Jan 162012
 

ಈ ಕೆಳಗಿನ ಚಿತ್ರಕ್ಕೆ ಒಪ್ಪುವಂತಹ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ಬರೆಯಿರಿ ::

ಚಾಪ ಹಸ್ತದ ಬೇಡತಿ

  87 Responses to “ಪದ್ಯ ಸಪ್ತಾಹ – ೩ – ೨೦೧೨ ::‌ ಚಿತ್ರಕ್ಕೆ ವರ್ಣನೆ”

  1. ವಸಂತತಿಲಕ-ಕಂದ-ಸೀಸಚ್ಛಂದಸ್ಸುಗಳ ಈ ಮೂರು ಪದ್ಯಗಳು ಸಹೃದಯರಿಗೆ ತುಸು ಪೆದಸಾದರೂ ರುಚಿಸಿಯಾವೆಂಬ ಎಣಿಕೆಯಲ್ಲಿ ನಿವೇದಿಸುತ್ತಿದ್ದೇನೆ.

    ಆಲೀಢಭಂಗಿ ಮಿಗಿಲಾಗಳಲವೇಲಸುಭ್ರೂ-
    ಲೀಲಾಧನುಷ್ಯಕಿದೊ ಪೂಡುತೆ ತೀಕ್ಷ್ಣವೀಕ್ಷಾ-
    ಕ್ಷ್ವೇಲಾಕ್ತಸಾಯಕಯುಗಂ ಮಿಗೆ ಸವ್ಯಸಾಚಿ-
    ಶ್ರೀಲತ್ವಮಂ ಮೆರೆಯುವೀಕೆಗೆ ಲಕ್ಷ್ಯಮಾರಯ್?

    ಬೇಡದ ವಧುವಲ್ತೆಂದುಂ
    ಬೇಡರ ವಧುವೀಕೆ ಚಾಪಚಾಪಲೆಯಾಗಳ್|
    ಬೇಡದರಾರ್ ಗುರಿಯಾಗಳ್
    ಬೇಡರ ಬಾಣಕ್ಕೆ ಮದನನಯ್ಯನೆ ತುಯ್ದಂ!!
    (ಶ್ರೀಕೃಷ್ಣನು ಬೇಡನೊರ್ವನ ಬಾಣಕ್ಕೆ ತುತ್ತಾದ ಎಳೆ ಇಲ್ಲಿದೆ. ಮುಖ್ಯವಾಗಿ ಯಮಕಾಲಂಕಾರದ ಸೊಗಸಿದರ ಹೃದಯ)

    ನಿನ್ನಾಳಿಯರ್ಗೆ ಮತ್ತಾವ ಮತ್ತಮಯೂರಮಿನ್ನು ಬೇಕೆಂದು ನೀಂ ಬಂದೆಯಿಲ್ಲಿ?
    ನಿನ್ನಯ್ಯನಾವ ಮತ್ತೇಭದಿಂ ಮಡಿಯುತ್ತೆ ಭಿನ್ನಕರ್ತವ್ಯಮಂ ನಿನ್ನೊಳಿತ್ತಂ?
    ನಿನ್ನಾಣ್ಮನಿನ್ನಾವ ಶಾರ್ದೂಲಮಂ ಕಾದು ಖಿನ್ನನಾದಂ ತೊರೆದು ಬಿಯದಗೆಲಸಂ?
    ನಿನ್ನ ಕಂದರ್ ಮತ್ತದಿನ್ನಾವ ಹರಿಣಿಯಿಂ ಗನ್ನಗೊಂಡಟ್ಟಿದರ್ ನಿನ್ನನಿಲ್ಲಿ?
    ಪಂಚತನ್ಮಾತ್ರನಾರಾಚಪಂಚಕಧರೆ ಚಂಚರೀಕಾಳಿಗುಣಗಣ್ಯಚಾಪಹಸ್ತೆ
    ಮಿಂಚೆ ಶೃಂಗಾರವೀರಮಾ ಪಾರ್ವತಿಯವೊಲ್ ಚಂಚದಾನಂದೆ ಯಾರಿವಳ್ ಪಾರ್ವತಿಯೆ ದಲ್!!
    (ಇಲ್ಲಿ ವಿವಿಧಚ್ಛಂದಸ್ಸುಗಳ ಹೆಸರುಗಳನ್ನು ಶ್ಲೇಷಮಾರ್ಗದಲ್ಲಿ ತಂದಿರುವುದು ಗಮನಾರ್ಹ)

  2. ಗಣೇಶರ ಅಮೋಘ ಕವಿತೆಗಳ ನಂತರ, ನನ್ನದೊಂದು ಸಣ್ಣ ಪ್ರಯತ್ನ ::
    ಕೂಡಿಯಾಡುವ ಹೊನ್ನ ಹಿರಣದ
    ಜೋಡಿ ಮೈಥುನ ಸುಖದಿ ಮುಳುಗಿರೆ
    ಕಾಡಿತೇ ನಿನ ಹೆಣ್ಣು ಮನಕಾ ಪ್ರೇಮ ಸಂಗಮವು? |
    ಹೂಡುವೆಯೆ ಮೊನಚಾದ ಬಾಣವ
    ಕೇಡು ಘೋರವದವರ ಪಾಲಿಗೆ
    ಸೇಡು ಮದನನ ಸವತಿ ಪ್ರಣಯಕ್ಕಿಲ್ಲಿ ತೀರಿಪೆಯೆ ? ||

    ನಿನ್ನ ಕೈಯ್ಯಲ್ಲಿಹುದು ಮಿಥುನದ
    ಹೆಣ್ಣು ಗಂಡೊಂದಾದ ಪ್ರಾಣವು
    ಹಣ್ಣನುದುರಿಸಿದಂತೆ ಸೆಳೆಯಲು ನಿನದಹುದು ಮೋಜು |
    ಕಣ್ಣಲೇ ಕೊಲುವಂಥ ತೀಕ್ಷ್ಣತೆ
    ಯಿನ್ನು ನಿನ್ನ ಕಠೋರ ಹೃದಯದಿ
    ಕನ್ನಿಕೆಯೆ ಕಿಂಚಿತ್ತು ಕರುಣವದಿರದೆ ಕಾಮದಲಿ ||

    • I think Ram can polish these verses even more:-)

      • ಕೆಲವು ಶಿಥಿಲ ದ್ವಿತ್ವಗಳನ್ನು ಸರಿಮಾಡಿ, ಇನ್ನೂ ಕೊಂಚ polish ಮಾಡಿದ್ದೇನೆ [ತೋರಿದ ಮಟ್ಟಿಗೆ :-)] ::

        ಕೂಡಿಯಾಡುವ ಹೊನ್ನ ಹಿರಣದ
        ಜೋಡಿ ಮೈಥುನ ಸುಖದಿ ಬೆಸೆದಿರೆ
        ಕಾಡಿತೇ ಸುಕುಮಾರ ಮನವ ಪ್ರೇಮ ಸಂಗಮವು? |
        ಹೂಡುವೆಯೆ ಮೊನಚಾದ ಬಾಣವ
        ಕೇಡು ಘೋರವದವರ ಪಾಲಿಗೆ
        ಸೇಡು ಮದನನ ಸವತಿಯೊಡೆ ಲೋಲುಪಕೆ ತೀರಿಪೆಯೆ ? ||

        ನಿನ್ನ ಕೈಯ್ಯಲ್ಲಿಹುದು ಮಿಥುನದ
        ಹೆಣ್ಣು ಗಂಡೊಂದಾದ ಜೀವವು
        ಹಣ್ಣನುದುರಿಸಿದಂತೆ ಸೆಳೆಯುವ ಮೋಜು ನಿನದಹುದು |
        ಕಣ್ಣ ತೀಕ್ಷ್ಣತೆ ಧೃಡತೆ ಮೇಣ್ಸೆಡೆ
        ಬೆನ್ನು ತೋರಲ್ ಕ್ರೂರ ಮತ್ಸರ
        ಕನ್ನಿಕೆಯೆ ಕಾಮಿಗಳೆಡೆಗೆ ಕಿರು ಕರುಣಕೂ ಬರವೆ ? ||

  3. ೧. ಎಡಬಿಡದೆ ತಾದುಡಿದು ದಣಿದಿದ್ದ ಮನ್ಮಥನು
    ಪಡೆದಿಹನೊ? ತಾನೊ೦ದು ದಿವಸರಜೆಯಾ
    ತಡಮಾಡಲಳವಲ್ಲವೆನುತಯೀ ಸು೦ದರಿಯು
    ಹಿಡಿದುಬಿಲ್ಲನುತಾನೆ ಹೊರಟಳೇನು?

    ೨. ನೋಟದಾ ಬಾಣವನು ಹುಬ್ಬಿಲ್ಲಿನಡಿಹೂಡಿ
    ನೋಟದ೦ಬನು ಹುಬ್ಬುಬಿಲ್ಲಿನಡಿಯಲಿಹೂಡಿ
    ಮೀಟಿಸಲು ಬೀಳದೇ ಬೇಟೆ ಬಲೆಗೇ ?
    ಬೇಟದಾಟದ ಬೊ೦ಬೆ ಬಿಲ್ಲುಬಾಣಗಳೇಕೆ
    ಮಾಟವಿಹ ದೇಹವಿದು ಸಾಲದಾಯ್ತೇ?

    • Really good versification. But hubbillu is a rather questionable usage. it should be hubbubillu. why not make it : nOTadaMbanu hubbubillinaDiyoLu hUDi…..

      • ಸರಿಮಾಡಿದ್ದೇನೆ……ಅನ್ಕೊ೦ಡೆ ಸ್ವಲ್ಪ ಎಡವಟ್ಟಿದೆ ಅ೦ತ…ಆದ್ರೂ poetic instinct ಪರ್ವಾಗಿಲ್ಲ ಅನ್ನುಸ್ಬಿಡ್ತು…..

    • ಶ್ರೀಶ,
      ಮನ್ಮಥನ ಜಾಗದಲಿ ಸುಂದರಿಯು ಬಂದಿರಲು
      ಕಣ್ಮನವು ಪುರಷರದು ಕುಣಿಯದಿರದು |
      ಉನ್ಮತ್ತರೆದುರವಳು ಪೂಶರದ ಬದಲಾಗಿ
      ಜನ್ಮಾಂತಕದ ಬಾಣ ಹೂಡುತಿಹಳೈ ||

  4. ಕೊಪಾಗ್ನಿನಿನ್ನಮುಖದೊಳ್ ಜ್ವಲಿಸೇಂ? ಸುಭಾಸ್ವೀ
    ಚಾಪಂ ಬೆಡಂಗದಿನೆಯಿರ್ದೊಡೆ ಮುಷ್ಟಿಬಂಧಿ
    ಬಾಪೆನ್ನುವೊಲ್ ಕುಳಿತೆರೇಮ್? ತೊಡೆನೆಟ್ಟುದೃಷ್ಟಿ
    ಚೂಪಾದ ಬಾಣತುದಿಯಿರ್ಪುದು ಕೆಳಗದಲ್ತೆ?

    ಈಕೆಗೆ ನಿಜವಾಗಲು ಬೇಟೆಯಾಡುವ ಅಭ್ಯಾಸವಿಲ್ಲ, ಹಾಗೆ ನಟಿಸುತ್ತಿದ್ದಾಳೆ ಎಂಬ ಅರ್ಥ ಕಲ್ಪಿಸಿದ್ದೇನೆ

  5. ಬೆರಳು ತಾಕಿದ ಬಾಣ ನಟ್ಟ ನೋಟದ ತಾಣ
    ಬೆರಗೊ! ಲಕ್ಶ್ಯಕೆ ಸೋತು ಜಾರ್ದ ಸೆರಗೋ
    ಅರೆದೆರೆದೆದೆಯ ಬಲೆಯ ನರತೃಷೆಯ ಮೃಗವಲಯ
    ಹರಿದಿಳಿಯೆ ಮುರಿದೆಸೆವ ಸುಖದ ಪರಿಗೋ

    ಕೊರಳ ಹಾರದ ಗಂಟೆ ಸೂಚಿಸಿರೆ ತನ ಗೆಲುವ
    ಬರದಿಹನೆ ಬೇಟೆಯಿದು ಬೇಟಕವನು
    ಮರೆಯಾಗಿ ಹಿನ್ನೆಲೆಯು ತನ್ನ ಪ್ರಧಾನತೆಯೆ
    ಸ್ಫುರಿಸಿರಲು ಬೇರೆಲ್ಲಿ ಪೋಪ ನವನು

    • ಪರಮಸುಂದರಪದ್ಯರಚನೆ ಪ್ರಸಾದಗುಣ-
      ವರಳಲದು ಚಂದ್ರಮೌಳಿಯ ಕವನವಹುದು!
      ಮೆರದೊಡಂ ಶೃಂಗಾರಮಿದು ಮುನಿಜನಾಳಿಯುಂ
      ನೆರೆ ಸವಿಯುವಂತಿರ್ಪುದೆನಲು ಸಲ್ಗುಂ!!

      • ಎಲ್ಲವೂ ಸೊಗವಲ್ಲ, ನೆಲ್ಲು ಮಲ್ಲಿಗೆಯಲ್ಲ
        ಎಲ್ಲೊ ವೊಂದರಳುವುದು ಒಳ್ಳೆ ಕವನ
        ಬಲ್ಲವರು ಮೆಚ್ಚೆ ಬಲ ನಿಲ್ಲಿಸಲುಮಾಸೊಲ್ಲ
        ಬಲ್ಲೆನೆನ್ನಯ ಮಿತವ, ಕೊಳ್ಳಿ ನಮನ

  6. ಸರಿಪಡಿಸಿದ್ದೇನೆ:
    ಕೊಪಾಗ್ನಿಯಿಂದ ಗುರಿಯೊಳ್ ನೆಡೆ ನೇರ ದೃಷ್ಟಿ
    ಚಾಪಂ ಪ್ರಯೋಗಿಸೆನೆ ಹಸ್ತದ ಬಂಧಮುಷ್ಟಿ
    ಬಾಪೆನ್ನುವೊಲ್ ಸ್ಥಿರದ ಭಂಗಿಯ ತಳ್ದರೇಮ್ ನೀ?
    ಚೂಪಾದ ಬಾಣತುದಿಯಿಂ ನಿನ ಗುಟ್ಟು ರಟ್ಟು

    ಬಲಗೈಯನ್ನು ಹಿಂದೆ ಮಾಡಿ ಚೂಪಾದ ಬಾಣದ ತುದಿಯನ್ನು ಹಿಡಿದರೆ ಬಿಲ್ಲು ಹೊಡೆಯಲು ಬಹಳ ಅನಾನುಕೂಳವಗುತ್ತದೆ (ಚೂಪಾದ ಬಾಣ ಬತ್ತಳಿಕೆಯ ಒಳಗಿರುವುದು ಸರಿಯಾದುದು) ಹಾಗಾಗಿ ಇವಳು ಬೇಡತಿಯೇ ಅಲ್ಲ ಬರಿಯ ವೇಷಧಾರಿ ಎಂಬುದು ನನ್ನ ಇಂಗಿತ

    • ಚೆನ್ನಾಗಿದೆ. ಆದರೆ ನಿನ ಎಂಬ ಪದಪ್ರಯೋಗ ಅಷ್ಟಾಗಿ ಸೊಗಯಿಸದು. ಯಾರೂ ಅದನ್ನು ಬಳಸದಿರಲೆಂದು ನನ್ನ ಬಯಕೆ:-)
      ತಾಳ್ದೊಡಂ ಎಂದು ಸವರಿಸಿದರೆ ಮತ್ತೂ ಒಳಿತು,
      ಕೋಪಾಗ್ನಿಯಿಂದೆ ಎನ್ನುವ ರೂಪ ಮತ್ತೂ ಹದ
      ನೇರನೋಟಂ ಎಂದಾದರೆ ಅರಿಸಮಾಸ ಹೋಗಿ ಚೆಲ್ವುಆದೀತು..ಆದರೆ ಅಂತ್ಯಪ್ರಾಸದ ಸೊಗಸು ಮರೆಯಾದೀತು
      ಆದರೇನು? ಪ್ರಾಸಕ್ಕಿಂತ ಸಾಧುತ್ವ ಮುಖ್ಯ:-)

      • ಗಣೇಶ್ ಸರ್,

        ಸರಿಪಡಿಸಿದ್ದೇನೆ,
        ಕೊಪಾಗ್ನಿಯಿಂದೆ ಗುರಿಯೊಳ್ ನೆಡೆ ನೇರ ನೋಟಂ
        ಚಾಪಂ ಪ್ರಯೋಗಿಸೆನೆ ಹಸ್ತದ ಬಂಧಮುಷ್ಟಿ
        ಬಾಪೆನ್ನುವೊಲ್ ಸ್ಥಿರದ ಭಂಗಿಯ ತಾಳ್ದೊಡಂ ನೀ?
        ಚೂಪಾದ ಬಾಣತುದಿಯಿಂದಲಿ ಗುಟ್ಟು ರಟ್ಟು

  7. ವನದೇವಿ ನೀನು ಬನಕಾಯ್ವೆನೆನ್ನುತಂ
    ವನದೇವಿ ನೀನು ಬನಗಾಯ್ವೆನೆನ್ನುತಂ
    ಧನುಸನ್ನೆ ಮೀಂಟ್ವ ಗತಿಯಾಯ್ತೆ ಕೋಮಲೇ
    ಧನುವಂ ತಳರ್ವ ಗತಿಯಾಯ್ತೆ ಕೋಮಲೇ
    ಧನಕಾಗಿ ಲೋಭಿಸುವ ಮಾನವಾಕ್ರಮಂ
    ಅನುಗಾಲ ನಿಲ್ಲಿಸಲದೆಂತು ಸಾಧ್ಯಮೇ?

    • ಸ್ವಲ್ಪ ಹಳಗನ್ನಡದ ಹದ ಬಂದರೆ ಒಳಿತು. ಮೀಂಟ್ವ ಎನ್ನುವುದು ಅಪಶಬ್ದ.
      ಬನಗಾಯ್ವ, ಧನುವಂ ತಳರ್ವ ಎನ್ನುವ ಸವರಣೆಗಳು ಸರಿಯಾದಾವು.”ಮಂಜುಭಾಷಿಣಿ’ಗಾಗಿ ವಿಶೇಷಧನ್ಯವಾದಗಳು

  8. ಇಂದು ನಿನ್ನೆಯದಲ್ಲ ಕೆಲಸಕ್ಕೆ ಪೋಪಾಗ
    ಬಿಂದಾಸಿನಿಂದಿರ್ಪ ಬಲು ಬಯಕೆಯಯ್|
    ಬಂದಳದೊ ಚಂದದೊಳು ಸಿಂಗರಿಸಿಕೊಂಡಿಹಳು
    ಕಂದು ಬೇಡತಿ ಬದುಕ ಕೈಗೊಂಡಳೈ||
    ಬದುಕು = ದೈನಂದಿನ ಕೆಲಸ

  9. ಚೌಪದಿಯಲ್ಲಿ ನನ್ನ ಪ್ರಯತ್ನ:

    ಭಿಲ್ಲರಾ ಹೆಣ್ಣೀಕೆ ಬಾಣವನು ಹೂಡಲಿಕೆ
    ಬಿಲ್ಲ ಹಿಡಿಯುತ ಹೊಂಚಿಕಾಯ್ವಳೀಕೆ
    ಸಲ್ಲದಿದು! ತನ್ನೆರಡು ಕಣ್ಣಿನಾ ಕೂರಂಬಿ-
    ನಲ್ಲೆ ಕೊಲುವುದನೀಕೆ ಮರೆತಳೇಕೆ?

    • ಆಹಾ, ಕೇವಲ ಛಂದೋವೃತ್ತಗಳಲ್ಲಿ ಮರೆಯಾಗುವ ಕಾವ್ಯವನ್ನು ಆಗಾಗ್ಗೆ ಮಿಂಚಿಸಿ ತೋರಿಸುವಂಥವು ನಿಮ್ಮ ಪದ್ಯಗಳು. ಸೊಗಸಾಗಿದೆ ನಿಮ್ಮ ಕಲ್ಪನೆ.

      ಗಣಗಳಂ ಗಣಿಸುತುಂ ಮಾತ್ರೆಗಳನೆಣಿಸುತುಂ
      ಗುಣಮಾತ್ರಮಾಗಿರಲ್ ಕವಿಯ ಬೋಧೆ
      ಒಣಮಾತ ಬಂಜರಿಗೆ ಜೀವ ಹನಿಸುವ ಕಾವ್ಯ
      ಗುಣ ಸೂಸುತಿದೆ ನಿಮ್ಮ ಪದ್ಯದೊಳಗಂ

    • ಸಾನಂದದಿಂ ಪೇಳು
      ತಾನಂದ ತಂದ ಹಂ
      ಸಾನಂದಿ ಛಂದದಾ ಸೊಂಪಿದೇನೈ|

    • ನಲ್ಲೆ ಕೊಲುವುದನೀಕೆ ಮರೆತಳೇಕೆ?
      ಬದಲು
      ನಲ್ಲೆ ಕೊಲಬಲ್ಲಳೆಂದರಿಯಳೇಕೆ?

    • ಕವಿತೆ ಬಲುಚೆಲುವಾಗಿದೆಯೆಂದರೆ ಅತಿಶಯವಲ್ಲ. ಇಲ್ಲಿಯ ಶಬ್ದಾರ್ಥಗಳ ಸೌಕುಮಾರ್ಯ-ಸೌಕರ್ಯಗಳು ಸುತರಾಂ ಸ್ತವನೀಯ
      ಆದರೆ ಭಿಲ್ಲರಾ, ಕಣ್ಣಿನಾ ಎಂಬಲ್ಲಿ ಅನವಶ್ಯವೂ ಛಂದಸ್ಸಿಗಾಗಿ ಅನಿವಾರ್ಯವೂ ಆದ “ಆ”ಕಾರಗಳನ್ನು ನಿವಾರಿಸಲಾಗಿದ್ದಲ್ಲಿ ಮತ್ತೂ ಒಳಿತಿತ್ತು. ಏಕೆಂದರೆ ಅರ್ಥಕ್ಕೆ ಅಂಥ ಪೋಷಣೆಯಾಗದ ಪದಗಳನ್ನು ಬಿಡುವುದೇ ರಸೋತ್ಕಟಕಾವ್ಯದ ಜಾಡಲ್ಲವೆ!

  10. ಬೇಡತಿಗೊಂದು ಭಾಮಿನಿ 🙂

    ಬೇಡ! ಚೆಲುವೆಯೆ ನಿನ್ನ ಕರದ-
    ಲ್ಲಾಡುತಿಹ ಶರ ಭಯವ ತರುವುದು!
    ಬೇಡತಿಯು ನಾನೆಂದು ಮಿಗಗಳ ಕೊಲ್ಲುವುದು ಸಲ್ಲ;
    ಕಾಡ ತೊರೆದು ಹೊರಡು ಬೇಟೆಗೆ
    ನಾಡ ಹೊಕ್ಕರೆ ಕಣ್ಣ ನೋಟದೆ
    ಹಾಡು ಹಗಲಲೆ ಜನಗಳನ್ನೇ ಕೊಲ್ಲಬಹುದಲ್ಲ!

    • >>ಕಾಡ ತೊರೆದುಹೊ (ರಡು) ಬೇಟೆಗೆ
      One maatre missing…please adjust…

    • ಹಂಸಾನಂದಿಯವರೆ. ನಿಮ್ಮ ಅನುಮತಿ ಇಲ್ಲದೆ ತುಸು ತಿದ್ದಿದ್ದೇನೆ.
      ಬೇಡ! ಚೆಲುವೆಯೆ ನೀನು ಸೆಳೆಯಲು
      ಬೇಡ ಶರವನು ಭಯವ ತರುವುದು!
      ಬೇಡತಿಯು ನೀನಾದೊಡಂ ಸಲ್ಲ ಮಿಗವ ಕೊಲ್ಲುವುದು|
      ಕಾಡ ತೊರೆಯುತೆ ಹೊರಡು ಈಗಲೆ
      ನಾಡ ಕಡೆ ನೀ ಕಣ್ಣ ನೋಟದೆ
      ಹಾಡ ಹಗಲಲೆ ಜನವ ಕೊಲ್ಲಲು ರಕುತ ಪರಿಸದೆಲೆ|

      • ಪ್ರಸಾದ್ ಅವರೆ, ನಿಮ್ಮ ಬದಲಾವಣೆಗಳು ಬಹಳ ಚೆನ್ನಾಗಿವೆ!

      • ಪ್ರಸಾದ್, ಷಟ್ಪದಿಯ ಮೂರನೆಯ ಪಾದದಲ್ಲಿ ಛಂದೊದೋಷಗಳು!!!

        ಭಾಮಿನಿಯನಿಂತನ್ಯರಿಂ ಸಂಗ್ರಾಮಿಯಂದದೆ ಸೆಳೆಯುತುಂ ದುಷ್-
        ಕಾಮಿಯಂದದೆ ಪಾಳ್ಗೆಡವರೇಂ ಛಂದವನೆ ಮೀರಿ?
        ಸ್ವಾಮಿ! ಮುಗಿಯದೆ ಷಟ್ಪದಿಯ ಕಥೆ ಪ್ರೇಮವೇ ಸಪ್ತಮಪದಕ್ಕಂ?
        ತಾಮಸತೆಯೇಂ? ಕಲಿತು ಕಲಿಸಿರಿ ಪದ್ಯಪಾನವನು:-)

        • ಸೆಳೆದೊಡುಂ ಭಾಮಿನಿಯನವರಿಗೇ ಮರಳಿಸಿಹೆ
          ಬೆಳಗಿಸವಳನು ಅಲ್ಲಿ ತುಸುವದಿಲ್ಲಿ|
          ಕಳೆಯೆ ದಿಟ್ಟಿಯ ನಿಟ್ಟೆನಧಿಕ ಮಾತ್ರೆಯನಲ್ಲಿ
          ಬಳುಕು ಚಾಟಿಯಿನೇಟು ತಪ್ಪಲಿಲ್ಲೈ||
          ——————————————–
          3ನೆಯ ಸಾಲು ತಿದ್ದಿದ್ದೇನೆ:
          ಬೇಡ! ಚೆಲುವೆಯೆ ನೀನು ಸೆಳೆಯಲು
          ಬೇಡ ಶರವನು ಭಯವ ತರುವುದು!
          ಬೇಡತಿ ಕೊಳೆಸದೆಲೆ ಬಳಸೆ ನಿನ್ನಿತರ ಶಕುತಿಗಳ|
          ಕಾಡ ತೊರೆಯುತೆ ಹೊರಡು ಈಗಲೆ
          ನಾಡ ಕಡೆ ನೀ ಕಣ್ಣ ನೋಟದೆ
          ಹಾಡ ಹಗಲಲೆ ಜನವ ಕೊಲ್ಲಲು ರಕುತ ಪರಿಸದೆಲೆ|

          • ಬೇಕೆಂದು ಸೆಳೆಯುವುದು ಬೇಡದಿರೆ ಮರಳಿಪುದ
            ದೇಕೆಂದು ಪೇಳಕೇಳುವರಿಲ್ಲವೈ 🙂

          • ಪೇಳಕೇಳದವರಿರದಿರ್ದೊಡಂ ಮರಳಿಸುವ
            ಬಾಳನೇಮವೆನದೆಂದರಿಯದಿಹೆಯ!

          • ಗಣೇಶರೆ,
            ಪೇಳಕೇಳದವರು Vs ಪೇಳಕೇಳುವವರು – ಬಿಸಿಲಿಗೆ ಬಾಡಿ ಬೀಳುವ/ಬೀಳದ ಮುನ್ನ ಹೂವನು ಮುಡಿಬೇಕು ಎಂಬ ಎರಡೂ ಪ್ರಯೋಗಗಳು ಸರಿ ಇದ್ದಂತೆ, ಇವೂ ಸಾಧುವೆ?

          • ಇಲ್ಲ, ಸಾಧುವಾಗದು. ಪ್ರಸಾದರೆ, ನೀವು ಭಾಷೆಯ ಹೊಸಹೊಸ ಸಾಧ್ಯತೆಗಳನ್ನು ಆವಿಷ್ಕರಿಸುವುದು ಸ್ತುತ್ಯ. ಆದರೆ ಇದುವರೆಗೆ ಪರಂಪರೆಯಿಂದ
            ನುಡಿಯೋಜರೆಲ್ಲ ಸಾಧಿಸಿರುವುದನ್ನು ಗಮನಿಸಿ ಆ ಬಳಿಕ ಹೊಸಹಾದಿಗೆ ಹೆಜ್ಜೆ ಹಾಕಿರಿ:-)

          • ಕೇಳುವವರೆನ್ನನಿಲ್ಲದೊಡೆಯುಂ ಮರಳಿಸುವ
            ಬಾಳನೇಮವೆನದೆಂದರಿಯದಿಹೆಯ!

  11. ಧನ್ಯವಾದಗಳು ಶ್ರೀಶ ಅವರೆ – ತಿದ್ದಿದ್ದೇನೆ ಈಗ:

    ಬೇಡ! ಚೆಲುವೆಯೆ ನಿನ್ನ ಕರದ-
    ಲ್ಲಾಡುತಿಹ ಶರ ಭಯವ ತರುವುದು!
    ಬೇಡತಿಯು ನಾನೆಂದು ಮಿಗಗಳ ಕೊಲ್ಲುವುದು ಸಲ್ಲ;
    ಕಾಡ ತೊರೆಯುತ ಹೊರಡು ಬೇಟೆಗೆ
    ನಾಡ ಹೊಕ್ಕರೆ ಕಣ್ಣ ನೋಟದೆ
    ಹಾಡು ಹಗಲಲೆ ಜನಗಳನ್ನೇ ಕೊಲ್ಲಬಹುದಲ್ಲ!

    • ಹಾಡುಹಗಲೊಳೆ ಎಂದು ಸವರಿಸಿದರೆ ಪದ್ಯಕ್ಕೆ ನಡುಗನ್ನಡದ ಹದ ಉಳಿಯುತ್ತದೆಂದು ನನ್ನ ಇರಾದೆ:-)

  12. ಕೊಲ್ಲಬೇಕೆಂದಲ್ಲವೀ ಕಾಮಿನಿಯ ಬಯಕೆ
    ಯಲ್ಲೆ ಕೆಡವಲ್ಕವನನಣಿಗೊಂಬಳು |
    ನಿಲ್ಲದಲೆಯೋಡುವನ ಕಾಮದಿಂಬಳಲಿದನ
    ತಲ್ಲಣಿಸಿ ತಡೆಯಲ್ಕದೀ ಚಾಪವು ||

  13. ಚಾಪ ಹಸ್ತದ ಬೇಡತಿಯ ಬಗ್ಗೆ ನನ್ನ ಅನಿಸಿಕೆ:

    ಪದ್ಯರಸ ತಾಣದಲಿವಿಳದೇನವಾಂತರವು
    ಮದ್ಯದೊರೆ ವಿಜಯಮಲ್ಯನ ಪಟದ ಸುಂದರಿಯು
    ಉದ್ಯೋಗಕೆ ಬೇಕೀಮಾದಕನೋಟಮೈಮಾಟ
    ಹೃದ್ಯಮೆನೆಯಚ್ಚರಿಯು ರಸಿಕರ್ಗೀ ಪರಿಯಾಟ

    ಈ ಚಿತ್ರ ನೋಡಿದ ತಕ್ಷಣ ನನಗೆ ವಿಜಯ ಮಲ್ಯ ಹಾಗೂ ಅವನ ಕ್ಯಾಲೆಂಡರ್ ರೂಪದರ್ಶಿಗಳ ನೆನಪು ಬಂತು.
    ಉದ್ಯೋಗ, ಹೃದ್ಯ – ಸರಿಯಾಗಿದೆಯೇ?
    ಹಾಗೆಯೇ ಛಂದಸ್ಸು.
    ಭಾವಾರ್ಥ : ಇಂತಹ ಚಿತ್ರಗಳೂ ಇಷ್ಟವಾದರೆ ಆಶ್ಚರ್ಯದ ಸಂಗತಿಯೇ !!!!
    (compare with http://millzero.com/blog/?p=361 )

    • ಗಾಯತ್ರಿಯವರ ಪದ್ಯಕ್ಕೆ ಸ್ವಾಗತ..

      ಚಿತ್ರಕ್ಕೆ ನವೀನಭಾವವನ್ನು ತಂದಿದ್ದೀರಿ. ಉದ್ಯೋಗ/ಹೃದ್ಯ ಅರ್ಥವತ್ತಾದ ಸರಿಯಾದ ಪ್ರಾಸಗಳೇ. ಛಂದಸ್ಸಿನ ತೊಡಕನ್ನು ನೀವೇ ಸರಿಪಡಿಸಬಲ್ಲಿರಿ. ಪಂಚಮಾತ್ರಾಲಯದ ಖಂಡಗತಿ ಮನಸ್ಸಿನಲ್ಲಿ ಗುನುಗಿದರೆಸಾಕು.

      ಮದ್ಯದೊರೆ – ಅರಿಸಮಾಸ..ಮದ್ಯದ ದೊರೆ/ ಮದ್ಯರಾಜ ಆಗಬಹುದು. ಮದ್ಯಾಧಿಪಂ ವಿಜಯ ಪಂಚಾಂಗ ಸುಂದರಿಯು /ಮದ್ಯಾಧಿಪಂ ಮಲ್ಯನಾಯ್ಖೆಯೇಂ ಪಟಗಳಿಗೆ..
      ಉದ್ಯೋಗ ಕೆ ಬೇಕೀಮಾದಕನೋಟಮೈಮಾಟ.. ಇಲ್ಲಿ ಪಂಚಮಾತ್ರಾಗಣಗಳಯೋಜನೆ ಮಾಡಬೇಕಿದೆ. ಉದ್ಯೋಗ ಪಡೆಯೆ ಮಾದಕನೋಟ ಮೈಮಾಟ ನಾಲ್ಕನೆಯಸಾಲು: ಹೃದ್ಯಮೆನಲಚ್ಚರಿಯು ರಸಿಕಗೀಪರಿಯಾಟ…ರಸಿಕರ್ಗೆ ಪರದಾಟ…

      / ಹೃದ್ಯವೇಂ ವಿಸ್ಮಯವು ರಸಿಕರ್ಗೆ ಪರೆದಾಟ

    • ಕಾಡಿನುಡುಪನು ತೊಟ್ಟ ಬೇಡತಿಯದಾಪರಿಯ
      ಜೋಡಿವಸ್ತ್ರದ ಸಮದ ನಗ್ನತೆಯದೇಂ ?
      ಕೂಡಿ ಹರಿಸಿರೆ ರಸದ ಭಾವಗಳನೀ ಪರಿಯ
      ನೀಡುವೆನು ನಮನಂಗಳೀ ಚಿತ್ರಕೆ ||

      • ರಾಮ್, ಆ ಜೋಡಿವಸ್ತ್ರಗಳು ಕೂಡಿವೆಯೆ? ಹಿಂದೊಂದು ಕಾಲದಲ್ಲಿ ತುಸು overlap ಆಗಿರುತ್ತಿದ್ದ ಅವು, ಈಗ ದೂರದೂರ ಸರಿಯುತ್ತಿವೆ:
        ಕೂಡಿಲ್ಲವವು ದೂರ ಸರಿಯುತ್ತಲೇ ಇಹವು
        ಚೂಡಿದಾರಿನೊಲಿರ್ದು ಪಿಂತೆ ಛದ್ದ|
        ಬೇಡುತಿವೆ ಬೇಡತಿಯ ಸೇರಿಸೆಮ್ಮನೆನುತ್ತೆ
        ಜೋಡಿಯಾಗದನಿತಾವ್ ಸರಿವ ಮುನ್ನ|

        • ನಾಡಿನಿಬ್ಬಗೆ ಮೌಲ್ಯಗಳನಾರೊಪಿಸಲೇಕೆ
          ಕಾಡ ಬೇಡರಿರಲವರಿಷ್ಟದಂತೆ |
          ಬೇಡತಿಯ ವಸ್ತ್ರಗಳವೆಂತಿದ್ದರೇನಾಯ್ತು
          ಕಾಡುವುದೆ ನಿಮಗವುಗಳಂತರಗಳು ? ||
          🙂

          • ಹೌದು. ನೀವು ಹೇಳಿರುವುದು ಸರಿ. ಪ್ರಮಾಣ-ಪ್ರಮೇಯ ದೋಷ ಇದೆ ಇಲ್ಲಿ.

          • Nevertheless,
            ನಾಡಿನಿಬ್ಬಗೆ ಮೌಲ್ಯಗಳವಲ್ಲವೈ ದೊರೆಯೆ
            ನಾಡಿನಿಬ್ಭಾಗ ಮೌಲ್ಯಗಳವುಗಳೈ|
            ಕಾಡಿರುವುದಂತರಕಿನದರ ಪ್ರಮಾಣವೈ
            ಕಾಡಿಲ್ಲ ವೆನ್ನನಾ ವಸ್ತ್ರಗಳನೈ|| (ಅಂತರವು ಕಾಡಿರುವುದು ನನ್ನನ್ನಲ್ಲ, ಆ ವಸ್ತ್ರಗಳನ್ನು)

    • ಗಾಯತ್ರಿಯವರಲ್ಲಿ, ಲಘುಭಾವದಿಂದ 🙂 (In a lighter note)

      ಸೂತ್ರವದೇನ್ ಪಟಮೇ? ಗಾ-
      ಯತ್ರಿಯೊಳವಿತಿರ್ದಕಾವ್ಯನೇತ್ರಂ ತೆರೆದೀ
      ಯಾತ್ರೆಯೊಳಿನ್ನೋರ್ವಂ ಕವ-
      ಯತ್ರಿಯ ಸಹಚರ್ಯಮಂ ಕೊಡಿಸಿದೀ ಪರಿಗುಂ
      (ಸೂತ್ರ = formula )

      ’ತಾಣದಲಿವಿಳದೇನವಾಂತರವು’ – ಅರ್ಥವಾಗಲಿಲ್ಲ.

      ಗಣೇಶರೆ, ನೀವು ಹೇಳಿದಂತೆ ಹಿಂದಿನ ಪದ್ಯಗಳನ್ನು ಬದಲಿಸಿದ್ದೇನೆ.

      • ravIndra,
        ಈ ‘ಪದ್ಯಪಾನ’ ಎಂಬ ರಸ ತಾಣದಲ್ಲಿ, ಈ ಬೇಡತಿಯದೇನು ಅವಾಂತರ? ಇಷ್ಟೊಂದು ಪರಿಯಲ್ಲಿ ಎಲ್ಲರೂ ಅವಳನ್ನು ಎಳೆದಾಡುತ್ತಿರುವರಲ್ಲ ಎಂದು

  14. ಏಕಾಂಗಿ, ನೀಚೆಲುವೆ ಪೋಪೆಯೆ ಕಾಡಿನೊಳ್ಗಂ ?
    ಸಿಕ್ಕಾಗ ಪೀಡಿಪರು ರಾವಣರೂಪರೆಂದುಂ,
    ಬಿಂಕಾಂಗಿ ನೀ‌ಪಿಡಿದೆ ಕೋಮಲಹಸ್ತದೊಳ್ಗಂ
    ತಕ್ಕಾದ ಚಾಪವನು ರಕ್ಷಣೆಗೆಂದೆ, ಸುಳ್ಳೇಂ ?

    ಛಂದಸ್ಸು :: ವಸಂತ ತಿಲಕ

    • I am very very happy that smt. Kanchana has presented a beautiful verse to us in a rather difficult metre like vasantatilaka…Hence I wholeheartedly congratulate her. Just a small correction; biMka+aMgi cannot be joined as per the rules of savarnadeergha saMdhi as the two words are Kannada and Sanskrit respectively. Therefore may i suggest a small change? biMkakke….

      • ತಿದ್ದಿರುವ ಪದ್ಯ ::
        ಏಕಾಂಗಿ, ನೀಚೆಲುವೆ ಪೋಪೆಯೆ ಕಾಡಿನೊಳ್ಗಂ ?
        ಸಿಕ್ಕಾಗ ಪೀಡಿಪರು ರಾವಣರೂಪರೆಂದುಂ,
        ಬಿಂಕಕ್ಕೆ ನೀ‌ಪಿಡಿದೆ ಕೋಮಲಹಸ್ತದೊಳ್ಗಂ
        ತಕ್ಕಾದ ಚಾಪವನು ರಕ್ಷಣೆಗೆಂದೆ, ಸುಳ್ಳೇಂ ?

        ಗಣೇಶರೆ, ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದಗಳು.

    • ಸ್ಸುಳ್ಳ್ಳು 🙂

  15. ರವೀಂದ್ರ, ೧) ಈ ಚಿತ್ರಕ್ಕೆ ನನ್ನ ಮೊದಲಿನ ಪದ್ಯ ಶ್ರೀಶ ಕಾರಂತನ ಪದ್ಯದ ಹಾಗಿತ್ತು(ಮಾಟ, ನೋಟ, ಬೇಟ ಇತ್ಯಾದಿ).
    The trigger for the one posted here was Soma’s composition.

    ೨) ಪ್ರಸಾದ್ ಹೇಳಿದ್ದು ಒಂದು ರೀತಿ ಸರಿಯಾಗಿದೆ. ನನ್ನ ಭಾವನೆಯಿದ್ದದ್ದು ಹೀಗೆ: ಪದ್ಯ ರಸ ತಾಣದಲ್ಲಿ , ಬೇಡತಿ ವೇಷದ ರೂಪದರ್ಶಿ (an extension of Soma’s observation) ಏನು ಗಲಾಟೆ ಮಾಡುತ್ತಿದ್ದಾಳೆ?

    ಚಂದ್ರಮೌಳಿಯವರೆ, ಸಲಹೆ, ತಿದ್ದುಪಡಿಗಳಿಗೆ ಧನ್ಯವಾದಗಳು.

    ಎರಡನೆ ಸಾಲು: ಮದ್ಯಪತಿ, ಮದ್ಯಗುರು – ಆಗುತ್ತದೆಯೇ? ಮದ್ಯದೊರೆಗೆ ಹೆಚ್ಚು ಪಂಚ್ ಇದೆಯಲ್ಲವೇ?

    ಮೂರನೆಯ ಸಾಲು: ಉದ್ಯಮಕೆ ಸರಿಯು(ಸಾಕು) ಮಾದಕ ನೋಟ, ಮೈಮಾಟ
    ಉದ್ಯೋಗಕೆ – ನನಗೆ ಇದೇ ಇಷ್ಟವಾದದ್ದು(ಉದರನಿಮಿತ್ತಂ ಇತ್ಯಾದಿ)

    • ಗಾಯತ್ರಿಯವರೆ,
      ’ತಾಣದಲಿವಿಳದೇನವಾಂತರವು’ ಅರ್ಥವಾಗಿರಲಿಲ್ಲ. ’ತಾಣದಲಿವಳದೇನವಾಂತರವು’ – ಅಂದ ಮೇಲೆ ಗೊತ್ತಾಯ್ತು.

  16. ತುಸು ತಡವಾದ ಎಂಟ್ರಿ…

    ಏನೀ ಕಬ್ಬಿನ ಜಲ್ಲೆಗಂ ತರುಣಿ ಮೈಮಾಟಕ್ಕಮೇಂ ಪೋಟಿಯೈ!
    ಬಾಣಂ ಕೊಲ್ವುದೊ ಮೇಣು ಕಂಗಳಸಿಯೋ ಪೀನಾಂಗ ಲಾವಣ್ಯಮೋ?
    ಕಾಣಲ್ ಮೈಯದು ಮಿಂಚ ಬಳ್ಳಿಯೆನೆ ಕಣ್ಮಿಂಚಿಂಗೆ ಪೊಯ್ಗೈಯೆನಲ್
    ಮೇಣಾ ಕಾಮನ ಚಾಪಕೇಂ ಸೊಗಸೆ ಕೂರ್ಬಾಣಂ? ಬಿಡೌ ಪೂಸರಲ್! 🙂

    • manjunathare,
      ಕೊಲ್ವುದು ಬಾಣಮೊ, ಕಂಗಳಸಿಯೋ, ಪೀನಾಂಗ ಲಾವಣ್ಯಮೋ!!! ವಾಹ್! ಮಿಥಿಲಾ ನಗರದಿ ಮುರಿದುದು ಧನುವೋ, ಜನಕನ ಮಮತೆಯ ಕುಡಿಯೋ, ಸೀತೆಯ ಕನ್ಯಾ ಸಂಕಲೆಯೋ, ದನುಜರ ಕನಸಿನ ಸುಖಗೋಪುರವೋ – ಜ್ಞಾಪಕಕ್ಕೆ ಬಂತು.

      ಆದರೆ ’ಏನೀ ಕಬ್ಬಿನ ಜಲ್ಲೆಗಂ ತರುಣಿ ಮೈಮಾಟಕ್ಕಮೇಂ ಪೋಟಿಯೈ!’
      ಕಬ್ಬಿನ ಜಲ್ಲೆಯು ಒಂದೇ ಮಟ್ಟಸ
      ಒಪ್ಪವೆ ಎಂಟರ ಮಾಟಳಿಗೆ?

      • ಪ್ರಸಾದರೇ, ಧನ್ಯವಾದ… ಅದನ್ನೇ ನಾನು ಹೇಳಿದ್ದು, ಮಟ್ಟಸವಾದ ಕಬ್ಬಿನ ಜಲ್ಲೆ ಬರೀ ತಾನು ಡೊಂಕಾಗಿ ಬಾಗಿದ್ದೇನೆಂಬ ಒಂದೇ ಕಾರಣಕ್ಕೆ ಈ ಸುಂದರಿಯ ಮೈಮಾಟದೊಡನೆ ಪೋಟಿ ಮಾಡುತ್ತಿದೆಯಲ್ಲಾ, ಅದರ ಬುದ್ಧಿಗೇನು ಹೇಳೋಣ ಹೇಳಿ 🙂

      • ಪ್ರಸಾದರೇ, ತಮಗೆ ಈಮೈಲಿನಲ್ಲಿ ಬರೆದ ಉತ್ತರವನ್ನೇ ಇಲ್ಲೂ ಹಾಕುತ್ತಿದ್ದೇನೆ. ಕಬ್ಬಿನ ಜಲ್ಲೆಯ ರಸನಮಾನವು ಅಲ್ಲಿ ಬಹಳ ಬಹಳ ಕ್ವಚಿತ್ತಾಗಿ, ಸೂಚ್ಯವಾಗಿ ಬಂದು ಹೋಗುತ್ತದೆ. ತರುಣಿಯ ಚಿತ್ರವನ್ನು ನೋಡುತ್ತಾ “ಏನೀ ಕಬ್ಬಿನ ಜಲ್ಲೆ” ಎಂದು ಓದುತ್ತಿರುವಂತೆಯೇ ತರುಣಿಗೆ ರಸತುಂಬಿದ ಕಬ್ಬಿನ ಹೋಲಿಕೆ ಮನದಲ್ಲಿ ಬಂದು ಹೋಗಿಬಿಡುತ್ತದೆ, ಆದರೆ “ಏನೀ ಕಬ್ಬಿನ ಜಲ್ಲೆಗಂ ತರುಣಿ ಮೈಮಾಟಕ್ಕಮೇಂ ಪೋಟಿಯೈ” ಎಂದು ಮುಗಿಸುವಾಗ ಅಲ್ಲಿ ನಯನಮಾನವು ವಾಚ್ಯವಾಗಿ ಬಂದು ಪದ್ಯ ಮುಂದಿವರೆಯುತ್ತದೆ. ಆದರೆ ಈಗಾಗಲೇ ಅಕಸ್ಮಾತ್ತಾಗಿ ಬಂದು ಹೋದ ಕಬ್ಬಿನ ರುಚಿ ನಾಲಿಗೆಯ ಮೇಲೆ ಉಳಿದು, ಇಡೀ ಪದ್ಯಕ್ಕೆ ರಸವೀಯುತ್ತದೆ ಎಂಬುದು ಆ ಸಾಲನ್ನು ರಚಿಸಿ ಮುಗಿಸಿದ ಮೇಲೆ ನನ್ನ ಮನದಲ್ಲಿ ಮೂಡಿದ ಭಾವ.

        ನಿಜದಲ್ಲಿ, ಚಿತ್ರವನ್ನು ನೋಡಿದಾಗ ನನ್ನ ಮನದಲ್ಲಿ ಮೂಡಿದ್ದು ಈ ರಸನಮಾನವೇ. ಅದಕ್ಕೆಂದೇ “ಏನೀ ಕಬ್ಬಿನ ಜಲ್ಲೆಗಂ” ಎಂದು ಶುರು ಮಾಡಿದೆ, ಆದರೆ ಲಹರಿ “ತರುಣಿ ಮೈಮಾಟಕ್ಕಂ” ಎಂದು ನನ್ನನ್ನು ಕೊಂಡೊಯ್ದಿತು. ಅದೂ ಸೊಗಸಾಗಿ ಕಂಡದ್ದರಿಂದ ಅದೇ ದಾರಿಯಲ್ಲಿ ಮುಂದುವರಿದೆ.

    • ಮತ್ತೊಂದು ಪ್ರಯತ್ನ…

      ಏನೀ ಮಾಯಾವಿಲಸ ಲಸದಾಕಾರಮೇನೀ ಮನಂಗೊ
      ಳ್ವೀನೀಳ್ ನಿಮ್ನೋನ್ನತಬಹುಲಮೇನೀ ಕರಂಗೊಂಡ ಬಿಲ್ಲೇ
      ನೇನೀ ಕೈಯೊಳ್ವಿಡಿದ ಶರಮೇನ್ ಕಣ್ಣ ಕೂರ್ಮಿಂಚ ಸಂಚೇನ್
      ಕಾಣೆನ್ ಕಾಡೊಳ್ ಮದನಸಖಿಯಂ ಕಂಡು ಕಂಗೆಟ್ಟುವೋದೆಂ

      ನಾನಲ್ಲ, ಕಾಡಲ್ಲಿ ಬೇಟೆಗೆಂದು ಬಂದ ರಾಜನೊಬ್ಬ ಈ ವನಸುಂದರಿಯನ್ನು ನೋಡಿ ಹೀಗನ್ನಬಹುದೇ? 🙂

  17. ಹೀಗೆರಡು ಪ್ರಯತ್ನ ಭಾಮಿನಿಯಲ್ಲಿ (ಒಂದೂವರೆ ಅಂದರೆ ಸರಿಯೇನೋ!). ಇಲ್ಲಿ ಎಲ್ಲರೂ ಈ ಬೇಡತಿಯ ಬೆಡಗನ್ನು ಹೊಗಳುವುದು ಅವಳ ಕಿವಿಗೆ ಬಿದ್ದು, ಅದನ್ನೆಲ್ಲ ಮೆಚ್ಚುತ್ತಲೇ, ಗುರಿ ಹೊಡೆಯುತ್ತಿರುವಾಗ ತನ್ನ ಗಮನವನ್ನು ಬೇರೆ ಕಡೆ ಸೆಳೆಯಬೇಡಿ ಎಂದು ಅವಳು ಹೇಳಬಹುದೇನೋ ಎನ್ನುವ ಭಾವ :-). ಏನಾದರೂ ತಪ್ಪಿದ್ದರೆ ದಯವಿಟ್ಟು ತಿಳಿಸಿರಿ. ಬಹು ಧನ್ಯವಾದಗಳು

    ಭಿಲ್ಲ ಹೆಣ್ಣಿನ ಬೆಡಗ ಬಣ್ಣನೆ
    ಯಲ್ಲಿ ತಲ್ಲೀನ ಕವಿಗಳಿರಾ
    ಸೊಲ್ಲನಿನಿತೂ ಮಾಡದಿರಿ ಗುರಿ ತಪ್ಪಿ ಹೋದೀತು
    ಕೊಲ್ಲಲಾರೆನು ಕಣ್ಣಲೆ ಮಿಗವ
    ಬಿಲ್ಲಿನಲಿ ಬಾಣ ಹೂಡುತಿಹೆನು
    ಬಲ್ಲಿದರೆನ್ನ ಚಿತ್ತವನು ಈಗ ಸೆಳೆವುದು ಸಲ್ಲ

    ಭಿಲ್ಲ ಹೆಣ್ಣಿನ ಬೆಡಗ ಬಣ್ಣನೆ
    ಯಲ್ಲಿ ತಲ್ಲೀನ ಕವಿಗಳಿರಾ
    ಸೊಲ್ಲನಿನಿತೂ ಮಾಡದಿರಿ ಗುರಿ ತಪ್ಪಿ ಹೋದೀತು
    ಬಿಲ್ಲು ಚಿಮ್ಮಿದ ಬಾಣ ನಿಮ್ಮನೆ
    ಕೊಲ್ಲ ಬಂದೀತು ನಾ ಕಣ್ಣಲೆ
    ಗೆಲ್ಲುವೆದೆಯಂಬಿಂದ ಸೀಳುವುದ ತಾಳಲಾರೆನು

    • ಅನಿಲರಿಗೆ ಸ್ವಾಗತ…

      ಭಿಲ್ಲತಿಯ ಬಾಣ ಈಗಾಗಲೇ ಚೆನ್ನಾಗಿ ಕೆಲಸಮಾಡಿದ್ದು, ನಿಮ್ಮಿಂದ ಪದ್ಯಪ್ರಯತ್ನವಾಗಿರುವುದೂ ಅದನ್ನು ಸೂಚಿಸುತ್ತದೆ !!
      ’ತಲ್ಲೀನ’ ’ನಾ ಕಣ್ಣಲೆ’ ’ಸೀಳುವುದ ತಾಳಳಾರೆನು’.. ಇಲ್ಲೆಲ್ಲಾ ಛಂದೋದೋಷಗಳುಂಟು. ಅಡ್ಡಿಯಿಲ್ಲ. ನಮ್ಮಲ್ಲಿನ ಬಹುಮಂದಿ ಈ ಹಂತಗಳನ್ನು ದಾಟಿಬಂದವರೇ. ಸ್ವಲ್ಪ ಹೆಚ್ಚಿನ ಆಸಕ್ತಿ, ಅಧ್ಯಯನ, ಅಭ್ಯಾಸಗಳು ನಿಮಗೆ ಸಹಾಕಾರಿಯಾಗಬಲ್ಲವು….. ವಂದನೆಗಳು

      • ಅನಿಲರೆ – ಪದ್ಯಪಾನಕ್ಕೆ ಸ್ವಾಗತ. ಎಚ್ಚರದಪ್ಪಿಸಿದರೆ ಗುರಿ ತಪ್ಪಿ ಓದುಗರನ್ನೇ ಹೊಡೆಯುವ ನಿಮ್ಮ ಕಲ್ಪನೆ ಬಹಳ ಚೆನ್ನಾಗಿದೆ.
        ಛಂದಸ್ಸಿನ ವಿಚಾರದಲ್ಲಿ ಮೌಳಿಯವರು ಹೇಳಿದ್ದನ್ನೇ ಕೊಂಚ ವಿಸ್ತರಿಸಿದ್ದೇನೆ.
        ಮಾತ್ರಾ ಲೆಕ್ಕವು ಸರಿಯಿದ್ದರೂ, ಒಮ್ಮೊಮ್ಮೆ ಧಾಟಿಯಲ್ಲಿ ಓದುವುದಕ್ಕೆ ತೊಡಕಾಗುತ್ತದೆ. ಲಗಂ ಬಂದರೆ ಅಥವಾ ಕೆಲವೆಡೆ ಅನೇಕ ಲಘುಗಳು ಒಟ್ಟಿಗೆ ಬಂದರೆ ಹೀಗಾಗುತ್ತದೆ. ನಿಮ್ಮ ಪದ್ಯಗಳಲ್ಲಿ ಲಗಂ ಗಳು ಇಂತಿವೆ (ಒಂದು ವಿಸಂಧಿ ದೋಷವನ್ನು ತೋರಿದ್ದೇನೆ – ಸಂಧಿಯಾಗುವಲ್ಲಿ ಮಾಡದಿರುವ ದೋಷ) ::
        ಬಿಲ್ಲಿ ‌+ ನಲಿ ಬಾ +‌ ಣ ಹೂ +‌ ಡುತಿಹೆನು
        ಬಲ್ಲಿ + ದರೆನ್ನ‌+ ಚಿತ್ತ + ವನು ಈ + ಗ ಸೆಳೆ + ವುದು ಸಲ್ + ಲ
        ಕೊಲ್ಲ + ಬಂದೀ + ತು ನಾ ಕಣ್ಣಲೆ
        ಗೆಲ್ಲು + ವೆದೆಯಂ + ಬಿಂದ + ಸೀಳುವು + ದ ತಾ + ಳಲಾರೆ ನು

        ಮೌಳಿಯವರೆ – ತಲ್ಲೀನ ಎಂಬಲ್ಲಿ ಛಂದಸ್ಸು ಸರಿಯಿರುವಂತೆ ಕಾಣುತ್ತದೆ ::
        ಯಲ್ಲಿ + ತಲ್ಲೀ + ನ ಕವಿ +‌ ಗಳಿರಾ

        • ರಾಮಚಂದ್ರರೇ,

          ನಿಮ್ಮ ವಿವರಣೆ ಸರಿಯಾಗಿದೆ. ನನ್ನ ಅಭಿಪ್ರಾಯ ವಾಕ್ಯದ ಪದಗಳ ಅತಿವ್ಯಾಪ್ತಿದೋಷವನ್ನು ತೋರಿಸಿದ್ದಕ್ಕಾಗಿ ಧನ್ಯವಾದ.ಸರಿಯೇ. (೩೪೩೪) ಲೆಕ್ಕಕ್ಕ್ಕೆ ಅಕ್ಷರಗಳ ವಿಭಜನೆ ಇದೆ. ಯಲ್ಲಿ + ತಲ್ಲೀ + ನ ಕವಿ +‌ ಗಳಿರಾ ಇದನ್ನು ಭಾಮಿನಿಯ ಲಯದಲ್ಲಿ ಹಾಡಿಕೊಂಡಾಗೆ, ಒಂದೆರಡು ಪದಗಾಳಾದರೂ ಆ ಲಯದಲ್ಲಿ ಸ್ಪುರಣೆಯಾದರೆ ಚೆನ್ನ. ಪದ್ಯರಚನೆಯ ವೇಳೆಯಲ್ಲಿ ಈ ಗಮನವಿದ್ದರೆ ಗಣಯುಕ್ತಪದಗಳೂ ಬಂದರೆ ಭಾಮಿನಿಯ ಸ್ವಾಮ್ಯ ಸಾಧ್ಯವೆಂದು ತೋರುತ್ತದೆ. ಈ ರೀತಿ ಅಕ್ಷರಗಳನ್ನು ಒಡೆದು ೩/೪ರ ಪೆಟ್ಟಿಗೆಗೆ ಹಾಕಿ ಮಾಡುವ ಲೆಕ್ಕಾಚಾರ ಸರಿಯಾಗಿದ್ದರೂ, ಪದ್ಯತ್ವ ಬರಲು, ಪದ್ಯದೆ ನಡಿಗೆಗೆ ಭಂಗಬಾರದಿರುವ ಎಚ್ಚರ ಪ್ರಾರಂಭಿಕ ರಚಕೆರಿಗೆ ಒಳ್ಳೆಯದೆಂದು ನನ್ನ ನಮ್ರ ಮನವಿ.

          • ಪ್ರೋತ್ಸಾಹಕ್ಕೆ ಮತ್ತು ದೋಷಗಳನ್ನು ವಿವರಣೆ ಸಹಿತ ತೋರಿಸಿದ್ದಕ್ಕೆ ಬಹಳ ಧನ್ಯವಾದಗಳು ಚಂದ್ರಮೌಳಿ ಅವರಿಗೆ ಮತ್ತು ರಾಮಚಂದ್ರರಿಗೆ.
            ೩,೪ ರ ಲೆಕ್ಕ ಹಾಕಿದ್ದಷ್ಟೇ ಮಾಡಿದ್ದೆ ನಾನು. ಅದನ್ನು ಓದುವಾಗ ತೊಡಕನ್ನು ಗಮನಿಸಿದ್ದೆ ಆದರೆ ಅದು ಲಗಂ ಬಂದದ್ದರಿಂದ ಆದದ್ದು ಎನ್ನುವದು ಹೊಳೆದಿರಲಿಲ್ಲ. ನಿಮ್ಮ ವಿವರಣೆಯಿಂದ ಬಹಳ ಅನುಕೂಲವಾಯಿತು. ಚಿತ್ತವನು + ಈಗ ಎನ್ನುವಲ್ಲಿ ವಿಸಂಧಿ ಆಯಿತು ಅಂತ ಗೊತ್ತಾಯಿತು, ಆದರೆ ‘ಈಗ’ ಎನ್ನುವದಕ್ಕೆ ಹೆಚ್ಚು ಒತ್ತು ಬರಬೇಕು ಅನಿಸಿದ್ದರಿಂದ ಹಾಗೆ ಬಿಟ್ಟೆ.
            ಈಗ ಎರಡೂ ನುಡಿಗಳನ್ನು ಹೀಗೆ ಬದಲಿಸಿದ್ದೇನೆ. ಇದು ಸರಿಯಾಗುವದೆ ನೋಡಿ. ಮತ್ತೊಮ್ಮೆ ಧನ್ಯವಾದಗಳು.

            ಭಿಲ್ಲ ಹೆಣ್ಣಿನ ಬೆಡಗ ಬಣ್ಣನೆ
            ಯಲ್ಲಿ ಮುಳುಗಿಹ ಕವಿಗಳಾಲಿಸಿ
            ಸೊಲ್ಲನಿನಿತೂ ಮಾಡದಿರಿ ಗುರಿ ತಪ್ಪಿ ಹೋದೀತು
            ಕೊಲ್ಲಲಾರೆನು ಕಣ್ಣಲೆ ಮಿಗವ
            ಬಿಲ್ಲಿನೋಳ್ಬಾಣವನಿಡಬೇಕು
            ಬಲ್ಲಿದರೆನ್ನ ಚಿತ್ತವನೀಗ ಸೆಳೆಯುವದು ಸಲ್ಲ

            ಭಿಲ್ಲ ಹೆಣ್ಣಿನ ಬೆಡಗ ಬಣ್ಣನೆ
            ಯಲ್ಲಿ ಮುಳುಗಿಹ ಕವಿಗಳಾಲಿಸಿ
            ಸೊಲ್ಲನಿನಿತೂ ಮಾಡದಿರಿ ಗುರಿ ತಪ್ಪಿ ಹೋದೀತು
            ಬಿಲ್ಲು ಚಿಮ್ಮಿದ ಬಾಣ ನಿಮ್ಮನೆ
            ಕೊಲ್ಲ ಬರುವುದ ತಾಳೆ ಕಣ್ಣಲೆ
            ಗೆಲ್ಲುವೆದೆಯಂಬಿಂದ ಬಿರಿವಪರಾಧಕಂಜುತಿಹೆ

          • ಅನಿಲರೆ – ಇನ್ನೂ ಲಗಂಗಳು ಉಳಿದಿವೆ ::
            ೧ನೆ ಪದ್ಯ ೫ನೇ ಸಾಲು :: “ಡಬೇಕು”
            ೧ನೆ ಪದ್ಯ ೬ನೇ ಸಾಲು :: “ದರೆನ್ನ”, “ವನೀಗ”

          • ಮೌಳಿಯವರೆ – ಅತಿವ್ಯಾಪ್ತಿಯನ್ನು ತೋರುವುದಕ್ಕಿಂತ, ನನಗೆ ತಿಳಿಯದ್ದನ್ನು ಕಾಣಬೇಕೆಂಬ ಇಚ್ಚೆ. ನಿಮ್ಮ ವಿವರಣೆಗೆ ಧನ್ಯವಾದಗಳು.

        • ಪ್ರತಿಕ್ರಿಯೆಗೆ ಸ್ವಲ್ಪ ವಿಳಂಬವಾಯಿತು ಕ್ಷಮಿಸಿ. ಈಗ ಹೀಗೆ ತಿದ್ದಿರುವೆ..

          ಭಿಲ್ಲ ಹೆಣ್ಣಿನ ಬೆಡಗ ಬಣ್ಣನೆ
          ಯಲ್ಲಿ ಮುಳುಗಿದ ಕವಿಗಳಾಲಿಸಿ
          ಸೊಲ್ಲನಿನಿತೂ ಮಾಡದಿರಿ ಗುರಿ ತಪ್ಪಿ ಹೋದೀತು
          ಕೊಲ್ಲಲಾರೆನು ಮಿಗವ ಕಣ್ಣಲೆ
          ಬಿಲ್ಲಿನೋಳ್ಬಾವನಿಡುತಲಿಹೆನು
          ಬಲ್ಲಜಾಣರೆ ಕರುಣೆದೋರಿರಿ ಚಿತ್ತ ಸೆಳೆಯದಿರಿ

          ಭಿಲ್ಲ ಹೆಣ್ಣಿನ ಬೆಡಗ ಬಣ್ಣನೆ
          ಯಲ್ಲಿ ಮುಳುಗಿದ ಕವಿಗಳಾಲಿಸಿ
          ಸೊಲ್ಲನಿನಿತೂ ಮಾಡದಿರಿ ಗುರಿ ತಪ್ಪಿ ಹೋದೀತು
          ಬಿಲ್ಲು ಚಿಮ್ಮಿದ ಬಾಣ ನಿಮ್ಮನೆ
          ಕೊಲ್ಲ ಬರುವುದ ತಾಳೆ ಕಣ್ಣಲೆ
          ಗೆಲ್ಲುವೆದೆಗಂಬೆಸೆದು ಕೊಂದಪರಾಧಿಯೆನಿಸುವುದ

          • ಒಳ್ಳೆಯ ಕಲ್ಪನೆಯ ಪದ್ಯಗಳನ್ನೇ ಕೊಟ್ಟಿದ್ದೀರಿ, ಧನ್ಯವಾದಗಳು.
            ಮಾತ್ರೆ-ಗಣಗಳ ಲೆಕ್ಕಾಚಾರ ಸರಿಯಿದ್ದರೂ ಮೊದಲ ಪದ್ಯದ ಐದನೆಯ ಸಾಲಿನಲ್ಲಿ ಸ್ವಲ್ಪ ಗತಿಕ್ಲೇಶವಿದೆ. ಆದುದರಿಂದ ಅದನ್ನು ಹೀಗೆ ಸವರಿಸಬಹುದು:
            “ಬಿಲ್ಲಿನೊಳು ಹೂಡಿದೆನು ಬಾಣವ”

  18. ಮತ್ತೊಂದು ಪ್ರಯತ್ನ:

    ಮಾರಸಖಿ ! ವಿಪಿನದೇಕಾಂತ ಸಾಕೆನಿಸಿತೇ?
    ಯಾರ ಬೇಟೆಗೀವೇಷ ನಗರವು ಕರೆಯಿತೇ?
    ಸಾರುತಿದೆ ದೇಹಸಿರಿ (ತನುಶ್ರೀ) ತನ್ನ ಹರಿತ ಬಲವನು
    ಅಥವಾ
    ಸಾರುತಿವೆ ನಿನ್ನಾಸ್ತಿ ತಮ್ಮ ಹರಿತ ಬಲವನು
    ಏರುತಿದೆ ರಕ್ತದೊತ್ತಡ ೧) ನೀಡು ಮುಕುತಿಯನು
    ೨) ಸಲಹು ಹುಡುಗರನು
    ೩) ಪೊರೆಯೆ ಹುಡುಗರನು

    ಆಸ್ತಿ – ಬಹುವಚನ ತರುವ ಪ್ರಯತ್ನ ಮಾಡಿದೆ. ಆಗಲಿಲ್ಲ. ಅರ್ಥ ಬಹುವಚನದಲ್ಲೇ ಮಾಡಿಕೊಳ್ಳಬಹುದು. ಅವಳ ಆಸ್ತಿಗಳು – ಬಾಣಗಳು, ನೋಟ ಇತ್ಯಾದಿ – ಹರಿತವಾದದ್ದೆಲ್ಲಾ

    • ಗಾಯತ್ರಿ – ಪಂಚಮಾತ್ರೆಗಳ ರಗಳೆ ಚಂದಸ್ಸನ್ನು ಅಯ್ದುಕೊಂಡಿದ್ದೀರ. ೨ನೆ ಸಾಲಿನಲ್ಲಿ ೨ನೆ ಗಣ – “ಟೆಗೀವೇ” ಎಂಬಲ್ಲಿ ಲಗಂ ಬಂದಿರುವುದರಿಂದ ಧಾಟಿಯಲ್ಲಿ ಓದಲು ತೊಡಕಾಗುತ್ತದೆ. ೪ನೆ ಸಾಲಿನಲ್ಲಿ ಕೊನೆಯಲ್ಲಿ ಸರ್ವ ಲಘುಗಳು ಬಂದಿರುವುದರಿಂದ, ಇಲ್ಲಿಯು ಕೂಡ ಓದಲು ಕೊಂಚ ತೊಡಕಾಗುತ್ತದೆ. ನಾಲ್ಕನೆ ಸಾಲು ಸ್ವರದಿಂದ ಶುರುವಾಗುವುದರಿಂದ, ಅದನ್ನು ಹಿಂದಿನ ಸಾಲಿನೊಡನೆ ಕೂಡಿಸಬಹುದು – “ಬಲವನ್ – ನೇರುತಿದೆ”
      ಓದುಗರಿಗೆ ಅವರಿಗಿಷ್ಟವಾದ ಗಣಗಳನ್ನು ಆಯ್ಕೆ ಮಾಡಲು ಬಿಡುವುದಕ್ಕಿಂತ, ನೀವೆ ಆಯ್ದು ಕೊಟ್ಟರೆ ಓಳಿತಲ್ಲವೆ? ಇನ್ನು ಕೆಲವು ಸಾಲುಗಳನ್ನು ಬಿಡಲು ಮನಸಾಗದಿದ್ದರೆ, ಅವುಗಳನ್ನುಪಯೋಗಿಸಿ ಇನ್ನೊಂದು ಪದ್ಯವನ್ನೇ ಬರೆಯಬಹುದು.

  19. ಧನ್ಯವಾದಗಳು ರಾಮಚಂದ್ರ ಅವರೆ, ಸ್ವಲ್ಪ ಮಟ್ಟಿಗೆ ತಿದ್ದಿದ್ದೇನೆ. ಸರಿಯಾಗಿದೆಯೆ ತಿಳಿಸಿ. ಒಂದು ಲಗಮ್ ಉಳಿದಂತಿದೆ. ಮತ್ತೇನಾದರೂ ತಪ್ಪಿದ್ದರೆ ತಿಳಿಸಿ:

    ಮಾರಸಖಿ ! ವಿಪಿನದೇಕಾಂತ ಸಾಕೆನಿಸಿತೇ?
    ಯಾರಕೊಲೆಗಾವೇಶ ಪಟ್ಟಣವು ಕರೆಯಿತೇ?
    ಸಾರುತಿದೆ ದೇಹಸಿರಿ ತನ್ನ ಹರಿತಶಕ್ತಿಯ
    ನೇರುತಿದೆ ರಕ್ತದೊತ್ತಡ ನೀಡು ಮುಕ್ತಿಯನು

    • ಗಾಯತ್ರಿಯವರೆ – ನೀವೆಂದಂತೆ ಮೂರನೇ ಸಾಲಿನ ಲಗಂ ಬಿಟ್ಟು ಉಳಿದೆಲ್ಲ ಸರಿಯಾದಂತಿದೆ. ಇನ್ನು ಹೊಸ ಸಮಸ್ಯೆಗಳಲ್ಲಿ ನಿಮ್ಮಿಂದ ಅನೇಕ ಪದ್ಯಗಳು ಅರಳಲಿವೆ ಎಂದು ಆಶಿಸುವೆ. 🙂

  20. ಈಗ ಸರಿಯಾಗಿದೆಯೆ?

    ಮಾರಸಖಿ ! ವಿಪಿನದೇಕಾಂತ ಸಾಕೆನಿಸಿತೇ?
    ಯಾರಕೊಲೆಗಾವೇಶ ಪಟ್ಟಣವು ಕರೆಯಿತೇ?
    ಸಾರುತಿದೆ ದೇಹಸಿರಿ ತನ್ನ ಹರಿತಮಹತ್ತ
    ನೇರುತಿದೆ ರಕ್ತದೊತ್ತಡ ನೀಡು ಮುಕ್ತಿಯನು

    • ಗಾಯತ್ರಿ,
      ಮಾರಸಖಿ! ಸಾಕೆನಿಸಿ ವಿಪಿನದೇಕಾಂತವದೊ
      ಪಾರವಿಲ್ಲಿಲ್ಲ ಬಾ ಎಂದಿದೆ ಪುರ|
      ಸಾರುತಿದೆ ವಟುಕೂಟ ದೇಹಸಿರಿ ಕರ್ಷಣೆಯ
      ದೇರಿಸಿಹ ಶೋಣಿತವ ತಣಿಸೆ ಬಹೆಯಾ||

  21. ನಾಡ ಹರೆಯದ ಹೈಕಳೆದೆಯಲಿ
    ಮಾಡಿ ಮೋಡಿಯ ಜಾಗಪಡೆಯುತ
    ಕಾಡು ಹೊಕ್ಕರೆ ಮರಳಿ ಸೆಳೆವರು ಬಿಡುವಜನವಲ್ಲ !
    ಬೇಡಿ ಬರುವರು ಪ್ರೇಮಭಿಕ್ಷೆಯ
    ಕಾಡಿ ಹುಡುಕುತ ನಿನ್ನ ಮೂಲದ
    ಜಾಡ ಹಿಡಿವರು ಕೂಡುವಾಸೆಗೆ ಗೊಡವೆ ತರವಲ್ಲ !

    • Sri V. R. Bhat, ‘V 2 R (poets) but’ are not able to compose as fine as this! Welcome to padyapAna.

      • thank you Prasad. I treat My Dear R. Ganesh as my friend, my Guru & as well as treasure of Diamonds, Gems & Jewels which gives me a lot of pleasure & enthusiasm as and when I need to reincarnate myself into the field of writing. I thank one and all at Padyapana.

        Regards/
        V.R.BHAT

    • ಭಾಮಿನಿ ಪ್ರಿಯ ವೀರ ಭಟ್ಟರೆ
      ಕಾಮಿನಿಯ ನಿಲ್ಲಿಸುತ ಪುರದಲೆ
      ಪ್ರೇಮ ಭಿಕ್ಷುಕರೆಲ್ಲರಿಗು ತೋರಿದಿರಿ ಮಮಕಾರ |
      ನೇಮದಲಿ ಬಾಣಗಳ ಹರಿತದ
      ಲೀಮಹಿಳಮಣಿ ಬೆದರಿಸಲಿ ಬಿಡಿ
      ಸೀಮೆಯಂದದ ಛಂದ ರಂಗದೆ ಮೆರೆಯೆ ನಲ್ಬರವು ||

      • ಗಡಿಬಿಡಿಯಲ್ಲಿ ಹೀಗೊಮ್ಮೆ ಪ್ರಯತ್ನಿಸಿದ್ದೇನೆ: [ಕಾವ್ಯದ ಹುಚ್ಚು ಏನು ಮಾಡಲಿ ? ]

        ಬೆಡಗಿ ನಿನ್ನಯ ನಡು ನಿತಂಬವ
        ಅಡಗುಗಣ್ಣಲೆ ಕಂಡು ಸೋತೆನು
        ತುಡುಗು ಬುದ್ಧಿಯು ದೇಹಸಖ್ಯವ ಬಯಸುತಿಹುದಲ್ಲ
        ಒಡೆಯನಾಗುವ ಹುಚ್ಚು ಹಂಬಲ
        ಬಿಡದೆ ನೆನೆವೆನು ರಾಮಚಂದ್ರನ
        ಕೊಡಲಿ ನಿನ್ನನು ಶಾಶ್ವತಕೆ ನಾ ಬಿಡುವುದೇ ಇಲ್ಲ

        ನೆಚ್ಚಿಕೊಳ್ಳುವೆ ನಿನ್ನನೋರ್ವಳ
        ಅಚ್ಚಕನ್ನಡ ’ಕಾವ್ಯ’ ಜನಿಸಲಿ
        ತುಚ್ಛನಾನೆಂದೆಣಿಸಿ ದೂರುತ ದೂರಹೋಗದಿರು
        ಅಚ್ಯುತನ ಪದದಾಣೆಯಲಿಪದ-
        ಹಚ್ಚಿ ಪೊಗಳುವೆ ನಿನ್ನನೀ ಪರಿ
        ಮೆಚ್ಚಿನೆನೆವೆನು ಭುವನದೊಳು ನೀ ಬಿಟ್ಟರೆನಗಿಲ್ಲ !

  22. ಅಬ್ಬಬ್ಬ!! ಕಬ್ಬಗಳ ದಿಬ್ಬಣವೆ ಹೊರಟಿಹುದು
    ಕಬ್ಬುಬಿಲ್ಲಿನ ಚೆಲುವೆ ಹುಬ್ಬೇರಿಸೆ|
    ಉಬ್ಬದಿರಿ, ಕೊಬ್ಬದಿರಿ ಸಬ್ಬವದ ಸೋಂಕಿನಿಂ
    ಮಬ್ಬುಗೊಂಡೀತು ರಸ ರಸನಿರ್ಲಿಪ್ತಿಯು!!

  23. ಡಾ.ಗಣೇಶ ಅವರಿಗೆ ಮತ್ತು ಇಲ್ಲಿನ ಎಲ್ಲ ಪ್ರತಿಭಾವಂತ ಕವಿಗಳಿಗೆ ಆತ್ಮೀಯವಾಗಿ ವಂದಿಸುತ್ತ, ಇದು ‘ಪದ್ಯಪಾನ’ದಲ್ಲಿ ನನ್ನ ಮೊದಲ ದಾಖಲಾತಿ-
    ದಿನಕರ ದೇಸಾಯಿಯವರ ಚೌಪದಿ ಶೈಲಿಯಲ್ಲಿ (ತಲಾ ಹದಿನೆಂಟು ಮಾತ್ರೆಗಳ ನಾಲ್ಕು ಸಾಲುಗಳು):

    ಕೈಯಲ್ಲು ಕಣ್ಗಳಲು ತೊಟ್ಟಿಹಳು ಬಾಣ
    ಮೈಯಲ್ಲು ಮನದಲ್ಲು ಕೊಂಕಿಲ್ಲ ಕಾಣ
    ತಪ್ಪದೆಂದಿಗು ನೋಡು ಇವಳಿಟ್ಟ ಗುರಿಯು
    ಒಪ್ಪಿ ಠೇಂಕರಿಸಿಹುದು ಬಿಲ್ಲಿನಾ ಹುರಿಯು
    —————–

    ಇನ್ನೊಂದು ವಿಷಯವನ್ನು ನಿಮ್ಮೆಲ್ಲರ ಗಮನಕ್ಕೆ ತರೋಣ ಎಂದುಕೊಂಡೆ. ಈ ಚಿತ್ರಕ್ಕೆ ಸಂಬಂಧಿಸಿದ್ದು. ಚಿತ್ರಕಲಾವಿದನಿಗೆ ಪೂರ್ಣ ಗೌರವ ತೋರಿಸುತ್ತ, ಇದರಲ್ಲಿ ಒಂದು ಚಿಕ್ಕ ತಪ್ಪು (ಆದರೆ ಪ್ರಮಾದಕ್ಕೆ ಎಡೆ ಮಾಡಬಹುದಾದಂಥ ಪ್ರಮಾದ!) ಇದೆ, ಗಮನಿಸಿದಿರಾ? ಬತ್ತಳಿಕೆಯಲ್ಲಿ ಬಾಣಗಳನ್ನಿಟ್ಟ ರೀತಿ ತಪ್ಪು. ಬಾಣದ ಚೂಪು ತುದಿ ಬತ್ತಳಿಕೆಯೊಳಕ್ಕೆ ಇರಬೇಕು, ಬಾಣದ ’ಹಿಡಿ’ ಬತ್ತಳಿಕೆಯಿಂದ ಹೊರಚಾಚಿದ್ದಿರಬೇಕು. ಇಲ್ಲಿ ಚಿತ್ರದಲ್ಲಿರುವಂತೆ ಬಾಣಗಳನ್ನಿಟ್ಟುಕೊಂಡರೆ ಹೀಗೆ ಕಣ್ಣಿಂದ ನೋಡದೆಯೇ ಕೈಯಿಂದ ಬಾಣ ತೆಗೆಯುವಾಗ ಮೊನಚು ತುದಿಯು ಕೈಗೆ ತಾಗಿ ಗಾಯವಾಗಬಹುದು.ಕೆಲವು ಬಾಣಗಳ ತುದಿಗೆ ವಿಷ ಸವರಿರುತ್ತಾರೆ ಎಂದೂ ಕತೆಗಳಲ್ಲಿ ಓದಿರುತ್ತೇವೆ. ಹಾಗಾಗಿ ನೀವು ಹಳೆಯ ತೈಲಚಿತ್ರಗಳಲ್ಲಿ ಅಥವಾ ಪೌರಾಣಿಕ ನಾಟಕ/ಸಿನೆಮಾಗಳಲ್ಲಿ ನೋಡಿ- ಬಾಣಗಳನ್ನು ಬತ್ತಳಿಕೆಯಲ್ಲಿ ಇಡುವ ಕ್ರಮ ಹೇಗಿರುತ್ತದಂತ!
    =====

    • ವಿಸ್ತರದಿ ಸಿರಿವತ್ಸಗಾದರ
      ಮಸ್ತಕಕೆ ಕಸ್ತೂರಿ ಪೂಸುತ
      ವಸ್ತುವಿಷಯವು ಗಹನವಿದ್ದರು ಗೆಲುವು ನಿಚ್ಚಳವು |
      ಬೆಸ್ತ ಹುಡುಗಿಯ ಸುತನ ದಯೆಯಿರೆ
      ಸುಸ್ತು ಎನಿಸದು ಬದುಕು ಸುಂದರ
      ಅಸ್ತು ಎನ್ನುವ ಶತವಧಾನಿಗೆ ಜಯಜಯತು ಜಯವು ||

      • ಸೊಗಸಾದ ಪದ್ಯಗಳ ಬರೆಯುತಿಹ ಭಟ್ಟರಿಗೆ
        ನಗುನಗುತ ನಲ್ಬರವ ನೀಡುತಿರುವೆ|
        ಮುಗುಳ ಮಲರಿನ ಹಾಗೆ ಸಂಧಿನಿಯಮಗಳನ್ನು
        ಜಗುಳಿಸದೆ ಪಾಲಿಸಿರಿ ಸಖರೆ! ದಯದಿ:-)

    • ಬಂದರೈ punಡಿತರು, ಕಲ್ಪನಾಮಂಡಿತರು,
      ಸಂದರೈ ಪದ್ಯಪಾನದ ಪಾತ್ರೆಗೆ!
      ಸುಂದರಪರಾಗ(ಸಂ)ಸ್ಪರ್ಶದಿಂ ಪದ್ಯಕವಿ-
      ತೇಂದೀವರಕೆ ಸಲ್ಲದೇ ಸತ್ಫಲಂ?

      ಚೆಲುವಿನ ಚುಟುಕವನತಿಚತುರತೆಯೊಳು
      ಮಲರಿಸಿದೆರೆಯರೆ! ನಮನಗಳು|
      ಸಲಿಸುವಿರೆನೆ ಮುಗುಳನುದಿನಕವನದ
      ಕಲೆಗೊಲುಮೆಯನಿದೊ ನಲಿದಪೆನು!!!

    • ಬಾಣಗಳನಿಟ್ಟಿಹಳು ತಿರುಗು ಮುರುಗಾಗಿಲ್ಲಿ
      ಕಾಣೊ ಹರಿತದಿ ಬೇಟೆಯನ್ನದುರಿಸಲ್ |
      ಬಾಣದಿಂ ಬೆದರಿಸುತ ಮಾಟದಿಂ ಸೆಳೆದಿಹಳು
      ಮೇಣದಂತೆಯೆ ಕರಗೊ ಗಂಡೆದೆಗಳ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)