ crisp ಆದಾಗ ಆಸೆಯಲ್ ಬಿಡಿಪೆನಿದರ ಎಂದಾಗಿ, ಈಗ ಆಸಯಲ್ ಎನ್ನುವುದು ಸ್ಪಷ್ಟವಾಗಿ ೫ ಮಾತ್ರೆಯ ಪದವಾಗಿ ಬಂದು, ಕಂದದ ೪ ಮಾತ್ರೆಯ ಧಾಟಿಗೆ ಭಂಗ ತರುತ್ತದೆ. ಅದರ ಬದಲಿಗೆ, ಆಶಯ|ದಿಂ ನಾಂ| ಬರೆದಾ – ಎಂದು ಬರೆದರೆ, ಓದುವಾಗ ಅದು ಮತ್ತೆ ಮತ್ತೆ ೪ ಮಾತ್ರೆಯ ಗತಿಯನ್ನು ನೆನಪಿಸುತ್ತದೆ.

   • ಅಂದರೆ ೫ ಅಕ್ಷರ ಪದ ಬರಬಾರದ? ೪ ಮಾತ್ರೆ ಅಂದರೆ ಪದವು ೪ ಅಕ್ಷರದ ಒಳಗೆ ಇರಬೇಕಾ?

    ಲ್ ಇದಕ್ಕೆ ಮಾತ್ರೆಯ ಲೆಕ್ಕ ಇದೆಯ?

    • ಅರ್ಧಾಕ್ಷರದಿಂದ ಅದರ ಪೂರ್ವದಕ್ಷರ ಗುರುವಾಗುತ್ತದೆ. ಆಸೆಯಲ್ (ಗುರು ಲಘು ಗುರು). ’ಪೊರೆಯಲ್’ (ಲಘು ಲಘು ಗುರು)

    • >>>ಅಂದರೆ ೫ ಅಕ್ಷರ ಪದ ಬರಬಾರದ? ೪ ಮಾತ್ರೆ ಅಂದರೆ ಪದವು ೪ ಅಕ್ಷರದ ಒಳಗೆ ಇರಬೇಕಾ?
     ಹಾಗೇನಿಲ್ಲ. ೪ ಮಾತ್ರೆಗಳ ಪದಗಳನ್ನೇ ತರುವುದು ಸಾಧ್ಯವಿಲ್ಲ. ಆದರೆ ಓದುವಾಗ, ಅದು ಚತುರಸ್ರ ಗತಿಯನ್ನು ನೆನಪಿಸುವಂತಿರಬೇಕು. ಉದಾಹರಣೆಗೆ, ಕಂದದ ಪುಟದಲ್ಲಿನ ಉದಾಹರಣೆಗಳನ್ನು ಗಮನಿಸಿ (http://padyapaana.com/?page_id=438). “ಕಂದವ|ನೊರೆವುದು| ಕಷ್ಟಂ” “ಆರವ|ಮಂ ನಿರ್ |ಜತಕಂ -” ಇತ್ಯಾದಿ.

     • >> ಆದರೆ ಓದುವಾಗ, ಅದು ಚತುರಸ್ರ ಗತಿಯನ್ನು ನೆನಪಿಸುವಂತಿರಬೇಕು

      ಈ ನಿಯಮ ನನಗೆ ಸರಿಯಾಗಿ ಅರ್ಥ ಆಗಲಿಲ್ಲ. ದಯವಿಟ್ಟು ಹೆಚ್ಚಿನ ವಿವರಗಳು ವೀಡಿಯೋಗಳಲ್ಲಿ ಇದ್ದರೆ ನನಗೆ ಸೂಚಿಸಿ.

     • ಛಂದಗಳಿಗೆಲ್ಲವಿರುವುದೊಂದೊಂದು ಧಾಟಿ ವಾಚನಕ್ಕುಂ
      ಕಂದದಾ ಪದ್ಯ ಓದೊ ಧಾಟಿ ಚತುರಶ್ರ ಗತಿಯದಕ್ಕುಂ |
      ಒಂದು ಛಂದದೊಳು ಬರೆವ ಮೊದಲೆ ಮನದಲ್ಲಿ ಧಾಟಿ ನಿಲ್ಲಲ್
      ಚೆಂದ ಬಂಧದಾ ಪದ್ಯ ಮೂಡುವುದು, ಸೂತ್ರಮಿದುವೆ ಗೆಲ್ಲಲ್ ||

 19. ಕೃಷ್ಣಪ್ರಸಾದರೇ,
  ಈ ಒಂದೆರಡು ದಿನಗಳಲ್ಲಿ ನೀವು ಕಳುಹಿರುವ ಮಿಂಚೆಗಳನ್ನೂ ನಿಮ್ಮ ಆಸಕ್ತಿ ಹಾಗೂ ಪದ್ಯರಚನೆಯಲ್ಲಿ ನಿಮಗೆ ಬರುತ್ತಿರುವ ಪ್ರಶ್ನೆಗಳನ್ನೂ ಕಂಡಾಗ ನನಗೆ ನಿಮ್ಮನ್ನೊಮ್ಮೆ ಮುಖತಃ ಕಂಡು ವಿವರಿಸುವುದೇ ಒಳಿತೆಂದು ತೋರುತ್ತಿದೆ. ಕನಿಷ್ಠಪಕ್ಷ ದೂರವಾಣಿಯಲ್ಲಾದರೂ ಮಾತನಾಡಿ ವಿವರಿಸಬೇಕೆನಿಸಿದೆ:-)
  ಅಂದಹಾಗೆ, ಸಮಸ್ಯಾಪೂರಣದ ಬಗೆಗೆ ನಮ್ಮಲ್ಲಿ ಪ್ರತ್ಯೇಕವಾಗಿ ಪಾಠಗಳಿಲ್ಲ. ಹೀಗಾಗಿ ನಿಮಗೆ ಸಮಸ್ಯಾಪೂರಣದ ಬಗೆ ತಿಳಿದಂತಿಲ್ಲ. ಆದುದರಿಂದಲೇ ನಿಮ್ಮ ಕಂದಪದ್ಯದಲ್ಲಿ ಸಾಕಷ್ಟು ತೊಡಕು ಮೂಡಿದೆ. ಇದಾನ್ನೂ ಪ್ರತ್ಯೇಕವಾಗಿ ನಾನು ವಿವರಿಸಬೇಕಾದೀತು.

  • ದಯವಿಟ್ಟು kpsaravu@gmail.com ಇದಕ್ಕೆ ನಿಮ್ಮ ಜಂಗಮ ದೂರವಾಣಿಯ ಸಂಖ್ಯೆ ಕಳುಹಿಸಿ. ನಾನೇ ನಿಮಗೆ ಕರೆ ಮಾಡುತ್ತೇನೆ.

   ಈ ಸಮಸ್ಯೆಗೆ ಗದ್ಯದ ರೂಪದಲ್ಲಿ ಹಲವಾರು ಉತ್ತರ ಮಾಡಿದ್ದೇನೆ. ಆದರೆ ಹೊಸತಾದ ಪದ್ಯ ಪ್ರಪಂಚ ಬಹಳ ಕ್ಲಿಷ್ಟವೆನಿಸುತ್ತಿದೆ.
   ಉದಾಹರಣೆಗೆ :
   ೧. ಮೋಹಿನಿಯು ನೀರು ದೋಸೆ ಹುಯ್ಯುವಾಗ ಹಿಟ್ಟು ಮುಖಕ್ಕೆ ರಟ್ಟಿ ಬಿಳಿಯ ನರೆ ಮೀಸೆಯು ಮೂಡುವುದು.
   ೨. ಮೋಹಿನಿಯೆಂಬ ಮುಖದಲ್ಲಿ ಮೀಸೆಯಿರುವ ಶಿಖಂಡಿಯನ್ನು ನೋಡಿ ಆ ಮೀಸೆ ಅವಳಿಗೆ ಹೊಂದುತ್ತದೆಂದು ಅವಳ ಗೆಳತಿಯರು ಮಾತನಾಡುವುದು.
   ೩. ನನ್ನ ದೊಡ್ಡಮ್ಮ ಒಬ್ಬರಿಗೆ ಹಾರ್ಮೋನು ದೋಷದಿಂದ ಮುಖದಲ್ಲಿ ಮೀಸೆ ಇದೆ. ಅವರಿಗೆ ವಯಸ್ಸಾದ್ದರಿಂದ ಬಿಳಿಯ ಮೀಸೆ, ಬಿಳಿಯ ತಲೆ ಕೂದಲಿಗೆ ಹೊಂದುತ್ತದೆಂದು ಹೇಳುವುದು.
   ೪. ಮೋಹಿನಿ ಎಂಬ ಹುಡುಗಿಯ ವಧುಪರೀಕ್ಷೆಗೆ ಬಂದಾಗ ಅವಳ ಮುಖ ನೋಡಿ ಅವಳ ಮಾತಾಪಿತರು “ಆಸೆಯ” ಮೀಸೆ ಇವಳಿಗೆ ಒಪ್ಪುವುದೆಂದು ಮಾತಾಡುವುದು.

   ಮೊದಲನೇ ಕಂದನನ್ನು ಅನಾಥನನ್ನಾಗಿಸಿ, ಇನ್ನೊಂದು ಕಂದನ ಪಡೆಯುವ ಪ್ರಯತ್ನವನ್ನು ಮಾಡುತ್ತೇನೆ. 🙂

 20. ನನ್ನ ಎರಡನೆಯ ಕಂದ :

  ತರುಣಿಯು ಚೆಲುವಿನವಳ್ದಿನ-
  -ಕರನ್ಮೊದಲ ಕಿರಣಂಗಳು ತಾಮೇಲ್ಬೀಳಾ |
  ಬಿರಬಿರನೆ ಇನಿಯನಿಂಗಾ-
  -ಗಿ ರವಾ ದೋಸೆಯನುಂ ಹೊಯ್ಯುವೆಳೆಂದೋಡಲ್ ||

  ಆಸೆಯಲೆಡವಿದಳಾಗಾ
  ದೋಸೆಯ ಪುಡಿಗಳ್ಮೊಗಕ್ಕೆರಗಲಾಗವಳಾ |
  ತಾಸತಿಯು ನಗುತ ಪೇಳ್ದನು
  ಮೀಸೆಯು ಮೋಹಿನಿಯ ಮೊಗಕೆ ಚೆಲುವೆನಿಸೆರ್ಕುಂ ||

  ಪದ ವಿಭಾಗ : ತರುಣಿಯು ಚೆಲುವಿನವಳ್ ದಿನಕರನ ಮೊದಲ ಕಿರಣಂಗಳು ತಾ ಮೇಲ್ ಬೀಳಲಾ, ಬಿರಬಿರನೆ ಇನಿಯನಿಂಗಾಗಿ ರವಾ ದೋಸೆಯನುಂ ಹೊಯ್ಯುವೆಳ್ ಎಂದು ಓಡಲ್, ಅಸೆಯಲಿ ಎಡವಿದಳ್, ಆಗಾ ದೋಸೆಯ ಪುಡಿಗಳ್ ಮೊಗಕ್ಕೆರಗಲಾಗ ಅವಳಾ, ತಾ ಸತಿಯು ನಗುತ ಪೇಳ್ದನು – ಮೀಸೆಯು ಮೋಹಿನಿಯ ಮೊಗಕೆ ಚೆಲುವೆನಿಸೆರ್ಕುಂ

  ಮೊದಲನೆ ಪದ್ಯದಲ್ಲಿ ಸಿಂಹ ಪ್ರಾಸ. ಎರಡನೆಯದರಲ್ಲಿ ಗಜ ಪ್ರಾಸ ಇದೆ.

  ದಯವಿಟ್ಟು ಪರಿಶೀಲಿಸಿ.

  • ಸರವುವವರೆ, ಕಲ್ಪನೆ ಚೆನ್ನಾಗಿದೆ. ಕೆಲವು ಅಂಶಗಳು:
   ೧) “-ಕರನ್ಮೊ|ದಲ ಕಿರ|ಣಂಗಳು| ತಾಮೇ|ಲ್ಬೀಳಾ” – ೩ನೇ ಗಣ (ಲ ಗು ಲ) ಅಥವಾ (ಲ ಲಲಲ) ಬರಬೇಕು. (ದೋಸೆಯ ಪುಡಿಗಳ್ಮೊಗಕ್ಕೆರಗಲಾಗವಳಾ – ನಿಯಮಬದ್ಧವಾಗಿ ಸುಂದರವಾಗಿ ಬಂದಿದೆ)
   ೨) “ಬಿರಬಿರನೆ ಇನಿಯನಿಂಗಾ-” ಸಂಧಿಯಾಗಿಲ್ಲ. ಬದಲಿಗೆ “ಬಿರಬಿರದಿಮಿನಿಯನಿಂಗಾ-” ಎಂದು ಮಾಡಬಹುದು.
   ೩) ತಾ ಮೇಲ್ ಬೀಳಲಾ = “ತಾಮೇಲ್ಬೀಳಲಾ” ಎಂದಾಗಬೇಕು. (ಮೇಲ್ಬೀಳುತಲುಂ ಎಂದು ಮಾಡಬಹುದು)
   ೪) ತಾಸತಿ ಅರ್ಥವಾಗಲಿಲ್ಲ.
   ೫)ಹೊಯ್ಯುವೆಳೆಂದೋಡಲ್ -> ಹೊಯ್ಯುವೆನೆಂದೋಡಲ್
   ೬)ದಿನಕರನ್ + ಮೊದಲ ->’ನ್’ ವಿಭಕ್ತಿ ಪ್ರತ್ಯಯದ ಬಗ್ಗೆ ಸಂಶಯವಿದೆ. ನನಗೆ ಗೊತ್ತಿರುವಂತೆ, ವಿಭಕ್ತಿಗಳು (ಕರಂ, ಕರಮಂ [ಕರವಂ], ಕರನಿಂ[ಕರದಿಂ],ಕರಕುಂ, ಕರದಿಂ, ಕರ[ಕರವ], ಕರದೊಳ್)
   ೭) “ನಗುತ ಪೇಳ್ದನು” ಚೆನ್ನಾಗಿಯೇ ಇದೆ. ಆದರೆ, “ನಗುತಂ ಪೇಳ್ದಂ” ಎಂದರೆ, ೪ರ ಗತಿಯೂ ಬಂತು. ಹಳೆಗನ್ನಡದ ಇಸ್ತ್ರಿಯೂ ಬಿದ್ದಂತೆನಿಸುತ್ತದೆ. (ನಗುತ ಪೇಳ್ದನು – ಇದರಲ್ಲಿ ೩-೪ರ ಭಾಮಿನಿಯ ಗತಿ ಕಾಣಿಸುತ್ತದೆ.)

   ಗತಿಕ್ರಮದಲ್ಲಿ, ನಿಮ್ಮ ಎರಡನೆಯ ಕಂದ ಚೆನ್ನಾಗಿದೆ. “ಆಸೆಯ|ಲೆಡವಿದ|ಳಾಗಾ”…

 21. ಲಹರಿ:
  ಕಾಲಂ ಲೌಕಿಕವಾಹನ
  ಚಾಲಕವರ್ಯಂ ವಿಲಾಸದುಃಖತಟಸ್ಥಮ್
  ಕಾಲಂ ಪಿಡಿಯಲ್ ಪೋದೊಡೆ
  ನಿಲ್ಲುವನೇಂ? ಸಹವಿಹಾರಮೊಂದೇ ಮಾರ್ಗಂ

  • ಎಂದಿನ ತೆರದಿಂ ಹೊಳ್ಳರೆ
   ಸಂದಿರ್ಪುದು ನಿಮ್ಮ ಕವಿತೆ ಸಾರ್ಥಕವಿಧಿಯಿಂ|
   ಸುಂದರಮೀ ಲಹರಿಯಲಾ!
   ತಂದಿರ್ಪುದು ಕಾಲನದಿಯ ಕೋಲಾಹಲಮಂ||

   ಕಾಲಂ ಜೀವನವನದವ-
   ಕೀಲಂ, ಯೌವನಹರಿದ್ವಿನಾಶನಮೂಲಂ|
   ಕೂಲಂ ಕಾಣದ ನದಿ, ಮನ-
   ಕೇ ಲಂಘಿಸಲೆಡೆಯನೀಯದೋಘದ ಶೂಲಂ||

   (ಇದರ ಆದಿಪ್ರಾಸವನ್ನು ಗಮನಿಸಿದರೆ ಕಾ,ಕೀ, ಕೂ, ಕೇ ಗಳೆಲ್ಲ ಬಂದಿರುವುದು ಸುವೇದ್ಯ. ಇದೊಂದು ಅಲ್ಪ ಚಮತ್ಕಾರ. ಹೊಳ್ಳರ ಪದ್ಯವು ನೀಡಿದ ಸ್ಫೂರ್ತಿ)

   • ಗಣೇಶರೆ, ಧನ್ಯವಾದಗಳು.
    “ಯೌವನಹರಿದ್ವಿನಾಶನಮೂಲಂ”. ಇದು ನನ್ನ ಮನಸ್ಸಿನಲ್ಲೂ ಬಂದಿತ್ತು. “ಯೌವನದನೀರಪೀರುವಸೂರ್ಯಂ” ಎಂದು ಅಂದುಕೊಳ್ಳುತ್ತಿದ್ದೆ. ನೀವು ಇನ್ನಷ್ಟು ಚೆನ್ನಾಗಿ ಹೇಳಿದ್ದೀರಿ.
    “ಕೂಲಂ ಕಾಣದ …. ಓಘದ ಶೂಲಂ” – ಇಲ್ಲಿ ನೀವು, ಚಿಂತೆ [ದಡವಿರದ ನದಿ] ಮನಸ್ಸನ್ನು ತುಂಬಾ ಕಾಡದಂತೆ ತಡೆಯುತ್ತದೆ [time heals] ಎಂಬ ಅರ್ಥದಲ್ಲಿ ಬಳಸಿದ್ದೀರಾ? ಕಂದದಲಿ ನೀವು ಬರೆದ ಕಾಗುಣಿತಗಳು ಸ್ವಾರಸ್ಯಕರವಾಗಿದೆ. ಕೂಲ = ದಡ.

 22. ದತ್ತಪದಿಗೆ ನನ್ನ ಪದ್ಯ:

  ಕರಿಮೋರೆಯ ಕರಿಯ ಮೋರೆಯ ದೇವ
  ಹರಿಸುತನ ಸುತನು ಪಿತನಾ |
  ಗಿರಿಪ ಗಿರಿರಾಜನ ಗಿರಿಜೆಯ ತನಯ
  ಸಿರಿಯಾಗಲಿ ಶಿರಸಿಗೆಮಗೆ ||

  ಪದಾನ್ವಯ :
  ಕರಿಮೋರೆಯ : ಆನೆಯ ಮುಖದ
  ಕರಿಯ ಮೋರೆಯ : ಕಪ್ಪು ಮುಖದ
  ಹರಿಸುತನ ಸುತನು ಪಿತನಾಗಿರಿಪ : ಹರಿಯ ಮಗನ – ಬ್ರಹ್ಮನ, ಮಗನು – ಶಿವನು, ಪಿತನಾಗಿರಿಪ – ತಂದೆಯಾಗಿರುವ

  “ಸಿರಿಯಾಗಲಿ ಮತಿಗೆಮಗೆ” ಅಂದರೆ ಚಂದ. ಆದರೆ ಶಿರ ಬಂದರೆ ಸ್ವಲ್ಪ ರ ಕಾರದ ಅಲಂಕಾರ ಹೆಚ್ಚುವುದು ಅಂತ ನನ್ನ ಭಾವನೆ.

  ಈ ಛಂದಸ್ಸಿನ ಬಗ್ಗೆ ಸರಿಯಾಗಿ ಗೊತ್ತಿಲ್ಲ. ತಪ್ಪಿದ್ದರೆ ದಯವಿಟ್ಟು ತಿಳಿದವರು ತಿದ್ದಿರಿ.

 23. ಲಹರಿ: ಕಗ್ಗದ 20-19-20-17 ಮಾದರಿ
  ನಿಮ್ಮ ಪ್ರವಚನವೊಂದರಲ್ಲಿ ಕೇಳಿದ್ದು: ಭಗವನ್ನಾಮ ಸಂಕೀರ್ತನೆ, ವೇದಘೋಷ, ಸಂಗೀತ, (ಪ್ರವಚನ) – ಎಲ್ಲವೂ ಎಂಜಲು, ನಾಲಗೆಯ ಮೇಲೆ ನುಲಿದದ್ದು. ಪರವಸ್ತುವೊಂದೇ ಎಂಜಲಲ್ಲ, ಏಕೆಂದರೆ ಅದನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ.

  ಪರತತ್ತ್ವದ ವಿಚಾರವಂ ಮಾತೊಳೊರೆಯೆ ದು
  ಷ್ಕರತರಂ ಕೇವಲಮದನುಭವಜ್ಞೇಯಂ|
  ವರವಿನೂತನ ದೂರದರ್ಶಕವೆಸೆವುದುಂಟೆ
  ತೆರೆಯೊಳ್ಪಳೆಯ ಛಾಪಿನ ದರ್ಶಕದೊಳ್|| (ತೆರೆಯೊಳ್ = ಜಾಹೀರಾತಿನಲ್ಲಿ. Would an ad for an 8m pixel TV make sense on a 2m pixel TV screen?)

  • ಪ್ರಸಾದ್,

   ತುಂಬಾ ಚೆನ್ನಾಗಿದೆ ಪದ್ಯ ಮತ್ತು ಕಲ್ಪನೆ

  • ಪ್ರಸಾದ್ – ಚೆನ್ನಾಗಿದೆ. ಆದರೆ (ಗಣೇಶರ ಪ್ರವಚನದ ಮೇಲೆ ವಿಷಯವನ್ನು ಆರೋಪಿಸಿದ್ದಾಗ್ಯೂ,)ಒಂದು ಪ್ರಶ್ನೆ ಎದ್ದಿದೆ ::
   ಪರತತ್ವಮಂ ಮೇಣಿತರ ಸಂಗತಿಗಳಂ ಪ –
   ಸರಿಸಲ್ಕೆ ಮಾತೊಂದೆ ದಾರಿಯಲ್ತೆ ?
   ಕುರುಡರೆಲ್ಲಾರಾಗಲೆಳೆಯ ಕುರುಡರಿಗೆಲ್ಲ –
   ವರಿವು ವಾಕ್ಕಿಂದಲೇಂ ಸಲ್ವುದಲ್ತೆ ?‌

   • ಹೇ ರಾಂ,
    ಇಹುದೊಂದೆ ಮಾರ್ಗವದು ವದನಮಾರ್ಗಮೆನುತಲ
    ರುಹಿರುವುದು ಬರೆಹದೊಳಗೇತಕೆಲವೋ?
    ಕುಹಕವಹುದೈ ಕುರುಡರಿಂಗಿತ್ತು ಕಣ್ಣುಗಳ
    ಗುಹಸಖನೆ ಕಿವುಡಾಗಿಸುವುದನಿಬರಂ|

    ಗುಹಸಖ – ರಾಮ(ಚಂದ್ರ KBS)

    • ಹಾ ಪ್ರಸಾದ್,
     ಮಸ್ತಕವಿಚಾರಗಳು ಮಾತಾಗಿ ಹರಿಯಲ್ಕೆ
     ಪುಸ್ತಕದೆ ನಂತರದಲಚ್ಚಾಗುವುಂ |
     ವಸ್ತು ಗ್ರಹಣವೆ ಮುಖ್ಯವಂಗಗಳು ನೆಪಮಲ್ತೆ
     ವಿಸ್ತರದ ವಾದಗಳಿಗೆಡೆಯಿರ್ಕುದೇಂ ?

     ಪುಸ್ತಕ – ಬರಹಗಳು ಅಚ್ಚಾಗಿರುವ ಸ್ಥಳ

  • ಹಾಗೂ,
   ನೀರ ಬಗೆಗಿನ ಪುಸ್ತಕದಿ ನೀರು ಬರದಹುದು
   ಸೇರದೇನೆಮಗೆ ಮೇಣಾ ಜ್ಞಾನವು ?
   ಪಾರಮಾರ್ಥದ ತತ್ವವೆಮಗೆ ತಿಳಿಯುವುದೆಂತು
   ಧೀರ ನಾಲಿಗೆಗಳಂ ತಡೆಯಲ್ಕೆ ನೀಂ ||

   • ತಡೆಯುವುದಕ್ಕೆ ನಾನಾರು?

    ಕಂಡೊಡನೆ ಗೋಕುಲಾಶ್ಟಮಿಕುರುಕು ಸಕಲವಂ
    ಬಂಡೇಳುವುವು ಧೀರನಾಲಗೆಗಳುಂ|

    ‘ಮಾತು? ಡೌನ್ – ಡೌನ್’ ಎಂದು ಬಂಡೇಳುತ್ತದೆ ನಾಲಗೆ!

    • ನಾಲಗೆಯ ಪಕ್ಷವಿಡಿದಾಡುತಿಹರೊಬ್ಬರಾ
     ಮೇಲಿಪ್ಪ ಕಣ್ಣುಗಳ ಪರವೊಬ್ಬರು
     ಮೇಲಪ್ಪ ಮನದ ಚಕ್ಷುಗಳಿಗಮದಳವಲ್ಲ
     ಸೋಲುವುವು ವೇದಗಳು ಪರಬೊಮ್ಮನೊಳ್

     • ಮಂಜುನಾಥರೆ,
      ಅರಿವಿಗೆಟುಕಿದ ಮತವನೇಣಿಯಾಗಿಸುತೆ ನೀ
      ಪರಮಸತ್ಯದೆಡೆ ಸಾರೆಂದ ದಿವಿಜವರರ|
      ವರ ಸೊಲ್ಲು ಸಲ್ಲಲೊಂದೆಜ್ಜೆಗೊಂದೊಂದೆನುತ
      ಲಿ ರಸನ-ನಯನ ಮಾರ್ಗದೊಳ್ನೆಡೆದೆವಾವ್||
      WoW!

  • ಕಡೇಯ ಪಾದದಲ್ಲಿ ಛಂದಸ್ಸು ಎಡವಿದೆ. ದಯಮಾಡಿ ಸ್ವಲ್ಪ ಸವರಿಸಿರಿ. ಉಳಿದಂತೆ ಪದ್ಯವು ಅನವದ್ಯ.

 24. ಹೇಮಂತದಾಶಯ ::

  ಇಳೆಗೆ ಹೊದೆಸಿಹುದೀಗ
  ಬಿಳೆಯ, ಚಳಿಯ ಹೊದಿಕೆಯ
  ಒಳಬದುಕಿನ ಚಳಿಯೋಡಿಸುವುದೇ ಹೇಮದಾಶಯ ?
  ಕೆಲಸಗಾರ ಸೂರ್ಯಗೂ
  ಮಲಗಿಪ್ಪ ಹಂಬಲಾ
  ಕಲಿಸುತಿವೆ ಕುಸುಮಗಳ್ಗಭಿಸಾರಿಕೆಯರ ಕಾತರ ||

  • ಆಶ್ಚರ್ಯ!! ಕಾಂಚನ ಅವರ ಪದ್ಯದಲ್ಲಿ ಛಂದೋದೋಷ!!!!
   ನೀವು ಬರೆದ ಈ ಪದ್ಯದ ಛಂದಸ್ಸು ಯಾವುದು?

   • ದೋಷಮೇನದು ಛಂದದೊಳಿರೆ ವಿ
    ಶೇಷಮಲ್ತದು ಚಂದಿರನೊಳಂ
    ದೋಷಮಿರೆ ಮೇಣ್ ಕಾಂಚನವಿರಚಿತ ಕವನದೊಳಗೆ ತಾಂ|

   • ಕುಸುಮ ಷಟ್ಪದಿಯಲ್ಲಿ ತುಸು ಗೊಂದಲವಿತ್ತು. ೩ ಹಾಗು ೬ನೆ ಸಾಲುಗಳಲ್ಲಿ ೫ಮಾತ್ರೆಯ ಗಣ ೩ ಇರಬೇಕಾದ್ದು, ೪ ಮಾಡಿದ್ದರಿಂದ ತೊಡಕಾಗಿತ್ತು. ಸರಿ ಮಾಡಿದ ಪದ್ಯ ಇಲ್ಲಿದೆ ::

    ಇಳೆಗೆ ಹೊದೆಸಿಹುದೀಗ
    ಬಿಳೆ, ಚಳಿಯ ಹೊದಿಕೆಯ
    ಕಳೆಹೀನ ಬಾಳ್ಗಿತ್ತು ಹೊಸದಾಸೆಯ |
    ಬೆಳಗುವಾ ಸೂರ್ಯಗೂ
    ಮಲಗಿಪ್ಪ ಹಂಬಲಾ
    ಕಲಿಸುತಲಿ ಸುಮಗಳ್ಗಿನಿತು ಸಹನೆಯ ||

    • ಇದೀಗ ಪದ್ಯವು ಸಾಕಷ್ಟು ಸುಧಾರಿಸಿದೆಯಾರೂ ಕೆಲವೊಂದು ವ್ಯಾಕರಣದೋಷಗಳಿವೆ(ಮಲಗಿಷ್ಟ>ಮಲಗಲಿಷ್ಟ, ಹಂಬಲಾ>ಹಂಬಲ,ಕಳೆಹೀನ>ಕಳಾಹೀನ ಅಥವಾ ಕಳೆಯಿರದ) ಛಂದಸ್ಸಿಗಾಗಿ ಹಲವೆಡೆ ಗುರುವಾಗಿ ಎಳೆದುಕೊಳ್ಳುವುದು ಅಷ್ಟಾಗಿ ಸೊಗಯಿಸದು:-) ಎರ\ಡನೆಯ ಸಾಲಿನಲ್ಲಿ ಹೊದ್ದಿಕೆ ಎಂದು ಸವರಿಸದಿದ್ದರೆ ಒಂದು ಮಾತ್ರೆ ಕೊರತೆಯಾಗುತ್ತದೆ.

     • ಮಲಗಿಪ್ಪ ಎಂಬುದು ಮಲಗಿಷ್ಟ ಎಂದು ನಿಮಗೆ ಕಾಣಿಸಿದ್ದಿರಬೇಕು. ಮಲಗಿರ್ಪ ಎಂದು ಮಾಡಿದರೆ ಸರಿಯಾಗಬಹುದು. ಉಳಿದ ಸಲಹೆಗಳನ್ನೊಳಗೊಂಡ ಪದ್ಯ ಹೀಗಿದೆ ::
      ಇಳೆಗೆ ಹೊದೆಸಿಹುದೀಗ
      ಬಿಳೆ, ಚಳಿಯ ಹೊದ್ದಿಕೆಯ
      ಕಳೆರಹಿತ ಬಾಳ್ಗಿತ್ತು ಹೊಸದಾಸೆಯ |
      ಬೆಳಗುವಾ ಸೂರ್ಯಗೂ
      ಮಲಗಿರ್ಪ ಹಂಬಲವು
      ಕಲಿಸುತಿವೆ ಸುಮಗಳ್ಗಿನಿತು ಸಹನೆಯ ||

 25. ರಾಮ-ಪ್ರಸಾದರ ವಿನೋದಮಯಸಂವಾದ
  ಧೀಮಹಿಮೆಯೆಂದು ನಾನೊರೆವೆನಲ್ತೆ|
  ಈ ಮನೋಹರಚಮತ್ಕಾರವೇ ಚಾಟುವಲ!
  ರಾಮಣೀಯಕಮೂಲವೆನೆ ಸಲ್ವುದು||

  • ಮಾನನೀಯ,
   ನಮ್ಮೀರ್ವರುಗಳನ್ವೆರೆಸುತೆ ಪೊಗಳಿರ್ದೊಡಂ
   ನಿಮ್ಮಾ ಗೆಳೆಯನ ಪರ ಕಕ್ಕಲಾತಿ|
   ಸುಮ್ಮಾನದೆ ಪ್ರಕಟವಹುದು ‘ರಾಮ’ಣೀಯಕ
   ವ’ಮ್ಮೂಲ’ವೆಂದಿರಾ ದ್ರೋಣರವೊಲು||

   • ಪದ್ಯ ಪೂರ್ಣವಾಗಿ ಅರ್ಥವಾಗದಿದ್ದರೂ ಸಾಮಾನ್ಯದ ಅಭಿಪ್ರಾಯವಾಯಿತು. ಸೊಗಸಾದ ನಾಟುನುಡಿ(epigram)…ಆದರೆ ತೃತೀಯಪಾದದಲ್ಲಿ ಛಂದಸ್ಸು ತಪ್ಪಿದೆ.
    ’ರಾಮ’ಣೀಯಕವನ್ನು ನಿಂದಿಸಲ್ ತೊಡಗಿರಲ್
    ಕ್ಷೇಮವಾಗಿರಲಹುದೆ ಛಂದೋಗತಿ?
    ರಾಮನನ್ನನುಸರಿಸಿ ಬರಲು’ಪ್ರಸಾದ’ವಲ!
    ಈ ಮಾರ್ಗಮಂ ತೊರೆಯೆ ನಿಂದೆಯೆ ಗತಿ!!!

    • ಹೌದು. ಲಗಂ ನುಸುಳಿದೆ.
     ‘ರಾಮಣೀಯಕಮೂಲ’ ಎಂಬುದಕ್ಕೆ ‘ಈ ಕುಶಲಸಂಭಾಷಣೆಗೆ ಮೂಲ ರಾಮಚಂದ್ರ’ ಎಂಬ ಹಿಸುಕು ಅರ್ಥ ಹೊರಡಿಸಿ, ನಿಮ್ಮ ಸಹಪಾಠಿ ಅವರು ಎಂಬ ಕಕ್ಕಲಾತಿಗೆ ಅವರನ್ನು ಹೆಚ್ಚು ಹೊಗಳಿರುವಿರಿ ಎಂದು ಹೇಳಿದ್ದೆ ಅಷ್ಟೆ.
     🙂

     • ಲಗಂ ಸರಿಪಡಿಸಿದ್ದೇನೆ:
      ನಮ್ಮೀರ್ವರುಗಳನ್ವೆರೆಸುತೆ ಪೊಗಳಿರ್ದೊಡಂ
      ನಿಮ್ಮಾ ಗೆಳೆಯನ ಪರ ಕಕ್ಕುಲನು|
      ಸುಮ್ಮಾನದೆ ಪ್ರಕಟಪಡಿಸುತಲಿ ‘ರಾಮ’ಣೀ
      ಯ’ಮ್ಮೂಲ’ವೆಂದಿರಾ ದ್ರೋಣರವೊಲು||

   • ಪ್ರಸಾದ್,
    ಹಿಂದೆ ರಾಮನ ಮರೆಯಲಡಗುತ್ತ ಬೀಗುತಿರ –
    ಲಿಂದೇಕೆಯೀ ಕೊಂಕನೆತ್ತಿರುವಿರಿ ?
    ಅಂದು ರಾಮನ ತಮ್ಮ ರಕ್ಷಣೆಯ ಸೌಖ್ಯಕ್ಕ –
    ದಿಂದೇಕದೇಕಲವ್ಯನ ಪಾತ್ರವು ??

    [ಬೇಕೆಂದಾಗ [ಬಲ]ರಾಮನ ಮರೆಯಲ್ಲಿ ರಕ್ಷಣೆ ಪಡೆದ ರಂಗನಾಥಗೆ, ಈಗೇಕೆ victimized ರೋಲು?]
    🙂

     • ಚೆನ್ನವೆ ಗಣೇಶರಂ ದ್ರೋಣರ್ಗೆ ಹೋಲಿಪುದು!
      ಸನ್ನಿವೇಶದಿ ರಾಮನರ್ಜುನ ದಿಟಂ
      ಇನ್ನು ತಮ್ಮಯ ಪಾತ್ರ ಕರ್ಣನೋ ವ್ಯಾಧಕುಲ
      ಚನ್ನನೋ ತಾವಿದನು ವಿಸ್ತರಿಪುದು

     • ಏಕಲವ್ಯನಪೆಯೆಂದದೊ ರಾಮ ನುಡಿದರೈ
      ನೂಕಿದೊಡೆಯುಂ ಗುರುವೊಳೇಕಸಮ ‘ಲವ್’ ಮೆರೆದ
      ತಾಕಲಾಟದೆ ಪಡೆದ ಕಾನೀನಶಿಶುವು ಸಾರೆ ಪೃಥೆಯಳು ಕರ್ಣನನ್ನು|
      ಲೋಕಕಂಜುತೆ ‘ಕರ್ಣ, ಗೋ ಕರ್ಣ’ವೆಂದು ನುಡಿ
      ದಾ ಕಡಲಪುರವಿಂದು ಗೋಕರ್ಣವಾದೊಂದು
      ಸಾಕಿವೆರಡುಕ್ತಿಗಳವರುಗಳಾಂಗ್ಲಜ್ಞಾನಕಂ||

     • ನೀವೇಕಲವ್ಯನೆನೆ ನಿಮ್ಮ ದೆಸೆ ಬಲುಹಿನದು
      ದೈವಕೃಪೆ, ಇವರು ದಿಟದ್ರೋಣರಲ್ಲಂ
      ಆವ ಪುಣ್ಯವೊ ತಮ್ಮ ಹೆಬ್ಬೆರಳುಳಿಯಿತಿಂದು
      ದೇವ ಕಾದನು ನಿಮ್ಮ ’ಬಿಲ್ವಿದ್ಯೆ’ಯಂ

      ಕರ್ಣತನ ಬಹುಕಷ್ಟವೀ ನಷ್ಟಯುಗದಲ್ಲಿ
      ವರ್ಣಿಸಲಳವೆ ಬಾಳ ಕಾರ್ಪಣ್ಯಮಂ
      ಅಣ್ಣ ಕೇಳ್ ಬರುವ ಸಂಬಳ ಮೂರು ದಿನಕಾಯ್ತು
      ಕರ್ಣ-ದಾನಕೆ ದ್ರವ್ಯವೆಲ್ಲಿ ತರಲಿ!

     • ಮಂಜುನಾಥರೆ,

      ಬಿಲ್ಲಿಲ್ಲದೆ = Fee ಪಡೆಯದೆ

      ಒಪ್ಪಿದೆನು, ಬಿಲ್ಲಿಲ್ಲದೆ ಜ್ಞಾನವುಣಿಸಿದರ
      ತಪ್ಪದು ದ್ರೋಣರೆಂದದ್ದಾದೊಡಾ|
      ನುಪ್ಪುಂಡ ಮನೆಗಂ ಕೃತಜ್ಞನಾಗಲು ಬಿಡರ್
      ತುಪ್ಪವುಣಿಸುವರು, ತಟ್ಟೆ ತೊಳೆಯೆ ಬಿಡರ್||

    • ರಾಂ,
     ಬೀಗುವನದೇಕಡಗಿಕೊಂಡಾನು ಮರೆಯಲ್ಲಿ?
     ಹೀಗು ಜರೆಯುವರೆ, ಕೊಂಕೆಂದು ಬೀಗಂ?
     ಹೇಗೊ ನೇಯಲ್ ಸಂಜೆಯೊಳಗೆ ಪದ್ಯವನೊಂದ
     ರಾಘವರದೇನು ರಂಗೆಟ್ಟಿರುವರೆ?

     ‘ಸಂಜೆ ಹೊತ್ತಿಗೆ ಮೊಳ ನೇಯಿ’ ಎಂದು ಗಾದೆ. ಹಾಗೆ ಮಾಡಲು ರಾಮಚಂದ್ರರೇನು ಪ್ರಸಾದು ಕೊಟ್ಟೋದ್ರೆ?

     • ಹೇಗೊ ನೇಯ್ದದ್ದಲ್ಲ, ಬರಿ ಮೊಳದಳತೆಯಲ್ಲ
      ಹಾಗೆ ಸುಮ್ಮನೆ ಜರೆದೆನೆಂದೆಂಬುದೇಕೈ ?
      ಬೀಗಿದುದು ರಾಮನಾ ಮರೆಯ ರಕ್ಷಣೆಗಲ್ತೆ
      ಬೇಗದಲೆ ಜಾಣ್ಮರೆವ ತೊರೆಯೈ ದೊರೆ !!

     • 1) ನನ್ನದು ಜಾಣ ಮರೆವು ಅಲ್ಲ. ಮರೆವು ನನ್ನ ಸಹಜಗುಣ.
      2) ಒಬ್ಬ ವೇಶ್ಯೆ; ಅವಳ ಗುಡಿಸಲ ಎದುರಿಗೆ ಒಬ್ಬ ಸನ್ಯಾಸಿ. ಅಲ್ಲಿಗೆಷ್ಟು ಗಿರಾಕಿಗಳು ಬಂದರೊ, ಅಷ್ಟು ಕಲ್ಲುಗಳನ್ನು ಒಂದೆಡೆ ಎಣಿಸಿಡುತ್ತಿದ್ದ. ಕಡೆಗೆ, ತನ್ನ ನಿಯಮಿತ ಕೆಲಸ ಮಾಡದ್ದಕ್ಕೆ ಅವನು ನರಕಕ್ಕೆ ಹೋದ. ವೃತ್ತಿಯ ಕಾರಣಕ್ಕಾಗಿ ಅವಳಿಗೇನೂ ನರಕಪ್ರಾಪ್ತಿಯಾಗಲಿಲ್ಲ.
      3) ತಲ = ನರಕ
      4) ರಕ್ಷಣೆ ಬೇಡುವುದನ್ನು ಕೇಳಿದ್ದೇನೆ. ರಕ್ಷಣೆಗೆ ಬೀಗುವುದು ಎಂದರೇನು?

      ರಕ್ಷಣೆಗೆ ‘ಬೀಗು’ವರೆ ‘ಬೇಡು’ವುದಲ್ಲದೆಲೆ
      ಲಕ್ಷ ಕೊಟ್ಟೊಡಮಾನು ಬೇಡ್ವುದಿಲ್ಲೌ|
      ಶಿಕ್ಷೆ ಮರೆತವಗೊ ನೆಪ್ಪಿಸುವವಗೊ ಸನ್ಯಸಿಯ
      ನಕ್ಷಿಯೈದಿತು ತಲಕೆ ಗಣಿಕೆಯಲ್ಲ ||

     • ಪದ್ಯದಲ್ಲಿ ಮನವರಿಕೆಯಾಗುವಂತೆ ಅರ್ಥೈಸಲು ಸೋತು, ಈಗ ಗದ್ಯ ಮೊರೆಹೋಗಿದ್ದೇನೆ ::
      ಹಿಂದಿನ “ಪದ್ಯಪಕ್ಷ – ೧” ರಲ್ಲಿ ಗಣೆಶರ ಸಲಹೆಯಲ್ಲಿ (admonition in your words) ರಾಮಚಂದ್ರ ಎಂಬುದು ರಂಗನಾಥ ಹೆಸರಿಗಿಂತ ಮುಂದಿತ್ತು ಎಂದು ಹೇಳಿದ್ದಿರೆ !!‌ ಅದರ ಭಾವ ಬೀಗಿವಿಕೆಯೆಂದು ನನಗನಿಸಿತ್ತು. ಆದ್ದರಿಂದ ರಕ್ಷಿತನಾದೆನೆಂದು ಬೀಗುವುದು …
      🙂

     • ಭಲರೇ ಪ್ರಸಾದರಾ ಭೀಷ್ಮಸಾಧನೆಯಿದೇಂ
      ಪೞಿಯಾಯ್ತೆ ಪದ್ಯಪಾನದ ನೋಂಪಿಗಂ!
      ಕೊಳಗುಳದಿ ಹರಿಗೆ ಚಕ್ರವ ಪಿಡಿಸಿದಂ ಭೀಷ್ಮ
      ಕೆಳೆಗದನದೀ ರಾಮ ಗದ್ಯವಿಡಿದಂ!

     • ರಾಮ್,
      ನೀವು ವಿಶದಪಡಿಸಿದ್ದು ಒಳ್ಳೆಯದಾಯಿತು. ನಿರ್ದಿಷ್ಟವಾಗಿ ಇದು ಎಂದು ತಿಳಿಯದೆ, ಯಾವುದೋ ಹಿಂದೆ ನಡೆದ ಪ್ರಸಂಗ ಕುರಿತದ್ದು ಎಂದು ಗ್ರಹಿಸಿದ್ದೆ. ಬೀಗುವಿಕೆಗಿಂತ ಇದೊಂದು ರೀತಿಯ relief ಅಲ್ಲವೆ? ಇದನ್ನು ಬೀಗುವಿಕೆ ಎಂದೇ ಅರ್ಥೈಸಬೇಕೆಂಬುದು ನಿಮ್ಮ ಇರಾದೆಯಾದರೆ, ಇಗೊಳ್ಳಿ ಪುಷ್ಟಿ: ಹಾಗೆ ಅಡಗಿಕೊಂಡದ್ದು ನಾನಲ್ಲ. ಆ ಸೂಕ್ತಸ್ಥಾನವನ್ನು ನನಗೆ ಶ್ರೀ ಗಣೇಶರೇ ಕರುಣಿಸಿದರೆಂಬ ಬೀಗು.
      ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಿರೋ? ಅನ್ನಿ.
      ಈ ‘ಕೆಳೆಗದನ’ ಇನ್ನು ಸಾಕು. ವೃಥಾ ಮಂಜುನಾಥರ ಬಾಯಿಗೆ ಬಿದ್ದೆವಲ್ಲ! ಅದನ್ನು ಕುರಿತು ಯೋಚಿಸೋಣ. ಅವರಿಗೆ ಒಂದು ಬಾಣ ಹುರಿಮಾಡುತ್ತಿದ್ದೇನೆ. ನೀವೂ ಒಂದು ಹೂಡಿ. 🙂

     • ಮಂಜುನಾಥರೆ,
      ಕಟುಕಿಯಾಡಿದಿರೈ ತಿಳಿಯೆನೆ ನಾನದನು ಕಪಿ
      ಘಟ ಕೆಟ್ಟು ಕೆಡಿಸಿಹುದು ವನವನೆಂದು|
      ಕುಟಿಲತೆ ಕಳಚುತೊಮ್ಮೆ ನತಮಸ್ತನಹೆನಾನು
      ಸುಟಿ ಪುರಾಣಜ್ಞಾನ ತಮ್ಮದಹುದೈ||

      ಕೊಳಗುಳದಿ ಹರಿಗೆ ಚಕ್ರವ ಪಿಡಿಸಿದಂ ಭೀಷ್ಮ – ಇದರ ಭಾವ ಅರ್ಥವಾಯಿತು. ಈ ಕುರಿತು ವಿಶದವಾಗಿ ನನಗೆ ತಿಳಿಸಿ (sanaatani@gmail.com)

     • ಪ್ರಸಾದರೇ ತಮಗೆ ಮೈಲ್ ಮಾಡಿದ್ದೇನೆ. Anyway, ನನಗೆ ಪದ್ಯದಲ್ಲೇ ಮಾತಾಡಬೇಕೆನ್ನುವ ನೋಂಪಿಯೇನು ಇಲ್ಲ 😛

 26. ಬಹುಕಾಲದ ನಂತರ ಮತ್ತೆ ಪದ್ಯಪಾನಕ್ಕೆ ಕಾಲಿರಿಸುತ್ತಿದ್ದೇನೆ. ಅನೇಕ ಹೊಸ ಹೆಸರುಗಳನ್ನು ಕಾಣುತ್ತಿದ್ದೇನೆ. ಎಲ್ಲರಿಗೂ ನಮಸ್ಕಾರ.

  ೧. ಸಮಸ್ಯೆ: ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ
  ಮೋಸದೊಳಾ ರಕ್ಕಸ ತಾ
  ನೀಸಳುಕದೆ ಸುರರ ಸಾಲ ಸೇರುತ ಕೂರಲ್
  ಬೀಸಿದ ಚಕ್ರವ ಹರಿಯಾ
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ

  (ವಿಷ್ಣುವಿಗೆ ಮೀಸೆಯ ಕಲ್ಪನೆಯು ಸಾಮಾನ್ಯವಾಗಿ ನಮ್ಮಲ್ಲಿಲ್ಲದಿದ್ದರೂ ಮೀಸೆ ಇಲ್ಲಿ ಗಂಡುತನದ ಸಂಕೇತವಾಗಿ ಬಂದಿದೆ. ಮೋಹಿನಿಯ ರೂಪದಲ್ಲಿದ್ದ ವಿಷ್ಣು ಕೋಪದಿಂದ ಕ್ಷಣಮಾತ್ರ ಗಂಡುತನ ತಳೆದದ್ದೂ ಮೋಹಿನಿಯ ಮುಖದ ಚೆಲುವನ್ನು ಅದೊಂದು ರೀತಿ ಹೆಚ್ಚಿಸಿದೆಂಬ ಭಾವ)

  ೨.ದತ್ತಪದಿ:
  ಗಿರಿಜೆಯ ತನಯನೆ ವರಲಂಬೋದರ
  ಸಿರಿಸುಖವೀವ ವಿನಾಯಕನೆ
  ಕರಿಗಡುಬೀವೆನು ಮೋದಕವೀವೆನು
  ಹರಿಸೈ ಕಷ್ಟಪರಂಪರೆಯ

  ೩. ವರ್ಣನೆ: ಕುಸುಮಷಟ್ಪದಿಯಲ್ಲಿ ಹೇಮಂತ
  ಬಿಳಿಯ ಹತ್ತಿಯ ಹಿಂಜಿ
  ಹೊಳೆವ ಕಿರಣದಿ ನೆಯ್ದು
  ಚಳಿಗೆಂದು ಹೇಮಂತ ಕಳುಹಿರುವನು
  ಸುಳಿವ ಗಾಳಿಗೆ ನಡುಗಿ
  ಬಿಳಿಯ ಚಾದರ ಹೊದ್ದು
  ಇಳೆಯು ಬೆಚ್ಚನೆ ಮುದುರಿ ಮಲಗಿರುವಳು

  (ಚಳಿಗಾಲದಲ್ಲಿ ಹಿಮದ ಹಚ್ಚಡ ಹೊದ್ದ ಭೂರಮೆಯ ಚಿತ್ರ)

  ೪. ಲಹರಿ (ಪಂಚಮಾತ್ರಾ ಚೌಪದಿಯಲ್ಲಿ):
  ಪದ್ಯಪಾನದೊಳಾದ ವಿದ್ಯಮಾನವ ನೋಡ
  ಲುದ್ಯುಗಿಸುತಿಹೆ ಕಾಲ ಬಹಳ ಸರಿಯಲ್
  ಸಾಧ್ಯವೇ ದಾಂಟುವುದು ಪೇಳಿನಿತು ಭೋರಿಡುವ
  ಪದ್ಯಪಾರಾವಾರ ವಿಸ್ತರವನು

  (ಗೆಳೆಯರೇ, ಬಹುಕಾಲದ ನಂತರ ಪದ್ಯಪಾನಕ್ಕೆ ಮತ್ತೆ ಕಾಲಿಟ್ಟ ನನಗೆ ಎಲ್ಲವೂ ಅಯೋಮಯ. ಇಷ್ಟೊಂದು ಕವನಗಳು, ಇಷ್ಟೊಂದು ಚರ್ಚೆಗಳು, ಯಾವುದನ್ನು ನೋಡುವುದು, ಯಾವಾಗ! ನನ್ನದೊಂದು ವಿನಮ್ರ ಸಲಹೆ. ಅದೇಕೋ ಪಕ್ಷಕ್ಕೊಮ್ಮೆ ಒಟ್ಟಿಗೇ ಐದಾರು ಸಮಸ್ಯೆಯನ್ನಿಟ್ಟುಕೊಂಡು, ಕೆಲವನ್ನು ಬರೆಯುವುದು, ಕೆಲವನ್ನು ಬಿಡುವುದಕ್ಕಿಂತಲೂ ಪದ್ಯಪಾನದಲ್ಲಿ ಮೊದಲು ಅನುಸರಿಸುತ್ತಿದ್ದ ವಿಧಾನ ಹೆಚ್ಚು ಸರಳ ಹಾಗೂ manageable ಎನ್ನಿಸುತ್ತದೆ ನನಗೆ. ಒಮ್ಮೆಗೆ ಒಂದು ಸಮಸ್ಯೆಯಾದ್ದರಿಂದ ಸಮಸ್ಯೆಯನ್ನು ನೋಡಿದ ತಕ್ಷಣ ಅದಕ್ಕೆ ಸ್ಪಂದಿಸಲು ಅನುಕೂಲವಿತ್ತು. ಜೊತೆಗೆ ಒಂದೇ ಸಮಸ್ಯೆಯಿದ್ದುದರಿಂದ ಅದರ ಬಗೆಗಿನ ಚರ್ಚೆಯೆಲ್ಲವೂ ಒಂದೇ ಕೇಂದ್ರದ ಸುತ್ತ ಇರುತ್ತಿತ್ತು; ಯಾವುದೂ ಕಣ್ತಪ್ಪಿ ಹೋಗುತ್ತಿರಲಿಲ್ಲ. ಆದ್ದರಿಂದ ಪಕ್ಷಕ್ಕೊಮ್ಮೆ ಒಟ್ಟಿಗೆ ಐದಾರು ಸಮಸ್ಯೆಗಳನ್ನು ಕೊಡುವುದರ ಬದಲು ಪಕ್ಷದುದ್ದಕ್ಕೂ ಇವೇ ಐದಾರು ಸಮಸ್ಯೆಗಳನ್ನು ಒಂದಾದಮೇಲೆ ಒಂದು ಕೊಡುವುದು ಹೆಚ್ಚು ಸುಖಕರವೆನಿಸುತ್ತದೆ. ಪ್ರತಿ ಸಮಸ್ಯೆ ಮುಗಿದ ಮೇಲೂ ಮುಂದೇನೆಂಬ ಕುತೂಹಲ ಇರುತ್ತದೆ. ಇದು ನನ್ನ ಅನಿಸಿಕೆಯಷ್ಟೇ)

  ೫. ಚಿತ್ರಕ್ಕೆ ಪದ್ಯ (ಮತ್ತೇಭವಿಕ್ರೀಡಿತದಲ್ಲಿ):
  ಇಳೆಯಂ ದೈವದ ಕೋಪದಿಂದ ಸಲಹಲ್ ಬಂದಾತನೀತಂ ಗಡಾ
  ಕೊಳೆಯಲ್ತೀ ತರು ದೊಡ್ಡಿ ದೇವ ಕುವರಂ ಮೈದಾಳ್ದ ಪುಣ್ಯಸ್ಥಳಂ
  ಕಳೆಯಲ್ ಲೋಕದ ಪಾಪಮಂ ಪಸರಿಸಲ್ ಸಂಪ್ರೀತಿ ಸಂದೇಶಮಂ
  ಇಳಿವಂದೀತನೆ ಬೆತ್ಲೆಹೇಮಿನವನೇಸುಕ್ರಿಸ್ತನೈ ಪೂತನೈ

  • ಮಂಜು ಮಸಗುವ ಕಾಲವೂ ಹೃತ್-
   ಕಂಜ ಮುಗುಳುವ ಕಾಲವೂ ಮನ-
   ವಂಜಿಸುತ ಬರುತಿರ್ದೊಡಂ ಬರದಾದರಿನ್ನೇಕೆ|
   ಮಂಜುನಾಥರು ಪದ್ಯಪಾನದ
   ಪುಂಜಿತಪ್ರಿಯಪದಕೆನುತ ಚಿಂ-
   ತಾಂಜಲಿಯೊಳಿರೆ ಮೊಗವು, ನೀವ್ ಬಂದಿಹುದು ಸೊಗವಾಯ್ತು||

   ಎಲ್ಲ ಪದ್ಯಗಳೂ ಸೊಗಸಾಗಿವೆಯೆಂದರೆ ಅತಿಶಯವಲ್ಲ. ಭಾಷಾ-ಬಂಧ-ವಕ್ರೋಕ್ತಿಗಳ ಮಾನದಿಂದ ಚೆನ್ನಾಗಿ ತೇರ್ಗಡೆಯಾಗಿವೆ. ವಿಶೇಷತಃ ನನಗೆ ತಮ್ಮ ಮತ್ತೇಭವಿಕ್ರೀಡಿತವೂ ಹೇಮಂತವರ್ಣನೆಯ ಕುಸುಮಷಟ್ಪದಿಯೂ ತುಂಬ ಚೆಲುವೆನಿಸುತ್ತಿವೆ. ಸಮಸ್ಯೆಯಲ್ಲಿ ಮತ್ತೂ ಚಮತ್ಕಾರವನ್ನು ನಿರೀಕ್ಷಿಸಿದ್ದೆ:-)

   ನಿಮ್ಮ ಸಲಹೆಯನ್ನು ಎಲ್ಲರೂ ಗಂಭೀರವಾಗಿ ಚರ್ಚಿಸೋಣ. ನನಗಿದ್ದ ಭಯವೆಲ್ಲ ಅತ್ಯುತ್ಸಾಹಿಗಳಾದ ಪದ್ಯಪಾನಿಗಳು ಪಾನದ ಸರಬರಾಜು ಅತ್ಯಲ್ಪವೆಂದು ಮುನಿದು ಬೇರೆ ಗಡಂಗಿಗೆ ತೆರಳಿದಲ್ಲಿ ಏನು ಗತಿಯೆಂದಿತ್ತು:-) ಹೀಗಾಗಿ ಈ ಪರಿಯ ಬಹುವಿಧದ ಸವಾಲುಗಳ ಹವಣಿಕೆಯಾಯಿತು. ಈ ಪದ್ಯಪಕ್ಷದಲ್ಲಿ ಆದುದರಿಂದಲೇ ಒಂದು disclaimer ಕೂಡ ಹಾಕಿಸಿದ್ದೀನಿ!!:-) ಪ್ರಕೃತ ವಿಷಯವನ್ನೂ ಪದ್ಯದಲ್ಲಿ ಚರ್ಚಿಸೋಣವೇ?

   • ಬಗೆಬಗೆಯ ಪದ್ಯಗಳಿಗವಕಾಶವಿಲ್ಲಿಹುದೆ-
    ಮಗೆಯೆನ್ನುತುತ್ಸಾಹಿಗಳು ಬರ್ಪರು
    ಸಿಗದಿರ್ದರೇನಂತೆ ಪರಿಹಾರಮೆಲ್ಲಕ್ಕು
    ನಗೆಯಿಂದ ಶಕ್ತ್ಯಾನುಸಾರ ಬರೆವರ್

    • “ಶಕ್ತ್ಯನುಸಾರ” ಸಾಧುರೂಪ. ಶಕ್ತಿ+ಅನುಸಾರ=ಶಕ್ತ್ಯನುಸಾರ; ಯಣ್ ಸಂಧಿ:-)

     • ಗಣೇಶ್ ಸರ್,
      ಹೌದಲ್ಲ! ಇದನ್ನ ಗಮನಿಸಿಯೇ ಇರಲಿಲ್ಲ, ಆಡುಭಾಷೆಯಲ್ಲಿ ಹೇಗೋ ಧೀರ್ಗ ಬಂದುಬಿಟ್ಟಿದೆ ಶಕ್ತ್ಯನುಸಾರ ಅಂತ ಹೇಳುವ ಶಕ್ತಿಯೂ ಇಲ್ಲದಂತಾಯಿತು:)

      ಸರಿಪಡಿಸಿದ್ದೇನೆ:
      ಬಗೆಬಗೆಯ ಪದ್ಯಗಳಿಗವಕಾಶಮಿಲ್ಲಿಹುದೆ-
      ಮಗೆಯೆನ್ನುತುತ್ಸಾಹಿಗಳು ಬರ್ಪರು
      ಸಿಗದಿರ್ದರೇನಂತೆ ಪರಿಹಾರಮೆಲ್ಲಕ್ಕು
      ನಗೆಯಿಂದ ಕೈಲಾಗುವಷ್ಟು ಬರೆವರ್

   • ಗಣೇಶರೇ, ತಮ್ಮ ಅಭಿಮಾನಪೂರ್ವಕ ನುಡಿಗೆ ಧನ್ಯವಾದ.

    ಪದ್ಯಪಾನದ ರುಚಿ ಹತ್ತಿದವ ಬೇರೆ ಗಡಂಗಿಗೆ ತೆರಳುವನೇ! ಅನುಮಾನ. ಈ ವಿಷಯ ಕುರಿತು ನನ್ನ ಅಲೋಚನೆಗಳು ಇಂತಿವೆ:

    ಪದ್ಯಪಾನ ವಿಧಾನ ಕುರಿತಾಲೋಚಿಸುವೆ-ನಿಂತು:

    ಪದ್ಯಪಾನಪಿಪಾಸೆಯೊಳಗತಿ
    ವೇದ್ಯವೆನಿಪೆರಡಂಶವಿಹುದಾ
    ಮದ್ಯದಂತೆಯೆ ಮನಕು ಮೈಯಿಗು ತಹುದು ವೈರುಧ್ಯ
    ಪದ್ಯವೀಂಟುವ ಚಪಲ ಮನದಲಿ
    ಮೆದ್ದು ಜೀರ್ಣಿಸದಲಸ ಮೈಯಲಿ
    ಗೆದ್ದು ಪೋಪುದು ರಸವನಾಸ್ವಾದಿಸದ ವೈರಾಗ್ಯ

    ಖೀರು ಹಲ್ವ ದಂಬರೋಟು
    ಚಾರು ಚಂದ್ರಹಾರ ಮೋತಿ
    ಚೂರು ಲಾಡು ಬೂಂದಿಯು ಬಾಸುಂದಿ ಬರ್ಫಿಗಳ್
    ಕೂರಿ ತುಂಬಲೆಲೆಯ ಮೇಲೆ
    ಮೀರೆ ತಿನುವ ಹಂಬಲವನು
    ಯಾರ ತಿನಲಿ ಯಾರ ಬಿಡಲಿ ಹಾಳು (ಪೇಳು) ಹೊಟ್ಟೆಯೇ!

    ತಿನ್ನಲು ಬಂದಷ್ಟನು ತಿನ್ನಿರಿ ನೀಂ
    ತಿನ್ನಲೆ ಬೇಕೆಂದೊತ್ತಡಮಿಲ್ಲಂ
    ತಿನ್ನಲಿಯೆನ್ನುವ ಹಂಬಲವೆಮ್ಮದು ಎಂಬಿರಿ ನೀವ್ ಸರಿಯೇ!
    ತಿನ್ನಲು ನಾಲಿಗೆ ಹಾತೊರೆಯುತಿರಲ್
    ತಿನ್ನಲಜೀರ್ಣಕೆ ಮುಖವದು ಕಟ್ಟಲ್
    ಖಿನ್ನತೆ ಮನದೊಳಗಾವರಿಸುವುದೇಂ ಚೆನ್ನವೆ ರಸಿಕರಿಗೆ?

    ಹತ್ತಾರು ಪ್ರಶ್ನೆಗಳು ನೂರಾರು ಪರಿಹಾರ
    ಮತ್ತೆ ಮುದವೀವ ಸಾವಿರ ಚರ್ಚೆಗಳ ದಂಡು
    ಮುತ್ತಿ ಕೈಬೀಸಿ ಕರೆಯುತ್ತಿರಲದಾವುದನ್ನೆತ್ತಲಾವುದಕಳೆಯಲಿ?
    ಮತ್ತೆ ಬಂದಷ್ಟ ಬರೆದೋದಿ ಕೇಳೆನ್ನದಿರಿ
    ಚಿತ್ತವದಕಳವಡದು ಕಾವ್ಯಲೋಭದಿ ಬಳಲು
    ತತ್ತಿತ್ತ ಸುಳಿದುಸುತ್ತಳಿಸಿ ಮತ್ತಾಯಸದಿ ಕೂಡುವುದು ಕೈಯ ಚೆಲ್ಲಿ!

    ಪದ್ಯದ ಮಕರಂದವ ಹೀರುತ ಸುಮ
    ಮಧ್ಯದಿ ವಿಹರಿಪ ಷಟ್ಪದಿಯುಂ
    ಮದ್ಯದಕಟ್ಟರೆಯಿಂ ಚುರುಕಳಿಯುತ
    ಸಧ್ಯದಿ ನಾಗಾಲಾಗಿಹುದೈ

    ನೂರು ಹಾಡ ಕೇಳುತಂ
    ನೂರು ಶ್ರುತಿಯಲಲೆಯುತಂ

    ಒಮ್ಮೆಲೆ ನೂರಾಲಾಪವ ಕೇಳುತ
    ಸುಮ್ಮನೆ ನಡುವಲಿ ಸದ್ದನು ಹಾಕಲ್

    ಹಾಡನು ಕೇಳದೆ ಕೇಳಲು ಹಾಡದೆ
    ಓಡುವೊಲಪ್ಪುದು ಸಂತೆಯೊಳಂ

    ಕಟ್ಟುಗಳೈದಂ ಪಕ್ಷದೊ
    ಳೊಟ್ಟಿಗೆ ನೀಡುವ ಬದಲ್ಗೆ ವಾರದೊಳೆರಡಂ
    ಕೊಟ್ಟರು ಮೇಣದೆ ಲೆಕ್ಕಮ
    ದೊಟ್ಟೈದಪ್ಪುದೆನೆ ಕಂದನಿಂತಾಂ ನುಡಿವೆಂ

    ಒಂದುಸಲಕೊಂದೊಂದು ಪದ್ಯವ
    ನೊಂದು ಸೂತ್ರದೊ(ಥ್ರೆಡ್ಡಿನೊ)ಳೊಂದು ಚರ್ಚೆಯ
    ಹೊಂದಿ ಬರಲೀ ಪದ್ಯಕೇಳಿ ಸುಸೂತ್ರಮಪ್ಪುದಲಾ
    ಚೆಂದದಿಂ ಸ್ವಾರಸ್ಯಗಳನದ
    ನೊಂದ ಬಿಡದೆಲೆ ಸವಿವ ಸೌಖ್ಯವ
    ದೊಂದು ತೆರದಾರಾಮದಲಿ ದೊರಕೊಳ್ವುದೀ ಮನಕೆ

    • ಮಂಜುನಾಥರೆ,
     ಸರಿಯೆ ನಿಮ್ಮಿಂಗಿತವು ಸಾಧುವೆ
     ಬರೆವ ಗೆಳೆಯರಿಗಿಲ್ಲಿ ಹಬ್ಬವ –
     ದಿರಲದೋದುವ ಮಿತ್ರರಿಗೆ ಕೇಂದ್ರಿತ ಗಮನ ಕಷ್ಟ |
     ಮೆರೆವ ಭವ್ಯಾಂಗಣದೆ ನರ್ತಕ –
     ರಿರುವರೆಷ್ಟೋ ಕುಣಿವ ಚಪಲದಿ
     ತರಿದ ಬಹು ರಂಗಗಳವಿರೆ ನೋಡುಗರಿಗೆತ್ತಲೆಡೆ ||

     • 🙂

      ಅದನೆ ನಾಂ ಪೇಳ್ದುದು ಕಲಾವಿದ
      ಪದಕೆ ನೀಡಿರಿ ವಿವಿಧ ರಂಗವ
      ನದಕೆ ಕಾಲವ್ಯವಧಿಗಳನನುಗೊಳಿಸಿ ವಿತರಣದೊಳ್
      ಇದರಿನಾ ನೋಡುಗರಿಗಂ ಮೇಣ್
      ಮುದದಿ ಕುಣಿವರಿಗಂ ಪರಸ್ಪರ
      ಹದುಳವಪ್ಪುದು ರಸವನಾಸ್ವಾದಿಸಲು ತೆರವಹುದು

      ಐದುವೊಗಟುಗಳಪ್ಪುದೇಂ ಸರಿ
      ಯೈದುಸೂತ್ರಂಗಳ ಸೃಜಿಸಿ ಕಿರಿ
      ದೈದು ಕಾಲಾವಧಿಗಳೊಳ್ ಸಮಗೊಳಿಸಿ ವಿಷಯಗಳಂ
      ಸ್ವಾದುವಪ್ಪುದು ಬರೆವರಿಗೆ ಮ
      ತ್ತೋದುಗರಿಗಂ ವಿಶದಮಪ್ಪುದ
      ದಾವ ಸೂತ್ರದೊಳಾವ ವಿಷಯಗಳೋಡುತಿಹವೆಂದು.

      ಪೂರಣಕ್ಕೊಂದಿರಲಿ ಮೇಣಾ
      ಸಾರ ವರ್ಣನೆ ದತ್ತಪದ ಕವಿ
      ಕಾರಣಕ್ಕೊಂದಿರಲಿ ಚಿತ್ರದ ಪದ್ಯಕೊಂದಿರಲಿ
      ಸಾರ ಸೂತ್ರಗಳೈದ ರಚಿಸಿ ವಿ
      ಚಾರಿಸಲ್ಕೆ ಸುಕಾಲ ನೀಡಲು
      ದಾರ ಕವಿ-ಸಹೃದಯ ಸಂವಾದಗಳ ಬೆಳೆಯಹುದು.

  • ಸಿಲುಕಿರಲದೊಂದೊಂದೆ ಪರಿಯ ಪದ್ಯಗಳಲ್ಲಿ –
   ಯಳುಕುವಾ ಹಲಕೆಲವರಿರವನ್ನು ಬಗೆದು |
   ಕೆಲಕಾಲ ವಿಸ್ತಾರದಾ ಗುಚ್ಛವನು ತೆರೆಯೆ
   ಕಳೆಗಟ್ಟಲಹುದೆಂಬುದೀ ಯೋಜನೆ ||

   • ಐದು ಸೂತ್ರಗಳೊಪ್ಪುವಂತಿದೆ
    ಚೋದ್ಯಮಂ ಸೂತ್ರಗಳು ಕಾಯುತ-
    ಲೋದುಗರಿಗುಣಬಡಿಸುವುದರಲಿ ಶಂಕೆಯಿದರಿಲ್ಲ
    ಪದ್ಯಪಕ್ಷದಲೆಲ್ಲ ಕಂತಿಗು-
    ವೊಂದನಾದರು ಬರೆವುದಾಸೆಯು
    ಕಾದು ವಾರದ ಕೊನೆಗೆ ಬಿಡುವಲಿ ಬರೆವುದೆನಪಥವು

    ವಾರಕೆರಡೆನೆ ಸೂತ್ರ ಸೃಜಿಪೊಡೆ
    ಸಾರಕಳೆಪುದೆ ಹಳೆಯ ಸೂತ್ರಗಳ್
    ಮೀರುತಿರ್ದೊಡೆ ಸಮಯವವುಗಳು ಹೊಸತ ಮರೆಯಲ್ಲಿ
    ಆರು ಸೂತ್ರಗಳನ್ನುವೊಮ್ಮೆಲೆ
    ಸಾರಿದರೆ ಹದಿನೈದು ದಿವಸಕೆ
    ಸೇರುವುದೆನಿಪುದೆನ್ನ ಮನಕೆ, ತಿಳಿಸಿ ನಿಮ್ಮ ಮತ

    ಬೇರೆ ಬೇರೆ ಸೂತ್ರಗಳನ್ನು ಪ್ರತ್ಯೆಕವಾಗಿದ್ದರೂ ಒಂದೇ ದಿನದಲ್ಲಿ (1st… 15th…) ಕೊಟ್ಟರೆ ನನ್ನ ಪ್ರಕಾರ ಮಂಜುನಾಥರ ಅಭಿಪ್ರಾಯವನ್ನು ಪದ್ಯ ಪಕ್ಷದ ಸಧ್ಯದ ವ್ಯವಸ್ಥೆಗೂ ಹೆಚ್ಚು ಭಾಧಕ ವಾಗದಂತೆ ಮಾಡಬಹುದೆನ್ನಿಸುತ್ತದೆ

    • ಪ್ರಾಸಕ್ಕೊಸ್ಕರ 2ನೆ ಪದ್ಯದಲ್ಲಿ 5ನ್ನು 6 ಎಂದಿದ್ದೇನೆ 😉

    • ಅಹುದು ನಿಮ್ಮಭಿಮತವು ಲೇಸೆನಿ
     ಸಿಹುದು ಆದರಿದೊಂದು ಶಂಕೆಯ
     ದಿಹುದು ತಂಡದ ಮುಂದಿನಾಳುಗಳಿದ ನಿವಾರಿಪುದು
     ಒದಗೆ ಪಕ್ಷದೊಳೈದು ಸೂತ್ರಗ
     ಳದರ ನಡುವಲಿ ಮತ್ತೆ ಹೊಸದೊಂ
     ದೊದಗಲನ್ಯರು ತಮ್ಮ ಸೂತ್ರವ ಮಂಡಿಸಲು ಬಹುದೇ?

 27. ಕುಸುಮ ಷಟ್ಪದಿಯಲ್ಲಿ ಹೇಮಂತದ ಬಣ್ಣನೆ:

  ಮಳಲುದಂಡೆಯ ಹೊಳೆಯ
  ಕುಳಿರುಗಾಳಿಯ ಮೊರೆತ
  ಬೆಳಗುತಿಹ ತಾರೆಗಳ ಬಾನ ಚೆಲುವು |
  ಸುಳಿವ ಮರೆಸಿದ ರವಿಯು
  ಕೆಳೆಯ ಬಯಸುವ ಇರುಳು
  ಚಳಿಗಾಲದೊಳಗೆನಿತು ಮುದ ತರುವುವು ||

 28. ಹಂಸಾನಂದಿಯವರಿಗೆ ನಲ್ಬರವು.

  ತಿಳಿಗನ್ನಡದ ಕನ್ನಡಿಯೊಳೆನಿತೊ ಚೆಲುವಾಗಿ
  ಕುಳಿರಿನೊಂದೋಜೆಯನು ತಿಳಿಸಿರುವಿರಿ|
  ಪಳಗಿರುವ ಕೆಯ್ಯಡುಗೆಯೆಂಬಂತೆ ತೋರುತಿದೆ
  ನಳನಳಿಪ ಕವಿತೆಯಿದು ಘಮಘಮಿಸುತ||

  ಶರದದೆ ಹಂಸಾನಂದಂ
  ಮೆರೆವುದೆನುವರಲ್ತೆ ಕಬ್ಬಿಗರ್, ಹೇಮಂತಂ|
  ಮೆರೆದಿರೆ ಹಂಸಾನಂದದೊ-
  ಳರರೇ! ಬಿಚ್ಚಳಿಸಿತೆನ್ನೊಳಚ್ಚರಿ ನಚ್ಚಿಂ||

  ಮತ್ತೊಮ್ಮೆ ಒಳ್ಳೆಯ ಕವಿತೆಗಾಗಿ ಧನ್ಯವಾದಗಳು. ಆದರೆ ನಿಮ್ಮೀ ಕುಸುಮಷಟ್ಪದಿಯ ಐದನೆಯ ಸಾಲಿನಲ್ಲಿ ವಿಸಂಧಿದೋಷವಾಗಿದೆ (ಬಯಸುವ ಇರುಳು…ಎನ್ನುವಲ್ಲಿ). ಇದನ್ನು ದಯಮಾಡಿ ಸವರಿಸಿದರೆ ಪದ್ಯವು ಮತ್ತೂ ಅನವದ್ಯವಾಗುತ್ತದೆ.

  • ಗಣೇಶ್ ಅವರೆ, ನಮಸ್ಕಾರ.

   ನಲ್ಬರವನ್ನು ಕೋರುವ ನಿಮ್ಮ ಪದ್ಯಗಳ ಆತ್ಮೀಯತೆಗೆ ಧನ್ಯವಾದಗಳು. ಇದುವರೆಗೆ ಪದ್ಯಪಾನವನ್ನು ಹಿನ್ನೆಲೆಯಿಂದಲೇ ಸವಿಯುತ್ತಿದ್ದೆ. ಈಗ ಗೆಳೆಯ ಮಂಜುನಾಥರ ಪ್ರೋತ್ಸಾಹದಿಂದ ಒಂದು ಪ್ರಯತ್ನವನ್ನೂ ಮಾಡಿದ್ದಾಯಿತು. ಹೀಗೇ ಆದ ತಪ್ಪುಗಳನ್ನು ತಿದ್ದುತ್ತಾ, ದಾರಿ ತೋರಿಸುತ್ತಿರಬೇಕೆಂಬ ಕೋರಿಕೆ ನನ್ನದು.

   -ಹಂಸಾನಂದಿ

   • ಹಂಸಾನಂದಿಯವರಿಗೆ ನಮನ,

    ನೀವು ಪದ್ಯರಚನೆಯಲ್ಲಿ ಭಾವಯಿತ್ರೀಪ್ರತಿಭೆಯ ಹಂತದಿಂದ ಕಾರಯಿತ್ರೀಪ್ರತಿಭೆಯ ವಲಯಕ್ಕೆ ಬಂದಿರುವುದು ಮುದಾವಹ.
    ಮಂಜು ಹಂಸಾನಂದಮಂ ತರ್ಪುದಚ್ಚರಿಯೆ
    ಸಂಜೆಬಿಸಿಲಿಗೆ ತಾವರೆಯು ಬಿರಿವುದೇ?
    ಪದ್ಯಪಾನದೊಳಿದೆಲ್ಲಂ ಶಕ್ಯಮೇತಕೆನೆ
    ಹೃದ್ಯಸಖರೆಲ್ಲರಿದಕೊತ್ತಾಸೆಯಯ್!!

 29. ಲಹರಿ ಖೇದದ(depression) ಬಗ್ಗೆ:

  ಓರೆ ಬೆಳಕಲಿ ಚಿಕ್ಕ ವಸ್ತುವಿನ ನೆರಳೊಂದು
  ಸೂರಮುಟ್ಟುವ ತೆರದಿ ಬೆಳೆಯುವಂತೆ
  ಭಾರವಿಹಮನಕೆ ತಾ ಸಣ್ಣ ದುಗುಡವು ಕೂಡ
  ತೋರಿಪುದು ಚಿಂತೆಯಲಿ ಪಿರಿದೆಂಬೆನೆ

 30. ಒಂದು ಲಹರಿ (ಜಲಪಾತ) ::
  ಮೇಲಿಂದ ಧುಮುಕುವಳಾ ಶ್ವೇತ ಕನ್ನಿಕೆಯು
  ತಾಳಿಕೊಂಬಳು ನೋವ ಸುಖನೀಡಲು |
  ಒಂದಾದ ಹನಿಹನಿಯ ಶಕ್ತಿ ತೋರುತ್ತಲವ –
  ಳೊಂದೊಂದೆ ನೀತಿಯನ್ನೊರೆಯುತಿಹಳು ||

  • ಮೊದಲ ಸಾಲನ್ನು ಹೀಗೆ ಸವರಿಸಬಹುದೇ? ಏಕೆಂದರೆ ಒಂದೆಡೆ ಛಂದಸ್ಸು ಎಡವಿದೆ.
   ಮೇಲಿಂದ ಧುಮ್ಮಿಕ್ಕುವಳಿದೊ ಬೆಳ್ಗನ್ನೆ ಗಡ!

   • ಜಲಪಾತಗಳ ಕುರಿತು (ಹಿಂದೊಮ್ಮೆ ಬರೆದದ್ದನ್ನು ಈಗ ಹಾಕುತ್ತಿದ್ದೇನೆ) ದಯವಿಟ್ಟು ಪರಿಶೀಲಿಸಿ ಹೇಳಬೇಕು..
    ಗಂಗೆ ತಾ ಹರಮುಕುಟದಿಂದಿಳಿದು ಬಂದಿಹಳೊ
    ಸಂಗವಂ ತ್ಯಜಿಸಿ ಹರಿಪದವ ಬಿಟ್ಟು|
    ಮಂಗಳವ ತಾನೆಸಗಿ ಸಾಗರವ ಸೇರಲಾ
    ವಂಗದೇಶವ ಹಾಯ್ದು ಹೋಗುತಿಹಳೋ||1||
    ಪಾಲಧಾರೆಯು ಕಾಮಧೇನುವಿನ ಕೆಚ್ಚಲಿಂ
    ನೀಲಸಾಲಾಗಿ ತಾ ಸುರಿಯುತಿಹುದೋ|
    ಭಾಲ ನೇತ್ರನ ಶಿರದ ಮೇಲಿರ್ಪ ಚಂದಿರನು
    ಕಾಲಾಗ್ನಿಯಿಂದ ತಾ ಕರಗುತಿಹನೋ||2||
    (ಜೋಗ ಜಲಪಾತ ಕುರಿತು)
    ಆ ಶರಾವತಿಯು ಸಾಗರವ ಸೇರಲ್ಕೆಂದು
    ನಾಶಗೆಯ್ಯುವ ಕೋಪ ತಾಳಿಹಳು ತಾನ್|
    ಕ್ರೋಶ ದೂರಕೆ ಕೇಳ್ವ ಭೀಷಣ ಸ್ವರದಿಂದ
    ತಾ ಶರಧಿಯೆಡೆಗೋಡಿ ಹೋಗುತಿಹಳು||3||
    ಜೋಗವೆಂಬೂರಲ್ಲಿ ಪಯಧಾರೆಯೆಂಬಂತೆ
    ಬಾಗಿ ಧುಮ್ಮಿಕ್ಕಿಹಳು ಮೇಲಿನಿಂದ|
    ಲೋಗರಿಗೆ ತಾನುಣಿಸಿ ಸೌಂದರ್ಯ ರಸವನಂ
    ಭೋಗದಾ ನಾಕವಂ ತೋರುತಿಹಳೊ||4||

    • “ಭಾಲ ನೇತ್ರನ ಶಿರದ ಮೇಲಿರ್ಪ ಚಂದಿರನು
     ಕಾಲಾಗ್ನಿಯಿಂದ ತಾ ಕರಗುತಿಹನೋ” – ಸೊಗಸಾದ ಕಲ್ಪನೆ ಕೊಪ್ಪಲತೋಟರೇ.

     “ತಾ ಶರಧಿಯೆಡೆಗೋಡಿ ಹೋಗುತಿಹಳು|” – ಎನ್ನುವಲ್ಲಿ “ಸಾಗುತಿಹಳು” ಎಂದು ಬಳಸಿದರೆ ಸಾಲು ಇನ್ನಷ್ಟು ಸೊಗಸಾದೀತು.

     “ರಸವನಂ” ಎಂಬ ಪ್ರಯೋಗ ಸರಿಯೆನ್ನಿಸುತ್ತಿಲ್ಲ. ರಸವಂ ಇರಬೇಕೇ? ಹಾಗಾದರೆ ಛಂದೋಭಂಗವಾಗುತ್ತದೆ.

   • ಧನ್ಯವಾದಗಳು. ಮಾತ್ರೆಗಳ ಎಣಿಕೆ ತಪ್ಪಗಿತ್ತು. ನಿಮ್ಮ ಸಲಹೆಯಂತೆ, ಸರಿಯಾದ ಪದ್ಯ ಇಲ್ಲಿದೆ ::
    ಮೇಲಿಂದ ಧುಮ್ಮಿಕ್ಕುವಳಿದೊ ಬೆಳ್ಗನ್ನೆ ಗಡ
    ತಾಳಿಕೊಂಬಳು ನೋವ ಸುಖನೀಡಲು |
    ಒಂದಾದ ಹನಿಹನಿಯ ಶಕ್ತಿ ತೋರುತ್ತಲವ –
    ಳೊಂದೊಂದೆ ನೀತಿಯನ್ನೊರೆಯುತಿಹಳು ||

 31. ಸಮಸ್ಯೆಗೆ ಇನ್ನೊಂದು ಪರಿಹಾರ:

  ಕಾಸಲ್ಕೆನಲಾ ಸುಂದರಿ
  ಮಾಸಿಹ ಗೂಡೊಲೆಯೊಳಕ್ಕೆ ಮೊಗಮಂ ತರಲು
  ಪೂಸಲ್ ಮಸಿಯುಂ ಕಪ್ಪನೆ
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ

  • ಸೋಮ, ವಿಶೇಷತ: ಊದುಕೊಳವೆಯಲ್ಲಿ ಉಫ್ ಅಂತ ಊದಿ ಬೆಂಕಿಯುರಿಸುವಾಗ ಇದು ಸಾಮಾನ್ಯದನುಭವ. ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರಿ.

  • ಕಲ್ಪನೆ ಸೊಗಸಾಗಿದೆ, ಒಳ್ಳೆಯ ಲೋಕಪರಿಶೀಲನಾನುಭವವಿಲ್ಲಿ ದುಡಿದಿದೆ. ಆದರೆ ಕವಿಯು ತನ್ನ ಇಂಗಿತವನ್ನು ಮತ್ತಷ್ಟು ಸ್ಫುಟವಾಗಿ ವ್ಯಕ್ತಪದಿಸಬಹುದಿತ್ತು. ಪ್ರಾಸಕ್ಕಾಗಿ ಸ್ವಲ್ಪ ತಡಕಾಡಿದಂತಿದೆ, ಇದರಿಂದಾಗಿ ಕೆಲವು ವ್ಯರ್ಥಪದಗಳೂ ಪದ್ಯದಲ್ಲಿ ನುಗ್ಗುವಂತಾಗಿವೆ.
   ಇದು ಕೇವಲ ಸೋಮ ಅವರ ಪದ್ಯಕ್ಕೆ ಸೀಮಿತವಾದ ವಿಮರ್ಶೆಯೆಂದಲ್ಲ, ನಮ್ಮಲ್ಲಿ ಅನೇಕರಿಗಿದು ಅನ್ವಯಿಸುತ್ತದೆ. ದಯಮಾಡಿ ಯಾರೂ ಬೇಸರಗೊಳ್ಳದೆ ಇಂಥ ಮಿತಿಗಳನ್ನು ಮೀರುವತ್ತ ಗಮನ ಹರಿಸಬೇಕು.

   ಗೆಳೆಯ ರವೀಂದ್ರಹೊಳ್ಳರ ಕಲ್ಪನೆಯನ್ನಿಲ್ಲಿ ಕಂದೀಕರಿಸಿದ್ದೇನೆ:-)

   ಶ್ವಾಸಮನೂದಲ್ ಕೊಳವೆಯಿ-
   ನೀ ಸುಂದರಿ ಕಿರ್ಚನುಜ್ಜ್ವಲಿಸಲೆಂದೊಲೆಯೊಳ್|
   ಹಾ! ಸುವಿನೋದಂ!! ಮಸಿಯಿಂ
   ಮೀಸೆಯು ಮೋಹಿನಿಯ ಮೊಗದೆ ಚೆಲ್ವೆನಿಸಿರ್ಕುಂ||

   • ಹಾ, ಸೊಗಸಾದ ಕಂದೀಕರಣ…

   • ಗಣೇಶ್ ಸರ್,
    ನಿಮ್ಮ ಅನಿಸಿಕೆ ಬಹಳ ಸರಿಯಾದದ್ದು ಸರ್:)… ನಿಮ್ಮ ಪದ್ಯದಲ್ಲಿ ಇನ್ನು ಹೆಚ್ಚು ಸ್ಪಷ್ಟತೆ ಇದ್ದು ಅದು ಕಡಿಮೆ ಪದಗಳಲ್ಲಿ ಅತ್ಯುತ್ತಮವಾಗಿ ಬಂದಿದೆ (ಶ್ವಾಸ, ಊದುಕೊಳುವೆ, ಕಿರ್ಚಿನುಜ್ವಲಿಸುವಿಕೆ… ಇವುಗಳಿಂದ ಪದ್ಯದ ಇಂಗಿತವು ಕಣ್ಣಿಗೆ ಚೆನ್ನಾಗಿ ಕಟ್ಟುತ್ತದೆ), ಅದರ ಜೊತೆ ‘ಹಾ ಸುವಿನೋದಂ’ ಎಂಬುದಕ್ಕೂ ಅವಕಾಶ ಕೊಟ್ಟು ರಸಸ್ವಾದವನ್ನು ಇನ್ನು ಹೆಚ್ಚಿಸಿದ್ದೀರಿ. ಅದೇ ವಸ್ತುವಿಗೆ ಉತ್ತಮ ರಚನೆಯನ್ನು ಬರೆದಿರುವುದನ್ನು ಖಂಡಿತ ಗಮನಿಸುತ್ತೇವೆ… ಉತ್ತಮ ಪದ್ಯದ ಉದಾಹರಣೆ ಕೊಟ್ಟದಡಕ್ಕೆ ಧನ್ಯವಾದಗಳು:)… ಇದರ ಸೂಕ್ಷ್ಮಗಳನ್ನು ಅಳವಡಿಸುವಲ್ಲಿ ಪ್ರಯತ್ನ ಮಾಡುತ್ತೇವೆ. ಇದರಲ್ಲಿ ನಮಗಂತೂ ಬೇಸರಿಸುವ ಪ್ರಶ್ನೆಯೇ ಬರುವುದಿಲ್ಲ… ಹೀಗೆಯೇ ದಯವಿಟ್ಟು ಮಾರ್ಗದರ್ಶನ ಮಾಡಬೇಕು:)

    ಹೊಳ್ಳ ಧನ್ಯವಾದಗಳು:)

   • ಗಣೇಶರೆ, ಬಲುಸುಂದರ. ಕೊಳವೆಯನ್ನೂದುವ ಪ್ರಯಾಸವನ್ನೆಲ್ಲಾ ಮರೆಸುವಂತಿದೆ ಈ ಪದ್ಯ.

   • ಒಂದು ಸಂಶಯ. ಕೊಳವೆಯಿಂ ಈ = ಕೊಳವೆಯಿಮೀ ಆಗಬೇಕಲ್ಲವೇ? ಕೊಳವೆಯಿನೀ ಯನ್ನು ಹೇಗೆ ಬಿಡಿಸಬೇಕು?

    • ಕೊಳವೆಯಿನ್+ಈ =ಕೊಳವೆಯಿನೀ
     ಇದು ಸಂಧಿಯ ರೂಪ. ಕೊಳವೆಯಿನ್ ಎಂಬ ಪದದಿಂದಲೇ ಕೊಳವೆಯಿಂದ ಎಂಬ ಅರ್ಥವು ಹಳಗನ್ನಡದಲ್ಲಿ ಹೊಮ್ಮುತ್ತದೆ.

   • ಶ್ವಾಸಮನೂದಲ್ ಕೊಳವೆಯಿ-
    ಮೀ ಸಭ್ಯರು ಕಿರ್ಚನುಜ್ಜ್ವಲಿಸಲೆಮ್ಮೊಳಗಂ|
    ತ್ರಾಸಮಿರದೆಯೇ ಜ್ವಲಿಸೈ
    ಓ ಸನ್ಮತಿ! ಶಾಖಮೇರಲೆಮ್ಮಯ ಕೃತಿಯೊಳ್||

    • ಹೊಳ್ಳ, ಆಹಾ! ಅದ್ಭುತವಾದ ಹೋಲಿಕೆ:)
     ತುಂಬಾ ಚೆನ್ನಾಗಿದೆ ಪದ್ಯ

 32. ಸಮಸ್ಯಾಪರಿಹಾರ:

  ಬೇಸರ ಪೋಗಲು ತಂದೆನು
  ವಾಸಕೆ ಮಾರ್ಜಾಲಪುತ್ರಿಯಂ ಮೋಹಿನಿಯಂ|
  ಭಾಸುರ ಕಂಗಳು, ತೀವಿದ-
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ

  • ಇಲ್ಲಿ ಮೋಹಿನಿ ಎಂದರೆ ಸಾಕುಬೆಕ್ಕು. ಹೆಣ್ಣಾದರೂ ಅದಕ್ಕೆ ಮೀಸೆ ಇದೆಯಲ್ಲಾ 🙂

   • ಪರಿಹಾರದ ಕಲ್ಪನೆ ಸೊಗಸಾಗಿದೆ. ಆದರೆ ಸ್ವಲ್ಪ ಹಳಗನ್ನಡದ ಕಸುವು ಸೇರಬಹುದಿತ್ತು. ಹೀಗೆ:

    ಬೇಸರವಿಳಿಸಲ್ ಮನೆಗು-
    ಲ್ಲಾಸದೆ ಮಾರ್ಜಾರಿ ಮೋಹಿನಿಯನಾಂ ತಂದೆಂ|
    ಹಾ! ಸೀಗುರಿಯೆನೆ ಕಣ್ಗಂ
    ಮೀಸೆಯು ಮೋಹಿನಿಯ ಮೊಗದೆ ಚೆಲ್ವೆನಿಸಿರ್ಕುಂ||

    (ಬೆಕ್ಕಿನ ಕಂಗಳಿಗೆ ಅದರ ಮೀಸೆಯು ಚಾಮರಸೇವೆಯನ್ನು ಸಲ್ಲಿಸುವಂತಿದೆಯೆಂಬುದಿಲ್ಲಿಯ ಕಲ್ಪನೆ)

    • ಗಣೇಶರೆ,
     ಚೆನ್ನಾಗಿ ತಿದ್ದಿದ್ದೀರಿ. ನಾನು ಬರೆದಾಗ, ಮೊದಲೆರಡು ಮತ್ತು ಕೊನೆಯೆರಡು ಸಾಲುಗಳು disconnect ಆದಂತೆ ಅನಿಸುತಿತ್ತು. ನೀವು “ಸೀಗುರಿಯೆನೆ ಕಣ್ಗಂ ಮೀಸೆಯು” ಎಂದು ಮಾಡಿ ಒಳ್ಳೆಯ ಬಂಧವನ್ನು ಕೊಟ್ಟಿದ್ದೀರಿ.

   • ಹೊಳ್ಳ ಚೆನ್ನಾಗಿದೆ ಕಲ್ಪನೆ, ಗಣೇಶರ ಹಳಗನ್ನಡದ ಪದ್ಯವು ಬಹಳ ಚೆನ್ನಾಗಿದೆ

 33. ಆರಾರಡಿಗಳಿಂದೆ
  ಸಾರೋಜ್ಜ್ವಲತೆಯಿಂದೆ
  ಸೂರೆಗೊಂಡಿರಿ ಮಂಜುನಾಥರೆ ನೀಮ್|
  ಓರಂತೆ ಕವಿಗಳ
  ಚಾರುಚಿತ್ತಗಳನ್ನು
  ಧೀರರ್ಗಸಾಧ್ಯಂಗಳೇನಿರ್ಪುವಯ್?

  (ಇದು ತ್ರಿಮೂರ್ತಿಗಣಮೂಲದ ಷಟ್ಪದಿಕೆ. ನಾಗವರ್ಮಾದಿಗಳು ಇದನ್ನೇ ಹೇಳಿದ್ದು. ಇದರ ಮುಂದಿನ ರೂಪಗಳೇ ನಮ್ಮ ಪ್ರಸಿದ್ಧಮಾತ್ರಾಷಟ್ಪದಿಗಳು. ಅರಾರು+ಆರಡಿ= ಅರಾರಡಿ ಎಂದರೆ ಆರು ಷಟ್ಪದಿಗಳೆಂದು ತಾತ್ಪರ್ಯ:-)

  ಮಂಜುನಾಥರೆ, ನಿಮ್ಮ್ ಸಲಹೆ ನನಗೆ ಸೂಕ್ತವೆನಿಸುತ್ತಿದೆ.

 34. ಗೆಳೆಯರೇ, ಮೇಲಿನ spam post ನೋಡಿ (Owen Drekanpus). ಇಂಥವು ಇತ್ತೀಚಿಗೆ ಹೆಚ್ಚಾಗಿವೆ. ಇವು ನಂಬಲರ್ಹವಲ್ಲದ ವೆಬ್ ಸೈಟುಗಳಿಗೆ ಕರೆದೊಯ್ಯುತ್ತದೆ.

  ಈ ಮೊದಲು ಲಾಗಿನ್ ಆಗದೆಯೇ ಪ್ರಕಟಿಸಬೇಕಾದರೆ ಅದು site admin approval ಗೆ ಕಾಯಬೇಕಿತ್ತು. ಈಗ ಬಹುಶಃ ಆ ತಡೆ ಇಲ್ಲ. ಯಾರೇ ಪ್ರಕಟಿಸಿದರೂ ಅದು approval ಇಲ್ಲದೆಯೇ ತಕ್ಷಣ ಪ್ರಕಟಗೊಳ್ಳುವುದರಿಂದ ಮೇಲಿನ ರೀತಿಯ spamಗಳು ಕಣ್ತಪ್ಪಿ ಒಳಬರುತ್ತವೆ. ಆದ್ದರಿಂದ ಲಾಗಿನ್ ಆಗದೆಯೇ ಬರುವ ಪೋಸ್ಟುಗಳನ್ನು ಗಮನಿಸಿ ಪ್ರಕಟಿಸುವುದು ಒಳ್ಳೆಯದು.

  • ಸದ್ಯಕ್ಕೆ, spam post ಗಳನ್ನು, ಒಂದೊಂದಾಗಿ ಗುರುತಿಸಿ ತೆಗೆಯುತ್ತಿದ್ದೇವೆ. ಹೆಚ್ಚಿನ ಸುರಕ್ಷಾ ತಡೆಗಳನ್ನು ಒಡ್ಡಿದರೆ, ಪ್ರತಿಕ್ರಿಯೆಗಳನ್ನು ಕೊಡುತ್ತಿರುವ ನಿಜದ ಗೆಳೆಯರಿಗೆ ತೊಂದರೆಯಾದೀತೆಂದು ಅನಿಸಿಕೆ. ಮಧ್ಯದಲ್ಲಿ admin approval ಇದ್ದರೆ, comment ಗಳು ತೋರ್ಪಡಲು ತಡವಾದೀತು. spam post ಗಳ ಸಂಖ್ಯೆ ಸದ್ಯಕ್ಕೆ ಅಷ್ಟೊಂದು ಹೆಚ್ಚಾಗಿಲ್ಲ. ನಿಭಾಯಿಸಬಹುದು ಎಂದನಿಸುತ್ತದೆ. ತಾಂತ್ರಿಕ ಸೂತ್ರಗಳಿಗು ಹುಡುಕಾಟ ಜಾರಿಯಲ್ಲಿದೆ.
   ಎಚ್ಚರಿಕೆಗಾಗಿ ಧನ್ಯವಾದಗಳು.

 35. ಹೇಮಂತ (ಮತ್ತು ಮುಂದೆ ಬರುವ ಶಿಶಿರ) ಋತುಗಳ ಬಗ್ಗೆ:

  ತರೆದು ನೀ ಪೂಗಳಂ
  ಮರಗಳಾ ಪರ್ಣಮಂ
  ಬರಿಯ ಮೈಯೊಳಗಿಂದು ನಿಲ್ಲಿಸಿರುವೆ|
  ಶರಧಿಯೇ ಭಯದಿಂದ
  ಭರದಿ ಹೆಪ್ಪಿಡಲಾಗಿ
  ಧರೆಯೆ ನಿನ್ನಾಗಮದಿ ಮಂಕಾಗಿದೆ||

  ರಸವಸಂತದಿ ವಿಧಿಯು
  ಹಸನದಿಂ ಕೊಟ್ಟಿರ್ಪ
  ತುಸುಕಡವ ಕಸಿಯಲ್ಕೆ ಬಂದೆಯೇನು?
  ಹಸಿವಿಂದ ಜೀವಿಗಳು
  ಬಸವಳಿದು ಸಾಯುತಿವೆ
  ತುಸುನಡುಕವೂ ನಿನ್ನೊಳಾಗದೇನು?

  ಬೇಗುದಿಗೆ ಜೀವಿಗಳು
  ಸಾಗುವವು ಬಲುದೂರ
  ಜಾಗರಣೆಯೊಂದೆಗತಿಯುಳಿದವರಿಗೆ
  ಎಗ್ಗಿಲ್ಲದಾ ಗತಿಯ
  ಕುಗ್ಗಿಸಿಹೆ ಪುಣ್ಯಕ್ಕೆ
  ಬಗ್ಗಿನಡೆಯುವುದೇಕೊ ಭಾರತದೊಳು?

  ಕೆಚ್ಚು ಹೆಚ್ಚಿತಲಾಗ
  ವೆಚ್ಚವಾಯಿತು ಬುದ್ಧಿ
  ಹೊಚ್ಚಹೊಸ ಮಾರ್ಗಂಗಳುಗಮವಾಯ್ತು
  ನಚ್ಚದುವೆ ಹೆಚ್ಚಾಯ್ತು
  ನಿಚ್ಚಟಂ ಪ್ರಗತಿಯಂ
  ಹಚ್ಚಿದೆವಿಕಾಸದಾ ಕಿಚ್ಚನಂದು

  ಅಹುದು! ಹೀಗಿರಬಹುದು
  ವಿಹಿತಕಾರ್ಪಣ್ಯಗಳ
  ಸಹಿಸಿಮೀರಲಿಯೆಂದೆ ವಿಧಿಯ ಚಿತ್ತ
  ಇಹುದಿಂದು ಬೆಚ್ಚಗಿನ
  ಗೃಹವೆಂದು ಮನುಕುಲದ
  ಗಹನದಾಪಾಡನ್ನು ಮರೆಯಬೇಡ!

 36. ಹೇಮಂತನಾಟ
  ನಡುಕ ಪುಟ್ಟಿಸಿ ಮನುಜ-
  ಗುಡುಸಿ ಬೆಚ್ಚನೆ ಬಟ್ಟೆ-
  ಯಡಗಿಸುವ ಶಾಖವಿಹ ಕೋಣೆಯೊಳಗೆ
  ಗಿಡಗಳುಡುಗೆಯ ಕಸಿದು
  ಮುಡಿಯಿಂದಲಡಿಗು ಗರ-
  ಬಡೆದವೊಲು ಸೊರಗಿಸುವುದಾಟವಿವಗೆ

 37. ಮಂಜುನಾಥರೆ,
  SL No.23ರಲ್ಲಿ ನಿಮ್ಮೊಂದು ಪದ್ಯಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ನಿಮ್ಮ ಪ್ರತಿ-ಪ್ರತಿಕ್ರಿಯೆ ಬರಲಿ. ಶ್ರೀ ಗಣೇಶರೂ, ರಾಮಚಂದ್ರರೂ ಇದನ್ನು ಗಮನಿಸಲಿ.

  • ಹಾ, ೨೩ಕ್ಕೆ ಪ್ರತಿಕ್ರಿಯೆ ಕೊಟ್ಟಿರೇ? ಇದಿಗೋ ನನ್ನ ಪ್ರತಿ-ಪ್ರತಿಕ್ರಿಯೆ:

   “ನಡೆದೆವಾವ್” ಎಂದಿರೇ? ನಡೆದೊಡೇಂ ಕೆಡುಕಿಲ್ಲ
   ಕಡೆಯಷ್ಟೆ ಮುಖ್ಯ, ನಡೆದಾರಿಯಲ್ಲ
   ನಡೆಯದಲೆ ನಿಂತಲ್ಲೆ ನಿಂತು ಬಡಿದಾಡುತಿರೆ
   ಕಡೆಯನೆಂದಿಗೆ ಕಾಣ್ಬಿರೆಂದಳುಕುವೆಂ

   ಆದರೂ ತುಸು ನಿರಾಶೆಯಾಯಿತು, ಏಕೆಂದರೆ ನಾನು ೨೫ಕ್ಕೆ ಪ್ರತಿಕ್ರಿಯೆ ನಿರೀಕ್ಷಿಸಿದ್ದೆ 😉 😉

   • 25ಕ್ಕೂ ಕೊಟ್ಟಿದ್ದೇನೆ ಪ್ರತಿ-ಪದ್ಯ, ನೋಡಿ.

   • ಮಂಜುನಾಥರೆ,
    ನೆಡೆದೆವಾವ್ = ನಡೆದೆವು ಆವು = ನಾನು ಮತ್ತು ರಾಮಚಂದ್ರ; ನಾನು ರಸನಮಾರ್ಗದಲ್ಲಿ, ಅವರು ನಯನಮಾರ್ಗದಲ್ಲಿ. ಆದರೆ, ನೀವು ‘ಕಡೆಯನೆಂದಿಗೆ ಕಾಣ್ಬಿರೆಂದಳುಕುವೆಂ’ ಎಂದುದು ರಾಮರಿಗೂ ಅನ್ವಿತವಾಯಿತಲ್ಲ! ಇಷ್ಟುದಿನ ಅವರ ಪಕ್ಞವಹಿಸಿ ಈಗ ಕೈಬಿಟ್ಟಿರಲ್ಲ ಪಾಪ!

    • ಪಕ್ಷಮೆನಗಿಲ್ಲವೈ ಕಕ್ಷೆಮೀರೆನು ನಾನು
     ಪಕ್ಷಿಯೂ ಅಲ್ಲ ಮೇಣ್ ಪಾತಮಿಲ್ಲ
     ಸಾಕ್ಷಿಮಾತ್ರವೆ ನಾನು ಕೆಳೆಗೆ ಕಲಹಂಗಳಿಗೆ
     ಶಿಕ್ಷಿಸದಿರಿಂ ಪಕ್ಷಪಾತ ಹೊರಿಸಿ! 🙂

     • ಮಂಜುನಾಥರೆ,
      ಹಾಗೆ ಬನ್ನಿ ದಾರಿಗೆ. ಆಗ (ರಾಮಚಂದ್ರರಿಗೆ) ‘ವಕೀಲ’ರಾಗಿದ್ದಿರಿ. ಈಗ ‘ಸಾಕ್ಷಿ’ಮಾತ್ರರೆಂದು ಘೋಷಿಸಿರುವಿರಿ. ಇನ್ನೊಂದು ಹೆಜ್ಜೆ ಇಳಿದುಬಿಡಿ ಸ್ವಾಮಿ, ನಮ್ಮೊಂದಿಗೆ ಅಖಾಡಾಕ್ಕೆ.

      ಇದ್ದಿರಿ ವಕೀಲರಾದಿರಲ ಸಾಕ್ಷಿಯದೀಗ
      ಗೆದ್ದಿರೆಂದಿಳಿಯಿರಿನ್ನೊಂದು ಹೆಜ್ಜೆ|
      ತಿದ್ದುತಲಿರದೆ ಬರಿದೆ ನಮ್ಮನಿನ್ನಿಳಿಯಿರಲ
      ಗದ್ದುಗೆಯ ತಾಟಸ್ಥ್ಯ ತಮಗೆ ತರವೆ||

    • ನಿಮಗೆ ಉತ್ತರ 39ರಲ್ಲಿ

     • 39 ಎಂದು ಹೇಳಿ 38ರಲ್ಲಿ ಕೊಟ್ಟಿರಲ್ಲ!

      ಮೂವತ್ತೆಂಟಕುಮದರಾ ನವಮಕು
      ಮಾವ ವ್ಯತ್ಯಯ ತಿಳಿಯದನ|
      ಬೇವಸ ವಾದವನೆದುರಿಸಿ ಸತತಂ
      ಸಾವರಿಸುತ ಬಸವಳಿದಿರ್ಪೆ||
      🙂

     • ಸ್ಪ್ಯಾಮಂ ಬಡಿಯಲ್ ಬೀಸಿದ
      ರಾಮನ ಕೋಲೆನಗೆರಂಗಿ ಬಡಿವುದೆ ವಿಧಿಯೊಳ್!
      ಹಾ ಮಹದೇವನೆ ಸುಜನ
      ಕ್ಷೇಮವದೆಲ್ಲಿಯದು ಮಾನವೀಪರಿ ಪೋಗಲ್!

      ಮಹನೀಯರೇ, ನಾನು ಬರೆದಾಗ ಅದು ಮೂವತ್ತೊಂಬತ್ತೇ ಆಗಿತ್ತಾದರೂ ರಾಮರು ಒಂದೊ ಸ್ಪ್ಯಾಮಿನ ತಲೆ ಹಾರಿಸಲಾಗಿ ಅದು ಮೂವತ್ತೆಂಟಾಯಿತೆಂದು ತಮಗೆ ಹೇಗೆ ನಂಬಿಸಲಿ

 38. ಸ್ಪ್ಯಾನಿಶ್ ಬುಲ್ ಫೈಟಿನ ತೆರ
  ದೇನಿಷ್ಟು ವಿಧದಿ ಕಣಕ್ಕೆ ಕರೆಯುವಿರೆನ್ನಂ
  ನಾನಲ್ಲೈ ಗೂಳಿಯು ಮ
  ತ್ತೀನಾಟಕದಾ ವಿನೋದ ನೋಡಲ್ ಬಂದೆಂ

  • ಸಲ್ಲದು ತಾಟಸ್ಥ್ಯ ಸರಿಯ
   ದಲ್ಲವಿದಿದಹುದು ವಿನೋದ ಮುಗ್ಧತೆಯೆಂದುಂ!
   ಖುಲ್ಲತನದಲೀ ವೃತ್ತದೆ
   ಸಲ್ಲಿಸಿದಿರೆ ಕಂದ, ಪದ್ಯವೀ ವೈಭವದೊಳ್!!

 39. ಲಹರಿ:

  ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ.

  ಗೆಳೆಯ ಮಂಜುನಾಥ ಅವರು ನೀಡಿದ ಸಲಹೆಗಳಿಗೆ ಧನ್ಯವಾದಗಳು!

  ಹಲ್ಲು ಕಡಿಸುವ ಚಳಿಯ
  ಸೊಲ್ಲನಡಗಿಪ ಕುಳಿರ
  ಕಲ್ಲು ತುಂಬಿದ ಹಾದಿ ಮರೆಸುವಂತೆ;
  ಚೆಲ್ಲಿ ಹರಿದಿವೆ ಬಾನ
  ಲೆಲ್ಲೆಲ್ಲು ತಾರೆಗಳು
  ಮಲ್ಲೆ ಬನದಲಿ ಕೋಟಿ ಹೂಗಳಂತೆ!

  ಬೇಸರವ ಕಳೆಯಲಿಕೆ
  ನೇಸರುದಯದ ಚಂದ
  ಹಸನಾದ ನೋಟಗಳ ಸಾಲೆ ಇರಲು
  ಹಸಿರು ಕಾಣದಿರೇನು?
  ಬಿಸಿಲ ಧಗೆಯಿರಲೇನು?
  ಹೆಸರು ಸಾವಿನಕಣಿವೆ ಸರಿಯಲ್ಲವು!

  -ಹಂಸಾನಂದಿ

  • ಮೇಲೆ ಹಾಕಿದ ಪದ್ಯಗಳಲ್ಲಿ, ಎರಡನೆ ಪದ್ಯ, ಒಂದು ಸ್ವಲ್ಪ ತಿದ್ದುಪಡಿಯೊಂದಿಗೆ:

   ಬೇಸರವ ಕಳೆಯಲಿಕೆ
   ನೇಸರುದಯದ ಚಂದ
   ಹಸನಾದ ನೋಟಗಳ ಸಾಲೆ ಇರಲು
   ಹಸಿರು ಸಿಗದಿರಲೇನು?
   ಬಿಸಿಲ ಧಗೆಯಿರಲೇನು?
   ಹೆಸರು ಸಾವಿನಕಣಿವೆ ಸರಿಯಲ್ಲವು!

   • ಷಂಸಾನಂದಿಯವರೆ.

    ನಿಮ್ಮ ಕುಸುಮಷಟ್ಪದಿಗಳ ಭಾಷೆ-ಭಾವಗಳೆಲ್ಲ ಚೆಲುವಾಗಿವೆಯೆಂದರೆ ಉಪಚಾರದ ಮಾತಲ್ಲ. ಇದೀಗ ತಿದ್ದುಪಡಿ ಮಾಡಿದ ಪದ್ಯದಲ್ಲಿ ಆದಿಪ್ರಾಸದ ನಿಯಮವು ಪಾಲಿತವಾಗಿಲ್ಲವೆಂಬುದೊಂದೇ ಸಾಂಪ್ರದಾಯಿಕರಚನಾದೃಷ್ಟಿಯಿಂದಾದ ಕೊರತೆ. ಮೂರನೆಯ ಸಾಲನ್ನು “ಮಾಸದೊಸಗೆಯ ನೋಟಗಳ ಸಾಲು ಸಲ್ಲಲ್” ಎಂಬಂತೆ ಸವರಿಸಿಕೊಂಡರೆ ಮೂರು-ಮೂರುಸಾಲುಗಳ ಪ್ರಾಸಬದ್ಧತೆಯೊದಗಿ ಅದೊಂದು ಬಗೆಯ ನೈಯತ್ಯವು ಸಲ್ಲುವಂತಾಗುತ್ತದೆ. ಶಾಸ್ತ್ರೀಯ-ಸಾಂಪ್ರದಾಯಿಕ-ಅಭಿಜಾತಕಲೆಗಳ ಒಂದು ಲಕ್ಷಣವೇ ರಾಚನಿಕಸ್ತರದಲ್ಲಿ ಸೌಂದರ್ಯಸ್ಫೋರಕವಾದ ನಿಯತತೆಯನ್ನು ವಾಗರ್ಥಗಳ ನಿಟ್ಟಿನಿಂದ ತರುವುದೇ ಆಗಿದೆಯಷ್ಟೆ:-)

   • ಆರು ದಳವರಳಿರಲ್
    ಸಾರ ಸೌಗಂಧಮಂ
    ಬೀರುತಿಹ ಕುಸುಮ ಷಟ್ಪದಿಯನಿದನು
    ಚಾರು ಹಂಸಾನಂದ
    ಪೂರೈಸಲಿಂದಿಲ್ಲಿ
    ಮೇರೆ ಮೀರಿದುದೆಮಗೆ ಬಲು ಸಂತಸಂ

 40. ಪ್ರಸಾದರಿಗೆ ನಿವೇದನೆ:

  ವಾದದಲ್ಲೂ ಪದ್ಯಮಾಧುರ್ಯ ಸುಳಿದಿರೆ
  ಸ್ವಾದ ಮಿಗಿಲಾದೀತೆನುತ್ತ ಬಗೆದಿದ್ದೆ.
  ಹಾ! ದೋಷಗಳೆ ಸುಳಿಯೆ ರೂಪ-ಸ್ವರೂಪಗಳ
  ಮಾದರಿಯೊಳತ್ಯಂತಖಿನ್ನನಾದೆ!!!

 41. ಲಹರಿ ::
  ಮಂಕುತಿಮ್ಮನ ಕಗ್ಗದ ಕೆಲವು ಮೊದಲ ಪೂರ್ವ ಪಕ್ಷದ ಪದ್ಯಗಳನ್ನು ನಿರಾಶಾವದದ್ದೆಂದು ತಪ್ಪಾಗಿ ತಿಳಿದು, ಬರೆದ ಎರಡು ಪದ್ಯಗಳು. ಕಗ್ಗದಲ್ಲಿರುವ ಮೊದಲ ಪದ್ಯಗಳ ನಿರಾಶಾವಾದ ಕೇವಲ ಒಂದು ಭೂಮಿಕೆ ಮಾತ್ರ ಎಂಬುದೀಗ ಮನವರಿಕೆಯಾಗಿದೆ ::

  ಬಿತ್ತಿರುವುದೀಭೂಮಿಯೊಳು ಬಗೆಬಗೆಯ ಲೀಲೆ
  ಮೃತ್ಯುಕುಣಿತಕ್ಕೆ ನವ ಜನ್ಮಗಳ ತಾಳ |
  ಸುತ್ತು ಲೊಕದೊಳೆನಿತೊ ಶುಭ ಮೇಣಶುಭ ವಾರ್ತೆ
  ನಿತ್ಯವಿದು ಮಾಯೆವೊಲು ಜಾಣಮರಿಯೆ ||

  ಕಂದರೆಲ್ಲರು ಭವ್ಯ ಭೂಮಾತೆ ಮಡಿಲೊಳಗೆ
  ಅಂದಮಂ ವರ್ಧಿಸುತ ಸೌಷ್ಠವವ ಸೆಳೆವರ್ |
  ಚೆಂದದಾ ಸೊಗವೆನಿತೊ ತುಂಬಿರುವುದೀ ಧರಣಿ
  ಸೌಂದರ್ಯ ಸೆಲೆಯಹುದು ಜಾಣಮರಿಯೆ ||

  • ರಾಮ್,

   ನಿಮ್ಮ ಪದ್ಯಗಳು ಚೆನ್ನಾಗಿವೆ:), ನಿಮ್ಮ 2ನೇ ಪದ್ಯದ ಬಗ್ಗೆ ಒಂದು ಸಂದೇಹ ಇದೆ.

   ಮಾಯೆಯಾಟವನು ನರನಾಶಾನಿರಾಶದಾ
   ಛಾಯೆಯೊಳು ಚರ್ಚಿಪುದು ಸರಿಯಿರ್ಪುದೇಂ?
   ಕಾಯುವಳು ಜೀವಿಗಳ ಸುಖದಿ ದುಃಖದೊಳವನು
   ಬೇಯುವೆನೆ ಕಾಡುವಳು ತಾನಲ್ಲವೇಂ?

   • ಸೋಮ,
    ಮಾಯೆಗಿಲ್ಲವುದಾವದಾಶಾನಿರಾಶೆಗಳ –
    ವೀಯವಸ್ಥೆಗಳವಳ ಮಕ್ಕಳಿಗೆ ಮಾತ್ರ |
    ತೇಯುತಿರಲಾ ಜೀವನಗಳನ್ನಮಾಯಕರು
    ಮಾಯೆಯೊಳು ಸೊಬಗಿರ್ಪುದೆಂದೊರೆದೆ ನಾ ||

    • ರಾಮ್,
     ಅರ್ಥವಾಯಿತು, ಮಾಯೆಯೊಳು ಸೊಬಗಿರ್ಪುದು ಎನ್ನುವ ಆಶಾವಾದದಿಂದ ಜೀವನವನ್ನು ನೋಡುವುದು ಒಳಿತು ಎನ್ನುವುದು ಬಹಳ ಚೆನ್ನಾಗಿದೆ:)

 42. “ಮೃತ್ಯುಕುಣಿತಕ್ಕೆ ನವ ಜನ್ಮಗಳ ತಾಳ” – ಸೊಗಸಾದ ಸಾಲು. ಮೊದಲಿಗೆ ಇದು ತಿರುವುಮುರುವಾಗಿದ್ದರೆ (ಜನ್ಮಜಾತಂಗಳಿಗೆ ಮೃತ್ಯುವಿನ ತಾಳ) ಸರಿಯಿತ್ತಲ್ಲವೇ ಎನ್ನಿಸಿತು. ಆದರೆ ನಿಮ್ಮೀ ಪದ್ಯದ ಭೂಮಿಕೆಯೇ ಆಶಾವಾದವೆನ್ನುವ ಹಿನ್ನೆಲೆಯಲ್ಲಿ ಈಗ ಹೀಗಿರುವುದೇ ಅತ್ಯುಚಿತವೆಂದು ತಿಳಿವಾಯಿತು. ಮೆಚ್ಚಿದೆ.

 43. ಗೆಳೆಯರೇ, ಹೊಸವರ್ಷ
  ಬಳಿಸಾರಿ ಬರುತಿರಲು
  ತಳಿರುತೋರಣ ಕಟ್ಟಿ ನಲಿಯೋಣವೇ?
  ಕಳೆಯೋಣ ಪದ್ಯಗಳ
  ಬೆಳಕಲ್ಲಿ ರಾತ್ರಿಯನು
  ಗಳಿತವರ್ಷವ ಬೀಳ್ಗೊಡುವ ನಗುವಿನೊಳ್

 44. ಪ್ರಳಯವರ್ಷವಿದೆನ್ನುತೆ ಪೇಳ್ದಪರ್
  ಕಳೆಯಲಾಗದೆ ಭೀತಿಯ ಭೂತಮಂ|
  ಗಳಿತಲೋಭರಲಾ ಕೆಲರಜ್ಞರ್ ಆ
  ಕಳವಳಂ ಗೆಳೆಯರ್ಗಿರದಾವಗಂ||

  ಅದೇಕೆಂದೊಡೆ,

  ಸನ್ನುತಪದ್ಯಪಾನದಸಮಾನವಿಧಾನದೆ ಸಾನುರಾಗದಿಂ
  ಚೆನ್ನೆನಿಪಂತೆ ಬಾಳ್ವರಿಗದೆಲ್ಲಿಯ ಗುಲ್ಲಿದು ಕಾವ್ಯಮೆಂದೊಡೇಂ?
  ಸೊನ್ನೆಯೊಳಂ ನೆಗಳ್ವ ಪರಿಪೂರ್ಣತೆಯಂ ಪರಿಭಾವಿಪೊಂದು ಸಂ-
  ಪನ್ನತೆಯಲ್ತೆ, ಸಲ್ವ ಬಗೆಯಲ್ತೆ ನಿರಂತರವರ್ತಮಾನದೊಳ್!!

  ಮತ್ತಂ,

  ಸ್ವಧರ್ಮಮೆನಿಪಾತ್ಮಕರ್ಮದ ಮನೋಜ್ಞಯೋಗಂ ಮುಗುಳ್
  ಸುಧಾಸ್ಪದನಿಸರ್ಗದರ್ಶನಮನನ್ಯಸತ್ಸಂಗಮಂ|
  ಮಧೂನ್ಮದರಸಸ್ಫುರದ್ವಿಮಲಸತ್ಕಲಾಸ್ವಾದನಂ
  ವಿಧಾನಕಚತುಷ್ಟಯಂ ಗಡಿವು ನಮ್ಮ ಬಾಳ್ಗೊಪ್ಪುಗುಂ||

  ಸ್ವಧರ್ಮಮೆಂಬ ಕರ್ಮಯೋಗಮುಂ, ಪ್ರಕೃತಿಯೊಳೆಸೆವ ಬಗೆಬಗೆಯ ಸೊಗಂಗಳ ನಿರೀಕ್ಷಣಮುಂ, ಸಜ್ಜನರ್ಕಳೊಡನಾಟಮುಂ, ವಿವಿಧಸುಂದರಕಲೆಗಳೊಳಳ್ತಿಯುಂ ಕಲೆತು ಮತ್ತೀ ನಾಲ್ವಗೆಯ ಚೇತಸ್ಸಂಸ್ಕಾರಂಗಳಿಂದಂ
  ನಮ್ಮೀ ನೇಹಿಗರೊಳ್ ಪ್ರಳಯಮಪ್ಪುದೀ ಪಾಶ್ಚಾತ್ಯಸಂವತ್ಸರದೊಳೆಂದು ಮುಗ್ಧಲೋಕಂ ಬೆಮರ್ತು ಬೆಳ್ಪೇರ್ದ ಕಳವಳದ ಕಾವಳಂ ತಾನೆಂದುಂ ಸಲ್ಲದೆಂದು ಸಕಲರ್ಗೆ ನಲಮಕ್ಕೆನುತ್ತೆ ನೆನೆವೆಂ ನಿರುತಂ||

  (ಇದೊಂದು ಚಂಪೂಪದ್ಧತಿಯ ಕವನಯತ್ನ. ದ್ರುತವಿಲಂಬಿತ, ಉತ್ಪಲಮಾಲೆ ಮತ್ತು ಪೃಥ್ವೀ ಎನ್ನುವ ವೃತ್ತಗಳಲ್ಲಿ ಈ ಪದ್ಯಳನ್ನು ಹೆಣೆದಿದ್ದೇನೆ)

 45. ಗದ್ಯದ ಕಲ್ಲೆಂತೀ ಪರಿ
  ಚೋದ್ಯಂ ತಡರ್ದತ್ತು ಪದ್ಯಪಾನದ ಕೂಳೊಳ್|
  ವದ್ಯಮೆನುತ್ತುಂ ಸಖರೇ!
  ಸದ್ಯಮೆ ಕೀಳ್ಗರೆಯದಿರಿಂ ಇದೊಂದಪವಾದಂ:-)

  • ಮದ್ಯಪಾನಕೆ ಹುರಿದ ಗೋಡಂಬಿ ಜೊತೆಗೂಡಿ
   ಒದ್ದ ಪರಿಯನ್ ಪ್ರಾಜ್ಞರಾಡಿಕೊಂಬರ್
   ಪದ್ಯದೊಳ್ ಕಲ್ಲೆಂದು ಜರಿಯದಿರಿ ಗದ್ಯಮಿದು
   ಪದ್ಯಪಾನದ ಸೊಗವನಿಮ್ಮಡಿಸುಗುಂ

   ಒದ್ದ = ಕಿಕ್ಕು ಕೊಟ್ಟ 🙂

 46. “ತೊಡರ್ದತ್ತು” ಎಂದು ದಯಮಾಡಿ ತಿದ್ದಿಕೊಳ್ಳಿರಿ. ಚಂಪೂಕಾವ್ಯದಲ್ಲಿ ಗದ್ಯವಿರಲೇಬೇಕು. ಹೀಗಾಗಿ ತೀರ ವಿರಳವೈವಿಧ್ಯಕ್ಕೆಂದು ಈ ಪ್ರಯೋಗ ಮಾಡಿದ್ದೇನೆ. ಪದ್ಯಪಾನಿಗಳು ಮನ್ನಿಸಬೇಕಾಗಿ ವಿನಂತಿ.

 47. ಆಸೆಗೆ ಕುಡಿದಳ್ ಪಾಲಂ
  ಬೆಸರಿಸದೆ ಬಾಯಿಗಿಟ್ಟು ಪೀರಲ್ ನೋಡೈ
  ಆ ಸವಿ ಪಾಲಿಂ ಮೂಡಿದ
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ

  • ಮರೆತ ಸಂಚಿಕೆಗಳನು ಮರುಕಳಿಸಿದಂಕಿತಗೆ
   ಮರಮರಳಿ ಸಾಧುವಾದಗಳೀವೆ ನಾಂ |
   ಪರಿಪರಿಯ ರಸಘಟ್ಟಗಳ ಧೂಳನೊರೆಸುತ್ತ
   ಮೆರಗನೀಡಿಪ ಕಂದಗಭಿನಂದನೆ ||

 48. ಕೂಸಿಗೆ ನಾಟಕದಿಚ್ಛೆಯು
  ಬೇಸರದಿ ಪುರುಷನ ಪಾತ್ರ ಮಾಡಿದಳಂದುಂ
  ಮಾಸದ ವೀರನ ನಾಟಕ
  ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)