Feb 142012
 

ಈ ಚಿತ್ರಕ್ಕೆ ತಕ್ಕ ಪದ್ಯಬರೆಯಿರಿ(ನಿಮಗಿಷ್ಟವಾದ ಛ೦ದಸ್ಸಿನಲ್ಲಿ):

ಸೂರ್ಯೋದಯ ಮತ್ತು ಕಮಲ

 

  33 Responses to “ಪದ್ಯಸಪ್ತಾಹ – ೭ – ಚಿತ್ರವರ್ಣನೆ”

 1. ಭಾಮಿನಿಯಲ್ಲಿ ಒಂದು ಪ್ರಯತ್ನ :

  ಹೊನ್ನ ಬಣ್ಣದ ರವಿಯ ಉದಯದೊ-
  ಳೆನ್ನ ಚಿತ್ತವ ಕದಿಯ ಹೊರಟರ-
  ದಿನ್ನು ವ್ಯರ್ಥವು ಹೂವೆ ನೀನಿದನರಿತರೊಳ್ಳೆಯದು!
  ಜೊನ್ನ ಹುಣ್ಣಿಮೆ ಜೇನ ಮನದವ-
  ಳೆನ್ನ ಮನವನು ತುಂಬಿ ಬಿಟ್ಟಿರ-
  ಲೆನ್ನ ನೋಟಕೆ ಬೀಳ್ವುದುಂಟೇ ಬೇರೆ ಕಮಲಗಳು?

 2. ಮಧ್ಯಮಾವರ್ತದ ಮಾತ್ರಾ ಛಂದಸ್ಸಿನಲ್ಲಿ (೩+೫+೩+೫+೩+೫+ಗು) ಒಂದು ಪದ್ಯ
  ಚೆನ್ನ ಕಮಲವೇ ಚಂದ್ರನನ್ನು ನೀ ಕಂಡು ನಾಚಿದಪೆಯೆ
  ಹೊನ್ನ ಚೆಲ್ಲುತಲೆ ಬಾನಿಗೇರಿದನ ನೋಡುತೇಕೆ ಮೆರೆವೆ |
  ಮುನ್ನ ನೀರಿನಲೆ ಹುಟ್ಟಿಬೆಳೆದರೂ ವೊದ್ದೆಯಾಗದಿರುವೆ
  ನಿನ್ನದೀ ಕಪಟವಾಟದಿಂದ ನಾ ನಿನ್ನನರಿಯಲೆಡೆಯೆ ||

 3. ಮಲದೊಳ್ ಪುಟ್ಟಿದ ಭಾವವ ತೊಡೆದುಂ
  ಒಲವಿಂ ನೋಳ್ಪುದಿದಾಗಸವಂ |
  ಮಲರುವದೀ ಸುಮ ತೇಜವ ಹೀರುತ
  ಕಲಡಿದ ಜೀವಕೆ ಸೊಡರಾಗಿ ||
  [ ಮಾತ್ರಾ ಛಂದಸ್ಸು = ಚತುರ್ಮಾತ್ರಾ ಚೌಪದಿ ]
  [ ಮಲರು = ಅರಳು, ಕಲಡು = ಕ್ಷೋಭೆ, ತಳಮಳ, ಸೊಡರು = ದೀಪ ]

 4. ಕಲಹಂಸ: ನನನಾನನಾನನನನಾನನನಾನಾ
  ಅರಳಲ್ ಸರೋವರದೆ ತಾವರೆ ನಿಚ್ಚಂ
  ಹರುಷಂ ಸದಾ ಜನವು ಪೊಂದಿರೆ ಹಿಗ್ಗಂ|
  ಅರಿಯರ್ ಕಣಾ ವೆಸನಪೊಂದುವ ಪೂವನ್
  ಬರಲಾ ಇನಂ ಶಿರವು ಸೀಳ್ವುದು ಕಾಪಿಂ||

 5. ೨ನೆಯ ಪಾದದ ಕೊನೆಯ ಅಕ್ಷರ ತಪ್ಪಿತ್ತು. ಸವರಿದ್ದೇನೆ.
  ಅರಳಲ್ ಸರೋವರದೆ ತಾವರೆ ನಿಚ್ಚಂ
  ಹರುಷಂ ಸದಾ ಜನವು ಪೊಂದಿರೆ ಹಿಗ್ಗಿಂ|
  ಅರಿಯರ್ ಕಣಾ ವೆಸನಪೊಂದುವ ಪೂವನ್
  ಬರಲಾ ಇನಂ ಶಿರವು ಸೀಳ್ವುದು ಕಾಪಿಂ||

 6. ಪುಷ್ಪಿತಾಗ್ರ ವೃತ್ತ
  ಕಾಂಡ = ವ್ಯುತ್ಪತ್ತಿ, ಕುಸುಮ = ಪ್ರತಿಭೆ, ಸೂರ್ಯಕಿರಣ = ಸ್ಫೂರ್ತಿ.
  ತನ್ನ ವ್ಯುತ್ಪತ್ತಿಶಕ್ತಿಯೆಂಬ ಕಾಂಡದ ಮೇಲೆ ಮೊಗ್ಗೆಂಬ ಪ್ರತಿಭೆಯನ್ನು ತಳೆದು, ಅದು ಅರಳಲು ಸ್ಫೂರ್ತಿಯೆಂಬ ಸೂರ್ಯನೆಡೆಗೆ ಚಾಚುವ ಕಮಲದೊಲು ಮಹಾಕವಿ. ಐಡಿಯ ಪೂರ್ತಿ ಬಾಪಟ್‍ರದು. ಇಬ್ಬರೂ ಸೇರಿ ’ರ್ತಿ’ ಆದಿಪ್ರಾಸವಿಟ್ಟುಕೊಂಡು ಸರಿರಾತ್ರಿಯವರೆಗೆ ತಿಣುಕಿ, ವಿವಿಕ್ತವಾಗಿ ಪ್ರಯತ್ನಿಸಲು ತೊಡಗಿ, ಇದು ನನ್ನ ಪಾಡು:
  ಕೆಸರತಲದಿನೆದ್ದು ಗರ್ವದಿಂದಂ
  ರಸಸಿರಿ ಕಾಂಡವು ಪೊತ್ತು ತಾನು ಮೊಗ್ಗಂ|
  ಪಸರಿಸಲದು ಸಾರೆ ಸೂರ್ಯದಿಕ್ಕೊಳ್
  ಕಸುವಿಹ ಕಬ್ಬಿಗವರ್ಯನಂತೆ ನೋಡಾ||
  ನನನನನನನಾನ ನಾನನಾನಾ | ನನನನನಾನನ ನಾನನಾನನಾನಾ || – ಇದಿಷ್ಟೂ ಒಂದು ಸಾಲು ಎಂದಾದರೆ, ನಾನು ಮಾಡಿರುವುದು ಪುಷ್ಪಿತಾಗ್ರ ವೃತ್ತ ಅಲ್ಲ, ಪುಷ್ಪಿತಾಗ್ರಾರ್ಧ ವೃತ್ತ!

  • ಏಂದಿನಂತೆ ಮೋಜಿಗಾಗಿ 🙂 ::
   ಬಾಪಟರದೈಡಿಯವ ನೀವಿಂತು ಕವನಿಸಲು
   ಪಾಪ ! ಗೊಂದಲಮಯದ ಪಾಡಾಗದೆ |
   ಈಪರಿಯಲೊಂದಾತ್ಮ ವೆರಡುದರದೊಳು ಜನಿಸೆ
   ಲೋಪಗೊಳ್ಳದೆ ಲೋಕನಿಯಮಂಗಳು ||

 7. ಹಂಸಾನಂದಿ, ರಾಮ್,ಕಾಂಚನ ಮತ್ತು ಪ್ರಸಾದರ ಕವಿತೆಗಳೆಲ್ಲ ಕಲ್ಪನೆಯ ದೃಷ್ಟಿಯಿಂದ ಸೊಗಸಾಗಿವೆ. ಭಾಷೆ ಮಾತ್ರ ಮತ್ತೂ ಹದವಾದರೆ ಒಳಿತು:-) ಮುಖ್ಯವಾಗಿ ಪ್ರಸಾದರ ಕಲಹಂಸ ಹಾಗೂ ಪುಷ್ಪಿತಾಗ್ರಗಳ ಯತ್ನ ತುಂಬ ಸ್ತುತ್ಯ. ಅವರು ಈ ವೃತ್ತದಲ್ಲಿ ಪೂರ್ಣಪದ್ಯವನ್ನೇ ಬರೆದಿದ್ದಾರೆ. ಇದು ಅವರು ಭಾವಿಸ್ದಂತೆ ಅರ್ಧವೇನಲ್ಲ.

 8. ಜಗತೀಜಲದ ಮೇಲೆ ಮಲಗಿದವರೇ ಎಲ್ಲ
  ಹಗಲಾದರೂ ಕಮಲದೆಲೆಗಳಂತೆ|
  ನಗುತ ಮೇಲೆದ್ದು ಮಲರುವ ಸತ್ತ್ವವಾದರೋ
  ಸೊಗಯಿಪುದು ಕೆಲವರಿಗೆ ಮಾತ್ರವಂತೆ||

  • ಸ್ಫುರಿಪುದು ನಿಮಗಂ ಸ್ಫುರಿಸದು ನನಗಂ
   ಹರಿವುದಿನಿತೆ ದಿಟ್ಟಿಯೆನುತಲಿ|
   ಕೊರಗೆನು ಜೀಯ ನುಡಿದಿಹಿರಿ ಸಾಂತ್ವನ
   ಶಿರದಿ ತಳೆವೆನಾನಾಲ್ಕನೆ ಸಾಲ್;-)

 9. ಪ್ರತಿಭಾಖ್ಯ ಮುಕುಳಮಂ ಪಾಂಡಿತ್ಯಕಾಂಡದಿಂ|
  ಮತಿಕಷ್ಟ ಜೀವನದಿ ಮೇಲೆತ್ತಿತಾಂ||
  ಕೃತಿಕಮಲ ವಿಕಸಿತಂ ನೀಡಲೋಸುಗಜಗಕೆ|
  ಗತಿಗಾಗಿ ಭಾಸ್ಫೂರ್ತಿ ಕಾಯ್ವಕವಿಯೋ||

  • ಬಹಳ ಉತ್ತಮ ಪದ್ಯದೊಂದಿಗೆ ಪದ್ಯಪಾನಕ್ಕೆ ಪದಾರ್ಪಣಗೈದ ಪ್ರಸಾದ ಬಾಪಟರಿಗೆ ಸ್ವಾಗತ. ಮುಂದೆಯೂ ಪದ್ಯ ರಚನೆಗಳಲ್ಲಿ ನಿಮ್ಮ ಸಕ್ರಿಯತೆಯನ್ನು ಆಶಿಸುತ್ತೇವೆ.

  • The silent spectator of this website has finally opened his mouth….
   Welcome Bapat, a great independent entry after a joint venture 🙂

  • ಬಹಳ ಚೆನ್ನಾಗಿದೆ ಬಾಪಟ್

 10. ಮತ್ತೇಭ|
  ಕವಿಯಲ್ ರಾಜ್ಯದಿ ಭಾರತೀಯಜನತಾ ಪಕ್ಷಕ್ಕೆ ಕಾರ್ಗತ್ತಲಾ
  ರವಿಯೆಂಬೋಲ್ ಘನತೇಜವಂತರಿರ್ದರಾಚಾರ್ಯರ್ ಶರೀರಾಂತ್ಯದಿಂ
  ನವಿರಾಗಿರ್ದುದು ಚಿಹ್ನೆ ಪದ್ಮ, ಮುದುಡಿಂ ಸಂತಾಪಸೂಚಿಸ್ವುದೈ
  ರವಿಯಸ್ತಂಗತನಾಗೆ ಲೋಕನಿಯಮಂ ಮ್ಲಾನತ್ವಪದ್ಮಕ್ಕಲಾ!!
  (ಸೂರ್ಯೋದಯವನ್ನು ಸೂರ್ಯಾಸ್ತವನ್ನಾಗಿ ಗಣಿಸಿ, ಹಾಗೂ ಭಾಜಪ ಪಕ್ಷದ ಚಿಹ್ನೆಯಾದ ಕಮಲ, ಪಕ್ಷಕ್ಕೆ ರವಿಯಂತೆ ಇದ್ದ ವಿ.ಎಸ್ ಆಚಾರ್ಯರ ಅಸ್ತದಿಂದ ಮ್ಲಾನವಾಯಿತು ಎಂಬ ಕಲ್ಪನೆ, ದಯವಿಟ್ಟು ದೋಷಗಳನ್ನು ತಿದ್ದಿ ಹೇಳಿ)

  • ಎರಡನೆಯ ಸಾಲಿನಲ್ಲಿ ಛಂದಸ್ಸಿನ ಕೊಂಚ ತೊಡಕಿದೆ. ದಯವಿಟ್ಟು ಗಮನಿಸಿ ::
   ನ ನ ನಾ ನಾ ನ ನ ನಾ ನ ನಾ ನ ನ ನ ನಾ ನಾ ನಾ ನ ನಾ ನಾ ನ ನಾ
   ರ ವಿ ಯೆಂಬೋಲ್ ಘ ನ ತೇ ಜ ವಂ ತ ರಿರ್ ದ ರಾ ಚಾರ್ ಯರ್ ಶ ರೀ ರಾಂತ್ ಯ ದಿಂ

  • many grammatical lapses are found. Pl call me at your convenience with your verse in hand so that i can orally point out the mistakes and also suggest the needed corrections.

  • many grammatical lapses are found. Pl call me at your convenience with your verse in hand so that i can orally point out the mistakes and also suggest the needed corrections. Any how the idea is very timely and original…This is how one can bringin lot of contemporaneity to classical versification.

 11. ಕಾವ್ಯ ಬಂಧುಗಳೇ, ಪುನರಪಿ ನಮಸ್ಕಾರ. ಗುರು -ಗಣೇಶರನ್ನು ಸಂಪ್ರಾರ್ಥಿಸುತ್ತಾ ಮತ್ತೊಮ್ಮೆ ಹೀಗೊಂದು ಪ್ರಯತ್ನ ಭಾಮಿನಿಯಲ್ಲಿ :

  ಸೂರೆಗೊಂಬುವ ರೂಪರಾಶಿಯೆ
  ಮಾರನರ್ಧಾಂಗಿಯನು ಸೋಲಿಸಿ
  ತೇರನೇರಿದ ಸೂರ್ಯನಾದರದಿಂದ ಕಾಂಬುದಕೆ |
  ಮೇರೆಮೀರಿದ ಸೊಬಗು ನಿನ್ನದು
  ದಾರಿಹೋಕರ ದಿಬ್ಬಣದ ಜೊತೆ-
  ಸೇರುತೆಲೆಗಳ ನಡುವೆ ನಗುವರವಿಂದಲೋಚನಕೆ ||

  • ಬಲುಚೆಲುವಾದ ಭಾಮಿನಿ. ಭಾಷೆ-ಬಂಧಗಳು ಅನವದ್ಯ, ಹೃದ್ಯ.

 12. ಶಿಖರಿಣಿಯಲ್ಲಿ ಪ್ರಯತ್ನ

  ಸ್ವಯ೦ ಭರ್ತಾರ೦ ತಾ೦ ಕಿರಣಗಳ ಕೈಯಿ೦ದೆ ಮೊಗಮಾ-
  ಶಯ೦ ತೋರಲ್ಕೆ೦ದು೦ ಪ್ರಣಯದೊಳಗ೦ ಸ್ಪರ್ಶಿಸಲು ನಿಶ್-
  ಕ್ರಿಯ೦ ಸಲ್ಲಾಪ೦ ನೀ೦ ಅರಳದೆನೆ ಗೈಯಲ್ಕೆ ಮನದೊಳ್
  ಭಯ೦ ಸಾ೦ಗತ್ಯ೦ ಬ೦ಧನದೊಳಗಿಹ೦ ಭ್ರಾಮರಕನೇ೦?

  ಕಮಲೆಯ ಭರ್ತೃವಾದ ಸೂರ್ಯನ ಆಗಮನವಾಗಿ ಆತ ಕಿರಣಗಳ ಕೈಗಳಿ೦ದ ಆಕೆಯ ಮೊಗದೊಡನೆ ಸರಸವಾಡಿದರೂ ಅರಳದೆ ಸ್ಪ೦ದಿಸದಿರುವುದು ಎಲ್ಲಿ ಬ೦ಧನದಲ್ಲಿರುವ ಪ್ರಿಯಕರನ(ಭ್ರಮರನ) ಗುಟ್ಟು ರಟ್ಟಾಗುವುದೋ ಎ೦ಬ ಭೀತಿಯಿ೦ದಲೇ?

  • ಸೋಮಂ ನಾನಾವೃತ್ತಯ-
   ಶೋಮಂಡಿತನಲ್ತೆ ಶಿಖರಿಣಿಯ ಶಿಖರದ ಮೇಲ್|
   ಸೋಮಂ ಪರಶಿವನ ಮುಡಿಯ-
   ನೋ! ಮಂಡಿಸಿದಂತೆ ರೋಹಿಸಿದ ಪರಿ ಭಾವ್ಯಂ||

   ಅತಿಕಠಿನವೂ ಕನ್ನಡಕ್ಕೆ ಸವಾಲೂ ಎನಿಸುವಂಥ ಈ ವೃತ್ತದಲ್ಲಿ ಒಳ್ಳೆಯ ಕವಿತೆಯನ್ನು ರಚಿಸಿದ ನಿಮಗೆ ಹಾರ್ದಿಕಾಭಿನಂದನೆಗಳು. ವ್ಯಾಕರಣದ ತೊಡಕುಗಳೂ ಏನಿಲ್ಲ. ಆದರೆ ಸ್ವಲ್ಪ ಹಳಗನ್ನಡದ ಘಮಲು ಹೆಚ್ಚಾದರೆ ನನ್ನಂಥವರಿಗೆ ಈ ಪದ್ಯಪಾನದಿಂದ ಅಮಲು ಮತ್ತೂ ಮಿಗಿಲಾದೀತು:-)

   • ಗಣೇಶ್ ಸರ್,

    ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಮಾರ್ಗದರ್ಶನಕ್ಕೆ ನಾನೆ೦ದೆ೦ದಿಗೂ ಋಣಿ. ಧನ್ಯವಾದಗಳು 🙂

    ಹಳಗನ್ನಡವನ್ನು ಲಘು ಬಾಹುಳ್ಯವಿರುವ ಸಮೂಹದಲ್ಲಿ ಹೇಗೆ ತರುವುದು ಎ೦ಬುದು ತಿಳಿಯುತ್ತಿಲ್ಲ. ಏಕೆ೦ದರೆ ಅಲ್ಲಿ ಅನುಸ್ವಾರಕ್ಕೆ ಅವಕಾಶವಿಲ್ಲವಲ್ಲ… ನಿಮ್ಮೊಡನೆ ಮಾತನಾಡಿ ತಿಳಿದುಕೊಳ್ಳುತ್ತೇನೆ.

 13. ಮೊಗವ ರಂಗಡರಿಹುದು
  ಜಗನಿಯಮದನುಸಾರ
  ಸೊಗದ ನವ ಯೌವನದ ಹೊಸ್ತಿಲಲ್ಲಿ |
  ಮೊಗೆದುಂಬುವುಣಿಸೇಕೆ
  ಹೆಗಲೀವ ಸಖಿಯೇಕೆ
  ನಗಿಸಲ್ಕೆ ಸಾಕೋರ್ವ ಮಿತ್ರನಲ್ತೆ ||
  [ಉಣಿಸು = ನೀರು; ಸಖಿ = ಕಮಲದೆಲೆ]

  • ಪ್ರತಿಯೊಂದು ಬಾರಿಗೂ
   ಹಿತನವೀನತೆಯುಳ್ಳ
   ಚತುರಕವಿತೆಯನೀವ ಕಾಂಚನರಿಗೆ|
   ಸ್ತುತಿಪದ್ಯವಿದನೀವೆ-
   ನತುಲಸಂತೋಷದಿಂ
   ಜತೆಯಾಗಿರಯ್ ಸಖರೆ! ನೀವುಮೆನಗಂ||

   ಕೆಲವೊಂದು ಸಣ್ಣ-ಪುಟ್ಟ ಸವರಣೆಗಳು: ಜಗ ಎನ್ನುವ ತತ್ಸಮಪದದ ಮೂಲ ಜಗತ್ ಎಂಬುದಾಗಿರುವುದರಿಂದ ಜಗನಿಯಮ ಎನ್ನುವ ಸಮಾಸ ಸರಿಯಾಗದು. ಅದು ಜಗನ್ನಿಯಮವೆಂದಾಗಬೇಕು. ಆಗ ಛಂದಸ್ಸು ಕೆಡುತ್ತದೆ! ಹೀಗಾಗಿ “ಜಗದ ನಿಯಮವನೊಪ್ಪಿ” ಎಂದೋ “ಜಗದ ನಿಯಮದ ಹಾಗೆ” ಎಂದೋ ಸವರಿಸಬೇಕು. ಹೊಸ್ತಿಲು ಎನ್ನುವ ಶಬ್ದ ಅಸಾಧುರೂಪ. ಹೊಸಿಲು ಎನ್ನುವುದೇ ಸರಿಯಾದ ಪದ. ಇಲ್ಲಿ ಛಂದಸ್ಸಿಗೆ ಸರಿಯಾಗುವಂತೆ ಹೊಸಿಲಿನಲ್ಲಿ ಎಂದು ಮಾಡಿದರೆ ಆದೀತು. ಉಳಿದಂತೆ ಪದ್ಯವು ಅನವದ್ಯ, ಕಲ್ಪನೆಯು ಹೃದ್ಯ.

   • ಗಣೇಶರೇ – ಇಷ್ಟು ತಪ್ಪುಗಳಿದ್ದರೂ, ತಾಳ್ಮೆಯಿಂದ ಪರಿಶೀಲಿಸಿ ಸಲಹೆ ಕೊಟ್ಟು ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು. ಪದ್ಯವನ್ನು ಸರಿಪಡಿಸಿದ್ದೇನೆ ::
    ಮೊಗವ ರಂಗಡರಿಹುದು
    ಜಗದ ನಿಯಮವನೊಪ್ಪಿ
    ಸೊಗದ ನವ ಯೌವನದ ಹೊಸಿಲಿನಲ್ಲಿ |
    ಮೊಗೆದುಂಬುವುಣಿಸೇಕೆ
    ಹೆಗಲೀವ ಸಖಿಯೇಕೆ
    ನಗಿಸಲ್ಕೆ ಸಾಕೋರ್ವ ಮಿತ್ರನಲ್ತೆ ||

 14. ಆಚ್ಚಾದಿತಾಸ್ಮಿಪತ್ರೋಘೈಃ|
  ಹರಿತೈರೀರ್ಷಯಾಮುಧಾ||
  ಸರಶ್ರೀರರುಣಕ್ರುದ್ಧಾ|
  ಸೂರ್ಯಮುದ್ದಿಶ್ಯ ರೋದಿತಿ||

  (ನಾನು ಮತ್ಸರದಿಂದ ಹಸಿರೆಲೆಗಳಿಂದ ಮುಚ್ಚಲ್ಪಟ್ಟಿದ್ದೇನೆ (Green with envy ಎಂಬ ಆಂಗ್ಲೋಕ್ತಿ ಇಲ್ಲಿ ಸ್ಮರಣೀಯ),
  ಎಂದು ಕೋಪದಿಂದ ಕೆಂಪಾದ ಸರೋವರದ ಸೌಂದರ್ಯವೆಂಬ ಹೂವು ಸೂರ್ಯನನ್ನು ನೋಡಿ ಅಳುತ್ತಿದೆ ( ಎಲೆಯಮೇಲಿನ ಹನಿಗಳು).

 15. ವಿವರಣೆಯಲ್ಲಿ ಅನವಧಾನದಿಂದ ಸರಸ್ಸಿನ ಜಾಗದಲ್ಲಿ ಸರೋವರ ಬಳಸಿದ್ದೇನೆ ( ಸರೋವರ – ಸರಸ್ಸುಗಳಲ್ಲಿ ಉತ್ತಮವಾದುದು -ಈ ಅರ್ಥ ಇಲ್ಲಿ ಅಪೇಕ್ಷಣೀಯವಲ್ಲ್ಲ) ಕ್ಷಮಿಸಿ.

 16. ಪ್ರಿಯಮಿತ್ರ, ಶ್ರೀಗಣೇಶರೇ,
  ಇದೋ ಈ ತಾಣದಲ್ಲಿ ಹೊಸಬನಾದ ಕವಿಯ ಕಂದವ ಕಾಣಿರಿ.
  ಇನಿಯನ ಬರವಂ ಕಂಡಾ
  ಮುನಿಸಿಂ ಸಂಭ್ರಮಿಸಿ ಪುಲಕಕೆ ಕುಪ್ಪಸ ಬಿರಿಯೆ |
  ಮನಸಿಂ ಪೋಣಿಸಿದ ಸರಮಿ
  ಬ್ಬನಿಸಾಲೊಲ್ ಚೆಲ್ಲೆ ಬಾಲೆ ನಾಚಿ ಮೊಗ್ಗಾದಳ್ ||

  • ವಿಘ್ನೇಶ್ವರ ಕವನವು ನಿ-
   ರ್ವಿಘ್ನತೆಯಿಂಸಾಗಲೆಂದು ಹಾರೈಸುತ ಲೀ
   ವಿಜ್ಞಾಪನೆ ಮೂರೆರಡರ
   ವಿಜ್ಞಾನಿಸಿ ತಿದ್ದೆ ಸೊಗುಸು ನಿಮ್ಮಯ ಕಬ್ಬಂ

   ಶ್ರೀಯುತರೇ, ಪಧ್ಯಪಾನಕ್ಕೆ ಸ್ವಾಗತ ! ಸುಂದರ ಭಾವದ ಪದ್ಯರಚಿಸಿದ್ದೀರೆ. ಕೆಲವು ಸಣ್ನ ತಿದ್ದುಪಡಿಗಳಿವೆ. ಒಳ್ಳೆಯಪದ್ಯರಚಿಸುವ ಶಕ್ತರಾದ ನಿಮಗೆ ಇದು ಸಹಾಯಕವಾದೀತು.

   ನಿಮ್ಮ ಎರಡನೆಯಸಾಲಿನ ಭಾವ ಅಭಿಜ್ಞಾನ ಶಾಕುಂತಲವನ್ನು ನೆನಪಿಸುತ್ತದೆ. ಈ ಸಾಲಿನಲ್ಲಿ ಒಂದು ಅಕ್ಷರ ಹೆಚ್ಚಿದೆ. ಹಾಗೆಯೇ ಮೂರನೆಯ ಸಾಲಿನ ’ಸರಮಿ’ ಪದದಲ್ಲಿ ’ಮಿ’ ಮುಂದಿನ ಒತ್ತಕ್ಷರದ ದೆಸೆಯಿಂದ ಗುರುವಾಗಿ, ಒಂದು ಲಘು ಇಲ್ಲಿಯೂ ಹೆಚ್ಚಾಗುತ್ತದೆ. ನಾಲ್ಕನೆಯಸಾಲಿನಲ್ಲೂ ದೋಷವಿದೆ. …ಬ್ಬನಿಸಾಲೊಳ್ ಚೆಲ್ಲೆನಾಣ್ಚಿ ಕೆಮ್ಮೊಗ್ಗಾದಳ್ ಎಂದರೆ ಸರಿಹೋದೀತು. ಮಿಕ್ಕಸವರಣೆಗೆ ನೀವೇ ಸಮರ್ಥರು.

 17. ಪ್ರಿಯರೆ, ನಿಮ್ಮ ದೋಷಜ್ಞತೆಗೆ ಶರಣು. ಈಗ ತಿದ್ದಿ ಬರೆದಿದ್ದೇನೆ. ‘ಕುಪ್ಪಸ=ಕುಬಸ ಸರಿಯೇ ? ನೋಡಿ ಹೇಳಿ.
  ಇನಿಯನ ಬರವಂ ಕಂಡಾ
  ಮುನಿಸಿಂ ಸಂಭ್ರಮಿಸಿ ಪುಲಕಕೆ ಕುಬಸ ಬಿರಿಯೆ |
  ಮನಸಿಂ ಪೋಣ್ದಾ ಮುತ್ತಿ
  ಬ್ಬನಿಸಾಲೊಳ್ ಚೆಲ್ಲೆ ನಾಣ್ಚಿ ಕೆಮ್ಮೊಗ್ಗಾದಳ್ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)