ತನ್ನಘಾತಿಸಿದನಂಪೊಗಳ್ದನಯ್ ||
ಛ೦ದಸ್ಸು – ರಥೋದ್ಧತಾ
ವಿನ್ಯಾಸ – ನಾನನಾನನನನಾನನಾನನಾ
ತನ್ನಘಾತಿಸಿದನಂಪೊಗಳ್ದನಯ್ ||
ಛ೦ದಸ್ಸು – ರಥೋದ್ಧತಾ
ವಿನ್ಯಾಸ – ನಾನನಾನನನನಾನನಾನನಾ
ದೀಪಾವಳಿಯ ಕಾರಣ ಕೆಲವಾದರೂ ಹಬ್ಬದ ಬಗೆಗಿನ ಪದ್ಯಗಳಿರಲೆಂದು ಅಪೇಕ್ಷೆ. ಈ ನೆವದಲ್ಲಿ ಹೊಸ ಛಂದಸ್ಸುಗಳ ಅಥವಾ ವಿವಿಧಚ್ಛಂದಸ್ಸುಗಳ ಬಳಕೆಯಾಗಲೆಂಬ ಬಯಕೆಯೂ ಇದೆ. ಮೊದಲ ಹೆಜ್ಜೆಯಾಗಿ ನನ್ನ ಒಂದೆರೆಡು ಪದ್ಯಗಳು:
ದ್ರುತವಿಲಂಬಿತವೃತ್ತ||
ನರಕದಾನವಕಾಲದವಾನಲ-
ಕ್ಕುರುವಿನೀಲಪಯೋಧರವಾಗುತುಂ |
ಮೆರೆದ ಕೃಷ್ಣನ ಕಂಗಳ ಮಂಗಳ-
ಸ್ಫುರಣದೀಪಿಕೆಗಳ್ ಶುಭಕೊಪ್ಪುಗುಂ ||
ರಥೋದ್ಧತಾವೃತ್ತ||
ದೇವಗಂಗೆ ಧವಳಧ್ವಜೋಪಮಂ
ತೀವಿರಲ್ ನಭದೆ ವಾಮನಾಂಘ್ರಿಯೊಳ್
ಜೀವಿಗಳ್ಗೆ ಸುಖಶಾಂತಿಯೀವವೊಲ್
ಭಾವಿಕಂ ಗಡಿದು ಪರ್ಬಮೊಪ್ಪುಗುಂ||
ಕಂದ||
ಕತ್ತಲೆಸುತ್ತುಂ ಜಗಮಿದು
ಕತ್ತಲೆ ಸುತ್ತುಂ ಕಡಂಗಿದುದೆನುತ್ತುಂ ಬೇ-
ಸತ್ತಿರೆ ಸಂಪದನಳಿಸುತೆ,
ಸತ್ತಿರೆ ಸಂಪದಮದಂ ಬರ್ದುಂಕಿಪುದೊಳಿತಯ್||
(ಕತ್ತನ್ನು ಅಲೆಸುತ್ತ ಈ ಜಗತ್ತಿನ ಸುತ್ತಲೂ ಕತ್ತಲೆಯೇ ನೆಲಸಿದೆಯೆಂದು ಬೇಸತ್ತಿರುವ ( ಮನಸ್ಸಿನ) ಸಂಪನ್ನು (strike/bundh) ಅಳಿಸಿ ಸತ್ತಿರುವ ಸಂಪದವನ್ನು ಬದುಕಿಸುವ ಬಗೆಯೇ ಸರಿ.)
ಇದು ಒಂದು ರೀತಿಯ ಚಿತ್ರಕವಿತೆ. ಇದಕ್ಕೆ ಯಮಕಾಲಂಕಾರವೆಂದು ಹೆಸರು. ಪದಗಳು ಪುನರುಕ್ತವಾದಂತೆ ತೋರಿದರೂ ಅರ್ಥ ಬೇರೆಯೇ ಆಗಿರುವುದು ಇದರ ಚಮತ್ಕಾರ. ಇವೆಲ್ಲ ರಸಪ್ರಧಾನವಲ್ಲ. ಬರಿಯ ಕಸರತ್ತಿನ ಸಂಗತಿಗಳು. ಇಲ್ಲಿ ಸುಮ್ಮನೆ ಕಂದವನ್ನು ಸ್ವಲ್ಪ ಕಗ್ಗಂಟಾಗಿಸೋಣವೆಂದು ಸ್ವಲ್ಪ ಯತ್ನಿಸಿದ್ದೇನಷ್ಟೆ. ದೀಪಾವಳಿಯ ಪಟಾಕಿ ಗಲಾಟೆಯಂತೆಯೇ ಇದೂ ಹೆಚ್ಚು ಸಹನೀಯವಲ್ಲ:-
ಚೌಪದಿ||
ಸಾಲು ದೀಪಗಳಾಗಿ ಭರವಸೆಯ ತಾಳಗಳು
ಕಾಲ ಕುಣಿಸುತ್ತಿರಲು ಭಾವರಾಗ
ಮಾಲೆಯೊಡವರಿದು ಜಯಶೀಲೆ ಸಿರಿ ಬರುವಂತೆ
ಜಾಲಿಸಲಿ ನಿಮ್ಮ ಮನಗಳನು ಬೇಗ||
ಭಾಮಿನೀಷಟ್ಪದಿ||
ಶಾರದಾಂಬರದಲ್ಲಿಯೇ ಹಿಂ-
ಗಾರುಮಳೆ, ಕಾರಿರುಳಿನಲ್ಲಿಯೆ
ತೋರುವೀ ಸಿರಿಯೊಸಗೆ, ಸದ್ದಿನ ದಿನದೊಳೇ ಮೌನ|
ಸಾರಲೀ ಸಂದೇಶವನು ಮೆಯ್-
ದೋರಲೀ ಸಂಭಾವನೆಯನಭಿ-
ಸಾರಲೀಲಾಲಾಸ್ಯವಾಡಲಿ ಕಾವ್ಯವಧು ನಿಮ್ಮೊಳ್||