Jan 162012
 

ಈ ಕೆಳಗಿನ ಸಾಲು ಕೊನೆಯಲ್ಲಿರುವಂತೆ ಉಳಿದ ಸಾಲುಗಳನ್ನು ಭರಿಸಿ ಸಮಸ್ಯೆಯನ್ನು ಪರಿಹರಿಸಿರಿ.

ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್!

ಇದು ಮಾತ್ರಾ ಮಲ್ಲಿಕಾಮಾಲಾ ಎಂಬ ಭಾಮಿನಿಯ ಓಟದ ಮಿಶ್ರ ಲಯದ ಛಂದಸ್ಸು. ಪದ್ಯದ ಎಲ್ಲ ಸಾಲುಗಳ ಮಾತ್ರಾ ಗಣ ವ್ಯವಸ್ಥೆಯು ಇಂತಿದೆ ::

೩ +‌ ೪ + ೩ +‌ ೪ + ೩ +‌ ೪ + ೩ + ೨ (ಕೊನೆಯದು ಊನ ಗಣ)

  14 Responses to “ಪದ್ಯ ಸಪ್ತಾಹ – ೩ – ೨೦೧೨ ::‌ ಸಮಸ್ಯೆ”

 1. ಭಾರತದ ಪಡೆ ಆಸ್ಟ್ರೇಲಿಯಾ ಕ್ರಿಕೆಟಿಗರಿಂದ ಹಣ್ಣುಗಾಯಿ ನೀರುಗಾಯಿಯಾಗಿ ಥಳಿಸಲ್ಪಟ್ಟ ಪಂದ್ಯಾವಳಿಯ ಕುರಿತು:

  ಮಂಡಿಸುವರೆದುರಾಳಿದೇಶದೊಳುಗ್ರಕಾಳಗವೆನ್ನುತಾ
  ಕಂಡುಕಾಣದಗಾವಿಲರವೊಲು ವೀಕ್ಷಿಸಲ್ ಪ್ರತಿನಿತ್ಯವೂ
  ಹಿಂಡುಕುರಿಗಳತೆರೆದಿ ನಡೆಯಲು ದಾಂಡಿಗರಪಡೆ ಚಂಡಿನಾ-
  ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್

 2. ಚಂಡ ಛವಿಯ ಪ್ರಚಂಡ ಪವಿ ಮೇಘಾಂತರದಿ ಭುಗಿಲೆನ್ನುವಾ
  ಕಂಡಡಗುತಿರೆ ಮಿಂಚು ಬೆಳಕಿನ ವೃಕ್ಷಗಳು ಬೆಳೆದಳಿಯುವಾ
  ಹಿಂಡುಮೋಡಗಳುಜ್ಜಿಸುರಿಸುವ ಬೆಂಕಿ ಕಲ್ಗಳ ಧಾರೆಯಯ್
  ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್!

  ಪ್ರಖರ ದ್ಯುತಿಯ ವಜ್ರಾಯುದಾಘಾತದ ಸಿಡಿಲಿಗೆ ಹೊತ್ತಿದ ಮಿಂಚಿನ ಸಮೂಹ, ಜ್ಯೋತಿರ್ವೃಕ್ಷಗಳು ಮೂಡಿ ಮರೆಯಾದ ರೀತಿ ಯಲ್ಲಿದ್ದು, ಮುಗಿಲಾನೆಗಳ ಸಂಗ್ರಾಮದಲ್ಲಿ ಸುರಿವ ಮದಜಲ, ಮಿಂಚಿನ ಬೆಳಕಿಗೆ ಹೊಳೆಯುವ ಬೆಂಕಿಯುಂಡೆಗಳಾಗಿ ಸುರಿಯುತ್ತಿರುವಂತೆ ಭಾಸವಾಗುವ, ನಿಗಿನಿಗಿ ಹೊಳೆಯುವ ಆಲಿಕಲ್ಲುಗಳೆಂಬ ಕೆಂಡಗಳನ್ನು ತಡೆಯಲು ದಾರಿಗೆ (ಬಟ್ಟೆಯ) ಕೊಡೆಗಳನ್ನು ಹಿಡಿದು ನಡೆದಿದ್ದಾರೆ. ಹೇಗೆ ಸಾಗುತ್ತದೆಯೋ ಅವರ ಪಯಣ !

  • ತುಂಬ ಚೆಲುವಿನ ಪದ್ಯಪೂರಣರಣಮಿದಯ್ ರಸರಂಗದೊಳ್!

 3. ಚಂಡಮಾರುತ ಬೀಸುತಾ ಕಾರ್ಮೋಡ ಕವಿದಿರೆ ಬಾನೊಳುs
  ಗುಂಡಿಗೆಯ ನಡುಗಿಸುವತೆರದೊಳು ಚಳಿಯನೆಲ್ಲೆಡೆ ಹಂಚಲುs
  ಮಂದಿ ಮನೆಯೊಳಗಿರ್ದುವುರಿಸಲು ಮರದ ತುಂಡಿನ ಶಾಖದಾ-
  ಕೆಂಡಗಳ, ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್

 4. ಅಂಡಲೆಯುತಲಿ ಬಾಳ್ವ ಲಂಬಾಣಿಗರದೊಂದು ಕುಟುಂಬವಯ್|
  ಉಂಡು ಮಾಗಿಯದೊಂದು ರಾತ್ರಿ ಮಲಗಲು ಜಡಿ ಮೊದಲಿಟ್ಟುದಯ್|
  ಥಂಡಿ ತಡೆಯದೆ ಗುಡ್ಲ ಮುಂಗಡೆ ಪೋರ ಬೆಚ್ಚನುರಿಸಿಹನಯ್|
  ಕೆಂಡಗಳ, ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್!

  ಗುಡ್ಲು = ಗುಡಿಸಿಲು

  • ಸ್ವಲ್ಪ ಛಂದಸ್ಸು ದುರ್ಬಲವಾಗಿದೆ, ಗತಿಯಲ್ಲಿ ಶೈಥಿಲ್ಯ ತೋರಿದೆ. ಪರಿಹಾರದ ಸ್ವಾರಸ್ಯ ಮಾತ್ರ ಚೆನ್ನಾಗಿದೆ

 5. ನೋಡಿನೋಡಿರಿ ದಂಡಿಯತ್ತಲೆ ಸಾಗುತಿಹ ಜನಸಾಗರಂ
  ದಂಡನಾಯಕನೊಂದುಬಟ್ಟೆಯಹೊದ್ದುಸಾಗುವ ವಿಸ್ಮಯಂ
  ದಂಡನಾಥನು ತುಂಡುಬಟ್ಟೆಯ ಹೊದ್ದುಸಾಗುವ ವಿಸ್ಮಯಂ
  ಗುಂಡುಕೋವಿಗೆ ಶಾಂತಿಮಂತ್ರದ ಯುದ್ಧತಂತ್ರವ ಪಟಿಸುತಂ
  ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪುದಂ!

  • ದಂಡನಾಥನು ತುಂಡುಬಟ್ಟೆಯ…ಎಂದು ಸವರಿಸಿದರೆ ಮತ್ತೂ ಸೊಗಯಿಸೀತು

 6. ಹಿಂಡಿನಲ್ಲಿನ ಪಶುಗಳಂತೆಯೆ ಜನರು ನಂಬುವರೆಲ್ಲವಂ
  ಚಂಡ ಮಾರುತ ಲೋಕದಾಂತಕ ಬೆಂಕಿಯೆಲ್ಲೆಡೆ ಬೀಸುಗುಂ
  ಭಂಡ ಗುರು ಬ್ರಹ್ಮಾಂಡದವನಿಂತೆಂದು ಪೇಳಲು ಟೀವಿಯೊಳ್
  ಕಂಡು ಬೆದರಿದ ಮೂಢ ಜನ ತಾವೇನು ಮಾಡುವದೆಂದಿರೆ *
  ತಿಂಡಿ ತಿನ್ನದೆ ಕರಿಯ ಕೊಡೆಗಳನಾಶ್ರಯಿಸಿರೆಂ ಪೇಳ್ದನು *
  ಸಂಡೆ ಬೆಳಗಿನ ಹತ್ತು ಘಂಟೆಯೊಳೆಲ್ಲರೊಟ್ಟಿಗೆ ತಡೆದರೆ *
  ಅಂಡು ತಿರುಗಿಸಿ ಪೋಪುದಾಕಂಟಕವದೆಂದಿರೆ ಜನಗಳು *
  ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್!

  * ೪ ರಿಂದ ೭ರ ವರೆಗಿನ ಸಾಲುಗಳಿಲ್ಲದಿದ್ದರೂ ಸಮಸ್ಯೆ ಪೂರ್ಣವಾಗುವುದು. ಆದರೆ ವಿಷಯವನ್ನು ತುಸು ಬೆಳೆಸೋಣವೆಂಬ ಚಪಲಕ್ಕೆ ಬಿದ್ದೆ 🙂

 7. ಇನ್ನೊಂದು ಪರಿಹಾರ ::
  ಕೆಂಡ ಹಾಯುವ ಸೋಜಿಗವನೇ ಕಾಣದಿರ್ದs ಗೆಳೆಯರು
  ಗಂಡುಗಲಿ ರಂಗಯ್ಯನಲಿ ತಾವಿಟ್ಟರೀ ಕೋರಿಕೆಯನು
  ಕೆಂಡ ರಾಶಿಯಲೋಡುತಲಿಯವ ಕಿಡಿಗಳೆಲ್ಲೆಡೆ ಹಾರಿಸಲ್
  ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್!

  ಕೆಂಡಗಳ ಮಧ್ಯೆ ಓಡುವುದಕ್ಕೆ ಕೆಂಡ ಹಾಯುವುದು ಎನ್ನುತ್ತಾರೆ.

 8. ಭಂಡತನದಿಂ ಕೋಪ ತೋರೆ ಗ್ರೀಷ್ಮ ಋತುವೊಳ್ ನೇಸರಂ
  ಸಿಂಡರಿಸಿ ಮೊಗಮಂ, ನಮೆಸುತಲ್ ಗಾಳಿ, ಜಲವಂ, ಭೂಮಿಯಂ |
  ಕಂಡು ಕೊಂಡರುಪಾಯಮನುಜರ್, ಜಾಣರಲ್ತೇ? ಕಾರುವೀ
  ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್!

  ಗ್ರೀಷ್ಮ ಋತುವಿನಲ್ಲಿ ಕುಪಿತ ಸೂರ್ಯನ ಕಿರಣಗಳೇ ಕೆಂಡದಂತಿದ್ದವು ಎಂಬ ಭಾವ

  • ಕಾಂಚನ ಅವರೆ,

   ಬಹಳ ಸೊಗಸಾದ ಪೂರಣ. ನವೀನ ಕಲ್ಪನೆ. ಮೊದಲಸಾಲಿನಲ್ಲಿನ ’ತೋರ” ಯನ್ನು ’ತೋರಲು’ಮಾಡಿದಲ್ಲಿ ಬಂಧ ಚೆಂದವಾದೀತು.

   • ಮೌಳಿಯವರೆ – ಮೆಚ್ಚುಗೆಗೆ ಧನ್ಯವಾದಗಳು. ತಿದ್ದಿದ ಪದ್ಯವು ಇಂತಿದೆ ::

    ಭಂಡತನದಿಂ ಕೋಪ ತೋರಲ್ ಗ್ರೀಷ್ಮ ಋತುವೊಳ್ ನೇಸರಂ
    ಸಿಂಡರಿಸಿ ಮೊಗಮಂ, ನಮೆಸುತಲ್ ಗಾಳಿ, ಜಲವಂ, ಭೂಮಿಯಂ |
    ಕಂಡು ಕೊಂಡರುಪಾಯಮನುಜರ್, ಜಾಣರಲ್ತೇ? ಕಾರುವೀ
    ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್!

    • ತುಂಬ ಸೊಗಸಾದ ಪೂರಣ. ಭಾವ-ಭಂಧ-ಕಲ್ಪನೆಗಳೆಲ್ಲ ಬಲು ಚೆಲುವಾಗಿವೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)