Jan 122014
 

ಯಾವುದಾದರೂ ಹಬ್ಬದ ಬಗ್ಗೆ ಐದಕ್ಕೂ ಹೆಚ್ಚು ಪದ್ಯಗಳಲ್ಲಿ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ವರ್ಣಿಸಿರಿ

  47 Responses to “ಪದ್ಯಸಪ್ತಾಹ ೯೪: ಸಂಪೂರ್ಣ ವರ್ಣನೆ”

  1. ಶಾಲೆಯಲ್ಲಿ ಶಾರದಾ ಪೂಜೆಯ ಸಂಭ್ರಮ

    ನನ್ನ ಸಣ್ಣ ಶಾಲೆಯೊಂದು
    ಚಿನ್ನದಂಥ ಹಳ್ಳಿಯಲ್ಲಿ
    ಭಿನ್ನವಾಗಿ ಕಂಡ ದಿನವೆ ವಿಜಯದಶಮಿಯು I
    ಅನ್ನ ಬೇಡ , ಚೀಲ ಕಾಡ
    ದಿನ್ನು ನಮ್ಮ ಪಾಠದೊಡನೆ
    ಬೆನ್ನನೇರ್ವಯೇಟುಗಳಿಗೆ ರಜವೆಯಾದಿನ II ೧II

    ಏರಿ ಬಿರಿದ ದಾಸವಾಳ
    ಸೇರಿಕೊಂಡ ರತ್ನಗಂಧಿ
    ಹಾರಿ ಬಿದ್ದು ಕುಯಿದುಕೊಂಡು ಚೀಲ ತುಂಬುವೆ I
    ಬೇರೆ ಬೇಕು ಬಾಳೆ ಹಣ್ಣು
    ನಾರಿಕೇರ ಕೂಡಲದಕೆ
    ಶಾರದಾಂಬೆ ಪೂಜೆಗೆಂದು ಹಿಡಿದು ಹೊರಡುವೆ II ೨II

    ಶಾಲೆಯಲ್ಲಿ ಕಲೆತು ನಾವು
    ಮೂಲೆಯಲ್ಲಿ ಹೂವ ಕಟ್ಟಿ
    ಮಾಲೆ ಮಾಡಿ ಗುರುಗಳತ್ತ ಕೊಟ್ಟು ಬಿಡುವೆವು I
    ಶಾಲನೊಂದು ಹೊದ್ದು ಕೊಂಡು
    ಚೀಲವನ್ನು ತೂಗುಹಾಕಿ
    ಶಾಲಿನಿಯನೆಪೂಜೆ ಗೈಯಲಲ್ಲಿಯರ್ಚಕ II ೩II

    ದೇವಿ ಚಿತ್ರಪಟವನಿಟ್ಟು
    ನೋವು ತರುವ ಪುಸ್ತಕಕ್ಕೆ
    ಭಾವದಿಂದ ಭಜಿಸಲಂದು ಭಜನೆಯಾಯಿತು I
    ಕಾವ ದುರ್ಗೆಗಂದು ನಾವು
    ಹೂವು ಹಾಕಿ ಕರವ ಮುಗಿದು
    ಸೇವೆ ಗೈದಬಿಂಕದಲ್ಲೆ ಶಿರವು ಬಾಗಿತು II ೪II

    ಸೆಡವು ಬಿಡುತಲಂದು ಪಿತರು
    ಮಡಿಲ ಮೇಲೆ ಮಕ್ಕಳನ್ನು
    ಹಿಡಿಸಿಯೊಂದು ಹಳದಿ ತುಂಡು ಬರಹ ಕಲಿಸಲು II
    ತಡೆಯು ಮುಂದೆ ಬಾರದಂತೆ
    ತೊಡೆಯ ಮೇಲೆಯಕ್ಕಿತಟ್ಟೆ
    ಯಿಡಲು ಮೂಡಿತಲ್ಲಿ ಹೆಸರು ವಕ್ರತುಂಡನ II ೫II

    ಚಿಕ್ಕ ಮಕ್ಕಳಿನ್ನು ಮುಂದೆ
    ಬಿಕ್ಕಿಯಳುತ ಶಾಲೆ ಕಡೆಗೆ
    ಚೊಕ್ಕ ಬಳಪ ಹಿಡಿದು ಬರಲು ನಾಂದಿಯಾಯಿತು I
    ಪಕ್ಕದಲ್ಲೆಯಕ್ಕನಿರಲು
    ಅಕ್ಕ-ಪಕ್ಕದವರುಯೆಲ್ಲ
    ಮಿಕ್ಕ ದಿನವು ಸಿಗುವರೆಂಬ ಧೈರ್ಯ ಸೇರಿತು II ೬II

    ಹೋಗಿ ಜಗಲಿಯಲ್ಲಿ ಕುಳಿತು
    ಕಾಗದವನು ಬಿಡಿಸಿ ಹರಡಿ
    ತೇಗು ಬರುವ ತನಕವಂದು ಭಕ್ಷ್ಯ ತಿನ್ನಲು I
    ಕಾಗೆಯಂತೆ ಕಿರುಚಲ೦ದು
    ಜೋಗ ಮೊರೆವ ಸದ್ದಿನಂತೆ
    ಭೋಗ-ಭಾಗ್ಯ ದಶಮಿಯಂದು ನಮ್ಮದಾಯಿತು II ೭II

    ಸಾರವಿಲ್ಲಿದೆ:-

    ೧. ಶಾಲೆಯ ಏಕತಾನತೆಗೆ ಬದಲಾವಣೆ ಅಂದರೆ ವಿಜಯ ದಶಮಿ. ಬೇರೇನೂ ಅಲ್ಲಿರದು. ಬುತ್ತಿಯ ಭಾರವಿಲ್ಲ ,ಪೆಟ್ಟಿನ ನೋವಿರದೆಂಬ ಸಂತಸ

    ೨. ಶಿಕ್ಷಕರ ಕೋರಿಕೆಯಂತೆ ಸಾಧ್ಯವಾಗುವವರು ಹಣ್ಣು ,ಕಾಯಿ ತರುವುದು . ಸಿಹಿ ಅವಲಕ್ಕಿಯ ಪ್ರಸಾದಕ್ಕಾಗಿ

    ೩. ಹೂ ಮಾಲೆ ಮಾಡುವ ಸಂಭ್ರಮ ,ಪೂಜೆಗೆ ಬರುವ ಅರ್ಚಕರ ಚಿತ್ರಣ
    ೪. ಶಾಲಾ ಮಕ್ಕಳಿಂದ ಶಾಲೆಯಲ್ಲಿ ಭಜನೆ
    ೫. ಯಾವತ್ತು ಗಾಂಭೀರ್ಯದಿಂದ ಮಕ್ಕಳನ್ನು ಮಡಿಲಿಗೇರಿಸದ ಪಿತರು ಮತ್ತು ಅಕ್ಷರಾಭ್ಯಾಸ .
    ೬. ಶಾಲೆಯಲ್ಲಿ ತಮ್ಮ ಮನೆಯ ಮಕ್ಕಳಿಲ್ಲವೆಂಬ ಹೊಸಬರ ಅಳುಕು ಮತ್ತು ಅಕ್ಕ /ಅಣ್ಣ೦ದಿರಿರುವ ಮಕ್ಕಳ ಧೈರ್ಯ
    ೭. ನಮ್ಮನ್ನು ಗರ್ಜಿಸುವವರು ಆ ದಿನ ಯಾರೂ ಇಲ್ಲವೆಂಬ ಧೈರ್ಯದಲ್ಲಿ ನಮ್ಮೆಲ್ಲರ ಗಲಭೆ

    • ಭಾಷೆ-ಛಂದಸ್ಸುಗಳಲ್ಲಿ ಯಾವುದೇ ಲೋಪವಿಲ್ಲದ ನಿಮ್ಮ ಈ ಪ್ರಯತ್ನವು ಸ್ತುತ್ಯವಾದರೂ “ಕಾವ್ಯ”ವೆಂಬುದು ಇಲ್ಲಿ ಬಲುಮಟ್ಟಿಗೆ ಕಾಣದಾಗಿದೆ. ದಯಮಾಡಿ ವಿಶಿಷ್ಟಕಲ್ಪನೆಗಳು ರಸಮುಖಿಯಾಗುವತ್ತ ಅವಧಾನವಿರಿಸಿರಿ.

  2. ಈಗಲೀಗಿನ ಹೀಗೊಂದು ಲಹರಿ

    ಕರಪಾದದಲೆತ ದುಡಿತಗಳ ಫಸಲಿನ ರಾಶಿ
    ಸ್ಥಿರವಡೆದ ತುಡಿವದನಿ ನವರಾಗವಾಗಿ
    ಹೊರಗಿಟ್ಟ ಎದೆಯ ಮಿಡಿತಗಳೆಲ್ಲ ರಂಗೋಲಿ
    ತಿರುಪೆ ಹರುಕುಗಳ ಸುಡಲುರಿಯೆದ್ದ ಭೋಗಿ

    ಪೆಟ್ಟಿಗೆಯೆನೆದ್ದು ಬಹ ದೇವ ಮಾನವ ಜಂತು
    ಅಟ್ಟದಿಂಕೆಳಗಿಳಿದು ಮಂಟಪದಿ ನಿಲ್ಲೆ
    ಬೊಟ್ಟಿಡುವ ದಾಸಯ್ಯ ಗಂಗೆತ್ತುಗಳೊ ವೇಷ
    ಕಟ್ಟಾಡೆ ಹೂ ಕಡಲೆ ಪಡಿ ಕಬ್ಬು ಜಲ್ಲೆ

    ಕಾಲಿಲ್ಲದೋಡುತಿರೆ ಧಾನ್ಯರಾಶಿಗಳೆಲ್ಲ
    ಮೇಲೆದ್ದು ಕುಣಿಯೆ ಬಣ್ಣಗಳ ಗಾಳಿಪಟ
    ಚಾಲಿಸದೆ ನಿಷ್ಕ್ರಿಯತೆ ಚಾಚಿಹುದೆ ಕಾಲುಗಳ
    ಆಲಿಸದೊ ಸಂಕ್ರಾಂತಿ ಬಿಸುಡು ಮನದೊರಟ?

    ಸರಿ ಪೂರ್ವದಿಂದುತ್ತರಕ್ಕುತ್ತರಿಸಿ ಮುಂದು
    ವರೆಯೆಂಬೆಯೇಂ ಮೊದಲು ಕಳೆ ಜಡಭ್ರಾಂತಿ
    ಗೆರೆಗಳೆಲ್ಲಿಂದೆಲ್ಲಿ ಸುತ್ತಲೋ? ಮೇಲಕೋ?
    ಬರೆದುದನಳಿಸಿ ಬರೆವ ಕ್ರಾಂತಿ ಸಂಕ್ರಾಂತಿ

    ತನ್ನೊಳಿಹ ಬಿಸಿ ಪುಷ್ಯಹೇಮಂತಶೈತ್ಯ ಹೊರ
    ಗಿನ್ನುಳಿಯದೆನೆ ಮಕರರಾಶಿಗಿದೆ ಕಾಲ
    ಮನ್ನಣೆಯೆ ಗಜದರ್ಪ? ಚಕ್ರಮೆಂದಿಗೊ? ನೆಚ್ಚು
    ತಿನ್ನೆಷ್ಟುದಿನ? ಹೆಜ್ಜೆಯಿಡು ಸರಿಸಿ ಜಾಲ

    ಸತತನರ್ತಿಪ ಪ್ರಕೃತಿಗಿಂದೇನು ಪರ್ವದಿನ
    ಮೃತನಂತಿರದೆ ಮಣ್ಣೊಳಾಟವಾಡುವುದೆ?
    ಮತವ ದಾಟುತ ಮತಿಗೆ ಗತಿಯುಡುಗೆ ತೊಡಿಸುವುದೆ
    ಸ್ತುತಿ ನಿಜದೆ ನಿನ್ನತಿಳಿಯುವುದೆ? ತೊಡಗುವುದೆ?

  3. ಉಬ್ಬುತಗ್ಗಿನ ಬಾಳ ಹಾದಿಯ
    ಮೊಬ್ಬು ಮಾಗಿಯ ಮುಸುಕ ಸರಿಸುತ
    ಲೆಬ್ಬಿಸೆಮ್ಮನು ಹಬ್ಬ ಬಂದುದು ಕಾಣ ಸಂಕ್ರಾಂತಿ |
    ಕಬ್ಬುಜಲ್ಲೆಯು ತಂದ ತೋರಣ
    ತಬ್ಬಿ ಬಾಳಲು ಕಂಡ ಕಾರಣ
    ಹಬ್ಬುತೆಲ್ಲೆಡೆ ಹರುಷ ತಂದುದು ನೆಲೆಸೆ ಸುಖಶಾಂತಿ ||೧||

    ಬೆಳ್ಳದಾಗಿಸಿ ಹುರಿದ ಕಪ್ಪನೆ
    ಯೆಳ್ಳ ಜೊತೆಗೂಡಿಸಿರಲೊಪ್ಪುವ
    ಬೆಲ್ಲ ಕೊಬ್ಬರಿ ಚೂರೊಡನೆ ಹುರಿಗಡಲೆ ಬೀಜವದು |
    ಎಲ್ಲ ಬೆರೆಸಿರಲವನು ಹದದಲಿ
    ಬಲ್ಲೆಯೇನದು ಪಂಚ ಕಜ್ಜಯ
    ಮೆಲ್ಲಲಾಗದುವದುವು ಪೂಜೆಸಿ ದೇವಗೀವನಕಾ ||೨||

    ಮುಂಚೆ ಸಂಜೆಯಲಂದು ರೇಷಮೆ
    ಯಂಚ ಲಂಗವ ತೊಟ್ಟು ನಲಿಯುತ
    ಲಂಚೆ ನಡುಗೆಯ ನಡುವೆ ಬೀರುತ ಮಿಂಚ ಮುಗುಳನು ನಾಂ |
    ಹಂಚಲೆಳ್ಳನು ತುಂಬೆ ತಂದಿಹ
    ಮಿಂಚಿನಕುಡಿಕೆಯಂಚಿಗಮ್ಮನು
    ಕೊಂಚ ಸುಣ್ಣವ ಬಳಿದು ನೀವಳಿಸಂದು ಕಳುಹಿರೆ ತಾಂ ||೩||

    ತೆರಳೆ ಮನೆಮನೆ ಬೀರಲೆಂದ
    ಕ್ಕರದೆ ಸಕ್ಕರೆಯಚ್ಚೊಡೆಳ್ಳ,ಕು-
    ಸುರಿಯಕಾಳ, ಕದಳಿಯ, ಕಬ್ಬೊಡೆ ಬೋರೆಯವರೆಯನುಂ |
    ಇರುಳಲಾರತಿ ಕಬ್ಬು,ಕಾಸಿನ
    ಸಿರಿಯ ಧಾರೆಯು ಪುಟ್ಟ ಕಂದಗೆ
    ಮರಳಿ ಮರಿಯೆಳ್ಳು ಮರುದಿನ ಮತ್ತುಳಿದ ಹರುಷವದುಂ ||೪||

    ಒಗ್ಗಿ ಬಂದಿಹ ಹಬ್ಬ ವೀದಿನ
    ಹುಗ್ಗಿಯೂಟದ ಸಗ್ಗ ಕಾಣಿದು
    ಹೆಗ್ಗಳಿಕೆಯೇನಿದುವು ನಮ್ಮಯ ಹಳ್ಳಿ ಬದುಕಿನೊಳು |
    ಸುಗ್ಗಿ ಬಂದಿಹ ಹಿಗ್ಗು ಕಾಣಿದು
    ನುಗ್ಗಿ ನೇಗಿಲನೆಳೆದ ಯೋಗಿಯ
    ಬಗ್ಗಿ ಪೂಜೆಸೆ ಬಸವಳಿದ ಬಸವನ್ನ ನೆನೆಪಿನೊಳು ||೫||

    ಉತ್ತರಾಯಣ ಪುಣ್ಯಕಾಲದೊ
    ಳುತ್ತ ಧಾರಿಣಿಯಿತ್ತ ಧಾರಣ
    ಬಿತ್ತ ಕಾರಣದತ್ತ ಪೂರಣ ಬಂದ ಮೂಲವಿದೊ |
    ಅತ್ತ ವರುಷದ ಮೊದಲಿದೇನಿದು
    ವಿತ್ತ ವರುಷದ ಕೊನೆಯೊ ಕಾಣೆನು
    ಸುತ್ತಿ ಸರಿದಿರೆ ವರುಷ ನಡುವಿನ ಸಂಧಿ ಕಾಲವಿದೊ ||೬||

    ಪೊಳ್ಳು ಪೊರೆಕಳಚಿರುವ ಗೆಳೆತನ
    ದೆಳ್ಳ ಜೊತೆಗದೊ ಬೆರೆತ ಮಮತೆಯ
    ಬೆಲ್ಲ ಹೊಂದಿದು ಬಾಳ್ಗೆ ಭರವಸೆ ಭಾವ ಸಂಕ್ರಾಂತಿ |
    “ಎಳ್ಳು ತಿಂದೊಳ್ಳಿತೆನು” ನೀನೆಂ
    ದೆಳ್ಳ ನೀಡುವ ಹಬ್ಬ ಕಾಣಿದು
    ದೊಳ್ಳೆ ನೀತಿಯ ಸಾರುತಿರುವುದು ಮರಳಿ ಸಂಕ್ರಾಂತಿ ||೭||

    ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

  4. ೧) ಎಬ್ಬಿಸೆಮ್ಮನು = ಎಬ್ಬಿಸು+ಎಮ್ಮನು ಎಂದು ಸಂಬೋಧನೆಯಾಗುತ್ತದೆ. ಎಬ್ಬಿಸೆ+ಎಮ್ಮನು ಎಂದಾಗುವುದಿಲ್ಲ.
    ೨) ದೇವಗೀವನಕಾ – ಹೇಗೂ ಪಾದಾಂತ್ಯದ್ದು ಗುರುವೆನಿಸುತ್ತದೆ. ದೇವಗೀವನಕ ಎಂದೇ ಸರಿಯಾಗಿ ಬರೆಯಿರಿ. ಅರ್ಥವಾ ದೇವಗೀವನಕಂ ಎನ್ನಿರಿ.
    ೩) ನಡುಗೆ – ನೆಡಿಗೆ
    ೪) ಅಚ್ಚೊಡೆ, ಕಬ್ಬೊಡೆ – ಸಾಧುರೂಪಗಳೆ? ಇರುಳಲಾರತಿ ~ ಇರುಳೊಳಾರತಿ
    ೫) ನೀವು ‘ಕಾಣ್’ ಪದ ಬಹಳವಾಗಿ ಬಳಸುವಿರಿ.
    ೭) ಬೆಲ್ಲ ಹೊಂದಿದು? ಕಾಣಿದುದೊಳ್ಳೆ?
    ೩ ಹಾಗೂ ೪ನೆಯ ಪದ್ಯಗಳಲ್ಲಿ ಸಂಪ್ರದಾಯದ ಅಂಶಗಳನ್ನು ಚೆನ್ನಾಗಿ ತೋರಿಸಿರುವಿರಿ.

    • ನಿಮ್ಮ ಕಾಳಜಿಗೆ ಧನ್ಯವಾದಗಳು ಪ್ರಸಾದ್ ಸರ್,
      ೧) ಎಬ್ಬಿಸೆಮ್ಮನು => “ಎಬ್ಬಿಸೆನೆ ತಾ”
      ೨) ದೇವಗೀವನಕಾ => “ದೇವಗೀವನಕ”
      ೩) ನಡುಗೆ => “ನೆಡಿಗೆ”
      ೪) ಅಚ್ಚೊಡೆ, ಕಬ್ಬೊಡೆ – ಸಾಧುರೂಪಗಳೆ? ನನಗೂ ತಿಳಿಯದು, ಒಡ = ಜೊತೆ ಎಂದಿದೆ. ನಿಮ್ಮೊಡೆ/ನಮ್ಮೊಡೆ ಎಂಬುದನ್ನು ಕೇಳಿದ ನೆನಪು.
      ಇರುಳಲಾರತಿ => “ಇರುಳೊಳಾರತಿ”
      ೫) ಮೂರು “ಕಾಣ್” ಪದಗಳನ್ನ ತೆಗೆದುಹಾಕುವ ಪ್ರಯತ್ನ! :
      ಒಗ್ಗಿ ಬಂದಿಹ ಹಬ್ಬವೀದಿನ
      ಹುಗ್ಗಿಯೂಟದ ಸಗ್ಗ “ತಂದಿರೆ”(ನಗ್ಗ ಕಾಣಿದು)
      ಹೆಗ್ಗಳಿಕೆಯೇನಿದುವು ನಮ್ಮಯ ಹಳ್ಳಿ ಬದುಕಿನೊಳು |
      ಸುಗ್ಗಿ ಬಂದಿಹ “ಹಿಗ್ಗಿನಲಿತಾ”(ಹಿಗ್ಗು ಕಾಣಿದು)
      ನುಗ್ಗಿ ನೇಗಿಲನೆಳೆದ ಯೋಗಿಯ
      ಬಗ್ಗಿ ಪೂಜೆಸೆ ಬಸವಳಿದ ಬಸವನ್ನ ನೆನೆಪಿನೊಳು ||೫||
      ೭) ಬೆಲ್ಲ ಹೊಂದಿದು? => ಎಳ್ಳ ಜೊತೆಗದೊ “ಬೆರೆತು” ಮಮತೆಯ
      ಬೆಲ್ಲ “ಹೊಂದಿರೆ” ….
      ಕಾಣಿದುದೊಳ್ಳೆ? => …ಹಬ್ಬ “ವೇನಿದುವೊಳ್ಳೆ” ನೀತಿಯ…
      (ತಿದ್ದುಪಡಿಗಳು ಬಹಳವಿರುವುದರಿಂದ, ಸಾದ್ಯವಾದರೆ ಮೂಲದಲ್ಲಿಯೇ ಸರಿಪಡಿಸಲು ಸಹಾಯಮಾಡಿ pl..)

      • ಹೆಗ್ಗಳಿಕೆಯೇನಿದುವು ನಮ್ಮಯ – ಹೆಗ್ಗಳಿಕೆಯೇನೆಂಬೆನೆಮ್ಮಯ

    • ೫) ಅತ್ತ ವರುಷದ ಮೊದಲಿದೇನಿದು
      ವಿತ್ತ ವರುಷದ “ಕೊನೆಯದಾದುದೊ”
      ಸುತ್ತಿ ಸರಿದಿರೆ ವರುಷ ನಡುವಿನ ಸಂಧಿ ಕಾಲವಿದೊ ||೬||

  5. (ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆ)

    ಶ್ರಾವಣದೊಳಾಚರಿಪ,
    ದೇವಕೀನಂದನನ,
    ಗೋವರ್ಧನನ ಜಯಂತಿಯ ಬಣ್ಣಿಪೆಂ |
    ಪಾವನಾತ್ಮವ ಪಡೆಯೆ,
    ಸೇವಿಪರ್ ಕೃಷ್ಣನಂ,
    ಭಾವುಕತೆಯೊಳಗೊಂಡು ಭಜಿಪ ಭಕ್ತರ್ ||

    ನಸುಕಿನೊಳ್ ಸ್ನಾನಮಂ
    ಬಿಸಿನೀರಿನಿಂ ಗೈದು,
    ಪೊಸಬಟ್ಟೆಯಂ ಧರಿಸಿ ಸಿದ್ಧರಪ್ಪರ್ |
    ಬಿಸಜಾಕ್ಷನೊಲಿಯುವೊಲ್
    ಬೆಸಗೈಯೆ ಪರ್ಬಮಂ,
    ರಸಿಕಭಕ್ತರ್ ಮುದದೆ ನೆರೆಯುತಿರ್ಕುಂ ||

    ಪೊತ್ತರೆಯೊಳಂಗಣದೆ,
    ಚಿತ್ತಾರದೊಳ್ ಮೆರೆವ,
    ಚಿತ್ತಾಪಹಾರಿಯಿರೆ, ರಂಗೋಲೆಯೊಳ್ |
    ಪಿತ್ತಲಿನ ತರುಗಳಿಂ-
    ದತ್ತಲೊಯ್ವರ್ ಗೃಹಕೆ,
    ಪತ್ತಾರು ಬಣ್ಣಗಳ ಬಿಡಿಪೂಗಳಂ ||

    ಗೋಪಾಲಮೂರ್ತಿಯಂ
    ಜೋಪಾನದಿಂದೆತ್ತಿ,
    ತಾಪಮಿಲ್ಲದ ಜಲದೆ ತೊಳೆದು ನಲಿವಿಂ,|
    ರೂಪವತಿಯಳ್ತಿಯಿಂ,
    ರೂಪವಂತನ ಪಣೆಗೆ,
    ಲೋಪಮಿರದವೊಲೊತ್ತುಗುಂ ತಿಲಕಮಂ ||

    ಸಿಂಗರದೆ ಕಳೆಗೊಂಡ
    ರಂಗನಂ ಕಾಣಿರೈ,
    ಕಂಗೊಳಿಪನುಟ್ಟ ಪಟ್ಟೆಯ ದಟ್ಟಿಯೊಳ್ |
    ಶೃಂಗಾರಮಂ ಪೊಂದಿ,
    ರಂಗಿನಾಭರಣದಿಂ-
    ದಂಗನೆಯರಾಕರ್ಷಿಪಂ ನೋಟದಿಂ ||

    ನಂದಗೋಪಾಲನಂ,
    ಸುಂದರಿಯರೆಲ್ಲರುಂ,
    ಸುಂದರಪದಂಗಳಂ ಪಾಡಿ ನುತಿಪರ್ |
    ಮಂದಾನಿಲಂ ಬೀಸೆ,
    ಸಂದ ಗಂಧದ ಧೂಪ-
    ಮಂದದಿಂದಾಲಯದೆ ಚರಿಸೆ ಮೋದಂ ||

    ಮೊಗದೆ ಮಿನುಗುವ ಮುಗುಳು-
    ನಗೆಯ ಬಣ್ಣಿಪುದೆಂತು ?
    ಸಿಗದೊಂದುಪಮೆಯುಂ ಜಗದೊಳೆಲ್ಲಿಯುಂ |
    ಜಗದೊಡೆಯನಂ ಪೊಗಳಿ,
    ನಗೆಮೊಗಂಗರ್ಪಿಪರ್,
    ಬಗೆಬಗೆಯ ಫಲಭಕ್ಷ್ಯಭೋಜ್ಯಂಗಳಂ ||

    ಪೂಜಿಸಿರೆ ಕೃಷ್ಣನಂ,
    ಯೋಜಿಸುತೆ ರಂಜನೆಯ,
    ಮೋಜಿರ್ಪ ಕಥೆಗಳಂ ಪೇಳುತಿರ್ಕುಂ |
    ಗಾಜೊಳಗೆ ಮೀನಿನಾ
    ಸಾಜದಾಟಂಗಳಂ,
    ಸೋಜಿಗದೆ ವೀಕ್ಷಿಪರ್ ಸಂತೋಷದಿಂ ||

    ಸಡಗರದೆ ಕಂದಂಗೆ
    ತೊಡಿಸಿ,ನಂದಕಿಶೋರ-
    ನುಡುಗೆಯಂ,ಕೈಗಿತ್ತು ಕೊಳಲನೊಂದಂ |
    ನಡುವಂ ಬಳುಕಿಸುತ್ತೆ,
    ನಡುಮನೆಯೊಳಾ ಪೋರ-
    ನಡಿಗಳನ್ನಿಡುವುದನ್ನಡಗಿ ನೋಳ್ಪರ್ ||

    ಸವಿಯೂಟವುಣ್ಣಲ್ಕೆ,
    ಸವಿನಯದ ಕರೆಗೆಂದು,
    ಸವೆಸುತ್ತೆ ಕಾಲಮಂ, ಕಾಯುವಾಗಳ್,|
    ಲವಲವಿಕೆಯಿಂ ಗೃಹಿಣಿ-
    ಯವರನೆಲ್ಲಂ ಭೋಜ-
    ನವ ಸೇವಿಸಲ್ಕೆಂದು ಕರೆಯುತಿರ್ಕುಂ ||

    • ಸೊಗಸಾದ ಭಾವ-ಬಂಧಗಳ ಹೊನ್ನಿನ ಬೆಳೆಯನ್ನು ಬೆಳೆದಿದ್ದೀರಿ! ಧನ್ಯವಾದ.

      • ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ,ಗುರುಗಳೆ.

    • I fully endorse Sri RG.
      Other sundry:
      ೧) ಗೋವರ್ಧನನ ಜಯಂತಿಯ ಬಣ್ಣಿಪೆಂ ~ ಗೋವರ್ಧನಜಯಂತಿಯಂ ಬಣ್ಣಿಪೆಂ |
      ೨) ರಸಿಕಭಕ್ತರ್ ಮುದದೆ ನೆರೆಯುತಿರ್ಕುಂ: ಭಕ್ತರ್ ನೆರೆಯುತಿರ್ಪರ್ ಅಥವಾ ಭಕ್ತವೃಂದಂ ನೆರೆಯುತಿರ್ಕುಂ
      ೩) ಅಂಗನೆಯರಾಕರ್ಷಿಪರ್ ನೋಟದಿಂ: ಆಕರ್ಷಿಸುತ್ತಿರುವವನು ಕೃಷ್ಣನಾದ್ದರಿಂದ, ‘ಅಂಗನೆಯರಂ ಕರ್ಷಿಪಂ ನೋಟದಿಂ’.
      ೪) ಸಿಗದೊಂದು/ಪಮೆಯುಂ ಜ/ಗದೊಳೆಲ್ಲಿಯುಂ – ಮಧ್ಯಗಣದ ಗತಿ ಸೊರಗಿದೆ. ಮಾದರಿ ಸವರಣೆ: ಸಿಗದುಪಮೆ ವಿಶ್ವದೊಳಗೊಂದೆಲ್ಲಿಯುಂ.
      ೫) ಮೋಜಿರ್ಪ ಕಥೆಗಳಂ ಪೇಳುತಿರ್ಕುಂ – ಪೇಳುತಿರ್ದುಂ/ರ್ಪರ್
      ೬) ನಡುವಂ ಬ/ಳುಕಿಸುತ್ತೆ – ನಡುವನುಂ ಬಳುಕಿಸುತೆ
      ೭) ಕರೆಯುತಿರ್ಕುಂ – ಕರೆಯುತಿರ್ಪಳ್

      • 1) ಗೋವರ್ಧನನ ಜಯಂತಿಯ ಬಣ್ಣಿಪೆಂ-ಸರಿಯಿದೆ.ನೀವು ಸಮಾಸ
        ಮಾಡಿದ್ದೀರಿ.ಅದೂ ಸರಿಯೆ.
        2)ರಸಿಕಭಕ್ತರ್ ಮುದದೆ ನೆರೆಯುತಿರ್ಕುಂ-ಯಾಕೆ ಸರಿಯಲ್ಲವೆಂದು ಕೃಪೆಯಿಟ್ಟು ತಿಳಿಸಿರಿ.
        3) ನೀವು ತಪ್ಪಾಗಿ ಗ್ರಹಿಸಿದಂತಿದೆ. ಪದ್ಯದಲ್ಲಿ-ಅಂಗನೆಯರಾಕರ್ಷಿಪಂ
        ನೋಟದಿಂ-ಎಂಬುದಾಗಿ ಇದೆ. ಅಂಗನೆಯರ+ಆಕರ್ಷಿಪಂ ನೋಟದಿಂ-ಎಂಬುದೂ ತಪ್ಪಲ್ಲವೆಂದು ನನ್ನ ಅಭಿಪ್ರಾಯ.
        4)ಗತಿ ಸೊರಗಿರುವುದು ನಿಜ.
        5)ಮೋಜಿರ್ಪ ಕಥೆಗಳಂ ಪೇಳುತಿರ್ಕುಂ-ಯಾಕೆ ಸರಿಯಲ್ಲವೆಂದು ಕಾರಣ ನೀಡುವಿರಾ ?
        6)ನಡುವಂ ಬಳುಕಿಸುತ್ತೆ – ಯಾಕೆ ಸವರಣೆಗೊಂಡಿದೆಯೆಂದು ತಿಳಿಯಲಿಲ್ಲ.
        7)ಕರೆಯುತಿರ್ಕುಂ-ಕರೆಯುತಿರ್ಪಳ್ ಯಾಕಾಗಬೇಕೆಂದು ಗೊತ್ತಾಗಲಿಲ್ಲ.

  6. ಈಗಾಗಲೇ ಹಲವರು ಮಿತ್ರರು ಷಟ್ಪದಿ-ಚೌಪದಿಗಳಲ್ಲಿ ಬಗೆಬಗೆಯ ಹಬ್ಬಗಳನ್ನು ಕುರಿತು ಸ್ನಿಗ್ಧವಾಗಿ ಕವನಿಸಿದ್ದಾರೆ. ಅವರಿಗೆಲ್ಲರಿಗೂ ಅಭಿನಂದನಪೂರ್ವಕಧನ್ಯವಾದಗಳು. ಅನೇಕರು ಐದಕ್ಕಿಂತ ಹೆಚ್ಚು ಪದ್ಯಗಳನ್ನು ರಚಿಸಿ ನಮಗೆಲ್ಲ ಮತ್ತೂ ಮಿಗಿಲಾದ ಹಿಗ್ಗನ್ನು ತಂದಿದ್ದಾರೆ. ಆದರೆ ನಾನೀಗ ಕೇವಲ ಸಂಪ್ರದಾಯಪೂರಣಕ್ಕಾಗಿ minimum ಪದ್ಯಗಳನ್ನು ತಮ್ಮಲ್ಲಿ ಪ್ರಸ್ತುತಿಸಲಿದ್ದೇನೆ. ಇದಾದರೂ ನವರಾತ್ರಮಹೋತ್ಸವದ ನಡುವೆ ಮೂಡಿ ಮರೆಯಾಗುವ ಯಾರಿಗೂ ಅಷ್ಟಾಗಿ ಎದ್ದುತೋರದ (ಹತ್ತರಲ್ಲಿ ಒಂದೆಂಬಂತೆ ಮಿಂಚಿ ಮಾಯವಾಗುವ) ಸರಸ್ವತೀಪರ್ವವನ್ನು ಕುರಿತದ್ದು. ಸರಸ್ವತಿ ನಮ್ಮೆಲ್ಲರ ಆರಾಧ್ಯದೇವತೆ ತಾನೆ!

    ರುಂದ್ರನವರಾತ್ರಪರ್ವದೆ
    ಸಾಂದ್ರಸಮುದ್ರೋಪಮಾನಮಧ್ಯದೆ ತಾಯೇ!
    ಮಂದ್ರಶ್ರುತಿಗೀತದ ನಿ-
    ಸ್ತಂದ್ರಾನುಭವಾಭಮಲ್ತೆ ನಿನ್ನಯ ಪರ್ವಂ|| ೧ ||

    ಮೂಲಂ ಮಾವಂಗೊಲ್ಲದ
    ಶೂಲೋಪಮತಾರೆಯೆಂಬರಾದೊಡೆ ನೀನಾ |
    ಮೂಲದೆ ಜನಿಸಿಯುಮಘನಿ-
    ರ್ಮೂಲಂಗುಸಿರಾಗಿ ಸಂದುದೊಂದಚ್ಚರಿಯೇ ? || ೨ ||

    ವಾಗಾಪಗಾಂಬಿಕಾರೂ-
    ಪಾಗತಿಯುತಿ ನಿನ್ನದಾದೊಡಂ ಲಿಪಿವಪುವಿಂ |
    ಸ್ವಾಗತಿಪುದೆ ಸುಕರಮೆನಲ್
    ಯೋಗಂಗೊಂಡಿರ್ಪೆಯಲ್ತೆ ಪುಸ್ತಕತನುವಿಂ || ೩ ||

    ಗೀತಮಯೀ! ವಾದ್ಯಮಯೀ!
    ಸ್ಫೀತರಸೇ! ಕಾವ್ಯ-ಶಾಸ್ತ್ರಮಯಿ! ನಾಟ್ಯಮಯೀ!
    ಚೇತೋಹರಚಿತ್ರಮಯೀ!
    ಮಾತೇ! ಶಿಲ್ಪಮಯಿ! ನಿನ್ನನೀ ಪರಿಯರಿವರ್ || ೪ ||

    ಸಂಜೆಯ ಪೂಜೆಗೆ ಸಂದ ನಿ-
    ರಂಜನಿ! ನಿನ್ನಿಂ ಸಮಸ್ತವಿದ್ಯಾರ್ಥಿಜನಂ |
    ರಂಜಿಪುದೌ ಮತ್ತೋದುವ
    ಬಿಂಜಂ ಮತ್ತಿಲ್ಲಮೆಂದು ದಶಮಿಯ ವರೆಗಂ 🙂 || ೫ ||

    ( ಯಾವುದಾದರೂ ವಿವರಣೆ ಬೇಕಿದ್ದಲ್ಲಿ ಆಸಕ್ತರಿಗೆ ಯಥಾಸಂಭವವಾಗಿ ನೀಡುವೆ)

    • 🙂 ಸರ್ , ೨ನೇ ಪದ್ಯಕ್ಕೆವಿವರಣೆ ನೀಡುವಿರಾ ?

      • ಭಾಲರವರೆ,
        ಮೂಲಾನಕ್ಷತ್ರದ ಹೆಣ್ಣಿಗೆ ಮಾವನಿಲ್ಲದ ಮನೆಯಾಗಬೇಕಲ್ಲವೆ. ಸರಸ್ವತಿಯದು ಅದೇ ನಕ್ಷತ್ರವಾದರೂ, ತನ್ನ ಮಾವನಾದ ವಿಷ್ಣುವಿಗೆ ಆಕೆ ಮುಳುವಾಗಿಲ್ಲ.

    • ಐದನೆಯ ಪದ್ಯದ ಹಾಸ್ಯ ತುಂಬ ಚೆನ್ನಾಗಿದೆ. ಆದರೆ ಇಲ್ಲಿ ’ಮತ್ತೆ’ ಪದದ ದ್ವಿರುಕ್ತಿಯಾಗಿದೆಯಲ್ಲ! ಅವುಗಳು ವಿವಿಕ್ತಾರ್ಥಗಳಲ್ಲಿ ಪ್ರಯುಕ್ತವಾಗಿವೆಯೆ?
      ಮೂರನೆಯ ಪದ್ಯವಂತೂ ಅತ್ಯುತ್ತಮ.
      ಎರಡನೆಯ ಪದ್ಯವನ್ನು ಪ್ರಶ್ನಚಿನ್ಹೆಯಿಂದಲ್ಲದೆ (?) exclamationಚಿನ್ಹೆಯಿಂದ (!) ಮುಗಿಸಿದ್ದರೆ ಇನ್ನೂ ಧ್ವನಿ ಇರುತ್ತಿತ್ತು!

      ಮೂರರ ಪದ್ಯದಿನಿಂ ನೀಂ
      ನೇರಂ ನಾಲ್ಕನೆಯದಂ ನಿಗಮಿಸಿಹ ಪರಿಯೇಂ!
      ಈರೆಂಬಿನಿಂ ನುತಿಸಿಹಿರೆ
      ಶಾರದೆಯಂ ’ವಾಕ್’ ಸ್ವರೂಪಿ ’ಮಾತೆ*’ಯೆನ್ನುತ್ತುಂ!!
      *ಮಾತು 😉

  7. ಕಂ||ಪೊಸತೆನಿಪೀ ಋತುವೆಯ್ದಂ-
    ತೆಸಕಮನೆಲ್ಲೆಡೆ ಪ್ರಸಾರಗೆಯ್ಯುತ್ತುಂ ತಾಂ|
    ಜಸಮಂ ಪೊಂದಿರ್ಪುತ್ಸವ-
    ಮಸೀಮ ಷಡೃತುಮಯಮೆಂದು ತೋರ್ಕುಂ ಜಗದೊಳ್||

    ಅದೆಂತೆನೆ-
    ಕಂ|| ನೆರೆದ ಸುಮಾಳಿಯೊಳಲ್ಲದೆ
    ಸುರಪೂಜೆಯ ಗಂಧಧೂಪಸಮ್ಮೇಳನದೊಳ್|
    ಚರಿಪ ನವವಸ್ತ್ರ ಧೃತರೊಳ್
    ಬೆರೆತಂತಾಭಾಸಿಕುಂ ವಸಂತರ್ತು ಗಡಾ||

    ಮತ್ತಂ-
    ಶಾ||ನೈವೇದ್ಯಕ್ಕಿದಿರಿಟ್ಟ ಪಣ್ಗಳಿನೆನಲ್ ಕಜ್ಜಾಯಮಂ ಮಾಳ್ಪ ನಾ-
    ರೀ ವಕ್ತ್ರಂಗಳೊಳೆಯ್ದ ತೋರ ಬೆಮರಿಂ ಸೌಧಂಗಳಾ ಪಾಕಶಾ-
    ಲಾವಹ್ನಿಸ್ಥಿತಶಾಖದಿಂ ನೆಗಳ್ದ ಸತ್ಪಾಂಥರ್ಕಳ ಶ್ರಾಂತಿಯಿಂ
    ದೇವರ್ಕಳ್ಗಿದು ಗ್ರೀಷ್ಮಮೆಯ್ದುದೆನುವಂತಾಭಾಸಿಕುಂ ಪರ್ವದೊಳ್||

    ಅಂತಲ್ಲದೆಯುಂ-
    ಮ||ಘನಭೇರೀಸ್ವನ ಮೇಘನಾದಮೆನೆ ಮಂತ್ರಂಗಳ್ ಪಯೋಧಾರೆಯಾ
    ಧ್ವನಿ ತೀರ್ಥಂ ಪ್ರವಹಿಪ್ಪುದಲ್ತೆ ನದಿ ಛತ್ರಂ ಛತ್ರಮಾಂದೋಲಿತಂ
    ಕನಕಾಚ್ಛಾದಿತ ಚಾಮರಂ ವನಮಯೂರೋನ್ನರ್ತನಂ ದೇವತಾ
    ರ್ಚನ ನೀರಾಜನ ವಿದ್ಯುದುತ್ಸವಮಿದೇಂ ವರ್ಷರ್ತುವೇ ಪರ್ವಮೇ||

    ಮಿಗೆ ಪೇಳ್ದೊಡಂ-
    ಸಾಂ||ಪೆರೆಮೊಗದೆಳೆಯರಿಂ ಕಜ್ಜಕ್ಕುಜ್ಜುಗಿಸಿರ್ಪ
    ಧರಣೀಸೇವಕ ಕೃಷೀವಲರಿಂ|
    ಭರದಿಂ ತುಂಬಿದ ಹೋಮಧೂಮದಿಂದುತ್ಸವ-
    ಕ್ಕರರೇ ಬಂತೇನೀ ಶರತ್ತು||

    ಮತ್ತಮುತ್ಸವಮನಭಿವರ್ಣಿಸಲ್-
    ಉ||ಸಂತತಮಂತು ನೋಂತು ಬೆಳೆದಾ ಬೆಳೆಯಂ ಮಿಗೆ ಪೊತ್ತುತರ್ಪರಿಂ
    ಭ್ರಾಂತಿಯೆನಿಪ್ಪ ಧೇನುಪದಧೂಳಿಗೆ ಪೋಲ್ವ ಪರಾಗರಾಗದಿಂ-
    ದಂತುಟೆ ಲೋಗರೊಳ್ ನಡೆವ ಪೆರ್ಚಿದ ಕಜ್ಜದ ಚರ್ಚೆಯಿಂದೆ ಹೇ-
    ಮಂತನೆ ಬಂದವೊಲ್ ದ್ವಿಜರವಂಗಳ ಮೇಳನದಿಂದೆ ತೋರ್ದುದೈ|| (ದ್ವಿಜ=ಬ್ರಾಹ್ಮಣ/ಪಕ್ಷಿ)

    ಮತ್ತಮಾ ಪ್ರಸ್ತಾವದೊಳ್-
    ಲಾಸಿನಿ|| (ಸಂತುಲಿತಮಧ್ಯಮಾವರ್ತಗತಿ;ಕೊನೆಯಗಣವನ್ನು ೪ ಮಾತ್ರೆಗಳಾಗಿ ಮಾಡಿಕೊಂಡಿದ್ದೇನೆ)
    ಶ್ವೇತವಸ್ತ್ರಧೃತ ವಿಪ್ರವೃಂದಮೆ ತುಷಾರಯುಕ್ತ ನಗಮೈ
    ಪೀತ ವರ್ಣದುಪವೀತಮಾಯ್ತು ನಭದಂಶುಮಂತಕರಮೈ|
    ನೀತದಂಡಮದೆ ನಷ್ಟಪರ್ಣತರುವಾಗಿ ತೋರ್ದುದಲ್ತೇ
    ಶೀತಕಾಲಮಿಂತುತ್ಸವಕ್ಕೆ ಸೊಗದಿಂದಬಂದುದಲ್ತೇ||

    ಇಂತು ಉತ್ಸವಂ ಸಪ್ತರ್ತುಮಯಮಾದ ಋತುವಿಲಾಸದಂತಾಭಾಸಿಕುಂ.

    (ಯಾವುದಾದರೂ ಉತ್ಸವದ ಬದಲು ಎಲ್ಲಾ ಉತ್ಸವಗಳನ್ನು ಒಟ್ಟಾರೆಯಾಗಿ ವರ್ಣಿಸಿದ್ದೇನೆ) 🙂

    • ಇವು ನಿಜಕ್ಕೂ ಅತ್ಯುತ್ತಮವಾದ ಭಾಷೆ-ಬಂಧಗಳನ್ನು ಹೊಂದಿದ ಕವಿತೆಗಳು. ಪದ್ಯಪಾನದಲ್ಲಿ ಇಂಥ ಸುಂದರಪದ್ಯಗಳ ಪ್ರಸ್ತುತಿಯಾಗುತ್ತಿರುವುದನ್ನು ಪದ್ಯಪಾನೋದ್ದೇಶದ ಸಾರ್ಥಕ್ಯದ ಕ್ಷಣಗಳೆಂದೇ ಭಾವಿಸುತ್ತೇನೆ. ಕಂದ-ವೃತ್ತಗಳನ್ನು ರಚಿಸುವಲ್ಲಿ ಈ ಪದ್ಯಗಳು ಸೊಗಸಾದ ಮಾದರಿಯಾಗಿ ಸಲ್ಲುವುವೆಂದು ಹೇಳಬೇಕು.
      ಇಂಥ ಸ್ಮರಣೀಯಕವಿತೆಗಳ ಹಬ್ಬವನ್ನು ನಮಗೆಲ್ಲ ಒದಗಿಸಿದುದಕ್ಕಾಗಿ ಯುವಕವಿ ಕೂಪ್ಪಲತೋಟರಿಗೂ ಪದ್ಯಪಾನವನ್ನು ರೂಪಿಸಿ ನಿರೂಪಿಸುತ್ತಿರುವ ನಲ್ಮೆಯ ಗೆಳೆಯರಿಗೂ ಧನ್ಯವಾದಗಳು.

      • ಧನ್ಯವಾದಗಳು ಸರ್ 🙂
        ಕರ್ಣಾಲಂಕಾರದಂದಂ ವಚನಮಿವೆಮಗುತ್ತೇಜಕಂ ಸಲ್ಗುಮೆನ್ನಲ್
        ವರ್ಣಾಲಂಕಾರರಾಜದ್ರುಚಿರವರಮದಾ ರಾಂಕವಂ ಕಟ್ಟಿತೆನ್ನಂ!!

      • ಸಾಂಗತ್ಯ|| ಪಕ್ಷsದs (fortnightly) ಗೋಷ್ಠಿsಯsದಿಂದುs ಮುಂಜಾನೆsಯೊಳ್
        ಶಿಕ್ಷsಣsಕಾಗಿs ಕೂಡಿರಲುs|
        ದಕ್ಷs ಕೊಪ್ಪಲತೋಟsನಿಗೆ ಶಲ್ಯs ಪೊದಿಸುತ್ತೆs
        ರಕ್ಷೆsಯಿತ್ತರವsಧಾನಿಗಳುs||

  8. ಎಬ್ಬಿಸಿ ಭಾವದಲೆಗಳಂ
    ಹಬ್ಬಂ ಬರೆವುದನುರಾಗದಕ್ಕರಗಳತಾಂ|
    ಕಬ್ಬಮಹುದೈ ಬದುಂಕಿನ
    ಮಬ್ಬನಳಿಸುತೆ ನವಚೇತನಮನೀಯುತಿರಲ್ ||

    ಮಳೆಯಾರ್ಭಟಂ ಗತಿಸಿರಲ್ –
    ಕಿಳೆಯುಂ ಹಸಿರುಟ್ಟು ತಾ ನಳನಳಿಸುತಿರಲ್ |
    ಮೆಳೆಯಂ ಕಷ್ಟದ ಕಡಿದುಂ
    ತಿಳಿಗೊಳಿಸಲ್ ಗಣಪ ತಾಂ ಬರುವ ಮನೆ ಮನೆಗಂ ||

    ಮುದ್ದೆ ಮಣ್ಣಿಗೆ ಜೀವ ತುಂಬುತ –
    ಲೆದ್ದು ಬರುವನು ಮುದ್ದು ಗಣಪನು
    ಸದ್ದು ಗದ್ದಲ ಮಾಡಿ ಚೌತಿಯ ದಿನವದೆಲ್ಲೆಡೆಗಂ
    ಇದ್ದ ಬಳಗದ ಕಹಿಯದೆಲ್ಲವ –
    ನೊದ್ದು ಸಾಗುವ ಪಥವ ತೋರುತ –
    ಲಿದ್ದು ಕಾವನು ಸಹನೆ ಸೌಹಾರ್ದತೆಯ ಜಗದೊಳಗಂ

    ಸುರಿಗೆ, ಮಲ್ಲಿಗೆ, ಜಾತಿ, ಡೇರೆಯು
    ಸರಿದು ಸೇರುತ ಮಾಲೆಯೊಪ್ಪಿಸೆ
    ಕರಿಯ ವದನನು ತೇಲಿ ಪೋಗನೆ ಗಂಧಸಾಗರದೊಳ್?
    ಕರಿದ ಮೋದಕ, ಪಂಚ ಖಾದ್ಯವ –
    ದಿರಲು ಹಲಬಗೆ ಸಿಹಿಯ ಭಕ್ಷ್ಯವು
    ವರವ ನೀಡನೆ ಸುಖದಿ ಲಂಬೋದರನು ಕರೆದವಗೆ ?

    ದಿನವು ಬಂದಿರಲೇಕದಂತನ
    ಜನಕೆ, ದೂರಕೆ ಕಳುಹುವಂತಹ
    ಮನದೆ ತಳಮಳ ನೋವು ತಪ್ಪದು ಬಂಧ ಕಳಚಿರಲು
    ಮನೆಗೆ ಬರುವೆನು ಮತ್ತೆ ಮುಂದೂ
    ಎನುತ ತೆರಳುವ ತಂದೆ ಗಣಪನು
    ಬನಿಯ ಸಾರುವ ದುಃಖ ಸುಖದಾ ಬೀಳುತೇಳುತಲಿ

    • ಸೊಗದ ಕವಿತೆಗಳಂ ನಿವೇದಿಸಿ
      ನಿಗಳಿಸುತೆ ನಲ್ನುಡಿಯ ಫಣಿತಿಯೊ-
      ಳೊಗುವವೊಲ್ ರಸಮೊಪ್ಪಿಸಿದ ನಿಮಗಂ ಪ್ರಣಾಮಮಿದೋ!

      • ವಂದನೆಗಳು ಸರ್. ತಾವು ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿರುವದಕ್ಕೆ ಆಭಾರಿಯಾಗಿರ್ಪೆಂ.

  9. ಗಾಯಂ ಗಾಯಂ ಪ್ರಣತಿವಚಸಾ ಕೃಷ್ಣಭಾಗ್ಯಂ ಗೃಹಿಣ್ಯಃ
    ಭೇದಂ ಭೇದಂ ಘನಗುಡಗಣಂ ಭೂರಿ ಖಂಡಾನಿ ಕೃತ್ವಾ |
    ವಾಚಾ ದಾಸಪ್ರಕಟಿತಪಥೇ ಶ್ರೇಯಸೇ ಯಾನ್ತಿ ತೂರ್ಣಂ
    ಹಸ್ಯಾಭ್ಯಾಂ ತನ್ಮಧುರರಚನೈಃ ಪ್ರೇಯಸೇ ಬಾಲಕಾನಾಮ್ || 1 ||

    (ದಾಸರ ಪದಗಳನ್ನು ಹಾಡುತ್ತ ಕೃಷ್ಣನಾಮ ಸ್ಮರಿಸುತ್ತ ಗೃಹಿಣಿಯರು ಬೆಲ್ಲ ಕತ್ತರಿಸುವರು. ಹೀಗೆ ವಾಚಾ ಶ್ರೇಯಸ್ಸನ್ನು, ಕೈಕೆಲಸದಿಂದ ಮಕ್ಕಳ ಪ್ರೀತಿಪಾತ್ರತೆಯನ್ನು ಪಡೆಯುವರು).

    ಭೂಯೋ ಭೂಯೋ ಮಧುರಭರಿತಂ ಪಾಕಮಾವರ್ತನೆಭ್ಯಃ
    ತಾಃ ಸಂಗತ್ಯಾ ಹಿಮಮಿವ ಸಿತಂ ಶರ್ಕರಾಪಾಯಸಸ್ಯ |
    ಕೃತ್ವಾ ಮಂದಂ ವಿವಿಧವಪುಷಾಂ ಸಾಂದ್ರರೂಪಂ ಸೃಜಂತೀ-
    -ದಂ ದೃಷ್ಟ್ವಾ ಕಿಂ ಗಣಪತಿಮುಮಾ ಪುತ್ರಕಾಮಾ ಸಸರ್ಜ || 2 ||

    (ಅವರು ಒಟ್ಟುಗೂಡಿ, ಮತ್ತೆ ಮತ್ತೆ (ಕೈ) ತಿರುಗಿಸಿತ್ತ ಹಿಮದಂತೆ ಬಿಳಿಯಾಗಿರುವ ಸಕ್ಕರಪಾಕವನ್ನು ಮಾಡಿ ಸಕ್ಕರೆ ಅಚ್ಚನ್ನು ಮಾಡುತ್ತಾರೆ. ಇದನ್ನು ನೋಡಿ ಉಮೆಯು ಗಣಪತಿಯನ್ನು ಸೃಷ್ಟಿಸಿದಳೇನೋ.)

    ಕಾಲೇ ಕಾಲೇ ವಪನಮನು ಸಂ-ಪೋಷಣೈರ್ಧಾನ್ಯಭಾಗ್ಯಾಃ
    ಸಾನಂದಂ ತೇ ಸಕಲದಗವಾಂ ದರ್ಶಯನ್ತಿ ಪ್ರವಾಹಮ್ |
    ಧೂಲ್ಯಾವೃತ್ತ್ಯಾ ಚಕಿತಮಹಿಲಾಃ ಶಾಟಿಕಾಪಲ್ಲವೇನ
    ಪ್ರಚ್ಛಾದ್ಯಾಮೂರ್-ವಿತರಣಧಿಯಾ ತೈಲಮಿಶ್ರಂ ವಹನ್ತಿ || 3 ||

    (ಯಥಾಕಾಲವಾಗಿ ಬೀಜ ಬಿತ್ತಿ ಸಸ್ಯಗಳನ್ನು ಪೋಷಿಸುವ ರೈತರು ಆನಂದದಿಂದ ಸಕಲಪ್ರದೆಗಳಾದ ಗೋವುಗಳ ಮೆರವಳಿಗೆ ಮಾಡುತ್ತಾರೆ. ಆಗ ಎದ್ದ ಧೂಳಿನಿಂದ ಎಳ್ಳು ಬೀರಲು ಹೋದ ಮಹಿಳೆಯರು ಸೆರಗಿನಿಂದ ಎಳ್ಳನ್ನು ಮುಚ್ಚುತ್ತಾರೆ).

    ದಂತೋದ್ಘರ್ಷೈರಮೃತಸದೃಶಂ ತೋಯಮಿಕ್ಷೊರ್ಭಜಂತೇ
    ಬಾಲಾಸ್ತುಷ್ಟ್ಯಾ ಸರಲಮನಸಾ ಸೊದ್ಯಮಾಃ ಸಾಹಚರ್ಯಮ್ |
    ತಾದೃಕ್ಸಿದ್ಧಿಃ ಕಠಿನತಪಸಾ ಯಾನುಭೂತಾ ನು ಲೋಕೇ
    ಸಾವಿಸ್ಮಾರ್ಯಾ ಭವತಿ ಸಫಲಾ ಪ್ರಾಪ್ತಿಪೂರ್ತ್ಯಾ ಪಥಾ ಚ || 4 ||

    (ಹುಡುಗರು ಒಟ್ಟುಗೂಡಿ ಹಲ್ಲು ಕಚ್ಚಿ ಕಬ್ಬಿನ ಅಮೃತೋಪಮ ರಸವನ್ನು, ಮೈತ್ರಿಯನ್ನು ಸವಿಯುತ್ತಾರೆ. ಕಷ್ಟಪಟ್ಟು ಸಾಧಿಸಿದ ವಸ್ತುವು ಮರೆಯಲಾಗದ ಸಾಫಲ್ಯ – ಸಾಧಿನಿದ ರೀತಿಯಿಂದ, ಸಾಧನೆಯಿಂದ.)

    ಸಂಕ್ರಾಂತಿಸಂಭ್ರಮಮುದಾ ಕೃಷಿಕಾರ್ಯಸಿದ್ಧ್ಯಾ
    ಕೃತ್ವೊತ್ತರಾಯಣಶಿವಂ ಶಿಶಿರಾಧಿರೂಢಾ |
    ಶೈತ್ಯಂ ನಿವಾರ್ಯ ಗುಡತಿಲೈರ್ಜನಮಾನಸೇ ಸಾ
    ಮಾಧುರ್ಯಪೂರ್ಣಚರಿತೇಕ್ಷುದೃಢತ್ವಮಾಪ್ನೋತ್ || 5 ||

    (ಹೀಗೆ ಸಂಕ್ರಾತಿಯ ಸಂಭ್ರಮಭರಿತ ಸಂತೋಷವು ಕೃಷಿಸಾಫಲ್ಯದೊಂದಿಗೆ ಉತ್ತರಾಯಣಪುಣ್ಯಕಾಲವನ್ನು ನೀಡಿ ಶಿಶಿರದ್ಲಿ ಬಂದಿದೆ. ಆ ಸಂತೋಷವು ಚಳಿಯನ್ನು ಓಡಿಸಿ ಎಳ್ಳುಬೆಲ್ಲದಿಂದ, ಸಕ್ಕರೆ ಅಚ್ಹಿನ ಮಾಧುರ್ಯದಿಂದ, ಕಬ್ಬಿನ ದಾರ್ಢ್ಯದಂತೆ ಜನಮನವನ್ನು ಒಳಗೂಡಿದೆ.)

    • ಒಳ್ಳೆಯ ಭಾಷೆಯ ರಚನೆಗಳಿಗಾಗಿ ಧನ್ಯವಾದ. ಎರಡನೆಯ ಪದ್ಯದ ಕಾವ್ಯತ್ವವು ನಿಜಕ್ಕೂ ಮುದಾವಹ.

  10. ಅಂಬಯಾ ಮಧುರಭೋಜನಂ ಕೃತಂ
    ಸಂಸ್ಮರನ್ ಮಕರಸಂಕ್ರಮೋತ್ಸವೇ |
    ಪಂಚಭಿರ್ದಿವಸಮೇಕಮಾಚರಂ
    ದೀನದರ್ಶನಧಿಯಂ ಚ ಮಾತರಿ || 1 ||

    ಸಂಕ್ರಾತಿಯಲ್ಲಿ ಅಮ್ಮ ಮಾಡಿದ ಸಿಹಿತಿಂಡಿಯನ್ನು ಸ್ಮರಿಸುತ್ತಾ ಆರು ದಿನಗಳು (ಐದರೊಂದಿಗೆ ಒಂದು ದಿವಸವನ್ನು) ದೀನನಾಗಿ ಮೊಗವ ತೋರುತ ಕಾಲ ಕಳೆದೆ.

    “ಏಹಿ ಮೇ ಸದನಮದ್ಯ ನಿಶ್ಚಿತಂ”
    ಮಾತೃತಾತಕಥನಂ ಮಯಾ ಶ್ರುತಮ್ |
    ತದ್ಗೃಹೇ ಭವತಿ ಭೂರಿ ಭಕ್ಷಣಂ
    ಚಿನ್ತಯನ್ನಗಮಮಾತ್ಮತೃಪ್ತಯೇ || 2 ||

    “ಇವತ್ತು ಖಂಡಿತ ಮನೆಗೆ ಬಾ” ಎಂಬ ತಾತನ ಮಾತನ್ನು ಕೇಳಿ ಅವರ ಮನೆಯಲ್ಲಿ ತಿಂಡಿ ತೀರ್ಥ ಇದ್ದೇ ಇರುತ್ತೆ ಅಂತ ಯೋಚಿಸಿ ಬಾಯಿಚಪಲವನ್ನು ಈಡೇರಿಸಲು ಅಜ್ಜಿ ತಾತನ ಮನೆಗೆ ಹೋದೆ.

    “ಸ್ವಾಗತಂ ಭವತು ತೇ ಪ್ರಿಯಸ್ಯ ಮೇ ”
    ದೂರವರ್ತಿನಮಿವಾವದದ್ಗುರುಃ |
    ಪೌತ್ರಕೇಷು ಸತತಂ ರತಿರ್ಯಥಾ
    ಪೌತ್ರಕೇಷು ಸತತಂ ರತಿಸ್ತಥಾ || 3 ||

    ದೂರದೇಶದಿಂದ ಬಂದ ಆತ್ಮೀಯರನ್ನು ಸಂಭ್ರಮದಿಂದ ಸ್ವಾಗತಿಸುವಂತೆ ನನ್ನನ್ನು ತಾತ ಸ್ವಾಗತಿಸಿದರು. ಮೊಮ್ಮಕ್ಕಳಲ್ಲಿರುವ ಸತತ ಪ್ರೀತಿಯು ಮೊಮ್ಮಕ್ಕಳಲ್ಲಿರುವ ಸತತ ಪ್ರೀತಿಯಂತೆ!

    “ಎಕ್ಕಪಲ್ಲವಮಿದಂ ಗೃಹಾಣ ಭೋಃ
    ಸ್ನಾನಯೋಜ್ಯಮಮರಾಯ ಕಲ್ಪಿತಮ್” |
    ಪ್ರೀತಿಭಾಙ್ಮಮ ಭುಜಂ ಸ್ಪೃಶನ್ನದಾತ್
    ಪಲ್ಲವಸ್ಯ ಕಿಮತಃ ಪ್ರಯೋಜನಮ್ || 4 ||

    “ಇಗೋ, ಎಕ್ಕದ ಎಲೆಯನ್ನು ತೆಗೆದುಕೋ. (ನಾಳೆ) ಸ್ನಾನಕ್ಕಾಗಿ.” ಅಂತ ಹೇಳಿ ಪ್ರೀತಿಪಾತ್ರರಾರ ತಾತನು ನನ್ನ ಭುಜವನ್ನು ಸವರಿ ಎಕ್ಕದ ಎಲೆ ಕೊಟ್ಟರು. (ಅವರು ಭುಜ ಸವರಿದ ಮೇಲೆ) ಎಕ್ಕದ ಎಲೆಯಿಂದು ಏನು ಪ್ರಯೋಜನ ?!

    ಪಲ್ಲವೈಃ ಪರಿಹಿತೈಃ ಪರೇದ್ಯವಿ
    ಪಾವನಂ ಪದಮಹಂ ಸಮಾಪ್ನುವಮ್ |
    ಪ್ರತ್ಯಯಃ ಪ್ರಥಿತಪದ್ಧತೌ ಪುರೋ-
    ಗಾಮಿನಾಂ ಹಿ ಯಶಸೇ ಸ್ವವೃದ್ಧಯೇ || 5 ||

    ಮಾರನೆಯ ದಿನ ಎಕ್ಕಪತ್ರಗಳಿಂದ ಪವಿತ್ರತೆಯನ್ನು ಕಂಡೆ. ಪ್ರೈಸಿದ್ಧಪದ್ಧತಿಯ ಅನುಕರಣೆಯೆ ಪ್ರತ್ಯಯವು (ವಿಶ್ವಾಸವು) ಮುಂದೆ ಹೋಗುವವರಿಗೆ ಯಶಸ್ಸನ್ನು ಆತ್ಮವೃದ್ಧಿಯನ್ನು ನೀಡುತ್ತದೆ.

    ರಂಗವಲ್ಲಿರಚಿತೋ ನಿವೇದಿತೋ
    ಭಾಸ್ಕರಶ್ಚ ತುಲಸೀಪುರಃಸ್ಥಿತಃ |
    ಸಪ್ತಪಾದವರದೋ ರಥೇ ಸ್ಥಿತಃ
    ಶಂ ತನೋತು ನಿರತೇಷ್ವನಾರತಮ್ || 6 ||

    ಸೂರ್ಯನು ರಂಗವಲ್ಲಿಯಲ್ಲಿ ತುಳಸಿಯಮುಂದೆ ಶೋಭಿಸುವನು. ಸಪ್ತಾಶ್ವಗಳೊಂದಿಗೆ ರಥದಲ್ಲಿ ಬಂದ ಅವನು ನಿರತರಲ್ಲಿ (ಭಕ್ತರಲ್ಲಿ) ಸದಾ ಒಳಿತು ಮಾಡಲಿ.

    • ರಥಸಪ್ತಮಿಯ ಬಗೆಗೆ ಬರೆದುದು ಒಳಿತಾಯಿತು. ಎಕ್ಕವನ್ನು ಸಂಸ್ಕೃತದಲ್ಲಿ ಅರ್ಕವೆಂದು ಹೇಳುವರಲ್ಲವೇ! ಮತ್ತೂ ಕಾವ್ಯಗುಣವನ್ನು ತರುವುದು ನಿಮಗೆ ಸಾಧ್ಯ. ಆದರೆ ನಿಮ್ಮ ಭಾಷಾಪ್ರಯೋಗಸೌಲಭ್ಯವು ಮುದಾವಹ. ಇದು ಎಲ್ಲರಿಗೂ ಮಾದರಿ.

  11. ಹಬ್ಬವೆಂದರೆ ಆಯಾ ದೇವರಿಗೆ ಷೋಡಶೋಪಚಾರಪೂಜೆ; ದೇವರನ್ನು ಅತಿಥಿಯೆಂದು ಭಾವಿಸಿ ಮಾಡುವ ಪೂಜೆ. ಮಾನವನ ಜೀವಿತಾವಧಿಯ ಬೆಳವಣಿಗೆ/ಸಂಸ್ಕಾರಗಳಲ್ಲಿ ಇವುಗಳ ಛಾಯೆಯನ್ನೇ ಕಾಣುವೆವು. ||ಪಲ್ಲವ||

    ಪೀಠಿಕೆ:
    ದಾಸವಾಣಿಯ ವೋಲು ಕಾಯವು
    ನೀಸುವುದು ಮಣ್ಣಿಂದೆ ಬಂದುಂ
    ಕೋಸು ದೂರವ ಸವೆಸಿ ಪೊಂದುತೆ
    ಘಾಸಿ ಸೇರ್ವುದು ಮಣ್ಣನು|೧

    ಮಣ್ಣಿನಿಂದಲೆ ಜನಿಸಿ ಮಗುಳಾ
    ಮಣ್ಣ ಸೇರುವ ಗಣಪನುತ್ಸವ
    ಕಣ್ಣ ತೆರೆಸದೆ ಜೀವಿತವದಿಂ-
    ತಣ್ಣ ಪೂಜೆಯುಮೆನ್ನುತುಂ|೨

    ಆವಾಹನೆ:
    ಗರ್ಭದಾಧಾನಮದುಮಾ ನವ
    ದರ್ಭಕಗಮಾವಾಹನೆಯು ಕೇಳ್
    ಗರ್ಭಗುಡಿಯೊಳು ದೇವನೊಲುಮಾ
    ಗರ್ಭಕೋಶದೆ ಭ್ರೂಣವು|೩

    ಆಸನ:
    ಮಲಗಿರುತ್ತಿರಲಾರೆನಿನ್ನೆನು
    ತುಲಿದು ತೋಳ್ಗಳ ಸೆಟೆಸಿ ಶಿಶುವದು
    ನಲಿದು ಕುಳ್ಳಿತುಕೊಂಡ ಚಣವದು
    ನಲವಿನಾಸನಮಲ್ಲಮೇಂ|೪

    ಪಾದ್ಯ:
    ನಿಲ್ವನೇಂ ಮಲಗಿರ್ದನೊಮ್ಮೆಗೆ
    ಸಲ್ವುದುಂ ಮೊದಲಿಂಗೆ ಕುಳ್ಳಿತು
    ಚೆಲ್ವ ಕಂದನು ವೃದ್ಧನೊಲು ತಾಂ
    ನಿಲ್ವುದಲ್ತೆಲೆ ಪಾದ್ಯವು|೫

    ಸ್ನಾನ/ಅರ್ಘ್ಯ:
    ನಿಂದರುಂ ತಟ್ಟಾಡುವುದು ಶಿಶು
    ಕುಂದು ಕಳೆಯದೆ(ಲೆ) ಕಾಲು-ಕೈಗಳ
    ಮಿಂದು ಬರುವುದೆ ತಾನದೀಗಲೆ
    ತಂದೆ ಸ್ನಾನವ ಮಾಡಿಸೈ|೬

    ವಸ್ತ್ರ:
    ವಸ್ತ್ರವೀಯದೆ ಪೋದೊಡತಿಥಿಯು
    ಭಸ್ತ್ರಿಯೊಲು ಬುಸುಗುಟ್ಟವಂ ಸೈ
    ವಸ್ತ್ರಮೊಂದಪವಾದ ಕಂದಗೆ
    ಶಾಸ್ತ್ರಮಾತ್ರವ ತೊಡುವುದು|೭ (ಮಾತ್ರ=ಪ್ರಮಾಣ)

    ನೈವೇದ್ಯ:
    ಏನನಿತ್ತೊಡೆ ತಿನಿಸನೇನೈ
    ಊನಮಾದೊಡಮಿನಿತು ತುಪ್ಪವು
    ಮೀನಮೇಷವನೆಣಿಪನಲ್ತೆಲೆ
    ಜೈನಮುನಿಯೇಂ ಕಂದನು|೮

    ನೀರಾಜನ:
    ಮಾತ್ರ ಕಪ್ಪುರದಾರತಿಯದೇಂ
    ಮೈತ್ರಿಯಿಂದಲಿ ನೋಳ್ಪರೆಲ್ಲರ
    ನೇತ್ರಜ್ಯೋತಿಗಳಾರತಿಯು ಸ
    ರ್ವತ್ರ ಸಲ್ವುದು ಕಂದಗೆ|೯

    ನಮಸ್ಕಾರ:
    ಅಂಬೆಗಾಲಿರಿಸನಿಬರನ್ನಾ
    ಲಂಬಿಸುವ ಪೂರ್ವದೊಳು ಪದಕಾ
    ಡಂಬರಾತೀತದಿನೆ ನಮಿಸನೆ
    ಗೊಂಬೆಯಂದದ ಕಂದನು|೧೦

    ಗಂಧ-ಪುಷ್ಪ-ಧೂಪ-ನೈವೇದ್ಯ, ಆಚಮನ:
    ಧೂಪ, ನೈವೇದ್ಯ, ಸುಮ, ಗಂಧವು
    ಭಾಪು ಯೌವನದೊಳಗನಂತರ
    ಪಾಪಪ್ರಾಯಶ್ಚಿತ್ತ ವನದೊಳು
    ಸೈಪಿನಾಚಮನವದು ಕೇಳ್|೧೧

    ಪುನರಾಗಮನ:
    ಪಂಚಭೂತದಿನಾದ ಘಟ ತಾಂ
    ಸಂಚಿತವ ನಿಶ್ಶೇಷ ಸಮೆಪುದೆ
    ಕೊಂಚಮುಳಿದಿಹ ಕರ್ಮ ತಾಂ ಪೊಸ
    ಕಂಚುಕವನರಸೈದಿತೈ|೧೨

    ಪುನಃಪೂಜೆ:
    ಎನಿತು ಬಂಧುರ ಜೀವನಾಟವು
    ಮನಕೆ ಬುತ್ತಿಯನಿಂತುಮಿತ್ತಿರೆ
    ನೆನೆದು ಮುದದಿಂ ಗೈಯದಿರ್ಪೆನೆ
    ಪುನಹಪೂಜೆಯನಾವಗಂ|೧೩

    • ಕಲ್ಪನೆಯಿದು ಮನೋಹರಂ ಕಲ-
      ಶಿಲ್ಪನಮಿದು ನವೀನಮಂತೆಯೆ|
      ಬೆಳ್ಪೆಸೆವ ಜಸದಿಂದೆ ನೀಮಿಂ-
      ತೊಳ್ಪು ತೋರ್ದಪುದಯ್ ||

      • ಕೃತಜ್ಞತೆಗಳು. ಕೊನೆಯ ೪ರ ಗಣವನ್ನು ಮಾತ್ರ ಊನಮಾಡದೆ, ಕೊನೆಯ ೩+೪ ಗಣಗವನ್ನು ಊನಮಾಡಿರುವುದನ್ನು ಗಮನಿಸಿಕೊಂಡೆ. ಧನ್ಯವಾದಗಳು.

  12. ಯಾವುದೇ ಹಬ್ಬದಲ್ಲಿ ಮನೆಯ ಪುಟ್ಟ ಹೆಣ್ಣುಮಕ್ಕಳ ಸಡಗರವನ್ನು ಗಮನಿಸುವ ತಂದೆಯ ಭಾವನೆಗಳು:

    ಮಾವಿನೆಲೆಯ ಪೊಸ ಸಾಲ್ಗಳ
    ಜೀವಣಿಗೆಯು ಸೆಳೆಯೆ ಕರಮನೊಡ್ಡುತಲಾ ಮುಂ-
    ಜಾವೊಳ್ ಸ್ಪರ್ಶಂಗೆಯ್ಯಲ್
    ಪೂವಿನ ಕಾಲ್ವೆರಳ್ಗಳಿಂದೆ ಮೀಂಟಿಪುದಂದಂ

    ಕಾಲ್ವೆರಳ್ಗಳ್ – ಶಿ.ದ್ವಿ
    ಮಾವಿನೆಲೆಯ ಪೊಸ ಸಾಲ್ಗಳ – ಹೊಸ ತೋರಣದ
    ಜೀವಣಿಗೆ – sweetness

    ಹೊಸಮಾವಿನ ಎಲೆಯ ತೋರಣದ ಅಂದವನ್ನು ಕಂಡು ಅದನ್ನು ಮುಟ್ಟಲು ಹಿಮ್ಮಡಿಮೇಲೆ ಮಾಡಿ ಕಾಲ್ಬೆರಳತುದಿಯಲ್ಲಿ ನಿಂತು ಕೈ ಚಾಚುವ ಮಕ್ಕಳ ದೃಷ್ಯ

    ಮುಂಗುರುಳಂ ದೂಡುತೆ ತಾ-
    ನಂಗನೆಯಂಗಳದೆ ರಂಗವಲ್ಲಿಯನಿಡುವಾ
    ಪಾಂಗನೆ ಪೆಣ್ಮಕ್ಕಳ್ಗಳ್
    ಪೊಂಗಿಪರಣಕಿಸುತೆ ಸಂಭ್ರಮದೆ ಗಡ ನಲಿವರ್

    ಒಬ್ಬ ಅಂಗನೆ ರಂಗವಲ್ಲಿಯನ್ನು ಇಡುವಪರಿಯನ್ನು ಅನುಸರಿಸುತ್ತಿರುವ ಮಕ್ಕಳ ದೃಷ್ಯ

    ಹೆರಳ್ಗಳ್ ನಾವೀನ್ಯಂಗಳ
    ಕಿರಿತನಮಂ ತೊರೆದು ಕೃತಕವೇಣಿಯನರಸಲ್
    ಸಿರಿಯಪ್ಪುಗುಮಲರ್ಗಳೊಳುಂ
    ಬೆರೆಸುತೆ ಸಿಂಗರಿಸೆ ಸಾಂಪ್ರದಾಯಿಕಪಥದೊಳ್

    ಹೆರಳ್ಗಳ್, ಅಲರ್ಗಳ್ – ಶಿ.ದ್ವಿ
    ನಾವೀನ್ಯಂಗಳ ಕಿರಿತನಮಂ – short hairs because of modernization, ಕಿರಿತನ also means ಅಲ್ಪತನ

    ಕಣದಿಂ ಕೌಶಿಕತೇಜಂ
    ಭಣಭಣಿಪುದಲ ನವರಾತ್ರಿಪುತ್ತಲಿಯೆಂಬೊಲ್
    ಝಣಝಣಿಪ ನೂಪುರಂಗಳ್
    ಮಣಿದಪೆ ನಾಂ ಮಣಿಯಹಾರದಾ ಸುಪ್ರಭೆಗಂ

    ಕೌಶಿಕ – ರೇಷ್ಮೆಯ

    ವ್ಯತಿರೇಕಂ ಪೆರ್ಚಿಪುದಲ
    ಸಿತಕೃಷ್ಣವರ್ಣಮಸಿಪ್ರಕೃತಿಯಂಜನದಿಂ
    ಜಿತಮಪ್ಪುಗುಮಾ ನೋಟಂ
    ಪಿತನಾನೆನಲಾ ನೆಗಳ್ತಿಗೇಂ ಬಣ್ಣಿಪೆ ಪೇಳ್

    ಕಾಡಿಗೆಯಿಂದ ಕಣ್ಣಿನಲ್ಲಿ ಬಿಳಿ ಮತ್ತು ಕಪ್ಪಿನ ವ್ಯತಿರಿಕ್ತತೆ ಹೆಚ್ಚುತ್ತದೆ, ಕಾಡಿಗೆ ಹರಿತವಾದ (ನೋಟದ) ಪ್ರಕೃತಿಯಿಂದ ನೋಟ ಯಾವಾಗಲೂ ಗೆಲ್ಲುತ್ತದೆ. ಇಂಥಾ ಮಕ್ಕಳ ತಂದೆ ಎಂಬ ಹೆಗ್ಗಳಿಕೆಯನ್ನು ಹೇಗೆ ತಾನೆ ಬಣ್ಣಿಸಲಿ

    • ಪ್ರಿಯ ಸೋಮ, ಒಳ್ಳೆಯ ಕಾವ್ಯವನ್ನೇ ಈ ಮೂಲಕ ನೀಡಿದ್ದೀಯೆ! ಶೈಲಿ, ಪದಗುಂಫನ ಮತ್ತು ಸೂಕ್ಷ್ಮಸ್ವಭಾವದರ್ಶಕವಾದ ಅಲಂಕಾರಯುಕ್ತಿಗಳೆಲ್ಲ ಸೊಗಸಾಗಿವೆ. ಅಭಿನಂದನೆಗಳು.ಆದರೆ ಕಡೆಯ ಪದ್ಯದ ದ್ವಿತೀಯಪಾದದಲ್ಲಿ ಛಂದೋದೋಷವಿದೆ. ದಯಮಾಡಿ ಸವರಿಸು.

  13. ವಿನಾಯಕ ಚೌತಿಯ ಹಬ್ಬದ ಬಗ್ಗೆ, ತಪ್ಪಿದ್ದಲ್ಲಿ ಸವರಿಸಿ

    ಪಲರೊಳ್ ಚೌತಿಯ ದಿನದಂ
    ಗೆಲುವಂದೋರುತಗಣೇಶ ವಿಗ್ರಹಮಂ ಮಾ
    ಡಲುಪೇರಿಸುತುಂ ಮಣ್ಣಂ
    ಕಲೆಸಲ್ಕಾಗಿಪುದುಮುದ್ದು ಗಣಪನ ಶಿಲೆಯುಂ

    ತೆರೆದಾ ಗೂಡಿನುಡುಗೊರೆಯ
    ಭರದಿಂ ಪೊಸಬಟ್ಟೆತೊಟ್ಟುತಾಡುವ ಮಕ್ಕಳ್
    ವೆರೆಯಲ್ ನೇಹದಿ ಪರರೊಳ್
    ಕರೆವಂ ಗಣಪನನುತಮ್ಮೊಡನೆಕೂಡಾಡಲ್

    ಮನದೊಳ್ ಸಂತಸದಿಂದೆ
    ಮ್ಮನುಹರಸೆನ್ನುತ್ತೆಮಾಡಿರಲ್ಕಾರತಿಯಂ
    ಮನೆಯೊಳ್ ಮಂಟಪದೊಳಗಂ
    ಘನವಾಗಿರಿಸುತೆ ವಿಶೇಶ ಪೂಜೆಯ ಗೈವೆಂ

    ಘಮಘಮಿಸುವ ಕಡಬುಗಳ
    ನ್ನುಮಾಸುತಗೆಭಕ್ತಿಯಿಂದ ನೈವೇದ್ಯವಿಡಲ್
    ಕ್ರಮದಿಂವ್ರತಮಂ ಗೈಯುತೆ
    ನಮಿಪೆನ್ ಕೈಗಳನುಜೋಡಿಸುತೆ ಮುಖಗಜಗಂ

    ಕತ್ತಲೆ ಮೂಡಿರಲಿರುಳೊಳ್
    ಕತ್ತನು ತಗ್ಗಿಸುತೆನೋಡಿತುಂ ಸಂಕಟದಿಂ
    ಕುತ್ತಾಗಿರ್ಪುದುಮಕಟಾ
    ಹಿತ್ತಲ ಕೊಳದೊಳ್ ಶಶಾಂಕನಾ ದರ್ಷನದಿಂ

    • ಪ್ರಿಯ ಚೀದಿ,
      ನಿನ್ನ ಕಂದಪದ್ಯರಚನಾಪ್ರಾವಣ್ಯವು ಸ್ತುತ್ಯವೇನೋ ಸರಿ; ಆದರೆ ಹಲವಾರು ಕಡೆ ಹಳಗನ್ನಡದ ಹಾಗೂ ಸಾಮಾನ್ಯವ್ಯಾಕರಣದ ಹದ ಸಡಲಿದೆ. ಫೋನಿನಲ್ಲಿ ಮುಖತಃ ವಿವರಿಸಿಯೇನು. ಅಲ್ಲದೆ ಹಲವರು ಈಗಾಗಲೇ ಮಾಡಿರುವಂತೆ ನೀನೂ ಕೇವಲ ಹಬ್ಬದ ವಿವರಗಳನ್ನಷ್ಟೇ ನೀಡಿದ್ದೀಯೆ. ಆದರೆ “ಕವಿತೆ” ಇಲ್ಲವಾಗಿದೆ. ಕಲ್ಪನೆಯಿಚಲ್ಲದೆ, ಉಕ್ತಿಚಮತ್ಕಾರವಿಲ್ಲದೆ, ನುಡಿಬೆಡಗಿಲ್ಲದೆ ಬರಿಯ ಮಾತು ಕಾವ್ಯವಾಗದಷ್ಟೆ:-)

    • ಶ್ರೀ ಗಣೇಶರ ಮಾತಿಗೆ ಉದಾಹರಣೆಯಾಗಿ: ಮೊದಲ ಪದ್ಯದಲ್ಲಿ ‘ಮಣ್ಣಿನಿಂದ ಶಿಲಾಮೂರ್ತಿ ಉದಯಿಸಿತು’ ಎಂಬುದನ್ನು ಆನುಷಂಗಿಕವಾಗಿ ಹೇಳಿದ್ದೀರಿ. ಇದನ್ನೇ ಕೇಂದ್ರವಾಗಿಟ್ಟು ಏನಾದರೂ ಹೊಳಹನ್ನು ಕೊಡಿ. ಕೊಪ್ಪಲತೋಟರ ಹಾಗೂ ನನ್ನ (ಗಣೇಶರು ಬೆನ್ನುತಟ್ಟಿದ್ದಾರಾಗಿ ಆತ್ಮಶ್ಲಾಘವನ್ನು ಮನ್ನಿಸಿ) ideaವನ್ನು ಗಮನಿಸಿಕೊಳ್ಳಿ.
      ಪದ್ಯ ೨ ಕೊನೆಯ ಪಾದ) ನೇಹದಿ ಪರರೊಳ್ ಕರೆವಂ – ನೇಹದಿ ಪೆರರಂ ಕರೆವರ್
      ಕೊನೆಯ ಪದ) ದರ್ಷನದಿಂ – ದರ್ಶನದಿಂ

      • ಗಣೇಶ್ ಸರ್ ಮತ್ತು ಪ್ರಸಾದು ಅವರ ಸವರಣೆಗೆ ಧನ್ಯವಾದಗಳು… ಗಣೇಶ್ ಸರ್ ಹೇಳಿದಂತೆ ನನ್ನ ಪದ್ಯವು ವಿಪರೀತ ಸಡಿಲಿಸಿರುವುದು ನನಗೆ ತಿಳಿದೂ, ಇದನ್ನು as it is post ಮಾಡಿದೆ… ಸಮಯವು ಮೀರುತ್ತಿದ್ದ ಕಾರಣ, ಹೆಚ್ಚು ಯೋಚಿಸಲಾಗಲಿಲ್ಲ… ಈ ನಿಟ್ಟಿನಲ್ಲಿ ಇನ್ನು ಮುಂದೆ ಗಮನವಿಡುವೆ… 🙂

        • ಅಡ್ಡಿಯಿಲ್ಲ ಚೀದಿ! ಪದ್ಯಪಾನಕ್ಕಾಗಿ
          ಸಡ್ಡೆಮಾಡದಂತೆ ಬರೆಯಬೇಕು |
          ಖೆಡ್ಡದಲ್ಲಿ ಆಡೊ,ಆನೆಯೋ ಮತ್ತೆನೋ
          ಧಡ್ಡನೆಂದು ಬೀಳುತಿರಲೆ ಬೇಕು:-)

  14. ಯುಗಾದಿಯನ್ನು ಕುರಿತು ಕೆಲವು ಪದ್ಯಗಳು. ಒಂದೆರಡು ವಿರಲಪ್ರಯೋಗ ವೃತ್ತಗಳಲ್ಲಿ.

    ಆಕುರ್ವಾಣೋ ಯೋ ಯಶಸೇ ಪ್ರತ್ಯಯಪೂರ್ಣಃ
    ನಿತ್ಯಂ ಯತ್ನಾನ್ ಭೂರಿವಿಧಾನ್ ವತ್ಸರಪೂರ್ಣಮ್ |
    ಏವಂ ಸೋಽಹಂ ಶಂಸತಿ ಸಿದ್ಧಿಃ ಪರಿಪೂರ್ಣಾ
    ಸ್ಯಾದೇವೇತಿ ಸ್ಯಂದನಚಕ್ರಾಯತ ಏಷಃ || 1 || (ಮತ್ತಮಯೂರಮ್)

    (ಇಡೀ ವರ್ಷ ಆತ್ಮವಿಶ್ವಾಸದೊಂದಿಗೆ ’ಹೀಗೆ ಹಾಗೆ’ ಅಂತ ತಿಳಿದು ಪ್ರಯತ್ನ ಮಾಡುವನು. ಖಂಡಿತ ಇಷ್ಟಪಟ್ಟಿದ್ದು ಸಂದುವುದೆಂದು ತಿಳಿದು ಚಕ್ರದಂತೆ ಸುತ್ತ ತಿರುಗುವನು.)

    ಚಲಜ್ಜಾಡ್ಯತೋ ಮುಕ್ತಿಮಿಷ್ಟ್ವಾ ವಸಂತೇ
    ಪ್ರಯತ್ನೇಷು ನಾವೀನ್ಯದೃಷ್ಟಿಂ ಚ ಗತ್ಯೈ |
    ಸನಂದಂ ಸಮಾರಭ್ಯ ಚ ಸ್ನಾತಕೋಽಯಂ
    ಯುಗಾದೌ ನವಂ ಯಾತಿ ಪಾದಂ ಪ್ರಣತ್ಯಾ || 2 || (ಭುಜಂಗಪ್ರಯಾತಮ್)

    (ವಸಂತದಲ್ಲಿ ಓಟದ ಜಾಡ್ಯತೆಯನ್ನು ಕಳೆಯಲು, ಪ್ರಯತ್ನದಲ್ಲಿ ಹೊಸತನವನ್ನು ಕಾಣಲು ಸಂತೋಷದಿಂದ ಯುಗಾದಿಯನ್ನು ಆಚರಿಸುವನು.)

    ಪ್ರತ್ಯಕ್ಷಸ್ಥಾನಾರ್ಯಾನ್ ಜ್ಯೇಷ್ಠಾನ್
    ಸನ್ಮಾರ್ಗೇ ಸಂಸಿದ್ಧಾನ್ ಸಾರ್ಥಾನ್ |
    ಆತ್ಮೀಯಾನ್ ತಾನ್ ಬಂಧೂನ್ ಸರ್ವಾನ್
    ನತ್ವಾ ಸದ್ಯೋಽಭೂನ್ನಿಷ್ಕ್ಲೇಶಃ || 3|| (ವಿದ್ಯುನ್ಮಾಲಾ)

    (ದೊಡ್ಡವರನ್ನು ನಮಿಸಿ ಕ್ಲೇಶಗಳನ್ನು ಕಳೆದುಕೊಳ್ಳುವನು).

    ಸುಖೇನ ದುಃಖಂ ಗುಡಮಿಶ್ರನಿಂಬಕಂ
    ವದೇನ್ನು, ತಿಕ್ತಂ ತದತೀತ್ಯ ವರ್ತತೇ |
    ಯಥಾಭಿಮೌನಂ ಕುರುಸಂಸ್ಥಿತೌ ಸತಾಂ
    ಗುಣಾನ್ ಚ ಕೃಷ್ಣಾಪರಿಭೂತಿಸಂವಿಧೌ || 4|| (ವಂಶಸ್ಥಮ್)

    (ಬೇವು-ಬೆಲ್ಲ ಸುಖ-ದುಃಖದಂತೆ ಹೇಳಿದರೂ ಕಹಿಯು ಎಲ್ಲವನ್ನು ಮೀರುವುದು. ದ್ರೌಪದಿಮಾನಭಂಗಪ್ರಸಂಗದಲ್ಲಿ ಸಜ್ಜನರ ಗುಣಗಳನ್ನು ಅವರ ಮೌನಾಚರಣೆಯು ಎಲ್ಲವನ್ನು ಮೀರುವಂತೆ.)

    ಶುಭಕರತೋರಣಂ – ಹರಿತಪತ್ರಮಾಲಯಾ
    ಕೃತಪದವೇಶನೇ – ನಯತಿ ವನ್ಯಜೀವಿತಮ್ |
    ಪ್ರಕಟಯತೀವ ತಂ – ಪ್ರತಿ ಪುರಾಣಸಂಶಯಂ
    ದಿತಿಸುತಮಂಡಲೇ – ಭವತಿ ಕುತ್ರ ವನ್ಯಪಃ || 5 || (ಪ್ರಭದ್ರಕಮ್)

    (ತೋರಣ ಮನೆಗೆ ಬಂದವರಲ್ಲಿ ವನ್ಯಜೀವಿತವನ್ನು ತರುವುದು. ಹಾಗೆ ಸಂಶಯವನ್ನು ಸೂಚಿಸುವುದು – ಹಲವಾರು ದೇವರುಗಳಿದ್ದರೂ (ಮಳೆಯ ದೇವತೆ, ಬೆಂಕಿಯದೇವತೆ, ಇತ್ಯಾದಿ) ವನ ದೇವ ಅಂತ ಪ್ರತ್ಯೇಕ ದೇವ ಏಕಿಲ್ಲ?)

    ಶೃಣುತ ತಾವದಭಿಯಾತವತ್ಸರೇ
    ತಿಥಿಬಲಂ ಕರಣಜಂ ಚ ತಾರಯಾ |
    ದಿನಹಿತಂ ಸಕಲಯೋಗಕಾರಣಂ
    ಗೃಹಪತಿಃ ಪ್ರಿಯಜನಂ ಚ ಭಾಷತೇ || 6 || (ಪ್ರಿಯಂವದಾ)
    (ಪಂಚಾಂಗಶ್ರವಣ)

    ಕೂಜತ್ಸು ಕೋಕಿಲಗಣೇಷು ವಸಂತಕಾಲೇ
    ಕಾಲಾಧಿಪೋಽಭಿನವವತ್ಸರಮಾತ್ಮಕಾರ್ಯಮ್ |
    ನಿರ್ವರ್ತಯಾಮಿ ವಿಧಿವತ್ ಸ ತಥಾ ಪ್ರತಿಜ್ಞಾಂ
    ಕುರ್ವನ್ ಸದಾ ಪ್ರತಿಯುಗಂ ತನುತೇ ಸುಶೋಭಾಮ್ || 7 || (ವಸಂತತಿಲಕಾ)

    (ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎಂಬ ಭಾವ).

    • ಕೆಲವು ಹೊಸ ಛಂದಸ್ಸುಗಳನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಅನುಕೂಲಕ್ಕಾಗಿ ಸೂತ್ರೀಕರಿಸಿದ್ದೇನೆ:
      ಮತ್ತಮಯೂರಮ್: ನಾನಾನಾನಾನಾನನನಾನಾನನನಾನಾ ನೋಡೆಂತಾನಂದಂಪಡುಗೀ ಮತ್ತಮಯೂರಮ್.

      ವಿದ್ಯುನ್ಮಾಲಾ: ನಾನಾನಾನಾನಾನಾನಾನಾ ನೀನೇ ಲಕ್ಷ್ಯಂ ವಿದ್ಯುನ್ಮಾಲಾ

      ಪ್ರಭದ್ರಕಮ್: ನನನನನನಾನಾನಾ| ನನನನಾನನಾನನಾ ಸಡಿಲಗೊಳಿಸರ್ದೆಂತುಂ| ಬಿಗಿವುದೈ ಪ್ರಭದ್ರಕಮ್

      ಪ್ರಿಯಂವದಾ: ನನನನಾನನನನಾನನಾನನಾ ಸಖಿ ಶಕುಂತಲೆಗಿವಳ್ ಪ್ರಿಯಂವದಾ

    • ಒಳ್ಳೆಯ ವೃತ್ತಗಳಲ್ಲಿ ಹೊಸ ಪದ್ಯಗಳನ್ನಿತ್ತುದಕ್ಕಾಗಿ ಅಭಿನಂದನೆಗಳು.
      ಒಂದು ಸಣ್ಣ ತಿದ್ದುಪಡಿ: ವೇದಗಳಲ್ಲಿ ವನಗಳ ರಕ್ಷಣೆಗಾಗಿ “ಅರಣ್ಯಾನೀ” ಎಂಬ ವನದೇವತೆ ಇದ್ದೇ ಇದ್ದಾಳೆ. ಅಲ್ಲದೆ ದಿತಿಯ ಮಕ್ಕಳು ದೈತ್ಯರು; ಅಸುರರು. ಕೇವಲ ಅದಿತಿಯ ಮಕ್ಕಳು ದೇವತೆಗಳು; ಅರ್ಥಾತ್ ಆದಿತ್ಯರು.

    • ನರೇಶರೆ,
      ನೀವು ’ಪ್ರಿಯಂವದಾ’ ಎಂದಿರುವುದು ’ಮತ್ತಕೋಕಿಲ’ದಂತೆಯೇ ಇದೆ. ಅದು ಪರ್ಯಾಯನಾಮವೆ?

      • ಪ್ರಸಾದರೇ, ಕೇದಾರಭಟ್ಟನ ವೃತ್ತರತ್ನಾಕರದಲ್ಲಿ ಕಂಡಂತೆ ವೃತ್ತನಾಮವನ್ನು ಹೇಳಿದ್ದೇನೆ. ಅಲ್ಲಿ ಮತ್ತಕೋಕಿಲವೆಂಬ ಪರ್ಯಾಯ ಕೊಟ್ಟಿಲ್ಲ.
        “ಭುವಿ ಭವೆನ್ನಭಜರೈಃ ಪ್ರಿಯಂವದಾ” ಎಂಬ ವೃತ್ತಲಕ್ಷಣವನ್ನು –
        “ನಭಜರೈರ್ಭವತಿ ಮತ್ತಕೋಕಿಲಮ್” ಎಂದು ಹೇಳಿ ಮತ್ತಕೋಕಿಲದ ಸಮರ್ಥನೆಯೇನೋ ಮಾಡಬಹುದು. (ಬೇರೊಂದು ಮತ್ತಕೋಕಿಲವಿಲ್ಲದ್ದರೆ).

  15. ಪರಿಷ್ಕಾರಕ್ಕೆ ಧನ್ಯವಾದಗಳು. ದಿತಿಸುರರು ದೈತ್ಯರೆಂದು ಗೊತ್ತಿದ್ದೂ ತಪ್ಪು ಮಾಡಿದೆ. ’ದಿತಸುತ’ ಸ್ಥಾನದಲ್ಲಿ ’ಸುರವರ’ ಅಂತ ಮಾಡುವ.
    ಆರಣ್ಯಾನಿಯು ಇದ್ದರೂ ಗ್ರೀಕರಂತೆ ಹಣ್ಣಿಗೊಬ್ಬ ದೇವತೆ, ಹೋವಿಗೊಬ್ಬ ದೇವತೆ, ಕಾಯ್ಗೊಬ್ಬ ದೇವತೆಯಂತೆ ನಾನಾ ವನದೇವತೆಗಳು ನನಗೆ ತಿಳಿದ ಮಟ್ಟಿಗೆ ನಮ್ಮ ಪುರಾಣಾದಿಗಳಲ್ಲಿ ಇಲ್ಲ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)