Mar 202016
 

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ-
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ-
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ

ಕುಮಾರವ್ಯಾಸನ ಈ ಪದ್ಯದ ವಿಡಂಬನೆಯನ್ನು (parody) ಮಾಡಿರಿ. ಈ ಹಿಂದೆ ಪದ್ಯಪಾನದಲ್ಲಿ ವಿಡಂಬನೆಯ ಕುರಿತ ಸಪ್ತಾಹದ ಪೂರಣಗಳ ಮಾಹಿತಿಯನ್ನು ಈ ಕೊಂಡಿಯಲ್ಲಿ ಪಡೆಯಬಹುದು http://padyapaana.com/?p=1480

 

  58 Responses to “ಪದ್ಯಸಪ್ತಾಹ – ೧೯೪: ವಿಡಂಬನೆ (parody)”

  1. ಒಂದು ಪ್ರಯತ್ನ, 🙂

    ಅರಸುಗಳಿಗಿದು ನೀರ, ದ್ವಿಜರಿಗೆ
    ಪರಮಭೋಜನಸಾರ, ಭೋಗೀ-
    ಶ್ವರರ ವಿತ್ತವಿಚಾರ (ಪಿತ್ಥವಿಕಾರ), ಮಂತ್ರಿಜನಕ್ಕೆ ನರಿಯ ಗುಣ
    ವಿರಹಿಗಳು ಬೇರೊಬ್ಬರನರಸೆ
    ಪರಿಣತಿಯ ಬೋಧವಿದು, ಕಾವ್ಯಕೆ
    ಗುರುತದುಂಟೇ ನೀಲಕಂಠನೆ ರಚಿಸೆ ಭಾರತವ

  2. ಅರಸುವವರಿಗೆ ‘ನೀರ’ ವಿರಸದೊ
    ಳಿರಲದುವೆ ನಿಸ್ಸಾರವಿನ್ನಿದ-
    ನರಸಿ ಭಾಮಿನಿಯೊಳೊರೆದವರೇ ಪರಮ ಪಾಮರರುI
    ಅರಸಲಿದರೊಳಗೇನರಸದಿರೆ
    ಕೊರಗೆ?ನೆ೦ಬಾಷಾಢಭೂತಿಗೆ
    ಬರ ಸೆಳೆದೆಳೆದು ಹೆಂಗಳೆಯರಿಗೆ ಬೋಧಿಸವ ಕಥೆಯು II

    • ಭಾಲ ಅವರೆ, ಯಾವ ಕಥೆ ಎಂದು ಹೆಸರಿಸದಿದ್ದರೂ, ಅದರ ಯೋಗ್ಯತಾಪದ್ಯ ಬಹಳ ಚೆನ್ನಾಗಿದೆ

  3. ಹಿರಿಯರಿಂಗಿದು ಧರ್ಮಕಾರ್ಯವು
    ಕಿರಿಯರೊಳು ಜೋಡಿಯನು ಹೊಸೆವುದು
    ಇರರು ಸುಮ್ಮನೆ ಬ್ರಹ್ಮಗಂಟದು ಕೂಡಿಬರುವರೆಗಂ|
    ಹರಯದವರಿಗೆ ಮೋಜುಮನಿತೇ
    ಹೆರುವ ಹೆಣ್ಣಿಗೆ ಪ್ರಸವವೇದನೆ
    ಹರಿಯದೆಜಮಾನನಿಗೆ ಸಂಸಾರಮದು ರವರವಮೇ||

  4. (ದೇವರಾಜ)ಅರಸುಗಳದೈ ದಲಿತದುನ್ಮುಖ
    ಒರುವರಲ್ಲೀರ್ವರಲೆ ಹಾರ್ವರು (ಗುಂಡೂ ರಾವ್, ರಾ. ಹೆಗ್ಡೆ)
    ಬರಲು ನಂತರಮನಿತೆ ಶರಣರು (ಬೊಮ್ಮಯಿ, ಪಾಟಿಲ್) ವಿವಿಧರನಿಬರು ಮೇಣ್|
    ಕರುನಡದ* ಸಂಸತ್ತು ವೇದಿಕೆ
    ಕುರುಬ ಈಡಿಗ ಗೌಡರೆಲ್ಲಗೆ
    ಬರೆಹವನು ಗೈದಿರ್ಪ ದೇವಾಡಿಗರಿಗಂ (ಮೊಯಿಲಿ) ಮೇಣಿಂ||
    *ನಾಡ ಹೆಸರು ಕಂನಡ, ನುಡಿಯ ಹೆಸರು ಕಂನುಡಿ -ಶಂ. ಭಾ. ಜೋಷಿ

  5. ತುರಿಸುತಿರಲದು ಹಾಯೆನಿಸುತುಂ,
    ಕೆರೆತದಿಂ ರೇಗಿರಲು, ವೈದ್ಯಗೆ
    ತೆರತೆರನ(ಬಣ್ಣಬಣ್ಣದ) ನೋಟುಗಳವೋಲಾ ವ್ರಣವು ಕಾಂಬುದಲೆ|
    ಬರೆಯಲಾತನು(Prescription) ಲೇಪಗಳ ಮೇಣ್
    ಕಿರಿದು-ಹಿರಿದಿಹ ಮಾತ್ರೆಗಳನಂ
    ತುರಿಪುದಲೆ ಸುಖದಿಂದಲೋಷಧ್ಯಾಪಣನ ಕರವು||
    (ಓಷಧ್ಯಾಪಣಿ=Pharmacy)

  6. ಹರಿಸೆ (ನೀರು) ನೀರಾವರಿಯು ಗದ್ದೆಗೆ
    (ಚೂರ್ಣಗಳೊಂದಿಗೆ) ಮರಳಿಸಲು ಆಸವವು ಪಾನಿಗೆ
    ಇರಿಸೆ ಶೀತದ ಪೆಟ್ಟಿಯೊಳಗಡೆ
    ವರವು ಹೆಣಗಳ (ದೂರದೂರಿಂದ ಬರಬೇಕಾದ)ನಂಟಗೆ||

  7. ತಿರುಕನಿಗೆ ಭಿಕ್ಷೆಯುದೊರಕುವುದು
    ಮರೆಗುಳಿಗೆ ನೆನಪುಗಳೆ ಹರಿವುದು
    ಮರಕೆ ನೆಳಲಂ ನೀಡಿ,  ಫಲಪುಷ್ಪಗಳ ಪೆರ್ಚಿಪುದು|
    ಬರದ ನೆಲಕೆ ಸಲಿಲವ ಕಾಣಿಸು
    ತಿರಲು ಕಾರಣವಿದುವೆ ಕೇಳ್ ಶ್ರೀ
    ಧರನ ರಚಿಸಿದ ಕಾವ್ಯದಿಂದಿಂತೆಲ್ಲವಾಗುವುದು|

    • ಫಲಕ್ಕಾಗಿ ತಮ್ಮ ಕೃತಿಯ ಒಂದಕ್ಷರವನ್ನಾದರೂ ಓದಬೇಕು ಎನ್ನುತ್ತಿದ್ದರು ಕವಿಗಳು. ಈಗ…
      ನಿನ್ನೆಲ್ಲ ಪೂರ್ವಸೂರಿಗಳು ಪೇಳಿಹರಯ್ಯ
      ಮುನ್ನ ತಮ್ಮಯ ಕೃತಿಯ ಫಲಶ್ರುತಿಯನು|
      ಇನ್ನೆಗಂ ಪಠಣದಿಂ ಸಿಗುತಿದ್ದುಮೀಗಳೇಂ
      ನಿನ್ನ ರಚನಾಮಾತ್ರದಿಂ ಲಭ್ಯಮೇಂ?? 🙂 😀

    • ಹಹ್ಹಾ

    • ಚೆನ್ನಾಗಿದೆ ಫಲಶ್ರುತಿ

  8. ಅರಳುತಿಹ ಜೀವಗಳಿಗಾತನೆ
    ಮರುಳಬೊಮ್ಮನು, ಮೇಣವರನುಂ
    ಜರೆಯವರೆಗಂ ಸಲಹುವನಿರುದ್ಧಂ ಗಡಾತನಲೆ|
    ಕರಗಲಾಯುವು ಲಯವಗೊಳಿಸುತೆ
    ಮರುಜನುಮಕಂ ದೇಹವನ್ಯವ
    ಕರುಣಿಪೀಶ್ವರರೆಲ್ಲ ಪರಮಾತ್ಮನೊರುವಂ ಮೇಣೇಂ||

  9. (Rich)ಅರಸುಗಳಿಗಿದು ತೀರ ಅಗ್ಗವು,
    ಬರದೆ ದಾನದೆ ವಿಪ್ರರಿಂಗಂ,
    ಪರಮಯೋಗಿಗಳಿರುವರುಪವಾಸದೊಳವರ್ಗೇಕೈ|
    ಅರಮನೆಯ ಮಂತ್ರಿಗಳು ಪಡೆವರು
    ಪುರದ ಉಗ್ರಾಣದೊಳ ಧಾನ್ಯವ
    ಚರಕೆ ಮಾತ್ರವೆ? ಮಾರಿ ಮಾಡರೆ ಬರಿದು ಭಾರತವ||

    • ಪ್ರಸಾದು ನಿಮ್ಮ ಎಲ್ಲಾ ಪದ್ಯಗಳಲ್ಲಿ ಭಾಮಿನಿಯು, ಈ ಪದ್ಯದಲ್ಲಿ ವಿಡಂಬನೆಯೂ ಚೆನ್ನಾಗಿ ಮೂಡಿದೆ, ಮುಂದುವರೆಯಲಿ

  10. ಅರಸುಗಳಿಗುನ್ಮಾದ, ದ್ವಿಜರಿಗೆ
    ಮರೆಯಲಾರದ ಭೋಜ್ಯ,ಯೋಗೀ
    ಶ್ವರರ ಮುಖದಿಂ ದೂರ ,ಮಂತ್ರಿಗೆ ಮೇಧ್ಯಮಾಗಿರ್ಪೀ
    ವಿರಹವೇಧನೆ ತವಿಪ ಮರ್ದನು
    ಪರಿಣತರ್ಗುಮ್ ಮೆಲಿಸೆ,ಭಾರತ
    ಗರಿಮೆ ಯಂಮೆರೆ ದಿರ್ಕು ವೀಳ್ಯವು ರಸದ ಹೊಳೆಯಾಗಿ!

  11. Just prolific 🙁
    ಅರಸರುಗಳಿಗೆ ವಿಸ್ಕಿ ಆಮದು
    ಬರಿದೆ ‘ಬೀರ್’ಇದೆ ಮಧ್ಯವರ್ಗಕೆ
    ತಿರುಪೆಯೆತ್ತುವವರಿಗೆ ಕಳ್ಳಿಹ
    ಖರೆ ಗಡಂಗಿದು ಭಾರತಂ||

  12. ಕಲಿವವರ್ಗಿದೆ ಪಾಠಶಾಲೆಯು
    ಕಲಿತರೆಲ್ಲರ್ಗಿದುವೆ ವೇದಿಕೆ
    ಉಲಿಯ ಪಸರಿಸಿ ವೆರಸಿಕೊಳ್ಳುಗೆ ಸಮದ ಕಬ್ಬಿಗರ|
    ಖಿಲವುಗೊಳ್ಳದೆ ಕಾವ್ಯಭಾಮಿನಿ
    ಕಲೆಯ ಪೆರ್ಮೆಯು ಗಗನಕೇರುಗೆ
    ಚಲನಚಟುಲಂ ಪದ್ಯಪಾನಂ ದೇಶದೇಶದೊಳೈ||

  13. ಅರಸರನೆ ಬಿಡ ಪೋರ, ದ್ವಿಜರೆನೆ
    ಕೊರಮಗಾಗದಪಾರ ಕೂಗೇ-
    ನರರೆ, ತತ್ವವಿಚಾರ ಕಂತ್ರಿಜನಕ್ಕೆ ಬುದ್ಧಿಗುಣ
    ಗುರುಹಿರಿಯರಿಂ ದೂರವಿದ್ಯಾ-
    ಪರಿಣತರಲಂಕಾರ ಕೀಳ್ಮೆಗೆ-
    ಗುರುವೆ ಕನಯಕುಮಾರ ಜೇಎನ್ಯು ಪೀಡೆ ಭಾರತಕೆ

    ದೂರವಿದ್ಯಾಪರಿಣತರ – ದೂರ ಅವಿದ್ಯಾಪರಿಣತರ

  14. Womb on hire
    ಪೊತ್ತಳೊರ್ವಳು ತನ್ನ ಮಡಿಲೊಳು
    ಉತ್ತ ಭ್ರೂಣವ ತನ್ನ ಮಗಳಿಂ,
    ಹೆತ್ತಳೆಂಟನೆ ತಿಂಗಳೊಳ್ ಚಂದದಿಹ ಕೂಸೊಂದಂ|
    ಅತ್ತೆಯುಂ, (&) ಹೆಂಡತಿಯುಮವನಿಗೆ (The male of the couple)
    ಮತ್ತೆ ತಾಯಿಯು, (&) ಸವತಿಯವಳಿಗೆ (The female of the couple)
    ದತ್ತಮಾತೆಯುಮಲ್ಲದೆಲೆ ಮಾತಾಮಹಿಯು ಶಿಶುವ!!

  15. ನೆರೆಯ ಮನೆಗಿವ ದೂರ, ನಿತ್ಯದ
    ತರಲೆ ತಂಟೆಗೆ ಶೂರ, ಮಾತಿನೊ-
    ಳರೆದ ಮೆಣಸಿನ ಖಾರ, ಕಂತ್ರಿಜನಕ್ಕೆ ಮಂತ್ರಿಯಿವ
    ಸಿರಿಯು ಕಾಲ್ಕೆಳಗಾಡುತಿದ್ದರು
    ಕರೆದು ಕೊಟ್ಟವನಲ್ಲ ಕೇಳ್ವರ,
    ಹೊರುವ ಜನರಿಗೆ ಭಾರ ಕೊನೆಗೀತನ ಕಳೇಬರವು

    • ಬಹಳ ಚೆನ್ನಾಗಿದೆ

    • ಕೊನೆಯ ಪಾದದಲ್ಲಿ ಪಂಛ್ ಚೆನ್ನಾಗಿದೆ. ವಾಸ್ತವವು ಹಾಗೇನಾಗಬೇಕಿಲ್ಲ.
      ಬದಿಕಿರುವರೆಗೆ ಧಿಕ್ಕರಿಸುತುಂ
      ವಿದಿತ ಪಾರಂಪರ್ಯವೆಲ್ಲವ-
      ನದನೆ ತನ್ನ ಕಳೇಬರಕ್ಕಂತ್ಯೇಷ್ಟಿಯೊಳು ವಡೆದು|
      ಚದುರನೀ ಆಷಾಢಭೂತಿಯು
      ಹದವ ಹಿಂಬಾಲಿಪರ ಕೆಡಿಸುತೆ (ಅನುಯಾಯಿಗಳನ್ನು ದಾರಿತಪ್ಪಿಸಿ)
      ಪದವಿ-ಸಂಭಾವನೆಯು ಸಲಲುಚಿತರ್ಗೆ* ನಕ್ಕನಲೆ(in his grave)||
      *ಅಂತ್ಯೇಷ್ಟಿಯನ್ನು ಮಾಡಿಸಿದ ಪುರೋಹಿತಾದಿಗಳಿಗೆ

  16. ಪಾ.ಪ.R..!
    ಅರಸುಗಳಿಗಿದು ವೀರ, ದ್ವಿಜರಿಗೆ
    ಪರಮವೇದದ ಸಾರ, ಯೋಗೀ-
    ಶ್ವರಗೆ ತತ್ತ್ವವು, ಮಂತ್ರಿಬುದ್ಧಿಯು, ಸ್ಪೃಹ-ಅಲಂಕಾರ|
    ದೊರೆಯೆ ಜ್ಞಾನವದನಿಬರಿಂಗೆ
    ಹಿರಿದುಹೂಡಿಕೆ (Big investment) ’ವಾಗ್ಮಿವರ’ರಿಗೆ
    ಬರಿದೆ ರೂಪಾಯಿಂದೆ (1.00-purchase price of a second hand copy) ಲಕ್ಷವು ಗದುಗ ಭಾರತದಿಂ (earnings from discourses)!!

  17. ಅರಸುವಳಿಯವನೆನುತೆ,ದ್ವಿಜರಾ
    ಪರಮವೇದವ ಹಳಿದು,ಯೋಗೀ
    ಶ್ವರನ ಭಕ್ತನೆ ತಾನು,ಬೇರೇನೆನುತೆ,ಬೀಗುತಲಿ!
    ವಿರಹವೆಂಬ ಸಮಸ್ಯೆ ತೊಡೆಯಲು
    ಪರಿಣಯವೆ ಸಾಕೆನುತೆ,ಜನಪದ
    ಗುರುವೆನುತೆ ವರಿಸಿದ ಕುಮಾರಸ್ವಾಮಿ,ರಾಧಿಕೆಯಾ!!

  18. (ಬ್ರಿಟೀಷ) ಅರಸುಗಳಿಗಿದು ದೂರರಸಿಕ ಜ-
    -ನರಿಗೆ ದರ್ಶನ ಖಾರ, ದುರ್ನಡೆ-
    -ಗುರುಗೆ ಸತ್ತ ವಿಚಾರ, ಮಂತ್ರಿ ಜನರಿಗಿದೆಲ್ಲಿಯದು?
    ನಿರಕ್ಷರಿಗಿದು ಘೋರ, ವಿದ್ಯಾ-
    -ಪರಿಣಿತನಿಗೆ ಕ್ರೂರ ಕಾವ್ಯವು
    ಹೊರಲೆನಗಿದುವು ಬಹಳ ಭಾರವು ಹೇಗೆ ಬಣ್ಣಿಸಲಿ?
    ( ದುರ್ನಡತೆಯ ಗುರು- ನಿತ್ಯಾನಂದ, ವಿದ್ಯಾಪರಿಣತ – ಭಗವಾನರು)
    ತಪ್ಪಾಗಿರಬೇಕು…ಕುಮಾರವ್ಯಾಸ ಭಾರತದ ವರ್ಣನೆ…. ನನಗೆ ವಿಡಂಬನೆ ಎಂದರೆ ಏನು ಎಂದೂ ಗೊತ್ತಿಲ್ಲ.

    • ಚೆನ್ನಾಗಿಯೇ ಬರೆದಿದ್ದೀಯ ಪುಟ್ಟೀ 🙂

      ನಿರಕ್ಷರಿಗಿದು ಅಂತ ಜಗಣದಿಂದ ಪ್ರಾರಂಭವಾಗಿರುವ ಮೂರನೇಯ ಸಾಲನ್ನು ಸವರಿಸು

  19. ಅರಸುಗಳಿಗಿದು ಸೇರ,ದ್ವಿಜರಿಗೆ
    ಪರಮ ಮೋದದ”ಸಾರ”ಯೋಗೀ
    ಶ್ವರರ ಪಥ್ಯಕೆ ಬಾರ,ಮಂತ್ರಿಜಗ ಕ್ಕೆ ವರ್ಜ್ಯ ಕಣಾ!
    ಸುರಿಯಲಿದು ಬಂಗಾರ,ಪಾಕದ
    ಪರಿಣತಿಗಲಂಕಾರ,ಭೋಜ್ಯಕೆ
    ಗುರುವೆನುತೆ ಕುದಿಸಿದ ಕುಮಾರ ಭಟ್ಟ ,ಬೇಳೆಯನು!!

  20. ಚರಿತೆಯೊಳಗಿವ ಜಾರ, ವನಿತೆಯ-
    ನರಸೆ ಜೀವನಸಾರ, ಭೋಗೀ-
    ಶ್ವರರ ತತ್ತ್ವಕೆ ಧೀರ, ಮಂತ್ರಿಗಣಕ್ಕುಮೇರ್ದ ಕಣ
    ಸುರರವೊಲೆ ಶೃಂಗಾರ, ಮದ್ಯದ-
    ಪರಿಣತರಲಂಕಾರ, ಬ್ಯಾಂಕಿಗೆ
    ಗರಗಸಮೆನಲು ಮಲ್ಯ ಮೆರೆಯುತೆ ತೊರೆದ ಭಾರತವ

    ಬ್ಯಾಂಕ್ ಶಿ. ದ್ವಿ 😉

  21. ಯಾರೋ ಅನಾಮಧೇಯ ಕವಿಯ ಬಗ್ಗೆ ಎಂದು ಮೊದಲೇ ಹೇಳಿಕೆ ಕೊಟ್ಟು ಬರೆಯುತ್ತಿದ್ದೇನೆ…

    ಅರಸು ಗುಳಿಗೆಯ ನೀರ, ಸಜೆಯಿದು
    ಪರಮಖೇದದ ಸಾರ, ಯೋಗೀ-
    ಶ್ವರರೆ ಕೆಡುವ ವಿಚಾರ, ಮಂತ್ರಿಜನಕ್ಕೆ ಬದ್ಧಗುಣ
    ದುರುಳರಿಗೆ ಬಂಗಾರ, ವಿದ್ಯಾ-
    ಪರಿಣತರಿಗಿದು ಘೋರ, ಕಾವ್ಯಕೆ
    ಕಿರಿಯತಮಮೆನೆಯೊರೆದುದೇಕೈ ಭುವಿಗೆ ಭಾರ ಥು… ವ್ಯಾ…

    ಸಜೆ – ಸಝಾ (ಉರ್ದು)
    ಕಿರಿಯತಮ – ಹಾಸ್ಯಕ್ಕೆ ಕನ್ನಡೀಕರಿಸಿದ್ದೇನೆ… ಕಿರಿ, ಕಿರಿತರ, ಕಿರಿತಮ (ಹೀಗೆಲ್ಲಾ ಮಡಬಾರದು)
    ಥು ವ್ಯಾ – ಶಿ ದ್ವಿ

  22. ಅರಸುವನೆಯವನೇರ,ದ್ವಿಜರೊಳ್
    ಪರಮ ಸಲ್ಗೆಯ ಕೋರ,ಕುಕ್ಕೇ
    ಶ್ವರನ ಸತ್ವವಪಾರ!ರಾತ್ರಿರಣಕ್ಕೆ ಬಧ್ಧನೆ ನಲ್ !
    ವಿರಹಿಗಳ ಗೆಣೆಗಾರನುದ್ಯಾನ
    ಪುರಕವನಲಂಕಾರ!ಭುವಿಯೊಳ್
    ಗರಿಮೆಯಿಂತಿರೆ,ಮೆರೆದನಂದೇ ಗದುಗಭಾರತದೊಳ್!
    (ನಾಯಿಯನ್ನು ಉಲ್ಲೇಖಿಸಿರಲಾಗಿ ,ಬಹಳ ಕಡೆಗೆ)

  23. ಅರರೆ ! ಜಾಣಗೆ ಸರಳ, ಕೆಲವು ಜ-
    -ನರಿಗೆ ನಡುಕವಪಾರ, ಭೋಗೀ-
    -ಶ್ವರಗೆ ತತ್ತ್ವವು ಖಾರ ,ಕಾಪಿಯ ಪರಿಣತಗೆ ಸುಲಭ (copy)
    ಮರೆವರಿಗೆ ಬಲು ಘೋರ, ವಿದ್ಯೆಯ-
    -ನರಿಯದವರಿಗೆ ತಲೆಯ ಭಾರವು
    ತರಲೆ ಶಿಷ್ಯರು ಸೇರಿ ಬರೆಯೆ ಪರೀಕ್ಷೆಯೀತೆರದಿ
    (ಪರೀಕ್ಷೆಯ ಬಿಸಿ)

  24. ಅರಸುತಿರುವನು ತೀರ, ದ್ವಿಜನದೊ
    ಪರಮಮೋಹದೆ “ಸಾರ” ಯಾಕೀ-
    ತರದ ಸತ್ವವಿಚಾರ ಮಾತ್ರಮದವನ ಬುದ್ಧಿಗುಣ ।
    ವಿರಮಿಸುತದನಪಾರ, ಮಧ್ಯಾ
    ಪರಿಗಣಿಸವಂ”ಕಾರ”, ಚಾವ್ಯಕೆ
    ಗುರುವೆನುತೆ ರುಚಿಸಿರೆ ಕುಡಿಯುವನಾತ ಪಾಯಸವ ।।

  25. ಅರೆ ಸುಗಳಿಗೆಯೆ ಬೀರಿ ತಂಪನು
    ಮರೆಯುಮಾಗುವ ಮಾರುತಂ ಮಿಗೆ
    ಮರಳಿ ಬಹನ್ನಿನ್ನಾವಗೆನ್ನುತೆ ತಿಳಿದರಾರೈ ಪೇಳ್|
    ಉರಿಸಿಯೇಂ ಕಾಳ್ಗಿಚ್ಚ ಭೋಗದು-(ಭೋಗದೆ+ಉದುರಿಸಿಯುಂ)
    ದುರಿಸಿಯುಂ ಪಾವುಗಳ, ಮರಗಳ (Reptiles and trees destroyed)
    ಕರುಣಿಸಂ ಕಡುವೇಸಗೆಯೊಳಗೆ ಹರಿಯುತೆಮ್ಮೆಡೆಗೆ||

  26. ಅರಸುಗಳಿಗಿದು ಸ್ವೈರ, ವಣಿಜಗೆ
    ಪರಮಲಾಭದ ಸಾರ, ಯೋಗೀ-
    ಶ್ವರರು ತತ್ವಾರ,ವಿದು ಮಂತ್ರಿಜನಕ್ಕೆ ಬದ್ಧಋಣ|
    ವಿರಹಿಗಳು ಕಂಗಾಲು, ವಿದ್ಯಾ-
    ಪರಿಣತರಲಂಕಾರಮಾತ್ರರು,
    ಗುರುವ ನಿತ್ಯಾನಂದನಂದನ (ಅಂದನ) ಬೋಧಭಾವಕಮೈ||

  27. ಅರಸುಗಳಿಗೆ ವಿಹಾರ, ದ್ವಿಜರಿಗೆ
    ಕರಗಲುದರದ ಬೊಜ್ಜು,ಯೋಗೀ
    ಶ್ವರರ ಮಂತ್ರಧ್ಯಾನ, ಮಂತ್ರಿಜನಕ್ಕೆ ಸಂವಾದ,|
    ವಿರಹಿಗಳ ಮಧುರಗತ, ವಿದ್ಯಾ-
    ಪರಿಣತರ ಭಾರತದ ಬೋಧೆಗೆ,
    ಮೆರೆವ ಪುಷ್ಪೋದ್ಯಾನವಂದದ ನೆಮ್ಮದಿಯ ತಾಣ ||

  28. ಅರಸುತಲೆಯುವ ಛಾತ್ರ ಜಾರುಗೆ,
    ಪರಮವೇದದ ಸಾರವಿಂಗುಗೆ,
    ಪರತರದ ಯೋಗಿಗಳ ತತ್ತ್ವಂ ತಪ್ಪುಗೆಂದೆನುತುಂ|
    ವಿರಹಿಗಳ ಬೆಂಗಾಡು, ವಿದ್ಯಾ-
    ಪರಿಣತರೆ ಮಂಕಾಗೆ, ಕಾವ್ಯಕೆ
    ಕುರುವೆನಿಸಿಹ ಗಮಾರದಾಸನು ರಚಿಸೆ ’ಸ್ವೈರತ’ವ||

  29. ಅರಸರೊಳಗತಿ ವೀರದ್ವಿಜರಿರೆ (Peshve, Shivaji)
    ಪರಮವೇದದ ಸಾರಚೂಷಿಸಿ (ಹೀರಿ),
    ವರಯತಿಗಳಿಂ (Samarth Ramadas swami) ತತ್ತ್ವವಿವರವ, ಮಂತ್ರಿಯಿಂ ಮತಿಯಂ|
    ವಿರಹಮನ್ನುಂ ವೀರತನದಿಂ (Bajirao I)
    ಪರಿಣತತೆಯಿಂ ಭಾವಿಸಿರದೊಡೆ
    ಭರತವರ್ಷವು ಶಂಕೆಯಿಲ್ಲದೆ ಉದ್ಧರಿಪುದೆಂತೈ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)