Mar 182012
 

ಈ ಕಂದ ಪದ್ಯದ ಪಾದಕ್ಕೆ, ಉಳಿದ ಮೂರು ಪಾದಗಳನ್ನು  (ಸಾಲುಗಳನ್ನು) ಪೂರಣಿಸಿ ಸಮಸ್ಯೆಯನ್ನು ಬಗೆಹರಿಸಿರಿ ::

ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

  88 Responses to “ಪದ್ಯಸಪ್ತಾಹ – ೧೨ – ಸಮಸ್ಯೆ”

 1. ಕಂಠದ ಮೇಲೊಮ್ಮೆಯವಳ್
  ತುಂಟ ಮಗನ ಜೊತೆಗೆ ಪೋಗುತಿರಲಂ, ಕಂದಂ
  ತಂಟೆಯಗೈಯಲ್ ಚಚ್ಚುತ
  ಸೊಂಟದ ಮೇಲ್, ಸೀರೆಯೆತ್ತಿ ಸುಂದರಿ ನಡೆದಳ್ ||

  ಕಂಠ – ದಡ, ತಟ
  ಚಚ್ಚು – (ಮಗುವನ್ನು) ಎತ್ತಿಕೊಳ್ಳು

  • Good pooranam. Congrats Ms Kanchana. ಪೋಗುತಿರಲಾಕಂದಂ… ಎಂದಲ್ಲಿ ಸರಿಹೋದೀತು.

   • ಕಂಠದ ಮೇಲೊಮ್ಮೆಯವಳ್
    ತುಂಟ ಮಗನ ಜೊತೆಗೆ ಪೋಗುತಿರಲಾಕಂದಂ
    ತಂಟೆಯಗೈಯಲ್ ಚಚ್ಚುತ
    ಸೊಂಟದ ಮೇಲ್, ಸೀರೆಯೆತ್ತಿ ಸುಂದರಿ ನಡೆದಳ್ ||

    ಧನ್ಯವಾದಗಳು ಮೌಳಿಯವರೆ.

    • ಅಯ್ಯೋ ದೇವರೇ, ಸಣ್ಣ ಮಗುವನ್ನು ಎರಡೆರಡು ಸರ್ತಿ ಯಾರಾದರೂ ಚಚ್ಚುತ್ತಾರೆಯೇ??? 😀

 2. ಎರಡು ಪೂರಣಗಳು…

  ಎಂಟ್ ಹತ್ ಸೀರೆಯ ಮಾರಿರೆ
  ಬಂಟ್ವಾಳದ ಸಂತೆಯಲ್ಲಿ ಕೊನೆಗುಳಿದಂಥಾ
  ಗಂಟನು ಸಾಗಿಸೆ ಹೊತ್ತಳು
  ಸೊಂಟದಮೇಲ್ ಸೀರೆ ಯೆತ್ತಿ ಸುಂದರಿ ನಡೆದಳ್

  ಸಂತೆಯಲ್ಲಿ ಸೀರೆಗಳನ್ನು ಮಾರಲುಬಂದ ಸುಂದರಿ, ಹತ್ತಾರು ಸೀರೆಗಳು ಮಾರಾಟವಾಗದೆ, ಅವನ್ನೆಲ್ಲಾ ಗಂಟುಕಟ್ಟಿ ಸೊಂಟದಮೇಲೆ ಎತ್ತಿಟ್ಟುಕೊಂಡು ಮನೆಯಕಡೆ ಹೆಜ್ಜೆ ಹಾಕಿದಳು…!!

  ಕಂಟಪ್ಪನವರಸೊಸೆ ಯೊ-
  ಬ್ಬಂಟಿಯೆ ಬರುತಿರಲು ಬಾವಿ ನೀರಂ ಪೊತ್ತುಂ
  ತುಂಟರಗುಂಪೆದುರಾಗಲು
  ಸೊಂಟದ ಮೇಲ್ಸೀರೆ ಯೆತ್ತಿ ಸುಂದರಿ ನಡೆದಳ್

  ಶ್ರೀಕಂಠಶಾಸ್ತ್ರಿಗಳ ಸೊಸೆ, ದೂರದಬಾವಿಯಿಂದ ಕುಡಿಯುವನೀರನ್ನು ಹೊತ್ತು ಏಕಾಂಗಿಯಾಗಿ ಬರುತ್ತಿರಲು, ಎದುರಲ್ಲಿಊರಿನ ಪುಂಡುಹುಡುಗರನ್ನುಗಮನಿಸಿ, ಸೊಂಟದಮೇಲ್ಭಾಗಕ್ಕೆ ಮೇಲಿನ ಸೆರಗನ್ನು (ಸೊಂಟದ ಮೇಲ್ಸೀರೆಯನ್ನು) ಒಪ್ಪವಾಗಿ ಹೊದ್ದು, ಆ ಗರತಿ ಮುಂದೆ ನಡೆದಳು.

 3. ತುಂಟ ಬೆಡಗಿಯಾಕೆಯು ತನ-
  ಗುಂಟದು ಜೀನ್ಸೆನುತ ಬೆಕ್ಕು ನಡಿಗೆ ಮುಗಿಸಿ ತಾ
  ಗಂಟಲಿ ಮುಚ್ಚಿಟ್ಟೊಡವೆಯ
  ಸೊಂಟದಮೇಲ್ ಸೀರೆ ಯೆತ್ತಿ ಸುಂದರಿ ನಡೆದಳ್

  ಒಬ್ಬಳು ಮಾಡೆಲ್, ಸೀರೆಯ ಒಳಗೆ ಜೀನ್ಸ್ ತೊಟ್ಟು , ramp walk(catwalk – ಬೆಕ್ಕು ನಡಿಗೆ) ಮಾಡಿ , ಸೀರೆಯನ್ನು ಬಿಚ್ಚಿ ಮಡಿಸಿ ಇಟ್ಟುಕೊಳ್ಳುವುದಕ್ಕೆ ವೇಳೆಯಿಲ್ಲದೆ , ತಾನು ತೊಟ್ಟಿದ್ದ ಒಡವೆಗಳನ್ನು ಮಾತ್ರ ಗಂಟಿನೊಳಗಿಟ್ಟು(hand bag ), ಸೀರೆಯನ್ನು ಮೇಲೆತ್ತಿಕೊಂಡೇ ಹೋದಳೆನ್ನುವಂತೆ ಬರೆದಿದ್ದೇನೆ.

 4. ನ೦ಟರ್ ಬ೦ದಿರ್ಪರೆ೦ದು
  ತು೦ಟ೦ ಮೈದುನನುಕೂಗೆ ಬಟ್ಟೆಯನೊಗೆದಾ
  ಗ೦ಟ೦ ಸೀರೆಯೊಳುಮಾಡಿ
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

  • ಬಟ್ಟೆಯನೊಗೆಯುತ್ತಿದ್ದಾಕೆ ಒಗೆದಬಟ್ಟೆಯ ಸೀರೆಯನ್ನು ಮಾಡಿದಳು

   • ಬಟ್ಟೆಯನೊಗೆಯುತ್ತಿದ್ದಾಕೆ ಒಗೆದಬಟ್ಟೆಯ ಗ೦ಟನ್ನು ಇನ್ನೊ೦ದು ಸೀರೆಯಿ೦ದ ಮಾಡಿದಳು
    ಹಾಗು ಅದನ್ನೆತ್ತಿ ಕೊ೦ಡು ಈಗಷ್ಟೇ ಬ೦ದ ನೆ೦ಟರನ್ನು ನೊಡಲು ಹೋದಳು

  • ಗಣೇಶ್ ಸರ್,

   ಮೂರನೆಯ ಸಾಲನ್ನು ತಿದ್ದಲು ಪ್ರಯತ್ನಿಸಿದ್ದೇನೆ

   ನ೦ಟರ್ ಬ೦ದಿರ್ಪರೆ೦ದು
   ತು೦ಟ೦ ಮೈದುನನುಕೂಗೆ ಬಟ್ಟೆಯನೊಗೆದಾ
   ಗ೦ಟ೦ ಸೀರೆಯೊಳಿಡುತಲಿ
   ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

 5. ಪಾಶ್ಚಾತ್ಯರಲ್ಲಿ, ವಧುವು ತನ್ನ ಅಪ್ತೇಷ್ಟರಾದ ಕೆಲವರನ್ನು ‘ಸಖಿ’ಯರಾಗಿ (bridesmaid) ನೇಮಿಸುವುದು ವಾಡಿಕೆ. ವಧುವಿನ ವೇಷಭೂಷಣಗಳಲ್ಲಿ
  “wedding veil” ಎಂಬುದೂ ಒಂದಂಶ. ಉದ್ದನೆಯ ಬಟ್ಟೆಯ ಒಂದು ಅಂಚನ್ನು ತಲೆಗೆ ಮುಂಡಾಸಿನಂತೆ ಕಟ್ಟಿಯೋ ಮುಖಕ್ಕೆ ಪರದೆಯಾಗಿ
  ಏರ್ಪಡಿಸಿಯೋ ಇದ್ದರೆ, ಉಳಿದದ್ದನ್ನು ಹಿಂದೆ ಬಿಟ್ಟಿರುತ್ತಾರೆ. ಹೀಗೆ ಹಿಂದಕ್ಕೆ ಬಿಟ್ಟದ್ದು ಆರೇಳು ಅಡಿಗಳಷ್ಟು ಉದ್ದವಿರಬಹುದು. ವಧುವನ್ನು ಮಂಟಪಕ್ಕೆ
  ಕರೆತರುವಾಗ ಆಕೆಯ ಸಖಿಯರು veilನ ಅಂಚನ್ನು ಹಿಡಿದು ಹಿಂಬಾಲಿಸುವ ಪದ್ಧತಿಯುಂಟು. ಈ ಸಮಸ್ಯೆಯ ಸುಂದರಿ ಹಾಗೆ ನಡೆದ
  ಸಖಿಯರಲ್ಲಿ ಒಬ್ಬಳು.

  ನಂಟಳ ನೆರಳಲಿ ವಧುವಿನ
  ಮುಂಡಾಸಿನಸೆರಗತಾಗಲೀಯದೆ ನೆಲಮಂ
  ಬಂಟಳು ಪಿಡಿದಾ ವಧುವಿನ
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

  ವಧುವಿನ ಸೊಂಟಕ್ಕೆ ಅಥವಾ ಎದೆಯಭಾಗಕ್ಕೆ ಉದ್ದನೆಯ ಬಟ್ಟೆಯ ಅಂಚನ್ನು ಕಟ್ಟಿ wedding train ಎಂಬುದಾಗಿ ಏರ್ಪಡಿಸುವುದೂ ಇದೆ. ಸಖಿಯರು ಆ trainಅನ್ನು ಹಿಡಿದು ನಡೆಯುವುದುಂಟು; ಅದರದು ಈ ಪದ್ಯದ ಸಂದರ್ಭಕ್ಕೆ ಹೊಂದಲಾರದು ಅಷ್ಟೆ.

  ಮೂಗಿಗಿಂತಲೂ ಮೂಗುತಿಯೇ ಭಾರವಾಯಿತೇನೋ, ಕ್ಷಮೆಯಿರಲಿ.

 6. ನಿನ್ನೆಯ ಸಮಸ್ಯೆಗೆ ಇಂದೇ ಈ ಪ್ರಮಾಣದ ಪರಿಹಾರಗಳು ಬಂದಿರುವುದು ನಿಜಕ್ಕೂ ಅತ್ಯಂತ ಹರ್ಷಾಸ್ಪದ. ಎಲ್ಲರ ಪರಿಹಾರಗಳ ಕಲ್ಪನೆಗಳೂ ಚೆಲುವಾಗಿವೆ. ಆದರೆ ಗಾಯತ್ರಿಯವರ ಪರಿಹಾರ ಮಾತ್ರ ರೂಪ-ಸ್ವರೂಪಗಳೆರಡರ ದೃಷ್ಟಿಯಿಂದಲೂ ತುಂಬ ಸೊಗಸಾಗಿವೆ. ಇಲ್ಲಿ ಕಲ್ಪನೆ, ಪ್ರಾಸ, ವಾಕ್ಯಾನ್ವಯ ಹಾಗೂ ಪದಪದ್ಧತಿಗಳೆಲ್ಲ ಅನವದ್ಯವಾಗಿವೆ. ಸೋಮ ಅವರ ಪೂರಣದ ಮೂರನೆಯ ಸಾಲಿನಲ್ಲಿ ಛಂದಸ್ಸು ಕೆಟ್ಟಿದೆ. ಕಾಂಚನ ಅವರ ಪರಿಹಾರದ ಮೊದಲ ಪಾದದಲ್ಲಿ ಪ್ರಾಸ ತುಸು ಎದವಿದ್. ಚಂದ್ರಮೌಳಿಯವರ ಪರಿಹಾರಗಳಲ್ಲಿಯೂ ಪ್ರಾಸವೇ ಸ್ವಲ್ಪ ತ್ರಾಸವಾಗಿದೆ. ಜೀವೆಂ ಅವರ ಪರಿಹಾರದ ದ್ರಾವಿಡಪ್ರಾಣಾಯಾಮ ತುಸು ಉಸಿರುಗಟ್ಟಿಸಿದೆ:-)
  ಈ ಸಮಸ್ಯೆ ನಿಜಕ್ಕೂ ಅಂಥ ದುಷ್ಕರವೇನಲ್ಲ. ಆದರೆ ಆದಿಪ್ರಾಸದ ಬಿಂದುಪೂರ್ವಕಟಕಾರದ ನಿರ್ವಾಹವು ಸ್ವಲ್ಪ ಕ್ಲೇಶಾವಹ. ಇರಲಿ, ಮಿಕ್ಕ ಗೆಳೆಯರು ಬೇಗ ಮತ್ತೂ ಹೊಸಹೊಸ ಪರಿಹಾರಗಳನ್ನು ಹೊರತರಲಿ. ಸಮಸ್ಯಾಪೂರಣ/ದತ್ತಪದೀತ್ಯಾದಿಗಲಲ್ಲಿ ಕಡೆಕಡೆಗೆ ಪರಿಹಾರವನ್ನು ಮಾಡುವವರಿಗೆ ಕಲ್ಪನೆಗಳ, ಕೀಲಕಪದಗಳ ನವನವೀನಸಾಧ್ಯತೆಗಳ ಅಭಾವವೊಂದು ತೊಡಕಾದರೆ ಮೊದಮೊದಲು ಪರಿಹರಿಸುವವರಿಗೆ ನೀಗಲ್ಲನ್ನು (breaking the ice)ಒಡೆಯುವುದೇ ಒಂದು ಸವಾಲು. ಒಟ್ಟಿನಲ್ಲಿ ಉಭಯಥಾ ಇವು ಪದ್ಯಪಾನಿಗಳಿಗೆ ಒರೆಗಲ್ಲುಗಳು. ಇದೇ ಇಲ್ಲಿಯ ಆಕರ್ಷಣೆ ಕೂಡ.

 7. ಧನ್ಯವಾದಗಳು ಗಣೇಶರೆ, ಬಹಳ ಯೋಚಿಸಿ ಈ ಪದ್ಯವನ್ನು ಪೋಸ್ಟ್ ಮಾಡಿದೆ. ನನಗಂತೂ ಹೊಸಗನ್ನಡದ ಕಂದ , ಅದೂ ಇಂಗ್ಲೀಷ್ ಪದ ಬೇರೆ ಉಪಯೋಗಿಸಿದ್ದೇನೆ, ಎಲ್ಲಿ ಎಡವಟ್ಟಾಗುತ್ತದೆಯೋ ಎಂಬ ಅಳುಕಿತ್ತು. ನನ್ನ ಕಾಂಟೆಂಪೊರರೀ ಕಲ್ಪನೆಗಳಿಗೆ ನಿಮ್ಮ ಮೆಚ್ಚುಗೆ ಉತ್ತೇಜನಕಾರಿ. ಇಂತಹ ಪದ್ಯಗಳನ್ನು ಬರೆಯಲು ಕೆಲವೊಮ್ಮೆ ನೀವು ಪ್ರೇರಣೆ ಕೂಡ.

  • ಧನ್ಯವಾದ. ವಿಷಯಕ್ಕೆ ಪೂರಕವಾಗುವ ಭಾಷೆ-ಶೈಲಿ-ಛಂದಸ್ಸು-ಅಲಂಕಾರಗಳು ಎಂದೂ ಸೊಗಸಾಗಿರುತ್ತವೆ. ಇಲ್ಲಿ ಸಮಕಾಲೀನ-ಆಧುನಿಕ ಎನ್ನುವ ವೈಷಮ್ಯಕ್ಕೆ ಎಡೆಯಿಲ್ಲ. ರಸದೃಷ್ಟಿಯಿದ್ದಾಗ ಎಲ್ಲ ಸರಿಯಾದ ಹಂತಕ್ಕೆ ಬರುತ್ತವೆ. ನಮ್ಮ ಕಂದ-ವೃತ್ತ-ಚೌಪದಿ-ಷಟ್ಪದಿಗಳೆಲ್ಲ ಯಾವುದೇಕಾಲ-ದೇಶಗಳ ಯಾವುದೇ ವ್ಯಕ್ತಿಯ ಭಾವನೆಯನ್ನು ಬಣ್ಣಿಸಲು ತಕ್ಕುವಾಗಬೇಕು. ಇಲ್ಲವಾದರೆ ಅವು ಆ ಮಟ್ಟಿಗೆ ಅಪೂರ್ಣ.
   ಇಂಥ ಎಲ್ಲೆಗಳನ್ನು ಮೀರುವುದೂ ಪದ್ಯಪಾನದ ಒಂದು ಉದ್ದೇಶ.

 8. The chosen mean point – Navel:
  ಗಂಡನ ಪಿಸುಮಾತಿತ್ತಂ
  ಚಂಡಿತನದಿ ಪೀಡಿಪತ್ತೆ ಬಾರೆನಲತ್ತಂ|
  ಸೊಂಟದಿನಿಳಿಸೊಳಗಾಚೆಗೆ
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್||

  • ಕಲ್ಪನೆಯ ನಾವೀನ್ಯ ಸ್ಫುರಿಸುತ್ತಿದೆ. ಆದರೆ ಮೂರನೆಯ ಪಾದದಲ್ಲಿ ಅರ್ಥ ಸ್ಪಷ್ಟವಾಗುತ್ತಿಲ್ಲ.ದಯಮಾಡಿ ವಿವರಿಸಿರಿ.

   • ಕೋಣೆಯೊಳಕ್ಕೆ ಹೋಗುವಾಗ ಸೊಂಟಪಟ್ಟಿಯನ್ನು ಇಳಿಸುವುದು, ಅತ್ತೆಯ ಕರೆಗೆ ಓಗೊಟ್ಟು ಆಚೆಗೆ ಬರುವಾಗ ಏರಿಸುವುದು. ನನ್ನ ನಾಲಗೆ ಹಿಡಿದು ಇದನ್ನು ವಾಚ್ಯವಾಗಿಸಿದ್ದಕ್ಕೆ ನನಗೆ ಬೇಜಾರೇನೂ ಇಲ್ಲ. ಕಾರಣ, ಇದು ನನ್ನ ಕಲ್ಪನೆಯೂ ಅಲ್ಲ, ಅನುಭವವದಲ್ಲೂ ಇಲ್ಲ. ಇದು ತುತ್ತ-ಮುತ್ತ ಚಲನಚಿತ್ರದಲ್ಲಿದೆ. ನಾಯಕಿ ಪ್ರೇಮ ಇದನ್ನು ಚೆನ್ನಾಗಿ ನಿರ್ವಹಿಸಿದ್ದಾಳೆ.

  • ಆದಿಪ್ರಾಸವು ಎಲ್ಲ ಸಾಲುಗಳಲ್ಲೂ ಬಂದಿಲ್ಲವಲ್ಲವೆ. ಮರೆತಿರೇನೋ ಎಂದು ತೋರಿಸುತ್ತಿರುವೆ.

   • ಒಂದೇ ವರ್ಗವಲ್ಲವೆ? ಹಿಂದೊಮ್ಮೆ ಹೀಗೆ ಮಾಡಿದ್ದೆ. ಒಪ್ಪಿದೆ, ಎರಡನೆ ದರ್ಜೆ.

 9. ಎಂಟನೆ ವರ್ಷದ ಬಾಲೆಯು
  ತಂಟೆಯ ಮಾಡುತಲಿ ಸೀರೆಯುಟ್ಟಳ್ ಸೊಗದಿಂ |
  ಕುಂಟೆಯ ಬಿಲ್ಲೆಯು ಕರೆಯಲ್
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್ ||

  • Simply superb!!! and this is Ram!!!!

  • ರಾಮ್ ತು೦ಬಾ ಚೆನ್ನಾಗಿದೆ 🙂 🙂 🙂

  • Nice! 🙂 , ರಾಮಚಂದ್ರ.

  • Very nice Poem, with great imagination Ram…!!!

  • ತುಂಬಾ ಚೆಲುವಾದ ಪೂರಣ. ಸಹಜವಾದ ಕಲ್ಪನೆ. ಕಣ್ಣ ಮುಂದೆ ಸೀರೆಯನ್ನೆತ್ತಿ ಹಿಡಿದು ಕುಂಟೆಬಿಲ್ಲೆ ಆಡುತ್ತಿರುವ ಪುಟ್ಟ ಬಾಲೆ ಸುಳಿಯುತ್ತಿದ್ದಾಳೆ. ಬೆಂಗಳೂರಿನ ಬಾಲೆಯರು ಕುಂಟೆ ಬಿಲ್ಲೆ ಆಡಿ ಬಲ್ಲರೇ?

  • ಪೂರಣವನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು 🙂

 10. ಒಂದು ಪ್ರಯತ್ನ:
  [ಮದುವೆ ಮಂಟಪದಲ್ಲಿ ಕೆಲಸಗಳಲ್ಲಿ ಸತತವಾಗಿ ತೊಡಗಿ ಸುಸ್ತಾದ ಸುಂದರಿ ವಿಶ್ರಾಂತಿಗಾಗಿ ಒಂಟಿಯಿರ ಬಯಸಿ ಅಲ್ಲಿರುವ ಕೋಣೆಯೊಳಗೆ ಬಾಗಿಲು ಹಾಕಿಕೊಂಡು ಧಾವಿಸುವ ಸನ್ನಿವೇಶದ ಕಲ್ಪನೆ ]

  ಮಂಟಪ ದೊಳಗಿನ ಕೆಲಸಕೆ
  ಸೊಂಟದ ನರಗಳು ಮುದುಡುತ ನೋವುತರಲಲ್ಲಿ
  ಒಂಟಿತನ ಬಯಸಿ ಕೋಣೆಗೆ
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

 11. ಬಂಟರು ಊಟಕೆ ಕೂರಲ್
  ಕಂಟಕದಾಗಮನವಾಯ್ತು ಕೋಟೆಯ ತೂತೊಳ್ |
  ಗುಂಟದ ಒನಕೆಯ ಪಿಡಿದಳ್
  ಸೊಂಟದ ಮೇಲ್; ಸೀರೆಯೆತ್ತಿ ಸುಂದರಿ ನಡೆದಳ್ |

  ಸೊಂಟದ ಮೇಲೆ ಒನಕೆಯ ಹಿಡಿದು, ಸೀರೆಯನೆತ್ತಿ ವೀರ ನಾರಿ ಕೋಟೆರಕ್ಷಣೆಗೆ ಹೊರಟಳು! 🙂 🙂

  • Very good parihaara. instead of the first line’s UTa…., you can make it bhOjanakEgaL and tUtu in the second line can be changed to birukoL
   The third line can be changed so: gumTadinonakeyanAntaL

   • ’ಕಂದ’ನ ತೊದಲುನುಡಿಯನ್ನು ಆಸ್ವಾದಿಸಿ ಹದವಾಗಿ ಬೆನ್ನುತಟ್ಟಿದ ಎಲ್ಲರಿಗೂ ವಂದನೆಗಳು.

    ಬಂಟರು = ಸೈನಿಕರು / ಕಾಲಾಳುಗಳು. ’ಬಂಟನು’ ಎಂದಾದರೂ ಸರಿಯೇ.

    ಅವಧಾನಿಗಳೇ,
    ’ಭೋಜನಕೇಗಳ್’, ‘ಗುಂಟದಿನೊನಕೆಯನಾಂತಲ್’ = ಇವುಗಳ ಅರ್ಥ ತಿಳಿಸುವಿರಾ?

    • ಭೋಜನಕ್ಕೆ ನಡೆದಾಗ…..
     ಹಾದಿಯಲ್ಲಿ ಒನಕೆಯನ್ನು ಹಿಡಿದು…
     ಇವು ನನ್ನ ಸವರಣೆಯ ಪದ್ಯಾಂಶಗಳ ಅರ್ಥ:-)

  • chennagide:)

  • ಒಪ್ಪಣ್ಣ,
   ‘ಬಂಟರು’ ಏಕೆ? ‘ಬಂಟನು’ ಎಂದರೆ ಸಾಲದೆ! ಹಿರಿಯ ಮುತ್ತೈದೆಯೊಬ್ಬಳು ತೀರ ಕಿರಿಯಳನ್ನು “ನಿನ್ ಗಂಡ ಚೆನ್ನಾಗಿದ್ದಾನೇನೆ?” ಎಂದು ಕೇಳಿದಳು. ಅದಕ್ಕವಳು, “ಏನು! ನನ್ನ ಗಂಡನನ್ನು ಏಕವಚನದಲ್ಲಿ ಕರೆಯುತ್ತಿದ್ದೀರಿ?’ ಎಂದಳು. ಹಿರಿಯಳು, “ತಪ್ಪಾಯ್ತಮ್ಮ, ನಿನ್ನ ಗಂಡಂದಿರು ಚೆನ್ನಾಗಿದ್ದಾರೇನಮ್ಮ?” ಎಂದು ಕೇಳಿದಳು.

  • ಚೆನ್ನಾಗಿದೆ, ಒಪ್ಪಣ್ಣನವರೆ.

  • ಅಹಹ! ಅದೆಂತಹ ಸೊಗಸಾದ ಪೂರಣ!

  • ಒಪ್ಪಣ್ಣಾ…
   ನೀನು ಪದ್ಯವೂ ಬರೆತ್ತೆಯೋ..??
   ಅದ್ಭುತ.
   ಪಷ್ಟಾಯಿದು. 🙂

 12. ಒ೦ದು ವಿಚಿತ್ರ ಕಲ್ಪನೆ ಮೂಡಿತು!

  http://www.visualphotos.com/image/2×1446719/woman_walking_with_camel_in_desert_back_view

  ಘ೦ಟೆಯ ಕೊರಳ್ಗೆ ತೂಗಿಸಿ
  ಭ೦ಟರ್ ಚೀರೆಯನುಡುಬ್ಬದಾಸನ ಮಾಡಲ್
  ಗ೦ಟ೦ ಪೇರಿಸಲೊ೦ಟೆಯ
  ಸೊಂಟದ ಮೇಲ್ ಸೀರೆಯೆತ್ತಿ, ಸುಂದರಿ ನಡೆದಳ್

 13. ಮತ್ತೊಂದು ಪ್ರಯತ್ನ:

  ದಂಟದು ಮುಂದಿರೆ ಘಂಟೆಯ-
  ದೆಂಟೆನುತಾ ತಾಯಿ ಮಗಳ ಶಾಲೆಗೆ ಪೆಪ್ಪೆರ್-
  ಮಿಂಟನು ಹಂಚಲು ಹರ್ಷದಿ
  ಸೊಂಟದ ಮೇಲ್ ಸೀರೆಯೆತ್ತಿ, ಸುಂದರಿ ನಡೆದಳ್

  ದಂಟು ಸೊಪ್ಪನು ಹೆಚ್ಚುತ್ತಿದ್ದ ತಾಯಿ, ಮಗಳ ಹುಟ್ಟುಹಬ್ಬವನ್ನು ಶಾಲೆಯಲ್ಲಿ ಆಚರಿಸುವುದಕ್ಕೆ ಸಿದ್ಧಳಾಗುವ ಸಂದರ್ಭ.

  • This is again another beautiful poem, apt parihaara. The metrical. linguistic and stylistic factors are all well managed. I am very happy that Gayatri is writing so beautiful kanda padya-s

 14. ಗಣೇಶರೆ, ಆದಿಪ್ರಾಸದ ಬಿಂದುಪೂರ್ವಕಟಕಾರ ನನ್ನನ್ನು ಬಿಡುತ್ತಿಲ್ಲ. ಹಾಗೆಯೇ ಸಮಸ್ಯೆ ಕೂಡ. ಆದ್ದರಿಂದ ಇನ್ನೊಂದು ಪ್ರಯತ್ನ.

  ಮೆಂಟಲೆನಲು ಕನಲಿದಳು ಕ-
  ರೆಂಟು ಸಚಿವೆ ಶೋಭೆ, ಮುರಿದ ಬಾಂಧವ್ಯವನು ಸಿ-
  ಮೆಂಟಿಸಲಾತುರದಿ ನಮಿಸಿ
  ಸೊಂಟದ ಮೇಲ್ ಸೀರೆಯೆತ್ತಿ, ಸುಂದರಿ ನಡೆದಳ್

  ಪ್ರಾಸ ದೋಷವಿದೆ.
  ಮೆಂಟಲ್ – ಮಾಜಿ ಮು.ಮಂ.
  ಸಿಮೆಂಟಿಸಲು – cementing relationships ಎನ್ನುವ ಪ್ರಯೋಗವಿದೆ. ಅದನ್ನು ಕನ್ನಡೀಕರಿಸಲು ಪ್ರಯತ್ನಿಸಿದ್ದೇನೆ. ಸರಿಯಿದೆಯೇ ತಿಳಿಸಿ.

  ವಿರೋಧಿ ಗುಂಪಿನವರು ಮಾಜಿ ಮು.ಮಂ.ಗಳನ್ನು ಮೆಂಟಲ್ ಕೇಸ್ ಎಂದಾಗ ನಡೆದಿರಬಹುದಾದ ಘಟನೆ.

  • ಪ್ರಾಸದೋಷವೇನೂ ಇಲ್ಲವಲ್ಲ !

  • ರಾಮ್ ಹೇಳಿದಂತೆಯೇ ಪ್ರಾಸದ ದೋಷವೇನೂ ಇಲ್ಲ. ಅಷ್ಟೇ ಅಲ್ಲ, ಪ್ರಾಸವನ್ನು ಆಂಗ್ಲಪದಗಳಿಂದ ತರುವಲ್ಲಿ ಮಾಡಿರುವ ಖಂಡಪ್ರಾಸಚಮತ್ಕಾರವೂ ಚೆಲುವಾಗಿದೆ. ಈ ಶೈಲಿಯು ಪ್ರಕೃತಪರಿಹಾರದ ಧಾಟಿಗೆ ಚೆನ್ನಾಗಿ ಒಗ್ಗುತ್ತದೆ ಕೂಡ. ಹೀಗಾಗಿ ಈ ಪದ್ಯವೂ ಚೆನ್ನಾಗಿದೆ. ಆದರೆ ಎರಡನೆಯ ಸಾಲಿನ ಕೊನೆಗೆ ಬರಲೇಬೇಕಾದ ಗುರುವು ಲಘುವಾಗಿರುವುದೊಂದೇ ಇಲ್ಲಿಯ ತಾಂತ್ರಿಕಲೋಪ….

 15. ಧನ್ಯವಾದಗಳು. ಮೆಂಟ, ಮೆಂಟಿ – ಬಂದಿರುವುದು ದೋಷವೆಂದು ತಿಳಿದಿದ್ದೆ. ಈಗ ಉಳಿದಿರುವುದು ಅಗ್ರೀಮೆಂಟನ್ನು ೨ನೆ ಸಾಲಿನಲ್ಲಿ ತರುವುದು.

  • ಹೇಗಿದ್ದರೂ ‘ಸೀಮೆಂಟ್’ ಎನ್ನುವುದು ವಾಡಿಕೆ ತಾನೇ – ಕೆಲಸ ಸುಲಭ! 🙂

   ಚೆನ್ನಾಗಿದೆ ಗಾಯತ್ರಿ. ಮಾಜಿ ಹಾಲಿಯಾಗಬಹುದು – ಜೋಪಾನ.

   • ಧನ್ಯವಾದಗಳು. ಲೇಟೆಸ್ಟ್ ಪರಿಹಾರ ಹೇಗಿದೆ?

   • ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಚಂಪಾ ಹೀಗೆ ಹೇಳಿದ್ದಾರೆ: ‘ನಮ್ಮ ಕಣ್ಣೆದುರೇ ಇಷ್ಟೆಲ್ಲಾ ಅನಾಹುತ ಸಂಭವಿಸುತ್ತಿರುವುದು ನಮ್ಮ ಸೌಭಾಗ್ಯ. ಸಾಹಿತ್ಯ ಸೃಷ್ಟಿಗಾಗಿ ಎಷ್ಟೊಂದು ವಸ್ತುಗಳು ಲಭ್ಯ ‘ ಅಂತ. ನನ್ನ ಮಟ್ಟಿಗೆ ಇಂತಹ ಸಮಸ್ಯಾ ಪೂರಣಕ್ಕಂತೂ ಅನುಕೂಲವಾಯಿತು.

  • ಅಂದರೆ , ಒಂದೇ ಪದವನ್ನು ೨ ಸಲ ಪ್ರಾಸಕ್ಕಾಗಿ ಉಪಯೋಗಿಸಿರುವುದು.

 16. ಈಗ ಸರಿಯಾಗಿದೆಯೇ ತಿಳಿಸಿ.

  ಮೆಂಟಲೆನಲು ಕನಲಿದಳು ಕ-
  ರೆಂಟು ಸಚಿವೆ ಶೋಭೆ, ಗಡ್ಕರಿ ತಿಳಿಸಿದಗ್ರೀ-
  ಮೆಂಟನು ನೆನಪಿಸಲಾಗಲೆ
  ಸೊಂಟದ ಮೇಲ್ ಸೀರೆಯೆತ್ತಿ, ಸುಂದರಿ ನಡೆದಳ್

  • ಚಿಕ್ಕ ಬದಲಾವಣೆ ಮಾಡಿದ್ದೇನೆ:

   ಮೆಂಟಲೆನಲು ಕನಲಿದಳು ಕ-
   ರೆಂಟು ಸಚಿವೆ ಶೋಭೆ, ಗಡ್ಕರಿ ತಿಳಿಸಿದಗ್ರೀ-
   ಮೆಂಟನು ನೆನಪಿಸಲಾಕ್ಷಣ
   ಸೊಂಟದ ಮೇಲ್ ಸೀರೆಯೆತ್ತಿ, ಸುಂದರಿ ನಡೆದಳ್

   • ಎರಡನೆಯ ಪಾದದಲ್ಲಿ ಛಂದೋದೋಷವಾಗಿದೆ. ದಯವಿಟ್ಟು ಸವರಿಸಿರಿ

    • ಗಣೇಶರೆ,
     ೨ನೇ ಸಾಲನ್ನು
     ರೆಂಟುಸ ಚಿವೆಶೋ ಭೆಗಡ್ಕ ರಿತಿಳಿಸಿ ದಗ್ರೀ-

     ಹೀಗೆ ಬಿಡಿಸಿದಾಗ ಮಧ್ಯದ್ದು ಜಗಣವಾಗುತ್ತದೆ. ಇದು ಕಂದದಲ್ಲಿ ಬರಬಹುದಲ್ಲವೇ? ಭೆ ಯಲ್ಲಿ ಯತಿ ಬಂದಿರುವುದರಿಂದ ಜಗಣ ತರಬಾರದೇನು? ನನಗೆ ತಿಳಿಯುತ್ತಿಲ್ಲ. ದಯವಿಟ್ಟು ಇದರ ಬಗ್ಗೆ ತಿಳಿಸಿ.

     ೨ನೇ ಸಾಲನ್ನು ಹೀಗೆ ಮಾಡಿದರೆ ಸರಿಯಾಗುತ್ತದೆಯೇ?

     ರೆಂಟು ಸಚಿವೆ ಶೋಭೆ, ಗಡಕರಿ ತಿಳಿಸಿದಗ್ರೀ-

     • ಇದಿಗ ಸರಿಯಾಗಿದೆ.

     • ಇದಿಗ ಸರಿಯಾಗಿದೆ. ಮೊದಲ ಮಾದರಿಯಲ್ಲಿ
      ಗತಿಸುಭಗತೆ ಅಷ್ಟಾಗಿ ಇರಲಿಲ್ಲ

 17. ಇನ್ನೊಂದು ಪರಿಹಾರ ::
  ಬಂಟನ ವಾಚಾಳಿತನ –
  ಕ್ಕಂಟಿರುವುತ್ಪ್ರೇಕ್ಷೆಯಂ ಸಹಿಸಲದಸಾಧ್ಯಂ |
  ಟ್ವೀಂಟಿದ ಮೊಳಕಾಲ್ಕಂಡುಂ
  “ಸೊಂಟದ ಮೇಲ್ಸೀರೆಯೆತ್ತಿ ಸುಂದರಿ ನಡೆದಳ್” ||
  🙂
  [ಟ್ವೀಂಟು = Tweet]

  • ha ha ha
   one more ‘that is Ram!’ type of poem. ‘That is Ram’ does not refer to ‘ವಾಚಾಳಿ’ 😉

   ತು೦ಬಾ ಚೆನ್ನಾಗಿದೆ ರಾಮ್ 🙂

   • ಪ್ರಾಸಕ್ಕೊಸ್ಕರ ಮಾಡಿರುವ ಟ್ವೀ೦ಟು ಸಹ ಬಹಳಚೆನ್ನಾಗಿ ಹೊ೦ದುತ್ತಿದೆ, ಪದ್ಯ ಬಹಳ ಹಿಡಿಸಿತು:)

 18. ರಾಮ್ ಹಾಗು ಗಾಯತ್ರಿಯವರ ಅನೇಕ ಸಮಸ್ಯಾಪೂರಣಗಳಿ೦ದ ಉತ್ತೇಜಿತನಾಗಿ ಇನ್ನೊ೦ದು ಪ್ರಯತ್ನ

  ತು೦ಟಿಯ ಮನವ೦ ಗೆಲ್ಲ-
  ಲ್ಕ೦ಟಿಸುತರಿವೆಯನುತಾತ ಪುತ್ತಳಿ ಮಾಡಲ್
  ಮೀ೦ಟಿಹ ಗೊ೦ಬೆಯ ಪಿಡಿಯುತ
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

  ಪುತ್ತಳಿಗೆ ಕಾಲಿಲ್ಲದ ಕಾರಣ ತೊಡರದ ಹಾಗೆ ಸೀರೆಯನೆತ್ತಿ ಮಗುವು ನಡೆದಳು
  ಮೀ೦ಟಿಹ = ಚೆ೦ದವಿರುವ

  • ಅಕಟಾ! ಗಾಂಭೀರ್ಯದ ನಿಧಿ-
   ಯಕಲಂಕಂ ಸಲ್ಗೆ ಪದ್ಯಮೆನುತೆ ಸಮಸ್ಯಾ-
   ಪ್ರಕಟನೆಯಂ ಗೆಯ್ದಿರೆ ನೀ-
   ವಕರುಣದಿಂ ಹಾಸ್ಯಹವಿಯನಾಗಿಪುದೊಳವೇ???:-):-)

   • ಗಣೇಶ್ ಸರ್,

    ನನ್ನ ಪದ್ಯ ಇನ್ನೊಮ್ಮೆ ಓದಿದ ಮೇಲೆ, ಇದಕ್ಕೆ ೨ ರೀತಿಯ ಅರ್ಥ ಮಾಡಬಹುದೆ೦ದು ತಿಳಿಯಿತು. ಈ ಶ್ಲೇಷ ಆಕಸ್ಮಿಕ!

    ನಾನು ಮನದಲ್ಲಿಟ್ಟಿದ್ದ ವಸ್ತು ಹೀಗಿದೆ:

    ಒಬ್ಬ ಅಜ್ಜನು ತನ್ನ ಮೊಮ್ಮಗುವಿಗೆ ಬಟ್ಟೆಯಿ೦ದ ಮಾಡಿದ ಪುತ್ತಳಿ ಗೊ೦ಬೆಯನ್ನು ಮಾಡಿಕೊಡುತ್ತಾನೆ (ಈ ಗೊ೦ಬೆಗೆ ಸೊ೦ಟದ ಕೆಳಗೆ ಸೀರೆಯ ರೀತಿಯ ಬಟ್ಟೆ ಮಾತ್ರ ಇರುತ್ತದೆ, ಕೈ ಗೊ೦ಬೆಯಾಟದಲ್ಲಿ ಹೆಣ್ಣು ಗೊ೦ಬೆಗೆ ಬಳಸುತ್ತಾರಲ್ಲ ಹಾಗೆ). ಆ ಮಗುವು ಆ ಗೊ೦ಬೆಯನ್ನು ತೆಗೆದುಕೊ೦ಡು ಹೋಗುವಾಗ ತಾನು (ಗೊ೦ಬೆಯ ನೀಳವಾದ ಬಟ್ಟೆಯಿ೦ದ) ತೊಡರಬಾರದೆ೦ದು ಗೊ೦ಬೆಯ ಸೀರೆಯನ್ನು ಸೊ೦ಟದ ಮೇಲೆ ಎತ್ತಿಕೊ೦ಡು ನಡೆಯುತ್ತಾಳೆ.

    ತು೦ಟಿ, ಸು೦ದರಿ ಎರಡನ್ನು ಮೊಮ್ಮಗಳನ್ನು ಕುರಿತು ಹೇಳಿದ್ದೇನೆ. ಇಷ್ಟೆಲ್ಲ ವಿವರಣೆ ಕೊಡಬೇಕಾಗಿರುವುದರಿ೦ದ ಅರ್ಥಸ್ಫುರಣೆ ಸರಿಯಿಲ್ಲವೆ೦ದು ತಿಳಿಯಿತು, ಗಮನಿಸುತ್ತೇನೆ 🙂

    • ಪದ್ಯಪಾನದ ಹೆಚ್ಚಿನ ರಚನೆಗಳೆಲ್ಲ ಮುಕ್ತಕಗಳೇ. ಯಾವುದೇ ಅಳತೆಯಿಂದಕಂಡರೂ ಮುಕ್ತಕಗಳು ಪೂರ್ವಾಪರವಿವರಣನಿರಪೇಕ್ಷವಾಗಿರಬೇಕಾದುದು ಸಹಜ.
     ಈ ನಿಯಮವು ಸಮಸ್ಯೆ-ದತ್ತಪದಿಗಳಿಗೆ ಮತ್ತೂ ಮಿಗಿಲಾಗಿ ಅನ್ವಯಿಸುತ್ತವೆ. ಹೀಗಾಗಿ ಪದ್ಯವೊಂದರಲ್ಲಿ ಭಾಷಾಕಠಿನತೆ ಎಷ್ಟಿದ್ದರೂ ಪರವಾಗಿಲ್ಲ; ನಿಘಂಟುಗಳಿಂದ ಅರ್ಥ ತಿಳಿದೀತು. ಆದರೆ ಭಾವಕ್ಕೆ ತೊಡಕಿರಬಾರದು. ಇದು ಹದವರಿತ ಬಹ್ವರ್ಥಗ್ರಾಸಿಯೂ ಧ್ವನಿಗರ್ಭಿತವೂ ಆದ ಪದಗಳ ಪ್ರಯೋಗದಿಂದ (ಪ್ರಾಸ-ಛಂದಸ್ಸುಗಳಿಗಾಗಿ ಅನಿವಾರ್ಯವಾಗಿ ಬಳಸಬೇಕಾಗಿ ಬರುವ ಅಧಿಕ/ವ್ಯರ್ಥಶಬ್ದಗಳನ್ನು ಅತ್ಯಂತಮಿತಗೊಳಿಸಿ)
     ಸಾಧಿಸಬೇಕಾದುದು ನಮ್ಮೆಲ್ಲರ ಆದರ್ಶ. ಸಮಸ್ಯೆ-ದತ್ತಪದಿಗಳ ಸುಬೋಧ-ಸುಂದರಪರಿಹಾರದ ಬಳಿಕ ಆ ಪದ್ಯಗಳಲ್ಲಿ ಅಲಂಕಾರ-ಧ್ವನಿಗಳೇ ಮುಂತಾದ ಇನ್ನಿತರ
     ಸ್ವಾರಸ್ಯಗಳ ನಿಬಿಡೀಕರಣವು ಕವಿಯ ಮತ್ತೂ ಮಿಗಿಲಾದ ಶಕ್ತಿಯ ದ್ಯೋತಕ. ಅದು ಸಹೃದಯರಿಗೆ bonus!..ಒಟ್ಟಿನಲ್ಲಿದು ಎಲ್ಲರ ಮನಸ್ಸಿನಲ್ಲಿಅರಬೇಕಾದ ತತ್ವ.

    • ಸೋಮ – ಪದ್ಯ ನನಗೆ ಬಹಳ ಹಿಡಿಸಿತು. ಆದರ ಎರಡನೆಯ ಶ್ಲೇಷಾರ್ಥ ತಿಳಿಯಲಿಲ್ಲ. ನಾನು ಅರ್ಥೈಸಿಕೊಂಡಿದ್ದು ನೀವು ವಿವರಿಸಿದ ಹಾಗೆ (ತಾತ ಅನ್ನುವುದನ್ನು ಆತ ಎಂಬುದನ್ನು ಬಿಟ್ಟರೆ).
     ಮೇಲೆ ಬರೆದಿರುವ ಅನೇಕ ಪದ್ಯಗಳಲ್ಲಿನ ಪ್ರಯೋಗ ನೋಡಿದರೆ, ಸೀರೆಯನ್ನು ಎತ್ತಿ ನಡೆಯುವುದಕ್ಕೆ ಯಾವುದೇ ಅಶ್ಲೀಲತೆಯೂ ಉಳಿದಿಲ್ಲ. 🙂
     ಆದ್ದರಿಂದ, ನಿಮ್ಮ ಮತ್ತು ಗಣೇಶರ ನಡುವಿನ ಈ ಪ್ರಸಂಗ ತಿಳಿಯಾಗಲಿಲ್ಲ.

    • ಗಣೇಶ್ ಸರ್,
     ನೀವು ಹೇಳಿದ ಪ್ರತಿ ಪದವು ಒಪ್ಪುವ ಹಾಗಿದೆ ಗಮನಿಸುತ್ತೇನೆ:)

     ರಾಮ್,
     ಶ್ಲೇಷವೆ೦ದು ನನ್ನ ಪದ್ಯವನ್ನು ನಾನೇ ಮೂದಲಿಸುವ ನಿಟ್ಟಿನಲ್ಲಿ ಬರೆದುಕೊ೦ಡದ್ದಷ್ಟೇ:), ಒ೦ದೆರೆಡು ಬಾರಿ (ಕೊಟ್ಟ ವಿವರಣೆಯನ್ನು ಮರೆತು) ಓದಿ ನೋಡಿ, ಕೆಲವೊ೦ದು ಅಪಾರ್ಥದ ಧ್ವನಿ ಕಾಣಿಸುತ್ತದೆ… ಹಾಗು ಪದ್ಯ ಬೇರೆ ಯಾವುದೊ ಮುಜುಗರವಾದ ಸ೦ಗತಿಯ ದಿಕ್ಕನ್ನು ಹಿಡಿದ೦ತೆ ತೋರುತ್ತದೆ…

     ಒಟ್ಟಿನಲ್ಲಿ ಗಣೇಶರು ಹೇಳಿದ೦ತೆ “ಭಾವಕ್ಕೆ ತೊಡಕಿರಬಾರದು. ಇದು ಹದವರಿತ ಬಹ್ವರ್ಥಗ್ರಾಸಿಯೂ ಧ್ವನಿಗರ್ಭಿತವೂ ಆಗಿರಬೇಕು” ಎನ್ನುವುದನ್ನು ಗಮನಿಸಬೇಕು, ಅ೦ತೆಯೇ ಪದ್ಯವು “ಪೂರ್ವಾಪರವಿವರಣನಿರಪೇಕ್ಷವಾಗಿರಬೇಕು”. ಕಾಲಕ್ರಮೇಣ ಪದ್ಯಗಳು ಸುಧಾರಣೆಯಾಗುತ್ತದೆ 🙂

 19. ಗಣೇಶರೇ, ಈ ಸುಂದರಿ , ಸುಂಟರಗಾಳಿ ತರಬೇಕೆಂದೂ, ಯಾವ ಆಂಗ್ಲ ಪದವನ್ನೂ ತರಬಾರದೆಂದು ಹೇಳಿದ್ದರಿಂದ ಮತ್ತೊಂದು ಪ್ರಯತ್ನ. ನನಗಂತೂ ಈ ಸುಂದರಿಯ ಸಹವಾಸ ಸಾಕಾಗಿದೆ.

  ಕುಂಟುತ ಸಾಗಿದ ಗಾಡಿಯ
  ಸುಂಟರಗಾಳಿಯದು ತಡೆಯಲು, ಕನಲಿಳಿದಳಾ
  ಒಂಟಿ ಯುವತಿ, ಗಂಟ ಹಿಡಿದು
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

  ಹಿಂದಿನ ಪದ್ಯವನ್ನು ಸರಿಮಾಡಿದ್ದೇನೆ.

  ಮೆಂಟಲೆನಲು ಕನಲಿದಳು ಕ-
  ರೆಂಟು ಸಚಿವೆ ಶೋಭೆ, ಗಡಕರಿ ತಿಳಿಸಿದಗ್ರೀ-
  ಮೆಂಟನು ನೆನಪಿಸಲಾಕ್ಷಣ
  ಸೊಂಟದ ಮೇಲ್ ಸೀರೆಯೆತ್ತಿ, ಸುಂದರಿ ನಡೆದಳ್

 20. padyapaani-s may find this online kannada dictionary useful: http://www.archive.org/stream/kannadaenglishsc00buchrich#page/286/mode/2up

 21. ತಟ್ಟನೆ ಪುರುಷನೊರ್ವಂಬಂ
  ದ್ಬಿಟ್ಟನೆನುತ ಸ್ನಾನಗೈಯುತಿರ್ದ ವನಿತೆಯುಂ
  ಪಟ್ಟನೆ ಶುಕನೆಂದರಿಯಲ್
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

  • ಶ್ರೀಪಾದರಿಗೆ ಪದ್ಯಪಾನಕ್ಕೆ ಸ್ವಾಗತ.
   ನಿಮ್ಮ ಪದ್ಯದಲ್ಲಿ ಕೆಲವೊಂದು ಛಂದಸ್ಸಿನ ದೋಷಗಳಿವೆ. ತೋರಿದರೆ ಬೇಸರಿಸಲಾರಿರೆಂಬ ನಂಬುಗೆಯಿಂದ ನಿವೇದಿಸುತ್ತಿದ್ದೇನೆ ::
   ೧. ಮಾತ್ರೆಗಳು ಗಣಗಳಿಗೆ ಸರಿಯಾಗಿ ಒಡೆದುಕೊಂಡಿಲ್ಲ :: “ಪುರುಷನೊರ್” – ಇಲ್ಲಿ ಗಣಕ್ಕೆ ೫ ಮಾತ್ರೆಯಾಗಿದೆ; ಹಾಗೇ “ನುತ ಸ್ನಾ” – ಇಲ್ಲೂ ೫ ಮಾತ್ರೆಯಾಗಿದೆ
   ೨. ಪ್ರಾಸಗಳು ಒಂದೇ ತರಹದ್ದಾಗಿರಬೇಕು. “ಸೊಂಟ” ಕ್ಕೆ, ಬಂಟ, ಕುಂಟೆ, ತುಂಟ, ಒಂಟೆ, ಇವೆಲ್ಲಾ ಪ್ರಾಸಕ್ಕೆ ಹೊಂದುತ್ತದೆ. ಪ್ರಾಸದ ವಿಚಾರಗಳು ಪದ್ಯಪಾನದಲ್ಲಿ ಈ ಕೆಳಗಿನ ಪಾಠಗಳಲ್ಲಿವೆ ::
   ಪ್ರಾಸ ವಿಚಾರ :: http://padyapaana.com/?page_id=635
   ಆದಿಪ್ರಾಸ :: http://padyapaana.com/?page_id=637

   ಇವನ್ನು ಸರಿಪಡಿಸಿಕೊಂಡು, ಇನ್ನೂ ಬಹಳಷ್ಟು ಪದ್ಯಗಳನ್ನು ನಮ್ಮೊಡನೆ ಹಂಚಿಕೊಳ್ಳುತ್ತೀರೆಂದು ಆಶಿಸುತ್ತೇನೆ.

   • ಧನ್ಯವಾದಗಳು ರಾಮಚಂದ್ರರೆ!, ನನ್ನ ವ್ಯಾಸಂಗ ವೆನೇನೂ ಸಾಲದು, ಜೊತೆಗೆ ಆತುರ!
    ತಿದ್ದಿಕೊಳ್ಳುತ್ತೇನೆ.

 22. ಎಲ್ಲರ ಪೂರಣಗಳಿಂದ ಸ್ಫೂರ್ತಿಗೊಂಡು ಒಂದು(ಎಡವಿದರೂ ಪರವಾಗಿಲ್ಲ ಎಂದು) ಪ್ರಯತ್ನ.

  ಗಂಟೆಯ ಮುಳ್ಳದು ತೋರಲ
  ದೆಂಟುಂ ಮಿಂಚಿನ ತೆರದಲಿ ಬಂದಳೆ ಮೇಡ್ಸ
  ರ್ವೆಂಟೂ ಪಾತ್ರೆಯ ಕಂಡಳ್
  ಸೊಂಟದ ಮೇಲ್ ಸೀರೆಯನೆತ್ತಿ ಸುಂದರಿ ನಡೆದಳ್

  • ಶಾಂತ ಅವರೆ – ಒಳ್ಳೆಯ ಪದ್ಯ. ಎರಡನೆ ಸಾಲಿನಲ್ಲಿ ಒಂದು ದೋಷವಿದೆ. ಅಲ್ಲಿನ ಮಧ್ಯದ ಗಣ ಜಗಣವಾಗಬೇಕು (ಅಂದರೆ ಲಘು-ಗುರು-ಲಘು). ಇದು ಸರ್ವಲಘುವೂ‌ಆಗಬಹುದು. ಆದರೆ ಹಾಗಾದರೆ, ಮೊದಲ ಮಾತ್ರೆಯ ನಂತರ ಯತಿ (pause) ಬರಬೇಕು.
   ಒಟ್ಟಿನಲ್ಲಿ “ತೆರದಲಿ” ಎಂಬುದನ್ನು ಸವರಣೆ ಮಾಡಿದರೆ ಪದ್ಯ ಇನ್ನೂ ಉತ್ತಮವಾದೀತು.

 23. ಕಂಟಕ ಅಸುರರ ದಮನಿಸಿ
  ಕುಂಟರ ಮಾದರಿಯ ಮಕ್ಕಳನು ಪೊರೆಯುತ್ತಾ
  ತುಂಟನಗೆಯ ಬೀರುತ್ತಾ
  ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

  ಜಗನ್ಮಾತೆ ತ್ರಿಪುರಸುಂದರಿ ಸಾಮಾನ್ಯ ಸ್ತ್ರೀ ರೂಪದಿ ಬಂದು ನಮ್ಮನ್ನು ಪೊರೆಯುವಂತೆ ಕಲ್ಪಿಸಿಕೊಂಡು ಬರೆದಿದ್ದೇನೆ. 🙂

 24. ರಾಮಚಂದ್ರರವರೇ, ಪಾಮರಿಯ ಪದ್ಯ ಓದಿ ತಪ್ಪು ತೋರಿದ್ದಕ್ಕೆ ಧನ್ಯವಾದಗಳು. ತಿದ್ದಿ ಬರೆಯುವ ಪ್ರಯತ್ನ ಮಾಡಿದ್ದೇನೆ. “ಮಿಂಚಿನ ತೆರದಲಿ” ಸವರಿಸಲು ತಿಳಿಯಲಿಲ್ಲ. ಹಾಗಾಗಿ ಪದ್ಯದಭಾವವನ್ನೇ ಸ್ವಲ್ಪ ಬದಲಾಯಿಸಿ, ಅಂದರೆ ಮನೆಯೊಡತಿಯೇ ಕೆಲಿಗಿತ್ತಿಯಾಗ ಬೇಕಾದ ಅನಿವಾರ್ಯತೆ ಎಂಬಂತೆ ಬರೆದಿದ್ದೇನೆ.

  ಗಂಟೆಯ ಮುಳ್ಳದು ತೋರಲ
  ದೆಂಟುಂ ಬಾರದಿರಲಿನ್ನು ಜಂಭದ ಮೇಡ್ಸ
  ರ್ವೆಂಟೂ ಪಾತ್ರೆಯ ಕಂಡಳ್
  ಸೊಂಟದ ಮೇಲ್ ಸೀರೆಯನೆತ್ತಿ ಸುಂದರಿ ನಡೆದಳ್

  • ಪದ ಬಂಧವೀಗ ಸರಿಯಾಗಿದೆ. ಪ್ರಾಸ ಅಥವಾ ಛಂದಸ್ಸಿಗಾಗಿ ಪದ್ಯದ ಭಾವವೇ ಬೇರೆಡೆ ತಿರುಗುವುದೇನೂ ವಿರಳವಲ್ಲ 🙂

 25. ಕ೦ದ ಬರೆಯುವಲ್ಲಿ ಕ೦ದನೇ ಸರಿ.ನುಡಿಯಲ್ಲಿ ಬಿಗಿತವಿಲ್ಲ,ನಡೆ ಸರಿಯಿದೆಯೇ ತಿಳಿಸಿ .

  ಶು೦ಠಿಯನಗೆಯಲು ಕೊಳೆ ಕೆಸ
  ರ೦ಟಿದರೆ ಕಷ್ಟವೆನುತ್ತ ಯೋಚಿಸಿ ಮನದೊಳ್
  ಕು೦ಟುವ ಹೆಜ್ಜೆಯನಿಕ್ಕುತ
  ಸೊ೦ಟದ ಮೇಲ್ ಸೀರೆಯೆತ್ತಿ ಸು೦ದರಿ ನಡೆದಳ್

  • ರಘುರವರೆ,
   ಚೆನ್ನಾದ ಪದ್ಯ. ಒಂದೆರಡು ವಿಷಯಗಳು ::
   ಎರಡನೆಯ ಸಾಲಿನ, ಎರಡನೆಯ ಗಣ “ರೆ ಕಷ್ಟ” ಜಗಣವಾಗಿದೆ (ಲಘು-ಗುರು-ಲಘು). ಹಾಗಾಗುವಂತಿಲ್ಲ. ಮೊದಲ ಸಾಲಿನಲ್ಲಿ ಆದಿಪ್ರಾಸಕ್ಕೆ ‘ಠ’ ಕಾರದ ಬದಲು ‘ಟ’ ಕಾರವೇ ಬಂದರೆ ಇನ್ನೂ ಚೆನ್ನಾಗಬಹುದು (ಮೇಲಿನ ಪದ್ಯವೊಂದರಲ್ಲಿ ಕಂಠ ಎಂಬ ಉಪಯೋಗಕ್ಕೆ ಗಣೇಶರ ಸಲಹೆಯ ಮೇರೆಗೆ ಇದನ್ನು ಪ್ರಸ್ತಾಪಿಸಿದ್ದೇನೆ )

 26. ಧನ್ಯವಾದಗಳು ರಾಮಚಂದ್ರರೆ. ಈಗ ಸರಿಯಾಯಿತೇನೋ?
  ೧.
  ತು೦ಟ ಸುತನ ವಸನಕೆ ಕೆಸ
  ರ೦ಟಿದ ಸೊಬಗೇನೆನುತ್ತಲೇ ನಸುನಗುತಾ
  ಕು೦ಟುವ ಹೆಜ್ಜೆಯನಿಕ್ಕುತ
  ಸೊ೦ಟದ ಮೇಲ್ ಸೀರೆಯೆತ್ತಿ ಸು೦ದರಿ ನಡೆದಳ್

  ೨. ಗುಜರಾತಿನಲ್ಲಿ ಒಂಟೆಯ ಹಾಲಿನ ಡೈರಿಗಳು ಶುರುವಾಗಿವೆಯೆಂಬ ಸುದ್ದಿ ಓದಿದ್ದೆ.ಹಾಗೆ,

  ಒಂಟೆಯ ಹಾಲನು ಗುರ್ಜರ
  ನೆಂಟರು ಕುಡಿವರು ನಗುತ್ತಲೆನುತಲಿ ಭರದಿ೦
  ಸುಂಟರಗಾಳಿಯ ತೆರದಿಂ
  ಸೊ೦ಟದ ಮೇಲ್ ಸೀರೆಯೆತ್ತಿ ಸು೦ದರಿ ನಡೆದಳ್

 27. Dear All,

  In some of the samasya pooranas, I don’t find any speacial meaning to the given “samasye”. There are some very good pooranas which gave extra-ordinary meanings to the given words where as in some other solutions the relevance of “sontada mel seere etthi” is not clear. In some the act even looks odd!!!

  I am not a poet. Just a sahrudaya reader. Please excuse me if this observation is wrong.

  • Dear Korikkar,
   Warm Welcome to padyapaana. As you pointed out samasyaapUranaa’s beauty lies in giving extra-ordinary turn to it. SamasyaapUrana is like a filter which cleans the water, adds flavor and takes it to the quality of theertham. But at the same time, many of us here were writing kaMda padyaas first time. Practicing writing in meters is also one of the important goals of this platform. Please continue to share your thoughts and more over, please write solutions that is in your mind. Don’t limit yourself to sahrudaya reader. We all here were like this and now we are enjoying the process of writing poems. I just quote one padya from Ganesh, which worked as a heater in the winter of hesitation in our hearts:

   ಉಳಿದೆಲ್ಲ ವಾಚಕರೆ! ಕವಿತಾಪ್ರರೋಚಕರೆ!
   ಹಳಿಗೆ ಬನ್ನಿರಿ ನೀವು ಕೂಡ ಬೇಗ!
   ಗಳಿಗೆ ಬಾರದು ಮತ್ತೆ, ಕಾವ್ಯಕನ್ಯಕೆ ನಿಮಗೆ
   ತಳಿಗೆ ಹಿಡಿದಾಗಮಿಸುತಿರುವಳೀಗ!!

   ಸಂಕೋಚವನ್ನುಳಿದು ಸುಮ್ಮಾನದಿಂ ಬನ್ನಿ
   ಶಂಕೆ ಬೆಂಕಿಯ ಹಾಗೆ ಕಾಡದಿರಲಿ
   ಸಂಕಲ್ಪಿಸಿರಿ ಸೊಗಸುಗವಿತೆಯನ್ನೊರೆಯಲ್ಕೆ
   ಸಂಕ ಮುರಿದಲ್ಲಿಯೇ ಸ್ನಾನವಲ್ತೆ!!

   • Dear Shri. Raveendra,

    I am glad the comments are taken in the same spirit in which it was meant. I completely understand this is a platform for learning while enjoying the creativity of fellow learners.

    As suggested by you, I will try composing the poems and sharing it here. But I should confess my lack of knowledge of the “chandassu” and “matra”. Hope someday I will be able to post something..

 28. neMTaLa maduvege poraTire |
  kaMTakadaMte maLesuridu kuMTeyu tuMbal |
  dAMTe neneyadiralene |
  soNTadamEl sireyetti suMdari nadedaL ||

  (kannaDa software kelasa mADtilla. adakke roman script-nalli type mADtiddIni. kShamisi

 29. innondu parihAra.
  A wife is going to give food to her husband who is ploughing the field.

  raNTepoDeyutire pati kesa- |
  raNTItendanji, iDuta meTTingAlaM |
  gaNTikki, sutti seragaM |
  soNTadamEl, sIreyetti sundari naDedaL ||

 30. ಶ್ರೀಕಾಂತ್, ಕ್ರೋಮ್ ವೆಬ್ ಸ್ಟೋರ್ ನಲ್ಲಿರುವ Kditor app ಬಳಸು. ಸುಲಭವಾಗಿ, ಇನ್ನಾವುದೇ ಇನ್ಪುಟ್ ಮೆಥಡ್ಸ್ ಇಲ್ಲದೇ ಕನ್ನಡದಲ್ಲಿ ಬರೆಯಬಹುದು.

 31. ನಂದಿ, ನಿನ್ನ ಸಲಹೆಯ ಮೇರೆಗೆ ಮಾಡಿದ್ದೀನಿ. ಒಳ್ಳೆಯ ಪರಿಹಾರ ಕೊಟ್ಟೆ 🙂

  ರಂಟೆಪೊಡೆಯುತಿರೆ ಪತಿ, ಕೆಸ-
  ರಂಟೀತೆಂದಂಜಿ, ಯಿಡುತ ಮೆಟ್ಟಿಂಗಾಲಂ, |
  ಗಂಟಿಕ್ಕಿ, ಸುತ್ತಿ ಸೆರಗಂ
  ಸೊಂಟದಮೇಲ್, ಸೀರೆಯೆತ್ತಿ ಸುಂದರಿ ನಡೆದಳ್ ||

  ರೈತ ಗಂಡ ನೇಗಿಲನ್ನು ಹೂಡಿರೆ, ಹೆಂಡತಿ ಊಟ ತಂದು ಕೊಡಲು ಬರುತ್ತಿದ್ದಾಳೆ. ಆಗ,ಗದ್ದೆಯ ಕೆಸರಂಟೀತೆಂದು ಅವಳು ಜೋಕೆ ವಹಿಸುವುದರ ವರ್ಣನೆ.

  • ಪ್ರಿಯ ಶ್ರೀಕಾಂತರಿಗೆ ಧನ್ಯವಾದಗಳು. ಒಳ್ಳೆಯ ಲಕ್ಷಣಶುದ್ಧವೂ ವಿನ್ನೂತನವೂ ಆದ ಲೋಕಾನುಭವಭಾಸುರಪರಿಹಾರವನ್ನು ನೀಡಿದ್ದೀರಿ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)