Mar 252012
 

ape, lemur, monkey, gibbon” – ಈ ಪದಗಳನ್ನುಪಯೋಗಿಸಿ ನಿಮಗಿಷ್ಟವಾದ ಛಂದಸ್ಸಿನಲ್ಲಿ ಹನುಮಂತನ ಸಮುದ್ರ ಲಂಘನದ ಬಗ್ಗೆ ಪದ್ಯ ರಚಿಸಿರಿ

  31 Responses to “ಪದ್ಯಸಪ್ತಾಹ – ೧೩ – ದತ್ತಪದಿ”

  1. ಸೀತೆಯೇ ಪುರನಾರಿಯರಸುತ
    ಕಾತರದಲೀ ಮರುಗಿ ಬಳಲುತ
    ಆ ತುದಿಯ ದಕ್ಷಿಣದಿ ನಿಂತರು ಜಾಂಬವಾದಿಗಳು |
    ಸೋತ ಮಂಕಿನೊಳಿದ್ದ ಹನುಮಗೆ
    ತಾತ ಜಾಂಬವ ಕಿರಿಮೆ ತೊಳೆಯಲು
    ಶಕ್ತಿ ತುಂಬಿತು ಸೂರ್ಯಗಿಬ್ಬನಿ ದೂರವಾದಂತೆ ||

    ಅಡಿಟಿಪ್ಪಣಿ:
    ಪುರನಾರಿಯಾದ ಸೀತೆಯನ್ನು ಹುಡುಕುತ್ತಾ, ಸಮುದ್ರದಾಚೆಯ ಲಂಕೆಗೆ ಹಾರಲು ಮುದಿಜಾಂಬವನು ಹನುಮನಿಗೆ ಹುರಿದುಂಬಿಸಲು – ಸೂರ್ಯನ ಬಿಸಿಲಿಗೆ ಇಬ್ಬನಿ ದೂರವಾದಂತೆ – ಅವನ ಶಕ್ತಿಯ ಬಗ್ಗೆ ಕೀಳರಿಮೆಯು ದೂರವಾಯಿತು. 🙂
    ಕಿರಿಮೆ=ಕೀಳರಿಮೆ

    • ಒಪ್ಪಣ್ಣನವರೇ! ನಿಮ್ಮ ದತ್ತಪದಿಯ ಯತ್ನ ಸುತರಾಂ ಸ್ತುತ್ಯ. ಛಂದಸ್ಸು-ಭಾಷೆಗಳಲ್ಲಿ ಕೂಡ ಶುದ್ಧಿಯಿದೆ. ಆದರೆ ಈ ಪದ್ಯದ ಮೊದಲ ಸಾಲಿನಲ್ಲಿ ಸ್ವಲ್ಪ ಅರ್ಥಕ್ಲೇಶವಿದೆ. ಅದನ್ನು ವಿವರಣೆ ನೀಗತ್ತದೆ ನಿಜ. ಆದರೆ ಇಂಥ ವಿವರಣೆಗಳನ್ನು ಮೀರಿ ಪದ್ಯವು ಬಾಳಬೇಕಲ್ಲವೆ:-)

  2. ಪಿತನಸೆರಗನೆಪಿಡಿದು ನೆಗೆಯಲಾಗಲೆಹನುಮ
    ನತಿರಭಸದಿಂ ಗಿರಿಯತಲೆಮುರಿಯಲು
    ಗತಿಯೊಳಿರೆ ಮೈನಾಕನಿತ್ತಹೆಗಲನಮುಂಕಿ
    ಖತಿಯನೀಗುವನಾಗಿ ಬಂದಿಳಿದನು

    • ದತ್ತಪದಗಳೆಲ್ಲ ಅವುಗಳ ಯಥಾವತ್ತಾದ ರೂಪದೊಡನೆ ಬಂದಂತೆ ತೋರುತ್ತಿಲ್ಲ. ದಯಮಾಡಿ ಪರಿಶೀಲಿಸಿರಿ.
      ಮತ್ತೊಂದು ಸಾಮಾನ್ಯಸೂಚನೆಯೆಂದರೆ ನಮಗೇ ಛಂದಸ್ಸಿನ ಆಯ್ಕೆಯಿದ್ದಾಗ ದತ್ತಪದಗಳ ನಿಕ್ಷೇಪಕ್ಕೆ ಅನುಕೂಲವಾದ, ವಿಷಯವನ್ನು ವಿಸ್ತರಿಸಲು ಅನುವಾಗುವಂಥ ಛಂದಸ್ಸನ್ನು ಆರಿಸಿಕೊಳ್ಳುವಾಗ ವಸ್ತುಮಾಹಾತ್ಮ್ಯಕ್ಕೆ ತಕ್ಕಂಥ ಸೌಂದರ್ಯವಿರುವ ಲಲಿತ/ಗಂಭೀರಗತಿಯ ಛಂದಸ್ಸನ್ನು ಆರಿಸಿಕೊಳ್ಳುವುದು ಒಳ್ಳೆಯ ಕವಿಯ ಆದರ್ಶ. ಅಲ್ಲದೆ ಪದ್ಯದ ಭಾಷೆ-ಶೈಲಿಳನ್ನೂ ಈ ನಿಟ್ಟಿನಲ್ಲಿ ರೂಪಿಸಿಕೊಳ್ಳುವುದು ಒಳಿತು. ಪ್ರಸ್ತುತ ನಿಮ್ಮ ಪದ್ಯದ ಪಂಚಮಾತ್ರಾಗತಿಯ ಛಂದಸ್ಸು ಉಚಿತವಾದ ಆಯ್ಕೆಯಾಗಿದ್ದರೂ ಇಲ್ಲಿ ತಾವು ಆದರಿಸಿರುವ ಲಘುಬಹುಲವಾದ ಕೋಮಲಪದಪದ್ಧತಿಯು ಹನುಮಂತನ ಸಮುದ್ರಲಂಘನದಂಥ
      ಪ್ರೌಢಾದ್ಭುತಗಂಭೀರವಸ್ತುವಿಗೆ ಅಷ್ಟಾಗಿ ಒಗ್ಗದ ಶೈಲಿ. ಇದೆಲ್ಲವೂ ಕ್ರಮೇಣ ಎಲ್ಲರೂ ಗಮನಿಸಿಕೊಳ್ಳಬೇಕಾದ ಸಂಗತಿಗಳು. ನನ್ನ ಈ ಅಧಿಕಪ್ರಸಂಗಕ್ಕೆ ಕ್ಷಮೆಯಿರಲಿ:-)

      • ನಿಮ್ಮೀ ಅಧಿಕಪ್ರಸಂಗ ಸರ್ವಥಾ ಅಪೇಕ್ಷಣೀಯ – ನಾವು ಕಲಿಯುವುದಾದರೂ ಹೇಗೆ?!

        ನೀವಿತ್ತ ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ಪದ್ಯವನ್ನು ತಿದ್ದಲು ಯತ್ನಿಸುತ್ತೇನೆ. (ಇಂಗ್ಲೆಂಡಿನ ಕೆಲಭಾಗಗಳಲ್ಲಿ monkeyಯನ್ನು ಮುಂಕಿ ಎಂಬಂತೆಯೇ ಉಚ್ಚರಿಸುವುದನ್ನು ಕೇಳಿದ್ದೇನೆ)

  3. ಜಲರಾಶಿಯವನೇ ಪರೀಕ್ಷಿಸಲು ಹೇಳಿದನು
    ಸುಲಭವಲೆ ಮೂರ್ಜಗದೊಡೆಯನ ಸೇವೆ
    ಕುಲಕೆ ಹನುಮನ್ ಕೀರ್ತಿಯ ತರಲಿಕೆ ಹಾರಿದನು
    ಸಲಿಲವದು ಹೊಳೆಯಲಾಗಿಬ್ಬನಿಯವೊಲ್

    ೨ನೇ ಸಾಲಿನಲ್ಲಿ ಮೂರ್ಜಗ – ಇದು ‘mUrjaga’ ಎಂದೇ ಆಗಬೇಕು. ಬರಹ ದೈರೆಕ್ಟ್ ನಲ್ಲಿ ‘ mArjaga’ ಎಂದು ಟೈಪಾಗುತ್ತದೆ.

    .

    • ಪದ್ಯದ ಭಾವ, ಪದಪದ್ಧತಿ, ಅರ್ಥಸ್ಪಷ್ಟತೆ ಎಲ್ಲ ಚೆನ್ನಾಗಿದೆ. ಒಂದೆರಡು ಸವರಣೆಗಳು:
      ಮೂರ್+ಜಗ=ಮೂಜಗ ಎಂದಲ್ಲದೆ ಮೂಜಗ ಎಂದಾಗದು. “ಮೂರು ಜಗ” ಎಂದು ಬದಲಿಸಬಹುದು. ಸುಲಭವಲ ಎನ್ನುವ ರೂಪ ಮತ್ತೂ ಸೊಗಸು. ಹನುಮಂ ಎಂಬ್ ಪದಪ್ರಯೋಗ ಮತ್ತೂ ಸಾಧು ಹಾಗೂ ದತ್ತಪದಿಗೆ ಇನ್ನೂ ಚೆನ್ನಾಗಿ ಹೊಂದುತ್ತದೆ.
      ಕೀರ್ತಿ ತರಲೆಂದು ಎಂದು ಸವರಿಸಿದರೆ ಛಂದೋಗತಿಯು ಹಿತವಾಗುತ್ತದೆ. ಚಿಕ್ಕದಾದ ಚೌಪದಿಯಲ್ಲಿ ಈ ದತ್ತಪದಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನಿಮಗೆ ಎಲ್ಲರ ಮೆಚ್ಚುಗೆ ಸಲ್ಲುತ್ತದೆ.

      • ಧನ್ಯವಾದಗಳು.

        lemur – ಲೆಮೂರ್ ಎಂದು ಓದಿಕೊಳ್ಳುತ್ತೇವೆಯಾದ್ದರಿಂದ ಸುಲಭವಲ ಎನ್ನುವುದು ಸರಿಹೋಗುತ್ತದೆಯೇ?

        ಹಾಗೆಯೇ ಹನುಮಂ ಕೂಡ. monkey ಯಲ್ಲಿ ‘ನ್’ ಎನ್ನುವುದೇ ಉಚ್ಛಾರವಲ್ಲವೇ?

        ತಿದ್ದಿದ ೪ನೇ ಸಾಲನ್ನು ನೀವು ಗಮನಿಸಲಿಲ್ಲವೆಂದು ತೋರುತ್ತದೆ. ಇದರಲ್ಲಿನ ಭಾವ ಇನ್ನೂ ಚೆನ್ನಾಗಿದೆಯೆಂದು ನನಗನಿಸಿತು.

        ಸಲಿಲವದು ತೋರಲವಗಿಬ್ಬನಿಯವೊಲ್

        ಹನುಮಂತನು ಉತ್ಸಾಹದಿಂದ ಸಮುದ್ರದ ಮೇಲೆ ಹಾರುತ್ತಿರಲು, ಅದು ಅವನಿಗೆ ಮಂಜಿನ ಹನಿಯಂತೆ ತೋರಿತು. ಅಂದರೆ ತಾನು ಬಹಳ ದೊಡ್ಡ ಕೆಲಸವೇನೂ ಮಾಡುತ್ತಿಲ್ಲ ಎಂಬ ಭಾವನೆ ಅವನಲ್ಲಿತ್ತು. ಇದೇ ಭಾವನೆ ೨ನೇ ಸಾಲಿನಲ್ಲೂ ವ್ಯಕ್ತವಾಗಿದೆ.

        ಜಲರಾಶಿಯವನೇ ಪರೀಕ್ಷಿಸಲು ಹೇಳಿದನು
        ಸುಲಭವಲೆ ಮೂಜಗದೊಡೆಯನ ಸೇವೆ
        ಕುಲಕೆ ಹನುಮಂ ಕೀರ್ತಿ ತರಲೆಂದು ಹಾರಿದನು
        ಸಲಿಲವದು ತೋರಲವಗಿಬ್ಬನಿಯವೊಲ್

        • ೨ ನೇ ಸಾಲಿನಲ್ಲಿ ಮತ್ತೊಂದು ಬದಲಾವಣೆ. ಮೂ ಜಗದೊಡೆಯನ – ಮೂರು ಜಗಪತಿಯ ಯೆಂದಾಗಬೇಕು.

          ಜಲರಾಶಿಯವನೇ ಪರೀಕ್ಷಿಸಲು ಹೇಳಿದನು
          ಸುಲಭವಲೆ ಮೂರು ಜಗಪತಿಯ ಸೇವೆ
          ಕುಲಕೆ ಹನುಮಂ ಕೀರ್ತಿ ತರಲೆಂದು ಹಾರಿದನು
          ಸಲಿಲವದು ತೋರಲವಗಿಬ್ಬನಿಯವೊಲ್

          • ಚೆನ್ನಾಗಿದೆ, ಗಾಯತ್ರಿ.

          • jagapati is a grammatical error..
            You can say:
            mUru jagadoDeyanolme…
            I did noticed the fourth line first it self and that is why i said the verse is real a poem:-)

  4. ಉತ್ತರಕನ್ನಡದಲ್ಲಿ ಮಂಕಿ ಎಂಬುದೊಂದು ಊರು, ಅಲ್ಲಿ ಕುಳಿತ ರಾಯನೆಂಬಾತ ಗೇಯ ರಾಮಾಯಣದ ಭಾಗವಾಗಿ ಹನುಮನ ಸಾಗರೋಲ್ಲಂಘನವನು ಬರೆಯುವಾಗ, ಮಾರುತಿಯ ಕಾಯ ಬೆಳೆದ ರೀತಿಯನ್ನೀಕ್ಷಿಸಿದ ಮೂರ್ಜಗ ಅಂಜುತಿದ್ದರೆ, ಬಿರುಬೇಸಿಗೆಯಲ್ಲೂ ಇಬ್ಬನಿಬಿದ್ದ ಅನುಭವ ಕವಿಮನಕ್ಕಾಯ್ತು ಎಂಬುದು ಈ ಭಾಮಿನಿ ರೂಪ :

    ವಾಯುಸುತನಾಪೇಕ್ಷೆಯಿಂದಲಿ
    ಕಾಯಬೆಳೆಯುತಲಲ್ಲೆಮೂರ್ಜಗ-
    ಕಾಯ್ತಲಂಜಿಕೆ ಲಂಘನಕೆ ಅಣಿಯಾಗುತಿದ್ದನವ |
    ರಾಯ ಬರೆದನು ಮಂಕಿಯೂರಲಿ
    ಗೇಯ ರಾಮಾಯಣದ ಪಾಠವ
    ಮಾಯಕದಗಿಬ್ಬನಿಯು ಬಿದ್ದುದು ಬಿಸಿಲಗೆದ್ದನವ ||

    • ಭಟ್ಟರೇ! ನಿಮ್ಮ ಮಂಕಿ ಪದಪ್ರಯೋಗದ ಜಾಣ್ಮೆ ಮೆಚ್ಚುವಂತಿದೆ. ಆದರೆ ಉಳಿದಂತೆ ಅನೇಕತ್ರ ವ್ಯಾಕರಣ ಜಾರಿದೆ. ದಯಮಾಡಿ ಸವರಿಸಿಕೊಳ್ಳಿರಿ.

      • ವಾಯುಸುತ ಸಾಪೇಕ್ಷತೆಯಲಿಂ
        ಕಾಯಬೆಳೆಯುತ ಅಲ್ಲೆ ಮೂರ್ಜಗ-
        ಕಾಯ್ತು ಅಂಜಿಕೆ ಲಂಘನಕೆ ಅಣಿಯಾಗುತಿದ್ದನವ |
        ರಾಯ ಬರೆದನು ಮಂಕಿ ಊರಲಿ
        ಗೇಯ ರಾಮಾಯಣದ ಪಾಠವ
        ಮಾಯೆ ಕರಗಿಬ್ಬನಿಯು ಬಿದ್ದುದು ಬಿಸಿಲಗೆದ್ದನವ ||

        • am sorry to sorry that again there are few visandhi errors…but the idea is good

          • ಆದಷ್ಟೂ ಪ್ರಯತ್ನಿಸಿದೆ, ಕೊನೆಯದಾಗಿ ದಕ್ಕಿದ್ದು ಇಷ್ಟು:[ ಎಲ್ಲಿ ಮತ್ತೆ ದೋಷಗಳಿವೆ ಎಂದು ತಿಳಿಸಿದರೆ ತಿದ್ದಿಕೊಳ್ಳಲು ಅನುಕೂಲ.]

            ವಾಯುಸುತ ಸಾಪೇಕ್ಷತೆಯೊಳು
            ಕಾಯಬೆಳೆಯುತ ಅಲ್ಲೆ ಮೂರ್ಜಗ-
            ಕಾಯ್ತು ಅಂಜಿಕೆ ಲಂಘನಕೆ ಅಣಿಯಾಗುತಿದ್ದನವ |
            ರಾಯ ಬರೆದನು ಮಂಕಿ ಪುರದಲಿ
            ಗೇಯ ರಾಮಾಯಣದ ಪಾಠವ
            ಮಾಯೆ ಕರಗಿಬ್ಬನಿಯು ಬಿದ್ದುದು ಬಿಸಿಲಗೆದ್ದನವ ||

  5. ೪ನೇ ಸಾಲನ್ನು ಸ್ವಲ್ಪ ತಿದ್ದಿದ್ದೇನೆ.

    ಜಲರಾಶಿಯವನೇ ಪರೀಕ್ಷಿಸಲು ಹೇಳಿದನು
    ಸುಲಭವಲೆ ಮೂರ್ಜಗದೊಡೆಯನ ಸೇವೆ
    ಕುಲಕೆ ಹನುಮನ್ ಕೀರ್ತಿಯ ತರಲಿಕೆ ಹಾರಿದನು
    ಸಲಿಲವದು ತೋರಲವಗಿಬ್ಬನಿಯವೊಲ್

    ಹನುಮಂತನು ಉತ್ಸಾಹದಿಂದ ಸಮುದ್ರದ ಮೇಲೆ ಹಾರುತ್ತಿರಲು, ಅದು ಅವನಿಗೆ ಮಂಜಿನ ಹನಿಯಂತೆ ತೋರಿತು. ಅಂದರೆ ತಾನು ಬಹಳ ದೊಡ್ಡ ಕೆಲಸವೇನೂ ಮಾಡುತ್ತಿಲ್ಲ ಎಂಬ ಭಾವನೆ ಅವನಲ್ಲಿತ್ತು. ಇದೇ ಭಾವನೆ ೨ನೇ ಸಾಲಿನಲ್ಲೂ ವ್ಯಕ್ತವಾಗಿದೆ.

    ೨ನೇ ಸಾಲಿನಲ್ಲಿ ಮೂರ್ಜಗ – ಇದು ‘mUrjaga’ ಎಂದೇ ಆಗಬೇಕು. ಬರಹ ದೈರೆಕ್ಟ್ ನಲ್ಲಿ ‘ mArjaga’ ಎಂದು ಟೈಪಾಗುತ್ತದೆ.

    .

  6. ಹೇಪವನಸುತನೆನಿನಗಿಬ್ಬ೦ಧಿತನ ತರವೆ
    ಭೂಪನೇಳೀಗಲೇಮುರಿದು ಭಯವ
    ಭಾಪೆನುವ ಕಜ್ಜಮ೦ ಕೀಳ್ಮಾಡೆ ಶಕ್ಯನೆನೆ”
    ಗೋಪುರದವೊಲು ಬೆಳೆದು ತಾ೦ ಜಿಗಿದನಯ್

  7. ಮ.ವಿ|
    ಹನುಮಂ ಸಾಗರಲಂಘಿಸಿರ್ದನದರಾ ‘ನೇಪ’ಥ್ಯದೊಳ್ ರಾಮನಿ-
    ರ್ದನದಂ ಸೀತೆಗೆ ಪೇಳ’ಲೇಮರ’ಸಿಯುಂ ತಾನೊಪ್ಪಳಿಂತಿರ್ಕು ಮಾ-
    ನಿನಿಗೆಂದುಂ ಗಡ’ಮಂಕಿ’ತಂ ತಲುಪಿಸಲ್ ಕೊಂಡಿರ್ದನಾ ರಾಮನಿಂ
    ಘನವಾ’ಗಿಬ್ಬನಿ’ ಬೀಳ್ವ ವೇಳೆಯಲಿ ತಾನಾ ಲಂಕೆಯಂ ಪೊಕ್ಕಿದಂ||

    • ಕೊಪ್ಪಲತೋಟರೇ! ನಿಮ್ಮ ಪದ್ಯಪ್ರಯತ್ನ ಸ್ತುತ್ಯವೆಂಬುದು ನಿಸ್ಸಂಶಯ. ಆದರೆ ಕೆಲವೊಂದು ವ್ಯಾಕರಣದ ತೊಡಕುಗಳಿವೆ. ಇವನ್ನು ವಿಸ್ತರಿಸಿ ಹೇಳುವುದಿಲ್ಲಿ ಕಷ್ಟ. ಮತ್ತೇನಿಲ್ಲ, ದೀರ್ಘವಾದೀತು.
      ಎಲ್ಲರಿಗೂ ಅನ್ವಯಿಸಿಹೇಳುವುದಾದರೆ ಪೂರ್ವಕವಿಗಳ ಕಾವ್ಯಗಳನ್ನೋದಿಯೇ ಪದಪ್ರಯೋಗಸೌಷ್ಠವವನ್ನು ಅರಿಯಬೇಕಲ್ಲದೆ ಕೇವಲ ನಿಯಮಗಳ ಶುಷ್ಕಪಠನದಿಂದಲ್ಲ. ಆದರೆ ಪೂರ್ವಕವಿಕಾವ್ಯವ್ಯಾಸಂಗವನ್ನು ಶ್ರದ್ಧೆಯಿಂದ ಮಾಡಲು ಈ ಕಾಲದ ನಮಗೆ ಅದೆಷ್ಟೋ ತೊಡಕುಗಳು:-). ಏನಾದರಾಗಲಿ, ಇದಿಲ್ಲದೆ ಪದ್ಯಭಾಷೆ ಸಿದ್ಧಿಸದು. ಕೇವಲ ಒಂದು ಲೋಪವನ್ನು ಅರುಹುತ್ತೇನೆ; ಗುರುಬಹುಲವಾದ ವೃತ್ತಗಳನ್ನಿರಲಿ ಷಟ್ಪದಿಗಳನ್ನು ನಿರ್ವಹಿಸುವಾಗಲೂ ಯಾವುದೇ ಎಡೆಯಲ್ಲಿ ಗುರುವೊಂಡು ಬೇಕೆಂದರೆ ಕೂಡಲೇ ಅಲ್ಲಿ ಸ್ವರವನ್ನು ಅರ್ಥವಿವಕ್ಷೆಯಿಲ್ಲದೆ ಎಳೆಯುವುದು ನಮಗೆಲ್ಲ ಬಂದಿರುವ ಸುಲಭದ ಪರಿಹಾರಕ್ರಮ:-) (ಉದಾ: ಹನುಮಂತಂ ರಘುರಾಮನಾ ಸತಿಯನಾ ಲಂಕಾಪುರಾಧೀಶನಾ ಘನಘೋರಾಶ್ರಿತೆಯಂ ವಿಲೋಕಿಸಿದನಾ ಉದ್ಯಾನದೊಳ್…….)..ವೃತ್ತಕಂದಗಳನ್ನು ಕೂಡಿದಮಟ್ಟಿಗೂ ಹಳಗನ್ನಡದಲ್ಲಿಯೇ
      ರಚಿಸುವುದೊಳಿತು. ಪೊಕ್ಕಿದಂ ಎನ್ನುವುದು ಪೊಕ್ಕಂ ಎಂದೇ ಆಗಬೇಕು. ಆದರೆ ಹಾಗೆ ತಿದ್ದಿದಾಗ ಛಂದಸ್ಸು ಕೆಡುತ್ತದೆ:-)….ದಯಮಾಡಿ ರನ್ನ-ಜನ್ನರನ್ನು ಓದಿರಿ.
      ನನ್ನೀ ಮಾತುಗಳನ್ನು ಅನ್ಯಥಾ ತಿಳಿಯುವುದಿಲ್ಲ ತಾನೆ?

      • ಧನ್ಯವಾದಗಳು ಸರ್. ಕರೆ ಮಾಡುತ್ತೇನೆ.

  8. ನಮಸ್ಕಾರ .ನನ್ನ ಪ್ರಯತ್ನ ಸರಿಯೇ?

    ಮುಗಿಲ ಚು೦ಬಿಪ ಗಿರಿಯ ಶಿಖರದಿ
    ಮುಗಿದು ಕರಗಳ ಶಿರವ ಬಾಗಿಸೆ
    ಒಗೆದು ತೆರೆಗಳ ಶರಧಿಯೇ ಪುಟವಿಕ್ಕುವುದ ಕ೦ಡೂ
    ಒಗುವ ಭಕುತಿಯ ಸುಧೆಯಲೇ ಮೂ
    ರ್ಜಗದ ಮ೦ಕಿನ ತೆರೆಯ ಸರಿಸುತ
    ನೆಗಪಿಗಿಬ್ಬನಿ ಕರಗೆ ವಾಯುಜ ಜಿಗಿದನಾಗಸಕೆ

  9. ಇನ್ನೊಂದು ಯತ್ನ:
    ಶಂಕೆಯೇ ಪುರುಷೋತ್ತಮನ ನಿಜ
    ಕಿಂಕರನು ತಾನಹುದು ಬಿಡಿ ಆ
    ತ೦ಕ ಮಾತೆಯನರಸಿ ಬರಲೇ ಮೂರು ಜಗದಗಲ
    ಮಂಕಿನಲಿ ಕಪಿನಿಕರ ನೋಡಿರೆ
    ತೆಂಕು ದಿಕ್ಕಿಗೆ ಚಿಮ್ಮಿದನು ಸುಡು
    ಬೆಂಕಿಗಿಬ್ಬನಿ ಕರಗುವೊಲು ಭಯ ಸರಿಸಿ ಮಾರುತಿಯು

    • ಮುಳಿಯ ರಘು ಅವರಿಗೆ ಪದ್ಯಪಾನದ ಗೆಳೆಯರೆಲ್ಲರ ಸ್ವಾಗತ. ನಿಮ್ಮ ಪದ್ಯಗಳೆರಡೂ ಚೆನ್ನಾಗಿವೆ. ಆದರೂ ಎರಡನೆಯ ಪದ್ಯದ ಹದ ಮತ್ತೂ ಚೆನ್ನಾಗಿದೆ. ನೀವು ಈಗಾಗಲೇ ಷಟ್ಪದಿಗಳನ್ನು ಬರೆದು ಪಳಗಿದ ಕಯ್ಯೆಂಬಂತೆ ತೋರುತ್ತಿದೆ. ತುಂಬ ಸಂತೋಷ.

      • ತಮ್ಮ ಪ್ರೀತಿಗೆ ಕೃತಜ್ಞ.
        ಷಟ್ಪದಿಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದೇನೆ,ಆದರೆ ಪಳಗಿಲ್ಲ.ಅದರಾಚೆ ಏನೂ ಗೊತ್ತಿಲ್ಲ,ಆದರೆ ಕಲಿಯಬೇಕೆಂಬಾಸೆ ಇದೆ.ಇಲ್ಲಿ ಖಂಡಿತಾ ಕಲಿಯಲು ಯತ್ನಿಸುವೆ.

    • ಪದ್ಯದ ಪೂರ್ವಾರ್ಧ direct speechನಲ್ಲೂ (“ಅರಸಿ ಬರಲೇ”), ಉತ್ತರಾರ್ಧ indirect speechನಲ್ಲೂ ಇದೆ. ಹಾಗಾಗಿ, ’ತಾನಹುದು’ ಬದಲು ’ತಾನಹೆನು’ ಎಂದರೆ ಸರಿಯಾದೀತು. ಮತ್ತು, ’ಕಪಿನಿಕರ ನೋಡಿರೆ’ ಬದಲು ’ಕಪಿನಿಕರ ನಿರುಕಿಸೆ’ ಎಂದರೆ ಕರ್ಣತಾಡಿತವಾಗಿರುತ್ತದೆ.

  10. ಇಂದ್ರವಂಶ
    ದುಸ್ಸಾಧ್ಯಮೇ ಪಾರಲು ರತ್ನಗರ್ಭವನ್
    ನಿಸ್ಸೀಮನಿಂಗಲ್ಲೆ ಮುರಾರಿಯುಬ್ಬಿಸಲ್
    ಉಸ್ಸೆನ್ನಲೆಲ್ಲರ್ ಪಡೆಯುತ್ತಮಂಕಿತಂ
    ದುಸ್ಸಾಹಸಕ್ಕಂ ಹವಣಾಗಿ ಬಂದನ್

    • ಕೊನೆಯ ಪಾದದಲ್ಲಿ ಮಾತ್ರಾದೋಷ:
      ದುಸ್ಸಾಧ್ಯಮೇ ಪಾರಲು ರತ್ನಗರ್ಭವನ್
      ನಿಸ್ಸೀಮನಿಂಗಲ್ಲೆ ಮುರಾರಿಯುಬ್ಬಿಸಲ್
      ಉಸ್ಸೆನ್ನಲೆಲ್ಲರ್ ಪಡೆಯುತ್ತಮಂಕಿತಂ
      ದುಸ್ಸಾಹಸಕ್ಕಂ ಹವಣಾಗಿ ಬಂದನೈ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)