Jul 242011
ರೆಕ್ಕೆ ಬಂದುದು ಹಿಂದು ಧರ್ಮಕೆ
ಹಕ್ಕನಾಗಿರೆ ಮೊದಲ ರಾಜನು
ಬುಕ್ಕ ಕಂಪರು ಬೆನ್ನಿನನುಜರು ಸೊಂಟಕಟ್ಟಿರಲು ||
ಉಕ್ಕಿಸುತಲುತ್ಸಾಹವಿವರಲಿ
ರೊಕ್ಕವನು ಹೊಂದಿಸುತ ರಾಜ್ಯದ
ಟೆಕ್ಕೆಯನು ಹಾರಿಸಲು ಮಾಧವ ಸಾಯನರ ದೀಕ್ಷೆ || ೧ ||
ಪರುಠವಣೆಯ ಭರಾಟೆ ಸಾಗುತೆ
ಹರಡಿದವು ರಾಜ್ಯಾಂಗ ಗಡಿಗಳ –
ವರಿಗಳಾ ಮಟ್ಟಣಿಸಿ ಜಯದಿಂ ರಾಜ್ಯ ಬೆಳೆದೊರೆದು ||
ವರುಷವೆರಡೂವರೆಶತಂಗಳ
ವರೆಗು ಮೆರುಗಿದ ವಿಜಯನಗರವ
ಸಿರಿಯ ಸಂಗಮ, ಸಾಳುವರು, ತುಳುರಾಯರಾಳಿದರು || ೨ ||
ವಿಜಯನಗರದ ರಾಜಕುಲ ಸಾ –
ಮಜನು ಕೃಷ್ಣs ದೇವರಾಯನು
ಸುಜನ ಸುಚರಿತ್ರರನು ಮೆರೆಸಿದ ಸಕಲ ಸದ್ಗುಣನು ||
ಅಜರವಾಗಿಸಿತವನ ಹೆಸರನು
ಸುಜಲ ಯೋಜನೆ ಕಾರ್ಯಚರಣೆ ಖ –
ನಿಜದಿ ಬೆಳೆದಾ ಕಲೆಗಳೂ ಸಾಹಿತ್ಯ ಸಂಪದವು || ೩ ||
ಕಾಲ ಕ್ರಮದಲಿ ರಾಜ್ಯ ಮದದಿಂ
ಕೇಳರಿಯದಾ ಭೋಗ ಸುಖದಿಂ –
ದಾಳುವಾ ಶೌರ್ಯವನು ಮತ್ತೊಗ್ಗಟ್ಟಣೆಯ ಮರೆತು ||
ಕಾಲು ತೊಡರುವ ಮುಸಲ ರಾಜರ
ಹೇಳಹೆಸರಿಲ್ಲದವೊಲಡಗದೆ
ಶೂಲಕಿಟ್ಟರು ರಾಜ್ಯಸಿರಿಯನು ಮುಗಿಸುತಂಕವನು || ೪ ||
– ರಾಮಚಂದ್ರ