Dec 172012
 
ಹೂಮರ

ಹೂಮರ

ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗೆ ಇಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ

  88 Responses to “ಪದ್ಯಸಪ್ತಾಹ ೫೦: ಚಿತ್ರಕ್ಕೆ ಪದ್ಯ”

  1. ಪಸಿರನಾ೦ ನೀಡುತಿಹೆನುಸಿರನಾ೦ ನೀಡುತಿಹೆ
    ಬಿಸಿಲನ೦ ಸಹಿಸುತಲಿ ನೆರಳನೀವೆ
    ಕುಸುಮದಾ ರೂಪದೊಳ್ ಪರಿಮಳವ ಸೂಸುತ್ತೆ
    ಪಸಿವನ೦ ನೀಗಿಸುವೆ ದು೦ಬಿಗಳ್ಗೆ

    ನನ್ನ ಚೊಚ್ಚಲ ಪದ್ಯ.

    • ಶ್ರೀಧರ ಅವರೇ! ಸ್ವಾಗತ. ನಿಮ್ಮ ಚೊಚ್ಚಲ ಪದ್ಯವು ಬಲುಮಟ್ತಿಗೆ ಸೊಗಸಾಗಿದೆ.ಬಿಸಿಲನಂ ಎಂಬುದು ವ್ಯಾಕರಣಶುದ್ಧವಲ್ಲ. ಬಿಸಿಲಂ ಎನ್ನಬೇಕು. ಆಗ ಛಂದಸ್ಸು ಕೆಡುತ್ತದೆ:-) ಬಿಸಿಲನ್ನು ಎಂದು ಸವರಿಸಬಹುದು. ಈ ಬಂಧವು ಹೊಸಗನ್ನಡಕ್ಕೆ ಒಗ್ಗುವ ಕಾರಣ ಇಂಥ ಸವರಣೆ ಸಾಧ್ಯ. ಆದ್ರೆ ಇಡಿಯ ಪದ್ಯವು ನಡುಗನ್ನಡದಲ್ಲಿರುವ ಕಾರಣ ಆ ದಿಸೆಯಲ್ಲಿ ಸಮತೋಲನವು ಬರುವಂತೆ ತಿದ್ದಿದಲ್ಲಿ ಮತ್ತೂ ಒಳಿತು. ಆಗ ಬಿಸಿಲನೂ ಎಂದು ಹೇಳಬಹುದು.ಇದೇ ರೀತಿ ಪಸಿವನಂ ಕೂಡ. ಪಸಿವಂ ಎಂಬುದು ಸಾಧು. ಪಸಿವನೂ ಎಂದು ತಿದ್ದುವುದು ಯುಕ್ತ. ಪೂರ್ವಕವಿಗಳನ್ನು ಚೆನ್ನಾಗಿ ಒದಿರಿ. ವಿಶೇಷವಾಗಿ ಲಕ್ಷ್ಮೀಶನನ್ನು ಓದಿರಿ.

      • ಸಾರ್, ಧನ್ಯವಾದಗಾಳು.

        ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದುದು. ನಾನು ಮೊದಲು, ಬಿಸಿಲನ್ನು ಮತ್ತು ಹಸಿವನ್ನು ಎಂಬ ಪದಗಳನ್ನೇ ಬಳಸಿದ್ದೆ. ನಂತರ ಹಳೆಗನ್ನಡದ ರೂಪಕೊಡಲು ಹೋದ ಕಾರಣ ಹೀಗಾಯ್ತು. ಖಂಡಿತ ಇನ್ನುಮುಂದೆ ಓದಲು ಶುರುಮಾಡುತ್ತೇನೆ.

  2. ಮಣ್ಣಿನಿಂದೆದ್ದಿರುವ ಬೆಟ್ಟವದು ಪ್ರಕೃತಿಗೆ
    ಮಣ್ಣಿನಿಂದುದಿಸಿರ್ಪ ವೃಕ್ಷ ಖೇಚರಕೆ
    ಮಣ್ಣಿನಿಂ ಕಟ್ಟಿದಾ ಮನೆ ಬೇಕು ಮನುಜಗೆ
    ಮಣ್ಣು ತಾಂ ಶಾಶ್ವತವು ಅನ್ಯವಲ್ಲ |

    • ರಾಜಗೋಪಾಲ್ ಅವರೇ,

      ಪದ್ಯವೂ ಅದರ ಭಾವವೂ ಸೊಗಸಾಗಿವೆ. ಆದರೆ ಮೊದಲ ಹಾಗೂ ಮೂರನೆಯ ಸಾಲುಗಳ ಕಡೆಯ ಪದಗಳು ಕರ್ಷಣವಿಲ್ಲದೆ (ಕಡೆಯ ಅಕ್ಷರವನ್ನು ಎಳೆದು ಓದದೆ) ಐದು ಮಾತ್ರೆಗಳ ಲೆಕ್ಕಕ್ಕೆ ಬಾರವು. ಆದುದರಿಂದ ಹೀಗೆ ಸವರಿಸಬಹುದು:

      ……………………ಬೆಟ್ಟವು ನಿಸರ್ಗಕ್ಕೆ
      ………………………………….
      ……………………….ಮಾನವಗೆ
      ………………ಶಾಶ್ವತವದನ್ಯವಲ್ಲ

      • ಶ್ರೀ ಗಣೇಶ್ ರವರೇ
        ನನ್ನ ಮೊದಲನೆಯ ಪ್ರಯತ್ನವಾದ್ದರಿಂದ ಆದ ನ್ಯೂನತೆಯನ್ನು ತಿಳಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು.ಮುಂದೆ ಇಂತಹ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

  3. ಮನೆ ಮಣ್ಣಿನದಾದೊಡಂ ತೊಡಂಕೇಂ?
    ಮನಮಂ ಮೋಹಿಪ, ಮೇರೆಮೀರಿ ಮೆಯ್ಯೊಳ್|
    ಮನನೀಯಸುಮಂಗಳಂ ತಳರ್ದೊಂ-
    ಘನವೃಕ್ಷಾಶ್ರಯಮಿಲ್ಲದಿರ್ಪುದೊಳ್ಪೇಂ?

    (ಔಪಚ್ಛಂದಸಿಕವೆಂಬ ಅರ್ಧಸಮವೃತ್ತದಲ್ಲಿ ರಚಿಸಿದ್ದೇನೆ)

    ಗಿರಿಗೆ ನಲ್ಮೆಯ ನೆರೆಯೊ, ಮನೆಗೆ ಬಲ್ಮೆಯ ವರವೊ
    ಸರಿದಾರಿಗೊಪ್ಪುತಿರ್ಪಾಸರೆಯ ಕರೆಯೋ?
    ಹರಿದಂತರಕ್ಕೆಲ್ಲ ಹಿರಿಗಾಪೊ ಹೂರೂಹೊ?
    ಮರನಿದೇಂ ಪರಿಪೂರ್ಣದಾರ್ಪು, ಸಲೆ ಸಯ್ಪು!!

    (ಸರಳವಾದ ಚೌಪದಿ)

  4. ಒಂದು ಭೋಗ ಷಟ್ಪದಿ ರಚಿಸಿ ಇಲ್ಲಿ ಅಂಟಿಸಿದ್ದೆ. ಆದರೆ ಪದ್ಯಪಾನ ವೆಬ್‌ಸೈಟ್‌ನ ತಾಂತ್ರಿಕ ತೊಂದರೆಯಿಂದಲೋ ಯಾಕಂತ ಗೊತ್ತಿಲ್ಲ, ನನ್ನ ಷಟ್ಪದಿ ಕಾಣೆಯಾಗಿದೆ. ಅದಕ್ಕೆ ಮತ್ತೊಮ್ಮೆ ಅಂಟಿಸುತ್ತಿದ್ದೇನೆ.

    = = =

    ಬೋಳುಗುಡ್ಡದಲ್ಲಿ ನೋಡು
    ಹಾಳು ಬಿದ್ದ ಮನೆಯ ಪಕ್ಕ
    ಢಾಳವಾಗಿ ಹೂವು ಬಿಟ್ಟ ಮರವು ನಿಂತಿದೆ
    ಕೂಳು ಗಳಿಕೆ ಕೆಲಸದಲ್ಲಿ
    ತಾಳತಪ್ಪದಂತೆ ನಡೆಯೆ
    ಬಾಳಿನಲ್ಲಿ ಸುಖವು ಸಿಗುವುದೆಂದು ಹೇಳಿದೆ

    = = =

    • ನಿಮ್ಮ ಮೊದಲ ಷಟ್ಪದಿ ಬರಬೇಕಿತ್ತು. ಅದರ ಮಿಂಚಂಚೆ ನನಗೆ ಬಂದಿದೆ. ಆದರೆ ಇಲ್ಲಿ ಕಾಣುತ್ತಿಲ್ಲ. 🙁
      ಕಾರಣ ಹುಡುಕುವ ಪ್ರಯತ್ನ ಮಾಡುತ್ತೇನೆ.

    • ನಿಡುಗಾಲದಿಂದಲೂ ಭೋಗಕ್ಕೆ ಮನಸೋಲ್ತ
      ಪಡಿಮೆ ನಿಮ್ಮದು; ಸಾಕ್ಷಿಯಿದಕೆ ನಿಮ್ಮಯ ಮಿಗಿಲು
      ನಿಡಿದಾದ ಬರೆಹಗಳೆ ’ಚಿತ್ರಾನ್ನ’ ಮುಂತಪ್ಪವಂಕಣಂಗಳೆನುವೆನಾಂ|
      ಬಡಪದ್ಯಪಾನಕ್ಕೆ ಭಾಮಿನಿಯನೀವುದಯ್!
      ಸಡಗರದೆ ಕುಸುಮಮಂ ಸೂಡುವುದವಳ್ಗೆ ನೀಂ
      ಬಿಡುತಿರಲು ಬಿಗುಮಾನವನ್ನಾಕೆ ಮೆರೆಯುವುದು ಮರ್ತೆ ವಾರ್ಧಕ್ಯವನ್ನೂ!!:-)

    • ” ‘ಪದ್ಯ’ ನನ್ನ ಚಹದ ಕಪ್ಪಲ್ಲ “ವೆಂದವರು, “ಪದ್ಯ ಪಾನ”ಕ್ಕೆ ಬಂದಿದ್ದೀರಾ !! ತುಂಬಾ ಸಂತೋಷ. ಆತ್ಮೀಯ ಸ್ವಾಗತ.

  5. ಅತ್ಯಗಾಧವದಾ ಪರ್ವತದ ತಡಿಯಲ್ಲಿ
    ನಿತ್ಯಾರ್ದ್ರಸತ್ವದೀ ವೃಕ್ಷ ಕಿರಿದದರಡಿಯ-
    ಗತ್ಯಕ್ಕೆ ಕಟ್ಟಿದಾ ಕಿರಿಯ ಗುಡಿಸಿಲಿನಲ್ಲಿ
    ನಿತ್ಯ ಜೀವಿಸುತಿರ್ಪ ನರನು ಕುಬ್ಜನಲ್ತೆ ||

    • ರಾಜಗೋಪಾಲರೇ! ಈ ರಚನೆಯಲ್ಲಿ ಛಂದಸ್ಸೇ ಇಲ್ಲವಾಗಿದೆ!!! ದಯಮಾಡಿ ಮೊದಲ ಪಾಠಗಳನ್ನೋದಿ ಬರೆಯಿರಿ:-)

  6. ಗುಡಿಯೊಳ್ ಪೂಜೆಯ ಗೈಯುತಿರ್ದಬಗೆಯ೦ ಪೇಳಲ್ಕೆ ಸೊಲ್ಸಲ್ಗುಮೇ
    ಗಿಡದಿ೦ ಪೂಗಳ ಪೆರ್ಚಿನರ್ಚನೆಯನಾ ಶ್ರದ್ಧಾಳುಗಳ್ ನಿತ್ಯವು೦
    ಬಿಡದೊಲ್ ಮಾಳ್ಪುದ ಕ೦ಡು ಕೇಡುಬಗೆವರ್ ಪಾಳ್ಗಯ್ಯೆ, ಪೂವೆಲ್ಲಮ೦
    ತೊಡುವೆ೦ ಸ೦ಸ್ಕೃತಿ ಪುಟ್ಟಿಬರ್ಪುದನೆ ನಾ೦ ಕಾಯ್ವೆ೦ ಗಡ೦ ಸ೦ತತ೦

    ಮತಾ೦ಧರಿ೦ದ ಭಿನ್ನವಾದ ಪಾಳ್ಗುಡಿ ಮತ್ತೆ ದೇಗುಲವಾಗುವವರೆಗೂ ಹೂವನ್ನು ಹೊರುತ್ತೇನೆ ಎ೦ದು ಗಿಡ/ಮರ ಶಪತ ಮಾಡಿದ ಕಲ್ಪನೆ.

    • ಸೋಮ! ಪದ್ಯವೇನೋ ಚೆಲುವಾಗಿದೆ. ಆದರೆ ಸ್ವಲ್ಪ ಹಳಗನ್ನಡದ ಘಮಬೇಕು:-)
      ಉದಾ: ಪೂಜೆಯಂ, ಬಿಡದವೊಲ್, ಮಾಳ್ಪುದಂ.. ಈ ರೂಪಗಳಿಂದ ಛಂದಸ್ಸಿಗೆ ಭಂಗ ಬರುವುದು:-) ಹೀಗಾಗಿ ಪ್ರತ್ಯೇಕವಾದ ಸವರಣೆ ಬೇಕು.

      • ಗಣೇಶ್ ಸರ್,

        ಸರಿಪಡಿಸಲು ಪ್ರಯತ್ನಿಸಿದ್ದೇನೆ, ಸರಿಯಿದೆಯೇ ತಿಳಿಸಿ

        ಗುಡಿಯೊಳ್ಗರ್ಚನೆ ಗೈಯುತಿರ್ದಪುದನಾ೦ ಪೇಳಲ್ಕೆ ಸೊಲ್ಸಲ್ಗುಮೇ
        ಗಿಡದಿ೦ ದೇವಗೆ ಪೂಗಳಿತ್ತು ನಮಿಸಲ್ ಶ್ರದ್ಧಾಳುಗಳ್ ನಿತ್ಯವು೦
        ಗಡಮೀ ಚೆಲ್ವನು ಕ೦ಡು ಕೇಡುಬಗೆವರ್ ಪಾಳ್ಗಯ್ಯೆ, ಪೂವೆಲ್ಲಮ೦
        ತೊಡುವೆ೦ ಸ೦ಸ್ಕೃತಿ ಪುಟ್ಟಿಬರ್ಪುದನೆ ನಾ೦ ಕಾಯ್ವೆ೦ ಗಡ೦ ಸ೦ತತ೦

  7. ಹಸಿರಿನ ನಡುವಲಿ ತರುವದು ನಿಂತಿದೆ
    ಹೊಸತನ ತುಂಬಿಹ ಅಲರಿನೊಡೆ |
    ನಸುಕಿನಲಿಬ್ಬನಿ ಬೀಳುತಲಿದ್ದರೆ
    ಅಸದಳ ಚೆಲುವದು ಭೂಮಿಯೆಡೆ ||

    • ಪ್ರಯತ್ನವು ಸ್ತುತ್ಯ. ಆದರೆ ಎರಡನೆಯ ಸಾಲಿನಲ್ಲಿ ಒಂದೆಡೆ ಸಂಧಿಯಾಗಿಲ್ಲ.
      ಹೊಸತನ ತುಂಬಿರುವಲರಿನೊಡೆ ಎಂದು ಸವರಿಸಿದಲ್ಲಿ ಸರಿಯಾದೀತು.

  8. ಚಂದsದ ಬೆಟ್ಟsದಿ ಅಂದsದ ಮರವುಂಟು
    ಮಂದಿs ಕಣ್ಣಿsಗೆ ಬಲುಸುಖsವು | ಬೊಮ್ಮಯ್ಯ
    ನಿಂದೇನು ಕಸುವೋ ಶರಣೆಂಬೆ

    [ಜಾನಪದ ತ್ರಿಪದಿಯಲ್ಲಿ ಪ್ರಯತ್ನ]

    • ಭಟ್ತರೆ! ಒಳ್ಳಿತು. ಎಲ್ಲ ಸೊಗಸಾಗಿದೆ. ಆದರೆ ಎರಡನೆಯ ಸಾಲಿನಲ್ಲಿ ಒಂದು ಅಕ್ಷರ ಹೆಚ್ಚಾಗಿದೆ. ಅದು ಬಲುಸುಖವು ಎಂಬುದಕ್ಕೆ ಬದಲಾಗಿ ಬಲುಸುಖ ಎಂದಾದರೆ ಸರಿಯಾದೀತು. ಇಲಲ್ ವಾದರೆ ವಿಷ್ಣುಗಣದ ಎಡೆಯಲ್ಲಿ ರುದ್ರಗಣ ಬರುವುದು. ಇದು ತ್ರಿಪದಿಯ ಲಕ್ಷಣಕ್ಕೆ ವಿರುದ್ಧ.

      • ಧನ್ಯವಾದಗಳು, ತಿದ್ದಿ ಪ್ರಕಟಿಸಿದ್ದೇನೆ:

        ಚಂದsದ ಬೆಟ್ಟsದಿ ಅಂದsದ ಮರವುಂಟು
        ಮಂದಿs ಕಣ್ಣಿsಗೆ ಬಲುಸುsಖ | ಬೊಮ್ಮಯ್ಯ
        ನಿಂದೇನು ಕಸುವೋ ಶರಣೆಂಬೆ

  9. ಸುಂದರವಾದ ಶೀರ್ಷಿಕೆಗೆ ಅತಿ ಸುಂದರವಾದ ಕವನಗಳನ್ನು ರಚಿಸಿದ ಸರ್ವರಿಗೂ ನಮನಗಳು.
    ನನ್ನಿಂದ ಇಂಥ ರಚನೆಗಳು ಕಷ್ಟ ಸಾಧ್ಯವಾದರೂ ಸಂತೋಷವನ್ನು ಸವಿಯಲು ಯಾರದೂ ಆಡ್ಡಿ ಇಲ್ಲ ತಾನೇ!
    ತಮ್ಮೆಲ್ಲರ ಪ್ರಯತ್ನ ಮುಂದುವರಿಯಲಿ.ಆನಂದ ಗೃಹಣ ನಮ್ಮದಾಗಿರಲಿ. ತಮ್ಮೆಲರಿಗೂ ಶುಭಕಾಮನೆಗಳು.
    ನಿನ್ನೆಯ ಆಷ್ಟಾವಧಾನ ಅತ್ಯಂತ ಸಂತೋಷವನ್ನು ತಂದಿತು.ಧನ್ಯವಾದಗಳು.

    • ಸ್ವಾಗತವು ನಿಮಗಿಲ್ಲಿ ಪದ್ಯದ
      ಭೋಗವನ್ನೊರೆದುಂಬ ತಾಣಕೆ
      ಭಾಗವಹಿಸುತ ಪಾನಿಸಿರಲೆಮಗೆಲ್ಲ ಸಂತಸವೈ ||
      ಸಾಗುವೀ ಪದ್ಯಂಗಳೆರಕವ
      ದಾಗಮಿಪ ರಸಿಕರ್ಗೆ ಮೀಸಲು
      ಪೂಗಳಿರೆ ದುಂಬಿಗಳಿಗೇಕೌತಣಕದಾಹ್ವಾನ

  10. ನಗುವಂ ಬೀರುತಲಿರ್ಪುದೈ ತರುವಿದುಂ ಮೈದುಂಬಿ ಪುಷ್ಪಂಗಳಂ
    ಮಗುವಂ ಪೆತ್ತಿರುವಂತ ಪೆಣ್ಣೊಡನೆಯೇ ಪೈಪೋಟಿಯೊಡ್ಡಿರ್ಪುದೇಂ ?
    ಸೊಗವಂ ಮಕ್ಕಳ ಕಂಡು ತಾನಲಿಯುವೀ ಭೂತಾಯ ವಾತ್ಸಲ್ಯದೊಳ್
    ಯುಗಮೊಂದೇ ಕ್ಷಣವಪ್ಪುದೈ ಮನುಜಗಂ ಸೂರಾವದಾಗಿರ್ದೊಡೇಂ

    • ಗತಿಸೌಂದರ್ಯಸಮಾಹಿತಂ ಸುಮಧುರಂ ನಾವೀನ್ಯಧನ್ಯಂ ಭವ-
      ನ್ಮತಿನಿಷ್ಪನ್ನಮನೋಜ್ಞಪದ್ಯಮಿದು ಸೌಲಭ್ಯಕ್ಕ್ಮಮೊಪ್ಪಿರ್ದುದೌ|
      ಸ್ತುತಮೀಪದ್ಧತಿ ಮರ್ತೆ ಕಿಂಚಿದುಚಿತಂ ಸಲ್ಲಲ್ಕೆ ವ್ಯಾಕೃತ್ಯುಪಾ-
      ಕೃತಭಾಷಾವಲನಂ; ಸಮಸ್ತಮೆಸೆಗುಂ ಸೌಹಾರ್ದಹೃದ್ಯಂ ಸದಾ||

  11. ಎಲೆಯಂದಂ ತರುವಂದಂ
    ಕಲೆಸುಮವಂದಂ ಸುಗಂಧ ತಂದಾನಂದಂ
    ಚಲುವಾ ಸಮ ಗಮ ಚಂದಂ
    ಸಲುವಾ ಮಧುರ ಮಕರಂದ ಸಂದಾನಂದಂ ।

    (ಅಂದ ಕಂಡ ಮರ/ಎಲೆ/ಹೂ, ತಂದ ಸುಗಂಧ, ಬಂದ ಮಕರಂದ – ಎಲ್ಲದರ ಆನಂದ !)

    • ಅನವದ್ಯವಾದ ಕಂದ; ಅಭಿನಂದನೆಗಳು. ತಾವೀಗ ಗಣ-ಗಣಗಳಿಗೆ ಪದವಿಟ್ಟು ಪದ್ಯರಚನೆ ಮಾಡುತ್ತಿದ್ದೀರಿ. ಇದು ಆರಂಭದಲ್ಲಿ ಛಂದಸ್ಸಾನ್ನು ಪಳಾಗಿಸಿಕೊಳ್ಳಲಿರುವ ಒಂದು ಉಪಾಯವೂ ಹೌದು. ಆದರೆ ಈ ದಾರಿಯಲ್ಲಿ ತುಂಬ ಹೊತ್ತು ಸಾಗಲು ಸಾಧ್ಯವಿಲ್ಲ. ಏಕೆಂದರೆ ಈ ಪದ್ಧತಿಯು ಅಸಹಜ ಮತ್ತು ಆ ಕಾರಣದಿಂದಲೇ ಶ್ರಮಾವಹ ಕೂಡ.ಈ ಮೂಲಕ ಎಲ್ಲ ಪದ್ಯರಚನಾಸಕ್ತ್ರರಿಗೂ ತಿಳಿಸುವುದೇನೆಂದರೆ ಮಹಾಕವಿಗಳ ಆಯಾ ಛಂದೋಬಂಧಗಳನ್ನು (ಕನಿಷ್ಠ ಒಂದೊಂದು ಮಾದರಿಗಳಲ್ಲಿ ಐವತ್ತು-ನೂರು ಪದ್ಯಗಳನ್ನಾದರೂ)ಪದ್ಯಬಂಧಗಳ ಧಾಟಿಯನ್ನು ಹಿಡಿದು ಮನಸಿಟ್ಟು ಗಟ್ಟಿಯಾಗಿ ಓದಿಕೊಳ್ಳಬೇಕು; ಅವುಗಳ ಅರ್ಥವನ್ನು ಮನಸಿಸಬೇಕು. ಆಗ ರಚನೆಯು ಸುಕರ, ಸುಂದರ ಮತ್ತು ಸುಬೋಧವೂ ಆಗುವುದು.

      • ಕಂದನಂದಮೆಂದಾನಂದಂ,
        ಬಂದ ಸುಕುಮಾರಬಂಧವೆಂದಾತಂಕಂ,
        ಅದ “ದಾಟಿ” ಬರಬೇಕೆಂಬಾಕಾಂಕ್ಷಂ,
        ದಾಟು “ಮೀಟಿ”ಬರಬೇಕೆಂಬಾದೇಶಂ ಎಲ್ಲವೂ ಸ್ವೀಕೃತ.
        ಧನ್ಯವಾದಗಳು ಗಣೇಶ್ ಸರ್.
        ಚಿತ್ರಕ್ಕೆ ಪದ್ಯ ಬರೆಯಲು – ಬಂದ ಭಾವ ಮತ್ತು ಪ್ರಾಸ ಪದಗಳ ಜೋಡಣೆಯ(ಹೊಂದುವ ಛಂದಸ್ಸಿಗೆ) ಅಭ್ಯಾಸ ನಡೆದಿದೆ. ಮತ್ತೂ ಪದ್ಯ ಪಾಠ/ಪಠನ ಬೇಕಿದೆ. ಮೊದಲು ಬರೆದ ಇನ್ನೊಂದು ಪದ್ಯ (ನಂತರ ಸ್ವಲ್ಪ ಬದಲಿಸಿದ್ದು)

        ಅಂದಂ ಸುರಿದಂದಂ ಸುಮ
        ದಂದಂ ತಂದ ಸುಮಗಂಧ ಕುಸುಮ ಸುಗಂಧಾ
        ನಂದಂ ಸಂಧಾನಂದದೆ
        ಬಂಧಂ ಬಂದ ಮಕರಂದ ಸುಮಕರಕಂದಂ ।
        (ಇದನ್ನು ಸುಲಲಿತಗೊಳಿಸುವ ವಿಧಾನ, ಉದಾಹರಣೆಯಾಗಿ ದಯವಿಟ್ಟು ತಿಳಿಸಿಕೊಡಿ)

        • ಒಳ್ಳೆಯ ಪ್ರಾಸಬದ್ಧವಾದ ಪದಗಳನ್ನೆಲ್ಲ ಹೆಕ್ಕಿ ತಂದಿಕ್ಕಿರುವುದು ಮುದಾವಹ. ಆದರೆ ಇವೆಲ್ಲ ಒಟ್ಟು ಸೇರಿದಾಗ ಯಾವುದಾದರೂ ಮತ್ತೂ ಸುಮಧುರಸುಂದರಾರ್ಥವು ದಕ್ಕೀತೇ ಎಂದು ಮತ್ತೆ ಮತ್ತೆ ಪರಿಶೀಲಿಸುವುದು ಒಳೀತು:-) ನಾನೂ ಬಲುಹಿಂದೆ ಹೀಗೆ ಮಾಡುತ್ತಿದ್ದೆನೆಂಬ ನಾಚಿಕೆಯ ನೆನಪಿನಿಂದ ಹೇಳುತಿದ್ದೇನೆ:-)

  12. ಅಂತರಂಗದ ಸೊಬಗ ತುಡಿತವ –
    ನಿಂತು ತಳೆದೆಯೆ ಸುಂದರಿಯೆ ನಾ-
    ನೆಂತು ಬಣ್ಣಿಪೆ ಕುಸುಮ ರೂಪದಿ ಮೆರೆವ ಭಾವಗಳ
    ನಿಂತು ನೋಡಾಸ್ವಾದಿಪರು ಮೇ –
    ಣಂತೆ ಪೊಗಳುವರಿಲ್ಲವೆಂಬುವ
    ಚಿಂತೆಮೀರಿದ ಸಹಜ ಸೌಂದರ್ಯಕ್ಕೆ ಮಣಿದಪೆನಾಂ

    • ಒಳ್ಳೆಯ ಬಂಧಸೌಂದರ್ಯವನ್ನು ನಾವಿಲ್ಲಿ ಕಾಣಬಹುದು. ಭಾಷೆ-ಭಾವಗಳೆಲ್ಲ ಹದವಾಗಿವೆ.ಈ ಪದ್ಯವನ್ನು ರಚಿಸಲು ನೀವು ತೆಗೆದುಕೊಂಡ ಸಮಯ, ಕಲ್ಪನೆಗಳು ಕುದುರಲು ನಡಸಿದ ಯತ್ನ ಇತ್ಯಾದಿಗಳನ್ನು ಸ್ವಲ್ಪ ಹಂಚಿಕೊಂಡರೆ ಉಳಿದ ಅಭ್ಯಾಸಿಗಳಿಗೆ ಒಳಿತಾದೀತು. ಇನ್ನು ಮುಂದೆ ಯಾರೇ ತುಂಬ ಒಳ್ಳೆಯ ಭಾಷೆ-ಬಂಧಗಳ ಪದ್ಯವನ್ನು ರಚಿಸಿದರೆ ಅದನ್ನು ರೂಪಿಸಲು ನಡಸಿದ ಪಯಣದ ಹಾದಿಯನ್ನು ಸಂಕ್ಷೇಪವಾಗಿಯಾದರೂ ಹಂಚಿಕೊಂಡರೆ ಉಳಿದವರಿಗೆ ನೆರವಾದೀತು.

      • ಒಳ್ಳೆಯ ನುಡಿಗಾಗಿ ಧನ್ಯವಾದಗಳು.
        ಸುಮಾರು ಎರಡು ದಿನದಿಂದ, ‘ಕಾಡಿನಲ್ಲಿ (ಯಾರೂ ಇಲ್ಲದಲ್ಲಿ) ಪರಿಮಳ ಸೂಸಿದ ಹೂಗಳ’ ತರಹದ ವಿಚಾರ ಮನದಲ್ಲಿತ್ತು. ಮನದಲ್ಲೇ ಪದ್ಯವನ್ನು ರಚಿಸಬೇಕೆಂಬ ೨ – ೩ ಪ್ರಯತ್ನಗಳು ಫಲಗೂಡಲಿಲ್ಲ (ಸ್ರಗ್ಧರಾ, ರಥೋದ್ಗತ ಗಳಲ್ಲಿ ಪ್ರಯತ್ನಿಸಿದ್ದೆ). ಒಂದೆರಡು ಸಾಲುಗಳು ತೋಚಿದರೂ ಸರಿಯೆನಿಸಲಿಲ್ಲ. ಕೊನೆಗೆ, ಭಾಮಿನಿ ಷಟ್ಪದಿಯನ್ನು (ಮಾತ್ರಾ ಛಂದಸ್ಸೇ ಸರಿಯೆಂದನಿಸಿದ್ದರಿಂದ) ಆರಿಸಿಕೊಂಡು, ‘ಅಂತರಂಗದ ತುಡಿತ’ದಿಂದ ಶುರು ಮಾಡಿದ ಮೇಲೆ, ಪದ್ಯ ಸರಾಗವಾಗಿ ಮುನ್ನೆಡೆಯಿತು. ‘ಅಂತರಂಗದ ತುಡಿತ’ ಎಂಬುದು ಮೊದಲೇ ತೋಚಿರಲಿಲ್ಲ. ಅದು ಸಿಕ್ಕನಂತರ, ಉಳಿದ ಆದಿಪ್ರಾಸದ ಬಂಧಗಳು ಸರಾಗವಾದವು. ಕೊನೆಯಲ್ಲಿ ಪದ್ಯ ರಚನೆಗೆ ಸುಮಾರು ೨೦ – ೨೫ ನಿಮಿಷಗಳ ಪ್ರಯತ್ನವಿರಬಹುದು
        ವ್ಯಾಖ್ಯಾನ ಸ್ವಲ್ಪ ಹೆಚ್ಚಾಯಿತು. ಓದುಗರ ಕ್ಷಮೆಯಿರಲಿ.

        • ಸಂತೆ ಸಾಲಿನ ಪದ್ಯಗಳಳೊಂ
          ದಂತೆ ಎನಿಸದ ಕೂಸು ಹುಟ್ಟಿತು
          ಸಂತಸವು ಕವಿಕಾವ್ಯಕೂಟದೆ ರಾಮಚಂದಿರರೇ ।
          ಸಂತನೀವಹುದಯ್ಯ ಕಾವ್ಯದ
          ನಂತತೆಯ ಮರದೊಳಗೆ ಕಂಡಿರಿ
          ಎಂತು ಪೇಳಲಿ ಪದವು ಸೋಲ್ವುದು ಬರಿದೆ ಕೈಮುಗಿವೇಮ್ ।।

  13. ಮನೆಯಂ ಚಿಕ್ಕದು ಮಾಡಿ ನೀವ್ ಮನುಜರೇ ಸಮ್ಮಾನವಂ ಹೊಂದಲೂ
    ಮನಸ೦ ದೊಡ್ಡದು ಮಾಡಿ ನೀವ್ ಮನುಜರೇ ಸೌಭಾಗ್ಯವಂ ಹೊಂದಲೂ
    ತನುವ೦ ಸಿದ್ದತೆ ಮಾಡಿ ನೀವ್ ಮನುಜರೇ ಸೌಗಂಧವಾ ಸೂಸಲೂ
    ಹನುಮ೦ ರಾಮನ ಸೇವೆಯೊಳ್ ಪಡೆದನೈ ಸಾನಿಧ್ಯ ಶ್ರೀರಾಮನ೦ ||

    ಪದ್ಯಪಾನವೆಂಬ ಈ ಸಾಗರವನ್ನು ನೋಡುತ್ತಾ ಕೂತರೆ ಈ ಸಾಗರವನ್ನು ಈ ಜನ್ಮದಲ್ಲಿ ಸ್ಪರ್ಶಿಸಲು ಸಾಧ್ಯವಿಲ್ಲ ಎಂಬುದಾಗಿ ನನ್ನ ಉತ್ಸಾಹವೇ ಕರಟಿ ಹೋಗುತ್ತದೆ. ಅದಕ್ಕೋಸ್ಕರ ‘ಸೋಮೇಶ್ವರ ಶತಕವನ್ನು’ ಓದುತ್ತಿದ್ದವಳು ಹೀಗೊಂದು ಪ್ರಯತ್ನವನ್ನು ಮಾಡಿದೆ. ಹಳೆಗನ್ನಡವನ್ನು ಬಳಸಲು ಮಾಡಿದ ಮೊದಲ ಪ್ರಯತ್ನ…

    • ಪದ್ಯಪಾನವನ್ನು ಕೆಲವು ಸಮಯದಿಂದ ಪಾನ ಮಾಡುತ್ತಿರುವ ನಾನು ಪದ್ಯ ಬರೆಯಬೇಕೆಂಬ ಭಾವ ಉಕ್ಕಿದರೂ ಪದಗಳ ಮತ್ತು ವ್ಯಾಕರಣ ಜ್ಹಾನದ ಕೊರತೆಯಿಂದಾಗಿ ಸುಮ್ಮನಾದ ಸಂದರ್ಭವು

      ಉಕ್ಕಿ ಬರುವ ಭಾವಗಳ ಹ-
      ತ್ತಿಕ್ಕಿ ಛಂದ ಬದ್ದ ಕವಿತೆ
      ಚೊಕ್ಕವಾಗಿ ಬರೆಯಲದುವೆ ತ್ರಾಸದಾಯಕ|
      ಮಕ್ಕಳೆಲ್ಲ ಪ್ರೇಮದಲ್ಲಿ
      ತಕ್ಕ ಸಮಯಕಾಗಿ ಕಾದು
      ಸಿಕ್ಕಿದಂತೆ ನೋಡಿ ನೆನಪು ಮಧುರದಾಯಕ||

      • ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಪ್ರಯತ್ನ ಸೊಗಸಾಗಿದೆ. ಕೇವಲ ಎರಡನೆಯ ಸಾಲಿನಲ್ಲಿ ಮಾತ್ರ ಸ್ವಲ್ಪ ಸವರಣೆ ಬೇಕಿದೆ. ನೀವೇ ನಮ್ಮ ಛಂಡಸ್ಸಿನ ಪಾಠಗಳನ್ನು ಮತ್ತೊಮ್ಮೆ ಗಮನಿಸಿದರೆ ಇವೆಲ್ಲ ತಾವಾಗಿ ಸ್ಪಷ್ಟವಾಗುತ್ತವೆ.

        • ಧನ್ಯವಾದ…

          ಉಕ್ಕಿ ಬರುವ ಭಾವಗಳನು
          ಲೆಕ್ಕಿಸದೆಯೆ ಛಂದ ಪದ್ಯ
          ಚೊಕ್ಕವಾಗಿ ಬರೆಯಲದುವೆ ತ್ರಾಸದಾಯಕ|
          ಮಕ್ಕಳೆಲ್ಲ ಪ್ರೇಮದಲ್ಲಿ
          ತಕ್ಕ ಸಮಯಕಾಗಿ ಕಾದು
          ಸಿಕ್ಕಿದಂತೆ ನೋಡಿ ನೆನಪು ಮಧುರದಾಯಕ||

  14. ಮಾರನಿಗೆ ಕಾದಿರುವೆ ನಾ ಸುಕು-
    ಮಾರ ಪೂಶರ ರತಿಯ ಜೋಡಿಯೆ
    ಬಾರನೇಕೈ ಹೂವ ತಳೆದಿರೆ ನಾನು ಮೈ ತುಂಬ?
    ತಾರುಮಾರನು ಮಾಡದೇ ತಕ-
    ರಾರ ನೆತ್ತದೆ ಬಾರೊ ಸಂಜೆಯ-
    ಲಾರುಗಂಟೆಯು ಮೀರೆ ಹೂವೆಲ್ಲ ಮುದುಡುವುವು !

    -ಹಂಸಾನಂದಿ

    (ಕೊ: ಚಿತ್ರದಲ್ಲಿರುವ ಹೂತಳೆದ ಮರವನ್ನು ಮಾತ್ರ ಗಮನಿಸಿ ಬರೆದ ಪದ್ಯವಿದು. ಪಕ್ಕದ ಮಣ್ಣಿನ ಕಟ್ಟಡವನ್ನು ಪದ್ಯದಲ್ಲಿ ಸೇರಿಸದಿದ್ದುದರಿಂದ ಸ್ವಲ್ಪ ಅಪೂರ್ಣವೆಂದಿನ್ನಿಸಬಹುದೇನೋ.)

    • ತಾನು ತಳೆದ ಹೂಗಳನ್ನೇ ಆ ಮದನ ತನ್ನ ಬಾಣಕ್ಕೆ ಹೂಡಲೆಂದು ಆಶಿಸುವಂತಹ ಮರದ ಒಳಮನದ ತುಡಿತವನ್ನು ತೋರುವ ಪ್ರಯತ್ನ.

    • ಕೊನೆಯ ಸಾಲ ಲಗಂನ ತೆಗೆದರೆ ದೋಷ ನೀಗುವುದೈ 🙂

      • ಮಾರನಿಗೆ ಕಾದಿರುವೆ ನಾ ಸುಕು-
        ಮಾರ ಪೂಶರ ರತಿಯ ಜೋಡಿಯೆ
        ಬಾರನೇಕೈ ಹೂವ ತಳೆದಿರೆ ನಾನು ಮೈ ತುಂಬ?
        ತಾರುಮಾರನು ಮಾಡದೇ ತಕ-
        ರಾರನೆತ್ತದೆ ಬಾರೊ ಸಂಜೆಯ-
        ಲಾರು ಗಂಟೆಯು ಮೀರಿದರೆ ಹೂವೆಲ್ಲ ಮುದುಡುವುವು!

        🙂

  15. ಪ್ರಯತ್ನಗಳಿಗೊದಗಿಸಿದ ವೇದಿಕೆಗಾಗಿ, ಉಪಯುಕ್ತ ವೀಡಿಯೋ ತರಗತಿಗಳಿಗಾಗಿ ಪದ್ಯಪಾನಕ್ಕೆ ಧನ್ಯವಾದಗಳು. ಪರಿವರ್ಧಿನಿಯಲ್ಲೊಂದು ಪ್ರಯತ್ನವಿಲ್ಲಿದೆ.

    ಬಿತ್ತರವೀನೆಲದೊಪ್ಪದಿನೆಲೆಸಿಹ
    ಚಿತ್ತವಸೆಳೆದಿಹತೃಣರಾಶಿಯುತಾನ್
    ಹತ್ತಿರವಿಹತರುಜೊತೆತಾನುತ್ತರವಿತ್ತಿತುದಿಟ್ಟದೊಳಾನ್
    ಬಿತ್ತಿಹಸಿರಿವಂತಗೆಹೊನ್ನೇನಿ
    ಪ್ಪತ್ತುಮನೆಗಳಾಕತ್ತಲನೀಗುವ
    ಭತ್ತದತೆನೆಯಮಹಾತಪಕೆನ್ನಮನೋರತೆಸಾಟಿಯದೇನ್?

    • ಎತ್ತರದಾ ಪರಿವರ್ಧಿನಿಯೊಳಗೀ
      ಮೊತ್ತಮೊದಲ ಪದ್ಯವನೆಮಗೀಯುತ
      ಚಿತ್ತದ ಪಾನಕೆ ಮುದದಿಂ ಬಂದಿಹ ಮಾಯೆಗೆ ನಲ್ಬರವು

  16. 2 ರೂಪಕಗಳಿ೦ದ ವರ್ಣನೆಯ ಪ್ರಯತ್ನ

    ಪಸಿರ೦ ಭುವಿಗೆನೆ, ಬೆಳ್ಪನ್
    ಪಸರಿಸೆ ನಭದೊಳ್ ವಿರಿ೦ಚಿ ಕು೦ಚಮಿದೇ೦? ತಾ೦
    ಜಸದಿ೦ ಗೈದಳಿದಿರಿವಾಳ್
    ಕಸುವ೦ ಸಿತದಿ೦ದೆ ಸಾರುತಿರ್ಪಳೆ ಧಾತ್ರಿs?

    • ಸೋಮ, ತುಂಬ ಸೊಗಸಾದ ಕಂದ. ಒಳ್ಳೆಯ ಹಳಗನ್ನಡಶೈಲಿ. ಇಲ್ಲಿರುವುದು ಪ್ರಧಾನವಾಗಿ ಸಸಂದೇಹಾಲಂಕಾರ.:-) ಅಲಂಕಾರಗಳ ಬಗೆಗೆ ಯೆಂದಾದರೂ ಸಾಧ್ಯವಿದ್ದಷ್ಟು ಬೇಗ ತರಗತಿ ನಡಸಬೇಕಿದೆ.

      • ಧನ್ಯವಾದ ಸರ್:),
        ಹೌದು, ಅಲ೦ಕಾರದ ಪಾಠವಾದರೆ ಬಹಳ ಅನುಕೂಲವಾಗುತ್ತದೆ.

  17. ಹಸಿರಿನ ನಡುವಿರುವ ಗುಡಿಸಲನ್ನು ಪಂಚವಟಿಯ ಪರ್ಣಕುಟಿಯೆಂದು ಭಾವಿಸಿ ಆ ಗುಡಿಸಲಿನ ಮತ್ತು ಹೂ ಬಿಟ್ಟ ಮರದ ಸ್ವಗತದ ಕಲ್ಪನೆಃ

    ಹೊನ್ನ ಹರಿಣದ ಜಾಡು ಹಿಡಿದೋಡಿದನು ರಾಮ
    ತನ್ನಣ್ಣನಾಕ್ರಂದನದ ಹಿಂದೆ ಸೌಮಿತ್ರಿ
    ಬಣ್ಣದುಲಿಯಿಂದಸುರನಪಹರಿಸೆ ಸೀತೆಯನು
    ಚೆನ್ನಿದ್ದರೇನಾಚೆಯೊಳಗನಾಥ ಭಾವಂ

    • ವೆಂಕಟೇಶ ಪ್ರಸನ್ನರಿಗೆ ಪದ್ಯಪಾನಕ್ಕೆ ಸ್ವಾಗತ. ಪಂಚಮಾತ್ರ ರಗಳೆಯ ರೀತಿಯಲ್ಲಿ ಪದ್ಯವನ್ನು ಬರೆದಿದ್ದೀರಿ. ಇಲ್ಲಿ ಕೊನೆಯ ಸಾಲಿನಲ್ಲಿ ‘ಥ ಭಾವಂ’ ಎಂಬಲ್ಲಿ ಲಗಂ ಬಂದಿದೆ. ದಯವಿಟ್ಟು ಗಮನಿಸಿರಿ.
      ಪಂಚಮಾತ್ರಾ ಚೌಪದಿ, ಮತ್ತಿತರ ಚಂದಸ್ಸುಗಳಲ್ಲಿಯೂ ಪ್ರಯತ್ನಿಸಿರಿ.

      • ಧನ್ಯವಾದಗಳು ರಾಮಚಂದ್ರರೆ, ಪದ್ಯಪಾನದ ದಿಕ್ಸೂಚಿಯನ್ನಿಟ್ಟುಕೊಂಡು ಇತರ ರೀತಿಯ ಪ್ರಯತ್ನಗಳನ್ನೂ ಮಾಡುತ್ತೇನೆ. ಲಗಂ ಬಗ್ಗೆ ಓದಿ ಈ ರೀತಿಯ ಪರಿಹಾರ ಮಾಡುವ ಪ್ರಯತ್ನ ಮಾಡಿದ್ದೇನೆಃ

        ಹೊನ್ನ ಹರಿಣದ ಜಾಡು ಹಿಡಿದೋಡಿದನು ರಾಮ
        ತನ್ನಣ್ಣನಾಕ್ರಂದನದ ಹಿಂದೆ ಸೌಮಿತ್ರಿ
        ಬಣ್ಣದುಲಿಯಿಂದಸುರನಪಹರಿಸೆ ಸೀತೆಯನು
        ಇನ್ನುಳಿದ ತಬ್ಬಲಿಗಳೆಮಗೇಕೆ ಈ ಚೆಲುವು?

  18. ಮಿಂಚಲೆಂದೇ ಚಿತ್ರದಲಿ ಹೂ
    ಗೊಂಚಲುಗಳನು ಬಿಡುವೆನೆನ್ನುತ
    ಮುಂಚೆಯೇ ಮರ ಬೇರುಬಿಟ್ಟಿತು ಹುಲ್ಲುಹಾಸಿನಲಿ |
    ಸಂಚು ಹೂಡುತ ಮನುಜನಿಂದು ವಿ-
    ರಿಂಚಿ ನಾನೇ ವಿಕೃತಿಗೆನ್ನುತ
    ಕೊಂಚ ಸಮಯದೆ ನಿರ್ಮಿಸಿದನಾಪಾಳುಗೋಡೆಯನು ||

    ಹೂ ಬಿಟ್ಟಿರುವ ಆ ಮರದ ಮುಂದೆ ಇರುವ ಅಪೂರ್ಣವಾದ/ಶಿಥಿಲವಾದ ಕಟ್ಟಡ ‘ದೃಷ್ಟಿ ಬಟ್ಟಿನ’ ರೀತಿಯಿದೆ . ಛಾಯಾಚಿತ್ರದಲ್ಲಿ ಮಿಂಚಬೇಕೆಂದು ಮರವು ಮೊದಲೇ ಬೇರೆ ಮರಗಳಿರದ ಹುಲ್ಲುಹಾಸನ್ನು ಹುಡುಕಿ ಬೇರು ಬಿಟ್ಟಿತು ಆದರೆ ಮನುಷ್ಯ ವಿಕೃತಿಗಳ ಸೃಷ್ಟಿಕರ್ತ ಅದನ್ನು ಕೆಡಿಸಲೆಂದೇ ಅಲ್ಲಿ ಅಪೂರ್ಣವಾದ ಹಾಳು ಕಟ್ಟಡ ನಿರ್ಮಿಸಿದ್ದಾನೆಂಬ ಅನಿಸಿಕೆ/ಆಶಯ

  19. ಅತ್ಯದ್ಭುತಂ ಕವನಮಲ್ತೆ ಭವತ್ಪ್ರಯತ್ನಂ
    ಸ್ತುತ್ಯಂ ಪ್ರಬುದ್ಧರಸಪೂರ್ಣವರೇಣ್ಯಶೈಲೀ-
    ಕೃತ್ಯಂ ವಚೋರ್ಥಯುಗಲಾಮಲಸತ್ತ್ವಯುಕ್ತಂ
    ಸತ್ಯಂ ಪ್ರತಿಷ್ಟಿತಕವಿತ್ವಮದಿಲ್ಲಿ ಸಲ್ಗುಂ||

    ಪ್ರಿಯ ರಾಘವೇಂದ್ರ, ಎಂಥ ಒಳ್ಳೆಯ ಪದಪದ್ಧತಿ ಮತ್ತು ಕಲ್ಪನಾವೈಚಿತ್ರಿಯುಳ್ಳ ಪದ್ಯವನ್ನು ರಚಿಸಿದ್ದೀರಿ!! ಛಂದಸ್ಸಿನ ನಿರ್ವಾಹದಲ್ಲಿಯೂ ಪಲಗಿದ ಕಯ್ಯ ರಸಪಾಕ ತೋರುತ್ತಿದೆ. ಖಂಡಪ್ರಾಸವೂ ಸೇರಿದಂತೆ ಅವಲೀಲೆಯಿಂದ ವ್ಯರ್ಥಪದಲೇಶವೂ ಇಲ್ಲದಂತೆ ಇಡಿಯ ಪದ್ಯವನ್ನು ನಿರ್ವಾಹಮಾಡಿರುವ ಪರಿ ಸುತರಾಂ ಸ್ತುತ್ಯ.ಅಲ್ಲದೆ ಯಾಂತ್ರಿಕವಾಗಿ ಗಣಕ್ಕೆ ಗಣವೆಂಬಂತೆ ಪದಗಳನ್ನು ಇಟ್ಟಿಗೆಜೋಡಣೆಯ ಹಾಗೆ ತಂದಿಕ್ಕದೆ ಎಲ್ಲ ಗಳಗಳ ಪರಸ್ಪರ ಬಂಧವನ್ನು ಅನುಬಂಧದಿಂದ ಹೆಣೆದಿರುವ ಬಗೆಯೂ ಸೊಗಸಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಾವ್ಯಲಿಂಗ-ವಿಷಮ-ವ್ಯತಿರೇಕ-ಅಪ್ರಸ್ತುತಪ್ರಶಂಸೆ ಮುಂತಾದ ಅಲಂಕಾರಗಳೆಲ್ಲ ಒಟ್ಟಾಗಿ ಅತಿಶಯೋಕ್ತಿಯಲ್ಲಿ ಪರಿಣಮಿಸಿರುವಹಾಗೆ ಕಲ್ಪನೆಯನ್ನು ವಿಸರಿಸಿದ ಬಗೆಯಂತೂ ಅಭಿರಾಮ. ಮತ್ತೆ ಮತ್ತೆ ಧನ್ಯವಾದ!!

    ವಿಸೂ: ಚಿತ್ರ ಎಂಬುದು ಚೈತ್ರವಾದರೆ ಮತ್ತೂ ಚೆನ್ನವೇನೋ:-)

    • ಪದ್ಯ ಬರೆಯುವಾಗ idea ಚೆನ್ನಾಗಿದೆ ಎಂಬ ಆತ್ಮವಿಶ್ವಾಸವಿದ್ದರೂ ಗತಿಯಲ್ಲಿ ಅಲ್ಲಿಲ್ಲಿ ಭಂಗವಿರಬಹುದು, ‘ಕೊಂಚ’ ಅನ್ನುವ ಪದ ಬಳಸಬಹುದೋ ಇತ್ಯಾದಿ ಸಂದೇಹವಿತ್ತು . ಜೊತೆಗೆ ಅದೆಲ್ಲ ಸರಿಯಾಗಿ ನಿರ್ವಹಿಸಿದ್ದರೂ ಈ ಮಟ್ಟದ ಪ್ರಶಂಸೆ ನಿರೀಕ್ಷಿಸಿರಲಿಲ್ಲ. ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ 🙂

  20. ಕನ್ನಡ ನಾಡಿನಲ್ಲಿ ಎಂಥಾ ಪ್ರತಿಭಾವಂತರಿದ್ದಾರೆ, ಈ ಪದ್ಯಪಾನದ ನಶೆ,ಕಸ್ತೂರಿಯ ಪರಿಮಳ,ಶ್ರೀಗಂಧದ ಘಮ, ಎಲ್ಲವನ್ನೂ ನೀಡುತ್ತಿರುವ ನಿಮಗೆ ಕೋಟಿ ನಮನಗಳು!!!!!!!

  21. ಪದ್ಯಪಾನದ ಅಂತರ್ಜಾಲ ತಾಣದಲ್ಲಿ ನನ್ನ ಪ್ರಥಮ ಪದ್ಯ. ಪಂಚಮಾತ್ರಾ ಚೌಪದಿಯಲ್ಲಿ ಬರೆದಿದ್ದೇನೆ. ತಪ್ಪಿದ್ದರೆ ತಿಳಿಸಿ ಹೇಳಿ.

    ತರುಕಾಂತಿ ವರ್ಧನೆಗೆ ಪುಷ್ಪವನ್ನಿರಿಸುತಲಿ
    ತರುವನೆಟ್ಟನು ದೇವ ಗಿರಿವನದ ಸೊಬಕೆಂದು
    ವಿರಚನಾಕಾರ್ಯಕ್ಕೆ ತೆರಿಗೆಯನು ಗೈದಂತೆ
    ತಿರುಕ ನಿರ್ಮಿಸಿದ ಪಾಳ್ಗೂeಡೆಗಳನದರಡಿಗೆ!!

    • ಪ್ರಿಯ ಕಶ್ಯಪ್ ಅವರೇ,

      ಪದ್ಯಪಾನಕ್ಕೆ ನಿಮ್ಮ ಪ್ರಥಮಪ್ರವೇಶವೇ ಅನವದ್ಯವಾಗಿದೆ. ಧನ್ಯವಾದಗಳು. ಮೊದಲ ಸಾಲಿನಲ್ಲಿ ತರು ಎಂಬ ಪದ ಬಂದಿರುವ ಕಾರಣ ಎರಡನೆಯ ಪಾದದಲ್ಲಿ ಮರವನೆಟ್ಟನು ಎಂದು ಸವರಿಸಿದರೆ ಚೆನ್ನ.

      ಪದ್ಯವೊಂದರಲ್ಲಿ ಔಚಿತ್ಯ-ಧ್ವನಿಗಳ ನೆಲೆಯಿಂದ ಕಂಡಾಗ ಸಾರ್ಥಕವಾಗದಿದ್ದಲ್ಲಿ ಯಾವುದೇ ಪದವು ಪುನರುಕ್ತವಾಗದಿರುವುದು ಒಳ್ಳೆಯ ರಚನೆಯ ಸಂಕೇತ.

      ಎರಡನೆಯ ಪಾದದ ಸೊಬಕೆಂದು ಪದವು ವ್ಯಾಕರಣಶುದ್ಧವಾಗಿಲ್ಲ.ಸೊಗಕೆಂದು ಎಂದು ತಿದ್ದಿರಿ. ಕಡೆಯಲ್ಲಿ ತಿರುಕ ಎಂಬ ಪದಕ್ಕಿಂತ ನರನು ಎನ್ನುವ ಶಬ್ದವು ಮತ್ತಷ್ಟು ಸೊಗಸಾದೀತು.

      ಇಡಿಯ ನಾಲ್ಕು ಸಾಲುಗಳನ್ನೆಲ್ಲ ಇಪ್ಪತ್ತು ಮಾತ್ರೆಗಳಾಗಿ ರೂಪಿಸುವುದಕ್ಕಿಂತ ೨೦, ೧೭ ೨೦ ೧೭ ಎಂದೋ ೨೦ ೧೯ ೨೦ ೧೯ ಎಂದೋ ರೂಪಿಸಿದಲ್ಲಿ ಪದ್ಯಬಂಧಕ್ಕೆ ಮತ್ತೂ ಕಳೆಯೇರುವುದು.

      ನಿಮ್ಮ್ ಕಲ್ಪನೆಯೂ ಚೆಲುವಾಗಿದೆ.

      • ಗಣೇಶ್ ಸರ್, ಧನ್ಯವಾದಗಳು. ನೀವು ಹೇಳಿದ್ದನ್ನು ಅನುಸರಿಸಿ ನನ್ನ ಪದ್ಯವನ್ನು ಸವರಿಸಿದ್ದೇನೆ. ಸರಿ ಇದೆಯೇ ಎಂದು ತಿಳಿಸಿ.

        ತರುಕಾಂತಿ ವರ್ಧನೆಗೆ ಪುಷ್ಪವನ್ನಿರಿಸುತಲಿ
        ಮರವನೆಟ್ಟನು ದೇವ ಗಿರಿವನದೊಳು
        ವಿರಚನಾಕಾರ್ಯಕ್ಕೆ ತೆರಿಗೆಯನು ಗೈದಂತೆ
        ನರನು ಪಾಳ್ಗೂeಡೆಯನೆ ನಿರ್ಮಿಸಿದನೆ

  22. ತ್ರಿಪದಿ||
    ಎಂದಾರೆs ಯಾರಾರೆs ಬಂದsರೆ ಉಂಟಮ್ಮs
    ಒಂದsರೆ ಮಳದs ಹೂಮಾಲೆs| ಸಪ್ಲಮ್ಮs
    ಎಂದೆಂದೂ ಮರ ಹೂ ಕೊಡುವುsದುs||

    • ಅದು ಜನ ಹೆಚ್ಚಾಗಿ ಓಡಾಡದ ರಸ್ತೆ. ಅಲ್ಲೊಂದು ಸಪ್ಲಮ್ಮನ ಗುಡಿ. ಯಾರೂ ಆ ಕಡೆ ಸುಳಿಯದಿದ್ದರೂ ದೇವಿಗೆ ಮರ ಪುಷ್ಪವೃಷ್ಟಿಗರೆದು ನಿತ್ಯಪೂಜೆ ಮಾಡುತ್ತದೆ.

      • ಸೊಗಸಾದ ತ್ರಿಪದಿಯ ಮೊಗೆದು ತಂದಿತ್ತಿರ್ಪ|
        ನಗೆಗಾರರಲ್ತೆ ಪರಸಾದು!! ಸೊಪ್ಲಮ್ಮ|
        ಮುಗುಳಾಗಿ ನಿಮ್ಮೊಳ್ ಸಂದಾಳು ||

      • ಸಂದsಳುs ತಾನೆಂದೋ ಕುಂದಂದುs ಝಷ್ಟೆsಯುs
        ಬಂದಾಗs ನೀವುs ನಿಜಬಾಳೊಳ್| ಗಣದೀಶ
        ಬಂದsಳು ಸೊಪ್ಲುs (ಪುರುಷ)ಸರಸಿsಯೊಳ್||

  23. ನಿಂದಿರುವಳಾ ತರುಣಿ ತಾ ನು-
    ಟ್ಟoದದಾ ಹಸಿ ಸೀರೆಯ ತುಂಬಿರೆ
    ಕುಂದದಾ ಬಿಳಿ ಕಲೆಕುಸುರಿಹೂಸೆರೆಗಿನಾಸಿರಿಯಾ
    ಗಂಧಗಮಕಾ ಧರಣಿ ತಾ ನೊ-
    ಪ್ಪಂದದಿಂ ಮುಡಿದಿರೆ ತರುವನವ
    ಳೊಂದು ಕುಸುಮದ ತೆರದಿ ಹಸಿರು ಹೆರಳಿನ ಬದಿಯಲಿ ತಾಂ।

    (ಬೆಳ್ಳಿ ಬುಟ್ಟದ ಹಸಿರುಸೀರೆಯುಟ್ಟು ನಿಂತ “ತರುಣಿ”ಯಂತೆ ಕಂಡ ತರು,
    ಆ ತರುವನ್ನೇ ಒಂದು ಹೂವಿನಂತೆ, ತನ್ನ ಹಸಿರು ಹೆರಳ (ಹಸಿರು ಗುಡ್ಡ) ಪಕ್ಕದಲ್ಲಿ ಮುಡಿದಂತೆ ಕಂಡ “ಧರಣಿ”)

    • ಪದ್ಯದ ರಚನೆ-ಕಲ್ಪನೆಗಳು ಸ್ತುತ್ಯ, ಮುದಾವಹ. ಆದರೆ ಅಲ್ಲಲ್ಲಿ ಲಘ್ವಕ್ಷ್ರರಗಳು ಹೆಚ್ಚಾಗಿಬಂದು ಗಣ-ಯತಿಸ್ಥಾನಗಳಿಗೆ ಸ್ವಲ್ಪ ಚ್ಯುತಿ ಬಂದ ಕಾರಣ ಪದ್ಯದ ಗತಿಯು ಲಘುಗಳೇ ಹೆಅಚ್ಚಾಗಿ ಬಂದೆಡೆಗಳಲ್ಲಿ ಕುಂಟಿದೆ, ದಯಮಾಡಿ ಸವರಿಸಿಕೊಳ್ಳಿರಿ. ಆದರೆ ಒಟ್ಟಂದದ ರಚನೆಯಲ್ಲ್ಲಿ ಗುಣಾಧಿಕ್ಯವಿದೆ.

      • ಧನ್ಯವಾದಗಳು ಗಣೇಶ್ ಸರ್,
        “ಚೌಪದಿ”ಯಲ್ಲಿ ಬರೆಯೋಣವೆಂದುಕೊಂಡು ನಂತರ “ಭಾಮಿನಿ”ಯಲ್ಲಿ ಯತ್ನಿಸಿದ್ದು. ಅದಕ್ಕೇ ಲಘು ಪದಗಳು ಹೆಚ್ಚಾದವು. “ಯತಿ-ಗಣ”ಸ್ಥಾನದ ಬಗ್ಗೆ ಸ್ಪಷ್ಟ ತಿಳಿಯಬೇಕಿದೆ.(ಕಂದ ಪದ್ಯದಲ್ಲಿ ಜಗಣ / ಸರ್ವಲಘುಗಣ ಸ್ಪಷ್ಟವಾಗಿದೆ)
        ತಿದ್ದುಪಡಿ:
        ನಿಂದಿರುವಳಾ ತರುಣಿ ತಾ ನು-
        ಟ್ಟoದದಾ ಹಸಿ ಸೀರೆಯ ತುಂಬಿರೆ
        ಕುಂದದಾ ಬಿಳಿ ಕುಸುರಿಕಲೆಯಾ ಹೂವ ಸೆರಗಿನಲಾ
        ಗಂಧಗಮಕಾ ಧರಣಿ ತಾ ನೊ-
        ಪ್ಪಂದದಿ ಮುಡಿಯೆ ತರುವನೇನವ
        ಳೊಂದು ಕುಸುಮದ ತೆರದಿ ತನ್ನಯ ಹೆರಳ ಬದಿಯಲಿ ತಾಂ।

    • ಉಷಾರವರೆ,
      1) 2ನೆಯ ಪಾದ: ಸೀರೆಯ – 1 ಮಾತ್ರೆ ಹೆಚ್ಚಾಯಿತು
      2) ಇವಳು ಸೆರಗನ್ನು ತಲೆಯಮೇಲೆ ಹೊದ್ದ ಗುಜರಾತಿ ಹೆಂಗುಸೇ ಇರಬೇಕು. ಏಕೆಂದರೆ, ಇಡಿಯ ಮರವನ್ನು ಒಂದು ಹೂವಿನಂತೆ ಮುಡಿದಿದ್ದಾಳೆ ಎಂದೂ ಹೇಳಿದ್ದೀರಿ, ಆ ಹೂವುಗಳಿಂದಾದುದು ಅವಳುಟ್ಟ ಸೀರೆಯ ಸೆರಗು ಎಂದೂ ಹೇಳಿದ್ದೀರಿ.
      ನಗೆಯಾಡಿದ್ದೇನೆ. ಕ್ಷಮೆ ಇರಲಿ. ಪದ್ಯವನ್ನು ಇನ್ನೂ ಸವರಬೇಕು.

      • ಪ್ರಸಾದ್ ಸರ್,
        ನನಗೂ ನನ್ನ ಕಲ್ಪನೆ ನಗು ತರಿಸಿದ್ದು ನಿಜ.
        ೧) ೨ನೇ ಪಾದದಲ್ಲಿ “ಸೀರೆ” ಇಟ್ಟುಕೊಂಡು “ಯ” ಬಿಟ್ಟುಬಿಡೋಣ. (ಸೀರೆ ಸಿಕ್ಕಿದ್ದಕ್ಕೆ ಧನ್ಯವಾದ)
        ೨) ಹೌದು, ಸೀರೆಯುಟ್ಟು ನಿಂತಿರುವವಳು “ತರು” ತರುಣಿ (ಗುಜರಾತಿಯಾದರೆ) / ಇಡೀ “ತರು”ವನ್ನೇ ಒಂದು ಹೂವಂತೆ ಪಕ್ಕಕ್ಕೆ ಮುಡಿದಿರುವವಳು “ಧರಣಿ”(ಭಾರತ ಮಾತೆ). ಇಬ್ಬರೂ ಬೇರೆ ಬೇರೆ ಕಂಡದ್ದು !!

    • ಉಕ್ಕಿದ ಭಾವವು ಹೂಮರದಂದದಿ
      ದಕ್ಕಿದ ದೈವ ಪ್ರೇರಣೆಯು
      ಸಿಕ್ಕಿದ ಪದದಲಿ ಕಟ್ಟಿಹ ಭವನವು
      ತಕ್ಕನೆ ಬೇಕಿದೆ ಸಾರಣೆಯು ।
      (ನನ್ನ ಪದ್ಯರಚನೆಯ ಪ್ರಕ್ರಿಯೆಯೇ, ಈ “ಚಿತ್ರಕ್ಕೆ ಪದ್ಯ”ದ ವಸ್ತುವಾಗಿದೆ, ಹೀಗೆ !)

  24. ಮಾನ್ಯರೇ,
    ನನಗೆ ಮಾತ್ರೆ, ವೃತ್ತ, ಶದ್ಪದಿ, ದ್ವಿಪದಿ, ತ್ರಿಪದಿ, ಛಂದಸ್ಸು, ಇತ್ಯಾದಿಗಳ ಜ್ಞಾವೇ ಇಲ್ಲಾ– ಆದರೆ ಒಮ್ಮೊಮ್ಮೆ ಯಾವುದೋ ದಾತಟಿಗಳಲ್ಲಿ — ಪದ್ಯಗಳು ಬಾಯಿಗೆ ಬರಿತ್ತವೆ —
    ಇಲ್ಲಿ ಈ ಪಾಮರ ನಿಗೆ ಪ್ರವೇಶವಿದೆಯೇ ?

  25. ಮಾನ್ಯರೇ,
    ನನಗೆ ಮಾತ್ರೆ, ವೃತ್ತ, ಶಡ್ಪದಿ, ದ್ವಿಪದಿ, ತ್ರಿಪದಿ, ಛಂದಸ್ಸು, ಇತ್ಯಾದಿಗಳ ಜ್ಞಾನವೇ ಇಲ್ಲಾ– ಆದರೆ ಒಮ್ಮೊಮ್ಮೆ ಯಾವುದೋ ದಾಟಿಗಳಲ್ಲಿ — ಪದ್ಯಗಳು ಬಾಯಿಗೆ ಬರುತ್ತವೆ —
    ಇಲ್ಲಿ ಈ ಪಾಮರನಿಗೆ ಪ್ರವೇಶವಿದೆಯೇ ?

    • ಈಶ್ವರ ಭಟ್ಟರೇ,
      ಪದ್ಯಪಾನಕ್ಕೆ ಸ್ವಾಗತ.
      ದಯವಿಟ್ಟು ಪದ್ಯ-ವಿದ್ಯೆಯಡಿಯಲ್ಲಿರುವ ಸಣ್ಣ ಸಣ್ಣ ಪಾಠಗಳನ್ನು ನೋಡಿ ಮನನ ಮಾಡಿರಿ. ಮಾತ್ರೆ, ಗಣ, ಪ್ರಾಸ, ವಿವಿಧ ಛಂದಸ್ಸುಗಳು ಸುಲಭದಲ್ಲಿ ಎಟಕುವುವು. ಬಾಯಿಗೆ ಬರುವ ಪದ್ಯಗಳಿಗೆ ಸ್ಪಷ್ಟವಾದ ಛಂದಸ್ಸಿನ ರೂಪವನ್ನು ನೀಡಿದರೆ, ನಿಮ್ಮ ಪದ್ಯಗಳು ಎಲ್ಲರಿಗೂ ಮೆಚ್ಚುಗೆಯಾಗುವದರಲ್ಲಿ ಸಂಶಯವಿಲ್ಲ.
      ಪದ್ಯಪಾನಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಕನ್ನಡ, ಸಂಸ್ಕೃತ ಮತ್ತಿತರ ಭಾರತೀಯ ಭಾಷೆಗಳಲ್ಲಿ ಪೂರ್ವದ ಅಭಿಜಾತ ಕವಿಗಳು ರಚಿಸಿದಂತೆಯೇ ನಾವೆಲ್ಲರೂ ರಚಿಸಲು ಪ್ರಯತ್ನ ಮಾಡಲೆಂದೇ ಈ ತಾಣವು ತನ್ನ ಇರವನ್ನು ಪಡೆದಿದೆ. ಛಂದಸ್ಸಿಗೆ ಒಳಪಡದ ಪದ್ಯಗಳನ್ನು ನಾವೆಲ್ಲರೂ ಬರೆದರೆ, ಕ್ರಮೇಣ ಬರವಣಿಗೆಯು ಕೇವಲ ಗದ್ಯದಂತಾಗಿ, ಈ ತಾಣದ ಆಕರ್ಷಣೆಯೇ ಮಾಯವಾಗುವ ಅಪಾಯವಿದೆ. ಆದ್ದರಿಂದ ನಿಮ್ಮ ಪದ್ಯಗಳಿಗೆ ಛಂದಸ್ಸಿನ ಆಕಾರ ನೀಡಿರಿ. ಎಲ್ಲರಿಗೂ ಉಣಿಸಿರಿ. 🙂
      ಪದ್ಯಪಾನಕ್ಕೆ ಮತ್ತೊಮ್ಮೆ ಸ್ವಾಗತವು

    • ಈಶ್ವರಭಟ್ಟರೇ,
      ಏನೂ ಗೊತ್ತಿಲ್ಲ ಎಂದು ಹೇಳುತ್ತಲೇ ಡಬಲ್ ಎಂಟ್ರಿ ಬಯಸಿದ್ದೀರಿ! (24 & 25)
      😉

  26. ಮಲ್ಲಿಕಾಮಾಲಾ ಛಂದಸ್ಸಿನಲ್ಲಿ ಒಂದು ಪ್ರಯತ್ನಃ

    ಹಸಿರ ಹಾಸದು ಪಸರಿತುಲ್ಲಾಸದುಸಿರನೆತ್ತರದ ಹಾದಿಯೊಳ್
    ಬಸಿರಿನಂದದಿ ಕುಸುರಿಯಲರುಗಳೊಸರೆ ನವತೆಯ ತರುವಿನೊಳ್
    ಕಸರನುಳಿಸದೆ ಕೆಸರುಮಣ್ಣಲೆ ವಸತಿಯಂ ನರ ರಚಿಸಿರಲ್
    ಹೆಸರು ವಿಳಸದ ಕೊಸರು ಮೀರಿದ ಹಸನು ಬಾಳ್ವೆಯು ಸಾಧ್ಯವಂ

    • ಪ್ರಸನ್ನರೇ,
      ನನಗೆ ತಿಳಿದಂತೆ ಮಲ್ಲಿಕಾಮಾಲಾದ ಲಕ್ಷಣ
      ನಾನನಾನನನಾನನಾ|ನನನಾನನಾನನನಾನನಾ

    • ಅಲ್ಲದೆ ನಿಮ್ಮ ಪದ್ಯದ ಮೊದಲೆರಡು ಪಾದಗಳ ನಾಲ್ಕನೆಯ ಅಕ್ಷರಗಳು ಗುರ್ವಕ್ಷರಗಳು, ನಂತರದೆರಡು ಪಾದಗಳ ನಾಲ್ಕನೆಯ ಅಕ್ಷರಗಳು ಲಘ್ವಕ್ಷರಗಳು. ಅಕ್ಷರಛಂದಸ್ಸುಗಳಲ್ಲಿ ಹೀಗಿರದು.

    • ಮಲ್ಲಿಕಾಮಾಲೆಯ ಬಗೆಗೆ ಮಾಹಿತಿಗೆ ಭೇಟಿ ನೀಡಿ http://padyapaana.com/?page_id=898

    • ಪ್ರಸಾದರೇ,

      ಹಳೆಯ ಕೆಲವು ಪ್ರಶ್ನೆಗಳನ್ನು ನೋಡುತ್ತಾ ಈ ರೀತಿಯ ರಚನೆಗೆ ಮುಂದಾದೆ. http://padyapaana.com/?p=867 ಇಲ್ಲಿರುವ ಪ್ರಯೋಗವನ್ನೇ ನಾನು ಮಲ್ಲಿಕಾಮಾಲಾ ಎಂದು ಭಾವಿಸಿದೆ. ರಾಮಚಂದ್ರರು ಇದನ್ನು ಮಾತ್ರಾ ಮಲ್ಲಿಕಾಮಾಲಾ ಎಂದಿದ್ದಾರೆ. ಆ ಪ್ರಯೋಗಕ್ಕೆ ಹೊಂದುತ್ತದೆಯಲ್ಲವೇ?

      • ಓ! ಕ್ಷಮಿಸಿ. ಮಾತ್ರಾಮಲ್ಲಿಕಾಮಾಲೆಯ ಬಗೆಗೆ ನನಗೆ ತಿಳಿಯದೆ ಏನೇನೋ ಹೇಳಿಬಿಟ್ಟೆ.

  27. ಗೋಮೂತ್ರಿಕಾ ಬಂಧದಲ್ಲಿರುವ (೧, ೩ ನೆಯ ಹಾಗೂ ೨,೪ನೆಯ ಸಾಲುಗಳಲ್ಲಿ ಪ್ರತಿ-ಎರಡನೆಯ ಅಕ್ಷರ ಒಂದೇ ಆಗಿರಿವುದು) ಪಂಚಮಾತ್ರಾ ಚೌಪದಿಯ ಪದ್ಯ ::
    ಉಂಡು ಹಿಡಿಮಣ್ಣು ತಾ ಹೂನಗೆಯ ಬೀರುತಲಿ
    ಕಂಡವರ ತಣಿಸುವುದು ನೆರಳ ನೀಡಿ |
    ಕಂಡು, ಕಡಿದುಣ್ಣುತಾ, ಹೂಬಗೆಯ ಬೀಕುತಲಿ
    ಭಂಡ ನರನೆಣಿಸುವನು ನೆಗಳ ಕೋಡಿ ||
    [ಬೀಕು = ನಾಶಮಾಡು; ಬಗೆ = ಮನಸ್ಸು; ನೆಗಳ್ = ಪ್ರಸಿದ್ಧಿ]

  28. ಮಾಡಿಕೊ೦ಬೆನು ಇ೦ತು ಎನ್ನ ಜೀವನವ
    ಈ ಪರಿ ಬಿರಿದು ನಿ೦ತಿಹ , ನೇಯ್ದ ಸುಮನಸವ //
    ಚಿತ್ತದಿ ಚಿತ್ತಾರ ಚಕ ಚಕನೆ ಚಿತ್ತಿಸುವ
    ಬೈರಾಗಿಯೊಮ್ಮೆ ತಲೆಯೆತ್ತಿ ತೂ೦ಪಿಡುವ //
    ವೈಯ್ಯಾರವನು ಹೊತ್ತು ಮೆರೆಯುತಿಹ
    ರಂಗೋಲಿಗೆe ರಂಗ ರಂಗಾಗಿ ಪೋಣಿಸುವ //
    ನಾಚಿ ನೀರಾಗಿ ನಿಂತಿರ್ಪ ವೈಯ್ಯಾರಿಯಂತಿರುವ
    ತೆರದಿ ಮಾಡಿಕೊ೦ಬೆನು, ಇಂತು ಎನ್ನ ಜೀವನವ //

  29. ಯುವಜನಮನಶ್ಶಿಲಾಭಿದು
    ರವಿದು ಸುಮಶರನಾ ತೂಣೀರವೆನೆ ಮರಮೀ |
    ಭುವಿಯ ಬಾಳ್ ಬಟ್ಟೆಯಾ ಗುಡಿ
    ಕವಲು ಕಟ್ಟೆಯನುಂ ಪೂವೆಳಕಿಂ ಬಿಂಬಿಪಂ ||

    • ಕಲ್ಪನೆಗಳು ಸೊಗಸಾಗಿವೆ. ವಿಶೇಷತಃ “ಮನಶ್ಶಿಲಾಬಿಧುರ” “ಸುಮಶರನ ತೂಣೀರ’
      “ಬಾಳ್ಬಟ್ಟೆ” ಮುಂತಾದ ರೂಪಕಗಳನ್ನು ಇಶ್ಟು ಚಿಕ್ಕ ಪದ್ಯದ ಉದರದಲ್ಲಿ ತಂದಿರುವ ನಿಮ್ಮ ಗ್ರಥನಕೌಶಲವು ಸ್ತವನೀಯ. ಆದರೆ ಹಲವೆಡೆ ಎದ್ದು ತೋರುವಂತೆ ಛಂದಸ್ಸು ಎಡವಿದೆ (ಮೊದಲಸಾಲನ್ನುಳಿದು ಮಿಕ್ಕೆಲ್ಲವೂ).ಸಣ್ನಪುಟ್ತ ವ್ಯಾಕರಣಪರಿಷ್ಕಾರವೂ ಅಪೇಕ್ಷಣೀಯ.(ಪರಿಷ್ಕೃತರೂಪಗಳಿಲ್ಲಿವೆ: ಭಿದುರಮಿದು, ಬಾಳ್ಬಟ್ತೆಯ ಗುಡಿಗವಲ್ಗಟ್ಟೆ).

      • ಧನ್ಯವಾದಗಳು ಗಣೇಶರೆ,
        ಹಳೆಗನ್ನಡವಾದರೂ ನಮಗದು ಹೊಸತೇ. ಇಂತಹ ರಚನೆಗಳ ಸಮಯದಲ್ಲಿ ಸಂಸ್ಕೃತದ ಮತ್ತು ಹೊಸಗನ್ನಡದ ಪದಪ್ರಕ್ರಿಯೆಗಳೇ ನನ್ನ ಮನಸ್ಸಿನನಲ್ಲಿ ಮುಂಚೂಣಿಯಲ್ಲಿರುತ್ತವೆ. ಈ ಪದ್ಯದಲ್ಲಿ ತಾವು ಸೂಚಿಸಿದ ಪರಿಷ್ಕೃತ ರೂಪಗಳನ್ನು ಆಳವಡಿಸಿದರೆ ಒಂದೆಡೆ ಆದಿ ಪ್ರಾಸ ತಪ್ಪುತ್ತದೆ. ಅಲ್ಲದೇ ಛಂದಸ್ಸು ಎಡವಿದ್ದು ಎಲ್ಲಿ ? ಎಂದು ಇನ್ನೂ ನನಗೆ ಗೊತ್ತಾಗಲಿಲ್ಲ. ಅಲ್ಪ ತಿದ್ದುಪಡಿಗಳೊಂದಿಗೆ ಮತ್ತೆ ಟಂಕಿಸಿದ್ದೇನೆ.
        ಯುವಜನಮನಶ್ಶಿಲಾಭಿದು
        ರವಿದು ಸುನಶರನಾ ತೂಣೀರಮೆನೆ ಮರಮೀ |
        ಭುವಿಯ ಬಾಳ್ಬಟ್ತೆಯಾ ಗುಡಿ
        ಗವಲ್ಗಟ್ಟೆಯನುಂ ಪೂವೆಳಕಿಂ ಬಿಂಬಿಪಂ ||

Leave a Reply to hamsanandi Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)