Feb 252013
 

ಕುಮಾರವ್ಯಾಸನ ಈ ಪದ್ಯದ ವಿಡಂಬನ (parody) ಮಾಡಿರಿ. ಛಂದಸ್ಸು ನಿಮ್ಮ ಆಯ್ಕೆಯದು.

ಹಲಗೆಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ|
ಬಳಸಿಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ||

This is what I got when I looked up ‘PARODY’ in Monier Williams dictionary:

पशुगायत्री A parody of the sacred गायत्री whispered into the ear of a sacrificial animal:पशु-पाशाय विद्महे शिरश्-छेदाय धीमहि

तन् नः पशुः प्रचोदयात्|

  66 Responses to “ಪದ್ಯಸಪ್ತಾಹ – ೬೦: ವಿಡಂಬನೆ (parody)”

  1. ಶ್ರೀ ಎಸ್. ಎಲ್. ಭೈರಪ್ಪನವರ ಪರ್ವ ಕಾದಂಬರಿಯ ಮೊದಲ ಪುಟವನ್ನು ವಾರ್ಧಕದಲ್ಲಿ ಬರೆದಾಗ ಕೊನೆಯದಾಗಿ ಈ ಪದ್ಯ ಬರೆದಿದ್ದೆ:

    ಜುಗ್ಗನಾಗಿರ್ಪೆನಾಂ ಸೀಸ-ಕಾಗದ ಬಳಸ
    ದಗ್ಗಳಿಕೆಯಳುಪದೆಲೆ ಬೆರಳಚ್ಚಿಸಿರ್ಪುದೊಂ
    ದಗ್ಗಳಿಕೆ ಗಣಕಯಂತ್ರವತಂತ್ರ(hang)ವಾಗದೊಲ್ ಟಂಕಿಸಿದ ಹೆಗ್ಗಳಿಕೆ ಮೇಣ್|
    ವೆಗ್ಗಳದ ಶಬ್ದಗಳ ಕತ್ತರಿಟ್ಟಂಟಿರಿಸ (cut and paste)
    ದಗ್ಗಳಿಕೆ ವಿಷಯಕ್ಕೆ ತಡಕಾಟಬಡದದೊಂ
    ದಗ್ಗಳಿಕೆ ಭಾವಗುರುವೊಡ್ಡವದೊಳೆಸೆವ ಭೈರವಕಿಂಕರನಿವ ಬಲ್ಪಿಂ||

    • ಎಲ್ಲ ಸಲೆಸೊಗಸಾಗಿದೆ. ಆದರೆ ಮೂಲದ ಭಾಮಿನಿಯು ಮುಪ್ಪಾಗಿದ್ದಾಳೆ (ವಾರ್ಧಕ:-)

    • ಮಾತ್ರವಲ್ಲವು ಮುಪ್ಪು ಭಾಮೆಗೆ
      ಸೂತ್ರಮೊಂದೇ ಕಾಲಪುರುಷಗೆ
      ಗಾತ್ರವುಡುಗುವ ತೆರದಿನೆನನುಂ ಗಲಿತಗೊಳಿಸಿಹನು|
      ಕೃತ್ರಿಮವದಾದಿಯೊಳೆ ಸಂದುದು
      ಛಾತ್ರನೀತನು ಕಾವ್ಯಕಲಿಕೆಯ
      ಯಾತ್ರೆಯಾರಂಭಿಸಿದ ವಾರ್ಧಕದಲ್ಲೆ ಗುರುವುಳಿದು||

  2. ತಿಳಿವನೆ೦ದು೦ ಧಿಕ್ಕರಿಸು, ಪದ-
    ವಿಳಿಯಲೆಡವಿದೊಡೇ,ಸ್ಮೃತಿಯಪಟ-
    ದಳಿಸುತ೦ ಧೀಮ೦ತರರುಪಿದ ನಲ್ನುಡಿಗಳನೆ ಕೇಳ್
    ಉಳಿ ವಿರಳದಾ ಜಾಣ್ಮೆ ಬಲ್ಮೆಯ
    ಪಳವುಳಿಕೆಗಳನೆ೦ದು ಮರಳುತ
    ಬಳಸಬೇಡಲೆ ನೀನದೆ೦ಬುದೆ ಪದ್ಯತಾತ್ಪರ್ಯ

    • ಪ್ರಿಯ ಸೋಮ,

      ಮೂಲದ ಧಾಟಿ ಮಾತ್ರ ಸಾಲದು; ಧೋರಣೆಯೂ ಇರಬೇಕು. ಹೆಚ್ಚಿನ ಪದಬಂಧ, ವಾಕ್ಯವಿನ್ಯಾಸಪದ್ಧತಿ ಎಲ್ಲ ಅದರ ನೆರಳಾಗುತ್ತಲೇ ವ್ಯತಿರಿಕ್ತವೆನಿಸಬೇಕು. ಮೌಳಿಯವರು ಉದಾಹರಿಸಿದ ಬೇಂದ್ರೆಯವರ ಪದ್ಯವೇ ಮಾರ್ಗದರ್ಶಿಯಾದೀತು.

  3. ಬಳಪ ಹಡಪವ ಪಿಡಿಯದೊಂದ
    ಗ್ಗಳಿಕೆ ಹೆಬ್ಬೆಟ್ಟೊತ್ತಿನಿಂ ಧನ
    ಗಳಿಸಿ ಪರಸಂಪದವನೆಲ್ಲವ ಕೊಳ್ವುದಗ್ಗಳಿಕೆ
    ಬಳಸಿ ಮೆರೆಯಲು ಖಾತೆಪತ್ರದಿ
    ನೆಲವ ಕಬಳಿಪ ತಂತ್ರಿಯೆಂಬೀ
    ಬಲುಹು ಮಾಜೀ ರಾಜಕೀಯದ ರಕ್ತಬೀಜನಿಗೆ

    ಸೋಮಶೇಖರ್ ಬರೆದಂತೆ, ಮೂಲ ಪದ್ಯದ ಪದ,ಪ್ರಾಸ ಧಾಟಿಗಳನ್ನು ಬಳಸಿ ವಿನೋದದ ಸಿಂಚನ ಬಂದಾಗ, ಪ್ಯಾರಡಿ. ಹಕ್ಕಿಹಾರುತಿದೆ ನೋಡಿದಿರಾ.. ಪದ್ಯಕ್ಕೆ ಬೇಂದ್ರೆಯವರೇ ಬೆಕ್ಕುಹಾರುತಿದೆ ನೋಡಿದಿರಾ ಎಂಬಪದ್ಯರಚಿಸಿ ವಿನೋದಿಸಿದ್ದರು. ಹಾಸ್ಯಧಾರಿಗಳಾದ ನಮ್ಮ ಹಲವು ಗೆಳೆಯರಿಗೆ ಪ್ಯಾರಡಿಯ ಪದ್ಯಪ್ರಯತ್ನ ಅತಿಸುಲಭ.

  4. ಕೆಲವು ರೀತಿಯ ಕದ್ದುದೊಂದ
    ಗ್ಗಳಿಕೆ ನೀರಾರಿಸಿದುದೊಂದ
    ಗ್ಗಳಿಕೆ ಜೈನೋದ್ಯಾನ ಮೀರಿಸಿದಗ್ಗಳಿಕೆಯೊಂದು
    ಬಳಸಿ ಪಂಪನನುರವಿಸುತನಪೊ
    ಗಳುವುದಿನ್ನೊಂಗ್ಗಳಿಕೆಯಾಗಿರೆ
    ಸುಲಭದೊಳ್ ವ್ಯಾಕರಣ ಬಿಡುವಾ ನಮ್ಮ ಕವಿವರಗೆ |

    { ಕವಿಯ ವಾಕ್ಯವ ತಿರುಚಿ ಬರೆದಿರ
    ಲವಗಡವೆ? ನನ್ನೀ ಕವನವವ
    ನವಡಬಾನಳಕೆಸಿಲುಕಲು ಧನ್ಯಾತಿಶಯವಲ್ತೇ? }

    • ಆಶಯ ಚೆನ್ನಾಗಿದೆ. ಆದರೆ ಛಂದಸ್ಸು ಸ್ವಲ್ಪ ಎಡವಿದೆ. ದಯಮಾಡಿ ಸವರಿಸಿರಿ.

  5. ಹಲಸು ಬಾಟಲಿ ಪಿಡಿದುಕೊಂಡ
    ಬ್ಬಳಿಕೆ ಪದವಿಡಲಳುಕದೊಂದ
    ಚ್ಚಳಿಕೆ ಪರರೊಪ್ಪದಿಹ ರೀತಿಯ ಕೊಂಡುದಕ್ಕಳಿಕೆ ।
    ಬಳಸಿ ಬೆರೆಸಲು ಕಂಠಪೂರ್ತಿಯೆ
    ಪುಳಕಗೊಂಡಗ್ಗಳಿಕೆಯಂಬೀ
    ಬಲುಹು ಗುಡುಗುವ ಬೀರ ಸಾರಾಯಣದ ಕಿಂಕರಗೆ ॥
    (ಕುಮಾರವ್ಯಾಸನ ಕ್ಷಮೆ ಕೋರಿ)

    • ಪ್ರಯತ ಸ್ತುತ್ಯ. ಆದರೆ ಅರ್ಥ ಸ್ಪಷ್ಟವಾಗುತ್ತಿಲ್ಲ.

      • ನಮಸ್ಕಾರಗಳು ಗಣೇಶ್ ಸರ್,
        ಕಂಠಪೂರ್ತಿ ಕುಡಿದು ಪುಳಕಗೊಂಡ ಅಗ್ಗಳಿಕೆಯಲ್ಲಿ ಬಡಬಡಿಸುತ್ತಿರುವ “ಬೀರು-ಸಾರಾಯೀ ದಾಸ”ನ ವರ್ಣನೆಗೆ ಪ್ರಯತ್ನಿಸಿದ್ದು. “ಅಗ್ಗಳಿಕೆ”ಗೆ ಪ್ರಾಸಪದಗಳಾಗಿ ಅಬ್ಬಳಿಕೆ, ಅಚ್ಹಳಿಕೆ, ಅಕ್ಕಳಿಕೆ ಬಳಸಿ ಬೆರೆಸಿದ್ದು. ಅರ್ಥ ವಿವರಣೆಯಲ್ಲಿ “ಅಗ್ಗಳಿಕೆಯೇ” ಸೂಕ್ತ ಪದವೆಂದೆನಿಸಿ ಬದಲಿಸಿದ ಪದ್ಯ,

        ಹಳಸು ಬಾಟಲಿ ಪಿಡಿದುದೊಂದ
        ಗ್ಗಳಿಕೆ ಪದ(ಹೆಜ್ಜೆ)ವಿಡಲಳುಕದೊಂದ
        ಗ್ಗಳಿಕೆ ಪರರೊಪ್ಪದಿಹ ರೀತಿಯ ಕೊಂಡುದಗ್ಗಳಿಕೆ ।
        ಬಳಸಿ ಬೆರೆಸಲು ಕಂಠಪೂರ್ತಿಯೆ
        ಪುಳಕಗೊಂಡಗ್ಗಳಿಕೆಯಂಬೀ
        ಬಲುಹು ಗುಡುಗುವ ಬೀರು ಸಾರಾಯಣದ ಕಿಂಕರಗೆ ॥

    • ಅರ್ಥಸ್ಪಷ್ಟತೆಗಾಗಿ ತಿದ್ದಿದ್ದೇನೆ:

      ಹಳಸು ಹೆಂಡವ ಹಿರಿದುದೊಂದ
      ಗ್ಗಳಿಕೆ ಪದವಿಟ್ಟಳುಕದೊಂದ
      ಗ್ಗಳಿಕೆ ಪರರೊಪ್ಪದಿಹ ಪೇಯವ ಕೊಳ್ಳದಗ್ಗಳಿಕೆ।
      ಬಳಸೆ ಬೆರಕೆಯ (cocktail) ಕಂಠಪೂರ್ತಿಯು
      ಪುಳಕಗೊಳ್ವಗ್ಗಳಿಕೆಯಂಬೀ
      ಬಲುಹು ನಡುಗುವ ಬೀರು-ಸಾರಾಯಿಗಳ ಕಿಂಕರಗೆ॥

      (’ಪದವಿಟ್ಟಳುಕದಗ್ಗಳಿಕೆ’ ಹಾಗೂ ’ನಡುಗುವ’ ಇವು ಪರಸ್ಪರ ವ್ಯತಿರಿಕ್ತವಲ್ಲ. ಅವನ ಸೊಟ್ಟನೆಡಿಗೆ ತಿಳಿಯುವುದು ಇತರರಿಗೆ. ಅವನಮಟ್ಟಿಗೆ ಅವನು ನೆಟ್ಟಗೇ ನಡೆಯುತ್ತಿರುತ್ತಾನೆ.)

      • ಧನ್ಯವಾದಗಳು ಪ್ರಸಾದ್ ಸರ್,
        ನಿಮ್ಮ ಅನು-ಭವ/ಭಾವ ತುಂಬಾ ಮೆಚ್ಚುಗೆಯಾಯಿತು.

  6. ಹಲಗೆ ಬಳಪವ ಪಿಡಿಯದೊಂದ
    ಗ್ಗಳಿಕೆ ಪದವಿಟ್ಟಳುಪದೊಂದ
    ಗ್ಗಳಿಕೆ ಪರರೊಡ್ಡವದ ರೀತಿಯ ಕದಿಯುವಗ್ಗಳಿಕೆ\
    ಬಳಸಿ ಕುಟ್ಟಲು ಸೆಲ್ಲು ಫೋನಿನ
    ಥಳುಕು ಕೆಡದಗ್ಗಳಿಕೆಯೆಂಬೀ
    ಬಲುಹು ಯೆಸ್ಸೆಮ್ಮೆಸ್ಸು ಮಾಡುವ ಪಡ್ಡೆ ಹೈದನಿಗೆ

  7. ಆಧುನಿಕ ಕುಮಾರವ್ಯಾಸರು, ಮುಖ್ಯವಾಗಿ ಪದ್ಯಪಾನದಲ್ಲಿ ಭಾಗಿಗಳಾಗುವವರು, ಹಲಗೆ-ಬಳಪ ಪಿಡಿಯದೆ, ಪೆನ್ನು-ಪೇಪರ್ ಸಹ ಬಳಸದೆ, ನೇರವಾಗಿ ಕೀಬೋರ್ಡ್ ಬಳಸಿ ಕಂಪ್ಯೂಟರ್/ಇಂಟರ್‌ನೆಟ್‌ನೊಳಕ್ಕೆ ಪದ್ಯವನ್ನು ತೇಲಿಬಿಡುವ ಪ್ರಕ್ರಿಯೆಯ ಕುರಿತು-

    ಬರಹವೆಂಬೀ ಕನ್ನಡದ ಲಘು
    ವರವು ದೊರಕಿದ ಪುಣ್ಯದಿಂದಲೆ
    ಹರಿದುಬರುತಿದೆ ಕಾವ್ಯಧಾರೆಯು ಪದ್ಯಪಾನದಲಿ
    ಕೊರೆಯುತಿಹ ಕವಿಮನದ ಗೆಳೆಯರು
    ಬರಿಯ ಕೀಬೋರ್ಡಿಂದ ಬರೆಯುವ
    ಪರಿಯ ಮೆಚ್ಚಿದೆ ಭಳಿರೆಯೆನುತಲಿ ನನ್ನ ಮನದಲ್ಲಿ

    • ಶ್ರೀವತ್ಸ ಸರ್,
      ಗೆಳೆಯರ ಕೊರೆತ ಮೆಚ್ಚಿದ್ದಕ್ಕೆ ಧನ್ಯವಾದಗಳು .

    • ತುಸು ’ಪಳ’ಗಿಸಿದ್ದೇನೆ:
      ’ಬರಹ’ಮೆಂಬೀ ಕಂನುಡಿಯ ಲಘು-
      ವರವು ದೊರಕಿಹ ಪುಣ್ಯದಿಂದಲೆ
      ಹರಿದುಬಂದಿರೆ ಕಾವ್ಯಧಾರೆಯು ಪದ್ಯಪಾನದೊಳು|
      ಮೊರೆಯುತಿಹ ಕವಿಮನದ ಗೆಳೆಯರ್
      ಬರಿದೆ ಕೀಬೋರ್ಡಿಂದೆ ಟಂಕಿಪ
      ಪರಿಯ ಮೆಚ್ಚಿಹೆ ಭಳಿರೆಯೆನ್ನುತಲೆನ್ನ ಮನದಲ್ಲೆ|

      • ಪಳಗಿಸುವ ಭರದಲ್ಲಿ ಸುಮ್ಮನೆ
        ಕಳೆದು ಹೋಯಿತು ಪಾರಡಿಯ ಪದ
        ಬೆಳಕು ಕಾಣದೆ ಕತ್ತಲಲ್ಲಿಯೆ ಕೊನೆಯವುಸಿರಂತೆ
        ಬಳುಕಿ ಬಾಗುವ ಹೊಸತು ನುಡಿಯಿದು
        ಮೊಳಕೆಯೊಡೆವುದು ಕೊರೆತದಲ್ಲಿಯೆ
        ಥಳುಕು ನೀಡಲು ಮೊರೆತವಾಗದು ಹುಸಿಯ ಬಸಿರಂತೆ

  8. ತಾನೆ ಕವನಿಸಲಾಗದಿರ್ದೊಡ
    ಮೇನು ಶೂರನೊ ಡಂಭ ಕವಿವರ
    ನೇನೊ ಭಾವಿಸಿ ತಿರುಚುವನು ಸತ್ಕವಿಯ ಬರೆಹವನು|
    ಹೇನ ಹೆಕ್ಕಿದೊಡೇನು ತನ್ನನು
    ಮಾನಿಪನು ವರಕಬ್ಬಿಗನೆನುತ,
    ಸೌನಿಕನು ನಿಜದೀತನ ಕ್ರಿಯೆಗಿಂ ಪ್ರತಿಕ್ರಿಯೆಯೈ||

  9. ಹಗಲೆ ಬಿಳುಪಿನ ಕಳ್ಳ ಕುಡಿಯುತ
    ಹಗುರುಪದವಿಟ್ಟಳುಕಿ ನಡೆಯುತ
    ಮೊಗೆದುಕೊಳ್ಳುತಲನ್ಯರಿಂ, ತಾನ್ ಕೊಳ್ಳದಗ್ಗಳಿಕೆ|
    ಹೊಗಿಸಿ ಕಳ್ಳನು ಕಂಠಪೂರ್ತಕೆ
    ವೆಗಟನಾಡುತ ಕೆಡಿಸುತನ್ಯರ
    ಮಿಗೆ ಕೆಡುವನೀ ಹೀರು-ನಾರಣನಾರ ಕಿಂಕರನೊ?

  10. ಗಳಹಲೇತಕೆ, ಪಿಡಿದು ಪುಸ್ತಕ
    ವಳುಪದೊಂದೂ ಪದವ ಬರೆದ
    ಗ್ಗಳಿಕೆಯಂ ಮೆರೆ ನೀನು ರಚಿಸುತೆ ಖಂಡಕಾವ್ಯಮನುಂ|
    ಬೆಳಸಲುತ್ಕಂಠದಿನೆ ನೀನದ
    ಮೊಳಗುಕಾವ್ಯಂ ಪುಟ್ಟುಗಾಗ
    ಗ್ಗಳಿಕೆಯಪ್ಪುದದಾಗಳಾಗುವೆ ನರಣಕಿಂಕರ ನೀಂ||

  11. ಹಲಗೆಬಳಪವ ಪಿಡಿಯದೊಂದ
    ಗ್ಗಳಿಕೆ ಪದವಿಟ್ಟಲೆಕಲಹದ
    ಗ್ಗಳಿಕೆ ಪರರೊಡ್ಡವದೊಳುತ್ತರ ಕಸಿಯುವಗ್ಗಳಿಕೆ|
    ಬಳಸಿಬರೆಯಲು ಕಾಪಿಚೀಟಿಯ
    ವುಲುಹುಮಿರದಗ್ಗಳಿಕೆಯೆಂಬೀ
    ಬಲುಹದುತ್ತೀರ್ಣನಿಹ ಕೊನೆಸಾಲ್ ಪಡ್ಡೆ ಕಿ೦ಕರಗೆ||

  12. ಮೆಲನೆ ಪರಕೆಯ ಪಿಡಿದುದೊಂದ
    ಗ್ಗಳಿಕೆ ಕದವಿಟ್ಟಗುಳಿಯೆಳೆದ
    ಗ್ಗಳಿಕೆ ಜಿರಳೆಯ ಕಂಡು ಭೀತಿಯ ಕೊಳ್ಳದಗ್ಗಳಿಕೆ
    ಬಳಸಿಬರಲನು ಜೊಂಡಿಗೆಯ ಮೈ
    ನುಲಿಯೆ ಬಡಿದಗ್ಗಳಿಕೆಯೆಂಬೀ
    ಬಲುಹದೊದಗಲಿ ವೀರನಾರೀಮಣಿಯ ಗಂಡನಿಗೆ

    • ಜೀವೆಂ,

      ಬಲುಹಿದೆಂಬೆಯ? ಜಗದೆ ಲಲನೆಯ
      ನಲುಗಿಸಲು ಬಲ್ಲವನದೊರ್ವನೆ
      ಚಲನಚಟುಲತೆ ಮೆರೆವ ಜೊಂಡಿಗ ಪೂಜ್ಯ ಗಂಡರಿಗಂ|
      ಚಿಲಕಜಡಿಯುತ ಹಿಡಿದು ಕೊಂದೆಯ?
      ಕುಲದರೆಮ್ಮಯ ಶಾಪವಿದೆಕೋ
      ಕೊಲಿಮೆಯೊಳಗಂ ಸೇರು ಪಾಪಿಯೆ ಕುಂಭಿಪಾಕದೊಳು||

      • ಪ್ರಸಾದು,

        ಬಲುಹಿದೆಂಬೆನು! ಜಗದ ಲಲನೆಯ
        ರಲುಗಲೀಯದ ವಲ್ಲಭರುಮಾ
        ಚಲನಚಟುಲನ ಮೆರೆವ ತೊಂಡಂಗಿಯನೆ ಸದೆಬಡಿದು
        ಚಲನವಿಕಲನ ಗೆಯ್ವೊಡರಿದೈ
        ಕುಲಕೆ ಪೆರ್ಮ್ಮೆಯ ವಿಷಯವೈ ಪೆ
        ರ್ಬಲುಮೆಯೊಳಗಂ ಸೇರಲಾತನು ವೀರನಾಕವನು

      • Logical Syllogism ದೋಷ ಎಂಬುದೊಂದಿದೆ. ನಿಮ್ಮ ಪದ್ಯ ಅದಕ್ಕೆ ಲಕ್ಷ್ಯ. ದೋಷದ ಸ್ವರೂಪ ಹೀಗಿದೆ: The commander commands the army. The commander’s wife commands the commander. Therefore the commander’s wife commands the army. ನಾರೀಮಣಿಯನ್ನು ಅಲುಗಿಸಲಾಗದಿದ್ದರೂ, ಅವಳನ್ನು ನಲುಗಿಸಿದ ಜೊಂಡಿಗನನ್ನು ಕೊಂದ ಹೆಗ್ಗಳಿಕೆ!

        • ಇಲ್ಲ, ನಿಮ್ಮ ಗದ್ಯದಲ್ಲಿ ಅನ್ಯಥೋಕ್ತಿ ದೋಷವಿದೆ 🙂 ನನ್ನ ಪದ್ಯದಲ್ಲಿ ಗಂಡ ಪ್ರಾಣಿಯನ್ನು ಕೊಂದನೆಂಬ ಮಾತು ಇಲ್ಲವೇ ಇಲ್ಲವಲ್ಲ! ಕೊಲ್ಲುವಷ್ಟು ಆಗಲಿ ಎಂದೆನಷ್ಟೆ – ನೂರಕ್ಕೆ ನೂರು ಆಶೀರ್ಲಿಂಲಙ್.

    • ಒಂದಲ್ಲ ಒಂದು ದಿನ ಆ ಆಶೀರ್ಲಿಙ್ ವಿಧಿಲಿಙ್ ಆಗುತ್ತದೆ. ನನ್ನ ಮಾತು ಆಗ ಕಾಙ್‍ಕ್ರೆಟೈಸ್ ಆಗಲಿ ಬಿಡಿ.

  13. ಬೆನ್ನುನೋವಿಗೆ ಬಗ್ಗದಿಹೆನೆಂ
    ಬೆನ್ನುವಗ್ಗಳಿಕೆ ಪ್ರತಿಪದಂ
    ಖಿನ್ನನಾಗದೆ ಪದ್ಯಪಾನಿಪೆನೆನ್ನುವಗ್ಗಳಿಕೆ|
    ಭಿನ್ನವಾದುದು ವಾರವಿದರೊಳು
    ಮನ್ನಿಪುದು ಸಹಪದ್ಯಪಾನಿಗಳ-
    ಳಿನ್ನಿದನು; ಪದ್ಯಂಗಳೆಲ್ಲಂ ಸೊಗಯಿಸಿವೆ ದಿಟದಿಂ||

    • ಎಲ್ಲ ಸಲೆಸೊಗಸಾಗಿದೆ. ಐದನೆಯ ಪಾದದಲ್ಲಿ ಛಂದಸ್ಸು ಸ್ವಲ್ಪ ಎಡವಿದೆ. ದಯಮಾಡಿ ಸವರಿಸಿರಿ. (ಇವು ನಿಮ್ಮದೇ ಮಾತುಗಳು. ಕಾಪಿ ಅಂಡ್ ಪೇಸ್ಟ್ ಮಾಡಿದ್ದೇನೆ. ಕ್ಷಮೆಯಿರಲಿ.)

      • ಪ್ರಸಾದ್ ಸರ್ ,
        ಇದಕ್ಕೆ ಉತ್ತರ ಐದನೇ ಸಾಲೇ ! (ಮನ್ನಿಪುದು ಸಹಪದ್ಯಪಾನಿಗ- ಳಿನ್ನಿದನು…. ) ಅಲ್ಲವೇ ಗಣೇಶ್ ಸರ್ ?!

    • ಬಳಪ-ಹಲಗೆಯ ಪಿಡಿಯದೊಂದ
      ಗ್ಗಳಿಕೆ, ಪಾಠವ ನಿಂದರುಹದ
      ಗ್ಗಳಿಕೆ, ಹೊಂವರ್ಕ್ ಕೊಡದದನು ಸರಿನೋಡದಗ್ಗಳಿಕೆ|
      ಹುಳಿಪರೀಕ್ಷೆಯನಿತ್ತು ಮಾಪನ
      ಚಳಕವನ್ನುಂ ಗೈಯದಿರುವ
      ಗ್ಗಳಿಕೆಯಿರೆ ಮೇಣೇತಕೀ ಪ್ರಸ್ತಾವ ಬೆನ್ನಿನದೈ||

      • ಕವಿಕುಮಾರವ್ಯಾಸನೇ ತಾಂ
        ಕವಿದುಬಿದ್ದನೆ ನಿಮ್ಮ ಮೇಲೀ
        ನವಲಕವನಮನೋಹರತೆಯನು ತೋರೆ ಭಾಮಿನಿಯೊಳ್|
        ಸವಿಯುತಾಂ ಷಟ್ಪದಿಯ ನಿಮ್ಮಾ
        ಜವಕೆ ಮೇಣ್ ವೈವಿಧ್ಯಕಂ ಸಂ
        ಸ್ತವವಿದಂ ನೀಳ್ದಿರ್ಪೆನಯ್ ಸ್ವೀಕರಿಪುದು ಪ್ರಸಾದು!!

        (ಪ್ರಿಯ ಪ್ರಸಾದು, ನಿಮ್ಮ ಸದ್ಯಃಸ್ಫೂರ್ತಿಯ ಪುಂಖಾನುಪುಂಖಪ್ರತ್ಯುತ್ತರಗಳಿಗೂ ಪದ್ಯರಚನಾಪಾಟವ-ವಿನೋದನಗಳಿಗೂ ಹರ್ಷಿತನಾಗಿದ್ದೇನೆ. ಈ ನನ್ನ ಪದ್ಯದ ನಾಲ್ಕನೆಯ ಸಾಲಿನಲ್ಲಿ ಅನ್ವಯವ್ಯತ್ಯಾಸದ ಪ್ರಯೋಗ ಮಾಡಿದ್ದೇನೆ. ಪಂಪ, ಕುಮಾರವ್ಯಾಸ, ಗೋವಿಂದಪೈ ಮುಂತಾದವರಲ್ಲಿದು ಕಾಣಸಿಗುತ್ತದೆ. ಕಡೆಯ ಸಾಲಿನ ಕಡೆಯ ಪದದಲ್ಲಿ ಶಿಥಿಲದ್ವಿತ್ವವಿದೆ:-)

      • 1) That is another graduation certificate. ಧನ್ಯೋಸ್ಮಿ. ಶಿರಸಾ ನಮಾಮಿ.

        2) ’ಸವಿಯು+ತಾಂ’ ಹಾಗೂ ’ಸವಿಯುತ+ಆಂ’ – ಇವೇ ಅಲ್ಲವೆ ಅನ್ವಯವ್ಯತ್ಯಾಸಗಳು?

        • ಅಲ್ಲ, ಇದು ಅನ್ವಯವ್ಯತ್ಯಾಸವಲ್ಲ, ಇಲ್ಲಿರುವುದು ಕೇವಲ ಪದಚ್ಛೇದವ್ಯತ್ಯಾಸ. ನಾನು ಉದ್ದೇಶಿಸಿದ್ದು “ಸವಿಯುತಾಂ ಷಟ್ಪದಿಯ ನಿಮ್ಮಾ” ಎಂಬುದು “ನಿಮ್ಮ ಷಟ್ಪದಿಯನ್ನು ನಾನು (ಆಂ) ಸವಿಯುತ್ತ ” ಎನ್ನುವ ರೀತಿಯ ಅನ್ವಯವು ಅಗಬೇಕೆಂದು.

    • ಗಣೇಶ್ ಸರ್, ಬೇಗ ಬೆನ್ನು ನೋವು ನಿವಾರಣೆಯಾಗಲೆ೦ದು ಆಶಿಸುತ್ತೇನೆ

  14. ಹಲಗೆ ಬಳಪವ ಪಿಡಿಯದೊ೦ದ-
    ಗ್ಗಳಿಕೆ ಪದವಿಡೆ ತು೦ಟತನದ-
    ಗ್ಗಳಿಕೆ ಪರರೆಡೆ ತ೦ದೆತಾಯ್ಗಳ ಜರಿಯುವಗ್ಗಳಿಕೆ
    ಉಳಿಸಿಬಳಸದೆ ದು೦ದುವೆಚ್ಚಗ-
    ಳುಲುಹು ಬೀರ್ವಗ್ಗಳಿಕೆಯೆ೦ಬೀ
    ಬಲುಹು ಕಣ್ಮಣಿಯವೊಲು ಸಾಕಲ್ಪಟ್ಟ ಕಿ೦ಕರಗೆ

    ಒಬ್ಬ ತ೦ದೆ ತನ್ನ ಪುಟ್ಟಮಗನ ಮೇಲೆ ಆಡುವ ಅಭಿಮಾನದ ಮಾತುಗಳು 😉

    • ಹಲಗೆ ಬಳಪವ ಪಿಡಿಯದೊಂದ
      ಗ್ಗಳಿಕೆ ಪಿಡಿದುದ ಬಳಸದೊಂದ
      ಗ್ಗಳಿಕೆ ಬಳಸಿದೊಡೋದಿ ಕಲಿಯದೆ ಜರಿವುದಗ್ಗಳಿಕೆ
      ಬೆಳೆದು ಗೂಂಡಾಗಿರಿಗೆ ಜೈಲಿನೊ
      ಳಿಳಿದನೆಂಬಗ್ಗಳಿಕೆ ಸಾಲದ
      ಬಲೆಯ ಕೈಪಿಡಿದಾಳ್ದನೆಂಬಗ್ಗಳಿಕೆ ಭಂಡನಿಗೆ

      • ಚೆನ್ನಾಗಿದೆ ಜೀವೆ೦, ಜೈಲಿಗೇ ಕಳಿಸಿಬಿಟ್ಟರಲ್ಲ ಪೋರನನ್ನ 🙂

    • ಜೀವೆಂ,
      ಈ ಪದ್ಯವನ್ನು ನೀವು ವಿವಿಕ್ತವಾಗಿಯೇ ಹಾಕಬಹುದಾಗಿತ್ತು. ಸೋಮಶೇಖರರ ಪದ್ಯದ ಸರಣಿಯಲ್ಲಿ ಹಾಕಿರುವುದು ನೋಡಿದರೆ, ತನ್ನ ಕುವರನನ್ನು ಕುರಿತು ಒಬ್ಬ ತಂದೆಯ ’ಅಭಿಮಾನದ ಮಾತು’ಗಳಿಗೆ ವ್ಯತಿರೇಕವಾದ ಭವಿಷ್ಯವನ್ನು ನುಡಿದಿರುವಿರಲ್ಲ!

  15. ಕುಳಿತು ಕೆಲಸವ ಮಾಡದಿರುವ-
    ಗ್ಗಳಿಕೆ ಸೊಸೆಯ ತೆಗಳುತಲಿರ್ದು ಮ
    ಗಳ ಹೊಗಳುವಗ್ಗಳಿಕೆಯಿಹುದೈ ಮಹಿಳೆಯಿವಳಲ್ಲಿ ।
    ಗೆಳತಿಯರ ಜೊತೆಗೂಡಿ ಗಂಡನ
    ಬಳಗವನು ಬೈವಗ್ಗಳಿಕೆ ಮೇಣ್
    ಕೊಳಗ ಕಾಫಿಯ ಗಳಿಗೆಯಲ್ಲಿಯೆ ಮುಗಿಸುವಗ್ಗಳಿಕೆ ॥

    (ಇಂದಿನ ಯುಗದ ಮಹಿಳಾಮಣಿಯೊಬ್ಬಳ ವರ್ಣನೆ)

    • ಸ್ವಲ್ಪ ಯತಿಭಂಗವಾಗಿ ಕೇಳಲು ದುಷ್ಟವಾಗಿರಬಹುದು, ಮನ್ನಿಸಿರಿ.

      • ಹುಷಾರು ಸ್ವಾಮಿ, ಇಂದಿನ ಯುಗದ ಮಹಿಳಾಮಣಿಗಳು ನಿಮ್ಮ ಪದ್ಯವನ್ನು ಸೀರಿಯಸ್ಸಾಗಿ ಕೊಂಡರೆ ದಂತಭಂಗವಾಗಿ ತಿನ್ನಲು ಕಷ್ಟವಾಗಬಹುದು. 😀

        • ಇದು ವಿಡಂಬನೆಯಾದ್ದದಿಂದ ತಮಾಷೆಗೆಂದೇ ಹಾಕಿದ್ದೇನಷ್ಟೆ! ಹಾಗಾಗಿ ಹಲ್ಲು ಮುರಿಯಲಾರದೆಂದು ನನ್ನ ಎಣಿಕೆ 🙂

    • ಇದು ಕವಿಪ್ರೌಢೋಕ್ತಿಯೋ, ಕವಿನಿಬದ್ಧಪ್ರೌಢೋಕ್ತಿಯೋ?
      ಅರ್ಥಾತ್, ಕೇವಲಜ್ಞಾನವೋ, ಸ್ವಾನುಭವವೋ?

    • ಪೊಗಳಲುಂ ಮಗಳನ್ನು ಮತ್ತುಂ
      ತೆಗಳಲುಂ ಸೊಸೆಯನ್ನು ಕಾಣೈ
      ಯುಗಲಕುಂ ಕಾರಣಮುಮೊಂದೇ ಮೂಲ ತಾನಲ್ತೆ|
      ವೆಗಟ ಸಹಿಸಲು ಸುತೆಯಳತ್ತೆಯ
      ಪೊಗರ ತಗ್ಗಿಸೆ ಸೊಸೆಯ ತವರಿನ
      ಸೊಗಸ ನೋಡೈ ಬೊಮ್ಮನಂದದೆ ತಳೆಯದಾಗ್ರಹ ನೀಂ||

  16. ಹಲಗೆಬಳಪವ ಪಿಡಿಯದೊಂದ
    ಗ್ಗಳಿಕೆ ಪದವಿಟ್ಟಳುಪದೊಂದ
    ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ|
    ಬಳಸಿಬರೆಯಲು ಕಂಠಪಾಠದೆ
    ಹುಲುಬುಗೊಂಡಗ್ಗಳಿಕೆಯೆಂಬೀ
    ಬಲುಹು ಹುದುಗಿದ ಕನ್ನಡದ “ಅವಧಾನ” ಕಿಂಕರಗೆ||

    (ನಾ ಕಂಡ ನಿಜ “ಅವಧಾನಿ”ಗೆ ಅರ್ಪಣೆ)

    • ಗಣೇಶ್ ಸರ್,
      “ವಿಡಂಬನೆ”ಎಂದರೆ ಅನುಕರಣ ಬರಹವೋ? ಅಣಕ ಬರಹವೋ? ಪರಿಹಾಸ್ಯವಿರಲೇಬೇಕೆ? ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ. (“ಅವಧಾನಿ”ಯ “ಅಗ್ಗಳಿಕೆ”ತೋರುವ ಪ್ರಯತ್ನ)

      • ಒಳ್ಳೆಯ ಪ್ರಶ್ನೆ:-) ವಿಡಂಬನವು ಹಾಸ್ಯದ ತೋರಣವನ್ನು ಹೊಂದಿದ್ದರೂ ವಿವಿಧರಸಗಳ ಹೂರಣವನ್ನು ತಳೆದಿರಬಹುದು. ಅಣಕವೇ ಸಂಸ್ಕೃತದಲ್ಲಿ ವಿಡಂಬನವೆಂದಾಗಿದೆ. ತಮ್ಮ ಪದ್ಯಗಳೀಗ ಸೊಗಸಾಗಿ ಬರುತ್ತಿವೆ. ನಿಮ್ಮ ಅಭಿಮಾನದ ಮಾತು/ಪದ್ಯಗಳಿಗೆ ಕೃತಜ್ಞತೆಗಳು. ಆದರೆ ಇಲ್ಲಿ ಅವು ಅಷ್ಟಾಗಿ ಒಪ್ಪವಲ್ಲವೇ:-)

    • ಪಲ್ಲವ||
      ಅಲ್ಲವಿವರವಧಾನ’ಕಿಂಕರ’
      ರೆಲ್ಲರಭಿಮಾನವನು ಪೊಂದಿಹ
      ನಿಲ್ಲದವಧಾನವನು ಗೈಯುವ
      ಸೊಲ್ಲ ’ಸಮ್ರಾಟ’ರಿಹರೌ|

    • ಹೌದು ಗಣೇಶ್ ಸರ್, ಇಲ್ಲಿ ಮೂಲಕ್ಕೆ ವ್ಯತಿರಿಕ್ತ ಧೋರಣೆಯೂ ಇಲ್ಲ, ಹಾಸ್ಯದ ಧಾರಣೆಯೂ ಇಲ್ಲ. ಹಾಗಾಗಿ “ವಿಡಂಬನೆ”ಯಾಗಿ ಒಪ್ಪದ್ದು .ಆದರೆ “ವಿಶೇಷಣ”ವಾಗಿ “ಒಪ್ಪ”ದ್ದು ಅಲ್ಲವೇ?
      ಹೌದು ಪ್ರಸಾದ್ ಸರ್, ಅವರು ಅವಧಾನ “ಸಾಮ್ರಾಟ”ರೇ ಸರಿ. ಅವರು “ಅವಧಾನ”ದ ಕಿಂಕರ = ಭಕ್ತ ಎಂಬ ಅರ್ಥದಲ್ಲಿ ಬರೆದದ್ದು

  17. ಅಳುವ ಬಾಲನ ಪಿಡಿದುದೊಂದ
    ಗ್ಗಳಿಕೆ ಪದವಿಟ್ಟಳಿಪುದೊಂದ (ಹಾಡುಹಾಡಿ ಅಳಿಸುವ !)
    ಗ್ಗಳಿಕೆ ಪರರಡ್ಡನುಡಿ ನೀತಿಯ ಕೊಳ್ಳದಗ್ಗಳಿಕೆ |
    ಒಲಿಸಿ ಬೆಳೆಸಲು ಕಂದಪುತ್ರನ
    ಪುಳಕಗೊಳದಗ್ಗಳಿಕೆಯೆಂಬೀ
    ಹಲುಬು ನಲುಗುವ ನಿತ್ಯ ನಾರಿಗೆ ಬಂದ ಕಿರಿಕಿರಿಗೆ ||

    (ತುಂಟ ಮಗನನ್ನು ಬೆಳೆಸುವ ಇಂದಿನ ನಾರಿಯ ಅಗ್ಗಳಿಕೆ ಬಗ್ಗೆ )

    • ಕೇಳಿಬಲ್ಲೆನು ಮಾತೆ ಪಾಡನು
      ಕೇಳಿಸುತೆ ಕಂದನ್ನ ಮಲಗಿಸ
      ಳೂಳಿಡುವ ಕಂದಮ್ಮಗಳು ತಾವ್ ತೆಪ್ಪಗಾದುದನು|
      ಪೇಳದೆಂತಹ ಮಾತೆಯೀಕೆಯು
      ಮೇಳಕರ್ತವದಾವುದನ್ನುಂ
      ಗೋಳುರಾಗದೆ ಪೇಳಿ ಕಂದನ ಬೆಚ್ಚಿಸಳಿಸಿಹಳು||

  18. ಇಳೆಯ ಕಳವು ಮಾಳ್ಪುದೊಂದ
    ಗ್ಗಳಿಕೆ ಪಡೆಯಿಟ್ಟಳಿಪುದೊಂದ
    ಗ್ಗಳಿಕೆ ಥರಗುಟ್ಟಿಸಿ ಭೂಮಿಯ ಕೊಳ್ವುದಗ್ಗಳಿಕೆ| ನ
    ಕಲಿ ಬರೆಸುತ ಕ್ರಯಪತ್ರದ
    ವುಲುಹುಸೃಜಿಪಗ್ಗಳಿಕೆಯೆಂಬೀ
    ಬಲುಹು ಗಣಿಗಳ ಮರಳಿನ ಚೋರಪಡೆಯ ಕಿಂಕರಗೆ

  19. ರಾಮನಾಥರೆ – ಪದ್ಯಪಾನಕ್ಕೆ ಸ್ವಾಗತ.
    ನಿಮ್ಮ ಪದ್ಯದ ಭಾವ ಚೆನ್ನಾಗಿದೆ. ಛಂದಸ್ಸು ಅಲ್ಲಲ್ಲಿ ತಪ್ಪಿದೆ. ಭಾಮಿನಿ ಷಟ್ಪದಿಯ ಛಂದಸ್ಸಿನ ಬಂಧವನ್ನು ಈ‌ ಪಾಠದಲ್ಲಿ ನೀವು ಕಾಣಬಹುದು :: http://padyapaana.com/?page_id=643
    ಛಂದಸ್ಸಿನ ಪಾಠಗಳನ್ನೊಮ್ಮೆ ಪರಿಶೀಲಿಸಿ ಮತ್ತೆ ಪ್ರಯತ್ನಿಸಿದಲ್ಲಿ ತೊಡಕುಗಳನ್ನು ನಿವಾರಿಸುವುದು ನಿಮಗೆ ಕಷ್ಟವೇನಲ್ಲ.

  20. […] ಕುಮಾರವ್ಯಾಸನ ಈ ಪದ್ಯದ ವಿಡಂಬನೆಯನ್ನು (parody) ಮಾಡಿರಿ. ಈ ಹಿಂದೆ ಪದ್ಯಪಾನದಲ್ಲಿ ವಿಡಂಬನೆಯ ಕುರಿತ ಸಪ್ತಾಹದ ಪೂರಣಗಳ ಮಾಹಿತಿಯನ್ನು ಈ ಕೊಂಡಿಯಲ್ಲಿ ಪಡೆಯಬಹುದು http://padyapaana.com/?p=1480 […]

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)