ಪ್ರಯತ್ನ ನಿತಾಂತಸ್ತುತ್ಯರ್ಹ. ಆದರೆ ಎರಡನೆಯ ಹಾಗೂ ಮೂರನೆಯ ಪಾದಗಳಲ್ಲಿ ಮಾತ್ರೆಗಳ ಲೆಕ್ಕದ ಮಟ್ಟಿಗೆ ಸರಿಯಾಗಿದ್ದರೂ ಗತಿಯ ಹದ ತಪ್ಪಿದೆ; ಯತಿವಿವೇಕವು ನಶಿಸಿದೆ. ಈ ಬಗೆಗೆ ತುಸು ಗಮನಿಸಿರಿ.
ಪೂರ್ವಾರ್ಧದಲ್ಲಿ ಅರ್ಥಸ್ಪಷ್ಟತೆ ಇಲ್ಲ. ನಿಮ್ಮ ಕಲ್ಪನೆಯನ್ನುಳಿಸಿಕೊಂಡು ಸವರಿಸಿ. ಇಲ್ಲಿ ನಾನು ಆ ಪೂರ್ವಾರ್ಧವನ್ನು ಬಿಟ್ಟು, ನಿಮ್ಮ ಉತ್ತರಾರ್ಧವನ್ನು ಪೂರ್ವಾರ್ಧ ಮಾಡಿಕೊಂಡು, ಉತ್ತರಾರ್ಧವನ್ನು ರಚಿಸಿದ್ದೇನೆ.
ಸುರನದಿಯ ಸೋದರಿಯರೆಲ್ಲರು
ಶರಧಿರಮಣನ ವಿರಹವಿಧಿಯನು
ಹರಿಸೆ ಹರಸಿಹ ಸೂರ್ಯನೈ, ದಿಟ ಮಳೆಯು ಮುದಮಾಯ್ತು|
ಸುರಿದೊಡಮಿತದ ನೀರ ನದಿಗಳು
ಭರಿಸದಬ್ಧಿಯು ಪುನ್ನಮಿಯದೈ-
ತರಲು ಭೋಗದಿನುರುಬಿ ಮೊರೆಯುವ ಪರಿಯನೇನೆಂಬೆಂ!!
ಪ್ರಿಯ ಪ್ರಸಾದು, ತುಂಬ ಧನ್ಯವಾದ; ನನ್ನ ಕೆಲಸವನ್ನು ತುಂಬ ಹಗುರ ಮಾಡಿದ್ದೀರಿ.
ಒಂದೇ ಸಣ್ಣ ತಿದ್ದುಪಡಿ. ಅನಲ ಅವರೂ ನೀವೂ “ವಸುಧಳ್’ ಎಂದು ವಸುಧಾ ಎಂಬ ಸಂಸ್ಕೃತಪದದ ಕನ್ನಡರೂಪವಾಗಿ ಬಳಸಿದ್ದೀರಿ. (ಇದು ಈಚಿನ ತೆಲೆಮೊರೆಯಲ್ಲಿ ಬಂದಿರುವ fad.ಮುಖ್ಯವಾಗಿ ಆ-ಕಾರಾಂತಸ್ತ್ರೀಲಿಂಗದ ಪದಗಳಿಗೆ ಸಂಬಂಧಿಸಿದೆ.ಹೋಲಿಸಿರಿ: ರಾಧಾಳು, ಸೀತಾಳಿಗೆ, ವನಜಾಳಿಂದ ಇತ್ಯಾದಿ ವಿಕಾರಗಳು. ಇವೆಲ್ಲ ಕ್ರಮವಾಗಿ ರಾಧೆಯು, ಸೀತೆಗೆ, ವನಜೆಯಿಂದ ಎಂದೇ ಆಗಬೇಕು.ಆದರೆ ಇದು ಇಂದಿನ ಗದ್ಯದಲ್ಲಿ ಸರಿಯಾಗಿ ಉಳಿದಿಲ್ಲ. ಪದ್ಯದಲ್ಲಿಯಾದರೂ ನಾವು, ಕನಿಷ್ಠಪಕ್ಷ ಅಂಕಿತನಾಮವಲ್ಲದ ನಾಮಪದಗಳಿಗೆ (nouns that are not names of people) ಶುದ್ಧಗನ್ನಡದ ವ್ಯಾಕರಣಬದ್ಧಪದಗಳನ್ನು ಬಳಸೋಣ. ಹೀಗಾಗಿ ಇಲ್ಲಿ “ವಸುಧೆ” ಎಂಬುದೇ ಯುಕ್ತ. ಇಂಥ ಪ್ರಮಾದಗಳನ್ನು ಇನ್ನೂ ಅನೇಕ ಪದ್ಯಪಾನಿಗಳು ತಿಳಿದೋ ತಿಳಿಯದೆಯೋ ಮಾಡುತ್ತಿದ್ದಾರೆ. ಆದುದರಿಂದ ಅವರಿಗೆಲ್ಲ ಈ ಮೂಲಕ ಎಚ್ಚರಿಕೆಯಾಗಲೆಂದೂ ಆಶಿಸುವೆ.
ಮಾನನೀಯ,
ನಿಮ್ಮ ಕೆಲಸವನ್ನು ನಾನು ಹಗುರಾಗಿಸಿಲ್ಲ; ನಾನು ಸುಮ್ಮನಿದ್ದಿದ್ದರೆ, ಇಷ್ಟೇ ಅಕ್ಷರಗಳಲ್ಲಿ ಅನಲರಿಗೆ ಇನ್ನೂ ಚೆನ್ನಾಗಿ ಬೋಧಿಸುತ್ತಿದ್ದಿರಿ. ಆನುಷಂಗಿಕವಾಗಿ ಒಂದು ಪಾಠ ಕಲಿತಂತಾಯಿತು. ಕೃತಜ್ಞತೆಗಳು.
ಮತ್ತೊಂದು ಕಲ್ಪನೆ:
ದುರ್ಮತಾಂಧರ ದಾಳಿಯಳಿಯಲು
ಶರ್ಮದಸನಾತನತೆಯುಳಿಯಲು
ಧರ್ಮದೀಕ್ಷೆಯನಾಂತು ವಿದ್ಯಾರಣ್ಯಮುನಿವರ್ಯಂ |
ನಿರ್ಮಿಸಲು ಸಂಕಲ್ಪಿಸಿರೆ ಚಿ-
ತ್ಕರ್ಮಿ ಸಾಮ್ರಾಜ್ಯವನು,ಶಿವೆ ತಾ-
ಯ್ಕೂರ್ಮೆಯಿಂ ಕರೆದಿರ್ದ ಹೊನ್ನಿನ ಮಳೆಯು ಮುದವಾಯ್ತು ||
“ಮಳೆಯು ಮುದವಾಯ್ತು” ಎಂಬಲ್ಲಿ ಕೇವಲ ಮುಗಿಲ ಮಳೆಯಲ್ಲದೆ ಮತ್ತೂ ಬಗೆಬಗೆಯ
ಸಾಧ್ಯತೆಗಳಿವೆಯೆಂಬುದರತ್ತ ಪದ್ಯಪಾನಿಗಳ ಬಗೆಯನ್ನು ಸೆಳೆಯಲು ವಿದ್ಯಾರಣ್ಯರು ಭುವನೇಶ್ವರಿಯ ಅನುಗ್ರಹದಿಂದ ಸುರಿಯಿಸಿದರೆನ್ನಲಾದ ಹೊನ್ನಿನ ಮಳೆಯ ಪ್ರಸ್ತಾವವನ್ನಿಲ್ಲಿ ತಂದೆ. ಇದೇ ರೀತಿ ರಸಿಕರು ಮುತ್ತಿನ ಮಳೆ, ಮಾತಿನ ಮಳೆ, ಹೂವಿನ ಮಳೆ, ಚಪ್ಪಾಳೆಗಳ ಮಳೆ; ಹಾಗೂ ವಿಕಟಕವಿಗಳು ಕೊಳೆತ ತೊಮೇಟೊ, ಮೊಟ್ಟೆಗಳ ಮಳೆಯ ವರೆಗೆ ಏನನ್ನೂ ಸುರಿಸಬಹುದು:-)
ಸೋಮ
ಕ್ರೂರನಖಿ ಎಂದು ಹಾಕಿದರೆ ಒಳಿತು.
ಶತ್ರುಯೂಥಪರಕ್ತಮಂ ಎಂದು ಹಾಕಿದರೆ ಶಬ್ದಮೈತ್ರಿ.ಮತ್ತು ಅರ್ಥಸ್ಫೋಟ ಉತ್ತಮವಾಗುತ್ತೆ ಅಂತ ನನಗನ್ಸುತ್ತೆ.
ಕುಂಭ ಎಂದರೆ ಆನೆಯ ನೆತ್ತಿ/ಹಣೆಯ ಮೇಲಿರುವ ಎರಡು ಉಬ್ಬು/ಗುಭುಟುಗಳು. ಚಿತ್ರಗಳಲ್ಲಿ ಸಿಂಹವನ್ನು ಆ ಕುಂಭವನ್ನು ತನ್ನ ಪಂಜದಿಂದ ಬಗಿಯುವಂತೆ ತೋರಿಸಿರ್ತಸ್ರೆ ನಿಜ. ಆದರೆ. ಅಲ್ಲಿ ಹೆಚ್ಚು ರಕ್ತಸ್ರಾವವಾಗುವುದೇ ಇಲ್ಲ. ಆದ್ದರಿಂದ ರಕ್ತವನ್ನು ನೆಕ್ಕಬಹುದೇ ಹೊರತು ಹೀರುವಷ್ಟಿರೋದೇ ಇಲ್ಲ 🙂 ಪೊಯೆಟಿಚ್ ಲೈಸೆನ್ಸ್ ಎಂದು ಅನ್ಕೋಬಹುದು.
ಕುಂಭದ ಬದಲು ಗಂಡ ಹಾಕಬಹುದು. ಗಂಡ ಎಂದರೆ ಕೆನ್ನೆ. ಅಲ್ಲಿಂದರಕ್ತ ಅಮೋಘವಾಗಿ ಚಿಮ್ಮುತ್ತೆ. ನ್ಯಾಯವಾಗಿ ಬೆಳೆದ ಆನೆಯನ್ನು ಸಿಂಹಗಳು ಬೇಟೆಯಾಡುವುದೇ ಇಲ್ಲ ಈಗಿನ ಕಾಲದಲ್ಲಿ. It is too risky for the lion and pretty much impossible. So all of this is poetic license 🙂
ನೋಡಿದೆಯ. ರಾತ್ರಿ ಅವೇಳೆಯಲ್ಲಿ ಕೂತು ವ್ಮರ್ಶಿಸಿದರೆ ಹೀಗೆ ಅಚಾತುರ್ಯವಾಗೋದು. ಪ್ರಾಸದ ವಿಚಾರ ಗಮನಕ್ಕೆ ಬರಲೇ ಇಲ್ಲ. ಗಣೇಶರು ಪದ್ಯವನ್ನು ಸೈಯೆಂದಾಯಿತು. ಆದರು ನನ್ನದೊಂದು ತಗಾದೆ ಇದೆ. ಸಂಸ್ಕೃತದಲ್ಲಿ ನಖಿನ್ ಎಂದರೆ ಸಿಂಹ. ಎಂದಮೇಲೆ ಕ್ರೂರನಖಿ ಎಂದು ಕನ್ನಡದಲ್ಲಾಗಬೇಕಲ್ಲವೆ. ಕ್ರೂರನಖ ಪದ ಹೇಗೆ?
ನಖಃ ಎಂದರೆ ಸಿಂಹವೆಂಬ ಅರ್ಥವನ್ನೂ ಆಪ್ಟೆ ಕೋಷದಲ್ಲಿ ಕೊಟ್ಟಿದೆ, ಅಲ್ಲದೆ ಹಳಗನ್ನಡ ಬಳಕೆಗೆ ಮಾರ್ಗದರ್ಶಿಯಾಗಿರುವ ರನ್ನನ ಗಧಾಯುದ್ಧದಲ್ಲಿ ‘ಉಗ್ರನಖಂ’ ಎಂಬಬಳಕೆ ಸಿಂಹಕ್ಕೆ ಬರುತ್ತದೆ, ಇದನ್ನು ಆಧಾರವಾಗಿಟ್ಟು ‘ಕ್ರೂರನಖಂ’ ಎಂದು ಮಾಡಿದೆ. ರನ್ನನ ಪದ್ಯನೋಡಿರಿ-
ರನ್ನನ ಉಗ್ರನಖ ಪ್ರಯೋಗದ ಆಧಾರದಮೇಲೆ ಕ್ರೂರನಖದ ವ್ಯುತ್ಪತ್ತಿ ಸಾಧು.
For clarification purposes, which Apte dictionary did you refer to? Is it the sanskrit to English version or the English to sanskrit version? The latter only has ” pajcanakhaH”. due to space shortage the pajca and nakhaH have been printed in different lines.
this is from Sanskrit to English dictionary (book). Could not see this available in the online dictionary
it states nakhaH has multiple meanings and lion is one of them
ಅಡ್ಡಿಯಿಲ್ಲ; ಭಾರತೀಯಕವಿಸಮಯವೇ ಸೋಮನ ಬೆಂಬಲಕ್ಕಿದೆ:-)
ನನಗಂತೂ ಪದ್ಯವು ಅನವದ್ಯವಾಗಿ ಕಂಡಿದೆ. ಒಳ್ಳೆಯ ಶೈಲಿ; ವ್ಯುತ್ಪಾದಕಪದಪದ್ಧತಿ. ಪ್ರಿಯ ಸೋಮ, ಇಂಥ ಪದ್ಯಗಳನ್ನು ಮತ್ತೆ ಮತ್ತೆ ಬರೆದು ನಮ್ಮ ಮುದದ ಮಳೆಯನ್ನು ಹೆಚ್ಚಿಸು.
ಬಿಸಿಲಿನ ಬೇಗೆಯ ತಾಳದೆ ಮೊರೆಯಿಡುವ ಭುವಿಯನ್ನು ನೋಡಿ ಮೋಡವೊಂದು ಬಿಳಿವರ್ಣದಿಂದ ಕಪ್ಪುವರ್ಣ ಕ್ಕೆ ತಿರುಗಿ ಭುವಿಗೆ ಕೊಡೆ ಹಿಡಿಯಲು, ಸೂರ್ಯ ರಶ್ಮಿಗೆ ಕತ್ತಲಾವರಿಸಿತು ಎಂಬುದು ಮೊದಲ ಪಧ್ಯ.
ಭೂಮಿ ಹಚ್ಚ ಹಸಿರಿನ ಸೀರೆಯನ್ನುಡಬೇಕೆಂದು ಬಯಸಿದಾಗ ವರುಣನು ಮೆಚ್ಚಿ ಮಳೆಗರೆದ, ಆ ಮಳೆಯಲ್ಲಿ ಮೈಮರೆತು ಸ್ನಾನ ಮಾಡಲು, ಋತು ದೇವಿ ವಸುಧೆ ಬಯಸಿದ ವಸ್ತ್ರವನ್ನು ತೊಡಿಸಿದಳು, ಆ ಮಧುವಣಗಿತ್ತಿಯ ಸೊಭಗ ನೋಡಲು ಮಳೆಯು ಮುದವಾಯ್ತು ಎಂಬುದು ಎರಡನೇ ಪಧ್ಯ…
1. ಎರಡನೆಯ ಪಾದ ’ನುತಾಂ’ – ಲಗಂ
2. ನಾನು ಹಿಂದೆ ಹೇಳಿದಂತೆ ಸಿಂಹ/ಗಜ/ಶರಭಪ್ರಾಸಗಳು ಮಿಶ್ರವಾಗಿವೆ
3. ನೀರಧೆ ತಪ್ಪು; ನೀರದೆ ಎಂದಾಗಬೇಕು
4. ಉತ್ತರಾರ್ಧದಲ್ಲಿ ಅರ್ಥಸ್ಪಷ್ಟತೆ ಇಲ್ಲ – ನಾಲ್ಕನೆಯ ಪಾದದ ಕೊನೆಯ ಗಣದಲ್ಲಿ ಹೆಚ್ಚು ಮತ್ರೆಗಳಿವೆ; ಆರನೆಯ ಪಾದಾದಿಯಲ್ಲಿ ವಿಸಂಧಿದೋಷವಿದೆ
ನಮ್ಮ ರಾಜ್ಯದ ಹಿರಿಯ ನಾಯಕ
ಸುಮ್ಮಸುಮ್ಮನೆ ವಚನ ನೀಡುತ-
ಲಿಮ್ಮಡಿಸಿದುತ್ಸಾಹದಲಿ ಭಾಷಣವ ಬಿಗಿಯಲ್ಕೆ |
ಉಮ್ಮಳಿಸಿತನುಚರರ ಸಂತಸ
ಚಿಮ್ಮುವೊಲ್ ನೀರ್ಬುಗ್ಗೆ ಯಾತಗೆ
ಹೊಮ್ಮಿದಾ ಕರತಾಡನದ ಸುರಿಮಳೆಯು ಮುದವಾಯ್ತು ||
ಸುಳ್ಳು ಆಶ್ವಾಸನೆಗಳನ್ನೇ ಕೊಡುತ್ತಲಿರುವ ನಾಯಕನ ಭಾಷಣದಿಂದ ಉತ್ಸಾಹಿತರಾದ ಅನುಚರರ (followers) ಸಂತೋಷವು ನೀರ ಬುಗ್ಗೆಯಂತೆ ಚಿಮ್ಮಲು ಅವರ ಚಪ್ಪಾಳೆಗಳು ಆತನಿಗೆ ಹಿತವಾಯಿತು.
ಎಂದೊ ಆಯುಧಪೂಜೆಯಾಯಿತ-
ದೊಂದು ದಿನ ಬಿಟ್ಟೆಂದು ನೀರನು
ತಂದು ಮೀಯಿಸರೆನ್ನನೆನ್ನುತ ಬಂಡಿ ಹಲುಬುತಿರೆ
ಬಂದು ಕೇಳಿದ ನಾಯಿ ಕಡೆಗದು
ನಿಂದುಮೂತ್ರವ ಮಾಡಿ ಹೋಗಲು
ನೊಂದ ಬಂಡಿಗೆ ದಿಢೀರೆರಗಿದ ಮಳೆಯು ಮುದವಾಯ್ತು
ದಿಢೀರ್ ಲಗಂ ಪ್ರಯೋಗವನ್ನು ಪರಿಣಾಮಕ್ಕಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದೀನಿ
ಬರುವ ಕಾಲಕೆ ಬರದಿರಲ್ ಮಳೆ
ಬರದ ಸೂಚನೆ ಕಂಡ ರೈತರು
ಕರವಮುಗಿಯುತ ಬೇಡಿರಲ್ವರುಣಂಗೆ ಕಾತುರದಿ
ಕರುಣೆಯಿಂದಿಳೆಯೆಡೆಗೆ ನೋಡಿದ
ವರುಣದೇವನ ಮನದೆಮೋಡವು
ಕರಗಿಕೂಡಲೆ ಕಂಬನಿಯವೊಲ್ ಮಳೆಯು ಮುದವಾಯ್ತು
Oh! I missed it. Sorry for the misplaced objection.
And imagination is too good – ವರುಣದೇವನ ಮನದೆ ಮೋಡವು
ಕರಗಿ ಕಂಬನಿಯವೊಲ್. Sri RG has summed it up well. Congrats and thanks for the fine verse.
ಹೌದು ಶ್ರೀಶ, ನಾನು ಅವಸರದಲ್ಲಿ ಈ ಚಂದದ ಸ್ವೋಪಜ್ಞಕಲ್ಪನೆಯ ಪದ್ಯವನ್ನು ಗಮನಿಸಿರಲಿಲ್ಲ. ದಿಟವಾಗಿ ಇದು ಪರಮಸುಂದರವಕ್ರೋಕ್ತಿ. ಉಪಚಾರವಕ್ರತಾ ಎಂಬ ಪ್ರಕಾರದ್ದು. ಜೊತೆಗೆ ಇದು ಒಳ್ಳೆಯ ಲಕ್ಷಣಾಮೂಲಧ್ವನಿಯೂ ಆಗುವುದು. ಹೆಚ್ಚೇನು, ರಸವತ್ಕವಿತೆಯನ್ನು ಯಾವುದೇ ಸುಸಂಗತ ವಿಮರ್ಶನವಿಧಾನಗಳಿಂದ ಅಳೆದರೂ ಅದರ ಬೆಲೆತಿಳಿಯುತ್ತದೆ. ಭಲೇ ಶ್ರೀಧರ!! ಸಾಧು ಸಾಧು!!!
ಕಿತ್ತಡಿ ಅನ್ನೋದು ನಾನು ವ್ಯುತ್ಪತ್ತಿ ಮಾಡಿದ್ದಲ್ಲ. ಅದು ಪೂರ್ರಸಿದ್ಧ ಪದ, ನಿಘಂಟುಗಳಲ್ಲಿ ಕಾಣಬಹುದು. ಅದರ ವ್ಯುತ್ಪತ್ತಿ ಹೇಗೆ ಅಂತ ನಾನು ಊಹಿಸೋದು ಹೀಗೆ. ತಪ್ಪಿರಬಹುದು.
🙂
ಕಿರು+ಅಡಿ- ಕಿತ್ತಡಿ
ಇಲ್ಲಿ ಕಿರು ಅನ್ನೋದು ಕಿರಿದು/ಚಿಕ್ಕದು ಅನ್ನೋ ಅರ್ಹದಲ್ಲಿ ಇರಲಾರದು. ಕನ್ನಡದಲ್ಲಿ ಗಿರು (?<=ಕಿರು) ಎಂದರೆ ಭಾವಿಸು/ಚಿಂತಿಸು. ಇದಕ್ಕೆ ಪೂರ್ವದಲ್ಲಿ ನಿಗ್ರಹಿಸು(ಇಂದ್ರಿಯಗಳು ಇತ್ಯಾದಿ) ಎನ್ನುವ ಅರ್ಥವೂ ಇದ್ದಿರೋಕೆ ಸಾಧ್ಯ. ಏಕೆಂದರೆ ತಮಿಳಿನಲ್ಲಿ ಇದರ ಜ್ಞಾತಿಶಬ್ದವಾದ "&ಚೆರುquot; ಶಬ್ದಕ್ಕೆ ಈ ಎಲ್ಲ ಅರ್ಥಗಳು ಉಂಟು. ಅಡಿ, ಅಡಿಗಳು ಇವು ಸಾಧು ಸನ್ಯಾಸಿಗಳಿಗೆ ಸರ್ವೇಸಾಮಾನ್ಯವಾಗಿ ಅನ್ವಯಿಸುವ ಪದವಲ್ಲವೆ. ಈ ಎರಡು ಸೇರಿ ಕಿತ್ತಡಿ ಆಗಿರಬಹುದು. ಒಂದು ವಿಷಯ- ಇಲ್ಲಿನ ಕಿರು, ಕಿರಿದು, ಗಿರು, ಚಿರು ಈ ಎಲ್ಲ ಶಬ್ದಗಳಲ್ಲೂ ಬರುವುದು ದೊಡ್ಡ ರಕಾರ. ಅದನ್ನು ಹೇಗೆ ಟಂಕಿಸೋದು ಅಂತ ಗೊತ್ತಾಗ್ಲಿಲ್ಲ.
ಈ ಪದದ ನಿಷ್ಪತ್ತಿಯ ಬಗ್ಗೆ ಬೇರೆ ಖಚಿತ ಮಾಹಿತಿ ಇನ್ನಾರಿಗಾದರು ತಿಳಿದಿದ್ದರೆ ದಯವಿಟ್ಟು ತಿಳಿಸಿ
ಇಂದ್ರನ ಕೋಪಕ್ಕೆ ತುತ್ತಾದ ವ್ರಜವಾಸಿಗಳು ಆತನು ಸುರಿಸಿದ ಮೌಸಲಧಾರೆಯಿಂದ ಅಪಾರ ಹಾನಿಗೊಳಗಾಗುತ್ತಾರೆ. ಆಗ ಕೃಷ್ಣನು ಗೋವರ್ಧನಗಿರಿಯನ್ನು ಹಿಡಿದೆತ್ತಿ ಅವರನ್ನು ರಕ್ಷಿಸುತ್ತಾನೆ. ಏಳು ಹಗಲು ಏಳು ರಾತ್ರಿಗಳ ಕಾಲ ನಿರಂತರ ಮಳೆ ಸುರಿಯುತ್ತಿದ್ದರೂ ಕೃಷ್ಣನ ಉಪಸ್ಥಿತಿಯಿಂದ ವ್ರಜವಾಸಿಗಳಿಗೆ ತಮ್ಮ ಕಷ್ಟಗಳು ಮರೆತುಹೋಗಿ ಆ ಘೋರ ಮಳೆಯೂ ಮುದವನ್ನು ನೀಡಿತು ಎಂಬರ್ಥದಲ್ಲಿ –
ಸುರಪತಿಯರತಿಯುರಿಯೊಳಗೆ ತಾ
ನರಿಯದೆಯೆ ವೃಂದಾರಮೆಯ ಮೇ
ಲ್ಗರೆದ ಮೌಸಲಧಾರೆಯಿಂ ವ್ರಜವಸತಿಗೆರವಾಗೆ
ಕರಿಯೊಡಲನುಪಕೃತಿಯೊಳಿಂದಾ
ಗಿರಿಯದುದ್ಧತವಾಗೆ ಗೋಪಾ
ಲರಿಗೆ ಹರಿಯೊಡನೇಳು ದಿನಗಳ ಮಳೆಯು ಮುದವಾಯ್ತು
ಸ್ವಿಟ್ಝರ್ಲ್ಯಾಂಡಿನ ಆಲ್ಪ್ಸ್ ಶ್ರೇಣಿಯ ಯೂಙ್-ಫ್ರಾ (jungfrau) ಪರ್ವತದಲ್ಲಿನ ಹಿಮಪಾತ:
ಸ್ವಿಸ್ಸೊಳಿರುವಾ ಹೇಮಪರ್ವತ
ದುಸ್ಸಹವೆ ಯೂಙ್-ಫ್ರಾ ಕ್ರಮಣ?^ಮಂ
ತಸ್ಸರಣವದು ಮುದವ ನೀಡಿರೆ ಶೀತಗುಹೆಯೊಳಗಂ|
ಠಸ್ಸೆ ರಹಪತ್ರದೊಳು (passport*) ಬೀಳೆ ವ
ಯಸ್ಸು ಮರೆತುದು ನಡೆಯೆ ಹಿಮದೆ ಮ
ನಸ್ಸು ಬೇಡಲದಾಗಿಳಿದ ಬೆಳ್ಮಳೆಯು ಮುದಮಾಯ್ತು||
^ ದುಸ್ಸಹವೇನಲ್ಲ. ಸುಕರವೇ. ಎಲ್ಲ ಅನುಕೂಲಗಳನ್ನೂ ಮಾಡಿದ್ದಾರೆ.
* In Jungfrau, we ourselves may frank our passports that we have ‘visited the highest town in Switzerland’
ಬಂದಿತು ಬೇಗನೆ ಆಹ್! ಸುರಿಮಳೆ !
ಹಿಂದೆಂದೂ ನೋಡಿರದಂಥಹ
-ದಿಂದಿನ ಸಾಯಂಕಾಲದ ಮಳೆಯು ಮುದವಾಯ್ತು
ಛನ್ದೋಬದ್ಧ ಪ್ರಾಸೋಬದ್ಧ
ಚಂದದಿ ಪದ್ಯಂ ಬರೆಯಲು ಯತ್ನಂ
ಎಂದೂ ಮಾಡದ ನನ್ನೀ ರಚನೆಯ ನೋಡಿ ಮುದವಾಯ್ತು
ಏನಾದರೂ ಅನಿಸಿಕೆ ಇದ್ದರೆ ದಯವಿಟ್ಟು ಹೇಳಿ . ಧನ್ಯವಾದಗಳು .
ಪಾನಿಗಳ ಪದ್ಯಗಳನ್ನು ಓದುವುದರಲ್ಲಿ ಹಾಗೂ ಪದ್ಯರಚನೆಯಲ್ಲಿ ಸ್ವತಃ ಆಸಕ್ತಿ ತಳೆದಿರುವುದು ಸ್ತುತ್ಯ. ಈ ಪುಟದ ಆದಿಯಲ್ಲಿ ’Learn Prosody ಪದ್ಯವಿದ್ಯೆ ಕಲಿಯಿರಿ’ ಎಂಬ ಟ್ಯಾಬ್ ಇದೆ. ಅಲ್ಲಿ ವಿಡಿಯೊ ಪಾಠಗಳಿವೆ. ದಯವಿಟ್ಟು ಅನುಕ್ರಮವಾಗಿ ನೋಡಿ. ಹಳಗನ್ನಡಕಾವ್ಯಗಳನ್ನು ಓದಿ. ಪಳಗಿದವರ ಪದ್ಯಗಳನ್ನು ಗಮನಿಸಿಕೊಳ್ಳಿ. ಪ್ರಯತ್ನ ಮುಂದುವರಿಸಿ. ನಿಮ್ಮ ಲೇಖನಿ ತ್ವರಿತವಾಗಿ ಸುಧಾರಿಸುತ್ತದೆ. ಶುಭಾಶಯಗಳು.
ನಿಮ್ಮ ಅನಿಸಿಕೆ ಹೇಳಿದ್ದಕ್ಕೆ ಬಹಳ ಧನ್ಯವಾದಗಳು. ಗಣೇಶ್ ರವರ ಪಾಠಗಳನ್ನು ಯೂಟ್ಯೂಬಲ್ಲಿ ನೋಡಿ ಸ್ಫೂರ್ಥಿ ಬಂದು, ಸುಮ್ಮನೆ ಪ್ರಯತ್ನ ಮಾಡಿದೆ. ಏನಾದರೂ ಈ ಪದ್ಯದಲ್ಲಿ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ.
ಕ್ಷಮಿಸಿಬಿಟ್ಟರೆ ಪದ್ಯಕಲಿವುದಾದೀತೆ? ಹೀಗೆ ತಪ್ಪು ಮಾಡಿಯೇ ಕಲಿಯಬೇಕು, ನಾವೆಲ್ಲರೂ ಕಲಿತದ್ದು ಹಾಗೆಯೇ.
ನಿಮ್ಮ ಪದ್ಯದ ವಿಶ್ಲೇಷಣೆ ಇಂತಿದೆ:
1. ಬಂದಿ/ತು ಬೇಗ/ನೆ ಆಹ್!/ ಸುರಿಮಳೆ ! – ವೃಷಭಪ್ರಾಸವು ಗುರ್ವಕ್ಷರವಾದ್ದರಿಂದ, ದೀರ್ಘಾಕ್ಷರವನ್ನೂ (ಆಂ, ನೀಂ, ಏಂ) ಬಳಸಬಹುದು. /ತು ಬೇಗ/ ಹಾಗೂ /ನೆ ಆಹ್/ ಲಗಂ ಆಗಿವೆ. ಅಸಾಧು. ಬೇಗನೆ+ಆಹ್ – ಸ್ವರಾಕ್ಷರದಿಂದ ಪದವನ್ನು ಆರಂಭಿಸಲಾಗದು. ಸಂಧಿ ಮಾಡಲೇಬೇಕು. ಇಲ್ಲಿ ಬೇಗನಾಹ್ ಎಂದು ಮಾಡುವುದೂ ತೊಡಕು.
2. ಹಿಂದೆಂದೂ ನೋಡಿರದಂಥಹ – ಇಲ್ಲಿ ಗಣಗಳು ೩-೪ರಂತೆ ವಿಂಗಡಿತವಾಗಿಲ್ಲ.
3. –ದಿಂದಿ/ನ ಸಾಯಂ/ಕಾಲ/ದ ಮಳೆಯು/ ಮುದವಾಯ್ತು – ಇಲ್ಲಿ ಗಣಗಳು ೩-೪ರಂತೆ ವಿಂಗಡಿತವಾಗಿಲ್ಲ.
4. ಛನ್ದೋಬದ್ಧ ಪ್ರಾಸೋಬದ್ಧ – ಇಲ್ಲಿ ಗಣಗಳು ೩-೪ರಂತೆ ವಿಂಗಡಿತವಾಗಿಲ್ಲ. Uniformityಗಾಗಿ ಛಂದೋ.. ಎಂದೇ ಬರೆಯಿರಿ. ’ಪ್ರಾಸೋಬದ್ಧ’ ಸಾಧುರೂಪವೆ, ತಿಳಿಯದು.
5. ಚಂದದಿ ಪದ್ಯಂ ಬರೆಯಲು ಯತ್ನಂ – ಇಲ್ಲಿ ಗಣಗಳು ೩-೪ರಂತೆ ವಿಂಗಡಿತವಾಗುವ ಬದಲು ೪-೪-೪-೪ ಆಗಿವೆ.
6. ಎಂದೂ ಮಾಡದ ನನ್ನೀ ರಚನೆಯ ನೋಡಿ ಮುದವಾಯ್ತು – ಯತ್ನಂ+ಎಂದೂ = ಯತ್ನಮೆಂದೂ ಆಗುತ್ತದೆ. ಆಗ ಮಾತ್ರೆಲೆಕ್ಕ ತಪ್ಪುತ್ತದೆ. ಮಾಡದಿದ್ದರೆ ವಿಸಂಧಿದೋಷವಾಗುತ್ತದೆ (ಮೇಲೆ 1ರಲ್ಲಿ ಹೇಳಿರುವಂತೆ).
ನೀವು ನೀಡಿರುವ ಸಮಗ್ರ ವಿಶ್ಲೇಷಣೆಯಿಂದ ನಾನು ಎಲ್ಲೆಲ್ಲಿ ತಪ್ಪು ಮಾಡಿದ್ದೆ ಎಂದು ಖಚಿತವಾಗಿ ಗೊತ್ತಾಗಿದೆ. ಮುಂದೆ ಮತ್ತೆ ಪ್ರಯತ್ನ ಮಾಡಿದಾಗ ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಳ್ಳುವೆ. ತುಂಬ ಧನ್ಯವಾದಗಳು!
ಮರಗಳೆಲೆಗಳು ಬಾಡಿ ಹೋಗಿರೆ
ಬರದ ಬೇಗೆಯು ಜನರ ಕೊಂದಿರೆ
ವರುಣ ದೇವನ ನರರು ಪ್ರತಿದಿನ ನೆನೆಯುತಿರುವಾಗಾ ।
ಸುರಿಸು ಸಲಿಲವನೆಂದು ಹಾಡಲು
ಗುರುಗುಹ ಸ್ವರ ಸಗಮಪನಿಸದಿ
ಅರರೆ! ಸುರಿಯಿತು! ಹರುಷ ತಂದಿತು! ಮಳೆಯು ಮುದವಾಯ್ತು! ||
ಸಂಧರ್ಭ – ಮುತ್ತುಸ್ವಾಮಿ ಧಿಕ್ಷಿತರು (ಗುರುಗುಹ ಎಂಬುವುದು ಅವರ ಮುದ್ರೆ) ಒಂದು ಊರಿನಲ್ಲಿ ಬರಗಾಲದಿಂದ ಬಳಲುತ್ತಿದ್ದ ಜನರ ಕಷ್ಟವನ್ನು ನೊಡಿ ಸ-ಗ-ಮ-ಪ-ನಿ ಸ್ವರಗಳಿಂದ ಕೂಡಿದ ಅಮೃತವರ್ಷಿನಿ ರಾಗವನ್ನು, ಒಡನೆ ಮಳೆ ಸುರಿಯುವ ಹಾಗೆ, ಹಾಡಿದರಂತೆ.
GBS ಚೆನ್ನಾಗಿದೆ ಪದ್ಯ. ಎಟ್ಟಯಪುರದಲ್ಲಿ ಸಂಭವಿಸಿದ ಘಟನೆ ಇದು. ದೀಕ್ಷಿತರು ಆನಂದಾಮೃತಾಕರ್ಷಿನಿ ಹಾಡಿದ ಸಂದರ್ಭ. “ಸಲಿಲಂ ವರ್ಷಯ ವರ್ಷಯ ವರ್ಷಯ” ಈ ಸಾಲುಗಳನ್ನು ಪ್ರತಿಬಿಂಬಿಸಿದ್ದೀರಿ.
ಮರದ ಎಲೆಗಳು- ವಿಸಂಧಿ ಆಯಿತಲ್ಲ. ಮರದೊಳೆಲೆಹಗಳು ಅಥವಾ ಮರದೆಯೆಲೆಗಳು ಎಂದರೆ ಸರಿಯಾಗುತ್ತೆ.
ಪ್ರತಿದಿನ- ಶಿಥಿಲದ್ವಿತ್ವ
ಹೌದು ಶ್ರೀಕಾಂತ್ ರವರೆ, ನಾನು ಅದೇ ಘಟನೆಯನ್ನು ಕುರಿತು ಪದ್ಯ ಬರಿದಿದ್ದೇನೆ.
‘ಮರದ ಎಲೆಗಳು’ – ಇದನ್ನು ‘ಮರಗಳೆಲೆಗಳು’ ಎಂದು ತಿದ್ದಿದ್ದೇನೆ.
ಒಂದು ಪ್ರಶ್ನೆ – ಶಿಥಿಲ ದ್ವಿತ್ವವೆಂದರೆ ಏನು?
ಧನ್ಯವಾದಗಳು!
ಶಿಥಿಲದ್ವಿತ್ವ ಬಗ್ಗೆ ಹೇಳ್ತೀನಿ. ಒಂದು ಪದ ಅಥವಾ ಪಾದದ ಮಧ್ಯೆ ಒಂದು ಸಂಯುಕ್ತಾಕ್ಷರ ( ಒತ್ತಕ್ಷರ ಇರುವ ಅಕ್ಷರ) ಬಂದರೆ, ಅದರ ಹಿಂದಿನ ಅಕ್ಷರ ಸ್ವಭಾವತಹ ಹ್ರಸ್ವವಾದರೂ ಅದು ಉಚ್ಛರದಿಂದ ಗುರುವಾಗುತ್ತೆ, ಅಂದರೆ ಎರಡು ಮಾತ್ರೆಗಳಷ್ಟು ಉದ್ದ ಇರುತ್ತೆ. ಉದಾಹರಣೆಗೆ ಹಂಸಧ್ವನಿ ಎನ್ನುವಲ್ಲಿ ಸಕಾರ ಒಂದು ಹ್ರಸ್ವಾಕ್ಷರವಷ್ಟೆ? ಎಂದರೆ ಸ್ವಭಾವದಿಂದ ಒಂದು ಮಾತ್ರೆ ಉಳ್ಳದ್ದು. ಆದರೆ ಅದರ ಮುಂದೆ ಧ್ವ ಎನ್ನುವ ಸಂಯುಕ್ತಾಕ್ಷರ ಬಂದಿರುವುದೈಂದ ಸಕಾರದ ಉಚ್ಛಾರಕ್ಕೆ ಒತ್ತು ಕೊಟ್ಟಂತಾಗಿ ಅದು ಎರಡು ಮಾತ್ರೆಗಳಷ್ಟುದ್ದವಾಗಿ ಗುರುವಂತೆ ವರ್ತಿಸುತ್ತೆ. ಆದರೆ ಇದಕ್ಕೆ ವಿಪರೀತವಾಗಿ ಹಿಂದಿನ ಹ್ರಸ್ವಾಕ್ಷರವನ್ನ ಲಘುವಾಗಿಯೇ ತೇಲಿಸಿ ಉಚ್ಛರಿಸುವುದು ಶಿಥಿಲದಿತ್ವ. ಛಂದಸ್ಸು/ ಪದ್ಯದ ಓಟ ಕೆಡದೆ ಇರಲು ಈ ಸೌಕರ್ಯೈದೆ. ಆದರೆ ಇದು ಊಟಕ್ಕೆ ಉಪ್ಪಿನಕಾಯಂತೆ ಉಪಯೋಗಿಸಬೇಕು. ಅತಿಯಾಗಿ ಬಳಸಿದರೆ ಹದಗೆಡುತ್ತೆ.
ಡಾಕ್ಟರ್ ರಾ ಗಣೇಶರ inspiration ಹಾಗೂ ಪ್ರಸಾದು ಅವರ kick start ನಿಂದ ಪದ್ಯ ರಚನೆಯ ಲೋಕದಲ್ಲಿ ಅಂಬೆಗಾಲಿಡುವ ಚೊಚ್ಚಲ ಪ್ರಯತ್ನ . ಅನಧ್ಯಯನ ಮತ್ತು ಶಬ್ದದಾರಿದ್ರ್ಯಗಳ ಕಾರಣ ಬಾಲಿಶ ಹಾಗೂ ದೋಷಯುಕ್ತವಾಗಿದೆ. ಕ್ಷಮೆಯಿರಲಿ. ಭಾರತ ತಂದ test match ಸೋಲುವ ಸಮಯದಲ್ಲಿ ವರುನದೆವನಗಿಗೆ ಪ್ರಾರ್ಥಿಸುವ ಸಂಧರ್ಭ
ಐಡಿಯ ಚೆನ್ನಾಗಿದೆ. ಛಂದೋದೋಷಗಳು ಇಂತಿವೆ:
1. ಬ್ಯಾಟು/ ಬಾಲಿನ/ ಆಟ/ ಸಾಗಿರೆ – ಬಾಲಿನ+ಆಟ = ಇಲ್ಲಿ ’ಬಾಲಿನಾಟ’ ಎಂದು ಸಂಧಿ ಮಡಲೇಬೇಕು. ಇಲ್ಲದಿದ್ದರೆ ವಿಸಂಧಿದೋಷ ಎನಿಸುತ್ತದೆ. ಮಾಡಿದರೆ ಛಂದಸ್ಸು ತಪ್ಪುತ್ತದೆ. ತಿದ್ದಬೇಕು. ಒಮ್ಮೆ ನೀವು ’ಬ್ಯಾ’ ಎಂಬ ದೀರ್ಷಾಕ್ಷರವನ್ನು ಬಳಸಿದ ಮೇಲೆ ಉದ್ದಕ್ಕೂ ಮೊದಲಕ್ಷರ ದೀರ್ಘವೇ ಆಗಿರಬೇಕು. ಇದನ್ನು ಗಜಪ್ರಾಸ(ಮೊದಲಕ್ಷರ)ವೆನ್ನುತ್ತಾರೆ. ಒಮ್ಮೆ ನೀವು ’ಟು’ ಎಂದು ಪ್ರಸಾಕ್ಷರ (ಎರಡನೆಯದು) ಆಯ್ದುಕೊಂಡಮೇಲೆ ಉದ್ದಕ್ಕೂ ಟಕಾರವೇ ಬರಬೇಕು. ಬಂದಿಲ್ಲ. ಒಂದೊಂದು ಅರ್ಧಕ್ಕೆ ಒಂದೊಂದು ಪ್ರಾಸಾಕ್ಷರವನ್ನು ಇಟ್ಟುಕೊಂಡು ಎಷ್ಟೋ ಶ್ರಮಿಸಿದ್ದೀರಿ. ಒಳ್ಳೆಯದು. ಸ್ವಲ್ಪ ಹಿಡಿತ ಸಾಧಿಸುವವರೆಗೆ ದ್ವಿತೀಯಾಕ್ಷರಪ್ರಾಸ ಪಾಲಿಸಬೇಡಿ. ಕಾಲಕ್ರಮದಲ್ಲಿ ಅದು ತಾನಾಗೇ ಸಿದ್ಧಿಸುತ್ತದೆ. ಮೊದಲಿಗೆ ಗಣ-ಗಣಿತ ರೂಢಿಸಿಕೊಳ್ಳಿ. ಮೊದಲ ಅಕ್ಷರದ ಪ್ರಾಸವಂತೂ ಪಾಲಿಸಲೇಬೇಕು.
2. ಪಟುಗ/ಳೆಲ್ಲರು/ ಸೆಣಸಿ/ ಕಾದಿರೆ – ಸರಿಯಾಗಿದೆ
3. ಚಟುವ/ಟಿಕೆಯಿಂ/ದಲಿಬ್/+ಯಾಟಿಗರುಸ್/+ಕೋರು/ ಮಾಡಿರ/ಲು – ಈ ಪಾದದ ಮೂರನೆಯ ಗಣದಲ್ಲಿ ’ಲಗಂ’ (ದಲಿಬ್) ಬಂದಿದೆ. ನಾಲ್ಕನೆಯ ಗಣದಲ್ಲಿ ’ಯಾಟಿಗರುಸ್’ ೬ ಮಾತ್ರೆಯಾಯಿತು – ೨ ಮಾತ್ರೆ ಹೆಚ್ಚು.
4. ಪರರ/ ತಂಡದ/ ದಾಂಡು/ಗಾರರ – ಪರರ ತಂಡ ಎಂದರೆ ಬೇರೆಯವರ ತಂಡ ಎಂದಾಗುತ್ತದೆ. ನೀವು ಹೇಳಬೇಕಾಗಿರುವುದು ಎದುರಾಳಿತಂಡ ಎಂದು. ದಾಂಡುಗಾರರ, ಅವರ – ಪುನರಾವರ್ತನೆ ಆಯಿತು.
5. ವರ ರ/ನ್ಮೊತ್ತ ವಿಪ/ರೀತ/ವಾಗಿರೆ – ಮೊದಲ ಹಾಗೂ ಎರಡನೆಯ ಗಣಗಳಲ್ಲಿ ತಲಾ ಒಂದೊಂದು ಮಾತ್ರೆ ಹೆಚ್ಚು ಇದೆ (ಪರರನ್ ಹಾಗೂ ಮೊತ್ತ ವಿಪ)
6. ಪರಾ/ಜಯವ/ ತಪ್ಪಿ/ಸಿ ಸುರಿದ/ ಮಳೆಯು ಮುದವಾಯ್ತು – ಪರಾ – ಮತ್ತೆ ಲಗಂ ಆಗಿದೆ. /ಸಿ ಸುರಿದ/ – ಹೀಗೆ ಒಂಟಿ ಅಕ್ಷರ ಬೇರೆಯಾಗಿ ಉಳಿದಾಗ ಗತಿ ಕೆಡುತ್ತದೆ.
ಪ್ರಸಾದು ಅವರಿಗೆ ತುಂಬ ಧನ್ಯವಾದ. ಬಲುಸೊಗಸಾಗಿ ಬದರೀನಾಥರಿಗೆ ಗದ್ಯ-ಪದ್ಯವಿವೃತಿಗಳೊಡನೆ ಮಾರ್ಗದರ್ಶನ ಮಾಡಿದ್ದೀರಿ. ಅಂತೆಯೇ ಶ್ರೀಕಾಂತಮೂರ್ಥಿಯವರಿಗೂ ಧನ್ಯವಾದ. ಒಳ್ಳೆಯ ಸವರಣೆಯ ಪದ್ಯವನ್ನು ರಚಿಸಿದ್ದೀರಿ.
ದಯಮಾಡಿ ಶಪದ್ಯಪಾನಿಗಳು ಹೊಸಗೆಳೆಯರಿಗೆ ಅಹಮಹಮಿಕೆಯಿಂದ ನೆರವೀಯಬೇಕಾಗಿ ವಿನಂತಿ.
ಪಳ್ನುಡಿ- ಇದು ನೀವು ಮಾಡಿಕೊಂಡ ಪದವೆ? ಹೇಗೆ ಇದರ ವ್ಯುತ್ಪತ್ತಿ?
ಗುಂಡನಿಂದ ಗೌಂಡ್ಯ. ಸಂಸ್ಕೃತಕ್ಕೆ ಅರಿಸಮಾಸದ ಮೈಲಿಗೆ ಇಲ್ಲವಾದರಿಂದ ಇಂತಹ ವ್ಯುತ್ಪತ್ತಿ ಸಾಧ್ಯವಾಗಬಹುದು
ಒಟ್ಟಿನ ಭಾವ ಚೆನ್ನಾಗಿದೆ.
ಪಳ್ನುಡಿ => ಪಳ್ = ancient + ನುಡಿ
ಇದನ್ನು ಪದ್ಯಪಾನದಲ್ಲೇ ಮುಂಚಿನ ಹಲವಾರು ಪದ್ಯಗಳಲ್ಲಿ ಬಳಸಲಾಗಿದೆ, ಇದನ್ನು ಮುದ್ದಣ್ಣ ಬಳಸಿದ್ದನೆಂದು ಪದ್ಯಪಾನಿಯೇ ಆದ ನಮ್ಮ ರವೀಂದ್ರಹೊಳ್ಳ ಹೇಳಿದ್ದ.
ಸೋಮಶೇಖರ ಶರ್ಮರೇ,
ಮುದ್ದಣ ’ಪಳ್ನುಡಿ’ ಎಂಬ ಶಬ್ದವನ್ನು ಬಳಸಿದಂತಿಲ್ಲ ಅಲ್ಲವೇ?
’ಪಳನುಡಿ’ ಎಂಬ ಶಬ್ದವನ್ನು ರಾಮಾಶ್ವಮೇಧದ ದ್ವಿತೀಯಾಶ್ವಾಸದಲ್ಲಿ ಬಳಸಿದ್ದಾನೆ. ’ಪಳನುಡಿಯಂ ಬಳಿಸಂದು ಪಲವುಂ ಪಗಲ್ ತಿರೆಯಂ ಪೊರೆವುತೆ…’ ಎಂದು ದಶರಥನ ಕುರಿತು ಬಣ್ಣಿಸುವಾಗ ಆ ಶಬ್ದವನ್ನು ಬಳಸಿದ್ದಾನೆ. ಇದೇ ರೀತಿ ’ಪಳವಾತು’ ಎಂಬ ಶಬ್ದವನ್ನೂ ಬಳಸಿದ್ದಾನೆಂಬುದು ವಿದಿತವಷ್ಟೆ.
ಇದನ್ನು ’ಸ್ಮಾರಯೇ ತ್ವಾಂ ನ ಶಿಕ್ಷಯೇ’ ಎಂಬಂತೆ ಹೇಳಿದೆ ಅಷ್ಟೆ 🙂
ಮೂಲದಲ್ಲೇ ಸರಿಪಡಿಸಿದ್ದೇನೆ.
’ಸ್ಮಾರಯೇ ತ್ವಾಂ ನ ಶಿಕ್ಷಯೇ’ ಎಂದಿದ್ದೀರಿ ನಾನು ಒಪ್ಪುವುದಿಲ್ಲ, ಇದು ನನಗೆ ಶಿಕ್ಷಣವೇ ಸರಿ, ಏಕೆಂದರೆ ರಾಮಾಶ್ವಮೇಧವನ್ನು ನಾನಿನ್ನೂ ಓದಿಲ್ಲ, ಓದುತ್ತೇನೆ. ಪದ್ಯಗಳಲ್ಲಿ ತಪ್ಪಿದ್ದಲ್ಲಿ ದಯವಿಟ್ಟು ನಿರ್ದಾಕ್ಷಿಣ್ಯವಾಗಿ ತಿಳಿಸಿಕೊಡಿರಿ ಎಂದು ಕೇಳಿಕೊಳ್ಳುತ್ತೇನೆ 🙂
ಸೋಮ,
ನಿಜವಾದ ಪ್ರತಿಕ್ರಿಯೆ: ಪದ್ಯ ತುಂಬನೇ ಚೆನ್ನಾಗಿದೆ.
ನನ್ನ ಎಂದಿನ ಪ್ರತಿಕ್ರಿಯೆ: ಕೀಪ್, ನಾರ್, ನೋವ್, ಕೀವ್ (ಎಲ್ಲದಕ್ಕೂ ‘ಉ’ಕಾರ ಸೇರಿಸಿ ಓದಿಕೊಳ್ಳಬೇಕು) ಪದಗಳ ದತ್ತಪದಿಯಂತಿದೆ!
ನಿಮ್ಮ ಸವರಣೆಗಳಿಗೆ ಧನ್ಯವಾದ. ನಿಮ್ಮ ಎರಡು ಅಭಿಪ್ರಾಯಗಳನ್ನೂ ಒಪ್ಪುತ್ತೇನೆ ಹಾಗು ಮೂಲದಲ್ಲೇ ಪದ್ಯವನ್ನು ಸರಿಪಡಿಸಿದ್ದೇನೆ. ಪಾರಿಜಾತದ ದೊಡ್ಡಗಿಡದಂತಿರುವ ಮರವಷ್ಟೇ!, ಅದರ ಮೇಲೆ ಪ್ರೇಮಿಯು ಹತ್ತಲು ಸಾಧ್ಯವಿಲ್ಲ, ಪ್ರಾಸಕ್ಕಾಗಿ ಈ ಆಭಾಸವಾಯಿತೆಂದೆನಿಸುತ್ತದೆ 🙂
ಸೋದರಿ ಉಷಾ ಅವರಿಗೆ ಮಿಗಿಲಾದ ಅಭಿನಂದನೆಗಳು. ಈ ಸರಣಿಯಲ್ಲಿ ನೀವು ತುಂಬ ಸೊಗಸಾದಪದ್ಯಗಳನ್ನು ವಿಸ್ಮಯಾವಹವಾಗುವ ಹಾಗೆ ಒಳ್ಳೆಯ ಶೈಲಿ ಮತ್ತು ಕಲ್ಪನೆಗಳಿಂದ ಕೂಡಿರುವಂತೆ ರಚಿಸಿದ್ದೀರಿ. ಇದಕ್ಕಾಗಿ ಧನ್ಯವಾದಗಳು. ತಮ್ಮ ಸಾಹಿತೀವಸ್ಯೆಯು ಹೀಗೆಯೇ ಶುಕ್ಲಪಕ್ಷದಲ್ಲಿ ಸಾಗಲಿ.
ಮಹೇಶಭಟ್ಟರೆ,
ಬಹಳ ಚೆನ್ನಾಗಿದೆ ಕಲ್ಪನೆ 🙂
ಕಳೆದ ಶುಕ್ರವಾರ ರಾತ್ರಿ 11.30 ತನಕ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ ಆ ಹಿನ್ನಲೆಯನ್ನು ಮತ್ತೆ ‘ನೆನೆಯುತ್ತಾ’ ನಿಮ್ಮ ಪದ್ಯವನ್ನು ನೋಡಿದಾಗ ರೂಪಕಗಳು ಮತ್ತೂ ರುಚಿಸುತ್ತಿದೆ ಧನ್ಯವಾದಗಳು!
ಅಹಿತವಾದದ್ದೋ, ಹಿತವಾದದ್ದೋ, ಒಟ್ಟಿನಲ್ಲಿ ಕಣ್ಣೀರು ತರಿಸುವ ಕೆಲಸ ದೂರದರ್ಶನದ ಸೋಪ್-ಗಳು ಮಾಡುತ್ತಿವೆ. (ಸೋಮನ ಕಣ್ಣಿನಲ್ಲಿ ನೀರು ತರಿಸಿ) ನೀವು ಆ ಧಾರಾವಾಹಿಗಳ ಸಾಲಿನಲ್ಲಿ ನಿಲ್ಲದಿರಿ ಎಂದು ಪ್ರಾರ್ಥನೆ. ಉತ್ತರಾರ್ಧದ (ಪೂರ್ವಾರ್ಧಕ್ಕೆ ನೇರ ಸಂಬಂಧಿಸದಿದ್ದರೂ) ಅರ್ಥ ಸ್ಪಷ್ಟವೇ ಇದೆ: ಕಣ್ಣು ನೆನೆಯುತ್ತದೆ ಎಂಬುದು ಸರಿಯಾದ ವಿವರಣೆ ಅಲ್ಲ. ವಾಸ್ತವಾಗಿ ನೆನೆಯುವುದು ಕೆನ್ನೆ ಇತ್ಯಾದಿ…
ಪ್ರಸಾದು ಅವರೇ,
ಧಾರಾವಾಹಿಗಳು ಆನಂದಬಾಷ್ಪವನ್ನು ಎಂದಾದರೂ ಹೊಮ್ಮಿಸುವುವೇ? ನಾನು ಸೋಮ ಅವರ ಕಂಗಳಲ್ಲಿ ಆನಂದಬಾಷ್ಪವು ಹೊಮ್ಮಲಿ ಎಂದದ್ದು.
ಯಾಕೆ ಕಣ್ಣು ನೆನೆಯುತ್ತದೆ ಎಂಬ ವಿವರಣೆ ಸರಿ ಅಲ್ಲ? ನೆನೆಯುವುದು ಎಂದರೆ ಒದ್ದೆಯಾಗುವುದು ಎಂದು ಅರ್ಥವಿದೆಯಲ್ಲವೇ. ಸರಿಯಾಗಿಯೇ ಇದೆಯಲ್ಲ! 🙂
ಈ ಬಾರಿಯ ಪದ್ಯಪಾನದ ಸಂಚಿಕೆಯಲ್ಲಿ ನಿರೀಕ್ಷೆಗೂ ಮೀರಿ ಗೆಳೆಯರು ಸೊಗಸಾದ ಪದ್ಯಗಳನ್ನು ಬಹೂಕರಿಸಿದ್ದಾರೆ. ವಿಶೇಷತಃ ಶ್ರೀಕಾಂತಮೂರ್ತಿ, ಸೋಮ, ಪ್ರಸಾದು, ಉಷಾ, ರಾಜಗೋಪಾಲ್, ರಘು ಮುಳಿಯ ಮುಂತಾದವರ ಗುಣ-ಗಾತ್ರಗಣ್ಯಪದ್ಯಗಳ ಮಳೆಯು ಬಲುಸೊಗಸು. ಅದಕ್ಕಾಗಿ ಎಲ್ಲರಿಗೂ ಧನ್ಯವಾದ. ಇದನ್ನೇ ಪ್ರಕೃತದ ಪದ್ಯಪೂರಣದ ವಸ್ತುವನ್ನಾಗಿಸಿದ್ದೇನೆ:
ಶ್ರೀ ರಾಮನಾಥರಿಗೆ ನಲ್ಬರವು. ಪದ್ಯಪಾನದಲ್ಲಿ ಬರೆದಿದ್ದೀರಿ ಎಂದರೆ ಈಗಾಗಲೇ ಇಲ್ಲಿನ ಪದ್ಯಗಳನ್ನು ಓದುತ್ತಿದ್ದೀರಿ. ಧನ್ಯವಾದಗಳು. ಪದ್ಯದ ಕಲ್ಪನೆ ಹಾಗೂ ಓಟ ಚೆನ್ನಾಗಿದೆ. ಅಂತೂ ಪತ್ನಿಯ ಆಸೆಗೇ ನೆರವಾಗಿ ಮಹಿಳಾವಾದಿಗಳ ವಿಶ್ವಾಸ ಗಳಿಸಿರುವಿರಿ. ಭೇಷ್.
ಕೆಲವೇ ಸವರಣೆಗಳು ಬೇಕಿವೆ:
೧) ಭಾನುವಾರದಿ ಎಸ್ಪಿ: ಸಾಮಾನ್ಯವಾಗಿ, ಹೀಗೆ ಸ್ವರಾಕ್ಷರ ಬಂದಾಗ ಸಂಧಿ ಮಾಡಲೇಬೇಕು. ಇಲ್ಲದಿದ್ದರೆ ವಿಸಂಧಿದೋಷವೆನಿಸುತ್ತದೆ. ಭಾನುವಾರದೊಳೆಸ್ಪಿ/ದಿನೆಸ್ಪಿ ಎಂದು ತಿದ್ದಿ. ಇಲ್ಲದಿದ್ದರೆ, ಭಾನುವಾರದೆಸ್ಪಿ ಎಂದಾಗುತ್ತದೆ, ಛಂದಸ್ಸು ಕೆಡುತ್ತದೆ. ಇಲ್ಲೊಂದು ವಿನಾಯಿತಿ ಇದೆ: ಭಾನುವಾರದಿ ಯೆಸ್ಪಿ ಎಂದು ಓದಿಕೊಳ್ಳಬಹುದಾಗಿದೆ.
೨) ದೋನಿ ~ ಧೋನಿ (ಟೈಪೊ)
೩) ವರುಣನನು ಸುರಿಸಿದ ಮಳೆಯು: ಮಳೆಯು ವರುಣನನ್ನು ಸುರಿಸುವುದಿಲ್ಲ. ನೀವೇ ಸವರಿಸಿ.
೪) ‘ಧ್ಯಾನಿಸಲು’ ಎಂಬುದು ಶಿಥಿಲದ್ವಿತ್ವವಾಗಿ ಸಲ್ಲುವುದಾದರೂ, ‘ಜಾನಿಸಲು’ ಎಂದು ಬಳಸುವುದೊಳ್ಳೆಯದು.
ನಿಯತವಾಗಿ ಪಾನಗೋಷ್ಠಿಗೆ ಬನ್ನಿ ಎಂದು ಆಹ್ವಾನಿಸುವೆ.
ನಿಮ್ಮ ಭಾವನೆಗಳಿಗೆ ಧನ್ಯವಾದಗಳು.
ದರ: ಒಂದು ಮಾತ್ರೆ ಕಡಿಮೆ ಇದೆ.
ಪ್ರಣಾಮ: ಹೀಗೆ ‘ಪ್ರಣಾಮ’ ಮಾಡಲಾಗದು. ಜಗಳ(ಳ-ಣ-ಯೋರಭೇದಃ)ವಾಗಿಬಿಡುತ್ತದೆ.
ಗೆಸತ್: ಲಗಂ ಆಗಿದೆ
ಯವಿದುವು: ಇದಾದಮೇಲೆ ಒಂದು ಗುರು ಬರಬೇಕು. ಬಂದಿಲ್ಲ. ದಯವಿಟ್ಟು ಸವರಿಸಿ.
Sridhar is ever able to carve out one more variety. Kudos.
೧) ಗಟ್ಟಿಕಂಠದಿ ಪಾಡಿರಲ್ – ಯಾರು/ಏನು ಹಾಡಿದರು ಎಂಬ ಪ್ರಶ್ನೆಯುಳಿಯುತ್ತದೆ. ಹಾಗಾಗಿ ಗಟ್ಟಿಕಂಠದ ಸ್ವಸ್ತಿಯುಂ ಕಳೆ/ಗಟ್ಟಿ… ಎಂದೇನಾದರೂ ಮಾಡಿದರೆ ಸರಿಹೋದೀತೇನೋ
೨) ಅವಧಾನದಂತ್ಯದಿ ಆಗಬೇಕು.
೩) ನಗರವಾಸಿಗಳು sounds better than ನಗರದಾಜನರು
ತುಂಬ ಸೊಗಸಾದ ಪದ್ಯ ಶ್ರೀಧರ್. ಮೊದಲನೇ ಪದ್ಯವಂತು ತುಂಬ ಚೆನ್ನಾಗಿದೆ. ಅವಧಾನದಲ್ಲಿನ ಪುಷ್ಪದ ಮಳೆಯನ್ನು ತಂದ ರೀತಿ ತುಂಬಾ ಚೆನ್ನ.
ಒಂದು ಸಂದೇಹವಿದೆ. ನಿಮ್ಮ ಮೊದಲನೇ ಪದ್ಯದ ಐದನೇ ಸಾಲಿನಲ್ಲಿ “ಕಟ್ಟಿತಯ್ ಅವಧಾನದಾಂತ್ಯದಿ” ಎನ್ನುವಾಗ ವಿಸಂಧಿದೊಶವಾಗುವುದೇ? ಅಥವಾ ಆ ರೀತಿ ಸ್ವರದಿಂದ ಶುರುವಾಗುವ ಪದವನ್ನು ಸಾಲಿನ ಮಧ್ಯದಲ್ಲಿ ಬಳಸಬಹುದೇ?
ನೀವೆಂದಂತೆ “…….ಕಟ್ಟಿತಯ್ಯವಧಾನದಂತ್ಯದಿ…” ಎಂದು ಸಂಧಿಯಾಗಬೇಕು. ಆದರೆ ಇಲ್ಲಿ ಸುದೈವವಶಾತ್ ಸಂಧಿಯಾದರೂ ಆಗದೇ ಇದ್ದರೂ ಛಂದಸ್ಸು ಎಡವುವುದಿಲ್ಲ. ಮಾತ್ರವಲ್ಲ, ಈ ರೀತಿಯ
ಸಂದರ್ಭಗಳಲ್ಲಿ ಅರ್ಥಸ್ಪಷ್ಟತೆಗಾಗಿ ವಿಸಂಧಿಯಾಗಿದ್ದರೂ (ಆದು ಸಂಧಿಯಾದಲ್ಲಿ ಛಂದಸ್ಸನ್ನು ಎಡವಿಸದೆ ಇದ್ದ ಪಕ್ಷದಲ್ಲಿ ಮಾತ್ರ) ಛಂದಸ್ಸಿನ ತೊಡಕು ಬಾರದಿರುವ ಕಾರಣ ಉಳಿಸಿಕೊಳ್ಳಬಹುದು.
ಅಂತೂ ನೀವಿಬ್ಬರೂ ಇಷ್ಟು ಚೆನ್ನಾಗಿ ಸೂಕ್ಷ್ಮಗಳನ್ನು ಕುರಿತು ಅರಿತು ಚರ್ಚಿಸುತ್ತಿರುವುದು ನನಗೆ ತುಂಬ ಮುದಾವಹ.
ವಿಸಂಧಿದೋಷದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಗಣೇಶ್ ಸರ್. ನನ್ನ ಮುಂಚಿನ ಪದ್ಯದಲ್ಲಿ ನಾನು ಮಾಡಿದ ತಪ್ಪನ್ನು ನೆನೆದು ಈ ಪ್ರಶ್ನೆ ಕೇಳಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. 🙂
ಧನ್ಯವಾದಗಳು ಸಾರ್.. 🙂 ಶತಾವಧಾನವೇ ನನಗೆ ಪದ್ಯಗಳನ್ನು ಬರೆಯುವುದಕ್ಕೆ ಸ್ಫೂರ್ತಿಯಾದಕಾರಣ, ಅದರ ಬಗ್ಗೆ ಒಂದು ಪದ್ಯ ಬರೆಯುವ ಆಸೆ ಈ ಮೂಲಕ ಫಲಿಸಿತು… ಪ್ರಸಾದು ಅವರು ವಿಸಂಧಿದೋಷದ ಬಗ್ಗೆ ಕೊಟ್ಟ Reference ಗೆ ಧನ್ಯವಾದಗಳು. 🙂
ನನಾನನಾನನಾನನಾ ನನಾನನಾನನಾನನಾ – ಇದು ಯಾವ ಛಂದಸ್ಸು? ದಯವಿಟ್ಟು ಇದರ ಬಗ್ಗೆ ಮಾಹಿತಿ ತಿಳಿಸಿ (ವಿವಾಹ ಭೋಜನವಿದು…. ಇದೇ ಗತಿಯೇ??)
ಪಂಚಚಾಮರಚ್ಛಂದಸ್ಸಿನಲ್ಲಿ ನಾನು ಬರೆದದ್ದು ಹೌದು. ಆದರೆ ವಿವಾಹಭೋಜನಂಬು (ತೆಲುಗುನುಡಿಯ ಹಾಡೇ ಹೆಚ್ಚು ಛಂದೋಬದ್ಧವಾಗಿರುವ ಕಾರಣ ಅದನ್ನೇ ಇಲ್ಲಿ ಉದಾಹರಿಸಿದ್ದೇನೆ. ಕನ್ನಡದ ಚಿತ್ರಗೀತರಚನಕಾರರಿಗೆ ಯಾರಿಗೂ ತೆಲುಗಿನವರಂತೆ ಒಳ್ಳೆಯ ಅಲಂಕಾರ-ಛಂದೋಜ್ಞಾನವಿಲ್ಲ. ಇದು ಇನ್ನಿತರ ಭಾಷೆಗಳವರಿಗೂ ಅಷ್ಟೇ ಅನ್ವಯಿಸುತ್ತದೆ:-) ಇಂತಾದರೂ ಆ ಹಾಡು ತ್ರಿಮಾತ್ರಾಲಯಸಮತ್ವವಿರುವ ಬಂಧವೇ ಹೊರತು ಪಂಚಚಾಮರದಂತೆ “ನನಾನನಾ…..” ಗುರು-ಲಘುವಿನ್ಯಾಸದ ಸತಾನ-ವರ್ಣವೃತ್ತವಲ್ಲ. ಆ ಹಾಡು ಕೇವಲ ಉತ್ಸಾಹಲಯದ (ಅಂದರೆ ಗಣವೊಂದಕ್ಕೆ ಮೂರು ಮೂರು ಮಾತ್ರೆಗಳಿರುವ) ಬಂಧ.
ಹೀಗಾಗಿ ಅಲ್ಲಿ ತ್ರಿಶ್ರಗತಿಯ ಆದಿತಾಳ ಅಥವಾ ರೂಪಕತಾಳದ, ಇಲ್ಲವೇ ಬರಿಯ ತ್ರಿಶ್ರ ನಡೆ ಎಂದು ಸಂಗೀತಲೋಕವು ಹೇಳುವ ನಡಿಗೆಯುಂಟು. ಹೋಲಿಕೆಗಾಗಿ ಭೋಗಷಟ್ಪದಿಯನ್ನು ನೆನೆದರೆ ಸಾಕು, ಎಲ್ಲ ಸ್ಪಷ್ಟವಾಗುವುದು.
Ref: Akbar use to trouble Tansen asking him to Sing Deepak Raag always, as he liked it most (knowing that tansen gets burning feeling as he sings with full involvement) so every time when he was asked to Sing Deepak raag his children were singing Megh Raag at home so that it rains and cools him…..
Not sure how apt it is… Welcome suggestions and corrections 🙂
ಸೊಗಸಾಗಿದೆ ಶ್ರೀಧರ. ಒಳ್ಳೆಯ ಸಂದರ್ಭ. ಒಂದು ಅಭಿಪ್ರಾಯ. ಸ್ವಲ್ಪ ಅರ್ಥಸಂದಿಗ್ಧ ಇದೆ. ನಿಮ್ಮ ಪದ್ಯದ ಎರಡು ಮತ್ತು ಮೂರನೆಯ ಪಾದಘಳಲ್ಲಿ ರಾಜನೇ ದೀಪಕವನ್ನು ಹಾಡಿದ ಅನ್ನುವ ಭಾವನೆ ಹುಟ್ಟುತ್ತೆ. ಆದರೆ ತಿದ್ದಿ.
ಪಳೆಯ ದೇಹವ, ರೋಗ ರುಜಿನವ
ಕಳೆದ ಜೀವವ, ಕಂಡು ಕೊರಗುತ
ಬಳಲಿ ಬೆಂಡಾಗಿರ್ದ ಬಾಳದು ಬೇಡೆ ಬೆಳ್ಬಗೆಯ
ತಳೆದ ಪದ್ಮಾಸನದ ಧೀರಗೆ
ಕುಳಿತ ಬೋಧಿಯ ವೃಕ್ಷದಡಿಯೊಳು
ಫಳಿತ ದರ್ಶನ ತಂದ ಜ್ಞಾನದ ಮಳೆಯು ಮುದವಾಯ್ತು [ಶಿ.ದ್ವಿ]
====================================
ಪದ್ಯಪಾನದಿ ಬರೆದ ಸಾಲ್ಗಳ
ಮಧ್ಯೆ ಹಿಣುಕುವ ಛಂದ ದೋಷವ
ವಿಧ್ಯೆ ಅರಿತಿಹ ನುರಿತ ತಜ್ಞರು ಕಂಡು ಹಿಡಿದಾಯ್ತು ||
ಗದ್ಯ ಬಾರದೆ ಪದ್ಯ ಬರೆಯಲು
ನಿತ್ಯ ಹವಣಿಸಿ ಸಾಲ ಗೀಚಿದ
ಪದ್ಯ ತಿದ್ದಲು ತಪ್ಪುಗಳ ಸುರಿಮಳೆಯು ಮುದಮಾಯ್ತು ||
====================================
ಮಾನ್ಯರೆ,
ಬೇಸರಿಸದಿರಿ. ಕವನಕ್ಕೆ ಯಾವುದೂ ವಸ್ತುವಾಗಬಲ್ಲದು ಎಂಬುದಕ್ಕೆ ಈ ಎರಡು ಪದ್ಯಗಳು ನಿದರ್ಶನ ಅಷ್ಟೆ. ಒಂದಷ್ಟು ತಪ್ಪು ಮಾಡದೆ ಅವನ್ನು ದಾಟಲಾರೆವು. ಬೇಗ ತಪ್ಪು ಮಾಡಿದಷ್ಟೂ ಬೇಗ ಪಾರಾಗುವೆವು.
AmL
ಒಳ್ಳೆಯ ಪ್ರಯತ್ನ. 5ನೆಯ ಪಾದದಲ್ಲಿ ಆದಿಪ್ರಾಸ ಎಡವಿದೆ. ಬೇರೆಕಡೆ ಸರಿಯಿದೆ. ಕಾಗುಣಿತ ಎಡವಿರುವುದನ್ನು ಪ್ರಸಾಉ ಆಗಲೆ ಹೇಳಿಯಾಗಿದೆ. ಛಂದದೋಷ ಅನ್ನೋದು ನ್ಯಾಯವಾಗಿ ಛಂದೋದೋಷೆ ಎಂದು ಸಂಧಿಯಾಗಬೇಕು. ಹಾಗೆ ಮಾಡಿದರೆ ಭಾಮಿನಿ ಹಾದಿತಪ್ಪುತ್ತಾಳೆ. ಇರಲಿ, ಅಂತೂ ಪ್ರಯತ್ನ ಮೇಲ್ಮಟ್ಟದ್ದೇ ಆಗಿದೆ.
ಜೀವ ತಿನ್ನುವ ತುಂಟ ಪೋರನು
ಕಾವ ತಾಯಿಯ ಕಣ್ಣ ತಪ್ಪಿಸ
ದಾವ ಮಾಯದೆ ಮಣ್ಣಲಾಡುತೆ ಬೆಳೆದ ಮಗನಾಗೇ।
ಕೋವಿ ಹಿಡಿದವ ಯೋಧನಾಗಿರೆ
ಕಾವ ತಾಯಿಯ ನೆಲವ ಚುಂಬಿಸಿ
ಭಾವ ತೀವ್ರದಿ ಸುರಿದ ಮಣ್ಣಿನ ಮಳೆಯು ಮುದವಾಯ್ತು ॥
(ಮಣ್ಣ ಸುರಿದುಕೊಂಡು ಆಟವಾಡುತಿದ್ದ ಮಗುವು, ಬೆಳೆದು ಯೋಧನಾಗಿ, ತಾಯ್ನಾಡ ಮಣ್ಣನ್ನು ಭಕ್ತಿಭಾವದಿಂದ ತನ್ನ ಮೇಲೆ ಸುರಿದುಕೊಂಡು ಪುಳಕಗೊಳ್ಳುವ ಕಲ್ಪನೆಯಲ್ಲಿ )
ಎರಡು ಮಾತು. “ತಪ್ಪಿಸದಾವ” ನೀವು ಸಂಧಿ ಮಾಡಲಾಗದ ಕಡೆ ಮಾಡಿ ಸಂದಿಗ್ಧ ಒದಗಿಸಿದ್ದೀರಿ, “ತಪ್ಪಿಸಿಯಾವ” ಅನ್ನೋದೆ ಸರಿ.
ಹಾಗೇ ತಾಯಿಯ ನೆಲ ಸಮಂಜಸವಾಗಿ ತೋರ್ತಿಲ್ಲ. ತಾಯ್ನೆಲ ಸರಿ. ತಾಯಿಯನೆಲ ಅರ್ಥವ್ಯತ್ಯಯವಾಗುತ್ತೆ. ತಾಯ್ನೆಲವನ್ನು ಅಂತ ಹಾಕಿದರೆ ಹೊಂದಿಕೊಳ್ಳುತ್ತೆ.
ಕಲ್ಪನೆ ಮತ್ತು ಭಾವ ತುಂಬ ಚೆನ್ನಾಗಿದೆ ಉಷಾರವರೆ.
೧) ಪೂರ್ವಾರ್ಧದ ಕೊನೆಯ ಅಕ್ಷರ ಹೇಗೂ ಗುರು. ಅದನ್ನು ಹ್ರಸ್ವವಾಗಿಯೇ ಉಳಿಸಿಕೊಳ್ಳಿ.
೨) ‘ಮಾಯದೆ’ ಎಂದರೆ ‘ಗಾಯ ಮಾಯದೆ’ ಎಂದಾಗುತ್ತದೇನೋ! ಮೂಲಪದ ‘ಮಾಯೆ’ ಎಂದಿರುವುದರಿಂದ, ಮಾಯೆಯಿನ್/ನೊ ಎಂದು ಸವರಿಸುವುದೊಳಿತು. ನಿಖರವಾಗಿ ಹೇಳಲಾರೆ. ಯಾರಾದರೂ ಸ್ಪಷ್ಟೀಕರಿಸಿಯಾರೆ?
೩) ‘ಹಿಡಿದವ’ ಗಿಂತ ‘ಪಿಡಿಯುತೆ’ ಎಂದರೆ ಚೆನ್ನು.
೪) ‘ಸುರಿದ’ ಎಂದರೆ ‘ಸುರಿದುಕೊಂಡ’ ಎಂದಾಗದು. ‘ಧರಿಸೆ’ ಎಂದರೆ ತುಸು ಸವರಿಸಿದಂತಾಗುತ್ತದೆ.
ಮೂರ್ತಿಗಳೆ,
ತಪ್ಪಿಸದಾವ = ತಪ್ಪಿಸಿ+ಅದಾವ. ಸಾಧು.
ನೀವು ‘ತಪ್ಪಿಸದೆ+ಆವ’ ಎಂದು ವಿಭಜಿಸಿಕೊಂಡಿದ್ದೀರಿ. ಇದೂ ಸಾಧು, ಆದರೆ ಅಪ್ರಸ್ತುತ.
(ಹಾಗೆ ನೋಡಿದರೆ ‘ತಪ್ಪಿಸಿಯಾವ’ ಆಗದು. ‘ತಪ್ಪಿಸಿspaceಯಾವ’ ಎನ್ನಬೇಕಾಗುತ್ತದೆ ;))
ಪ್ರಸಾದು ನಾನು ತಪ್ಪಾಗಿ ಬಿಡಿಸಿಕೊಂಡಿಲ್ಲ. ನೀವು ತಪ್ಪಾಗಿ ಸಂಧಿ ಮಾಡ್ತಿದ್ದೀರ.
ತಪ್ಪಿಸಿ+ ಅದಾವ ಹೇಗೆ ತಪ್ಪಿಸದಾವ ಆಗೋಕೆ ಸಾಧ್ಯ? ಕನ್ನಡದಲ್ಲಿ ಒಂದು ಪದಾಂತ್ಯದಲ್ಲಿ ಇಕಾರವಿದ್ದು ಮುಂದಿನ ಪದಾದಿಲ್ಲಿ “ಅ” ಎನ್ನುವ ಸ್ವರ ಬಂದರೆ ಇಕಾರಲೋಪ ಆಗೋಲ್ಲ. ಯಕಾರಾಗಮವಾಗುತ್ತೆ. ಅಕಾರ ಒಂದೇ ಅಲ್ಲ ಇನ್ನಾವ ಇತರ ಸ್ವರ ಮುಂದೆ ಬಂದರೂ ಅಷ್ಟೆ. ಹೀಗೇ ಆಗೋದು.
ಓಡಿ+ಉಳಿದರ್= ಓಡಿಯುಳಿದರ್. ಇದು ಓಡುಳಿದರ್ ಆಗಲ್ಲ
ಇದಕ್ಕೆ ಒಂದೇ ಸಂದರ್ಭ ಅಪವಾದ. ಪೂರ್ವಪದ ಜೆರಂಡ್ ಕ್ರಿಯಾಪದರೂಪವಾಗಿದ್ದು , ಅದರ ಕೊನೆಯ ಇಕಾರದ ಮುಂದೆ ಇರ್ಪ, ಇಲ್ಲ ಅನ್ನುವ ಕೆಲವೇ ಇಕಾರಾದಿ ಪದಗಳು ಬಂದಾಗ, ಪೂರ್ವ ಪದದ ಕೊನೆಯ ಇಕಾರವನ್ನು ಐಚ್ಛಿಕವಾಗಿ ಲೋಪ ಮಾಡಬಹುದು.
ಅಯ್ಯೊ! ತಪ್ಪಾಯಿತು. ದಯವಿಟ್ಟು ಕ್ಷಮಿಸಿ. ಅಲ್ಲಿ+ಅಲ್ಲಿ=ಅಲ್ಲಲ್ಲಿ, ಅಲ್ಲಿ+ಇಲ್ಲಿ=ಅಲ್ಲಿಲ್ಲಿ, ಇವುಗಳಂತೆ ನಾನು ಬಳಸಿದ್ದೇನಾಗಿ, ಅವರ ವಕಾಲತ್ತಿಗೆ ಹೋದೆ. ಮತ್ತೊಮ್ಮೆ ಕ್ಷಮೆ ಕೋರುವೆ.
– “ಅಮ್ಮನ ಕಣ್ಣು ತಪ್ಪಿಸಿ ಅದ್ಯಾವ ಮಾಯದಲ್ಲಿ ಮಣ್ಣಿನಲ್ಲಿ ಆಡುತ್ತಾ, ದೊಡ್ಡವನಾದ “ಎನ್ನುವ ಅರ್ಥದಲ್ಲಿ ಬರೆದದ್ದು.
– ” ತಾಯಿಯ ಕಣ್ಣು” – “ತಾಯಿಯ ಮಣ್ಣು” ಮೊದಲು ಬಂದದ್ದು, ನಂತರ ತಾಯಿಯ ನೆಲವಾದದ್ದು. “ತಾಯ್ನೆಲವನ್ನು” ಸರಿಹೊಂದಿದೆ.
– “ಮಣ್ಣಲ್ಲಾಡಿದ ಬೆಳೆದ ಮಗನೇ ಕೋವಿಹಿಡಿದು ಯೋಧನಾದ”- ಅದಕ್ಕೆ “ಪಿಡಿದವ” ಸರಿಯಾಗುವುದೇ?
– “ಧರಿಸೆ” ತುಂಬಾ ಸೂಕ್ತವಾಗಿದೆ
ಧನ್ಯವಾದಗಳು, ಶ್ರೀಕಾಂತ್ ಸರ್/ಪ್ರಸಾದು ಸರ್
ನನ್ನನ್ನು ತಿದ್ದಿ ಬೆಳೆಸುತ್ತಿರುವ ನಿಮ್ಮೆಲ್ಲರಿಗೂ ನಾನು ಋಣಿ. ಈ ಘಟ್ಟದಲ್ಲಿ ನನಗೆ ಇದರ ಅವಶ್ಯಕತೆಯಿದೆ. ಮುಂದೆಯೂ ಇದೇ ರೀತಿ ತಿದ್ದಿ ನಡೆಸುವಿರೆಂಬ ಆಶಯದೊಂದಿಗೆ, ಪೂರ್ಣ ತಿದ್ದಿದ ಪದ್ಯ.
ಜೀವ ತಿನ್ನುವ ತುಂಟ ಪೋರನು
ಕಾವ ತಾಯಿಯ ಕಣ್ಣ ತಪ್ಪಿಸಿ
ಯಾವ ಮಾಯದೆ ಮಣ್ಣಲಾಡುತೆ ಬೆಳೆದ ಮಗನಾಗೆ |
ಕೋವಿ ಪಿಡಿದವ ಯೋಧನಾಗಿರೆ
ಕಾವ ತಾಯ್ನೆಲವನ್ನು ಚುಂಬಿಸಿ
ಭಾವುಕತೆಯಲಿ ಧರಿಸೆ ಮಣ್ಣಿನ ಮಳೆಯು ಮುದವಾಯ್ತು ॥
ಪದಗಳನ್ನು ಬಿಡಿಸಿ ಬರೆಯುವುದು ಅರಿಸಮಾಸದ ಪರಿಹಾರಕ್ಕೆ ಸೂಕ್ತ ಉಪಾಯವಲ್ಲ. ಸಂಧಿ ಮಾಡಬೇಕಾದಾಗ ಮಾಡಲೇ ಬೇಕು. ಬಿಡಿಸಿ ಬರೆಯುವು ಸಂದರ್ಭಗಳಿದ್ದರೆ ಸರಿ, ಬಿಡಿಸಿಯೇ ಬರೆಯ ಬೇಕು. ಇದು ಒತ್ತಟ್ಟಿಗಿರಲಿ.
ಸಂಸ್ಕೃತ ನಾಮಪದಗಳಿಗೆ ಕನ್ನಡ ಕ್ರಿಯಾಪದಗಳು ಸೇರುವಾಗ ಅರಿಸಮಾಸದ ಸೋಂಕು ತಟ್ಟುವುದಿಲ್ಲ ಅಂತ ನನ್ನ ತಿಳಿವಳಿಕೆ. ಹಾಗಾಗಿ ಜೀವತಿನ್ನುವ ತಪ್ಪಾಗಲಾರದು. ಇದೇ ರೀತಯ ಕೆಲವು ಉದಾಹರಣೆಗಳು- ಯುದ್ಧಮಾಡುವ, ನಯನಸೆಳೆಯುವ, ಪ್ರೀತಿತೋರುತ
ಹೌದು, ನಿಮ್ಮ ಅಭಿಪ್ರಾಯ ಯುಕ್ತ. ಇಂಥ ಸಂದರ್ಭಗಳನ್ನು ಕ್ರಿಯಾಸಮಾಸ ಎಂದೂ ಕೆಲವರು ಹೇಳುವರು. ವಿಭಕ್ತಿಲೋಪವಾಗುವ ಕಾರಣ ಇಲ್ಲಿ ಸಮಾಸಚ್ಛಾಯೆ ತೋರುತ್ತದೆ. ಯುದ್ಧವನ್ನು ಮಾಡುವರು > ಯುದ್ಧ ಮಾಡುವರು ಇತ್ಯಾದಿ ಆದರೆ ಇಂಥವನ್ನು ಅಭಿಜಾತಕವಿತೆಯಲ್ಲಿ ಅಂಕೆಮೀರಿ ಬಳಸಿದರೆ ಹಿತವಾಗದು. ಏನಿದ್ದರೂ ಆಧುನಿಕಗದ್ಯಕ್ಕೆ ಹಾಗೂ ಕ್ವಾಚಿತ್ಕವಾಗಿ ನಡುಗನ್ನಡಪದ್ಯಗಳಿಗೆ ಇದು ಸಂದೀತು. ಎಣೆಮೀರಿದ ವಿಭಕ್ತಿಲೋಪಗಳಿಂದ ಹಳಗನ್ನಡದ ಹದ ಹೊಲಬುಗೆಟ್ಟೀತು. ಎಲ್ಲರಿಗೂ ನನ್ನ ನಿವೇದನೆ ಇಷ್ಟೇ : ಸ್ವಲ್ಪ ಹೆಚ್ಚು ಕಷ್ಟಪಟ್ಟು ಮತ್ತೂ ನುಡಿಬೆಡಗನ್ನೂ ಸೊಲ್ಸೊಬಗನ್ನೂ ಸಾಧಿಸಿಕೊಳ್ಳೋಣ ಎಂದು.
ಪ್ರಸಾದು ಅವರು ಈಚೆಗೆ ತಮ್ಮ ಪದ್ಯಗಳಲ್ಲಿ ಮಿತಿಮೀರಿ ಶಿಥಿಲದ್ವಿತ್ವದ ಬಳಕೆ ಮಾಡುತ್ತಿದ್ದಾರೆ. ಇನ್ನೂ ಒಬ್ಬಿಬ್ಬರು ಈ ಹಾದಿಗೆ ಹೆಜ್ಜೆ ಹಾಕಿದಂತಿದೆ:-)
ತಾವು ಹಿಂದೆ ಹೇಳಿದ್ದಂತೆ ಇದು ಒಂದು ಮಿತದಲ್ಲಿರಬೇಕು. ಇಲ್ಲವಾದರೆ ಶಿಥಿಲದ್ವಿತ್ವವು ಶಿಥಿಲಪದ್ಯತ್ವದಲ್ಲಿ ಪರಿಣಮಿಸುವುದು ನಿಸ್ಸಂಶಯ.
ಸೋಮ ಹಂಚುತ್ತಿದ್ದಾರೇನೋ ಎಂದಿದ್ದೆ 🙂 ಅದಾಗಿ ನನ್ನ ಮಾಹಿತಿ ತಪ್ಪೇನೂ ಅಲ್ಲವಲ್ಲ. ನಾನು ಸಮಾಸ ಆಗಿಲ್ಲ ಎಂದೆ. ಗಣೇಶರು ಸಮಾಸಚ್ಛಾಯೆ ಎಂದರು. ಇರಲಿ ತಪ್ಪಿದ್ದರೂ, ಒಂದು ವಿಷಯದ ತಿಳುವಳಿಕೆಗೆ ಹೇತುವಾಯ್ತಲ್ಲ 🙂
ಬೆಸಲೆಗೆ ಮೂರು ಆಪತ್ತನ್ನು ತಂದು, ಗಬ್ಬವಿಳಿಸಿ ಆನಂದದ ಅಶ್ರು ತಂದ ಪದ್ಯ ಚೆನ್ನಾಗಿದೆ ರಾಮ್ (ಅಂದರೆ ತಾಯಿ, ಮಗು ಚೆನ್ನಾಗಿದ್ದಾರೆ ಎಂಬ ಧ್ವನಿಯಲ್ಲವೆ) 🙂
ದುಗುಡದ ನಿವಾರಣೆಯ ಪರಿಗೆ ಪದ್ಯದಲ್ಲಿ ಅವಕಾಶವಾಗಿಲ್ಲದಿದ್ದರೆ ಏನಂತೆ ಇಷ್ಟೆಲ್ಲವನ್ನು ಒಂದು ಪದ್ಯದಲ್ಲಿ ತರಬೇಕೆಂಬ ಆಶಯವನ್ನು ಮೆಚ್ಚಲೇಬೇಕು!
ರಾಜಗೋಪಾಲರೆ –
ಮೊದಲ ಸಾಲಿನಲ್ಲು ಶಿಥಿಲ ದ್ವಿತ್ವವಿಲ್ಲ. ಛಂದಸ್ಸು ತಪ್ಪಿದೆ. 🙂
ಅ. ‘ಬೃ’ ಎಂಬುದು ಲಘು. ‘ಬೃಹನ್ನಳೆ’ ಎಂಬ ಪದದಲ್ಲಿ ಲಗಂ ಬರುತ್ತದೆ – ಎರಡನೆಯ ಅಕ್ಷರ (‘ಹನ್’) ಗುರುವಾಗುವುದರಿಂದ.
ಬ. ಸಾಲಿನಲ್ಲಿ ಒಂದು ಮಾತ್ರೆ ಹೆಚ್ಚಾಗುತ್ತದೆ.
ರಾಂ,
ಬಹುಶಃ ಅವರು ಕೇಳಿದ್ದು ‘ಬೃಹನಳೆ’ ಎಂದು ತೇಲಿಸಿ ಹೇಳಬಹುದೆ ಎಂದು. ಕೆಲವು ಅವರ್ಗೀಯವ್ಯಂಜನಗಳನ್ನು ಬಳಸಿ ಶಿ.ದ್ವಿ. ಮಾಡಿದ್ದೇನೆ, ವರ್ಗೀಯದವುಗಳಲ್ಲಿ ಮಾಡಿಲ್ಲ. ನಿಯಮ ಏನು ಎಂದು ತಿಳಿದುಕೊಳ್ಳಬೇಕು.
Note: I appreciate all the serious attempts before but I cannot match any of those. So I submit one attempt at humour in this computer age. Dedicated to all the software guys in padyapaana. Hope nobody thinks I am diluting the ‘seriosity’ of this page 🙂
Title : Transliteration tragiComedy
ಬರಹ ಡೈರೆಕ್ಟ್ ‘ಆನ್’ಉ ಮಾಡದೆ
ಸರಸರನೆ ‘ಮಳೆ’ಯೆಂದು ಭಾವಿಸಿ
ಬರೆದು ಗೂಗಲ್ ಸರ್ಚು ಬಾಕ್ಸಲಿ ಎನ್ಟರೊತ್ತಿದನು.
ಭರದೆ ಗೂಗಲು ತೋರೆ ‘ಗೇ’ ಸೈಟ್
ಗರವು ಬಡಿದನ್ತಾಫು ಮಾಡಿದ.
ನೆರೆದ ಫ್ರೆಂಡ್ಸಿಗೆ ಜಾಲಿ ನೀಡಿದ ‘ಮಳೆ’ಯು ಮುದವಾಯ್ತು.
೩+೪ ಗಣಗಳಲ್ಲಿ ಯಾವುದಾದರೂ ಅಕ್ಷರ ಗಣ ಬರಬಾರದು ಎನ್ನುವ ನಿಯಮ ಇದೆಯೆ? ಇರಬೇಕು. ನಾನು ಅದನ್ನು ಗಮನಿಸಿಲ್ಲ. ನಾನು ಓದುವಾಗ ಏನೋ ಸರಿಯಾಗಿಲ್ಲ ಅಂತ ಅನ್ನಿಸುತ್ತಿದೆ. ಗೊತ್ತಿದ್ದವರು ತಿಳಿಸಬೇಕು.
haha! clap clap! Apart from spelling mistakes, it looks smashing. The rule is no gaNa should begin with a “lagam” hich a laghu followed by a guru syllable. This is unnatural to kannaDa and hence this rule. Your padya does not have any lagam prayOgas so you are good
ಶ್ರೀಕಾಂತ್ ಅವರೇ! ಸಂಸ್ಕೃತದಲ್ಲಿ ಸುಧೀರನ ಸಾರಸ್ವತಸಿದ್ಧಿ ನಿಜಕ್ಕೂ ಗುಣಾತ್ಮಕವಾಗಿ ಹಿರಿದಾದ್ದದ್ದು. ಆತನ ಕಲ್ಪನೆಗಳಲ್ಲಿ ಎಂದೂ ನವೀನತೆ, ಸ್ವೋಪಜ್ಞತೆ ಮತ್ತು ಹೃದಯಂಗಮಸ್ವಾರಸ್ಯಗಳು ತುಂಬಿರುತ್ತವೆ. ಆಗೀಗ ಬರೆಯುವ ಕನ್ನಡದ ಪದ್ಯಗಳಲ್ಲಿಯೂ ಈ ಗುಣಗಳಿಗೆ ಕೊರತೆಯಿಲ್ಲ. ಆದರೆ ಈ ಮಹರಾಯನ ಪದ್ಯರಚನಾವಧುವು ಸಗರನ ದ್ವಿತೀಯಪತ್ನಿ ಸುಮತಿಯ
ಹಾಗಲ್ಲ. ಕನಿಷ್ಠಪಕ್ಷ ಗಾಂಧಾರಿಯ ಹಾಗಾದರೂ ಆದರೆ ಮೇಲು:-)
@ಸುಧೀರ್,
ಪ್ರತ್ಯಗ್ರಸುಂದರಸುಧಾ-
ವತ್ಯಲ್ತೆ ಭವತ್ಕವಿತ್ವವಿತ್ವವಿನೋದಂ |
ಸ್ತುತ್ಯಹಸತ್ಕಲ್ಪನದಾಂ-
ಪತ್ಯದಪತ್ಯಂ ನಿತಾಂತಮೀ ಭಾಮಿನಿಯೌ ||
ಆಹಾ! ಶ್ರೀಕಾಂತ ಸಖೇ!
ಮೋಹಂಗೊಂಡಿರ್ದ ಮನದೆ ಪೆತ್ತೀ ಕಂದಂ |
ರೂಹಂಗೆಟ್ಟನಲಾ! ಕವ-
ನೇಹಿತದೊಳ್ ಸಂಧಿಬಂಧಮರಿಯಾದುದಲಾ!!
(ಈ ಪದ್ಯದಲ್ಲಿ ಸ್ವಲ್ಪ ಶ್ಲೇಷವೂ ಇದೆ:-)
ತಾವು ನನ್ನ ಪ್ರಮಾದವನ್ನು ತಿಳಿಸಿದ್ದುದಕ್ಕಾಗಿ ತುಂಬ ಧನ್ಯವಾದ. ಇದನ್ನು ದಯಮಾಡಿ “ಸುಧಾವತ್ಯುಚಿತೆ” ಎಂದು ತಿದ್ದಿಕೊಳ್ಳಿರಿ.
ಸುಧೀರ್,
ನಿಮ್ಮ ಶ್ಲೋಕದ ಉತ್ತರಾರ್ಧವು ನನಗೆ ಸ್ಪಷ್ಟವಾಗಲಿಲ್ಲ. ದಯಮಾಡಿ ವಿವರಿಸಿರಿ.
@Ganesh, Tradition has it that Kumaradasa, the author of JanakiHarana was blind. Just as imitating one action of Annambhatta, viz.going to Kashi, one does not become a great vidwan, by imitating one action of Gandhari, I will not become a great poet 🙂
You asked me to imitate Gandhari but did not specify in which. I used the liberty to interpret it my way 🙂
ಬಾಕ್ಸಲಿ ಎನ್ಟರೊತ್ತಿದೆ(typo)ನು – ಇದನ್ನು ’ಬಾಕ್ಸಲಿ ಯೆನ್ಟರೊತ್ತಿದೆನು’ ಎಂದು ಓದಿಕೊಳ್ಳಬೇಕು. ’ಬಾಕ್ಸಿನೊಳೆಂಟರೊತ್ತಿದೆನು’ (or ಬಾಕ್ಸಿನೊಳ್ ’ಎಂಟರ್’ ಒತ್ತಿದೆನು) ಎಂದುಬಿಟ್ಟರೆ ಯಾವ ತಕರಾರೂ ಇರುವುದಿಲ್ಲ.
@ ನಿಮಗೆ ಗರಬಡಿಯಿತು, ಅವರಿಗೆ ಜಾಲಿ ಸಿಕ್ಕಿತು ಎಂದರೆ, ನಿಮಗೂ ಅವರಿಗೂ ಇಷ್ಟುಮಾತ್ರದ ವ್ಯತ್ಯಾಸವಿರಲೇಬೇಕು 😉
——-
What sort of a browser are you using? Netscape Navigator?
ತೆರೆದು ’ಕ್ರೋಮ’#ನ್ನಾನುಮಿಂದುಂ
’ಬರಹ’ ಮುಚ್ಚುತೆ ’ಮಳೆ’ಯ ಟಂಕಿಸೆ
ಪುರುಷಸಕೃತರೆ* ತೋರೆ, ಕಿತ್ಥೋದಂಥ ಬ್ರೌಸರಿನೇಂ?
# Google chrome
* ಸಕೃತ as opposite of ವಿಕೃತ. When I gave a google search for ‘maLe’, the results were on ‘male’s and not ‘gay’s.
ಇದು ನಿಜವಾಗಿ ನಡೆದದ್ದು. ‘ಮಣ್ಣಿನ ದೋಣಿ’ ಚಿತ್ರದ ‘ಮಳೆ ಮಳೆ ಮಳೆ ಮಳೆ ಒಲವಿನಾ ಸುರಿಮಳೆ’ ಹಾಡನ್ನು ಹುಡುಕಲು ‘ಮಳೆ ಮಳೆ’ ಎಂದು ಟಂಕಿಸಿದಾಗ ಎರಡು ‘ಮಳೆ’ಗಳಿದ್ದ ಕಾರಣ ಗೂಗಲು ‘ಅಂತಹ’ ಸೈಟುಗಳನ್ನು ಪಟ್ಟಿ ಮಾಡಿತ್ತು.
ಉಷಾರವರೆ. ಪೂರ್ವಾರ್ಧ ಸೊಗಸಾಗಿದೆ. ಹಾಗೇ ಇಬ್ಬನಿಯ ಮಳೆಯೂ ಚೆನ್ನ. ಆದರೆ ಮಧ್ಯದಲ್ಲಿ ರವಿ ಬಂದಿರೋದು ಅಸಮಂಜಸವಾಗಿ ನನಗೆ ಕಾಣಿಸ್ತಿದೆ. ಇದಕ್ಕೆರಡು ಕಾರಣಗಳು.
ತಾಯಿಮಗುವ ಹೋಲಿಕೆಯನ್ನು ಕೊಟ್ಟಿದೀರಿ. ರವಿ ಹೇಗೆ ಭುವಿಗೆ ಮಗುವಾಗಲು ಸಾಧ್ಯ? ಇದು ಸತ್ಯವೂ ಅಲ್ಲ. ಪ್ರಸ್ಸಿದ್ಧ ಕವಿಸಮಯವೂ ಅಲ್ಲ.
ಎರಡನೆಯ ಕಾರಣ- ರವಿ ಬಂದು ಇಬ್ಬನಿಯನ್ನು ಹೋಗಿಸ್ತಾನೆ ಅಲ್ವೆ? ಅವನು ಅದನ್ನು ತರುವುದಿಲ್ಲವಲ್ಲ. ಇದಾದರು ಪರವಾಗಿಲ್ಲ- ಕವಿಕಲ್ಪನೆ ಅಂದುಕೋಬಹುದು.
ಶ್ರೀಕಾಂತ್ ಸರ್,
ಸ್ತ್ರೀಯಾಗಿ ನನ್ನನ್ನು ತಾಯಿಯಂತೆ/ಭೂಮಿತಾಯಿಯಂತೆ ಕಲ್ಪಿಸಿಕೊಂಡದ್ದು.
ಒಬ್ಬ ತಾಯಿಯಾಗಿ ನಾನು “ಸೂರ್ಯ”ನನ್ನು ಮಗನಂತೆಯೇ ಮುದ್ದಿಸುವುದು !
(ಸೂರ್ಯನನ್ನೇ “ಅಮ್ಮನಂತೆ” ಕಂಡದ್ದೂ ಇದೆ !)
(ಮಳೆ ಬಿಟ್ಟರು ಮರದ ಹನೀ ಬಿಡದೂ..
ಮಳೆ ಬಿಟ್ಟರು ಹೊಳೆಯ ದನೀ ಬಿಡದೂ… !!)
ಬಿಸಿಲ ತಾಪಕೆ ಮಳೆಯ ಕೋಪಕೆ
ಹಸಿರು ಕೊಡೆಗಳ ಕೋಟಿ ತೆರೆಯುತ
ಲುಸಿರ ಹರಸುತ ಬಸಿರ ಬಯಸುತಲಿಳೆಯು ಮುದವಾಗೆ |
ಫಸಲ ನಂತರ ಪಸರಿದಂದವು
ಹುಸಿಯದಲ್ಲವು, ಮಳೆಯುನಿಂತರು
ಹಸಿಯ ಮರದಡಿ ನಿಲದೆ ಸುರಿದಿಹ ಮಳೆಯು ಮುದವಾಯ್ತು ||
(ಮರಗಳು, ಮಳೆಯಲ್ಲಿ ಭೂಮಿ ಹಿಡಿದ “ಹಸಿರು ಕೊಡೆ”ಗಳಂತೆ ಕಂಡ ಕಲ್ಪನೆಯಲ್ಲಿ)
(ಸ್ವಲ್ಪ ಕಾಲದ ನಂತರ ಪದ್ಯಪಾನಕ್ಕೆ ಬಂದದ್ದರಿಂದ ಹಳೆಯ ಪ್ರಶ್ನೆಗೆ ಉತ್ತರಿಸುತ್ತಿದ್ದೇನೆ 🙂
ಕುಳಿರುಗಾಳಿಯ ಮಾರ್ಗಶಿರದಲಿ
ಚಳಿಯ ತಡೆಯಲು ತೊಟ್ಟು ಟೊಪ್ಪಿಯಿ-
ರುಳಿನ ಮೂರನೆ ಜಾವಕೆನ್ನುತ ಕಾದು ಕುಳಿತಾಯ್ತು
ಇಳೆಯ ಹಾದಿಯ ಬಾಲಚಿಕ್ಕೆಯ
ಪಳೆಯುಳಿಕೆಗಳು ಹಾದುಹೋಗಿರೆ
ಹೊಳೆಯುತಾಗಸ ತುಂಬಿ ಲಿಯೊನಿಡ್ಸ್ ಮಳೆಯು ಮುದವಾಯ್ತು!
(ಲಿಯೊನಿಡ್ಸ್ ಎಂಬುದು ನವೆಂಬರ್ ೧೫-೧೬ರ ವೇಳೆಗೆ ಕಾಣಬರುವ ಒಂದು ಉಲ್ಕಾ ವರ್ಷ (meteor shower). ಬಹುಪಾಲು ಎಲ್ಲಾ ಉಲ್ಕೆಯ ಮಳೆಯಂತೆ ಇದೂ ಕೂಡ, ಭೂಮಿ ಸೂರ್ಯನನ್ನು ಸುತ್ತುವ ಹಾದಿಗೆ ಧೂಮಕೇತುವೊಂದರ ಉಳಿಕೆಗಳು, ದೂಳು ಇತ್ಯಾದಿ ಹೋಗುವ ಹಾದಿಯೂ ಅಡ್ಡಹೋಗುವುದರಿಂದ ಉಂಟಾಗುತ್ತದೆ. ಹಾಗಾಗೇ ಪ್ರತೀ ವರ್ಷ ಒಂದೇ ಸಮಯದಲ್ಲಿ ಇದು ಕಂಡುಬರುತ್ತೆ. ಈ ಉಲ್ಕೆಗಳು ಸಿಂಹ ರಾಶಿಯಿಂದ ಹೊರಟಂತೆ ಕಾಣುವುದರಿಂದ ಇದಕ್ಕೆ ಲಿಯೊನಿಡ್ಸ್ ಎಂದು ಹೆಸರು)
ಗ್ರೀಷ್ಮಾವಗ್ರಾಹನಿರ್ಧೂತಕೃಷಕಸ್ಯ ಪುರಂಜನಾ
ತಡಿದ್ಗರ್ಭವಿನಿಷ್ಕ್ರಾಂತಾ ವರ್ಷಾ ಹರ್ಷಪ್ರದಾಭವತ್ ॥
ರೈತನ ಭಾಮಿನಿಯೇ ?
ಸುಂದರಂ ಪದ್ಯಂ;ಸುಮಧುರಾ ರೀತಿಃ | ಧನ್ಯವಾದಾಃ
ಇಳೆಹತಾಶೆಯ ಕಾವ ಜೀವವೊ
ಝಳಪಿಸುವ ರವಿ ಖಡ್ಗ ರಾಹುವೊ
ತಳಿರ ಸೊರಗಿಸದೆತ್ತಿ ನಿಲಿಸುವ ನಲವೊ ನಭದೆಡೆಗೆ
ಕುಳಿರಹಾಸಿನ ಬೇಟವೈತರೆ
ಬಳಸಿ ಮುಗಿಲಪ್ಪುಗೆಯ ಹಿತದಲಿ
ಕಳುಹೆ ಕರಗುತ ಹಿತವು ಸುರಿಯಲು ಮಳೆಯುಮುದವಾಯ್ತು
ಸಲೆಸೊಗಸಿನೀ ಪದ್ಯಭಾಮಿನಿ
ಬೆಲೆಯ ತರುತಿಹಳಲ್ತೆ ದಾಮಿನಿ-
ಯೊಲೆವ ಮಳೆಗಬ್ಬಕ್ಕೆ ಮತ್ತೀ ಪದ್ಯಪೂರಣಕೆ !
ಧನ್ಯವಾದಗಳು.
ಮೌಳಿಯವರೆ, ಪದ್ಯ ಬಹಳ ಚೆನ್ನಾಗಿದೆ, ತುಂಬಾ ಹಿಡಿಸಿತು
Thanks Soma. My effort is to reach where I was. Your constant progress looks amazingly effortless !
ಪದ್ಯರಚನೆ ನನ್ನ ಅಳವಲ್ಲವಾದರೂ ಇದೊಂದು ಪ್ರಯತ್ನ
ಬರುವ ಭಾಗ್ಯವೊ ಭುವಿಯ ನೇಹವಿ
ದರೊಳು ಕೋಟಿ ಜನುಮದ ಸುಕೃತದ
ವರವವತರಿಸಿ ದಿವಿಜಪತಿತಾ ನಭದೊಳನುವಾಗೆ |
ಸುರನದಿಯ ಸೋದರಿಯರೆಲ್ಲರು
ಸರಸವಾರಿಧಿ ವಿರಹದುರ್ವಿಧಿ
ಬರಹ ಬದಲಿಸ ಹೊರಟರೇ! ದಿಟ ಮಳೆಯು ಮುದವಾಯ್ತು ||
ಪ್ರಯತ್ನ ನಿತಾಂತಸ್ತುತ್ಯರ್ಹ. ಆದರೆ ಎರಡನೆಯ ಹಾಗೂ ಮೂರನೆಯ ಪಾದಗಳಲ್ಲಿ ಮಾತ್ರೆಗಳ ಲೆಕ್ಕದ ಮಟ್ಟಿಗೆ ಸರಿಯಾಗಿದ್ದರೂ ಗತಿಯ ಹದ ತಪ್ಪಿದೆ; ಯತಿವಿವೇಕವು ನಶಿಸಿದೆ. ಈ ಬಗೆಗೆ ತುಸು ಗಮನಿಸಿರಿ.
ಪೂರ್ವಾರ್ಧದಲ್ಲಿ ಅರ್ಥಸ್ಪಷ್ಟತೆ ಇಲ್ಲ. ನಿಮ್ಮ ಕಲ್ಪನೆಯನ್ನುಳಿಸಿಕೊಂಡು ಸವರಿಸಿ. ಇಲ್ಲಿ ನಾನು ಆ ಪೂರ್ವಾರ್ಧವನ್ನು ಬಿಟ್ಟು, ನಿಮ್ಮ ಉತ್ತರಾರ್ಧವನ್ನು ಪೂರ್ವಾರ್ಧ ಮಾಡಿಕೊಂಡು, ಉತ್ತರಾರ್ಧವನ್ನು ರಚಿಸಿದ್ದೇನೆ.
ಸುರನದಿಯ ಸೋದರಿಯರೆಲ್ಲರು
ಶರಧಿರಮಣನ ವಿರಹವಿಧಿಯನು
ಹರಿಸೆ ಹರಸಿಹ ಸೂರ್ಯನೈ, ದಿಟ ಮಳೆಯು ಮುದಮಾಯ್ತು|
ಸುರಿದೊಡಮಿತದ ನೀರ ನದಿಗಳು
ಭರಿಸದಬ್ಧಿಯು ಪುನ್ನಮಿಯದೈ-
ತರಲು ಭೋಗದಿನುರುಬಿ ಮೊರೆಯುವ ಪರಿಯನೇನೆಂಬೆಂ!!
ಅಳಿಸಿ ಬೇಸಗೆಬೊಮ್ಮನೊರೆದಿಹ
ಬಳಲಿಕೆಯ ಬಿರುಬರೆಹವನು ಮಾ-
ರ್ಪೊಳೆಯಿಸುತೆ ಬಾಳ್ಬಟ್ಟೆಯನು ಕಾರ್ಮುಗಿಲ ಕತ್ತಲೆಯಿಂ |
ಉಳಿಸಿ ಭೂರಮೆಯೈದೆತನವನು
ಗಳಿಸಿಕೊಟ್ಟು ತರಂಗಿಣಿಗಳಿಗೆ
ಬಳುಕು-ಬಾಗಿನ ತುಂಬುಬೆಡಗನು ಮಳೆಯು ಮುದವಾಯ್ತು ||
ಭಾವಗಳುನರ್ತಿಸುವ ಬೆಡಗಿನ ಪದ್ಯಮಿದುವಂದ್ಯಂ
ಭೂರಮೆಯೈದೆತನವನು ಎಂದರೆ ಏನರ್ಥ ಸರ್
ಇರಲಿ, ಪ್ರಿಯ ಸೋಮ! ’ಭೂರಮೆಯ ಐದೆತನ’ ಎಂದರೆ ಭೂಮಿಯ ಮುತ್ತೈದೆತನ ಎಂದು ಅರ್ಥ.
ಪದ್ಯವು ಚೆನ್ನಾಗಿದೆ/ಇಲ್ಲ ಎಂಬುದು ಒಂದು ದೃಷ್ಟಿ. ಸಂಹತಾಭಿವ್ಯಕ್ತಿಗೆ ಏನಾದರೂ ಅವಕಾಶವೊದಗಿಸುತ್ತದೆಯೆ ಎಂಬುದು ಇನ್ನೊಂದು.
ಎಂದಿನಂತಿಹುದೀಕವನ ಕೇಳ್
ಚಂದದಿಂದಲಿ ತೊಳಗುತಿರ್ದೊಡ
ಮೊಂದ ಹೆಕ್ಕುತಲೋರೆ, ಕವನವ ಬರೆಯಲೆಳಸಿದೆನು|
ನಂದನಂದನರಿಂತು ಬಿಗಿದೊಡೆ
ಧಂದೆಯುಂಟೇನೆನ್ನ ಕುಲರಿಗೆ
ಗೊಂದಿಯೊಳು ಹೊಕ್ಕಿದೊಡಮಿಲ್ಲವು ಸುಳುವದೇನೊಂದೂ||
(ನಂದನಂದನ = ಶ್ರೀ ರಾ. ಗಣೇಶ್‍ರವರು. ಅವರ ತಾಯಿಯ ಹೆಸರು ‘ನಂದ’)
ಧರೆಯು ಬಿರಿದಿರೆ ತರುಗಳೊಣಗಿರೆ
ಬರದ ಬೇಗೆಗೆ ಮಂದಿ ನೊಂದಿರೆ
ಹರಿವ ನೀರದು ಬತ್ತಿಹೋಗಿರೆ ಗ್ರೀಷ್ಮದಂತ್ಯದಲಿ |
ಬಿರುಸಿನಾರ್ಭಟದಿಂದ ಕೂಡಿದ
ಕರಿಯ ಮುಗಿಲದು ಕವಿಯೆ ಬಾನಲಿ
ಸುರಿಯತೊಡಗಿದ ಭುವಿಯ ತಣಿಸುವ ಮಳೆಯು ಮುದವಾಯ್ತು ||
=======================================
ವಸುಧಳಿಚ್ಚಿಸೆ ತುಡಲು ತಾನುಂ
ಪಚ್ಚಪಸುರಿನ ನಾರುಮುಡಿಯಂ
ಮೆಚ್ಚಿ ವರುಣಂ ವರ್ಷಗೈಯ್ಯಲಿಚ್ಚೆಯಿಂದಂ ಕ್ಷೋ |
ಣಿ ತಾನ್ ಮೆಯ್ಯಂ ಮರೆತು ಮೀಯಲ್
ತುಡಿಸಿದಳ್ ಋತುದೇವಿ ವಸ್ತ್ರಂ
ನೋಡೆ ಮದುವೆಳ್ ಬಿಂಕದಂದವ ಮಳೆಯು ಮುದಮಾಯ್ತು ||
ಮದುವೆಳ್ : ಮದುವಣಗಿತ್ತಿ
=======================================
(ಯೆಲ್ಲಾದ್ರು ಹೆಚ್ಚು ಕಡ್ಮೆ ಆಗಿದ್ರೆ ನಿಮ್ಮೊಟ್ಟೆಗ್ ಹಾಕ್ಕೊಣ್ಬಿಡಿ – ಹನ್ಗೇ ಯೆಲ್ಲ್ ಯೇನ್ಮಾಡ್ಬೇಕು ಸ್ವಲ್ಪ ತಿಳಿಸ್ಕೊಡಿ)
1) ನಾರುಮಡಿ ಗೊತ್ತು. ನಾರುಮುಡಿ ಸರಿಯೆ ತಿಳಿಯದು.
2) ಗೈಯಲ್+ಇಚ್ಛೆ = ಗೈಯಲಿಚ್ಛೆ (ಇಚ್ಚೆ ತಪ್ಪು). ಗೈಯ್ಯ… ಆಗದು
3) ಪೂರ್ವಾರ್ಧದ ಕೊನೆಯಲ್ಲಿ ಯತಿ ಬಂದರೆ ಒಳ್ಳೆಯದು – ಕ್ಷೋ..
4) ನಾಲ್ಕನೆಯ ಪಾದದ ಆದಿಯಲ್ಲಿ ಲಗಂ ಬಂದಿದೆ – ಣಿ ತಾನ್
5) ಮದುವೆಳ್ – ಮದುವೆಳ ಎಂಬ ಷಷ್ಠೀವಿಭಕ್ತಿ ಬರಬೇಕು. ಇಲ್ಲದಿದ್ದರೆ, ಮದುವಣಗಿತ್ತಿಯೇ ನೋಡುತ್ತಿದ್ದಾಳೆ ಎಂದಾಗುತ್ತದೆ.
ಒಂದ್ ಇಸ್ಯ ಮಾತ್ರ ಬೋ ಇಶ್ಟ ಆತು – ಆದಿಪ್ರಾಸ ಮಡಗ್ನಿಲ್ಲ. ನಾನು ಶುರು ಅಚ್ಕಂಡಿದ್ದೂ ಹಿಂಗೇಯ. ಆದಿಪ್ರಾಸ (ಎರಡನೆಯ ಅಕ್ಷರ) ಪಾಲಿಸದಿದ್ದರೂ ಪರವಾಗಿಲ್ಲ; ಸಿಂಹ (ನ), ಗಜ (ನಾ), ಹಯ (ನ್ನ), ಶರಭ (ನ್ಯ), ಅಜ (ನಃ), ವೃಷಭ(ನಂ)ಪ್ರಾಸಗಳನ್ನು (ಮೊದಲನೆಯ ಅಕ್ಷರ) ಪಾಲಿಸಲೇಬೇಕು.
ವಟ್ಗಾಕ್ಕಂಡ್ರೆ ನನ್ಗೇ ಜಡ್ (ಖಾಯಿಲೆ) ಬಡ್ಕಳ್ತದ್ ಮಗಾ. ಉಪ್ಪು, ಉಳಿ, ಕಾರ ಸರಿಮಾಡಿ ನಿನ್ಗೇ ಬಡ್ಸಿವ್ನಿ ತಕ:
ವಸುಧೆಯಾಶಿಸೆ ತುಡಲು ತಾನುಂ
ಪಸುರುಪಚ್ಚೆಯ ನಾರುಮಡಿಯಂ
ಬಿಸಿಲ ಸೀಳುತೆ ವರುಣ ಗೈದಂ ಭೂರಿ ವೃಷ್ಟಿಯನುಂ|
ಪಸಿವು ಹಿಂಗುವ ತೆರದೆ ಮೀಯಿಸಿ
ಬಸಿರುಗಟ್ಟುವ ತೆರದೆ ತೋಯಿಸಿ
ಬೆಸನ ಮದುವೆಳೊಳಂಗೆ ಕಳೆಯಲ್ ಮಳೆಯು ಮುದಮಾಯ್ತು||
ಇಲ್ಲಿ ಸಿಂಹಪ್ರಾಸ ಹಾಗೂ ’ಸ’ಕಾರ ಆದಿಪ್ರಾಸವಿದೆ.
ಪ್ರಿಯ ಪ್ರಸಾದು, ತುಂಬ ಧನ್ಯವಾದ; ನನ್ನ ಕೆಲಸವನ್ನು ತುಂಬ ಹಗುರ ಮಾಡಿದ್ದೀರಿ.
ಒಂದೇ ಸಣ್ಣ ತಿದ್ದುಪಡಿ. ಅನಲ ಅವರೂ ನೀವೂ “ವಸುಧಳ್’ ಎಂದು ವಸುಧಾ ಎಂಬ ಸಂಸ್ಕೃತಪದದ ಕನ್ನಡರೂಪವಾಗಿ ಬಳಸಿದ್ದೀರಿ. (ಇದು ಈಚಿನ ತೆಲೆಮೊರೆಯಲ್ಲಿ ಬಂದಿರುವ fad.ಮುಖ್ಯವಾಗಿ ಆ-ಕಾರಾಂತಸ್ತ್ರೀಲಿಂಗದ ಪದಗಳಿಗೆ ಸಂಬಂಧಿಸಿದೆ.ಹೋಲಿಸಿರಿ: ರಾಧಾಳು, ಸೀತಾಳಿಗೆ, ವನಜಾಳಿಂದ ಇತ್ಯಾದಿ ವಿಕಾರಗಳು. ಇವೆಲ್ಲ ಕ್ರಮವಾಗಿ ರಾಧೆಯು, ಸೀತೆಗೆ, ವನಜೆಯಿಂದ ಎಂದೇ ಆಗಬೇಕು.ಆದರೆ ಇದು ಇಂದಿನ ಗದ್ಯದಲ್ಲಿ ಸರಿಯಾಗಿ ಉಳಿದಿಲ್ಲ. ಪದ್ಯದಲ್ಲಿಯಾದರೂ ನಾವು, ಕನಿಷ್ಠಪಕ್ಷ ಅಂಕಿತನಾಮವಲ್ಲದ ನಾಮಪದಗಳಿಗೆ (nouns that are not names of people) ಶುದ್ಧಗನ್ನಡದ ವ್ಯಾಕರಣಬದ್ಧಪದಗಳನ್ನು ಬಳಸೋಣ. ಹೀಗಾಗಿ ಇಲ್ಲಿ “ವಸುಧೆ” ಎಂಬುದೇ ಯುಕ್ತ. ಇಂಥ ಪ್ರಮಾದಗಳನ್ನು ಇನ್ನೂ ಅನೇಕ ಪದ್ಯಪಾನಿಗಳು ತಿಳಿದೋ ತಿಳಿಯದೆಯೋ ಮಾಡುತ್ತಿದ್ದಾರೆ. ಆದುದರಿಂದ ಅವರಿಗೆಲ್ಲ ಈ ಮೂಲಕ ಎಚ್ಚರಿಕೆಯಾಗಲೆಂದೂ ಆಶಿಸುವೆ.
ಮಾನನೀಯ,
ನಿಮ್ಮ ಕೆಲಸವನ್ನು ನಾನು ಹಗುರಾಗಿಸಿಲ್ಲ; ನಾನು ಸುಮ್ಮನಿದ್ದಿದ್ದರೆ, ಇಷ್ಟೇ ಅಕ್ಷರಗಳಲ್ಲಿ ಅನಲರಿಗೆ ಇನ್ನೂ ಚೆನ್ನಾಗಿ ಬೋಧಿಸುತ್ತಿದ್ದಿರಿ. ಆನುಷಂಗಿಕವಾಗಿ ಒಂದು ಪಾಠ ಕಲಿತಂತಾಯಿತು. ಕೃತಜ್ಞತೆಗಳು.
ಮತ್ತೊಂದು ಕಲ್ಪನೆ:
ದುರ್ಮತಾಂಧರ ದಾಳಿಯಳಿಯಲು
ಶರ್ಮದಸನಾತನತೆಯುಳಿಯಲು
ಧರ್ಮದೀಕ್ಷೆಯನಾಂತು ವಿದ್ಯಾರಣ್ಯಮುನಿವರ್ಯಂ |
ನಿರ್ಮಿಸಲು ಸಂಕಲ್ಪಿಸಿರೆ ಚಿ-
ತ್ಕರ್ಮಿ ಸಾಮ್ರಾಜ್ಯವನು,ಶಿವೆ ತಾ-
ಯ್ಕೂರ್ಮೆಯಿಂ ಕರೆದಿರ್ದ ಹೊನ್ನಿನ ಮಳೆಯು ಮುದವಾಯ್ತು ||
“ಮಳೆಯು ಮುದವಾಯ್ತು” ಎಂಬಲ್ಲಿ ಕೇವಲ ಮುಗಿಲ ಮಳೆಯಲ್ಲದೆ ಮತ್ತೂ ಬಗೆಬಗೆಯ
ಸಾಧ್ಯತೆಗಳಿವೆಯೆಂಬುದರತ್ತ ಪದ್ಯಪಾನಿಗಳ ಬಗೆಯನ್ನು ಸೆಳೆಯಲು ವಿದ್ಯಾರಣ್ಯರು ಭುವನೇಶ್ವರಿಯ ಅನುಗ್ರಹದಿಂದ ಸುರಿಯಿಸಿದರೆನ್ನಲಾದ ಹೊನ್ನಿನ ಮಳೆಯ ಪ್ರಸ್ತಾವವನ್ನಿಲ್ಲಿ ತಂದೆ. ಇದೇ ರೀತಿ ರಸಿಕರು ಮುತ್ತಿನ ಮಳೆ, ಮಾತಿನ ಮಳೆ, ಹೂವಿನ ಮಳೆ, ಚಪ್ಪಾಳೆಗಳ ಮಳೆ; ಹಾಗೂ ವಿಕಟಕವಿಗಳು ಕೊಳೆತ ತೊಮೇಟೊ, ಮೊಟ್ಟೆಗಳ ಮಳೆಯ ವರೆಗೆ ಏನನ್ನೂ ಸುರಿಸಬಹುದು:-)
ಗಣೇಶ್ ಸರ್, ಚೆನ್ನಾಗಿದೆ ಪದ್ಯ:),
ಇದೇ ಜಾಡಿನಲ್ಲೇ ಇನ್ನೊಂದು (ನೀರಿನ ಮಳೆಯಲ್ಲದ) ಪೂರಣ
ಆರವಾರದೆ ಶತ್ರುಯೂಥಪ-
ಸಾರಮಂ ಕುಂಭದಿನೆ ಪೀರ್ವಾ
ಕ್ರೂರನಖನೊಲ್ ಮೆರೆವನಂ ಛಲದಿಂದೆ ಸೆರೆವಿಡಿದರ್
ವೀರನಿರಿವಾಳ್ಗಳಿಗೆ ಮಣಿಯದೆ
ತೋರಲೊಲ್ಲೆನೆನಲ್ಕೆ ಗೌಪ್ಯವ
ಕೂರಿತಸಿಗಳ ನೆತ್ತರೀಂಟಿಪ ಮಳೆಯು ಮುದವಾಯ್ತು
ಶತ್ರುಗಳಿಗೆ ಸೆರೆಸಿಕ್ಕಿ ತನ್ನಪಡೆಯ ಗೌಪ್ಯವನ್ನು ಬಿಟ್ಟುಕೊಡದೆ ವೀರಮರಣವನ್ನು ಹೊಂದಿದ ಯೋಧನಬಗ್ಗೆ ಪೂರಣ
ಆರವಾರ – ವೀರೋದ್ಗಾರ
ಯೂಥಪಸಾರ – ಸಲಗದ ಕುಂಭಸ್ಥಲದ ಮಾಂಸ
ಕ್ರೂರನಖ – ಸಿಂಹ
ಈಂಟು – ಕುಡಿ
ಕೂರಿತಸಿ – ಹರಿತಾದ ಖತ್ತಿ
ಮುದ – ಯೋಧನಿಗೆ ವೀರಮರಣವೇ ಮುದ
‘ಶತ್ರುಯೂಥಪಸಾರಮಂ ಕುಂಭದಿನೆ ಪೀರ್ವಾ ಕ್ರೂರನಖನೊಲ್ ಮೆರೆವನಂ’
ಈ ಪ್ರಯೋಗ ಸರಿಯಿಲ್ಲವೆಂದೆನಿಸುತ್ತದೆ, ಏನು ಸರಿಯಿಲ್ಲವೆಂದು ತೋರುತ್ತಿಲ್ಲ… ತಪ್ಪಿದ್ದರೆ ದಯವಿಟ್ಟು ತಿಳಿಸಿಕೊಡಿ
ಸೋಮ
ಕ್ರೂರನಖಿ ಎಂದು ಹಾಕಿದರೆ ಒಳಿತು.
ಶತ್ರುಯೂಥಪರಕ್ತಮಂ ಎಂದು ಹಾಕಿದರೆ ಶಬ್ದಮೈತ್ರಿ.ಮತ್ತು ಅರ್ಥಸ್ಫೋಟ ಉತ್ತಮವಾಗುತ್ತೆ ಅಂತ ನನಗನ್ಸುತ್ತೆ.
ಕುಂಭ ಎಂದರೆ ಆನೆಯ ನೆತ್ತಿ/ಹಣೆಯ ಮೇಲಿರುವ ಎರಡು ಉಬ್ಬು/ಗುಭುಟುಗಳು. ಚಿತ್ರಗಳಲ್ಲಿ ಸಿಂಹವನ್ನು ಆ ಕುಂಭವನ್ನು ತನ್ನ ಪಂಜದಿಂದ ಬಗಿಯುವಂತೆ ತೋರಿಸಿರ್ತಸ್ರೆ ನಿಜ. ಆದರೆ. ಅಲ್ಲಿ ಹೆಚ್ಚು ರಕ್ತಸ್ರಾವವಾಗುವುದೇ ಇಲ್ಲ. ಆದ್ದರಿಂದ ರಕ್ತವನ್ನು ನೆಕ್ಕಬಹುದೇ ಹೊರತು ಹೀರುವಷ್ಟಿರೋದೇ ಇಲ್ಲ 🙂 ಪೊಯೆಟಿಚ್ ಲೈಸೆನ್ಸ್ ಎಂದು ಅನ್ಕೋಬಹುದು.
ಕುಂಭದ ಬದಲು ಗಂಡ ಹಾಕಬಹುದು. ಗಂಡ ಎಂದರೆ ಕೆನ್ನೆ. ಅಲ್ಲಿಂದರಕ್ತ ಅಮೋಘವಾಗಿ ಚಿಮ್ಮುತ್ತೆ. ನ್ಯಾಯವಾಗಿ ಬೆಳೆದ ಆನೆಯನ್ನು ಸಿಂಹಗಳು ಬೇಟೆಯಾಡುವುದೇ ಇಲ್ಲ ಈಗಿನ ಕಾಲದಲ್ಲಿ. It is too risky for the lion and pretty much impossible. So all of this is poetic license 🙂
ಶ್ರೀಕಾಂತರೆ,
ಸಲಹೆಗೆ ಧನ್ಯವಾದಗಳು:), ಶತ್ರುಯೂಥಪರಕ್ತವನ್ನೇ ಅಲ್ಲಿಧ್ವನಿಸಿದ್ದೇನೆ, ಆದಿಪ್ರಾಸದಕಾರಣ ರಕ್ತವೆಂದು ಬಳೆಸಲಾಗಲಿಲ್ಲ.
ನನ್ನ ಉದ್ದೇಶ ಯೋಧನಿಗೆ ಶತ್ರುರಕ್ತಹೀರುವ ಪರಾಕ್ರಮವು ಮತ್ತು ಶತ್ರುಗಳ ಅಸ್ತ್ರಗಳು ತನ್ನನೆತ್ತರನ್ನು ಹೀರಿದರೂ ಸಹಿಸುವ ಪರಾಕ್ರಮವನ್ನೂ ಬಿಂಬಿಸುವುದಾಗಿತ್ತು. ಅದಕ್ಕಾಗಿ ಸಿಂಹ-ಆನೆಗಳನ್ನು ತಂದೆ (ಪ್ರಸಿದ್ಧ ಕವಿಸಮಯವನ್ನ ಆಶ್ರಯಿಸಿದ್ದೇನೆ)
ನೋಡಿದೆಯ. ರಾತ್ರಿ ಅವೇಳೆಯಲ್ಲಿ ಕೂತು ವ್ಮರ್ಶಿಸಿದರೆ ಹೀಗೆ ಅಚಾತುರ್ಯವಾಗೋದು. ಪ್ರಾಸದ ವಿಚಾರ ಗಮನಕ್ಕೆ ಬರಲೇ ಇಲ್ಲ. ಗಣೇಶರು ಪದ್ಯವನ್ನು ಸೈಯೆಂದಾಯಿತು. ಆದರು ನನ್ನದೊಂದು ತಗಾದೆ ಇದೆ. ಸಂಸ್ಕೃತದಲ್ಲಿ ನಖಿನ್ ಎಂದರೆ ಸಿಂಹ. ಎಂದಮೇಲೆ ಕ್ರೂರನಖಿ ಎಂದು ಕನ್ನಡದಲ್ಲಾಗಬೇಕಲ್ಲವೆ. ಕ್ರೂರನಖ ಪದ ಹೇಗೆ?
ಶ್ರೀಕಾಂತರೆ,
ನಖಃ ಎಂದರೆ ಸಿಂಹವೆಂಬ ಅರ್ಥವನ್ನೂ ಆಪ್ಟೆ ಕೋಷದಲ್ಲಿ ಕೊಟ್ಟಿದೆ, ಅಲ್ಲದೆ ಹಳಗನ್ನಡ ಬಳಕೆಗೆ ಮಾರ್ಗದರ್ಶಿಯಾಗಿರುವ ರನ್ನನ ಗಧಾಯುದ್ಧದಲ್ಲಿ ‘ಉಗ್ರನಖಂ’ ಎಂಬಬಳಕೆ ಸಿಂಹಕ್ಕೆ ಬರುತ್ತದೆ, ಇದನ್ನು ಆಧಾರವಾಗಿಟ್ಟು ‘ಕ್ರೂರನಖಂ’ ಎಂದು ಮಾಡಿದೆ. ರನ್ನನ ಪದ್ಯನೋಡಿರಿ-
ಸಮದೇಭಕುಂಭಭೇದನ-
ಸಮಯೋಗ್ರನಖಂಗೆ ಹರಿಗೆ ಮೃಗರಿಪುವೆಸರು-
ತ್ತಮಿಕೆಯೆ ನಿನಗೆ ಜರಾಸಂ-
ಧಮಥನ ಕುರುವೈರಿವೆಸರದೇನುನ್ನತಿಯೇ
ಕ್ರೂರನಖಿ ಎಂದೂ ಮಾಡಬಹುದು ಕ್ರೂರನಖಂ ಎಂದೂ ಮಾಡಬಹುದೆಂದು ತೋರುತ್ತದೆ ಅಲ್ಲವೇ?
ಥ್ಯಾಂಕ್ಸ್ ಸೊಮ. ಸೋದಾಹರಣವಾಗಿ ತಿಳಿಸಿದಿರಿ. ಉತ್ತಮ. ರನ್ನನ ಪದ್ಯವನ್ನು ಪೂರ್ತಿಯಾಗಿನ್ಹಾಕುವಿರ?
Shrikanthare,
saMtOshavAgi hAkuttEne, nanna pustaka keLagaDe maneyallide, nALe beLagge post mADtEne:)
updated full padya of Ranna
Thanks Soma.
ರನ್ನನ ಉಗ್ರನಖ ಪ್ರಯೋಗದ ಆಧಾರದಮೇಲೆ ಕ್ರೂರನಖದ ವ್ಯುತ್ಪತ್ತಿ ಸಾಧು.
For clarification purposes, which Apte dictionary did you refer to? Is it the sanskrit to English version or the English to sanskrit version? The latter only has ” pajcanakhaH”. due to space shortage the pajca and nakhaH have been printed in different lines.
Shrikaanthare :),
this is from Sanskrit to English dictionary (book). Could not see this available in the online dictionary
it states nakhaH has multiple meanings and lion is one of them
Thanks Soma
ಅಡ್ಡಿಯಿಲ್ಲ; ಭಾರತೀಯಕವಿಸಮಯವೇ ಸೋಮನ ಬೆಂಬಲಕ್ಕಿದೆ:-)
ನನಗಂತೂ ಪದ್ಯವು ಅನವದ್ಯವಾಗಿ ಕಂಡಿದೆ. ಒಳ್ಳೆಯ ಶೈಲಿ; ವ್ಯುತ್ಪಾದಕಪದಪದ್ಧತಿ. ಪ್ರಿಯ ಸೋಮ, ಇಂಥ ಪದ್ಯಗಳನ್ನು ಮತ್ತೆ ಮತ್ತೆ ಬರೆದು ನಮ್ಮ ಮುದದ ಮಳೆಯನ್ನು ಹೆಚ್ಚಿಸು.
ಗಣೇಶ್ ಸರ್,
ಮೆಚ್ಚುಗೆಗೆ ಧನ್ಯವಾದಗಳು:). ಈ ರೀತಿ ಸಮಾಸಗಳನ್ನು ಮಾಡುವಲ್ಲಿ ನನಗೆ ಕೆಲವು ಸಂದೇಹಗಳಿವೆ ಅವನ್ನುಕುರಿತು ನಿಮ್ಮೊಡನೆ ಚರ್ಚಿಸುತ್ತೇನೆ
ಕರಗಿ ಪೋಗಲು ಸಕಲ ಸಂಪದ
ಮರುಗಿದನು ಬಿದಿಯಾಟವಳಿಯುತ
ಧರೆಗೆ ಕುಸಿದನು ಚಾರುದತ್ತನು ಕಷ್ಟಕಾಲದೊಳು
ಪುರದ
ಸುಂದರಗಣಿಕೆ ವಸಂತಸೇನೆಯುಮರುಳುಗೊಳ್ಳುತಲಾತನಲ್ಲೇ
ಭರಿಸಿ ದುಃಖವ ಕರೆದ ಕೂರ್ಮೆಯ ಮಳೆಯು ಮುದವಾಯ್ತು
ಕಾಂಚನ ಅವರೆ, ಮೃಚ್ಛಕಟಿಕ ಆಧಾರಿತ ಪೂರಣ ಬಹಳ ಚೆನ್ನಾಗಿದೆ
“ಪುರದ ಗಣಿಕೆ ವಸಂತಸೇನೆಯು”
ಎಂದು ಸವರಿಸಿದರೆ ಮತ್ತೂ ಯುಕ್ತವಾದೀತು.
ಸೈರಿಸದೆ ಬಿಸುಗುದಿಯ ಬೇಗೆಯ-
ನುತಾಂ ಮೊರೆಯಿಡಲಾಗಿ ಭುವಿಯಂ
ಕಂಡು ಬಾನೊಳ್ನಲಿವ ನೀರಧೆ ಕರಗಿ ನೀರಾಗೆ |
ಬಿಳ್ಪು ಮುಸಳಿಸಿ ಕಪ್ಪುಗೊಡೆಯಮ್
ತಿರೆಗೆ ಪಿಡಿಯಲ್ಕಮಲ ಸಖನಾ
ಉಗ್ರರಷ್ಮಿಯನಿರುಳುಗವಿಯಲ್ ಮಳೆಯು ಮುದವಾಯ್ತು ||
ವಸುಧಳಿಚ್ಚಿಸೆ ತುಡಲು ತಾನುಂ
ಪಚ್ಚಪಸುರಿನ ನಾರುಮಡಿಯಂ
ಮೆಚ್ಚಿ ವರುಣಂ ವರ್ಷಗೈಯ್ಯಲಿಚ್ಚೆಯಿಂದಂ ಕ್ಷೋ |
ಣಿ ತಾನ್ ಮೆಯ್ಯಂ ಮರೆತು ಮೀಯಲ್
ತುಡಿಸಿದಳ್ ಋತುದೇವಿ ವಸ್ತ್ರಂ
ನೋಡೆ ಮದುವೆಳ್ ಬಿಂಕದಂದವ ಮಳೆಯು ಮುದಮಾಯ್ತು ||
————————-
: ತಪ್ಪುಗಳನು ತಿಳಿಸಿ
————————-
ಬಿಸಿಲಿನ ಬೇಗೆಯ ತಾಳದೆ ಮೊರೆಯಿಡುವ ಭುವಿಯನ್ನು ನೋಡಿ ಮೋಡವೊಂದು ಬಿಳಿವರ್ಣದಿಂದ ಕಪ್ಪುವರ್ಣ ಕ್ಕೆ ತಿರುಗಿ ಭುವಿಗೆ ಕೊಡೆ ಹಿಡಿಯಲು, ಸೂರ್ಯ ರಶ್ಮಿಗೆ ಕತ್ತಲಾವರಿಸಿತು ಎಂಬುದು ಮೊದಲ ಪಧ್ಯ.
ಭೂಮಿ ಹಚ್ಚ ಹಸಿರಿನ ಸೀರೆಯನ್ನುಡಬೇಕೆಂದು ಬಯಸಿದಾಗ ವರುಣನು ಮೆಚ್ಚಿ ಮಳೆಗರೆದ, ಆ ಮಳೆಯಲ್ಲಿ ಮೈಮರೆತು ಸ್ನಾನ ಮಾಡಲು, ಋತು ದೇವಿ ವಸುಧೆ ಬಯಸಿದ ವಸ್ತ್ರವನ್ನು ತೊಡಿಸಿದಳು, ಆ ಮಧುವಣಗಿತ್ತಿಯ ಸೊಭಗ ನೋಡಲು ಮಳೆಯು ಮುದವಾಯ್ತು ಎಂಬುದು ಎರಡನೇ ಪಧ್ಯ…
ಛಂದಸ್ಸಿನ ದೃಷ್ಟಿಯಿಂದ ಸಾಕಷ್ಟು ತಿದ್ದುವುದಿದೆ. ನನಗೆ ದೂರವಾಣಿ ಮಾಡಿದಲ್ಲಿ ವಿವರವಾಗಿ ತಿದ್ದಲು ಸಾಧ್ಯ. ಉಳಿದ ಮಿತ್ರರು ಯಾರಾದರೂ ಸಹಕರಿಸಿಯಾರೇ?
ಮೇಲೆ ೬ರಲ್ಲಿ ಸಹಕರಿಸಿದ್ದೇನೆ!
ಮಹಾಶಯರೆ ತುಂಬಾ ಸಂತೋಷ…. ಕನ್ನಡ ಓದೋದಕ್ಕೆ ಶುರು ಮಾಡಿದ್ದೇ ಮೊನ್ನೆ ಮೊನ್ನೆ. ಅಲ್ಪಪ್ರಾಣ ಮಹಾಪ್ರಾಣಗಳೇ ಪ್ರಾಣ ತಿನ್ ಬೇಕಾದ್ರೆ ಛಂದಸ್ಸು-ಗಿಂದಸ್ಸು ಅಂತ ಕೈ ಹಾಕಿದ್ರೆ ಎಡವಟ್ಟಾಗೋದು ಸಹಜಾನೆ.. ಕಂದ ಎಡವ್ದಲೆ ಕಂದ ಬರೆಯೋಕ್ಕಾಗಲ್ಲ ಅಂತ ನಿಮ್ಮಲ್ಲೇ ಯಾರೋ ಹೇಳಿದ್ದ್ ನೆನಪಿದೆ.. ಪ್ರಸಾದು ಸಾಕಷ್ಟು ವಿಷ್ಯ ತಿಳಿಸಿದ್ದಾರೆ… ನಿಮ್ಮ ದೂರವಾಣಿ ನಂಬರ್ ಕೊಟ್ರೆ ನಿಮ್ಜೊತೆ ಮಾತಾಡ್ದಾಗೂ ಆಗತ್ತೆ.. ಇನ್ನೂ ಸ್ವಲ್ಪ ವಿಷ್ಯ ತಿಳ್ಕೊಳ್ ಬಹುದು… ( anil.universe1@gmail.com)
ಗಣೇಶ್ ಸರ್, ತುಂಬಾ ಸಂತೋಷ…. ಕನ್ನಡ ಓದೋದಕ್ಕೆ ಶುರು ಮಾಡಿದ್ದೇ ಮೊನ್ನೆ ಮೊನ್ನೆ. ಅಲ್ಪಪ್ರಾಣ ಮಹಾಪ್ರಾಣಗಳೇ ಪ್ರಾಣ ತಿನ್ ಬೇಕಾದ್ರೆ ಛಂದಸ್ಸು-ಗಿಂದಸ್ಸು ಅಂತ ಕೈ ಹಾಕಿದ್ರೆ ಎಡವಟ್ಟಾಗೋದು ಸಹಜಾನೆ.. ಕಂದ ಎಡವ್ದಲೆ ಕಂದ ಬರೆಯೋಕ್ಕಾಗಲ್ಲ ಅಂತ ನಿಮ್ಮಲ್ಲೇ ಯಾರೋ ಹೇಳಿದ್ದ್ ನೆನಪಿದೆ.. ಪ್ರಸಾದು ಸಾಕಷ್ಟು ವಿಷ್ಯ ತಿಳಿಸಿದ್ದಾರೆ… ನಿಮ್ಮ ದೂರವಾಣಿ ನಂಬರ್ ಕೊಟ್ರೆ ನಿಮ್ಜೊತೆ ಮಾತಾಡ್ದಾಗೂ ಆಗತ್ತೆ.. ಇನ್ನೂ ಸ್ವಲ್ಪ ವಿಷ್ಯ ತಿಳ್ಕೊಳ್ ಬಹುದು… ( anil.universe1@gmail.com)
ಅವಶ್ಯವಾಗಿ. ನನ್ನ ದೂರವಾಣಿಯ ಸಂಖ್ಯೆ:
9449089898 ಸಾಮಾನ್ಯವಾಗಿ ಬೆಳಗ್ಗೆ ಹನ್ನೊಂದರ ಹೊತ್ತಿಗೆ ಬಿಡುವಾಗಿರುವೆ.
1. ಎರಡನೆಯ ಪಾದ ’ನುತಾಂ’ – ಲಗಂ
2. ನಾನು ಹಿಂದೆ ಹೇಳಿದಂತೆ ಸಿಂಹ/ಗಜ/ಶರಭಪ್ರಾಸಗಳು ಮಿಶ್ರವಾಗಿವೆ
3. ನೀರಧೆ ತಪ್ಪು; ನೀರದೆ ಎಂದಾಗಬೇಕು
4. ಉತ್ತರಾರ್ಧದಲ್ಲಿ ಅರ್ಥಸ್ಪಷ್ಟತೆ ಇಲ್ಲ – ನಾಲ್ಕನೆಯ ಪಾದದ ಕೊನೆಯ ಗಣದಲ್ಲಿ ಹೆಚ್ಚು ಮತ್ರೆಗಳಿವೆ; ಆರನೆಯ ಪಾದಾದಿಯಲ್ಲಿ ವಿಸಂಧಿದೋಷವಿದೆ
ಅಂಚೆಯಂ ತಂದನಿಬರಿಲ್ಲಿಗೆ
ಪಂಚಿ ಪೋಗುವ ಪೊಳ್ತಿಗಕಟಾ
ಅಂಚೆಗಾರಂ ಬಳಲಿ ಬಲು ಬಾಯಾರಿ ಬೆಂಡಾದಂ ।
ಕೊಂಚ ನೀರಂ ಕೊಡುವಯೇನೆನೆ
ಕೆಂಚಿಯೊಳಗಿಂ ತಂದು ತಾನ್ ನಗೆ
ಮಿಂಚುತೀಯಲ್ ಪ್ರೀತಿ ಬೆರಸುತಮಳೆಯು ಮುದವಾಯ್ತೇ ॥
ಇಲ್ಲಿಗೆ- ಮನೆಗೆ
ಕೆಂಚಿ- ಓರ್ವ ಹೆಂಗಸು
ಅಳೆ – ಮಜ್ಜಿಗೆ
ಮಳೆಯನ್ನು ಮಜ್ಜಿಗೆಯೆನ್ನಾಗಿಸಿದ ಪೂರಣ ಚೆನ್ನಾಗಿದೆ 🙂
Thanks soma
ಅದೆಷ್ಟು ಮಥಿಸಿರಬೇಡ!
😉
ನಮ್ಮ ರಾಜ್ಯದ ಹಿರಿಯ ನಾಯಕ
ಸುಮ್ಮಸುಮ್ಮನೆ ವಚನ ನೀಡುತ-
ಲಿಮ್ಮಡಿಸಿದುತ್ಸಾಹದಲಿ ಭಾಷಣವ ಬಿಗಿಯಲ್ಕೆ |
ಉಮ್ಮಳಿಸಿತನುಚರರ ಸಂತಸ
ಚಿಮ್ಮುವೊಲ್ ನೀರ್ಬುಗ್ಗೆ ಯಾತಗೆ
ಹೊಮ್ಮಿದಾ ಕರತಾಡನದ ಸುರಿಮಳೆಯು ಮುದವಾಯ್ತು ||
ಸುಳ್ಳು ಆಶ್ವಾಸನೆಗಳನ್ನೇ ಕೊಡುತ್ತಲಿರುವ ನಾಯಕನ ಭಾಷಣದಿಂದ ಉತ್ಸಾಹಿತರಾದ ಅನುಚರರ (followers) ಸಂತೋಷವು ನೀರ ಬುಗ್ಗೆಯಂತೆ ಚಿಮ್ಮಲು ಅವರ ಚಪ್ಪಾಳೆಗಳು ಆತನಿಗೆ ಹಿತವಾಯಿತು.
ಒಳ್ಳೆಯ ಸಾಮಯಿಕಪದ್ಯ:-)
ತರಣಿ ದುರುಳನು, ಪೀರ್ವ ತೇವವ
ಧರಣಿ ಬೆಂದಿರೆ ಗ್ರೀಷ್ಮತಾಪದೆ
ಸುರಿದು ಧಾರೆಯ ಮಳೆಯು ಮುದವಾಯ್ತೀಗಲೆನ್ನದಿರು|
ಕಿರಣ ಬೀರುತೆ ಹೀರುತಲ್ಲಿ
ಲ್ಲಿರುವ ನೀರನು ಹರಡುತೆಲ್ಲೆಡೆ
ಚರಿಪ ಸೂರ್ಯನು ಸ್ವಾರ್ಥರಹಿತನು, ಸತ್ಯವಿದ ನೋಡು||
ಸೂರ್ಯನತಾಪದಲ್ಲಿರುವ ನಿರ್ಮಮತೆ ಚೆನ್ನಾಗಿ ಮೂಡಿದೆ ಪ್ರಸಾದು 🙂
ಗ್ರೀಷ್ಮಧಗೆ – ಅರಿಸಮಾಸವಲ್ಲವೇ?
ಹೌದು; ಅದು ಅರಿಸಮಾಸವೇ. ಆದರೆ ಪದ್ಯದ ಕಲ್ಪನೆ ಮತ್ತು ಕೀಲಕಯೋಜನೆ ತುಂಬ ಸೊಗಸಾಗಿವೆ.
Thanks Soma. I have rectified it.
ಮುಗಿಲ ತುಂಬಿಹ ಮುಗಿಲಿನೋಟದೆ
ಹಗಲಲಡಗಿದ ರವಿಯದಾಟದೆ
ಸೊಗವು ಸರಿದಂತಿಳೆಯ ಮಡಿಲಿಗೆ ಮಳೆಯು ಸುರಿದಾಯ್ತು ।
ಮೊಗೆದು ಮಿಂಚಲಿ ಗುಡುಗಿ ಸಂಚಲಿ
ಧಗೆಯ ನೀಗುತೆ ಧರೆಗೆ ಸಿಂಚಲಿ
ಜಗದ ಜೀವರ ಮನವ ತಣಿಸಿರೆ ಮಳೆಯು ಮುದವಾಯ್ತು ॥
ಮುನಿಯು ಲೋಪಾಮುದ್ರೆಯಂ ತ-
ನ್ನಿನಿಯಳಾಗೆನೆ ಬೇಡಲೊಪ್ಪುತೆ
ತನಗದೆಳ್ಚರಮಪ್ಪವರೆ ನೀನಗಲದಿರ್ಕೆಂದಳ್
ತನುಮನಂಗಳ್ ಬೆರೆತು ಬಾಳ್ದರ್
ಮುನಿಯು ಮಾತಂ ಮೀರೆದೊಡನಾ
ಮುನಿಯ ಕಣ್ಣೊಡನಾಗಳಾ ಕೋಮಳೆಯುಮುದವಾಯ್ತು ||
ಉದ- ನೀರು.
ಕಾವೇರಿಯ ಹುಟ್ಟನ್ನು ವಿವರಿಸುವ ಪದ್ಯ.
ಆಕೆ ಕಾವೆರಿಯಾಗಿ ಹರಿದುದರಿಂದ ಅವನು ಗೊಳೋ ಎಂದತ್ತಿದ್ದನು ಅವನ ಕಣ್ಣೆ ಅವಳ ಜೊತೆ ನೀರಾಯ್ತೆಂದಿದ್ದೇನೆ
ಅತಿಮನೋಹರಮಪ್ಪ ಪಾಗಿಂ-
ದಿತರಪದ-ವರ್ಣಂಗಳಿಂ ಭಾ-
ವಿತಮೆನಲ್ ಕೀಲಕಮನೆಂತೋ ಒಪ್ಪ-ಓರಣದಿಂ |
ಜತೆಯ ಮಾಡಿಸಿ ಮೂಡಿಸಿದ ಸುಕ-
ವಿತೆಯನೇವೇಳ್ವುದೊ ಚಮತ್ಕೃತಿ-
ಯತಿಶಯಂ ಕರುಣಿಸಿರೆ ವಾಕ್ಸುವಿಮಳೆಯು ಮುದವಾಯ್ತು ||
ವಾಕ್ +ಸುವಿಮಳೆ = ನುಡಿಯಿಂದ ನಿರ್ಮಲೆಯಾದವಳು; ಅರ್ಥಾತ್ ಸರಸ್ವತಿ.
ನಿಮ್ಮೀ ಪದ್ಯಪೂರಣಪಾಟವಕ್ಕೆ ವಾಗ್ವಧೂಟಿಯ ಅನುಗ್ರಹವು ಕಾರಣವೆಂದು ಭಾವ.
ಧನ್ಯೋಸ್ಮ್ಯಹಂ ಗಣೇಶರೆ. ನನ್ನ ಹಿಂದಿನ ಕೆಲ ಪದ್ಯಗಳನ್ನು ನಿರ್ಲಕ್ಷಿಸಿದ್ದಿರಿ ಅನ್ನಿಸಿ ಏಕೆಂದು ಚಿಂತೆ ಹತ್ತಿತ್ತು 🙂
ಪುಂಖಾನುಪುಂಖಗತಿಯಿಂದೆ ಕವಿತ್ವಲಕ್ಷ್ಮೀ-
ಪ್ರೇಂಖಂ ಮಹಾರಯದೆ ತೂಗಿರಲತ್ತಲಿತ್ತಲ್ |
ರಿಂಖದ್ರಸಾರ್ದ್ರಮತಿಯಾಂ ಪ್ರತಿಪದ್ಯಕಂ ಮ-
ತ್ಕಂ ಖಾಂಕಮೊಪ್ಪಮೆನಿಪಂತೆಸಗಲ್ಕೆ ಸೋಲ್ತೆಂ ||
(ಖಾಂಕ = ಕಣ್ಣಿಟ್ಟು ನೋಡುವ ಅವಧಾನ)
ನಲ್ವಾತಿನಿಂ ನೀಂ ನಲವಿತ್ತು ಚಿತ್ತಂ
ಗೆಲ್ವಾತನಲ್ತೇ ಗೆಲಮಕ್ಕೆ ಮುತ್ತಂ
ಬೋಲ್ವಾತಿಗೆಂದುಂ ಹುರುಪಕ್ಕೆ ಮತ್ತಂ
ಸೋಲ್ವಾತ ಮಾತೇಂ ಸೊಬಗೊಂದನುತ್ತಂ
ಏಕೆಂದು ಈಗ ಗೊತ್ತಾಯಿತಲ್ಲವೆ 😉
ಶ್ರೀ ಗಣೇಶರೆ,
ಮೇಲೆ ಸಂಖ್ಯೆ ೭ರಲ್ಲಿನ ನಿಮ್ಮ ಆದೇಶವನ್ನು ಪಾಲಿಸಿ ಈ ಪದ್ಯವನ್ನು ರಚಿಸಿದ್ದೇನೆ. ಕೊಳೆತ ಟೊಮೇಟೊ, ಮೊಟ್ಟೆ-ಮಳೆಗಳಿಂದಾಚೆಗೆ ನಿಮ್ಮ ಕಲ್ಪನೆ ಹರಿಯಲಿಲ್ಲವೇಕೋ?!
ಈಚಿನೆನ್ನಯ ಯವನಯಾನದೆ
ಶೌಚಬಾಧಿಸೆ ಚರಣಕಾಲದೆ
ಪೇಚನೂಹಿಸಲಾರಿರೈ ಕನ್ನಡದ ಮಕ್ಕಳಿರಾ|
ದೋಚುತಿರ್ದರದೊಂದು ಯೂರೋ (೭೨ ರೂಪಾಯಿ)
ಶೋಚನೀಯವದೆನ್ನ ಸ್ಥಿತಿಯು
ಸೇಚಗೈಯಲು ಮರಳಿ ಮನೆಯೊಳ್ ಮಳೆಯು ಮುದಮಾಯ್ತು|| (ಗೆಳೆಯನ ಮನೆಯಲ್ಲಿ ಇಳಿದುಕೊಂಡಿದ್ದೆ)
ಪದ್ಯದ ಸ್ವಾರಸ್ಯವು ರಹಸ್ಯವರ್ಗದಲ್ಲಿ (private circles) ಅತಿಶಯ. ಆದರೆ ಸದಸ್ಯವರ್ಗದಲ್ಲಿ (public circles) ಅವಶಯ:-)
ಕಾದಿರುವುದಿಳೆ ಬಿಸಿಲ ತಾಳೆನೆ
ರೋದಿಪಳ್ನಭಗದನು ಪೇಳುತ
ಲೀಧಗೆಯನಾರಿಸುವುದಕೆ ನೀರೆರೆವೆಯಾ ಸಖನೇ|
ಮಂದಮತಿಯಿಂ ಚಲಿಪ ಮೋಡದೊ
ಳಿಂದಲೇ ಧಡಧಡನೆ ಗುಡುಗುತೆ
ಸುಧೆಯತೆರದೊಳ್ ಸುರಿಯುತಿರಲಾ ಮಳೆಯು ಮುದವಾಯ್ತು|
Marked improvement in diction. You will only go further from here.
ಧನ್ಯವಾದಗಳು, ನಿಮ್ಮ ಪ್ರೇರಣೆಯಿಂದ ಮತ್ತೊಂದ ಬರೆಯುತ್ತೇನೆ…
ಆದಿಪ್ರಾಸದಲ್ಲೇಕೆ ತ್ರಾಸವಾಯಿತು ಶ್ರೀಧರಾ??
ಕ್ಷಮಿಸಿ ಸಾರ್, ಗಮನಿಸಿರಲಿಲ್ಲ… 😛 ತಿದ್ದಿಕೊಳ್ಳುವೆ 🙂
ಸಂಗಡವೆ ಋಷಿತರುಣ ಋಷ್ಯ
ಶೃಂಗನನು ಕರೆತಂದಳಿದಿಗೋ
ಅಂಗದೇಶದ ರಾಜಧಾನಿಗೆಯರಗುವರಿ ಶಾಂತೆ
ಪುಂಗವನು ಕಾಲಿಡುವುದೇ ತಡ
ಪೊಂಗಿ ಸುರಿದನು ವರುಣದೇವನು
ಹಿಂಗಿತೈ ಬರ ಜೀವರಾಶಿಗೆ ಮಳೆಯು ಮುದವಾಯ್ತು
ತುಂಬ ಚೆಲುವಾದ ಸಂದರ್ಭಗರ್ಭಿತವಾದ ಪರಿಹಾರ. ಈ ಕಲ್ಪನೆಯ ಹಿಂದಿರುವ ರಾಮಾಯಣಪ್ರಕರಣವು ಮಾರ್ಮಿಕವಾದದ್ದು; ಇಂಥ ಪೂರಣಗಳಿಗೆ ಯುಕ್ತಾವರಣದ ರಸ-ರಂಗುಗಳನ್ನು ತುಂಬುವಂಥದ್ದು.
ನಲ್ವರಕೆಗೆ ನಮನ
ಎಂದೊ ಆಯುಧಪೂಜೆಯಾಯಿತ-
ದೊಂದು ದಿನ ಬಿಟ್ಟೆಂದು ನೀರನು
ತಂದು ಮೀಯಿಸರೆನ್ನನೆನ್ನುತ ಬಂಡಿ ಹಲುಬುತಿರೆ
ಬಂದು ಕೇಳಿದ ನಾಯಿ ಕಡೆಗದು
ನಿಂದುಮೂತ್ರವ ಮಾಡಿ ಹೋಗಲು
ನೊಂದ ಬಂಡಿಗೆ ದಿಢೀರೆರಗಿದ ಮಳೆಯು ಮುದವಾಯ್ತು
ದಿಢೀರ್ ಲಗಂ ಪ್ರಯೋಗವನ್ನು ಪರಿಣಾಮಕ್ಕಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದೀನಿ
ಪ|| ವರವದಲ್ತೆಲೆ ಬಂಡಿರಾಯಗೆ
ಚರಣಮಾತ್ರಮದಿರ್ದು ನಾಸಿಕ,
ಶಿರದ ಮೇಣಿತರೆಲ್ಲವಂಗಗ
ಳಿರದೆ ಪೋದುದದೆಂಬೆನು|
🙂
ಇದೇನು ಶ್ರೀಕಾಂತರೇ, ಪ್ರಸಾದು ಅವರ ಪೇಟೆಂಟ್ ಪಥದಲ್ಲಿ ಟ್ರೆಸ್ಸ್ ಪಾಸ್ ಮಾಡುತ್ತಿದ್ದೀರಿ!!!
ಇದೇನು ಗಣೇಶರೆ. ನಾಯಿ ಪದದಲ್ಲಿ ಯಿಕಾರವನ್ನು ಮಿಸ್ ಮಾಡಿಬಿಟ್ಟರಲ್ಲಾ 😉
???
ಮೂ.ವಿ ಮಾಡಿದ್ದು ನಾಯಲ್ಲದೆ ನಾನಲ್ತು 🙂
ಮತ್ತೊಂದು ಕಲ್ಪನೆ –
ಬರುವ ಕಾಲಕೆ ಬರದಿರಲ್ ಮಳೆ
ಬರದ ಸೂಚನೆ ಕಂಡ ರೈತರು
ಕರವಮುಗಿಯುತ ಬೇಡಿರಲ್ವರುಣಂಗೆ ಕಾತುರದಿ
ಕರುಣೆಯಿಂದಿಳೆಯೆಡೆಗೆ ನೋಡಿದ
ವರುಣದೇವನ ಮನದೆಮೋಡವು
ಕರಗಿಕೂಡಲೆ ಕಂಬನಿಯವೊಲ್ ಮಳೆಯು ಮುದವಾಯ್ತು
ಎರಡನೆಯ ಪಾದದಲ್ಲಿ ‘ಬರುವ’ ಎಂದಾಗಬೇಕು.
ಮೂರನೆಯ ಪಾದಾಂತ್ಯದಲ್ಲಿ ’ಕಾತರದಿ’ ಎಂದಾಗಬೇಕು.
ಬರದ – ಅಂದರೆ drought ಎಂಬ ಅರ್ಥದಲ್ಲಿ ನಾನು ಕಲ್ಪಿಸಿಕೊಂಡದ್ದು
Oh! I missed it. Sorry for the misplaced objection.
And imagination is too good – ವರುಣದೇವನ ಮನದೆ ಮೋಡವು
ಕರಗಿ ಕಂಬನಿಯವೊಲ್. Sri RG has summed it up well. Congrats and thanks for the fine verse.
ಧನ್ಯವಾದಗಳು ಸಾರ್… your objections have helped me improve… please do support as always 🙂
ಬರದ ಅಂದರೆ ಮಳೆ ಬಾರದಿರುವ ಅನ್ನುವ ಅರ್ಥವನ್ನೂ ಕೊಡುತ್ತೆ.
Super cheDi. varunana manadi mODa karagidudu….super.
thanks for wonderful kalpane.
thanks Shreesha.. 🙂
ಹೌದು ಶ್ರೀಶ, ನಾನು ಅವಸರದಲ್ಲಿ ಈ ಚಂದದ ಸ್ವೋಪಜ್ಞಕಲ್ಪನೆಯ ಪದ್ಯವನ್ನು ಗಮನಿಸಿರಲಿಲ್ಲ. ದಿಟವಾಗಿ ಇದು ಪರಮಸುಂದರವಕ್ರೋಕ್ತಿ. ಉಪಚಾರವಕ್ರತಾ ಎಂಬ ಪ್ರಕಾರದ್ದು. ಜೊತೆಗೆ ಇದು ಒಳ್ಳೆಯ ಲಕ್ಷಣಾಮೂಲಧ್ವನಿಯೂ ಆಗುವುದು. ಹೆಚ್ಚೇನು, ರಸವತ್ಕವಿತೆಯನ್ನು ಯಾವುದೇ ಸುಸಂಗತ ವಿಮರ್ಶನವಿಧಾನಗಳಿಂದ ಅಳೆದರೂ ಅದರ ಬೆಲೆತಿಳಿಯುತ್ತದೆ. ಭಲೇ ಶ್ರೀಧರ!! ಸಾಧು ಸಾಧು!!!
ಧನ್ಯವಾದಗಳು ಸಾರ್… 🙂 ಇಷ್ಟೆಲ್ಲಾ ವಿಷಯವಿದೆ ಈ ಪದ್ಯದಲ್ಲಿ ಎಂಬುದು ತಿಳಿದಿರಲಿಲ್ಲ.. 🙂
ಅಭಿನಂದನೆಗಳು ಶ್ರೀಧರ,
ವರುಣನ ಕಣ್ಣೀರ ಮಳೆಯೂ ಮುದವಾಯ್ತು / ಅರುಣನ ಪನ್ನೀರ ಮಳೆಯೂ ಮುದವಾಯ್ತು. ಇದೇ ಪದ್ಯವಿದ್ಯೆಯ ಸ್ವಾರಸ್ಯ ಅಲ್ಲವೇ?
ಧನ್ಯವಾದಗಳು ಉಶಾ ಅವರೆ
ಕಳೆದನಾ ಮಳೆಗಾಲವೆಲ್ಲವ-
ನುಳಿದು ಪ್ರಸವಣಗಿರಿಯ ಮಧ್ಯದೆ
ಪಳೆಯ ನೆನಪನು ಮೆಲುಕು ಹಾಕುತ ಲಕ್ಷ್ಮಣಾಗ್ರಜನು ||
ಬಳಿಕ ಕಾರ್ತಿಕ ಮಾಸ ಬಂದುದು
ಸುಳಿಯಿತೆಲ್ಲೆಡೆ ತಂಪುಗಾಳಿಯು
ಇಳೆಯಕುವರಿಯ ಪತಿಗೆ, ನಿಂತಿಹ ಮಳೆಯು ಮುದವಾಯ್ತು ||
ಸೀತಾನ್ವೇಷಣೆಗೆ ಕಪಿಗಳು ಹೊರಡುವ ನಿರೀಕ್ಷೆಯಲ್ಲಿದ್ದ ರಾಮನಿಗೆ ಮಳೆಗಾಲ ಮುಗಿದು ಸುರಿಯುವ ಮಳೆಯು ನಿಂತುದು ಮನಸ್ಸಿಗೆ ಮುದ ಕೊಟ್ಟಿತು.
ಇಳೆಯಕುವರಿ = ಸೀತೆ.
‘ನಿಂತಿಹ ಮಳೆ’ಯ ಪದ್ಯ ಚೆಂದ
ನೆನೆಯ ಹಾಕಿದ ಸ೦ಡಿಗೆಯನಾ
ಮನೆಯ ಛಾವಣಿಯಲ್ಲಿಯೊಣಗಲು
ದಿನದ ಪೂರ್ವಾರ್ಧದಲಿ ಪಸರಿಸಿ ಬ೦ದಳಾ ನಾರಿ |
ಅನಿತರೊಳು ಕಾರ್ಮೋಡ ಕವಿಯುತ-
ಲೆನಿತೊ ವೇಗದಿ ಮಳೆಯು ಸುರಿಯಲು
ನೆನೆಯೆ ಸ೦ಡಿಗೆ, ನಾರಿಗೆ೦ತಾ ಮಳೆಯು ಮುದವಾಯ್ತು ?
ನಾರಿಗೆ೦ತಾ = ನಾರಿಗೆ +ಎ೦ತು+ಆ
ಎಲ್ಲಿಯಾದರೂ ಎಡವಿದ್ದರೆ ದಯವಿಟ್ಟು ತಿಳಿಸಿ.
ಅಹೋ! ನಾವೀನ್ಯಮುತ್ಕೃಷ್ಟಂ ವಿಹಿತಂ ಪದ್ಯಪಾನಕಂ |
ಮಹೀಯಮೀ ಗೃಹೋದೀರ್ಣಸ್ಪೃಹಣೀಯಕಥಾಶ್ರಯಂ ||
ಆಹಾ, ಪೂರ್ವಾರ್ಧ ಓದಿದಾಗ ಇದೇನಪ್ಪ ಎಂದುಕೊಂಡೆ. ಉತ್ತರಾರ್ಧದ ಟ್ವಿಸ್ಟ್ ಬಹಳವಚೆನ್ನಾಗಿದೆ
ನಿಮ್ಮ ಕಲ್ಪನೆಯನಿತೆ ಸೊಗಸಾ
ವಮ್ಮನದುಮಿರ್ದೊಡದು ಲೇಸಿ
ತ್ತಿಮ್ಮಡಿಯದಾಯ್ತೀಗ ಪಾಕವದೆಂದೆಣಿಸುತುಂ ತಾಂ|
ಉಮ್ಮಳಿಸದಾಗಾಕೆಯದನೇ
ಬೊಮ್ಮನಿಚ್ಛೆಯಿದೆಂದು ತಿಳಿಯುತೆ
ಸುಮ್ಮನೆಲ್ಲರಿಗೊಂದ ಪೊಯ್ದಿರೆ ನೀರುದೋಸೆಯನುಂ||
ಧನ್ಯವಾದಗಳು
ಹಬ್ಬ ಬಂದಿರೆ ನಮ್ಮ ಬಾಳಲಿ
ಹಬ್ಬಿ ಪ್ರೀತಿಯ ಸುಮವು ಮೈಮನ
ವುಬ್ಬಿ ನೀನಿತ್ತಿದ್ದ ಮುತ್ತಿನ ಬಳೆಯು ಬಿಗಿಯಾಯ್ತು ।
ಉಬ್ಬೆ ಮನೆಯೊಳು ಮಬ್ಬುಮರೆಯಲಿ
ಬೊಬ್ಬೆಯಿಟ್ಟಿಹ ಮುದ್ದು ಕಂದನ
ತಬ್ಬಿ ನೀನಿಂದಿತ್ತ ಮುತ್ತಿನ ಮಳೆಯು ಮುದವಾಯ್ತು ॥
ಒಳ್ಳೆಯ ರಚನೆ. ದುಷ್ಕರಪ್ರಾಸವನ್ನೂ ಹದವಾಗಿ ನಿರ್ವಹಿಸುವ ಜಾಣ್ಮೆ ಸ್ತುತ್ಯ.
ಪ್ರೀತಿವಾತ್ಸಲ್ಯಗಳು ತುಂಬಿದ ಹೃದ್ಯರಚನೆ
ಧನ್ಯವಾದಗಳು ಗಣೇಶ್ ಸರ್, ಶ್ರೀಕಾಂತ್ ಸರ್.
ಹುಡುಗ ಕಿತ್ತಡಿ ಶಂಕರನು ತಾ
ಬಡವಿಯೋರ್ವಳ ಮನೆಯ ಬಳಿ ಬಂ-
ದಿಡಿರಿ ಭಿಕ್ಷೆಯನೆಂದೆರೆದು ಕೈಚಾಚಿ ನಿಂದಿರಲು
ಬಡವಿ ಬರಿಗೈ ತೋರಬಯಸದೆ
ತಡಕಿ ತಂದುರೆ ನೆಲ್ಲಿಕಾಯನು
ಕೊಡಲು ಸಿರಿತಾ ಕರೆದ ಚಿನ್ನದಮಳೆಯು ಮುದವಾಯ್ತು
ಕಿತ್ತಡಿ- ಋಷಿ
ಎರೆದು- ಬೇಡಿ
ಶಂಕರಾಚಾರ್ಯರು ಸಿರಿಯನ್ನು ಹಾಡಿ ಕನಕಧಾರೆಗರೆಸಿದ ಪ್ರಸಂಗ
ಕಿತ್ತಡಿ ಪದದ ನಿಷ್ಪತ್ತಿ ಹೇಗೆ? ಕಿತ್ತ+ಅಡಿ > ಪಾದ ನಿಂತಲ್ಲಿ ನಿಲ್ಲದು ಎಂದೆ?
ಕಿತ್ತಡಿ ಅನ್ನೋದು ನಾನು ವ್ಯುತ್ಪತ್ತಿ ಮಾಡಿದ್ದಲ್ಲ. ಅದು ಪೂರ್ರಸಿದ್ಧ ಪದ, ನಿಘಂಟುಗಳಲ್ಲಿ ಕಾಣಬಹುದು. ಅದರ ವ್ಯುತ್ಪತ್ತಿ ಹೇಗೆ ಅಂತ ನಾನು ಊಹಿಸೋದು ಹೀಗೆ. ತಪ್ಪಿರಬಹುದು.
🙂
ಕಿರು+ಅಡಿ- ಕಿತ್ತಡಿ
ಇಲ್ಲಿ ಕಿರು ಅನ್ನೋದು ಕಿರಿದು/ಚಿಕ್ಕದು ಅನ್ನೋ ಅರ್ಹದಲ್ಲಿ ಇರಲಾರದು. ಕನ್ನಡದಲ್ಲಿ ಗಿರು (?<=ಕಿರು) ಎಂದರೆ ಭಾವಿಸು/ಚಿಂತಿಸು. ಇದಕ್ಕೆ ಪೂರ್ವದಲ್ಲಿ ನಿಗ್ರಹಿಸು(ಇಂದ್ರಿಯಗಳು ಇತ್ಯಾದಿ) ಎನ್ನುವ ಅರ್ಥವೂ ಇದ್ದಿರೋಕೆ ಸಾಧ್ಯ. ಏಕೆಂದರೆ ತಮಿಳಿನಲ್ಲಿ ಇದರ ಜ್ಞಾತಿಶಬ್ದವಾದ "&ಚೆರುquot; ಶಬ್ದಕ್ಕೆ ಈ ಎಲ್ಲ ಅರ್ಥಗಳು ಉಂಟು. ಅಡಿ, ಅಡಿಗಳು ಇವು ಸಾಧು ಸನ್ಯಾಸಿಗಳಿಗೆ ಸರ್ವೇಸಾಮಾನ್ಯವಾಗಿ ಅನ್ವಯಿಸುವ ಪದವಲ್ಲವೆ. ಈ ಎರಡು ಸೇರಿ ಕಿತ್ತಡಿ ಆಗಿರಬಹುದು. ಒಂದು ವಿಷಯ- ಇಲ್ಲಿನ ಕಿರು, ಕಿರಿದು, ಗಿರು, ಚಿರು ಈ ಎಲ್ಲ ಶಬ್ದಗಳಲ್ಲೂ ಬರುವುದು ದೊಡ್ಡ ರಕಾರ. ಅದನ್ನು ಹೇಗೆ ಟಂಕಿಸೋದು ಅಂತ ಗೊತ್ತಾಗ್ಲಿಲ್ಲ.
ಈ ಪದದ ನಿಷ್ಪತ್ತಿಯ ಬಗ್ಗೆ ಬೇರೆ ಖಚಿತ ಮಾಹಿತಿ ಇನ್ನಾರಿಗಾದರು ತಿಳಿದಿದ್ದರೆ ದಯವಿಟ್ಟು ತಿಳಿಸಿ
ಮುಡಿಯ ಪಿಡಿದೆಳೆತಂದು ಸಭೆಯೊಳು
ಕೆಡೆದು ತಮ್ಮನು ಸೀರೆಸೆಳೆಯಲು
ತೊಡೆಯ ತಟ್ಟುತ ಗಹಗಹಿಸಿದಾ ದುರುಳ ಕುರುಪತಿಯಾ
ತೊಡೆಗೆ ಭೀಮನು ಹೊಡೆದು ಮುರಿಯಲು
ಮಡದಿ ಮೈಮನ ತೋಯುವಂದದಿ
ಸಿಡಿದು ಬುಗುಬುಗು ಚಿಮ್ಮಿದಾ ಕೆಮ್ಮಳೆಯು ಮುದವಾಯ್ತು
ಶಂಕರರ ಮತ್ತೂ ಮಹಾಭಾರತದ ಆಧಾರಿತ ಪದ್ಯಗಳು… ಒಟ್ಟಾರೆ ಶ್ರೀಕಾಂತರ ಎಲ್ಲಾ ಪದ್ಯಗಳೂ ಬಹಳ ಹಿಡಿಸಿದವು
Thanks
ಕೀಲಕಯೋಜನೆ ಚೆನ್ನಾಗಿದೆ ಸರ್
Thanks
ಕಮ್ಮಕಾನದೆ ತಿರುಗುತಿರುವಾ-
ಗೊಮ್ಮೆ ಮುಳ್ಳದು ಚುಚ್ಚಲಡಿಗಾ!
ಅಮ್ಮ ಎನ್ನುತ ನೊಂದು ನಿಂದಿರಲಾ ಶಕುಂತಲೆಯು
ತಮ್ಮ ಕೈಯಿಂದರಸನಡಿಯನು
ನೆಮ್ಮಿ ಮುಳ್ಳನು ತೆಗೆದು ಸವರಲು
ಜುಮ್ಮೆನಿಸೆ ರಮಗರೆದ ಪೂಸರಮಳೆಯು ಮುದವಾಯ್ತು
ರಮ- ಮನ್ಮಥ
ಪದ್ಯದ ಕಲ್ಪನೆಯೂ ಶಬ್ದಶಯ್ಯೆಯೂ ಚೆನ್ನಾಗಿವೆ. ಆದರೆ ಶಾಕುಂತಲೆ ಎಂಬುದು ಅಸಾಧುರೂಪ. ಶಕುಂತಲೆಯೆಂಬುದೇ ಶುದ್ಧರೂಪ. ಶಕುಂತಲೆಗೆ ಸಂಬಂಧಿಸಿದ ವಸ್ತು-ವ್ಯಕ್ತಿ-ವಿಚಾರ ಇತ್ಯಾದಿಗಳೆಲ್ಲ ಶಾಕುಂತಲವೆಂಬ ಪದದಲ್ಲಿ ಅಡಕ.
ನನ್ನ ಅನುಮಾನವನ್ನು ಪರಹರಿಸಿದ್ದಕ್ಕೆ ಥ್ಯಾಂಕ್ಸ್ ಗಣೇಶರೆ. ಮೂಲದಲ್ಲೇ ತಿದ್ದಿದ್ದೇನೆ
ಅದ್ಭುತವಾಗಿದೆ ಪದ್ಯ
ಮೆಚ್ಚುಗೆಗೆ ಥ್ಯಾಂಕ್ಸ್ ಸೋಮ
ಎತ್ತು ಬಂಡಿಯನಣ್ಣ ಥಟ್ಟನೆ
ಕಿತ್ತು ಕೊಳ್ಳಲು ದೂರುತುಮ್ಮಳಿ-
ಸುತ್ತಲಳುತಾ ಬಂದ ಕಂದನ ತಬ್ಬುತಮ್ಮನು ತಾ-
ನೆತ್ತಿ ಕೈಕಾಲೊತ್ತಿ ಕಣ್ಣೊರೆ-
ಸುತ್ತ ಸವರುತ ಶುಶ್ಶೆನುತಲೆದೆ-
ಗೊತ್ತಿ ಪುಚುಪುಚನಿತ್ತ ಮುತ್ತಿನ ಮಳೆಯು ಮುದವಾಯ್ತು
3D!
4D 🙂
ತುಂಬ ತುಂಬ ಸೊಗಸಾದ ಪದ್ಯ; ಅಭಿನಂದನೆಗಳು.
Thanks
ನಮ್ಮ ಮನೆಯಲ್ಲಿ ನಿತ್ಯವೂ ಈ ಪದ್ಯದ ಘಟನಾವಳಿ ಜರುಗಉತ್ತದೆ, ಬಹಳ ಚೆನ್ನಾಗಿದೆ:)
ನಮ್ಮ ಮನೆಯಲ್ಲೂ ಅದೇ ನಡೆಯುತ್ತಿರೋದು. ಸ್ವಾನುಭವಪ್ರೇರಿತ ಪದ್ಯ 🙂 ಅನುಭವ ಸುಖವನ್ನು ನನ್ನ ಪದ್ಯ ಬಿಂಬಿಸಿದೆ ಅನ್ನೋ ನಿಮ್ಮಗಳ ಮಾತೇ ಮುದತಂದಿದೆ.
ಜರಿಯ ಸೀರೆಯ ನಿರಿಗೆ ಮುಸುಕಿರೆ
ಕರಿಯ ಕಾಡಿಗೆ ಕಣ್ಣು ತುಂಬಿರೆ
ಮರೆಯೆ ಮಿನುಗಿದ ಕೆನ್ನೆ ನಕ್ಕಿಯ ಕಳೆಯು ಮುದುರಾಯ್ತು ।
ಕರೆಯೆ ಧಾರೆಗೆ ವಧುವು ಬಂದಿರೆ
ಸರಿಯಲಂತರಪಟವು ಕಂಡಿರೆ
ಸುರಿಯಲಂದದ ಕನ್ಯೆಯಕ್ಕಿಯ ಮಳೆಯು ಮುದವಾಯ್ತು ॥
ಧಾರೆಯ ಪದ್ಯದ ಕಲ್ಪನೆ ಚೆನ್ನಾಗಿದೆ
ಬರಿದದಾಗಿಹ ಮಸ್ತಕಾಭ್ರದೊ
ಳರಕೆ ನೀಗಿಸೆ ಕಬ್ಬಬಯಕೆಯ
ಕರಿಯ ಮೇಘೋತ್ಕರವು ಸಂತಸ ಸಾಂದ್ರಮಾಗಿಸಲು
ಸರಸದೊಳಗಕ್ಕರದ ಪನಿಗಳು
ತರಹರಿಸಲಾ ಕಾವ್ಯತೃಷೆಯ
ನ್ನುರವಣಿಸೆ ಕವಿಮೌರ್ಯ ಚಾದಗೆ ; ಮಳೆಯು ಮುದವಾಯ್ತು
Lovely maurya
ಪದ್ಯಭಾವವು ಚೆನ್ನಾಗಿದೆ. ಪದಪ್ರಯೋಗದಲ್ಲಿಯೂ ಸಾಕಷ್ಟು ಸೊಗಸಿದೆ. ಆದರೆ ಮೌರ್ಯಚಾದಗೆ ಎಂಬುದು ಅರಿಸಮಾಸ. ಇದು ಮೌರ್ಯಚಾತಕ ಎಂದಾಗಬೇಕು.
ಧನ್ಯವಾದಗಳು ಸರ್, ಸವರಿಸಿದ್ದೇನೆ –
ಬರಿದದಾಗಿಹ ಮಸ್ತಕಾಭ್ರದೊ
ಳರಕೆ ನೀಗಿಸೆ ಕಬ್ಬಬಯಕೆಯ
ಕರಿಯ ಮೇಘೋತ್ಕರವು ಸಂತಸ ಸಾಂದ್ರಮಾಗಿಸಲು
ಸರಸದೊಳಗಕ್ಕರದ ಪನಿಗಳು
ತರಹರಿಸಲಾ ಕಾವ್ಯತೃಷೆಯ
ನ್ನುರವಣಿಸೆ ಕವಿಮೌರ್ಯಚಾತಕ ; ಮಳೆಯು ಮುದವಾಯ್ತು
ಇಂದ್ರನ ಕೋಪಕ್ಕೆ ತುತ್ತಾದ ವ್ರಜವಾಸಿಗಳು ಆತನು ಸುರಿಸಿದ ಮೌಸಲಧಾರೆಯಿಂದ ಅಪಾರ ಹಾನಿಗೊಳಗಾಗುತ್ತಾರೆ. ಆಗ ಕೃಷ್ಣನು ಗೋವರ್ಧನಗಿರಿಯನ್ನು ಹಿಡಿದೆತ್ತಿ ಅವರನ್ನು ರಕ್ಷಿಸುತ್ತಾನೆ. ಏಳು ಹಗಲು ಏಳು ರಾತ್ರಿಗಳ ಕಾಲ ನಿರಂತರ ಮಳೆ ಸುರಿಯುತ್ತಿದ್ದರೂ ಕೃಷ್ಣನ ಉಪಸ್ಥಿತಿಯಿಂದ ವ್ರಜವಾಸಿಗಳಿಗೆ ತಮ್ಮ ಕಷ್ಟಗಳು ಮರೆತುಹೋಗಿ ಆ ಘೋರ ಮಳೆಯೂ ಮುದವನ್ನು ನೀಡಿತು ಎಂಬರ್ಥದಲ್ಲಿ –
ಸುರಪತಿಯರತಿಯುರಿಯೊಳಗೆ ತಾ
ನರಿಯದೆಯೆ ವೃಂದಾರಮೆಯ ಮೇ
ಲ್ಗರೆದ ಮೌಸಲಧಾರೆಯಿಂ ವ್ರಜವಸತಿಗೆರವಾಗೆ
ಕರಿಯೊಡಲನುಪಕೃತಿಯೊಳಿಂದಾ
ಗಿರಿಯದುದ್ಧತವಾಗೆ ಗೋಪಾ
ಲರಿಗೆ ಹರಿಯೊಡನೇಳು ದಿನಗಳ ಮಳೆಯು ಮುದವಾಯ್ತು
ಕರಿಯೊಡಲ – ಕೃಷ್ಣ
ಅರತಿ – ಸಿಟ್ಟು
ಎರವಾಗು – ಹಾನಿಯಾಗು
ಸ್ವಿಟ್ಝರ್ಲ್ಯಾಂಡಿನ ಆಲ್ಪ್ಸ್ ಶ್ರೇಣಿಯ ಯೂಙ್-ಫ್ರಾ (jungfrau) ಪರ್ವತದಲ್ಲಿನ ಹಿಮಪಾತ:
ಸ್ವಿಸ್ಸೊಳಿರುವಾ ಹೇಮಪರ್ವತ
ದುಸ್ಸಹವೆ ಯೂಙ್-ಫ್ರಾ ಕ್ರಮಣ?^ಮಂ
ತಸ್ಸರಣವದು ಮುದವ ನೀಡಿರೆ ಶೀತಗುಹೆಯೊಳಗಂ|
ಠಸ್ಸೆ ರಹಪತ್ರದೊಳು (passport*) ಬೀಳೆ ವ
ಯಸ್ಸು ಮರೆತುದು ನಡೆಯೆ ಹಿಮದೆ ಮ
ನಸ್ಸು ಬೇಡಲದಾಗಿಳಿದ ಬೆಳ್ಮಳೆಯು ಮುದಮಾಯ್ತು||
^ ದುಸ್ಸಹವೇನಲ್ಲ. ಸುಕರವೇ. ಎಲ್ಲ ಅನುಕೂಲಗಳನ್ನೂ ಮಾಡಿದ್ದಾರೆ.
* In Jungfrau, we ourselves may frank our passports that we have ‘visited the highest town in Switzerland’
That’s my dream destination – Switzerland !!
ನಮ್ಮ ಮಧುಚಂದ್ರಕ್ಕೆ ನಾವು ಅಲ್ಲಿಗೇ ಹೋಗಿದ್ದು
ಪಾಪ, ಯಾಕ್ರೀ ಮೌರ್ಯಂಗೆ ಹೊಟ್ಟೆ ಉರುಸ್ತೀರ?
ಪದ್ಯ ಬರೆಯಲು ನನ್ನ ಮೊದಲನೇ ಪ್ರಯತ್ನ…
ಬಂದಿತು ಬೇಗನೆ ಆಹ್! ಸುರಿಮಳೆ !
ಹಿಂದೆಂದೂ ನೋಡಿರದಂಥಹ
-ದಿಂದಿನ ಸಾಯಂಕಾಲದ ಮಳೆಯು ಮುದವಾಯ್ತು
ಛನ್ದೋಬದ್ಧ ಪ್ರಾಸೋಬದ್ಧ
ಚಂದದಿ ಪದ್ಯಂ ಬರೆಯಲು ಯತ್ನಂ
ಎಂದೂ ಮಾಡದ ನನ್ನೀ ರಚನೆಯ ನೋಡಿ ಮುದವಾಯ್ತು
ಏನಾದರೂ ಅನಿಸಿಕೆ ಇದ್ದರೆ ದಯವಿಟ್ಟು ಹೇಳಿ . ಧನ್ಯವಾದಗಳು .
ಪಾನಿಗಳ ಪದ್ಯಗಳನ್ನು ಓದುವುದರಲ್ಲಿ ಹಾಗೂ ಪದ್ಯರಚನೆಯಲ್ಲಿ ಸ್ವತಃ ಆಸಕ್ತಿ ತಳೆದಿರುವುದು ಸ್ತುತ್ಯ. ಈ ಪುಟದ ಆದಿಯಲ್ಲಿ ’Learn Prosody ಪದ್ಯವಿದ್ಯೆ ಕಲಿಯಿರಿ’ ಎಂಬ ಟ್ಯಾಬ್ ಇದೆ. ಅಲ್ಲಿ ವಿಡಿಯೊ ಪಾಠಗಳಿವೆ. ದಯವಿಟ್ಟು ಅನುಕ್ರಮವಾಗಿ ನೋಡಿ. ಹಳಗನ್ನಡಕಾವ್ಯಗಳನ್ನು ಓದಿ. ಪಳಗಿದವರ ಪದ್ಯಗಳನ್ನು ಗಮನಿಸಿಕೊಳ್ಳಿ. ಪ್ರಯತ್ನ ಮುಂದುವರಿಸಿ. ನಿಮ್ಮ ಲೇಖನಿ ತ್ವರಿತವಾಗಿ ಸುಧಾರಿಸುತ್ತದೆ. ಶುಭಾಶಯಗಳು.
ನಿಮ್ಮ ಅನಿಸಿಕೆ ಹೇಳಿದ್ದಕ್ಕೆ ಬಹಳ ಧನ್ಯವಾದಗಳು. ಗಣೇಶ್ ರವರ ಪಾಠಗಳನ್ನು ಯೂಟ್ಯೂಬಲ್ಲಿ ನೋಡಿ ಸ್ಫೂರ್ಥಿ ಬಂದು, ಸುಮ್ಮನೆ ಪ್ರಯತ್ನ ಮಾಡಿದೆ. ಏನಾದರೂ ಈ ಪದ್ಯದಲ್ಲಿ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ.
ಕ್ಷಮಿಸಿಬಿಟ್ಟರೆ ಪದ್ಯಕಲಿವುದಾದೀತೆ? ಹೀಗೆ ತಪ್ಪು ಮಾಡಿಯೇ ಕಲಿಯಬೇಕು, ನಾವೆಲ್ಲರೂ ಕಲಿತದ್ದು ಹಾಗೆಯೇ.
ನಿಮ್ಮ ಪದ್ಯದ ವಿಶ್ಲೇಷಣೆ ಇಂತಿದೆ:
1. ಬಂದಿ/ತು ಬೇಗ/ನೆ ಆಹ್!/ ಸುರಿಮಳೆ ! – ವೃಷಭಪ್ರಾಸವು ಗುರ್ವಕ್ಷರವಾದ್ದರಿಂದ, ದೀರ್ಘಾಕ್ಷರವನ್ನೂ (ಆಂ, ನೀಂ, ಏಂ) ಬಳಸಬಹುದು. /ತು ಬೇಗ/ ಹಾಗೂ /ನೆ ಆಹ್/ ಲಗಂ ಆಗಿವೆ. ಅಸಾಧು. ಬೇಗನೆ+ಆಹ್ – ಸ್ವರಾಕ್ಷರದಿಂದ ಪದವನ್ನು ಆರಂಭಿಸಲಾಗದು. ಸಂಧಿ ಮಾಡಲೇಬೇಕು. ಇಲ್ಲಿ ಬೇಗನಾಹ್ ಎಂದು ಮಾಡುವುದೂ ತೊಡಕು.
2. ಹಿಂದೆಂದೂ ನೋಡಿರದಂಥಹ – ಇಲ್ಲಿ ಗಣಗಳು ೩-೪ರಂತೆ ವಿಂಗಡಿತವಾಗಿಲ್ಲ.
3. –ದಿಂದಿ/ನ ಸಾಯಂ/ಕಾಲ/ದ ಮಳೆಯು/ ಮುದವಾಯ್ತು – ಇಲ್ಲಿ ಗಣಗಳು ೩-೪ರಂತೆ ವಿಂಗಡಿತವಾಗಿಲ್ಲ.
4. ಛನ್ದೋಬದ್ಧ ಪ್ರಾಸೋಬದ್ಧ – ಇಲ್ಲಿ ಗಣಗಳು ೩-೪ರಂತೆ ವಿಂಗಡಿತವಾಗಿಲ್ಲ. Uniformityಗಾಗಿ ಛಂದೋ.. ಎಂದೇ ಬರೆಯಿರಿ. ’ಪ್ರಾಸೋಬದ್ಧ’ ಸಾಧುರೂಪವೆ, ತಿಳಿಯದು.
5. ಚಂದದಿ ಪದ್ಯಂ ಬರೆಯಲು ಯತ್ನಂ – ಇಲ್ಲಿ ಗಣಗಳು ೩-೪ರಂತೆ ವಿಂಗಡಿತವಾಗುವ ಬದಲು ೪-೪-೪-೪ ಆಗಿವೆ.
6. ಎಂದೂ ಮಾಡದ ನನ್ನೀ ರಚನೆಯ ನೋಡಿ ಮುದವಾಯ್ತು – ಯತ್ನಂ+ಎಂದೂ = ಯತ್ನಮೆಂದೂ ಆಗುತ್ತದೆ. ಆಗ ಮಾತ್ರೆಲೆಕ್ಕ ತಪ್ಪುತ್ತದೆ. ಮಾಡದಿದ್ದರೆ ವಿಸಂಧಿದೋಷವಾಗುತ್ತದೆ (ಮೇಲೆ 1ರಲ್ಲಿ ಹೇಳಿರುವಂತೆ).
ನೀವು ನೀಡಿರುವ ಸಮಗ್ರ ವಿಶ್ಲೇಷಣೆಯಿಂದ ನಾನು ಎಲ್ಲೆಲ್ಲಿ ತಪ್ಪು ಮಾಡಿದ್ದೆ ಎಂದು ಖಚಿತವಾಗಿ ಗೊತ್ತಾಗಿದೆ. ಮುಂದೆ ಮತ್ತೆ ಪ್ರಯತ್ನ ಮಾಡಿದಾಗ ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಳ್ಳುವೆ. ತುಂಬ ಧನ್ಯವಾದಗಳು!
ಮತ್ತೊಂದು ಪ್ರಯತ್ನ …
ಮರಗಳೆಲೆಗಳು ಬಾಡಿ ಹೋಗಿರೆ
ಬರದ ಬೇಗೆಯು ಜನರ ಕೊಂದಿರೆ
ವರುಣ ದೇವನ ನರರು ಪ್ರತಿದಿನ ನೆನೆಯುತಿರುವಾಗಾ ।
ಸುರಿಸು ಸಲಿಲವನೆಂದು ಹಾಡಲು
ಗುರುಗುಹ ಸ್ವರ ಸಗಮಪನಿಸದಿ
ಅರರೆ! ಸುರಿಯಿತು! ಹರುಷ ತಂದಿತು! ಮಳೆಯು ಮುದವಾಯ್ತು! ||
ಸಂಧರ್ಭ – ಮುತ್ತುಸ್ವಾಮಿ ಧಿಕ್ಷಿತರು (ಗುರುಗುಹ ಎಂಬುವುದು ಅವರ ಮುದ್ರೆ) ಒಂದು ಊರಿನಲ್ಲಿ ಬರಗಾಲದಿಂದ ಬಳಲುತ್ತಿದ್ದ ಜನರ ಕಷ್ಟವನ್ನು ನೊಡಿ ಸ-ಗ-ಮ-ಪ-ನಿ ಸ್ವರಗಳಿಂದ ಕೂಡಿದ ಅಮೃತವರ್ಷಿನಿ ರಾಗವನ್ನು, ಒಡನೆ ಮಳೆ ಸುರಿಯುವ ಹಾಗೆ, ಹಾಡಿದರಂತೆ.
GBS ಚೆನ್ನಾಗಿದೆ ಪದ್ಯ. ಎಟ್ಟಯಪುರದಲ್ಲಿ ಸಂಭವಿಸಿದ ಘಟನೆ ಇದು. ದೀಕ್ಷಿತರು ಆನಂದಾಮೃತಾಕರ್ಷಿನಿ ಹಾಡಿದ ಸಂದರ್ಭ. “ಸಲಿಲಂ ವರ್ಷಯ ವರ್ಷಯ ವರ್ಷಯ” ಈ ಸಾಲುಗಳನ್ನು ಪ್ರತಿಬಿಂಬಿಸಿದ್ದೀರಿ.
ಮರದ ಎಲೆಗಳು- ವಿಸಂಧಿ ಆಯಿತಲ್ಲ. ಮರದೊಳೆಲೆಹಗಳು ಅಥವಾ ಮರದೆಯೆಲೆಗಳು ಎಂದರೆ ಸರಿಯಾಗುತ್ತೆ.
ಪ್ರತಿದಿನ- ಶಿಥಿಲದ್ವಿತ್ವ
ಹೌದು ಶ್ರೀಕಾಂತ್ ರವರೆ, ನಾನು ಅದೇ ಘಟನೆಯನ್ನು ಕುರಿತು ಪದ್ಯ ಬರಿದಿದ್ದೇನೆ.
‘ಮರದ ಎಲೆಗಳು’ – ಇದನ್ನು ‘ಮರಗಳೆಲೆಗಳು’ ಎಂದು ತಿದ್ದಿದ್ದೇನೆ.
ಒಂದು ಪ್ರಶ್ನೆ – ಶಿಥಿಲ ದ್ವಿತ್ವವೆಂದರೆ ಏನು?
ಧನ್ಯವಾದಗಳು!
ಶಿಥಿಲದ್ವಿತ್ವ ಬಗ್ಗೆ ಹೇಳ್ತೀನಿ. ಒಂದು ಪದ ಅಥವಾ ಪಾದದ ಮಧ್ಯೆ ಒಂದು ಸಂಯುಕ್ತಾಕ್ಷರ ( ಒತ್ತಕ್ಷರ ಇರುವ ಅಕ್ಷರ) ಬಂದರೆ, ಅದರ ಹಿಂದಿನ ಅಕ್ಷರ ಸ್ವಭಾವತಹ ಹ್ರಸ್ವವಾದರೂ ಅದು ಉಚ್ಛರದಿಂದ ಗುರುವಾಗುತ್ತೆ, ಅಂದರೆ ಎರಡು ಮಾತ್ರೆಗಳಷ್ಟು ಉದ್ದ ಇರುತ್ತೆ. ಉದಾಹರಣೆಗೆ ಹಂಸಧ್ವನಿ ಎನ್ನುವಲ್ಲಿ ಸಕಾರ ಒಂದು ಹ್ರಸ್ವಾಕ್ಷರವಷ್ಟೆ? ಎಂದರೆ ಸ್ವಭಾವದಿಂದ ಒಂದು ಮಾತ್ರೆ ಉಳ್ಳದ್ದು. ಆದರೆ ಅದರ ಮುಂದೆ ಧ್ವ ಎನ್ನುವ ಸಂಯುಕ್ತಾಕ್ಷರ ಬಂದಿರುವುದೈಂದ ಸಕಾರದ ಉಚ್ಛಾರಕ್ಕೆ ಒತ್ತು ಕೊಟ್ಟಂತಾಗಿ ಅದು ಎರಡು ಮಾತ್ರೆಗಳಷ್ಟುದ್ದವಾಗಿ ಗುರುವಂತೆ ವರ್ತಿಸುತ್ತೆ. ಆದರೆ ಇದಕ್ಕೆ ವಿಪರೀತವಾಗಿ ಹಿಂದಿನ ಹ್ರಸ್ವಾಕ್ಷರವನ್ನ ಲಘುವಾಗಿಯೇ ತೇಲಿಸಿ ಉಚ್ಛರಿಸುವುದು ಶಿಥಿಲದಿತ್ವ. ಛಂದಸ್ಸು/ ಪದ್ಯದ ಓಟ ಕೆಡದೆ ಇರಲು ಈ ಸೌಕರ್ಯೈದೆ. ಆದರೆ ಇದು ಊಟಕ್ಕೆ ಉಪ್ಪಿನಕಾಯಂತೆ ಉಪಯೋಗಿಸಬೇಕು. ಅತಿಯಾಗಿ ಬಳಸಿದರೆ ಹದಗೆಡುತ್ತೆ.
ಆಹ್, ಸಮಂಜಸವೇ. ಉಪಯುಕ್ತ ಸಲಹೆ. ಧನ್ಯವಾದಗಳು!
ನಿಮ್ಮ ಕಲ್ಪನೆಗೊಂದು ಅಭಿವ್ಯಕ್ತಿ ಮಾದರಿ:
ಪಿಂತೆ ಕಂಡಿರದಂದದೀ ಮಳೆ
ಜಂತೆವೊರಗುವವೋಲು ಸುರಿದೊಡ
ಮೆಂತೊ ಸಂತಸಮಿತ್ತು ತಣಿಸಿರೆ ಮಳೆಯು ಮುದಮಾಯ್ತು|
ಸಂತೆಯೊಳಲಂಕಾರ-ಪ್ರಾಸದ
ನಂತ ಸಾಧ್ಯತೆಗಳನವೆಲ್ಲವ
ಚಿಂತಿಸುತ್ತಲಿ ರಚಿಸೆ ಚೊಚ್ಚಲ ಕವನವಿಂತಾಯ್ತು||
(ಚಪ್ಪಾಳೆ ತಟ್ಟುತ್ತ) ಅತ್ಯಂತ ಸೊಗಸಾಗಿದೆ!
ಕಲಿಯುವುದಕ್ಕೆಷ್ಟಿದೆ ನನಗೆ !!
ಡಾಕ್ಟರ್ ರಾ ಗಣೇಶರ inspiration ಹಾಗೂ ಪ್ರಸಾದು ಅವರ kick start ನಿಂದ ಪದ್ಯ ರಚನೆಯ ಲೋಕದಲ್ಲಿ ಅಂಬೆಗಾಲಿಡುವ ಚೊಚ್ಚಲ ಪ್ರಯತ್ನ . ಅನಧ್ಯಯನ ಮತ್ತು ಶಬ್ದದಾರಿದ್ರ್ಯಗಳ ಕಾರಣ ಬಾಲಿಶ ಹಾಗೂ ದೋಷಯುಕ್ತವಾಗಿದೆ. ಕ್ಷಮೆಯಿರಲಿ. ಭಾರತ ತಂದ test match ಸೋಲುವ ಸಮಯದಲ್ಲಿ ವರುನದೆವನಗಿಗೆ ಪ್ರಾರ್ಥಿಸುವ ಸಂಧರ್ಭ
ಬ್ಯಾಟು ಬಾಲಿನ ಆಟ ಸಾಗಿರೆ
ಪಟುಗಳೆಲ್ಲರು ಸೆಣಸಿ ಕಾದಿರೆ
ಚಟುವಟಿಕೆಯಿಂದಲಿ ಬ್ಯಾಟಿಗರು ಸ್ಕೋರು ಮಾಡಿರಲು
ಪರರ ತಂಡದ ದಾಂಡುಗಾರರ-
ವರ ರನ್ಮೊತ್ತ ವಿಪರೀತವಾಗಿರೆ
ಪರಾಜಯವ ತಪ್ಪಿಸಿ ಸುರಿದ ಮಳೆಯು ಮುದವಾಯ್ತು
ಐಡಿಯ ಚೆನ್ನಾಗಿದೆ. ಛಂದೋದೋಷಗಳು ಇಂತಿವೆ:
1. ಬ್ಯಾಟು/ ಬಾಲಿನ/ ಆಟ/ ಸಾಗಿರೆ – ಬಾಲಿನ+ಆಟ = ಇಲ್ಲಿ ’ಬಾಲಿನಾಟ’ ಎಂದು ಸಂಧಿ ಮಡಲೇಬೇಕು. ಇಲ್ಲದಿದ್ದರೆ ವಿಸಂಧಿದೋಷ ಎನಿಸುತ್ತದೆ. ಮಾಡಿದರೆ ಛಂದಸ್ಸು ತಪ್ಪುತ್ತದೆ. ತಿದ್ದಬೇಕು. ಒಮ್ಮೆ ನೀವು ’ಬ್ಯಾ’ ಎಂಬ ದೀರ್ಷಾಕ್ಷರವನ್ನು ಬಳಸಿದ ಮೇಲೆ ಉದ್ದಕ್ಕೂ ಮೊದಲಕ್ಷರ ದೀರ್ಘವೇ ಆಗಿರಬೇಕು. ಇದನ್ನು ಗಜಪ್ರಾಸ(ಮೊದಲಕ್ಷರ)ವೆನ್ನುತ್ತಾರೆ. ಒಮ್ಮೆ ನೀವು ’ಟು’ ಎಂದು ಪ್ರಸಾಕ್ಷರ (ಎರಡನೆಯದು) ಆಯ್ದುಕೊಂಡಮೇಲೆ ಉದ್ದಕ್ಕೂ ಟಕಾರವೇ ಬರಬೇಕು. ಬಂದಿಲ್ಲ. ಒಂದೊಂದು ಅರ್ಧಕ್ಕೆ ಒಂದೊಂದು ಪ್ರಾಸಾಕ್ಷರವನ್ನು ಇಟ್ಟುಕೊಂಡು ಎಷ್ಟೋ ಶ್ರಮಿಸಿದ್ದೀರಿ. ಒಳ್ಳೆಯದು. ಸ್ವಲ್ಪ ಹಿಡಿತ ಸಾಧಿಸುವವರೆಗೆ ದ್ವಿತೀಯಾಕ್ಷರಪ್ರಾಸ ಪಾಲಿಸಬೇಡಿ. ಕಾಲಕ್ರಮದಲ್ಲಿ ಅದು ತಾನಾಗೇ ಸಿದ್ಧಿಸುತ್ತದೆ. ಮೊದಲಿಗೆ ಗಣ-ಗಣಿತ ರೂಢಿಸಿಕೊಳ್ಳಿ. ಮೊದಲ ಅಕ್ಷರದ ಪ್ರಾಸವಂತೂ ಪಾಲಿಸಲೇಬೇಕು.
2. ಪಟುಗ/ಳೆಲ್ಲರು/ ಸೆಣಸಿ/ ಕಾದಿರೆ – ಸರಿಯಾಗಿದೆ
3. ಚಟುವ/ಟಿಕೆಯಿಂ/ದಲಿಬ್/+ಯಾಟಿಗರುಸ್/+ಕೋರು/ ಮಾಡಿರ/ಲು – ಈ ಪಾದದ ಮೂರನೆಯ ಗಣದಲ್ಲಿ ’ಲಗಂ’ (ದಲಿಬ್) ಬಂದಿದೆ. ನಾಲ್ಕನೆಯ ಗಣದಲ್ಲಿ ’ಯಾಟಿಗರುಸ್’ ೬ ಮಾತ್ರೆಯಾಯಿತು – ೨ ಮಾತ್ರೆ ಹೆಚ್ಚು.
4. ಪರರ/ ತಂಡದ/ ದಾಂಡು/ಗಾರರ – ಪರರ ತಂಡ ಎಂದರೆ ಬೇರೆಯವರ ತಂಡ ಎಂದಾಗುತ್ತದೆ. ನೀವು ಹೇಳಬೇಕಾಗಿರುವುದು ಎದುರಾಳಿತಂಡ ಎಂದು. ದಾಂಡುಗಾರರ, ಅವರ – ಪುನರಾವರ್ತನೆ ಆಯಿತು.
5. ವರ ರ/ನ್ಮೊತ್ತ ವಿಪ/ರೀತ/ವಾಗಿರೆ – ಮೊದಲ ಹಾಗೂ ಎರಡನೆಯ ಗಣಗಳಲ್ಲಿ ತಲಾ ಒಂದೊಂದು ಮಾತ್ರೆ ಹೆಚ್ಚು ಇದೆ (ಪರರನ್ ಹಾಗೂ ಮೊತ್ತ ವಿಪ)
6. ಪರಾ/ಜಯವ/ ತಪ್ಪಿ/ಸಿ ಸುರಿದ/ ಮಳೆಯು ಮುದವಾಯ್ತು – ಪರಾ – ಮತ್ತೆ ಲಗಂ ಆಗಿದೆ. /ಸಿ ಸುರಿದ/ – ಹೀಗೆ ಒಂಟಿ ಅಕ್ಷರ ಬೇರೆಯಾಗಿ ಉಳಿದಾಗ ಗತಿ ಕೆಡುತ್ತದೆ.
ನಿಮ್ಮ ಐಡಿಯವನ್ನುಉಳಿಸಿಕೊಂಡ ಒಂದು ಮಾದರಿ ಸವರಣೆ:
ಬ್ಯಾಟು ಬಾಲುಗಳಾಟ ಸಾಗಿರೆ
ಹೋಗಿಸುತ್ತೆಲ್ಲೆಡೆಗೆ ಚೆಂಡನು
ಭಾರಿ ಮೊತ್ತವ ಗಳಿಸಲೆದುರಾಳಿಗಳ ತಂಡದವರ್|
ಸೋಲೆಮಗೆ ಕಟ್ಟಿಟ್ಟ ಬುತ್ತಿಯು
ದೇವ ಕಾಯೆಂದಿಡಲು ಮೊರೆಯ
ನ್ಮೋಡ ಕವಿಯುತಲಾಗ ಸುರಿಯಲು ಮಳೆಯು ಮುದವಾಯ್ತು||
ಇಲ್ಲಿ ಮೊದಲಕ್ಷರಗಳು ಎಲ್ಲ ದೀರ್ಘ – ಯಾ, ಹೋ, ಭಾ, ಸೋ. ದೇ, ಮೋ (ಗಜಪ್ರಾಸ). ದ್ವಿತೀಯಾಕ್ಷರಪ್ರಾಸ ಪಾಲಿಸಿಲ್ಲ.
ಬ್ಯಾಟು ಬಾಲಿನ ಪೋಟಿ ಸಾಗಿರೆ
ಲಾಟಿಸುತ್ತೆಲ್ಲೆಡೆಗೆ ಚೆಂಡನು
ಘಾಟಿಯೆದುರಾಳಿಗಳು ಭಾರಿಸ್ಕೋರು ಮಾಡಿರಲು
ಫೇಟಲೆಮೆಗೆ ಡಿಫೀಟೆಯೆನಿಸುತ
ಕೋಟಿ ನಮನವ ಸಲಿಸಲೀಶಗ-
ಹೋ ಟೊರೆನ್ಷಿಯಲಾಗಿ ಸುರಿದಾ ಮಳೆಯು ಮುದವಾಯ್ತು
ಫೇಟಲೆಮೆಗೆ- in our fate ALSO fatal to us
ಡಿಫೀಟ್- defeat
ಟೊರೆನ್ಷಿಯಲ್- torrential
ಪ್ರಸಾದು ಅವರಿಗೆ ತುಂಬ ಧನ್ಯವಾದ. ಬಲುಸೊಗಸಾಗಿ ಬದರೀನಾಥರಿಗೆ ಗದ್ಯ-ಪದ್ಯವಿವೃತಿಗಳೊಡನೆ ಮಾರ್ಗದರ್ಶನ ಮಾಡಿದ್ದೀರಿ. ಅಂತೆಯೇ ಶ್ರೀಕಾಂತಮೂರ್ಥಿಯವರಿಗೂ ಧನ್ಯವಾದ. ಒಳ್ಳೆಯ ಸವರಣೆಯ ಪದ್ಯವನ್ನು ರಚಿಸಿದ್ದೀರಿ.
ದಯಮಾಡಿ ಶಪದ್ಯಪಾನಿಗಳು ಹೊಸಗೆಳೆಯರಿಗೆ ಅಹಮಹಮಿಕೆಯಿಂದ ನೆರವೀಯಬೇಕಾಗಿ ವಿನಂತಿ.
ಪ್ರಿಯ ಪ್ರಸಾದು ಮತ್ತು ಮೂರ್ತಿಯವರಿಗೆ ಧನ್ಯವಾದಗಳು
ಐಡಿಯ ಹೊಳೀತೂಂತ ಮುನ್ದಿನ ಸಪ್ತಾಹ ಶುರುವಾಗುವುದಕ್ಕೆ ಮುನ್ಚೆ ಬರೆಯಬೇಕು ಅಂತ ಯದ್ವಾ-ತದ್ವಾ ಪದ್ಯ ಬರೆದೆ. ಪ್ರಸಾದು ಅವರು ಸಹನೆಯಿಂದ ವಿಮರ್ಶಿಸಿ ಬಾಲಬೊಧೆ ಮಾಡಿದ್ದಕ್ಕೆ ಅನಂತ ವನ್ದನೆಗಲು.
ಇಂಗ್ಲಿಶ್ ಕನ್ನಡ ಪದಗಳ ಸಮಾಸ ಮಾಡಿದೆ ಇದೇನು ’ಸೂಪರ್ – ಅರಿಸಮಾಸ’ವೇ
ಆರು ಬಾಲಲಿ ಬೇಕು ಗೆಲ್ಲಲು
ನೂರಿಗಿಂತಲು ಜಾಸ್ತಿ ರನ್-ಗಳು !
ಭಾರತದ ಕೊನೆ-ಜೋಡಿಯಾಡಿರೆ ಸೋಲಿನಂಚಿನಲಿ |
ಬಿರಿಯಿತಾಗಲೆ ಮುಗಿಲ ಒಡಲದು.
ಮುರಿದ ಕನಸುಗಳನ್ನು ಬೆಸೆಯಿತು.
ಸುರಿದ ಧಾರೆಯ, ನಗೆಯ ಮಿಂಚಿನ ಮಳೆಯು ಮುದವಾಯ್ತು ||
ಧಾರೆಮಾತ್ರವಲ್ಲದೆ ಮಿಂಚನ್ನೂ ತಂದಿದ್ದೀರಿ. ಚೆನ್ನಾಗಿದೆ.
ಮುಗಿಲ ಒಡಲದು – ಸರಿಯಾಗಿದೆ. I would prefer to write it as ಮುಗಿಲಿನೊಡಲದು
agreed. Sounds much better. Thanks
ತರಳನಭಿಮನ್ಯುವದೊ ಗರುವದಿ
ದುರುಳ ಕೌರವರನ್ನು ಸದೆಬಡಿ
ದಿರಲು ಕುರುಜಾ೦ಗಣದಿ ತನ್ನಯ ಶೌರ್ಯ ಮೆರೆಯುತಲಿ
ಕೊರಳ ಚಾಚುತಲೀಕ್ಷಿಸುತೆ ಮೈ
ಮರೆದ ಪಾ೦ಡವ ಸೈನ್ಯನಿಕರಕೆ
ಸುರಿಯುತಿಹ ಕೂರ್ಗಣೆಯ ಬಿರುಸಿನ ಮಳೆಯು ಮುದವಾಯ್ತು
ರಘುಮುಳಿಯ ಅವರೆ, ಬಹಳ ಚೆನ್ನಾಗಿದೆ ಪದ್ಯ, ಅಭಿಮನ್ಯುವಿನ ಶೌರ್ಯಕ್ಕೆ ಮೈಮರೆತ ಪಾಂಡವರ ಕಲ್ಪನೆ ಚೆನ್ನಾಗಿದೆ
Indeed very nice.
ತುಳುಕಿ ಹರಿಯುತ ಸುತ್ತ ಹರುಷದ
ಬೆಳಕ ಮೂಡಿಸಿ ಮುಸಲಧಾರೆಯು
ಕೊಳೆಯ ಕಳೆಯುತ ತೊಳೆಯುತಿರಲಿಳೆ ಪೊಳೆದು ನಳನಳಿಸೆ
ಸುಳಿವ ಮ೦ದಾನಿಲಕೆ ತರುಲತೆ
ಬಳುಕುತಾಡುತೆ ತೊನೆದು ತೂಗುತೆ
ಸೆಳೆಯೆ ಲೋಕದ ಜೀವಜಾಲಕೆ ಮಳೆಯು ಮುದವಾಯ್ತು
3ನೇ ಸಾಲಿನಲ್ಲಿ ‘ಳ’ಕಾರದ ಅನುಪ್ರಾಸದ ಶಬ್ದಾಲಂಕಾರ ಬಹಳ ಚೆನ್ನಾಗಿ ಮೂಡಿದೆ
ಶಬ್ದಾಳಂಕಾರವೆನ್ನೋಣವೆ?
🙂
ಜಾರರಾ ವಿಧವೆಯನು ಹಿಂಸಿಸೆ
ಜಾರಿಣಿಯು ಪಲವರ್ಗೆ ಸಖಿಯೆನೆ
ದೂರಿನಾ ಕಾರ್ಮೋಡವವನತಿ ಸುರಿಸೆ ಮುಂದಾಯ್ತು
ಧೀರನೊರ್ವಂ ಕೇಳ್ದನಳಲಂ
ಸಾರುತುಂ ಹೋಳಿಯೊಳು ಸತಿಯೆನೆ
ನಾರಿಗೆರೆಚಿದ ಬಣ್ಣದೋಕುಳಿ ಮಳೆಯು ಮುದವಾಯ್ತು
ಒಳ್ಳೆಯ ಪದ್ಯ ಮತ್ತು ಭಾವ
ಜೀವಿಯಾರ್? ಜಗಮೇತಕೀಪರಿ?
ಕಾವನಾರವನೇಕೆ ಕಾವನು?
ಸಾವುಪುಟ್ಟಿಗೆ ನೋವುನಲಿವಿಗದಾವುದಾಧಾರ?
ಕೋವಿದರ ಪಳನುಡಿಗಳಂ ಜನ-
ಕೀವ ಗೌಂಡ್ಯಸ್ನಿಗ್ಧಮೇಘವು
ಠಾವುಗಟ್ಟಲು ಕಗ್ಗಗಬ್ಬದ ಮಳೆಯು ಮುದವಾಯ್ತು
ಮಂಕುತಿಮ್ಮನ ಕಗ್ಗದ ಬಗ್ಗೆ
ಉತ್ತರಾರ್ಧದ ಅರ್ಥ ಹಾಗು ಕೆಲವು ಪದಳು ಅರ್ಥವಾಗ್ತಿಲ್ಲ. ಬಿಡಿಸಿ ಹೇಳಿ ಸೋಮ.
ಪಳ್ನುಡಿ?
ಗೌಂಡ್ಯಸ್ನಿಗ್ಧ
ಠಾವುಕಟ್ಟಲು?
ಶ್ರೀಕಾಂತರೆ,
ಪಳ್ನುಡಿ = ವೇದಗಳಲ್ಲಿರುವ ವಾಕ್ಕು
ಗೌಂಡ್ಯಸ್ನಿಗ್ಧಮೇಘವು
ಗೌಂಡ್ಯ – ಗುಂಡಪ್ಪನವರಿಗೆ ಸಂಭಂದಿಸಿದ್ದು ಗೌಂಡ್ಯ
(ಗಣೇಶರ ಭಾಷಣಗಳಲ್ಲಿ ಗೌಂಡ್ಯದರ್ಶನ ಪ್ರಯೋಗ ಕೇಳಿದ್ದೇನೆ)
ಸ್ನಿಗ್ಧಮೇಘವು – ಸ್ನೇಹಪೂರ್ವಕವಾದ ಮೋಡವು
ಠಾವುಗಟ್ಟಲು – ಸ್ಥಾನ ಹಿಡಿಯಲು, ಅಡಕವಾಗಲು
ಪಳ್ನುಡಿ- ಇದು ನೀವು ಮಾಡಿಕೊಂಡ ಪದವೆ? ಹೇಗೆ ಇದರ ವ್ಯುತ್ಪತ್ತಿ?
ಗುಂಡನಿಂದ ಗೌಂಡ್ಯ. ಸಂಸ್ಕೃತಕ್ಕೆ ಅರಿಸಮಾಸದ ಮೈಲಿಗೆ ಇಲ್ಲವಾದರಿಂದ ಇಂತಹ ವ್ಯುತ್ಪತ್ತಿ ಸಾಧ್ಯವಾಗಬಹುದು
ಒಟ್ಟಿನ ಭಾವ ಚೆನ್ನಾಗಿದೆ.
ಪಳ್ನುಡಿ => ಪಳ್ = ancient + ನುಡಿ
ಇದನ್ನು ಪದ್ಯಪಾನದಲ್ಲೇ ಮುಂಚಿನ ಹಲವಾರು ಪದ್ಯಗಳಲ್ಲಿ ಬಳಸಲಾಗಿದೆ, ಇದನ್ನು ಮುದ್ದಣ್ಣ ಬಳಸಿದ್ದನೆಂದು ಪದ್ಯಪಾನಿಯೇ ಆದ ನಮ್ಮ ರವೀಂದ್ರಹೊಳ್ಳ ಹೇಳಿದ್ದ.
ತುಂಬ ಕುತೂಹಲಕಾರಿ ವ್ಯುತ್ಪತ್ತಿ. ನ್ಯಾಯವಾಗಿ ನೋಡಿದರೆ ಇದು ತಪ್ಪು. ಪಳತು+ನುಡಿ ಪಳನುಡಿ ಎಂದಾಗಬೇಕೆ ಹೊರತು ಪಳ್ನುಡಿ ಆಗೋದಿಲ್ಲ.
ಸೋಮಶೇಖರ ಶರ್ಮರೇ,
ಮುದ್ದಣ ’ಪಳ್ನುಡಿ’ ಎಂಬ ಶಬ್ದವನ್ನು ಬಳಸಿದಂತಿಲ್ಲ ಅಲ್ಲವೇ?
’ಪಳನುಡಿ’ ಎಂಬ ಶಬ್ದವನ್ನು ರಾಮಾಶ್ವಮೇಧದ ದ್ವಿತೀಯಾಶ್ವಾಸದಲ್ಲಿ ಬಳಸಿದ್ದಾನೆ. ’ಪಳನುಡಿಯಂ ಬಳಿಸಂದು ಪಲವುಂ ಪಗಲ್ ತಿರೆಯಂ ಪೊರೆವುತೆ…’ ಎಂದು ದಶರಥನ ಕುರಿತು ಬಣ್ಣಿಸುವಾಗ ಆ ಶಬ್ದವನ್ನು ಬಳಸಿದ್ದಾನೆ. ಇದೇ ರೀತಿ ’ಪಳವಾತು’ ಎಂಬ ಶಬ್ದವನ್ನೂ ಬಳಸಿದ್ದಾನೆಂಬುದು ವಿದಿತವಷ್ಟೆ.
ಇದನ್ನು ’ಸ್ಮಾರಯೇ ತ್ವಾಂ ನ ಶಿಕ್ಷಯೇ’ ಎಂಬಂತೆ ಹೇಳಿದೆ ಅಷ್ಟೆ 🙂
ಮನ್ನಿಸಿ, ನಾನು ಕೆಲವು ಪದಗಳನ್ನು ಈ ಕೆಳಗಿನಂತೆ ಉಟ್ಟಂಕಿಸಬೇಕಾಗಿತ್ತು – ಪೞನುಡಿ, ಪೞವಾತು, ಪೞನುಡಿಯಂ ಬೞಿಸಂದು ಪಲವುಂ ಪಗಲ್ ತಿರೆಯಂ ಪೊರೆವುತೆ…
ತಿದ್ದುಪಡಿಗಾಗಿ ಧನ್ಯವಾದಗಳು ಮಹೇಶಭಟ್ಟರೆ, ಶ್ರೀಕಾಂತರೆ 🙂
ಮೂಲದಲ್ಲೇ ಸರಿಪಡಿಸಿದ್ದೇನೆ.
’ಸ್ಮಾರಯೇ ತ್ವಾಂ ನ ಶಿಕ್ಷಯೇ’ ಎಂದಿದ್ದೀರಿ ನಾನು ಒಪ್ಪುವುದಿಲ್ಲ, ಇದು ನನಗೆ ಶಿಕ್ಷಣವೇ ಸರಿ, ಏಕೆಂದರೆ ರಾಮಾಶ್ವಮೇಧವನ್ನು ನಾನಿನ್ನೂ ಓದಿಲ್ಲ, ಓದುತ್ತೇನೆ. ಪದ್ಯಗಳಲ್ಲಿ ತಪ್ಪಿದ್ದಲ್ಲಿ ದಯವಿಟ್ಟು ನಿರ್ದಾಕ್ಷಿಣ್ಯವಾಗಿ ತಿಳಿಸಿಕೊಡಿರಿ ಎಂದು ಕೇಳಿಕೊಳ್ಳುತ್ತೇನೆ 🙂
ಮಿತ್ರ ಸೋಮಶೇಖರ ಶರ್ಮರೇ,
ಧನ್ಯವಾದ…
ಸೌಜನ್ಯಪೀಯೂಷರಸೋತ್ಕಿರಾಣಿ
ವಚಾಂಸಿ ತೇ ಸೋಮ! ಮನೋ ಹರಂತಿ | 🙂
ಅವಶ್ಯವಾಗಿ ನನ್ನ ಅರಿವಿನ ಮಿತಿಯಲ್ಲಿ ತಿಳಿಸುತ್ತೇನೆ 🙂
ಸೋಮ,
ನಿಜವಾದ ಪ್ರತಿಕ್ರಿಯೆ: ಪದ್ಯ ತುಂಬನೇ ಚೆನ್ನಾಗಿದೆ.
ನನ್ನ ಎಂದಿನ ಪ್ರತಿಕ್ರಿಯೆ: ಕೀಪ್, ನಾರ್, ನೋವ್, ಕೀವ್ (ಎಲ್ಲದಕ್ಕೂ ‘ಉ’ಕಾರ ಸೇರಿಸಿ ಓದಿಕೊಳ್ಳಬೇಕು) ಪದಗಳ ದತ್ತಪದಿಯಂತಿದೆ!
ಪಲ್ಲವ|| ಚಿತ್ರಕೋವಿದನಲ್ತೆ ಸೋಮನ್
ಮಾತ್ರಮಲ್ಲವು ಪೂರಣಮಿದೈ
ಚಿತ್ರಗೂಢವ ಸಾಧಿಸಾತಂ
ಜಾತ್ರೆನೆರೆಸಿಹ ಕಾವ್ಯದಾ|
ಧನ್ಯವಾದಗಳು ಪ್ರಸಾದು, ದತ್ತಪದಿಗಳನ್ನು ಪದ್ಯದಿಂದ ಹುಡುಕಿರುವುದು ಚೆನ್ನಾಗಿದೆ 🙂
ಪಾರಿಜಾತದ ಮರದ ಬುಡದೊಳು
ನೀರಗೆನೆ ತಾನೋಲೆಯೊರೆಯಲು
ತೋರದೆಲೆ ಸಾಲ್ಗಳದು ಹಾಳೆಯಮಳೆಯೆ ನೆಲವಾಯ್ತು
ಮಾರನಾಟದೊಳಾಣ್ಮ ಮರದಿನೆ
ಕೂರಿನಗಳಿಕೆ ಸರಿಸುತಲಿ ಪೂ
ನೂರು-ನೂರೆನೆ ಸುರಿಸಲಕ್ಕಜಮಳೆಯು ಮುದವಾಯ್ತು
ಕೂರಿನಗಳಿಕೆ ಸರಿಸುತಲಿ = ಪ್ರೀತಿಗೆ ಅಗಳಿಯನ್ನು (ಅಡ್ಡಿಯನ್ನು) ಸರೆಸುತಲಿ
ಪದ್ಯದ ಒಟ್ಟಾರೆ ಬಾವ ಸೊಗಸಾಗಿದೆ. ಆದರೆ ಪ್ರತೊಯೊಂದೂ ಅರ್ಥವಾಗ್ತಿಲ್ಲ. ಮೂರನೆಯ ಪಾದದ ಅರ್ತವೇನು?
ತಾನೋಲೆವೊರೆಯಲು? ತಾನೋಲೆ ಬರೆಯಲು ಅನ್ನೋದು ನಿಮ್ಮ ಉದ್ದೇಶವೆ? “ಒರೆಯಲು” ಅಂತ ಹೇಳುವ ಉದ್ದೇಶವಾದರೆ ಯಕಾರಾಗಮವಾಗಬೇಕು ಸಂಧಿಯಲ್ಲಿ. ವಕಾರ ಸರಿಯಲ್ಲ.
ಪಾರಿಜಾತದ ಮರ ಒಂದು ದೊಡ್ಡ ಗಿಡದ ಹಾಗಿರೋದಲ್ಲವೆ? ಅದರ ಮೇಲೇರಿ ಮಮುಷ್ಯ ಕೂರೋದು ಸಾಧ್ಯವೆ 🙂
ಶ್ರೀಕಾಂತರೆ,
ನಿಮ್ಮ ಸವರಣೆಗಳಿಗೆ ಧನ್ಯವಾದ. ನಿಮ್ಮ ಎರಡು ಅಭಿಪ್ರಾಯಗಳನ್ನೂ ಒಪ್ಪುತ್ತೇನೆ ಹಾಗು ಮೂಲದಲ್ಲೇ ಪದ್ಯವನ್ನು ಸರಿಪಡಿಸಿದ್ದೇನೆ. ಪಾರಿಜಾತದ ದೊಡ್ಡಗಿಡದಂತಿರುವ ಮರವಷ್ಟೇ!, ಅದರ ಮೇಲೆ ಪ್ರೇಮಿಯು ಹತ್ತಲು ಸಾಧ್ಯವಿಲ್ಲ, ಪ್ರಾಸಕ್ಕಾಗಿ ಈ ಆಭಾಸವಾಯಿತೆಂದೆನಿಸುತ್ತದೆ 🙂
ಕಿತ್ತುತಿನ್ನುವ ಬರದ ದಿನಗಳೊ
ಳುತ್ತು ತನ್ನಯ ಬದುಕ ತಾನವ
ಬಿತ್ತೆ ಬೆವರನು ಬೆಳೆಯೆ ಬೆಳೆಯನು ಮಳೆಯು ಮರೆಯಾಗೇ ।
ಒತ್ತಿ ಬಂದಿಹ ದುಃಖ ತಡೆಯದ
ಲತ್ತು ಸುರಿಸಿಹ ಕಂಬನಿಯೊಡನೆ
ಮುತ್ತಿ ಬಂದಿಹ ಹನಿಯು ಬೆರೆಯಲು ಮಳೆಯು ಮುದವಾಯ್ತು ॥
(ಮಳೆಯ ಹನಿ ಬೆರೆತು, ಮೆರೆಯಾದ ರೈತನ ಕಂಬನಿಯ ಕಲ್ಪನೆಯಲ್ಲಿ)
ಸೋದರಿ ಉಷಾ ಅವರಿಗೆ ಮಿಗಿಲಾದ ಅಭಿನಂದನೆಗಳು. ಈ ಸರಣಿಯಲ್ಲಿ ನೀವು ತುಂಬ ಸೊಗಸಾದಪದ್ಯಗಳನ್ನು ವಿಸ್ಮಯಾವಹವಾಗುವ ಹಾಗೆ ಒಳ್ಳೆಯ ಶೈಲಿ ಮತ್ತು ಕಲ್ಪನೆಗಳಿಂದ ಕೂಡಿರುವಂತೆ ರಚಿಸಿದ್ದೀರಿ. ಇದಕ್ಕಾಗಿ ಧನ್ಯವಾದಗಳು. ತಮ್ಮ ಸಾಹಿತೀವಸ್ಯೆಯು ಹೀಗೆಯೇ ಶುಕ್ಲಪಕ್ಷದಲ್ಲಿ ಸಾಗಲಿ.
ಸಾಹಿತೀವರಿವಸ್ಯೆ = ಸಾಹಿತ್ಯಸೇವೆ
ವರಿಸೆ ವಾಣಿಯ ವಾಕ್ಯದೊಳು ಸೋ
ದರಿಯು ಸರಸ ಪ್ರಾಸದಿಂ ನೀಂ
“ಹರಸಿ ನಲವಲಿ ಸೇಸೆಯಿಕ್ಕಿರೆ ಮಳೆಯು ಮುದವಾಯ್ತು” ॥
ಧನ್ಯವಾದಗಳು ಗಣೇಶ್ ಸರ್,
ಕಗ್ಗ ಹೇಳುವಂತೆ “ಘನತತ್ತ್ವ ವೊಂದಕ್ಕೆ (ದಿನರಾತ್ರಿ) ಮನಸೋತಾಗಿದೆ…. “.
“ಅನುಸಂಧಾನ” ಪ್ರಾರಂಭವಾಗಿದೆ – “ಪದ್ಯಪಾನ”ದೊಂದಿಗೆ.
ಎಲ್ಲರಿಗೂ ನಮಸ್ಕಾರ 🙂 ಇಂದಿನ ಮಳೆಯನ್ನು ನೋಡಿದಾಗ ಮೂಡಿದ ಸಂಸ್ಕೃತಪದ್ಯವಿದು –
सौदामनीत्रिशूलस्य वर्षाकालकपालिनः ।
चलन्मेघजटाजूटाद् धारामन्दाकिनी स्रुता ॥
(ಸೌದಾಮನೀತ್ರಿಶೂಲಸ್ಯ ವರ್ಷಾಕಾಲಕಪಾಲಿನಃ |
ಚಲನ್ಮೇಘಜಟಾಜೂಟಾದ್ ಧಾರಾಮಂದಾಕಿನೀ ಸ್ರುತಾ ||)
ತಾತ್ಪರ್ಯ – ಮಿಂಚೆನ್ನುವ ತ್ರಿಶೂಲವನ್ನು ಹಿಡಿದಿರುವ ಮಳೆಗಾಲವೆನ್ನುವ ಹರನ, ಚಲಿಸುತ್ತಿರುವ ಮೋಡಗಳೆಂಬ ಜಟೆಯಿಂದ ನೀರಿನ ಧಾರೆಯೆಂಬ ಗಂಗೆಯು ಇಳಿಯಿತು.
ಮಹೇಶಭಟ್ಟರೆ,
ಬಹಳ ಚೆನ್ನಾಗಿದೆ ಕಲ್ಪನೆ 🙂
ಕಳೆದ ಶುಕ್ರವಾರ ರಾತ್ರಿ 11.30 ತನಕ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ ಆ ಹಿನ್ನಲೆಯನ್ನು ಮತ್ತೆ ‘ನೆನೆಯುತ್ತಾ’ ನಿಮ್ಮ ಪದ್ಯವನ್ನು ನೋಡಿದಾಗ ರೂಪಕಗಳು ಮತ್ತೂ ರುಚಿಸುತ್ತಿದೆ ಧನ್ಯವಾದಗಳು!
ಧನ್ಯವಾದ 🙂
ಮುಂದೆ ನಿಮ್ಮ ಕಣ್ಣುಗಳು ಆನಂದಬಾಷ್ಪದಿಂದ ’ನೆನೆಯುವಂಥ’ ಪದ್ಯಗಳನ್ನು ಹೊಸೆಯುವ ಸಾಮರ್ಥ್ಯವನ್ನು ಆ ವಾಗಧೀಶ್ವರಿಯು ನನಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ 🙂
ಮಹಾನ್, (ಮ=ಮಹೇಶ, ಹಾ=ಹಾರ್ಯಾಡಿ)
ಅಹಿತದೋ ಹಿತಬಾಷ್ಪ ಸುರಿಯಿಸು
ತಿಹವು ಧಾರಾವಾಹಿಗಳು ತಾವ್
ನಿಹಿತವವುಗಳ ನಿಲ್ಲದಿರಿ ನೀವ್ ಬೇಡಿಕೊಂಬೆನು ನಾಂ|
ಬಹುದವೈಜ್ಞಾನಿಕದ ವಿವರವಿ
ದಹುದು ನೇತ್ರವು ನೆನೆವುದೇಂ? ನೆಂ
ದಿಹುದು ನೋಡಾ ಕೆನ್ನೆ, ಗಲ್ಲವು, ಛಾತಿ, ಪೊಡೆಯು, ತೊಡೆ, …||
ವಿನೋದವಿಚಕ್ಷಣ ಪ್ರಸಾದು ಅವರೇ,
ಅಹಿತದೋ ಎಂದರೆ? ಅದೂ ಅಲ್ಲದೆ ನಿಮ್ಮ ಪದ್ಯದ ಆಶಯ ನನಗೆ ಸ್ಪಷ್ಟವಾಗಲಿಲ್ಲ. ನಿಮ್ಮ ವಿವರಣೆಯನ್ನು ನಿರೀಕ್ಷಿಸುತ್ತೇನೆ 🙂
ಅಹಿತವಾದದ್ದೋ, ಹಿತವಾದದ್ದೋ, ಒಟ್ಟಿನಲ್ಲಿ ಕಣ್ಣೀರು ತರಿಸುವ ಕೆಲಸ ದೂರದರ್ಶನದ ಸೋಪ್-ಗಳು ಮಾಡುತ್ತಿವೆ. (ಸೋಮನ ಕಣ್ಣಿನಲ್ಲಿ ನೀರು ತರಿಸಿ) ನೀವು ಆ ಧಾರಾವಾಹಿಗಳ ಸಾಲಿನಲ್ಲಿ ನಿಲ್ಲದಿರಿ ಎಂದು ಪ್ರಾರ್ಥನೆ. ಉತ್ತರಾರ್ಧದ (ಪೂರ್ವಾರ್ಧಕ್ಕೆ ನೇರ ಸಂಬಂಧಿಸದಿದ್ದರೂ) ಅರ್ಥ ಸ್ಪಷ್ಟವೇ ಇದೆ: ಕಣ್ಣು ನೆನೆಯುತ್ತದೆ ಎಂಬುದು ಸರಿಯಾದ ವಿವರಣೆ ಅಲ್ಲ. ವಾಸ್ತವಾಗಿ ನೆನೆಯುವುದು ಕೆನ್ನೆ ಇತ್ಯಾದಿ…
ಪ್ರಸಾದು ಅವರೇ,
ಧಾರಾವಾಹಿಗಳು ಆನಂದಬಾಷ್ಪವನ್ನು ಎಂದಾದರೂ ಹೊಮ್ಮಿಸುವುವೇ? ನಾನು ಸೋಮ ಅವರ ಕಂಗಳಲ್ಲಿ ಆನಂದಬಾಷ್ಪವು ಹೊಮ್ಮಲಿ ಎಂದದ್ದು.
ಯಾಕೆ ಕಣ್ಣು ನೆನೆಯುತ್ತದೆ ಎಂಬ ವಿವರಣೆ ಸರಿ ಅಲ್ಲ? ನೆನೆಯುವುದು ಎಂದರೆ ಒದ್ದೆಯಾಗುವುದು ಎಂದು ಅರ್ಥವಿದೆಯಲ್ಲವೇ. ಸರಿಯಾಗಿಯೇ ಇದೆಯಲ್ಲ! 🙂
ತುಂಬ ಚೆಲುವಾದ ಪದ್ಯ. ಧನ್ಯವಾದಗಳು. ಆದರೆ ಕನ್ನಡದಲ್ಲಿಯೂ ಬರೆಯಲು ತಮಗೇನೂ ತೊಡಕಿಲ್ಲವಾದುದರಿಂದ ಭಾಮಿನಿಯೊಂದನ್ನು ಬೇಗ ಬರೆದು ಕಳುಹಿಸಿರಿ:-)
ಧನ್ಯವಾದ 🙂 ನೀವೆಂದಂತೆ ಭಾಮಿನಿಯಲ್ಲಿ ಪದ್ಯವೊಂದನ್ನು ಬರೆದು ಈ ಸಪ್ತಾಹದ ಪದ್ಯಮಾಲಿಕೆಗೆ ಸೇರಿಸಿದ್ದೇನೆ.
ನಲ್ಲೆ ನಲ್ಲನ ಕಣ್ಣ ಸನ್ನೆಗ-
ದೊಲ್ಲೆನೆನ್ನುತಲೋಡ ಹೊರಡಲು
ನಿಲ್ಲೆ ನಿನ್ನನು ಬಲ್ಲೆನೆನ್ನುತ ನಲ್ಲನಪ್ಪಿದನು
ಎಲ್ಲೆ ಮೀರಿದ ಬಯಕೆ ಹೊಮ್ಮುತ-
ಲಲ್ಲೆ ಕೂಡಿದರೇದಿ ಸುಯ್ಯುತ
ಸೊಲ್ಲೆ ಬಾರದೆ ಸುರಿದ ಬೆವರಿನ ಮಳೆಯು ಮುದವಾಯ್ತು
Shoot at sight 😉
ಸೊಗಸಾದ ಪದ್ಯ. ಸ್ವಾನುಭವವೇ?:-) ಇಲ್ಲವಾದರೂ ಕವಿಗಳು ಬರೆಯಬಹುದು:-)
ಇಲ್ಲಿಯ ಉತ್ತಾನಶೃಂಗಾರದ ಹದ ಶ್ರುತಿಶುದ್ಧವಾಗಿದೆ:-)
ಭವಜನೆ! ಏಕೆ ಕುಚೋದ್ಯಂ
ಭವಮನುಭವವೇದ್ಯಮಂತೆ ಪರರಿಗಭೇದ್ಯಂ
Meteor shower ಬಗ್ಗೆ ಒಂದು ಪ್ರಯತ್ನ .
ಏನ ಪೇಳಲಿಯೆಂತು ಪೊಗಳಲಿ
ಬಾನ ವಿಸ್ಮಯವೆಲ್ಲಮದ್ಭುತ
ನೂನಮಕಟಾ ದೇವನಾಡುವ ರಂಗುರಂಗಾಟ |
ಹೀನಮೇಘದ ಕಾಳರಾತ್ರಿಯೊ-
ಳೇನಿದೀ ದೀಪೋತ್ಸವವುಯೆನೆ
ಬಾನಿನಲಿ ಗೋಚರಿಸಿದುಲ್ಕೆಯ ಮಳೆಯು ಮುದವಾಯ್ತು ||
ಹೀನಮೇಘ = ಮೋಡಗಳಿಲ್ಲದ
ಚೆನ್ನಾಗಿದೆ. ಕೆಲವು ತಿದ್ದುಗೆ:
ಪಾದ ೨: …ಮೆಲ್ಲಮದ್ಭುತ
ಪಾದ ೫: ಳೇನಿದೆಂಬೊಲು ದೀಪದುತ್ಸವ
ಪಾದ ೬: ಬಾನಿನೊಳು
ತಿದ್ದುಪಡಿಗಳಿಗೆ ಧನ್ಯವಾದಗಳು.
ಒಳ್ಳೆಯಪದ್ಯ, ಸೊಗಸಾದ ಕಲ್ಪನೆ, ಧನ್ಯವಾದಗಳು.
ಈ ಬಾರಿಯ ಪದ್ಯಪಾನದ ಸಂಚಿಕೆಯಲ್ಲಿ ನಿರೀಕ್ಷೆಗೂ ಮೀರಿ ಗೆಳೆಯರು ಸೊಗಸಾದ ಪದ್ಯಗಳನ್ನು ಬಹೂಕರಿಸಿದ್ದಾರೆ. ವಿಶೇಷತಃ ಶ್ರೀಕಾಂತಮೂರ್ತಿ, ಸೋಮ, ಪ್ರಸಾದು, ಉಷಾ, ರಾಜಗೋಪಾಲ್, ರಘು ಮುಳಿಯ ಮುಂತಾದವರ ಗುಣ-ಗಾತ್ರಗಣ್ಯಪದ್ಯಗಳ ಮಳೆಯು ಬಲುಸೊಗಸು. ಅದಕ್ಕಾಗಿ ಎಲ್ಲರಿಗೂ ಧನ್ಯವಾದ. ಇದನ್ನೇ ಪ್ರಕೃತದ ಪದ್ಯಪೂರಣದ ವಸ್ತುವನ್ನಾಗಿಸಿದ್ದೇನೆ:
ಭಾರತಾವನಿಯಂ ರಸಮಯಾ-
ಕಾರದಿಂ ಮುಂಗಾರುಮಳೆ ವಿ-
ಸ್ತಾರದಿಂ ತೋಯಿಸುವ ಮುನ್ನಮೆ ಪದ್ಯಪಾನದೊಳು |
ಭಾರತೀವನಿತಾರಸಮಯಾ-
ಕಾರದಿಂ ನೀಮೆಲ್ಲರುಂ ಪ್ರ-
ಸ್ತಾರದಿಂ ಸುರಿಸಿರುವ ಕವಿತೆಯ ಮಳೆಯು ಮುದವಾಯ್ತು ||
ಗಣೇಶ್ ಸರ್, ಎಲ್ಲ “CO-ಮಳೆ” ಭಾಮಿನಿಯರನ್ನ ಮೆಚ್ಚಿದಕ್ಕೆ ಧನ್ಯವಾದಗಳು.
ಇದೇ ಸಡಗರದಲ್ಲಿ ಮತ್ತೊಂದು ಸಿಡಿ-ಮಿಡಿಯ ಮಳೆ.
ಹಗಲು ಜರುಗಿದ ಜಾತ್ರೆಯುತ್ಸವ
ಮುಗಿದು ಸಾಗಿರೆ ರಾತ್ರಿ ಸಂಭ್ರಮ
ಸೊಗದೆ ಹಚ್ಚಿದ ಸಾಲು ದೀಪದೊಳಿರುಳು ಚಲುವಾಗೇ ।
ಭುಗಿಲು ಕಂಡಾ ಮದ್ದುಗುಂಡಿನ
ದಿಗಿಲು ಗೊಂಡಿಹ ಜನರ ಮನದಲಿ
ಮುಗಿಲ ತುಂಬಿಹ ಬಾಣಬಿರುಸಿನ ಮಳೆಯು ಮುದವಾಯ್ತು ॥
ವ|| ಶ್ರೀಕಾಂತಮೂರ್ತಿ ರಘು ಸೋಮನುಷಾ ಪ್ರಸಾದನ್
ತಾಕತ್ತಿನಿಂದೊರೆದ ಚೀದಿಯು ರಾಜಗೋಪನ್|
ಸಾಕಾರರೈ* ಜಲದದೊಲ್ ತವ ರಶ್ಮಿಯಿಂದಂ
ಯಾಕಾರೆ ಪೇಳ್ ಕರೆಯರೈ ಪದವೃಷ್ಟಿಯನ್ನುಂ||
*ಹಿಂದುಕ್ಕೆ ನಿರಾಕಾರಯಂಬ್ರಮ್ಮಗಳಾಗಿದ್ದೊs!
hahaha 😀 Super Prasadu avare (chappaLe)
🙂
ಬಗೆಹರಿಸಲೀ ಕಡೆಯ ಸಾಲ್ಗಳ
ಚಿಗುರಲೆಲ್ಲರ ಮನದ ಭಾವನೆ
ಹಗುರದಿಂದಲೆ ಪರಿಹರಿಸದರು ಪದ್ಯಪಾನಿಗಳು
ಬಗೆಬಗೆಯ ವರ್ಣನೆಗಳಂದದಿ
ಹಗಲಿರುಳನೆಣಿಸದೆಲೆ ನೀಂಗಳು
ಸೊಗಸಿನಿಂ ಕಲ್ಪಿಸಿದಪದ್ಯದ ಮಳೆಯು ಮುದವಾಯ್ತು
ಭಾನುವಾರದಿ ಎಸ್ಪಿ ನಡೆಸುವ
ಗಾನ ಕಾರ್ಯಕ್ರಮದ ಚಂದದ
ಫೈನಲಂದೇ ಕ್ರಿಕೆಟು ಪಂದ್ಯದ ಫೈನಲಿಹುದಕಟಾ
ಗಾನವೆನೆ ಕಿರಿಕಿರಿಯು ಭರ್ತಗೆ
ದೋನಿಯೆನಲುರಿಯುರಿವ ಪತ್ನಿಯು
ಧ್ಯಾನಿಸಲು ವರುಣನನು ಸುರಿಸಿದ ಮಳೆಯು ಮುದವಾಯ್ತು
ಆದರಣೀಯ ರಾಮನಾಥ್ ಅವರಿಗೆ ಪದ್ಯಪಾನದ ಗೆಳೆಯರ ಪರವಾಗಿ ಸ್ವಾಗತ.
ಹಗುರವಾದ ಹಿನ್ನೆಲೆಯಲ್ಲಿ ನವಕಲ್ಪನೆಯ ಪದ್ಯವನ್ನೇ ರಚಿಸಿ ಪದ್ಯಪಾನಕ್ಕೆ ಅಡಿಯಿಟ್ಟಿದ್ದೀರಿ; ಧನ್ಯವಾದ.
ಪುರುಷಸರಸತಿ ರಾಗಣೇಶರೆ
ಕುರಿತು ಛಂದವ ಬರೆಯ ಪೇಳ್ದಿರಿ
ಕೊರರೆದ ಮೊದಲನೆ ಪದ್ಯ ನಿಮ್ಮಯ ಪಾದಗಳಿಗರ್ಪಿಸಿರುವೆ
ಕೊರೆದ …………ಕಬ್ಬ ನಿಮ್ಮಯ
………………..ಸಿರುವೆಂ|
ಶ್ರೀ ರಾಮನಾಥರಿಗೆ ನಲ್ಬರವು. ಪದ್ಯಪಾನದಲ್ಲಿ ಬರೆದಿದ್ದೀರಿ ಎಂದರೆ ಈಗಾಗಲೇ ಇಲ್ಲಿನ ಪದ್ಯಗಳನ್ನು ಓದುತ್ತಿದ್ದೀರಿ. ಧನ್ಯವಾದಗಳು. ಪದ್ಯದ ಕಲ್ಪನೆ ಹಾಗೂ ಓಟ ಚೆನ್ನಾಗಿದೆ. ಅಂತೂ ಪತ್ನಿಯ ಆಸೆಗೇ ನೆರವಾಗಿ ಮಹಿಳಾವಾದಿಗಳ ವಿಶ್ವಾಸ ಗಳಿಸಿರುವಿರಿ. ಭೇಷ್.
ಕೆಲವೇ ಸವರಣೆಗಳು ಬೇಕಿವೆ:
೧) ಭಾನುವಾರದಿ ಎಸ್ಪಿ: ಸಾಮಾನ್ಯವಾಗಿ, ಹೀಗೆ ಸ್ವರಾಕ್ಷರ ಬಂದಾಗ ಸಂಧಿ ಮಾಡಲೇಬೇಕು. ಇಲ್ಲದಿದ್ದರೆ ವಿಸಂಧಿದೋಷವೆನಿಸುತ್ತದೆ. ಭಾನುವಾರದೊಳೆಸ್ಪಿ/ದಿನೆಸ್ಪಿ ಎಂದು ತಿದ್ದಿ. ಇಲ್ಲದಿದ್ದರೆ, ಭಾನುವಾರದೆಸ್ಪಿ ಎಂದಾಗುತ್ತದೆ, ಛಂದಸ್ಸು ಕೆಡುತ್ತದೆ. ಇಲ್ಲೊಂದು ವಿನಾಯಿತಿ ಇದೆ: ಭಾನುವಾರದಿ ಯೆಸ್ಪಿ ಎಂದು ಓದಿಕೊಳ್ಳಬಹುದಾಗಿದೆ.
೨) ದೋನಿ ~ ಧೋನಿ (ಟೈಪೊ)
೩) ವರುಣನನು ಸುರಿಸಿದ ಮಳೆಯು: ಮಳೆಯು ವರುಣನನ್ನು ಸುರಿಸುವುದಿಲ್ಲ. ನೀವೇ ಸವರಿಸಿ.
೪) ‘ಧ್ಯಾನಿಸಲು’ ಎಂಬುದು ಶಿಥಿಲದ್ವಿತ್ವವಾಗಿ ಸಲ್ಲುವುದಾದರೂ, ‘ಜಾನಿಸಲು’ ಎಂದು ಬಳಸುವುದೊಳ್ಳೆಯದು.
ನಿಯತವಾಗಿ ಪಾನಗೋಷ್ಠಿಗೆ ಬನ್ನಿ ಎಂದು ಆಹ್ವಾನಿಸುವೆ.
ಸಾಧುವಾದುದ ತೋರಿಸಿರ್ಪ ಪ್ರ
ಸಾದರಿಗೆಸಾದರಪ್ರಣಾಮ
ಸಾಧನೆಯ ಪಥವಾವುದಿನ್ನೆನಗೆ ಸತ್ಯವಿದುವು
ನಿಮ್ಮ ಭಾವನೆಗಳಿಗೆ ಧನ್ಯವಾದಗಳು.
ದರ: ಒಂದು ಮಾತ್ರೆ ಕಡಿಮೆ ಇದೆ.
ಪ್ರಣಾಮ: ಹೀಗೆ ‘ಪ್ರಣಾಮ’ ಮಾಡಲಾಗದು. ಜಗಳ(ಳ-ಣ-ಯೋರಭೇದಃ)ವಾಗಿಬಿಡುತ್ತದೆ.
ಗೆಸತ್: ಲಗಂ ಆಗಿದೆ
ಯವಿದುವು: ಇದಾದಮೇಲೆ ಒಂದು ಗುರು ಬರಬೇಕು. ಬಂದಿಲ್ಲ. ದಯವಿಟ್ಟು ಸವರಿಸಿ.
ಈ ಮೇಲೆ ಗಣೇಶರು ಭಾಮಿನಿಯಲ್ಲಿ ಒಂದು ಪದ್ಯವನ್ನು ಹೊಸೆಯಲು ಸೂಚಿಸಿದ್ದರು. ಪದ್ಯವಿಂತಿದೆ –
ಬಿಸಿಲು ಬೆಂಕಿಯ ಕಿಡಿಯನುಗುಳಲು
ಬಸಿರ ತಾಪವ ತಾಳಲಾರದೆ
ಕುಸಿದ ಹರಿಣಿಯು ಬಂದು ಪಲ್ವಲಕೊಡ್ಡಿ ಕಾಯವನು |
ಒಸರುವಶ್ರುಗಳಿಂದ ರಸನೆಯ
ಹಸಿಯನಾಗಿಸಿ, ಕೊರಳ ಹೊರಳಿಸಿ,
ಸಿಸುವ ಹೆರುತಿರೆ ಸುರಿದ ತುಂತುರುಮಳೆಯು ಮುದವಾಯ್ತು ||
ಪಲ್ವಲ = ಸ್ವಲ್ಪವೇ ನೀರಿರುವ ಸರೋವರ. ರಸನೆ = ನಾಲಗೆ. ಸಿಸು = ಮರಿ.
ತುಂಬ ಹೃದಯಸ್ಪರ್ಶಿಯಾದ ಕಾವ್ಯವನ್ನೇ ಕೊಟ್ಟಿದ್ದೀರಿ; ಧನ್ಯವಾದ.
ಧನ್ಯವಾದ 🙂
bahaLa chennAgide padya:)
ಧನ್ಯವಾದ 🙂
ಪದ್ಯಪಾನ:
ಪಾನಗೋಷ್ಠಿಗೆ ಸೇರಬಯಸುತ
ಪಾನವ್ಯಸನದಿ ತೊಡಗಿಕೊಂಡಿಹೆ
ಪಾನಮತ್ತನುಮಪ್ರಬುದ್ಧನು ಪದ್ಯಪಾನದಲಿ |
ಪಾನಮಿತ್ರರು ಕಾವ್ಯಗಗನದಿ
ಪಾನಪಾತ್ರೆಯ ಕೆಡವಿ ಚಲ್ಲಿರೆ
ಪಾನಕದವೊಲ್ ಸುರಿದ ಪದ್ಯದ ಮಳೆಯು ಮುದವಾಯ್ತು ||
ಕಲ್ಪನೆ ತುಂಬ ಚೆನ್ನಾಗಿದೆ. ಧನ್ಯವಾದಗಳು.
Ragging:
ಅಪ್ರಬುದ್ಧಸದಸ್ಯನೈದಿರೆ
ಸುಪ್ರತಿಷ್ಠಿತ ಪಾನಿಗಳತಿ
ಕ್ಷಿಪ್ರದೊಳು ಕುಡಿಸಿಹರು ಮತ್ತೇರುತಲಿ ಪಾಡುವವೋಲ್|
——–
ಪೇಯ ಚೆಲ್ಲಲು ಗುಟುಕ ಹೀರುತ-
ಮೇಯ ಪದ್ಯವ ರಚಿಸೆ ರಾಜನ್
ತೋಯುವಂದದೆ ಪೀರಿ ಪಾಡಲ್ ಬಗೆಯದೆಂತಿರ್ಕುಂ||
ಧನ್ಯವಾದಗಳು.
ಕಾಲೇಜಿನಲ್ಲಿ ವಂಚಿತನಾಗಿದ್ದ ನನಗೆ ಮೊದಲಬಾರಿ Ragging ನಡೆದದ್ದು ಅತೀವ ಸಂತಸವಾಯಿತು.
ನಿಮ್ಮೆಲ್ಲರ ಸಹಕಾರ, ಸಹಯೋಗ, ಸಲಹೆ. ಹಾಗೂ. ಮಾರ್ಗದರ್ಶನವು ಹೀಗೆಯೇ ಸಾಗಿದರೆ ನಾನು ಪೇಯದಲ್ಲಿ ತೋಯಿಸಿಕೊಳ್ಳಲೂ ಸಿದ್ಧ.
मज़ा लेना है पीने का तो
कम कम धीरे धीरे पी।
चलेगा उम्रभर पीने का मौसम
धीरे धीरे पी….
पिलाने का हुनर साकी के हाथ में ।
पीकर बहकना बाकी के हाथ में ।।
फिर भी आपके सलाह के लिए धन्यवाद । आपके विचारों पर अवश्य अमल करूँगा ।
ಇತ್ತೀಚೆಗೆ ನಡೆದ ಶತಾವಧಾನದ ಬಗ್ಗೆ, ಕಡೆಯಲ್ಲಿ ರಾಘವೇಂದ್ರ ಅವರು ಬುಟ್ಟಿಯಿಂದ ಸುರಿದ ಹೂವಿನ ಮಳೆಯನ್ನು ಕಂಡು ಬಂದ ಕಲ್ಪನೆ…
ಕಟ್ಟಿದಾ ಶತಕಟ್ಟಲೆಗಳಂ
ಮೆಟ್ಟಿ ನಿಲ್ಲುತೆ ಧೀರರಾಗರು
ಕೊಟ್ಟಿರಲ್ಪೂರಣದ ಧಾರಯನೇಕಚಿತ್ತದೊಳು|
ಗಟ್ಟಿಕಂಠದಿ ಪಾಡಿರಲ್ಕಳೆ
ಕಟ್ಟಿತಯ್ ಅವಧಾನದಾಂತ್ಯದಿ
ಬುಟ್ಟಿಯಿಂ ಸುರಿಯಲ್ಕೆ ಪುಷ್ಪದ ಮಳೆಯು ಮುದವಾಯ್ತು||
ಮತ್ತೊಂದು,
ಬಿಸಿಲ ಹೊಡೆತಕೆ ಕಾದನೆಲದೊಳ್
ಕಸದರಾಶಿಯುನಾರುತಿರಲಾ
ಗಸವ ನೋಡುತೆ ಖಿನ್ನರಾದರು ನಗರದಾಜನರು|
ಮಸಣದಂತೆಯೆ ಕಂಡಭುವಿಗೆನೆ
ಪೊಸಬಯಕೆಯನು ಮೂಡಿಸುವವೊಲು
ಪಸರಿಸುತೆ ಮಣ್ಣಿನಘಮವ ಜಡಿಮಳೆಯು ಮುದವಾಯ್ತು||
ತಪ್ಪಿದ್ದಲ್ಲಿ ದಯವಿಟ್ಟು ಸವರಿಸಿ….
Sridhar is ever able to carve out one more variety. Kudos.
೧) ಗಟ್ಟಿಕಂಠದಿ ಪಾಡಿರಲ್ – ಯಾರು/ಏನು ಹಾಡಿದರು ಎಂಬ ಪ್ರಶ್ನೆಯುಳಿಯುತ್ತದೆ. ಹಾಗಾಗಿ ಗಟ್ಟಿಕಂಠದ ಸ್ವಸ್ತಿಯುಂ ಕಳೆ/ಗಟ್ಟಿ… ಎಂದೇನಾದರೂ ಮಾಡಿದರೆ ಸರಿಹೋದೀತೇನೋ
೨) ಅವಧಾನದಂತ್ಯದಿ ಆಗಬೇಕು.
೩) ನಗರವಾಸಿಗಳು sounds better than ನಗರದಾಜನರು
thanks Prasadu avare 🙂
ತುಂಬ ಸೊಗಸಾದ ಪದ್ಯ ಶ್ರೀಧರ್. ಮೊದಲನೇ ಪದ್ಯವಂತು ತುಂಬ ಚೆನ್ನಾಗಿದೆ. ಅವಧಾನದಲ್ಲಿನ ಪುಷ್ಪದ ಮಳೆಯನ್ನು ತಂದ ರೀತಿ ತುಂಬಾ ಚೆನ್ನ.
ಒಂದು ಸಂದೇಹವಿದೆ. ನಿಮ್ಮ ಮೊದಲನೇ ಪದ್ಯದ ಐದನೇ ಸಾಲಿನಲ್ಲಿ “ಕಟ್ಟಿತಯ್ ಅವಧಾನದಾಂತ್ಯದಿ” ಎನ್ನುವಾಗ ವಿಸಂಧಿದೊಶವಾಗುವುದೇ? ಅಥವಾ ಆ ರೀತಿ ಸ್ವರದಿಂದ ಶುರುವಾಗುವ ಪದವನ್ನು ಸಾಲಿನ ಮಧ್ಯದಲ್ಲಿ ಬಳಸಬಹುದೇ?
ಧನ್ಯವಾದ ಕಶ್ಯಪ.. 🙂 ನನಗೆ ತಿಳಿದ ಮಟ್ಟಿಗೆ ಇದು ವಿಸಂಧಿದೋಷವಲ್ಲ…
ಭಲೇ! ವಕೀಲ ಕಾಶ್ಯಪಾ!! “ಕೆವಿಟ್ಟು” ಹಾಕಿಬಿಟ್ಟಿರಾ!!!
ಸಲೀಲವಾಗಿ ಸಲ್ವುದಯ್ ತ್ವದೀಯಮಿಲ್ಲಿ ಕೇಳ್ವಿ(ಪ್ರಶ್ನೆ)ಯುಂ |
ವಿಲೋಪಮಿಲ್ಲದಂತೆ ಮರ್ತೆ “ಚೀದಿ” ಮಾತು ನಿಲ್ವುದಯ್
ವಿಲಾಸದಿಂದೆ ಪದ್ಯಮುಂ ಬೆಡಂಗುಗೊಂಡು ಗೆಲ್ವುದಯ್ ||
ನೀವೆಂದಂತೆ “…….ಕಟ್ಟಿತಯ್ಯವಧಾನದಂತ್ಯದಿ…” ಎಂದು ಸಂಧಿಯಾಗಬೇಕು. ಆದರೆ ಇಲ್ಲಿ ಸುದೈವವಶಾತ್ ಸಂಧಿಯಾದರೂ ಆಗದೇ ಇದ್ದರೂ ಛಂದಸ್ಸು ಎಡವುವುದಿಲ್ಲ. ಮಾತ್ರವಲ್ಲ, ಈ ರೀತಿಯ
ಸಂದರ್ಭಗಳಲ್ಲಿ ಅರ್ಥಸ್ಪಷ್ಟತೆಗಾಗಿ ವಿಸಂಧಿಯಾಗಿದ್ದರೂ (ಆದು ಸಂಧಿಯಾದಲ್ಲಿ ಛಂದಸ್ಸನ್ನು ಎಡವಿಸದೆ ಇದ್ದ ಪಕ್ಷದಲ್ಲಿ ಮಾತ್ರ) ಛಂದಸ್ಸಿನ ತೊಡಕು ಬಾರದಿರುವ ಕಾರಣ ಉಳಿಸಿಕೊಳ್ಳಬಹುದು.
ಅಂತೂ ನೀವಿಬ್ಬರೂ ಇಷ್ಟು ಚೆನ್ನಾಗಿ ಸೂಕ್ಷ್ಮಗಳನ್ನು ಕುರಿತು ಅರಿತು ಚರ್ಚಿಸುತ್ತಿರುವುದು ನನಗೆ ತುಂಬ ಮುದಾವಹ.
ವಿಸಂಧಿದೋಷದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಗಣೇಶ್ ಸರ್. ನನ್ನ ಮುಂಚಿನ ಪದ್ಯದಲ್ಲಿ ನಾನು ಮಾಡಿದ ತಪ್ಪನ್ನು ನೆನೆದು ಈ ಪ್ರಶ್ನೆ ಕೇಳಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. 🙂
ಪ್ರಿಯ ಕಶ್ಯಪ್,
ಈ ವಿಷಯವನ್ನು ಶ್ರೀ ಮಂಜುನಾಥ ಕೊಳ್ಳೇಗಾಲರು ಪದ್ಯಪಾನದಲ್ಲಿ ವಿಶದವಾಗಿ ಚರ್ಚಿಸಿದ್ದಾರೆ: See sl. 41 under http://padyapaana.com/?p=1422#comments and sl. 4 under http://padyapaana.com/?p=844#comment-2682
ಪ್ರಸಾದು ಅವರೇ, ಮಂಜುನಾಥ್ ರವರ ಚರ್ಚೆಯನ್ನು ತಿಳಿಸಿದಕ್ಕೆ ಧನ್ಯವಾದಗಳು. ವಿಸಂಧಿದೋಷದ ಬಗ್ಗೆ ಸಾಕಷ್ಟು ತಿಳಿದಂತಾಯಿತು.
ಮೊದಲನೆಯ ಪದ್ಯವು ಚೆನ್ನಾಗಿದೆಯೆಂದರೆ ಅದು ನನ್ನನ್ನೇ ಹೊಗಳಿಕೊಂಡಂತಾಗಿ ಆತ್ಮಸ್ತುತಿಯ ಮಹಾಪಾತಕವು ಬರುವ ಕಾರಣ ನಾನೇನ ಮಾಡಲಿ? ಶ್ರೀಧರಯ್ಯಾ??? 🙂
ಚೆನ್ನಾಗಿದೆಯೆಂದು ನೀವು ಹೇಳಿರದ ಕಾರಣ ಮಹಾಪಾತಕವು ತಟ್ಟುವುದಿಲ್ಲ ಬಿಡಿ. परोक्षप्रिया इव हि देवा प्रत्यक्षद्विषः।
Like 🙂
ಧನ್ಯವಾದಗಳು ಸಾರ್.. 🙂 ಶತಾವಧಾನವೇ ನನಗೆ ಪದ್ಯಗಳನ್ನು ಬರೆಯುವುದಕ್ಕೆ ಸ್ಫೂರ್ತಿಯಾದಕಾರಣ, ಅದರ ಬಗ್ಗೆ ಒಂದು ಪದ್ಯ ಬರೆಯುವ ಆಸೆ ಈ ಮೂಲಕ ಫಲಿಸಿತು… ಪ್ರಸಾದು ಅವರು ವಿಸಂಧಿದೋಷದ ಬಗ್ಗೆ ಕೊಟ್ಟ Reference ಗೆ ಧನ್ಯವಾದಗಳು. 🙂
ನನಾನನಾನನಾನನಾ ನನಾನನಾನನಾನನಾ – ಇದು ಯಾವ ಛಂದಸ್ಸು? ದಯವಿಟ್ಟು ಇದರ ಬಗ್ಗೆ ಮಾಹಿತಿ ತಿಳಿಸಿ (ವಿವಾಹ ಭೋಜನವಿದು…. ಇದೇ ಗತಿಯೇ??)
ಅಲ್ಲ. ಈ ಗತಿಯಲ್ಲಿರುವುದು ಮುದಾಕರಾತ್ತಮೋದಕಂ… ಛಂದಸ್ಸಿನ ಹೆಸರು ಗೊತ್ತಿಲ್ಲ
ಆಹಾ…!! ತಿಳಿಯಿತು.. 🙂 ಧನ್ಯವಾದಗಳು.. ಆದರೆ ಯಾವ ಛಂದಸ್ಸೆಂಬುದು ತಿಳಿಯಬೇಕಾಗಿದೆ..
ಈ ಛಂದಸ್ಸಿನ ವಿವರಣೆ ಪದ್ಯಸಪ್ತಾಹ-೬೨ (ಶಿವನ ಪದ್ಯಗಳು) ಕ್ರಮ ಸಂಖ್ಯೆ-೧೦ ರಲ್ಲಿ ಇದೆ.
ಸಾಕಷ್ಟು ಕೆಲಸ ಕೊಟ್ಟಿರಿ. ‘ಪಂಚಚಾಮರ’ ಎಂದಿದ್ದರೆ ಸಾಕಿತ್ತು! Anyway, thanks.
ಇಲ್ಲ ಪ್ರಸಾದು ಅವರೆ, ನಾನು ಇದನ್ನು ಹುಡುಕಲು ಹೋದಾಗ ಇತರೆ ಪದ್ಯಗಳನ್ನು (ವಿಶೇಶವಾಗಿ ಶ್ರೀಕಾಂತರ ಹೊಸ ವೃತ್ತಗಳನ್ನು) ಓದುವ ಅವಕಾಶ ದೊರಕಿತು…
ನಾನು ಹೇಳಿದ್ದು ಉಷಾರವರಿಗೆ.
ಪಂಚಚಾಮರಚ್ಛಂದಸ್ಸಿನಲ್ಲಿ ನಾನು ಬರೆದದ್ದು ಹೌದು. ಆದರೆ ವಿವಾಹಭೋಜನಂಬು (ತೆಲುಗುನುಡಿಯ ಹಾಡೇ ಹೆಚ್ಚು ಛಂದೋಬದ್ಧವಾಗಿರುವ ಕಾರಣ ಅದನ್ನೇ ಇಲ್ಲಿ ಉದಾಹರಿಸಿದ್ದೇನೆ. ಕನ್ನಡದ ಚಿತ್ರಗೀತರಚನಕಾರರಿಗೆ ಯಾರಿಗೂ ತೆಲುಗಿನವರಂತೆ ಒಳ್ಳೆಯ ಅಲಂಕಾರ-ಛಂದೋಜ್ಞಾನವಿಲ್ಲ. ಇದು ಇನ್ನಿತರ ಭಾಷೆಗಳವರಿಗೂ ಅಷ್ಟೇ ಅನ್ವಯಿಸುತ್ತದೆ:-) ಇಂತಾದರೂ ಆ ಹಾಡು ತ್ರಿಮಾತ್ರಾಲಯಸಮತ್ವವಿರುವ ಬಂಧವೇ ಹೊರತು ಪಂಚಚಾಮರದಂತೆ “ನನಾನನಾ…..” ಗುರು-ಲಘುವಿನ್ಯಾಸದ ಸತಾನ-ವರ್ಣವೃತ್ತವಲ್ಲ. ಆ ಹಾಡು ಕೇವಲ ಉತ್ಸಾಹಲಯದ (ಅಂದರೆ ಗಣವೊಂದಕ್ಕೆ ಮೂರು ಮೂರು ಮಾತ್ರೆಗಳಿರುವ) ಬಂಧ.
ಹೀಗಾಗಿ ಅಲ್ಲಿ ತ್ರಿಶ್ರಗತಿಯ ಆದಿತಾಳ ಅಥವಾ ರೂಪಕತಾಳದ, ಇಲ್ಲವೇ ಬರಿಯ ತ್ರಿಶ್ರ ನಡೆ ಎಂದು ಸಂಗೀತಲೋಕವು ಹೇಳುವ ನಡಿಗೆಯುಂಟು. ಹೋಲಿಕೆಗಾಗಿ ಭೋಗಷಟ್ಪದಿಯನ್ನು ನೆನೆದರೆ ಸಾಕು, ಎಲ್ಲ ಸ್ಪಷ್ಟವಾಗುವುದು.
kisIki muskurAhaTOn pe hO misaal— and
abhI na jAo chODkar
these 2 Hindi songs follow the repeated Lagam patterns. the letters may or strictly fit when we look at mAtres but rh gait is definitely there.
ಶಿವತಾಂಡವ ಸ್ತೋತ್ರವೂ ಇದೇ ಪಂಚಚಾಮರ ಛಂದಸ್ಸಿನಲ್ಲಿದೆಯಲ್ಲವೇ ಸಾರ್ ?
ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀ ವಿರಾಜಮಾನಮೂರ್ಧನೀ |
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಮ್ ಮಮ ||
ಕಬ್ಬಗಬ್ಬವ ಕಂಡು ಪರರಿಗೆ
ದಿಬ್ಬಬಗೆಯಲಿ ತಿಳಿಯೆ ಪಾಡುವ
ಳೊಬ್ಬಳಾಕೆಯ ಕೀರ್ತಿಯೆಲ್ಲೆಡೆ ಹಬ್ಬಿ ಹೊಳೆಯಾಯ್ತು
ಅಬ್ಬರವ ಮಾಡದಲೆ ಜಗವನೆ
ನಿಬ್ಬೆರಗುಗೊಳಿಸಿಪ್ಪ ನಿರ್ಮಲ
ಸುಬ್ಬಲಕ್ಷ್ಮಿಯ ಗಾನದಿಂಚರಮಳೆಯು ಮುದವಾಯ್ತು
ಶ್ರೀಕಾಂತರೆ, ಚೆನ್ನಾಗಿದೆ…
Thanks sridhara
ಕಾಡುವುದಕೇ ತಾನಸೇನಗೆ
ಪಾಡೆನುತ ದೀಪಕವರಾಜನು
ಪಾಡುತಲಿ ರಾಗದೊಳ್ಮುಳುಗುತೆ ದೇಹವುರಿಸುತಲಿ|
ಮೋಡಗಳ ಕರೆಯುತಲಿಮಕ್ಕಳು
ಪಾಡೆ ಚಂದದಿ ಮೇಘರಾಗದೆ
ಜಾಡಿಸುತ ತಂಪೆರೆದು ಸುರಿಯಲ್ಮಳೆಯು ಮುದವಾಯ್ತು||
Ref: Akbar use to trouble Tansen asking him to Sing Deepak Raag always, as he liked it most (knowing that tansen gets burning feeling as he sings with full involvement) so every time when he was asked to Sing Deepak raag his children were singing Megh Raag at home so that it rains and cools him…..
Not sure how apt it is… Welcome suggestions and corrections 🙂
ಕಾಡುವುದಕೇ ತಾನಸೇನಗೆ
ಪಾಡೆನುತ ದೀಪಕವರಾಜನು
ಪಾಡುತಲಿ ರಾಗದೊಳು ಮುಳುಗುತೆ ದೇಹವುರಿಸುತಲಿ||
ಮೋಡಗಳ ಕರೆಯುತಲಿಮಕ್ಕಳು
ಪಾಡೆ ಚಂದದಿ ಮೇಘರಾಗದೆ
ಜಾಡಿಸುತ ತಂಪೆರೆದು ಸುರಿಯಲ್ಮಳೆಯು ಮುದವಾಯ್ತು||
have changed 3rd line…
ಸೊಗಸಾಗಿದೆ ಶ್ರೀಧರ. ಒಳ್ಳೆಯ ಸಂದರ್ಭ. ಒಂದು ಅಭಿಪ್ರಾಯ. ಸ್ವಲ್ಪ ಅರ್ಥಸಂದಿಗ್ಧ ಇದೆ. ನಿಮ್ಮ ಪದ್ಯದ ಎರಡು ಮತ್ತು ಮೂರನೆಯ ಪಾದಘಳಲ್ಲಿ ರಾಜನೇ ದೀಪಕವನ್ನು ಹಾಡಿದ ಅನ್ನುವ ಭಾವನೆ ಹುಟ್ಟುತ್ತೆ. ಆದರೆ ತಿದ್ದಿ.
ಧನ್ಯವಾದಗಳು ಶ್ರೀಕಾಂತರೇ, ಅದು ನನಗೂ ಅನ್ನಿಸಿತು… ಆದೆರೆ ಪರಿಹಾರ ತಿಳಿಯದೆ ಹಾಗೆಯೇ ಬರೆದೆ… ಸರಿಪಡಿಸಲು ಯತ್ನಿಸುವೆ..
ಬುದ್ಧನ ಜ್ಞಾನೋದಯ ::
ಪಳೆಯ ದೇಹವ, ರೋಗ ರುಜಿನವ
ಕಳೆದ ಜೀವವ, ಕಂಡು ಕೊರಗುತ
ಬಳಲಿ ಬೆಂಡಾಗಿರ್ದ ಬಾಳದು ಬೇಡೆ ಬೆಳ್ಬಗೆಯ
ತಳೆದ ಪದ್ಮಾಸನದ ಧೀರಗೆ
ಕುಳಿತ ಬೋಧಿಯ ವೃಕ್ಷದಡಿಯೊಳು
ಫಳಿತ ದರ್ಶನ ತಂದ ಜ್ಞಾನದ ಮಳೆಯು ಮುದವಾಯ್ತು [ಶಿ.ದ್ವಿ]
[ಬೆಳ್ಬಗೆ – ತಿಳಿಯಾದ ಮನಸ್ಸು ಎಂಬ ಭಾವ]
Nice ramachandra
ಇಷ್ಟರವರೆಗೆ ಬರಿ ಓದುಗಳಾಗಿದ್ದ ನನ್ನ ಮೊದಲ ಕವನ
ಮಂಗಳೂರಲಿ ಬಿಸಿಲಗಾವಿಗೆ
ಕಂಗುತೆಂಗಿನ ತೋಟವೆಲ್ಲವು
ರಂಗು ಕೆಂಪಲಿ ಬಾಡಿಯೊಣಗುತ ನೀರ ಕಾಯುತಿರೆ
ಮುಂಗುರುಳಿನಡಿಯಲಿ ಬೆವರಹನಿ
ಸಂಗಡದಿ ಪೋಣಿಸೆ ಸಲಿಲ ಧೋ
ಗುಂಗ ಮುಂಗಾರೋಕುಳಿಯ ಬಿರುಮಳೆಯು ಮುದವಾಯ್ತು
ಶೈಲಜಾರವರಿಗೆ ಪದ್ಯಪಾನಕ್ಕೆ ಸ್ವಾಗತ. ಇದು ಮೊದಲ ಕವನವೇನಲ್ಲ 🙂 ವಸ್ತುವಿನಲ್ಲಿ ಪ್ರಾಂತೀಯ ಸೊಗಡಿದೆ. ಕಲ್ಪನೆ ಚೆನ್ನಾಗಿದೆ.
ಕೆಲವೆಡೆ ಲಘುಬಾಹುಳ್ಯ ಹಾಗೂ ಪದ-ಗಣವಿಭಜನೆ (/ಯಲಿ ಬೆ/ವರಹನಿ/ /ಣಿಸೆ ಸ/ ಲಿಲ ಧೋ/) ತೊಡಕಿದೆ. ಹೀಗೊಮ್ಮೆ ಸವರಬಹುದು: ಮುಂಗುರುಳ ತೋಯ್ದಿರ್ಪ ಬೆವರನು.
ಪೋಣಿಸೆ(=ಸಲು) ಸರಿಯಾಗದು. ಪೋಣಿಸಿದಂತಿರೆ ಎಂಬರ್ಥ ಬರುವಂತೆ ತಿದ್ದಬೇಕು. ಮುಂಗಾರು, ಮಳೆ ಮತ್ತು ಓಕುಳಿ – ಈ ಪದಗಳಿರುವಾಗ ‘ಸಲಿಲ’ ಬೇಕಿಲ್ಲ. ನೀವೇ ಸವರಿಸಿ.
ಧನ್ಯವಾದಗಳು…ನಾನಂದಿದ್ದು ಈ ತಾಣದಲ್ಲಿ ಇದೇ ಮೊದಲ ಕವನ..
ಸವರಿಸಿದಾಗ
ಮಂಗಳೂರಲಿ ಬಿಸಿಲಗಾವಿಗೆ
ಕಂಗುತೆಂಗಿನ ತೋಟವೆಲ್ಲವು
ರಂಗು ಕೆಂಪಲಿ ಬಾಡಿಯೊಣಗುತ ನೀರ ಕಾಯುತಿರೆ
ಮುಂಗುರುಳಿನಡಿ ತೊಯ್ವ ಬೆವರದು
ಸಂಗ ಪೋಣಿಸೆ ಗಗನದಲಿ ಧೋ
ಗುಂಗ ಮುಂಗಾರೋಕುಳಿಯ ಬಿರುಮಳೆಯು ಮುದವಾಯ್ತು
====================================
ಪದ್ಯಪಾನದಿ ಬರೆದ ಸಾಲ್ಗಳ
ಮಧ್ಯೆ ಹಿಣುಕುವ ಛಂದ ದೋಷವ
ವಿಧ್ಯೆ ಅರಿತಿಹ ನುರಿತ ತಜ್ಞರು ಕಂಡು ಹಿಡಿದಾಯ್ತು ||
ಗದ್ಯ ಬಾರದೆ ಪದ್ಯ ಬರೆಯಲು
ನಿತ್ಯ ಹವಣಿಸಿ ಸಾಲ ಗೀಚಿದ
ಪದ್ಯ ತಿದ್ದಲು ತಪ್ಪುಗಳ ಸುರಿಮಳೆಯು ಮುದಮಾಯ್ತು ||
====================================
ಪ್ರಾಸವ್ಯತ್ಯಯ ದೋಷಮಿಲ್ಲೈ
ಲೇಸು ಪದವಿಚ್ಛೇದ ಸ್ಖಲನಂ
ಘಾಸಿ ಕಾಗುಣಿತದಿನೆ ಮೇಣಾ ಭಾಷೆ ಪೊಸತಿರಲೇಂ|
ಈಸೆ ಕಾವ್ಯಸಮುದ್ರಮನ್ನುಂ
ರೋಸದೆಲೆ ಗೀಚದಿರೆ ಬಹಳಂ
ಹ್ರಾಸಮಾಗುಮೆ ಕಾಲಕ್ರಮದೆ ಪ್ರಮಾದಗಳದೆಂಬೆಂ||
ನಿಮ್ಮ ಪದ್ಯವನ್ನು ರಂಗೋಲಿಯಿಂದ ಸಿಂಗರಿಸಿರುವ ಬಗೆಗೆ:
ಎಂತದಿದ್ದೊಡಮೆಮ್ಮ ಕೂಸದು-
ಮಂತೆ ತೋರಿರೆ ಭಾವಚಿತ್ರದೆ|
ಚಿಂತೆಯಿಲ್ಲದೆ ಕಟ್ಟಕಟ್ಟುವೊ
ಲಂತೆ ಕಬ್ಬಕೆ ರೇಖೆಯು||
ಮಾನ್ಯರೆ,
ಬೇಸರಿಸದಿರಿ. ಕವನಕ್ಕೆ ಯಾವುದೂ ವಸ್ತುವಾಗಬಲ್ಲದು ಎಂಬುದಕ್ಕೆ ಈ ಎರಡು ಪದ್ಯಗಳು ನಿದರ್ಶನ ಅಷ್ಟೆ. ಒಂದಷ್ಟು ತಪ್ಪು ಮಾಡದೆ ಅವನ್ನು ದಾಟಲಾರೆವು. ಬೇಗ ತಪ್ಪು ಮಾಡಿದಷ್ಟೂ ಬೇಗ ಪಾರಾಗುವೆವು.
AmL
ಒಳ್ಳೆಯ ಪ್ರಯತ್ನ. 5ನೆಯ ಪಾದದಲ್ಲಿ ಆದಿಪ್ರಾಸ ಎಡವಿದೆ. ಬೇರೆಕಡೆ ಸರಿಯಿದೆ. ಕಾಗುಣಿತ ಎಡವಿರುವುದನ್ನು ಪ್ರಸಾಉ ಆಗಲೆ ಹೇಳಿಯಾಗಿದೆ. ಛಂದದೋಷ ಅನ್ನೋದು ನ್ಯಾಯವಾಗಿ ಛಂದೋದೋಷೆ ಎಂದು ಸಂಧಿಯಾಗಬೇಕು. ಹಾಗೆ ಮಾಡಿದರೆ ಭಾಮಿನಿ ಹಾದಿತಪ್ಪುತ್ತಾಳೆ. ಇರಲಿ, ಅಂತೂ ಪ್ರಯತ್ನ ಮೇಲ್ಮಟ್ಟದ್ದೇ ಆಗಿದೆ.
ಜೀವ ತಿನ್ನುವ ತುಂಟ ಪೋರನು
ಕಾವ ತಾಯಿಯ ಕಣ್ಣ ತಪ್ಪಿಸ
ದಾವ ಮಾಯದೆ ಮಣ್ಣಲಾಡುತೆ ಬೆಳೆದ ಮಗನಾಗೇ।
ಕೋವಿ ಹಿಡಿದವ ಯೋಧನಾಗಿರೆ
ಕಾವ ತಾಯಿಯ ನೆಲವ ಚುಂಬಿಸಿ
ಭಾವ ತೀವ್ರದಿ ಸುರಿದ ಮಣ್ಣಿನ ಮಳೆಯು ಮುದವಾಯ್ತು ॥
(ಮಣ್ಣ ಸುರಿದುಕೊಂಡು ಆಟವಾಡುತಿದ್ದ ಮಗುವು, ಬೆಳೆದು ಯೋಧನಾಗಿ, ತಾಯ್ನಾಡ ಮಣ್ಣನ್ನು ಭಕ್ತಿಭಾವದಿಂದ ತನ್ನ ಮೇಲೆ ಸುರಿದುಕೊಂಡು ಪುಳಕಗೊಳ್ಳುವ ಕಲ್ಪನೆಯಲ್ಲಿ )
ಒಳ್ಳೆಯ ವಸ್ತು ಮತ್ತು ಭಾವ ಉಷರವರೆ. ಬೊಂಬಾಟಗಿದೆ
ಎರಡು ಮಾತು. “ತಪ್ಪಿಸದಾವ” ನೀವು ಸಂಧಿ ಮಾಡಲಾಗದ ಕಡೆ ಮಾಡಿ ಸಂದಿಗ್ಧ ಒದಗಿಸಿದ್ದೀರಿ, “ತಪ್ಪಿಸಿಯಾವ” ಅನ್ನೋದೆ ಸರಿ.
ಹಾಗೇ ತಾಯಿಯ ನೆಲ ಸಮಂಜಸವಾಗಿ ತೋರ್ತಿಲ್ಲ. ತಾಯ್ನೆಲ ಸರಿ. ತಾಯಿಯನೆಲ ಅರ್ಥವ್ಯತ್ಯಯವಾಗುತ್ತೆ. ತಾಯ್ನೆಲವನ್ನು ಅಂತ ಹಾಕಿದರೆ ಹೊಂದಿಕೊಳ್ಳುತ್ತೆ.
ಕಲ್ಪನೆ ಮತ್ತು ಭಾವ ತುಂಬ ಚೆನ್ನಾಗಿದೆ ಉಷಾರವರೆ.
೧) ಪೂರ್ವಾರ್ಧದ ಕೊನೆಯ ಅಕ್ಷರ ಹೇಗೂ ಗುರು. ಅದನ್ನು ಹ್ರಸ್ವವಾಗಿಯೇ ಉಳಿಸಿಕೊಳ್ಳಿ.
೨) ‘ಮಾಯದೆ’ ಎಂದರೆ ‘ಗಾಯ ಮಾಯದೆ’ ಎಂದಾಗುತ್ತದೇನೋ! ಮೂಲಪದ ‘ಮಾಯೆ’ ಎಂದಿರುವುದರಿಂದ, ಮಾಯೆಯಿನ್/ನೊ ಎಂದು ಸವರಿಸುವುದೊಳಿತು. ನಿಖರವಾಗಿ ಹೇಳಲಾರೆ. ಯಾರಾದರೂ ಸ್ಪಷ್ಟೀಕರಿಸಿಯಾರೆ?
೩) ‘ಹಿಡಿದವ’ ಗಿಂತ ‘ಪಿಡಿಯುತೆ’ ಎಂದರೆ ಚೆನ್ನು.
೪) ‘ಸುರಿದ’ ಎಂದರೆ ‘ಸುರಿದುಕೊಂಡ’ ಎಂದಾಗದು. ‘ಧರಿಸೆ’ ಎಂದರೆ ತುಸು ಸವರಿಸಿದಂತಾಗುತ್ತದೆ.
ಮೂರ್ತಿಗಳೆ,
ತಪ್ಪಿಸದಾವ = ತಪ್ಪಿಸಿ+ಅದಾವ. ಸಾಧು.
ನೀವು ‘ತಪ್ಪಿಸದೆ+ಆವ’ ಎಂದು ವಿಭಜಿಸಿಕೊಂಡಿದ್ದೀರಿ. ಇದೂ ಸಾಧು, ಆದರೆ ಅಪ್ರಸ್ತುತ.
(ಹಾಗೆ ನೋಡಿದರೆ ‘ತಪ್ಪಿಸಿಯಾವ’ ಆಗದು. ‘ತಪ್ಪಿಸಿspaceಯಾವ’ ಎನ್ನಬೇಕಾಗುತ್ತದೆ ;))
ಪ್ರಸಾದು ನಾನು ತಪ್ಪಾಗಿ ಬಿಡಿಸಿಕೊಂಡಿಲ್ಲ. ನೀವು ತಪ್ಪಾಗಿ ಸಂಧಿ ಮಾಡ್ತಿದ್ದೀರ.
ತಪ್ಪಿಸಿ+ ಅದಾವ ಹೇಗೆ ತಪ್ಪಿಸದಾವ ಆಗೋಕೆ ಸಾಧ್ಯ? ಕನ್ನಡದಲ್ಲಿ ಒಂದು ಪದಾಂತ್ಯದಲ್ಲಿ ಇಕಾರವಿದ್ದು ಮುಂದಿನ ಪದಾದಿಲ್ಲಿ “ಅ” ಎನ್ನುವ ಸ್ವರ ಬಂದರೆ ಇಕಾರಲೋಪ ಆಗೋಲ್ಲ. ಯಕಾರಾಗಮವಾಗುತ್ತೆ. ಅಕಾರ ಒಂದೇ ಅಲ್ಲ ಇನ್ನಾವ ಇತರ ಸ್ವರ ಮುಂದೆ ಬಂದರೂ ಅಷ್ಟೆ. ಹೀಗೇ ಆಗೋದು.
ಓಡಿ+ಉಳಿದರ್= ಓಡಿಯುಳಿದರ್. ಇದು ಓಡುಳಿದರ್ ಆಗಲ್ಲ
ಇದಕ್ಕೆ ಒಂದೇ ಸಂದರ್ಭ ಅಪವಾದ. ಪೂರ್ವಪದ ಜೆರಂಡ್ ಕ್ರಿಯಾಪದರೂಪವಾಗಿದ್ದು , ಅದರ ಕೊನೆಯ ಇಕಾರದ ಮುಂದೆ ಇರ್ಪ, ಇಲ್ಲ ಅನ್ನುವ ಕೆಲವೇ ಇಕಾರಾದಿ ಪದಗಳು ಬಂದಾಗ, ಪೂರ್ವ ಪದದ ಕೊನೆಯ ಇಕಾರವನ್ನು ಐಚ್ಛಿಕವಾಗಿ ಲೋಪ ಮಾಡಬಹುದು.
ಅಯ್ಯೊ! ತಪ್ಪಾಯಿತು. ದಯವಿಟ್ಟು ಕ್ಷಮಿಸಿ. ಅಲ್ಲಿ+ಅಲ್ಲಿ=ಅಲ್ಲಲ್ಲಿ, ಅಲ್ಲಿ+ಇಲ್ಲಿ=ಅಲ್ಲಿಲ್ಲಿ, ಇವುಗಳಂತೆ ನಾನು ಬಳಸಿದ್ದೇನಾಗಿ, ಅವರ ವಕಾಲತ್ತಿಗೆ ಹೋದೆ. ಮತ್ತೊಮ್ಮೆ ಕ್ಷಮೆ ಕೋರುವೆ.
– “ಅಮ್ಮನ ಕಣ್ಣು ತಪ್ಪಿಸಿ ಅದ್ಯಾವ ಮಾಯದಲ್ಲಿ ಮಣ್ಣಿನಲ್ಲಿ ಆಡುತ್ತಾ, ದೊಡ್ಡವನಾದ “ಎನ್ನುವ ಅರ್ಥದಲ್ಲಿ ಬರೆದದ್ದು.
– ” ತಾಯಿಯ ಕಣ್ಣು” – “ತಾಯಿಯ ಮಣ್ಣು” ಮೊದಲು ಬಂದದ್ದು, ನಂತರ ತಾಯಿಯ ನೆಲವಾದದ್ದು. “ತಾಯ್ನೆಲವನ್ನು” ಸರಿಹೊಂದಿದೆ.
– “ಮಣ್ಣಲ್ಲಾಡಿದ ಬೆಳೆದ ಮಗನೇ ಕೋವಿಹಿಡಿದು ಯೋಧನಾದ”- ಅದಕ್ಕೆ “ಪಿಡಿದವ” ಸರಿಯಾಗುವುದೇ?
– “ಧರಿಸೆ” ತುಂಬಾ ಸೂಕ್ತವಾಗಿದೆ
ಧನ್ಯವಾದಗಳು, ಶ್ರೀಕಾಂತ್ ಸರ್/ಪ್ರಸಾದು ಸರ್
ಉಷಾರವರೆ
ನೀವು ಯಾವ ಅರ್ಥದಲ್ಲಿ ಹೇಳಿದ್ಫಿರಿ ಅನ್ನೋದು ಸ್ಪಷ್ಟವಾಗಿದೆ. ಮಾಡಿಸಿಯಾವ ಎಂದು ಹಾಕಿರಿ, ಸರಿಹೋಗುತ್ತೆ.
ಪಿಡಿದುರೆ, ಹಿಡಿದುರೆ ಅಂತೆ ಹಾಕಿ. ಉರೆ ಭಾವವನ್ನು ತೀವ್ರಗೊಳಿಸುತ್ತೆ.
ಭಾವತೀವ್ರದಿ- ಭಾವುಕತೆಯಿಂ ಎನ್ನ ಬಹುದೆ? ನಿಮಗೆ ಸೂಕ್ತ ಅನ್ನಿಸಿದರೆ ಬದಲಿಸಿಕೊಳ್ಳಿ.
ನನ್ನನ್ನು ತಿದ್ದಿ ಬೆಳೆಸುತ್ತಿರುವ ನಿಮ್ಮೆಲ್ಲರಿಗೂ ನಾನು ಋಣಿ. ಈ ಘಟ್ಟದಲ್ಲಿ ನನಗೆ ಇದರ ಅವಶ್ಯಕತೆಯಿದೆ. ಮುಂದೆಯೂ ಇದೇ ರೀತಿ ತಿದ್ದಿ ನಡೆಸುವಿರೆಂಬ ಆಶಯದೊಂದಿಗೆ, ಪೂರ್ಣ ತಿದ್ದಿದ ಪದ್ಯ.
ಜೀವ ತಿನ್ನುವ ತುಂಟ ಪೋರನು
ಕಾವ ತಾಯಿಯ ಕಣ್ಣ ತಪ್ಪಿಸಿ
ಯಾವ ಮಾಯದೆ ಮಣ್ಣಲಾಡುತೆ ಬೆಳೆದ ಮಗನಾಗೆ |
ಕೋವಿ ಪಿಡಿದವ ಯೋಧನಾಗಿರೆ
ಕಾವ ತಾಯ್ನೆಲವನ್ನು ಚುಂಬಿಸಿ
ಭಾವುಕತೆಯಲಿ ಧರಿಸೆ ಮಣ್ಣಿನ ಮಳೆಯು ಮುದವಾಯ್ತು ॥
ಜೀವ ತಿನ್ನುವ – ಅರಿಸಮಾಸವಲ್ಲವೇ
“ಜೀವ ತಿನ್ನುವ”ವರು(?) ಅರಿ “ಸಮಾನ”ರು ಎಂದು ಗೊತ್ತು . (ಸಮಾಸದ ಬಗ್ಗೆ ತಿಳಿದಿಲ್ಲ) ಹಿಂಡುವ/ ಕಾಡುವ ಸರಿಯಾದೀತೆ? ಅಥವ “ಜೀವ”ವನ್ನೇ ಬದಲಿಸಬೇಕೋ?
ಸೋಮ – ಇಲ್ಲಿ ಸಮಾಸವೇ ಆಗಿಲ್ಲವಲ್ಲ. ಆದ್ದರಿಂದ ಅರಿಸಮಾಸವಾಗಲಾರದು.
ಜೀವತಿಂಬನ್ ಎಂದರೆ ಅರಿಸಮಾಸವಾದೀತು.
ರಾಂ,
ಸೋಮರ ಅನುಮಾನ ಸರಿಯಿರಬಹುದು. ಉಷಾರವರು ’ಜೀವ ತಿನ್ನುವ’ ಎಂದು ಟಂಕಿಸಿದ್ದರೂ ಅದು ಒಂದೇ ಪದ ’ಜೀವತಿನ್ನುವ’. ಈಗ ಹೇಳಿ, ಅದು ಅರಿಸಮಾಸವೋ ಅಲ್ಲವೋ ಎಂದು.
ಬಿಡಿಸಿಬರೆದಿರುವುದೇ ಸರಿಯೆಂದಾದರೆ, ಆಗ ಯಾವುದೋ ’ಜೀವ’ವು ಯಾವುದೋ ’ತುಂಟ ಪೋರ’ನನ್ನು ನಿಯತವಾಗಿ ’ತಿನ್ನುತ್ತದೆ’ ಎಂದು ಅರ್ಥೈಸಬೇಕಾಗುತ್ತದೆ 😉
ಪದಗಳನ್ನು ಬಿಡಿಸಿ ಬರೆಯುವುದು ಅರಿಸಮಾಸದ ಪರಿಹಾರಕ್ಕೆ ಸೂಕ್ತ ಉಪಾಯವಲ್ಲ. ಸಂಧಿ ಮಾಡಬೇಕಾದಾಗ ಮಾಡಲೇ ಬೇಕು. ಬಿಡಿಸಿ ಬರೆಯುವು ಸಂದರ್ಭಗಳಿದ್ದರೆ ಸರಿ, ಬಿಡಿಸಿಯೇ ಬರೆಯ ಬೇಕು. ಇದು ಒತ್ತಟ್ಟಿಗಿರಲಿ.
ಸಂಸ್ಕೃತ ನಾಮಪದಗಳಿಗೆ ಕನ್ನಡ ಕ್ರಿಯಾಪದಗಳು ಸೇರುವಾಗ ಅರಿಸಮಾಸದ ಸೋಂಕು ತಟ್ಟುವುದಿಲ್ಲ ಅಂತ ನನ್ನ ತಿಳಿವಳಿಕೆ. ಹಾಗಾಗಿ ಜೀವತಿನ್ನುವ ತಪ್ಪಾಗಲಾರದು. ಇದೇ ರೀತಯ ಕೆಲವು ಉದಾಹರಣೆಗಳು- ಯುದ್ಧಮಾಡುವ, ನಯನಸೆಳೆಯುವ, ಪ್ರೀತಿತೋರುತ
ಹೌದು, ನಿಮ್ಮ ಅಭಿಪ್ರಾಯ ಯುಕ್ತ. ಇಂಥ ಸಂದರ್ಭಗಳನ್ನು ಕ್ರಿಯಾಸಮಾಸ ಎಂದೂ ಕೆಲವರು ಹೇಳುವರು. ವಿಭಕ್ತಿಲೋಪವಾಗುವ ಕಾರಣ ಇಲ್ಲಿ ಸಮಾಸಚ್ಛಾಯೆ ತೋರುತ್ತದೆ. ಯುದ್ಧವನ್ನು ಮಾಡುವರು > ಯುದ್ಧ ಮಾಡುವರು ಇತ್ಯಾದಿ ಆದರೆ ಇಂಥವನ್ನು ಅಭಿಜಾತಕವಿತೆಯಲ್ಲಿ ಅಂಕೆಮೀರಿ ಬಳಸಿದರೆ ಹಿತವಾಗದು. ಏನಿದ್ದರೂ ಆಧುನಿಕಗದ್ಯಕ್ಕೆ ಹಾಗೂ ಕ್ವಾಚಿತ್ಕವಾಗಿ ನಡುಗನ್ನಡಪದ್ಯಗಳಿಗೆ ಇದು ಸಂದೀತು. ಎಣೆಮೀರಿದ ವಿಭಕ್ತಿಲೋಪಗಳಿಂದ ಹಳಗನ್ನಡದ ಹದ ಹೊಲಬುಗೆಟ್ಟೀತು. ಎಲ್ಲರಿಗೂ ನನ್ನ ನಿವೇದನೆ ಇಷ್ಟೇ : ಸ್ವಲ್ಪ ಹೆಚ್ಚು ಕಷ್ಟಪಟ್ಟು ಮತ್ತೂ ನುಡಿಬೆಡಗನ್ನೂ ಸೊಲ್ಸೊಬಗನ್ನೂ ಸಾಧಿಸಿಕೊಳ್ಳೋಣ ಎಂದು.
ಪ್ರಸಾದು ಅವರು ಈಚೆಗೆ ತಮ್ಮ ಪದ್ಯಗಳಲ್ಲಿ ಮಿತಿಮೀರಿ ಶಿಥಿಲದ್ವಿತ್ವದ ಬಳಕೆ ಮಾಡುತ್ತಿದ್ದಾರೆ. ಇನ್ನೂ ಒಬ್ಬಿಬ್ಬರು ಈ ಹಾದಿಗೆ ಹೆಜ್ಜೆ ಹಾಕಿದಂತಿದೆ:-)
ತಾವು ಹಿಂದೆ ಹೇಳಿದ್ದಂತೆ ಇದು ಒಂದು ಮಿತದಲ್ಲಿರಬೇಕು. ಇಲ್ಲವಾದರೆ ಶಿಥಿಲದ್ವಿತ್ವವು ಶಿಥಿಲಪದ್ಯತ್ವದಲ್ಲಿ ಪರಿಣಮಿಸುವುದು ನಿಸ್ಸಂಶಯ.
ಗಣೇಶ್ ಸರ್,
ಕ್ರಿಯಾಸಮಾಸ ಮತ್ತು ಇಲ್ಲಿ ವಿಭಕ್ತಿಲೋಪದ ಹದವಾದ ಬಳಕೆಗಳ ಬಗ್ಗೆ ಮಾಹಿತಿಗೆ ಧನ್ಯವಾದಗಳು. ಹೆಚ್ಚು ಸ್ಪಷ್ಟತೆ ಸಿಕ್ಕಿತು
ಯಾಕೆ ಸೋಮ ಬರಿ ಗಣೇಶರಿಗೆ ಥ್ಯಾಂಕ್ಸ್. ನನಗಿಲ್ಲವೆ! 🙂
ಮತ್ತೆ ನನಗೆ? 😉
ರಾಮಚಂದ್ರ ನಿಮಗ್ಯಾಕಪ್ಪ? ತಪ್ಪು ಮಾಹಿತಿ ಕೊಟ್ಟಿದ್ದಕ್ಕೆ? 😉
ಸೋಮ ಹಂಚುತ್ತಿದ್ದಾರೇನೋ ಎಂದಿದ್ದೆ 🙂 ಅದಾಗಿ ನನ್ನ ಮಾಹಿತಿ ತಪ್ಪೇನೂ ಅಲ್ಲವಲ್ಲ. ನಾನು ಸಮಾಸ ಆಗಿಲ್ಲ ಎಂದೆ. ಗಣೇಶರು ಸಮಾಸಚ್ಛಾಯೆ ಎಂದರು. ಇರಲಿ ತಪ್ಪಿದ್ದರೂ, ಒಂದು ವಿಷಯದ ತಿಳುವಳಿಕೆಗೆ ಹೇತುವಾಯ್ತಲ್ಲ 🙂
ಯಾವ ಮಾಯದೆ ತುಂಟ ಪೋರನು
ಕಾವ ತಾಯಿಯ ಕಣ್ಣ ತಪ್ಪಿಸಿ
ಹಾವಭಾವದೆ ಮಣ್ಣಲಾಡುತೆ ಬೆಳೆದ ಮಗನಾಗೆ |
ಕೋವಿ ಪಿಡಿದವ ಯೋಧನಾಗಿರೆ
ಕಾವ ತಾಯ್ನೆಲವನ್ನು ಚುಂಬಿಸಿ
ಭಾವುಕತೆಯಲಿ ಧರಿಸೆ ಮಣ್ಣಿನ ಮಳೆಯು ಮುದವಾಯ್ತು ॥
ಆವ ಮಾಯದೆ ತುಂಟ ಪೋರನು
[ ಮಹೇಶ ಭಟ್ಟರ ಪದ್ಯದ ಜಾಡಿನಲ್ಲಿ … ]
ಹೆಬ್ಬುಲಿಯು ಹವಣಿಸುತ ಹೊಂಚಿರೆ
ಹಬ್ಬಿ ಬರೆ ಕಾಳ್ಗಿಚ್ಚು ಪಿಂಗಡೆ –
ಯುಬ್ಬಿದೊಡಲಿನ ಹುಲ್ಲೆ ಹೊಳೆಯೆಡೆಗೋಡುತುಬ್ಬಸದಿಂ
ಕೊಬ್ಬನಿಚ್ಚಿಪ ಬೇಡನೊತ್ತಡ
ವುಬ್ಬರಿಸೆ ತಬ್ಬಲಿಯ ದುಗುಡವ
ಗಬ್ಬವಿಳಿಸುತ ಮಿಡಿದ ಕಣ್ಣೀರ್ ಮಳೆಯು ಮುದವಾಯ್ತು
[ಅನೇಕ ಆಪತ್ತುಗಳಿಂದ ಸುತ್ತುವರಿದ ಬೆಸಲೆ-ಹುಲ್ಲೆಯ ಮನಸಿನೊತ್ತಡ, ಪ್ರಸವಿಸುತ್ತ ಮಿಡಿದ ಕಣ್ಣೀರಿನಿಂದ ಕೊಂಚ ಹಗುರಾಯ್ತು]
[ಈ ಕಥೆಯಲ್ಲಿ ಬೇಡನ ಬಾಣ ಹುಲಿಗೆ ಹೊಡೆದು, ಕಾಳ್ಗಿಚ್ಚಿಗೆ ಹೆದರಿ ಬೇಡ ಓಡಿ ಹೋಗಿ ಮುಂದೆ ಸುಖಾಂತ್ಯವಾಗುತ್ತದೆ – ಅವೆಲ್ಲ ಇಲ್ಲಿ ಬರೆದಿಲ್ಲ ಅಷ್ಟೆ :-)]
ಬೆಸಲೆಗೆ ಮೂರು ಆಪತ್ತನ್ನು ತಂದು, ಗಬ್ಬವಿಳಿಸಿ ಆನಂದದ ಅಶ್ರು ತಂದ ಪದ್ಯ ಚೆನ್ನಾಗಿದೆ ರಾಮ್ (ಅಂದರೆ ತಾಯಿ, ಮಗು ಚೆನ್ನಾಗಿದ್ದಾರೆ ಎಂಬ ಧ್ವನಿಯಲ್ಲವೆ) 🙂
ದುಗುಡದ ನಿವಾರಣೆಯ ಪರಿಗೆ ಪದ್ಯದಲ್ಲಿ ಅವಕಾಶವಾಗಿಲ್ಲದಿದ್ದರೆ ಏನಂತೆ ಇಷ್ಟೆಲ್ಲವನ್ನು ಒಂದು ಪದ್ಯದಲ್ಲಿ ತರಬೇಕೆಂಬ ಆಶಯವನ್ನು ಮೆಚ್ಚಲೇಬೇಕು!
ವಿರಹ ತಾಪದೆ ಮೋಡ ಕರಗುತೆ
ಸುರಿಸೆ ತನ್ನದೆಯುಳಿದ ಚೂರನು
ಬೆರೆಯೆ ಸಾಗರದೊಡನೆ ಸರಸದೆ ಮನವು ಹಗುರಾಗೆ |
ತೆರೆದ ಚಿಪ್ಪನು ಸೇರಲೆನ್ನುತೆ
ಧರೆಯ ಮುತ್ತಿಹ ಮುತ್ತ ಹನಿಗಳು
ಸರಸರನೆ ಸುರಿದಾಲಿಕಲ್ಲಿನ ಮಳೆಯು ಮುದವಾಯ್ತು ||
ಉಷಾ ಅವರೆ, ಪದ್ಯ ಬಹಳಚೆನ್ನಾಗಿದೆ
ಉಳಿದ ತನ್ನ ಚೂರನು – ವಿನೂತನವಾದ ಕಲ್ಪನೆ.
ಉತ್ತರಗೋಗ್ರಹಣದ ಸ೦ದರ್ಭ. ಅರ್ಜುನನು ಬಾಣಗಳಿ೦ದ ಪಾದಾಭಿವ೦ದನೆ ಮಾಡಿದುದು ಭೀಷ್ಮ ದ್ರೋಣಾದಿಗಳಿಗೆ ಹಿತವಾಯ್ತು ಎ೦ಬ ಕಲ್ಪನೆ.
ಬರೆ ಪಿತಾ ಮ ಹನೆದುರು ಬೃಹನ್ನ ಳೆ
ಭರದಲಾ ಯು ಧಪಾಣಿಗಳ ಚ ಮು
ನೆರೆದು ಮ ದ ದಿ೦ದುಬ್ಬುತಲಿ ಕಾದಾಟಕನು ವಾಯ್ತು |
ಮರೆಯದೆಲೆ ಗೌರವವ, ಮೊದಲಿಗೆ,
ಗುರುಗಳನು ವ೦ದಿಸಲು ಪಾರ್ಥನು
ಚರಣತಲದಲಿ ಬಿಟ್ಟ ಶರಗಳ ಮಳೆಯು ಮುದವಾಯ್ತು ||
ಮೊದಲ ಸಾಲಿನಲ್ಲಿನ ಶಿಥಿಲದ್ವಿತ್ವಪ್ರಯೋಗ ಸರಿಯೇ ತಿಳಿಸಿ.
ರಾಜಗೋಪಾಲರೆ –
ಮೊದಲ ಸಾಲಿನಲ್ಲು ಶಿಥಿಲ ದ್ವಿತ್ವವಿಲ್ಲ. ಛಂದಸ್ಸು ತಪ್ಪಿದೆ. 🙂
ಅ. ‘ಬೃ’ ಎಂಬುದು ಲಘು. ‘ಬೃಹನ್ನಳೆ’ ಎಂಬ ಪದದಲ್ಲಿ ಲಗಂ ಬರುತ್ತದೆ – ಎರಡನೆಯ ಅಕ್ಷರ (‘ಹನ್’) ಗುರುವಾಗುವುದರಿಂದ.
ಬ. ಸಾಲಿನಲ್ಲಿ ಒಂದು ಮಾತ್ರೆ ಹೆಚ್ಚಾಗುತ್ತದೆ.
ಪದ್ಯವನ್ನು ಸವರಿಸಿದ್ದೇನೆ.
ಬರಲು ಸಮರಕೆ ಕಲಿ ಬೃಹನ್ನಳೆ
ಭರದಿನಾಯುಧಪಾಣಿಗಳ ಚಮು
ನೆರೆದು ಮದದಿಂದುಬ್ಬುತಲಿ ಕಾದಾಟಕನುವಾಯ್ತು |
ಮರೆಯದೆಲೆ ಗೌರವವ, ಮೊದಲಿಗೆ
ಗುರುಗಳನು ವಂದಿಸಲು ಪಾರ್ಥನು
ಚರಣತಲದಲಿ ಬಿಟ್ಟ ಶರಗಳ ಮಳೆಯು ಮುದವಾಯ್ತು ||
ಮಳೆಯು ಮುದವಾಯ್ತು ಎಂಬ ಅಕ್ಷರಗಳನ್ನು ಮೊದಲ ಮೂರು ಪಾದಗಳಲ್ಲಿ ಹುದುಗಿಸುವ ಚೇಷ್ಟೆ ಮಾಡಿದ್ದೇನೆ. ( ಸಮರ , ಹನ್ನಳೆ, ನಾಯುಧ, ಚಮು, ಮದದಿ, ನುವಾಯ್ತು.)
ಪಲ್ಲವ|| ಜಂಟಿಸ್ವಾರಸ್ಯಮನು ಬಗೆಯಿಂ
ದೀಂಟಿಸಿರ್ಪುದು ಚೇಷ್ಟೆಯೇನೈ?
ತುಂಟ ನೀನೆನಲಕ್ಕುಮೇಂ? ನಿಜ
ದೆಂಟೆದೆಯ ಭಂಟನಪೆ ಕೇಳ್|
ರಾಂ,
ಬಹುಶಃ ಅವರು ಕೇಳಿದ್ದು ‘ಬೃಹನಳೆ’ ಎಂದು ತೇಲಿಸಿ ಹೇಳಬಹುದೆ ಎಂದು. ಕೆಲವು ಅವರ್ಗೀಯವ್ಯಂಜನಗಳನ್ನು ಬಳಸಿ ಶಿ.ದ್ವಿ. ಮಾಡಿದ್ದೇನೆ, ವರ್ಗೀಯದವುಗಳಲ್ಲಿ ಮಾಡಿಲ್ಲ. ನಿಯಮ ಏನು ಎಂದು ತಿಳಿದುಕೊಳ್ಳಬೇಕು.
ಪ್ರಸಾದ್ ರವರ ಅನುಮಾನ ಸರಿಯಾಗಿದೆ. ನಾನೂ ಸಹ ಬೃಹನ್ನಳೆ ಯನ್ನು ಬೃಹನಳೆ ಎನ್ನಬಹುದೇ ಎಂದು ಕೇಳಿದ್ದೆ.
ಮೆಚ್ಚುಗೆಗೆ ಧನ್ಯವಾದಗಳು.
Note: I appreciate all the serious attempts before but I cannot match any of those. So I submit one attempt at humour in this computer age. Dedicated to all the software guys in padyapaana. Hope nobody thinks I am diluting the ‘seriosity’ of this page 🙂
Title : Transliteration tragiComedy
ಬರಹ ಡೈರೆಕ್ಟ್ ‘ಆನ್’ಉ ಮಾಡದೆ
ಸರಸರನೆ ‘ಮಳೆ’ಯೆಂದು ಭಾವಿಸಿ
ಬರೆದು ಗೂಗಲ್ ಸರ್ಚು ಬಾಕ್ಸಲಿ ಎನ್ಟರೊತ್ತಿದನು.
ಭರದೆ ಗೂಗಲು ತೋರೆ ‘ಗೇ’ ಸೈಟ್
ಗರವು ಬಡಿದನ್ತಾಫು ಮಾಡಿದ.
ನೆರೆದ ಫ್ರೆಂಡ್ಸಿಗೆ ಜಾಲಿ ನೀಡಿದ ‘ಮಳೆ’ಯು ಮುದವಾಯ್ತು.
೩+೪ ಗಣಗಳಲ್ಲಿ ಯಾವುದಾದರೂ ಅಕ್ಷರ ಗಣ ಬರಬಾರದು ಎನ್ನುವ ನಿಯಮ ಇದೆಯೆ? ಇರಬೇಕು. ನಾನು ಅದನ್ನು ಗಮನಿಸಿಲ್ಲ. ನಾನು ಓದುವಾಗ ಏನೋ ಸರಿಯಾಗಿಲ್ಲ ಅಂತ ಅನ್ನಿಸುತ್ತಿದೆ. ಗೊತ್ತಿದ್ದವರು ತಿಳಿಸಬೇಕು.
haha! clap clap! Apart from spelling mistakes, it looks smashing. The rule is no gaNa should begin with a “lagam” hich a laghu followed by a guru syllable. This is unnatural to kannaDa and hence this rule. Your padya does not have any lagam prayOgas so you are good
well done, keep it up.
ಶ್ರೀಕಾಂತ್ ಅವರೇ! ಸಂಸ್ಕೃತದಲ್ಲಿ ಸುಧೀರನ ಸಾರಸ್ವತಸಿದ್ಧಿ ನಿಜಕ್ಕೂ ಗುಣಾತ್ಮಕವಾಗಿ ಹಿರಿದಾದ್ದದ್ದು. ಆತನ ಕಲ್ಪನೆಗಳಲ್ಲಿ ಎಂದೂ ನವೀನತೆ, ಸ್ವೋಪಜ್ಞತೆ ಮತ್ತು ಹೃದಯಂಗಮಸ್ವಾರಸ್ಯಗಳು ತುಂಬಿರುತ್ತವೆ. ಆಗೀಗ ಬರೆಯುವ ಕನ್ನಡದ ಪದ್ಯಗಳಲ್ಲಿಯೂ ಈ ಗುಣಗಳಿಗೆ ಕೊರತೆಯಿಲ್ಲ. ಆದರೆ ಈ ಮಹರಾಯನ ಪದ್ಯರಚನಾವಧುವು ಸಗರನ ದ್ವಿತೀಯಪತ್ನಿ ಸುಮತಿಯ
ಹಾಗಲ್ಲ. ಕನಿಷ್ಠಪಕ್ಷ ಗಾಂಧಾರಿಯ ಹಾಗಾದರೂ ಆದರೆ ಮೇಲು:-)
@ಸುಧೀರ್,
ಪ್ರತ್ಯಗ್ರಸುಂದರಸುಧಾ-
ವತ್ಯಲ್ತೆ ಭವತ್ಕವಿತ್ವವಿತ್ವವಿನೋದಂ |
ಸ್ತುತ್ಯಹಸತ್ಕಲ್ಪನದಾಂ-
ಪತ್ಯದಪತ್ಯಂ ನಿತಾಂತಮೀ ಭಾಮಿನಿಯೌ ||
ಹಾಗೆ! ತಮಾಷಿ ಮಾಡೋಕೆ ಸುಧೀರ್ ಕೇಳಿದ್ದು ನನಗೆ ತಿಳಿಯಲಿಲ್ಲ. ಅದಕ್ಕೆ ಲಗಂ ಬಗ್ಗೆ ಅವರಿಗೆ ಬಿಡಿಸಿ ಹೇಳಿದೆ.
ಗಣೇಶರೆ-
ಚಂದಂ ಪೊಂಗುವ ತಮ್ಮಯ
ಕಂದಂ ನಡೆವಾಗಲೆಡರೆ ಕಂಡೆಂ ಕುಂದಂ
ಛಂದಂ ಕೂರ್ಚಲ್ಕೆ ಸ್ವ-
ಚ್ಛಂದಂ ತಗದಲ್ತೆ ಸಂಧಿಸಲ್ ಸಕ್ಕದದೊಲ್.
No, Mr. Murthy. A good answer for an honest question. Much obliged.
ಗಣೇಶರೆ, ನಮಸ್ತೇ.
ಕಾಶೀ-ಗಮನ-ಮಾತ್ರೆಣ ನಾನ್ನಂಭಟ್ಟಾಯತೇ ದ್ವಿಜಃ |
ಜಾನಕೀಹರಣಂ ಕುರ್ಯಾಂ ಗಾಂಧಾರೀವ್ರತಚಾರಣಃ ||
🙂
Your support is priceless. Thanks.
ಆಹಾ! ಶ್ರೀಕಾಂತ ಸಖೇ!
ಮೋಹಂಗೊಂಡಿರ್ದ ಮನದೆ ಪೆತ್ತೀ ಕಂದಂ |
ರೂಹಂಗೆಟ್ಟನಲಾ! ಕವ-
ನೇಹಿತದೊಳ್ ಸಂಧಿಬಂಧಮರಿಯಾದುದಲಾ!!
(ಈ ಪದ್ಯದಲ್ಲಿ ಸ್ವಲ್ಪ ಶ್ಲೇಷವೂ ಇದೆ:-)
ತಾವು ನನ್ನ ಪ್ರಮಾದವನ್ನು ತಿಳಿಸಿದ್ದುದಕ್ಕಾಗಿ ತುಂಬ ಧನ್ಯವಾದ. ಇದನ್ನು ದಯಮಾಡಿ “ಸುಧಾವತ್ಯುಚಿತೆ” ಎಂದು ತಿದ್ದಿಕೊಳ್ಳಿರಿ.
ಸುಧೀರ್,
ನಿಮ್ಮ ಶ್ಲೋಕದ ಉತ್ತರಾರ್ಧವು ನನಗೆ ಸ್ಪಷ್ಟವಾಗಲಿಲ್ಲ. ದಯಮಾಡಿ ವಿವರಿಸಿರಿ.
@Ganesh, Tradition has it that Kumaradasa, the author of JanakiHarana was blind. Just as imitating one action of Annambhatta, viz.going to Kashi, one does not become a great vidwan, by imitating one action of Gandhari, I will not become a great poet 🙂
You asked me to imitate Gandhari but did not specify in which. I used the liberty to interpret it my way 🙂
ಸುಧೀರ್,
ಬಾಕ್ಸಲಿ ಎನ್ಟರೊತ್ತಿದೆ(typo)ನು – ಇದನ್ನು ’ಬಾಕ್ಸಲಿ ಯೆನ್ಟರೊತ್ತಿದೆನು’ ಎಂದು ಓದಿಕೊಳ್ಳಬೇಕು. ’ಬಾಕ್ಸಿನೊಳೆಂಟರೊತ್ತಿದೆನು’ (or ಬಾಕ್ಸಿನೊಳ್ ’ಎಂಟರ್’ ಒತ್ತಿದೆನು) ಎಂದುಬಿಟ್ಟರೆ ಯಾವ ತಕರಾರೂ ಇರುವುದಿಲ್ಲ.
ಮಾಡಿದ ~ ಮಾಡಿದೆ – typo
ನಿಮ್ಮ ಸಲಹೆ ಸಾಧುವಾಗಿದೆ. Thanks.
ಜಾಲಿ ನೀಡುವುದೇನು ನಮಗಂ
ಖೇಲ ಗೇಗಳ ವಿಕೃತ ತೆರದಂ?
ಜಾಲಿಗೊಂಡಿರುವೊಂದಿಗರವರ್ ಸ್ತ್ರೀಯರಲ್ಲವೆ@ ಪೇಳ್|
@ ನಿಮಗೆ ಗರಬಡಿಯಿತು, ಅವರಿಗೆ ಜಾಲಿ ಸಿಕ್ಕಿತು ಎಂದರೆ, ನಿಮಗೂ ಅವರಿಗೂ ಇಷ್ಟುಮಾತ್ರದ ವ್ಯತ್ಯಾಸವಿರಲೇಬೇಕು 😉
——-
What sort of a browser are you using? Netscape Navigator?
ತೆರೆದು ’ಕ್ರೋಮ’#ನ್ನಾನುಮಿಂದುಂ
’ಬರಹ’ ಮುಚ್ಚುತೆ ’ಮಳೆ’ಯ ಟಂಕಿಸೆ
ಪುರುಷಸಕೃತರೆ* ತೋರೆ, ಕಿತ್ಥೋದಂಥ ಬ್ರೌಸರಿನೇಂ?
# Google chrome
* ಸಕೃತ as opposite of ವಿಕೃತ. When I gave a google search for ‘maLe’, the results were on ‘male’s and not ‘gay’s.
ಜಾಲಿ ಕೊಟ್ಟಿದ್ದು ಫಜೀತಿ – ಸೈಟಿನ ಫೋಟೋಗಳಲ್ಲ 🙂
ಇದು ನಿಜವಾಗಿ ನಡೆದದ್ದು. ‘ಮಣ್ಣಿನ ದೋಣಿ’ ಚಿತ್ರದ ‘ಮಳೆ ಮಳೆ ಮಳೆ ಮಳೆ ಒಲವಿನಾ ಸುರಿಮಳೆ’ ಹಾಡನ್ನು ಹುಡುಕಲು ‘ಮಳೆ ಮಳೆ’ ಎಂದು ಟಂಕಿಸಿದಾಗ ಎರಡು ‘ಮಳೆ’ಗಳಿದ್ದ ಕಾರಣ ಗೂಗಲು ‘ಅಂತಹ’ ಸೈಟುಗಳನ್ನು ಪಟ್ಟಿ ಮಾಡಿತ್ತು.
That explains. You gave search for 2 males: maLe maLe!
ಹೊದ್ದು ಮಲಗಿರಲಮ್ಮನೊಂದಿಗೆ
ಮುದ್ದು ಕಂದನು ಕದ್ದು ತಾಮೊದ
ಲೆದ್ದು ಮೆಲ್ಲನೆ ನೀರ ಚಿಮುಕಿಸುತವಳನೆಬ್ಬಿಸುವೋಲ್|
ನಿದ್ದೆಯೊಳಗಿರುವಿಳೆಯನೆಬ್ಬಿಸೆ
ಖುದ್ದು ರವಿತಾನೆದ್ದು ಸುರಿಯಲು
ಸದ್ದು ಮಾಡದೆ ಬಿದ್ದ “ಇಬ್ಬನಿ” ಮಳೆಯು ಮುದವಾಯ್ತು||
very nice!
very refreshing and well thought out imagery. Congrats and thanks.
ಉಷಾರವರೆ. ಪೂರ್ವಾರ್ಧ ಸೊಗಸಾಗಿದೆ. ಹಾಗೇ ಇಬ್ಬನಿಯ ಮಳೆಯೂ ಚೆನ್ನ. ಆದರೆ ಮಧ್ಯದಲ್ಲಿ ರವಿ ಬಂದಿರೋದು ಅಸಮಂಜಸವಾಗಿ ನನಗೆ ಕಾಣಿಸ್ತಿದೆ. ಇದಕ್ಕೆರಡು ಕಾರಣಗಳು.
ತಾಯಿಮಗುವ ಹೋಲಿಕೆಯನ್ನು ಕೊಟ್ಟಿದೀರಿ. ರವಿ ಹೇಗೆ ಭುವಿಗೆ ಮಗುವಾಗಲು ಸಾಧ್ಯ? ಇದು ಸತ್ಯವೂ ಅಲ್ಲ. ಪ್ರಸ್ಸಿದ್ಧ ಕವಿಸಮಯವೂ ಅಲ್ಲ.
ಎರಡನೆಯ ಕಾರಣ- ರವಿ ಬಂದು ಇಬ್ಬನಿಯನ್ನು ಹೋಗಿಸ್ತಾನೆ ಅಲ್ವೆ? ಅವನು ಅದನ್ನು ತರುವುದಿಲ್ಲವಲ್ಲ. ಇದಾದರು ಪರವಾಗಿಲ್ಲ- ಕವಿಕಲ್ಪನೆ ಅಂದುಕೋಬಹುದು.
ಸೊಗಸಾದ ಪದ್ಯ . ರವಿಯ ಬದಲು ಅರುಣ (dawn ) ಬಂದರೆ ರಿಯಲಿಸ್ಟಿಕ್ ಆಗುತ್ತೆ
*ಖುದ್ದರುಣತಾನೆದ್ದು ಸುರಿಯಲು
ಈಗ ಸೊಗಸಾಯಿತಲ್ಲವೇ?! ಉಷಃಕಾಲದ ಕಲ್ಪನೆ
ಎಲ್ಲರಿಗೂ ಶುಭೋದಯ
ಬಹಳ ಚೆನ್ನಾಗಿದೆ . ಮೂಲದಲ್ಲೇ ಸರಿಪಡಿಸಿದರೆ ಇನ್ನೂ ಚೆನ್ನ
ಶ್ರೀಕಾಂತ್ ಸರ್,
ಸ್ತ್ರೀಯಾಗಿ ನನ್ನನ್ನು ತಾಯಿಯಂತೆ/ಭೂಮಿತಾಯಿಯಂತೆ ಕಲ್ಪಿಸಿಕೊಂಡದ್ದು.
ಒಬ್ಬ ತಾಯಿಯಾಗಿ ನಾನು “ಸೂರ್ಯ”ನನ್ನು ಮಗನಂತೆಯೇ ಮುದ್ದಿಸುವುದು !
(ಸೂರ್ಯನನ್ನೇ “ಅಮ್ಮನಂತೆ” ಕಂಡದ್ದೂ ಇದೆ !)
ಪಾದಪೂರ್ತಿಸಮಸ್ಯೆಯಿತ್ತಿರ
ಲಾದಿಯೊಳು ನೂರರೊಳಗಿದ್ದಿತ
ದೇದುಸುರಿನಿಂ ರಚಿಸಿದಂತಹವೆಂತೊ ಪದ್ಯಗಳು|
ಪಾದದರ್ಧಮನೀಯಲೀಗಳ್
ಮೋದದಿನ್ನೂರಾರು ಹರಿಯಲು
ಹೈದರೆನಿತನು ಹೊಸೆವರೋ/ ಪದಮೊಂದ ಮಾತ್ರ ಕುಡಲ್|| (/ ಕೊಡಲಕ್ಕರವ ಮಾತ್ರಂ)
ಪದ್ಯಪೂರಣಕೆಂದು ರಚಿಸಿದ
ಪದ್ಯಗಳನೆಲ್ಲವನು ಜೋಡಿಸೆ
ಪದ್ಯಕಾವ್ಯವೆ ಮೂಡುವುದು ನಿಸ್ಸಂಶಯವದಲ್ತೆ |
ಹೃದ್ಯಮಾಗಿಹುದರ್ಥಗರ್ಭಿತ,
ಮದ್ಯದೊಲು ಮತ್ತೇರಿಪಂತಿಹ
ಪದ್ಯಪುಂಜವ ನೀಡಿರುವ ಕವಿ ಮಿತ್ರರಿಗೆ ನಮನ ||
ಪದ್ಯಪೂರಣದಲ್ಲಿ ನೀಡಿದ
ಪದ್ಯಗಳು ನಿರವದ್ಯವಾದವು
ಪದ್ಯಗಳ ಮೇಲ್ ಪದ್ಯಗಳ ಸುರಿಮಳೆಯು ಮುದವಾಯ್ತು |
ಬೆಮರ ಕೊಳದಲಿ ಮಿಂದ ಮಕ್ಕಳ
ರಮಿಸೆ ಬಂದಿತು ಬಾನಿನಿಂದಲಿ
ಶಮನಗೊಳಿಸುತಲುರಿವ ತಾಪವ ತಂಪನೆರೆಯುತಲಿ
ಗಮನ ಬೇರೆಡೆ ಸೆಳೆದು ಹಿರಿಯರ
ಧುಮುಕಿ ನೀರೊಳು ದೋಣಿ ತೇಲಿಪ
ಸಮಯ ಸಂತಸದೀಯೆ ಬಂದಿಹ ಮಳೆಯು ಮುದವಾಯ್ತು
ಕಾಂಚನರವರೆ ಚೆನ್ನಾಗಿದೆ. ಕೊನೆಯ ಸಾಲು ಛಂದಸ್ಸೆಡವಿದೆ. “ಬಂದ”- ಇಲ್ಲಿ ಒಂದುಮಾತ್ರೆ ಕಡಮೆಯಾಗಿದೆ. ದೀರ್ಘ ಮಾಡಿದರಾಯಿತು
ಚೆನ್ನಾಗಿದೆ
ಧನ್ಯವಾದಗಳು. ಪದ್ಯವನ್ನು ಸರಿಪಡಿಸಿದ್ದೇನೆ.
(ಮಳೆ ಬಿಟ್ಟರು ಮರದ ಹನೀ ಬಿಡದೂ..
ಮಳೆ ಬಿಟ್ಟರು ಹೊಳೆಯ ದನೀ ಬಿಡದೂ… !!)
ಬಿಸಿಲ ತಾಪಕೆ ಮಳೆಯ ಕೋಪಕೆ
ಹಸಿರು ಕೊಡೆಗಳ ಕೋಟಿ ತೆರೆಯುತ
ಲುಸಿರ ಹರಸುತ ಬಸಿರ ಬಯಸುತಲಿಳೆಯು ಮುದವಾಗೆ |
ಫಸಲ ನಂತರ ಪಸರಿದಂದವು
ಹುಸಿಯದಲ್ಲವು, ಮಳೆಯುನಿಂತರು
ಹಸಿಯ ಮರದಡಿ ನಿಲದೆ ಸುರಿದಿಹ ಮಳೆಯು ಮುದವಾಯ್ತು ||
(ಮರಗಳು, ಮಳೆಯಲ್ಲಿ ಭೂಮಿ ಹಿಡಿದ “ಹಸಿರು ಕೊಡೆ”ಗಳಂತೆ ಕಂಡ ಕಲ್ಪನೆಯಲ್ಲಿ)
ಏರು ಬಿಸಿಲಿನಲೊಮ್ಮೆ ತಾನವ
ಸೇರೆ ತನ್ನೂರ ತೀರ, ಸರಸರ-
ನೇರಿ ಕೆರೆಯೇರಿಯನು ಸಾಗಿರೆ ನೀರ ಹನಿತಾಗೆ |
ಓರೆ ನೋಟದೆ ನೋಡಲಾಗವ
ನೀರೆ ತಾನೊಗೆಯುತಿರೆ ಬರಬರ
ಹಾರಿ ಸಿಡಿದಾ ನೀರು ತಾಗಲು ಮಳೆಯು ಮುದವಾಯ್ತು ||
(ಕೆರೆಯ ಏರಿಯ ಮೇಲೆ ನಡೆದ ……. ರ ಕಲ್ಪನೆಯಲ್ಲಿ) ……? ಗೆಸ್ ಮಾಡಿ !
(ಸ್ವಲ್ಪ ಕಾಲದ ನಂತರ ಪದ್ಯಪಾನಕ್ಕೆ ಬಂದದ್ದರಿಂದ ಹಳೆಯ ಪ್ರಶ್ನೆಗೆ ಉತ್ತರಿಸುತ್ತಿದ್ದೇನೆ 🙂
ಕುಳಿರುಗಾಳಿಯ ಮಾರ್ಗಶಿರದಲಿ
ಚಳಿಯ ತಡೆಯಲು ತೊಟ್ಟು ಟೊಪ್ಪಿಯಿ-
ರುಳಿನ ಮೂರನೆ ಜಾವಕೆನ್ನುತ ಕಾದು ಕುಳಿತಾಯ್ತು
ಇಳೆಯ ಹಾದಿಯ ಬಾಲಚಿಕ್ಕೆಯ
ಪಳೆಯುಳಿಕೆಗಳು ಹಾದುಹೋಗಿರೆ
ಹೊಳೆಯುತಾಗಸ ತುಂಬಿ ಲಿಯೊನಿಡ್ಸ್ ಮಳೆಯು ಮುದವಾಯ್ತು!
(ಲಿಯೊನಿಡ್ಸ್ ಎಂಬುದು ನವೆಂಬರ್ ೧೫-೧೬ರ ವೇಳೆಗೆ ಕಾಣಬರುವ ಒಂದು ಉಲ್ಕಾ ವರ್ಷ (meteor shower). ಬಹುಪಾಲು ಎಲ್ಲಾ ಉಲ್ಕೆಯ ಮಳೆಯಂತೆ ಇದೂ ಕೂಡ, ಭೂಮಿ ಸೂರ್ಯನನ್ನು ಸುತ್ತುವ ಹಾದಿಗೆ ಧೂಮಕೇತುವೊಂದರ ಉಳಿಕೆಗಳು, ದೂಳು ಇತ್ಯಾದಿ ಹೋಗುವ ಹಾದಿಯೂ ಅಡ್ಡಹೋಗುವುದರಿಂದ ಉಂಟಾಗುತ್ತದೆ. ಹಾಗಾಗೇ ಪ್ರತೀ ವರ್ಷ ಒಂದೇ ಸಮಯದಲ್ಲಿ ಇದು ಕಂಡುಬರುತ್ತೆ. ಈ ಉಲ್ಕೆಗಳು ಸಿಂಹ ರಾಶಿಯಿಂದ ಹೊರಟಂತೆ ಕಾಣುವುದರಿಂದ ಇದಕ್ಕೆ ಲಿಯೊನಿಡ್ಸ್ ಎಂದು ಹೆಸರು)
ಈಗ ಹಳೆಯ ಪೂರಣಗಳನ್ನು ಓದಿದ ಮೇಲೆ, ಉಲ್ಕೆಯ ಮಳೆಯೂ ಈಗಾಗಲೇ ಬಂದಿದೆಯೆಂದು ತಿಳಿಯಿತು ( ಟಿ ಎಸ್ ರಾಜಗೋಪಾಲರದು!) 🙂
( ಈ ವರ್ಷದ ಮಳೆಗಾಲದ ಬಗ್ಗೆ ಅಲ್ಲ.)
ಕೇರಿತೊಯ್ಯುವ ಮಳೆಯು ಕನಸೇಂ?
ನೀರ ಬೆಲೆಯಲಿ ವಜ್ರ ದೊರೆವುದು
ಮೀರಿ ಹೋಗಿದೆ ಬಾನ ಭಾಸ್ಕರನಟ್ಟಹಾಸವದು
ದಾರಿಬಿರಿದಿದೆ ಜೀವ ಹಾರಿದೆ
ಹಾರಿ ಬಂದಿತು ಕಪ್ಪು ಮೊಡವು
ಭಾರಿ ಬೇಗೆಯ ಸುಡುವ ಬಿಸಿಲೊಳ್ ಮಳೆಯು ಮುದವಾಯ್ತು