Jan 272013
ಈ ಬರುವ ವಾರದಲ್ಲಿ ಕುಮಾರವ್ಯಾಸ ಜಯಂತಿ. ಆ ನಿಟ್ಟಿನಲ್ಲಿ “ನಾರಣ”(ನಾರಣಾ ಎಂದರೂ ಆದೀತು) ಎಂದು ಪ್ರತಿಪಾದದ ಮೊದಲಲ್ಲಿಯು ಇಟ್ಟು (ಯಮಕಾಲಂಕಾರ) ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ಬರೆಯಿರಿ. ಈ ಪದ್ಯವು ಕುಮಾರವ್ಯಾಸನಬಗ್ಗೆಯೊ ಅಥವಾ ಅವನಿಗೆ ಸಂಬಂಧ ಪಟ್ಟ ಯಾವುದೋ ವಿಷಯದ ಬಗ್ಗೆಯೊ ಇದ್ದಲ್ಲಿ ಒಳಿತು.
ಭಾಮಿನಿಯಲ್ಲೇ ರಚಿಸೋಣವೆಂದರೆ 6 ನಾರಣರನ್ನೆಲ್ಲಿಂದ ತರುವುದು. ಹಾಗಾಗಿ ಅದೇ ಜಾಡಿನ ಪಲ್ಲವದಲ್ಲಿ ರಚಿಸಿದ್ದೇನೆ.
ವಿವರಣೆ ಅಗತ್ಯ: ನಾರಣಪ್ಪನು ನರಯಣ, ನಾರಾಯಣ, ನಾರಯಣ ಎಂದೆಲ್ಲ ಹೇಳಿರುವ ತನ್ನ ಇಷ್ಟದೈವರು ನಾನಾ ಆರಣಜ(a class of dieties)ರಲ್ಲ, ಎಲ್ಲರೂ ಒಂದೇ ಎಂದು.
ನಾರಣಪ್ಪನು ತನ್ನದೈವವ
ನಾರಣಂ, ನಾರಾಯಣಲ್ಲದೆ
ನಾರಣಾನೆಂದೆಲ್ಲರುಂ (ಎಂದ+ಎಲ್ಲರುಂ) ನಾ
ನಾರಣಜರಲ್ಲೊರುವರೈ|
ಸ್ವಲ್ಪ ತಿದ್ದಿದ್ದೇನೆ:
ನಾರಣಪ್ಪನು ತನ್ನದೈವವ
ನಾರಣಂ, ನರಯಣನದಲ್ಲದೆ
ನಾರಣಾನೆಂದೆಲ್ಲರುಂ (ಎಂದ+ಎಲ್ಲರುಂ) ನಾ
ನಾರಣಜರೇನಲ್ಲವೈ|
ಭಾಮಿನೀ ಷಟ್ಪದಿಯಲ್ಲಿ ಪ್ರಥಮ ಪ್ರಯತ್ನ ಮಾಡಿದ್ದೇನೆ. ಏನಾದರೂ ಕು೦ದುಗಳಿದ್ದರೆ ಸೂಚಿಸಬೇಕಾಗಿ ಕೇಳಿಕೊಳ್ಳುತ್ತೇನೆ.
ನಾರಣ = ನಾರಾಯಣ (ಪರ್ಯಾಯವಾಗಿ ಕೃಷ್ಣ)
ನಾರಣನಿಗಾತ್ಮೀಯನೆನಿಸಿದ-
ನಾ ರಣಾಗ್ರಣಿ ವೀರಪಾರ್ಥನ-
ನಾ ರಣಾ೦ಗಣದಲ್ಲಿ ಕೊ೦ದನು ಬಭ್ರುವಾಹನನು | (ನಾ ರಣೋತ್ಸಾಹದಲಿ ಕೊ೦ದನು ಬಭ್ರುವಾಹನನು)
ನಾರಣನನವಗಣಿಸಿದವನ-
ನ್ನಾರಣಗಿಸದೆ ಬಿಡರು ಪೇಳೈ
ನಾರಣಪ್ಪನು ಬರೆದ ಭಾರತ ಕಾವ್ಯಸಾರವಿದು ||
ಮಹಾಕವಿ ಕುಮಾರವ್ಯಾಸನ ಅಡಿದಾವರೆಗಳಿಗೆ ಸಾಷ್ಟಾಂಗ ನಮನಗಳು.
[ಮಹಾಭಾರತಕ್ಕೆ ಹೋಲಿಸಬಾರದ ಗುರು-ಶಿಷ್ಯಯುದ್ಧ ಮತ್ತು ಭಾಮಿನಿಯೇ ಬಳಸುವ ಏಕಮಾತ್ರ ಅಸ್ತ್ರ ಮಾಧ್ಯಮ ಎಂಬುದು ಕಲ್ಪನೆ ]
ನಾರಣಪ್ಪನ ಹೆಸರು ಹೇಳದ-
ನಾರಣಾಂಗಣದಲ್ಲಿ ಕವನಿಸ-
ನಾರಣವು ಭಾಮಿನಿಯನಾಯ್ದುದು ಯುದ್ಧವೆಸಗುವೊಲು |
ನಾ ರಣದಿ ಹೋರಾಡೆ ಗುರುವಾ
ನಾರಣಾಖ್ಯನೆ ಎದುರು ನಿಂತಿರೆ
ನಾರಣಗೆ ಶಿರಬಾಗಿ ಕರಮುಗಿದಸ್ತ್ರ ತ್ಯಜಿಸಿಹೆನು ||
‘ನಾರಣಾಖ್ಯನೆ’ ಎಂಬಲ್ಲಿ ತೊಂದರೆ ಕಂಡರೆ ‘ನಾರಣಪ್ಪನೆ’ ಎಂದು ಬಳಸುವುದು
ನಾರಣನು ತಾ ಪಾಂಚಜನ್ಯವ
ನಾರಣದಿ ಮೊಳಗಿಸಿರಲರ್ಜುನ-
ನಾರಣದಿ ಆ ದೇವದತ್ತವ ಭೀಮ ಪೌಂಡ್ರವನು |
ನಾರಣಗೆ ನಮಿಸುತ್ತ ಧರ್ಮಜ-
ನಾರಣದಲಾನಂತವಿಜಯವ
ನಾರಣದೆ ಉಳಿದೀರ್ವರೂದಿ ಮಣಿ-ಸುಘೋಷಗಳ ||
ಈ ಪದ್ಯದಲ್ಲಿ ಮೊದಲನೆ ಪಾದದಲ್ಲಿ ಮೊದಲನೇ ನಾರಣ=ಶ್ರೀಹರಿ, ನರನಾರಣ=ಶ್ರೀಕೃಷ್ಣ, ಐದನೇ ಪಾದದಲ್ಲಿ ನಾರಣ=ಗದುಗಿನ ವೀರನಾರಾಯಣ ಸ್ವಾಮಿ ಎಂಬ ಕಲ್ಪನೆ:
ನಾರಣನು ನರನಾರಣನು ನರ
ನಾರಣಪ್ಪನ ಭಾರತದ ಭುವ-
ನಾರಣಾಂಗಣದಲ್ಲಿ ಧರ್ಮದ ನೀತಿ ಬೋಧಿಸುತ |
ನಾರಣಾಯತವೆನಿಪ ಗದುಗಿನ
ನಾರಣನು ನಡೆತಂದು ಬರೆಸಿದ
ನಾರಣಾಂಗಣ ಕಾವ್ಯ ಕಥೆಯ ವ್ಯೂಹ ಭೇದಿಸುತ ||
ಸುಧಾಮನ ನಾರಾಯಣ:
ನಾರಣನ ಕೆಳೆತನವ ನೆನೆದವ-
ನಾರಣಾಂಗಣಕಿನ್ನು ಮುನ್ನವೆ
ನಾರಣಾಂತರ್ಗತಕೆ ಅರುಹಲು ಇಹದ ಬಾಧೆಗಳ |
ನಾರಣಗೆ ಸಂಕೋಚದಿಂದಲಿ
ನಾರಣಾರ್ಪಿತ ಭಾವದಿತ್ತನು
ನಾರಣಾಲಯದಲ್ಲಿ ಬಿಡಿಸುತ ತಂದ ಅವಲಕ್ಕಿ ||
ಬೆಂಗಳೂರಿನಲ್ಲಿ, ನಾರಾಯಣನ ಹೆಸರಿನಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಗಮನಿಸಿ ತಮಾಷೆಗಾಗಿ :
ನಾರಣಾಲಯದಲ್ಲಿ ಮಲಗಿದ
ನಾ ರಣಾಂಗಣ ಘೋರ ನೆನೆಯುತ
ನಾರಣಗೆ ಮನದಲ್ಲೆ ವಂದಿಸಿ ಗುಣವ ಪ್ರಾರ್ಥಿಸಿದ |
ನಾರಣನೆ ನಯನಗಳ ಮತ್ತಾ
ನಾರಣನೆ ಹೃದಯಗಳ ರಕ್ಷಿಪ
ನಾ ರಣಾಂಗಣದಿಂದ ದೂರಕೆ ’ಬಿಲ್ಲ’ ಬಿಸುಟೆಂದ ||
ನಾರಣಾಂಕಿತಗೊಳಿಸಿ ಕೃತಿಯನು
ನಾರಣಪ್ಪನು ಕನ್ನಡದಿ ತಾ-
ನಾ ರಣಾಖ್ಯಾರೂಪಕಕೆ ಭಾಮಿನಿಯ ಸಿಂಗರಿಸಿ-
ನ್ನಾರಣಿಸದಂತೊರೆಯೆ ವಾಣಿಯ-
ನಾರಣನದೀಕ್ಷೆಯನು ವೀಣೆಗೆ
ನಾರಣಗೆ ಕಬ್ಬಿಗರ ಯೋಗಕ್ಷೇಮಕಿತ್ತಳೆಲಾ!
”ನಾರಣ’ಪದಂ ವ್ಯಾಕೃತಿಯ ನಾ-
ನಾರಣತ್ಸೂತ್ರಕೆ ವಿರೋಧಿ ವಿ-
ನಾ ರಣಪ್ರಸ್ತಾವಮಿದನೊಪ್ಪುವುದು ಶ್ರೀಕಂಠ!!
ನಾರಣಪ್ಪನೆನಲ್ಕೆ ಸಂಜ್ಞೆಯ-
ನಾರಣಕ್ರಮಮಲ್ತೆ ಮತ್ತಿದ-
ನಾರಣಂ ನೀರಸತೆಯಿಲ್ಲದೆ ನಿರ್ವಹಿಸಿದಪರೋ?
[ ನಾನಾ+ರಣತ್+ಸೂತ್ರ (ಬಗೆಬಗೆಯಾಗಿ ಸದ್ದುಮಾಡುವ ವ್ಯಾಕರಣದ ಸೂತ್ರಗಳು), ವಿನಾ ರಣ( ಜಗಳದ ಪ್ರಮೇಯವೇ ಇಲ್ಲದೆ), ಸಂಜ್ಞೆಯ+ಅನಾರಣಕ್ರಮ= (ನ ಆರಣ ಎಂಬುದು ನಙ್ ತತ್ಪುರುಷಸಮಾಸವಾದಾಗ ಅನಾರಣ ಎಂದಾಗುತ್ತದೆ.ಇದರ ಅರ್ಥ ಹೀಗಿದೆ: ಎಲ್ಲೆಡೆಯಿಂದಲೂ ಸುತ್ತಾಟವಿಲ್ಲದಿರುವಿಕೆ), ಮತ್ತಿದನು+ಆರ್+ಅಣಂ (ಸ್ವಲ್ಪವೂ) ಅಂದರೆ ಯಾರು ಇದನ್ನು ಸ್ವಲ್ಪವೂ ನೀರಸತೆಯಿಲ್ಲದೆ….]
ಹೇ ಶ್ರೀಕಂಠ! ಇದೇಂ ಗತಿ?
ಅಶ್ರಾಂತಭಯಂಕರಂ ಭವತ್ಪ್ರಶ್ನಮಲಾ!!
ವಿಶ್ರಾಣಿಸದೆ ಪದಂಗಳ
ಸುಶ್ರೀಕನಿದಾನಮಂ ನಿರೂಪಿಪುದೆಂತಯ್??
🙂 🙂 🙁 🙁
ನಾರಣನೀರಣವೀ ಕವ
ನಾರಣ್ಯದೊಳ್ ತಾ ಪಿಕರವದವೋಲ್ ಕೇಳಲ-
ನಾರಣಂ ಲಲನಾರಣಂ
ನಾರಣಮಕರಣಿಕಬಾದರಾಯಣಂ ವಲಂ ||
ಈರಣ=ಮಾತು. ರಣ=ದನಿ. ಆರಣ=ಸುತ್ತಲೂ ಕೇಳಿಬರುವ ದನಿ. ಅನಾರಣ=ನೀರವತೆ. ಕರಣಿಕ=ಬರಹಗಾರ. ಅಕರಣಿಕ=ಬರಹಗಾರನಿಲ್ಲದ. (ಉಪಮಾ+ನ್ಯೂನಾಭೇದ ರೂಪಕಾಲಂಕಾರ) ಸರಿಯೇ?
ಭಟ್ಟರೆ ತಮ್ಮ ಪದ್ಯಗಳು ಪುಂಖಾನುಪುಂಖವಾಗಿ ಬರುತಿವೆ. ಈ ಪದ್ಯದ ಛಂದಸ್ಸು ಮಾತ್ರ ನನಗೆ ಅರ್ಥವಾಗ್ತಿಲ್ಲ. ಇದು ಕಂದವಾದಲ್ಲಿ ತೀರ ದಿಕ್ಕುತಪ್ಪಿದೆಯಲ್ಲ.
ಶ್ರೀಕಾಕಾಂತರೇ, ನಮಸ್ಕಾರಗಳು.
ಇದು ನನ್ನ ಕಂದವೇ. ತಪ್ಪಿದ್ದು ಎಲ್ಲಿ? ಎಂದು ತಿಳಿಯಲಿಲ್ಲ.ಮಾತ್ರೆಗಳ ಲೆಕ್ಕ ಚುಕ್ತಾ ಆಗಿದೆಯಲ್ಲಾ!
ಮಾತ್ರೆಗಳ ಎಣಿಕೆ ಮಾತ್ರ ಸರಿ. ಗಣ ವಿಂಗಡಣೆಯ್ಸ್ನ್ನು ನೀವು ನೋಡಿಲ್ಲ. ಕಂದದ ಲಕ್ಷಣವನ್ನು ಇಲ್ಲಿ ನಡಿ ತಿಳಿಯಬಹುದು.. ತಕ್ಕಂತೆ ಸರಅಡಿಸಿ
http://padyapaana.com/?page_id=438
ಶ್ರೀಕಾಂತರೇ, ಧನ್ಯವಾದಗಳು.
ತಾವು ಸೂಚಿಸಿದ ತಾಣವನ್ನು ನೋಡಿದೆನು. ಹೌದಲ್ಲ! ಗಡಿಬಿಡಿಯಿಂದಾಗಿ ಈ ಕಂದದಲ್ಲಿ ಚತುರ್ಮಾತ್ರಾ ಗಣಗಳ ಗತಿಗಳನ್ನು ನಿರ್ಲಕ್ಷಿಸಿದ್ದೆ. ಈಗ ಮತ್ತೆ ಯಥಾಮತಿ ಸವರಿದ್ದೇನೆ.-
-ನಾರಣನೀರಣವೀ ಕವ-
-ನಾರಣ್ಯದಿ ತಾನೆ ಕೋಕಿಲಗಾನಂ ಕೇಳಾ- |
-ನಾರಣಮೀ ಲಲನಾರಣ-
-ನಾರಣಮಕರಣಿಕಬಾದರಾಯಣಂ ತಾಂ ||
ಎದುರಾದೆಡರುಗಳಂ ಸಲೆ
ಚದರಿಪ ವಿಘ್ನೇಶಗೇಕೆ ಶಂಕಾಭಾವಂ
ಪದಪಾದ ಪದ್ಯಮಂ ಮಿಗೆ
ಚದುರಿಂದೊರೆದಿರ್ಪಿರೊಪ್ಪಿ ಸೈಯೆನೆ ಮಾವಂ
🙂 🙂 :-))
ವಾರಣಪದವಿನ್ಯಾಸಂ
ದಾರುಣಮಲ್ತೆ ತಾಂ ಕದಳೀವನಶೋಭೆಗಂ?|
ನಾರಣಪದವಿನ್ಯಾಸಂ
ಕಾರಣಮಂತೆನಲ್ ಕವಿತೆಗುಂ ಶ್ರೀಕಾಂತ!
ಪದ್ಯಪಾನಿಗಳೇ, ದಯವಿಟ್ಟು ಈ ಪದ್ಯದ ಮೊದಲನೇ ಸಾಲನ್ನು “ವಾರಣಪಾದನ್ಯಾಸಂ” ಎಂದು ಓದಿಕೊಳ್ಳಬೇಕು.
ಮೊದಲೆರಡು ಪದ್ಯ, “ನಾರಣ” ಪ್ರಾಸವನ್ನುಳ್ಳದ್ದು. ಉಳಿದದ್ದು, ನನ್ನ ಭಾವಪೋಷಕ ಕವಿಗೆ ಆತನ ಜನ್ಮದಿನದಂದು ನನ್ನ ನಮನ:
ನಾರಣನ ಮೊರೆಯಿಡುವ ಭಕುತನ
ನಾರಣಮು ಕೊಂಕಿಸರು ಗಜಪತಿ
ನಾರಣನ ಪಿತನಜಮಿಳನು ಪ್ರಹ್ಲಾದನೇ ಸಾಕ್ಷಿ
ನಾರಣನೆ ಬಾರಯ್ಯ ದುರುಳರ
ನಾರಣೆವರೆಂದವಳ ಮಾನವ
ನಾರಣಿಯೊಳಡಗಿಸುತ ಕಾಯ್ದರು ಕೃಷ್ಣ ದೊರೆಯಲ್ತೇ?
ನಾರಣನ ಕೈವಲ್ಯಕಾರಣ
ನಾ ರಣದ ಪಂಡಿತರ ಗಂಡನ
ನಾರಣಗಿಸುವರೈ ಮಹಾಭಾರತದ ನಾಯಕನ
ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು
ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು
ನಾರಣನೆ ಕರ್ಣಾಟ ಭಾರತ
ಕಾರಣನೆ ಕೃಷ್ಣಾಮೃತಾರ್ಣವ
ಪೂರಣನೆ ಕವಿತಿಲಕ ಕುವರವ್ಯಾಸ ಮುನಿರಾಯ
ಚಾರುಕವಿತೆಯಿದಲ್ಲವೆನುತಲೆ
ಮೇರೆವರಿಸಿದೆ ಬರಿಯ ತೊಳಸಿಯ
ತೀರುತಕೆ ಕಪ್ಪುರವ ಬೆರೆಸಿದೆ ಕಾವ್ಯಸೌರಭವ
ಕಾಳಗದ ಕಲಿಕರ್ಣ ಭಕುತಿಯ
ಸೂಳರಿತ ಗಾಂಗೇಯ ಘನ ಸುವಿ
ಶಾಲಮತಿ ವಿದುರಾಂಕ ಬೆಂಕಿಯ ಕುವರಿ ಪಾಂಚಾಲಿ
ಕಾಳಮತಿ ದುರ್ಯೋಧನಾಹವ
ಕಾಲ ಭೀಮ ಪರಂತಪರ ಕರು
ಣಾಳು ಕೃಷ್ಣನ ಕಂಡರಿಸಿದೈ ಭಾವಭಿತ್ತಿಯಲಿ
ಅರಗಿನರಮನೆಯೋ ವಿರಾಟನ
ಪುರದೊಳಜ್ಞಾತವೊ ಸುಯೋಧನ
ಹರಣವೋ ಕಲಿ ಕರ್ಣಭೀಷ್ಮರ ಮರಣವೋ ಕೊನೆಗೆ
ದುರುಪದಿಯ ಧನ ಹರಣವೋ ಸಲೆ
ಪರಮಪುರುಷನ ಕರುಣವೋ ಮಿರು
ಮಿರುಗಿತಲ ನಿಜರೂಪಕದ ಭಾಂಡದೊಳು ತೊಳತೊಳಗಿ
ಬಹಳ ಚೆನ್ನಾಗಿವೆ!
ಕೊಳ್ಳೆಹೊಡೆದಿರಿ ವಾಗ್ವಧುವನೇ
ಕೊಳ್ಳೆಗಾಲರೆ! ನಿಮ್ಮ ಕವಿತೆಗ-
ಳೊಳ್ಳಿತಿಗೆ ಚೆಲುವಂ ಬೆರಸಿದಂತಿರ್ಪುವೆನೆ ಸಲ್ಗುಂ|
ಕೊಳ್ಳಿರೆಂದೆಮಗಿಂತು ಕವಿತೆಯ
ಬಳ್ಳದಿಂ ಮೊಗೆಮೊಗೆದು ನೀಡ-
ಲ್ಕುಳ್ಳವರು ನೀವ್ ನಿಮ್ಮ ಭಾಮಿನಿಯಮಮ ಚೆಂದುಳ್ಳಿ!!
ಧನ್ಯವಾದ
ನಾರಣಗೆ ಮನಸೋತ ಮಂಜುವೆ
ಕಾರಣವ ತಿಳಿದಾಯ್ತು ಪದ್ಯಗ
ಳಾರಣದಿ ಬಿಗಿದಪ್ಪಿಕೊಂಡಿರಿ ಪಾನ ಬಂಧುಗಳ |
ಹೂರಣವು ಬಲು ಸೊಗಸು ಸಜ್ಜಿಗೆ
ಧಾರಣಕೆ ಸಿಹಿಕಡಬು ಮಜ್ಜಿಗೆ
ನಾರಣೀಕೃತವಾಯ್ತು ಪಾಕವು ಷಡ್ರಸೋಪೇತ ||
ಧನ್ಯವಾದ
ಮಂಜುನಾಥರೆ ತಮ್ಮ ವಾಗ್ಝರಿ ಅವಿಚ್ಛಿನ್ನವಾಗಿ ಹರಿಯುತಿದೆಯಲ್ಲ! ಚಾಂಗು!
ಧನ್ಯವಾದ ಶ್ರೀಕಾಂತರೆ
ನಾರಣನೆ ನಾರಾಯಣನು, ಜನ
ನಾರಣನ ‘ನಾಣಿ’ ಯೆನುವಂದದಿ
ನಾರಣಪ್ಪನ ಗಂಡುಭಾಷೆಯ ನಾಲಿಗೆಗೆ ನಲಿದು
ನಾರಣನೊನರಯಣನೊ ಸಾಸಿರ
ನಾ ರಣಜಪಿಂಛದವ ನಾಯಕ
ನಾ ರಣದ ಹೂರಣದ ಕಾರಣ ಧಾರಣಕೆ ಬಂದ
ಕುಮಾರವ್ಯಾಸನ ಭಾವಗಂಗೆ ಭಾಷೆಯ ಬಂಧನಿಬಂಧಗಳಿಗೆ ಸಿಲುಕದೆ ಪದವಿಟ್ಟಳುಪದ್ದರಿಂದ ಸೊಂಟಬಗ್ಗಿಸಿಯಾದರೂ ಅಕ್ಷರಗಳು ಷಟ್ಪದಿಯಲ್ಲಿ ಕೂರಬೇಕು. ಎಲ್ಲ ನಾಮಗಳೂ ಅವನದೇ ಆದ ಸಹಸ್ರನಾಮಧಾರಿ, ಆ ರಣಜಪಿಂಛದವ (ರಣ=ನವಿಲಿನಮೊಟ್ಟೆ (ಆಧಾರ- ಶಬ್ದರತ್ನಾಕರ) ರಣಜ=ನವಿಲು, ಈಗ ಹುಟ್ಟಿದ ಪ್ರಯೋಗ – ವಿರೋಧಾಭಿಪ್ರಾಯಗಳು ಅಪೇಕ್ಷಣೀಯವೇ :)-) ಆತ ನಾರಣನೆಂದರೂ, ಕವಿಯ ನಾಲಿಗೆಯಮೇಲಿನ ದೈವ, ಆ ರಣದ, ಭಾರತದ ಸಾರವಾಗಿ, ಹೂರಣವಾಗಿ, ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿ ಋತ-ಧರ್ಮಗಳ ಸೇತುವಾಗಿ, ಸಾಧಿಸಿದ ಜಗತ್ತಿನ ಮೊದಲ ನಾಯಕ, ತನ್ನಕಾವ್ಯಕ್ಕೆ ಕಥಾನಾಯಕನಾಗಲು ಓಡಿಬಂದ
“ಆ ರಣಜಪಿಂಛದವ ನಾಯಕ ನಾ ರಣದ ಹೂರಣದ ಕಾರಣ ಧಾರಣಕೆ ಬಂದ” – ಆಹ, ಸೊಗಸು ಸೊಗಸೇ ಸೊಗಸು
ಸನ್ಮಿತ್ರ ಮಂಜುನಾಥರಿಗೆ ಧನ್ಯವಾದ. ಪುನರಾಗಮನಂ ಮುದಾವಹಂ 🙂
ಮಂಜುನಾಥಾಗಮನ ಪದ್ಯನಿ
ಕುಂಜಗಳು ಕವಿಕುಂಜರನ ಛವಿ
ರಂಜಿಪುದಕಂಜಲಿಯನಿತ್ತಿರೆ, ನಮಿಪೆ ನುಡಿಗಳಿಗೆ
ಅಹುದಹುದು, ಸೊಗಸಾಯ್ತು ಪದ್ಯದ
ಮುಹುರಧಿಕಮಾಧುರ್ಯಧುರ್ಯತೆ
ವಹಿಲದಲಿ ನೀವೆಲ್ಲ ನೀಡಿದ ಮೆಚ್ಚು ಮೆಚ್ಚಾಯ್ತು|
ಧನ್ಯವಾದ
ಹಾರಿಹೋಗುವೆನೆಂದು ಬಂದರೆ
ದಾರಿಯಲ್ಲೀ ಮೌಳಿರಾಯರು
ದಾರದುಳ್ಳವ ಹಾಕಿ ಹಿಡಿದರು ಮನವನೊಮ್ಮೆಲೆಯೇ |
ಚಾರಣಕೆ ಹೊರಟಿದ್ದ ಎನ್ನನು
ಭಾರಿ ಪದಗಳ ಭೋಜ್ಯವೀಯುತ
ತೂರಿಸಿದರೈ ನಾರಣಪ್ಪನ ವಿವಿಧ ವೇಷದಲೀ |
ಅನ್ಯವೇನಿಹುದಿಲ್ಲಿಭಟ್ಟರೆಧನ್ಯವಾದವೆ ದಲ್.
ಸೊಗಸಾದ ಪದಪ್ರಯೋಗ ಚಂದ್ರಮೌಳಿಗಳೆ. ನೀವು ಹೇಳುತಿರುವ ಶಬ್ದರತ್ನಾಕರ ತೆಲುಗು ನಿಘಂಟು ಶಬ್ದರತ್ನಾಕರಮು ಇದೆ? ಸಂಸ್ಕೃತದ “ಆಪ್ಟೆ” ನಿಘಂಟುವಿನಲ್ಲಿ “ರಣ” ಶಬ್ದಕ್ಕೆ ಈ ಅರ್ಥ ಕೊಟ್ಟಿಲ್ಲ. ಸಂಸ್ಕೃತಪದದಂತೆ ನೀವು ಬಳಸಿರುವುದರಿಂದ ಯಾವುದಾದರೊಂದು ಸಂಸ್ಕೃತ ಶಬ್ದಕೋಶದಲ್ಲಿ ಇದಕ್ಕೆ ಆಧಾರ ಸಿಕ್ಕಿದರೆ ಒಳಿತು. ನೀವು ಹೇಳುವ ಶಬ್ದರತ್ನಾಕರ ಸಂಸ್ಕೃತ ಶಬ್ದಕೋಶವೆ ಆದಲ್ಲಿ ಚಿಂತೆಯಿಲ್ಲ
ಈರೀತಿಯ ಸವಾಲಿನ ಸಿಹಿ ಸವಿದು ಬಹಳ ದಿನವಾಗಿತ್ತು. ದತ್ತಪದ ನೀಡಿದ ಶ್ರೀಕಾಂತರಿಗೆ ಧನ್ಯವಾದಗಳು. ’ಶಬ್ದರತ್ನಾಕರಃ’ ನನ್ನಲ್ಲಿರುವ ಪಿತಾಮಹಾರ್ಜಿತವಾದ ತೆಲುಗುಲಿಪಿಯ ಸಂಸ್ಕೃತ ನಿಘಂಟು. ಅದನ್ನೇ ನಾನು ಉಲ್ಲೇಖಿಸಿದ್ದು.
ನಾರಣಪದದರ್ಥಮಿದೇ
ನಾರಣಮರೆ! ನರನೊ? ನಾರಾಯಣನೊ? ಣಳವೊ?|
ಧಾರಣದಿನೆ ಧರ್ಮಮದಿ
ನ್ನಾರಣಮೆನೆ ನರ್ಮಮೂಲಾರ್ಥಮಿದು ಸಲ್ಗೇಂ? ||
ಭಟ್ಟರೆ
ಮತ್ತೆ ಕಂದದ ಛಂದಸ್ಸಿನಲ್ಲಿ ತಪ್ಪಿದೆ. ಮಾತ್ರೆಗಳು ಹೆಚ್ಚಿವೆ ಮತ್ತುವಿಂಗಡಣೆಯು ತಪ್ಪಿದೆ. ನೋಡಿ ಸರಿ ಮಾಡಿ. ಮೂರನೆಯ ಪಾದಾದಿಯಲ್ಲಿನಾರಣನ ಬದಲು ಧಾರಣ ಹಾಕಿದ್ದೀರ. ಅರ್ಥವನ್ನು ವಿವರಿಸಿ ಹಾಕಿ.
ಶ್ರೀಕಾಂತರೇ, ವಂದನೆಗಳು.
ಕಂದದ ಲಯ ಹಿಡಿತಕ್ಕೆ ಸಿಗಲಿಲ್ಲ. ಆದರೂ ಎಚ್ಚರಿಕೆಯಿಂದ ಮತ್ತೆ ತಿದ್ದಿದ್ದೇನೆ.
ನಾರಣಪದಾರ್ಥಮೇನಾ
ನಾರಣಂ! ನರನೋ? ನಾರಯಣನೋ? ಣಳವೋ? |
ಧಾರಣದಿನೆ ಧರ್ಮಮದಿ
ನ್ನಾರಣಮೆನೆ ನರ್ಮಮೂಲಾರ್ಥಮಿದು ಸಲ್ಗೇಂ? ||
“ನಾರಣ” ಎಂಬ ಪದದ ನಿಜವಾದ ಅರ್ಥವೇನು? ಆರಣ=ಗದ್ದಲ. ಣ ಮತ್ತು ಳಗಳಲ್ಲಿ ಆಭೇದವನ್ನು ಕಲ್ಪಿಸಬೇಕೇ? ಅಂದರೆ “ನಾರಳ” ಎನ್ನ ಬಹುದೇ? “ಧಾರಣಾದ್ಧರ್ಮ ಇತ್ಯಾಹುಃ” (ಧಾರಣದಿಂದಲೇ ಧರ್ಮ) ಎನ್ನುತ್ತದೆ ಶ್ರುತಿ. ಅದೇ ರೀತಿ ನರ್ಮ=ಸುಖ, ನೆಮ್ಮದಿಯ ಮೂಲಧಾತುವೇ ನಾರಣವೆಂದರೆ ಸರಿಯೇ? ನಾರಣದಿಂದಲೇ ನರ್ಮ ಎನ್ನಬಹುದೇ? ಎಂಬುದು ಪದ್ಯದ ಭಾವ.ಒಟ್ಟಾರೆ ನಾರಣ ಪದದ ನಿರುಕ್ತಿ ಏನು ಎಂಬುದೇ ತಾತ್ಪರ್ಯ.
ಕನ್ನಡ ಮಹಾಭಾರತವನ್ನು ಹಾಡಿ, ಕಲಿಯುಗವನ್ನು “ದ್ವಾಪರ” ಮಾಡಿದ ಕುಮಾರವ್ಯಾಸನಬಗ್ಗೆ
ನಾರಣಪ್ಪನಿ ಕುಮಾರವ್ಯಾಸ ಗದುಗಿನಾ
ನಾರಯಣ ವೀರನೇ ನಿಜಕವೀಂ ನೀಂ
ನಾರಣನೊರೆಯೆ ಭಾಮಿನಿಯೊಳ್ ಕೃಷ್ಣಕಥೆಯಂ
ನಾರಣನಿ ರೂಪಕಾ ಚಕ್ರವರ್ತಿ೦ ।।
ದಯಮಾಡಿ ಭಾಷೆ ಮತ್ತು ಛಂದಸ್ಸುಗಳ ಹದವನ್ನು ಗಮನಿಸಿರಿ:-)
ಗಣೇಶ್ ಸರ್,
ಪ್ರೌಢ ಪದ್ಯಗಳ ಸಾಲಿನಲ್ಲಿ ತೀರ ಬಾಲಿಶವೆನಿಸುತ್ತಿದೆ.
“ಹದ ಇಲ್ಲದೆ ಪದ ಬರೋದಿಲ್ಲ, ಕದ ತೆಗೆಯೋದಿಲ್ಲ ಅಂತಃಕರಣ” ಎಂಬ (ಬೇಂದ್ರೆಯವರ?) ಸಾಲುಗಳು ನೆನಪಾದವು .
ಭಾಮಿನೀ ಲಯದ ಮತ್ತ ಕೋಕಿಲದ ಮಾತ್ರಾ ಛಂದಸ್ಸಿನಲ್ಲೊಂದು ಪ್ರಯತ್ನ:
ನಾರಣಪ್ಪನ ಕಥೆಯ ಹಾಡಲು ನಾರಣಪ್ಪನು ಕೀರುತಿ
ನಾರಣನ ದೇಗುಲದ ಕಲ್ಲಿನ ಕಂಬಕೊರಗುತ ಕುಳಿತನು
ನಾರಣನೆ ನಾಯಕನು ಭಾರತ ಕಥೆಗೆ ಕಾರಣವೆಂದು ತಾ-
ನಾ ರಣಬಿಸಿಲ ಗದುಗು ಗ್ರಾಮದಿ ಕಾವ್ಯವರ್ಷವ ತಂದನು !
ಈ ಸಮಯಕ್ಕೆಂದು ಕುಮಾರವ್ಯಾಸನ ಮೇಲೆ ಬರೆದ ಕೆಲವು ಪದ್ಯಗಳನ್ನು ಇಲ್ಲಿ ಬ್ಲಾಗಿನಲ್ಲಿ ಹಾಕಿರುವೆ – ಪದ್ಯಪಾನಿಗಳಿಗೆಂದು:
ಕುಮಾರವ್ಯಾಸನಿಗೊಂದು ನಮನ:
http://hamsanada.blogspot.com/2013/01/blog-post_809.html
ಇಲ್ಲೊಂದು ತಪ್ಪಾಯ್ತು. ಯಾವುದೋ ಜ್ಞಾನದಲ್ಲಿ, ಕೀರ್ತಿನಾರಾಯಣನೆಂದು ಬರೆದುಬಿಟ್ಟೆ – ಕೀರ್ತಿನಾರಾಯಣನಿರುವುದು ತಲಕಾಡಿನಲ್ಲಿ, ವೀರನಾರಾಯಣನಿರುವುದು ಗದುಗಿನಲ್ಲಿ. ಹಾಗಾಗಿ, ಇಲ್ಲಿ ಅದನ್ನು ಕೀರ್ತಿವೆತ್ತ ನಾರಾಯಣ ಗುಡಿಯೆಂದು ಭಾವಿಸಬಹುದು. ಇಲ್ಲವೇ ಮೊದಲ ಸಾಲನ್ನು ಹೀಗೆ ಬದಲಾಯಿಸಿದರೂ ಒಪ್ಪುತ್ತದೆ.
ನಾರಣಪ್ಪನ ಕಥೆಯ ಹಾಡಲು ನಾರಣಪ್ಪನು ಬಂದನು;
ನಾರಣನ ದೇಗುಲದ ಕಲ್ಲಿನ ಕಂಬಕೊರಗುತ ಕುಳಿತನು.
ನಾರಣನೆ ನಾಯಕನು ಭಾರತ ಕಥೆಗೆ ಕಾರಣವೆಂದು ತಾ-
ನಾ ರಣಬಿಸಿಲ ಗದುಗು ಗ್ರಾಮದಿ ಕಾವ್ಯವರ್ಷವ ತಂದನು !
ಮೊದಲಸಾಲಿನ ಮೊದಲ ನಾರಣಪ್ಪನನ್ನು ಹರಿಯೆಂದೂ, ಎರಡನೇ ನಾರಣಪ್ಪನು ಕುಮಾರವ್ಯ್ಶಾಸನೆಂದೂ ಹೇಳಬೇಕಾದ್ದೇನಿಲ್ಲ 🙂
ಒಳ್ಳೆಯ ಕಲ್ಪನೆ. ಆದರೆ ಕೊನೆಯ ಸಾಲಿನಲ್ಲಿ ಗತಿಸುಭಗತೆಯು ತಪ್ಪುವುದನ್ನು ದಯಮಾಡಿ ಗಮನಿಸಿರಿ. ಇಂಥ ಲೋಪಗಳು ಅನೇಕರ ಪದ್ಯಗಳಲ್ಲಿ (ಮುಖ್ಯವಾಗಿ ಮಾತ್ರಾಜಾತಿ ಮತ್ತು ಅಂಶ/ತ್ರಿಮೂರ್ತಿಗಣಗಳ ಛಂದಸ್ಸ್ಸುಗಳಲ್ಲಿ) ಎಡತಾಕುತ್ತವೆ. ಇಲ್ಲಿ ಮಾತ್ರೆಗಳ ಹಾಗೂ ಗಣಗಳ ಕ್ರಮದಲ್ಲಿ, ಎಣಿಕೆಯ ಲೆಕ್ಕಾಚಾರದಲ್ಲಿ ತಪ್ಪಾಗಿರುವುದಿಲ್ಲ. ಆದರೂ ಎನೋ ಎಡವಿದಂತೆ ಪಾಠ್ಯ/ಗೇಯಸೌಷ್ಠವಗಳು ಕಾಣುವುದಿಲ್ಲ. ಈ ಬಗೆಗೆ ಶ್ರೀಸೇಡಿಯಾಪು ಅವರು ತಮ್ಮ ಛಂದೋಗತಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಆಸಕ್ತರೆಲ್ಲ ಅವಶ್ಯವಾಗಿ ನೋಡಬೇಕು. ಆ ಪ್ರಕಾರ ಇಂಥ ಎಡೆಗಳಲ್ಲಿ ಯತಿಭಂಗವಾಗಿರುತ್ತದೆ. ಹೀಗೆಂದೊಡನೆ ಕನ್ನಡಕ್ಕೆ, ತತ್ರಾಪಿ ಇಂಥ ಮಾತ್ರಾಜಾತಿಗಳಲ್ಲಿ ಅಸಲಿಗೆ ಯತಿ ಎಂಬುದು ಉಂಟೇ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಬಹುದು. ಆದರೆ ಯತಿಯುಂಟು ಮತ್ತದರ ವಿಲಂಘನೆಯಿಂದ ಪದ್ಯದ ಗತಿ ಕೆಡುತ್ತದೆ. ಇದನ್ನು ವಿವರಿಸಲು ತುಂಬ ಸಮಯವೂ ಮುಖಾಮುಖಿಯಾದ ಸೌಲಭ್ಯವೂ ಕೆಲಮಟ್ಟಿಗೆ ಸಂಗೀತದ ತಾಳ-ಲಯಗಳ ಪರಿಚಯವೂ ಬೇಕಿರುವ ಕಾರಣ ಇಲ್ಲಿಗೆ ವಿರಮಿಸಬೇಕಾಗಿದೆ, ಮನ್ನಿಸಿರಿ.
ಹೌದು – ಕೊನೆಯ ಸಾಲಿನಲ್ಲಿ ನಡೆ ತಪ್ಪಿದ್ದು ತೋರಿತ್ತು. ಊರಿಗೆ ಬಂದಾಗ ಸೇಡಿಯಾಪು ಅವರ ಪುಸ್ತಕವನ್ನು ದೊರಕಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ಹಂ! ನೀನು ಬಲಸಿರುವ “ರಣಬಿಸಿಲು” ಲೋಕಾರೂಢಿಯಲ್ಲಿ ಪ್ರಸಿದ್ಧಿ ಪಡೆದಿದ್ದರೂ ಅರಿಸಮಾಸವಾಯ್ತಲ್ಲ. ಕುವರವ್ಯಾಸನ ಅಭಯಹಸ್ತ ನಿನ್ನ ರಕ್ಷಣೆಗಿದೆ ಬಿಡು 🙂
ನಾರಣನು ರಾವಣನ ಗೆಲ್ವುದ- (ನಾರಣನು -> ರಾಮನು)
ನಾರಣಬೆಯೊಲು ಕವಿಗಳೊರೆದುದ- (ಆರ್ ಅಣಬೆಯೊಲು)
ನಾರಣಕನೆನೆ ಮ೦ದಮತಿಯಿ೦ ಮರಳಿತೀಡುವ ಪೇಳ್ (ಆರಣಕ->ಕಾಡುಮನುಷ್ಯ)
ನಾರಣಪ್ಪನ ಪೆರ್ಮೆ ಸಾಲ್ಗಳಿ
ನಾರಣಲುಗಳ ಚ೦ದದೋಟಮ- (ಆರು ಅಳಿಲುಗಳ)
ನಾರಣಕಿಸಲು ಸಲ್ಗುಮೆನೆ ಭಾರತಮನೊರೆದನಲಾ (ಆರ್ ಅಣಕಿಸಲು)
ಷಟ್ಪದಿಯ ವೈವಿಧ್ಯ ಪೂರಣ
ದೃಕ್ಪಥಕೆ ತಡವಾದರೇನ್ ಈ
ಷಟ್ಪದದ ಷಡ್ಭಾವ ಷಣ್ಮುಖ ನೀನೆ ಸೋಮಣ್ಣ
ಹೌದು. ‘ನಾರಣ’ ಪದಕ್ಕೆ ಸೋಮ ಇತ್ತಿರುವ ಅರ್ಥವೈವಿಧ್ಯ ತುಂಬ ಚೆನ್ನಾಗಿದೆ.
ಚ೦ದ್ರಮೌಳಿಯವರೇ, ಪ್ರಸಾದು,
ಮೆಚ್ಚುಗೆಗೆ ಧನ್ಯವಾದಗಳು 🙂
ಸವಾಲು ಹಾಕಿದ್ದೆ ತಡ ಉತ್ತರವಾಗಿ ಎಲ್ಲರೂ ನಾರಣನನ್ನು ಉತ್ತರಿಸಿಬಿಟ್ಟಿದ್ದೀರ. ಇನ್ನು ನಾನು ಏನು ತಾನೆ ಹೊಸತನವನ್ನು ತೋರಿಸಲಾದೀತು. ಆದರು ನನ್ನದೂ ಒಂದು ಚೋಟು ಇರಲಿ ಅಂತ ಹಾಕುತ್ತಿದ್ದೇನೆ.
ನಾರಣಪ್ಪನಿಗೀಡೆನಲ್ಕಿ-
ನ್ನಾರಣದೊಳೋ ಹರಹಿನೊಳೊ ತಾನ್
ಆರ್? ಅಣಕಗೈವರಿರ ಪೇಳಿರಿ ಶಾಸ್ತ್ರಸೈನಿಕರೇ
ನಾರ್ ಅಣದೆ ಪೂ ಹಾರವಹುದೇನ್
ಆ ರಣಕವನವಾಹ! ಅಸದಳ
ನಾರಣನೆ ಕಾರಣನು ಪದಚಾರಣನು ಪೂರಣನು
ಆರಣ- ಆಳ
ಶಾಸ್ತ್ರಸೈನಿಕರು- ಶಾಸ್ತ್ರವನ್ನು ಮುಂದುಮಾಡಿ ಕುಮಾರವ್ಯಾಸನ ಕಾವ್ಯದಲ್ಲಿ ತಪ್ಪು ಕಂಡು ಎತ್ತಾಡುವವರು
ನಾರ್ ಅಣದೆ- ನಾರು ಸೋಕದೆ
ರಣಕವನ-ರಣ ಎಂದರೆ ಕಾಳಗ ಅನ್ನುವ ಅರ್ಥವಲ್ಲದ ಸೊಗಸು, ಮುದ ಎನ್ನುವ ಅರ್ಥಗಳು ಉಂಟು
ಅರ್ಥಸ್ಫುಟವಾಗಲಿ ಅಂತ ಬಿಡಿಸಿ ಬರೆದಿದ್ದೇನೆ. ವಿಸಂಧಿಯಲ್ಲ. ಅಗತ್ಯವಾಗಿ ಸಂಧಿಮಾಡುವುದು.
ಶ್ರೀಕಾಂತ ಮೂರ್ತಿಯವರೇ,
“ನಾರಣಪ್ಪನಿಗೀಡೆನಲ್ಕಿನಾರ್ ಅಣದೊಳೋ ಹರಹಿನೊಳೊ ತಾನಾರ್?” ಎಂಬಲ್ಲಿನ ಬಲವೂ “ನಾರ್ ಅಣದೆ ಪೂ ಹಾರವಹುದೇನ್” ಎಂಬಲ್ಲಿ “ಅಣ”ದ ಹೊಸ ಹೊಳಹೂ ಮೆಚ್ಚಾದುವು. “ಆ ರಣಕವನವಾಹ!” ಎಂಬುದರ ಅರ್ಥ ಸ್ಫುಟವಾಗಲಿಲ್ಲ. ಮತ್ತೆ “ಆ ರಣಕವನವಾಹ! ಅಸದಳ” ಎಂಬಲ್ಲಿನ ವಿಸಂಧಿ ಛಂದೋಭಂಗವಾಗದೇ ನಿವಾರಣೆಯಾಗದು.
ಮೆಚ್ಚುಗೆಗೆ ಧನ್ಯವಾದ ಮಂಜುನಾಥರೆ.
ರಣಕವನ ಅರ್ಥ ಅಡಿಟಿಪ್ಪಣಿಯಲ್ಲೆ ಕೊಟ್ಟಿದ್ದೀನಲ್ಲ. ಯುದ್ಧದಕವನ, ಸುಂದರವಾದಕವಿತೆ, ಮುದವೀಯುವ ಕಬಿತೆ ಎನ್ನುವ ಅರ್ಥಗಳು ಹುಟ್ಟುತ್ತವೆ.
ಆ ರಣಕವನ ಆಹ! – ಕುಮಾರವ್ಯಾಸನ ಆ ಕಾವ್ಯ ಭಳಾ ಎಂದು ಮೆಚ್ಚಿ ಉದ್ಗಾರುಸುತ್ತಿದ್ದೇನೆ. ಇಲ್ಲಿ ವಿಸಂಧಿ ದೋಷವಿಲ್ಲ. ಸಂಧಿ ಮಾಡಿದರೆ ತಪ್ಪು. ಆಹ. ಅಯ್ಯೋ ಅಕಟಾ, ಭಳಾ ಮುಂತಾದ ನಿಪಾತಗಳಿಗೆ ಸ್ವರ ಪರವಾದಾಗ್ಯೂ ಸಂಧಿ ಆಗುವುದಿಲ್ಲ
ಹೊಸರೀತಿಯಲ್ಲೊಂದು ಸರ್ಕಸ್ ಮಾಡುವ ಯತ್ನ ಮಾಡಿದ್ದೇನೆ. ಬಿದ್ದು ಕಯಕಾಲು ಮುರಿದುಕೊಳ್ಳಬೇಕೋ, ಏನೋ ಗೊತ್ತಿಲ್ಲ;-)
ಕಂ|
ನಾರಣನಾಣೆ ನಿರೂಪನೆ
ನಾರಣ ನಿಪುಣಂ ನರಾಪರಂ ಮಾನಪ ನಾ|
ನಾರಣನಾರ್ಪನಿರೂಪಣ-
ನಾರಣನೊಪ್ಪುರೆ ನಮಿಪ್ಪನೇ ಮಾನಿಪನೈ||
(ಇದರಲ್ಲಿ ನ,ರ,ಣ,ಮ,ಪ ಇವಿಷ್ಟೇ ಅಕ್ಷರಗಳಿಂದ ಗೋಮೂತ್ರಿಕ ಬಂಧವನ್ನೂ ಇಟ್ಟುಕೊಂಡು ಮಾಡಲು ಪ್ರಯತ್ನಿಸಿದ್ದೇನೆ.)
ಅನ್ವಯ= ನಾರಣನ ಆಣೆ ನಿರೂಪನೆ ನಾರಣ. ನಿಪುಣಂ ನರ ಅಪರಂ ಮಾನಪಂ ಆ
ನಾರಣನ ಆರ್ಪ ನಿರೂಪಣಂ ಆರ್? ಅಣಂ ಒಪ್ಪಿ ಉರೆ ನಮಿಪ್ಪನೇ ಮಾನಿಪನೈ
ಅರ್ಥ- ನಾರಾಯಣನ ಆಜ್ಞೆಯ ನಿರೂಪದಂತೆ ಈ ನಾರಣಪ್ಪ ಇದ್ದ. (ತನ್ನ ಕಾವ್ಯವನ್ನು ಕೃಷ್ಣ ಮೆಚ್ಚಲೆಂದು ಬರೆಯುತ್ತಿದ್ದೇನೆ ಎಂದು ಹೇಳಿದ ಕಾರಣ) ನಿಪುಣನಾದ ಈತ ಅಪರ ನರ (ಅರ್ಜುನ- ನಾರಾಯಣನಿಗೆ ಆಪ್ತ) ಮಾನಕ್ಕೇ ಪತಿಯಾಗಿದ್ದ. ಆ ನಾರಣಪ್ಪನ ಆರ್ಪ (ಕಾವ್ಯ ಬರೆಯುವ ಪರಾಕ್ರಮವನ್ನು) ನಿರೂಪಣ ಮಾಡುವವರು ಯಾರು?(ನಿರೂಪಕನೆಂದರೆ ಸರಿಯಾಗುತ್ತಿತ್ತೇನೋ!) ಅಣಂ( ಬಹಳವಾಗಿ) ಒಪ್ಪಿ ಅತಿಶಯವಾಗಿ ನಮಿಸಿದವನೇ ಮಾನಿಸಲ್ಪಡುತ್ತಾನೆ.
ಗೋಮೂತ್ರಿಕಕ್ಕೆ-
ನಾ ರ ಣ ನಾ ಣೆ ನಿ ರೂ ಪ ನೆ ನಾ ರ ಣ ನಿ ಪು ಣಂ ನ ರಾ ಪ ರಂ ಮಾ ನ ಪ ನಾ|
ನಾ ರ ಣ ನಾ ರ್ಪ ನಿ ರೂ ಪ ಣ ನಾ ರ ಣ ನೊಪ್ ಪು ರೆ ನ ಮಿಪ್ ಪ ನೇ ಮಾ ನಿ ಪ ನೈ||
ಪದ್ಯಾನ್ವಯ ಹಾಗೂ ಅರ್ಥಗಳ ಬಗ್ಗೆ ನಾನೇನೂ ಹೆಚ್ಚು ಬರೆಯಲು ಶಕ್ತನಲ್ಲ. ಆದರೆ ಪ್ರಯಾಸದ ಪ್ರಯತ್ನ ಬಹ್ವಭಿನಂದನೀಯ.
ಒಳ್ಳೆಯ ಪ್ರಯತ್ನಗಣೇಶರೆ. ಇಂತಹ ಪದ್ಯಗಳನ್ನು ರಚಿಸುವುದಕ್ಕೆ ತುಂಬ ತಲೆ ಓಡಿಇಸಬೇಕು. ನಿರೂಪಣೆಯಲ್ಲಿ ಚ್ಯುತಿಯಿಲ್ಲ. ಪದಸಂಯೋಜನೆಯ ವಿಚಾರ ರಾ. ಗಣೇಶರು ಹೇಳಬೇಕು. ಪ್ರಯತ್ನಕ್ಕೆ ಅಭಿನಂದನೆಗಳು
ನಾರಣನನಾದರಿಪರಿಂದೇ
ನಾ ರಣಗುಡುವ ನಿಷ್ಠೆ ಕಂಡೀ
ನಾರಣಹೊಳೆಯಲಿಳಿಯದಿಲ್ಲೇ ಕೂತ ಕಾರಣಕೆ
ನಾ ರಣರಸವನಿತ್ತ ವಂದ್ಯನ ನೆನೆವೆನೀ ಘಳಿಗೆ
[ರಣಗುಡುವ = ಅಧಿಕವಾದ; ರಣರಸ = ಯುದ್ಧದ ಸ್ವಾರಸ್ಯ]
ಕಾಂಚನರವರೆ. ನಿಮ್ಮ ಪದ್ಯ ಯಾವ ಛಂದಸ್ಸಿನಲ್ಲಿದೆ?
ಶ್ರೀಕಾಂತರೆ,
ಇದು ಖಂಡ ಭಾಮಿನಿ. ಭಾಮಿನಿ ಷಟ್ಪದಿಯಲ್ಲಿ ನಾಲ್ಕು ಹಾಗು ಐದನೆ ಸಾಲುಗಳು ಇಲ್ಲದಿದ್ದರೆ, ಖಂಡ ಭಾಮಿನಿ ಎನ್ನಿಸಿಕೊಳ್ಳುತ್ತದೆ.
ಆಹ. ಖಂಡ ಭಾಮಿನಿಯ ಬಗ್ಗೆ ನೀವು ಎಲ್ಲಿ ತಿಳಿದಿರಿ. ಪ್ರಸಿದ್ಧಕವಿಪ್ರಯೋಗವಿದೆಯೆ ಈ ಛಂದಸ್ಸಿನಲ್ಲಿ?
ಖಂಡ ಭಾಮಿನಿಯನ್ನು ಗಣೇಶರೇ ತಿಳಿಸಿಕೊಟ್ಟಿದ್ದಾರೆ. ಡಿವಿಜಿಯವರು ಖಂಡ ಭಾಮಿನಿಯಲ್ಲಿ ಅನೇಕ ಪದ್ಯಗಳನ್ನು ರಚಿಸಿದ್ದಾರೆಂದು ಕೇಳಿದ್ದೇನೆ.
ಸೊಗಸಾಯ್ತು.
ಮೂರ್ತಿಗಳೆ,
ಪದ್ಯಪಾನದ ಆರ್ಕೈವ್‍ಗಳನ್ನು ನೋಡಿ. ಕಾಂಚನಾರವರೇ ಹಲವು ಪದ್ಯಗಳನ್ನು ರಚಿಸಿದ್ದಾರೆ 😉
🙂
ನಾರಣನೊರೆದ ದಿವ್ಯಕಾವ್ಯದಿ-
ನಾ ರಣ(delight)ವನೇನೆಂಬೆನದರೊಳಿ-
ನಾ ರಣರಸಿಕನೊರ್ವ (ಭೀಮ) ರಣವಿಕ್ರಮನದಿನ್ನೊರ್ವನ್ (ಅರ್ಜುನ)|
ನಾರಣನೆ ರಣಕುಶಲಿಯಾಗಿಹ
ನಾರಣೆಯೊಳೇನೋ ಕೊರೆದು ತಾ- (ಅಣೆ = ಹಣೆ)
ನಾ ರಣಸ್ಥರ ಗತಿಯ ಕಾಣಿಪ ನೆರೆಸಿ ರಣಸತ್ರ||
ಭೀಮ ‘ರಣರಸಿಕ’ ಹೇಗೆಂದರೆ, ಹಿಡಿಂಬನೊಂದಿಗೆ ಕಾದುವಾಗ, ಅವನನ್ನು ಸುಲಭದಲ್ಲಿ ಚಚ್ಚಿ ಮುಗಿಸದೆ, ಗುದ್ದಾಟದ ನೋವನ್ನು ಹಿತವಾಗಿ ಅನುಭವಿಸುತ್ತ ಅಖಾಡದಲ್ಲೆಂಬಂತೆ ಆಟವಾಡುತ್ತಿದ್ದ; ಮರಿಯಾನೆಯೊಂದನ್ನು ಕೆಣಕಿ ಗುದ್ದಾಟದ ಸುಖವನ್ನು ಅನುಭವಿಸುತ್ತಿದ್ದ…
ಎಲ್ಲ ಪಾದಗಳ ಎರಡನೆಯ ಗಣದ ಮೊದಲಕ್ಷರವಾದ ‘ಣ’ವನ್ನು, ಇಲ್ಲವೇ ಅದೇ ಗಣದ ಕೊನೆಯ ಅಕ್ಷರವನ್ನು ಗುರುವಾಗಿ ಹವಣಿಸಿಕೊಳ್ಳದಿದ್ದರೆ, ಆ ಗಣವು ಸರ್ವಲಘುವಾಗಿ ಗತಿ ಕೆಡುತ್ತದೆ. ಹಾಗಾಗಿ ನನ್ನ ಪದ್ಯದ ಮೊದಲ ಹಾಗೂ ಮೂರನೆಯ ಪಾದಗಳನ್ನು ತಿದ್ದಿದ್ದೇನೆ. ನಾಲ್ಕನೆಯ ಪಾದದಲ್ಲಿ ಸರ್ವಲಘುಗಳನ್ನು (ಅನುರಣನದಿಂದಾಗಿ) ಉಳಿಸಿಕೊಂಡಿದ್ದೇನೆ.
ನಾರಣಕೃತಂ ದಿವ್ಯಕಾವ್ಯದಿ-
ನಾ ರಣವನೇನೆಂಬೆನದರೊಳಿ-
ನಾ ರಣಕ್ರೀಡಿಯಹ! ರಣವಿಕ್ರಮ ಸಹೋದರರೈ|
ನಾರಣನೆ ರಣಕುಶಲಿಯಾಗಿಹ
ನಾರಣೆಯೊಳೇನೋ ಕೊರೆದು ತಾ
ನಾ ರಣಸ್ಥರ ಗತಿಯ ಕಾಣಿಪ ನೆರೆಸಿ ರಣಸತ್ರ||
(ಆ ರಣಕ್ರೀಡಿಯಹ! – ಇದಕ್ಕೆ ಬದಲಿಗಳು: ಆ ರಣವಿಲಾಸಿಯಹ!, ಆ ರಣೈಲಾಯನಹ! ಆ ರಣವಿಶ್ರಮ್ಭನಹ! – ಶಿ.ದ್ವಿ.)
ಮಲ್ಲಿಕಾ ಮಾಲೆಯಲ್ಲೊಂದು ಪ್ರಯತ್ನ-
ನಾರಣಾ! ಎನಲೋಡಿ ಬಾರನೆ ಭಕ್ತಿಭಾವಕೆ ಸೋಲುವಾ
ನಾರಣಪ್ಪನ ದೈವ ಭಕ್ತರ ಚಿತ್ತರಂಗದೊಳಾಡುವಾ |
ನಾರಣೆಂಬುದು ಬಾಲಭಾಷಿತವೆಂದು ತೋರನುಪೇಕ್ಷೆಯಾ
ನಾರಣಾಕ್ಷರಮಿರ್ಕೆ ಭಾವದೆ ಕಬ್ಬಿಗರ ಕೃತಿಸಾಕ್ಷಿಯಾ ||
ನಾ ರಣಾಂಗಣಶೂರನಹೆ ನೆ-
ನ್ನಾರಣದೊಳರಿಸಂತತಿಯ ನಾ
ನಾ ರಣವ್ಯೂಹಗಳ ಮುರಿವೆನು ಕಳುಹದಿರೆ ನೀವು |
ನಾ ರಣಕ್ಕುರೆ ಪೋಪೆನೆನೆ ತಾ
ನಾರಣನ ಮತವೆಂದು ಧರ್ಮಜ
ನಾ ರಣಕ್ಕಭಿಮನ್ಯುವನು ಕಳುಹಿದನು ದುಗುಡದಲಿ ||