Aug 212011
 

ಭಾಮಿನಿಯಲ್ಲಿ ಇನ್ನೊಂದು ಸಮಸ್ಯೆ 🙂
ಅಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು

  27 Responses to “ಸಮಸ್ಯೆ: ಅಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು”

  1. ಸ್ತಬ್ಧವಾದಪರಾಹ್ನದಲಿ ಪ್ರ –
    ಕ್ಷುಬ್ಧ ಮನಸಿನ ಸಾಹಸಿಗನವ
    ಲಬ್ಧವಾಗೆಂ ಬಗೆದು ಮುಳುಗಿದ ಹಡಗಿನಾ ಸಿರಿಯಾ |
    ಅಬ್ಧಿಜಾಲಿಪ ಪರಿಕರವ ನಿ –
    ಶ್ಶಬ್ದ ಗುಪ್ತತೆಯಲ್ಲೆ ಹೊಂದಿಸಿ
    ಅಬ್ಧಿಯೊಳು ಮುಳುಗಿದನು ಭಾಸ್ಕರನುರಿವ ಬಿಸಿಲಿನೊಳು ||

    ಭಾಸ್ಕರನುರಿವ = ಭಾಸ್ಕರನ + ಉರಿವ

  2. ಇನ್ನೊಂದು ಪರಿಹಾರ ::

    ಕ್ಷುಬ್ಧಮನಕಾರಕನದವನೆಂ
    ಲಬ್ಧವಾದಪವಾದಗಳ ಹಾ –
    ಲಬ್ಧಿತನಯನು ಸಹಿಸಿದಾ ಬಹು ಕಾಲಗಳ ಬಳಿಕ
    ಸ್ತಬ್ಧ ಶೀತಲ ಗುಣಗಳಂ ಬಿಡೆ
    ದಬ್ಧಬದ್ಬದ ಶಬ್ದ ಮಾಡುತ
    ಲಬ್ಧಿಯೊಳು ಮುಳುಗಿದನು ಭಾಸ್ಕರನುರಿವ ಬಿಸಿಲಿನೊಳು ||

  3. ಹದ್ದು ಮೀರಲು ದ್ರೋಹ, ಹಗರಣ
    ಬದ್ಧತೆಯು ಕಾಣದಿರೆ ದೇಶದಿ
    ದಗ್ಧವಾಗುತ್ತಿರಲು ಸಾತ್ವಿಕ ಮೌಲ್ಯ ಸರ್ವತ್ರ
    ಎದ್ದ ಕ್ಷಾತ್ರವೊ ದಂಗೆಯೋ ಜನ
    ವದ್ದೆ ಖಳರನು ಪದಹತಿಯ ರಜ
    ದಬ್ಧಿಯಲಿ ಮುಳುಗಿದನು ಭಾಸ್ಕರನುರಿವ ಬಿಸಿಲಿನಲಿ

  4. ಇನ್ನೂ ಹಲವುರೀತಿಯಲ್ಲಿ ಪ್ರಯತ್ನಿಸಬಹುದು..
    ಕರ್ಣಾವಸಾನದ ಸಂದರ್ಭದಲ್ಲಿ…
    ಶೋ-ಕಾಬ್ದಿಯಲಿ ಮುಳುಗಿದನು ಭಾಸ್ಕರನುರಿವ ಬಿಸಿಲಿನಲಿ

    ಉರಿವಸೂರ್ಯ ಮೇಘಾವೃತನಾದಾಗ…
    ಅಂಬು-ದಾಬ್ಧಿಯಲಿ ಮುಳುಗಿದನು ಭಾಸ್ಕರನುರಿವ ಬಿಸಿಲಿನಲಿ (ಅಂಬುದ+ಅಬ್ಧಿ)

  5. ಮೌಳಿಯವರೆ,
    'ಬ್ಧ' ದ ಆದಿಪ್ರಾಸಕ್ಕೆ 'ಬ್ಧ' ಅಥವಾ 'ಬ್ದ' ಗಳನ್ನೇ ಬಳಸಬೇಕೆಂದು ಸಿಕ್ಕಿಹಾಕಿಕೊಂಡು, ಬಹಳ ಕಷ್ಟ ಪಟ್ಟೆ. 'ಬ್ಧ' ಗೆ 'ದ್ದ' ಕೂಡ ಹಾಕಬಹುದೆಂದು ತಿಳಿಯಲಿಲ್ಲ 🙁

  6. ರಾಮ್,
    ಹಡಗಿನ ನಿಧಿ ಹುಡುಕುವ ಪರಿಹಾರ ಬಹಳ ಚೆನ್ನಾಗಿವೆ 🙂
    ಆದರೆ ೨ನೆ ಪರಿಹಾರ ಪೂರ್ಣವಾಗಿ ಅರ್ಥವಾಗಲಿಲ್ಲ, ಸ್ವಲ್ಪ ಬಿಡಿಸಿ ಹೇಳಿ

    ಚಂದ್ರಮೌಳಿಯವರೆ,
    ಪರಿಹಾರ ಚೆನ್ನಾಗಿದೆ 🙂
    ಜನರು ಖಳರನು ಒದೆಯೆ ಪಾದದ ರಜದಬ್ಧಿಯಲಿ ಸೂರ್ಯ ಮುಳುಗಿದ… ಎನ್ನುವುದು ಈಗ ನಡೆಯುತ್ತಿರುವ ವಿದ್ಯಮಾನಕ್ಕೆ ಹಾಸು ಹೊಕ್ಕಾಗಿದೆ

  7. ನನ್ನ ಪರಿಹಾರ:

    ಕ್ಷುಬ್ಧಗೊಂಡಿಹ ಪಾರ್ಥನಂತ್ಯಕೆ
    ಯುದ್ಧದಲಿ ಜಯದ್ರತನನಡಗಿಸೆ (ಶಿಥಿಲ ದ್ವಿತ್ವವಾಗಿದೆ)
    ಬದ್ಧವಾಯಿತು ಕಪಟವೆಸಗಲು ಕೌರವರ ಪಡೆಯು
    ಲಬ್ಧನಾಗಲು ಪುತ್ರಘಾತಕ
    ಸಿದ್ಧಕೃಷ್ಣನ ಮಾಯೆಲೀಲೆಯ
    ಅಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು

    ಈ ರೀತಿ ಸಂಧಿ ಮಾಡದೆ ಓದಿಕೊಳ್ಳಬಹುದೇ? ಸಂಧಿಮಾಡಿದರೆ ಒಂದಕ್ಷರ ಕಡಿಮೆಯಾಗುತ್ತದೆ. ಅಥವಾ…

    ಸಿದ್ಧಕೃಷ್ಣನ ಮಾಯೆಲೀಲೆಯೆ-
    ನಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು

    ಮಾಯಲೀಲೆಯೆನಬ್ಧಿ -> ಮಾಯಲೀಲೆಯೆನೆ ಅಬ್ಧಿ -> ಮಾಯಲೀಲೆ ಎನ್ನುವ ಅಬ್ಧಿ

  8. ರಾಮ್
    ಹಾಲಬ್ಧಿತನಯ ಎಂದರೆ ಆಮೆ ಆಲ್ಲವೆ?
    'ಈಗ ಹೊತ್ತಿತು ದಂಡದೀಪವು ಮಂಕು ಬುಧ್ಧಿಯೊಳು'
    🙂

  9. ಈ ಪೂರಣದಲ್ಲಿ, ಮುಳುಗಿಸುವುದರ ಪರಿಣಾಮ ಎರಡುರೀತಿಯದಾಗಿದೆ.

    ಜನ
    ವದ್ದೆ ಖಳರನು ಪದಹತಿಯ ರಜ
    ದಬ್ಧಿಯಲಿ … ಜನ ಖಳರನ್ನು ಕಾಲ್ತುಳಿತದ ಧೂಳಿನ ಸಮುದ್ರದಲ್ಲ್ಲಿ ಮುಳುಗಿಸಿದರು(ಅದ್ದೆ)..(೧) ಅದೇ ಧೂಳಿನ ಸಮುದ್ರಲ್ಲಿ ಮುಳುಗಿ, ಸೂರ್ಯ ಉರಿಬಿಸಿಲಿನಲ್ಲಿಯೂ ಮರೆಯಾದ (೨)

    ಸಿದ್ಧಕೃಷ್ಣನ ಭ್ರಾಂತಿಕರ ಮೋ
    ಹಾಬ್ಧಿಯೊಳು….(ಸಂಧಿ ಜರಾಸಂಧನ ಬಾಧಾನಿವಾರಣೆ):)

    ಹಾಲು(ಕನ್ನಡ) ಅಭ್ಧಿ (ಸಂಸ್ಕೃತ) – ಹೆಪ್ಪುಹಾಕಬಾರದು 🙂

    ಅಬ್ಧಿ,ಲಭ್ಧಿ,ಸಿದ್ಢ,ಬದ್ಧ…ಹೀಗೆಯೇ ಪದಗಳನ್ನು ಪ್ರಾಸಸ್ಥಾನದಲ್ಲಿ ತಂದರೆ ಅದು ಶಾಸ್ತ್ರಿಯ. ಕೆಲವುಸಲ ’ಳ’ ’ಲ’ ಯೋರ್ನಭೇದ: ಅಂಥ ಸೌಲಭ್ಯವನ್ನನುಸರಿಸಿ, ಪ್ರಾಸಸ್ಥಾನ ನಿರ್ಧಾರ ಉಚ್ಛಾರಶಬ್ದರೂಪದಿಂದಲೂ ಆಗುವುದರಿಂದ, 'ಬ್ಧ' ಅಥವಾ 'ಬ್ದ' ಈ ಬಳಕೆ ನವೋದಯದಲ್ಲಿ ರೂಢಿಗೆ ಬಂದಿದೆ. ಕೆಲವು ಕವಿಗಳ ಅಂಥ ಪ್ರಯೋಗಗಳಿವೆ. ಉದಾ: ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ/ಸ್ಪರ್ಧಿಯೆ ತ್ರಿವಿಕ್ರಮಗೆ – ಮಂಕುತಿಮ್ಮ. ಅರ್ಥಸಿದ್ಧಿಗಾಗಿ, ನನ್ನಪದ್ಯದಲ್ಲಿ ಎರಡನ್ನೂಬಳಸಿದ್ದೇನೆ. ನೀವು ಮಹಾಪ್ರಾಣಯುಕ್ತ ಪದಗಳನ್ನೇ ಬಳಸಿರುವುದು ಗಮನೀಯ.

  10. ಸೋಮ,

    ಹಾಲಬ್ಧಿ ತನಯ ಅಂದರೆ, ಚಂದ್ರ ಅಂತ ಮಾಡಿದ್ದು (ಕ್ಷೀರಸಾಗರದಲ್ಲಿ ಮಥನದಲ್ಲಿ ಹುಟ್ಟಿದವನು). ಚಂದ್ರನ ಗುಣಗಳಿಂದಲೇ ಜನರ ಮನಸ್ಸು ಕ್ಷೋಭೆಗೊಳ್ಳುತ್ತದೆ ಅಂಬ ಅಪವಾದ ಕೇಳಿ ಸಾಕಾದ ಚಂದ್ರ, ತನ್ನ ಸ್ತಬ್ಧ ಶೀತಲ ಗುಣಗಳನ್ನು ಕಳೆದುಕೊಳ್ಳಲು ಬಿಸಿಲಿನಲ್ಲಿ (ಬಿಸಿಯಾದ) ಅಬ್ಧಿಯಲ್ಲಿ ಮುಳುಗಿದ ಅಂತ ಪರಿಹಾರ.
    ಇದು ಅಷ್ಟು ಸರಿಯಾದ ಪರಿಹಾರವಲ್ಲ ಅಂತ ನನಗೇ ಅನಿಸುತ್ತಿದೆ !!!

    ಮೌಳಿಯವರೆ,
    ಕ್ಷೀರಾಬ್ಧ್ಹಿ ಎಂದು ಹೊಂದಿಸಲು ಬಹಳ ಪ್ರಯತ್ನವಂತೂ ಪಟ್ಟೆ. ಆದರೆ ಅದು ಛಂದಸ್ಸಿಗೆ ತೊಡಕಾಗುತ್ತಿತ್ತು 🙂

  11. ಸೋಮ – ಜಯದ್ರಥನ ಮರಣದ ಪರಿಹಾರ ಬಹಳ ಚೆನ್ನಾಗಿದೆ

  12. ರಾಮಚಂದ್ರರೇ
    ನೀವುಹೇಳಿದಂತೆ…"
    ಕ್ಷೀರಾಬ್ಧಿ ಎಂದು ಹೊಂದಿಸಲು,," ಹೀಗೆಮಾಡಬಹುದೇ
    ಲಬ್ಧವಾದಪವಾದದಿಂ ಕ್ಷೀ
    ರಾಬ್ಧಿತನಯನು ಸಹಿಸುತಿರೆ ಬಹು ಕಾಲಗಳ ಬಳಿಕ

  13. ಮೌಳಿಯವರೆ,
    ಎರಡನೇ ಸಾಲು ಸರಿಯಾದರೂ, ನಂತರದ ಮೂರನೇ ಸಾಲಿನಲ್ಲಿ ಮೊದಲ ಮಾತ್ರೆ ದೀರ್ಘವಾಗಿ ತೊಂದರೆಕೊಡುತ್ತದೆ – "ಕ್ಷೀರಾಬ್ಧಿ" ಯ ಬದಲು "ಕ್ಷೀರಬ್ಧಿ" ಯಾದರೆ ಆಗಬಹುದು. ಸಂಸ್ಕೃತದಲ್ಲಿ "ಕ್ಷೀರಬ್ಧಿ" ಸರಿಯಾಗುವುದಿಲ್ಲ ಅನ್ನಿಸುತ್ತದೆ – ಅಲ್ಲವೇ?

  14. ಮೌಳಿಯವರೇ,
    'ಜನ ಖಳರನ್ನು ಕಾಲ್ತುಳಿತದ ಧೂಳಿನ ಸಮುದ್ರದಲ್ಲ್ಲಿ ಮುಳುಗಿಸಿದರು(ಅದ್ದೆ)' ಈ ಅರ್ಥವೂ ಚೆನ್ನಾಗಿದೆ.

    ಸಿದ್ಧಕೃಷ್ಣನ ಭ್ರಾಂತಿಕರ ಮೋ
    ಹಾಬ್ಧಿಯೊಳು….(ಸಂಧಿ ಜರಾಸಂಧನ ಬಾಧಾನಿವಾರಣೆ):)
    ಈ ಪರಿಹಾರ ಚೆನ್ನಾಗಿದೆ. ನಾನೂ ಕೂಡ "ಮೊಹಾಬ್ಧಿ, ಲೀಲಾಬ್ಧಿ, ಮಯಾಬ್ಧಿ" ಸ್ವಲ್ಪ ಈ ರೀತಿಗೆ ಹತ್ತಿರದ ಪರಿಹಾರ ಯೋಚಿಸಿದ್ದೆ ಆದರೆ 'ಹಬ್ಧಿ', 'ಹಾಬ್ಧಿ' ಎರಡರಲ್ಲೂ ಮಾತ್ರೆಗಳ ವ್ಯತ್ಯಾಸವಿದೆ ಎಂದು (ಭ್ರಮೆಯಲ್ಲಿ) ಅನ್ನಿಸಿಬಿಟ್ಟಿತ್ತು.

    ರಾಮ್ :),
    ಚಂದ್ರನೇ ಸರಿ ನಿಮ್ಮ ಪರಿಹಾರ ಬಹಳ ಚೆನ್ನಾಗಿದೆ

    ನನಗೆ ಆಮೆ ಅನ್ನಿಸಿದ್ದು ಏಕೆಂದರೆ "ದಬ್ಧಬದ್ಬದ" ಶಬ್ದ ಆಮೆಯು ನೀರಿನಲ್ಲಿ ಮುಳುಗುವಾಗ ಮಾಡಿರುವುದು ಕೇಳಿದ್ದೇನೆ… (scuba dive, kayaking ಮಾಡುವಾಗ) . ಆಮೆಯು ಸಮುದ್ರಮಂಥನಕ್ಕೆ ನೆರವು ಮಾಡಿಕೊಟ್ಟು ದೇವ ದಾನವರಲ್ಲಿ ಅಮೃತವನ್ನು ಕುರಿತು ಕ್ಷೋಭೆಯುಂಟಯಿತು (ಎಂದು ಎಳೆದು) ಹಾಗು ಆಮೆ ಸಮುದ್ರ ಜನ್ಯ (ಕ್ಷೀರಬ್ಧಿ ಎಂದು ಎಳೆದು)… ಒಟ್ಟಿನಲ್ಲಿ ನನ್ನ ಅನುಭವ… ಅದರಲ್ಲೂ "ದಬ್ಧಬದ್ಬದ ಶಬ್ದ" ಮಿಕ್ಕೆಲ್ಲ ಔಚಿತ್ಯವನ್ನು ಮರೆಮಾಡಿತು 🙂

  15. ರಾಮಚಂದ್ರರೇ

    "ಕ್ಷೀರಾಬ್ಧಿ" ಸರಿಯಾದ ಪ್ರಯೋಗ. "ಕ್ಷೀರಾಬ್ಧಿ" ಗುರು-ಗುರು-ಲಘು; ತಗಣ. ರಬ್ದಿ ರಾಬ್ಧಿ ಎರಡರಲ್ಲೂ ಮೊದಲಿಗೆ ಗುರ್ವಕ್ಷರವೇ..

  16. ಸರಿ. ಬೇಡದ ಗೊಂದಲದಲ್ಲಿ ನಾನು ಸಿಲುಕಿದ್ದೆ. 🙂 ಸರಿಯಾದ ಪರಿಹಾರ ಹೀಗಿದೆ ::
    ಕ್ಷುಬ್ಧಮನಕಾರಕನದವನೆಂ
    ಲಬ್ಧವಾದಪವಾದದಿಂ ಕ್ಷೀ –
    ರಾಬ್ಧಿತನಯನು ಸಹಿಸಿದಾ ಬಹು ಕಾಲಗಳ ಬಳಿಕ
    ಸ್ತಬ್ಧ ಶೀತಲ ಗುಣಗಳಂ ಬಿಡೆ
    ದಬ್ಧಬದ್ಬದ ಶಬ್ದ ಮಾಡುತ
    ಲಬ್ಧಿಯೊಳು ಮುಳುಗಿದನು ಭಾಸ್ಕರನುರಿವ ಬಿಸಿಲಿನೊಳು ||

  17. ಗದ್ದಿಗೆಯು ತನದೆಂದು ತಿಳಿಯುತೆ
    ಶುದ್ಧ ಗರ್ವದಿ ರವಿಯು ಬೀಗಿರೆ
    ಬದ್ಧ ಹಗೆತನದಬುದ ರಾಜನು ಮುತ್ತಿ ಕ್ರಮಿಸಿದನು
    ಸದ್ದು ಅಡಗಲು ಭಾಸ್ಕರನ, ಬೆಂ –
    ದಿದ್ದರಿಹಜನರೆಣಿಸಿಕೊಂಡರು
    ಅಬ್ಧಿಯೊಳು ಮುಳುಗಿದನು ಭಾಸ್ಕರನುರಿವ ಬಿಸಿಲಿನಲಿ !

  18. ಇನ್ನೊಂದು ಪರಿಹಾರ

    ಬದ್ಧ ಕಂಕಣ ಭಾಗ್ಯ ಮುರಿಯಲು
    ಕ್ಷುಬ್ಧಗೊಂಡಿಹ ಮಗಳಿನೆಸರ ಪ್ರ-
    ಬುದ್ಧ ಗ್ರಂಥವ ರಚಿಸೆ ಭಾಸ್ಕರನುದಯದಲಿ ಕುಳಿತ
    ಬುದ್ಧಿ ಚೋದಕವೊಗಟುಗಳ ಸ-
    ನ್ನದ್ಧ ಲೀಲಾವತಿಯ ಲೆಕ್ಕದ
    ಲಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು

    ಮಗಳಿನೆಸರ – ಮಗಳಿನ ಹೆಸರ
    ಲಬ್ಧಿ – outcome
    ೩ ನೆ ಸಾಲಿನ ಭಾಸ್ಕರ – ಸೂರ್ಯ/ಭಾಸ್ಕರಾಚಾರ್ಯ (ಗಣಿತಜ್ಞ್ಯ)
    ೬ ನೆ ಸಾಲಿನ ಭಾಸ್ಕರ – ಸೂರ್ಯ/ಭಾಸ್ಕರಾಚಾರ್ಯ
    Refer to following link for the legend of Bhaskara
    http://en.wikipedia.org/wiki/Bh%C4%81skara_II
    go to section legend

  19. ಒಂದೆರಡು ಸಲಹೆ/ಮನವಿ.

    ಸದ್ದು ಅಡಗಲು.. ಸದ್ದಡಗೆ, ಸದ್ದದಡಗಲು,ಹೀಗೆ ಸಂಧಿಸಿದರೆ ಪದ್ಯ ಬಿಗಿಯಾಗುತ್ತದೆ.ಬೆಂ – ದಿದ್ದರಿಹಜನರೆಣಿಸಿಕೊಂಡರು – ಅರ್ಥ ಸ್ಪಷ್ಟವಾಗುತ್ತಿಲ್ಲ.
    ಮಗಳಿನೆಸರ..ಎಸರು, ಹೆಸರಿನ ಗ್ರಾಮ್ಯದ ಆಡುಭಾಷೆ. ಬದಲಿಗೆ ’ಮಗಳ ಪೆಸರ’
    ಮಾಡಬಹುದು. ಈಗಾಗಲೇ ನೀಡಿರುವ ಶ್ರೀಗಣೇಶರ ಸೂಚನೆಗಳನ್ನೂ ನಾವು ನೆನಪಿನಲ್ಲಿಡುವುದು ಸಹಾಯಕ. ಹೀಗೆ ಪರಸ್ಪರ ವಿನಿಮಯವಿಧಾನದಿಂದ ನಾವೆಲ್ಲರೂ ಕಲಿಯಬಹುದು. ನಿಮ್ಮ ಅನಿಸಿಕೆಗಳನ್ನು ನನಗೂ ತಿಳಿಸದರೆ ತಿದ್ದಿಕೊಳ್ಳುವ ಮನಸ್ಸಿದೆ. ನಿಮ್ಮ ಸಹನೆ-ಸಹಾನುಭೂತಿಗಳಿಗೆ ವಂದನೆ.

  20. ಮೌಳಿಯವರೇ ಧನ್ಯವಾದಗಳು,
    ನೀವು ಹೇಳುವುದು ಸರಿ ಪರಸ್ಪರ ವಿನಿಮಯವಿಧಾನದಿಂದ ನಾವೆಲ್ಲರೂ ಕಲಿಯಬಹುದು. ಮಗಳ ಪೆಸರ ಮತ್ತು ಜಯದ್ರತ ಶಿಥಿಲ ದ್ವಿತ್ವ ಆಗುವುದಿಲ್ಲವೆಂದು Dr. G ಅವರಿಂದಲೂ ತಿಳಿಯಿತು, ಅದನ್ನು ಸರಿಪಡಿಸಿದ್ದೇನೆ.

    ಕ್ಷುಬ್ಧಗೊಂಡಿಹ ಪಾರ್ಥನಂತ್ಯಕೆ
    ಯುದ್ಧದಡಗಿಸೆ ಜಯದ್ರತನನು
    ಬದ್ಧವಾಯಿತು ಕಪಟವೆಸಗಲು ಕೌರವರ ಪಡೆಯು
    ಲಬ್ಧನಾಗಲು ಪುತ್ರಘಾತಕ
    ಸಿದ್ಧಕೃಷ್ಣನ ಮಾಯೆಕೈತವ-
    ದಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು

    ಬದ್ಧ ಕಂಕಣ ಭಾಗ್ಯ ಮುರಿಯಲು
    ಕ್ಷುಬ್ಧಗೊಂಡಿಹ ಮಗಳ ಪೆಸರ ಪ್ರ-
    ಬುದ್ಧ ಗ್ರಂಥವ ರಚಿಸೆ ಭಾಸ್ಕರನುದಯದಲಿ ಕುಳಿತ
    ಬುದ್ಧಿ ಚೋದಕವೊಗಟುಗಳ ಸ-
    ನ್ನದ್ಧ ಲೀಲಾವತಿಯ ಲೆಕ್ಕದ
    ಲಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು

  21. ಸೋಮಶೇಖರ್,
    ಚೆನ್ನಾಗಿದೆ. ತಿದ್ದುಪಡಿ ಎದ್ದುಕಾಣುವಂತಿದೆ. ’ಜಯದ್ರಥ’ನನ್ನು ತಂದಾಗ ಬರುವ ’ಜಗಣ’ ವನ್ನು ನಿವಾರಿಸದರೆ ಚೆನ್ನ.
    ಕ್ಷುಬ್ಧಗೊಂಡಿಹ ಪಾರ್ಥನಂತ್ಯಕೆ
    ಕದ್ದುಮರೆಯಾಗಿರಲು ಸೈಂಧವ… ಈರೀತಿ ಪರಿಹಾರ ಮಾಡಿಕೊಳ್ಳಬಹುದು.
    ಹಾಗೆಯೇ, ವೊಗಟು / ಒಗಟು ಪದ, ಸಂಧಿಗೆ ಸಿದ್ಧರೂಪದಲ್ಲಿರುವುದರಿಂದ, ಹಿಂದಿನಪದ ಅಕಾರಾಂತವಾಗಿದ್ದರೆ ಅದನ್ನು ಹಿಂದಿನಪದದೊಂದಿಗೆ ಬೆಸದರೆ ಮೇಲು. ಇಲ್ಲಿನ ಪದಗಳಲ್ಲಿ ಹಾಗೆ ಸಾಧ್ಯವಿಲ್ಲ. ಯೋಚಿಸಬಹುದು.

    ನಮನ

  22. ಮೌಳಿಯವರೇ,
    ಬದಲಿಸಿ "ಯುದ್ಧದೊಳಗಡಗಿರಲು ಸೈಂಧವ" ಎಂದು ಮಹಾಪ್ರಾಣ ಧ ಒತ್ತಕ್ಷರದೊಡನೆ ಮಾಡಿದ್ದೇನೆ (Dr. G ಈ ಪರಿಹಾರ ಕೊಟ್ಟರು) 🙂

    ಕ್ಷುಬ್ಧಗೊಂಡಿಹ ಪಾರ್ಥನಂತ್ಯಕೆ
    ಯುದ್ಧದೊಳಗಡಗಿರಲು ಸೈಂಧವ
    ಬದ್ಧವಾಯಿತು ಕಪಟವೆಸಗಲು ಕೌರವರ ಪಡೆಯು
    ಲಬ್ಧನಾಗಲು ಪುತ್ರಘಾತಕ
    ಸಿದ್ಧಕೃಷ್ಣನ ಮಾಯೆಕೈತವ-
    ದಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು

    'ಒಗಟು' ಮಾಡಿದ್ದೇನೆ, ನಾನು ಎಲ್ಲ ಹ್ರಸ್ವದಿಂದ ಆರಂಭವಾಗುವ ಅಕ್ಷರಗಳಿಗೆ ಸಂಧಿ ನಿಯಮ ಅನ್ವಯಿಸುತ್ತದೆ ಎಂದು ತಿಳಿದಿದ್ದೆ. ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು 🙂
    ಬದ್ಧ ಕಂಕಣ ಭಾಗ್ಯ ಮುರಿಯಲು
    ಕ್ಷುಬ್ಧಗೊಂಡಿಹ ಮಗಳ ಪೆಸರ ಪ್ರ-
    ಬುದ್ಧ ಗ್ರಂಥವ ರಚಿಸೆ ಭಾಸ್ಕರನುದಯದಲಿ ಕುಳಿತ
    ಬುದ್ಧಿ ಚೋದಕ ಒಗಟುಗಳ ಸ-
    ನ್ನದ್ಧ ಲೀಲಾವತಿಯ ಲೆಕ್ಕದ
    ಲಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು

  23. ಧನ್ಯವಾದಗಳು.
    "ಬೆಂದಿದ್ದರಿಹಜನರೆಣಿಸಿಕೊಂಡರು" ಎಂದರೆ
    ಬೆಂದಿದ್ದ ಇಹ ಜನ ಎಣಿಸಿಕೊಂಡರು ::‌ ಬಿಸಿಲಿನಲ್ಲಿ ಬೆಂದಿದ್ದ ಜನರು ಹಾಗೆಂದು ತಿಳಿದರು.

  24. ಸೋಮ – ನಿಮ್ಮ ಪರಿಹಾರಗಳು ಬಹಳ ಹಿಡಿಸಿತು. ಭಾಸ್ಕರಾಚಾರ್ಯರ ಈ ಕಥೆ ನನಗೆ ಈ‌ಮೊದಲು ತಿಳಿದಿರಲಿಲ್ಲ.

  25. ಧನ್ಯವಾದಗಳು ರಾಮ್,

    ನನಗೂ ಗೊತ್ತಿರಲಿಲ್ಲ ಭಾಸ್ಕರಚಾರ್ಯರ ಈ ಕಥೆ, internet ನಲ್ಲಿ ಓದಿದೆ 🙂

  26. When asked which of the two – sun or moon – is more important, a pupil said that the moon was, for it gives light during nights when we need it most. The Sun gives light during day when we don't need it! The incongruency of the samasyA line is similar.

    ಮನುಕುಲಕೆ ಪೆರ್ಚಿನುಪಯೋಗವಿ
    ನನಿನೊ ಚಳಿಗದಿರನೊ ತಿಳುಪೆನಲು
    ತರಳನೋರ್ವ ನುಡಿದನು ದಿಟದಾ ಚಂದ್ರ ತಾನೀವ|
    ಬೆಳಕನಿರುಳೊಳ್ಪಗಲಿನೊಳ್ದಿನ
    ಪನ ಬೆಳಕದೇಕೆಂದು ಪೇಳ್ದಂ
    ತಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು||

    I have not yet forayed into AdyakSharaprAsa. Pls point out other errors.

  27. ಪ್ರಸಾದ್ – ನಿಮ್ಮ ಪರಿಹಾರದ ಚೆನ್ನಾಗಿದೆ. ಪದ್ಯ ಓದಲು ಸ್ವಲ್ಪ ಕಷ್ಟವಾಯಿತು – ಏಕೆಂದು ತಿಳಿಯುತ್ತಿಲ್ಲ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)