Jan 132013
 

ಈ ಚಿತ್ರಕ್ಕೆ ಸೂಕ್ತವಾದ ಪದ್ಯಗಳನ್ನು ರಚಿಸಿರಿ. ಛಂದಸ್ಸು – ನಿಮ್ಮ ಆಯ್ಕೆ . [ಚಿತ್ರದ ಕೃಪೆ – ಅಂತರ್ಜಾಲ]

ಚಂದ್ರನೆಡೆಗೆ

 

  187 Responses to “ಪದ್ಯಸಪ್ತಾಹ – ೫೪; ಚಿತ್ರಕ್ಕೆ ಪದ್ಯ”

  1. ಸ೦ದಿsಹ ಯುದ್ಧsದಿ ಹೋರಾಡೆ ನಭದಲ್ಲಿ
    ಮು೦ದsಡಿಯಿಡುತಿsಹ ಭರದಿs
    ಅಂದsದ ಚಂದಿsರ ನಿ೦ದಿsರೆ ತಾಮು೦ದೆ
    ಬಂದಿದೆ ನೆನಪಿನs ಸರದಿs

    “ಒಂದೈದು ನಿಮಿಷsದಿ ಕೊ೦ಡೊಯ್ವನುಂಡsರೆ
    ಚ೦ದಕ್ಕಿ ಮಾಮನು ನಿನ್ನs”
    ಹಿಂದಿನಾ ತಾಯ್ನುಡಿ ನೆನೆಯುತ್ತ ತಿರುಹಿದ
    ಚಂದಿsರನೆಡೆಗೆs ವಿಮಾನs

    • ಪ್ರಿಯ ಶ್ರೀಶ, ನಿಮ್ಮ ಕಲ್ಪನೆ ಸೊಗಸಾಗಿದೆ. ಆದರೆ ಬಳಕೆಗೊಂಡ ಸಾಂಗತ್ಯದಲ್ಲಿ ಒಂದೆರಡು ಪ್ರಮಾದಗಳಾಗಿವೆ.
      ಬಂದಿಹುದು, ಮಾಮನೆಡೆ, ತಾಯ್ನುಡಿಯ, ತಿರುಗಿಸಿದೆ ಎಂಬ ಪದಗಳು ವಿಷ್ಣುಗಣಗಳಾಗಿಲ್ಲ. ಇವೆಲ್ಲ ರುದ್ರಗಣಗಳೇ ಆಗಿಬಿಟ್ಟಿವೆ! ಇವನ್ನು ಕ್ರಮವಾಗಿ ಬಂದಿದೆ,
      ಮಾಮಂಗೆ, ತಾಯ್ನುಡಿ, ತಿರುಹಿದೆ ಎಂದು ತಿದ್ದಿದರೆ ವಿಷ್ಣುಗಣಗಳಾಗುತ್ತವೆ. ಈ ಬಗೆಗೆ
      ಹೆಚ್ಚಿನ ಮಾಹಿತಿ ಬೇಕಾದರೆ ಈಚಿನ ಯಾವುದೋ ಒಂದು ಪ್ರತಿಕ್ರಿಯೆಯಲ್ಲಿ ಇವೆಲ್ಲವನ್ನೂ ಬರೆದಿದ್ದೇನೆ. ಇಲ್ಲವಾದರೆ ಮೂಲಪಾಠಗಳನ್ನೇ ನೋಡಿರಿ.

      • ಓಹ್…basic blunder 🙂
        ಸೋಮಣ್ಣನೊಡನೆ ಸ್ಪರ್ಧೆಯಿಟ್ಟು ಮೊದಲು ಪೋಸ್ಟ್ ಮಾಡಬೇಕೆಂಬ ಧಾವಂತ 🙂
        ಮೊದಲೆರಡು ಮಾತ್ರೆಗಳ ನಂತರದಲ್ಲಿ ಎಲ್ಲ ಲಘುಗಳನ್ನೂ ಗುರುವಿನಂತೆ ಎಳೆಯಬೇಕಾದದ್ದನ್ನು ಗಮನಿಸದೇ, ಟ್ಯೂನ್ ಗೆ ಬರೆವಂತೆ ಬರೆದಿದ್ದಕ್ಕೆ ಕ್ಷಮೆಯಿರಲಿ. ಈಗ ಸರಿಪಡಿಸಿದ್ದೇನೆ.

        ಧನ್ಯವಾದಗಳು.

        • ನಮ್ಮೆಲ್ಲರಿಗೆ ಶ್ರೀಶನ ಪದ್ಯಗಳು (ಸಾ೦ಗತ್ಯ ಪದ್ಯಗಳು) ಮತ್ತು ಶ್ರೀಶನ ಒಡನಾಟವೂ ಪದ್ಯಬರೆಯಲು ಪ್ರೇರಣೆ, ಈ cyclic recognition/dependency ಚೆನ್ನಾಗಿದೆ 🙂

          ಶ್ರೀಶsನs ಸಾ೦ಗತ್ಯs ತೋಷಿsಪುsದೆಮ್ಮೆsದೆs
          ಆಶsಯs ಮೂಡಿsಪುsದೊರೆಯೆs
          ಕೋಶsದs ಬ್ರಹ್ಮsನೊs ವಿಷ್ಣುsವೊs ರುದ್ರsನೊs
          ಪೋಷಿsಪsರೆಮ್ಮsನುs ಕವಿಯೆs

          • ಪ್ರಿಯ ಸೋಮ! ನಿನ್ನಂತೆ ಗೆಳೆಯರ ಸುಗುಣವ
            ನಯ-ನಲ್ಮೆ-ಬಲ್ಮೆಗಳಿಂದ|
            ಜಯ ಜಯವೆನ್ನುತೆ ಮನ್ನಿಪ ಗುಣಿಗಳ್ ವಿ-
            ಸ್ಮಯಕಾರಿಗಳ್ ಸಲ್ಗೆ ನಿತ್ಯ!!

  2. ಶಾ.ವಿ||
    ವೇಗಕ್ಕೇಂ ಮಿತಿಯಿರ್ಪುದೇ ಗಗನದೊಳ್ ಮಾನು‍ಷ್ಯರೀ ಯಂತ್ರದೊಳ್
    ಸಾಗಿರ್ಪರ್ ಜಗದೀಕ್ಷಣಕ್ಕೆ ನವಿಲನ್ನೇರಿರ್ಪುಮಾಪುತ್ರನೋಲ್|
    ಭೂಗರ್ಭಂ ಬರಿದಾಯ್ತೆ ಮೇಣ್ ರಜತವಿಭ್ರಾಂತರ್ ಗಡಾ ಮಾನವರ್
    ಪೋಗುತ್ತಿರ್ಪುದು ಭಾಸಿಕುಂ ಶಿವಜಟಾಲಂಕಾರಸಂಪ್ರಾಪ್ತಿಗಂ||

    • ಒಳ್ಳೆಯ ಪ್ರಯತ್ನ. ಅಲ್ಲಲ್ಲಿ ಹಳಗನ್ನಡದ ಹದ ಸಡಲಿದೆ.ಉದಾ:” ನವಿಲನ್ನೇರಿರ್ಪ”
      ಇದು ನವಿಲನೇರಿರ್ಪ ಎಂದಾಗಬೇಕು. ಸವರಿಸಿದರೆ ನವಿನನೇರಿರ್ಪಂಬಿಕಾಸೂನುವೊಲ್ ಎಂದಾದೀತು (ಪುತ್ರನ ವೊಲ್ ಎಂದಲ್ಲದೆ ಪುತ್ರನೋ(ನೊ)ಲ್ ಎಂದಾಗದು). ಉಳಿದಂತೆ ನಿಮ್ಮ ಕಲ್ಪನೆ, ಶಿಲ್ಪನೆ ಹಾಗೂ ವೃತ್ತನಿರ್ವಾಹಗಳು ಉತ್ತಮ. ಧನ್ಯವಾದ:-)

  3. ಮೆಯ್ಯಿಲ್ಲದೀವರೆಗೆ ಮೆಕ್ಕನವೋಲ್ ನುಸುಳ್ದಯ್
    ಅಯ್ಯಂಬ ನಿನ್ನೆಡೆಯನಾಂ ತಿಳಿದಾಯ್ತು ಬಿಳ್ದಯ್
    ಅಯ್ಯಯ್ಯೊ ನಿನ್ನ ಕೊಡೆಯಬ್ಜನೆ ನಿನ್ನ ಮಿಳ್ತಯ್
    ಮುಯ್ಯನ್ನು ತೀರ್ರ್ಚಲಿದಿಗೋ ಮುಗಿಲೇರಿ ಬಂದೆಂ

    ಮದನನಮೇಲೆ ಹಲವು ಕಾಲದಿಂದ ಲೋಕದಜನರಿಗೆ ಹಗೆವುಂಟು. ಅವನು ಎಲ್ಲರನ್ನು ಪಡಿಸುವ ಪಾಡಿಗೆ ಪ್ರತಿಯಾಗಿ ಅವನಿಗೆ ದಂಡಿಸಬೇಕೆಂದು ಹುಡುಕುತ್ತಿದ್ದ ಜನರಿಗೆ ಅವನು ಅನಂಗನಾದರೂ ಅವನಿರುವ ತಾಣ ಅವನ ಛತ್ತ್ರವಾದ ಚಂದ್ರನಿಂದ ತಿಳಿದು ಬಿಟ್ಟೀತು. ಭರದಿಂದ ಅವನನ್ನು ಸೆದೆಬಡಿಯಲು ಅವನಿರುವೆಡೆಗೆ ಹಾರ ಹೊರಟಿರುವರು ಎಂದು ಕಲ್ಪಿಸಿ ರಚಿಸಿದ್ದೇನೆ. ಮನ್ಮಥನನ್ನು ಮೂದಲಿಸುವಂತೆ ವಸಂತತಿಲಕ ವೃತ್ತದಲ್ಲಿ ರಚಿಸಿದ್ದೇನೆ.

    • ಕಲ್ಪನೆ ಬಲ್ಸೊಗಸಾದುದು
      ಶಿಲ್ಪನೆಯುಂ ಚೆಲ್ವೆನಿಪ್ಪವೊಲ್ ಸಂದಿರ್ಕುಂ|
      ಸ್ವಲ್ಪದ ಸಿರಿಯೇ ಪರಿಕಿಸೆ?
      ತಲ್ಪಮೆ ದಲ್ ವಾಣಿ ವಿಶ್ರಮಿಸೆ ನಿಮ್ಮೆಸಕಂ!!

      • ಇಂದುಗರ್ವಭಂಗ- ತಾ
        ನಿಂದು ಮೆಚ್ಚಿದನ್ ಗಿರಂ
        ಇಂದುವಕ್ತ್ರೆಮೆಚ್ಚಳೇಂ
        ಇಂದು ಧನ್ಯನಾದೆನಾಮ್ ||

        • ವಿಸಂಧಿ ದೋಷವನ್ನು ಪರಿಹರಿಸಲು ಎರಡನೆಯ ಪಾದವನ್ನು ಸ್ವಲ್ಪ ಬದಲಿಸಿದ್ದೇನೆ.

          ಇಂದು ಮೆಚ್ಚಿದೆೞ್ತನಿನ್-
          ನಿಂದುವಕ್ತ್ರೆ ಮೆಚ್ಚಳೇಂ

  4. ಇಳೆಯ೦ ನಕ್ತದೆ ಸೇರ್ವನೆ೦ತು, ಮೃಗಮ೦ ಕಾಪಿಟ್ಟನೇಕೆನ್ನುತು೦,
    ಪೊಳೆವಾ ಶುಭ್ರತೆಯ೦ ಸುಧಾಪ್ರಸರಮ೦ ಗಯ್ಯಲ್ಕದೇ೦ ಕಾರಣ೦,
    ಎಳೆಯರ್ಗೇಕಿವನಲ್ಮೆಯೀವನೆಸೆಗುತ್ತುತ್ತೇಜಮ೦ ಪ್ರೀತರೊಳ್,
    ಖಳರ್ಗು೦ ಬಾ೦ಧವನೇಕದೆ೦ದು ತಿಳಿಯಲ್ಕೀನೌಕೆಯಿ೦ ಶಕ್ಯಮೇ೦?

    • ಪ್ರಿಯ ಸೋಮ, ಒಳ್ಳೆಯ ರಚನೆ. ಕಲ್ಪನಾಪ್ರಾವಣ್ಯದ ಕವಿಸಮಯಕ್ಕೂ ವಿಜ್ಞಾನವಾಸ್ತವಕ್ಕೂ ಇರುವ ವ್ಯತ್ಯಾಸವನ್ನು ಸೊಗಸಾಗಿ ಧ್ವನಿಸುತ್ತಿರುವ ಈ ಪದ್ಯದ ಚೆಲುವು ಮನನೀಯ. ಒಂದೆರಡು ಸಣ್ನಪುಟ್ತ ವ್ಯಾಕರಣದ ತೊಡಕುಗಳಿವೆ: ಎರಡನೆಯ ಪಾದದ ಕೊನೆಯಲ್ಲಿಂದ ಮೊದಲ್ಗೊಂಡು ಮೂರನೆಯ ಸಾಲಿನ ಮೊದಲಿನಲ್ಲಿ ಸಂಧಿಯಾಗಬೇಕಿತ್ತು. ಆಗ ಛಂದಸ್ಸು ಕೆಡುತ್ತದೆ:-)ಖಳರ್ಗಂ ಎಂದರೆ ಸಾಕು, ಇಲ್ಲವಾದರೆ ಸಮುಚ್ಚಯಾರ್ಥಕವಾಗಿ; ಖಳರಿಗೆ ಕೂಡ ಎನ್ನುವ ಅರ್ಥದಲ್ಲಿ ಪದವನ್ನು ರೂಪಿಸಬೇಕಾದರೆ ಅದು ಖಳರ್ಗಮುಂ ಎಂದಾಗಿ ಮತ್ತೆ ಛಂದಸ್ಸು ಕೆಡುತ್ತದೆ:-) ಇನ್ನು ಪದ್ಯದಲ್ಲಿ ತಪ್ಪಿಲ್ಲದಿದ್ದರೂ ರಸೋಚಿತವಾಗಿ ಪದಪದ್ಧತಿಯಸೌಂದರ್ಯದ ದೃಷ್ಟಿಯಿಂದ ಕೆಲವೊಂದು ಸವರಣೆಗಳನ್ನು ಮಾಡುವುದಾದರೆ ಅದು ಹೀಗೆ:

      ಇಳೆಯಂ ರಾತ್ರಿಯೊಳಾಳ್ವನೆಂತು………..ಕಾಪಿಟ್ಟನೇಕೆಂದು ಮಾ-
      ರ್ಪೊಳೆವಾ ಶುಭ್ರತೆಯಂ ಸುಧಾಪ್ರಸರಮಂ ಮತ್ತೆಂತು ಮಾಳ್ಪಂ ಮಲ-
      ರ್ದೆಳೆಯರ್ಗೇಕಿವನೊಲ್ಮೆಯೀವ…………………………………
      ಖಳರ್ಗಂ ………………………………………………………

      • ಧನ್ಯವಾದ ಸರ್:),

        ನಿಮ್ಮ ಸೂಚನೆಯ೦ತೆ ಸವರಿಸಿದ್ದೇನೆ,

        ಇಳೆಯಂ ರಾತ್ರಿಯೊಳಾಳ್ವನೆಂತು, ಮೃಗಮ೦ ಕಾಪಿಟ್ಟನೇಕೆಂದು ಮಾ-
        ರ್ಪೊಳೆವಾ ಶುಭ್ರತೆಯಂ ಸುಧಾಪ್ರಸರಮಂ ಮತ್ತೆಂತು ಮಾಳ್ಪಂ ಮಲ-
        ರ್ದೆಳೆಯರ್ಗೇಕಿವನೊಲ್ಮೆಯೀವನೆಸೆಗುತ್ತುತ್ತೇಜಮ೦ ಪ್ರೀತರೊಳ್,
        ಖಳರ್ಗಂ ಬಾ೦ಧವನೇಕದೆ೦ದು ತಿಳಿಯಲ್ಕೀನೌಕೆಯಿ೦ ಶಕ್ಯಮೇ೦?

  5. ಅಂಗಳದಿ ಚಿತ್ತಾರ ಬರೆದು ಬೇಸತ್ತಿರಲು
    ಕಂಗಳಲಿ ನೂರೆಂಟು ಕನಸ ಕಂಡ |
    ಸಿಂಗಾರ ಮಾಡಿಹನು ಬಾನೊಡೆಯನೆಂದರಿತು
    ರಂಗೋಲಿಯಿಡೆವೊರಟ ಮನುಜನಿಂದು ||

  6. ಉದಯರವಿಯಂ ನೋಡಿಯದನು ನುಂಗಲ್ಕೆ ಹಾ-
    ರಿದನು ಹನುಮಂತ ತಾಂ ಶೈಶವದಲಿ |
    ಅದರಂತೆ ಚಂದಿರನ ಪಿಡಿವೆ ತಾನೆಂದೆಣಿಸು-
    ತದಟಿನಂ ಹಾರಿತೆ ವಿಮಾನವಿಂತು ||

    • ಎಲ್ಲಿಹುದು ಹಾರುಭಂಗಿಯೊಳಗಾ ವಾಯುಗವು?
      ಚೆಲ್ಲುತಲಿ ಧೂಮವನು ಚಿತ್ತಾರದೆ|
      ತಲ್ಲಣವದಿಲ್ಲದೆಲೆ ಸಾಗಿಹುದು ಸಮತೆಯಲಿ
      ಹೊಲ್ಲತನವೆಲ್ಲಿಹುದೊ -ಹಾದಿರಂಪ||

      • ಅದು ಚಂದ್ರನನ್ನು ಹಿಡಿದುಕೊಳ್ಳುವ ಜಿಗಿಭಂಗಿಯೊಳಿಲ್ಲ. ಅದು ಚಂದ್ರನಿಗಿಂದ ದೂರಕ್ಕೆ ಸುಮ್ಮಾನದಿಂದ ಸಾಗುತ್ತಿದೆ.

        • ಸೊಗಸುಗವಿತೆಯನೊರೆಯೆ ರಾಜಗೋಪಾಲಕಂ
          ಜಿಗುಟುವಂತಾದುದೇಂ ಹಾದಿರಂಪ?
          ಹೊಗೆಯನುಗುಳುತ್ತಾ ವಿಮಾನವಿಂದುವಿನತ್ತ
          ಜಿಗಿವುದುಂ ಕಾಣದೇ? ವಿಜಿತಪಂಪ!! 🙂

        • ವಿಜಿತಪಂಪ – 🙂 🙂 🙂

    • ರಾಜಗೋಪಾಲರೆ,
      ಹೊಸಬರಾದ್ದರಿಂದ ನಿಮಗೆ ತಿಳಿಯದು. ‘ಹಾದಿರಂಪ’ ಎಂಬುದು ನನ್ನ ಅಂಕಿತ. ನಿಮ್ಮ ಪದ್ಯವನ್ನು ಕುಚೋದ್ಯಮಾಡಿದ್ದಕ್ಕಾಗಿ ಶ್ರೀ ಗಣೇಶರು ನನ್ನನ್ನು ‘ಪಂಪನನ್ನು ಮೀರಿಸಿದವನು’ ಎಂದು ಕಟಕಿಯಾಡಿದ್ದಾರೆ.

  7. ಸಾರುsತs ಶಾಂತಿsಯs ಹೊರಟsನುs ಚಂದಿsರs –
    ನೇರುsತsಲಾಗsಸs ದೆಡೆಗೆs
    ಮೀರಿsದs ಮಾನsವsನೆಲ್ಲೆsಯsನೆಂಬಾಗs
    ಸೇರಿsದs ಮೌನsದs ಗುಡಿಗೆs

  8. “ಅಷ್ಠಮುಖದ ಬಾಲೆ ಬಹಳ ಚಲ್ವಿಕೆಯು,
    ಅಷ್ಠಮೀ ಚನ್ದ್ರನನ್ತೆ ಆಕಾರವುಳ್ಳವಳು;
    ಮೊದಲಕ್ಷರ ಹೂ! ಕಡೆಯಕ್ಷರ ಬು!”
    ಸಬೂಬಿಲ್ಲದೆ ಈ ಒಗಟು ಬಿಧಿಸಿಡವರಿಗೆ ಬಾನಿನಿನ್ದ ಮೆಡಲು ||

    ಇದು ನನ್ನ ಮೊದಲ ಯತ್ನ ತಪ್ಪಿದ್ದಲ್ಲಿ ಕೃಪಯಾ ತಿದ್ದಿ..

    • ಗಂಭೀರವಾದ ಪ್ರತಿಕ್ರಿಯೆ: ಕಾಗುಣಿತದೋಷಗಳಿವೆ. ಛಂದೋದೋಷವಿದೆ. ದಯವಿಟ್ಟು ವಿಡಿಯೋ ಪಾಠಗಳನ್ನು ನೋಡಿ-ಕೇಳಿ.

      In lighter vein:
      ಬಾಲೆ, ಮುಖ ಎಂಬಷ್ಟಕ್ಕೇ ನಿಲ್ಲಿಸಿದ್ದೀರಿ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅವಳ ಕಣ್ಣನ್ನೂ ಗಣಿಸಿದರೆ, ಆ ಎರಡು ಸೀಮಾಕ್ಷರಗಳೇ ಸಾಕು – ಹೂಬು 😉

    • ತಾವು ಪ್ರಸಾದು ಅವರ ಸೂಚನೆಯಂತೆ ಸಾಗಿರಿ.

  9. ಚಂದ್ರನು (ಇವನು ಸಂಸ್ಕೃತದ ಚಂದ್ರ, ಹಾಗಾಗಿ ಪುಲ್ಲಿಂಗಪ್ರಯೋಗ) ಅಂತು, ಇಂತು ಎಂದೆಲ್ಲ ಹೊಗಳುತ್ತೇವೆ. ಅವನು ಬೆಳಗುವ ವಸ್ತುಗಳನ್ನು ಗಮನಿಸೆವು. ಇಲ್ಲಿ ಚಂದ್ರನು ವಿಮಾನವನ್ನು ಬೆಳಗದೆ ಅದರ ಹೊಗೆಯನ್ನು ಮಾತ್ರ ಬೆಳಗಿ, ಪ್ರದೂಷಣದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಿದ್ದಾನೆ.

    ಮಂಜುಭಾಷಿಣಿ||
    ಅದೊ ನೋಡು ಚಂದಿರನ ಖಂಡಬಿಂದುವಂ
    ಕದಪಿಂತು ಪೆಣ್ಣಿನದದೆಂಬೆಯೋ, ಫಲಂ|
    ಭಿದವಿರ್ದೊಡಿರ್ಪ ಪರಿಯಂತಿದೆಂಬೆಯೋ,
    ಪದಕಂ ನಭೋರಕಿರಿಸಿರ್ಪರೆಂಬೆಯೋ||

    ಅದು ರಂಜಿಸಿರ್ಪ ನಭದೊಳ್ ಸುದರ್ಶನಂ
    ವಿದಿತಂ ಗಡಾ, ಬೆಳಗದೆಲ್ ವಿಮಾನವಂ|
    ಕೆದರಿರ್ಪ ಧೂಮವನೆ ಮಾತ್ರ ತೋರುತಲ್
    ಹದದೊಂದು ಪಾಠವನೆ ಬೋಧಿಸಿರ್ಪುದೈ||

    • ಕೊರೆ: ವಿವರಣೆ ಇಲ್ಲದೆಲೆ, ‘ಪಾಠ’ವು ಪ್ರದೂಷಣಕುರಿತಾದದ್ದು ಎಂದು ತಿಳಿಯದು. ಇನ್ನೊಂದು ಪದ್ಯ ಬರೆದು ವಿಶದಪಡಿಸಬಹುದು. ‘ದ’ಕಾರಪ್ರಾಸಪದಗಳು ಖಾಲಿಯಾದ್ದರಿಂದ ವಿರಮಿಸಿದೆ. 😉

    • ಕೊನೆಯ ಸಾಲು:
      ರುದಿಸುತ್ತೆ ತೋರಿದೆ ಪ್ರದೂಷಭೀಷಣಂ|| (ಶಿ.ದ್ವಿ)

    • ಮಂಜುಭಾಷಿಣಿಯಂಥ ಅತಿಮನೋಹರವೃತ್ತ್ರವನ್ನು ಎಲ್ಲರಿಗೂ ನೆನಪಿಸಿಕೊಟ್ಟುದಕ್ಕಾಗಿ ತುಂಬ ಧನ್ಯವಾದಗಳು. ಆದರೆ ಮೊದಲ ಪದ್ಯದ ಕಡೆಯ ಪಾದ ಅರ್ಥವಾಗಲಿಲ್ಲ.. ಮುಖ್ಯವಾಗಿ ನಭೋರ…..ಇತ್ಯಾದಿ ಭಾಗಗಳು. ಇಲ್ಲಿಯ ಶಬ್ದ-ಅರ್ಥಗಳ ವಿವರಣೆ ಬೇಕಾಗಿದೆ. ಕಲ್ಪನೆಯು ವಿವರಣಸಾಪೇಕ್ಷವಾಗಿದೆ. ಹಾಗಲ್ಲದಿದ್ದರೆ ಒಳಿತು. ಹಳಗನ್ನಡದ ಹೊಗರು ಸೊಗಸಾಗಿದೆ. ಆದರೆ ಅಲ್ಲಲ್ಲಿ ತೀರ ಸಣ್ಣ-ಪುಟ್ಟ ಸವರಣೆಗಳಿಂದ ಇವನ್ನು ಮತ್ತೂ ಹಳಗನ್ನಡದತ್ತ ಸಾಗಿಸಬಹುದು. ಮುಖ್ಯವಾಗಿ ಹಲವೆಡೆ ’ವ’ವನ್ನು ’ಮ’ಮಾಡುವ ಮೂಲಕ:-)

    • ನಭೋರ = ನಭ+ಉರ = ಬಾನ ಎದೆ(ಗೆ ಇರಿಸಿದ ಪದಕ)

      ಅದೊ ನೋಡು ಚಂದಿರನ ಖಂಡಬಿಂಬಮಂ
      ಕದಪಿಂತು ಪೆಣ್ಣಿನದದೆಂಬೆಯೋ, ಫಲಂ|
      ಭಿದವಿರ್ದೊಡಿರ್ಪ ಪರಿಯಂತದೆಂಬೆಯೋ,
      ಪದಕಂ ನಭೋರಕಿರಿಸಿಟ್ಟೊಲೆಂಬೆಯೋ||

      ಅದು ರಂಜಿಸಿರ್ಪ ನಭದೊಳ್ ಸುದರ್ಶನಂ (=ತತ್ತ್ವ)
      ವಿದಿತಂ ಗಡಾ, ಬೆಳಗದೆಲ್ ವಿಮಾನಮಂ|
      ಕೆದರಿರ್ಪ ಧೂಮಮನೆ ಮಾತ್ರ ತೋರುತಲ್
      ರುದಿಸುತ್ತೆ ತೋರಿದೆ ಪ್ರದೂಷಭೀಷಣಂ||

      ದಯವಿಟ್ಟು ಕೊರೆಯಿರುವ ಭಾಗಗಳನ್ನು ತಿದ್ದಿರಿ. ಕಲಿಕೆಗೆ ಅದೇ ಸುಲಭಮಾರ್ಗ.

      • ನಭಸ್ ಎಂಬುದು ಸಕಾರಾಂತ ಶಬ್ದ. ಹೀಗಾಗಿ ನಭೋರ ಎಂಬ ಗುಣಸಂಧಿಯಾಗದು; ನಭ ಉರ ಎಂಬ ವಿಸರ್ಗಸಂಧಿಯೇ ಸಾಧು, ಸಾಧ್ಯ:-)

        ತಮ್ಮ ದೋಷಮಾರ್ಜನಪ್ರಾಂಜಲತೆ ಸುವಿದಿತ, ಮುದಾವಹ, ಸರ್ವರಿಗೂ ಅನುಕರಣೀಯ. ಇಲ್ಲಿಯ ಹಲಕೆಲವು ಸವರಣೆಗಳನ್ನು ಮುಖತಃ ತಿಳಿಸುವೆ.

    • ಕೃತಜ್ಞನಾಗಿದ್ದೇನೆ.

      1) ನಭಸ್ ತಿದ್ದುಪಡಿ – ಪದಕಂ ದಿವಕ್ಕಿರಿಸಿದಂದದಂದಮೋ||

      2) ಕೊನೆಯ ಸಾಲಿನಲ್ಲಿ ಅರ್ಥಕ್ಲೇಶವಿದೆ. ‘ಪ್ರದೂಷಭೀಷಣಮಂ’ ಎನ್ನಬೇಕಾಗುತ್ತದೆ. ಆಗ ಛಂದಸ್ಸು ಕೆಡುತ್ತದೆ. ‘ರುದಿಸುತ್ತೆ ದುಃಖಿಪುದು, ಪ್ರದೂಷಭೀಷಣಂ’ ಎಂದು ಸವರಿದರೆ ಸರಿಯಾದೀತು.

  10. ಬಿರಿದ ಹೊಟ್ಟೆಯನಣಕಗೈದಿಂದುವನು ಸೆದೆಯೆ ಕರಿಮುಖನ ವಾಹನ ವಿಮಾನವಾಯ್ತೆ?
    ಹರಭಸ್ಮ ಲಯತತ್ತ್ವ ಜಯದಾಚರಣೆ ವರಿಸಿ ಚರಿಸಿ ನಭಕಿಳಿದು ಬೂದಿಯಬಳಿದುದೇ?
    ಪುರುಷಸೂಕ್ತಪ್ರಭಾನೀಲಕ್ಕೆ ರುದ್ರರುಚಿ ಚಂದ್ರಭಸ್ಮವನೀಡಿದದ್ವೈತವೇ?
    ಕರಗಿ ಮಾಯಾತಮದಶಶಿಯಳಿಯೆ ಮನವಿಳಿಯೆ ಸೂರ್ಯವಾಸ್ತವಧವಳಧೀಕಾಂತಿಯೇ?

    ದೂರದಲ್ಲೆಲ್ಲೊ ಮೆರೆದಾಡಿ ಬೆಳೆದು ಕರಗಿ
    ಸಾರವರಿದಂತೆ ಸರಿದಂತೆ ಪಡೆಯುತಡಗಿ
    ಕಾರಣವುಕಾರ್ಯ ತಿಳಿದಂತೆ ತರ್ಕಗೊಡವೆ
    ಧಾರಣವೆ ತಕ್ಷಣಕೆ ಸೊಗವು ಸೌಖ್ಯದೊಡವೆ

    ತನ್ನಸ್ವಾಮಿಯನ್ನು ಅಣಗಿಸಿದ ಚಂದ್ರನನ್ನು ಸೆದೆಬಡಿಯಲು ಗಣಪನ ವಾಹನವೇ ವಿಮಾನದ ರೂಪತಾಳಿ ಧಾಳಿಯಿಟ್ಟಿತೇ? ಲಯಕಾರಕವಾದ ಶಿವತತ್ತ್ವ, ಎಲ್ಲಾತ್ರಿಪುಟಿಗಳನ್ನೂ ಭಸ್ಮಮಾಡಿ ತನ್ನ ವಿಜಯೋತ್ಸವವನ್ನು ಆಚರಿಸಲು ವಿಶ್ವಕ್ಕೇ ವಿಭೂತಿ ಬಳಿಯಲು ಹೊರಟಿತೇ? ಪುರುಷಸೂಕ್ತಸ್ತುತವಾದ ಶ್ರೀಕೃಷ್ಣತತ್ತ್ವದ ಸಂಕೇತವಾದ ನೀಲಾಕಾಶಕ್ಕೆ ರುದ್ರಾಧ್ಯಾಯದ ಧವಳ ಚಿಹ್ನೆಗಳಾದ ಚಂದ್ರ ಮತ್ತು ವಿಭೂತಿಗಳು ಸೇರಿ ಹರಿಹರಾಭೇದದ ಅದ್ವೈತಸೂಚನೆ ಅಂಬರದಲ್ಲಿ ರೂಪುಗೊಂಡಿತೇ? ಜ್ಞಾನಸೂರ್ಯಪ್ರಖರತೆಯಿಂದ ತಮೋಗುಣವೆಂಬ ಕತ್ತಲು ಕರಗಿ, ಕಪ್ಪು ತಿಳಿಯಾದ ನೀಲವರ್ಣವಾಗಿ, ಮನಸ್ಸಿನ ವಿಭ್ರಾಂತಿಗಳು ಮರೆಯಾಗುವ ಚಂದ್ರನಾಗಿ, ಸತ್ವಗುಣ ಚಿಮ್ಮುತ್ತ ಬಂತೇ? ಬದುಕಿನ, ವಿಶ್ವದ, ಸಕಲವಿಚಾರದ ನಮ್ಮ ಅಭಿಪ್ರಾಯಗಳು ನೀಲಾಕಾಶದಂತೆ ಆಳವಾಗುತ್ತ, ತಿಳಿಯಾಗುತ್ತ, ಆ ಚಂದ್ರನರೀತಿಯಲ್ಲಿ, ಅರ್ಥತಿಳಿದುಕೊಂಡಂತೆ, ಮತ್ತೆ ಏನೋ ಕೊರೆಯಾದಂತೆ, ಪಡೆಯುತ್ತ, ಕಳೆದುಕೊಳ್ಳುತ್ತಾ ಹೋದಂತೆ, ಕಾರ್ಯ-ಕಾರಣ ಸಂಬಂಧ ತರ್ಕ-ವಿತರ್ಕಗಳ ವಿಮಾನಯಾನದ ಗಲಭೆಯನ್ನು ಬದಿಗಿಟ್ಟು, ಈ ತಕ್ಷಣದ ಅನುಭವಕ್ಕೆ ಬುದ್ಧಿಯನ್ನು ಬಗ್ಗಿಸಿ ಮನಸ್ಸನ್ನು ಒಗ್ಗಿಸಿದಾಗ ಸೌಖ್ಯ ಮತ್ತು ಸೊಗಸು ಲಭ್ಯವೇನೊ.

    • ತೇಟಗೀತಿ||

      ಆಹ! ಉತ್ಪ್ರೇಕ್ಷೆಗಳ ಮಾಲೆಯೆಂಥ ಸೊಗಸು!!
      ರೂಹು ಕಣ್ಮಲರ್ಗಳ್ಗೆ ಹರ್ಷಾಳಿಯ ತರಲ್ |
      ಸ್ನೇಹಸೌಗಂಧಸಖನಾಗೆ ಪದ್ಯಗಂಧ-
      ವಾಹನ್, ಏಂ ವೇಳ್ವೆನೀ ಸೀಸಮಿತ್ತ ಸಿರಿಗಂ!!!

      • ಧನ್ಯವಾದದ ನಮನ

        • ತಮ್ಮದಲ್ಲ!?!

          • ನನದೆ ಧನ್ಯತೆಮೋದವಿರದನ್ಯತಾವಾದ
            ವಿನುತಿ ರಾಗರಿಗೆಂದುಮೆಲ್ಲರದಲಾ
            ಅನುಸರಿಸಲಿದ ’ಧನ್ಯವಾದ’ದುಗಮವು ಸರಳ
            ನನದು ನಿಮದೆಲ್ಲರದು ಹಾದಿರಂಪಾ,

            ಹರಡು ಹಾಸ್ಯದ ಕಂಪ
            ತುಳಿಯುತೊತ್ತೈ ಸೊಂಪ
            ನಗೆಯಟ್ಯೂಬಿನ ಪಂಪ,
            ವಿಜಿತ ಪಂಪ 🙂

    • ಬಲು ಉದಾತ್ತವಾದ ವಿಚಾರಸರಣಿ ಚಂದ್ರಮೌಳಿಯವರೆ. ನಿಮ್ಮ ಓದು ಅನುಭಾವದ ಹರಹು ಆಳಗಳನ್ನು ಪ್ರತಿಬಿಂಬಿಸುತಿದೆ ನಿಮ್ಮ ರಚನೆ.

      • ಪದ್ಯಪಾನಕ್ಷೇತ್ರನವಮಿತ್ರ ಕಾವ್ಯಕಲಾವಿಸ್ತಾರಾನುಭವಿ ಶ್ರೀಶ್ರೀಕಾಂತರ ಉದಾತ್ತನುಡಿಗಳಿಗೆ ವಿನಮ್ರನಮನ

    • ಚಂದ್ರಮೌಳಿ ಸರ್,
      ಧನ್ಯವಾದಗಳು. ಲಲಿತಾಸಹಸ್ರನಾಮದಲ್ಲಿ ಬರುವ “ಮನುವಿದ್ಯಾ ಚಂದ್ರವಿದ್ಯಾ……..” ಇದೇ ಇರಬೇಕು ಅಲ್ಲವೇ?

      • ಉಷಾರವರಿಗೆ ನಮಸ್ಥಾರ. ಚಂದ್ರನಿಗೂ ಮನಸ್ಸಿಗೂ ಸಂಬಂಧವುಂಟಲ್ಲವೇ. ಚಂದ್ರಮಾ ಮನಸೋ ಜಾತ:… ಮನಸ್ಸಿನ ವೃತ್ತಿಗಳ ಏರಿಳಿತಗಳು, ಭಾವುಕತೆ, ಸಮಸ್ಧಿತಿ, ಲಯ ಇವು ಚಂದ್ರಾವಸ್ಥೆಗಳೇ. ಮನಸ್ಸಿನ ಆ ಚಂದ್ರಸಂಬಂಧದ ಸೂಚನೆಯಷ್ಟೆ ಪದ್ಯದಲ್ಲಿದೆ.
        ಲಲಿತಾಸಹಸ್ರದ ಚಂದ್ರವಿದ್ಯಾ – ದೇವಿಯ ಶ್ರೀವಿದ್ಯಾಸ್ವರೂಪದ ಸಂಕೇತ, ಮನುಪ್ರಣೀತವಾದದ್ದು ಮನುವಿದ್ಯೆ, ಇದೆಲ್ಲಾ ಸತ್ಯವಾಗಿಯೂ ಪದ್ಯರಚನೆಯವೇಳೆಯಲ್ಲಿ ನನ್ನ ಗಮನದಲ್ಲಿರಲಿಲ್ಲ. ಆ ಕಾರಣ-ಕಾರ್ಯದ ಗೊಡವೆ ಬೇಡ, ಸದ್ಯಃಪರನಿವೃತ್ತಿಯ ಒಡವೆ ಸಾಕೆಂಬುದೇ ಅಲ್ಲಿಯ ಭಾವ.

  11. ಸಮಯಮಿತಿಯಲ್ಲಿ ಕೆಲವು ಪ್ರಯತ್ನಗಳು :

    ಭಾಮಿನಿ:
    ======

    ದೇವಚಂದ್ರನ ಗುಡಿಯ ಹೊರಗಡೆ
    ಭಾವಪೂರಿತ ಮನುಜ ಭಕುತರು
    ಸೇವೆಮಾಳ್ಪರೆ ರಥವನೆಳೆಯುತ ನೀಲದಾಗಸದಿ
    ಯಾವದಿಂದುವ ಮೂರ್ತಿಯೊಯ್ದರೊ
    ತೇವವಲ್ಲದು ಧೂಮಧೂಳಲಿ
    ನೇಮವರಿಯೆನು ಸಾಮಗಾನಕೆ ಶಬ್ದ ಪೂರಣವು

    ಭೋಗ :
    ======

    ದೇವಚಂದ್ರ ಗುಡಿಯ ಹೊರಗೆ
    ಭಾವಭಕುತರೆಲ್ಲ ಸೇರಿ
    ಸೇವೆ ಮಾಳ್ಪ ರಥವನೆಳೆದು ನೀಲಬಾನಲಿ |
    ಯಾವಮೂರ್ತಿ ಮೆರೆಯಿಸುತ್ತ
    ತೇವರಹಿತ ಧೂಮಚೆಲ್ಲಿ
    ನೇಮತಿಳಿಯದಾಯ್ತು ಸದ್ದು ಸಾಮಗಾನಕೆ ||

    ಕಂದ :
    =====

    ದೇವಳಚಂದ್ರನದಂಚಲ್
    ಸೇವೆಗೆ ಭಕ್ತರು ರಥವನು ಎಳೆವುದ ಕಂಡೇಂ |
    ಭಾವದ ಚಿತ್ತಾರದೊಳೂ
    ಗಾವುದ ದೂರಕೆ ಬಿರುಸಲಿ ಸಪ್ಪಳ ಹರಿದೂ ||

    • ಮೂರು ಬಗೆ ಬಟ್ಟಲ್ಗಳೊಳ್ ನೀಂ
      ಸಾರನೊಂದೇ ಮಾಡಿ ತುಂಬಿಸಿ |
      ತೋರಿದಿರಲಾ! ಭಟ್ಟರೇ!! ವ-
      ಹ್ವಾರೆ! ಭಳಿರೇ! ದಿಟ್ಟರೇ!! 🙂

      ಇವುಗಳರ್ಥವನರಿಯೆ ಕಿಂಚಿ-
      ಕವಿದುದೆನ್ನಯ ಬುದ್ಧಿ ತೊಡಕಿಂ|
      ಸವೆದುದಂತೆಯೆ ಕನ್ನಡದ ನುಡಿ-
      ಗವಳವೂ ಅಲ್ಲಲ್ಲಿ ಹಾ!!! 🙂

    • ಭಳಿರೆ ಭಟ್ಟರೆ,
      ವೃತ್ತಂಗsಳಾಯ್ಕೆಯsದುತ್ತುಂಗs ರೀತಿsಲೆs
      ಚಿತ್ತಂಗsಳನು ತೂಗಿಸುತಿsವೆ – ಭಾಮಿsನಿs
      ಮತ್ತಂತೆs ಭೋಗs, ಕಂದಂಗಳ್!

      • ಹೀಗೊಂದು ಕಲ್ಪನೆ ಅಷ್ಟೇ. ಕ್ಷಮಿಸಬೆಕು, ಇನ್ನೂ ಕೆಲವು ಪ್ರಯತ್ನ ಮಾಡಬೇಕೆಂದಿದ್ದೆ, ಉದರಂಭರಣೆಯ ಉಪಜೀವನ ಕಾಡುತ್ತದೆ, ಸಮಯ ಜಾಸ್ತಿ ಬೇಡುತ್ತದೆ. ಎಲ್ಲರಿಗೂ ಧನ್ಯವಾದಗಳು.

      • ನನ್ನ ಮಾತು ತಮಗೆ ಪೂರ್ತಿಯಾಗಿ ಅರ್ಥವಾಗಿಲ್ಲ. ವೃತ್ತಗಳ ಆಯ್ಕೆಯ ಆನುಪೂರ್ವ್ಯದಲ್ಲಿನ ಮೋಜಿನ ವಿಷಯವನ್ನು ಅರುಹಿದ್ದೆ ನನ್ನ ತ್ರಿಪದಿಯಲ್ಲಿ – ಮೊದಲು ಭಾಮಿನಿ, ನಂತರ ಭೋಗ ಆಮೇಲೆ ಕಂದ. ‘ಇನ್ನೂ ಕೆಲವು ಪ್ರಯತ್ನ ಮಾಡಬೇಕೆಂ’ದಿರುವಿರ? ಇನ್ನೆಷ್ಟು ಮಾಡಿದರೂ ಅವು ಕಂದಗಳಾಗಿಯೇ ಉಳಿಯುತ್ತವೆ 😉

        • ಕೂಟದೊಳಾಭಾಮಿನಿಯಿರೆ
          ಬೇಟಂ ಭೋಗಂಗಳಾಗೆ ಕಂದಮ್ ಛೀಪೋ
          ಕಾಟಮೆನೆ ಸ್ವಾಮಿನಿ ಕಿಡಿ
          ನೋಟದೆ ಸುಡಲಾಸೆಯುಡುಗಿ ನಾಗಾಲೋಟಂ

      • ಮಗುಳೆ ಯತ್ನಿಪೆನೆಂಬ ಭಟ್ಟಗೆ
        ನಗುತೆ ಪ್ರೋತ್ಸಾಹಿಸದೆ ಕಾಂತರೆ|
        ವೆಗಟ ನುಡಿಯಿಂ ತಡೆಯನೊಡ್ಡುತೆ
        ಹಗೆಯನೇತಕೆ ಕೊಂಡಿರೈ||

        • ಕಂಡೆ ಭಾಮಿನಿಯೆಂದ ಮಾತ್ರಕೆ
          ಉಂಡು ಮಲಗುವ ಗಂಡನೆಂದಿರೆ
          ಭಂಡಧೈರ್ಯಕೆ ಬಲವದಾರದು ಚಂದ ಬಾಪಟರೇ?
          ಮಂಡೆಬಿಸಿಯಾಗಿರಲು ದಿನವಹಿ
          ಹಂಡೆಗಟ್ಟಲೆ ಹೆಂಡಕುಡಿಯದೆ
          ತಿಂಡಿಯಲಿ ಸಂತೈಸಿ ಕೊಂಬವ ಕಂದರರಿವಿನಲಿ ||

          • ಬಾಪಟರು ಇವರಲ್ಲ, ಬೇರೆಯೆ
            ಪಾಪದಾ ಜನರೆಂದು ತಿಳಿಯಿರಿ
            ಭೂಪರಿವರೈ ಬಾಪಟರ ಗಡ ಸಂಗಡಿಗರಹುದೈ
            🙂

        • ‘ಪಾಪದಾ ಜನ’ವೆಂಬ ಮಾತನು
          ಬಾಪಟರ ಮೇಣೆನ್ನ ನಡುವಿರಿ
          ಸಾ ಪದವನಿಬ್ಬಂದಿಗೊಳಿಸುತೆ
          ತಾಪ ತಣಿಸಿಹೆ ರಾಮನೆ|

        • ಭಟ್ಟರೆ,
          ಕಂಡೆ ಭಾಮಿನಿಯೆಂದ ಮಾತ್ರಕೆ – I am laughing uncontrollably. I simply can’t stop laughing.
          ತಿಂಡಿಯಲಿ 🙂 🙂 🙂
          Yours and Ram’s verses are hilarious.

          • ಬಾಪಟರಲ್ಲದ ಪ್ರಸಾದರಿಗಾಗಿ ಎಕ್ಸ್ ಕ್ಲೂಸಿವ್
            ===========================

            ಈಪರಿಯ ನಗು ನೋಡಿ ಸಹಿಸಲು
            ಆ ಪರದ ಮಾಧವನ ವೇಷದಿ
            ತಾಪಸದಿ ಕನಸುತ್ತ ಭಾಮಿನಿ ಓ ಪ್ರಸಾದುಗಳೇ |
            ಹ್ಯಾಪುಮೋರೆಯ ಹಾಕಿಕೊಳ್ಳದೆ
            ತಾಪವಿಳಿಸಲು ಕರೆಯಿರೆಲ್ಲರ
            ಪಾಪವೆಲ್ಲವ ತೊಳೆದುಕೊಳ್ಳಿರಿ ಬರಿದೆ ತಾವ್ ಮುದದೆ || 🙂 🙂

            ಮುಂದುವರಿಯುತ್ತ ………….

            ಸಾಂಗತ್ಯದ ಒಂದು ಪ್ರಯತ್ನ :
            ==================

            ತಂಗದಿರನ ಮುಂದ ತಾವೂ ಹಾರುವೆವೆಂದು
            ಸಂಘದೆ ಕೆಲ ಜನ ಹಾರೀ
            ಮಂಗಳ ನೆಡೆಯಲ್ಲಿ ಹೋಗಿ ಬಂದಿಹೆವೆಂದು
            ರಂಗವಲ್ಲಿಯ ರೂಪ ತೋರಿ

            ದಯವಿಟ್ಟು ವೃತ್ತ ಸರಿಯಿದ್ದರೆ ಹೆಸರಿಸಿ, ತಪ್ಪಿದ್ದರೆ ಸಹಕರಿಸಿ :
            ===================================
            ನಡೆಯಲ್ ಚಂದಿರನೆತ್ತರಂ ಹದದೊಳು ತಾಂ ಕಾಣ್ಪುದೇ ಸಲ್ಲುತಂ ?
            ಮಿಡಿಯಲ್ ನವವಿಧ ತಾಂತ್ರಿಕಜ್ಞತೆಗಳಂ ಕಣ್ಗೊಪ್ಪುದೇ ಕಂದಕಂ ?
            ಬಡಿಯಲ್ ಭಾರವನೆಟ್ಟು ಭೂಸುರರವಂ ತೆರೆದೋರ್ವನೆ ಚಂದ್ರಮ ?
            ತಡೆಗಳ್ ಬರದಿರೆ ಕಾಂಬೆವೈ ಪುನರಪಿ ಯತ್ನಂಗಳಂ ಮಾಡುತಂ !

          • ಸಾಂಗತ್ಯಪದ್ಯ:
            ‘…ನ ಹಾರೀ’ ಮತ್ತು ‘…ಪ ತೋರಿ’ – ಕರ್ಷಣದಲ್ಲಿ ಮುಚ್ಚಿಹಾಕಿದರೂ, ಲಗಂ ಬರುವಂತಿಲ್ಲ.
            ಮತ್ತೇಭವಿಕ್ರೀಡಿತಪದ್ಯ:
            ಎರಡನೆಯ ಪಾದವುಳಿದು ಎಲ್ಲ ಪಾದಗಳಲ್ಲಿ ಅಕ್ಷರದೋಷವಿದೆ.
            ಮೊದಲ ಪದ್ಯದ ಉತ್ತರಾರ್ಧವುಳಿದು, ನಿಮ್ಮ ಮೂರೂ ಪದ್ಯಗಳ ಪೂರ್ಣತಾತ್ಪರ್ಯವಾಗಲಿಲ್ಲ.

          • ಭಟ್ಟರೆ ನಿಮ್ಮ ಸಾಂಗತ್ಯಕ್ಕೆ ಪ್ರತಿಕ್ರಿಯೆ:
            ಸಾರಿs ಚಂದಿರನೆಡೆs ದಾರಿsಯs ತಪ್ಪುತ್ತೆs
            ಸೇರಿsರೆs ಮಂಗsಳ ಗ್ರಹವಂ |
            ಮೋರೆsಗೆs ಮಂಗsಳsನೆಳೆದs ನಾಮಂಗsಳೆs
            ತೋರಿsವೆs ರಂಗೋಲೆs ವೋಲುs||

          • ಭಟ್ಟರೆ ನಿಮ್ಮ ಭಾಮಿನಿಪದ್ಯಕ್ಕೆ:
            ಆ ಪರಿಯೊಳಗೆ ನಗುತಲಿರ್ಪಾ
            ನ್ಹ್ಯಾಪು ಮೋರೆಯ ತೊಡಲದಕ್ಕುಮೆ
            ಪಾಪವೆಲ್ಲವನ್ನೊಟ್ಟುಗೂಡಿಸುತೊಮ್ಮೆಗೇ ತೊಳೆವೆ|

  12. ಹಾರಿದೆ ನೋಡಾ ಲೋಹದ ಹಕ್ಕಿಯು
    ದಾರಿಯ ಲೋಲದ ಹಕ್ಕಿಯೊಡಂ ।
    ಜಾರುವ ಲೋಪವ ಮೀರುತಲೇರಿದೆ
    ಸೇರಲು ಲೋಕದ ಹಕ್ಕಿಯನುಂ ।।
    (ಲೋಹದ ಹಕ್ಕಿ (= ವಿಮಾನ)ಯು, ಲೋಲದ ಹಕ್ಕಿ (=ಚಂದ್ರ)ಯೊಡನೆ ಲೋಕದ ಹಕ್ಕಿ (=ಸೂರ್ಯ)ಯೆಡೆಗೆ ಹಾರುತ್ತಿದೆಯೇ?!)

  13. ನೀಲಾಂಬುಧಿಯೊಳ್ ನೌಕಾ ಯಾನಂ
    ನಾಲ್ದೆಸೆಯಿಂ ಸಾಗಿಬಂದ ಪಯಣದ ಪರಿವೇಂ ।
    ನೀಲಾಂಬರದೊಳ್ ಹಕ್ಕಿಯ ಹಾರೌ
    ನಾಲ್ಬೆರಳಿಂದವಗೆ ಸಂದ ನಮನದ ಪರಿಯೇಂ ।।

    (ನೀಲ ಸಾಗರದಲ್ಲಿ ನೌಕೆಗಳ ಯಾನವೋ? ನೀಲ ಆಗಸದಲ್ಲಿ ಹಕ್ಕಿಗಳ ಹಾರಾಟವೋ? ನಾಲ್ಕು ಪಥದಲ್ಲಿ ಸಾಗಿಬಂದ ಪಯಣವೋ? ನಾಲ್ಕು ಬೆರಳಲ್ಲಿ ಭಗವಂತನಿಗೆ ಸಂದ ನಮನವೋ?(salute!) ಏನು ಈ ಪರಿ/ ಪರಿವು ?!)

    • ಇದೇನು, ಕಂದಪದ್ಯದ ಮೊದಲ ಮತ್ತು ಮೂರನೆಯ ಪಾದಗಳಿಗೆ ಒಂದು ಗಣ ಹೆಚ್ಚಾಗಿ ಆದಿಪ್ರಾಸವೂ ಹಳಿ ತಪ್ಪ್ಪಿದೆ!!

      • ಹೌದು ಗಣೇಶ್ ಸರ್, ತಪ್ಪಾಗಿದೆ ಕ್ಷಮಿಸಿ. ಎರಡೂ ಪದ್ಯಗಳನ್ನು ಚೌಪದಿಯಲ್ಲಿ ಪ್ರಯತ್ನಿಸಿದ್ದು. ಈ ಪದ್ಯದ 2ನೇ ಸಾಲಿನಲ್ಲಿ “ಜಗಣ”ಬಂತೆಂದು “ಕಂದ”ಕ್ಕೆ ನಂತರ ಬದಲಾಯಿಸಿದ್ದು. ಒಂದು ಗಣ ಹೆಚ್ಚಾದದ್ದು ಗಮನಿಸಿಲ್ಲ (ಸ್ವಲ್ಪ ಅನಾರೋಗ್ಯದ ಕಾರಣ ಕೂಡ). ಸರಿಪಡಿಸಲು ಪ್ರಯತ್ನಿಸುತ್ತಿದ್ದೇನೆ. “ನೀಲ್ಯಂಬುಧಿಯೊಳ್ ಯಾನಂ”,
        “ನೀಲ್ಯಂಬರದೊಳ್ ಹಾರೌ” ಸರಿಯಾಗುವುದೇ? ದಯವಿಟ್ಟು ಸರಿಪಡಿಸಿಕೊಡಿ.

    • ಅದಿಪ್ರಾಸ ಹಳಿತಪ್ಪಿಲ್ಲ. ಪಕ್ಕದ ಹಳಿಯಲ್ಲಿದೆ. ಪಾದಗಳ ಮೊದಲ ಅಕ್ಷರಗಳೆಲ್ಲ ದೀರ್ಘ ‘ನ’ಕಾರಗಳು!
      ಕ್ಷಮೆ. (I am sorry ಎಂದಾಗ sorry ಕ್ರಿಯಾಪದವಾಗುತ್ತದೆ. ಬರಿಯ sorry ಎಂದಾಗ ಅದು ನಾಮಪದ – ‘ಕ್ಷಮೆ’ ಅಷ್ಟೆ!)

      • ಪ್ರಸಾದ್ ಸರ್,
        ಬರಿ “sorry” ಅಲ್ಲ , “I am ವೆರಿ sorry”. ದಯವಿಟ್ಟು ಸರಿಪಡಿಸಲು ಸಹಾಯಮಾಡಿ.

    • ವಿಮಾನದ ನಾಲ್ಕು exhaustಗಳಿಂದ ಧೂಮವುಕ್ಕುವುದನ್ನು ‘ನಾಲ್ದೆಸೆಯ ಯಾನ’ವೆನ್ನಬಹುದೇ?
      ‘ನಾಲ್ಕು ಬೆರಳಲ್ಲಿ ಭಗವಂತನಿಗೆ ಸಂದ ನಮನ’ವು ಡಾಕೂ ಅಂಗುಲಿಮಾಲನ ವಿಕ್ಟಿಂಗಳವೇ?
      ತಮ್ಮ ಕೋರಿಕೆಯಂತೆ ಪದ್ಯವನ್ನು ತಿದ್ದಲು ಹೋದೆ. ಅದು ಬೇರೆಯೇ ದಾರಿ ಹಿಡಿಯಿತು. ಸ್ವಾರ್ಥ ತೋರಿತು. ತಿದ್ದಿದ ಪದ್ಯವನ್ನು ನನ್ನ ಹೆಸರಲ್ಲೇ ಹಾಕಿದ್ದೇನೆ 🙂
      ಕ್ಷಮೆ.
      ————
      (ಪೂರ್ತಿ ಹಳಗನ್ನಡವಲ್ಲ)
      ನೀಲಾಂಬರದೊಳ್ ತೇಲ್ವುದು
      ನೀಲಾಂಬುಧಿಯೊಳ್ ತರಂಡದವೊಲಾ ಚಂದ್ರಂ|
      ಜಾಲಂ ನೇಯ್ದಿರೆ ವಾಯುಗ
      ಮೇಲಾಂಬುಪೊಗೆಯೊಳು ಕಂಡು ಚಿಕಿತಂ ವಿಹಗಂ||
      (ತರಂಡ = ನಾವೆ, ಮೇಲಾಂಬು = ಶಾಹಿ, ink)

      • ಧನ್ಯವಾದಗಳು ಪ್ರಸಾದ್ ಸರ್,
        ಪದ್ಯ ತಿದ್ದಿಕೊಟ್ಟಿದಕ್ಕೆ. (“ಚಂದ್ರ & ವಿಮಾನ”ಎರಡೂ “ನೌಕೆ & ಹಕ್ಕಿ”ಗಳಾಗಿ ಕಂಡದ್ದು / ಬಂದದ್ದು “ಹೆಬ್ಬೆಟ್ಟು” ಮಡಿಸಿದ “solute” !)

      • ಹೆಬ್ಬೆಟ್ಟು ಎತ್ತಿರದೆ ಮಡಿಸಿರುವುದರಿಂದ, ಅದು sOlute ಆಗದು, solvent ಆಗುತ್ತದೆ 😉

  14. ಕಾಲನ ಮುಡಿಸಿರಿಗೆ ಮನುಜ
    ಕಾಲನಿಡುವ ರಭಸ ನೋಡ ಅರಿಯದ ಮಾಯಾ
    ಜಾಲವು ಬೊಮ್ಮ ಸೃಜಿಸದ
    ಸಾಲೆಯು ಸೂಸಿದೆಯೊ ಸೋಜಿಗವ ಕಾಣು ಮನುಜ

    • 1) ‘ನೋಡ ಅರಿಯದ’ – ವಿಸಂಧಿದೋಷ. ಅದು ‘ರಭಸ ನೋಡಾ’ ಎಂದಾಗಬೇಕು. ಛಂದಸ್ಸು ಕೆಡುತ್ತದೆ.
      2) ಸೃಜಿಸದ? Should it be ಸೃಜಿಸಿದ?
      3) ಮೂರನೆಯ ಪಾದದಲ್ಲಿ ಒಂದು ಮಾತ್ರ ಕಡಿಮೆ ಇದೆ.
      4) ‘ಸಾಲೆ’ ಎಂದರೆ ‘ಶಾಲೆ’ಯೆ?
      5) ಕೊನೆಯ ಪಾದದ ಕೊನೆಯ ಗಣ ತಪ್ಪಾಗಿದೆ (ನನನಾ/ ನಾನಾ ಮಾತ್ರ).

      • ಹೀಗಾಗಬಹುದಾ?

        ಕಾಲನ ಮುಡಿಸಿರಿಗೆ ಮನುಜ
        ಕಾಲನಿಡುವ ರಭಸ ನೋಡ! ಅರಿಯದ ಮಾಯಾ
        ಜಾಲವು ಬೊಮ್ಮ ಸೃಜಿಸಿದ
        ಸಾಲೆಯು ಸೂಸಿದೆಯೊ ಸೋಜಿಗವ ಕಾಣ್ ಮನುಜಾ

        3)ಜಾಲವು /ಬೊಮ್ಮ /ಸೃಜಿಸಿದ->ಸರಿಯಾ?
        4)ಸಾಲೆ –ಸೀರೆ

    • 1) exclamation mark ಇಡುವುದರಿಂದ ವಿಸಂಧಿದೋಷ ಪರಿಹಾರವಾಗದು
      2) ಮನುಜಾ ಎಂದು ದೀರ್ಘಾಕ್ಷರ ಬರೆಯಲಾಗದು; ಸಾಂಗತ್ಯ/ತ್ರಿಪದಿಗಳಲ್ಲಿ ಹೊರತು ಕರ್ಷಣಮಾಡಿ ಉಚ್ಚರಿಸಲೂ ಆಗದು.
      3) simileಗಳು (ಸಾಲೆ ಯಾವುದು?) ಸ್ಪಷ್ಟವಾಗುತ್ತಿಲ್ಲ

  15. ಸಪ್ತಮಾತ್ರಾ ಚೌಪದಿಯಲ್ಲಿ ಎರಡು ಉತ್ತರಗಳು ( ಕೊನೆಯ ಸಾಲು ಮಾತ್ರ ಬದಲಾಗಿದೆ)- ಈ ಛಂದಸ್ಸನ್ನು ಹೀಗೆ ಬಳಸುವುದು ತಪ್ಪಾಗಿದ್ದರೆ ತಿಳಿಸಿ.

    ಹಾರ ಹೊರಟಿಹೆ ಶಬ್ದಕಿಂತಲು ವೇಗಪಯಣವು ನಿಚ್ಚಳ
    ಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತ
    ನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ!
    ಮೇರ್ ಇಂಬ್ರಿಯದಲ್ಲಿ ಇಳಿವೆನು ವಸತಿಯೊಂದನು ಹಾಕುತ

    ಹಾರ ಹೊರಟಿಹೆ ಶಬ್ದಕಿಂತಲು ವೇಗಪಯಣವು ನಿಚ್ಚಳ
    ಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತ
    ನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ
    ಮೇರ್ ಇಂಜನಿಯಲ್ಲೆ ಇಳಿದರೆ ಇಳೆಯ ಮರೆವುದು ಖಂಡಿತ!

    ಶಬ್ದಕಿಂತಲು ವೇಗಪಯಣ = supersonic speed

    ಮೇರು ಪರ್ವತ = North Pole , ನಮ್ಮೆಲ್ಲ ಜ್ಯೋತಿಷ ಗ್ರಂಥಗಳ ಪ್ರಕಾರ ಮೇರು ಇರುವುದು ಉತ್ತರ ಧ್ರುವದಲ್ಲೇ. ನಾನು ಅದನ್ನು ಇಲ್ಲಿ ಪೋಲಾರ್ ಆರ್ಬಿಟಿಂಗ್ ಎನ್ನುವ ಅರ್ಥದಲ್ಲಿ ಬಳಸಿಕೊಂಡೆ. ಇಸ್ರೋ ನ ಪಿಎಸ್ಸೆಲ್ವಿ ನೆನೆಸಿಕೊಳ್ಳಿ

    ಮೇರ್ ಇಂಬ್ರಿಯ = ನಮಗೆ ಕಾಣುವ ಚಂದ್ರನ ಭಾಗದಲ್ಲಿನ ಒಂದು “ಸಮುದ್ರ”

    ಮೇರ್ ಇಂಜನಿ = ನಮಗೆ ಕಾಣದ ಚಂದ್ರನ ಬೆನ್ನು ಭಾಗದ ಒಂದು “ಸಮುದ್ರ”. ನಮಗೆ ಕಾಣದ ಭಾಗದಲ್ಲಿರುವುದರಿಂದ, ಅಲ್ಲಿಂದ ಭೂಮಿಯೂ ಕಾಣದು. ಹಾಗಾಗಿ ಇಳೆಯನ್ನು ಮರೆಯದೇ ಗತಿಯಿನ್ನೇನು?

    • ವಿಸಂಧಿ ದೋಷವನ್ನು ಮನ್ನಿಸಿ.

      “ಮೇರ್ ಇಂಬ್ರಿಯದೊಳಗೆ ಇಳಿವೆನು” ಅಂತ ಬದಲಾಯಿಸಬಹುದೇನೋ. ಆದರೆ ಮೇರ್ ಮತ್ತೆ ಇಂಬ್ರಿಯದೊಳಗೆ ಸಂಧಿ ಮಾಡಿದರೆ, ಅದು ಏನೆಂದೇ ತಿಳಿಯದಂತಾಗುತ್ತೆ ಅನ್ನೋದೊಂದು ತೊಂದರೆ!

      • ಮಾರೆಯೋ ಮೇಣ್ ಮೇರಿದೋ ಪೇಳ್
        ಮಾರೆಯೆಂಬುದು ಲಾಟಿನಿನ್ನು
        ಚ್ಚಾರಣೆಯು ಕೇಳ್ ಮೇರು ಪ್ರಾಸವು
        ಜಾರಿ ಬೀಳ್ವಂತಾದುದೇ

        😉

        • ಉಚ್ಛಾರ “ಮಾರೆ” ಎಂದಮೇಲೆ ತೊಂದರೆಯೆ ಇಲ್ಲವಲ್ಲ. ಪ್ರಾಸಕ್ಕೆ ಸರಿಯಾಗಿ ಕೂತುಕೊಳ್ತಲ್ಲ. ಇನ್ನು ಭಾಷಾಂತರದ ಅಗತ್ಯವೆ ಇಲ್ಲ.

          ಸೂಕ್ತ ಮತ್ತು ಸ್ವಾಭಾವಿಕವಾದ ಭಾಷಾಂತರ ಮಾಡಲು ತುಂಬ ತಲೆಕೆಡಿಸಿಕೊಂಡೆ.

          ಮಾರೆ ಇಂಬ್ರಿಯಂ= ಧಾರಮೀರ/ ಧಾರಸಾಗರ.

          ಮಾರೆ ಇಂಜೆನಿ- ಧೀರಮೀರ/ ಧೀರಸಾಗರ.

          • ಜೀವೆಂ ಅವರೆ,

            Mare ಇದನ್ನ ಮಾರೆ ಎಂದು ಹೇಳಬೇಕಂತ ಗೊತ್ತಿರಲಿಲ್ಲ. ನೋಡಿ ಇಂಗ್ಲಿಷ್ spelling ಇಂದ ಬೇಸ್ತು ಬಿದ್ದೆ. ಮಾರೆಯೇ ಇರಲಿ. ಧನ್ಯವಾದಗಳು!

    • ಹಂಸ. ನೀನು ರಚಿಸಿರುವ ಚೌಪದಿಯ ಲಕ್ಷಣದಲ್ಲಿ ತಪ್ಪುನೆಪ್ಪುಗಳನ್ನು ಪರಿಕಿಸಿ ಹೇಳಲಾರೆ. ಕಲ್ಪನೆಯಂತೂ ನವೀನವಾಗಿದೆ.

      ಆದರೆ “ಮೇರ್ ಇಂಬ್ರಿಯ” “ಮೇರ್ ಇಂಜನಿ” ಇದರಲ್ಲಿ ಏಳು ಮಾತ್ರೆಗಳಿಲ್ಲವಲ್ಲ. ಅದರಿಂದ ಛಂದಸ್ಸಿನ ಓಟ ಕೆಡುತ್ತಿದೆ. “ಮೇರ್” ಎರಡೆ ಮಾತ್ರೆಗಳಲ್ಲವೆ. ಒಂದು ಉಪಾಯ ನನಗೆ ಹೊಳೆಯುತಿದೆ. “ಮೇರ್” ಜಾಗದಲ್ಲಿ “ಮೀರ” ಎಂದು ಹಾಕಿಕೊ. ಮೀರ ಎಂದರೆ ಸಮುದ್ರ ಎಂದೇ ಸಂಸ್ಕೃತದಲ್ಲರ್ಥ. ಮೇಲಾಗಿ “ಮೇರ್” “ಮೀರ”ಕ್ಕೆ ಜ್ಞಾತಿ ಶಬ್ದವೂ ಹೌದು.

      • ಇನ್ನೂ ಮುಂದೆ ಹೋಗಿ “ಮೇರ್ ಇಂಬ್ರಿಯಂ” (mare imbrium) ಮತ್ತು “ಮೇರ್ ಇಂಗೆನೀ” (mare ingenii) ಈ ಪದಪುಂಜಗಳನ್ನು ಪೂರ್ತಿ ಸಂಸ್ಕೃತಕ್ಕೆ ಹೀಗೆ ಅನುವಾದಿಸಬಹುದೆ;- “ಮೀರಝಾಯಾ, “ಮೀರನಾಯಾ; “ಝಾ” ಮತ್ತು “ನಾ” ಪದಗಳಿಗೆ ಕ್ರಮವಾಗಿ “ಝರಿ,ಮಳೆ” ಮತ್ತು “ಜ್ಞಾನ” ಈ ಅರ್ಥಗಳಿವೆ. ಇವಕ್ಕೆ ಷಷ್ಠೀ ವಿಭಕ್ತಿ ಪ್ರತ್ಯವವನ್ನು ಸೇರಿಸಿ “ಝಾಯಾ, “ನಾಯಾ” ಎಂದು ಮಾಡಿಕೊಂಡು “ಮೀರ”ಕ್ಕೆ ಮುಂದೆ ಹಾಕಿದರೆ “ಮೀರಝಾಯಾ, “ಮೀರನಾಯಾ” ಸಿದ್ಧವಾಗುತ್ತವೆ. ಇದು ಸರಿಯಾದ ರೂಪಗಳೆ ಎನ್ನುವುದಾನು ಗಣೇಶರು ಪರಿಶಿಲಿಸಿ ಹೇಳಿದರೆ ಒಳಿತು.

        • ಕನ್ನಡದ ದ್ವಿತೀಯಾ ವಿಭಕ್ರಿಪ್ರತ್ಯಯವನ್ನು ಸೇರಿಸಲು ಅನುಕೂಲವಾಗಲು ಬೇಕಾದರೆ “ಮೀರಝಝಸ್ಯವ ಮತ್ತು “ಮಮೀರಣಸ್ಯವ ಎಂದು ಮಾಡಿಕೊಳ್ಳಬಹುದೇನೊ. (“ಣ” ಮತ್ತು “ಝ” ಪುಲ್ಲಿಂಗ ಪದಗಳಾಗಿ. “ಣ” ಎಂದರೆ ಜ್ಞಾನ, ಝ ಎಂದರೆ ಮಳೆ/ಝರಿ)

          • ಶ್ರೀಕಾಂತ್ ಅವರು ತುಂಬ ಸೊಗಸಾಗಿ ನೆರವಾಗಿ ನನ್ನ ಕೆಲಸವನ್ನು ಹಗುರಗೊಳಿಸುತ್ತಿರುವುದಕ್ಕಾಗಿ ಧನ್ಯವಾದ. ಸದ್ಯದ ಪದವನ್ನು (ಮೇರ್ ಇಂಬ್ರಿಯ) ಬಗೆಬಗೆಯಾಗಿ ಕನ್ನಡೀಕರಿಸುವ ಯತ್ನಗಳೂ ಸ್ವಾಗತಾರ್ಹ. ಅದನ್ನು ಹಾಗೆಯೂ (ಯಥಾವತ್ತಾಗಿ) ಉಳಿಸಿಕೊಳ್ಲಬಹುದು. ಆದರೆ ನಮ್ಮ ನುಡಿಗೆ ಸಹಜವಾಗುವಂತೆ ಸುಲಭ-ಸಾರ್ಥವಾಗುವಂತೆ ಮಾಡುವುದಕ್ಕೆ ನನ್ನ ಸಣ್ಣ ಸೂಚನೆ ಹೀಗೆ: ಇದನ್ನು ಚಾಂದ್ರಸಾಗರ (ಚಂದ್ರನಿಗೆ ಸಂಬಂಧಿಸಿದ ಸಾಗರ) ಎಂದೇಕೆ ಹೇಳಬಾರದು?

  16. ಸಂಚಲಿ, ವಿಮಾನ, ಸೀತೆಯ –
    ನಂಚಿರ ಮಾಳ್ದ ಮಿಗದಂತೆ ಸುಳಿಯುತಲಿರ್ಕುಂ
    ಚಂಚಲ ಚಿತ್ತಮನೀಳ್ವನ
    ಕಂಚೆದೆಯ ಪರೀಕ್ಷೆಯೀಗ ನಡೆದಂತಿರ್ಕುಂ ||
    [ ಪರರಿಗೆ ಚಂಚಲತೆ ಉಂಟುಮಾಡುವ ಚಂದ್ರನ ಪರೀಕ್ಷೆ, ವಿಮಾನದ ಸುಳಿದಾಟದಿಂದಾಗುವುದೋ ಎಂಬಂತೆ ]

    • ಪದ್ಯವು ಸ್ಪಷ್ಟವಾಗುತ್ತಿಲ್ಲ; ಭಾಷೆಯು ಮತ್ತೂ ಹಳಗನ್ನಡವಾದರೆ ಒಳಿತು:-)

      • ಹಳೆಗನ್ನಡದಲ್ಲಿ ಮತ್ತೆ ಪ್ರಯತ್ನ
        ಹೊಂಚಿ, ವಿಮಾನಂ, ಸೀತೆಯ –
        ನಂಚಿರ ಮಾಳ್ದಾ ಸುವರ್ಣ ಮಿಗದೆನೆ ಬಂತೇಂ ?
        ಚಂಚಲ ಚಿತ್ತಮನೀವನ
        ಕಂಚೆರ್ದೆಯೆನೇ ಪರೀಕ್ಷಿಪಂತೆಸೆಗಿರ್ಕೇಂ?

        [ಅಂಚಿರ = ಚಂಚಲ; ಕಂಚೆರ್ದೆ = ಕಂಚಿನ (ಗಟ್ಟಿಯ) ಹೃದಯ]
        ಸೀತೆಯನ್ನು ಮಾಯಾ ಮೃಗವು ಚಂಚಲಗೊಳಿಸಿತ್ತು. ಅಂತೆಯೇ, ಈಗ ಈ ಮಾಯಾ ವಿಮಾನವು ಚಂದ್ರನ ಕಂಚಿನ ಹೃದಯವನ್ನೇ ಚಂಚಲಗೊಳಿಸುತ್ತಿದೆಯೇ? ಚಂದ್ರನು ಅನೇಕರ ಚಂಚಲತೆಗೆ ಕಾರಣನಷ್ಟೆ. ಈಗ ಚಂದ್ರನಿಗೇ ಚಂಚಲನಾಗುವ ಸಮಯ ಬಂತೇ?

  17. ಹೇ ವಿಮಾನವೆ,
    ಪಲ್ಲವ|| ಕಲಿತೆಯೆಂಬರು ನೀನು ಪಾರ್ವುದ
    ಚಲನೆಯನು ನೋಡುತ್ತ ಹಕ್ಕಿಯ|
    ಕಲಿಯು ನೀ ಚಂದ್ರನೊಲು ಪಾರ್ವುದ
    ಚಲಿಸದಿರ್ದೊಡೆ ಪಕ್ಕೆಯ||

    • Corrected:
      ಕಲಿತೆಯೆಂಬರು ಪಾರ್ವುದನು ನೀ
      ಚಲನೆಯನು ನೋಡುತ್ತ ಹಕ್ಕಿಯ|
      ಬಲಿತ ರೆಕ್ಕೆಗಳೇಕೆ ಚಲಿಸದ
      ಚಲಿಸುವೊಡೆ ನೀ ಚಂದ್ರನೊಲ್||

      • “ಪಾರ್ವುದನು” ಪ್ರಯೋಗ ಇಲ್ಲಿ ತಪ್ಪು. ಅದಕ್ಕೆ “ನೋಡುವುದು” ಎಂದು ಅರ್ಥ. ಹಾರು ಎನ್ನುವ ಅರ್ಥ ಬರುವುದು “ಪಾಱು” ಪದಕ್ಕೆ ಮಾತ್ರ. ಅದನ್ನು “ಪಾಱ್” ಎಂದೋ “ಪಾರ್ ಎಮ್ದೋ ಮಾಡಲಾಗುವುದಿಲ್ಲ. “ಪಾರುವುದ” ಎಂದು ಹಾಕಿದರೆ ಸರಿಯಾದೀತು.

        ಪದ್ಯದಲ್ಲಿ ಹಳಗನ್ನಡಕ್ಕಿಂತ ನಡುಗನ್ನಡದ ಗಂಧ ಹೆಚ್ಚಾಗಿದೆ.

        • ಕೃತಜ್ಞತೆಗಳು ಮೂರ್ತಿಗಳೆ. ಹಳಗನ್ನಡಗಂಧ ಇರದಿರುವುದಕ್ಕೆ ವಿಪುಲವಾದ ಕಾರಣಗಳಿವೆ 🙂

        • ಶ್ರೀಕಾ೦ತರು ಒ೦ದು ಮುಖ್ಯವಾದ ಅ೦ಶದ ಪ್ರಸ್ಥಾಪ ಮಾಡಿದ್ದಾರೆ. ಈ ಬಗ್ಗೆ ಒ೦ದು ಸ೦ದೇಹವಿದೆ. ‘ಪಾಱು’ವನ್ನು ‘ಪಾರು’ ಎ೦ಬ ಬಳಕೆಯಬಗ್ಗೆ. ಕಿಟ್ಟಲ್ dictionary ಪ್ರಕಾರ

          ಪಾಱ್ = ಪಾಱು, …. ಪಾರ್ದು, ಪಾರ್ದುವು…
          ಪಾಱು = ಪಾಱ್, ಹಾಱು leap, spring…

          ಅ೦ತೆಯೇ…
          ಪಾರ್ = ಹಾರು, ಇತ್ಯಾದಿ…

          ಒಟ್ಟು ನೋಟ ಹಾರು ಎರಡನ್ನು ಬಳಸಬಹುದೆ೦ಬತೆ ಸೂಚಿಸಿದ್ದಾರೆ.

          ಇದರಲ್ಲಿ ತಪ್ಪಿದೆಯೇ?

        • ಸೋಮ ಹಾಸ್ಯ ಒಂದುಕಡೆ. ನೀವು ಚಿಂತನೆಗೆ ಒಳ್ಳೆಯ ಗ್ರಾಸವನ್ನು ಒದಗಿಸಿದ್ದೀರಿ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯಾರಬಳಿಯಾದರು ಇದ್ದರೆ ಅದರಲ್ಲಿ ನೋಡ ಬಹುದು- ಪಾಱ್ ಪ್ರಯೀಗವಿದೆಯೇಇತ್ಯರ್ಥವಾಗುತ್ತೆ.

          ಇರಲಿಕ್ಕಿಲ್ಲ ಅನ್ನೋದು ನನ್ನ ಪಕ್ಷ. ತಮ್ಮ ಕಕ್ಷಿದಾರರು ತಮ್ಮ ಕಡೆಯಿಂದ ಏನೂ ಹೇಳಿಲ್ಲವಲ್ಲ

          • ಶ್ರೀಕಾ೦ತರೆ ಒಪ್ಪುತ್ತೇನೆ ಇದಕ್ಕೊ೦ದು ಪರಿಹಾರ ಕ೦ಡುಕೊಳ್ಳಬೇಕು, ನನ್ನ ಬಳಿ ಸಾಹಿತ್ಯ ಪರಿಷತ್ತಿನ ನಿಘಂಟು ಇಲ್ಲ. ಅ೦ಗೈನಲ್ಲಿ ಬೆಣ್ಣೆಹಿಡಿದು ತುಪ್ಪಕ್ಕೆ ಹುಡುಕಾಡುವುದೇನು, ಇದಕ್ಕೆ ಗಣೇಶರ ಮೊರೆಹೋಗುವುದೇ ಉಚಿತವೆನ್ನಿಸುತ್ತದೆ ಏನ೦ತೀರಿ… 🙂

            ಸತ್ಯಹೇಳಬೇಕೆ೦ದರೆ ಕಿಟ್ಟಲ್ನ ನಿಘ೦ಟಿನಲ್ಲಿ ಕೆಲವೆಡೆ ಮನಸ್ಸಿಗೆ ಸಮಾಧಾನವೆನಿಸುವಹಾಗೆ ಸ್ಪಷ್ಟೀಕರಣವಿಲ್ಲ. ಹಾಗಾಗಿ ನಾನು ಸಾಧುಪ್ರಯೋಗ ತಿಳಿಯುವ ಉದ್ದೇಶದಿ೦ದಷ್ಟೇ ಕೇಳುತ್ತಿದ್ದೇನೆ.

            ನಮ್ಮ ಕಕ್ಷಿದಾರರ ಬಳಿ ಯಾವ ನಿಘಂಟು ಇದೆಯೆ೦ದು ತಿಳಿದಿಲ್ಲ, ಆದರೆ ನನ್ನ ಕಕ್ಷಿದಾರರು ನನಗಿ೦ತ ಒಳ್ಳೆಯ ವಕೀಲರೆ೦ಬುದ೦ತೂ ಸತ್ಯ 🙂

          • ಗಣೇಶರು ಈಗಾಗಲೇ ನಮ್ಮ ಸಂ ಭಾಷಣೆಯನ್ನು ಗಮನಿಸಿ ಪರಿಶೀಲಿಸುತ್ತಿರಬಗುದೆಂದು ನನ್ನ ಊಹೆ. ಅವರ ಅಭಿಪ್ರಾಯಕ್ಕೇ ನಾನೂ ಕಾಯುತ್ತಿದ್ದೇನೆ.

          • ಕಕ್ಷಿದಾರನು ನಿಘಂಟು ಹೊಂದಿದ್ದರೆ, ವಕೀಲನನ್ನು ನಿಯೋಜಿಸುವನೆ?

          • ಮೂರ್ತಿಗಳೆ,
            ನೀವು withdraw ಮಾಡಿಕೊಂಡು ಗಣೇಶರಿಗೆ ಕಾಯಲುತೊಡಗಿದ್ದು ಯುಕ್ತವಾಯಿತು. ಏಕೆಂದರೆ,
            (ವಸಂತತಿಲಕ – ಆಂಗ್ಲದ್ದೂ ಸೇರಿ)
            ‘ಪಾರುತ್ತಲಿರ್ಪಿ’ರೆನೆ ನೀವು ಕೃತಾರ್ಥನಾದೆಂ
            ಪಾರೆನ್ನ ಮಾಡದಿರಲೇನು ವಕೀಲ ಸೋಮಂ|
            Thank thee dear verily for reversing the standpoint
            I shall emerge a winner on gaNadeesh’s arrival.

          • ಛೆ ಅಪಾರ್ಥ ಮಾಡಿಕೊಂಡಿರಲ್ಲ ಪ್ರಸಾದು. ಕೇಸನ್ನು ಹಿಂದೆಗೆದುಕೊಳ್ಳೋದೆಲ್ಲಿಂದ ಬಂತು. ನನ್ನ ಪಕ್ಷವನ್ನು ಸ್ಪಷ್ಟವಾಗಿ ತಿಳಿಸಿದ್ದಾಯಿತು. ಒಂದು ತಜ್ಞಸಾಕ್ಷಿಯೆಂದು (expert witness) ಗಣೇಶರನ್ನು ಕರೆದಿರುವುದಷ್ಟೆ. ಈಗ ಅವರ ನಿಲುವಿಗಾಗಿ ಪಾರುತಿರ್ಪಿರ್ ನೀಂ. ಸಡಗರದಿ ಪಾಱಾಡುತಿರ್ಪಿರ್. ಅವರು ಪೇಳ್ದ ಬಳಿಕ ಪಾಱುತಲಿರ್ಪಿರ್

          • ನಮಸ್ತೆ. ನನ್ನ ಕುತೂಹಲಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟನ್ನು ನೋಡಿದೆ. ಅದರಲ್ಲಿ “ಪಾರ್” (ಕ್ರಿ) ಶಬ್ದವಿದೆ. ಆದರೆ ಅದಕ್ಕೆ ಅರ್ಥ – ನಿರೀಕ್ಷಿಸು; ಎದುರುನೋಡು; ಆಶಿಸು; ಹಾರೈಸು; ಲಕ್ಷಿಸು; ಗಮನಿಸು ಅಂತಿದೆ.
            (೧೯೭೫: ಮೊದಲ ಮುದ್ರಣ – ಪುಟ ೫೨೨ ಹಾಗೂ ೫೨೩)

            ಹಾಗೆಯೇ “ಪಾರು” ಅಥವಾ “ಪಾಱು” (ಕ್ರಿ) ಎಂಬ ಶಬ್ದಕ್ಕೆ ಹಾರು; ನೆಗೆ; ದಾಟು; ಓಡು; ಹರಿ; ದವಗಟ್ಟು;
            ತುಡಿ ಎಂಬ ಅರ್ಥಗಳಿವೆ. ಹಾರಿಸು ಎಂಬುದಕ್ಕೆ ಪಾರಿಸು ಎಂಬ ಪ್ರಯೋಗವನ್ನು ಮಾಡಿದ್ದಾರೆ.

            ಈ ಮಾಹಿತಿಯು ತಮ್ಮೆಲ್ಲರ ಸಮಾಲೋಚನೆಗೆ ನೆರವು ಬರಬಹುದೆಂದು ಭಾವಿಸಿರುವೆ.

          • ಕಶ್ಯಪರೆ. ಕ.ಸಾ.ಪ ನಿಘಂಟುವನ್ನು ಪರಿಶೀಲಿಸಿ ಅದರ ಸಾರಾಂಶವನ್ನು ನಮ್ಮೆಲ್ಲರೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಇದು ಭಾರೀ ಕ್ರೂಷಿಯಲ್ ಮಾಹಿತಿ.

          • ಶ್ರೀಗಣೇಶ ಉವಾಚ

            ——
            ಪ್ರಿಯ ಶ್ರೀಕಾಂತರಿಗೆ ನಮಸ್ಕಾರ

            ಉಭಯಪಕ್ಷಗಳಿಗೂ ಅನುಕೂಲವಾಗುವಂತೆ ಪಾರ್ ಮತ್ತು ಪಾರು (ಶಕಟರೇಫ) ರೂಪಗಳು ಕಾವ್ಯಗಳಲ್ಲಿ ಹಾರುವಿಕೆಗೆ ಬಳಕೆಯಾಗಿವೆ..ಆದರೆ ಶಕಟರೇಫವಿರುವ ಮತ್ತು ಇಲ್ಲದ ರೂಪಗಳು distinct ಆಗಿ ಇರುವುದು ಕೋಷಗಳಲ್ಲಿ ದೃಷ್ಟಚರ. ಹೀಗಾಗಿ ನಿಮ್ಮ ನಿಲವಿಗೆ ಲಕ್ಷಣಶಾಸ್ತ್ರಗಳ ಬೆಂಬಲ ಹೆಚ್ಚಿದೆ. ಸಾಮ್ಪ್ರದಾಯಿಕವಾಗಿ ಲಕ್ಷಣಕಾರರಿಗೆ ಬೆಲೆ ಮಿಗಿಲು. ಅವರಿಗೆ ಮಹಾಕವಿಗಳ ಪ್ರಯೋಗಬಲವಿದೆ. ಕನ್ನಡದ ಮಟ್ಟಿಗಂತೂ ಮಹಾಕವಿಗಳಾದ ಪಂಪ, ರನ್ನ, ನಾಗವರ್ಮ, ನಾಗಚಂದ್ರ, ರುದ್ರಭಟ್ಟ, ಜನ್ನ, ಪೊನ್ನ ಮುಂತಾದ ಲೇಖಕರೇ ವ್ಯಾಕರಣವನ್ನು ನಿರ್ದೇಶಿಸಿದ್ದಾರೆ. ಆದುದರಿಂದ ತುಲ್ಯಬಲವಿರೋಧೇ ವಿಕಲ್ಪಃ ಎಂಬ ಸೂತ್ರದಂತೆ ಇವೆರಡನ್ನೂ ಸದ್ಯಕ್ಕೆ ಒಪ್ಪಿನಡೆಯಬಹುದು
            —–

            ಮೇಲಿನದು ಗಣೇಶರು ನನ್ನ ಮಿಂಚೆಗೆ ಉತ್ತರವಾಗಿ ಬರೆದುದು. ಅವರ ಸ್ನೇಹಾಗ್ರಹದ ಮೇರೆಗೆ ಇದನ್ನು ಇಲ್ಲಿ ಹಾಕುತ್ತಿದ್ದೀನಿ.

          • ಬದುಕಿದೆಯಾ ಬಡಜೀವವೆ!

      • ಸೋಮ,
        ನನ್ನ ಪರವಾಗಿ ಮೂರ್ತಿಗಳೊಡನೆ ವಕಾಲತ್ತು ಮಾಡಿ ಗೆಲ್ಲಿಸಿದರೆ, ನಿಮಗೆ ಪಾರ್ಟಿ ಕೊಡುತ್ತೇನೆ.

        • ಪ್ರಸಾದು, ಮತ್ತೆ ‘ಪಾರ್’ ಬ೦ತಲ್ಲ ಪಾರ್ಟಿಯಲ್ಲಿ :), ವಕೀಲನಿಗೆ ಕೇಸು ಸೋತರು ಸ೦ಭಾವನೆ ಕೊಡಲೇಬೆಕಲ್ಲವೆ?

          ಹಾಸ್ಯಕ್ಕೆ ಹೇಳಿದೆ! ನನಗೆ ಸ೦ದೇಹವಿದೆ ಹಾಗಾಗಿ ಸ್ಪಷ್ಟೀಕರಣ ಕೇಳಿದ್ದೇನೆ ಅಷ್ಟೇ.

          • ಸೋಮ,
            ಅಂತೆಂದುs ‘ಪಾರ್ಟಿ’sಲೆs ರೇಫsವs ತೆಗೆದೊsಡೆ
            ಸಂತsಳಂತಹ ‘ಪಾಟಿ’sಯಾಯ್ತೇ!
            ಬೊಂತೆsಯುs ಜೀವsನsವೆಲ್ಲsವೆಂsಬುವಳಿsಗೆ
            ಕಂತೆsಪದ್ಯಂಗsಳುs ಹೊರತೆs||

        • ಪಾರಲ್ಕೇನಿರ್ಪುದಿದರೊ
          ಳಾರುಂ ಗೆಲಿಸರ್ ಪ್ರಸಾದು ಸಾಕ್ಷಿ ಶಶಿಯಿನರ್
          ಪಾರಿಂ ನಿಮ್ಮಯ ಕೇಸೇ
          ಪಾರುವುದಯ್ ಕ್ಷಣದಿ ಪಾರುತಲಿರ್ಪಿರ್

          🙂

          • ‘ಪಾರುತಲಿರ್ಪಿರ್’ ಕುರಿತು ಇದೇ ಶೃಂಖಲೆಯಲ್ಲಿ (ಮೇಲೆ) ಆಂಗ್ಲದಲ್ಲಿ ಒಂದು post ಮಾಡಿದ್ದೇನೆ ನೋಡಿ.

          • ನೋಡಿಯಾಯಿತು. ಉತ್ತರವನ್ನಾಡಿಯಾಯಿತು.

            So far you were unseen.
            Nowehere on the Scene.
            Now you are creating a scene.
            The truth shall soon be seen

      • ವಕೀಲನಿಗೆ ಸಂಭಾವನೆ ಕೊಡುವುದೇ ಸೋಲನ್ನು/ಸಾವನ್ನು delay ಮಾಡಿದುದಕ್ಕಲ್ಲವೆ 😉

        • ದಯಮಾಡಿ ಯಾರೂ ಅನ್ಯಥಾ ಭಾವಿಸಬಾರದು; ಈ ಪಾರ್ ಸಂಬಂಧಿತಚರ್ಚೆಯ ಮುಖ್ಯವಿವಾದಸ್ಥಾನವು ನನ್ನ ಅರಿವಿಗೆ ಬರಲಿಲ್ಲ. ದಯಮಾಡಿ ಯಾರಾದರೂ ಸ್ಪಷ್ಟವಾಗಿ ನನಗೆ ಫೋನಿಸಿದರೆ ನನ್ನ ಯಥಾಮತಿ ಶಾಸ್ತ್ರೀಯವಾದ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನೀಡುವೆ. ಅಂದಹಾಗೆ; ಭಟ್ಟರ ಪದ್ಯವನ್ನು ಕುರಿತು ಬೆಳೆದ ಚರ್ಚೆಯಲ್ಲಿ ಹಲವೆಡೆ ಬಂದ ಪದ್ಯಗಳ ಪೈಕಿ ಒಂದೆರಡು ವಿಸಂಧಿದೋಷಗಳಿಂದ ಕೂಡಿದ್ದುವು. ದಯಮಾಡಿ ಆಯಾ ಲೇಖಕರು ಗಮನಿಸಿಕೊಳ್ಳಿರಿ.. ಹಾಸ್ಯದಲ್ಲಿ ಕೆಲಮಟ್ಟಿಗೆ ವ್ಯಾಕರಣಸ್ವೈರತೆಯುಂಟೆಂಬ ಮಾತು ಸಲ್ಲುವುದಾದರೂ ಅದು ಮತ್ತೂ ಮೀರದಿರಲಿ ಹಾಗೂ ಆ “ಸೋಂಕು” ಉಳಿದ ಗಂಭೀರಕವಿತೆಗಳಿಗೂ ಅಂಟದಿರಲಿ:-)

          • ಕೇವಲ ನಿಮಿಷಮಾತ್ರದಲ್ಲಿ ತಮಾಷೆಗಾಗಿ ಹುಟ್ಟಿದ ಪದ್ಯದಲ್ಲಿ ಸೊಂಕಿರುವುದು ತಿಳಿದುಬಂತು, ಇದು ಕೇವಲ ಹಾಸ್ಯಪೂರಿತವಾಗಿರುವುದರಿಂದ ಅಲ್ಲೇ ಮುಂದುವರಿದ ಪ್ರಧಾನ ವಿಷಯಕವಾದ ನನ್ನ ಪ್ರಯತ್ನಗಳನ್ನು ದಯಮಾಡಿ ಪರಿಶೀಲಿಸುವುದು.

  18. ಪೆರ್ಬೊಗೆಸಾಲಂ ಕಾರೀ
    ಕರ್ಬುರಮರೆ! ಭಲಾ ! ಪಿಂದಣಾ ಪಗೆಯಂ ನೆಗೆ-
    ದರ್ಬುದಗಾವುದದೂರಂ
    ಪರ್ಬಿಸೆ ಬಂದನೇನ್? ಎಂದು ನಕ್ಕಂ ಚಂದ್ರಂ ||

  19. ಶಿಲೆಯನೆ ಕರಗಿಪ ಚಂದ್ರನ
    ನಲಿವನು ನೀಡುವ ಚಕೋರ ಸಖನಂ ನೋಡಲ್
    ನಲುಗಿತವನ ಮನ ತಿಳಿವಿಂ
    ಚೆಲುವಿನ ಸಾಗರ ನಿಜದಲಿ ಕಲ್ಲಿನ ಬೆಟ್ಟಂ

    ಬೆಳುದಿಂಗಳಲ್ಲಿ ಚಂದ್ರಶಿಲೆ ಕರಗುವುದು , ಚಕೋರ ಪಕ್ಷಿ ನಲಿಯುವುದು ಇದನ್ನೆಲ್ಲಾ ಕಾವ್ಯಗಳಲ್ಲಿ ಓದಿಕೊಂಡಿದ್ದ ವಿಮಾನ ಚಾಲಕ ತನ್ನ ಪ್ರಯಾಣದಲ್ಲಿ ಚಂದ್ರನ ಹತ್ತಿರಕ್ಕೆ ಹೋದಾಗ ಕಲ್ಲಿನ ಬೆಟ್ಟವನ್ನೇ ನೋಡಲು ನೊಂದಿರಬಹುದೇ?

    ಬೆಟ್ಟಂ ಪ್ರಯೋಗದ ಬಗ್ಗೆ ನನಗೆ ಅನುಮಾನವಿದೆ. ಹಾಗೆಯೇ ಇತರ ಪ್ರಯೋಗಗಳು. ಹಳೆಗನ್ನಡ ನನಗಂತೂ ಹೊಸ ಕನ್ನಡವೇ, ಹೊಸದಾಗಿ ಕನ್ನಡವನ್ನು ಕಲಿಯುತ್ತಿದ್ದೇನೆಂದು ಅನ್ನಿಸುತ್ತದೆ. ಪ್ರಸಾದ್ ಅವರು ಹೇಳಿರುವ ಹಾಗೆ ಇದಕ್ಕೆ ಕಾರಣಗಳು ಸಾಕಷ್ಟಿವೆ.

    • ಕಲ್ಪನೆಯಲ್ಲಿ ನಾವೀನ್ಯವಿದೆ. ಆದರೆ ಅದು ಪದ್ಯದಿಂದಲೇ ಸ್ಪಷ್ಟವಾಗುತ್ತಿಲ್ಲ. ಸ್ವಲ್ಪ ವಿಭಕ್ತಿಪಲ್ಲಟಗಳನ್ನು ನಿವಾರಿಸಿಕೊಂಡರೆ ಮತ್ತೂ ಸ್ಪಷ್ಟವಾಗುತ್ತದೆ. ಬೆಟ್ಟಂ ಸಾಧುರೂಪವೇ. ಹಳಗನ್ನಡದಲ್ಲಿ ಸಮಾಸದೊಡಗೂಡಿ ಬಂದಾಗ ವೆಟ್ಟು, ವೆಟ್ಟಂ ಎಂದಾಗುವುದು. ಉದಾ: ಐಕಿಲ್ವೆಟ್ಟಂ, ಚಳಿವೆಟ್ಟು/ಚಳಿವೆಟ್ಟಂ (ಹಿಮಾಲಯ)
      ನಾಲ್ಕನೆಯ ಸಾಲಿನಲ್ಲಿ ಯತಿಭಂಗವಾಗಿದೆ. ಇಲ್ಲಿ ಮೂರನೆಯ ಗಣವು ಸರ್ವಲಘುವಾಗಿರುವ ಕಾರಣ ಮೊದಲ ಲಘುವಿನ ಬಳಿಕ ಪದಚ್ಛೇದದ ಮೂಲಕ ಯತಿಯನ್ನು ಪಾಲಿಸಬೇಕು. ಇಡಿಯ ಪದ್ಯವನ್ನು ಹಳಗನ್ನಡದ ಹದಕ್ಕೆ ತಂದರೆ ಮತ್ತಷ್ಟು ಸೊಗಯಿಸುವುದು. ಅಂದಹಾಗೆ, ಇಲ್ಲಿ ಎಲ್ಲರೂ ವಿದ್ಯಾರ್ಥಿಗಳೇ:-) ಯಾರಿಗೂ ಯಾವ ತೆರನಾದ ಮುಜುಗರ ಬೇಡ:-) ಹಳಗನ್ನಡದ ಹದವೆಂಬುದೊಂದು ಸಾಪೇಕ್ಷವಾದ ಅಪೇಕ್ಷಣೀಯತೆ ಅಷ್ಟೇ!

      • ನಿಮ್ಮ ಪ್ರೋತ್ಸಾಹ, ಸಲಹೆ , ಸಮಾಧಾನಗಳಿಗೆ ಧನ್ಯವಾದಗಳು. ಸರಿ ಮಾಡಲು ಪ್ರಯತಿಸುತ್ತಿದ್ದೇನೆ.

      • ತಿದ್ದಿದ ಪದ್ಯ:

        ಯತಿ ನಿಯಮ ಪಾಲಿಸದಿದ್ದನ್ನು ಸರಿಮಾಡಿದ್ದೇನೆ. ಹೆಚ್ಚು ಹಳೆಗನ್ನಡವನ್ನು ತರಲು ಹೋದರೆ ಹೊಸ ಪದ್ಯವನ್ನೇ ಬರೆಯಬೇಕಾದೀತು.

        ಶಿಲೆಯನೆ ಕರಗಿಪ ಶಶಿಯಂ
        ನಲಿವನು ನೀಡುವ ಚಕೋರ ಸಖನಂ ನೋಡಲ್
        ನಲುಗಿತವನ ಮನ ತಿಳಿವಿಂ
        ಚೆಲುವಿನ ಸಾಗರನು ನಿಜದೆ ಕಲ್ಲಿನ ಬೆಟ್ಟಂ

        • ಗಾಯತ್ರಿಯವರೆ. ಸೊಗಸಾಗಿ ಸುಲಭವಾಗಿ ಸಾವರಿದ್ದೀರ. ಹೀಗೆ ತಿದ್ದಬಹುದೆಂದೇ ನಾನೂ ಅಂದುಕೊಳ್ತಿದ್ದೆ. ನಿಮಗೆ ಗಣೇಶರೆ ಸೂಚನೆಯೆ ಸಾಕು. ನೀವೆ ತಿದ್ದುತ್ತೀರಿ ಎಂಬ ನನ್ನ ಭರವಸೆ ತಪ್ಪಲಿಲ್ಲ 🙂

          • ಧನ್ಯವಾದಗಳು ಶ್ರೀಕಾಂತರೆ. ನನ್ನ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಭರವಸೆಯನ್ನು ಇಟ್ಟುಕೊಳ್ಳದಿದ್ದರೆ ಒಳ್ಳೆಯದು. ಒಂದೊಂದು ಸಲ ಏನೂ ಕ್ಲಿಕ್ ಆಗುವುದಿಲ್ಲ.

  20. ಈ ಕಾಲಘಟ್ಟದೊಳ್ ಯಾಕಾರೆ ಸರಿದಿಹಳು
    ಲೋಕಾಂತರಕ್ಕೆನುತೆ ಶೋಕಿಸುತಲಿ|
    ರಾಕಾನು ನವೆದು ಸೂರ್ಯಾದೇವಿಯಳಿಗಾಗಿ
    ತಾ ಕಳಿಸಿಹನ್ ಪ್ಲವನಚುಂಬಕವನುಂ||

    ೧) ತನ್ನರಸಿ ಸೂರ್ಯಾದೇವಿ ಏಕೆ ಮರೆಯಾದಳೋ ಎಂದು ದುಃಖಿಸಿ, ಚಂದ್ರನು ಅವಳಿಗೆ flying kiss ಕಳುಹಿಸುತ್ತಿದ್ದಾನೆ.
    ೨) ಬಾಪಟ್ ಕೊಟ್ಟ ಐಡಿಯವನ್ನು improvise ಮಾಡಿ ಪದ್ಯಹೊಸೆದಿದ್ದೇನೆ.
    ೩) ಪದ್ಯಭಾಷೆ ಕನ್ನಡ; ಸೂರ್ಯಚಂದ್ರರ ಲಿಂಗಗಳು ಸಂಸ್ಕೃತದವು.
    ೪) ಪೂರ್ವಾರ್ಧದ ಎರಡೂ ಸಾಲುಗಳಲ್ಲಿ ಅನುಪ್ರಾಸವನ್ನೂ ಪಾಲಿಸಿದ್ದೇನೆ

    • ಪ್ರಸಾದ್ ರವರೇ, ವಿಮಾನವು ಚಂದ್ರನ ದಿಶೆಯಲ್ಲಿಯೇ (ಚಂದ್ರನ ಕಡೆಗೇ) ಚಲಿಸುತ್ತಿರುವುದರಿಂದ ಈ ಕಲ್ಪನೆ ಎಷ್ಟು ಸಾಧು? ಚಂದ್ರನಿಂದ ಪ್ರೇಷಿತವಾದರೆ ವಿಮಾನವು ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರಬೇಕಲ್ಲವೇ? ನನಗನಿಸಿದ್ದನ್ನು ಸೂಚಿಸಿದ್ದೇನೆ. ಅನ್ಯಥಾ ಅಲ್ಲ.

    • ಒಂದು ಪದ್ಯ ಹುಟ್ಟುವುದಾದರೆ, ಏನನ್ನಾದರೂ ಪೂರ್ವಪಕ್ಷವಾಗಿ ಇಟ್ಟುಕೊಳ್ಳಬಹುದು. ಹಾಗಲ್ಲದೆ ಇದಕ್ಕೆ 90 responseಗಳು ಬರುತ್ತಿದ್ದವೆ?

    • ಕಲ್ಪನೆ ಸೊಗಸಾಗಿದೆ. ಆದರೆ ಭಾಷೆ ಮತ್ತ್ಷಷ್ಟು ಹದವಾಗಲಿ. ರಾಜಗೋಪಾಲರ technical ವಿಮರ್ಶೆ ತುಂಬ crtical ಆದದ್ದು:-) ಸದ್ಯದ ಪದ್ಯಕ್ಕೆ ಅಷ್ಟು ತರ್ಕ ಬೇಡ:-)

    • ಗೊತ್ತಾಯಿತೆ ರಾಜಗೋಪಾಲರೆ – ಅಷ್ಟು ವಿಮರ್ಶೆ ಮಾಡುವಷ್ಟು ಪ್ರೌಢವಾಗಿಲ್ಲ ಪದ್ಯ ಎಂದು?

    • *ಪ್ಲವನಚುಂಬನವನುಂ|

  21. ಮೆರೆಯುವಾ ಚಂದಿರಗೆ ಜೀವವನೆ ಕೊಡುತಿರಲ್
    ನೆರಳ ಪೊದಿಕೆಯನತ್ತ ಸರಿಸಿರ್ಪನು|
    ತೆರೆಯಹೊರಗಿಂದ ತಾ ಬೆಳಕನ್ನು ನೀಡುತ್ತೆ
    ಮರೆಯಾದ ನೇಸರನ್ನಾರು ನೆನೆವರ್?

    • ಬಲ್ಸೊಗಸುಗವಿತೆಯಿದು, ಶೈಲಿಯೂ ಸಲ್ಲುತಿದೆ;
      ಗೆಲ್! ಸತ್ತ್ವಸರ್ವಸ್ವಮುಂ ತೀಡಿರಲ್!!

  22. ಮುದ್ದೆ ಬೆಣ್ಣೆಯ ಮೆಲ್ಲೆ ಪೋಗುವು –
    ದಿದ್ದರೀ ಪರಿಯಬ್ಬರವ ಮೇ –
    ಣುದ್ದ ಗುರುತಿನ ಹೆಜ್ಜೆಗಳ ನೀ ತೋರ್ವುದೇ ಮರುಳೆ?
    ಕದ್ದು ತಿಂಬುವದಾಸೆ ನಿನ್ನೊಳ –
    ಗೆದ್ದುದಾದರೆ ಮುಚ್ಚುಮರೆಯಲಿ
    ಸದ್ದು ಮಾಡದೆ ಮೆದ್ದು ಬಾ ಮುಚ್ಚಿರುವ ಕಂಗಳೊಡೆ ||

    • *ನಿನ್ನೊಳಗಿದ್ದುದಾದರೆ

      • ಪ್ರಸಾದ್ – ‘ನಿನ್ನೊಳಗಿದ್ದುದಾದರೆ’ ಎಂದೇ ಮೊದಲು ಬರೆದದ್ದು. ನಂತರ ‘ಆಸೆ ಎದ್ದರೆ’ ಎಂಬುದು ಇನ್ನೂ ಚೆನ್ನ ಅನ್ನಿಸಿ, ‘ನಿನ್ನೊಳಗೆದ್ದುದಾದರೆ’ ಎಂದು ಮಾಡಿದ್ದೇನೆ

    • tumba chennagide ram 🙂

    • ಅತ್ಯಪೂರ್ವಚಮತ್ಕ್ರಿಯಾಮಯ-
      ಕೃತ್ಯವಿದು ಸಂಸ್ತುತ್ಯವಿದು ಸೌ-
      ಮತ್ಯವಿದು ಸಾಂಗತ್ಯವಿದು ರಸಮಧುರಿಮೆಗೆ ಸತ್ಯಂ!!

      • ಸರಳ ಕವಿತೆಗುದಾರ ಮನದಿಂ –
        ದೊರೆದ ಮೆಚ್ಚುಗೆ ಹೃದ್ಯವಾಗಿರ –
        ಲೆರಗುವೆನು ನಾ ಸಮದೆ ಮಿಡಿಯುವ ಪರಮ ರಸಿಕತೆಗೆ ||

    • ತುಂಬಾ ಚನ್ನಾಗಿದೆ ರಾಮಚಂದ್ರ ಸರ್, ಧನ್ಯವಾದಗಳು.

  23. ಪರವಸ್ತುಲೀಲೆಯಾ ಬಲ್ಮೆ ಪೆರ್ಚಿಸಲೆನುತೆ
    ನರನವಿಷ್ಕಾರಮ೦ ಗೈದಿರ್ಪನೇ೦?
    ಅರೆಚಂದ್ರನರೆಸೊಬಗನಿತ್ತಬಾನೊಳ್ ತೂರಿ
    ಮೆರಗಪ್ಪ ಚಿತ್ರಮ೦ ಬಿಡಿಸಿರ್ಪನೇ೦?

    ನನ್ನ ಮೂಲ ಹೊಸಗನ್ನಡ ಪದ್ಯವನ್ನು ಹಳೆಗನ್ನಡಿಸಿದ ಸೋಮಗೆ ಕೃತಜ್ಞತೆಗಳು.

    • ಚೆಲುವಾಯ್ತು ಕವಿತೆ; ಮತ್ತಾದೊಡೆರಡನೆಯಡಿಯ (second line)
      ನಿಲವು ತುಸು ಸಡಿಲಾಯ್ತು ತಿದ್ದಿರದನು!

      ಆವಿಷ್ಕಾರ ಸಾಧುರೂಪ; ಅವಿಷ್ಕಾರವಲ್ಲ. ಅಲ್ಲದೆ ಇಲ್ಲಿ ಕೊನೆಯ ಪದವು ಛಂದಸ್ಸಿಗೆ ಹೊಂದುತ್ತಿಲ್ಲ.ತಿದ್ದಿದ ಸಾಲು ಹೀಗಿರಬಹುದು:
      ನರನೆ ಮತ್ತಾವಿಷ್ಕರಿಸಿದನೆ ನವಂ?

      • ಧನ್ಯವಾದಗಳು ಸರ್. ತಾವು ಹೇಳಿದಂತೆ ತಿದ್ದಿದ್ದೇನೆ.

        ಪರವಸ್ತುಲೀಲೆಯಾ ಬಲ್ಮೆ ಪೆರ್ಚಿಸಲೆನುತೆ
        ನರನ ಮತ್ತಾವಿಷ್ಕರಿಸಿದನೆ ನವಂ?
        ಅರೆಚಂದ್ರನರೆಸೊಬಗನಿತ್ತಬಾನೊಳ್ ತೂರಿ
        ಮೆರಗಪ್ಪ ಚಿತ್ರಮ೦ ಬಿಡಿಸಿರ್ಪನೇ೦?

  24. ಇದೊ೦ದು ಬಾಲಿಶ ಪ್ರಯತ್ನ.

    ಬಾನ೦ಗಳದಲಿ ಶಶಿಯೇಕಾ೦ಗಿಯಿ-
    ದೇನೆ೦ದೆಣಿಸುತ ಜೊತೆಯಿರಲವಗೆ ವಿ-
    ಮಾನ೦ ಪಾರ್ವುದೊ ಧೂಮವನುಗುಳುತ
    ತಾನುಮಾಗಸದೆ ವೇಗದೊಳು ||

  25. ಚಂದಿರನೇತಕೆ ಓಡುವ
    ಹಿಂದೆಯೆ ವೇಗದಿ ಗಣೇಶನಿರುವನೆ ಅಕ್ಕಾ?
    ಹಿಂದಿನ ಸಾಲಿನ ಹುಡುಗರು
    ಇಂದು ವದನೆಯರನು ಹುಡುಕುತಿರುವರು ತಮ್ಮಾ!!!

    ಇದು ಮುಗ್ಧ ತಮ್ಮ (ಕಿರಿವಯಸ್ಸಿನವ) ಮತ್ತು ಅವನ ಟೀನೇಜರ್ ಅಕ್ಕನ ನಡುವೆ ನಡೆದ ಸಂಭಾಷಣೆ. ಈ ರೀತಿಯ ವಯಸ್ಸಿನ ವ್ಯತ್ಯಾಸ ಹಿಂದಿನ ಕಾಲದಲ್ಲಿ ಇರುತ್ತಿತ್ತು. ಸಧ್ಯಕ್ಕೆ ಹುಡುಗ ಪಕ್ಕದ ಅಪಾರ್ಟ್ ಮೆಂಟ್ ನವನು ಎಂದು ಅಂದುಕೊಳ್ಳೋಣ.

    ಈಗ ವ್ಯಾಖ್ಯಾನ :

    ಮೊದಲ ೨ ಸಾಲುಗಳಿಗೆ: ಚಿಕ್ಕ ಹುಡುಗ, ಗಣೇಶ ಪ್ಲೇನ್ ನಲ್ಲಿ ಸದಾ ಓಡುತ್ತಿರುವ ಚಂದ್ರನನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾನೆಂದು ತಿಳಿದು ಹೀಗೆ ಕೇಳುತ್ತಾನೆ(ಚಂದ್ರ ಹೊಟ್ಟೆ ತುಂಬಿದ ಗಣೇಶನನ್ನು ನೋಡಿ ನಕ್ಕದ್ದು, ಗಣೇಶ ಚಂದ್ರನಿಗೆ ಶಾಪ ಕೊಟ್ಟಿದ್ದು ಈ ಕಥೆಯನ್ನು ಕೇಳಿದ ಹುಡುಗನ ಪ್ರಶ್ನೆಯಿದು).

    ಉಳಿದ ೨ ಸಾಲುಗಳು: ಅಕ್ಕನ ಉತ್ತರ – ಹುಡುಗರು ಸುಂದರಿಯರು ಚಂದ್ರನ ಮೇಲೆ ಸಿಗಬಹುದೆಂದು ಪ್ರಯಾಣ ಮಾಡುತ್ತಿದ್ದಾರೆ ಎಂದು ಹೇಳುತ್ತಾಳೆ.

    ಪ್ರಸಾದ್, ಸೋಮ, ಶ್ರೀಕಾಂತರೆ -> ಕೃತಿ ಚೌರ್ಯವಾಗಿದೆ(ಒಂದು ಮತ್ತು ಮೂರನೆಯ ಸಾಲುಗಳು). ಯಾರಾದರೂ ಕೇಸ್ ಹಾಕಿದರೆ ನನ್ನನ್ನು ಡಿಫೆಂಡ್ ಮಾಡುವವರು ಇದ್ದಾರೆಯೇ?

    • ಕೃತಿಚೌರ್ಯಮೆಂತು ಚೇಚೇ
      ಶ್ರುತಿಯಿಂದಂ ಸ್ಫೂರ್ತಿ ಕವಿಗೆ ನಿತ್ಯಮಕಸ್ಮಾತ್
      ಚ್ಯುತಿಯಿರ್ದೊಡಮದ ನೀಮಿಂ-
      ದತಿ ವಿನಯದೆ ಋಣಮನೊಪ್ಪಿ ಪರಿಹರಿಸಿರ್ಪಿರ್

    • ಹಾಕಲಿ ಬಿಡಿ ಗಾಯತ್ರಿ(ಮೇಡಂ) “ind””avara”, ನಾನು ನೋಡಿಕೊಳ್ಳುವೆ !!.

    • ನಾಲ್ಕನೆ ಸಾಲು ಹೀಗಿದ್ದರೆ ಸಂಧಿ ದೋಷ ತಪ್ಪುತ್ತದೆ.

      ಸುಂದರ ವದನೆಯರ ಹುಡುಕುತಿರುವರು ತಮ್ಮಾ!!!

      ಸರಿ ಮಾಡಿದ ಪದ್ಯ:

      ಚಂದಿರನೇತಕೆ ಓಡುವ
      ಹಿಂದೆಯೆ ವೇಗದಿ ಗಣೇಶನಿರುವನೆ ಅಕ್ಕಾ?
      ಹಿಂದಿನ ಸಾಲಿನ ಹುಡುಗರು
      ಸುಂದರ ವದನೆಯರ ಹುಡುಕುತಿರುವರು ತಮ್ಮಾ!!!

      ಶ್ರೀಕಾಂತರೇ,
      ಅತಿವಿನಯ ಎಂದೆಲ್ಲಾ ಹೊಗಳಿದರೆ ಸ್ವಲ್ಪ ಹೆದರಿಕೆಯಾಗುತ್ತದೆ. ಗಾದೆಯೇ ಇದೆಯಲ್ಲಾ!

      ನಾನು ಬರೀ ಗಾಯತ್ರಿ ಅಷ್ಟೇ ಉಷಾರವರೆ..ಹೇಗೆ ನೋಡುಕೊಳ್ಳುತ್ತೀರಿ ನಮಗೂ ಸ್ವಲ್ಪ ಹೇಳಿಕೊಡಿ!!!!

  26. ಗುಪ್ತಭಾವನೆಗಳನೆ ಕೆಣಕುತ
    ಸುಪ್ತಚೇತನವಂ ಕಲಕಿಯು-
    ದ್ದೀಪ್ತಗೊಳಿಸುತ ನಕ್ಕುದಯ್ಯೋ ಪಾಪಿ ತಂಬಕ್ಕಿ |
    ತಪ್ತಳಾನಿದನೊರೆದೆ ಪತ್ರದೆ
    ಸಪ್ತಸಾಗರದಾಚೆಯಿರ್ಪೆ-
    ನ್ನಾಪ್ತ ಪತಿಗಿದನೊಯ್ಕನೇ ತಲಪಿಸುಗೆ ಪೊಂಬಕ್ಕಿ ||

    ಪರದೇಶದಲ್ಲಿರುವ ತನ್ನ ಪತಿಯನು ರಾತ್ರಿನೆನೆದು ಮರುಗಿದ ಸತಿ ಚಂದಿರನನ್ನು (ತಣ್+ಪಕ್ಕಿ) ಜರೆವಳು. ತನ್ನ ತಾಪವನ್ನು ಪತ್ರದಲ್ಲಿ ಬರೆದು ಬೇಗನೆ ಅದನ್ನು ಪತಿಗೆ ತಲುಪಿಸಲು ದೌತ್ಯಕ್ಕಾಗಿ ಲೋಹದ ಹಕ್ಕಿಯನು (ಪೊನ್+ಪಕ್ಕೀ) ಕರದೊಪ್ಪಿಸಿರುವಳು.

    ಭಾಮಿನಿ ಭಾಮಿಯಿಯಲ್ಲೊರೆದಿರುವಳು. ಇದು ನವಯುಗವಿಹಗಸಂದೇಶ.

  27. ಚಂದ್ರ ವಿಮಾನಕ್ಕೆ ಹೇಳಿದ್ದು ::
    ಚಂಡsನೆs ನೀನೇನೇನುಂಡೆsಯೊs ದಂಡಕ್ಕೆs
    ಗಾಂಡೀವsದಿಂದs ಹೊರಟ್ಹಾಂಗs – ವಾಯ್ವಸ್ತ್ರs
    ಕುಂಡಿsಯs ಬಿಟ್ಟುs ಸಿಡಿದತ್ತುs
    🙂
    [ಓದುಗರಿಗೆ ಇದು ಕೀಳು ಮಟ್ಟದ ಹಾಸ್ಯವೆಂದೆನಿಸಿದರೆ (PJ) ಕ್ಷಮೆಯಿರಲಿ]

    • ರಾಮ್!
      ನಿಮ್ಮ ಪದ್ಯದ ಆದಿಪ್ರಾಸಸ್ಥಾನಕ್ಕೆ (ಬಿಂದುಪೂರ್ವಕ ಡಕಾರಕ್ಕೆ) ಈ ಆಸ್+ಫೋಟವು ಬಂದು ಸಾಕಷ್ಟು ತ್ರಾಸವನ್ನು ಸಹೃದಯರಿಗೆ ನೀಡಿದೆ:-)

  28. ಚಂದ್ರಮನರ್ಧ ಹೃದಯವಮ್ ಚಕೋರಿಯು
    ಚೋರತನವಮ್ ಗೈದು, ಉಳಿದರ್ಧಕೆ
    ಒಲವಿನೋಳ್ ನೀಡಿಹಳ್ ಆಹ್ವಾನವಮ್
    ಪತ್ರದ ವಿಮಾನವಮ್ ಹಾರಿಸುತಲ್

    ( ಚಿತ್ರದಲ್ಲಿನ ವಿಮಾನವು ಪ್ರೇಮ ಪತ್ರವೆಂಬ ಭಾವದಲ್ಲಿ, ಪದ್ಯಪಾನದಿ ನನ್ನ ಮೊದಲ ಪ್ರಯತ್ನದ ಈ ನಾಲ್ಕು ಸಾಲುಗಳು)

    • ಪದ್ಯಪಾನಕ್ಕೆ ಸ್ವಾಗತ ವಿಶಾಲಾ ಅವರೇ!

      ನಿಮ್ಮ ಪದ್ಯದ ಕಲ್ಪನೆ ಸೊಗಸಾಗಿದೆ.ಭಾಷೆಯೂ ಹದವಾಗಿದೆ. ಅಲ್ಲದೆ ಈ ಬಗೆಯತ್ತ
      ನಿಮ್ಮ ಉತ್ಸಾಹವೂ ಸ್ತವನೀಯ. ಆದರೆ ಛಂದಸ್ಸಿನ ದೃಷ್ಟಿಯಿಂದ ನಿಮ್ಮ ರಚನೆ ತುಂಬ ಹಳಿತಪ್ಪಿದೆ. ದಯಮಾಡಿ ಎಲ್ಲ ಪಾಠಗಳನ್ನೂ ಗಮನಿಸಿ ಅಭ್ಯಸಿಸಿ ತೊಡಗಿರಿ.

      • ಗೕಶರವ ಮ ಸಲ ಧನದಗಳು ಮುಂನ  ಗಮನದ ಇಡುನು

  29. ಕಂದನೂಟವಮಾಡೆನೆನುತಿರ
    ಲೆ0ದಿನಂತೆಯೆ ಗೋಳನಿಟ್ಟಿರ
    ಲೊಂದುಪುಸಿಕಥೆಯನ್ನು ತಾಯ್ ಮಗುವಿ0ಗೆ ಪೇಳಿದಳು
    ಚಂದಮಾಮನ ತರುವಯಾನವ-
    ದೆ0ದು ತೋರೆವಿಮಾನ ತಿನ್ನಿದ-
    ನೆ0ದೊಡನೆಮಗು ಮೇಲನೋಡುತ ಮಾಡಿತೂಟವನು

    • ಒಳ್ಳಿತಾಯಿತು ಭಾಮಿನಿಯ ಹದ
      ಬೆಳ್ಳಿ ಮೂಡಿದ ಹಾಗೆ ಬಾನಿನೊ-
      ಳೆಳ್ಳು-ಬೆಲ್ಲಗಳೆಲ್ಲ ಬೆರೆತಂತಿಲ್ಲಿ ಹದವಾಯ್ತು!!

  30. ಕಡೆಯಲ್ ಸುರರಸುರರ್ ಪಾ-
    ಲ್ಗಡಲಂ ತಳೆದನ್ ಸುಧಾoಶು ಜನ್ಮಮನವನo
    ಪಡೆವೆo ನಾನೆನುವರ್ಗಾo
    ತಡೆಯo ಶೂಲದೊಳೆ ಗೈವೆನೆoಬನೆ ಶೂಲೀ

    ಪಾಲ್ಗಡಲಲ್ಲಿ ಜನ್ಮನಾದ ಚoದ್ರನನ್ನು ಬೇರಾರೂ ಪಡೆಯಬಾರದೆoದು ಶಿವ್ ಶೂಲವನ್ನೆಸೆದನೆ? ವಿಮಾನವನ್ನು ಶೂಲ ಮತ್ತು ಹೊಗೆಯನ್ನು ಶೂಲಕ್ರಮಿಸಲಿರುವ ಮರ್ಗವೆoಬ ಕಲ್ಪನೆ

    • ಸೋಮ! ಅದ್ಭುತವಾದ ಕಮನೀಯಕಲ್ಪನೆ!! ಇಂಥ ಪ್ರಾಬಂಧಿಕರಚನೆಗಳ ಸೊಗಸಿನಿಂದಲೇ ಪದ್ಯಪಾನಕ್ಕೆ ಚೆಲುವು. ಅಭ್ನಂದನೆಗಳು.

    • ಚೆನ್ನಾಗಿದೆ ಕಲ್ಪನೆ ಕವಿತಗಳೆರಡು ಸೋಮರೆ. ಚಿತ್ರವನ್ನು ನೋಡಿ ಮತ್ತೆ ಓದಿದೆ. ಭೇಷ್!

      ಸುರರಸುರರ್ ಜಾಗದಲ್ಲಿ ಸುರಾಸುರರ್ ಹಾಕಿದರು ಸರಿಯಾಗಿಯೇ ಇರುತ್ತಿತ್ತು. ಕಂದದಲ್ಲಿ ಸರಿಸಂಖ್ಯೆಯ ಜಾಗದ ಗಣಗಳಿಗೆ ಲಗಂ ದೋಷವಿಲ್ಲ. ಜಗಣ ಭೇಷಾಗಿ ಬರಬಹುದು

    • Ganesh Sir, Srikaanth, dhanyavAdagaLu. howdu surAsurar eMdu mADabahudu 🙂

  31. ತಿಳಿದು ದಾನಮನೀಗಪಾತ್ರರಂ ಪಾತ್ರರ್ಗ
    ಮೊಳಿತು ಗೈವೊಡೆಯೆಂಬ ಶ್ರುತಿಯ ಮರೆತು
    ಪೊಳೆವ ಚಂದಿರಗಂತೆ ಬೆಳಕು ಧೂಳಿಗೆ ತಳೆದು
    ಕಳೆಯೆನೀವನು ಸೂರ್ಯನಿಳೆಗೆ ಮಲೆತು

  32. ದಯಿತಾ ! ಚಿತ್ರರಹಸ್ಯಮಿರ್ಪುದಿದು ಕೇಳ್ ! ಈ ಬೆಂಗಳೂರೊಳ್ ಮಹಾ-
    ರಯದಿಂ ಸೈಟಿನ ಮೂಲ್ಯಮೇರ್ವ ಪರಿಯಂ ಕಂಡೊರ್ವ ಮೇಧಾವಿ ದು-
    ರ್ನಯದೊಳ್ ತಾಂ ಶಶಿಲೋಕಮಂ ಮೊದಲಿಗಂ ತನ್ನಾಸ್ತಿಯಂಗೆಯ್ದು ಮೇಣ್
    ರಿಯಲೆಸ್ಟೇಟಿನ ಧಂಧೆ ಮಾಳ್ಪ ಮನದಿಂ ನುಗ್ಗಿರ್ಪ ಬಾಂದಾಣಮಮ್ ||

    • ಮೂನಿಗೇ ಸಿಕ್ಸರ್ ರವಾನಿಸಿದೀ ಬಗೆ
      ಯೇನನೆಂದೇನೊ ಲಿಕುಚಾಖ್ಯ ಕಬ್ಬದ
      ಸೋನೆಯಿನ್ನಷ್ಟು ಸುರಿಸಯ್ಯ

      • ಧನ್ಯವಾದಗಳು 🙂
        ಮೂನಿನ ಪದ್ಯವ ನೀವಿಂತು ಮೆಚ್ಚಲ್ ಜಾ-
        ಮೂನನ್ನೆ ಸವಿದ ಸಂತಸಮಾಯ್ತು ವಂಶಚ-
        ಮೂನಾಮಗ್ರಹಣದ ಜೊತೆಗೆ 🙂

    • ಅತಿಸುಂದರವಾದ ಕಲ್ಪನೆ ಹಾಗೂ ಪ್ರಬಂಧಿಕಶೈಲಿಯ ಪದ್ಯವಿದು. ಧನ್ಯವಾದ ಮತ್ತು ಅಭಿನಂದನೆ. ಇಂಥ ಪದ್ಯಗಳನ್ನು ಮತ್ತೂ ಹೆಚ್ಚಾಗಿ ಬರೆಯುತ್ತಿರಿ

      • ಧನ್ಯವಾದಗಳು ಸರ್ 🙂 ಪ್ರಯತ್ನ ಮಾಡ್ತೇನೆ.

  33. ಕಾವನಂ ಗೆದ್ದವನ-
    ದಾವನೋ? ಶಿವನಲ್ತು
    ಪೂವಂಬವನ ಕಡೆಗೆ ನುಗ್ಗಿತದಗೋ
    ದೇವನುಂ ಸೋತಿದಕೆ
    ಭೂವಿಯಂ ನೋಡಿ ತಾ-
    ನಾವಗಂ ಕಣ್ಬೊಡೆವನಿನಕಜಾಕ್ಷಂ

    ಚಿತ್ರದ ವಿಮಾನವನ್ನು ಮನ್ಮಥನ ಬಾಣವಾಗಿ ಭಾವಿಸಿ, ಅದರ ಘಾತದಿಂದ ಈಶ್ವರನು ಪ್ರಭಾವಿತನಾಗಿ ಯಾವಾಗಲೂ ಭೂಮಿಯನ್ನು ನೋಡಿ ಅವನು ತನ್ನ ಕಣ್ಣನ್ನು ಹೊಡೆಯುತಿರುವನು ಎಂದು ಕಲ್ಪಿಸಿದ್ದೇನೆ. ಸೂರ್ಯ(ಇನ) ಮತ್ತು ಚಂದ್ರ (ಕಜ- ನೀರಿನಿಂದ ಹುಟ್ಟಿದವನು) ಶಿವನ ಕಣ್ಣುಗಳು ಎನ್ನುವ ಪ್ರಸಿದ್ಧ ಉಪಮೆಯನ್ನು ಇಲ್ಲಿ ಬಳಸಿಕೊಂಡಿದ್ದೇನೆ. ಭೂಮಿಯ ಮಟ್ಟಿಗೆ ಅವನ ಒಂದು ಕಣ್ಣು ಯಾವಾಗಲು ಮುಚ್ಚಿರುವುದಲ್ಲವೆ?

    • ತ್ಭುಂಬ್ವ ವಿಶಿಷ್ಟವಾದ ಕಲ್ಪನೆ. ಆದರೆ ಕೆಲವು ಸವರಣೆಗಳು ಬೇಕಿವೆ. ಭೂವಿ ಎಂಬ ರೂಪ ಅಸಾಧು. ಕಜ ಎಂದರೆ ಚಂದ್ರ ಎಂಬುದು ಹೃದ್ಯವಾಗದ ರೂಪ.ಇನಶಶೀಕ್ಷಂ ಎಂದು ಸುಲಭವಾಗಿ ಸವರಿಸಬಹುದು.

      • ಧನ್ಯವಾದಗಳು ಗಣೇಶರೆ. “ಬೂವಿ” ಎಂದು ಹಾಕಿದರಾದೀತಲ್ಲವೆ. ಕವಿಕಂಠಹಾರದಲ್ಲಿ ಇದು ಕೊಟ್ಟಿದೆ. “ಇನಶಶೀಕ್ಷಂ-ಚೆನ್ನಾಗಿದೆ. ಅದನ್ನು “ಕನ್ಸಿದರ್” ಮಾಡಿ ಕಜವನ್ನು ಆಯ್ದುಕೊಂಡಿದ್ದೆ, ಪ್ರಾಯಾಶಃ ಹೊಸತನ್ನು ಬಳಸುವ ಹುರುಪಿನಿಂದ.

        • ಒಳ್ಳೆಯದು. ನಿಮ್ಮ ಹಳಗನ್ನಡದ ಅರಿವು ಹಾಗೂ ಸೊಲ್ಲರಿಮೆ (ವ್ಯಾಕರಣ)ಗಳ ಆಳ ಪ್ರಶಂಸನೀಯ. ಜೊತೆಗೆ ನೀವು ಸಾಂರದಾಯಿಕ ಛಂದೋಬಂಧಗಳಲ್ಲಿ ಕಾವ್ಯರಚನೆಗೆ ವಹಿಸಿರುವ ಕಾಳಜಿ ಮತ್ತು ಪರಿಣತಿಗಳೂ ಸ್ತವನೀಯ. ನನ್ನ ಇರಾದೆಯಿಷ್ಟೆ: ದುಷ್ಕರವೂ ಸಾಧಿತವೂ ಅಪ್ರಚುರವೂ ಅಪ್ರತೀತವೂ ಆದ ಶಬ್ದರೂಪಗಳನ್ನು ವಿಶೇಷಸಂದರ್ಭಗಳಲ್ಲಿ (ಚಿತ್ರಕವಿತೆ, ಶಾಸ್ತ್ರಕವಿತೆ, ವಿಡಂಬನಕವಿತೆ ಇತ್ಯಾದಿಗಳಲ್ಲಿ)ಬಳಸುವುದು ಸಮುಚಿತ. ಶುದ್ಧವಾದ ರಸವತ್ಕವಿತೆಗೆ ಉದ್ದಿಷ್ಟಪದ್ಯದ ಆದ್ಯಂತವೂ ಶಬ್ದಶಯ್ಯೆ, ಶೈಲಿ, ಗುಣ, ರೀತಿ ಇತ್ಯಾದಿಗಳ ಹದವನ್ನು ಕಂಡು ಪದಪದ್ಧತಿಯನ್ನು ರೂಪಿಸಿಕೊಳ್ಲುವುದು ಒಳಿತು.ವ್ಯಾಕರಣವಾಗಲಿ, ಛಂದಸ್ಸಾಗಲಿ, ಗುಣಾಲಂಕಾರಗಳಾಗಲಿ ಸದಾ ರಸನಿಷ್ಠವಾಗಿರಬೇಕು. ಹೀಗಾಗಿ ನಾನು ಹೇಳಿದ ಮಾತುಗಳನ್ನು ಸಾಪೇಕ್ಷತೆಯ ನೆಲೆಯಲ್ಲಿ ಯಥೋಚಿತವಾಗಿ ಕಾಣಬೇಕೆಂದು ವಿನಂತಿ

          • ತಿದ್ದಿದ ಪದ್ಯ

            ನಿಮ್ಮಸೂಚನೆಗಳಿಗೆ ನಾನು ಋಣಿ. ಧನ್ಯವಾದಗಳು

            ಕಾವನಂ ಗೆದ್ದವನ-
            ದಾವನೋ? ಶಿವನಲ್ತು
            ಪೂವಂಬವನ ಕಡೆಗೆ ನುಗ್ಗಿತದಗೋ
            ದೇವನುಂ ಸೋತಿದಕೆ
            ಬೂವಿಯಂ ನೋಡಿ ತಾ-
            ನಾವಗಂ ಕಣ್ಬೊಡೆವನಿನಶಶೀಕ್ಷಂ

  34. ವೇಗದ ಬರ್ದುಕ ನೋಳ್ದುಂ
    ಲೋಗರೊಳಿತುಮಿರ್ಚಿಸಾಣ್ಮದೂಗಿರ್ಪನಿದಂ
    ಸಾಗಿರ್ದೊಡೆ ಚಂದಿರನಂ
    ತಾಗಳೆ ನಗೆ ! ಇಲ್ಲಮೆಂತುಟೆ ಪೊಗೆಯು ! ಸಾಜಂ

    [ವೇಗದ ಬದುಕಿಗೆ ಬೇಸತ್ತು ಆಣ್ಮನು ಈ ಚಿತ್ರದಲ್ಲಿ ಹೋಲಿಕೆಯನ್ನು ಮಾಡಿದ್ದಾನೆ. ಚಂದ್ರನಂತೆ ಸಂಯಮದಿಂದ ಬಾಳು ಸಾಗಿದರೆ ಆಗ ನಗೆ (ಸುಖ). ಇಲ್ಲದೇ ವಿಮಾನದಂತೆ ವೇಗದ ಬದುಕಾದರೆ ಸಿಗುವುದು ಹೊಗೆಯೇ (ಅಶಾಂತತೆ)]

  35. ಪಿರಿಯಕ್ಕರದಲ್ಲೊಂದು ಪ್ರಯತ್ನ

    ತೋಳ ಮೇಲ್ಗಡೆ ಯೊರಗಿದ ಮನದನ್ನಳಂ ನೋಡಿ ನಲ್ಲ ತಾನೊರೆದನಿಂತು |
    ಬಾಳ ಸಂಗಾತಿ ನೀನೇ ಕಾಣಲ್ಲಿರ್ಪ ಚಂದ್ರನಂ ನಿನಗೇ ಕೊಟ್ಟೆನ್ ನಿರ್ಮಂತು |
    ಭಾಳ ಮೆಚ್ಚಿದೆನಾದೊಡೇನ್ ಇನ್ನಾರೋ ಕದ್ದಾರೋ ನೀನೇನಂ ಮಾಳ್ಪಯ್ ಕಂತು |
    ಕೇಳಲ್ಕಿದಿರೆಂದನ್ ಬಿಡುಚಿಂತೆ ಕಾವಲ್ಗಾನಿಟ್ಟಿರ್ಪೆನ್ ಬಾನ್ಬಾಜಂ ನೀನಿರ್ಕುಂತು ||

    ಇದು ನಲ್ಲನಲ್ಲೆಯರ ನಡುವೆ ನಡೆವ ಸಂಭಾಷಣೆ
    ಪ್ರಣಯದಲ್ಲಿ ಓರ್ವ ಪ್ರೇಮಿ ತನ್ನ ನಲ್ಲೆಗೆ ಚಂದ್ರನನ್ನೆ ನಿನಗೆ ಕೊಟ್ಟಿರುವೆನೆಂದಾಗ, ಪ್ರೇಯಸಿ ಅದನ್ನು ಮೆಚ್ಚಿದಳಾದರು ಆ ಚಂದ್ರನನ್ನು ಇನ್ನು ಯಾರಾದರು ಕದ್ದು ಬಿದಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದಾಗ, ಉತ್ತರವಾಗಿ, ಪ್ರೇಮೀ ಅವಳಿಗೆ ಆಶ್ವಾಸನೆ ನೀಡುತ್ತಾನೆ- ಚಿಂತೆಯನು ಬಿಡು. ಆ ಚಂದ್ರನಿಗೆ ಕಾವಲಾಗಿ ನಾನು ವಾಯುಸೈನ್ಯವನ್ನೆ ಇಟ್ಟಿದ್ದೇನೆ ಎಂದು. ಪ್ರೀತಿಯಿಂದ ಪ್ರೇಮಿ ಪ್ರೇಯಸಿಯನ್ನು ಹೋಕೆ-ಹುಳುಕನ್ನು ತಿಳಿಯದವಳು ಎಂಬ ಅರ್ಥ್ದಲ್ಲಿ ನಿರ್ಮಂತು ಎಂದು ಸಂಬೋಧಿಸಿದರೆ, ಪ್ರೇಯಸಿ ಅವನನ್ನು “ಮನ್ಮಥ” ಎಂದೇ ಕರೆಯುತ್ತಾಳೆ.

    ನಿರ್ಮಂತು- ಅಕಳಂಕ/ ಕುಟಿಲತೆಯಿಲ್ಲದ
    ಬಾನ್ಬಾಜು= ಬಾನ್+ಪಾಜು- ಆಸ್ಶದ ಸೈನ್ಯ
    ನೀನಿರ್ಕುಂತು- ನೀನ್ ಇರ್ಕೆ ಉಂತು
    ಉಂತು- ಸುಮ್ಮನೆ

    • ಛಂದೋವ್ಯಾಕರಣಗಳ ಹದ ಸೊಗಸಾಗಿದೆ. ಪದ್ಯಪಾನಕ್ಕೆ ತೀರ ವಿರಳವಾಗಿರುವ ಪಿರಿಯಕ್ಕರವನ್ನು ನೆನಪಿಸಿಕೊಟ್ಟಿದುದಕ್ಕಾಗಿ ಧನ್ಯವಾದ. ಆದರೆ ಇದೊಂದು ಸಾಮಾನ್ಯಸೂಚನೆ; ಎಲ್ಲರಿಗೂ ಮುಖ್ಯ. ವಸ್ತುತಃ ಈ ಪರಿಯ ವರ್ಣನೆಗಳಲ್ಲಿ ಪೂರ್ವಾಪರವಿವರಣನಿರಪೇಕ್ಷವಾಗಿರಬೇಕಾದ ಮುಕ್ತಕಕಗಳ (ಅಂದರೆ ಬಿಡಿಗವಿತೆಗಳ)
      ಅರ್ಥಸ್ಪಷ್ಟೀಕರಣಕ್ಕೆ ಪದ್ಯದಾಚೆಗಿನ ವ್ಯಾಖ್ಯಾನವು ಕೇವಲ ಕಠಿನಶಬ್ದ ಮತ್ತು ವಿಶೇಷವಿಚಾರಗಳಿಗೆ ಸೀಮಿತವಾಗಿವುದೊಳಿತು. ಕೂಡಿದಮಟ್ಟಿಗೂ ವಿವರಗಳೆಲ್ಲ ಮೂಲಪದ್ಯದಲ್ಲಿಯೇ ಅಡಕವಾಗಲಿ. ನಮ್ಮ ನಮ್ಮ ಕಲ್ಪನೆಗಳ ಭಾವವಿಸ್ತರಣೆ-ವಿಷಯವಿಸ್ತರಣೆಗಳಿಗೆ ತಕ್ಕ ಛಂದಸ್ಸನ್ನು ನಾವು ಆಯುವಲ್ಲಿ ಅಥವಾ ಅನ್ಯರೇ ವಿಧಿಸಿದ್ದ್ದಲ್ಲಿ ಔಚಿತ್ಯ ಮತ್ತು ಸ್ಥಳನಿರ್ವಾಹ(space-management)ಗಳ ಬಗೆಗೆ ಮತ್ತೂ ಎಚ್ಚರವಿರಲಿ

      • ಗಮನದಿಂದಿರ್ಪೆಂ ಗಣೇಶರೆ.

        ಈಪದ್ಯ ವಿವರಣ ನಿರಪೇಕ್ಷವಾಗಿದೆಯೆ ತಿಳಿಸುವಿರ? ವಿವರಣೆಯಿಲ್ಲದೆ ಓದುವವರಿಗೆ ಅರ್ಥವಾಗಬೇಕು ಎಂದೇ ರಚಿಸಿದ್ದು. ನನ್ನ ಪ್ರಯತ್ನ ಎಷ್ತು ಸಫಲವಾಯ್ತೊ ತಿಳಿಸಿ.

  36. ಉರಿಯೊಳ್ ಬೆಣ್ಣೆಯನಿಟ್ಟೊಡಮೆಸುಟೆ-
    ಳ್ತರದೊಳಮೇರಿ ಪೊಡೆದುಣುವನಣುಗನ್
    ಕರುಳೆನೆ ಸಸಿನಿರಲಾರ್ಪುದೆಯೆಂದೆಣಿಸಿ ಯಶೋದೆಯು ತಾನ್
    ಮರುಪೊಳ್ತುಪಾಯದಿಂ ಬೆಣ್ಣೆಯೆಟುಕ-
    ದಿರೆಯದನಿಟ್ಟಳ್ ಬಾನೊಳ್ ಕುರುಳನ್
    ಮರುಳೆನೆ ಗೆಳೆಯರೊಡನೆ ತಾನ್ ಪಾರಿಂ ಪೊಡೆದಪನೆ ಪಟಿಂಗಂ

    ಅಣುಗನ್- ಮಗ
    ಸಸಿನೆ-ಸುಮ್ಮನೆ
    ಕುರುಳನ್- ಚಿಕ್ಕವನು
    ಪಾರಿಂ- ವಿಮಾನದಿಂದ

    • ಶ್ರೀಕಾಂತರೇ! ನಿಮ್ಮ ಪರಿವರ್ಧಿನಿಯಲ್ಲಿ ಅಲ್ಲಲ್ಲಿ ಪದ್ಯಗತಿಯು ಹದತಪ್ಪಿದೆ. ಪದ್ಯಗತಿಯು ಛಂದಃಪದಗತಿ ಮತ್ತು ಭಾಷಾಪದಗತಿಗಳ ಅನ್ಯೋನ್ಯಹದವೆಂದು ಸೇಡಿಯಾಪು ಹೇಳುವುದನ್ನು ಗಮನಿಸಿರಿ.(ಅವರ ಛಂದೋಗತಿ ಪುಸ್ತಕವನ್ನು ಕಾಣಿರಿ). ಒಂದೆಡೆ ಅನಪೇಕ್ಷಿತವಾದ ಜಗಣವೂ ಬಂದಿದೆ.

      • ಗಣೇಶರೆ! ಎಷ್ಟು ಉಪಾಯವಹಿಸಿದರೂ ಆ “ಉಪಾಯದ ಜಗಣ ನನ್ನ ಗಮನದಿಂದ ನುಸುಳಿತ್ತು. ಪದ್ಯವನ್ನು ತಿದ್ದಿ ಬದಲಿಸಿದ್ದೇನೆ. ಪದಶಯ್ಯೆ ಮತ್ತು ಓಟಗಳು ಸುಧಾರಿಸಿವೆಯೆ ದಯವಿಟ್ಟು ತಿಳಿಸಿ.

        ಉರಿಯೊಳ್ ಬೆಣ್ಣೆಯನಿಟ್ಟೊಡಮೆಸುಟೆ-
        ಳ್ತರದೊಳಮಣುಗನ್ ಪೊಡೆದದನುಂಬನ್
        ಕರುಳೆನೆ ಸಸಿನಿರಲಾರ್ಪುದೆಯೆಂದೆಣಿಸುತ ಜಸದೆಯು ತಾನ್ |
        ಮರುಪೊಳ್ತು ಚದುರಿನಾ ನವನಿತಮಂ
        ಗುರಿಗಂದದವೋಲ್ ಬಾನೊಳಿರಿಸಿರಲ್
        ಮರುಳೆನೆ ನೇಹಿಗರೊಡೆ ತಾನ್ ಪಾರಿಂ ಪೊಡೆದಪನೆ ಪಟಿಂಗಂ ||

  37. ಕಿಂಕರ ಹನುಮಂ ಹಾರಿಹ
    ಲಂಕೆಗೆ ಸಕಲಬಲದಿಂದೆ ಸಾಗರ ದಾಟಲ್
    ಸಂಕರಗೊಂಡವ ಬಿಂಬವ
    ಶಂಕಿಸೆ ಚಂದ್ರಾರವಿಂದವಂ ಸೀತೆಯವೊಲ್ ।
    (ಚಿತ್ರದಲ್ಲಿನ “ವಿಮಾನ” ಸೀತಾನ್ವೇಷಣೆಗೆ ನನ್ನೆಲ್ಲಬಲದಿಂದ ಸಮುದ್ರದಾಟಲು ಹಾರಿದ “ಹನುಮ”ನ ಹಾಗೆ / ಹನುಮಗೆ ಮೇಲಿನ “ಚಂದ್ರ” “ಸೀತೆ”ಯ ಹಾಗೆ ಕಂಡ ಕಲ್ಪನೆಯಲ್ಲಿ )

  38. ವಿಶಾಲ ವಕ್ಷಸ್ಥಳ ದಾಡ್ಯ ತೋಳ್
    ಬಲರಾಮನಬಂಟ.
    ಸಹಸ್ರಕುಂಜರಬಲನಾಘ್ರಜ.
    ಶಿರಸಾ ವಂದ್ಯಂ.

  39. ಮುರಿದ ತಟ್ಟೆಯು ಹರಿದು
    ತೇಲುತ್ತಾ ಸಾಗರದ ಮಧ್ಯದಲಿ ಬರಲು
    ಹಸಿದ ಮತ್ಸ್ಯ ಒಂದು ಅದನ್ನು ಮುರಿದ ರೊಟ್ಟಿಯೆಂದರಿತು
    ಹರಸುತ ತಾ ಶರವೇಗದಿಂ ಬರುತ್ತಿಹುದು.

    • ಅಭಿಲಾಷರಿಗೆ ಪದ್ಯಪಾನಕ್ಕೆ ಸ್ವಾಗತ. ದಾಡ್ಯ ಪದದ ಅರ್ಥ ಏನು? ಅಘ್ರಜ ತಪ್ಪು; ಅಗ್ರಜ ಎಂದಾಗಬೇಕು. ಕೆಲವೊಂದು ವಿಸಂಧಿದೋಷಗಳಿವೆ. ನಿಮ್ಮ ಮೊದಲ ಪದ್ಯವು ಚಿತ್ರದಲ್ಲಿರುವುದನ್ನು ಬಿಂಬಿಸಿಲ್ಲ. ನೀವು ಛಂದೋಬದ್ಧವಾಗಿ ರಚಿಸಿಲ್ಲ. ದಯವಿಟ್ಟು ಇಲ್ಲಿರುವ (http://padyapaana.com/?page_id=436) ಪಾಠಗಳನ್ನು ಗಮನಿಸಿಕೊಂಡು ಪದ್ಯರಚನೆಯಲ್ಲಿ ತೊಡಗಿ. ಪದ್ಯಪಾನವು ಛಂದೋಬದ್ಧಪದ್ಯಗಳಿಗಾಗಿ ಮೀಸಲಾಗಿದೆ. ಶುಭಾಶಯ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)