Jan 222012
 

ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು” ಎಂಬೊಂದು ಕುಟುಂಬ ಯೋಜನೆಯ ಕರೆಯಿದ್ದಿತ್ತು.

ಈ ವಿಷಯದ ಬಗ್ಗೆ ನಿಮ್ಮ ಭಾವಗಳನ್ನು ನಿಮಗಿಷ್ಟವಾದ ಛಂದಸ್ಸಿನ ಪದ್ಯರೂಪಗಳಲ್ಲಿ ಹೊಮ್ಮಿಸಿರಿ.

  57 Responses to “ಪದ್ಯ ಸಪ್ತಾಹ – ೪ – ೨೦೧೨ ::‌ ವರ್ಣನೆ”

 1. ಲಿಂಗದೊಳ್ ಬೇಧಮಮ್ಮೆಣಿಸಿಹುದು ಸರ್ಕಾರ
  ಮಂಗನೀ ಕೈಲೇಕೆ ಮಾಣಿಕ್ಯಮೋ‌ ?
  ಹೆಂಗಳೆಯು ಜೀವಿತದಿ ಮನಸಾರೆ ಬಯಸುವುದು
  ಮಂಗಳವನೇ ತನ್ನ ಮಕ್ಕಳಿಂದ

  • ಸ್ವಲ್ಪ ಸವರಣೆ ಬೇಕಾದೀತು:
   ………ಭೇದವನ್ನೆಣಿಸಿಹುದು…….
   ಮಂಗನಂಗೈಲೇಕೆ ಮಾಣೀಕ್ಯವು?

   • ಸಲಹೆಗೆ ಧನ್ಯವಾದಗಳು. ಸರಿ ಮಾಡಿದ ಪದ್ಯ:
    ಲಿಂಗದೊಳ್ ಬೇಧವನ್ನೆಣಿಸಿಹುದು ಸರ್ಕಾರ
    ಮಂಗನಂಗೈಲೇಕೆ ಮಾಣಿಕ್ಯವು ?
    ಹೆಂಗಳೆಯು ಜೀವಿತದಿ ಮನಸಾರೆ ಬಯಸುವುದು
    ಮಂಗಳವನೇ ತನ್ನ ಮಕ್ಕಳಿಂದ ||

 2. ನಾವಿಬ್ಬರು ನಮಗಿಬ್ಬರೇ, ಸುಖೀಸಂಸಾರ
  ಹೂವಿನಂತವಳು ನಾನವರು ಮೂಕಪ್ರಾಣಿ
  ಕಾವಿರದ ನಮ್ಮ ಪುತ್ರ ಗುಡಿಯೊಳು ಪೂಜಾರಿ
  ನೀವು ನೋಡದ ಪುತ್ರಿ ಕೀರುತಿಯ ಸಂಸಾರಿ

  ಅದಲು ಬದಲಾಗಿದೆ ಅಷ್ಟೆ:
  ಮಗ ದೇವಸ್ಥಾನದಲ್ಲಿ ಆರತಿ ಬೆಳಗುವವನು
  ಮಗಳು ಕೀರ್ತಿ ಎನ್ನುವನ ಹೆಂಡತಿ

  • ಸ್ವಲ್ಪ ಸವರಣೆ ಬೇಕಾದೀತು:
   ನಾವಿಬ್ಬರೈ ನಮಗಮಿಬ್ಬರೈ ಸುಕುಟುಂಬ
   ……………………………………..
   ಕಾವಿರದ ನಮ್ಮ ಸುತ ಗುಡಿಯೊಳಗೆ ಪೂಜಾರಿ
   ……………..ಕೀರ್ತಿಗೊಲಿದಾಣ್ಮೆ

   ಕಲ್ಪನ್ನೆ ತುಂಬ ಸೊಗಸಾಗಿದೆ.

 3. There seems to be some problem with the version of Baraha direct I have. mU is showing as mA in kannada script.

 4. ಆರತಿಯ ತಟ್ಟೆಯು೦ ಸ್ತ್ರೈಣವ೦ ಬಿ೦ಬಿಪುದು
  ಪೌರುಷದ ಭಾವವಿರ್ಪುದು ಕೀರ್ತಿಯೊಳ್
  ತೋರಿಪುದು ಹೆ೦ಗರುಳು ಪುರುಷರಲು, ಗ೦ಡೆದೆಯು
  ನಾರಿಯಲಿ, ಹೇಳಿಕೆಯು ಭಾವಯುಕ್ತ

  ಹೇಳಿಕೆಯು: ಆರತಿಗೊಬ್ಬ ಮಗಳು ಕೇರ್ತಿಗೊಬ್ಬ ಮಗ

  • ಆರತಿಗೆ ಹೆಣ್ಣೇಕೆ
   ಕೀರುತಿಗೆ ಗಂಡೇ ಬೇಕೆ
   ಆ ರತಿಗೆ ಬೇಕು ಗಂಡು
   ಈ ಗಂಡಿಗೂ ಬೇಕೊಬ್ಬ ರತಿ
   ಸತಿ ಪತಿ ಸಮ ಬಾಳು
   ಮಗನಾದರೆ ಮಗಳಿಲ್ಲವೆಂಬ ಗೋಳು
   ಮಗಳಾದರೆ ಮಗನಿಲ್ಲವೆಂಬ ಗೋಳು
   ತಮಗೊಬ್ಬ ಮಗ ಬೇರೊಬ್ಬಗೆ ಮಗಳು
   ಕೀರುತಿಯ ಕುಸುಮವರಳಲು
   ಬಾಳಲಿ ಬೇಕಿಬ್ಬರೂ ಸಮ

   • ಪ್ರಿಯ ಜಯಪ್ರಕಾಶರೆ, ದಯಮಾಡಿ ಛಂದಸ್ಸನ್ನು ಗಮನಿಸಿಕೊಳ್ಳಿರಿ. ನಿಮ್ಮ ಕಲ್ಪನೆ ಚೆಲುವಾಗಿದೆ.

    ನಿಯತವೂ ಅಭಿಜಾತವೂ ಆದ ಛಂದಸ್ಸಿಲ್ಲದ ಕಾವ್ಯ-ಕಲ್ಪನ್ನೆಗಳೆಷ್ಟೇ ಚೆನ್ನಾಗಿದ್ದರೂ ಪದ್ಯಪಾನದ ಮೂಲೋದ್ದೇಶಕ್ಕೆ ಅವು ಹೊರಗು. ಹೀಗಾಗಿ ಅವುಗಳಿಗೆ ಇಲ್ಲಿ ಎಡೆಯಿಲ್ಲ. ಆದುದರಿಂದ ದಯಮಾಡಿ ಎಲ್ಲ ಕವನಸವನಿಗಳು ನಮ್ಮೀ ಜಾಲದಾಣದಲ್ಲಿಯೇ ಇರುವ ಛಂದಸ್ಸಿನ ಪ್ರಾಥಮಿಕಪಾಠಗಳನ್ನು ಗಮನಿಸಿಕೊಂಡೇ ಕವನಿಸಲು ಪ್ರಯತ್ನಿಸಬೇಕಾಗಿ ವಿನಂತಿ.

    • ಆರತಿಗೊರ್ವ ಮಗಳ್ದಿರ್
     ಕೀರುತಿಗೊರ್ವ ಮಗಂದಿರ್
     ನಾವೀರ್ವರ್ ನಮಗೀರ್ವರ್
     ತಾವಿಲ್ಲಂ ಮತ್ತೊರ್ವಂಗೆ
     ಪೊಸಮಾರುತಿಯೊಳಿಂತಿ
     ಪ್ಪುದು ಸುಖಸಂಸಾರಂ
     ಮಾತಾಪಿತರ್ ಪೊರೆ
     ಬಂಧುಬಳಗಂ ಪೊರೆ
     ಪೊರೆಯರ್ ಪೊರೆದವರಂ
     ಪರಿಯುವರಾರೀ ಪರೆ
     ಆಳರಸರೀ ಪರಿಯಲಿ
     ಪರಿತಪಿಸುವರ್ ನಿತ್ಯಂ
     ಸಂಕುಚಿತಂ ಸುಖಕರಂ
     ಕಷ್ಟಕಾರಣ ಪಿರಿದಂ

     ಪ್ರಥಮ ಪ್ರಯತ್ನ ತಪ್ತಿದಲ್ಲಿ ತಿದ್ದುವ ಕೃಪೆಯಿರಲಿ

     ಜಯಪ್ರಕಾಶ

  • ಸ್ವಲ್ಪ ಸವರಣೆಗಳು:-)
   ಆರತಿಯ ಹರಿವಾಣ…….
   …………………………………..
   ತೋರುವುದು ಹೆಂಗರುಳು ಪುರುಷರೊಳ್, ಗಂಡೆದೆಯು
   ನಾರಿಯೊಳ್…………………………..

   ಪದ್ಯದ ಭಾವ-ಕಲ್ಪನೆಗಳೆಲ್ಲ ಚೆನ್ನಾಗಿವೆ

   • ಗಣೇಶ್ ಸರ್,
    ಸರಿಪಡಿಸಿದ್ದೇನೆ

    ಆರತಿಯಹರಿವಾಣ ಬಿ೦ಬಿಪುದು ಸ್ತ್ರೈಣವ೦
    ಪೌರುಷದ ಭಾವವಿರ್ಪುದು ಕೀರ್ತಿಯೊಳ್
    ತೋರುವುದು ಹೆ೦ಗರುಳು ಪುರುಷನೊಳ್, ಗ೦ಡೆದೆಯು
    ನಾರಿಯೊಳ್, ಹೇಳಿಕೆಯು ಭಾವಯುಕ್ತ

 5. ಎಡವಟ್ಟಾಗಿರೆ ಮಕ್ಕಳ್
  ತೊಡಕದರಿಂ ಮಿಗಿಲದೇನೊ? ಅಪಕೀರ್ತಿಗೆ ದಲ್\
  ತುಡುಗಂ ತನಯಂ, ಸುತೆಯಿಂ
  ಕಡಮೆಯೆ? ಮೇಣ್ ಮಂಗಳಾರತಿಯೆ ತಾನಕ್ಕುಂ!!!

 6. ಕಂದಪ್ರಾಪ್ತಿಯ ಕಷ್ಟದ
  ಚಂದಂ ತಾನೇಕೆ ತೋರದಾದುದು ಸಖರೇ!
  ಕುಂದದ ನಲ್ಮೆಯ ನಿಮ್ಮೀ
  ಸುಂದರತರಪದ್ಯಪಾನದಾಂಪತ್ಯದೊಳಂ???

 7. ದೇವನ ಕರುಣೆಯು
  ಪಾವನ ವೆನುತಲಿ
  ಹಡೆದೆವು ಮಕ್ಕಳ ನಗು ನಗುತಾ
  ಏರಿತು ಸ೦ಖ್ಯೆಯ
  ಮೀರಿತು ಅ೦ಕೆಯು
  ಹುಯ್ಯಲು ಎದ್ದಿತು ಸದನದಲಿ

  ಸಚಿವನ ಮನದಲಿ
  ರುಚಿಸಿದ ಯೋಚನೆ
  ರಚಿಸಿತು ಸುಲಭದ ಶಾಸನವ
  ಹುಟ್ಟನು ಬೆಳೆಸಲು
  ಹುಟ್ಟದು ಬೆಳಗಲು
  ಮಟ್ಟಸ ವಾಯಿತು ಪರಿವಾರ
  ಹರೀಶ್ ಆತ್ರೇಯ

  • ಚೆನ್ನಾಗಿದೆ….ಮೊದಲ ಪದ್ಯದಲ್ಲಿ ಆದಿಪ್ರಾಸವನ್ನೂ ಸ್ವಲ್ಪ ಉಳಿಸಿಕೊಳ್ಳಲಾದೀತೇ? ಯತ್ನಿಸಿರಿ

 8. “ಆರತಿಗೂಬ್ಬ ಮಗಳು, ಕೀರ್ತಿಗೊಬ್ಬ ಮಗ” ಏಕೆ ?

  ಬರಿಯ ಆರತಿ ಏಕೆ ಹೆಣ್ಣಿಗೆ?
  ತರಲು ಬಲ್ಲಳು ಅವಳು ಕೀರುತಿ!
  ಇರುವುದೇನದು ಗಂಡು ಮಗುವಿಗೆ ಕೋಡು ತಲೆಯಲ್ಲಿ?
  ಎರಡು ಮಕ್ಕಳು ಗಂಡೊ ಹೆಣ್ಣೋ
  ಇರಲಿ ಸೊಗಸನು ತರಲಿ ನಮ್ಮಯ
  ಹರುಷಕವರೇ ದಾರಿ ದೀಪವು ಬಾಳದಾರಿಯಲಿ!

 9. ಇನ್ನೊಂದು, ಪಂಚಮಾತ್ರಾ ಚೌಪದಿಯಲ್ಲಿ. ಎರಡನೆ ಮತ್ತು ನಾಲ್ಕನೇ ಸಾಲಿನ ನಿಲುಗಡೆಯ ಬಗ್ಗೆ ಸ್ವಲ್ಪ ಅನುಮಾನವಿದೆ, ಹಾಗಿದ್ದರೂ, ಹಾಕುತ್ತಿದ್ದೇನೆ. ತಪ್ಪಿದ್ದರೆ ತಿದ್ದಿರಿ.

  ಹಿಂದಿದ್ದ ಹಾರಯ್ಕೆ ಎಂಟು ಮಕ್ಕಳು ಇರಲಿ
  ಇಂದು ಬದಲಾಗಿಹುದದೆರಡೆ ಸಾಕು;
  ಚಂದದಲಿ ಹೇಳಿಹುದು ಘೋಷಣೆಯ ಸರಕಾರ
  ಒಂದು ಆರತಿಗಿರಲಿ ಒಂದು ಕೀರುತಿಗೆ

 10. ಮತ್ತೊಂದು, ಚೌಪದಿಯಲ್ಲೇ:

  ಪದವರಿತು ನಡೆಯಲಿಕೆ ಎರಡು ಹೆಜ್ಜೆಯು ಬೇಕು
  ಚದುರ ದಿಟ್ಟಿಗೆ ಬೇಕು ಕಣ್ಗಳೆರಡು
  ಮದುವೆ ಕಳೆದೈದಾರು ವರುಷದಲಿ ಇರಬೇಕು
  ಹದುಳವನು ತರಲಿಕಿಬ್ಬರು ಮಕ್ಕಳು

 11. ಇದು ನೇರವಾಗಿ “ಆರತಿಗೊಬ್ಬಳು, ಕೀರ್ತಿಗೊಬ್ಬ” ಸಾಲಿಗೆ ಬರದಿದ್ದರೂ, ಮಗಳನ್ನೇಕೆ ಹೀಗಳೆಯಬೇಕೆಂಬ ಪ್ರಶ್ನೆ ಕೇಳುತ್ತಾ ಒಂದು ಕುಸುಮ ಷಟ್ಪದಿ:

  ಸುಳಿದಾಡುತಿಹ ಮಗಳು
  ಬೆಳಗುಕಣ್ಗಳ ಹುಡುಗಿ
  ಹೊಳೆವ ಮಿಂಚಿನ ನೋಟ ಅವಳದಿರಲು
  ಬೆಳೆವ ಪೈರಿನ ಸೊಬಗ
  ಮೊಳಕೆಯಲ್ಲಿಯೆ ನೋಡು
  ಹಳಿಯದೆಲೆ ಕೀರುತಿಯ ತಾರಳೆನ

 12. ಮೇಲೆ ಕತ್ತರಿಸಿ-ಅಂಟಿಸುವುದರಲ್ಲಾದ ತಪ್ಪನ್ನು ಮನ್ನಿಸಿ:

  ಇದು ನೇರವಾಗಿ “ಆರತಿಗೊಬ್ಬಳು, ಕೀರ್ತಿಗೊಬ್ಬ” ಸಾಲಿಗೆ ಬರದಿದ್ದರೂ, ಮಗಳನ್ನೇಕೆ ಹೀಗಳೆಯಬೇಕೆಂಬ ಪ್ರಶ್ನೆ ಕೇಳುತ್ತಾ ಒಂದು ಕುಸುಮ ಷಟ್ಪದಿ:

  ಸುಳಿದಾಡುತಿಹ ಮಗಳು
  ಬೆಳಗುಕಣ್ಗಳ ಹುಡುಗಿ
  ಹೊಳೆವ ಮಿಂಚಿನ ನೋಟ ಅವಳದಿರಲು
  ಬೆಳೆವ ಪೈರಿನ ಸೊಬಗ
  ಮೊಳಕೆಯಲ್ಲಿಯೆ ನೋಡು
  ಹಳಿಯದೆಲೆ ಕೀರುತಿಯ ತಾರಳೆನುತ!

 13. ’ಆರತಿಗೊಂದು ಕೀರುತಿಗೊಂದು’ ಸರ್ಕಾರ ಹೇಳಿದ್ದು. ನಮ್ಮ ಹಿರಿಯರು ಹೀಗೆ ಹೇಳಿರಬಹುದೆ ?

  ಮಕ್ಕಳಿರಲವ್ವ ಮನೆತುಂಬಯೆಂದುಹರಸಿದ
  ರಕ್ಕರೆಯಲಿ ಹೊಸಜೋಡಿಯ ಹಿರಿಯರು
  ಸಕ್ಕರೆಸವಿಯ ಬಾಳಲಾರತಿಗೆ ನಾಕಾರು
  ಮಿಕ್ಕವರು ಮನೆಯಕೀರುತಿಯ ಬೆಳಗಲೈ

 14. ನಾಲ್ಕನೇ ಸಾಲಿನಲ್ಲಿ ತಪ್ಪಾಗಿತ್ತು. ಮತ್ತೆ ಪೋಸ್ಟ್ ಮಾಡಿದ್ದೇನೆ.

  ’ಆರತಿಗೊಂದು ಕೀರುತಿಗೊಂದು’ ಸರ್ಕಾರ ಹೇಳಿದ್ದು. ನಮ್ಮ ಹಿರಿಯರು ಹೀಗೆ ಹೇಳಿರಬಹುದೆ ?

  ಮಕ್ಕಳಿರಲವ್ವ ಮನೆತುಂಬಯೆಂದುಹರಸಿದ
  ರಕ್ಕರೆಯಲಿ ಹೊಸಜೋಡಿಯ ಹಿರಿಯರು
  ಸಕ್ಕರೆಸವಿಯ ಬಾಳಲಾರತಿಗೆ ನಾಕಾರು
  ಮಿಕ್ಕವರು ಮನೆಯಕೀರುತಿ ಬೆಳಗಲೈ

  • ಗಾಯತ್ರಿಯವರೀಗ ಸರ್ವಾರ್ಥದೊಳ್ ಸಲ್ವ
   ಗಾಯತ್ರಿಯಾಗಲ್ಕೆ ಹರ್ಷ ನಮಗೆ|
   ಆಯವರಿಯುತ ಪದ್ಯಗತಿಯ, ಗಣತತಿಯ ನೀ-
   ವಾಯುವುದು ಪದಗಳನು ಸೊಗಸು ತೊಳಗೆ||

   (“ಗಾಯತ್ರೀ ಛಂದಸಾಂ ಮಾತಾ” ಎನ್ನುವ ಮಾತಿಲ್ಲಿ ಅನುಸಂಧೇಯ)
   ದ್ಯಮಾಡಿ ಮತ್ತೊಮ್ಮೆ ಪದ್ಯಪಾನದ ಪಾಠಗಳನ್ನು ಗಮನಿಸಿರಿ….ಬೇಕಾದರೆ ಫೋನಿಸಿರಿ…

 15. ಗಣೇಶರೇ, ನಿಮ್ಮ ಅಭಿಪ್ರಾಯಕ್ಕೆ, ಅಭಿಮಾನಕ್ಕೆ, ಸಲಹೆಗಳಿಗೆ ಧನ್ಯವಾದಗಳು. ತುಂಬಾ ದೊಡ್ಡದಾದ ಮಾತುಗಳನ್ನಾಡಿದ್ದೀರಿ, ದೊಡ್ಡದಾದ ಗುರಿ(ಟಾರ್ಗೆಟ್)ಯನ್ನೇ ಕೊಟ್ಟಿದ್ದೀರಿ. ಪ್ರಯತ್ನಿಸುತ್ತೇನೆ. ಮತ್ತೊಮ್ಮೆ ಧನ್ಯವಾದಗಳು.

 16. ಗತದಿನದೀ ಘೋಷಣೆಯುಂ
  ಹಿತಮಿತ ಸಂಸಾರದೊಳ್ಗೆ, ಒಬ್ಬಂಗೊಂದೇ ಕೆಲಸಂ
  ಜತನದಿ ತಿರುಚಿದೆ ವಾಕ್ಯಮ-
  ರಿತುಕಂದರು ಮಲ್ಟಿಟಾಸ್ಕು ಬಲ್ಲವರೆಂದುಂ ||
  🙂
  ಒಂದೇ ಮಗುವಿನ ಘೋಷಣೆ ಸದ್ಯದಲ್ಲಿ ಚಾಲ್ತಿಯಲ್ಲಿರುವುದು ಮಕ್ಕಳ “multi tasking” ನಿಂದಾಗಿ – ಕೀರ್ತಿ, ಆರತಿ ಎಲ್ಲವನ್ನು ಒಂದು ಕಂದನೇ ನಿಭಾಯಿಸಲೆಂದು.

  • ಕಾಂಚನರವರೆ,
   ೨ನೇ ಸಾಲಲ್ಲಿ ಒಂದು ಗಣ ಜಾಸ್ತಿಯಾಗಿದೆ.
   ಹೀಗೆ ತಿದ್ದಬಹುದೇನೋ?
   ಮಿತಸಂಸಾರದೊಳಗೊಬ್ಬಗೊಂದೇ ಕಾರ್ಯಂ

   • Thanks, Raveendra. Looks like I miscalculated.

    ಗತದಿನದೀ ಘೋಷಣೆಯುಂ
    ಮಿತಸಂಸಾರದೊಳಗೊಬ್ಬಗೊಂದೇ ಕಾರ್ಯಂ |
    ಜತನದಿ ತಿರುಚಿದೆ ವಾಕ್ಯಮ-
    ರಿತುಕಂದರು ಮಲ್ಟಿಟಾಸ್ಕು ಬಲ್ಲವರೆಂದುಂ ||

    • ಕಿಂಚಿತ್ಕಂದದ ಕೊರತೆಯ-
     ದಂಚಿಸಲೀ ಪದ್ಯಪಾನದಾಡುಂಬೊಲಮಂ|
     ಚಂಚಲ್ಲೀಲೆಯಿನದನಿದೊ
     ಕಾಂಚನ! ನೀ ನೀಗಿಸಿರ್ಪ ಪರಿಸಂಸ್ತುತಮೌ!!

 17. ಸನಾತನ ಧರ್ಮವನ್ನು ಉಳಿಸಿಕೊಳ್ಳುವಲ್ಲಿ ಹಿರಿಯ ಹೆಣ್ಣುಜೀವದ್ದೇ ಮುಖ್ಯಪಾತ್ರ. ಸಂದೇಹವಿದ್ದೆಡೆ ’ಹಿರಿಯ ಸ್ತ್ರೀ ಹೇಳಿದ್ದೇ ಪ್ರಮಾಣ’ ಎನ್ನುತ್ತದೆ ಶಾಸ್ತ್ರ. ಹಾಗೆ ಹಿರಿಯಳೆನಿಸುವಳು ಒಮ್ಮೆ ಆರತಿಯಾದ ಮಗಳೇ. ಹಾಗಾಗಿ:
  ಸಂಪ್ರದಾಯದ ವಿಷಯದೊಳಗೆಲ್ಲರನುಮಾನ
  ಕಂ ಪ್ರೀತಿಯಿಂದೀಯೆ ಪರಿಹಾರವಂ|
  ಸಂಪ್ರೀತ ಪಿರಿಯಳಾಗುವಳಾರತಿಯ ಮಗಳ
  ವಂ ಪ್ರಾಸಮಾತ್ರಕಂ ’ಕೀರ್ತಿಗೆ ಮಗಂ’||

  • ದುಷ್ಕರಪ್ರಾಸಮಂ ಸೊಗಸಾಗಿ ನಿರ್ವಹಿಸಿ
   ಪುಷ್ಕಲಪ್ರೀತಿಯಂ ತಂದಿರಲ್ತೆ|
   ಶುಷ್ಕತೆಯ ಸೋಂಕಿರದೆ ಚೆಲ್ವೆನಿಪ್ಪರ್ಥಮಂ
   ಪುಷ್ಕರಮನೋಜ್ಞಮಂ ಪುದಿದಿರಲ್ತೆ!!

   • ವಹ್ನಿಯ ಸೇರಿದ ಕಾಷ್ಟಂ
    ವಹ್ನಿಯು ತಾನುಮೆನುತೆಂದ ದೇವುಡು ಮಾತೊಲ್|
    ಸನ್ನಿಯು ಹಿಡಿದಿದ್ದೆನಗಂ
    ಸನ್ನಿಧಿ ದಕ್ಕಿತು ಭವಾಂಘ್ರಿ, ಕಷ್ಟಮಿನಿಲ್ಲಂ||

  • ಎಂದಿನ ರಂಗರ ಖದರಿರದಿದ್ದರು
   ಸುಂದರವಾಗಿಹುದಿದು ನಿಜದಿ |
   ತಂದಿದೆ ಸಾಜತೆಯಸಮರು ಕಂದರ
   ದೆಂದೇ ತೋರುವ ಘೋಷಣೆಗೆ ||

 18. ಕೀರ್ತಿ, ಆರತಿ ಪಡೆಯಲು ಮಗ-ಮಗಳು ಇರಲೇಬೇಕೆಂದು ಘೋಷಣೆಯನ್ನು ತಪ್ಪಾಗಿ ತಿಳಿದು ಹತಾಶನಾದ ಮಾರುತಿಭಕ್ತ ಭ್ರಹ್ಮಚಾರಿಯ ಪೇಚಾಟ, ಲಘುಭಾವದಿಂದ, ದೋಧಕವೃತ್ತ ದಲ್ಲಿ :

  ಆರತಿ ಗೊಬ್ಬಳು ಕೀರುತಿಗೊಬ್ಬಂ
  ದಾರಿಯ ಕಾಣದೆ ಹೋದನದೊಬ್ಬಂ
  ಆರತಿ ಕೀರುತಿ ಇಲ್ಲದೆ ಹಬ್ಬಂ
  ಮಾರುತಿ ಭಕ್ತ ಹತಾಶನು ಸುಬ್ಬಂ

 19. ಸುಬ್ಬನದಾರೆಲೆ ಮಿತ್ರವರೇಣ್ಯಾ??
  ತಬ್ಬುತಲಿರ್ಪುದು ಶಂಕೆ ಭರಣ್ಯಾ!
  ಕಬ್ಬದೆ ಹಾಸ್ಯಕೆ ದೋಧಕಗಣ್ಯಾ!
  ಮಬ್ಬನೆ ನೀಗಿದೆಯಯ್ ರಸರಣ್ಯಾ!!

  ತುಸುಮಟ್ಟಿಗೆ non-sense poetry ಎಂಬಂಥ ಈ ಪದ್ಯವು ಚಂದ್ರಮೌಳಿಯವರ ಪದ್ಯದ ಅಂತ್ಯಪ್ರಾಸವನ್ನೇ ಹಿಡಿದು ಸಾಗಿದ ಅದೊಂದು ಬಗೆಯ ಮುಕ್ತಪದಗ್ರಸ್ತ(ಬಿಟ್ಟ ಪದವನ್ನು ಹಿಡಿದು ಮುಂದಿನ ಪದ್ಯ/ಪಾದವನ್ನು ರಚಿಸುವ ಚಮತ್ಕಾರ.
  ಇದನ್ನು ತಮಿಳಿನ ಅಂದಾದಿ ಎಂಬ ರಚನೆಗಳಲ್ಲಿಯೂ ಕಾಣಬಹುದು). ದೋಧಕವು ಹಾಸ್ಯಕ್ಕೆ ಚೆನ್ನಾಗಿ ಒಗ್ಗುವುದೆಂದು ಪ್ರಸಿದ್ಧನಾದ ಆಲಂಕಾರಿಕಾಗ್ರಣಿ ಮಮ್ಮಟನು ತನ್ನ “ಕಾವ್ಯಪ್ರಕಾಶ”ವೆಂಬ ಲಾಕ್ಷಣಿಕಗ್ರಂಥದಲ್ಲಿ ಒಕ್ಕಣಿಸುತ್ತಾನೆ.

  • ರಣ್ಯವದೇನಿದು ಪದ್ಯಕೆ ಮುಕ್ತಂ ??
   ಪುಣ್ಯವಶಾತ್ತಿವ ದೇವರ ಭಕ್ತಂ |
   ಗಣ್ಯನೆಯಾದರು ಭಾಮಿನಿರಿಕ್ತಂ
   ಮಾನ್ಯಗೃಹಸ್ಥರಿಗೂ ವ್ಯತಿರಿಕ್ತಂ ||
   🙂
   ಇದನ್ನು nonsense ರೀತಿಯಲ್ಲೆ ಮುಂದುವರಿಸಿದ್ದೇನೆ. ದೋಧಕದಲ್ಲೆ ಮುಂದುವರಿಸಲು “ರಣ್ಯ” ವೊಂದೇ ಸಾಧ್ಯ. ಅಂಗ್ರೇಜಿಯ limmericks ನಲ್ಲಿ ಕೆಲವೊಮ್ಮೆ ಪ್ರಾಸಕ್ಕೆ ಹೊಂದಿಸಲು ಹಾಸ್ಯದಲ್ಲಿ ಕೆಲವು ಪದಗಳನ್ನು ಕೊಂಚ ಭಿನ್ನಗೊಳಿಸುವುದುಂಟು. ಇಲ್ಲಿನ ಕೆಲ ಪದಗಳು ಅಂತೆಯೇ ಇರಬಹುದು.

   • ಹಹಾ ಸೊಗಸಾಗಿದೆ ಆಟ… ಇಗೊಳ್ಳಿ ನಂದೊಂದು

    ರಿಕ್ತಮಿದೈದಿತು ಮಂಡೆಯು ದೇವಾ
    ಭಕ್ತನಹೆಂ ಕರುಣಾರಸ ಭಾವಾ
    ಶಕ್ತ ಸುಹಾಸ್ಯಕಮುತ್ತರವೀವಾ
    ಶಕ್ತಿಯ ಪಾಲಿಸು ಭಕ್ತರ ಕಾವಾ

    • ಇದು ನಿಜಕ್ಕೂ ಮಜಾ!!!

    • ಆಟದುತ್ಸಾಹದಲಿ ಸರತಿ ಹಾರಿದೆ ಕ್ಷಮಿಸಿ… 🙂

     ಕಾವಾತಂ ಕೈ ಚೆಲ್ಲುತ ಕೂಡಲ್
     ಮೇವೆಲ್ಲೈ ತುರುಕರುಗಳಿಗೀಗಳ್
     ಭಾವಾ, ತಳ್ಳೈ ನೋಟೊಂದಿತ್ತಲ್
     ಸಾವೆನ್ ಹೊಟ್ಟೆಯು ಚುರುಚುರುಗುಟ್ಟಲ್

     ಕಾಸು ಬಿಚ್ಚಲು ನಿರಾಕರಿಸುತ್ತಿರುವ ಅಕ್ಕನ ಗಂಡನಿಗೆ ಉಡಾಳ ಬಾಮೈದನ ಮೊರೆ

     • ಇಂಥದ್ದಕ್ಕಾದರೆ ’ಕಾವ್ಯಾ’ವೇಶ ಬೇಡ ಅಂದರೂ ಬರುತ್ತೆ 🙂

      ಗುಟ್ಟೊಳ್ ಬಚ್ಚಿಟ್ಟಾ ತಂಬಿಟ್ಟಂ
      ಛಟ್ಟನೆ ಹಾರಿಸಿ ಬಿಟ್ಟಂ ಕಿಟ್ಟಂ
      ಸಿಟ್ಟಿಂದಟ್ಟುತ ಸುಬ್ಬಾ ಭಟ್ಟಂ
      ದಟ್ಟಿಯು ತೊಡರಲ್ ಬಿದ್ದಂ ಕೆಟ್ಟಂ
      (ಅಥವಾ ದುಷ್ಟಶಿಕ್ಷೆಯಾಗಲೇ ಬೇಕೆಂದರೆ, “ಪೆಟ್ಟಂ ಕೊಟ್ಟಂ ಕಿಟ್ಟಂ ಕೆಟ್ಟಂ”)

     • ಕೆಟ್ಟವನಾಗಿಹ ನಾಯಕ ನೋಡಾ
      ಬಿಟ್ಟಿಹ ಮಾನವ ಬೇಡುವ ಲೀಡಾ (lead ಆ)
      ಮುಟ್ಟಿದುದೆಲ್ಲವ ತಿನ್ನುತ ಸೋಡಾ
      ಚಟ್ಟನೆ ನುಂಗುವ ಮೆಲ್ಲುತ ಪೇಡಾ

     • ಪೇಡವೆ೦ಬುದನು, ಹಾಲೊಳು ಕಾಸಿs
      ಕೂಡಿಸಿ ಸಕ್ಕರೆ ಹದದೊಳಗಿ೦ಗಿಸಿ
      ಮಾಡಿದ ಪರಿಮಳ ಮನೆಯೊಳು ಸೂಸೆs
      ಬೇಡ ಪಥ್ಯ ಮಧು ಮೇಹವೆ ವಾಸಿs

     • ಈ ಸರಣಿ ಶುರುವಿನ ದೋಧಕದಿಂದ ಸರಿದರು, ಮಾತ್ರೆಗಳ ಚೌಕಟ್ಟು ಇನ್ನೂ ಉಳಿದಿದೆ. ಇನ್ನೊಂದು ಪದ್ಯ ದೋಧಕ ವೃತ್ತದಲ್ಲಿ (ನಾನನ ನಾನನ ನಾನನ ನಾನಾ)::
      ವಾಸಕೆ ಹಳ್ಳಿಗೆ ಹೋಗುವ ಬಾರಾ
      ಬೀಸುವ ಗಾಳಿಯ ತಂಪಿಗೆ ನೀರಾ
      ಪೂಸಿದ ಸಂಪಗೆ ಮಲ್ಲಿಗೆ ಸಾರಾ
      ಮಾಸಲಿ ಪಟ್ಟಣ ವಾಸನೆಯಾರಾ

   • ನಾನ್ಸೆನ್ಸಾದೊಡಮೀಪರಿ ಸೆನ್ಸಂ
    ಕನ್ಸೆನ್ಸಿಗೆ ತಂದಿರುವುದು ವಿನ್ಸಂ(win-some)|
    ಸೆನ್ಸೇಷನಲೆನಿಸುವ ಬಗೆಯೊಂದಂ
    ಕನ್ಸೆಷನಿರೆ ಕವನಕಿದಕ್ಕಂದಂ!!

 20. ಸುತನೊಬ್ಬಂ ಗಡ ಬುದ್ಧಿನಾಮ ಚತುರಂ ಲೋಕಾರ್ಜನಕ್ಕಾಗುವನ್
  ಸತತಂ ದ್ವಂದ್ವನಿವಾರಣಾಪರಿಣತಂ ಸಂಕಷ್ಟದುತ್ಖಾತಕಂ
  ನುತಳೈ ನಂದಿನಿ ಭಾವನಾಮ ತರುಣೀ ಸಂವೇದಿನೀ ಚಾರಿಣೀ
  ಹಿತದೊಳ್ ಪೋಷಿಸಲೀರ್ವರಂ ಜತನದಿಂ, ಲೋಕೋತ್ತರಂ ಸಲ್ಲದೇನ್?

  [ಬುದ್ಧಿ ಭಾವಗಳಿಬ್ಬರೇ ಸುತಪುತ್ರಿಯರು ಎಂದು ಮತ್ತೇಭದಲ್ಲಿ ಹೇಳುವ ಪ್ರಯತ್ನ. ಚಾರಿಣಿ = ಸೌಂದರ್ಯವತಿ ಎಂಬ ಅರ್ಥದಲ್ಲಿ ಉಪಯೋಗಿಸಬಹುದೇ? ನಂದಿನಿ = ಮಗಳು, ಉತ್ಖಾತ = ಕೀಳುವುದು]

  • ಭಾವ ಚೆನ್ನಾಗಿದೆ. ಆದರೆ ಸ್ವಲ್ಪಮಟ್ಟಿಗೆ ಹಳಗನ್ನಡದಲ್ಲಿ ಪದಶುದ್ಧಿ ಬೇಕು. ಉದಾ: …..ಬುದ್ಧಿಯೆಂಬ ಚದುರಂ, ಭಾವಮೆಂಬ ತರುಣಿ ಸಲ್ವಳ್ ಸ್ವಸಂವೇದ್ಯೆ ದಲ್. ( ಹಳಗನ್ನಡದಲ್ಲಿ ಸಂಬೋಧನಕ್ಕಲ್ಲದೆ ಉಳಿದಂತೆ ನಾಮಪದಗಳಿಗೆ ದೀರ್ಘಾಂತ್ಯವನ್ನು ಬಳಸುವ ಅವಕಾಶವಿಲ್ಲ)

 21. ಆರತಿಯಲ್ತೇ ಕೀರ್ತಿಗೆ
  ಗೌರವ, ಬಾಧ್ಯತೆಯುಮ೦ತೆ ತಾ ಕೀರ್ತಿಯೊಳು
  ಸಾರಿಹರೆರಡರ ಬ೦ಧ೦
  ಪಾರಾಗಲ್ಕೆ ಜನಸ೦ಖ್ಯೆಯಾಸ್ಫೋಟವನು೦

  ಭಾಧ್ಯತೆಯುಮ೦ತೆ ತಾ ಕೀರ್ತಿಯೊಳು = ಸಾಧನೆಯ ರ೦ಗಕ್ಕೆ ಇಳಿಯುವ ಮುನ್ನವೆ ಆರತಿ ಮಾಡುವ ಸ೦ಪ್ರದಾಯವನ್ನು ಕೀರ್ತಿಗಿರುವ ಭಾದ್ಯತೆ ಎ೦ದಿದ್ದೇನೆ

  • ಕಾಂಚನರ ಕಂದಕ್ಕೆ ಸೋಮರ ಕಂದ ಒಳ್ಳೆಯ balance ತಂದಿದೆ:-)

 22. ಮತ್ತೇಭ ವಿಕ್ರೀಡಿತದಲ್ಲಿ ಅಷ್ಟೇನೂ ಅರ್ಥಸ್ವಾರಸ್ಯವಿರದ ಪದ್ಯ ::

  ಸರಿತಪ್ಪೆಂಬುವುದೇನುಮಿಲ್ಲಮಿದರೊಳ್ ಪೇಳಲ್ಕದೀಘೋಷಣಂ
  ತರುತಾಕೊಟ್ಟಿಹಬೀಜಮೆಲ್ಲವೊಡೆಯಲ್ ಜಾಗಂಗಳೆಲ್ಲಿರ್ಪುದೈ |
  ಪರಿಮಾಣಂಗಳು ಗಂಡುಹೆಣ್ಣಸಮದೊಳ್ ಬೇಕೆಂಬುದೀಯಾಶಯಂ
  ವರಸಂಸಾರಗಳೆಲ್ಲಮೂ ಪಡಪಿನೊಳ್ ಸಾಗಲ್ಕೆ ದೇಶೋತ್ತರಂ ||

  ಪಡಪು = ಗಳಿಕೆ, ಲಾಭ, ಸಂಪತ್ತು, ಹಿರಿಮೆ, ಉತ್ಸಾಹ, ಸಡಗರ, ಇತ್ಯಾದಿ.

  • ಸೊಗಸಾಗಿರ್ಪ ನವೀನಗನ್ನಡಮಯಂ ಮತ್ತೇಭವಿಕ್ರೀಡಿತಂ
   ಮುಗುಳೆಂತಂತೆ ಮಲರ್ದು ಸರ್ವದಿಶೆಯೊಳ್ ಸೌರಭ್ಯಮಂ ಬೀರಿರಲ್|
   ಪಗಲೊಳ್ ಪೂರ್ಣಶಶಾಂಕನಯ್ದಿರೆ ಜಗಕ್ಕೆಂತಂತು ಸಾರಳ್ಯಶೋ-
   ಭೆಗಳಂತಾದುದು ಖೆಡ್ಡದಲ್ಲಿ ಪಲಗಲ್ಕೀ ಕಾಡ ದಂತಾವಳಂ||

 23. ಕಂದ ಪದ್ಯದಲ್ಲಿ ನನ್ನ ಕಲ್ಪನೆಯನ್ನು ಹಿಡಿದಿಡುವ ಮೊದಲ ಪ್ರಯತ್ನ.

  ಕೀರುತಿಯಂ ತರಲ್ ಪುತ್ರ
  ನೇಕಿರುತಿರಲು ಸರಸತಿಯ ದಯೆಯೆಲ್ಲರೊಳುಂ
  ಆರತಿಗೋ ಕೀರುತಿಗೋ
  ಪೆರುವೆವ್ ನಾವೊಂದನೆಂಬರಿಂದು ಚದುರೆಯರು

  • ನಿಮ್ಮ ಪ್ರಯತ್ನ ಅಭಿನಂದನೀಯ. ಆದರೆ ದಯಮಾಡಿ ಮೊದಲಿಗೆ ಕಂದಪದ್ಯದ ಛಂದೋಲಕ್ಷಣಗಳನ್ನು ಮತ್ತೊಮ್ಮೆ ಹೋಲಿಸಿನೋಡಿಕೊಳ್ಳಿರಿ. ಏಕೆಂದರೆ ಹಲವೆಡೆ ಸವರಣೆಗಳು ಬೇಕಾಗಿವೆ. ಪದ್ಯದ ಅರ್ಥ ಮಾತ್ರ ಚೆನ್ನಾಗಿದೆ. ಭಾಷೆಯೂ ಪರವಾಗಿಲ್ಲ. ಆದರೆ ಮತ್ತೂ ಹೆಚ್ಚಾಗಿ ಹಳಗನ್ನಡವಿದ್ದಲ್ಲಿ ಕಂದದ ರಚನೆ ಸುಲಭವೂ ಆದೀತು, ಸೊಗಸೂ ಆದೀತು:-)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)