ಬರಿಯ ಜನ್ಮದ ಬಲ ಸಾಲದು:
———————–
ಬರಿಯ ಜನ್ಮದ ಬಲದಲೇನಿದೆ
ನರನನುತ್ತಮನೆಂದು ಬಗೆಯುವ
ಸ್ಥಿರದ ಶೌರ್ಯ ಕುಶಾಗ್ರಮತಿಯ ವಿಲಾಸ ಸೊಗಸುಗಳು?
ಪುರದ ರಾಜನ ಕುವರನಾದೊಡೆ
ತುರುಗಳನು ಹಿಡಿದೊಯ್ದ ಕೇಡಿಗ
ಕುರುಜನರ ಪವ್ರುಷವನಡಗಿಸೆ ಉತ್ತರೋತ್ತರನೆ? ||೧||
[ಕುರುಜನರ ಪವ್ರುಷವನಳಿಸದ ಉತ್ತರೋತ್ತರನೆ? ]
ಲೋಲ ಸಖಿಯರ ತರುಣನಿವ ತಾ
ಸಾಲ ತೀರಿಸೆ ಪಾಂಡು ಪುತ್ರಗೆ ಪ್ರಾಣವನೆ ಕೊಟ್ಟ
ಕಾಲ ಪಥದಲಿ ಮನುಜನಡತೆಯು
ವಾಲಿಪುದಕವಗುಣಗಳೆಲ್ಲವ
ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರನ ||೨||
ಜಪಾನಿನ ಭೀಕರ ದುರಂತದ ಬಗ್ಗೆ:
————————–
ಶಿವನ ಕಾಲ್ತುಳಿತದಲಿ ಅಲೆತಾಂ-
ಡವದ ನಾಟ್ಯಕೆ ಹೆಜ್ಜೆ ಹಾಕಿತೆ?
ಜವನ ಮಹಿಷನೆ ಕಪ್ಪು ಅಲೆಗಳ ರೂಪ ತಾಳಿದನೆs?
ರವಿಯ ಬೆಳಕನೆ ಮಾಸುವಂದದಿ
ಕವಿಸುತಲಿ ಕತ್ತಲೆಯ ನಿಮಿಷದೆ
ಸವೆಸಿದುದು ಜೀವಗಳ ಶರಧಿಯ ಮಂಥನದ ವಿಷವೇ?
ಸರಳ ರಗಳೆ:
ಅತಿ ಸುಲಭವಾದ ಛ೦ದೋಬ೦ಧ. ೫ ಮಾತ್ರೆಗಳ ೪ ಗಣಗಳು ಪ್ರತಿ ಸಾಲಿನಲ್ಲಿ…ಆದಿ-ಅ೦ತ್ಯ ಪ್ರಾಸದ ರಗಳೆ ಇಲ್ಲವಾದ್ದರಿ೦ದ…ಇದು ಸರಳ ರಗಳೆ 🙂
ಹೊದೆದ ಕ೦ಬಳಿಸರಿದು ಹಿಮದಹನಿ ಕರಗಿರಲು
ಎಲೆರಾಶಿಯೆಲ್ಲೆಲ್ಲು ಭೂಗವಚದ೦ತಿರಲು
ಕೊರಳ ಕೋಗಿಲೆ ಕೊಡವಿ ದು೦ಬಿ ಮೈಮುರಿದಿರಲು
ಕಳೆಯುತಿದೆ ಮಾಘ ಜಗಕಾದಿಹುದು ಹೊಸತನಕೆ.
ಹತ್ತು ವರ್ಷದ ಮುನ್ನ ತೇರಲಿ
ಸುತ್ತಮುತ್ತೋಡಾಡುತಿದ್ದಿರಿ
ಹತ್ತಿರದ ಹೆಣ್ಣೆಂದು ಮೆಚ್ಚುತ ಮುತ್ತನೊತ್ತಿದಿರಿs ||
ಕತ್ತನೆತ್ತದ ಭಯದ ಭರ ನಾ –
ಚುತ್ತ ಕರಗುತ ಕೆಂಪಡರಿ ಮನೆ –
ಯತ್ತ ಓಡಲು ಕೆನ್ನೆಗೆರಡನು ಕೊಟ್ಟರದು ಹದನs || ೧ ||
ಮನೆಗೆ ಹಿರಿಯರ ಕೂಡಿ ಬಂದವ –
ರೆನಗೆ ಉಡುಗೊರೆಯೊಂದ ತಂದು ಲ –
ಗನದ ಮಾತಾಡಿದಿರಿ ಗೆಲುವನು ಹರಡಿದಿರಿ ಬಹುಳ ||
ಇನಿಯರಾದಿರದೊಂದು ಪರಿಯಿಂ –
ದೆನಗೆ ನಚ್ಚನೆ ಸನಿಹ ಬಂದಿರಿ
ಪುನಹ ಪಡೆದಿರಿ ಹೋದ ಮಾನವ ಜೊತೆಗೆ ಹೆಣ್ಣೊಂದs || ೨ ||
ನೆಂಟರೆಲ್ಲರ ಸದರ ಸಡಗರ
ತುಂಟ ಮಕ್ಕಳ ಕೂಟದಾಟಗ –
ಳೆಂಟು ದಿನಗಳ ಮದುವೆ ಸಂಭ್ರಮ ಸಂದ ಸುಮ ಸಮಯ ||
ಅಂಟಿ ಹೊರಟಿತು ಬಾಳ ಬಂಡಿಯು
[ ಅಂಟಿ ಹೊರಟೆವು ಬಾಳ ಪಥದಲಿ ]
ಬಂಟರೆಲ್ಲರ ಶುಭದ ಹರಕೆಯ
ಸೊಂಟ ಬಾಗಿಸಿ ಪಡೆದ ಹಿರಿಯರ ವರಗಳನುಗ್ರಹದಿs || ೩ ||
ಬಳೆಯು ಮೇಲೇರದೆಲೆ ಮುಂಗೈ –
ಗಳಲಿ ನೋವಾಗಿರಲು ಹಯ್ಯೋ
ಕಳವಳದಿ ಕೆಳಗಿಳಿದು ಬಂದಿರಿ ಚಿಂತೆಯಾಗ್ರಹದಿs ||
ಬಳೆಯ ಸೆಟ್ಟಿಯ ಕುಹಕ ನಗೆಯಿಂ –
ದಳಿದ ತಾಳ್ಮೆಯ ಕೋಪವದು ಮೈ
ಪುಳಕಗೊಳಿಸಿತು ನಿಮ್ಮ ಗೆಳೆತನದುಪರಿ ವಾತ್ಸಲ್ಯ || ೪ ||
ಬೆಟ್ಟಗಳ ಸಾಲಿನಲಿ ಹಾದಿಯು
ಬೆಟ್ಟಗಲದಷ್ಟಿರಲು ಜೊತೆಯಲಿ
ಕಟ್ಟಿಕೊಂಡೋಡಾಡುತಿದ್ದಿರಿ ನನ್ನ ಸಂತಸದಿs ||
ನಿಟ್ಟಿನಲಿ ಮುಂದಾಗಿ ನಡೆದಿರಿ
ಬಿಟ್ಟಿರದೆ ಕಣಿವೆಯಲಿ ಹಿಂಗಡೆ –
ಯೊಟ್ಟು ತಿರುಗುತಲೊಟ್ಟು ನಲಿಯುತ ಕೂಡೆ ಸಂಗಡಣೆ || ೫ ||
ಸಿರಿತನದಿ ಬಡತನದಿ ಯಾರೇ
ಇರಲಿಯಾರಿರದಿರಲಿ ಸಮದಿಂ
ಮೆರೆದಿರೆದರದೆ ದೊರೆಯ ತರದಲಿ ಧೀರ ನಿಲುವಿನಲಿs ||
ಸರಿಗನಿಗೆ ಒಪ್ಪಾಗಿ ಕಂದದ
ಮರಿಗೆ ನಾ ದಿಕ್ಕಾಗಿ ಜೊತೆಯ –
ಲ್ಲಿರಲು ಸಂಗಡ ಪಯಣಿಸುವ ನಾವ್ ತುಂಬು ಜೀವನದಿs || ೬ ||
– ರಾಮಚಂದ್ರ