Apr 012012
 

ಕಂದಪದ್ಯದ ಒಂದು ಸಾಲು ಹೀಗಿದೆ ::

ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

[ದಕ್ಷಿಣ ದಿಕ್ಕಿನಲ್ಲಿ ಸೂರ್ಯೋದಯವಾಯಿತು ಎಂಬ ಅಸಂಭಾವ್ಯತೆಯ ಸಮಸ್ಯೆ]

ಉಳಿದ ಸಾಲುಗಳನ್ನು ಪೂರ್ಣಗೊಳಿಸಿ, ಸಮಸ್ಯೆಯನ್ನು ಬಗೆಹರಿಸಿರಿ

  59 Responses to “ಪದ್ಯಸಪ್ತಾಹ – ೧೪ – ಸಮಸ್ಯೆ”

 1. ಪಕ್ಷಾರಂಭದಪಗಲೊ
  ಳ್ನಕ್ಷತ್ರಪತಿಯುಪಡುವಣದೊಳ್ಪಡುತಿರಲಾ
  ಗಕ್ಷಿಯನುತ್ತರದಿನಿಲಿಸೆ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  • ತಿದ್ದುಪಡಿಯೊಂದಿಗೆ:

   ಪಕ್ಷಾರಂಭದಪಗಲೊ
   ಳ್ನಕ್ಷತ್ರಾಧಿಪನು ಪಶ್ಚಿಮದಿಪಡುತಿರಲಾ
   ಗಕ್ಷಿಯನುತ್ತರದಿ ನಿಲಿಸೆ
   ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

   • ಪದ್ಯ ಚೆನ್ನಗಿದೆ. ಹಳಗನ್ನಡದ ಹದವೂ ಸಾಕಷ್ಟಿದೆ.

    • ಧನ್ಯೋಸ್ಮಿ. ‘ನಕ್ಷತ್ರಾಧಿಪಂ … ಪಡುತಿರಲ್ಕೆ’ ಇರಬೇಕಿತ್ತು ಆದರೆ ಛಂದಸ್ಸು ಕೆಡುತ್ತಿತ್ತು 🙂

 2. ರಕ್ಷೆ – ತ್ರಯೋಧಿಗಳಾವ್ ದೆಸೆ?
  ಭಕ್ಷಿಸಲೇನಂ ಕಪೀಶ ಪಣ್ಣೆಂದರಿತನ್?
  ಈಕ್ಷಣ ವೆಂದುದಯಿಸಿತಯ್?
  ದಕ್ಷಿಣದೊಳ್, ಭಾನುಬಿಂಬಮ್, ಇಂದುದಿಸಿತಲಾ

  • ಇದು ಒಳ್ಳೆಯ ಕ್ರಮಾಲಂಕಾರವನ್ನು ಆಧರಿಸಿದ ಪೂಅಣಕ್ಕೆ ನಿದರ್ಶನ. ಈ ಜಾಡಿನ ಪರಿಹಾರವು ಯಾವುದೇ ಸಮಸ್ಯೆಯನ್ನು ಬಗೆಹರಿಸಲೂ ರಾಮಬಾಣ.

 3. ದಿಕ್ಸೂಚಿಯ ಕಳಕೊಂಡವ-
  ನೀಕ್ಷಿಸುತಿರ್ದಂ ಗಡಾ ಶರಧಿಯೊಳ್ ನಿಶೆಯೊ|
  ಳ್ಗಾಕ್ಷಣ ನಾವಿಕವರನಾ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ||
  (ನಾವಿಕವರನ ದಕ್ಷಿಣದಲ್ಲಿ ಎಂಬರ್ಥದಲ್ಲಿ ಪೂರೈಸಿದ್ದು, ಮೊದಲಸಾಲಿನ ಪ್ರಾಸ ಶಿಥಿಲವಾಗಿದೆ)

  • ನಿಮಮ ಕಲ್ಪನೆ ತುಂಬ ನವೀನವೂ ಆಕರ್ಷಕವೂ ಆಗಿದೆ. ಕೇವಲ ಭಾಷೆಯಲ್ಲಿ ಅತ್ಯಲ್ಪ ಶೈಥಿಲ್ಯ ಎಡತಾಕಿದೆ.

 4. ದೂರದೃಷ್ಟಿಯಿಂದ ಭಗವಂತನು, ಹಿಂದೂ ಧರ್ಮವ ಉದ್ಧರಿಸಲು ಶ್ರೀ ಶಂಕರ ಭಗವತ್ಪಾದರ ಜನನವ ದಕ್ಷಿಣದ ಕಾಲಡಿಯಲ್ಲಿ ನಿರ್ಧರಿಸಿದನೆಂದು ಸಮಕಾಲೀನನೊಬ್ಬನು ಹೀಗೆ ಹೇಳುವನೆಂಬ ಕಲ್ಪನೆಯ ಪದ್ಯ.
  ತಪ್ಪಿದ್ದರೆ ತಿದ್ದಿ 🙂

  ಭಕ್ಷಣೆಯ ಭಯವ ನೀಗಿಸಿ
  ರಕ್ಷಿಸಿಕೊಳೆ ತನ್ನ ಹಿಂದು ಮುಂದೊಂದಿನಮುಂ
  ಅಕ್ಷಿಗಳೆಲ್ಲರದು ಹುಡುಕೆ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  • ಕಲ್ಪನೆ ತುಂಬ ಹೃದ್ಯವಾಗಿದೆ. ಆದರೆ ಭಾಷೆಯ ಬಗೆಗೆ ಸ್ವಲ್ಪ ಕಾಳಜಿ ವಹಿಸಬೇಕು. ಎರಡನೆಯ ಸಾಲಿನ ಕಡೆಗಿರುವ ಪದವು ಮೂರನೆಯ ಸಾಲಿನ ಮೊದಲ ಪದದೊಡನೆ ಸಂಧಿಯಾಗಬೇಕಿದೆ. ಆದರೆ ಈ ಕಾರಣದಿಂದ ಚಂದಸ್ಸು ಕೆಡುತ್ತದೆ. ದಯಮಾಡಿ ಗಮನಿಸಿನೋಡಿರಿ.

  • kalpane tumba chennaagide kartik

 5. ಶಿಕ್ಷಿಸಿದರಗಡ ಮೌಢ್ಯದೆ
  ದಕ್ಷ೦ ವಿಜ್ಞಾನವ೦ ನಿವೇಧಿಸೆ ಧೂರ್ತರ್
  ಕಕ್ಷದೆಭುವಿ ಸೂರ್ಯನ ಪ್ರ-
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  ಗೆಲಿಲಿಯೋ ಬಗ್ಗೆ

  • ಛಂದಸ್ಸು ಮತ್ತು ಭಾಷಾಸ್ಪಷ್ಟತೆಗಳೆರಡೂ ಸ್ವಲ್ಪ ಶಿಥಿಲವಾಗಿವೆ. ಮತ್ತೆ ನಿಯಮಗಳನ್ನು ಗಮನಿಸಿರಿ. ಕಲ್ಪನೆ ಮಾತ್ರ ತುಂಬ ಸ್ವೋಪಜ್ಞವಾಗಿದೆ. ಹೀಗೆ ವಿಜ್ಞಾನ ಮತ್ತು ಕಾವ್ಯಗಳನ್ನು ಬೆಸೆಯುವ ಬಗೆಯ ಪರಿಹಾರಗಳು ನನಗಂತೂ ತುಂಬ ಮೆಚ್ಚು. ಗಣೇಶ್ ಕೊಪ್ಪಲತೋಟರ ಪರಿಹಾರವೂ ಇಂಥ ಜಾಡಿನಲ್ಲಿದೆ.

  • ಸೋಮ,
   ಪ್ರ prefix ಹಾಕಿ ಮಾಡೋಕೇ ಸಾಧ್ಯವೇ ಇಲ್ಲವೇ ಇಲ್ಲ. ಜಗಣವಾಗುತ್ತದೆ. ನಾನೂ ಕೈಸುಟ್ಟುಕೊಂಡೆ, ಮೂರನೆಯ ಸಾಲಿನ ಕೊನೆಗೆ ಬಂದಮೇಲೆ! ಆ ideaವನ್ನು ಬಿಸಾಕಿ ಬೇರೆ ಮಾಡದ್ದೇನೆ. ಕಲಂ ೨೫ ನೋಡಿ.

   • ಗಣೇಶ್ ಸರ್, ಪ್ರಸಾದ್,
    “ಪ್ರ prefix ಹಾಕಿ ಮಾಡೋಕೇ ಸಾಧ್ಯವೇ ಇಲ್ಲವೇ ಇಲ್ಲ”
    ನಾನು ಮೂರನೆಯ ಸಾಲಿನ ಕೊನೆಯ ಗಣ ಜಗಣವಾಗಬಾರದೆ೦ಬ ನಿಯಮ ಮರೆತೆ, ನೀವು ಹೇಳಿದ ಹಾಗೆ ಪ್ರ prefix ಸಾಧ್ಯವಿಲ್ಲ

    • ‘ಪ್ರ’ ವನ್ನು ಬಳಸಿ ಶಿಥಿಲದ್ವಿತ್ವವಾಗುವಂತೆ ಮಾಡಿದರೆ ಸಾಧ್ಯವಾಗಬಹುದಲ್ಲ! ಕನ್ನಡ ಶಬ್ದದ ನಂತರ ಸಂಸ್ಕೃತದ ಶಬ್ದ ಬಂದಾಗ ಹೀಗೆ ಮಾಡಬಹುದಲ್ಲವೇ?

 6. ಸಾಕ್ಷಿಯು ನಾನೆಂದುಲಿದನ್
  ದಕ್ಷ ಪ್ರಯಾಣಿಕನವನ್ ಬರಲು ಪೆಂಗ್ವಿನ್ನಾ
  ಪಕ್ಷಿಯು ಮಸುಕಿನ ಬೆಳಕಲಿ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  ಅಂಟಾರ್ಟಿಕದಲ್ಲಿ ಸೂರ್ಯೋದಯವಾದಾಗ ಶಿಬಿರದ ಬಳಿ ಬಂದ ಪೆಂಗ್ವಿನ್ನನ್ನು ಮೊದಲ ಬಾರಿಗೆ ನೋಡಿದ ಪ್ರಯಾಣಿಕನು ಹೀಗೆ ಹೇಳಿರಬಹುದು.

 7. ಇದು ಸದ್ಯದ ಮಾಜಿಮುಖ್ಯಮಂತ್ರಿಗಳನ್ನು ನೋಡಿ ಅವರಂತೇ ಪ್ರಯತ್ನಶೀಲ ನಾಗಿದ್ದು ! :

  ಪಕ್ಷದಲೇ ಇರುವೆನು ತಾ
  ಭಕ್ಷಣೆಗಾಮಂತ್ರಿಸಿ ತೋಳ್ಬಲತೋರ್ಪೆ ನೆಂದಾ|
  ಯಕ್ಷಯಡೆ ಕುರ್ಚಿಗಳಿಸೆ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  • ಛಂದಸ್ಸು ಸ್ವಲ್ಪ ಕೆಟ್ಟಿದೆ. ಕಲ್ಪನೆ ಸೊಗಸಾಗಿದೆ.

 8. ಶಿಕ್ಷೆಗೆ ರಾವಣನಳಿಯಲ್
  ದಕ್ಷ ವಿಭೀಷಣನಿಗೀಯೆ ಲಂಕಾ ರಾಜ್ಯ೦
  ರಕ್ಷಿಸೆ ಶಿಷ್ಟರ ಭಾರತ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

 9. ವ್ಯಾಕರಣ ತಿದ್ದಿದ್ದೇನೆ.

  ಶಿಕ್ಷೆಗೆ ರಾವಣನಳಿಯಲ್
  ದಕ್ಷ ವಿಭೀಷಣನಿಗೀಯೆ ಲಂಕಾ ಸಿರಿಯ೦
  ರಕ್ಷಿಸೆ ಶಿಷ್ಟರ ಭಾರತ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  • ಮೊದಲೇ ಹೆಚ್ಚು ಸರಿಯಾಗಿತ್ತು! ಲಂಕಾರಾಜ್ಯಂ ಎಂಬುದು ರಾಜ್ಯಮಂ ಎಂದಾದರೆ ಛಂದಸ್ಸು ಕೆಟ್ಟೀತೆಂದು ಲಂಕಾಸಿರಿ ಎಂದು ಅರಿಸಮಾಸ ಮಾಡುವುದಾಯಿತಲ್ಲ!!
   ಇದನ್ನು ಲಂಕೆಯ ಸಿರಿ ಎಂದು ಸವರಿಸಿದರೆ ಸರಿಯಾಗುವುದು.

   • ತುಂಬಾ ಧನ್ಯವಾದಗಳು.ಮೊದಲಿನ ವ್ಯಾಕರಣ ತಪ್ಪಾಗಿದೆ ಅನ್ನಿಸಿತು.”ಲ೦ಕಾ ರಾಜ್ಯ೦”- ಈ ಶಬ್ದ ಸರಿಯಾಗಿ ಒಪ್ಪುತ್ತದೆ,ಘನತೆಯನ್ನೂ ನೀಡುತ್ತದೆ .ಅಲ್ಲವೇ?.

 10. (ಕುಮಾರವ್ಯಾಸನ ಕ್ಷಮೆ ಕೋರಿ) ಪೌತ್ರೀಯನ್ನು ಪೌತ್ರಳು ಎಂದಾಗಿ ಕನ್ನಡೀಕರಿಸುವುದು ಸಾಧುವೆನ್ನುವ ಪಕ್ಷದಲ್ಲಿ

  ದಕ್ಷಾಂಗನಾಪ್ರಪೌತ್ರ
  ಳ್ದಕ್ಷಸಹೋದರನಪೌತ್ರನಂವರಿಸಲವ
  ಳ್ಗಕ್ಷೀಣತೇಜನೊಗೆದಂ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  ದಕ್ಷನ ದೌಹಿತ್ರನಾದ ಪ್ರಭಾಸನ ಪೌತ್ರಳಾದ ಸಂಜ್ಞೆಗೂ ಮರೀಚಿಯ ಪೌತ್ರ ಸೂರ್ಯನಿಗೂ ದಕ್ಷಿಣದಿಕ್ಪಾಲಕನಾದ ಯಮನು ಹುಟ್ಟಿದನು. ದಕ್ಷ ಮರೀಚಿಗಳಿಬ್ಬರೂ ಬ್ರಹ್ಮಮಾನಸಪುತ್ರರು. ಸೂರ್ಯನು ದಕ್ಷನ ದೌಹಿತ್ರನೂ ಹೌದು. ಅದಾಗಿ,

  ದಕ್ಷಾಂಗನಾಸುಪುತ್ರ
  ನ್ದಕ್ಷನಮಗಳಪ್ರಪೌತ್ರಳಂವರಿಸಲವ
  ನ್ಗಕ್ಷೀಣತೇಜನೊಗೆದಂ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

 11. ನಿಮ್ಮ ಪೌರಾಣಿಕಪ್ರಜ್ಞೆ ಸ್ತುತ್ಯ. ಆದರೆ ಪೌತ್ರಳ್ ಎನ್ನುವ ಪ್ರಯೋಗ ಅಸಾಧು. ಅದಕ್ಕಿಂತ ಮಿಗಿಲಾಗಿ ದಕ್ಷಿಣ ಎಂಬ ಸಮಸ್ಯೆಯ ಕೀಲಕಪದಕ್ಕೆ ಈ ಯಾವ ವಿವರಗಳೂ ಅನುಕೂಲಿಸಿ ಒದಗಿ ಬರವು. ಸೂರ್ಯನು ದಕ್ಷಿಣದಲ್ಲಿ ಹುಟ್ಟಿದನೆಂಬ ಅಸಂಗತಾರ್ಥಪರಿಹಾರಕ್ಕೆ ಏನೂ ನೆರವಾಗಿಲ್ಲವೆಂದು ವಿಷಾದದಿಂದ ಹೇಳಬೇಕಿದೆ:-)

  • ಸೂರ್ಯನ ಮಗನಾದರೂ ಅವನ ತೂಕದವನಾದ ಯಮನು ಭಾನುಬಿಂಬ, ಆತ ದಕ್ಷಿಣಕ್ಕೆ ಅಧಿಪತಿಯಾದನೆಂದು ಹೇಳುವುದು ನನ್ನ ಉದ್ದೇಶವಾಗಿತ್ತು. ಆದರೆ ಪೌತ್ರಳ್ ಬಗ್ಗೆ ಸಂದೇಹವಿತ್ತು 🙂 ತಿಳಿವಳಿಕೆಗೆ ಧನ್ಯವಾದಗಳು.

  • ಗಾಣೇಶ್ ಯಾರೋ ಗೊತ್ತಾಗಲಿಲ್ಲ!

 12. ಕಕ್ಷಾಚರಣಂ ಭಾಸ್ಕರ
  ದೀಕ್ಷಾ ಭ್ರಮಣಂ ಸಮಸ್ತ ವಿಶ್ವದ ನಿಯಮಂ
  ಅಕ್ಷದಿಚರಿಪೀಧರೆಯ ಪ್ರ-
  ದಕ್ಷಿಣದೊಳ್, ಭಾನುಬಿಂಬಮಿಂದುದಿಸಿತಲಾ

 13. पद्यमिदं कस्यचिन्मनसि कल्पितस्य राज्ञश्चाटुः

  अरुणांशुकस्य मृत्यो-
  र्व्याजेन जनाधिनाथ शत्रूणाम् ।
  भवदसितिमिरहतानां
  दक्षिणदिशि सपदि भानुरुदयति चित्रम् ॥
  (हे) जनाधिनाथ, भवदसितिमिरहतानां शत्रूणाम् अरुणांशुकस्य (रक्ताम्बरधरस्य, पक्षे अरुणकिरणशालिनः) मृत्योर्व्याजेन दक्षिणदिशि सपदि भानुरुदयति ।

 14. Dear Shankar,

  Please give us the translation in kannada or in english.

  Regards
  Prabhakar

  • Dear Prabhakar,

   This verse eulogises an imaginary king. The last line is a translation of the Kannada samasya given here.

   “To your enemies, O king, distraught by the darkness of your black sword, the Lord of death, dressed in red robes (pun – red-rayed. Amshuka means both a robe and a ray of light) becomes the sun who, strangely, manifests in the southern direction.
   The purport is this: Facing Yama, the presiding deity of the southern direction, is, by all means, a better option for your enemies than facing your sword.
   In order to strengthen the image of death as sun, I have used a punned adjective, arunamshuka, that is applicable to both.

   • It is needless to say that the verses of Shankar are always good:-) Especially the way of solving the prsent samasyaa is very significant. This verse has even one more suggestion that the heroes who die in the war-front, pierce through the sun’s orb and ascend the heaven. In this way also the present parihaara can
    be realized.

 15. Thanks Shankar. Beautiful imagination.

 16. Thanks Prabhakar. Thank you Sir for the value addition.

 17. ಒಂದು ಹೀನ ಪೂರಣ ::
  ಭಕ್ಷಣೆಯತಿಯಾಗಿರ್ದುದು
  ವೀಕ್ಷಿಸುತಿರ್ದೊಡೆ ಸಿನೇಮ ಗೆಳೆಯರ ಜೊತೆಗಂ |
  ಅಕ್ಷರ ಬಾಧೆಂ ಗಡ ತನು –
  ದಕ್ಷಿಣದೊಳ್, ಭಾನುಬಿಂಬಮಿಂದುದಿಸಿತಲಾ ||

  [ಅಕ್ಷರ – ಕಡಿಮೆಯಾಗದ]
  [ಬಾಧೆಯಾಗಿದ್ದು ದಕ್ಷಿಣದಲ್ಲಿ; ಭಾನುಬಿಂಬ ಪೂರ್ವದಲ್ಲೇ ಉದಿಸಿದ]

 18. ನಕ್ಷತ್ರಂಗಳೊಳಂತಾ –
  ರಿಕ್ಷದೊಳಿರದೈ ಅದಾವ ತಿಳುಮೆಯ ದಿಕ್ಕುಂ
  ಈಕ್ಷಿಸಲಾ ದಿಕ್ಸೂಚಿಯ,
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ
  [ನಮ್ಮ ತಿಳುಮೆಯ ದಿಕ್ಕುಗಳು ಭೂಮಿಯ ಮೇಲೆ ಮಾತ್ರ ಪ್ರಸ್ತುತ. ಅಂತರಿಕ್ಷದಲ್ಲಿ ಚುಂಬಕದ ಆಧಾರದ ದಿಕ್ಸೂಚಿ ಅಲ್ಲಿನ ಆಯಸ್ಕಾಂತ ಕ್ಷೇತ್ರಕ್ಕೆ (magnetic field) ಅನುಸಾರವಾಗಿ ಏನಾದರೂ ತೋರಿಸಬಹುದೆಂಬ ಕಲ್ಪನೆ]

 19. Have tried to compose a Kannada verse. Might have made some blunders.

  ಪಕ್ಷಿಧ್ವಜಮೆಸೆದಿರೆ ತಾ-
  ಮಕ್ಷಯಬಲಮಂಜನಾದ್ರಿವೋಲ್ ರಥಚರಣಾ- |
  ಧ್ಯಕ್ಷನ ನೆವದಿಂ ತತ್ತನು-
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ ||

 20. ಕವಿಶಂಕರನವಕವಿತಾ-
  ಛವಿ ಕನ್ನಡದೊಳ್ ರವಿದ್ಯುತಿ ಸುಧಾಂಶುವಿನೊಳ್|
  ಸವಿಗೂಡುವವೋಲಾದುದು
  ನವಿಲಾಗಮಿಸಿದವೊಲಾಯ್ತು ಮುಗಿಲಿನ ಪೊಳ್ತೊಳ್||

  ನಮ್ಮ ಮಿತ್ರವರ ಶಂಕರ್ ಕನ್ನಡದಲ್ಲಿಯೂ ಹಲವು ಬಾರಿ ಕವನಿಸಿದ್ದುಂಟು. ಆದರೆ ನಾನು ಬಲ್ಲಂತೆ ಕನ್ನಡದಲ್ಲಿ ಇದೇ ಅವರ ಪ್ರಥಮಸಮಸ್ಯಾಪೂರಣ. ಪರಿಹಾರವಂತೂ ಬಹಳ ಚೆನ್ನಾಗಿದೆ. ನಾರಾಯಣನ ಚಕ್ರವು ಆತನ ಬಲಗೈಯಲ್ಲಿರುವುದೆಂಬುದು ಪ್ರಸಿದ್ಧಸಂಗತಿ. ದಕ್ಷಿಣ ಎಂದರೆ ಬಲ ಎಂದೂ ಅರ್ಥವುಂಟಷ್ಟೆ. ಅಲ್ಲದೆ ಸುದರ್ಶನಚಕ್ರವು ಸೂರ್ಯನ ಸಂಕೇತವೆಂದೂ ಪ್ರಸಿದ್ಧ. ಇವೆಲ್ಲವನ್ನೂ ಗಮನಿಸಿ ಮಾಡಿದ ಪರಿಹಾರವಿದು. ಒಂದು ಸಣ್ಣ ಸವರಣೆ: “ಪಕ್ಷಿಧ್ವಜಮೆಸೆದಿರೆ ತಾನಕ್ಷಯ….” ಎಂದಾಗಬೇಕು. ಶಂಕರ್ ಹೀಗೆಯೇ ಉಭಯಭಾಷೆಗಳಲ್ಲಿ ಪದ್ಯಗಳನ್ನು ರಚಿಸಿ ಪದ್ಯಪಾನಿಗಳಿಗೆ ಮುದವೀಯಲಿ.

 21. Thank you Sir for your comments and correction

 22. ಪುಟಾಣಿ ಕಂದನ ಈ ಪ್ರಯತ್ನವನ್ನು ಎಲ್ಲರೂ ಮನ್ನಿಸುವಿರೆಂದು ಭಾವಿಸುತ್ತಾ…

  ಯಕ್ಷ ಸಮಸ್ಯೆಗದೆಷ್ಟೋ
  ದಕ್ಷ ತರದ ಪೂರಣಾಗಳನು ಸಂತಸದೀ
  ಲಕ್ಷಿಸಿದ ಹೃದಯವೆಂದಿತು
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

 23. ತ್ರ್ಯಕ್ಷಧನುಭಂಜಕಂ ವರ
  ದಕ್ಷಿಣಕರವಪಿಡಿದಗ್ನಿಯಂ ಬಲಗೊಳ್ಳ
  ಲ್ಕಾಕ್ಷಿತಿಜಾನನಚಂದ್ರನ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  • ಸಮಸ್ಯಾಪೂರಣದ ಹದ್ವೇನೋ ಚೆನ್ನಗಿದೆ. ಆದರೆ ಅರ್ಥ ಸ್ಫುಟವಾಗುತ್ತಿಲ್ಲ. ದಯಮಾಡಿ ವಿವರಿಸಿರಿ.
   ಒಂದೆರಡು ಸವರಣೆಗಳು: “”ಪೂರಣಂಗಳಂ” “ಸಂತಸದಿಂ” “ವೆಂದುದು”

   • ಅನಂತ ಧನ್ಯವಾದಗಳು…
    ಯಕ್ಷ ಸಮಸ್ಯೆಗದೆಷ್ಟೋ
    ದಕ್ಷ ತರದ ಪೂರಣಂಗಳಂ ಸಂತಸದಿಂ
    ಲಕ್ಷಿಸಿದ ಹೃದಯವೆಂದಿತು
    ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

    “ಯಕ್ಷ ಪ್ರಶ್ನೆಯಂತಿರುವ ಈ ಸಮಸ್ಯೆಗೆ ಎಷೆಷ್ಟು ಒಳ್ಳೆಯ ಪೂರಣಗಳನ್ನು ನೋಡಿ ‘ದಕ್ಷಿಣದಲ್ಲಿ ಸೂರ್ಯೋದಯ’ ವಾದಂತೆ ಭಾಸವಾಗುತ್ತಿದೆ” ಎಂಬ ಅರ್ಥದಲ್ಲಿ ಬರೆದಿದ್ದೇನೆ… ಬಾಲಿಶವಾದ ಪ್ರಯತ್ನವಾದರೂ ಮುಜುಗರವಿಲ್ಲದೆ ಬರೆದೆ. ‘ಚೆನ್ನಾಗಿದೆ’ ಎಂಬ ಶಬ್ದ ನೋಡಿಯೇ ತುಂಬಾ ಖುಷಿಯಾಗುತ್ತಿದೆ…

  • ಕ್ಷಮಿಸಬೇಕು. ಈ ಮೊದಲಿನ ನನ್ನ ಪ್ರತಿಕ್ರಿಯೆಯು ಜನನಿಯವರ ಪದ್ಯಕ್ಕೆ ಸಂಬಂಧಿಸಿತ್ತು. ಅದು ನಿಮ್ಮ ವಲಯಕ್ಕೆ ಕಣ್ತಪ್ಪಿನಿಂದ ಬಂದಿದೆ. ಇದೀಗ ನಿಮ್ಮ ಪೂರಣಕ್ಕೆ ನನ್ನ ಪ್ರತಿಕ್ರಿಯೆ:
   ಕಲ್ಪನೆ ತುಂಬ ಸೊಗಸಾಗಿದೆ. ಅತ್ಯಂತ ಕಾವ್ಯಾತ್ಮಕ; ನಮ್ಮ ಪ್ರಾಚೀನಕವಿಗಳ ಜಾಡಿನಲ್ಲಿದೆ. ಆದರೆ ಒಂದೇ ಸಣ್ಣ ಲೋಪ; ಧನುರ್ಭಂಜಕ ಎಂದು ಸಂಧಿಯಾಬೇಕು. ಹೀಗೆ ಮಾಡಿದರೆ ಛಂದಸ್ಸು ಕೆಡುತ್ತದೆ:-)
   ತ್ರ್ಯಕ್ಷಧನುಃಪರಿದಲನಂ ಎಂದು ಸವರಿಸಿದರೆ ಸರಿಯಾದೀತು.

   • ತಥಾಸ್ತು.

    ತ್ರ್ಯಕ್ಷಧನುಃಪರಿದಲನಂ ವರ
    ದಕ್ಷಿಣಕರವಪಿಡಿದಗ್ನಿಯಂ ಬಲಗೊಳ್ಳ
    ಲ್ಕಾಕ್ಷಿತಿಜಾನನಚಂದ್ರನ
    ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

    ನೀವು ಹೀಗೆಯೇ ಬೆನ್ನು ತಟ್ಟುತ್ತಾ ಇರಿ, ನಾನು ಹೀಗೆಯೇ ಬರೆಯುತ್ತಾ ಇರುತ್ತೇನೆ 🙂 ಧನ್ಯೋಸ್ಮಿ.

    • ಮೇಲೆ ತಪ್ಪಾಗಿದೆ

     ತ್ರ್ಯಕ್ಷಧನುಃಪರಿದಲನಂ
     ದಕ್ಷಿಣಕರವಪಿಡಿದಗ್ನಿಯಂ ಬಲಗೊಳ್ಳ
     ಲ್ಕಾಕ್ಷಿತಿಜಾನನಚಂದ್ರನ
     ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

 24. ಪಕ್ಷಕ್ಕೊಮ್ಮೆ ತಂದಿಟ್ಟ
  ಅಕ್ಷೋಹಿಣಿಯಷ್ಟು ಸರಂಜಾಮನ್ನು ಆಶ್ಚರ್ಯದಿಮ್
  ವೀಕ್ಷಿಸಿ ಚೇಡಿಸದಳಮ್ಮ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ !

  (ಅಪರೂಪಕ್ಕೆ ನಾನಿಂದು ತಂದಿಟ್ಟ ರಾಶಿ ತರಕಾರಿಗಳ ನೋಡಿ ನಮ್ಮಮ್ಮ ಆಶ್ಚರ್ಯ ವ್ಯಕ್ತಪಡಿಸಿದರು ಅದನ್ನೇ ನಾನು ಇಲ್ಲಿ ವಸ್ತುವಾಗಿಸಿಕೊಂಡಿದ್ದೇನೆ, ತಪ್ಪುಗಳಿಗೆ ಕ್ಷಮೆಇರಲಿ.)

 25. ರಕ್ಷಿಸೆ ಜಗವನು ತಾನುರಿ
  ದು ಕ್ಷಯಿಸುತಲಿರ್ದೊಡಂ ನಿಯತಿ ಮೀರಿಹನೇನ್|
  ದಕ್ಷತೆಯಿನೆಂದಿನಾತುಮ
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ||
  ಆತ್ಮದಕ್ಷಿಣಮ್ = ಆತ್ಮಾಹುತಿ. Every star dies. So does our Sun after exhausting its combustibility. Till then it sacrifices itself in installments each day. ಈ ಪ್ರಕ್ರಿಯೆಯಲ್ಲಿ ಎಂದಿನಂತೆ ಇಂದೂ ಉದಿಸಿದ.

 26. ೧.
  ನಕ್ಷತ್ರ ತಜ್ಞನೋರ್ವನ
  ವಕ್ಷಸ್ಥಲದ ಬಲದೊಳ್ಗಗಲ ಬಾವೇಳಲ್
  ತತ್ ಕ್ಷಣ ಲಘುವಾಗುಲಿದನ್
  ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  ೨.
  ದಕ್ಷನೃಪನಾ ದಿಲೀಪ ಸು –
  ದಕ್ಷಿಣೆಯಂ ವರಿಸಿರಲ್ ಜನರವರ ಕಂಡುಂ
  ಆ ಕ್ಷಣ ಮುದದಿಂ ನುಡಿದರ್
  “ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ”

  • ಕಾಂಚನ ಅವರು ಇನ್ನೂ ಏಕೆ ಸಮಸ್ಯಾಪೂರಣ ಮಾಡಿಲ್ಲವೆಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಇದೀಗ ಸಮಾಧಾನವಾಯಿತು. ಮೊದಲ ಪರಿಹಾರ ತುಂಬ ಸ್ವೋಪಜ್ಞವಾಗಿದೆ. ಎರಡನೆಯ ಪರಿಹಾರದಲ್ಲಿ ಅರ್ಥಸ್ಪಷ್ಟತೆ ಮತ್ತೂ ಬೇಕಿದೆ. ಉಭಯತ್ರ ಭಾಷ ಇನ್ನೂ ಬಿಗಿಯಾದರೆ ಒಳಿತು:-)

   • ದಕ್ಷಿಣ = ಬಲ, ಭಾನು = ದಿಲೀಪ, ಬಿಂಬ = ಸುದಕ್ಷಿಣೆ (ನೆಳಲು, ಹಿಂಬಾಲಿಸುವ)
    ಭಾನ ಬಿಂಬ ಎಂದು ಸಮಸ್ಯೆಯಿದ್ದರೆ, ಈ‌ಪೂರಣ ಇನ್ನೂ ಸೂಕ್ತವಾಗುತಿತ್ತೇನೋ? 🙂
    ಪದ್ಯವನ್ನಂತೂ ಬದಲಾಯಿಸಿದ್ದೇನೆ. ಆದರೂ ಸ್ಪಷ್ಟತೆ ಹೆಚ್ಚಿದೆಯೋ ಇಲ್ಲವೋ ತಿಳಿಯದು ::

    ದಕ್ಷನೃಪನಾ ದಿಲೀಪ ಸು –
    ದಕ್ಷಿಣೆಯಂ ವರಿಸಿ ಕೂಡಿ ನಡೆಯಲ್ ಪ್ರಜೆಗಳ್
    ಅಕ್ಷಿಯೊಳು ಭರಿಸಿ ನುಡಿದರ್
    “ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ”

 27. If I say that the 1st one is good, don’t take it as an indirect comment on the 2nd.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)