Feb 042013
 

Dagger (ಡಾಗರ್/ಡ್ಯಾಗರ್), Gun, Long, Acid (ಆಸಿಡ್) – ಈ ಪದಗಳನ್ನು ಬಳಸಿ ಸತ್ಯಭಾಮೆಯ ಸೆಡವಿಗೆ  ಕಾರಣವನ್ನು ಹೇಳಬೇಕು – 19.01.2013ರಂದು ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ನಡೆದ ಶ್ರೀ ರಾ. ಗಣೇಶರ ಅಷ್ಟಾವಧಾನದಲ್ಲಿ ನಾನು ಕೊಟ್ಟ ದತ್ತಪದಿ ಇದು. ಅಂದು ಅವಧಾನಿಗಳ ಪರಿಹಾರ ಇಂತಿತ್ತು:

ಕೊಂಡಾಗರ್ಭ ರವಿಪ್ರಸಾದವಿಭವಪ್ರಖ್ಯಾತಿಯಂ ಪ್ರೀತಿಯಂ

ತೊಂಡಾಗಲ್ ತ್ರಿಜಗನ್ಮನೋಹರವಪುಸ್ಸಂಹಾರದಿಂ ಭಾರದಿಂ|

ಪಾಂಡಿತ್ಯಂ ಕುಲನಾರಿಯಾ ಕಲಹದೊಳ್ ಕಾಲಾಂಗುಲೀತರ್ಜಿತಳ್

ಚಂಡಾಲಿಪ್ರತಿಮಾನಳಾ ಸಿಡುಕಿಗಂ ಶ್ರೀಕೃಷ್ಣನೇ ಕಾರಣಂ||

  14 Responses to “ಪದ್ಯಸಪ್ತಾಹ ೫೭: ದತ್ತಪದಿ”

  1. ಕೃತಯುಗದಲ್ಲಿದ್ದ ಗುಣವತಿ ಎಂಬುವಳು ತನ್ನ ತಂದೆ ಹಾಗೂ ಗಂಡನೊಂದಿಗೆ ತನ್ನ ತವರಿನಲ್ಲಿಯೇ ನೆಲೆಸಿರುತ್ತಾಳೆ (ಘರ್‍ಜಮಾಯೀ). ಒಮ್ಮೆ ಸಮಿತ್ತಿಗಾಗಿ ಕಾಡಿಗೆ ಹೋದ ಅವಳ ತಂದೆ ಹಾಗೂ ಗಂಡನನ್ನು ರಾಕ್ಷಸನೊಬ್ಬ ನುಂಗಿಬಿಡುತ್ತಾನೆ. ಅಂಥ ವಿಯೋಗದಲ್ಲೂ ಅವಳು ಅವರಿಬ್ಬರ ಅಂತ್ಯೇಷ್ಟಿಯನ್ನು ಮಾಡಿ, ವೈಧವ್ಯದಲ್ಲೂ ಪಾತಿವ್ರತ್ಯವನ್ನು ಕಾಯ್ದುಕೊಂಡಿರುತ್ತಾಳೆ. ಪುಣ್ಯವಶಾತ್ ಅವಳಿಗೆ ಸಜೀವ ಸ್ವರ್ಗವಾಸ ಲಭಿಸುತ್ತದೆ. ಇವಳೇ ಮುಂದೆ ದ್ವಾಪರದಲ್ಲಿ ಸತ್ಯಭಾಮೆಯಾಗಿ ಹುಟ್ಟಿದುದು. ಎರಡುಯುಗಗಳಿಗೂ ಹೆಚ್ಚುಕಾಲ ಪಾತಿವ್ರತ್ಯ ಕಾಯ್ದುಕೊಂಡವಳಿಗೆ ಸಿಕ್ಕಿದ್ದು ಸವತಿಪಟ್ಟ. ಹಾಗಾಗಿ ಅವಳ ಸೆಡವುಸ್ವಭಾವ.

    ತೌರಿನಲಿ ಪತಿಯೊಡನೆ ತಾನಿರೆ
    ಭೂರಿ ಸುಖವುಂಡಾ ಗರತಿಯಳು
    ಸಾರಿ ರಕ್ಕಸನಾಗ ನುಂಗಿದನಯ್ಯನಂ-ಪತಿಯಂ|
    ನೀರೆ ಗುಣವತಿ ತಾ ಕುಲಾಂಗನೆ
    ಪಾರವಿಲ್ಲದ ಸವತಿಗಣದೊಳ್
    ಚಾರಳಂದದೆ ಜನ್ಮಿಸಿರೆ ತಾ ಸಿಡುಕಳೇ ಭಾಮೆ||

  2. ಪತಿಯsನ್ನುs ಕ೦ಡಾಗs ರಮಿಸsದೆs ಪೋಗನ್ನುs
    ವತಿಯಾದs ಸಿಡುಕಿsನs ತಾಪs
    ಸತಿಕsಮsಲಾ೦ಗೆsಯುs ತೋರ್ವುsದುs ಸವತಿsಯುs
    ಮತಿಯsನುs ತು೦ಬಿsರುsವುದಕೆs

  3. ಸೋಮ,

    ಮತವೆನ್ನದನುಮೋದಿಸುತೆ ಪೇಳ್ದೆ ಸಾಂಗತ್ಯ ದಾಂಪತ್ಯದೆಂತು ಸೂಕ್ಷ್ಮಮದೆಂದೆಂದುಂ
    ಸವಿಯನ್ನೆ ನುಡಿದೊಡಂ ಬಿರುಮಾತನಾಡುವರ್, ಹೆಂಡಿರೀ ರೀತಿಗಳ್ ನಮಗೇ ವೇದ್ಯಂ|
    ಅನುಭಾವ್ಯವಿದದೆಂತು ವೇದ್ಯವೈ ದೂರದಿಂ ಬ್ರಹ್ಮಚರ್ಯವಪಾಲಿಸುವರಿಂಗೆಂದೂ
    ಚರಬ್ರಹ್ಮರಜ್ಞಾನದಿಂದಿರ್ದು ತಾವೆಂತೊ ಸೌಖ್ಯಮಂ ಪೊಂದಲಾವೀರ್ಷ್ಯಂಗೊಳೆವೈ||

    ಸುಖವದೇನೆಂಬೆ ನಾವ್ಪಟ್ಟು ಪಡುತಿಹುದನು
    ಮಖವಿದೆನ್ನುತ್ತೆ ಜೀವಮಂ ತೇಯ್ದುತೇಯ್ದು|
    ನಖವ-ಬಿರುನೋಟಗಳನರಿತಿದ್ದೊಡವರು
    ಸಖರೊಳಿಂತಾಡರಲ್ಲವೆ ಪೇಳು ನೀನು||

  4. ನೋಡಾ! ಗರ್ಜಿಪ ಮೇಘವ – ರವಿಯೆಡೆ
    ಕಾಡುತ್ತಿರಲಾಂಗನೆಯರನಂ
    ಕೇಡಾ ಸಿಡುಕದ ಭಾಮೆಗೆರಗದೇ?
    ಮಾಡಿರೆ ಸವತಿಯ ಘನಶಾಮಂ

    [ಇತರ ಹೆಂಗಳೆಯರಲ್ಲಿ ರವಿಯ ಸ್ನೇಹವನ್ನು ಕಂಡ ಮೇಘ, ತನ್ನ ರಕ್ಷಣೆಗಾಗಿ ಗರ್ಜಿಸುತ್ತಿದ್ದಾಳೆ. ಅಂತೆಯೇ, ಸವತಿಯ ಸ್ಥಾನವನ್ನು ಗಳಿಸಿದ ಸತ್ಯಭಾಮೆಯೂ ತನಗಾಗುವ ಕೇಡನ್ನು ತಡೆಯಲು ಸಿಡುಕುವುದೇ ಸೂಕ್ತ]

    • Perfect comparison. 2nd line is not very clear. ಅಂಗನೆ ~ ಆಂಗನೆ? If it is ಕಾಡುತ್ತಿರಲಾ+ಅಂಗನೆ = ಕಾಡುತ್ತಿರಲಾಂಗನೆ, is the sandhi correct?

  5. ಇನಿಯ೦ ಬರನೆ೦ದರಿತಾ ಕ್ಷಣದೋಳ್
    ಮುನಿದಿರ್ದಪೊಡಾ ಗರತೀ ಮಣಿಯ೦-
    ಗನೆ ಸತ್ಯೆಯ ಸಕಲಾ೦ಗವು ಕ೦ಪಿಸೆ
    ಮನಸಿ೦ದಲೆ ದೂರಿದಳಾ ಸಿಡುಕಿ೦ ||

    • ಕೃಷ್ಣನು ತನ್ನೆಡೆಗೆ ಬರಲಿಲ್ಲವೆ೦ಬ ಕೋಪವನ್ನು ಪ್ರತ್ಯಕ್ಷವಾಗಿ ತೋರಲಾಗದೆ ಮನದಲ್ಲೇ ಸಿಡುಕಿ ದೂರಿದಳು ಸತ್ಯಭಾಮೆ ಎ೦ಬ ಭಾವ.
      ಮೂರನೆ ಪಾದವನ್ನು ಸ್ವಲ್ಪ ಬದಲಾಯಿಸಿದ್ದೇನೆ. ದೋಷಗಳಿದ್ದರೆ ಸೂಚಿಸಿ

      ಇನಿಯ೦ ಬರನೆ೦ದರಿತಾ ಕ್ಷಣದೋಳ್
      ಮುನಿದಿರ್ದಪೊಡಾ ಗರತೀ ಮಣಿಯ೦-
      ಗನೆ ತೋರಿರಲಾ೦ಗಿಕ ಭಾವದಲೇ
      ಮನಸಲ್ಲಿಯೆ ದೂರಿದಳಾ ಸಿಡುಕಿ೦ ||

  6. ವಸಂತತಿಲಕದಲ್ಲಿ ಒಂದು ಪೂರಣ-

    ಈಡಾಗರಂಗನೆಯರೀ ಚದುರಂಗದಾರೇ!
    ನಾಡಾಡಿಗನ್ನಮಿರೆ ಗೇಹಿನಿಯಾನದಾರೇ! |
    ನೋಡೀ ಶಿಖಾವಲಕಲಾಂಗವರಾಂಗಲಾಸ್ಯಂ
    ಪಾಡೆನ್ನೆ ಭಾಮೆ ಸಖಿಗಾ ಸಿಡುಕಿಂದುಸಿರ್ದಳ್ ||

    • ೧) ‘ಆರೇನಾಡಾಡಿಗನ್ನಮಿರೆ ಗೇಹಿನಿಯಾನದಾರೇ’ – ಅರ್ಥವಾಗಲಿಲ್ಲ.
      ೨) ‘ಪಾಡೆನ್ನ’ ಎಂದರೆ ನಿಮ್ಮ ಪಾಡು ಎಂದಾಯಿತಲ್ಲವೆ?

      • ಪ್ರಸಾದರೇ, ನಮಸ್ಕಾರಗಳು.
        ಅನ್ವಯಾರ್ಥ ಹೀಗಿದೆ – ಏ ಸಖಿ, ಈ ಚದುರಂಗೆ ಈಡಾಗದ ಅಂಗನೆಯರು ಅದಾರು? ಈ ನಾಡಾಡಿಗೆ ಅನ್ನ=ಊಟವು ಬೇರೆಡೆಗೆ ಸಿಗುತ್ತಿರುವಾಗ ಮನೆಯೊಡತಿಯಾದ ನಾನು ಅವನಿಗೆ ಯಾರೇ?(ಲೆಕ್ಕಕ್ಕಿಲ್ಲ) ಈ ನವಿಲಿನ ಪುಚ್ಛವನ್ನು ಶಿರಸ್ಸಿನಲ್ಲಿ ಧರಿಸಿರುವವನ ವಿಲಾಸವು ನನ್ನ ಪಾಡು(ಕಷ್ಟ) ಆಗಿದೆ. ಎಂದು ಭಾಮೆ ತನ್ನ ಸಖಿಯ ಹತ್ತಿರ ಸಿಡುಕಿನಿಂದ ಹೇಳುತ್ತಿದ್ದಾಳೆ.

      • ವಿವರಣೆಗೆ ಧನ್ಯವಾದಗಳು.
        ೧) ‘ಬೇರೆಕಡೆ (ಅನ್ನ)’ ಎಂಬುದು ಪದ್ಯದಲ್ಲಿ ಧ್ವನಿತವಾಗಿಲ್ಲ. ಹಾಗಾಗಿ ಅರ್ಥವಾಗಿರಲಿಲ್ಲ್ಲ.
        ೨) ಈಡಾಗರು ಎನ್ನುವುದಕ್ಕಿಂತ ಈಡಾಗದ ಎಂದರೆ ಸರಿಹೋದೀತೇನೋ. Compare ಈಡಾಗದಂಗನೆಯರೀ ಚದುರಂಗದಾರೇ(re)? and ಈಡಾಗರಂಗನೆಯರೀ ಚದುರಂಗದ್ಯಾಕೇ(ke)!
        ೩) ಕೊನೆಯ ವಾಕ್ಯದಲ್ಲಿ ಬಳಸಿರುವ ‘ಎಂದು’ ಎಂಬ ಪದ ಪದ್ಯದಲ್ಲಿಲ್ಲ. ಹಾಗಾಗಿ ಅದು ಭಾಮೆಗೆ ಅನ್ವಯವಾಗದೆ, ಬರೆದವರಿಗೆ ಅನ್ವಯವಾಗುತ್ತದೆಯಲ್ಲವೆ? ಹೀಗೊಂದು ಸವರಣೆ: “ಈಡಾಗದಂಗನೆ……. ಪಾಡೆನ್ನದ್”ಎನ್ನುವಳು ತಾ ಸಿಡುಕಿಂದೆ ಭಾಮಳ್||

        • ವಿಮರ್ಶೆಗೆ ಧನ್ಯವಾದಗಳು.
          1)ಕವಿತೆಯಾದ್ದರಿಂದ ಬೇರೆಡೆಗೆ ಎಂದು ಪ್ರತ್ಯೇಕವಾಗಿ ಸೇರಿಸಲಾಗಲಿಲ್ಲ.
          2)ನಿಜವಾಗಿ “ಈಡಾಗದ” ಎನ್ನುವುದೇ ಸರಿಯಾಗಿತ್ತಾದರೂ ದತ್ತಪದದ “ಡಾಗರ್” ತರಬೇಕಾಗಿತ್ತಲ್ಲವೇ? ಅಲ್ಲದೇ ಅದಾರು? ಎಂಬ ಪ್ರಶ್ನಪದದಿಂದ ಆ ವಿವಕ್ಷೆ ಪೂರ್ಣವಾಗಿದೆಯೆಂದುಕೊಂಡಿದ್ದೇನೆ.
          3)ಕೊನೆಯ ವಾಕ್ಯದಲ್ಲಿ ತಪ್ಪೇ ಆಗಿದೆ. ಅಲ್ಲಿ “ಪಾಡೆಂದು” ಎಂದು ಆಗಬೇಕಿತ್ತು. ಅಲ್ಲದೇ ಪಾಡೆನ್ನೆ=ಪಾಡು(ಕಷ್ಟ) ಎನ್ನುವಂತೆ ಎಂದರ್ಥವಾಗುವುದಿಲ್ಲವೇ? .
          ಆದ್ದರಿಂದ ಹೀಗೆ ಕೊನೆಯ ಸವರಣೆ ಮಾಡಿದ್ದೇನೆ.=>
          ಈಡಾಗರಂಗನೆಯರೀ ಚದುರಂಗದಾರೇ!
          ನಾಡಾಡಿಗನ್ನಮಿರೆ ಗೇಹಿನಿಯಾನದಾರೇ! |
          ನೋಡೀ ಶಿಖಾವಲಕಲಾಂಗವರಾಂಗಲಾಸ್ಯಂ
          ಪಾಡೆಂದು ಭಾಮೆ ಸಖಿಗಾ ಸಿಡುಕಿಂದುಸಿರ್ದಳ್ ||

  7. ನೋವುಂಡಾ ಗರ್ಭವ ಸೀಳಿ ನಿನ್ನನು ಪೆತ್ತೆ ಬಾವುಂಡರಗ ನಿನ್ನ ಪೊತ್ತೆ
    ಪೂವಿಂಗಾ ಕಮಲಾಂಗನೆಯ ಸಿಡಿಂಬುಮುಡಿಯೆ ತಾವೆಂದು ಬಗೆದೆಯೆ ಮತ್ತೆ!

    [ ಅಗ – ಮರ; ಸಿಡಿಂಬು – ಮೆಳೆ, ಪೊದೆ ]

    ರುಗ್ಮಿಣಿ-ಸತ್ಯಭಾಮೆಯರು ಶ್ರೀ-ಭೂದೇವಿಯರ ಅವತಾರ. ತನ್ನಲ್ಲಿ ಬೆಳೆದ ಪಾರಿಜಾತದ (ಯಾವುದೇ ಗಿಡದ) ಹೂ ಸವತಿ ಲಕ್ಷ್ಮಿಯ ಮುಡಿಗೆ (ಪೂಜೆಗೆ) ಒದಗಿದರೆ ಭೂಮಿಗೆ ಬೇಸರವಾಗದೆ?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)