Mar 182012
 

ಬರಲಿರುವ ಯುಗಾದಿಗೆ ಸಂಬಂಧಪಟ್ಟಂತೆ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ

  46 Responses to “ಪದ್ಯಸಪ್ತಾಹ – ೧೨ – ವರ್ಣನೆ”

 1. ಚೈತ್ರ ಮಾಸದ ಮೊದಲದಿವಸದ ವೈಶಿಷ್ಟ್ಯವಾದರೂ ಏನು? ಪ್ರಕೃತಿಗೆ ಯಾವ ಪಂಚಾಂಗದ ಅಂಕೆಯೂ ಇಲ್ಲ, ಯಾವ ಜ್ಯೋತಿಷ್ಯದ ಅಂಕುಶವೂ ಇಲ್ಲ. ವಿಚಾರಿಸಿದೊಡೆ ಎಂದೂ ಯುಗಾದಿಯೇ, ಹೊಸವರ್ಷದ ತೊಡಗೇ.

  ಬೇವುಬೆಲ್ಲಗಳೆರಡೂ ಹಗಲಿರುಳಿನಂತೆಯೆ ಎಂದಿಗೂ ಜೊತೆಯಲ್ಲಿರುವವು
  ಯಾವಋತುವಿನಲ್ಲೂ ಮರಗಳು ತಳೆವವು ಹಣ್ಣುಕಾಯ್ತಳಿರೆಲೆ ಹೂವು
  ಬಾವನ್ನ ವಾರಕ್ಕೆ ಮರಳುತ್ತ ಸೂರ್ಯನು ಪುಗುವನು ಇಂದಿದ್ದ ಠಾವು
  ನಾವಿಂದಾಚರಿಸುವ ಚೈತ್ರದ ಹಬ್ಬವು ಹೋಳಿಗೆ ತಿನಲೊಂದು ನೆವವು

  • ಈ ಪದ್ಯದ ಛಂದಸ್ಸು ಯಾವುದೆಂದು ತಿಳಿಯುತ್ತಿಲ್ಲ! ಕಲ್ಪನೆ ಮಾತ್ರ ಚಿಂತನೀಯ.

   • ಸಾಂಗತ್ಯವೆಂದೆಣಿಸಿದ್ದೆ. ಒಂದಶ ಹೆಚ್ಚಾಗಿಯೇ ಎಣಿಸಿದ್ದೆನೆಂದು ತೋರುತ್ತದೆ. ಇದೀಗ ತಿದ್ದಿದ್ದೇನೆ.

    ಬೇವುಬೆಲ್ಲವೆರಡೂ ಹಗಲಿರುಳುಗಳಂತೆ ಎಂದಿಗೂ ಜೊತೆಯಲ್ಲಿರುವವು
    ಯಾವಋತುವಿನಲ್ಲೂ ಮರಗಳು ತಳೆವವು ಹಣ್ಣುಕಾಯ್ತಳಿರೆಲೆ ಹೂವು
    ಬಾವನ್ನ ವಾರಕ್ಕೆ ಮರಳುತ್ತ ಸೂರ್ಯನು ಪುಗುವನು ಇಂದಿದ್ದ ಠಾವು
    ನಾವಿಂದಾಚರಿಸುವ ಚೈತ್ರದ ಹಬ್ಬವು ಹೋಳಿಗೆ ತಿನಲೊಂದು ನೆವವು

    ಸಾಂಗತ್ಯದಲ್ಲಿ ಯತಿ ನಿಯಮಗಳೇನಾದರೂ ಇವೆಯೆ?

    • Dear JI.VEM, this is not a saamgatya. Not only the praasa and gana-s but also the masha-s and yati are imbalanced. Pl read a few saamgatya-s of ratnaakara varni or S.V. Parameswara bhatt. Then you may feel the metre more.

     • > Pl read a few saamgatya-s … Then you may feel the metre more.

      ಹಾಗೆಯೇ ಮಾಡುತ್ತೇನೆ.

 2. ರಾಗದೊಳು ಕುಸುಮಾಕರನು ತಾ
  ಬೀಗುತಿರ್ದನು ಸೊಬಗಸೂಸುತ
  ಭಾಗಿಯಾಗಲು ಓಡಿಬರ್ಪವು ಮಾವುಬೇವುಗಳು |
  ಕೋಗಿಲೆಯ ಗಾನದೊಡೆ ನವಿಲದು
  ತೂಗಿನರ್ತಿಸೆ ಮುಗಿಲು ನಕ್ಕಿತು
  ಭೋಗವೈಭವ ಹೇಳಿಮುಗಿಯದು ಈ ಯುಗಾದಿಯೊಳು ||

  • ಪದ್ಯಪದ್ಧತಿ ಚೆಲುವಾಗಿದೆ.”ಭಾಗಿಯಾಗಲ್ಕೋಡಿ ಬರ್ಪುವು…” ಎಂದು ಸವರಿಸಿದರೆ ವಿಸಂಧಿದೋಷವೂ ನೀಗುವುದು. ಆದರೆ ಯುಗಾದಿಯ ವಸಂತದಲ್ಲಿ ನವಿಲು, ಮುಗಿಲು ಮುಂತಾದುವು ಬರುವುದು ಇಂಪಾದ ಪದಗಳ ಮಟ್ಟಿಗೆ ಸರಿಯೆ ಆದರೂ ಮಳೆಗಾಲದ ಈ ಸಂಕೇತಗಳು ವಸಂತದಲ್ಲಿ ನುಗ್ಗುವುದು ಕವಿಸಮಯವಿರೋಧಿಯಲ್ಲವೆ!

   • ಧನ್ಯವಾದಗಳು, ಯುಗಾದಿಯ ವೇಳೆ ಕೆಲವುಕಡೆ ಮೋಡ-ಮಳೆ ಕಾಣಸಿಗುತ್ತದೆ ಎಂಬುದು ನನ್ನ ಕಲ್ಪನೆ. ತುಂಡುಮೋಡವನ್ನು ನೋಡಿ ನವಿಲುಗಳೂ ಕೂಡ ನರ್ತಿಸುವವು ಎಂಬುದು ಸ್ವಲ್ಪ ಉತ್ಪ್ರೇಕ್ಷೆ ! ಇರಲಿ ಬೇರೇ ಬರೆದಿದ್ದೇನೆ-ದಯವಿಟ್ಟು ಪರಾಂಬರಿಸಿ :

    ಮಾರ ತೂರಿದ ಶರದ ತೆರನಲಿ
    ತೋರಿ ಚಿಗುರುತ ಹಲವು ಮರಗಳು
    ತೋರಣವನೇರ್ಪಡಿಸಿ ನಲಿದವು ನವಯುಗಾದಿಯಲಿ |
    ಊರಕೇರಿಗಳಲ್ಲಿ ಸಡಗರ
    ದೂರವಾಣಿಯಲೆಲ್ಲವವಸರ
    ಕೋರಿ ಸವಿದರು ಬೇವು-ಬೆಲ್ಲವ ಶುಭದ ಹಾದಿಯಲಿ ||

 3. ವಸಂತನ ಆಗಮನ:

  ನಗ್ನ ಶಿಶಿರಕೆ ಬೇಸರಿಸಿ ಮೌನದಲಿ ತಪೋ-
  ಮಗ್ನ ಭುವಿಯನ್ನೆಚ್ಚರಿಸೆ ಬಂದನೋ
  ಅಗ್ನಿವರ್ಣದ ಹೂಗಳೆರಚಲು ವಸಂತ ತಾ
  ತಙ್ಞರೇ ಬೇಕೇನದ ಸವಿಯಲಿಕೆ

  ಈ ಪದ್ಯ ಪು.ತಿ.ನ ರವರ ‘ನಗ್ನ ವಿಪಿನ ನಗ್ನ ಗಗನ ತಪೋಮಗ್ನ ಮೇಧಿನಿ’ ಯಿಂದ ಪ್ರೇರಿತವಾದದ್ದು.

  • ಚೆನ್ನಾಗಿದೆ, ಗಾಯತ್ರಿ. esp. the pointer to the prelude to ಕಾಮದಹನ. The fact that Shiva had become “cold” after ದಕ್ಷಯಜ್ಞ plays well with ಶಿಶಿರ.

   • ಧನ್ಯವಾದಗಳು ವೆಂಕಟೇಶ. ನಿನ್ನ ಕಾಮೆಂಟ್ ಪದ್ಯವನ್ನು ಸರಿಮಾಡಲಿಕ್ಕೆ ಸಹಾಯವಾಯಿತು.

 4. ಗಣೇಶರೇ, ೨ – ೩ ನೇ ಸಾಲಿನಲ್ಲಿ ‘ಬಂದನಾ ನಗ್ನಿ…ಎಂದಾಗಬೇಕೆ? ಹಾಗೆಯೇ ೪ನೆ ಸಾಲಿನ ಪ್ರಾಸ ಸರಿಯಾಗಿದೆಯೆ?

  • The praasa in the fourth line has to be changes and even the metre there has to be modified as there are some problems with the gati-gana of it. Rest of the verse is good.

 5. ಗಣೇಶರೆ, ೩ , ೪ ನೇ ನಾಲುಗಳನ್ನು ತಿದ್ದಿದ್ದೇನೆ:

  ನಗ್ನ ಶಿಶಿರಕೆ ಬೇಸರಿಸಿ ಮೌನದಲಿ ತಪೋ-
  ಮಗ್ನ ಭುವಿಯನ್ನೆಚ್ಚರಿಸೆ ಬಂದನೋ
  ಅಗ್ನಿವರ್ಣದ ಹೂಗಳೆರಚಲು ವಸಂತನು ಸು-
  ಲಗ್ನವಿದು ಬಣ್ಣದೋಕುಳಿಯಾಟಕೆ

  ಸುಲಗ್ನ – ಒಳ್ಳೆಯ ಸಮಯ ಎನ್ನುವ ಅರ್ಥದಲ್ಲಿ ಬಳಸಿದ್ದೇನೆ.

 6. ಕಂತುಶರಬೀಸೆ ಕರಿಮೊಗದ ಕೆಂಗಣ್ಣ ನೆಲೆ
  ನಿಂತಪಂಚಮಸರದ ಕೋಗಿಲೆಗಳು
  ಕಂತಮುಖದಳುದನಿಯ ನಲ್ಲನಿಲ್ಲದೆ ನೋಂತ
  ಕಾಂತೆಯನು ನಂದನಕೆ ಕರೆತಂದವು

 7. ಹಗಲು ಹೆಚ್ಚುತ ಹೋಗುತಿರುವುದು
  ಚಿಗುರು ಎಲ್ಲೆಡೆ ಕಾಣುತಿರುವುದು
  ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು |
  ಮಿಗಿಲು ಬಿರಿದಿಹ ಹೂಗಳೆಲ್ಲೆಡೆ
  ನಗುತ ಕಂಪನು ಸೂಸಿ ನಲಿದಿರೆ
  ಹಗುರವೆನಿಸದೆ ಮನವು ವರುಷದ ಮೊದಲ ದಿನದಂದು ||

  (ವಸಂತ ವಿಷುವದ ನಂತರ ಹಗಲಿನ ಅವಧಿ ಹೆಚ್ಚುವುವೂ, ಎಲ್ಲೆಡೆಯಲ್ಲೂ ಹೂವರಳುವುದೂ, ಚಳಿಗಾಲದ ಮೋಡಗಳು ಕರಗುವುದೂ – ಇವೆಲ್ಲ ನಾನಿರುವ ಉತ್ತರ ಕ್ಯಾಲಿಫೋರ್ನಿಯಾದ ಹವಾಮಾನಕ್ಕೆ ಹೆಚ್ಚಿಗೆ ಸೂಕ್ತವಾದ ವಿಷಯಗಳು. ಮತ್ತೆ ಚಾಂದ್ರಮಾನ ಯುಗಾದಿಯೂ, ವಸಂತ ವಿಷುವವೂ ಈ ವರ್ಷ ಸುಮಾರು ಒಂದೇ ಸಮಯಕ್ಕೆ ಬಂದಿರುವಾಗ, ಇನ್ನೇನು!)

 8. ಜೀವೆಂ ಮತ್ತು ಹಂಸಾನಂದಿಗಳ ಪದ್ಯಗಳೆರಡೂ ಚೆನ್ನಾಗಿವೆ. ಆದ್ರೆ ಕೆಲವೊಂದು ಸವರಣೆಗಳು:
  ನಿಂತ ಪಂಚಮಸರ….ಎಂಬಲ್ಲಿ ಅರಿಸಮಾಸ ಬರುತ್ತದೆ. ಹೀಗಾಗಿ ಪಂಚಮದುಲಿಯ…ಎಂದು ಬದಲಿಸಬಹುದು. ಹಾಗೆಯೇ ಕಂತ ಮುಖದಳುದನಿಯ….ಎಂಬಲ್ಲಿ ಅರಿಸಮಾಸವಿಲ್ಲದಿದ್ದರೂ ಮುಖವನ್ನು ಮೊಗವಾಗಿ ಬದಲಿಸಿದರೆ ಪದಪದ್ಧತಿಯ ಕೋಮಲತೆ ಮಿಗಿಲಾಗುತ್ತದೆ. ಇದು ಪ್ರಕೃತವಸ್ತುವಿನ ವಿಪ್ರಲಂಭಶೃಂಗಾರಕ್ಕೆ ಮತ್ತೂ ಹಿತವೆನಿಸುತ್ತದೆ.
  ಹಂಸಾನಂದಿಯವರು ತುಂಬ ಸುಕಮಾರಬಂಧವನ್ನು ರಚಿಸಿದಂತಿದೆ. ಗಣ-ಗಣಗಳಿಗೆ ಸಮಸಮನಾಗಿ ಪದಗಳನ್ನು ಅಳೆದ ಹಾಗೆ ಹೊಂದಿಸುವುದು ಸುಕುಮಾರಬಂಧದ ಹಾದಿ. ಇದು ಮೃದುಮಧುರಸಂದರ್ಭಗಳಿಗೆ ಸಮುಚಿತ ಕೂಡ. ಸದ್ಯದ ಸಂನಿವೇಶಕ್ಕಿದು ಯುಕ್ತವೂ ಹೌದು. ಆಧುನಿಕ(ಅಂದರೆ ನವೋದಯಕವಿಗಳಿಂದ ಈಚೆಗೆ)ಲೇಖಕರಲ್ಲಿದು ಸರ್ವಸಾಮಾನ್ಯವಿಧಾನವೇ ಆಗಿದೆ. ವಿಶೇಷತಃ ಹಾಡುಗಳ ರಚನೆಗೆ ಇಂಥ ರೀತಿಯು ತುಂಬ ಜನಪ್ರಿಯ ಮತ್ತು ಸ್ವಾಗತಾರ್ಹ ಕೂಡ. ಆದರೆ ನಮ್ಮ ಪ್ರಾಚೀನಕವಿಗಳೆಲ್ಲರೂ ಪ್ರಾಯಿಕವಾಗಿ ಸುಕುಮಾರಬಂಧಕ್ಕಿಂತ ನಿಬಿಡಬಂಧಕ್ಕೇ ಹೆಚ್ಚಿನ ಆದ್ಯತೆ ತೋರಿದ್ದಾರೆ. ಈ ಕ್ರಮವು ಸ್ವಲ್ಪ ಪ್ರೌಢವಷ್ಟೇ ಅಲ್ಲದೆ ಪ್ರಯತ್ನಸಾಧ್ಯವೂ ಹೌದು. ಇಲ್ಲಿ ಕೇವಲವಾದ ಭಾಷಾಪದಪದ್ಧತಿ ಮತ್ತು ಛಂದಃಪದಪದ್ಧತಿಗಳೆರಡರ ಅತ್ಯಂತಹೃದ್ಯವೂ ಹದವೂ ಆದ ಸಂತುಲನವಿರುತ್ತದೆ. ಇದೇ ಉತ್ತಮಪದ್ಯಪದ್ಧತಿಯ ರಹಸ್ಯ ಕೂಡ ಹೌದು. ಈ ಕ್ರಮವು ಕರುಣ-ವಿಪ್ರಲಂಭಶೃಂಗಾರರಸಗಳನ್ನುಳಿದು ಮಿಕ್ಕೆಲ್ಲ ರಸಗಳ ಪ್ರತಿಪಾದನೆಗೆ ಮಿಗಿಲಾಗಿ ಒಗ್ಗಿ ಬರುವ ಮಾರ್ಗವೆಂಬುದರಲ್ಲಿ ಸಂದೇಹವಿಲ್ಲ. ಅಲ್ಲದೆ ನಿಬಿಡಬಂಧದಲ್ಲಿ ವೈವಿದ್ಯವೂ ಹೆಚ್ಚು. ಸುಕುಮಾರಬಂಧವಾದರೋ ಬಲುಬೇಗ ಏಕತಾನತೆಗೆ ದಾರಿಯಾಗುವುದಲ್ಲದೆ ಗಣ-ಗಣಕ್ಕೆ ಪದಗಳನ್ನು ಹೆಕ್ಕುವ ಬಲುಗೆಲಸವನ್ನು ಕವಿಗೆ ಕಲ್ಪಿಸಿ ತನ್ಮೂಲಕ ಇಡಿಯ ಛಂದೊಬದ್ಧಪದ್ಯರಚನೆಯೇ ಅತಿಶ್ರಮಾವಹವೆಂಬ ನಿರ್ಣಯಕ್ಕೆ ಅವನು ಬರುವಂತೆ ಮಾಡುತ್ತದೆ. ಇಂಥ ಅನಪೇಕ್ಷಿತಶ್ರಮವನ್ನೂ ಅನುಚಿತವಾದ ಭ್ರಮೆಯನ್ನೂ ತರುಣಕವಿಗಳಲ್ಲಿ ಉಂಟುಮಾಡಿದ ನವೋದಯಕವಿಗಳೂ ಗೀತಕಾರರೂ ಕೆಲಮಟ್ಟಿಗೆ ಛಂದಸ್ಸಿಗೂ ಕಾವ್ಯಶೈಲಿಯ ವೈವಿಧ್ಯಕ್ಕೂ(ವಿಶೇಷತಃ ಪದ್ಯಬಂಧರೀತಿಗೆ) ಅನ್ಯಾಯವನ್ನು ಮಾಡಿದ್ದಾರೆಂದರೆ ಕಟೂಕ್ತಿಯಾಗದು. ಪದ್ಯಪಾನಿಗಳು ಈ ಬಗೆಗೆ ಅವಧಿತರಾಗಿ ಉಭಯಪ್ರಕಾರದ ಪದ್ಯಬಂಧಗಳನ್ನೂ ಕರಗತವಾಗಿಸಿಕೊಳ್ಳುವುದು ಅಪೇಕ್ಷಣೀಯ. ಮುಖ್ಯವಾಗಿ ಆದಿಪ್ರಾಸವನ್ನು ನಿರ್ವಹಿಸುವಾಗ, ಷಟ್ಪದಿ-ಕಂದ-ವೃತ್ತ ಗಳನ್ನು ರಚಿಸುವಾಗ ಈ ಎಚ್ಚರವಿದ್ದಲ್ಲಿ ಪದ್ಯನಿರ್ಮಿತಿಯೂ ಸುಲಭ, ರಸಸ್ಫೂರ್ತಿಯೂ ಅಧಿಕ.

  • ಗಣೇಶ್ ಅವರೆ, ಇಷ್ಟು ವಿವರವಾಗಿ ಸುಕುಮಾರ ಬಂಧ ಮತ್ತು ನಿಬಿಡ ಬಂಧವನ್ನು ತಿಳಿಸಿ ಹೇಳಿದ್ದಕ್ಕೆ ಧನ್ಯವಾದಗಳು, ಈ ಬಗ್ಗೆ ಸ್ವಲ್ಪ ಓದಿ ನೋಡಿ ತಿಳಿದು ನಿಬಿಡಬಂಧದ ಹವವರಿತು ಸ್ವಲ್ಪ ರೂಢಿಗೊಳಿಸುವ ಪ್ರಯತ್ನ ಮಾಡುತ್ತೇನೆ.

  • ನಿಮ್ಮ ಮೆಚ್ಚು ನುಡಿಗೆ ಧನ್ಯೋಸ್ಮಿ. ಮತ್ತೊಮ್ಮೆ ಆ ಪದ್ಯ, ನೀವು ತೋರಿದ ಸವರಣೆಗಳೊಂದಿಗೆ:

   ಕಂತುಶರಬೀಸೆ ಕರಿಮೊಗದ ಕೆಂಗಣ್ಣ ನೆಲೆ
   ನಿಂತಪಂಚಮದುಲಿಯ ಕೋಗಿಲೆಗಳು
   ಕಂತಮೊಗದಳುದನಿಯ ನಲ್ಲನಿಲ್ಲದೆ ನೋಂತ
   ಕಾಂತೆಯನು ನಂದನಕೆ ಕರೆತಂದವು

   ಅರಿಸಮಾಸದ ವಿಚಾರಕ್ಕೆ, ‘ಸರ’ ಇತ್ಯಾದಿ ತದ್ಭವ ಪದಗಳನ್ನು ಕನ್ನಡ ಪದಗಳಾಗಿಯೇ ಎಣಿಸಬೇಕೆಂದಾಯಿತು.

 9. ಕಳಚುತೊಣಗಿದೆಲೆಗಳ
  ಮೊಳೆಸಿ ಹೊಸ ಚಿಗುರುಗಳ
  ಹೊಳೆವ ಹೂನಗೆ ಬೀರಿ ತರುಲತೆಗಳು
  ಹಳೆಯ ಕಹಿ ನೆನಹುಗಳ
  ಬಳಿಗೆ ಸುಳಿಯಲು ಕೊಡದೆ
  ನಲಿದು ಬಾಳುವುದೆಮಗೆ ಕಲಿಸುತಿವೆಯೆ?

  [ಲಘುಬಾಹುಳ್ಯದ ಪದ್ಯ :-)]

  • ಪ್ರಯತ್ನ ತುಂಬ ಸ್ತುತ್ಯ. ಶಬ್ದಾರ್ಥಗಳ ಸೊಗಸೂ ಇದೆ.ಇದೊಂದು ಚಿತ್ರಕವಿತಾಪ್ರಕಾರವೇ ಹೌದು. ಆದರೆ ಮೊದಲ ಸಾಲಿನಲ್ಲಿ ಒಂದು ಮಾತ್ರೆಯಷ್ಟು ಕೊರತೆಯಾಗಿದೆ.

 10. ಪದ್ಯಪಾನದ ಸ್ನೇಹಿತರಿಗೆಲ್ಲಾ ನಂದನ ಸಂವತ್ಸರಕ್ಕೆ ಶುಭಾಶಯಗಳು.

  ಮತ್ತೆ ಹಾಡುತ ಮತ್ತ ಕೋಕಿಲ
  ಸುತ್ತ ಹೂಗಳು ಚಿಟ್ಟೆ ದುಂಬಿಯು
  ಚಿತ್ತದೇಕಾಂತಕೆ ಸಮಯವಲ್ಲೆನಲು ಸಂತಸದೆ
  ಮುತ್ತಿನಂದದಿ ಮಲ್ಲೆ ಮೊಗ್ಗದು
  ಹೊತ್ತು ನಿಂದಿಹ ಮಾವಿಗುಸುರಿತು
  ಗೊತ್ತು ನನಗಿದು ವಸಂತನ ಚೆಲ್ಲಾಟ ಮುಕ್ತ ಮನರಾಗೈ

  • ಕ್ಷಮಿಸಿ. ಕೊನೆಯ ಸಾಲಿನಲ್ಲಿ ಕೆಲವು ಮಾತ್ರೆಗಳು ಹೆಚ್ಚಾಗಿವೆ. ಸರಿಮಾಡುತ್ತೇನೆ.

   • ಗೊತ್ತು ನನಗಿದು ಚೈತ್ರಚೇಷ್ಟೆಯು; ಮುಕ್ತಮನರಾಗಿ!!
    ಎಂದು ಸವರಿಸಬಹುದಲ್ಲವೇ!

 11. ಯುಗದ ಬರುವಿಗೆ ಶುಭವ ಕೋರಿದೆ
  ಸೊಗದೆ ಪಚ್ಚೆಯ ರಂಗನೆರಚಿ ಸ –
  ಡಗರದ ಸಮಯಕನುವು ಮಾಡಿದೆ ವರುಷದಾ ಕೊನೆಯು |
  ಬಗೆಯ ಬಹುದೇ ಕಹಿಯ ರುಚಿಯನು
  ಒಗರು, ಸಿಹಿಗದು ಕೀಳೆನುತ್ತಲಿ
  ಸಿಗುವುದೇ ಬೆಲೆ ಸಿಹಿಗದೆಂದೂ “ಕಹಿ”ಯೆ ಇರದಿರಲು ||

  ಮುಗಿಲು ಮುಟ್ಟಲಿ ಜಗದ ಸಂತಸ
  ಹಗುರವೆನಿಸಲಿ ಬಿಗಿಯ ಕಾಯಕ
  ಹಗೆಯ ಮೀರುತ ಯುಗವು ನಂದನವಾಗಲೀ ಎಂದು
  ನಗುತ ಸವಿಯುವ ಹೋಳಿಗೆಯ ಕಹಿ ಬೇವಿನೊಡನಿಂದು |

  [ಎರಡನೆಯ ಪದ್ಯ ಖಂಡ ಭಾಮಿನಿಯಲ್ಲಿದೆ]

  • ಪದ್ಯದಲ್ಲಿ ಎರಡು ಕಡೆ ಸ್ವರಾದಿಯಾದ ಪದಗಳು ಬಂದಾಗಲೂ ಸಂಧಿಯನ್ನು ಮಾಡಿರದ ಕಾರಣ ವಿಸಂಧಿದೋಷವೊದಗಿದೆ. ಅಲ್ಲದೆ ಮೂರನೆಯ ಸಾಲಿನಲ್ಲಿ ಗಣಗಳ ಲೆಕ್ಕಾಚಾರ ಸರಿಯಾಗಿದ್ದರೂ ಯತಿ ತಪ್ಪಿದೆ. ಇವನ್ನು ಸವರಿಸಿರಿ.
   ಖಂಡಭಾಮಿನಿ ಸೊಗಸಾಗಿದೆ.

   ಇದೊಂದು ಸಾಮಾನ್ಯಸೂಚನೆ:
   ಗಣ-ಗಣಗಳಿಗೆ ಸರಿಯಾಗುವಂತೆ ಪದವನ್ನಿಡುವ ಕ್ಲೇಶಾವಹವಾದರೂ ಯತಿಭಂಗದ ತಪ್ಪಾಗದ ದಾರಿಯನ್ನು ಆಶ್ರಯಿಸೋಣವೆಂದರೆ ಅದು ಸದಾಸುಕುಮಾರಬಂಧದ ಪ್ರಪಾತಕ್ಕೆ ನಮ್ಮನ್ನು ತಳ್ಳುತ್ತದೆ. ಇದನ್ನು ಪರಿಹರಿಸಲು ನಿಬಿಡಬಂಧದ ಮೊರೆಹೊಕ್ಕರೆ ಅಲ್ಲಿ ಗತಿ ತಪ್ಪುವ, ಯತಿಗೊಪ್ಪದ ರಚನೆಯಾಗುವ ಮುಳ್ಳಿನ ಹಾದಿ ಎದುರಾಗುತ್ತದೆ. ಇದು ಯಾರದೇ ಆರಂಭಿಕಪದ್ಯರನೆಯಲ್ಲಿ ಸಾಮಾನ್ಯವಾಗಿ ತಲೆದೋರುವ ತೊಡಕು.
   ಈ ಸಮಸ್ಯೆಗಳಿಗೆಲ್ಲ ಇರುವುದೊಂದೇ ಪರಿಹಾರ; ಅದು ಮಹಾಕವಿಗಳ ಪದ್ಯಶಿಲ್ಪವನ್ನು ಮತ್ತೆ ಮತ್ತೆ ಎಚ್ಚರದಿಂದ ಗಮನಿಸಿ ಧ್ಯಾನಿಸುವ ದಾರಿ.

   • ಗಣೇಶರಿಗೆ ನಮಸ್ಕಾರಗಳು. ಪದೇ ಪದೇ ಮಾಡುತ್ತಿರುವ ತಪ್ಪುಗಳನ್ನು ಸಾವಧಾನದಿಂದ ತಿದ್ದುತ್ತಿರುವುದಕ್ಕೆ ಧನ್ಯವಾದಗಳು. ಪದ್ಯವನ್ನೀಗ ಸರಿಪಡಿಸಿದ್ದೇನೆಂದು ಅಂದುಕೊಂಡಿದ್ದೇನೆ ::
    ಯುಗದ ಬರುವಿಗೆ ಶುಭವ ಕೋರಿದೆ
    ಸೊಗದೆ ಪಚ್ಚೆಯ ರಂಗನೆರಚಿದೆ
    ಸಿಗದ ಸಗ್ಗವನಿಳೆಯೊಳಿಳಿಸಿದೆ ವರುಷದಾ ಕೊನೆಯು |
    ಬಗೆಯ ಬಹುದೇ ಕಹಿಯ ರುಚಿಯಿಂ
    ದೊಗರು, ಸಿಹಿಗದು ಕೀಳೆನುತ್ತಲಿ
    ಸಿಗುವುದೇ ಬೆಲೆ ಸಿಹಿಗದೆಂದೂ “ಕಹಿ”ಯೆ ಹೊರತಾಗಿ ||

 12. ಉಗಾದಿ ಕಳೆದರೆ ರಾಮನವಮಿ, ಅದಾಗಿ

  ಮರದಡಿಯಪುತ್ತದೊಳಗಿಂ
  ದೊರೆದುಲಿದುಮರಾಮರಾಮರಾಮಾಯೆಂಬಿಂ
  ಚರಮಂ ಕೋಗಿಲೆ ಬರಲಿ
  ದ್ದ ರಾಮರಾಜ್ಯದವಸಂತಮಂ ಸಾರಿದನಯ್

  • ಸೊಗಸೆನಿಪ ಕಬ್ಬಮನಿದಂ
   ಮುಗುಳಂದದೆ ನೀಂ ಬಸಂತದಾದಿಯೊಳೀಗಳ್|
   ಬಗೆಗಣ್ಗೆಟುಕಿಸಿದೀ ಪರಿ
   ಪುಗದೇಂ ಗೆಳೆಯರ್ಕಳೆಲ್ಲರೊಲವಿನೆರ್ದೆಗಳಂ?

   • ನಿಮ್ಮ ಮೆಚ್ಚುನುಡಿಯಿಂ ಧನ್ಯೋಸ್ಮಿ. ಮಣಿದಪೆಂ.

 13. ಕವಿತಾಸರ್ಜನದೊಳ್ ವಿಲಾಸಮತಿಗಳ್ ಸ೦ತಾಪವ೦ ಪೊ೦ದಿರಲ್
  ಸವಿಯ೦ ತೋರಿಪ ಪಠ್ಯತ೦ತ್ರಗಳನಿ೦ ವರ್ಷೋತ್ಕಟ೦ ಗೈಯೆ ಸ೦-
  ಭವವಾಯ್ತೈ ಪರಿವರ್ತನಾದ್ರತೆಯೊಳ೦ ನೀಗಲ್ಕೆದೋಷ೦ಗಳ೦
  ನವಪದ್ಯಾ೦ಕುರ ಪದ್ಯಪಾನದೊಳಗ೦ ಸಾಗಲ್ಕೆ ಸಪ್ತಾಹಗಳ್

  ಋತುಗಳ ಲಕ್ಷಣಗಳು ಪದ್ಯಪಾನಿಗಳಮೇಲೆ ಕಲಿಕೆಯಲ್ಲಿ ಬೀರಿರುವುದನ್ನ ಪದ್ಯದಲ್ಲಿತರಲೆತ್ನಿಸಿದ್ದೇನೆ (ಮತ್ತೊಮ್ಮೆ ಅರ್ಥಕ್ಕಿ೦ತ ತಡಕಾಟವೇ ಹೆಚ್ಚು ಕಾಣುತ್ತಿದೆ…)

  ಸ೦ತಾಪ = intense passion (is this valid usage?)-> ಗ್ರೀಷ್ಮ ಋತು
  ವರ್ಷ = rain -> ವರ್ಷ ಋತು
  ಪರಿವರ್ತನೆ = change from ಸ೦ತಾಪ to ಆರ್ದ್ರತೆ -> ಶರದೃತು
  ಆರ್ದ್ರತೆಯೊಳ೦ = moisture ->ಹೇಮ೦ತ
  ನೀಗಲ್ಕೆದೋಷ೦ಗಳ೦ = fall of unwanted -> ಶಿಶಿರ
  ನವಪದ್ಯಾ೦ಕುರ = new sprout -> ವಸ೦ತ

  ದಯಮಾಡಿ ತಿದ್ದುಪಡಿ ಸೂಚಿಸಿ…

  • ಸೋಮ, ಇದು ದಿಟವಾಗಿ ಮಹತ್ತ್ವಾಕಾಂಕ್ಷೆಯ ಪದ್ಯ. ನಿಜ, ಕೆಲವೆಡೆ ಅರ್ಥಕ್ಲೇಶವೋ ವ್ಯಾಕರಣದ ತೊಡಕೋ ಇದೆ, ಇರಲಿ. ಆದರೆ ಹೀಗೆ ಸಾಹಸವನ್ನು ಮಾಡದೆ ಒಳ್ಳೆಯ ಪದ್ಯಗಳನ್ನು ರಚಿಸಲಾಗಲಿ ಶೈಲಿಯನ್ನು ಕುದುರಿಸಿಕೊಳ್ಳಲಾಗಲಿ ಸಾಧ್ಯವಿಲ್ಲ. ನಾಳೆ ರಘುವಂಶ ತರಗತಿಯಲ್ಲಿ ಇದನ್ನು ಮತ್ತಷ್ಟು ಸವರಿಸುವ ಬಗೆಯನ್ನು ತಿಳಿಸುವೆ:-)

 14. ಪದ್ಯಪಾನದ ಸ್ನೇಹಿತರಿಗೆಲ್ಲಾ ನಂದನ ಸಂವತ್ಸರಕ್ಕೆ ಶುಭಾಶಯಗಳು.

  ಮತ್ತೆ ಹಾಡುತ ಮತ್ತ ಕೋಕಿಲ
  ಸುತ್ತ ಹೂಗಳು ಚಿಟ್ಟೆ ದುಂಬಿಯು
  ಚಿತ್ತದೇಕಾಂತಕೆ ಸಮಯವಲ್ಲೆನಲು ಸಂತಸದೆ
  ಮುತ್ತಿನಂದದಿ ಮಲ್ಲೆ ಮೊಗ್ಗದು
  ಹೊತ್ತು ನಿಂದಿಹ ಮಾವಿಗುಸುರಿತು
  ‘ಗೊತ್ತೆ , ವಸಂತನದಿದು ಕೇಳಿಯು ‘ ಮುಕ್ತ ಮನರಾಗೈ

  ಮುಕ್ತ ಮನರಾಗೈ – ಈ ಪದ್ಯದ ಆಶಯ

  • ಇಲ್ಲಿ ಮತ್ತೆ ಆರನೆಯ ಸಾಲಿನಲ್ಲಿ ಜಗಣ ಬಂದಿದೆ.:-)
   ಬಹುವಚನ ಬಂದಾಗ ಏಕವಚನದ ಕ್ರಿಯಾಪದ ’ಆಗೈ’ ಸರಿಯಾಗದು. ಮುಕ್ತಮನನಾಗೈ ಅಥವಾ ಮುಕ್ತಮನರಾಗಿ ಎಂದು ಸವರಿಸಬೇಕು.

  • ಇಲ್ಲಿ ಮತ್ತೆ ಆರನೆಯ ಸಾಲಿನಲ್ಲಿ ಜಗಣ ಬಂದಿದೆ.:-)
   ಹೌದಲ್ಲವೇ? ಗಮನಿಸಲಿಲ್ಲ , ಕ್ಷಮಿಸಿ.

   ಮನರಾಗೈ – ಬಗ್ಗೆ ಅನುಮಾನವಿತ್ತು. ಮನರಾಗಿರೈ – ಸರಿಯಾದ ಪ್ರಯೋಗವೇ?
   ಹಾಗೆಯೇ ಈ ಪದ್ಯದ ಬಂಧದ ಬಗ್ಗೆ ಅನುಮಾನವಿದೆ – ಅಂದರೆ, ಸುಕುಮಾರವೋ, ನಿಭಿಡವೋ ಎಂದು. ನಾಳೆಯ ತರಗತಿಯಲ್ಲಿ ಇದನ್ನೂ ತಿಳಿಸಬೇಕಾಗಿ ಕೋರುತ್ತೇನೆ.

   ಇನ್ನು ನನಗೆ ತಿಳಿದ ಮಟ್ಟಿಗೆ ತಿದ್ದಿರುವ ಪದ್ಯ:

   ಮತ್ತೆ ಹಾಡುತ ಮತ್ತ ಕೋಕಿಲ
   ಸುತ್ತ ಹೂಗಳು ಚಿಟ್ಟೆ ದುಂಬಿಯು
   ಚಿತ್ತದೇಕಾಂತಕೆ ಸಮಯವಲ್ಲೆನಲು ಸಂತಸದೆ
   ಮುತ್ತಿನಂದದಿ ಮಲ್ಲೆ ಮೊಗ್ಗದು
   ಹೊತ್ತು ನಿಂದಿಹ ಮಾವಿಗುಸುರಿತು
   ‘ಗೊತ್ತೆ , ಗೆಳೆಯ ವಸಂತನಾಟವಿದು ‘, ಲಘುಮನರಾಗಿ

   (೬ನೇ ಸಾಲನ್ನು ಹೀಗೂ ತಿದ್ದಿದ್ದೇನೆ:

   ಗೊತ್ತೆ, ಋತುರಾಜನದಿದಾಟವು ‘ ಮುಕ್ತ ಮನರಾಗಿ)

 15. ಇಂದ್ರವಜ್ರಂ: ನಾನಾನನಾನಾ ನನನಾನನಾನಾ

  ಸಂವತ್ಸರಂಗಳ್ ಯುಗದಾದಿ ಮಾತ್ರಂ
  ತಾವಾದವೆನ್ನಲ್ ಸರಿಯಾಗದೆಂದುಂ
  ತಾವಾಗಲಕ್ಕುಂ ಯುಗಮಧ್ಯಮಂತ್ಯಂ
  ನಾವೇತಕಬ್ದಂ ಯುಗಮೆನ್ನುತಿರ್ಪೆವ್

  • ಕೊನೆಯ ಪಾದ ಸರಿಯಾಗಲಿಲ್ಲ (ಅಬ್ದಂ/ ಅಬ್ಚಮಂ). ಸವರುತ್ತೇನೆ.

   • ಸಂವತ್ಸರಂಗಳ್ ಯುಗದಾದಿ ಮಾತ್ರಂ
    ತಾವಾದವೆನ್ನಲ್ ಸರಿಯಾಗದೆಂದುಂ
    ತಾವಾಗಲಕ್ಕುಂ ಯುಗಮಧ್ಯಮಂತ್ಯಂ
    ಭಾವಿರ್ಪೆವೇಕೋ ಯುಗಮಬ್ದಮೆಂದುಂ

 16. ಬೇವು ಬೆಲ್ಲವ ಸವಿದು
  ಮಾವಿನಾ ತೋರಣದಿ
  ದೇವರಂ ಸಿಂಗರಿಸಿ ಪೂಜಿಸುವ ಬಾ
  ಕಾವುದೈ ಸಿಹಿಕಹಿಯು
  ಜೀವವಿಹ ದೇಹವಂ
  ನೋವುಸುಖವನುಭವಿಪ ಶಕ್ತಿಯಂ ತಾಂ

 17. ಪು.ತಿ.ನ ರವರ ‘ನಗ್ನ ವಿಪಿನ ನಗ್ನ ಗಗನ ತಪೋಮಗ್ನ ಮೇಧಿನಿ’ ಕವನ ಇದ್ದರೆ ದಯವಿಟ್ಟು ___ _ _ 9341267602 _ ನಂಬರ್ ಗೆ ದಯವಿಟ್ಟು ಕಳುಹಿಸಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)