Mar 252012
 

ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ ::

ಧೂಳ ಹಾರಿಪ

ಚಿತ್ರ – ಅಂತರ್ಜಾಲದ ಕೃಪೆ

  49 Responses to “ಪದ್ಯಸಪ್ತಾಹ – ೧೩ – ಚಿತ್ರಕ್ಕೆ ಪದ್ಯ”

 1. ಗೀಳು ಪುಸ್ತಕಗಳನು ಕೊಂಬುದು
  ವೇಳೆ ಸಾಲದುವೆಲ್ಲವೋದಲು
  ನಾಳೆಯೋದುವೆನೆನುತ ಸಜ್ಜೆಯಮೇಲಕೆತ್ತಿಡುತ |
  ಗಾಳಿಗೆಲ್ಲೆಡೆ ತೂರಿ ಬರುತಿಹ
  ಹಾಳು ಕಲ್ಮಶ-ಕೊಳೆಯು ಕೂರ್ವುದು
  ಧೂಳು ಹಾರಿಪ ಕೆಲಸಮಾಳ್ಪೆನು ಮರಳಿತಟ್ಟಿಡುತ ||

  • ಚೆನ್ನಾದ ಸ್ವಭಾವೋಕ್ತಿಮಯಪದ್ಯ. ಸಾಲದುವೆಲ್ಲವೋದಲು ಎಂಬಲ್ಲಿ ಮಾತ್ರ ಸ್ವಲ್ಪ ಸಂಧಿದೋಷವಾಗಿದೆ.

   • ತಮ್ಮ ’ಸಮಯಮಿತಿ ಪ್ರಯೋಗ’ದಲ್ಲೂ ನನ್ನಂತಹ ಅನೇಕರಿಗೆ ಮನಗೊಟ್ಟು ತಿದ್ದುವ ನಿಮ್ಮನ್ನು ಪ್ರಾತಸ್ಮರಣೀಯರ ಸಾಲಿನಲ್ಲಿ ಪ್ರೀತಿಯಿಂದ ಬಂಧಿಸಿದ್ದೇನೆ. ಹೇಳುತ್ತಲೇ ಇರುವಂತೇ ನನ್ನಲ್ಲಿ ಕೆಲವೊಮ್ಮೆ ಕಾಯಾ, ವಾಚಾ, ಮನಸಾ ಕಾವ್ಯೋತ್ಫತ್ತಿಯ ಬದಲು ಒಂದೊಂದು ಒಂದೊಂದುಕಡೆ ಇರುವಾಗ ಜನಿಸುವ ಕಾವ್ಯಗಳು ಅಂಗವೈಕಲ್ಯತೆಯಿಂದ ಬಳಲುತ್ತವೆ. ಕೃಪಯಾ ಪರಿಶೀಲಿಸುತ್ತಲೇ ನಡೆವುದು, ಧನ್ಯವಾದಗಳು.

    ಗೀಳು ಪುಸ್ತಕಗಳನು ಕೊಂಬುದು
    ವೇಳೆ ಸಾಲದವೆಲ್ಲ ಓದಲು
    ನಾಳೆಯೋದುವೆನೆನುತ ಸಜ್ಜೆಯಮೇಲಕೆತ್ತಿಡುತ |
    ಗಾಳಿಗೆಲ್ಲೆಡೆ ತೂರಿ ಬರುತಿಹ
    ಹಾಳು ಕಲ್ಮಶ-ಕೊಳೆಯು ಕೂರ್ವುದು
    ಧೂಳು ಹಾರಿಪ ಕೆಲಸಮಾಳ್ಪೆನು ಮರಳಿತಟ್ಟಿಡುತ ||

 2. ಎನ್ನ ತಂದೆಯ ಚಿತ್ರದಿದಿರಲಿ
  ಚೆನ್ನವೇ ಮಸಿಯಕ್ಕರದ ಪುಟ
  ಬನ್ನಮಾಗದೆ ಮುಖಕೆ ತಳೆದೊಡೆ ಕರಿಕಳಂಕವದು
  ಮುನ್ನಮೀ ಪಗೆ ಹರಿಸಬೇಕೆಂ
  ದೆನ್ನುತಾಗಳೆ ಪಂಡಿತನ ಮಗ
  ತನ್ನ ನಖದಿಂ ಕೆರೆದು ಬರಹವನೂದಿ ಹಾರಿಸಿದ

  • ಪರಮಸುಂದರಪದ್ಯರಚನಾ-
   ಸ್ಫುರನಶೈಲಿಯನಿದನು ಕಾಣು-
   ತ್ತರುಣಕಿರಣವಿಕಾಸಿಕಮಲದವೊಲ್ ಮಲರ್ದೆನಲಾ!
   ಸರಸಗತಿಯಿನಯತ್ನವೆಂಬಂ-
   ತಿರೆ ಮನೋಜ್ಞಪ್ರಾಸ-ಗಣನಿರ್-
   ಭರತೆ ಸಲೆ ಮೆಚ್ಚುಗೆಯನೊಯ್ಯನೆ ಗೆಲ್ಲುವಂತಿಹುದು!!

   • ಆ ಅರುಣನಾದರೋ ಅರಳುತ್ತಿರುವ ಕಮಲವನ್ನು ನೋಡಲೆಂದೇ ಪ್ರತಿದಿನವೂ ಸೂರ್ಯನಿಗೂ ಮುನ್ನ ಉದಿಸುತ್ತಾನೆ!

    ನಿಮ್ಮೀ ಮೆಚ್ಚುನುಡಿಯೇ ನಮ್ಮ ಕೈಮರ, ದಾರಿದೀವಿಗೆ. ಮಣಿದಪೆಂ.

 3. ಭಾಸನೋ ಮತ್ತೊಬ್ಬನೋ ನೀನರಸುತಿಹನು
  ಮಾಸಿದಾಕ್ಷರಗಳಲಿ ಕವಿಕಾಣ್ವನೇ?
  ಆಸೆ ಘನವಾಗೆ ಹೊಸಕವಿಯವತರಿಸುವನೇ?
  ಮೀಸಲಿಡು ಜೀವನವ ಛಲಸಾದಿಸಲ್

  • ನಿಜವಾಗಿ ತುಂಬ ಒಳ್ಳೆಯ ಕಲ್ಪನೆ!! ನನಗೆ ಬಹುಸಂತೋಷವಾಗಿದೆ. ಇದು ಕವಿತೆಯೆನ್ನಲು ಅರ್ಹವಾಗುವ ಕಲ್ಪನೆ. ಒಂದೆರಡು ಸವರಿಕೆಗಳು:
   “ಮಾಸಿದಕ್ಷರಗಳಲಿ ಕವಿ ಕಾಂಬನೇ?”
   (ಕನ್ನಡ ಮತ್ತು ಸಂಸ್ಕೃತಪದಗಳ ನಡುವೆ ಸವರ್ಣ, ಗುಣ, ಯಣ್ ಇತ್ಯಾದಿ ಸಂಧಿಗಳಾಗುವುದಿಲ್ಲ)
   “……… ಗುರಿ ಸಾಧಿಸೆ” ಎನ್ನುವ ಸವರಣೆ ಮತ್ತೂ ಸೊಗಸಾದೀತು. ಛಲ ಎನ್ನುವುದಕ್ಕೆ ಹಠ, ಮೋಸ ಎಂಬ ಅಹಿತಾರ್ಥಗಳೂ ಇವೆಯಷ್ಟೆ!

   • ಧನ್ಯವಾದಗಳು. ಡ್ರಾಫ್ಟ್ ನಲ್ಲಿ ಮಾಸಿದಕ್ಷರ ವೆಂದೇ ಇತ್ತು. ಟೈಪಿಸುವಾಗ ದೀರ್ಘವಾಗಿದೆ. ತಪ್ಪನ್ನು ತೋರಿಸಿದ್ದಕ್ಕಾಗಿ ವಂದನೆಗಳು. ನೀವು ತಿಳಿಸಿದ ತಿದ್ದುಪಡಿಗಳನ್ನು ಮಾಡಿದ್ದೇನೆ.

    ಭಾಸನೋ ಮತ್ತೊಬ್ಬನೋ ನೀನರಸುತಿಹನು
    ಮಾಸಿದಕ್ಷರಗಳಲಿ ಕವಿಕಾಂಬನೇ?
    ಆಸೆ ಘನವಾಗೆ ಹೊಸಕವಿಯವತರಿಸುವನೇ?
    ಮೀಸಲಿಡು ಜೀವನವ ಗುರಿಸಾಧಿಸೆ

 4. ಕ೦ದಪದ್ಯದಲ್ಲಿ ೨ ಮತ್ತು ೪ನೇ ಸಾಲುಗಳಲ್ಲಿ ೩ನೇ ಗಣಕ್ಕೆ ಜಗಣವನ್ನು ಮಾತ್ರ ಇದುವರೆಗೂ ಬಳೆಸಿದ್ದೆ. ಈಗ ಸರ್ವಲಘು ಬಳೆಸುವ ಪ್ರಯತ್ನ ಮಾಡಿದ್ದೇನೆ. ಇದರಲ್ಲಿ ಸ೦ದೇಹವಿದೆ:

  ತಾಮಸಿಗ ಕತ್ತಲೊಳಗಾ-
  ರಾಮದೆ ಕಳೆದ ಹರೆಯವನು ವಿಲಾಸಿ, ವೃದ್ಧ೦
  ಪಾಮರನರಿವ೦ ಕಾ೦ಬೆನೆ
  ನೇಮದಿ ಪುಸ್ತಕವ ಪಿಡಿಯೆ ಧೂಳೇಗತಿಯಯ್

  ೧ ಕಳೆದ ಹರೆಯವನು
  ೨ ಪುಸ್ತಕವ ಪಿಡಿಯೆ
  ೩ನೇ ಗಣದಲ್ಲಿ ಒ೦ದಕ್ಷರದ ಯತಿಗಾಗಿ, ಮೊದಲನೆಯದರಲ್ಲಿ ಹಿ೦ದಿನಗಣದಿ೦ದ ಒ೦ದಕ್ಷರ ಪಡೆದಿದ್ದೇನೆ. ಎರಡನೆಯದರಲ್ಲಿ ಹಿ೦ದಿನಗಣಕ್ಕೆ ಒ೦ದಕ್ಷರ ಕೊಟ್ಟಿದ್ದೇನೆ. ಇವೆರಡೂ ಸಾಧು ರೂಪಗಳೆ?

  • ಸೋಮ, ನಿಮ್ಮ ಹೊಸ ಹೊಸ ಸಾಹಸಗಳಿಗೆ ನಾನು ಮಿಗಿಲಾಗಿ ಮುದಗೊಳ್ಳುತ್ತೇನೆ.
   ವರ್ಧಸ್ವ ನವಲೇ ಪಥಿ!! ನಿಮ್ಮ ಕಂದದ ಎರಡನೆಯ ಸಾಲಿನಲ್ಲಿ ಯತಿಭಂಗವಾಗಿದೆ. ಆದರೆ ನಾಲ್ಕನೆಯ ಸಾಲಿನಲ್ಲಿ ಯತಿಯು ಸರಿಯಾಗಿ ಪಾಲಿತವಾಗಿದೆ, ಜಗಣವನ್ನು ಆರನೆಯ ಗಣದಲ್ಲಿ ತರದೆ ಪದ್ಯರಚನೆ ಮಾಡಬೇಕೆಂಬ ನಿಮ್ಮ ಅಭಿನವಪ್ರಯತ್ನಶೀಲತೆ ಮತ್ತಷ್ಟು ಸಫಲವಾಗಲಿ:-) ಆದರೆ ಇದಕ್ಕಿಂತ ಕಂದ ಬಂಧದಲ್ಲಿ ಹಳಗನ್ನಡದ ಹದವನ್ನು ಹೆಚ್ಚಾಗಿ ತಂದುಕೊಳ್ಳುವುದು ಗಮನದಲ್ಲಿರಲಿ:-)

 5. पद्यमेकं मदीयम् –
  दिवसनिशीथनिरन्तरपुटघटिते कालपुस्तके पतितान् ।
  फूत्कारेण कृतान्तो निवारयति झटिति पुरुषधूलिकणान् ॥

  • ಪದ್ಯಪಾನವನೇ ನೂನಂ ಸುಹೃನ್ಮಾಕಂದಕಂದಲೇ|
   ಶಂಕರಸ್ಯ ಪ್ರವೇಶೋsಯಂ ಮಾರಮಿತ್ರೋಪಮಾಯತೇ||

   ಆತ್ಮೀಯಪದ್ಯಪಾನಿಗಳೇ! ಇದೇ ಮೊದಲ ಬಾರಿಗೆ ನಮ್ಮೆಲ್ಲರ ಗೆಳೆಯ ಮತ್ತು ಅಸದೃಶಸಂಸ್ಕೃತಕವಿ-ಅವಧಾನಿ ಡಾ|| ಆರ್. ಶಂಕರ್ ಪದ್ಯಪಾನಕ್ಕೆ ಕಾಲಿರಿಸಿದ್ದಾರೆ.ಅವರಿಗೆ ಸ್ವಾಗತ. ಅವರು ರಚಿಸಿದ ಅತಿಸುಂದರಕವಿತೆಗೆ ನನ್ನದೇ ಕನ್ನಡಾನುವಾದವನ್ನು ಇಲ್ಲಿ ಎಲ್ಲರ ಅನುಕೂಲತೆಗೆಂದು ನೀಡುತ್ತಿದ್ದೇನೆ.

   ಅವಿರಳದಿವಾನಿಶಾಪುಟಘಟಿತಕಾಲಪುಸ್ತಕದೆ ಬಿದ್ದಿರ್ಪ ನರಧೂಳಿಕಣಮಂ|
   ಜವದಿ ಜವರಾಯನೋಸರಿಸಿದಪನೊಯ್ಯನೆಯೆ ತಾನೂದುತುಪ್ಫೆಂದು ಲೀಲೆಯಿಂದಂ||

  • ಅಬ್ಬಾ! ಅದ್ಭುತವಾದ ಕಲ್ಪನೆ!!!

   ಶ೦ಕರರಿಗೆ ಸ್ವಾಗತ:)

 6. ಧೂಳು ಹಿಡಿದಿದೆ ಪುಸ್ತಕವೆಲ್ಲ
  ಹಾಳು ಮಾಡಿದೆ ಮಸ್ತಕವೆಲ್ಲ
  ಕಾಳು ಕೂಡಿಡುತ ಭ್ರಮೆಯಲೀ ಕಳೆದೆನು ದಿನಗಳಾ |
  ಬಾಳು ಸಾಗುತಲಿದೆ ವ್ಯರ್ಥವು
  ಗೋಳು ಮುಗಿಯದು ಅನವರತವೂ
  ಹೇಳು ಕೊಳೆಯ ಕಳೆದಾನಂದವಪಡೆವ ದಾರಿಯನೂ||

  • ಜನನಿಯವರಿಗೆ ಪದ್ಯಪಾನಕ್ಕೆ ಸ್ವಾಗತ. ನೀವು ಬೇಸರಿಸಲಾರಿರೆಂಬ ಆಶೆಯಲ್ಲಿ, ಈ ಪದ್ಯದ ಕೆಲವು ತೊಡಕುಗಳನ್ನು ತೋರಬಯಸುತ್ತೇನೆ ::
   “ಪುಸ್ತ + ಕವೆಲ್ಲ”, “ಮಸ್ತ + ಕವೆಲ್ಲ” – ಇಲ್ಲಿ “ಕವೆಲ್ಲ” ಎಂಬಲ್ಲಿ ಲಗಂ (ಗಣಾದಿಯಲ್ಲಿ ಲಘು ಗುರು) ಆಗಿದೆ. ಇದರಿಂದ ಧಾಟಿಯಲ್ಲಿ ಓದುವಾಗ ಸ್ವಲ್ಪ ತೊಡಕಾಗುತ್ತದೆ.
   ಅಂತೆಯೇ ಕೊನೆಯ ಸಾಲಿನಲ್ಲೂ “ಳೆದಾ” ಎಂಬಲ್ಲಿ ಲಗಂ ಬಂದಿದೆ.
   “ಹೇಳು + ಕೊಳೆಯ ಕ + ಳೆದಾ + ನಂದವ + ಪಡೆವ + ದಾರಿಯ + ನೂ”

   ೩ನೆ ಹಾಗು ೬ನೆ ಸಾಲುಗಳಲ್ಲಿ, ಕೊನೆಯದು ಊನ ಗಣ. ಅಂದರೆ, ಅದು ಲಘುವಾಗಿದ್ದರೂ ಅಡ್ಡಿಯಿಲ್ಲ. ಆದ್ದರಿಂದ, “ದಿನಗಳ” ಹಾಗೂ “ದಾರಿಯನು” ಎಂದೇ ಇಡಬಹುದು. ಎಳೆಯಬೇಕಿಲ್ಲ.

   ತೊಡಕುಗಳನ್ನೇ ತೋರಿದ್ದಕ್ಕಾಗಿ ಕ್ಷಮಿಸಿರಿ ಮತ್ತು ದಯವಿಟ್ಟು ಪದ್ಯಗಳನ್ನು ಬರೆದು ನಮ್ಮೊಡನೆ ಹಂಚಿಕೊಳ್ಳುವುದನ್ನು ಮುಂದುವರೆಸಿರಿ 🙂

   • ತಪ್ಪುಗಳನ್ನು ತಿದ್ದಿದ್ದಕ್ಕಾಗಿ ಧನ್ಯವಾದಗಳು.

    ಸಾಹಿತ್ಯ ಮತ್ತು ವ್ಯಾಕರಣದ ಬಗ್ಗೆ ಏನೇನೂ ಜ್ಹಾನವಿಲ್ಲ. ಇತ್ತೀಚಿಗೆ ಪ್ರಾಸಬದ್ದವಾದ ಪದಗಳು ಮೂಡಿ ಬರುತ್ತಿರುವುದರಿಂದ ಛ೦ದೋಬದ್ದವಾದ ಕವಿತೆಗಳನ್ನು ರಚಿಸಲು ಆಸಕ್ತಿ ಮೂಡಿದೆ. ಈಗ ಬಳಸಿಕೊಂಡಷ್ಟು ಜ್ಹಾನವೂ(ಲಘು,ಗುರು ವಿನಿಂದ ಆರಂಭಿಸಿ) ಈ ಒಂದು ವಾರದಲ್ಲಿ ಪಡೆದುಕೊಂಡ ಜ್ಹಾನವಾಗಿದೆ. ಆದ್ದರಿಂದ ಈ ತಾಣದಲ್ಲಿ ಜನನಿ ಅತ್ಯಂತ ಪುಟ್ಟ ಪುಟಾಣಿ. ನೀವೆಲ್ಲ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕೆಂದು ಅಪೇಕ್ಷೆ.

    ಧೂಳು ಹಿಡಿದಿದೆ ಪುಸ್ತಕ ಪುಟವು
    ಹಾಳು ಮಾಡಿದೆ ಮಸ್ತಕ ಮನವು
    ಕಾಳು ಕೂಡಿಡುತ ಭ್ರಮೆಯಲೀ ಕಳೆದೆನು ದಿನಗಳ |
    ಬಾಳು ಸಾಗುತಲಿದೆ ವ್ಯರ್ಥವು
    ಗೋಳು ಮುಗಿಯದು ಅನವರತವೂ
    ಹೇಳು ಕೊಳೆಯ ಕಳೆಯುತಲಾನಂದವಪಡೆವ ದಾರಿಯನು||

    • ಪುನ: ತಪ್ಪಾಗಿದೆ

     ಧೂಳು ಹಿಡಿದಿದೆ ಪುಸ್ತಕ ಪುಟವು
     ಹಾಳು ಮಾಡಿದೆ ಮಸ್ತಕ ಮನವು
     ಕಾಳು ಕೂಡಿಡುತ ಭ್ರಮೆಯಲೀ ಕಳೆದೆನು ದಿನಗಳ |
     ಬಾಳು ಸಾಗುತಲಿದೆ ವ್ಯರ್ಥವು
     ಗೋಳು ಮುಗಿಯದು ಅನವರತವೂ
     ಹೇಳು ಕೊಳೆಯ ಕಳೆಯುತಲಾನಂದವಪಡೆವ ದಾರಿಯ||

 7. ಮ.ವಿ||
  ಪಳತಾಗಿರ್ಪುದು ಪುಸ್ತಕಂ ಗಡಮೆನುತ್ತೆಲ್ಲರ್ ತಿರಸ್ಕಾರದಿಂ
  ಕಳಕೊಂಡಿರ್ದ ಸ್ವಮೌಲ್ಯಮಂ ಪಡೆಯಲೆಂದಾಶಿಸ್ವ ಸತ್ಸಂಸ್ಕೃತಂ
  ಕೆಳೆಯರ್ಗೀಯಲು ಪದ್ಯಪಾನರುಚಿಯಂ ತಾನಿಂತು ಪ್ರಾರಂಭಿಸಿಂ
  ಸೆಳೆದಿರ್ಪಂ ಮಿಗೆ ಜಾಲತಾಣದೆಡೆ ತಾಂ ಕಾವ್ಯೋತ್ಸುಕರ್ ಚಿತ್ತಮಂ||
  (2ನೇ ಸಾಲಿನ “ಕಳಕೊಂಡಿರ್ದ-ಸ್ವಮೌಲ್ಯ” ಹಾಗೂ 3ನೇ ಸಾಲಿನ “ತಾನಿಂತು-ಪ್ರಾರಂಭಿಸಿಂ” ಇಲ್ಲಿ ಶಿಥಿಲದ್ವಿತ್ವವಾಗಬಹುದೆಂದುಕೊಂಡಿದ್ದೇನೆ. ಹಾಗೆಯೇ “ಕಾವ್ಯೋತ್ಸುಕರ್ ಚಿತ್ತಮಂ”- ಇಲ್ಲಿ ‘ಕಾವ್ಯೋತ್ಸುಕರ ಚಿತ್ತಮಂ’ ಎಂದು ಆಗಬೇಕಾಗಿತ್ತೇ? ದಯವಿಟ್ಟು ಸವರಿಸಿ)
  -ಪದ್ಯಪಾನ ಜಾಲಪ್ರಾರಂಭಿಸಿದವರನ್ನು ಏಕವ್ಯಕ್ತಿಸೂಚವಾಗಿ ವರ್ಣಿಸಲು ಪ್ರಯತ್ನಿಸಿದ್ದಕ್ಕೆ ಕ್ಷಮೆಯಿರಲಿ:-)

  • ಮತ್ತೆ ಕೆಲವು ವ್ಯಾಕರಣದ ತಪ್ಪುಗಳಾಗಿವೆ. ದೂರವಾಣಿಯಲ್ಲಿ ತಿಳಿಸುವೆ. ಏನೇ ಆಗಲಿ, ನಿಮ್ಮ ವೃತ್ತಪ್ರೀತಿಯನ್ನೂ ಅದನ್ನು ಬಳಸಲೇಬೇಕೆಂಬ ದೀಕ್ಷೆಯನ್ನೂ ಮನಸಾ ಮೆಚ್ಚುವೆ.

   • ಧನ್ಯವಾದಗಳು ಸರ್:-) ಅದೇನೋ ಮತ್ತೇಭದ ಗತಿಯ ಮೋಹ.. ಮತ್ತೆ ಮತ್ತೆ ಸೆಳೆಯುತ್ತಿದೆ:-)

 8. कति न कवयन्ति लोके परमतिविरला भवादृशा रसिकाः ।
  वाणीमुक्तासरतामेति यदानन्दबाष्पकणसरणी ॥

  धन्यवादाः

 9. ನಮ್ಮ ಡಾ|| ಆರ್.ಶಂಕರ್ ರಚಿಸುವ ಸಾಮಾನ್ಯಧನ್ಯವಾದಪದ್ಯವೂ ಅನವದ್ಯ, ಅತಿಹೃದ್ಯ, ಕಾವ್ಯಕಮಲಪರಿಮಲಬಹಲ! ಅವರ ಈ ಪದ್ಯವೂ ಅನುವಾದಾರ್ಹವಾಗಿದೆ:

  ಎನಿತೆನಿತಿಲ್ಲಂ ಕಬ್ಬಿಗರನಿತಿಳೆಯೊಳ್ ರಸಿಕರಾರ್ ಗಡಂ ನಿಮ್ಮವೊಲೇ|
  ಬಿನದಿಪುವಲ ನಲ್ಗಂಬನಿಪನಿಗಳ್ ನುಡಿವೆಣ್ಣ ಕೊರಲ ಸರದೊಳ್ ನಿಮ್ಮಾ!!
  (ಪದ್ಯಪಾನಿಗಳಿಗೆ ಹಳಗನ್ನಡದ ಹುಚ್ಚು ಹೆಚ್ಚಾಗಲೆಂದು ಮಿಗಿಲಾಗಿ ಆ ನುಡಿಯನ್ನೇ ಬಳಸಿದ್ದೇನೆ. ಗೆಳೆಯರು ಈ ಅನುವಾದವು ಒಂದು “ಸಂಸ್ಕೃತ”ದಿಂದ ಮತ್ತೊಂದು “ಸಂಸ್ಕೃತ”ಕ್ಕೆ ಹಾಯ್ದು ಬಂದಿದೆಯೆಂದು ಬೇಸರಿಸದಿರಲಿ:-)

 10. (ಡಾ|| ಶಂಕರ್ ಅವರ ಕ್ಷಮೆ ಕೋರಿ)

  ಇನ್ನು ನೀನುದಿಸಯ್ಯ ಜೀವನೆ
  ಚೆನ್ನವೀ ವಿಧಿಬರಹವಿತ್ತಿಹೆ
  ಚಿನ್ನವಾಗಲಿ ಬಾಳು ನಿನ್ನಿಂದೊಳ್ಳಿತಾಗಲಿ ಸಂ
  ಪನ್ನನಾಗೆಂದಾ ಚತುರ್ಮುಖ
  ತನ್ನ ಕೈಯಿಂ ಬರೆದ ಭಾಗ್ಯಕೆ
  ಪೊನ್ನಧೂಳಿಯ ತಳೆದು ಮಿಕ್ಕುದನೂದಿ ಹಾರಿಸಿದ

  • ಪದ್ಯ ಸೊಗಸಾಗಿದೆ. ಆದರೆ ಕಂದ ಮತ್ತು ಷಟ್ಪದಿಗಳಲ್ಲಿ ಪೂರ್ವಾರ್ಧದ ಬಳಿಕ ಉತ್ತರಾರ್ಧಕ್ಕೆ ಪದವನ್ನು ಖಂಡಪ್ರಾಸಕ್ಕಾಗಿ ಮುರಿದು ಮುಂದುವರಿಸುವಂತಿಲ್ಲ. ಹೀಗಾಗಿ ಸಂ-ಪನ್ನ ಎಂಬ ಪದದ carry-over ಸಾಧುವಾಗದು:-)

   • ಸಂ||ಪನ್ನ – ಒಡೆಯುವುದೋ ಬೇಡವೋ ಇಬ್ಬಂದಿಯಲ್ಲಿದ್ದು ಕೊನೆಗೆ ಒಡೆದೇ ಬಿಟ್ಟೆ 🙂 ಇನ್ನು ಮುಂದೆ ತಿದ್ದಿಕೊಳ್ಳುತ್ತೇನೆ. ಧನ್ಯೋಸ್ಮಿ.

 11. ಮೂರು ತಲೆಮಾರುಗಳ ಪಿ೦ದಣ
  ಚಾರು ಪೊತ್ತಿಗೆ ದೊರಕಿತಟ್ಟಡಿ
  ಭೂರಿ ಸ೦ತಸಪಟ್ಟು ತವಕದಿ ಪುಟವ ಬಿಡಿಸುತಲಿ
  ಆರ ಪಟವಿಹುದೆಂದು ಈಕ್ಷಿಸೆ
  ಸೇರಿ ಕುಳಿತಿದೆ ಸೇರು ಧೂಳಿದ
  ಮಾರುದೂರಕೆ ಹಾರಿಸುವೆನುಫ್ ಎಂದು ಊದುತಲಿ

 12. ಇನ್ನೊಂದು ಯತ್ನ, ಭಾವವೊಂದೇ :

  ಎಕ್ಕಟಿಯಲಿಟ್ಟಿರ್ದ ಹೊತ್ತಗೆ
  ಸಿಕ್ಕಿದೊಡನೆಯೆ ನಕ್ಕು ನಲಿಯುತ
  ಅಕ್ಕರೆಯಲಿಂದಾನು ಬಿಡಿಸಲದೇನು ಸೋಜಿಗವು
  ಅಕ್ಕರ೦ಗಳೆ ಕಾಣಿಸದ ತೆರ
  ಪೊಕ್ಕು ವಕ್ಕರಿಸಿಹುದು ಧೂಳದೊ
  ರೆಕ್ಕೆ ಬಡಿಯುವ ಹಕ್ಕಿಯ೦ದದಿ ಹಾರಿತದನೂದೆ

  • ನಿಮ್ಮ ಪದ್ಯಗಳು ಚೆಲುವಾಗಿವೆ. ಆದರೆ ಮೊದಲ ಪದ್ಯದಲ್ಲಿ ಸ್ವರಸಂಧಿಗಳಲ್ಲಿ ಹಲವು ಹಾಗೆಯೇ ಉಳಿದಿವೆ. ಪದ್ಯದಲ್ಲಿ ಯಾವುದೇ ವಿಸಂಧಿದೋಷವಿರಬಾರದು.ದ್ವನ್ನು ಹೀಗೆ ಸವರಿಸಬಹುದು:
   ಆರ ಪಟವಿಹುದೆಂದು ಪರಿಕಿಸೆ
   ……………………………
   ……………….ಹಾರಿಸುವೆನುಪ್ಫೆನ್ನುತೂದುತಲಿ

   • ತುಂಬಾ ಧನ್ಯವಾದಗಳು.
    ‘ವಿಸಂಧಿದೋಷ’ ಅ೦ದರೆ ಮಧ್ಯದಲ್ಲಿ ಸ್ವರಾಕ್ಷರಗಳು ಬರಬಾರದೆಂದು ಅರ್ಥೈಸಲೇ?
    ಉದಾ; ಆರ ಪಟವಿಹುದೆನುತಲೀಕ್ಷಿಸೆ — ಹೀಗೂ ಸರಿಪಡಿಸಬಹುದೆ ?

    ಮೂರು ತಲೆಮಾರುಗಳ ಪಿ೦ದಣ
    ಚಾರು ಪೊತ್ತಿಗೆ ದೊರಕಿತಟ್ಟಡಿ
    ಭೂರಿ ಸ೦ತಸಪಟ್ಟು ತವಕದಿ ಪುಟವ ಬಿಡಿಸುತಲಿ
    ಆರ ಪಟವಿಹುದೆಂದು ಪರಿಕಿಸೆ
    ಸೇರಿ ಕುಳಿತಿದೆ ಸೇರು ಧೂಳಿದ
    ಮಾರುದೂರಕೆ ಹಾರಿಸುವೆನುಪ್ಫೆನ್ನುತೂದುತಲಿ

 13. ಪ್ರಥಮ ಪ್ರಯತ್ನ!

  ಧೂಳದನು ಕೊಡವದಿರೆ
  ಹಾಳಹುದು ಹೊತ್ತಗೆಯು
  ನಾಳೆ ಮರೆತಿಂದೆ ಸರಿಸೋ
  ಕೀಳು ಮತಿಯನು ಮೆಟ್ಟಿ
  ಬಾಳ ಹೂವನು ನೀನ
  ರಳಿಸಲು ಪ್ರೀತಿ ಸುರಿಸೋ

  • ನಿದ್ದೆಯಿಂದೆದ್ದು ನಾ
   ತಿದ್ದಿ ಬರೆದಿಹೆ ಮತ್ತೆ
   ಬುದ್ಧಿಯೋಡಿರಲಿಲ್ಲ ಮಂಪರಿನಲೀ!
   ಸದ್ದು ಮಾಡದೆ ಇನ್ನು
   ಹೊದ್ದು ಮಲಗುವೆ ನಾನು
   ಮುದ್ದು ಕನಸನು ಸುಖಿಸುವಾತುರದಲೀ…

   ಧೂಳದನು ಕೊಡವದಿರೆ
   ಹಾಳಹುದು ಹೊತ್ತಗೆಯು
   ನಾಳೆಯೆಂಬುದ ಮರೆತು ಇಂದೆ ಸರಿಸೋ
   ಕೀಳು ಮತಿಯನು ಮೆಟ್ಟಿ
   ಬಾಳಲತೆಯಲಿಹ ಹೂ
   ದಳವನರಳಿಸಲು ನೀ ಪ್ರೀತಿ ಸುರಿಸೋ

   • ಪದ್ಯ ಚೆನ್ನಾಗಿದೆ, ಛಂದಸ್ಸು ಎಲ್ಲಿಯೂ ಕೆಟ್ಟಿಲ್ಲ. ಆದರೆ ಒಂದೆರಡು ಕಡೆ ವಿಸಂಧಿದೋಷ ಬಂದಿದೆ. ಇದನ್ನು ಪರಿಹರಿಸಿಕೊಳ್ಳಿರಿ…ಅಂತೆಯೇ ಎರಡನೆಯ ಪದ್ಯದ ಕಡೆಯ ಸಾಲಿನಲ್ಲಿ ಗಜಪ್ರಾಸಕ್ಕೆ ಬದಲಾಗಿ ಸಿಂಹಪ್ರಾಸ ಬಂದಿದೆ. ಇದೂ ಪರಿಹರಣೀಯ.

    • ನಮಸ್ಕಾರ ಮತ್ತು ತುಂಬು ಧನ್ಯವಾದಗಳು, ಬೆನ್ತಟ್ಟುವಿಕೆಗೂ-ಟೀಕೆತಿದ್ದುಪಡಿಗೂ.
     ನನಗೆ ತಿಳಿದ ಹಾಗೆ ಬದಲಾಯಿಸಿದ್ದೇನೆ. ತಾವೊಮ್ಮೆ ಪರಿಕಿಸಿ ತಿಳಿಸಿದರೆ ಧನ್ಯ!

     ನಿದ್ದೆಯಿಂದೆದ್ದು ನಾ
     ತಿದ್ದಿ ಬರೆದಿಹೆ ಮತ್ತೆ
     ಬುದ್ಧಿ ಓಡಿರಲಿಲ್ಲ ಮಂಪರಿನಲೀ!
     ಸದ್ದು ಮಾಡದೆ ಇನ್ನು
     ಹೊದ್ದು ಮಲಗುವೆ ನಾನು
     ಮುದ್ದು ಕನಸನು ಸುಖಿಸುವಾತುರದಲೀ…

     ಧೂಳದನು ಕೊಡವದಿರೆ
     ಹಾಳಹುದು ಹೊತ್ತಗೆಯು,
     ನಾಳೆಯೆಂಬುದ ಮರೆತದಿಂದೆ ಸರಿಸೋ!
     ಕೇಳು ಮನುಜನೆ ಗುಟ್ಟ..
     ಬಾಳಿನೊಳು ಸಾರವಿದೆ
     ನೀಳ ಪಯಣವ ನೀನು ಸುಖಿಸಿ ಸವೆಸೋ!

   • ಪದ್ಯಪಾನದ ಗೆಳೆಯರ ಬಳಗಕ್ಕೆ ನಿಮಗೆ ಸ್ವಾಗತ. ಹೀಗೇ ನಿಮ್ಮ ಪದ್ಯಗಳ ರುಚಿಯನ್ನು ನಮಗೆಲ್ಲ ಉಣಿಸುತ್ತಿರುವಿರೆಂದು ಆಶಿಸುತ್ತೇನೆ.

    • ಧನ್ಯವಾದಗಳು. ನಿಮ್ಮೆಲ್ಲರ ಬೆನ್ತಟ್ಟುವಿಕೆಯಿದ್ದರೆ ನಮಗೂ ಮುನ್ನುಗ್ಗಲು ಉತ್ಸಾಹ!

 14. ಕೆಲಸದಕತದಿನ್ನೂರೂ
  ರಲೆವಾತಂ ಸತಿಗಮೋಲೆಯನುಪುವೆನೆಂದಂ
  ಪಲವುಂಪೊತ್ತಿಗೆತೆರೆದೂ
  ದಲೆದ್ದಧೂಳಿಂದೆಮೇಘದೂತಮನೊರೆದಂ

  • ಪದ್ಯದ ಹಿಂದಿರುವ ಕಲ್ಪನೆ ತುಂಬ ಸೊಗಸಾಗಿದೆ. ಒಳ್ಳೆಯ ಅತಿಶಯೋಕ್ತ್ಯಲಂಕಾರ.
   ಆದರೆ ಮೊದಲ ಸಾಲು “ಕೆಲಸದ ಕತದಿಂದೂರೂ…” ಎಂದಾಗಬೇಕು. ಇಲ್ಲವಾದರೆ ವ್ಯಾಕರಣ ಕೆಡುತ್ತದೆ.

   • ಹೌದಲ್ಲವೇ! Such an elementary error! ತಿದ್ದಿದ್ದೇನೆ. ಧನ್ಯೋಸ್ಮಿ.

    ಕೆಲಸದಕತದಿಂದೂರೂ
    ರಲೆವಾತಂ ಸತಿಗಮೋಲೆಯನುಪುವೆನೆಂದಂ
    ಪಲವುಂಪೊತ್ತಿಗೆತೆರೆದೂ
    ದಲೆದ್ದಧೂಳಿಂದೆಮೇಘದೂತಮನೊರೆದಂ

 15. ಒರುವನ್ನೋದುತೆ ಕಾವ್ಯಶಾಸ್ತ್ರಗಳನುಂ| ಧಾಮಂ ಪರಂ ಐದಿದನ್
  ತೆರೆನೀ ಗಾಥೆಯ ಪೇಳ್ಗು ಪುಸ್ತಕವಿದೈ| ಕಣ್ಣಿಟ್ಟು ನೋಳ್ಪರ್ಗೆ ತಾನ್
  ತೆರೆದಿಟ್ಟಂತೆಲಿಷ್ಟುಕಾಲವರೆಗಂ| ತಾನಿರ್ದುದೈ (ವ್ಯಾಸ)ಪೀಠದೊಳ್
  ಪೊರಗಿರ್ಪುಂ ಹುಡಿ ಸಾರ್ವುದೆಂತದೊಳಗಂ| ಮುಚ್ಚಿಟ್ಟಿರಲ್ ಗ್ರಂಥವನ್
  ———–
  ನನ್ನೊಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ನೆನ್ನೆಯ ದಿವಸ ವಾಕಿಂಗ್ ಹೋಗುವಾಗ ಈ ಪದ್ಯದ ಮೂರು ಸಾಲುಗಳನ್ನು ಮನದಲ್ಲೇ ಹೊಸೆದೆ. ಮುಂದಿನ ಸಾಲನ್ನು ಹೊಸೆಯುತ್ತಿದ್ದಂತೆ, ಹಿಂದಿನದು ವಿಸ್ಮೃತಿಯಾಗುತ್ತಿತ್ತು. ಅಂತೂ ಮನಗೆ ಹಿಂದಿರುಗಿದಾಗ ಕಾಗದಕ್ಕೆ ಇಳಿಸಿದೆ. ವಿಸ್ಮೃತಿಯಿಂದಾಗಿ ತುಸು ಬದಲಾವಣೆಗಳಾದವು ನಿಜ. ಈ ಪರಿಕ್ರಮದಲ್ಲಿ ನಾನು ಕಂಡುಕೊಂಡದ್ದೇನೆಂದರೆ, ಮನಸ್ಸಿನಲ್ಲೇ ರಚಿಸುವಾಗ ಒಂದು ಇಡಿಯ ಸಾಲು ಒಂದು unit ಎನಿಸಿ ಸಾವಯವತೆ ಹೆಚ್ಚಾಗಿರುತ್ತದೆ. ನೇರವಾಗಿ type ಮಾಡುವಾಗ ಗಮನ ಒಂದೊಂದೇ ಪದಕ್ಕಷ್ಟೇ ಸೀಮಿತವಾಗಿರುತ್ತದೆ. ಈಗ, ನೇರವಾಗಿ ಟೈಪು ಮಾಡುವಾಗಲೂ ಸಮಗ್ರತೆಯನ್ನು ಗಮನಿಸಬೇಕೆಂದು ಟಿಪ್ಪಣಿ ಮಾಡಿಕೊಂಡಿದ್ದೇನೆ.

  • ’ಒರುವನ್ನೋದುತೆ’ ತಪ್ಪು. ’ಒರುವನೋದುತೆ’ ಆಗಬೇಕು. ಸವರುತ್ತೇನೆ.

   • ಒರುವಂ ಓದುತೆ ಕಾವ್ಯಶಾಸ್ತ್ರಗಳನುಂ| ಧಾಮಂ ಪರಂ ಐದಿದನ್
    ತೆರೆನೀ ಗಾಥೆಯ ಪೇಳ್ಗು ಪುಸ್ತಕವಿದೈ| ಕಣ್ಣಿಟ್ಟು ನೋಳ್ಪರ್ಗೆ ತಾನ್
    ತೆರೆದಿಟ್ಟಂತೆಲಿಷ್ಟುಕಾಲವರೆಗಂ| ತಾನಿರ್ದುದೈ ಪೀಠದೊಳ್(ವ್ಯಾಸ)
    ಪೊರಗಿರ್ಪುಂ ಹುಡಿ, ಸಾರ್ವುದೆಂತದೊಳಗಂ| ಮುಚ್ಚಿಟ್ಟೊಡಂ ಗ್ರಂಥವನ್

 16. मच्चातुरीमुपहसन्ति न च त्रपन्ते
  ये श्लोकमेकमपि नो चतुरा विधातुम् ।
  मानोन्नमच्छिरसि पुत्रवतीसमाजे
  वन्ध्याङ्गनाकुसुमदर्शनमात्रमेतत् ॥

 17. ये एकं श्लोकमपि विधातुम् नो चतुराः, मत् चातुरीम् न उपहसन्ति न च त्रपन्ते। मत् शिरसि मानोन्नमेतत्, पुत्रवतीसमाजे वन्ध्याङ्गनाकुसुमदर्शनमात्रम्।
  I feel the the anvaya is not fully correct, for this is all I can make of it: Those that haven’t the skill to compose even a single verse, shalt neither laugh at or be perplexed at my skills. This high-held pride of mine is (synonymous with the flowers that adorn a barren woman.)
  Please rectify my understanding.

 18. ये एकं श्लोकमपि विधातुं नो चतुराः (ते) मच्चातुरीं उपहसन्ति, त्रपन्ते च न । एतत् मानोन्नमच्छिरसि पुत्रवतीसमाजे वन्ध्याङ्गनाकुसुमदर्शनमात्रम् ।
  They deride my scholarship without any sense of shame but cannot compose a couplet themselves. This is no worse than a barren woman’s show of her monthly cycles in midst of mothers who, having given birth to sons, hold their heads high

  • Thanks Dr. Shankar for your clarification. Lest someone should find your simile repulsive, I wish to offer this interpretation. A baby brought forth is a verse complete in all aspects, like yours. The periods of a woman is just a penultimate state, akin to the incorrectly composed verses, like mine.

 19. Very good attempt by all.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)