Apr 142012
 

ಮರಣಂ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ” ಎಂಬ ಸಾಲನ್ನುಪಯೋಗಿಸಿ ಕಂದ ಪದ್ಯವನ್ನು ಪೂರ್ಣಗೊಳಿಸಿರಿ

 

  68 Responses to “ಪದ್ಯಸಪ್ತಾಹ – ೧೬ – ಸಮಸ್ಯೆ”

 1. ಪ್ರೇಮ ವಿವಾಹವನ್ನು ಕುರಿತು-

  ಸೊರಗಲ್ ಪ್ರೇಮಿಗಳೀರ್ವರ್
  ಮರುಕ೦ ಗಯ್ಯುತಲಿ ಪಿರಿಯರೆಲ್ಲರ್ ಮಣಿಯಲ್
  ಸರಿಯಲ್ ದಿನಗಳ್ ಲಗ್ನ-
  ಸ್ಮರಣಂ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ

 2. ಕರಗಳ್ ಪಿಡಿಯುತಲಾವಧು-
  ವರರ್ಗಳಗ್ನಿಯನುಸುತ್ತಲೊಳಸರಿದ ಮನ೦
  ಮೆರೆಯಲದನುಲೋಮ ವಿಲೋ-
  ಮ ರಣ೦ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ

  ಮೆರೆಯಲು – wander
  ಅನುಲೋಮ ವಿಲೋಮ – breathing pattern
  ರಣ೦ – longing/anxious
  ಅನುಲೋಮ ವಿಲೋಮ ರಣ೦ – longing breathing pattern because of anxiety

  • ನಿಮ್ಮ ಪರಿಹಾರಗಳೆರಡೂ ತುಂಬ ಸೊಗಸಾಗಿವೆ. ಒಂದೊಂದೂ ಒಂದೊಂದು ಬಗೆಯಲ್ಲಿದ್ದು ವೈವಿಧ್ಯ-ವೈನೂತ್ನ್ಯಗಳನ್ನು ಬಿಂಬಿಸಿವೆ. ಇಂಥ ಪರಿಹಾರಗಳನ್ನು ನಮ್ಮ “ಹುಡುಗರು” ಮಾಡುತ್ತಿದ್ದಾರೆಂಬುದೇ ನನಗೆ ಅತ್ಯಂತಹರ್ಷದ ಸಂಗತಿ. ಭಾಷೆಯೂ ಬಲುಮಟ್ಟಿಗೆ ಚೆನ್ನಾಗಿದೆ. ಮುಖ್ಯವಾಗಿ ಪರಿಹಾರದಲ್ಲಿ ಒಳ್ಳೆಯ ರಸ-ಭಾವಗಳಿವೆ. ಒಟ್ಟಿನಲ್ಲಿ ಇದು distinctionನಲ್ಲಿ passಆದ ಹಾಗಿರುವ ಪರಿಹಾರ:-). ನಿಮಗೆ ನನ್ನೊಂದು ಸೂಚನೆಯೇನೆಂದರೆ ನೀವು ಒಳ್ಳೆಯ ವಸ್ತುವೊಂದನ್ನು ಆಯ್ಕೆ ಮಾಡಿ ಹಲಕೆಲವು ಪದ್ಯಗಳ ಖಂಡಕಾವ್ಯ-ಕಾವ್ಯಖಂಡಿಕೆಗಳನ್ನೇ ಬರೆಯಬಹುದು. ಯತ್ನಿಸಿ ನೋಡಿರಿ.

  • ನಿಮ್ಮ ಪರಿಹಾರಗಳೆರಡೂ ತುಂಬ ಸೊಗಸಾಗಿವೆ. ಒಂದೊಂದೂ ಒಂದೊಂದು ಬಗೆಯಲ್ಲಿದ್ದು ವೈವಿಧ್ಯ-ವೈನೂತ್ನ್ಯಗಳನ್ನು ಬಿಂಬಿಸಿವೆ. ಇಂಥ ಪರಿಹಾರಗಳನ್ನು ನಮ್ಮ “ಹುಡುಗರು” ಮಾಡುತ್ತಿದ್ದಾರೆಂಬುದೇ ನನಗೆ ಅತ್ಯಂತಹರ್ಷದ ಸಂಗತಿ. ಭಾಷೆಯೂ ಬಲುಮಟ್ಟಿಗೆ ಚೆನ್ನಾಗಿದೆ. ಮುಖ್ಯವಾಗಿ ಪರಿಹಾರದಲ್ಲಿ ಒಳ್ಳೆಯ ರಸ-ಭಾವಗಳಿವೆ. ಒಟ್ಟಿನಲ್ಲಿ ಇದು distinctionನಲ್ಲಿ passಆದ ಹಾಗಿರುವ ಪರಿಹಾರ:-). ನಿಮಗೆ ನನ್ನೊಂದು ಸೂಚನೆಯೇನೆಂದರೆ ನೀವು ಒಳ್ಳೆಯ ವಸ್ತುವೊಂದನ್ನು ಆಯ್ಕೆ ಮಾಡಿ ಹಲಕೆಲವು ಪದ್ಯಗಳ ಖಂಡಕಾವ್ಯ-ಕಾವ್ಯಖಂಡಿಕೆಗಳನ್ನೇ ಬರೆಯಬಹುದು. ಯತ್ನಿಸಿ ನೋಡಿರಿ. ಹಾಗೆಯೇ ಹಳಗನ್ನಡದ ಲಲಿತಮನೋಹರಕಾವ್ಯಗಳ ಅಭ್ಯಾಸವೂ ಯಥಾಸಮಯ ಸಾಧ್ಯವಾಗಲಿ.

   • ಗಣೇಶ್ ಸರ್:),

    ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ನಿಮ್ಮ ಸೂಚನೆಯ೦ತೆ ಯಾವುದಾದರು ವಸ್ತುವಿನ ಬಗ್ಗೆ ಹತ್ತಾರು ಪದ್ಯಗಳನ್ನ ಬರೆಯುವ ಪ್ರಯತ್ನ ಮಾಡುತ್ತೇನೆ.

 3. ಕೊರಗಿಸಲಾಜೋಡಿಯವರ
  ಹಿರಿಯರು, ಸಾಕಿನ್ನು ತಾಳ್ಮೆಯೆನುತಲಿ ನಡೆದರ್
  ಹರಿಸಿರೆ ಜಾತಿಯ ದ್ವೇಷದ
  ಮರಣಂ, ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ

  ಇದು ಒಂದು ಅಂತರ್ಜಾತೀಯ ಪ್ರೇಮ ಪ್ರಸಂಗದ ಹಿನ್ನೆಲೆಯನ್ನು ಹೊಂದಿರುವ ಪದ್ಯ. ಹುಡುಗ, ಹುಡುಗಿ ತಮ್ಮ ತಂದೆ ತಾಯಿಗಳೆ ಮದುವೆ ಮಾಡಲಿ ಎಂದು ತಾಳ್ಮೆಯಿಂದ ಕಾದಿದ್ದು ಸಾಕೆನಿಸಿ ಬೇರೆ ರೀತಿಯ ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡುತ್ತಾರೆ. ಈ ಪದ್ಯದ ಹರಕೆ ಅಂತಹ ಜಾತಿಯ ದ್ವೇಷಕ್ಕೇ ಮರಣವುಂಟಾಗಲಿ ಎಂದು.

  • ಒಳ್ಳೆಯ ಹಾಗೂ ಹೊಸಬಗೆಯ ಪರಿಹಾರ. ಸಾಮಾನ್ಯವಾಗಿ ಯಾರೇ ಆಗಲಿ, ತಮ್ಮ ಮನೋಧರ್ಮವನ್ನು ಬಯ್ತಿರಿಸಿಕೊಳ್ಳದೆ ಬರೆದಾಗ ಬರೆಹದಲ್ಲಿರಬಹುದಾದ ಸ್ವಂತಿಕೆ ಯಾವುದುಂಟೋ ಅದೆಲ್ಲವೂ ನಮ್ಮ ಈ ಪದ್ಯಪಾನದ ಹಲವರು ಸದಸ್ಯರಲ್ಲಿ ತೋರುತ್ತದೆ. ರಾಮ್, ಸೋಮ, ಪ್ರಸಾದು, ಹೊಳ್ಳ(ಯಾಕೋ ಈಚೆಗೆ ನಮ್ಮ ನಡುವೆ ಕಾಣುತ್ತಿಲ್ಲ)ಮೌಳಿ ಉಂತಾದವರ ಸಾಲಿಗೆ ನೀವಂತೂ ಸೇರಿಯೇ ಇದ್ದೀರಿ. ವಿಷಯದ ಸ್ವೋಪಜ್ಞತೆ ನಿಮ್ಮ ಅವಿಚ್ಛಿನ್ನಲಕ್ಷಣ. ಇದು ಸದಾ ಅಭಿನಂದನೀಯ.

 4. ಬೆರಸಲ್ಕಿಸುವಂ ತವರಮ
  ನೆರಕದೊಳೆರಡಳಿದು ಪೊಸತು ಕಂಚಪ್ಪಂತಾ
  ಪರಿಣಯದೊಳ್ವಧುವರರಾ
  ಮರಣಂ; ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ?

  • ಅತಿನೂತನತರಪರಿಹೃತಿ
   ಚತುರತೆಗಾಕರಮೆನಲ್ಕೆ ನಿಮ್ಮಾ ಸ್ತುತ್ಯಂ|
   ಹಿತಕರಮಪ್ಪುಪಮೆಯುಮಿದೊ
   ಜತೆಯಾಗಿರೆ ಕವಿತೆಗಪ್ಪುದಲ್ತೆ ನವಾರ್ಥಂ||

   • ನಿಮ್ಮ ಮೆಚ್ಚು ನುಡಿಯಿಂ ಧನ್ಯೋಸ್ಮಿ. ನಮನಗಳು.

  • ಜೀವೆಂ – ನಿಮ್ಮ ಕಲ್ಪನೆ ಬಹಳ ಚೆನ್ನಾಗಿದೆ. ಗಣೇಶರೆಂದಂತೆ ಅತಿ ನೂತನ ಮಾದರಿಯ ಪೂರಣ.

 5. ಧನ್ಯವಾದಗಳು. ಮೌಳಿಯವರನ್ನು ನಮ್ಮ ಸಾಲಿನಲ್ಲಿ ಸೇರಿಸಿರುವುದು ಉಚಿತವೇ? ಅವರು ಕವಿಯಾಗಿ ನಮ್ಮೆಲ್ಲರಿಗಿಂತ ಬಹಳ ಮೇಲ್ಮಟ್ಟದಲ್ಲಿದ್ದಾರೆಂದು ನನ್ನ ಅನಿಸಿಕೆ. ರಾಮ್, ಸೋಮ, ಪ್ರಸಾದು, ಹೊಳ್ಳ ಇವರೆಲ್ಲಾ ಇದನ್ನು ಒಪ್ಪುತ್ತಾರೆಂದು ನಾನು ತಿಳಿದಿದ್ದೇನೆ.

  • ನೀವು ಸ್ಪಷ್ಟೀಕರಣವನ್ನು ಬಯಸಿದ್ದು ಒಳಿತಾಯಿತು. ವ್ಯುತ್ಪತ್ತಿ-ಅಭ್ಯಾಸಗಳ ನೆಲೆಯಿಂದ ತಮ್ಮ ಅಭಿಪ್ರಾಯವೇ ನಿಜ. ಆದರೆ ನಾನಿಲ್ಲಿ ಉದ್ದೇಶಿದ್ದು ಮನೋಧರ್ಮದ ವಿಶಿಷ್ಟತೆಯನ್ನಷ್ಟೇ. ಈ ಸಾಲಿನಲ್ಲಿ ನಾನೂ ಇದ್ದೇನೆ:-). ಅಲ್ಲದೆ ನಮ್ಮಲ್ಲಿಯ ಮತ್ತೂ ಹಲವರು ಇದೇ ಸಾಲಿಗೆ ಸೇರುತ್ತಾರೆ. ಆದರೆ ನಾನು ಪ್ರಾಧಾನ್ಯವನ್ನು ಗಮನಿಸಿ ಇಷ್ಟಕ್ಕೇ ಮಿತಿಗೊಳಿಸಿದೆ. ಉದಾಹರಣೆಗೆ ಕಾಂಚನ ಇಲ್ಲಿ ಗಮನಾರ್ಹ. ಸ್ವಂತದ ಶೈಲಿಯೆನ್ನುವುದು ಇಬ್ಬಗೆಯಾದುದು. ಒಂದು ಅರ್ಥಗತ ಮತೊಂದು ಶಬ್ದಗತ. ಮೊದಲನೆಯದು ಅವರವರ ಆಲೋಚನೆ, ಮನೋಧರ್ಮ, ವ್ಯಕ್ತಿತ್ವದ ಗಹನತೆ-ವಿಲಕ್ಷಣತೆಗಳಿಂದ ಬರುವುದಾದರೆ ಎರಡನೆಯದು ವ್ಯಾಸಂಗ, ತಾಂತ್ರಿಕಪರಿಣತಿ, ಆಯಾ ಕ್ಷೇತ್ರದ ವ್ಯುತ್ಪತ್ತಿ, ಶಬ್ದ-ಛಂದಸ್ಸು-(ಕೆಲವೊಮ್ಮೆ ಅಲಂಕಾರಗಳ ವಿನ್ಯಾಸ)ಮುಂತಾದುವುಗಳಿಂದ ಬರುತ್ತದೆ. ಇದನ್ನೇ ಗಮನಿಸಿ ನಾನು ಹೇಳಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದೊಂದು ಸ್ಥೂಲಪರಾಮರ್ಶೆ:-)

   • ನಿಮ್ಮ ಸ್ಪಷ್ಟೀಕರಣಕ್ಕೆ ಧನ್ಯವಾದಗಳು.
    ನಾನಿಲ್ಲಿ ಉದ್ದೇಶಿದ್ದು ಮನೋಧರ್ಮದ ವಿಶಿಷ್ಟತೆಯನ್ನಷ್ಟೇ – ಇದು ಸ್ವಾಭಾವಿಕವಲ್ಲವೇ?
    ಈ ಸಾಲಿನಲ್ಲಿ ನಾನೂ ಇದ್ದೇನೆ:-). – ಇದು ಮತ್ತೆ ಯಾರೂ ಒಪ್ಪುವ ವಿಷಯವಲ್ಲ.

    ಇದೊಂದು ಸ್ಥೂಲಪರಾಮರ್ಶೆ:-) – ಇದಕ್ಕೇನು ಹೇಳುವುದು ಗೊತ್ತಾಗುತ್ತಿಲ್ಲ!!!!!

    ಮತ್ತೊಂದು ದೀರ್ಘ ಸ್ಪಷ್ಟೀಕರಣ ಕೊಡದಿದ್ದರೂ ಆಗುತ್ತದೆ. ನಿಮ್ಮ ಅಮೂಲ್ಯ ವೇಳೆಯನ್ನು ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ವ್ಯಯಿಸುವುದನ್ನು ನೋಡಿದರೆ ಪದ್ಯವನ್ನೇ ಬರೆಯಬಾರದೆನ್ನಿಸುತ್ತದೆ. ಅಥವಾ ಬರೆದರೂ ಪೋಸ್ಟ್ ಮಾಡಬಾರದೇನೊ…

    • ಅಯ್ಯಯ್ಯೋ!! ನನ್ನ ವೇಳೆಯ ಬಗೆಗೆ ಕಳವಳ ಬೇಡ. ನನಗೆ ಕಷ್ಟವಾದರೆ ನಾನೇ ಸುಮ್ಮನಾಅಗುತ್ತೇನೆ. ಆದರೆ ಯಾರೂ ಒಳ್ಳೆಯ ಪದ್ಯವನ್ನು ಬರೆಯುವ ನಲ್ಗೆಲಸದಿಂದ ದೂರವಾಗಬಾರದು.
     ಮುಂದೆ ನಿಮಗೆ ಕಸಿವಿಸಿಯಿಲ್ಲದಿದ್ದಲ್ಲಿ ಎಂದಾದರೂ ಈ ಬಗೆಗೆ ವಿಶದವಾಗಿ ಮಾತನಾಡೋಣ.

 6. ೧.
  ಸರಸಂಗಳಾಟದೊಳ್ಗಾ
  ಗುರುತುಗುರಿಂದೇಂ? ಸಪಂಕ್ತಿಪಲ್ದೇಮೆನುತೀ
  ಪರಿವುಡುಕಾಟದ ನವ ಕಾ –
  ಮ ರಣಂ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ?

  ೨.
  ವರ ಮಂಟಪದಿಂ ನಡೆದರ್
  ಸರಸ ವಿಹಾರ ಮಧುಚಂದ್ರಕೆಂದಾ ಯುಗಳಂ
  ಹರುಷದೊಳೊಂದಾಗಲ್ ಸೋ –
  ಮ ರಣಂ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ?
  [ಸೋಮ ರಣ – ಪೂರ್ಣ ಬೆಳದಿಂಗಳು ಎಂಬರ್ಥ]

  • ಅತಿಸುಂದರಪದ್ಯಯುಗಂ
   ಚತುರತೆಯಿಂ ರಚಿತಮಲ್ತೆ ರಾಮಕವಿಗಳಿಂ:-)
   ಕೃತಿಯಿದು ನಿಮ್ಮನುಭವಸಂ-
   ಗತಿಯೇಂ? ಸಂಕೋಚವುಳಿದು ಪೇಳ್ವುದು ಸಖರೇ!!

   • ಕವನದಿ ಶೃಂಗಾರರಸಂ
    ತವಕದಿ ಗಿಡಿಯಲ್ಕುಪಾಯಮಂ ಮಾಡಿರ್ದೆಂ |
    ಕವಿ ಕಲ್ಪನೆಯೇಂ? ಮೇಣನು-
    ಭವಮೇಂ? ತಿಳಿದಿರ್ಪರಿಲ್ಲವೀ ಸೂಕ್ಷ್ಮಗಳಂ ||
    🙂

  • ಮಂಗಳಮುಹೂರ್ತವದುಬೆಳ
   ದಿಂಗಳರಾತ್ರಿಯಬಳಿಕ್ಕನೆರೆಯಲ್ಬರ್ಪಾ
   ತಿಂಗಳದಿನವಂಕಾಯುತ
   ಸಂಗಡಿಸಿಲ್ಲಮಧುಚಂದ್ರಮಿನ್ನುಂಎನ್ನಾ

   ಇದು ಸ್ವಂತ ಅನುಭವ 🙂

   • 🙂

    ಈ ಪದ್ಯವನ್ನು ಸರಣಿಯಂತೆ ದೊಢಕ ವೃತ್ತದಲ್ಲಿ ಬೆಳೆಸುವ ಮನಸ್ಸಾಯಿತು. ಸರಣಿಯನ್ನು ಹೀಗೇ ಬೆಳೆಸಬಹುದು. ಹಿಂದಿನ ಪದ್ಯದ ಕೊನೆಯ ಪದವನ್ನುಪಯೋಗಿಸಿ – ಹೊಸ ಪದ್ಯ ಬರೆಯಬಹುದು. ಅದು ಇದೇ ವಿಷಯವಾಗಿರಬೇಕೆಂದಿಲ್ಲ. ಸ್ವಲ್ಪ nonsense ತರಹದ ಪದ್ಯಗಳನ್ನು ಬರೆಯುವುದೇ ಇಲ್ಲಿ ಸ್ವಾರಸ್ಯ. English ಅಥವ ಇತರ ರೂಢಿಯ ಪದಗಳನ್ನು ಬಳಸಿದರೂ ಸೊಗಸು. ಈ ಪದ್ಯಗಳಲ್ಲಿ ಅಂತ್ಯ ಪ್ರಾಸವೂ ಇದೆ. Some corruption of words is normal as in Limericks.

    ಎನ್ನಮನಕ್ಕಿದು ಮೋಸವು ಕೇಳಾ
    ಹನ್ನಿಯ ಮೂನಿನಭಾವವು ಜಾಳಾ ? [ಹನಿಮೂನಿನ + ಅಭಾವವು]
    ಖಿನ್ನತೆ ಮೂಡುತ ತಿಂಬುದು ಬಾಳಾ
    ಇನ್ನುವೆ ಕಾಯುತ ತಟ್ಟಿರೆ ತಾಳಾ
    [ದೋಧಕ ವೃತ್ತ – ನಾನನ ನಾನನ ನಾನನ ನಾನಾ]

    • 🙂 ಐಡಿಯಾ ಚೆನ್ನಾಗಿದೆ, ರಾಮಚಂದ್ರ. ಇದೋ ಒಂದು ಪ್ರಯತ್ನ.

     ತಾಳವ ತಟ್ಟ್ಯಾಯ್ತು ಮೇಳವ ಕುಟ್ಟ್ಯಾಯ್ತು
     ಕೂಳುಬಿದ್ದಿಲ್ಲ ಬಳ್ಳಕ್ಕೆ ಎನ್ನವ್ವೆ
     ವೇಳೆಮೀರ್ಯಾವು ಶಾಲೆಗೆ

     • ದೋಧವನ್ನು backport ಮಾಡಿದ್ದೇನೆ

      ತಾಳವ ತಟ್ಟಿದೆ ತಟ್ಟೆಯ ಮುಂದೇ
      ಮೇಳವ ಕುಟ್ಟಿದೆ ಕೊತೆಡೆ ಯಿಂದೇ
      ವೇಳೆಯು ಮೀರಿದೆ ಶಾಲೆಗೆ ಇಂದೇ
      ಕೂಳನು ತಿನ್ನದೆ ಹೋಗಲಿ ಎಂದೇ?

    • ಜೀವೆ೦ 🙂 ಒ೦ದೇ ಛ೦ದಸ್ಸಿದ್ದರೆ ಚೆನ್ನ, ಮತ್ತೆ ದೋಧಕಕ್ಕೆ ತಿರುಗಿಸುತ್ತ…
     ಶಾಲೆಗೆ ಪೋಗುವ ಮಕ್ಕಳ ನೋಡಾ
     ಕೂಲಿಯ ಪೊತ್ತಿಹನಾಳೆನ ಬೇಡಾ
     ಗಾಲಿಯು ಸುತ್ತಲು ಮುಟ್ಟಲು ಗೂಡಾ
     ನಾಳೆಯ ರಾಜರು ಮಕ್ಕಳೆ ನೋಡಾ

    • ತಥಾಸ್ತು 🙂 ದೋಧಕಸಾಲಿನ ಮುಂದಿನ ಕಂತುs

     ನೋಡಲು ಮಕ್ಕಳ ರಾಜ್ಯದ ಚಂದs
     ಸೇಡಿಗೆ ಸಿಕ್ಕರು ಕೇಡಿಗರೆಂದs
     ಬಾಡಿದ ಹೂಗಿಡಗಂಟಿಗಳಿಂದs
     ಕಾಡಿದು ನಾಡೆನಿಸಿದ್ದವರಿಂದs

     ನಿಮ್ಮ upbeat ಹಾಡನ್ನು ಹೀಗೆ derail ಮಾಡಿದೆನೆಂದು ಬೇಸರಿಸದಿರಿ; ಆದರೆ ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುತ್ತಿರುವುದು ಇದನ್ನೇ ತಾನೇ?

    • ಓಹೋ… ಚೆನ್ನಾಗಿದೆ…

     ಆಶಾವಾದಿತನದಿ೦ದ…
     ಇ೦ದಿಗು ಇರ್ಪರು ಧಾರುಣಿ ಮಿತ್ರರ್
     ಮ೦ದಿಗೆ ತಾ೦ ಸರಿ ದಾರಿಯ ತೋರ್ಪರ್
     ಚ೦ದವಿಹೀಧರೆಯ೦ದವ ಕಾಯ್ವರ್
     ಸ೦ದಿಹ ಕಷ್ಟದ ಧ್ವ೦ಸವ ಮಾಳ್ಪರ್

    • ಸೋಮ, ಆಶಾವಾದಕ್ಕೆ ಜಯವಿರಲಿ. ಒಂದು ವೇಳೆ ಮುಂದಿನವರು ದೈವೀಸಹಾಯವನ್ನು ಬೇಡಬೇಕಾದಲ್ಲಿ ಹೀಗೆ ಕೇಳಿಕೊಂಡಾರೇನೊ:

     ಮಾಳ್ಪರಿಗಂದದದಾರಿಯ ತೋರಯ್
     ನೋಳ್ಪರ ಗೆಯ್ಮೆಯ ದಾರಿಗೆ ತಾರಯ್
     ಬೇಳ್ಪೆವು ಕೈಮುಗಿದೆಮ್ಮನು ಸಾರಯ್
     ಸೂಳ್ಪರ ಬೆಂಬಲ ನಿನ್ನುಳಿದಾರಯ್?

     ಕೊಕ್ 🙂

     • ದಾರ ಯಮಂ ಪಿಡಿದಿರ್ಪನೆ? ಸಾಗೈ
      ಧೀರಸಮೀರನ ದಾರಿಗೆ ಮಾಗೈ
      ವೀರಶಿರೋಮಣಿ ಕೇಳದೆ? ಕೂಗೈ
      ಕಾರಣಜನ್ಮ, ಯಶೋನ್ನತನಾಗೈ

    • ನಾಗರ ಹಾವದು ಶ್ರೇಷ್ಠವದೇಕೈ ?
     ಹಾಗಲ ಕಾಯಿಯ ಮೇಲ್ಮೆಯದೇಕೈ ?
     ಮೀಗರ ಕಲ್ಪನೆಯುತ್ತರ ಸಾಕೈ ? [ ಮೀಗರ – meager – deficient in quantity / quality ]
     “ಹಾಗೆಯೆ ಕಚ್ಚಲು ಬೀಳ್ವುದು ಮೈಕೈ”

    • ಮತ್ತದೇ ಐತ್ವಕ್ಕೆ ತಂದಿಟ್ಟರೆ ನಾವು ಮುಂದುವರೆಯೋದು ಹೇಗೆ ಸ್ವಾಮಿ?! 🙂 ಚಂದ್ರಮೌಳಿ, ನಿಮ್ಮ ಪದ್ಯ ನನ್ನ ಹುಲುಬುದ್ಧಿಗೆ ಮೀರಿದ್ದು – ದಯಮಾಡಿ ಅರ್ಥ ಬಿಡಿಸಿ ತಿಳಿಸಿಕೊಡಬೇಕು.

     • ಹಿಂದಿನ ಪದ್ಯದಲ್ಲಿ ಆಶಾವಾದಿಯಾಗಿ ವರಪಡೆದು ಮುನ್ನಡೆದವನಿಗೆ…ಯಮನು ಅಡ್ಡಿಬಂದಾನೆ? ಅವನು ಧೀರನಾಗಿ ಮುನ್ನಡೆಯಬೇಕು. ಈ ಕೂಗು ಆ ವೀರನಿಗೆ ಕೇಳಬೇಕು. ಎಲ್ಲರೂ ಕಾರಣ ಜನ್ಮರೇ. ಯಶಸ್ಸನ್ನು ಪಡೆಯಬಲ್ಲವರೇ. ಅದನ್ನರಿತು ಸಾಧಿಸಲಿ ಎಂಬ ಹಾರೈಕೆ.

     • ಧನ್ಯೋಸ್ಮಿ.

    • ಕೈಯೊಳು ಬೆಟ್ಟದ ನೆಲ್ಲಿಯ ಕಾಯೆಂ
     ದಾಯಿತು ಗಾದೆಯ ಮಾತದು ಖಾಯಂ
     ತಾಯಿಯು ಹಾಕಿದ ಉಪ್ಪಿನ ಕಾಯಂ
     ಬಾಯಿಗೆ ಹಾಕಲದಂದಿಗೆ ಮಾಯಂ

     • ಮಾಯೆಯ ಮಂತ್ರವದಾಡುವ ಕಕ್ಷಂ
      ಜಾಯೆಯೊ ಗಂಡನೊ ಪಕ್ಷ ವಿಪಕ್ಷಂ
      ಲಾಯವಿದೀಜಗದಶ್ವಸುದಕ್ಷಂ
      ಮೇಯತಲೋಡಲಿ ಕರ್ಮಸುರಕ್ಷಂ

     • ರಕ್ಷಣೆ ದೇವಗೆ ಕೇಳುವೆ ಬೇಗs
      ಅಕ್ಷರವಾಗಿದೆ ಕ್ರೌರ್ಯದ ಓಘs
      ತಕ್ಷಕ ರೂಪದೆ ಕಾರ್ಯದ ವೇಗs
      ಭಕ್ಷಿಸುತಿರ್ಪುದ ಶಾ೦ತಿಯನೀಗs

    • ಸೋಮ, ಗಾಲಿಯು ಸುತ್ತಿತು ಮುಟ್ಟಿತು ಗೂಡಾ 🙂

     ಈಗಿನ ಮಕ್ಕಳ ಪಾಡನು ನೋಡಿಂ
     ಬಾಗಿದೆ ಬೆನ್ನದು ಹೆಚ್ಚಿದ ಲೋಡಿಂ
     ಆಗದು ಆಟಗಳಾಡಲು; ಪಾಡಿಂ
     ಬೇಗನೆ ತಪ್ಪಿಸಿಕೊಳ್ಳಿರಿ, ಓಡಿಂ

     ಆದರೆ ನಿಮ್ಮ ಪದ್ಯ ಕೊಂಚ ambiguous ಆಗಿದೆಯಲ್ಲ?

     • ಜೀವೆ೦ ಚೆನ್ನಾಗಿದೆ 🙂 ambiguous ಯಾವುದನ್ನು ಕುರಿತು ಹೇಳಿದ್ದೀರಿ?

      ಓಡುವ ಮೋಡವು ಚ೦ದವು ಕಾಣs,
      ಬೇಡನು ಬಿಟ್ಟನು ಸರ್ರೆನೆ ಬಾಣs,
      ಪಾಡುವ ಹಕ್ಕಿಗೆ ಮಾಮರ ತಾಣs,
      ನೋಡಿದ ಸ್ವಪ್ನವನೀಪರಿ ಜಾಣs

    • ಧನ್ಯೋಸ್ಮಿ ಸೋಮ.

     ಜಾಣಿಲಿ ಬೇಡನೆ ಸುಮ್ಮನೆ ಪಾಪಂ
     ಕಾಣದ ಹಕ್ಕಿಯ ಕೊಂದಿಹೆ ; ಪಾಪಂ
     ಕಾಣದೆ ಅಪ್ಪನ ಅತ್ತಿದೆ ; ಪಾಪಂ
     ಮಾಣಿಸು ಇಲ್ಲವೆ ಈಯುವೆ ಶಾಪಂ

     ನಿಮ್ಮ ಬೇಡ ಮೋಡಕ್ಕೆ ಬಾಣವನ್ನು ಬಿಟ್ಟ (ಅದರೆ ಹಕ್ಕಿ ಮಾಮರಕ್ಕೆ ಬಿದ್ದಿದ್ದಂತೂ ನಿಜ); ನಾನು ವಾಲ್ಮೀಕಿಗೆ ಬಾಣನನ್ನು ಬಿಟ್ಟಿದ್ದೇನೆ 🙂

     ಜಾಣಿಲಿ – ಅಜ್ಞಾನಿ; ಅಭಾವಾರ್ಥದಲ್ಲಿ ‘ಇಲಿ’ ಆದೇಶವಾಗುತ್ತೆ (ಭಟ್ಟಾಕಳಂಕ) ಸದ್ದಿಲಿಗತ್ತಲು ಕತ್ತಲದೆತ್ತಲು – ‘ತಾನಾಜಿ’ಯಲ್ಲಿ ಕುವೆಂಪು ಪ್ರಯೋಗ.

     > ambiguous ಯಾವುದನ್ನು ಕುರಿತು ಹೇಳಿದ್ದೀರಿ?

     ನಿಮ್ಮ ಪದ್ಯದಲ್ಲಿಯ ಮೊರೆ ಕಲ್ಪನೆಯೋ, ಈ ಪದ್ಯಮಾಲೆಯ ಬಗ್ಗೆಯೋ ಸ್ಪಷ್ಟವಾಗಲಿಲ್ಲ 😀 ಕಾಲೆಳೆತಕ್ಕೆ ಹೇಳಿದೆ ಅಷ್ಟೇ. ಕೊಕ್.

     • ಸುಭಿಕ್ಷದಲ್ಲಿಯೂ ಇಲಿ ಆದೇಶವಾಗಿ ಬರುತ್ತೆ, ಅದರದನ್ನು ಭಟ್ಟಾಕಳಂಕ ಯಾಕೋ ಹೇಳಿಲ್ಲ. Perhaps he doesn’t want to state the obvious.

     • ಶಾಪೆನೆ ಪೆ೦ಡಿರು ಪೇಳಲು, ಗ೦ಡರ್
      ಕೋಪದಿ ಬೈಯಲು ಪೋಲಲು ಥ೦ಡರ್
      ತಾಪದೊಳೀಪರಿ ಗೈಯಲು ಬ್ಲ೦ಡರ್
      ಪಾಪದೆ ದ್ವಾದಸಿ ಪೂರ್ವವ ಕ೦ಡರ್

      ಶಾಪ್ = shopping

    • 🙂 ಚೆನ್ನಾಗಿದೆ ಸೋಮ. ಈಗಷ್ಟೇ ದ್ವಾದಶಿ ಫಳಾರ ಮುಗಿಸಿ ಬಂದು ಕುಳಿತೆ

     ಕಂಡಿರಲಿಲ್ಲವು ಈ ಪರಿ ತಾಪಂ;
     ಬಂಡೆಯು ಕಾದಿರಲಾಗಲೆ ಗೋಪಂ
     ಮಂಡಿಸಲಲ್ಲಿಯೆ ನೆಟ್ಟನೆ … ಪಾಪಂ;
     ಕಂಡಿರಲಿಲ್ಲವು ಈ ಪರಿತಾಪಂ

    • ತಾಪವನೀಡಿದ ದೇವನೆ ಕಾವಾ
     ಪಾಪರದೆನ್ನುತ ಹೊಯ್ಯುವ ತೇವಾ
     ಹೇಪರಮಾತ್ಮನೆ ಒಪ್ಪಿಕೊ ಸೇವಾ
     ದೀಪವು ಧೂಪವು ತಿನ್ನಲು ಖೋವಾ

    • ಖೋವಿಗೆ ಪೌಡರು ತುಂಬಿದ ಘುಂಡಂ
     ಖಾವಿಯ ಅಂಗಿಯ ತೊಟ್ಟನು ಗುಂಡಂ
     ಧಾವಿಸಿ ಕಾಡಿಗೆ ಇಟ್ಟನು ಈಡಂ
     ಮಾವಿನ ಕಾಯಿಯು ಬಿದ್ದಿತು ಧಡ್ಡಂ [ಧಡ್ಡನೆ]

     ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ? ಅದಕ್ಕೆ ತಂತ್ರವೇ ಆಗಬೇಕು. ಖಾವಿಯ ಅಂಗಿ – safety jacket; ಅದು florescent orange ಬಣ್ಣದ್ದಾಗಿರುತ್ತೆ.

  • ಎರಡು ಪದ್ಯಗಳೂ ತುಂಬ ಹಿಡಿಸಿದವು, ರಾಮಚಂದ್ರ. ಬಹಳ ಚೆನ್ನಾಗಿವೆ.

 7. अक्षक्रीडारतयो-
  रन्योन्यजयप्रगल्भयोः क्रमशः ।
  फलकतले शाराणां
  मरणमहो भाति नूतनवधूवरयोः ॥

  • ಶಂಕರ್ ಅವರು ಎಂದಿನಂತೆ ಸಮಸ್ಯೆಯನ್ನು ತಾವೇ ಸಂಸ್ಕೃತೀಕರಿಸಿಕೊಂಡು ಅತ್ಯದ್ಭುತಪರಿಹಾರವನ್ನೂ ನೀಡಿದ್ದಾರೆ. ಅವರ ಪರಿಹಾರ ನಿಜಕ್ಕೂ ಅವರ ಕಲ್ಪನೆ-ಕವನಶಿಲ್ಪನೆಗಳಿಗೆ ತಕ್ಕಂತಿದೆ. ಅವರ ಪದ್ಯಕ್ಕೆ ನನ್ನ ಭಾವಾನುವಾದ ಹೀಗಿದೆ:

   ಉರುಟಣೆಯೆಡೆಯೊಳ್ ಪಗಡೆಯ-
   ನುರುಗತಿಯಿಂ ಗೆಲ್ಮೆಗೆಂದು ಪೂಡಿರೆ ಮಣೆಯೊಳ್|
   ಭರದಿಂ ಸೆಣಸುವ ಕಾಯ್ಗಳ
   ಮರಣಂ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ!!

   (ಉರುಟಣೆಯು ಇಂದಿನ ಮದುವಎಯ ಆರತಿ-ಅಕ್ಷತೆಯ ಹಾಗೆ ಮದುಮಕ್ಕಳ ವಿನೋದ-ವಿಲಾಸಗಳಿಗೆ ಪುಟವೀಯುವ ಹಳಗಾಲದ ಸೊಗಸಿನ ಸಂಪ್ರದಾಯ)

  • Hi All, this is my first foray into this site. Greetings to all.
   I hope I am replying to the proper thread. I want to add to Dr. Shankar’s version of the samasyaa
   मरणमहो भाति नूतनवधूवरयोः ॥
   I just want to add that in SamasyaaPoorana in Sanskrit, there is another technique that can be used – that of the samaasa. As an example, I submit my attempt. (Please forgive my usage of the English Font.)

   Kavinaa saptama sarge
   varnita-mithunam KumaaraSambhavaGranthe |
   Shivayoh Soochita-Taaraka-
   Maranamaho Bhaati NootanaVadhooVarayoh ||

   Some points :
   1 . The word Mithunam is used here in the sense of Sexual Enjoyment.
   2. I hope the word Kavi is enough when his work is named.
   3. Since Kaalidaasa thought it appropriate to end his work by suggesting the Sambhava of Kumaara without needing to portray the inevitable, the samaasa “Soochita-Taaraka-Maranam” suggests itself. Soochitam Taarakasya Maranam Yena tat Mithunam

   Comments and criticisms are welcome

   • Dear Sudheer – Welcome to padyapaana. I hope along with Dr. Shankar and others, you will add to the richness of Sanksrit poetry in here.

   • In my hurry, I made a factual error in the poem. I should have been referring to the Eighth Canto instead of the Seventh.
    Please read the corrected first line as

    Ashtama Sarge Sukaveh

    Thanks

    • Also, I think some Maatraa problem in the word Granthe. I hope to correct it when I get time (maybe to Kaavye) Teaches me not to shoot off without one revision at least

     • ಪದ್ಯಪಾನಂ ಸುಧೀರಾಗತಿಸ್ಫೂರ್ತಿಯಿಂ
      ಮದ್ಯಪಾನಪ್ರಮತ್ತಸ್ಥಿತಿಪ್ರಸ್ತುತಂ|
      ಹೃದ್ಯಮೀ ರೀತಿಯಿಂದಂ ಸಮಸ್ಯಾರ್ದನಂ
      ಸದ್ಯದೀ ಸೌಖ್ಯಮಿರ್ಕೆಂದುಮೆಂದೆನ್ನುವೆಂ||

      ಸ್ವಾಗತಮಿಹ ಮಹನೀಯ!
      ಸ್ವೀಯಕವಿತಯಾ ಕಿಲಾಸಿ ಸಂಜ್ಞಾನ್ವರ್ಥ!!
      ಪ್ರಥಮಪದೇsಪಿ ಸುಧೀರ!
      ಪ್ರಕಟಚತುಷ್ಪಾದಚಾತುರೀಕಸ್ತ್ವಮಸಿ:-)

      ವಿದ್ವದ್ರಸಿಕಾಗ್ರಣಿಯೂ ಕವಿಗ್ರಾಮಣಿಯೂ ಸಹೃದಯಶಿರೋಮಣಿಯೂ ಆದ ಸುಧೀರರಿಗೆ ಪದ್ಯಪಾನದ ಸಮಸ್ತರ ಪರವಾಗಿ ನಲ್ಬರವು.
      ದಯಮಾಡಿ ಕನ್ನಡಲಿಪಿಯಲ್ಲಿ ಟಂಕಿಸಿದರೆ ನಮಗೆ ಮತ್ತೂ ಮುದವಾದೀತು. ನಿಯತವಾಗಿ ನೀವು ಎಲ್ಲ ಕಂತುಗಲಲ್ಲಿಯೂ ಪಾಲ್ಗೊಳ್ಳಬೇಕೆಂದು ನಮ್ಮ ಕೋರಿಕೆ.

     • Sudheer, Welcome to padyapana Sir:)

     • Soma, Thank you. Please call me when you are free. My number is 9901997991.

     • Ganesh, thank you.
      I will soon figure out how to use kannada fonts and lipi.
      Please critically evaluate my effort. Kanda is new to me.
      Thanks for your generous comments. So far in my life only those who would have heard me sing would say ಪ್ರಕಟಚತುಷ್ಪಾದಚಾತುರೀಕಸ್ತ್ವಮಸಿ:-)

 8. ಸ್ಮರಹತಿ ತಾಪಕೆ ಬಳಲುತ
  ಸೊರಗುತಲಿರ್ಪುವು ಚಕೋರವಕ್ಕಿಗಳೆರಡು೦
  ಪರಿಣಯಗೈದೊಡೆ ದಿನಪನ
  ಮರಣ೦ ಸೊಗಯಿಪ್ಪುದಲ್ತೆ ಮದುಮಕ್ಕಳ್ಗ೦

  • ರಘುರವರೆ – ದಿನಪನ ಅಸ್ತಕ್ಕೆ ಮರಣವೆಂದ ಬಗೆ ಹಾಗು ನಿಮ್ಮ ಕಲ್ಪನೆ ಚೆನ್ನಾಗಿದೆ. ಚಕೋರವಕ್ಕಿಗಳಿಗೆ ಮದುಮಕ್ಕಳೆಂಬ ಹೋಲಿಕೆ ನನಗೆ ಹಿಡಿಸಿತಾದರೂ, ಏನಾದರೂ ತಾಂತ್ರಿಕ ದೋಷವಿರಬಹುದೇ ಎಂಬ ಸಂದೇಹ ತಲೆಯೆತ್ತಿದೆ. ಇದು ಸರಿಯಾಗಿದೆಯೆಂದಾದರೆ, ಪೂರಣಗಳ ಹೊಸದೊಂದು ದಾರಿ ಕಂಡಂತಾಗುತ್ತದೆ. ಗಣೇಶರ ಉತ್ತರ ನೋಡೋಣ.

  • ನಿಜಕ್ಕೂ ತುಂಬ ಒಳ್ಳೆಯ ಪರಿಹಾರ. ಚಕೋರಗಳು ಚಂದ್ರನ ಬೆಳ್ದಿಂಗಳನ್ನೇ ಹೀರಿ ಬದುಕುವುವೆಂಬುದು ಕವಿಸಮಯ. ಇದನ್ನು ಆಧರಿಸಿದ ನಿಮ್ಮ ಕವಿತೆ ಚೆಲುವಾಗಿದೆ. ದಯಮಾಡಿ ಮತ್ತೂ ಹಳಗನ್ನಡದಲ್ಲಿ ಯತ್ನಿಸಿರಿ. ನಿಮ್ಮ ಕಲ್ಪನೆಗೆ ಇನ್ನಷ್ಟು ಕಸುವು ಬರುವುದು.

 9. ತರಲೊಂದಧಿಕ ದಿನ ಬಿಡುವ
  ವರವಾಯಿತದಗಲಿ ಬಾಳಲಾರದವರ್ಗಂ
  ಧುರರಾದೊಡೇಮವರ್ಗಳ
  ಮರಣಂ, ಸೊಗಯಿಪ್ಪುದಲ್ತೆ ಮದುಮಕ್ಕಳ್ಗ೦

  [ನೇತಾರರ ಸಾವು ತರುವ ರಜದ ದಿನವೂ ಮದುಮಕ್ಕಳಿಗೆ ಸೊಗವನ್ನು ತರುತ್ತದೆ ಎಂಬ ಕಲ್ಪನೆ]

  • ರಾಮಚಂದ್ರಸತಿಯೆಂಬ ಬಲ್ಮೆಯಂ
   ನೀಮಿದೀ ಕವಿತೆಯಿಂದೆ ಸಾಧಿಸಿ-
   ರ್ಪಾ ಮಹೀಯತೆಯನೇ ವೊಗಳ್ವೆನಾಂ?
   ಕ್ಷೇಮಮಾಯ್ತು ನಗೆಗಬ್ಬಮೊಪ್ಪುತುಂ!!

 10. ಹರಿಬಿಡದ ಕಾಮದಸ್ಖಲಿ
  ತರು ಹರೆಯದಿ ರಕ್ಷಿಸಿರ್ದ ಬ್ರಹ್ಮಾಚರಣಂ
  ಸ್ಮರನಿಂ ಮರಣಿಸೆ ಕೌತುಕ
  ಮರಣ೦ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ

  • ಪರಿಹಾರಕ್ರಮವು ತುಂಬ ನವೀನವೂ ಅರ್ಥಗರ್ಭಿತವೂ ಅಗಿದೆ. ಅಲ್ಲದೆ ಮುಕ್ತಕಾಮಕ್ಕೆ ನೀಡಿದ ಎಚ್ಚರಿಕೆಯೂ ಹೌದು:-). ವಿಶೇಷತಃ ಕೌತುಕ ಎಂಬ ಪದಕ್ಕೆ ಮಂಗಳ ಎನ್ನುವ ಅರ್ಥವಿರುವುದನ್ನು ಪರಿಭಾವಿಸಿದಾಗ ಮದುಮಕ್ಕಳ ಬ್ರಹ್ಮಚರ್ಯಾಶ್ರಮದ ವ್ರತಮರಣವು ಅನ್ಯಾಯದ್ದೂ ಅಮಂಗಳದ್ದೂ ಅಲ್ಲದೆ ಮತ್ತೂ ಮಿಗಿಲಾದ ಧರ್ಮಾಚರಣೆಗಾಗಿ ವಿಹಿತವಾದ, ಸರ್ವಾಶ್ರಮರಕ್ಷಣಕ್ಷಮವೂ ಆದ ಗೃಹಸ್ಥಾಶ್ರಮದ ಅನುಸಂಧಾನಕ್ಕಾಗಿ ಎಂಬ ಧ್ವನಿಯೂ ಹೊಮ್ಮಿ ತನ್ಮೂಲಕ ಪ್ರಕೃತಪರಿಹಾರವು ಮಿಗಿಲಾದ ಧರ್ಮವೀರರಸದ ಮಟ್ಟಕ್ಕೆ ಮುಟ್ಟುತ್ತದೆ.

   • ನೀರಸಮೋ ಸಾರಸಮೋ
    ಸೇರಿರ್ಪ ರಸಾಂಶ ಕಣವನವಧಾನಿಸುತಂ
    ಬೇರೊಂದು ನವಾಂಶದ ಸಿಂ-
    ಗಾರಂ ತೊಡಿಸೆಸೆವ ನಿಮ್ಮ ಬಲ್ಮೆಗೆ ಮಣಿದೆಂ

    • ಸಂತಸದ ಸುದ್ದಿಯರುಹ
     ತ್ಯಂತ ಮುದವನಿತ್ತಿರಲ್ತೆಮಗೆ ನೀವೀಗಳ್|
     ಸ್ವಂತದೊಳಿರಿಸಿಕೊಳದೆ ಪೆಸ
     ರೆಂತವಧಾನಿಸುತನಂದೆನುತೆಮಗೆ ಪೇಳೌ||

     • ’ಅವಧಾನಿಸುತನೆನೆಲು” ಅವಧಾನಿಸುತ್ತ
      ’ಎವೆಯಾಡಿಸುತ” ಎನಲು ಎವೆಯಾಡಿಸುತ್ತ
      ಸವೆಯದೈ ಪದ ಪದ್ಯದಡಕ ಬೆರೆದಿರೆ ಚಿತ್ತ
      ವಿವರ ಮರತೆರೆ ಕವನ ಪಠನಕೇರ್ವುದು ಪಿತ್ಥ

     • Lol…

 11. ಧನ್ಯವಾದಗಳು ಸರ್. ಕಾಂಚನಾ ಅವರ ಪರಿಹಾರವಂತೂ ಅತಿರಮಣೀಯ.

 12. ತೆರನೆಲ್ಲ ರಣವ ಕಾಯದಿ
  ಹರೆ ಭೇದಗಳ ಮೆರೆಸುತ್ತೆ ಮರೆಸದೆಲವನಂ|
  ಬರಲವು ಬಿಡೀಗೆವೆಯ ವಾ
  ಮರಣಂ ಸೊಗಯಿಪ್ಪುದಲ್ತೆ ಮದುಮಕ್ಕಳ್ಗಂ||

  ಉತ್ತರಾರ್ಧಕ್ಕೆ ಸ್ಫೂರ್ತಿ: ನನ್ನ ಮೆಚ್ಚಿನ ಗಾಯಕ ಸುರೇಶ್ ವಾಡ್ಕರ್ ಹಾಡಿರುವ ಹಿಂದಿ ಚಿತ್ರಗೀತೆಯ ಒಂದು ಸಾಲು – ಮೊಹಬ್ಬತ್ ಮೆ ಜುಬಾ (zuban) ಛುಪ್ ಹೋ ತೊ, ಆಂಖೇ ಬಾತ್ ಕರತೇ ಹೈ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)