May 122013
 

ಗರ,ದರ,ಸರ,ಕರ ಈ ಪದಗಳನ್ನು ಉಪಯೋಗಿಸಿ ಸಮುದ್ರ ಮಥನವನ್ನು ಕುರಿತು ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ಬರೆಯಿರಿ
(ಶ್ರೀ ಕೃಷ್ಣರಾಜ ಅವರು ಶತಾವಧಾನದಲ್ಲಿ ನೀಡಿದ ದತ್ತಪದಿ)

  46 Responses to “ಪದ್ಯಸಪ್ತಾಹ ೬೯: ದತ್ತಪದಿ”

  1. ಸರಸಾಗರಮಧ್ಯಸ್ಥಮ್ ಮಂದರಾಗಮಮಂಥನಮ್

    ರಸಶ್ರೀಕಂಠಕಂಠಸ್ಥಂ ರೇತ್ರಮಿಜ್ಯಕರಸ್ಥಲಮ್॥

    ಸರ = ಹಾಲು ರಸ = ವಿಷ ರೇತ್ರ = ಅಮೃತ ಇಜ್ಯ = ದೇವತಾ

    • ತಿದ್ದುಪಡಿ:

      ಸರಸಾಗರಮಧ್ಯಸ್ಥಂ ಮಂದರಾಗಮಮಂಥನಮ್

      ರಸಂಶ್ರೀಕಂಠಕಂಠಸ್ಥಂ ರೇತ್ರಮಿಜ್ಯಕರಸ್ಥಿತಮ್॥

      ಸರ = ಹಾಲು ರಸ = ವಿಷ ರೇತ್ರ = ಅಮೃತ ಇಜ್ಯ = ದೇವತಾ

      • ತಮ್ಮ ಉತ್ಸಾಹಭರಿತಯತ್ನಕ್ಕೆ ಧನ್ಯವಾದ. ಅಲ್ಪಕುಕ್ಷಿಯಾದ ಅನುಷ್ಟುಪ್ ಶ್ಲೋಕದಲ್ಲಿ ದತ್ತಪದಗಳನ್ನು ಅಳವಡಿಸುವ ಕಠಿನಕಾರ್ಯವನ್ನು ಕಯ್ಕೊಂಡುದಕ್ಕಾಗಿ ಅಭಿನಂದನೆಗಳು. ಆದರೆ ಔಚಿತ್ಯ ಮತ್ತು ಚಮತ್ಕಾರಕವಾದ ಅನಿವಾರ್ಯತೆಗೆಳಿಲ್ಲದೆ ವೃಥಾ ಅಪ್ರಸಿದ್ಧ ಮತ್ತು ದುರೂಹಪದಗಳನ್ನು ಪ್ರಯೋಗಿಸುವುದು ರಸಭಂಜಕ. ಹೀಗಾಗಿ ಸುಕರ-ಸಮುಚಿತಶಬ್ದಗಳಿಂದ ಮತ್ತೊಮ್ಮೆ ಈ ಪದ್ಯವನ್ನು ರೂಪಿಸಲಾದೀತೇ ಎಂದು ದಯವಿಟ್ಟು ನೋಡಿರಿ.

  2. ಚಂ || ಸರಸಿಜನಾಭನಾದಿಪುರುಷಂ ವರಕಚ್ಛಪರೂಹಿನಿಂದೆ ಸಾ
    ಗರತಳದಿಂ ಖಜಾದ್ರಿಗಿರಿಯಾಣ್ಮನನುದ್ಧರಿಸಲ್ಕೆ ಲೀಲೆಯಿಂ
    ಕರಪುಟದೊಳ್ ಕರಾಳವಿಷಮೀಂಟಿದನಯ್ಮೊಗನೞ್ತಿಯಿಂದಲಾ
    ದರದೊಳಗಾಯ್ತುಮಾಮಥನಮೀರ್ವರೊಳಾಮೃತಜನ್ಮದನ್ನೆಗಂ

    • ರೂಹು = ರೂಪ
      ಖಜ = ಕಡೆಗೋಲು (ಖಜಾದ್ರಿ = ಕಡೆಗೋಲಿನಂತೆ ಉಪಯೋಗಿಸಲ್ಪಟ್ಟ ಪರ್ವತ)
      ವಿಷಮೀಂಟಿದನ್ = ವಿಷಂ + ಈಂಟಿದನ್ (ಈಂಟು = ಕುಡಿ) – ವಿಷವನ್ನು ಕುಡಿದನು
      ಅಯ್ಮೊಗ = ಶಿವ
      ಕರಪುಟ = ಬೊಗಸೆ
      ಈರ್ವರೊಳ್ – ಸುರ ಮತ್ತು ಅಸುರರಲ್ಲಿ

    • ನಿಮ್ಮ ಈ ಪ್ರಯತ್ನವು ಸರ್ವಥಾ ಸ್ತುತ್ಯ. ಆದರೆ ಕೆಲವೊಂದು ಸವರಣೆಗಳಾಗಬೇಕು. ಉದಾ: ಅದ್ರಿ ಎಂದರೇ ಪರ್ವತವೆಂದು ಅರ್ಥ. ಮತ್ತೇಕೆ ಅದಕ್ಕೆ ಗಿರಿ ಎಂಬ ಇನ್ನೊಂದು ಶೈಲವಾಚಕಶಬ್ದ? ಉಳಿದುವನ್ನು ಮುಖತಃ ಹೇಳುವೆ. ಇಂದು ಸಂಜೆ ಹೇಗೂ ಸಿಗುವಿರಲ್ಲ!

      • ಮಾಸ್ಟರ್ ಜೀ
        ತೊಡರುಗಳಿಗೆ ಕ್ಷಮೆಯಿರಲಿ. ಚಂಪಕಮಾಲೆಯಲ್ಲಿ ಇದು ನನ್ನ ಮೊದಲ ಪ್ರಯತ್ನ. ಹಾಗಾಗಿ ಎಡಹುವ ಸಂಭವವು ಇದ್ದೇ ಇತ್ತು. ಆದರೆ ಚಿಂತೆಯಿಲ್ಲ. ಸವರಣೆಗಳನ್ನು ತಮ್ಮಿಂದ ತಿಳಿದುಕೊಂಡು ನಂತರದಲ್ಲಿ ಪದ್ಯವನ್ನು ಸವರಿಸುತ್ತೇನೆ.

  3. ಗರಗರ ಘೋರ ಗರ್ಜನದೊಳಂತರ ಮಂಥನಕಾವ ಕಾರಣಂ
    ದರದುರ ಜಗ್ಗುನುಗ್ಗಿನಲಿ ಸೇರಿರೆ ತೀರವ ಕಾಣ ಪೂರಣಂ
    ಸರಸದಲುಬ್ಬುತಬ್ಬಿನಲಿ ಲಾಸ್ಯದ ಲಾಲನೆ ತಂದ ಸಾಗರಂ
    ಕರಗಿದ ಮಂಜುಮೋಡಿಯಲಿ ದೂರದಿಗಂತದೆ ಕಂಡ ಸಂಗಮಂ ।

    • ಸಮುದ್ರಮಥನದ ಪ್ರಸ್ತಾವವೇ ಈ ಪದ್ಯದಲ್ಲೆಲ್ಲಿಯೂ ಬಂದಿಲ್ಲವಲ್ಲ!! ಜೊತೆಗೆ ಇಡಿಯ ಪದ್ಯದ ಭವವೂ ಸ್ಪಷ್ಟವಾಗುತ್ತಿಲ್ಲ. ದಯಮಾಡಿ ಸವರಿಸಿರಿ.

      • ನಮಸ್ತೇ ಗಣೇಶ್ ಸರ್,
        ದಡ ಮುಟ್ಟುವ ಪೂರ್ಣತೆಗಾಗಿ ನಿರಂತರ ಸಾಗುವ ಅಂತರಾಳದ “ಮಂಥನ”, ನಡುವಿನ ಸಂಭ್ರಮ / ಸಂಗಮಗಳ ಸಂಭವದ ವರ್ಣನೆಗೆ ಪ್ರಯತ್ನಿಸಿದ್ದು. ಸರಿಪಡಿಸಲು ದಯವಿಟ್ಟು ಸಹಾಯಮಾಡಿ.

        • ತಮಗಷ್ಟೇ ಅಲ್ಲದೆ ಎಲ್ಲ ಪದ್ಯಪಾನಿಗಳಿಗೂ ಈ ಮೂಲಕ ತಿಳಿಸುವುದೇನೆಂದರೆ ಅಭಿಜಾತಶೈಲಿಯ ಪದ್ಯರಚನೆಯ ಆರಂಭಿಕಸ್ತರದಲ್ಲಿರುವವರು ಯಾರೇ ಆಗಲಿ ಮೊದಲು ತಾವು ಬರೆಯಲಿರುವ ಪದ್ಯದ ಸಮಗ್ರತಾತ್ಪರ್ಯವನ್ನು ಎಲ್ಲ ರೀತಿಯಿಂದಲೂ ನಿರ್ದುಷ್ಟವಾಗಿರುವಂತೆ ಮತ್ತು ಅದರ ಅರ್ಥವು ನಿರ್ದಿಷ್ಟವಾಗಿರುವಂತೆ ಸ್ಪಷ್ಟಪಡಿಸಿಕೊಳ್ಳಬೇಕು. ಪದಗಳ, ಪ್ರಾಸಾನುಪ್ರಾಸಗಳ ಮೋಹದಲ್ಲಿ ಕೊಚ್ಚಿಹೋಗಬಾರದು. ಒಂದೇ ಪದ್ಯದಲ್ಲಿ ತುಂಬ ಸಂಕೀರ್ಣವಾಗಿರುವ ಭಾವಗಳನ್ನೂ ಅಸಂಖ್ಯವಿವರ-ವಿಶೇಷಗಳನ್ನೂ ಒಮ್ಮೆಲೇ ತುರುಕಲು ಕಾತರಿಸಬಾರದು (ಮೊದಮೊದಲು ನಾನೂ ಹೀಗೆ ಮಾಡಿ ಕೆಟ್ಟವನೇ; ಆಗ ನನಗೆ ಹೇಳುವ.ಕೇಳುವ ನಾಥರಿಲಿಲ್ಲ. ಹೀಗಾಗಿ ಬಹುಕಾಲ ತುಂಬ ಎಡವಿ ಎಡವಿ ಕಲಿತೆ. ಆದರೆ ಈಗಲೂ ಹಳೆಯ ಹೊಲಬುಗಳು ಅಳಿದಿಲ್ಲ; ಆಗೀಗ ಬಂದು ಕಾಡುತ್ತವೆ:-). ಸರಳವಾದ ಪದ್ಯಗಳನ್ನೇ ರಚಿಸಿ ಬಳಿಕ ಸಂಕೀರ್ಣಕ್ಕೆ ತೊಡಗಿದರೆ ಒಳಿತು. ಮುಖ್ಯವಾಗಿ ಪದಗಳ ದುಂದು ಅಕ್ಷಮ್ಯ. ಪದ್ಯದಲ್ಲಿ ಪ್ರತಿಯೊಂದು ಪದಕ್ಕೂ ಭಾವಕ್ಕೂ ಔಚಿತ್ಯ-ಸಾರ್ಥಕ್ಯಗಳು ಬೇಕು. ಅಲ್ಲದೆ ಅಸ್ಪಷ್ಟತೆಯು ಯಾವುದೇ ಕಲೆಯ (ಹೆಚ್ಚೇಕೆ, ಇಡಿಯ ಬದುಕಿನ) ಶತ್ರು. ಅಭಿಜಾತಕಲೆಗಂತೂ ಇದು ಮತ್ತೂ ಮಿಗಿಲಾದ ವೈರಿ.
          ಪದ್ಯವೊಂದನ್ನು ಬರೆದ ಬಳಿಕ ಕಠಿನಪದಗಳಿಗೆ ಬೇಕಾದರೆ ಟಿಪ್ಪಣಿ ಯುಕ್ತ. ಆದರೆ ಅದರ ಸರಳತಾತ್ಪರ್ಯಕ್ಕೇ ಟಿಪ್ಪಣಿ-ವ್ಯಾಖ್ಯಾನಗಳು ಬೇಕಾಗಿ ಬಂದರೆ ಅದು ಕಾವ್ಯದ ವೈಫಲ್ಯಕ್ಕೇ ಸಂಕೇತ. ಈ ದಿಶೆಯಲ್ಲಿ ಎಲ್ಲ ಪದ್ಯಪಾನಿಗಳೂ ಯತ್ನಿಸಿದರೆ ಒಳಿತು.
          “ಏಷ ಆದೇಶಃ ಏಷ ಉಪದೇಶಃ” ಎಂಬ ಧಾಟಿಯಲ್ಲಿ ನನ್ನೀ ಮಾತುಗಳು ಕಂಡಲ್ಲಿ ದಯಮಾಡಿ ಮನ್ನಿಸಬೇಕು. ಮುಖ್ಯವಾಗಿ ಮಹಾಕವಿಗಳ ರಸವತ್ಕಾವ್ಯಗಳೇ ನಮಗೆ ತಾರಕ. ಅವುಗಳ ಪ್ರೀತಿಪುರಸ್ಸರವಾದ ಸಾವಧಾನದ ವ್ಯಾಸಂಗವೇ ನಮಗೆ ನಿಸ್ತಾರದ ಮಾರ್ಗ.

          • ಧನ್ಯವಾದಗಳು ಗಣೇಶ್ ಸರ್,
            ನಿಮ್ಮ ಸಹಾನುಭೂತಿಯ ಸಂದೇಶಕ್ಕೆ ನಾನು ಚಿರಋಣಿ.ನನ್ನ ಕಾಡುತ್ತಿರುವ “ಅಸ್ಪಷ್ಟತೆ” ಅರ್ಥವಾಗಿದೆ. “ಮಂಥನ” ಶುರುವಾಗಿದೆ – ಗಟ್ಟಿಬೆಣ್ಣೆಯ ನಿರೀಕ್ಷೆಯಲ್ಲಿ ! (ಹೆಪ್ಪು ಸಾಲದೇನೋ?)

    • Request you to please get over with this morphological symmetry. Don’t let these ‘twisters’ shroud your vocabulary. Your verses will then be fine.

      • ಸುಮವಂ ಜೋಡಿಸಲಣಿಯಿಂ
        ಸಮದಿಂ ತಾನಾಗುದೈ ಬರಿಯಲಂಕಾರಂ ।
        ಕ್ರಮದಿಂ ಸುಮವಂ ಮನಸಂ
        ಗಮದಿಂದರ್ಪಿಸಲದುಂ ನಿಜಾರ್ಚನೆಯಹುದೈ ॥

        ಅಲ್ಲವೇ? ನಿಮ್ಮ ಆತ್ಮೀಯ ಸಲಹೆಗೆ ಧನ್ಯವಾದಗಳು, ಪ್ರಸಾದ್ ಸರ್.

  4. ಕಮಠಂ ಬೆನ್ಗರಡೊಡ್ಡೆ ಲೇಖನಿಕೆಮೇರುಕ್ಷ್ಮಾಭೃತಂ ದಲ್ ಭುಜಂ-
    ಗಮಹಸ್ತಂ ವೆರೆಳಾಗೆ ಕಾಲಪುರುಷಂ ಕ್ಷೀರಾಬ್ಧಿಯೊಳ್ ಮರ್ದನ-
    ಕ್ರಮಮಂ ಕ್ಷ್ವೇಡಸುಧಾಮಸೀಪ್ರಕಟನಂಗೈಯ್ಯಲ್ ಮಹಚ್ಛಾಂಕರ
    ಶ್ರಮಮುಂ ಜೈಷ್ಣವಮಾಯೆಯಾಸರಸಮುಂ ಸೇರಿರ್ಪುದೇ ಸುಂದರಂ

    ಕಮಠಂ = ಆಮೆ
    ಬೆನ್ಗರಡೊಡ್ಡೆ = ಬೆನ್ + ಕರಡು + ಒಡ್ಡೆ = ಬೆನ್ನೆಂಬ ಪುಸ್ತಕವನ್ನು ಒಡ್ಡಲು
    ಭುಜಂಗಮಹಸ್ತಂ ಬೆರಳಿರ್ದ ಕಾಲಪುರುಷಂ = ಆದಿಶೇಷನೇ ಹಸ್ತ ಮತ್ತು ಬೆರಳುಗಳಾಗಿರುವ ಕಾಲಪುರುಷನು
    ಕ್ಷ್ಮಾಭೃತಂ = ಪರ್ವತ
    ಕ್ಷ್ವೇಡಸುಧಾಮಸೀಪ್ರಕಟನಂ = ವಿಷ (ಕಪ್ಪು)ಮತ್ತು ಅಮೃತ(ಬಿಳಿಯ) ಮಸಿಯ ಪ್ರಕಟನೆಯನ್ನು (ಮಸಿಯನ್ನು ಶಾಯಿ ಯೆಂಬುವ ಅರ್ಥದಲ್ಲಿ ಬಳಸಿದ್ದೇನೆ)

    • ಪ್ರಿಯ ಸೋಮ, ಇದು ಸರ್ವಾತ್ಮನಾ ಅತ್ಯುತ್ತಮಪದ್ಯ, ಒಳ್ಳೆಯ ಶೈಲಿ ಮತ್ತು ಹೃದ್ಯಕಲ್ಪನೆಗಳಿಂದ ಕೂಡಿ ಹಳಗನ್ನಡದ ಹದವರಿತ ಪಾಕದೊಡನೆ ಎಲ್ಲರಿಗೂ ಮಾದರಿಯಾಗುವ ಹಾಗಿದೆ. ಅಭಿನಂದನೆಗಳು.

    • ಸಖನೇ ಕಾಲವದಾದುದಾನು ವಿಮೃಶಂ| ಗೈಯೆನ್ ಭವತ್ಪದ್ಯಮಂ
      ಮಖದೊಲ್ ಗೈಯುತೆ ಯತ್ನಮಂ ರಚಿಸಿರಲ್| ನೀ ಪ್ರೌಢ ಪದ್ಯಂಗಳಂ
      ರಖಮೇನ್! ಕಬ್ಬಮನರ್ಥಗೈಯಲಳಮೇಂ| ’ರಾಗ’ರ್ ಸಮಂ ಭಾಷೆಯಂ
      ನಖಮಂ ಕಚ್ಚುತಲೋದಿಕೊಳ್ವೆ ಬರಿದೇ| ನಾಲ್ಕಾರು ಸಂಪಠ್ಯದೊಳ್ (reciting)

  5. ಗರಲವಮೃತವು ವರ ಸದರದ
    ಪ್ಸರೆಯರೊಂದಿಗೆ ಲಕ್ಷ್ಮಿ ವಾರುಣಿ
    ಸುರಭಿ ಕೌಸ್ತುಭ ಚಂದ್ರವೈರಾವತವು ಜ್ಯೇಷ್ಠೆಯಳು|
    ಸರದಿಯೊಳು ಬರೆ ಪಾರಿಜಾತವು
    ಕರಕೆ ಬಿಲ್ಲೊಂದೋಲೆ ಛತ್ರವು (ಬಿಲ್ಲು, ಓಲೆ, ಕೊಡೆಗಳ ಹೆಸರುಗಳು ಸಿಗಲಿಲ್ಲ)
    ಪರಿಯಿನುಚ್ಛೈಶ್ರವವು ಶಂಖವು ತುಳಸಿ ಮಥನದೊಳು||

    • ಕ್ಯಾಟಲಾಗಾಯ್ತಲ್ಲವೇ ಇದು!
      ನಾಟ್ ಎ (ನಾಟೆ ಎಂದು ಸಂಧಿಯಾಗಿ ಆದಿಪ್ರಾಸವು ಸಲ್ಲುತ್ತದೆ:-)ಪೊಯೆಟಿಕ್ ಪ್ರಾಡಕ್ಟ್ ಎಂಬೆನು (ಶಿಥಿಲದ್ವಿತ್ವವಿಲ್ಲಿದೆ:-)
      ವಾಟ್ ಎ ಮಾರ್ವೆಲ್ಲೆನ್ನುವಂದದೆ ರಚಿಸಿ ಬೇರೊಂದಂ!!

    • ಗೋಟುಪದ್ಯವಿದೆಂದು ಜರೆದಿರೆ?
      ಸಾಟಿಯುಂಟೇ ನಿಮ್ಮ ಟೀಕೆಗೆ!
      ನಾಟಿತೆಗೆಯುವೆನೀಗ ನೋಡಿರಿ ಬೇರನೊಂದಂ ನಾಂ|

      ಮನದೆ ಮಥಿಸಲು ಶಾಸ್ತ್ರಿತನದಿಂ
      ಹೊನಲಿನೊಲು ಪರಿಪರಿಯುವಂದದೆ
      ನೆನೆದ ವಿಷಯದ ಪಾರ್ಶ್ವವೆಲ್ಲವು ಹಿತದಹಿತದವು ತಾವ್|
      ಕನಲಿ ಕಡೆದರೊ ಮಂದರವ ತಾವ್
      ಬಿನದದಿಂದಲೊ ದೇವ-ದೈತ್ಯರು
      ಜನಿತವಾದವು ಸೌಮ್ಯ-ಘೋರದವೆನಿತೊ ಧಾತುಗಳು||
      (ಇದು ದತ್ತಪದರಹಿತ. ಮತ್ತೊಂದನ್ನು ಬರೆಯುವೆ.)

  6. ಅಡಂಗದ ಮಹಾರವಂ ಮೊರೆದುದಾ ಮಹಾಸಾಗರಂ
    ಮಡಂಗಿದಗರಾಜನೇ ಕಡೆವ ಮಂಥಮಾ ಮಂದರಂ
    ಬೆಡಂಗಿನದನೊತ್ತಿ ಸುತ್ತಿದಪ ರಜ್ಜು ದರ್ವೀಕರಂ
    ಕಡಂಗುತ ಸುರಾಸುರರ್ ಕಲೆಯೆ ಬೂವಿಬಾನ್ ದೂಸರಂ

    ದರ್ವೀಕರ- ಹಾವು

    • ನೆಗಳ್ದುದಿದು ನಿರ್ನೆರಂ ಕವಿತೆ ಪೂಣ್ದು ಪೃಥ್ವೀಭರಂ!!!

      • ಮಮಾತ್ಮಜನ ನಾಮದಿಂ ಮೆರೆವ ಛಂದಮಾನಂದದಂ

    • ಪೃಥ್ವೀ ಚೆನ್ನಾಗಿದೆ…ಸರ ಸರನೆ ಹರಿಯುವ ಹಾವು, ಸುರಾಸುರರು ಎಲ್ಲ ಬಂದಿದ್ದರೂ ದತ್ತಪದಿಯ “ಸರ” ಬಂದಿಲ್ಲ :-). ಇದನ್ನು ಸರಗಳ್ಳತನವೆನ್ನೋಣವೇ ಅಥವಾ ಬಂಗಾರದ ಬೆಲೆ ಜಾಸ್ತಿಯಾಗಿರುವುದರಿಂದ, ಸರ ತರುವುದು ಕಷ್ಟವಾಗಿದೆಯೇ ? 🙂

      • ಅರರೆ ನುಸುಳಿದ್ದು ಗೊತ್ತೇ ಆಗ್ಲಿಲ್ಲ. Good catch 🙂

        ಕಡಂಗುತ ಸುರಾಸುರರ್ ಕಲೆಯೆ ಬೂವಿಬಾನ್ ದೂಸರಂ

        ಭೂಮಿ ಆಕಾಶ ಧೂಳಿನಿಂದ ದೂಸರಿತವಯಿತೆಂಬ ಭಾವ

      • ’ಭುವಿ’, ’ಬುವಿ’ ಕೇಳಿದ್ದೆ. ’ಬೂವಿ’ ಕೇಳಿರಲಿಲ್ಲ. ಇದಕ್ಕೆ ಹತ್ತಿರದ ಪದ ನಾನು ನೋಡಿದ್ದೆಂದರೆ, ಭೈರಪ್ಪನವರ ದಾಟು ಕಾದಂಬರಿಯಲ್ಲಿ ’ಬೂವ’ 😉

    • ತೊಡಂಕೆಸಗಲಾಟದೊಳ್ ಮುರಳಿಯೆಂಬ ಮುತ್ತಯ್ಯ ತಾನ್
      ಗುಡುಂಗಿಸುತೆ ಚೆಂಡನುಂ ಗಳಿಸೆ ಖ್ಯಾತಿಯಂ ’ದೂಸರಂ’|
      ತೊಡಂಕಿರದು ಕಬ್ಬದೊಳ್ ಸಿರಿಯಕಾಂತನುಂ ’ದೂಸರಂ’
      ತಡಂಕುತಲಿ ಕೋಶಮಂ ಪುಡುಕಲಂತೆವೋಲ್ ಶಬ್ದಮಂ||

      • ಪ್ರಸಾದು
        ತಮ್ಮ ಪದ್ಯದ ಅರ್ಥ ಸ್ಪಷ್ಟವಾಗ್ತಿಲ್ಲ. ಅಲ್ಲದೆ “ತಡಂಕು” ಪದವನ್ನು ಎಲ್ಲಿ ನೋಡಿದಿರಿ.

        ಪುಡುಂಕಿ ತಡಕಾಡೆಮಾಂ ಬರಿದೆ ಪೊಳ್ಳು ಶಬ್ದಂಗಳಂ
        ತೊಡಂಕಿರದದೆಂದಿಗಂ ದೊರೆಯೆ ತೊಟ್ಟ ಸಬ್ದಾರ್ಥದೊಳ್

        🙂

      • Muttaiah Muralidharan is famous for his Doosra. You too have used the word doosaraM. So I have likened you to him.
        taDaMku is derived from taDaku/ taDakADu.
        ನಾನು ಹೇಳಿರುವುದೂ ಅದೇ; ನಿಮ್ಮ ಪದ್ಯಗಳಲ್ಲಿ ಏನೂ ತೊಡಕುಗಳಿರವು ಎಂದು.

  7. ಸಮುದ್ರಮಥನ ಕಾಲದಲ್ಲಿ ಬಲಿಯು ರಾಕ್ಷಸರಾಜನಾಗಿದ್ದನು.
    ನೃಸಿಂಹಾವತಾರವು ಕೂರ್ಮಾವತಾರದ ನಂತರ ಪರಿಗಣಿತವಾಗಿದ್ದು ಹೇಗೆ?

    ವೈರೋಚನಿರ್ಯುಯುಧೇ ಸರಕಾಕರಸಂಗರೇ
    ಕಥಂ ದೈತ್ಯೋದರಛೇತ್ತಾ ದೌಲೇಯಮನುವರ್ತತೇ ॥

    • ಇಲ್ಲಿಯ ಛಂದಸ್ಸು ಮತ್ತು ವ್ಯಾಕರಣಗಳ ಬಗೆಗೆ ಮತ್ತೊಮ್ಮೆ ಗಮನವಿಟ್ಟು ತಿದ್ದಿರಿ.

      • ಛಂದಸ್ಸು ತಿದ್ದಿದ್ದೇನೆ. ಕ್ಷಮಿಸಿ, ವ್ಯಾಕರಣ ತಪ್ಪು ತಿಳಿಸಿ.

        ಸಮುದ್ರಮಥನ ಕಾಲದಲ್ಲಿ ಬಲಿಯು ರಾಕ್ಷಸರಾಜನಾಗಿದ್ದನು.
        ನೃಸಿಂಹಾವತಾರವು ಕೂರ್ಮಾವತಾರದ ನಂತರ ಪರಿಗಣಿತವಾಗಿದ್ದು ಹೇಗೆ?

        ಪ್ರಹ್ಲಾದಪೌತ್ರೋ ಯುಯುಧೇ ಸರಕಾಕರಸಂಗರೇ
        ಕಥಂ ದೈತ್ಯೋದರಛೇತ್ತಾ ದೌಲೇಯಮನುವರ್ತತೇ ॥

  8. क्षीरसागरमध्यस्थममृतं दरनाशकम्।
    प्राप्तुं सरभसं चक्रुर्मथनं ते भयक्ङरम्॥

  9. ಸ್ವಾಗತಂ ಸೂರ್ಯಾಯ ಮಹತೇ ಮಹಸೇ ಚ:-) ಭವತ್ಪರಿಚಯಕುತುಕೋsಸ್ಮಿ ಚ |

    ಅಲ್ಪಕುಕ್ಷಿತಯಾ ಖ್ಯಾತಾಚ್ಛ್ಲೋಕಾದ್ಭಾವೋsಯಮಂಜಸಾ|
    ವೃತ್ತಾಂತರಗತೋ ನೂನಂ ಪ್ರಾಪ್ನುಯಾತ್ಸುಷಮಾಂ ತಮಾಮ್||

    • ರಾಷ್ಟ್ರಿಯಸಂಸ್ಕೃತಸಂಸ್ಥಾನಸ್ಯ ಶೃಂಗೇರೀಪರಿಸರೇ ಶಾಸ್ತ್ರಿದ್ವಿತೀಯವರ್ಷೀಯಃ ಛಾತ್ರಃ।
      ವೃತ್ತಾಂತರೇ ಕೃತಪ್ರಯತ್ನೋಸ್ಮಿ-
      ಕ್ಷೀರಸಾಗರಗತಾ ಲಭೇತ್ಸುಧಾ
      ಯಾ ಚ ಮೃತ್ಯುದರನಾಶಕಾರಿಣೀ।
      ಇತ್ಯಭೀಪ್ಸಿತಸುಧಾರಸಪ್ರದಂ
      ತತ್ಸಮುದ್ರಮಥನಂ ಭಯಂಕರಂ॥

      • ಇದಾನೀಂ ಪದ್ಯಮನವದ್ಯಮಜನಿ:-)
        ಭವತ್ಪರಿಚಯೇನ ತುಷ್ಟೋsಸ್ಮಿ

  10. ಸಾಗರದೆ ಮೇರುಪರ್ವತಕೆ ಸರ್ಪವಸುತ್ತಿ
    ತೂಗಿದರಸುರಸುರರ್ ಸುಧೆಯಾಸೆಗೆ|
    ಬಾಗುತಿರೆಶಿಖರಸರಸರನೆಂದು ಕೂರ್ಮನೊಲ್
    ವೇಗದಿಂ ವಿಷ್ಣು ಶಂಕರನಾದನು|

    ಮಥನಕಾಲದಲ್ಲಿ ಶಿಖರವು ಆಧಾರವಿಲ್ಲದೆ ಬಾಗಿರಲು, ವಿಷ್ಣುವು ಆಮೆಯ ರೂಪದಲ್ಲಿ ಬಂದು ಮಂಗಳಕಾರಕನಾದನು….

  11. Story: Indra’s indiscretion in receiving the garland gifted by Durvasa (instead of retaining it, he gives it to his airavata, who just tosses it), causes the Gods to be cursed by the sage. They have to intone for it by performing samudramathana.

    ಮುನಿಯು ನೀಡಿದ ಪೂಸರವನಿಂ
    ದ್ರನು ಹಸಾದದೆ ಕೊಳದೆ ಕರದೊಳ
    ದನು ಧವಲಗಜಕೀಯಲದು ಸೊಂಡಿಲೊಳು ಚಿಮ್ಮಿಸಿರಲ್|
    ಮುನಿಯ ಶಾಪದೆ ಭಾಗ್ಯಶಕ್ತಿಯ
    ಧನವು ಕಳೆಯಲರೋಗರದರಂ
    ನೆನವಿನಲ್ಲಿಯೆ ಮುಳುಗುತೇಳುತ ಕಡೆಯೆ ಮಂದರವಂ||

    • ಅಮೃತಮಥನಕ್ಕೆ ಒಳ್ಳೆಯ ಹಿನ್ನೆಯನ್ನೇ ಒದಗಿಸಿದ್ದೀರಿ. ಧನ್ಯವಾದಗಳು.

  12. ಸಂಗರವ ಬಿಟ್ಟಸುರರು ಸರಸದಿಂ ಕರಪಿಡಿದು
    ಸಂಗಡವೆ ಮಂಥಿಸಲು ಪಾಲ್ಗಡಲನು |
    ಇಂಗಿತವು ಮಹಿಧರನ ಸುರೆಯನುಣ್ಣಿಪೆನೆಂಬ
    ಸಂಗಡಿಸಿತೈ ಸುರರದೃಷ್ಟದಿಂದ ||

    • ೧) ಬಿಟ್ಟಸುರರು – ೬ ಮಾತ್ರೆಯಾಯ್ತು. ಬಿಟ್ಟಸುರರ್ಸರಸದಿಂ (ಶಿ.ದ್ವಿ) ಎಂದರೆ ಆದೀತು
      ೨) ಉಣ್ಣಿಪೆ?

  13. ಸಾಗರವ ಮಥಿಸಲೆನೆ ದೇವದಾನವರೆಲ್ಲ
    ಸಾಗಿ ಮಂದರನನ್ನೆ ಮಂತು ಮಾಡಿ |
    ವೇಗದಿಂ ಸರಸರನೆ ಕಡೆಯಲ್ಕೆ ಗರ್ಭದಿಂ
    ದಾಗ ಪೊರಮಟ್ಟುದೈ ಭೀಕರವಿಷಂ ||

    • ಒಪ್ಪವಾದ ಪದ್ಯ; ಧನ್ಯವಾದಗಳು.

    • ಉಂಟು ಗಾಥೆಗಳೆಮ್ಮ ಸತ್ಪರಂಪರೆಯೊಳಗೆ
      ನಂಟಿಹವು ಪರವಪರ ವಿಷಯವಲ್ಲಿ|
      ಈಂಟೆ ಹರ ಗರಲ ಮಾತ್ರಮೆ ಬಂತೆ ಮಂದರದೆ
      ಜಂಟಿಯೊಳೆ ಬಂದವಮೃತಾದಿಗಳ್ ಮೇಣ್||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)