Apr 012012
 

ಯಾವುದಾದರು ಭಾಷೆಯ ನಿಮಗಿಷ್ಟವಾದ ಸುಂದರ ಪದ್ಯಗಳನ್ನು ಬೇರೊಂದು ಭಾಷೆಗೆ ಅನುವಾದಿಸಿರಿ.

ಛಂದಸ್ಸು – ನಿಮ್ಮನುವಾದಕ್ಕೆ ಅನುಕೂಲವಾದದ್ದು

ದಯವಿಟ್ಟು ಮೂಲದ ಪದ್ಯವನ್ನೂ ಪ್ರಕಟಿಸಿರಿ

  35 Responses to “ಪದ್ಯಸಪ್ತಾಹ – ೧೪ – ಅನುವಾದ”

 1. ಬಹಳ ಇಷ್ಟಪಟ್ಟ ಒಂದು ಶ್ಲೋಕವನ್ನು ಬಳಸಿಕೊಂಡೆ.

  ಸಂಸ್ಕೃತಮೂಲ :

  ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಟಪೇ
  ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
  ಅಗ್ರೇ ವಾಚಯತಿ ಪ್ರಂಭಂಜನಸುತೇ ತತ್ತ್ವಂ ಮುನಿಭ್ಯಃ ಪರಂ
  ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||

  ಕನ್ನಡದಲ್ಲಿ ಅನುವಾದ ಪ್ರಯತ್ನ :

  ಸಗ್ಗವೀಧರೆಯಲ್ಲಿ ಹೊನ್ನ ಮಂಟಪದಲ್ಲಿ ವೈದೇಹಿ ಸಹಿತನಾಗಿ
  ಮಧ್ಯೆ ಮಣಿಮಯವಾದ ಪುಷ್ಪಕಾಸನದಲ್ಲಿ ವೀರಾಸನದಿ ಮಂಡಿಸಿ
  ಹನುಮ ಮುನಿಜನರೆಲ್ಲ ಮುಂಭಾಗದಲಿ ನಿಂತು ವಾಚನವ ಗೈಯ್ಯುತಿರಲು
  ಭರತಾದಿ ಸಜ್ಜನರು ಸುತ್ತನಿಂದಿಹರಲ್ಲಿ ರಾಮ ನುತಿಪೆನು ಶ್ಯಾಮಲ

  • ಎಲ್ಲ ಚೆನ್ನಾಗಿದೆ. ಆದಿಪ್ರಾಸಕ್ಕೇಕೆ ತ್ರಾಸವಾಯಿತು?:-)

 2. ಆದಿ ಪ್ರಾಸದಲ್ಲಿ ಪ್ರಯತ್ನ, ತಪ್ಪಿದ್ದರೆ ಕೃಪಯಾ ತಿಳಿಸಿ.

  ಸಗ್ಗವೀಧರೆಯಲ್ಲಿ ಹೊನ್ನ ಮಂಟಪದಲ್ಲಿ ವೈದೇಹಿ ಸಹಿತನಾಗಿ
  ಅಗ್ಗಳೆಯ ಮಣಿಮಯದ ಪುಷ್ಪಕಾಸನದಲ್ಲಿ ವೀರಾಸನದಿ ಮಂಡಿಸಿ
  ತಗ್ಗಿನಲಿ ಎದುರಿನಲಿ ಹನುಮ ಮುನಿಜನರೆಲ್ಲ ವಾಚನವ ಗೈಯ್ಯುತಿರಲು
  ಮಗ್ಗುಲಲಿ ಭರತಾದಿ ಸಜ್ಜನರು ನಿಂತಿಹರು ರಾಮ ನುತಿಪೆನು ಶ್ಯಾಮಲ

 3. Kimekam daivatam loke
  kim vapyekam pārāyanam;
  Stuvantah kam kam-archantah
  prāpnuyur manavah-shubham.

  ಶಾಸ್ತ್ರ ಸಾರುವ ಸತ್ಯ ವೇನದು

  ಶಾಸ್ತ್ರ ಸಕಲವುನಾರ ತಿಳಿಪದು

  ಶಾಸ್ತ್ರ ಸಕಲಕೆ ವಿಷಯನಾಗಿಹ ಪರಮನಾರೆಂದ

  ಶಾಸ್ತ್ರ ವೇತ್ತರದೇನು ಕಂಡರು

  ಶಾಸ್ತ್ರ ವೇತ್ತರದೇನು ನೆನೆದರು

  ಶಾಸ್ತ್ರ ವೇತ್ತರದೇನ ನಾರಧಿಸಿ ಜಯವಪಡೆದರು?

 4. Attempt is good. You have cleverly managed the aadipraasa! But the small anuShTubh metre in the original should not demand to big a bhaamini for it’s incarnation in Kannada:-)

 5. Thank you sir.

 6. Sir one more attempt. I do not know anyother chanduss.I am trying to learn bhamini first . so i tried in bhamini only.

  Ko dharmah sarva-dharmanam bhavatah paramo matah |
  Kim japanmuchyate janthuh janma samsara-bandhanat ||

  ಎಲ್ಲ ಧರ್ಮದ ಮರ್ಮ ಯಾವುದು

  ಎಲ್ಲ ನೀವದ ತಿಳಿಸಿ ಹರಸಿರಿ

  ಎಲ್ಲ ಧರ್ಮದಲಧಿಕ ಧರ್ಮವ ತಿಳಿಸಬೇಕೆಂದ

  ಎಲ್ಲ ಭಂದನ ಹೇಗೆ ಹರಿವುದು

  ಎಲ್ಲ ಹುಟ್ಟಿನ ಕೊನೆಯದಾವುದು

  ಮೆಲ್ಲ ಮೆಲ್ಲನೆ ಜಪಿಸಿ ಗೆಲುವಾ ಮಂತ್ರ ಪೇಳೆಂದ

 7. ನಿಮ್ಮ ವಿನಯ ಅತ್ಯಂತ ಸ್ತುತ್ಯ. ಆದರೆ ಮುಜುಗರಕ್ಕೆ ಒಳಗಾಗಬೇಕಿಲ್ಲ. ಕ್ರಮವಾಗಿ ಒಂದೊಂದು ಛಂದಸ್ಸನ್ನೂ ಪಳಗಿಸಿಕೊಂಡರಾಯಿತು. ನೀವು ಹಿಡಿದ ದಾರಿ ಸರಿಯಾಗಿದೆ. ಒಳ್ಳೆಯ ಸರಳಸುಂದರಪದ್ಯಗಳನ್ನು ಭಾಮಿನಿಯಲ್ಲಿ ತಪ್ಪಿಲ್ಲದೆ ಹೀಗೆಯೇ ಅನುವಾದಿಸುತ್ತ ಬನ್ನಿರಿ. ಇದೇ ನಿಮಗೆ ಚೆನ್ನಾದ ಅಭ್ಯಾಸವೂ ಆಗುತ್ತದೆ. ಇದೀಗ ರಚಿಸಿದ ಪದ್ಯವೂ ಸೊಗಸಾಗಿದೆ.

 8. ತುಂಬಾ ಬಾಲಿಶವಾದ ಪ್ರಯತ್ನವಾದರೂ ಮುಜುಗರವಿಲ್ಲದೆ ಹಾಕಿದ್ದೇನೆ.

  ಗಜಮುಖನೆ ಗಣಪತಿಯೇ ನಿನಗೆ ವಂದನೆ|
  ನಂಬಿದವರ ಬಾಳಿನ ಕಲ್ಪತರು ನೀನೆ||

  ಗಜಾನನಂ ಗಣಾಧಿಪಂ
  ವಂದೇ ತವ ಚರಣಮ್|
  ವಿಶ್ವಸಿತಸ್ಯ ಜೀವನೆ
  ತ್ವಮೇವ ಕಲ್ಪವೃಕ್ಷಮ್||

  • ಅಡ್ಡಿಯಿಲ್ಲ. ಒಳ್ಳೆಯ ಹೊಸಪ್ರಯತ್ನ;
   ಆದರೆ ಸಂಸೃತವ್ಯಾಕರಣದಲ್ಲಿ ಸಾಕಷ್ಟು ತಪ್ಪಾಗಿವೆ.
   ಗಜಾನನ ಗಣಾಧಿಪ ವಂದೇ ತವ ಚರಣಮ್ |
   ಶ್ರದ್ಧಾಲೂನಾಂ ಭವೇಷು ತ್ವಂ ಹಿ ಕಲ್ಪವೃಕ್ಷಃ ||
   ಎಂದು ಸವರಿಸಬಹುದೇ?

   • ನನ್ನೀ ಪ್ರಶ್ನೆಗಳಿಗೆ ದಯವಿಟ್ಟು ಕ್ಷಮಿಸಿ…
    ಪ್ರತಿ ಸಾಲಿನಲ್ಲಿಯೂ ಎಂಟಕ್ಷರಗಳನ್ನು ಜೋಡಿಸಿ ಅನುಷ್ಟುಪ್ ಛಂದಸ್ಸಿನಲ್ಲಿ ಅನುವಾದಿಸಲು ಹೊರಟೆ…

    ಗಜಾನನ ಗಣಾಧಿಪ ವಂದೇ ತವ ಚರಣಮ್ |
    ಶ್ರದ್ಧಾಲೂನಾಂ ಭವೇಷು ತ್ವಂ ಹಿ ಕಲ್ಪವೃಕ್ಷಃ ||

    ತುಂಬಾ ಚೆನ್ನಾಗಿದೆ… ಆದರೆ ಅನುಷ್ಟುಪ್ ಅಲ್ಲದೆ ಬೇರೆ ಯಾವುದೇ ಛಂದಸ್ಸಿನ ಬಗ್ಗೆ ತಿಳಿದಿಲ್ಲವಾದ ಕಾರಣ ನೀವು ಅಳವಡಿಸಿಕೊಂಡ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ…

   • गजानन गणाधिप वन्दे ते चरणौ ।
    त्वं हि स्वयं कल्पलता सम्मतजगति ॥

    • ಪದ್ಯಪಾನಕ್ಕೆ ಆದರದ ಆತ್ಮೀಯಸ್ವಾಗತ. ತಮ್ಮ ಸಂಸ್ಕೃತಭಾಷೆಯು ಶುದ್ಧವಾಗಿದೆ; ವ್ಯಾಕರಣಸೌಷ್ಠವದಿಂದ ಕೂಡಿದೆ. ಆದರೆ ಛಂದಸ್ಸಿನ ವಿಷಯದಲ್ಲಿ ತಾವು ತುಂಬ ಕಲಿಯುವುದಿದೆ. ದಯಮಾಡಿ ಎಲ್ಲ ಪಾಠಗಳನ್ನು ಚೆನ್ನಾಗಿ ಅವಲೋಕಿಸಿರಿ. ಮತ್ತೆ ಮತ್ತೆ ಇಲ್ಲಿಗೆ ಬರುತ್ತಿರಿ; ಒಳ್ಳೆಯ ಪದ್ಯಗಳನ್ನು ಬರೆಯಿರಿ.

 9. ಫರೀದ ಖಾನುಮ್ ಗಜ಼ಲ್ ನ ರಾಣಿ ಎಂದೇ ಪ್ರಸಿದ್ಧರಾದವರು.

  http://en.wikipedia.org/wiki/Farida_Khanum

  ಅವರು ಹಾಡಿರುವ ‘ಆಜ್ ಜಾನೆ ಕಿ ಜ಼ಿದ್ ನಾ ಕರೋ’ (ಕಲ್ಯಾಣಿಯಲ್ಲಿ) ಬಹಳ ಚೆನ್ನಾಗಿದೆ.

  http://www.youtube.com/watch?v=wqbbILfdw94

  ನಾನು ಇದನ್ನು ಮೊದಲು ಕೇಳಿದ್ದು ಟಿವಿಎಸ್ ಸರಿಗಮ ಕಾರ್ಯಕ್ರಮದಲ್ಲಿ ರೇಣುಕ ಶಹನೆಯ
  ಮೂಲಕ. ಈ ಗಜ಼ಲ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

  http://allpoetry.com/poem/8612263-Aaj_Jaane_Ki_Zid_Na_Karo-by-Fayyaz_Hashmi

  ನನ್ನ ಅನುವಾದ ಬಹಳ ಕೆಟ್ಟದಾಗಿದೆ. ಈ ಅನುವಾದದ ನೆಪದಲ್ಲಾದರೂ ಇಲ್ಲಿಯ ಓದುಗರು ಫರೀದಾ
  ಖಾನುಮ್ ಅವರ ಹಾಡನ್ನು ಕೇಳಿದರೆ ಇದನ್ನು ಬರೆದದ್ದಕ್ಕೆ ಸಾರ್ಥಕತೆ ದೊರಕುತ್ತದೆ.

  ಈ ದಿನವೆ ಹೋಗುವೆನೆನುವ ಹಟವ ಮಾಡದಿರು
  ಮೋದದಲಿ ಸುಮ್ಮನೆ ಕುಳಿತಿರೆನ್ನ ಪಕ್ಕದಲಿ
  ಕಾದ ನಿನ್ನಾ ಮಾತು ಸಾವನೇ ತಂದೀತು
  ನೊಂದು ನಾ ನಶಿಸುವೆ ನುಡಿದರೆ ನೀ ಹೀಗೀಗ

  ನಿನ್ನ ನಾ ನಿಲಿಸಬಾರದೆ ಯೋಚಿಸು ಗೆಳೆಯನೆ
  ಎನ್ನ ನೀ ತೊರೆದಂದು ಜೀವವೇ ಹೋದೀತು
  ನನ್ನಾಣೆ ದಯವಿರಿಸಿ ನನ್ನೀ ನುಡಿಯ ಕೇಳು
  ಬಿನ್ನಹವಿದು ಪ್ರಿಯ ನಿನ್ನೊಳಿತಿಗಾಲಿಸು ಮಾತ

  ನನ್ನ ಜೀವನ ಕಾಲ ಸಂಕೋಲೆಯಲ್ಲಿರಲು
  ಚಿನ್ನದೀ ಕ್ಷಣಗಳೊದಗಿಹವು ಬಂಧನವಿರದೆ
  ಚೆನ್ನದೀ ಗಳಿಗೆ ಜಾರಿದರೆ ಮತ್ತೆ ಬರುವುದೆ
  ಎನ್ನರಸ ನೀನೇ ಬಯಸುವೆಯದ ನೋವಿನೊಳು

  ಮಿಲನದೀ ಸಮಯ ಮುಗ್ಢಗೊಳಿಸಲು ರಂಗಿನಲಿ
  ಸಲಹುತಿರಲಿಂದು ಸುಂದರತೆ ಪ್ರೀತಿ ನಲಿಯುತ
  ಸುಲಭವೋ ಕಷ್ಟವೋ ನಾಳೆ ತಿಳಿದಿದೆಯೇನು?
  ಕಲೆಯಿಲ್ಲದೀ ರಾತ್ರಿ ನಿಲ್ಲಲಿ ಕೊನೆಯಿರದೆಯೆ

  • ನೀವು ಭಾವಿಸಿದಂತೆ ಅನುವಾದವೇನೂ ಕೆಟ್ಟದಾಗಿಲ್ಲ. ಭಾವವೆಲ್ಲ ಸರಿಯಾಗಿಯೇ ಬಂದಿದೆ. ಘಸಲ್ಲನ್ನು ಈ ಮಟ್ಟದಲ್ಲಿ ಅನುವಾದಿಸಿ ಹಿತ ತರಿಸುವುದು ಕಷ್ಟ. ಆದರೆ ತಾಂತ್ರಿಕವಾಗಿ ಮಾತ್ರೆ-ಗಣಗಳ ಹಿಡಿತವಿಲ್ಲಿ ತಪ್ಪಿದೆ. ಆ ಬಗೆಗೆ ಗಮನ ಹರಿದರೆ ಒಳಿತು:-)
   ವ್ಯಯಕ್ತಿಕವಾಗಿ ನನಗೆ ಸಾಮಾನ್ಯವಾಗಿ ಯಾವುದೇ ಘಸಲ್ಲಿನ ಕಾವ್ಯತ್ವಕ್ಕಿಂತ ಸಂಸ್ಕೃತದ ಹಾಲ-ಅಮರುಕ-ಶೀಲಾ-ಗೋವರ್ಧನ ಮತ್ತಿತರ ಅನೇಕಕವಿಗಳ ಶೃಂಗಾರಮುಕ್ತಕಗಳು ತುಂಬಾ ಚೆಲುವಾಗಿವೆ, ಕಲ್ಪಕಶಕ್ತಿಯಿಂದ ಕೂಡಿವೆಯೆನಿಸಿದೆ.
   ಘಸಲ್ಲಿನಲ್ಲಿ ರಾಗಭಾವವೇ ಅದರ ಸಾಹಿತ್ಯದ ಮೇಲೆ ಹೆಚ್ಚಿನ ಅಭಿನಿವೇಶ ತಾಳುವಂತೆ ಮಾಡುವುದುಂಟು. ಅಲ್ಲದೆ ಘಸಲ್ಲಿನ ವಕ್ತಾರರಿಗೆ ನಮ್ಮ ಅಭಿಜಾತಸಾಹಿತ್ಯದ ಲೇಶಮಾತ್ರದ್ದೂ ಪರಿಚಯವಿಲ್ಲದೆ, ಸಂಗೀತ-ಸಾಹಿತ್ಯಗಳ
   ಪೃಥಕ್ಕರಣದ ವಿವೇಕವೂ ಇಲ್ಲದ ಕಾರಣ ಹಾಗೂ ಅವರಿಗೆ ವಿವಿಧ ಸಮೂಹಮಾಧ್ಯಮಗಳ ಮತ್ತು “happening world”ನ ವಿಭಿನ್ನಸ್ತರಗಳಲ್ಲಿ ಅಪಾರವಾದ ಪ್ರಭಾವವಿರುವ ಕಾರಣ ಈ ಕಾವ್ಯಪ್ರಕಾರಕ್ಕೆ ಈಚಿನ ವರ್ಷಗಳಲ್ಲಿ ಮಿಗಿಲಾದ ಬೆಲೆ ಬಂದಿದೆ. ಮುಖ್ಯವಾಗಿ ಘಸಲ್ಲಿನಲ್ಲಿ ಅದರ ವಿಸ್ತರಕ್ಕೆ ತಕ್ಕ ಶಬ್ದಾರ್ಥಸಾಮಗ್ರ್ಯದ ಕಲ್ಪನೆಯೇ ಇಲ್ಲ. ಅಲ್ಲದೆ ಇದಕ್ಕೆ ಕಲಶವಿಟ್ಟಂತೆ ಅದರ ಕವಿಸಮಯವ್ಯಾಪ್ತಿ ತೀರ ಕಿರಿದು ಮತ್ತು ಅಮೂರ್ತ. ಹೀಗಾಗಿ ಇತ್ತ ವಿಶದವಾದ ಅನುಭಾವ-ವಿಭಾವಗಳ ಚಿತ್ರಣವೂ ಇಲ್ಲದೆ ಅತ್ತ ಗುಣಾಲಂಕಾರಗಳ ಚಮತ್ಕಾರವೂ ಇಲ್ಲದೆ ಧ್ವನಿ-ರಸಗಳೆರದಕ್ಕೂ ಪುಷ್ಟಿ ಸಿಗದಂತಾಗುತ್ತದೆ. ಇದಕ್ಕೆ ಅಪವಾದಗಳಿರಬಹುದು. ಆದರೆ ಅವುಗಳ ಸಂಖ್ಯೆಯಾಗಲಿ ಸತ್ತ್ವವಾಗಲಿ ಗಣನೀಯವಲ್ಲವೆಂದು ಘಸಲ್ಲಿನ ಪರಮಾಚಾರ್ಯನೆಂದೇ ಹೆಸರಾದ ಮಿರ್ಜಾ ಘಾಲೀಬರಂಥವರ ಬರೆಹಗಳನ್ನು ಪರಿಶೀಲಿಸಿದ ನನ್ನ ಅನುಭವ.

   • ಧನ್ಯವಾದಗಳು. ಗಝಲ್ ಸಾಹಿತ್ಯದ ಬಗ್ಗೆ ನನಗೂ ಅಂತ ಒಲವೇನಿಲ್ಲ. ಎಷ್ಟೋ ಬಾರಿ ಸಿನೇಮಾ ಗೀತೆಗಳಿಗಿಂತ ಉತ್ತಮ ಮಟ್ಟದ್ದಾಗಿವೆ ಎಂದೂ ಕೂಡ ಹೇಳುವುದಕ್ಕಾಗುವುದಿಲ್ಲ.ಆಜ್ ಜಾನೆ ಕಿ – ಯಲ್ಲಿ ಕೂಡ ಸಾಹಿತ್ಯ ಬಹಳ ಸಾಧಾರಣವಾಗಿದೆ.
    ನಿಮ್ಮಿಂದ ಈ ರೀತಿಯ ಪ್ರತಿಕ್ರಿಯೆಯ ನಿರೀಕ್ಷಣೆಯೂ ಇತ್ತು. ಈ ಅನುವಾದವನ್ನು ಪೋಸ್ಟ್ ಮಾಡಿದುದ್ದರ ಉದ್ದೇಶ ಫರೀದಾ ಖಾನುಮ್ ರ ಹಾಡುಗಾರಿಕೆಯನ್ನು ಕೆಲವರಾದರೂ ಅನುಭವಿಸಲಿ ಎಂದು. ನಿಮ್ಮ ಈ ದೀರ್ಘವಾದ ಲೇಖನಕ್ಕೆ ಮತ್ತೆ ಧನ್ಯವಾದಗಳು.

    • ಅಡ್ದಿಯಿಲ್ಲ; ಆದರೆ ನೀವೆಂದಂತೆ ಗಾನ ಮಾತ್ರ ತುಂಬ ಮನಮುಟ್ಟುವಂತಿದೆ.

 10. क्षुत्क्षामोपि जराकृशोपि शिथिलप्रायोपि… ಕನ್ನಡದಲ್ಲಿ
  ಮತ್ತೇಭವಿಕ್ರೀಡಿತದಲ್ಲಿ ಪ್ರಯತ್ನಿಸಿದ್ದೇನೆ:
  ಬರವು೦ ಪೆರ್ಚಿರೆ ವ್ಯಾಧಿಯಿ೦ ಸೊರಗಿರಲ್ ಮುಪ್ಪಿ೦ದ ಶೈತಿಲ್ಯವು೦
  ಮರಣ೦ ಸೂಚಿಪ ಬನ್ನಗಳ್ ಬಡಿತದೊಳ್ ಧೀ:ಶಕ್ತಿಯು೦ ಕು೦ದಿರಲ್
  ಕರಿಗಳ್ಗಿ೦ದ್ರನ ಸೀಳ್ದನೆತ್ತಿಯುಣಿಸ೦ ತಿನ್ನಲ್ಕೆ ತಾ೦ ಕಾತುರ೦
  ಕರಡ೦ ತಿ೦ಬನೆ ಮಾನಿಗಳ್ಗೆ ಪ್ರಥಮ೦ ಸಿ೦ಗ೦ ಸ್ವಕಾರುಣ್ಯದಿ೦

  ಕರಡ೦ = ಒಣಹುಲ್ಲನ್ನ

  • ಪ್ರಿಯ ಸೋಮ,
   ನನಗೆ ತುಂಬ ಇಷ್ಟವಾದ ಭರ್ತೃಹರಿಯ ಪದ್ಯವನ್ನು ನೀವು ಅನುವಾದಿಸಿರುವ ಹದ ನಿಜಕ್ಕೂ ಚೆನ್ನಾಗಿದೆ. ಮುಖ್ಯವಾಗಿ ಇದರ ಭಾಷೆಯಲ್ಲಿ ಒಳ್ಳೆಯ ಹದ ಬಂದಿದೆ. ಆದರೆ ಪೂರ್ವಾರ್ಧದಲ್ಲಿ ಮೂಲದ ಹಲವು ಭಾವಗಳು ಮರೆಯಾಗಿವೆ:-) (ನನಗೆ ಗೊತ್ತು; ಪ್ರಾಸವಿರುವ, ಮತ್ತೇಭವಿಕ್ರೀಡಿತದದಲ್ಲಿ ಇದಕ್ಕಿಂತಲೂ ಅಚ್ಚುಕಟ್ಟಾಗಿ ಹಾಗೂ ಸರಳವಾಗಿ ಅನುವಾದಿಸುವುದು ತುಂಬ ತುಂಬ ಕಷ್ಟವಿದೆಯೆಂದು!). ಉತ್ತರಾರ್ಧದ ಭಾಗ ಮಾತ್ರ ಬಲು ಚೆನ್ನಾಗಿದೆ. ದಿಟವೇ, ಈ ಮಟ್ಟದ ರಸ-ಧ್ವನಿ-ಔಚಿತ್ಯ-ವಕ್ರತೆ-ಅಲಂಕಾರ-ರೀತಿ-ಗುಣಗಳೇ ಮುಂತಾದ ಎಲ್ಲ ಕಾವ್ಯಮೀಮಾಂಸಾಮೌಲ್ಯಗಳ ದೃಷ್ಟಿಯಿಂದಲೂ ಪರಿಪೂರ್ಣವಾದ ಹಾಗೂ ಎಲ್ಲ ಕಾಲಕ್ಕೆ ಕೂಡ ಸಲ್ಲುವ ಶ್ರೇಷ್ಠರಚನೆಯನ್ನು ಅನುವಾದಿಸುವ ಸಾಹಸವೇ ಒಂದು ಸಾಧನೆ. ಧನ್ಯವಾದಗಳು.

   • ಗಣೇಶ್ ಸರ್,

    ಧನ್ಯೋಸ್ಮಿ:), ಮೊದಲೆರಡು ಸಾಲುಗಳನ್ನು ಹಲವಾರು ರೀತಿಯಲ್ಲಿ ಯೋಚಿಸಿದೆ… ಆದರೆ ಮೂಲದ ಭಾವವನ್ನು ತರಲಾಗಲಿಲ್ಲ, ಕೊನೆಗೆ ಹತ್ತಿರದ ಅರ್ಥ ಬರುವಹಾಗೆ ಬರೆದೆ

 11. ಗಣೇಶ್ ಅವರು ಉಲ್ಲೇಖಿಸಿದಂತೆ ಅಮುರುಕ ಶತಕದ ಆರಂಭಿಕ ಪದ್ಯಗಳಲ್ಲಿ ಎರಡು ಅನುವಾದಗಳು-
  (ಕೇವಲ ಭಾವಾನುವಾದವನ್ನು ಮಾತ್ರ ಮಾಡಲು ಪ್ರಯತ್ನಿಸಿದ್ದೇನೆ, ಯಾಕೆಂದರೆ ಅಮುರುಕನ ಪದ್ಯಗಳೊಂದೊಂದೂ ಪ್ರಬಂಧಶತಸಮಾನವೆಂಬ ಮಾತಿದೆಯಲ್ಲ!!)
  ನಾಯಕನಿಗೆ ಸಖಿ ಹೇಳುವುದು –
  (ಮೂಲ-
  ದತ್ತೋಸ್ಯಾಃ ಪ್ರಣಯಸ್ತ್ವಯೈವ ಭವತೈವೇಯಂ ಚಿರಂ ಲಾಲಿತಾ
  ದೈವಾದದ್ಯ ಕಿಲ ತ್ವಮೇವ ಕೃತವಾನಸ್ಯಾ ನವಂ ವಿಪ್ರಿಯಂ
  ಮನ್ಯುರ್ದುಸ್ಸಹ ಏವ ಯಾತ್ಯುಪಶಮಂ ನೋ ಸಾನ್ತ್ವವಾದೈಃ ಸ್ಫುಟಂ
  ಹೇ ನಿಸ್ತ್ರಿಂಶ ವಿಮುಕ್ತಕಂಠಕರುಣಂ ತಾವತ್ಸಖೀ ರೋದಿತು||6||)
  ಮ||
  ಭವದೀಯ ಪ್ರಣಯಾನ್ವಿತಳ್ ಮಿಗೆಯಿವಳ್ ನಿಮ್ಮಿಂ ಸದಾ ಲಾಲಿತಳ್
  ಕವಿಯಿಂ ದತ್ತಳಿರಲ್ಕೆ ವಿಪ್ರಿಯಮನಿಂತೇತಕ್ಕೆ ನೀಂ ಮಾಳ್ಪಿರೌ?
  ಅವಳೀ ದುಃಖಮದಿರ್ಕುಮೆಮ್ಮ ನುಡಿಯಿಂ ದಲ್ ದುಸ್ಸಹಂ ಮತ್ತವಳ್
  ಜವದಿಂ ರೋದಿಸಲಿಂತು ಖಳ್ಗಹತಿಯಿಂ ಸಂತಪ್ತಳೆಂಬತೆ ತಾಂ||

  (ಕೋಪಾತ್ಕೋಮಲಲೋಲಬಾಹುಲತಿಕಾಪಾಶೇನ ಬದ್ಧಾ ದೃಢಂ
  ನೀತ್ವಾ ವಾಸನಿಕೇತನಂ ದಯಿತಯಾ ಸಾಯಂ ಸಖೀನಾಂ ಪುರಃ|
  ಭೂಯೋಪ್ಯೇವಮಿತಿ ಸ್ಖಲನ್ಮೃದುಗಿರಾ ಸಂಸೂಚ್ಯ ದುಶ್ಚೇಷ್ಟಿತಂ
  ಧನ್ಯೋ ಹನ್ಯತ ಏವ ನಿಹ್ನಿತಿಪರಃ ಪ್ರೇಯಾನ್ ರುದತ್ಯಾ ಹಸನ್||9||)
  ಮ||
  ಅಳುತಿರ್ಪಾ ಸಖಿತನ್ವಿಯಂ ಕರಗಳಿಂದಾವೃತ್ತಳನ್ನಾಗಿಸಿಂ
  ಸೆಳೆದೊಯ್ದಂ ಮನೆಗಾ ಸಖೀಜನರೆದುರ್ ಮುಸ್ಸಂಜೆಯಾ ವೇಳೆಯೊಳ್|
  ಮಳೆಯೋಲ್ ಬೀಳುವ ಭಾಷ್ಪಧಾರೆಯನದಂ ತಾಂ ಶುಷ್ಕಮಂ ಮಾಡುತಂ
  ಕೆಳೆಯಂ ತಾಡಿದ ಪದ್ಮದಿಂ ಸರಸದಿಂ ಸಂತೈಸಿದಂ ಕೇಳಿಯೊಳ್||

  • ನಿಮ್ಮ ಈ ಅನುವಾದಗಳನ್ನು ನೋಡಿ ನನಗೆ ತುಂಬ ಸಂತಸವಾಯಿತು. ಸೋಮ ಅವರಿಗೆ ನಾನು ಏನೆಲ್ಲ ಮೆಚ್ಚುಗೆ ಹಾಗೂ ಬಿಚ್ಚುಮನದ ಮಾತುಗಳನ್ನಾಡಿದ್ದೇನೆಯೋ ಅವೆಲ್ಲವೂ ನಿಮಗೂ ಸಲ್ಲುತ್ತವೆ. ವಿಶೇಷತಃ ನಿಮ್ಮ ಮೊದಲನೆಯ ಪದ್ಯಾನುವಾದವು ಭಾಷಾದೃಷ್ಟಿಯಿಂದ ತುಂಬ ಹದವಾಗಿದೆ. ಎರಡನೆಯದರಲ್ಲಿ “ಆ” ಎಂಬ ಅಕ್ಷರವನ್ನು ಕೇವಲ ಛಂದಸ್ಸಿನ ಗುರುಕಾರಣದಿಂದ ತುಂಬ ಬಾರಿ ಬಳಸಿರುವುದು ಸರಿಯಲ್ಲ. ಅಲ್ಲದೆ ಉಭಯತ್ರ ಅರ್ಥಕ್ಕೆ ಸ್ವಲ್ಪ ತೊಡಕು ಬಂದಿದೆ. ಆದರೂ ಅಮರುಕನಂಥ ಧ್ವನಿಧುರಂಧರನ ಮತ್ತು ಅಡಕವಾದ ಅಭಿವ್ಯಕ್ತಿಗೆ ಹೆಸರಾದವನ ಕವಿತೆಯನ್ನು ಹಳಗನ್ನಡದ ವೃತ್ತಗಳಲ್ಲಿ ಮೂಲಕ್ಕೆ ನಿಕಟವಾಗುವಂತೆ ಅನೂದಿಸುವ ನಿಮ್ಮ ಎಸಕ ಬಲುಸೊಗಸು. ಧನ್ಯವಾದಗಳು.

 12. ಭರ್ತೃಹರಿಯ ನೀತಿಶತಕದಿಂದ:
  जयन्ति ते सुकृतिनो रससिद्धाः कवीश्वराः।
  नास्ति येषां यशःकाये जरामरणजं भयम्॥

  ಗೆಲ್ವರೈ ರಸಸಿದ್ಧಿಯಂ ಮೆರೆದ ಕಬ್ಬಿಗರ್
  ಸಲ್ವುದೈ ಮೂಜಗದೊಳವರ ಬೋಧೆ|
  ಚೆಲ್ವಿನಾತ್ಮಗಳವರದದುರದೆಲೆ ನೂರ್ಕಾಲ
  ನಿಲ್ವುದೈ ಪೊಂದದೆಲೆ ಮುಪ್ಪು-ಸಾವು||

  • ಸೊಗಸಾದ ಅನುವಾದ, ಮೂಲದ ಹದ;
   ನಗುತಿರ್ಪ ತಿಳಿಯಾದ ಭಾಷೆಯ ಮುದ|
   ಅಗಡಾಗದನುವಾದದೊಲ್ಮೆಯ ಪದ
   ಮುಗುಳಾಯ್ತು ಮನವೆನ್ನ ಕಂಡು ನಿಸದ||

  • Prasad, tumba chennagide:)

 13. An attempt with (on!) ಕೇಯೂರಾ ನ ವಿಭೂಷಯಂತಿ ಪುರುಷಂ

  ಜಳಕಹೂಮುಡಿ ಚೆನ್ನ ಹೊಳೆವ ಹಾರವು ಚೆನ್ನ
  ತೋಳುಬಂದಿಯು ಚೆನ್ನವಗಿಲು ಚೆನ್ನ
  ಒಳಗಿರ್ದಹದವಿನಿದುನುಡಿಯಾಗೆ ಅಳಿಯದೆಯೆ
  ತೊಳಗುವಾನುಡಿಯೊಡವೆಗವು ಸಾಟಿಯೆ

 14. ಜೀವೆ೦ ಅವರಿ೦ದ ಪ್ರೇರಿತನಾಗಿ:
  ತೋಳ್ವ೦ದ೦ಗಳು ಬಲ್ಮೆಯಲ್ಲ ನರಗ೦ ಚ೦ದ್ರಪ್ರಭಾಹಾರವು೦
  ಚಲ್ವಾಲ೦ಕೃತಕೇಶವು೦ ಜಳಕವು೦ ಗ೦ಧ೦ಗಳು೦ ಪುಷ್ಪವು೦
  ಸೊಲ್ವೊ೦ದೇ ಸರಿ ಸಿ೦ಗರಕ್ಕೆ ನರಗ೦ ಸ೦ಸ್ಕಾರಮ೦ ಪೊ೦ದಿದ೦
  ಗೆಲ್ವ೦ ಸಾಧಿಪುದಲ್ತೆ ವಾಣಿ ಸತತ೦ ಮಿಕ್ಕೆಲ್ಲವು೦ ನಶ್ವರ೦

  • ಸೋಮ, ನಿಮ್ಮ ಅನುವಾದ ಮೂಲಕ್ಕೆ ಚೆನ್ನಾಗಿ ಹೊಂದಿಕೊಂಡಿದೆ – ಛಂದಸ್ಸೂ ಸೇರಿ.

   ‘ಸೊಲ್ಲೊಂದೇ’ ಎಂದಿರಬೇಕೇನೋ; ಹಾಗೆಯೇ ಪೊಂದಿದಾ – ‘ಪೊಂದಿದಂ’ ಎಂದಲ್ಲಿ ‘ನರಗಂ’ಗೆ ಅನ್ವಯಿಸಬೇಕಾಗುತ್ತೆ, ಆದರೆ ಯಾ ಸಂಸ್ಕೃತಾ ಅಂದದ್ದು ವಾಣಿಗಲ್ಲವೇ?

   • ಜೀವೆ೦,
    ಪ್ರಾಸದ ಹಿ೦ದೆಬಿದ್ದೆ ವ್ಯಾಕರಣವೂ ಹಿ೦ದೆಬಿದ್ದಿತು 🙂

    ನೀವು ಸೂಚಿಸಿರುವ ಹಾಗೆ ‘ಸೊಲ್ಲೊಂದೇ’ ಸರಿಯಿದೆ, ಹಾಗೆಯೇ ‘ಪೊಂದಿದಾ’ ಎ೦ಬುದೇ ಸರಿ. ಇವೆರೆಡನ್ನು ಸರಿಪಡಿಸಿದ್ದೇನೆ.

    ತೋಳ್ವ೦ದ೦ಗಳು ಬಲ್ಮೆಯಲ್ಲ ನರಗ೦ ಚ೦ದ್ರಪ್ರಭಾಹಾರವು೦
    ಚಲ್ವಾಲ೦ಕೃತಕೇಶವು೦ ಜಳಕವು೦ ಗ೦ಧ೦ಗಳು೦ ಪುಷ್ಪವು೦
    ಸೊಲ್ಲೊ೦ದೇ ಸರಿ ಸಿ೦ಗರಕ್ಕೆ ನರಗ೦ ಸ೦ಸ್ಕಾರಮ೦ ಪೊ೦ದಿದಾ
    ಗೆಲ್ವ೦ ಸಾಧಿಪುದಲ್ತೆ ವಾಣಿ ಸತತ೦ ಮಿಕ್ಕೆಲ್ಲವು೦ ನಶ್ವರ೦

    ತೋಳ್ಬ೦ದವನ್ನು -> ತೋಳ್ವ೦ದ ಮಾಡಬಹುದೋ ಇಲ್ಲವೋ ಎ೦ಬ ಸ೦ದೇಹವಿದೆ.

    • ಆದರೆ ಈಗ ಪ್ರಾಸ ಹೋಯಿತೆ? 🙂

     ‘ಬ’ಕ್ಕೆ ‘ವ’ ಆದೇಶವಾಗುವುದನ್ನು ನಾನು ಕಂಡಿಲ್ಲ; ತೋಳ್ವಂದ ಸರಿಯೇ ಅಲ್ಲವೇ ಬಲ್ಲವರು ಹೇಳಬೇಕು.

     ತಿದ್ದುಪಾಟಿನ ಧಾರ್ಷ್ಟ್ಯಕ್ಕೆ ಬೇಸರ್ವಿಲ್ಲ ತಾನೆ?

     • ಸೋಮ, ನಿಮ್ಮ ಪದ್ಯರಚನೋತ್ಸಾಹ ಸುತರಾಂ ಸ್ತುತ್ಯ. ಪ್ರಕೃತರಚನೆಯ ಮೂಲಚ್ಛಂದ ಅನುಸರಣೆಯೂ ಪ್ರಶಂಸನೀಯ. ಆದರೆ ವ್ಯಾಕರಣ ತುಂಬ ಕಡೆಗಳಲ್ಲಿ ಹಾದಿತಪ್ಪಿದೆ:-) ನಾಳೆ ಮುಖತಃ ಮೃಚ್ಛಕಟಿಕತರಗತಿಯಲ್ಲಿ ತಿಳಿಸುತ್ತೇನೆ.

     • ಸೋಮ, ನಿಮ್ಮ ಪದ್ಯರಚನೋತ್ಸಾಹ ಸುತರಾಂ ಸ್ತುತ್ಯ. ಪ್ರಕೃತರಚನೆಯ ಮೂಲಚ್ಛಂದ ಅನುಸರಣೆಯೂ ಪ್ರಶಂಸನೀಯ. ಆದರೆ ವ್ಯಾಕರಣ ತುಂಬ ಕಡೆಗಳಲ್ಲಿ ಹಾದಿತಪ್ಪಿದೆ:-) ನಾಳೆ ಮುಖತಃ ಮೃಚ್ಛಕಟಿಕತರಗತಿಯಲ್ಲಿ ತಿಳಿಸುತ್ತೇನೆ. ಆದೀತಲ್ಲವೆ?

 15. ಗಣೇಶ್ ಸರ್,
  ಪಾಠದಲ್ಲಿತಿದ್ದುಪಡಿ ಮಾಡಿಸಿಕೊಳ್ಳುತ್ತೇನೆ:)

  ಜೀವೆ೦ :),
  ಬೇಸರವಿಲ್ಲ ತಪ್ಫುಗಳನ್ನ ದಯವಿಟ್ಟು ಸೂಚಿಸಿ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)