ಮಾಯಿಲನ ಸೋಲಿಸಿದ ಕೃಷ್ಣನು
ರಾಯ ತರಿದರಿಸಿದನಲಾ ವೈರಿಯ ಮನೋಬಲವ ||
ರಾಯನಂತರದಲವನನುಜನು
ಅಚ್ಯುತನು ಬಲು ಲಂಪಟನು ಬಹು
ಸಾಯಬಡಿದನು ಕ್ರೂರತನದಿಂ ರಾಜ್ಯಧರ್ಮವನು || ೧ ||
ತನ್ನ ಜನರೊಡೆ ಭೇಧ ಕೆದಕುತ –
ಲಿನ್ನಿತರ ಹಿರಿ ಪಥದಿ ಪಥಿಸದೆ
ಸನ್ನಿವಾತದ ಜೊರದವೋಲವನರಿಯ ಕರೆತಂದ ||
ಕನ್ನವಿಟ್ಟನು ತನ್ನ ಬೊಕ್ಕಸ –
ಕಿನ್ನು ತಗೆದಿಪ್ಪತ್ತು ಲಕ್ಷದ
ಹೊನ್ನನಿಬ್ರಾಹಿಮಗೆ ತೆತ್ತನು ಕಪಟ ಸ್ವಾರ್ಥದಲಿ || ೨ ||
ಮುಂದೆಯಾಳಿದ ರಾಮರಾಜನು
ಹೊಂದಣಿಸಿ ವೈರಿಗಳ ನಡುವೆಯೆ
ಕುಂದುಗಳ ವೈರಿಗಳ ಭೇಧವೆ, ರಕ್ಷೆಯೆಂ ತಿಳಿದು ||
ಮಂದಮತಿಯಾ ಗರ್ವದಮಲಲಿ
ನೊಂದ ಮುಸಲರ ಮತದುಪೇಕ್ಷೆಯು
ತಂದಿತಾ ವೈರಿಗಳನೊಟ್ಟಿಗೆ ರಾಜ್ಯದಂತಕನಂ || ೩ ||
ತಾಳಿಕೋಟಿಯ ಯುದ್ಧದಲ್ಲಿಯೆ
ಕಾಲ ಮುಗಿಯಿತು ರಾಮರಾಜನ
ಶೂಲಕಿಟ್ಟರು ಕಡಿದ ತಲೆಯನು ಮುಸಲ ಶತ್ರುಗಳು ||
ಬಾಳ ಭಯದಲಿ ಚೆದುರಿವೋಡಿದ
ಬೀಳುತೇಳುತ ಲಕ್ಷಮೀರಿದ
ಸೋಲಿನಲಿ ಮೃತ್ಯುವಿನ ತೆಕ್ಕೆಗೆ ಹಿಂದು ಸೈನಿಕರು || ೪ ||
ಬಿದ್ದ ಗಜವನು ನಾಯಿನರಿಗಳು
ಗದ್ದರಿಸಿ ಪೌರುಷದಿ ಕಿತ್ತುತ
ಜಿದ್ದ ತೀರಿಸೆ ಮುಕ್ಕುವಂತೆಯೆ ಪಂಪೆಯಾಯ್ತಕಟ ||
ಕದ್ದು ಲೂಟಿಯ ಮಾಡಿ ನಗರವ
ವೊದ್ದು ಕೆಡವುತ ಗುಡಿಗಳೆಲ್ಲವ
ನೆದ್ದ ಮತದಾಹಮ್ಮಿನಲಿ ಕಡಿದೋಡಿಸುತ ಜನರ || ೫ ||
ಜಗದಲತಿ ಶ್ರೀಮಂತ ನಗರವು
ಬಿಗಿದ ವಿಧಿಯತಿ ಕ್ರೂರ ಪೆಟ್ಟಿಗೆ
ಸೊಗದ ಕಥೆಗಳ, ಮುಗಿದ ಸ್ಥಾನದ ಬರಿಯ ಹೆಣವಾಯ್ತು ||
ತೆಗೆದ ವರ್ಷಗಳೊಂದೆರಡರಲಿ
ಮಿಗಿಲಿನೈಶ್ವರ್ಯಗಳ ಸರ್ಗವು
ಖಗ ಮೃಗಾದಿಗಳೋಡಿಯಾಡುವ ಬರಿಯ ಕಾಡಾಯ್ತು || ೬ ||
– ರಾಮಚಂದ್ರ
Ram, tumba chennagide 🙂
Soma – Thanks. To give the readers some relief, I shall not post anything further till we actually go too Hampe this weekend. 🙂
ರಾಮಚಂದ್ರರವರೇ, ಹಂಪೆಯ ಪಯಣದಿಂದ ಮೊದಲು ಮಾಡಿ ಹಂಪೆ ಪತನದವರೆಗಿನ ಎಲ್ಲಾ ಪದ್ಯಗಳನ್ನೋದಿದೆ ಬಹಳ ಶ್ರದ್ದೆಯಿಂದ ಪದ್ಯಗಳನ್ನು ಹೆಣೆದಿದ್ದೀರ. ಅದನ್ನೋದಿದವನಿಗೆ ಹಂಪೆಯ ಒಳಹೊಕ್ಕು ಅದರ ವೈಭವ ಮತ್ತು ಪತನಗಳನ್ನು ಕಣ್ಣಾರೆ ನೋಡಿದಂಥ ಅನುಭವವಾಯಿತು. ಹಂಪೆಯನ್ನು ನೋಡದೇ ಇಷ್ಟು ಸೊಗಸಾಗಿ ಬರೆದಿದ್ದೀರೆಂದ ಮೇಲೆ ನೋಡಿದ ಮೇಲೆ ಅದೆಷ್ಟು ಚೆನ್ನಾಗಿ ಮೂಡಿಬರುವುದೋ ಎಂದು ಎದುರು ನೋಡುತ್ತಿದ್ದೇನೆ. ಎರಡು ಸಂಗತಿಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಅದೇನೆಂದರೆ ಕೃಷ್ಣದೇವರಾಯನನ್ನು ಸಂಗಮ ವಂಶದವನೆಂದು ವರ್ಣಿಸಿದ್ದೀರ – ವಾಸ್ತವವಾಗಿ ಅವನದು ತುಳು ವಂಶ. ಮತ್ತು ವಿಜಯನಗರ ಸಾಮ್ರಾಜ್ಯವನ್ನು ಆಳಿದ್ದು ನಾಲ್ಕು ವಂಶಗಳು: ಸಂಗಮ, ಸಾಳ್ವ, ತುಳು ಮತ್ತು ಅರವೀಡು. ಕ್ರಮವಾಗಿ ಹಕ್ಕ-ಬುಕ್ಕರು, ನರಸಿಂಹ,ಕೃಷ್ಣದೇವರಾಯ ಮತ್ತು ಅಳಿಯ ರಾಮರಾಯ ಆ ವಂಶಗಳ ಪ್ರಮುಖ ದೊರೆಗಳು.
ಮಕರ – ಪದ್ಯಗಳನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ಈ ಬ್ಲಾಗ್ನಲ್ಲಿ ಬರೆದವರು ಸುಮಾರು ಎಲ್ಲರೂ ಶತಾವಧಾನಿ ಡಾ ರಾ ಗಣೇಶರ ಬಳಿ ಸ್ವಲ್ಪ ಮಟ್ಟಿಗೆ ಛಂದಸ್ಸು ಕಲಿತಿದ್ದೇವೆ (ತಪ್ಪಿದ್ದರೆ ನಮ್ಮದು – ಒಳ್ಳೆಯದಿದ್ದರೆ ಅದು ಗಣೇಶರ ಬಾಬ್ತು). ೩ – ೪ ತರಗತಿಗಳ ನಂತರ ಬರೆದುದ್ದನ್ನು ಹಂಚಿಕೊಳ್ಳಲೆಂದು ಈ ಬ್ಲಾಗನ್ನು ಶುರುಮಾಡಿದೆವು. ನೀವು ಇದನ್ನು ಹುಡುಕಿ ನಾವು ಬರೆದದ್ದೆಲ್ಲಾ ಓದಿರುವುದು ಬಹಳ ಸಂತೋಷದ ವಿಷಯ. ನಿಮ್ಮ ಕನ್ನಡಾಭಿಮಾನ ಪ್ರಶಂಸನೀಯ.
ಹಂಪೆಯನ್ನು ಅನೇಕ ವರ್ಷಗಳ ಕೆಳಗೆ ನೋಡಿದ್ದೆ. ಈಗ ಇನ್ನೊಂದು ಪಯಣ ಗೆಳೆಯರು ಕೂಡಿ ಹೋಗಿ ಬಂದಿದ್ದೇವೆ.
ಕೃಷ್ಣದೇವಯಾಯನ ವಂಶದ ಬಗ್ಗೆ (ಸಂಗಮ ಎಂದು)ಒಂದು ತಪ್ಪಿರುವುದು ನಿಜ. ಆದನ್ನು ಸರಿಮಾಡುತ್ತೇನೆ. ಅದು ಮೊದಲೇ ನನ್ನ ಗಮನಕ್ಕೆ ಬಂದಿದ್ದರೂ ಏಕೋ ತಪ್ಪಿ ಹೋಗಿದೆ. 🙂
ಈಗ ನಾನು ವಾಸವಾಗಿರುವ ಆಂಧ್ರ ಪ್ರದೇಶದಲ್ಲಿ ಅಷ್ಟಾವಧಾನಿಗಳ ಬಗ್ಗೆ ಕೇಳಿ ತಿಳಿದಿದ್ದೆ. ಹೈದರಾಬಾದಿನಲ್ಲಿ ಒಬ್ಬರು ಶತಾವಧಾನಿಗಳನ್ನು ನೋಡಿದ್ದೆ, ಅವರು ಸಹಸ್ರಾವಧಾನ ಕೂಡ ಮಾಡುವ ಪ್ರಯತ್ನದಲ್ಲಿದ್ದರು; ಕಾರಣಾಂತರದಿಂದ ಅದು ಈಡೇರಲಿಲ್ಲ. ಇಂಥಹವರು ನಮ್ಮಲ್ಲಿಲ್ಲವಲ್ಲ ಎಂದು ಯೋಚಿಸುತ್ತಿದ್ದಾಗ ಒಮ್ಮೆ ಡಾ!ಗಣೇಶ್‍ರವರ ಕಾರ್ಯಕ್ರಮವನ್ನು ಚಂದನ ಧಾರವಾಹಿಯಲ್ಲಿ ನೋಡಿ ಅವರ ಬಗ್ಗೆ ಅಭಿಮಾನ ಮೂಡಿತ್ತು. ನಿಮ್ಮಂಥಹ ಕವಿಗಳಿಗೆ ಮಾರ್ಗದರ್ಶನ ಮಾಡಿ ನೀವೆಲ್ಲರೂ ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಪ್ರಯತ್ನ ಮಾಡುತ್ತಿರುವುದು ನಿಮ್ಮ ಬ್ಲಾಗ್ ನೋಡಿದ ನಂತರ ತಿಳಿಯಿತು. ಶತಾವಧಾನಿ ಗಣೇಶರ ಬಗ್ಗೆ ಇದ್ದ ಗೌರವಾಭಿಮಾನಗಳು ಈಗ ನೂರ್ಮಡಿಯಾಗಿದೆಯೆಂದರೂ ಉತ್ಪ್ರೇಕ್ಷೆಯಾಗದೆಂದುಕೊಳ್ಳುತ್ತೇನೆ. ನಿಮ್ಮ ಪ್ರಯತ್ನವನ್ನು ಹೀಗೆ ಮುಂದುವರೆಸಿ, ಶುಭಹಾರೈಕೆಗಳೊಂದಿಗೆ.