Feb 192012
 

Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ.

ನಿಮ್ಮಿಷ್ಟದ ಛಂದಸ್ಸನ್ನು ಆಯ್ದುಕೊಳ್ಳಿರಿ

  23 Responses to “ಪದ್ಯಸಪ್ತಾಹ – ೮ – ೨೦೧೨ – ದತ್ತಪದಿ”

  1. ಅಳಿದಾಟೋಪವಧೈರ್ಯ ಪೆರ್ಚೆ ತನಗಂ ಪ್ರಾಣಪ್ರಯಾಣಂಬೆನಲ್
    ಸೆಳೆಯಲ್ ನಕ್ರ ವಿವಕ್ರ ಶೂರ್ಪ ಮುಖದಿಂ ಘೀಳಂತರಿಕ್ಷಾಂತರ-
    ಸ್ಥಳವಂ ಸೇರಿರೆ ವಿಷ್ಣು ಮಿಂಚಿಳಿವವೊಲ್ ವೋಡೋಡಿಸಂದಕ್ಷಣಮ್
    ಇಳೆಯೊಳ್ ಸತ್ವದ ರಕ್ಷಣತ್ವಕೆನಲಾ ರಿಕ್ತಂ ಗಜಂ ಸಾರ್ದುದಯ್

  2. ಮತ್ತೇಭ|
    ನುತಿಪೆಂ ವಿಶ್ವದ ಮೂಲನಂ ಸುಗುಣನ’ನ್ನಾಟೋ’ಪರಾಹಿತ್ಯನಂ
    ಧೃತನನ್ನಾಂ ವಲಮಂತ’ರಿಕ್ಷ’ಭುವನಾನಂತ್ಯಂಗಳಂ ತೃಪ್ತನಂ
    ಮೃತಸಂಜೀವಿನಿಕರ್ತೃವಂ ಭಿಷಜನಂ’ವೋಲ್ವೋ’ಷಧಿಜ್ಞಾನಿಯಂ
    ಧೃತನಂ ದಲ್ ಕಮ’ಲಾರಿ’ಕಾಂತಿಘನಮಂ ಪೊಂದಲ್ಕೆ ನಾ ಮೋಕ್ಷಮಂ||
    (ಸಂದರ್ಭವನ್ನು ಸರಿಯಾಗಿ ಗಮನಿಸದೇ ಕೇವಲ ಹರಿಸ್ತುತಿಯನ್ನು ಮಾಡಿದ್ದೇನೆ. ಕ್ಷಮಿಸಿ)

  3. ಒಂದು ಚಿಕ್ಕ ಪ್ರಯತ್ನ :

    ಅಂತರಿಕ್ಷದ ಹರಿಯ ಮಲ್ಲಾರಿ ರಾಗದಲಿ
    ಸಂತನಾನೆಂಬುವೋಲ್ವೊಟ್ಟು ಪಾಡಿದರೆ |
    ಕುಂತ ಜನ ಹಾರಟಾಟೋಪದಿಂ ಕಲ್ಲೆಸೆಯೆ
    ಕಂತುಪಿತ ಬಾಹನೇ ನನ್ನ ಕಾಯ್ವುದಕೆ ?

    • ವಿಷ್ಣು ಭಟ್ಟರೆ – ಒಳ್ಳೆಯ ಮೋಜಿನ ಕಲ್ಪನೆ. ಚೆನ್ನಾಗಿದೆ 🙂

  4. ಓಂದು ಕ್ಷುಲ್ಲಕ ಪೂರಣ (ಛಂದಸ್ಸು :: ಮತ್ತೆಭ ವಿಕ್ರೀಡಿತ) ::

    ಪರವೂರಲ್ಲವಕಾರ್ಯಕಾಗಿ ತೆರಳಲ್ ನೋವಾಗಿರಲ್ಗುಂಡಿಗೇ
    ಮರಳಲ್ಬೇಕೆನುತೂರಿಗಂ ತ್ವರಿತದೊಳ್ ವೋಲ್ವೋದಲಾರೀಯನಂ
    ಪರದಾಡುತ್ತಲೆ ಪತ್ತಿ ಬಂದು ಕೊನೆಗಂ ಅಟೋಸರಿಕ್ಷಾದೊಳಂ
    ಭರದೊಳ್ ಸೇರಿದವೈದ್ಯರಾ ಸಮಯದೊಳ್ ಶ್ರೀಕೃಷ್ಣನಾಲೀಲೆಯೊಲ್

    • ರಾಮಚಂದ್ರರೇ, ಸ್ವಲ ನಿರುಂಬಳವಾಗಿ ನನ್ನ ತಿರುಗಾಟವನ್ನೇ ಬಣ್ಣಿಸಿದ ಹಾಗಿದೆಯೆಲ್ಲಾ ಎಂದು ನಕ್ಕೆ ! ಸುಲಲಿತ ಕಾವ್ಯ ರಸಮಂಜರಿ.

      ತಮ್ಮೊಡನೆ ರಸಮಂಜರಿಯಲ್ಲಿ ನನ್ನದೊಂದು ಪ್ರಯತ್ನ :

      ಇದೆವೂರಲ್ ಬಿಗಿ ಕೆಲಸದೋಳ್ ತೊಡಗಿತಾಂ ತಿರುಗಾಡಬೇಕೆನ್ನುತಾಂ
      ಅದಕಾಗಿಯೇ ಅನಿವಾರ್ಯದಿಂ ನೇಮಿಸುತ ಕೆಲವಾಟೋರಿಕ್ಷಾಗಳಂ
      ಬದುಕೆಂಬುವ ಲಾರಿ ವೋಲ್ವೊ ತರದಿಂ ಗುದುಕುತ್ತ ತಾ ನಡೆಸುವೋಲ್
      ಪದಕುಸಿಯೇ ನೆಲವೆಂದು ಪೇಳಿಹರ್ ಹರಿ ಹರಿ ಶ್ರೀಚನ್ನ ದಾಮೋದರ

  5. ಹರಿಯೆನ್ನ ವೈರಿಯೆನಲಾಟೊಳ್ಳಿನಬ್ಬರದೊ-
    ಳಿರುವರಿಕ್ಷತನಾದನವತಾರದಿ೦
    ನರನುನು೦ ಸಿ೦ಗನು೦
    ವೋಲ್ವೋಘದತಿಶಯ೦
    ಧರಿಸಲಾರಿಹರು ಕ೦ಬದೊಳೆನ್ನಲು

    • February 22, 2012 at 11:58 pm

      ಹರಿಯೆನ್ನ ವೈರಿಯೆನಲಾಟೊಳ್ಳಿನಬ್ಬರದೊ-
      ಳಿರುವರಿಕ್ಷತನಾದನವತಾರದಿ೦
      ನರನುನು೦ ಸಿ೦ಗನು೦ವೋಲ್ವೋಘದತಿಶಯ೦
      ಧರಿಸಲಾರಿಹರು ಕ೦ಬದೊಳೆನ್ನಲು

  6. ಗಜೇಂದ್ರಮೋಕ್ಷದ ಹಿನ್ನಲೆಯಲ್ಲಿ ಒಂದು ಪ್ರಯತ್ನ – ಚೌಪದಿಯಲ್ಲಿ:
    ———————————————————————-

    ಮೊಸಳೆಯಾರ್ಭಟವೇನು! ಆಟೋಪವಿನ್ನೇನು!
    ಹಸುಳೆಯಾನೆಯ ಬಾಳೆಗಿಡದವೋಲ್ವೊರಗಿಸೆ
    ಅಸುವಕಾಯೆಂಬ ಮೊರೆಗಲ್ಲಾರಿಗೂ ಮೊದಲು
    ನಸುನಗುತ ಹರಿಯಂತರಕ್ಷದಲೆ ಪೊರೆದ!

    (ಸಮಸ್ಯಾಪೂರಣದಲ್ಲಿ ಮೊದಲ ಪ್ರಯತ್ನ – ತಪ್ಪುಗಳಿದ್ದರೆ ತಿಳಿಸಿ ಹೇಳಿರೆಂಬ ಕೋರಿಕೆಯೊಂದಿಗೆ)

  7. ಪ್ರಹ್ಲಾದ ಉವಾಚ:
    ಆಟಾಟೊಪವ ಗೈಯಬೇಡ ಪಿತ ನೀ| ಶಿಕ್ಷಾರ್ಹನಾದೀಯೆ ತಾಳ್
    ಏಟಿಂ ಸೀಳಲು ಕಂಭವನ್, ಜಿಗಿಯುವನ್| ತಾನಂತರಿಕ್ಷಸ್ಥಿತಂ
    ಈಂಟಾ ಹಾಲಹಲಂ ಹರಿದ್ವಿಟವನುಂ| ಮದ್ದಾನೆ ವೊಲ್ ಓಲದಿರ್
    ದಾಟಲ್ ನೀ ಭವಮಂ ಶರಣ್ಯ ಹರಿಯೇ| ಸೋಲಾ ರಿಪುಧ್ವಂಸಗಂ||

  8. ನನ್ನದೊಂದು ಎಳೆವಾತು. ರಿಕ್ಷಾಲೋಪವಾಗಿದೆ, ಮನ್ನಿಸಬೇಕು (ಬೆಂಗಳೂರಿನಲ್ಲಿ ಈ ನಡುವೆ ರಿಕ್ಷಾ ಹಿಡಿಯುವುದು ಕಷ್ಟವೆಂದು ಕೇಳಿದ್ದೇನೆ)

    ಪೌತ್ರನ ಯಾಗದೊಳಾಗಸ
    ದೆತ್ತರ ಬೆಳೆದುದು ಬೆಡಗಿನ ವಿಕ್ರಮ ರೂಪಂ
    ತಾತನ ಮಾತಿಗೆ ಮಾರ್ವೊಲ್
    ವೆತ್ತುದು ರೂಪು ಛಲಾರಿಯ ಕೋಪಾಟೋಪಂ

    • ಕಂದಕ್ಕೆ ಕುಂದು ಬಾರದಿದ್ದರೂ ವೋಲ್ವೆತ್ತುದು ಎಂದು ಸಂಧಿ ಮಾಡದೆ ಬಿಡಿಸಿದೆನಾದ್ದರಿಂದ ಪೆತ್ತುದು ಎಂದೇ ಇರಬೇಕಿತ್ತು.

    • ಜೀವೆಂರವರೆ,
      ಪದ್ಯಪಾನಕ್ಕೆ ಸ್ವಾಗತ.
      ಬೆಂಗಳೂರಿನ ರಿಕ್ಷಾಗಳ ಬಗ್ಗೆ ನೀಮ್ಮ ಹೇಳಿಕೆ ಸರಿಯೆ. ಅದು ಲೋಪದಲ್ಲಿ ಏನು ಆಶ್ಚರ್ಯವಿಲ್ಲ 🙂
      ಕಂದ ಪದ್ಯದ ೨ನೆ ಹಾಗು ೪ನೆ ಸಾಲುಗಳ ಮಧ್ಯದ ಗಣ – ಜಗಣ (ಲ-ಗು-ಲ) ಇರಬೇಕು. ಇಲ್ಲವಾದಲ್ಲಿ ಸರ್ವಾಲಘು ವಿರಬಹುದು – ಆದರೆ ಮೊದಲಕ್ಷರದ ನಂತರ ಯತಿ ಬರಬೇಕೆಂದಿದೆ. ಈ ಎರಡು ಗಣಗಳನ್ನು (ಅಂದರೆ “ಬೆಳೆದುದು” ಹಾಗು “ಲಾರಿಯ”) ಗಮನಿಸುವಿರಾ?

      • ತಿದ್ದಲು ಯತ್ನಿಸುವೆ ರಾಮಚಂದ್ರ. ತಿಳಿವಳಿಕೆಗಾಗಿ ಥ್ಯಾಂಕ್ಸ್!

  9. ಯಥಾಮತಿ ತಿದ್ದಿದ್ದೇನೆ. ರಿಕ್ಷಾ ಈಗಲೂ ಸಿಗಲಿಲ್ಲ. metre ಮೇಲೆ ಎಕ್ಸ್ಟ್ರಾ ಕೊಟ್ಟರೆ ಬಂದಾರೇನೋ. 🙂

    ಪಿತನಂ ತರಿದಂ ಹರಿವೋ
    ಲ್ವೆತ್ತಂ ಮೆರೆದಂ ಛಲಾರಿ ಕೋಪಾಟೋಪಂ
    ಪೌತ್ರನ ಕೆಲದೊಳ್ನಭಮಂ
    ಭೇದಿಸಿ ಸುಂದರನಗಾಧವಿಕ್ರಮರೂಪಂ

  10. ಮರಳಿ ಯತ್ನವ ಮಾಡೆ ಸಿದ್ಧಿಸುವುದು ಎಂಬಂತೆ

    ಆಟೋಪಮ್ ಗೆಯ್ಯಲಾತಂ ನಿಜಸುತನತಿಸದ್ಭಕ್ತಿಯಿಂ ಪಾಡೆ ನಾಮಂ
    ತೊಟ್ಟಾಗಳ್ ಘೋರವೇಷಂ ನರಹರಿನೆರೆದಂ ಕಾರ್ಗೆ ಭೂಮ್ಯಂತರಿಕ್ಷಂ
    ಮೆಟ್ಟುತ್ತಂ ನೆತ್ತರಮ್ ಪೀರ್ದೊಡಲಬಿರಿಯುತಂ ಚೀರುತಂ ದೈತ್ಯನಂಕೊಂ
    ದಾಡುತ್ತಂ ಸಿಂಗದಾಟಂ ವನದಿಮೆರೆದವೋಲ್ವೊಪ್ಪೆ ಬಾಲಾರಿಘಾತಂ

    • ಪ್ರಯತ್ನ ದಿಟವಾಗಿ ಸ್ತುತ್ಯ. ಕೆಲವೊಂದು ವ್ಯಾಕರಣದ ಸವರಣೆಗಳು ಬೇಕಷ್ಟೆ. ಮುಖ್ಯಾಗಿ ಸ್ರಗ್ಧರೆಯಂಥ ಅಮೆಜಾನ್ ಮಹಿಳೆಯನ್ನು ಪಳಗಿಸಿದ್ದೀರಿ:-) ಅಭಿನಂದನೆಗಳು.

      • ಗುರುಗಳೆ, ನಿಮ್ಮ ಬೆನ್ನುತಟ್ಟುವ ನುಡಿಗೆ ಮಣಿದಪೆಂ.

        > ಕೆಲವೊಂದು ವ್ಯಾಕರಣದ ಸವರಣೆಗಳು ಬೇಕಷ್ಟೆ.

        ದಯಮಾಡಿ ತಪ್ಪುಗಳನ್ನು ಎತ್ತಿತೋರಿ ತಿಳಿಸಿಕೊಡಬೇಕು. ‘ನಾಮಮಂ’ ಇರಬೇಕೆಂದು ತೋರುತ್ತದೆ. ಕಾರ್ಗೆ ಸರಿಯೋ ಕಾರೆ ಸರಿಯೋ ಆಗಲೂ ಈಗಲೂ ಗೊಂದಲ. ಹಾಗೆಯೇ ‘ಚೀರುತ್ತಮ್’ ಇರಬೇಕಿತ್ತೇನೊ. ತಿದ್ದಾವಣೆಗಳು ಇನ್ನೂ ಇದ್ದಾವು.

        • ಇಲ್ಲಿ ಯಾರೂ ಗುರುಗಳಲ್ಲ. ಎಲ್ಲರೂ ಗೆಳೆಯರು.
          ನನಗೆ ದೂರವಾಣಿ ಮಾಡಿರಿ…ಹಲಕೆಲವು ಸವರಣೆಗಳನ್ನು ವಿವರಿಸಬಲ್ಲೆ. ಟೈಪಿಸುವ ಕ್ಲೇಶ ತಪ್ಪಿಸಿಕೊಳ್ಳಲು ಈ ಜಾಣ್ಮೆ ಅಷ್ಟೆ:-)

  11. ಇದೊಂದು ಸಾಮಾನ್ಯಸೂಚನೆ:

    ಈಚೆಗೆ ಬಹುಜನರು ಪದ್ಯಪಾನದಲ್ಲಿ ಕವನಿಸುತ್ತಿರುವುದು ಅತ್ಯಂತ ಮುದಾವಹ. ಆದರೆ ಹೆಚ್ಚಿನ ಜನರು( ಹಳಬರೂ ಸೇರಿದಂತೆ) ಹಳಗನ್ನಡವ್ಯಾಕರಣ, ಛಂದಸ್ಸು ಮತ್ತು ಇದೇ ಜಾಲಸ್ಥಾನದಲ್ಲಿರುವ ಪಾಠಗಳ ಹಾಗೂ ಆಕರಗ್ರಂಥಗಳ ನೆರವನ್ನೇನೂ ಪಡೆದ ಹಾಗೆ ತೋರುತ್ತಿಲ್ಲ:-) ದಯಮಾಡಿ home-work ಮಾಡಿ….ನನ್ನೀ ಮಾತು ಕಹಿಯಾದಲ್ಲಿ ಬೇಗ ಬರಲಿರುವ ಯುಗಾದಿಗೆ ಬೇವನ್ನಾಗಿಯಾದರೂ ಪರಿವರ್ತಿಸಿಕೊಂಡು ನುಂಗಿಬಿಡಿ!!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)