Apr 242012
 

 

 

ಕನ್ನಡರೂಪಾಂತರ

ನಿರುಪಹತಿಸ್ಥಲಂ ಸುರಮಣೀ ಪ್ರಿಯದೂತಿಕೆ ತಂದುಕೊಟ್ಟ ಕ-

ಪ್ಪುರದೆಲೆ, ಯಾತ್ಮಕಿಂಪಹ ಸುಭೋಜನ, ವುಯ್ಯಲೆ ಮಂಚ, ಮೊಪ್ಪು ತ-

ಪ್ಪರಿತ ರಸಜ್ಞರೂಹೆ ತಿಳಿವಂಥಹ ಲೇಖಕ, ಪಾಠಕೋತ್ತಮರ್

ದೊರಕಿದರಲ್ತೆ,   ಕಾವ್ಯಗಳ ಸುಮ್ಮನೆ ಲೇಖಿಸೆನಲ್ಕೆ ಶಕ್ಯಮೇ

ಮೂಲ ಪದ್ಯ

 ನಿರುಪಹತಿಸ್ಥಲಂಬು ರಮಣೀಪ್ರಿಯದೂತಿಕ ತೆಚ್ಚಿಯಿಚ್ಚು ಕ

ಪ್ಪುರವಿಡೆ ಮಾತ್ಮಕಿಂಪಯಿನ ಭೋಜನ ಮುಯ್ಯಲಮಂಚ ಮೊಪ್ಪು ತ

ಪ್ಪರಯು ರಸಜ್ಞುಲೂಹ ತೆಲಿಯಂಗಲ ಲೇಖಕ ಪಾಠಕೋತ್ತಮುಲ್

ದೊರಕಿನ ಗಾಕ ಯೂರಕ ಕೃತುಲ್ರಚಿಯಿಂಪುಮಟನ್ನ ಶಕ್ಯಮೇ

ಆಂಧ್ರ ಕವಿತಾ ಪಿತಾಮಹನೆಂಬ ಖ್ಯಾತಿಯ ಅಲ್ಲಸಾನಿಪೆದ್ದನ ರಚಿಸಿದ ಪದ್ಯವಿದು.  ಕಾವ್ಯರಚನೆಗೆ ಯಾವ ಸೌಕರ್ಯಗಳಿದ್ದರೆ ಅನುಕೂಲ ಎಂಬುದರ ಪಟ್ಟಿ ಇಲ್ಲಿದೆ ! ಜನ ಜಂಗುಳಿಯಿರದ ಏಕಾಂತ ಪ್ರದೇಶ, ಮಧ್ಯ ಮಧ್ಯೆ ಪ್ರಿಯೆ ತನ್ನ ದೂತಿಯ ಮೂಲಕ ಕಳಿಸಿ ಕೊಡುವ ಕರ್ಪೂರ ತಾಂಬೂಲ, ಮನಸ್ಸಿಗೆ ತೃಪ್ತಿಯಾಗುವ ರುಚಿಕರವಾದ ಭೋಜನ, ಕುಳಿತು ತೂಗಾಡಲು ಉಯ್ಯಾಲೆಯ ಮಂಚ, ತನ್ನ ರಚನೆಯಲ್ಲಿ ಸರಿ ತಪ್ಪುಗಳನ್ನು ತಿಳಿಯುವಂಥ ರಸಜ್ಞರು, ಕವಿಯ ಆಶಯವನ್ನು ಊಹೆಯಿಂದ ಗ್ರಹಿಸಬಲ್ಲ ಲಿಪಿಕಾರರು, ಪಾಠಕರು ಇವೆಲ್ಲಾ ಸೌಕರ್ಯಗಳಿರದೆ, ಸುಮ್ಮನೆ ಕಾವ್ಯಗಳನ್ನು ಬರೆಯಿರಯ್ಯ ಎಂದರೆ ಸಾಧ್ಯವೇ ಎನ್ನುತ್ತಾನೆ ಪೆದ್ದನ !

  17 Responses to “ಪದ್ಯಬರೆಯಲು ಪರಿಕರಗಳೇನು? ಅಲ್ಲಸಾನಿ ಪೆದ್ದನನ ಪಟ್ಟಿ”

 1. ಶ್ರೀಯುತ ಮೌಳಿಯವರೇ, ಅಲ್ಲಸಾನಿಪೆದ್ದನ ಬಗ್ಗೆ ಕೇಳಿದ್ದೆ, ಕವನ ಓದಿರಲಿಲ್ಲ, ಈ ಕಾಲದ ಕವಿಗಳಿಗೆ ಈ ಸವಲತ್ತುಗಳು ಪ್ರಾಯಶಃ ಕನಸೇ! ಆದರೂ ಹಲವು ಅನಾನುಕೂಲತೆಗಳ ನಡುವೆಯೂ ಕಾವ್ಯ ಜನಿಸುವುದು ಇಂದಿನ ವಿಶೇಷವೆನ್ನೋಣವೇ? ಧನ್ಯವಾದ.

  ಜನಗಳಿರದೇಕಾಂತ ದೇಶದಿ
  ಮನದೊಡತಿ ತಾಂಬೂಲ ಪುನರಪಿ
  ಘನತರದ ಭೋಜನವ ನೀಡಿರೆ ಸುಕೃತಘಳಿಗೆಯದು
  ತನುವಿಡಲು ಉಯ್ಯಾಲೆ ಮಂಚವು
  ಹನಿಹನಿಯನಳೆವಂತ ರಸಿಕರು
  ಸನದು ಪಾಠಕ ಲಿಪಿಯರಿತನಿರೆ ಕಾವ್ಯ ಜನಿಸುವುದು

 2. ನನಗೂ ಆಗಾಗ ಎಷ್ಟೋ ವಿಷಯಗಳ ಬಗ್ಗೆ ಹೀಗೆಯೇ ಅನ್ನಿಸುವುದುಂಟು 🙂

  ಹಿಂದಿನ ಕರ್ನಾಟಕ ಇಂದಿನ ಆಂಧ್ರದೊಳಗೆ ಬಹಳವಾಗಿ ಬಹುಕಾಲದವರೆಗೆ ಚಾಚಿತ್ತಾದ್ದರಿಂದ ಖ್ಯಾತಕರ್ನಾಟಕಗಳಲ್ಲಿನ ‘indigenous’ ವೃತ್ತಗಳ ಬಳಕೆ ತೆಲುಗಿನಲ್ಲಿಯೂ ಇರುವುದು ಆಶ್ಚರ್ಯವೇನಲ್ಲ, ಆದರೂ ಚಂಪಕಮಾಲೆಯನ್ನು ಕಂಡು ಆಶ್ಚರ್ಯವಾಯಿತು.

 3. ತೆಲುಗು ಕನ್ನಡ ಕವಿತೆಗೆಷ್ಟೋ
  ಬಳಗ ವುಂಟಂತೆಯ ಕವಿಗಳಲಿ
  ಒಲವೆನೆಗೆ ರುಚಿ ಯದನು ಹಂಚುಲು ಗೆಳೆಯ ರಸಿಕರ್ಗೆ
  ಸುಳಿವುದೀ ಪದ ಕನ್ನಡದೊಳುಂ
  ಬಳಕೆ ಸಂಸ್ಕೃತ ಕಬ್ಬದಲ್ಲಿದೆ
  ಬಳಸಿ ಭಟ್ಟರ ಭಟ್ಟಿಯದುವೇ ಸೊಗಸಿತೈ ಜೀವೆಂ

 4. ಮಡದಿ ಮೀಟಿಂಗೆನುತಲಾಫೀ
  ಸೆಡೆಗೆ ತೆರೆಳಿರೆ ತರಳಪಾಲನ
  ವಡುಗೆಕಸಮುಸುರೆಗಳು ಮನೆಗಲಸಗಳು ಹೆಗಲೇರೆ
  ಹಿಡಿದ ಕೆಲಸದ ಪೂರದಲಿ ತುಸು
  ಬಿಡುವು ಕೊಡದೀ-ಮೈಲಿನಲಿ ಕೆಳ
  ಗಿಡುತಲರಚುವ ಫೋನಿನಲಿಯೊಣ ಗದ್ಯವೇ ಗತಿಯೈ

  • ಕಸ ಮುಸುರೆಯೋ ಕೂಸತೊಳೆವುದೊ
   ಕಸಕುವೊದೊ ಬಟ್ಟಗಳ ಮಾರ್ಜನ
   ವೆಸಗುವೊದೊ ಬಸಿಯುವುದೊ ಬೋನವ ನೆಲೆಯನೆತ್ತುವುದೋ
   ನಸುನಗುತ ನಿರಪೇಕ್ಷೆಯಿಂದವ
   ನೆಸಗುವುದೆ ಲಯಭರಿತಮಾಗಿರೆ
   ಪಸರಿಸವೆ ಪದ್ಯಗಳು ಗದ್ಯದ ಜಡತೆಯನ್ನಳಿದು

   • ಪೊರೆದ ಕಡಲಿನ ನಿಲುಕುಮೀರಿದ
    ಮೊರೆತವನೆ ಪೀರ್ದುಬ್ಬಿ ಸೂಸುವ
    ಹರಿಣಧರನನು ಜಟೆಯ ಶಿರದಲಿ ಧರಿಸಿ ಮೋದದಲಿ
    ಸರಿವ ಕಾಲದ ಲಯವ ಪಿಡಿದ
    ಚ್ಚರಿಯ ತಾಂಡವವೆಂಬ ಕುಣಿತವ
    ಮೆರಸುವವಗರಿದಲ್ಲವಾಶು ಕವಿತ್ವ, ನನಗಷ್ಟೇ

    🙂

 5. ಚಂದ್ರಮೌಳಿಯವರು ನನಗೆ ತುಂಬ ಪ್ರಿಯವಾದ ತೆಲುಗುಪದ್ಯಗಳಲ್ಲೊಂದನ್ನು ಸೊಗಸಾಗಿ ಕನ್ನಡಕ್ಕೆ ಪರಿಚಯಿಸಿದ್ದಾರೆ. ಇದಕ್ಕೆ ಮೂಲವೆನ್ನಬಹುದಾದ ಕನ್ನಡದ ಇದೇ ವೃತ್ತದ ಪದ್ಯವೊಂದನ್ನು ಸೂಕ್ತಿಸುಧಾರ್ಣವದಲ್ಲಿ ಮಲ್ಲಿಕಾರ್ಜುನನು ಹೀಗೆ ದಾಖಲಿಸಿದ್ದಾನೆ:

  ನಿರುಪಹತಿಸ್ಥಳಂ, ಮೃದುತರಾಸನಂ, ಒಳ್ಳುಣಿಸು, ಇಂಪುದಂಬುಲಂ,
  ನೆರಪಿದ ಪುಸ್ತಕಪ್ರತತಿ, ಲೇಖಕ-ವಾಚಕಸಂಗ್ರಹಂ, ನಿರಂ-
  ತರಗೃಹನಿಶ್ಚಿತಸ್ಥಿತಿ, ವಿಚಾರಕಸಂತತಿ, ಸತ್ಕಳತ್ರಸಾ-
  ದರತೆಯನುಳ್ಳ ಸತ್ಕವಿಯುಮಂ ಈಸುವುದಾಗದೆ ಕಾವ್ಯವಾರ್ಧಿಯಂ? (೧ -೭೦)

  ಪೆದ್ದನನ ಪದ್ಯವನ್ನು ನಾನು ಹಿಂದೆ ಶಾರ್ದೂಲವಿಕ್ರೀಡಿತದಲ್ಲಿ ಹೀಗೆ ಅನೂದಿಸಿದ್ದೆ:

  ಏಕಾಂತಸ್ಥಳಿ, ಕಾಂತೆಯಾಳಿ ನೆರಪಲ್ ಕರ್ಪೂರತಾಂಬೂಲಂ, ಅ-
  ಸ್ತೋಕಪ್ರೀತಿಕರಾನ್ನಂ, ಊಗಲಿಕೆ ಮೇಣ್ ಉಯ್ಯಾಲೆ,ಕಾವ್ಯೌಚಿತೀ-
  ಪಾಕಜ್ಞರ್, ಮನದೂಹೆ ಬಲ್ಲ ಲಿಪಿಕಾರರ್ ಪಾಠಕರ್ ದಕ್ಕಿರಲ್
  ಸಾಕಲ್ಯಂ ಕೃತಿಯಕ್ಕುಂ; ಅಲ್ಲದೆ ಒರೆಯಲ್ಕೇಂ ಸುಮ್ಮನಿನ್ನಕ್ಕುಮೇ?

  ಆಸಕ್ತರು ಹೆಚ್ಚಿನ ವಿವರಗಳಿಗೆ ನನ್ನ ಈಚಿನ ಪುಸ್ತಕ ’ಕಾವ್ಯಕಲ್ಪ’ದ “ಕಾವ್ಯರಚನೆಗೆ ತಕ್ಕ ಪರಿಸರ – ಪರಿಕರ” ಎಂಬ ಲೇಖನವನ್ನೇ ನೋಡಬಹುದು.

  ಭಟ್ಟರ ಪದ್ಯವೂ ಸೊಗಸಾಗಿದೆ. ಆದರೆ ನಮ್ಮ ಹಿಂದಿನ ಕವಿವರರೂ ಅಂಥ ಅನುಕೂಲಗಳಿಲ್ಲದೆಯೇ ಕವನಿಸಿದ್ದಾರೆ. ಅಷ್ಟೇಕೆ, ಅಲ್ಲಸಾನಿ ಪೆದ್ದನನು ಈ ಪದ್ಯದಲ್ಲಿ ಎಲ್ಲ ಸವಲತ್ತುಗಳಿಲ್ಲದೆ ಕವನಿಸರಾರೆನೆನುತ್ತಲೇ ಇಷ್ಟೊಂದು ಚೆಲುವಾದ ಕವಿತೆಯನ್ನು ಅಶವಾಗಿ ಹೇಳಿದ ಪರಿಯನ್ನು ಕಂಡಾಗ ನಮ್ಮ ಅನಿಸಿಕೆ ತಪ್ಪೆನಿಸದು.

  • ಧನ್ಯವಾದಗಳು, ನಾನೂ ವೃತ್ತಗಳಲ್ಲಿ ತೊಡಗಿಕೊಳ್ಳಬೇಕೆಂಬ ಬಯಕೆ ಇದೆ, ಇನ್ನೂ ಅದು ಸಾಧ್ಯವಾಗಿಲ್ಲ, ಮುಂದಿನ ಕೆಲವು ವಾರಗಳಲ್ಲಿ ಪ್ರಯತ್ನ ಪೂರ್ವಕವಾಗಿ ಅಂಬೆಗಾಲಿಕ್ಕಲು ಮುಂದಾಗುತ್ತೇನೆ, ತಮ್ಮೆಲ್ಲರ ಸಹಕಾರವಿರಲಿ.

  • ನೈರಂತರ್ಯ ಸುದೀಕ್ಷೆಯಿಂ ಹೃದಯಿಸಲ್ ಪ್ರಾಚೀನ ಸಾಹಿತ್ಯಮಂ
   ಪಾರಂಪರ್ಯಕಲಾಭ ನಾಟ್ಯಕರಣಂ ಛಂದೋದ್ಯಲಂಕಾರಮಂ
   ಪಾರಲ್ ನೂರ್ಬಗೆ ಯೊಂದೆ ಮೂಲ ರಸಮಾನಂದಂ, ಗಣೇಶಾಖ್ಯತಾಂ
   ಸಾರೋದಾತ್ತದಿ ಪದ್ಯಪಾನಿಗಳ ಪ್ರೋತ್ಸಾಹಿಪ್ಪುದೇ ಹೃದ್ಯಮೈ

 6. ಪೆದ್ದನನು ಪೇಳಿರ್ಪುದೆಲ್ಲವ –
  ದಿದ್ದರೇಸರಿಯೆನ್ನುತೊಪ್ಪುವೆ
  ಮೊದ್ದ ನಾ ತಿಳಿಪೇಳಲಾರೆನು ದೂತಿಯೇಕೆನುತ ?
  [ಅಥವಾ :: ಎಲ್ಲಾ Ok, ದೂತಿ ಯಾಕೆ ?] 🙂

  • ಕವಿವರನ ಸತಿ ರಾಣಿಯೈ ಪತಿ
   ಗವಸರದ ಪುಡಿ ಕಾರ್ಯಗಳ ತಾ
   ನವಳೆ ಮಾಳ್ಪಳೆ?ಯೋಜಿಸುವಳದ ದೂತಿಯಿಂದಲ್ತೆ !:-)

   • ತಾಂಬುಲವ ತಾ ಮೆದ್ದ ಕವಿ ಭೇ-
    ಷೆಂಬೆನಲು ತಾ ಕಾತರಿಸುತಿರೆ
    ಕಾಂಬಲಾಗದ ಸತಿಯು ಮನದುದ್ವೇಗ ಹೆಚ್ಚಿಸಳೆ?
    ಬೆಂಬಲಿಪ ಸತಿ ಜಾಣೆಯಾದೊಡೆ
    ತಿಂಬ ಸಾಮಗ್ರಿಗಳನೆಲ್ಲವ
    ಸಂಬಳದವರ ಕೈಲೆ ಮಾಡಿಸಿ ತಾನೆ ಒಯ್ಯುವಳೈ
    🙂

 7. ಏಕಸತಿ ಗೃಹವೇಕ ವಿಲ್ಲದ
  ನೇಕ ಭೋಗಿಗಳಾ ಕವೀಶ್ವರ
  ನಾಕವೈಭವದೊಂದು ಪದ್ಧತಿ ದಾಸಿయుಪಚಾರಂ

 8. ಅನುವಾದಗಳು ಒ೦ದಕ್ಕಿ೦ತ ಒ೦ದು ಉತ್ತಮವಾಗಿದೆ 🙂

  ನನ್ನದೊ೦ದು ಸ೦ದೇಹ 😉

  ಭೋಜನವತಿ೦ದು ಕರ್ಪೂರದೆಲೆ ಸವಿಯುತ ವಿ-
  ರಾಜಿಸಲದುಯ್ಯಾಲೆ ತೂಗುತಿರಲು
  ಸೋಜಿಗವದೊರೆಯೆ ಕವಿ ಕಾವ್ಯಗಳನಲ್ಲಿ ತಾ೦
  ಸಾಜದೊಪ್ಪುವುದಲ್ತೆ ಸುಖನಿದ್ರೆಯು೦?

 9. ಇರದೆಲಷ್ಟೆಲ್ಲ ಪರಿಕರ ಸುಮ್ಮನೆ ಬರೆಯಲು
  ಬರದೆನಲು ಪೆದ್ದನನೆನಲು ಕಾರಣ|
  ಇರಲಿಲ್ಲವಾತನೀ ಕಾಲದೊಳು ನೋಡಲಿ
  ಲ್ಲ ರಚನೆಯೆ ಪದ್ಯಪಾನದೊಳೆಮ್ಮವು||

  • ಇರದೆಲಷ್ಟೆಲ್ಲ ಪರಿಕರ ಸುಮ್ಮನೆ ಬರೆಯಲು
   ಬರದೆನುತೆ ಪೆದ್ದನನೆನಲು ಕಾರಣ|
   ಇರಲಿಲ್ಲವಾತನೀ ಕಾಲದೊಳು; ನೋಡಲಿ
   ಲ್ಲ ರಚನೆಯೆ ಪದ್ಯಪಾನದೊಳೆಮ್ಮವು||

 10. ಇರದೆಲಷ್ಟೆಲ್ಲ ಪರಿಕರ ಬರಿದೆ ಕವನಿಸಲು
  ಬರದೆಂದು ಪೆದ್ದನನೆನಲು ಕಾರಣಂ|
  ಇರದಿರ್ದು ಮೇಣ್ ನೋಡದಿರ್ದುದೀಕಾಲದೆ
  ಮ್ಮ ರಗಳೆಯ ಪದ್ಯಪಾನದೊಳೊಂದನುಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)