Jun 092013
 

ಈ ಬಾರಿ ಸಾಮೂಹಿಕ ಕಥಾರಚನೆಯ ವಿಷಯವನ್ನು ಮಹಾಭಾರತದಿಂದ ಆಯ್ದುಕೊಳ್ಳಲಾಗಿದೆ :: “ದ್ಯೂತ ಕ್ರೀಡೆಯಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭ“.  ಯುಧಿಷ್ಠಿರ ದ್ರೌಪದಿಯನ್ನು ಪಣವಾಗಿರಿಸಿದಲ್ಲಿಂದ ಮೊದಲ್ಗೊಂಡು, ವಸ್ತ್ರಾಪಹರಣವನ್ನೊಳಗೊಂಡು, ಕೃಷ್ಣ ನೀಡುವ ಅಕ್ಷಯಾಂಬರದ ವರೆಗೆ ವರ್ಣಿಸೋಣ.

ದ್ರೌಪದಿಯ ವಸ್ತ್ರಾಪಹರಣ

ದ್ರೌಪದಿಯ ವಸ್ತ್ರಾಪಹರಣ

ಪಾಂಡವರ ನಿಸ್ಸಹಾಯಕತೆ, ಶಕುನಿಯ ಕಪಟ, ಕೌರವರ ದುರಹಂಕಾರ, ದುರ್ನಡತೆ, ರಾಜಸಭೆಯಲ್ಲಿನ ಹಿರಿಯರ ನಿರ್ವೀರ್ಯತೆ, ದ್ರೌಪದಿಯ ಸಂಕಟ, ಕೃಷ್ಣನಲ್ಲಿ ತೋಡಿಕೊಳ್ಳುವ ಅಳಲು, ಕೃಷ್ಣನ ಕಾರುಣ್ಯ – ಎಲ್ಲವನ್ನೂ ತೆಗೆದುಕೊಳ್ಳಬಹುದು.

೨ ವಾರಗಳ ಕಾಲ ಈ ಸಪ್ತಾಹ ನಡೆಯಲಿ [:-)]. ಕಥೆಯನ್ನು, ವರ್ಣನೆಗಳನ್ನು, ಭಾವಗಳನ್ನು ಸವಧಾನದಿಂದ, ವಿಸ್ತಾರವಾಗಿ ನಡೆಸಲು ಪ್ರಯತ್ನಿಸೋಣ.

ಎಂದಿನಂತೆ ಛಂದಸ್ಸು ನಿಮ್ಮ ಆಯ್ಕೆ.

[ಚಿತ್ರದ ಕೃಪೆ – dollsofindia.com]

  132 Responses to “ಪದ್ಯಸಪ್ತಾಹ – ೭೨ : ಸಾಮೂಹಿಕ ಪದ್ಯ ಕಥಾ ರಚನೆ”

 1. ಶ್ರೀಯಂ ರಾಜ್ಯಶ್ರೀಯಂ
  ಪ್ರೇಯೋಮಯಸೋದರರ್ಕಳಂ ಸೋಲ್ತಕ್ಷೋ-
  ನ್ನೇಯಂ ದಾಂಪತ್ಯನಯ-
  ಶ್ರೀಯಂ ದ್ರೌಪದಿಯನೊಡ್ಡಿ ಧರ್ಮಜನಳಿದಂ ||

  ಪಣಮಾದಳೆ ಪಾಂಚಾಲಿಯು?
  ಪಣಮಾದುದು ಕುರುಕುಲಾತ್ಮಶಾಂತಿನಿಧಾನಂ |
  ಪಣಮಾದಳೆ ನಾರೀಮಣಿ?
  ಪಣಮಾದುದು ಭಾರತೀಯಮೌಲ್ಯವಿಧಾನಂ ||

  ಅದು ಜೂದೊಳ್ ಜಯಲುಬ್ಧಮುಗ್ಧನರಪಾಲಂ ಪೂಣ್ದ ಪೊಳ್ಪೂಣ್ಕೆಯೇಂ?
  ಅದು ಯೋಷಾಜಯಘೋಷಮೋಷಣಮಹಾದೂಷ್ಯಾತ್ಮಕಾಲುಷ್ಯಮೇ |
  ಅದು ಮನ್ವಂತರಕಾಲಮಾಲಿಖಿತನಾರೀಭೂರಿಘೋರಾಪಕಾ-
  ರದವೋದ್ವೇಲವಿಶಾಲಕೀಲಮಲಘುಜ್ವಾಲಾಜಟಾಲಾರ್ಭಟಂ ||

  ಧರ್ಮರಾಜನು ದ್ರೌಪದಿಯನ್ನು ಪಣವೊಡ್ಡಿದ ಸಂದರ್ಭದ ವಿಷಮತೆಯನ್ನು ನಿರೂಪಿಸುವ
  ಪದ್ಯಗಳಿಂದ ಈ ಸಂಚಿಕೆಯನ್ನು ಆರಂಬಿಸಿದ್ದೇನೆ.

  • ಮಾನನೀಯ,
   ಆ ಮೊದಲಪದ್ಯವನ್ನು ಓದಿದಾಗ ’ಆ ರವಮಂ..’ ಕೇಳಿದಂತೆಯೇ ಆಗುತ್ತದೆ.

  • ಗಣೇಶ್ ಸರ್, ೨ನೇ ಪದ್ಯ ಯಾವ ಛಂದಸ್ಸೆಂದು ಕೇಳುವವಳಿದ್ದೆ. (೬ ಮಾತ್ರೆಯ ೨ ಗಣ – ಜೋಗದಸಿರಿ….ಧಾಟಿ? ಅನ್ನಿಸಿತು) ಅಷ್ಟರಲ್ಲಿ ಈ ವಿಭಿನ್ನ ಶೈಲಿಯ “ಕಂದ”ನ ಕಳವಳ ಮನತಟ್ಟಿತು. ಇದನ್ನು unique example ಆಗಿ ಇಟ್ಟುಕೊಳ್ಳುವೆ. ಧನ್ಯವಾದಗಳು.

   • ವಸ್ತುತಃ ನಾನಿಲ್ಲಿ ರಚಿಸಿದ ಪದ್ಯಗಳ ಪೈಕಿ ಮೊದಲಿನ ಎರಡು ಪದ್ಯಗಳೂ ಕಂದಗಳೇ; ಇವುಗಳಲ್ಲಿ ಯಾವ ವ್ಯತ್ಯಾಸವೂ ಈ ಬಗೆಗೆ ವಿಡಿಯೋ ಪಾಠಗಳಲ್ಲಿ ಕಂದಪದ್ಯದ ಮೂಲಭೂತಗತಿಯೆನಿಸಿದ ಚತ್ರುಮಾತ್ರಾಲಯದಲ್ಲಿಯೇ ಷಣ್ಮಾತ್ರಾಲಯವೂ ಅಡಕವಾಗಿರುವ ವಿಶಿಷ್ಟತೆಯನ್ನು ಕುರಿತು ನಾನು ಹೇಳಿರುವುದನ್ನು ಆಸಕ್ತರು ಮತ್ತೆ ಗಮನಿಸಿದರೆ ತಿಳಿಯುತ್ತದೆ. ಈ ಅದ್ಭುತಚ್ಛಂದಸ್ಸಿನ ಅನನ್ಯಮನೋಹರತೆಯು ಈ ಗುಣದಲ್ಲಿಯೇ ಇದೆಯೆಂದರೂ ತಪ್ಪಲ್ಲ. ಏಕಕಾಲದಲ್ಲಿ ಕಂದವು ಆದಿ (ಅಥವಾ ಏಕ) ಹಾಗೂ ರೂಪಕತಾಳಗಳಿಗೆ ಬದ್ಧವಾಗಿ ಸಾಗುತ್ತದೆ. ಈ ಮೂಲಕ ಅದು ಕೇವಲ ಚತುರ್ಮಾತ್ರಾಲಯದ (ಮಧ್ಯಾವರ್ತಗತಿ) ಅಥವಾ ಕೇವಲ ಷಣ್ಮಾತ್ರಾಲಯದ (ಸಂತುಲಿತದ್ರುತಾವರ್ತಗತಿ) ನಡೆಗಷ್ಟೇ ಸೀಮಿತವಾಗದೆ ಇವೆರಡರ ಸೊಗಸನ್ನೂ ಅಳವಡಿಸಿಕೊಂಡಿದೆ. ಇದಕ್ಕೆ ಈ ಛಂದಸ್ಸಿನ ಸಮಪಾದಗಳಲ್ಲಿ ಬರುವ ಯತಿಸ್ಥಾನದ ನಿಯಮವೂ ಮುಖ್ಯಕಾರಣ. ಅಲ್ಲದೆ ಇದು ತನ್ನ ಸಮಸ್ಥಾನಗಳಲ್ಲಿ ಐಚ್ಛಿಕವಾಗಿ ಬರಬಹುದಾದ(ಸಮಪಾದಗಳ ಮೂರನೆಯ ಗಣವಾಗಿ ಜಗಣವು ನಿರಪವಾದವೆಂಬಂತೆ ಬಂದರೆ ಮತ್ತೂ ಸೊಗಸು) ’ಜಗಣ’ ವಿನ್ಯಾಸದ ಯಥೋಚಿತಪ್ರಾಚುರ್ಯದಿಂದಾಗಿ ಕೂಡ ಮತ್ತಷ್ಟು ಲಯರಹಿತಸುಷಮೆಯನ್ನು ಹೊಂದುತ್ತದೆ. ಇವಕ್ಕೆ ಕಿರೀಟವಿಟ್ಟಂತೆ ಹದವಾಗಿ ಪ್ರಾಸಗಳೂ (ಆದಿಪ್ರಾಸವಂತೂ ಇದ್ದೇಇದೆ. ಇನಿದಾದ ಅನುಪ್ರಾಸಗಳು ಯಾಂತ್ರಿಕತೆಯನ್ನು ಮುರಿಯುವಂತೆ ಅಲ್ಲಲ್ಲಿ ಸುಳಿದಾಡಿದಾಗ) ಉನ್ಮೀಲಿಸಿದರೆ ಇನ್ನೇನು ಹೇಳುವುದಿದೆ? ಈ ಎಲ್ಲ ಕಾರಣಗಳಿಂದಲೇ ನಮ್ಮ ಪದ್ಯಶಿಲ್ಪವಿಶಾರದರಾದ ಕವಿಗಳಿಗೆ ಇದು ಅಭಿಮಾನಾಸ್ಪದವಾದ ಬಂಧವೆನ್ನಿಸಿತು. ನಾನಾದರೂ ಹೀಗಾಗಿಯೇ ಕಂದವನ್ನು ವಿಪುಲವಾಗಿ ಬಳಸುತ್ತೇನೆ. ಒಳ್ಳೆಯ ಕಲ್ಪನೆಯೊಂದನ್ನು ಬಿಗಿಯಾಗಿ, ಬನಿಯಾಗಿ, ಅಡಕವಾಗಿ, ಅಂದವಾಗಿ
    ಹೇಳಲು; ವ್ಯರ್ಥಪದಗಳ, ಸಡಿಲಜಾಡಿನ ಹಾಗೂ ವೃಥಾವಿಸ್ತರದ ಕ್ಲೇಶವನ್ನು ನೀಗಲು ಕಂದವೊಂದು ಅಂದದ ಆಯುಧ. ವೆಗ್ಗಳದ ಹಳಗನ್ನಡದ ಶೈಲಿಗಂತೂ ಇದು ಹೇಳಿಮಾಡಿಸಿದ ಹೊನ್ನಿನ ಹತ್ಯಾರ. ಪದ್ಯಪಾನದಲ್ಲಾಗಲಿ, ಗೃಹಕವಿತ್ವ-ಸಭಾಕವಿತ್ವ(ಅವಧಾನ) ಸಂದರ್ಭಗಳಲ್ಲಾಗಲಿ ನಾನು ತುಂಬ ಬಳಸಿದ ಛಂದಸ್ಸೆಂದರೆ ಕಂದವೇ. ಪದ್ಯಪಾನದ ಗೆಳೆಯರು ಕೂಡ ಈ ಬಗೆಗೆ ಹೆಚ್ಚು ಗಮನವಿಡಬೇಕೆಂದು ನನ್ನ ಇರಾದೆ.

 2. ಅರಿಯೆನೇ ನಿನ್ನನಾಂ? ಚತುರ ಚಾಲಾಕಿಯೇ
  ಹರಿಯೆಂಬ ಪೆಸರೊತ್ತು ವಿಶ್ವ ರಂಗವಸೃಜಿಸಿ
  ತಿರೆಯೆಂಬ ವೇದಿಕೆಯೊಳಲವು ಪಾತ್ರಂಗಳಂ ನೀನಾಯ್ದು ತಂದಿರುವೆಯೈ ||
  ಸರಿಕಾಣದಾ ಅರಸ ಕೌರವನ ಮನದೊಳಿಹ
  ಉರಿಗಿಚ್ಚು ನೀನಲ್ತೆ? ಮುಡಿಯಿಡಿದು ದ್ರೌಪದಿಯ
  ದರದರನೆ ಎಳೆತಂದ ದುಶ್ಯಾಸನನ ವೇಷ ನೀ ಕೊಟ್ಟುದಲ್ಲವೇನೈ ||

  ಮತ್ತಷ್ಟು ತಪ್ಪುಗಳೊಂದಿಗೆ.. ತಮ್ಮ ವಿಶ್ವಾಸಿ

  • ಈ ಸರಣಿಯ ಕೊನೆಯ ಘಟ್ಟದಲ್ಲಿ ಬರಬೇಕಾದ ಪದ್ಯವಿದು. ಅಲ್ಲವೇ ?
   ಇದು ಯಾವ ಛಂದಸ್ಸಿನ ಪ್ರಕಾರ ಎಂದು ತಿಳಿಯಲಿಲ್ಲ .

   • ಛಂದಸ್ಸು ಎಡವಿರ ಬಹುದೆಂದು ಕಾಣುತ್ತದೆ… ಇದು ವಾರ್ಧಕ ಷಟ್ಪದಿ ಅಲ್ಲವೇ ?

    ೫ ೫ ೫ ೫
    ೫ ೫ ೫ ೫
    ೫ ೫ ೫ ೫ ೫ ೫ + ಗುರು

   • ಅನಲರ ಮಾತ್ರಾಕೋಷ್ಟಕ ಸರಿಯಾಗಿದೆ. ಇದು ವಾರ್ಧಕಷಟ್ಪದಿ. ಜೈಮಿನಿ, ಹರಿಶ್ಚಂದ್ರಕಾವ್ಯ ಇತ್ಯಾದಿಗಳು ಈ ಛಂದಸ್ಸಿನಲ್ಲಿವೆ.

    • ಹೌದು, ವಾರ್ಧಕದ ಛಂದೋಲಕ್ಷಣವಿಲ್ಲಿ ಸರಿಯಾಗಿಯೇ ಪಾಲಿತವಾಗಿದೆ. ಆದರೆ ಸಂಧಿನಿಯಮಗಳನ್ನು ತುಂಬ ಕಡೆ ಮೀರಿದ ಕಾರಣ, ವಿಸಂಧಿದೋಷವು ಪರ್ಯಾಯವಾಗಿ ಛಂದೋದೋಷವೇ ಆಗುವ ಕಾರಣ ತಿದ್ದದೆ ವಿಧಿಯಿಲ್ಲ. ಸಹಪದ್ಯಪಾನಿಗಳು ದಯಮಾಡಿ ಸಹಕರಿಸಿರಿ:-)

  • 1) ಪೆಸರು+ಹೊತ್ತು not= ಪೆಸರೊತ್ತು
   2) ವೇದಿಕೆಯೊಳು+ಹಲವು not= ವೇದಿಕೆಯೊಳಲವು
   3) ಸರಿಕಾಣದಾ ಅರಸ ಕೌರವನ: ವಿಸಂಧಿದೋಷವಲ್ಲದೆ, ’ಸರಿಕಾಣದಾ’ ಎನ್ನುವುದು poetic ಶಬ್ದ ಎನಿಸದು. ಕುರು, ಗರುವ, ಮೆರೆವ ಇತ್ಯಾದಿ ಪದಗಳನ್ನು ಬಳಸಿ ತಿದ್ದಿರಿ.
   4) ಮನದೊಳಿಹ ಉರಿಗಿಚ್ಚು: ವುರಿಗಿಚ್ಚು ಎಂದು ಓದಿಕೊಳ್ಳಬೇಕು. ಮನದೆ ದಳ್ಳುರಿಗಿಚ್ಚು ಎಂದು ಸವರಬಹುದು.
   5) ದರದರನೆ ಎಳೆತಂದ: ವಿಸಂದಿ.
   6) ರಂಗವಸೃಜಿಸಿ ತಿರೆಯೆಂಬ ವೇದಿಕೆಯೊಳ್: ರಂಗ ಹಾಗೂ ವೇದಿಕೆ are synonyms.
   ಒಂದು ಮಾದರಿ ಸವರಣೆ (ಮಿತವಾದ ಬದಲಾವಣೆಗಳೊಂದಿಗೆ):
   ಅರಿಯೆನೇಂ ನಿನ್ನನಾಂ ಚತುರ ಚಾಲಾಕಿಯೇ?
   ಹರಿಯೆಂಬ ಪೆಸರಿನೇನ್? ವಿಶ್ವರಂಗದೊಳಂಗೆ
   ತಿರೆಯೆಂಬ ವೇದಿಕೆಯೊಳಮಿತ ಪಾತ್ರಂಗಳಂ ನೀನಾಯ್ದು ನೆರೆಸಿರುವೆಯೈ|
   ಮೆರೆವಾ ಸುಯೋಧನನ ಮನದೆ ಭುಗಿಲೆದ್ದ ದ
   ಳ್ಳುರಿಗಿಚ್ಚು ನೀನಲ್ತೆ? ಮುಡಿಯಿಡಿದು ದ್ರೌಪದಿಯ
   ದರದರನೆ ದುಶ್ಯಾಸ*ನೆಳೆತರಲ್ಕಾತಂಗೆ ಚೋದಿಸಿದರಾರುಪೇಳೈ||
   *ದುಶ್ಯಾಸ=ದುಶ್ಯಾಸನ

   • ತುಂಬಾ ಥ್ಯಾಂಕ್ಸ್ ಪ್ರಸಾದ್/ಗಣೇಶ್ ಸರ್, ತಿದ್ದಲು ಪ್ರಯತ್ನಿಸುತ್ತೇನೆ… ಮೊದಲೆರಡು ಅಂಶಗಳ ಬಗ್ಗೆ ಮೊದಲಿಂದಲೂ ಸಂದೇಹ ಇತ್ತು..

    ೩. ಸರಿಕಾಣದಾ ಅರಸ ( ಕಾವ್ಯ ಭಾಷೆಯ ದೃಷ್ಟಿಯಿಂದ ಅನುಚಿತವಾಗಿದ್ದರೂ) ವಿಸಂಧಿ ಆಗದಿದ್ದರೆ, ‘ಸರಿಕಾಣದ ಆ ಅರಸ’ = ‘ಸರಿಕಾಣದ ಅರಸ’ ಆಗುತ್ತದೆಯಲ್ಲವೇ. ಇಂತಹ ಸಂದರ್ಭದಲ್ಲೂ ಇದನ್ನು ವಿಸಂಧಿ ದೋಷವಾಗಿ ಪರಿಗಣಿಸಲಾಗುತ್ತದೆಯೇ. ತಿಳಿಸಿ.

    ೬. ವಿಶ್ವ ರಂಗವ ಸೃಜಿಸಿ (ವಿಶ್ವ ಅನ್ನೋ ವೇದಿಕೆಯನ್ನ ರಚಿಸಿ…) ಬಳಕೆಯಲ್ಲಿ ಆದ ತಪ್ಪು ತಿಳಿಯಲಿಲ್ಲ. (ಶಿ.ಧ್ವಿ ಆಗಿದೆಯೇ..?)

 3. ರಾಂ,
  ಧಾರೆಯನ್ನು ಏಳು ಭಾಗಗಳಾಗಿ ಮಾಡಿ, ಒಂದೊಂದಕ್ಕೂ ಎರಡು ದಿನಗಳನ್ನು (ದಿನಾಂಕಗಳನ್ನು) ನಿಗದಿಮಾಡಿದರೆ, ಆನುಪೂರ್ವ್ಯ ಕಾಯ್ದುಕೊಂಡಂತಾಗುತ್ತದೆ. ಇಲ್ಲದಿದ್ದರೆ ರಚನೆಗಳ chronology ಹಿಂದು-ಮುಂದು ಆಗುತ್ತದೆ. ಏನೆನ್ನುತ್ತೀರಿ?

  • ನಿಜ, ಕ್ರಮವಾಗಿ ಬರೆಯದೆಹೋದರೆ ಹಿತವಾಗದು. ಆದುದರಿಂದ ಕಥಾಕ್ರಮದ ತಂತುವನ್ನು ಮೀರದೆ ಎಲ್ಲರೂ ಪದ್ಯಗಳನ್ನು ರಚಿಸಬೇಕು.ಅದೇ ಸಂದರ್ಭಗಳನ್ನು ಹಲವರು ರಚಿಸಿದರೂ ಅಡ್ಡಿಯಿಲ್ಲ; ಪ್ರತಿಯೊಬ್ಬರ ಕಲ್ಪನೆಗಳೂ ವಿಭಿನ್ನವಿರುವ ಕಾರಣ ಪುನರುಕ್ತಿಯ ಶಂಕೆಯಿರದು.

  • ಪ್ರಸಾದು,
   ತುಂಬ ಸಣ್ಣದಾಗಿ ಸಮಯವನ್ನು ಹೆಚ್ಚಿಬಿಟ್ಟರೆ, ಕೆಲ ದಿನಗಳಲ್ಲಿ ಮಾತ್ರ ಪುರಸೊತ್ತಿರುವವರಿಗೆ ತೊಂದರೆಯಾದೀತು. ಹಿಂದಿನ ಕಂತುಗಲಲ್ಲಿ ಹೆಚ್ಚಿನ ತ್ರಾಸವೇನೂ ಆಗಿಲ್ಲದ ಕಾರಣ, ಹೀಗೇ ಬಿಡೋಣ ಎನ್ನಿಸುತ್ತದೆ

 4. ಧರ್ಮಜನಾಡಿರೆ ಸರಿಬೆಸದಾಟವ
  ನರ್ಮದಿ ಸರಿಕರ ಕೂಟದೊಳು
  ವರ್ಮವ ಬಿತ್ತಿಹ ಶಕುನಿಯ ದಾಳದ
  ಮರ್ಮವನರಿಯದೆ ಕೂಸವೊಲು ||

  ನಿರ್ಮಲೆ ಸತಿಯನು ಸೋತಿಹ ಪಣದಲಿ
  ಕರ್ಮದೆ ಬೀಳದೆ ಸರಿಗವವು
  ನೆರ್ಮಕೆ ಹಿರಿಕರ ಕಾಣದೆ ಚಣದಲಿ
  ಪೆರ್ಮೆಯ ಬಿಟ್ಟಿಹ ಕಳವಳವು ||

  • ಪದ್ಯಗಳು ಶಿಥಿಲವಾದುವು. ಪ್ರಾಸದ ಮೋಹದಲ್ಲಿ ಅಪಶಬ್ದ(ವ್ಯಾಕರಣವಿರುದ್ಧವಾದ ಪದಗಳು)ಗಳೂ ಅರ್ಥಕಾಲುಷ್ಯವೂ ಅರ್ಥದಲ್ಲಿ ಅಸ್ಪಷ್ಟತೆ) ತಲೆದೋರಿವೆ. ಛಂದಸ್ಸೂ ಸಂದರ್ಭದ ಗಾಂಭೀರ್ಯಕ್ಕೆ ಸಲ್ಲದ ಶಿಶುವಿಹಾರದ ಉಲ್ಲಸಿತಮುಗ್ಧತ್ವರಿತಗತಿಯಾಗಿ ಅನೌಚಿತ್ಯವು ಅಬ್ಬರಿಸಿದೆ. ದಯಮಾಡಿ ಆಲೋಚನಾಮೃತವಾಗಿ “ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟುವ” ಹಾಗೆ ತೀಡಿ ತಿದ್ದಿ ಬರೆಯಿರಿ.

   • ಗಣೇಶ್ ಸರ್,
    ತಿಳಿಯದೆ ಬಂದ ಅಪಶಬ್ದಗಳಿಗೆ ಕ್ಷಮೆಯಿರಲಿ. (ಪೂರ್ಣ ಪ್ರಸಂಗವನ್ನು ಚೌಪದಿಯಲ್ಲಿ ಬರೆಯುವ ಪ್ರಯತ್ನದಲ್ಲಿದ್ದೆ. ನನ್ನ ತಪ್ಪಿನ ಅರಿವಾಗಿದೆ) ತಿದ್ದಿದ ಪದ್ಯ:

    ಲೆತ್ತದ ಹಾಸೊಳ್ ಬೀಸೊಳ್
    ಸುತ್ತಿರಲಾನಾಲ್ಕುಕಾಯಿಗಳ್ ಗರದಿಂದಲ್ ।
    ಉತ್ತಮರಾನಾಲ್ವನುಜರ
    ನಿತ್ತಿಹ ಸೋಲಲೆದುರಾಳಿ ದಾಳದೊಳಿಂದಂ ||

    ಕಟ್ಟಿಹ ಜೋಡಿಯ ಕಾಯೊಳ್
    ತಟ್ಟನೆ ನಡೆಸೆಸರಿಗರವ ಜಯಿಸಲ್ ಮತಿಯೊಳ್ |
    ಒಟ್ಟಿಗೆ ಸೋತಿಹ ಸತಿಯೊಡ
    ನಿಟ್ಟಿರೆ ದುರುಳಸರಿಗರವ ಧೂರ್ತದಳಿಂದಂ ||
    (ಪಗಡೆಯಾಟದಲ್ಲಿ ನಾಲ್ಕು ಕಾಯಿಗಳಿಗೆ ತನ್ನ ನಾಲ್ಕು ಸಹೋದರರನ್ನು , ಜೋಡಿಕಾಯಿಕಟ್ಟಿ ಸೋತಿದ್ದರಿಂದ ತನ್ನೊದಿಗೆ ತನ್ನ ಪತ್ನಿಯನ್ನೂ, ಸೋತ ಧರ್ಮರಾಯ)

    • ಕಟ್ಟಿಹ ಜೋಡಿಯ ಕಾಯೊಳ್
     ತಟ್ಟನೆ ಸಮಗರವ ನಡೆಸಿ ಜಯಿಸಲ್ ಮತಿಯೊಳ್ |
     ಒಟ್ಟಿಗೆ ಸೋತಿಹ ಸತಿಯೊಡ
     ನಿಟ್ಟಿರೆ ಸರಿಗರವ ದುರುಳ ಧೂರ್ತದಳಿಂದಂ ||

 5. ದ್ರೌಪದಿಯು ಭೀಷ್ಮಾದಿ ಕುರುಪ್ರಮುಖರನ್ನು ನಿಂದಿಸುತ್ತಾ, ಆರ್ತಳಾಗಿ ಯಾಚಿಸುವ ಪ್ರಸಂಗ
  (ಕಂದಪದ್ಯಗಳ ಮೊದಲ ಪ್ರಯತ್ನ…ಎಡವಿದ್ದರೆ ಕ್ಷಮೆಯೊಂದಿಗೆ ಮಾರ್ಗದರ್ಶನವಿರಲಿ…ಚಂಪೂ ಕಾವ್ಯಗಳ ರೀತ್ಯಾ ಬರೆಯುವ ಸಣ್ಣ ಪ್ರಯತ್ನವಿದು)

  ಕಾಣಿರಿ ಗಂಗಾತನಯಾ !
  ಕಾಣಿರಿ ಕುಂಭೋದ್ಭವಾದಿ ಸಕಳಸಭಿಕರೇ !
  ಮಾಣಿಸರೇಮೀ ತೊಡರ್ಚಿಂ ? (ಶಿಥಿಲದ್ವಿತ್ವ)
  ದಾಣಿಯದೆನಿಸದೆ ನಿಮಗೀ ಕುಲವಧು ಮಾನಂ ?

  ಬೂತೊಂದೆನ್ನೊಳಮೀ ಕಡು
  ಪಾತಂ ಗೆಯ್ವುದಮೀ ಪರಿ ಕಂಡಿರ್ಪರಲ್ತೇಂ ? (ಶಿಥಿಲದ್ವಿತ್ವ once more)
  ಘಾತಂ ಗೆಯ್ದಾದೊಡಮೀ
  ಸ್ರೋತಂ ಕಾಂಬವರೇ ದಿಟಘಾತಿಗಳೆಂಬೆಂ !

  ವ || ಅಂತು ಕ್ರೋಧೋದ್ದೀಪಿತಮುಖಮುದ್ರಾಸಹಿತಳಾದ ದ್ರುಪದಸುತೆಯುಂ ತೀವ್ರರೋಷಾಸಮಾವಿಷ್ಟಳಾಗಿ ತರ್ಜನೋದ್ಧೂಳಿತವಿಗ್ರಹಳಾಗಿ ದುಃಖಾನ್ವಿತಳಾಗಿ ಭಾವೋದ್ರೇಕದ ಚರಮಾಂತ ಪತಾಕೆಯೋಲ್ ಪರಮಾರ್ತಜಲಾಕರದವೊಲ್ ನಿಂದಿರಲ್ಕೆ-

  ಅಕಟಕಟಾವ ಭಾಗ್ಯಮೆನಲೀ ಶಶಿವಂಶಜರಾಸ್ತಿಯಾಗೆ ತಾಂ
  ಬಕನಿಕರಂ ಕಜೋದ್ಭಸಿತಮಪ್ಪ ತಟಾಕದೊಳಿರ್ಪ ಮತ್ಸ್ಯಮಂ
  ಭುಕುತಿಗಮೀಡು ಮಾಳ್ಪ ತೆಱದೊಳ್ ಕುರುಖೂಳಸಭಾತಮಿಸ್ರದೊಳ್
  ಚಿಕುರವಿಕೀರ್ಣಧರ್ಷಿತಪತಾಕಿನಿ ನಿಂದಿರ್ದಳುಗ್ರಭಾವದಿಂ (ಶಿಥಿಲದ್ವಿತ್ವ one more time)

  (“ಚಿಕುರವಿಕೀರ್ಣಧರ್ಷಿತಪತಾಕಿನಿ….” – ದ್ರೌಪದಿಯ ಕೆದರಿದ ಕೇಶರಾಶಿಯು ಧ್ವಸ್ತವಾದ ಸೈನ್ಯವನ್ನು ಹೋಲುತ್ತಿತ್ತು ಎಂಬ ಕಲ್ಪನೆಯಲ್ಲಿ)

  • ಮಹತ್ಕಾಂಕ್ಷೆಯ ನಿಮ್ಮ ಚಂಪೂಶೈಲಿಪ್ರಯತ್ನವು ಅಭಿನಂದನೀಯ. ಆದರೆ ಕಂದದ ಲಕ್ಷಣವನ್ನು ಮತ್ತೆ ಗಮನಿಸಬೇಕಾದ ತುರ್ತು ತೀವ್ರವಾಗಿದೆ. ನಿಮ್ಮ ಎಲ್ಲ ಕಂದಗಳೂ ಛಂದೋದೃಷ್ಟಿಯಿಂದ (ವಿಶೇಷತಃ ಜಗಣ-ಯತಿಸ್ಥಾನನಿಯಮಪಾಲನೆ) ತಪ್ಪಾಗಿವೆ.ಅಲ್ಲಲ್ಲಿ ಹಳಗನ್ನಡದ ವ್ಯಾಕರಣವೂ ಸಡಲಿದೆ. ವೃತ್ತವು ಮಾತ್ರ (ಒಂಡೆರಡು ಪದಗಳ ಜಾಳುತನದ ಹೊರತಾಗಿ) ಅನವದ್ಯವಾಗಿದೆ. ಕಲ್ಪನೆಗಳೂ ಛಂದ ಔಚಿತ್ಯವೂ ಯುಕ್ತವಾಗಿವೆ.

   • ಗುರುಗಳೇ,
    ಮೊತ್ತಮೊದಲಿಗೆ ಸೊರಗಿದ ಸೋರೆಯಂತಿರುವ, ಕಂದದ ಛಂದಸ್ಸಿಗೆ ದೂರವಾಗಿರುವ, “ಪದ್ಯ” ಎಂದುಕೊಂಡು ಪದ್ಯವಲ್ಲದ್ದನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಕ್ಷಮಾಪ್ರಾರ್ಥಿಯಾಗಿದ್ದೇನೆ. ಇವುಗಳ ಸವರಣೆಯನ್ನು ಮಾಡಿದರೂ ಅವೂ ದೋಷಪೂರ್ಣವಾಗಿರಬಹುದೆಂದೇ ನನ್ನ ಅನಿಸಿಕೆ. ಕಾರಣ, ನನ್ನ ಹಳಗನ್ನಡ ಹಾಗೂ ಛಂದೋಜ್ಞಾನದಲ್ಲಿ ಇರುವಂತಹ ಶೈಥಿಲ್ಯ. ಎರಡನೆಯದಾಗಿ, ಇಷ್ಟೂ ದಿನಗಳು ಕಂದದ ಮೇಲಿನ ಭಯದಿಂದ ಕಂದರಚನೆಗೆ ಕೈ ಇಟ್ಟಿರಲಿಲ್ಲ. ಆದರೂ ಭಂಡತನದಿಂದ ಒಂದನ್ನು ರಚಿಸುವ ಪ್ರಯತ್ನವನ್ನು ಮಾಡಿ ಸೋತಿದ್ದೇನೆ. ಆದಕಾರಣ ನನ್ನ ಭಂಡತನಕ್ಕೆ ಕ್ಷಮೆಯಿರಲಿ. ಆ ಎರಡೂ “ಪದ್ಯ”ಗಳ ಸವರಣೆಗಳಿಗಾಗಿ ತಮ್ಮಲ್ಲಿ ಬೇಡುತ್ತಿದ್ದೇನೆ (ನನ್ನ “ಪದ್ಯ” ಹಾಗೂ ತಮ್ಮ ಶ್ರೇಷ್ಠ ಶೈಲಿಯ ನಿಜಾರ್ಥದ ಪದ್ಯ – ಇವುಗಳ ನಡುವಿನ ಅಂತರಗಳನ್ನು ತಿಳಿದು ಮುನ್ನಡೆವ ಆಸೆ). ತಮಗೆ ಕಷ್ಟವನ್ನು ನೀಡುತ್ತಿರುವುದಕ್ಕೆ ಮತ್ತೊಮ್ಮೆ ಕ್ಷಮಾಪ್ರಾರ್ಥಿ. ಅಲ್ಲದೇ ತಮ್ಮಿಂದ ಕಂದಗಳು ಹಾಗೂ ಗಣ ವಿನ್ಯಾಸಗಳ ಬಗೆಗೆ ಮುಖತಃ ಹೆಚ್ಚು ತಿಳಿಯುವ ಬಯಕೆಯುಂಟು (ಪುಸ್ತಕಗಳಿಂದ ಈ ಬಯಕೆ ಪೂರ್ಣವಾಗುತ್ತಿಲ್ಲ). ಇದರ ಪೂರೈಕೆಗಾಗಿ ಮತ್ತೆ ತಮ್ಮಲ್ಲಿ ಬೇಡುತ್ತಿದ್ದೇನೆ. ಬಹಳ ಬೇಡಿಕೆಗಳನ್ನಿಟ್ಟಿದ್ದರೆ ಕ್ಷಮೆಯಿರಲಿ.

    • ಪದ್ಯಪಾನದಲ್ಲಿ ಯಾರಿಗೆ ಯಾರೂ ಗುರು-ಶಿಷ್ಯರಲ್ಲ. ಎಲ್ಲರೂ ಗೆಳೆಯರು. ಹಾಗೆಯೇ ಇಲ್ಲಿ ತಪ್ಪಿಗೆ ಮುಜುಗರ ಪಡಬೇಕಿಲ್ಲ; ಕ್ಷಮಾಯಾಚನೆಯನ್ನಂತೂ ಮಾಡಲೇಬೇಕಿಲ್ಲ. ಕಂದವನ್ನು ಕುರಿತು ನಾನು ಮಾಡಿರುವ ವಿಡಿಯೋ ಪಾಠಗಳನ್ನು ಮತ್ತೊಮ್ಮೆ ಚೆನ್ನಾಗಿ ಗಮನಿಸಿರಿ. ಆಗಲೂ ನಿಮ್ಮಲ್ಲಿ ಸಂದೇಹಗಳಿದ್ದರೆ ಮುಖತಃ ಮಾತನಾಡಿ ಪರಿಹರಿಸುವೆ.

     • ಸರ್,
      ಕಂದಪದ್ಯದ ವಿಡಿಯೋ ಪಾಠಗಳನ್ನು ಮನದಟ್ಟಾಗುವವರೆಗೆ ಹಲವು ಬಾರಿ ನೋಡಿದೆ. ಅದು ನನ್ನ ಬೇಸರಕ್ಕೆ ಕಾರಣವಲ್ಲ. ಮುಖ್ಯವಾಗಿ ನಾನು ಗಣ ವಿನ್ಯಾಸಗಳ ಬಗೆಗೆ ತಿಳಿಯುವುದು ಶೇಷವಿದೆ. ಇದರ ತಿಳುವಳಿಕೆಯೂ ಸಹ ಬಂದರೆ ಒಳಿತೆಂಬುದು ನನ್ನ ಭಾವನೆ. ಇದು ಕನ್ನಡಕ್ಕಷ್ಟೇ ಅಲ್ಲದೆ ನನ್ನ ಸಂಸ್ಕೃತ ವ್ಯಾಸಂಗಕ್ಕೂ ಪೂರಕವಾಗಬಹುದೆಂಬುದು ನನ್ನ ಅಭಿಪ್ರಾಯ.

     • ಗುರುವೆಂದರೆ ಗುರ್ರೆನ್ನುವ ಸರ್ರೆಂದರೆ ಸರಿಯೆನ್ನುವ
      ಪರಿಯೇನನ್ಯಾಯವೊ ನಾ ತಾಳೆನೊ ರಾಗ 😉

      ಇಲ್ಲಿ ಕ್ಷಮಾಯಾಚನೆ ಮಾಡಲೇ ಬೇಕಾಗಿದೆ, ಇದೋ ಮಾಡುತ್ತಿದ್ದೇನೆ, ಮಾಡಿದ್ದೇನೆ.

 6. ಮಾರಲ್ಕಿಟ್ಟ ಪದಾರ್ಥವೆಂಬ ತೆರದಿಂ ವೈವಸ್ವತಾತ್ಮೋದ್ಭವಂ
  ಧೀರೋದಾರಗಭೀರಚಾರುಮಹಿಮಸ್ಫಾರಾತ್ಮಸೌಂದರ್ಯಸಂ-
  ಸಾರಶ್ರೀಯೆನಿಸಿರ್ವ ಕೂರ್ತ ಸತಿಯಂ ನಾಣ್ಗೆಟ್ಟು ಬಾಯ್ಬಿಟ್ಟು ನಿ-
  ರ್ಧೀರಂ ಬಣ್ಣಿಸುತೊಡ್ಡಿ ಸೋಲ್ತಿರೆ ಪರರ್ ಗುಂಡೂಳಿ ಕೊಂಡೊಯ್ಯರೇಂ?

  ಸಭೆಯದೇಂ? ಸಭಿಕಾಳಿಯ ಕಾಳಿಮಂ
  ಪ್ರಭವಿಸಲ್ ; ಪ್ರಭುಶಕ್ತಿಯಭಾವಮೇ |
  ವಿಭವಿಸಲ್ ಕುರುಪಾಂಸನರಿಚ್ಛೆಯೊಳ್
  ಶುಭಮದೆಲ್ಲಿ ಪಳಂಚುಗುಮಾರ್ತೆಗಂ?

 7. ಗೆಲ್ದೆಂ ಗೆಲ್ದೆನೆನುತ್ತುಮೂಳೆ ಶಕುನಿ ವ್ಯಾಲೋಲಚೇಲಾಂಚಲಂ
  ಗೆಲ್ದಂ ಗೆಲ್ದನೆನುತ್ತುಮಾಣ್ಮನ ಕರಂಗೊಂಡೆಳ್ದು ಕರ್ಣಂ ನಿಲಲ್ |
  ಗೆಲ್ದಾಯ್ತೇಂ ವಿದುರಾ! ಕುಮಾರನವಳಂ ಪೇಳೆಂದಿರಲ್ಕಂಧನುಂ
  ಗೆಲ್ದುದ್ದಾಮತೆಯಿಂ ಕ್ಷಣಂ ನಿರುಕಿಪಂ ದುರ್ಯೋಧನಂ ದಾಳಮಂ ||

  ಮೀಸೆಯ ಮೇಲೆ ಕಯ್ಯಿರಿಸಿ ಕಾಲನ ಕೋಣನ ಕೊಂಬದೆಂಬಿನಂ
  ಭಾಸುರಹಾಸದಿಂ ಮಸೆಯುತುಂ ಮೊನೆಯಂ ಕಡೆಗಣ್ಣ ಕತ್ತಿಯಿಂ |
  ಸೀಸಕಮಿಲ್ಲದಿರ್ಪ ಬರಿಮಂಡೆಯ ಪಾಂಡವರಾತ್ಮಗೌರವ-
  ಶ್ವಾಸಲತಾಂತಮಂ ತರಿಯುವಂದದೆ ಬೀಸಿದನಾ ಸುಯೋಧನಂ ||

  • ಶಬ್ದಗಳ ಸೊಗಸು ಬಂಧದ
   ಹದ್ದಿನೊಳದ್ದಿದ ಕಥಾಕ್ರಿಯಾರ್ಥ ತರಂಗಂ
   ಎದ್ದಾಡಿರೆ ರಸಪೋಷಿಸಿ
   ಮದ್ದೆನುವಂತಿರ್ದುದಲ್ತೆ ಜಡಮಂಕಳೆಯಲ್

 8. ಅಣಕಿಪಂತೆ ನೆಗಳ್ದಿರೆ ದಾಳಗಳ್
  ವ್ರಣಕೆ ತುಂಬುವವೊಲ್ ಲವಣಾಂಬುವಂ |
  ದಣಿದ ಶಾರಿಗಳುಂ ನಿಜಕಾಮನಾ-
  ಗಣದವೋಲಿರೆ ಧರ್ಮಜನಳ್ಕಿದಂ ||

  ಅಸಹಾಯಕರಪ್ಪ ಸೋದರರ್
  ಶ್ವಸನೋತ್ಸಾಹಮೆ ನೀಗಿದಂತಿರಲ್ |
  ವಸುಧಾಧಿಪನಾ ಯಮಾತ್ಮಜಂ
  ವ್ಯಸನವ್ಯಾಧಗೆ ಬೇಂಟೆಯಾದನಯ್ !!

  ಪಾಂಡುಪುತ್ರರಿಗಕಾಂಡಖೇದಕೋ-
  ದಂಡಮುಕ್ತಶರಘಾತಮಾದುದೆಂ-
  ದುಂಡವೊಲ್ ಸುಧೆಯನಾದರಾ ಖಳರ್
  ಮುಂಡಹೀನರವೊಲಾದುತ್ತಮರ್ ||

  ಚತುರಾನನಂ ಮೊಗಂಗಳನತ್ತಲೊಲೆಯಿಸ-
  ಲ್ಕಾಗದೆಂದಾಸನಾಬ್ಜದೆ ನುಸುಳ್ದಂ
  ಅನಿಮೇಷಜನರೀಶನಕ್ಷಿಸಾಹಸ್ರಮಂ
  ಮುಚ್ಚಲಾಗದೆ ಸೋಮದೊಳೆ ಮುಳುಗಿದಂ |
  ಬಿಚ್ಚಲಾಗದೆ ತನ್ನ ತಾರ್ತೀಯಿಕೇಕ್ಷೆಯಂ
  ಭೈಕ್ಷ್ಯಪಾತ್ರದೆ ಶಂಭು ಮುಚ್ಚಲಾಸ್ಯಂ
  ಆದಿಮಾಯಾಶಕ್ತಿಯಾತ್ಮದಾಚ್ಛಾದನಂ
  ನಿಷ್ಪ್ರಯೋಜನಮೆಂದು ನಿಟ್ಟುಸಿರಿಡಲ್ ||
  ಅಚಿರಕಾಲದೊಳ್ ಕಾಲನೂರಿಂಗೆ ತೆರಳಲ್
  ನೋಂತ ಕೌರವರ್ ಸೆಳೆದಪರ್ ಸಾಧ್ವಿಯುಡೆಯಂ|
  ನೋಳ್ಪುದೆಂತೀ ವಿಪಾಕಮಂ ತಾಮೆನುತ್ತುಂ
  ನವೆವ ಭಾವಮಂ ಬಣ್ಣಿಸಲ್ ಬಾಣಿ ಸೋಲ್ತಳ್ ||

  • ಗಣೇಶ್ ಸರ್, ಬಹಳ ಚೆನ್ನಾಗಿದೆ ಪದ್ಯಗಳು 🙂
   ಅದರಲ್ಲೂ ದೃತವಿಲಂಬಿತ ಮತ್ತು ರಥೋದ್ಧತಗಳಂತು ಅದ್ಭ್ಹುತವಾಗಿವೆ, ಎರಡನೆಯ ಮತ್ತು ಕಡೆಯ ಪದ್ಯದ ಛಂದಸ್ಸುಗಳವುವು. ಕಡೆಯಪದ್ಯ ಪೂರ್ಣವಾಗಿ ತಿಳಿಯಲಿಲ್ಲ ದಯವಿಟ್ಟು ಅರ್ಥತಿಳಿಸಿಕೊಡಿರಿ.

   ಅಕಾಂಡಖೇದಕೋದಂಡ ಎಂದರೆ ಏನು?

  • ಒಂದರಿಂ ಮತ್ತೊಂದು ಸುಂದರಂ. ಗಣೇಶರೆ, ಈ ಪದ್ಯಗಳ ಛಂದಸಿನ ಬಗ್ಗೆ ಸ್ವಲ್ಪ ಹೇಳಿ ನಮ್ಮೆಲ್ಲರಿಗೂ ಬೋಧಿಸುವಿರ?

 9. ಪದ್ಯಪಾನದ ಗೆಳೆಯರಿಗೆಲ್ಲ ವಂದನೆ. ನಮ್ಮಲ್ಲಿ ಹಲವರು ಈ ಎರಡು ವರ್ಷಗಳಲ್ಲಿ ಪದ್ಯರಚನೆಯ ಪ್ರಾಥಮಿಕರಹಸ್ಯಗಳನ್ನೆಷ್ಟೋ ಅರಿತು ನುರಿತು ಬೆಳಗುತ್ತಿದ್ದಾರೆ. ಹೀಗಾಗಿ ಅಂಥವರಿಗೆ ಮತ್ತಷ್ಟು ಪುರೋಗತಿಪೂರಕವಾಗಲೆಂದು ಸದ್ಯದ ಕಂತಿನಲ್ಲಿ ಕಥನಕ್ರಮದ ಓಘಕ್ಕೆ ಒಳ್ಳೆಯ ಪದ್ಯಶಿಲ್ಪದ ಹಲವು ಮಾದರಿಗಳಾಗುವ ಹಾಗೆ ವಿವಿಧವೃತ್ತ-ಜಾತಿಗಳಲ್ಲಿ ಬಗೆಬಗೆಯ ಅಲಂಕಾರಗಳನ್ನೂ ಉಕ್ತಿವೈಚಿತ್ರ್ಯಗಳನ್ನೂ ನಿರ್ದೇಶಿಸುವಂತೆ ಸ್ವಲ್ಪ ಪ್ರಯತ್ನವನ್ನು ಮಾಡಿದ್ದೇನೆ. ದಯಮಾಡಿ ಆಸಕ್ತರು ಇತ್ತ ಗಮನವಿರಿಸಿ ಈ ಕೆಲವು ಪಟ್ಟು-ವರಸೆಗಳನ್ನು ಪರಶೀಲಿಸಬೇಕಾಗಿ ವಿನಂತಿ.

  • ‘ಸ್ವಲ್ಪ escalate ಮಾಡಿದ್ದಾರಲ್ಲ’ ಎನಿಸಿತ್ತು. ಉದ್ದೇಶ-ಸ್ಪಷ್ಟೀಕರಣಕ್ಕಾಗಿ ಕೃತಜ್ಞತೆಗಳು. Nevertheless, we seem to be graduating from one level of incomprehension to another!

 10. ಮಾತ್ರಮಿದಲ್ತು ದ್ವಾಪರ-
  ರಾತ್ರಮಿದಹುದುದ್ಭವಂ ವಿಧರ್ಮಂಗಳದಂ| (ರಾತ್ರ=ಅಂತ್ಯ. ವಿಧರ್ಮ> ಕಲಿಗಾಲ)
  ಗೋತ್ರಹನನನಾಂದಿಯಿದಂ
  ಧಾತ್ರಿ ನೆನೆವುದಾಯ್ತು ವಸನವೆಸನಮನೆಂದುಂ||

  ವಸನವೆಸನ – ಅರಿಸಮಾಸವೆಂದಾದರೆ:
  ಧಾತ್ರಿ ನೆನೆವುದಾಯ್ತು ವಸ್ತ್ರವ್ಯಸನಮನೆಂದುಂ|| (ಶಿ.ದ್ವಿ)

 11. ಜೋಡಿದದಾಳವನೊಗೆದು ಸರಿಸುತಿರೆ ಕಾಯ್ಗಳನು
  ಮೋಡಿಮಾಡಿರೆ ಶಕುನಿ ಕುಂತಿಸುತಗೆ|
  ಹೇಡಿಯಂತೆಯೆತಾನು ಕಂಡರುಂಕಾಣೆನೆಂ
  ದೋಡುತಿರೆ ಕುರುಪತಿಯು ಸ್ವಾರ್ಥದೆಡೆಗೆ|

  • ನನ್ನ ಸವರಣೆ (with minimum changes):
   ಜೋಡಿದಾಳವನೆರಚಿ ಸರಿಸುವೊಲ್ ಕಾಯ್ಗಳನು
   ಮೋಡಿಗೈದಿರೆ ಶಕುನಿ ಕುಂತಿಸುತಗೆ|
   ಹೇಡಿವೋಲ್ಕಿತವಮಂ ಕಂಡರುಂ ಕಾಣದಂ
   ತಾಡಿದನೆ ಕುರುಪತಿಯ ಪಂಥವಿಡಿದು||

 12. ಉರುಟಲರಮಗನ್ ದಾಳಮ-
  ನುರುಳ್ದುವು ಸಿರಿಸಂಪದಂಗಳೊಂದೊಂದುಂ ತಾಂ
  ಉರುಳಿತರಸ ಮಾನಂ ಜೊತೆ
  ಗುರುಳಿತು ಹಾ ಮತಿಯುಮುಮ್ಮನೊಡ್ಡೋಲಗದೊಳ್ ||

  ಉಮ್ಮನೊಡ್ಡೋಲಗಂ- ಮೂಕಸಭೆ

 13. ಕುರುಪತ್ಯೂರು, ಯುಧಿಷ್ಠಿರಪ್ರಮದಮಂ, ಭೀಷ್ಮಪ್ರತಿಜ್ಞಾಪ್ತಿಯಂ,
  ಕರುಳಿಂ ವಂಚಿತಮಪ್ಪ ಜರ್ಝರಿತನಂ, ಬಿಲ್ಬಲ್ಮೆಯಾಚಾರ್ಯನಾ
  ಮೆರಗಂ, ಕೃಷ್ಣೆಯ ಮಾನಮಂ, ಕುರುಬಲಪ್ರತ್ಯಗ್ರರಕ್ತಾಬ್ಧಿಯಂ
  ಬೆರೆಸಲ್ ನೆತ್ತದದಾಳದಾಹುತಿಯೊಳಂ ಜೂದೆಂಬ ಜನ್ನಂಗಡಾ

 14. ಸ್ವಲ್ಪ ಹಿಂಚುಮುಂಚಾಗಿ ಪದ್ಯ ಹಾಕ್ತಿದ್ದೀನಿ

  ನೆತ್ತದೊಳ್ ಧರ್ಮರಾಜನ್ ತಾನಿತ್ತಿಗಂ ಬೀಳ್ಚಿದನ್ ಮೊದಲ್
  ಇತ್ತಲ್ ದುರ್ಯೋಧನಂಗಾಟಮೇಳಲ್ಕೆ ಪಂಚಮಂ ಬದಲ್

  ಯುಧಿಷ್ಠಿರನಿಗೆ ಮೊದಲು ಬಿದ್ದ ಗರ ಇತ್ತಿಗ, ಹಾಗೂ ದುರ್ಯೋಧನನಿಗೆ ಐದು ಎಂದು ಕಲ್ಪನೆ. ಇಲ್ಲಿ ಪಗಡೆಯಾಡುವಾಗ ಪ್ರಸಿದ್ಧವಿರುವ ಕೆಲವು ನುಡಿಗಟ್ಟುಗಳಿಂದ ಅರ್ಥಸ್ಪಷ್ಟವಾಗುತ್ತೆ. “ಇತ್ತಿಗಂ ನೆತ್ತನಾಶಾಯ” ಹಾಗು “ಪಂಚಮಂ ಕಾರ್ಯಸಿದ್ಧಿ” ಎಂದು ಹೇಳುವುದು ವಾಡಿಕೆ. ಸೂಚ್ಯವಾಗಿ ಇವರಲ್ಲಿ ಸೋಲುಗೆಲುವುಗಳು ಯಾರಕಡೆಗೆ ಅನ್ನೋದನ್ನ ತಿಳಿಸುವುದು. ಇದಕ್ಕೆ ಪೂರಕವಾಗಿ “ಬೀಳ್” “ಏಳ್” ಪದಗಳೂ ಅನುಗುಣವಾಗಿ ಬಳಸಿದ್ದೀನಿ. “ಬದಲ್” ಹಳಗನ್ನಡದಲ್ಲಿಲ್ಲವಾದರೂ ಪ್ರಾಸ ಮತ್ತು ಅರ್ಥಪೂರಣಕ್ಕಾಗಿ ಉಪಯೋಗಿಸಿದ್ದೀನಿ.

 15. ಚುರುಚುರು ತಿರಿಚುತ್ತೆ ದಾಳಮನ್ ತಿ-
  ರ್ರುರುಟುತೆ ಧರ್ಮಜನೊತ್ತೆಯಿಟ್ಟನಿತ್ತಂ
  ಸುರುಟಿದನುರೆ ಚೋದಿಸುತ್ತೆ ಮತ್ತಂ
  ಕುರುಪತಿ ಮಾವನ ಕೂಡೆ ತಾನನುತ್ತಂ

  ಅನುತ್ತ- ಅಜೇಯ

 16. ನನ್ನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ ಎಲ್ಲ ಗೆಳೆಯರಿಗೆ ಧನ್ಯವಾದ. ವಿಶೇಷತಃ ಪ್ರಸಾದು ಅವರಿಗೆ. ಹಿಂದೊಮ್ಮೆ ಕ.ವೆಂ.ರಾಘವಾಚಾರ್ಯರು ಸೊಪೋಕೇಸನ ’ಅಂತಿಗೊನೆ’ ಯನ್ನು ಹಳಗನ್ನಡಕ್ಕೆ ಅನೂದಿಸಿದಾಗ ಅವರ ಗುರು ಬಿ.ಎಂ.ಶ್ರೀ. ಹೇಳಿದರಂತೆ ” ಇದೇನಪ್ಪ! ಒಂದು ಗ್ರೀಕಿನಿಂದ ಇನ್ನೊಂದು ಗ್ರೀಕಿಗೆ ಭಾಷಾಂತರಿಸಿದ್ದೀರಿ !!” ಎಂದು 🙂 ನನ್ನ ಪಾಡೂ ಇದೇ ತಾನೆ:-)
  ಪ್ರಿಯ ಸೋಮ, ನಾನು ’ವಿಯೋಗಿನಿ’ ಎನ್ನುವ ಅರ್ಧಸಮವೃತ್ತವನ್ನೂ ಸೀಸಪದ್ಯವನ್ನೂ ಬಳಸಿದ್ದೇನೆ. ಚಂದಸ್ಸನ್ನು ಸ್ವಲ್ಪ ಗಮನಿಸಿ ಅರಿಯಲೆಂದೇ ನಾನಾಗಿ ಪದ್ಯಗಳಿಗೆ ವೃತ್ತನಾಮನಿರ್ದೇಶನವನ್ನು ಮಾಡಲಿಲ್ಲ:-)
  ಪ್ರಿಯ ಶೀಕಾಂತ್, ಈ ವೃತ್ತಗಳೆಲ್ಲವನ್ನೂ ನಮ್ಮ ಅಭ್ಯಾಸಪಾಠಗಲಲ್ಲಿ ಕಾಣಬಹುದೇನೋ.. ದಯವಿಟ್ಟು ಗಮನಿಸಿ ನೋಡಿ. ಇಲ್ಲದಿದ್ದಲ್ಲಿ ತಿಳಿಸಿರಿ.

  ಮೂರುದಿನಗಳಿಂದ ಪದ್ಯಪಾನದಲ್ಲಿ ಹೆಚ್ಚಾಗಿ ಜೂಜೇ ಸಾಗಿದೆ:-) ಯಾರಿಗೂ yudhiSThira Syndrome ನಿಂದ ಹೊರಬರಲು ಮನವಿಲ್ಲವೇ? ಹೀಗಾಗಿ ನಾನಿನ್ನು ಕಥೆಯ ಮುಂದುವರಿಕೆಯತ್ತ ಗಮನ ಹರಿಸುವೆ.

  • ಎರಡು ವಾರಗಳವರೆಗೆ ಇದೇ ವಸ್ತು ಅಲ್ಲವೆ. ಅದಕ್ಕೆ ನಿಧಾನವಾಗಿ ಸಾಗಲಿ ಅಂತ ಸುಮ್ಮನಿದ್ದೆ. ಇತರರೂ ಹಾಗೆಯೇ ಯೋಚಿಸಿರಬಹುದು. ಅಲ್ಲದೆ ಇನ್ನೂ ಎಷ್ಟೋ ಭಾವಭಾವನೆಗಳು ಸ್ಫುರಿಸಬಹುದು ನೆತ್ತದವೇಳೆಯಲ್ಲಿಯೇ ಅನ್ಸಿತ್ತು.

   ವಿಯೋಗಿನಿ ಛಂದಸ್ಸು ಕರುಣಾರಸಕ್ಕೆ ವಿಶಿಷ್ಟ ಅಲ್ಲವೆ? ಈ ಅರ್ಧಸಮವೃತ್ತವನ್ನೂ ಪುಷ್ಪಿತಾಗ್ರದಂತೆಯೆ ಸೃಜಿಸಿದೆ. ಸಮಪಾದಗಳಲ್ಲಿ ವಿಷಮಪಾದಕ್ಕಿಂತ ಒಂದು ಗುರು ಹೆಚ್ಚು-ಮದ್ಯದಲ್ಲಿ ಸೇರಿಸಿರೋದು.

 17. ಮೀನಯಂತ್ರವಿಭೇದನದೆ ಹೊ-
  ಮ್ಮೀನಿನಂದದೆ ನುಣ್ಚುತುಂ ಸು-
  ಮ್ಮಾನದಿಂ ಮಯಸಭೆಯೊಳೊಯ್ಯನೆ ಗೇಲಿನಗೆನಗುತುಂ |
  ಹೀನತೆಯನಾಪಾದಿಸಿದ ಮತಿ-
  ಹೀನೆಯಂ ಬಹುಪುರುಷಮೋಹಾ-
  ಹ್ವಾನೆಯಂ ನಾಣ್ಗೆಗೆಡಿಪೆನೆನುತುಂ ಕೌರವಂ ನಲಿದಂ ||

  (ವಿ.ಸೂ. ಮೂಲಮಹಾಭಾರತದ ಪ್ರಕಾರ ಮಯಸಭೆಯ ಪ್ರಕರಣದಲ್ಲಿ ದ್ರೌಪದಿಯು ಇರುವುದೇ ಇಲ್ಲ. ಅಲ್ಲಿ ನಕ್ಕದ್ದು ದಾಸಿಯರು ಮಾತ್ರ. ಇಲ್ಲಿ ಕೇವಲ ಕೌರವನ ಸೇಡಿನ ಹೆಚ್ಚಳಕ್ಕಾಗಿ ದ್ರೌಪದಿಯ ಪ್ರಸ್ತಾವ ಬಂದಿದೆ)

  ಅಟ್ಟಿದಂ ಸತಿಯ ಮಂದಿರದತ್ತಲ್
  ಕೆಟ್ಟಿರಲ್ ಮತಿ ಕುತಂತ್ರಿ ದೂತನಂ |
  ತಟ್ಟಿದಂ ಯಮನ ಬಾಗಿಲಂ, ನಲಂ
  ಮುಟ್ಟಿರಲ್ ನೆಲಕೆ ಧಾರ್ತರಾಷ್ಟ್ರರಾ ||

  “ಪೋ! ಪೋಗಯ್ !! ಕರೆಯಿಸಯೋನಿಜಾತೆಯಂ ನೀಂ !
  ಭೂಪಾಲಂ ನಿಜಗೃಹದಾಸಿಯಂ ನಿರೀಕ್ಷಿ –
  ಪ್ಪೀ ಪಾಡೇಂ ! ಜವೆದೆ ಬರಲ್ಕೆವೇಳ್ ! ನಿಜೇಶರ್
  ವ್ಯಾಪನ್ನರ್ ; ಕುರುಪತಿಯೊರ್ವನಿರ್ಪನಿನ್ನೆನ್ || ”

  ಪ್ರಾತಿಗಾಮಿಕನಳ್ಕುತ್ತುಂ ಶುದ್ಧಾಂತಸ್ಥಿತಶುದ್ಧೆಯಂ |
  ಬೀತ ಮಾತಿಂದೆ ತಾನೆಂದಂ ರಾಜಾಜ್ಞಾರಜ್ಜುಜರ್ಜರಂ ||

  ತಾಯೆ! ಸೋಲ್ತಂ ಧರಾಧೀಶಂ ಮತಿ ಸೋಲ್ತಿರೆ ಮುನ್ನಮೇ |
  ಶ್ರೀಯಂ, ತನ್ನಂ, ಗೃಹಶ್ರೀಯಂ ನಿನ್ನಂ; ಇನ್ನೇನನೆಂಬುದೋ ?

  ದಿಕ್ಕೆಟ್ಟು ಪೋಪ ಪಾಂಗಿಂ
  ಸುಕ್ಕಿರ್ದಂ ಯಮಜನೊಡ್ಡಿ ನಿಜಸಹಭವರಂ |
  ಪೊಕ್ಕುಡಿಯೆ ವಿಧಿ, ವಧುವನೇ
  ಅಕ್ಕಜದಿಂದೊಡ್ದಿ ಕಾಲಮನೆ ಕಿಡಿಸಿರ್ದಂ ||

  ಬರವೇಳ್ಕುಂ ಸಭೆಗೀಗಳೆಂದು ನುಡಿದಂ ಚಂದ್ರಾನ್ವವಾಯಾಂಬುಧಿ-
  ಸ್ಫುರದರ್ಕಂ ಶತಸೋದರಾಗ್ರಣಿ ನಿಜೇಶಂ ನಿಮ್ಮನೀಗಳ್ ಜವಂ |
  ಮೆರೆವದಂ ದಯಮಾಡವೇಳ್ಕುಮಿದೊ ತಾಯ್ ! ನಾಮ್ ದಾಸರಿನ್ನೇನನುಂ
  ಮೆರಸಲ್ಕಾಗದು ಮಾತಿನೊಳ್ ; ದೊರೆಗಳೊಳ್ ವಾಙ್ಮೂಕರೀ ಸೇವಕರ್ ||

  • Beautiful! This is real poetry.
   Applause for many phrases and words. In particular, ರಾಜಾಜ್ಞಾರಜ್ಜುಜರ್ಜರಂ, ಚಂದ್ರಾನ್ವವಾಯಾಂಬುಧಿ-ಸ್ಫುರದರ್ಕಂ, ಬಹುಪುರುಷಮೋಹಾಹ್ವಾನೆಯಂ.
   {clap} {clap} #respect

 18. ದ್ಯೂತಕ್ಕೊಡ್ಡಿರ್ದನಿತ್ತನ್ ತೊಡೆದನುಜರುಮನ್ ತೊಟ್ಟು ಕೈಬಿಟ್ಟು ಮತ್ತಂ
  ಸೋತನ್ ತನ್ನಂತೆ ನಿಮ್ಮನ್ ಸುದತಿ! ಅರಮಗನ್ ಸೋಲಮನ್ ತಾರೆನುತ್ತಂ
  ದಾತನ್ ದುರ್ಯೋಧನನ್ ತಾನ್ ಧರೆಗೆ ದೊರೆಯವನ್ ತಪ್ಪದಂತಾಣೆಯಿತ್ತಂ
  ದೂತನ್ ಕೈಗುಂಬುತೆಂದನ್ ದ್ರುಪದಸುತೆಗೆ ತಾನ್ ತೋಡು ಬರ್ಕಮ್ಮ ಚಿತ್ತಂ ||

 19. ಮಾತನ್ ಕೇಳ್ದಾಕೆ ತನ್ನೊಳ್ ಮಥಿಸಿ ಮರುಚಣಂ ಮಾಣುತಾಕ್ರೋಶಮಂ ತಾಂ
  ದೂತಂಗಿಂತೆಂದು ಪೇಳ್ದಳ್ ದೊರೆಪಿರಿಯರಿರಲ್ ತೋಕೆಯೆನ್ನನ್ ಧವನ್ ತಾಂ
  ದ್ಯೂತಕ್ಕೇಗೊಡ್ಡಿ ಸೋತನ್? ತುದಿಗೆ ಮೊದಲೊ ಮೇಣ್ ತೊಳ್ತು ತಾನಾದ ಮೇಲೋ
  ತಾತನ್ ಮುತ್ತರ್ಗಳೀವುತ್ತರಮನೆಮಗೆ ನೀಂ ತಂದುಪೇಳ್ ಪೋಗಿಬಾರಯ್ ||

  ತೋಕೆ- ನೀರೆ, ಸುಂದರಿ

  • ಪ್ರಿಯ ಶ್ರೀಕಾಂತ್, ಒಳ್ಳೆಯ ಸ್ರಗ್ಧರಾವೃತ್ತದಿಂದ ಹೊಸ ಪ್ರಕರಣವನ್ನು ಆರಂಭಿಸಿದ್ದೀರಿ; ಭಲೇ! ಅಲ್ಲದೆ ಚೊಕ್ಕವಾಗಿ ಯತಿಸ್ಥಾನಗಳನ್ನೂ ಪಾಲಿಸಿದ್ದೀರಿ!! ಆದರೆ ನ್ ಎಂಬ ಅರ್ಧಾಕ್ಷರಗಳನ್ನು ಬಿಂದು(೦)ಗಳನ್ನಾಗಿಸಿದರೆ ಪಾಠ್ಯ-ಗೇಯ ಸಂದರ್ಭಗಳಿಗೆ ಮತ್ತೂ ಹಿತವಲ್ಲವೇ?

   ಇದೇಕೆ, ರಾಮಚಂದ್ರ, ಚಂದ್ರಮೌಳಿ, ಸೋಮ, ಪ್ರಸಾದು, ರಾಜಗೋಪಾಲ್, ಉಷಾ ಮುಂತಾದ prolific people ಅಷ್ಟಾಗಿ ಪಾಲ್ಗೊಳ್ಳುತ್ತಿಲ್ಲ? ಇನ್ನೂ ರಂಗಕ್ಕೆ ಬರದ ಭೀಮಾರ್ಜುನರಂತೆ, ಭೀಷ್ಮ-ದ್ರೋಣರಂತೆ ಸುಮ್ಮನಿದ್ದಾರೆ!!

   ಪದ್ಯಪಾನವೆಂಬ ಪಾಂಚಾಲಿ ಕೂರ್ಮೆಯಿಂ
   ಪದ್ಯವಸ್ತ್ರವಾಂಛೆಯಿಂದೆ ನಿಮ್ಮಂ |
   ವಿದ್ಯೆಗಿರ್ಕೆ ಮಾನಮೆಂದು ಬೇಡುತ್ತಿರಲ್
   ಸದ್ಯದೊಳ್ ಗಡೆಂತು ಮೌನಮಿಂತು?

   • ನಕಾರವು ಮಕಾರದಷ್ಟೆ ಸುಭಗವಾದ ಅನುನಾಸಿಕವಲ್ಲವೆ.

    ಅಂದ ಹಾಗೆ, ನಿಯಮಾನುಸಾರ ನಕಾರದ ಎಡೆಯಲ್ಲಿ ಮಕಾರ ಕೇವಲ ಪಾದಾಂತ್ಯದಲ್ಲಿ ಬರುವ ಸೌಕರ್ಯವಿದೆಯಷ್ಟೆ. ಕವಿಗಳು ಇದನ್ನು ಸಾಕಷ್ಟು ಉಲ್ಲಂಘಿಸಿದ್ದರೂ ನಿಯಮ ಹಾಗೆ ಅಲ್ಲವೆ. ಅಥವಾ ನಾನೆ ತಪ್ಪು ತಿಳಿದಿದ್ದೇನೆಯೆ

    • ಇಲ್ಲ, ಮಕಾರವೇ ಹೆಚ್ಚು ಹಿತಕಾರಿ. ಏಕೆಂದರೆ ಅದು ಓಷ್ಠ್ಯವರ್ಣ. ಬಾಯ್ದುಂಬುವಂತೆ ಉಚ್ಚಾರಣೆಯಿರುತ್ತದೆ. ಜೊತೆಗೆ ತುಂಬ ಸರಳವಾದ ತಾಳೆಯೆಂದರೆ ಒಮ್ಮೆ ಸುಮ್ಮನೆ ಈ ವರೆಗೆ ಅಚ್ಚಾಗಿರುವ ಯಾವುದೇ ಹಳಗನ್ನಡದ ಪುಸ್ತಕಕಗಳನ್ನು ಕಂಡಾರೂ ಸಾಕು, ಅಲ್ಲಿ ಬಿಂದುವೇ ಮಿಗಿಲಾಗಿರುವುದು ಸುವೇದ್ಯ.

     • ನಕಾರಮಕಾರಗಳ ಹೋಲಿಕೆಯನ್ನು ನಾನು ಇಲ್ಲಿ ಬೆಳೆಸೋದಿಲ್ಲ. ಹಳಗನ್ನಡದ ಪುಸ್ತಕಗಳಲ್ಲಿ ಮಕಾರದಪ್ರಾಧಾನ್ಯ ಇರುವುದು ನಿಜ. ಇವುಗಳಲ್ಲಿ ಎಷ್ಟ್ರ ಮಟ್ಟಿಗೆ ಅಚ್ಚುಗಾರ ಮತ್ತು ಲಿಪಿಕಾರರ ಕೈವಾಡವಿದೆಯೊ. ಅದಿರಲಿ- ಮೂಲತಃ ಪಾದಾಂತ್ಯದಲ್ಲಿ ಮಾತ್ರ ನಕಾರಕ್ಕೆ ಪರ್ಯಾಯವಗಿ ಮಕಾರ ಬರಬಹುದೆಂಬ ನಿಯಮವಿತ್ತೆಂಬ ನನ್ನ ತಿಳಿವಳಿಕೆ ಸರಿಯೆ?

   • ಗಣೇಶ್ ಸರ್,

    ಈ ಬಾರಿ ಪದ್ಯರಚನೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ, ಎರೆಡು-ಮೂರು ಮುಖ್ಯವಾದ ಕೆಲಸಗಳಲ್ಲಿ ಸಿಕ್ಕಿಹಾಕಿಕೊಂಡೆ. ಮುಂದಿನ ಸಪ್ತಾಹದಿಂದ ಮತ್ತೆ ಸಕ್ರಿಯವಾಗುತ್ತೇನೆ.

 20. ಸ್ವಾರ್ಥಿಯೊಡ್ಡೋಲಗದ ಮಧ್ಯದಿ
  ಆರ್ತಿಸುವ ದ್ರೌಪದಿಯ ಕಾವದೆ
  ವ್ಯರ್ಥಮಾಯಿತೆ ಕುರುಕುಲೋನ್ನತ ಭೀಷ್ಮ ಪೌರುಷವು ||
  ಪಾರ್ಥಸಾರಥಿ; ಸರ್ವಕಾರಣ
  ಕರ್ತ ನೀರೆಯ ಮೊರೆಯ ಕೇಳಿಯ
  ನರ್ಥ ತಡೆದಿರೆ ಸರ್ಪಕೇತನನನುಜ ಮುಳಿದಿಹನು ||

  ಮೊದಲನೇ ಪಾದದ ಅಂತ್ಯ ಹಾಗೂ ಎರಡನೇ ಪಾದದ ಮೊದಲಲ್ಲಿ ವಿಸಂಧಿ ದೋಷವಾಗಿದೆ.. ( ಭಾವದ ಕೊರತೆಯಂತೂ ಇದ್ದೇ ಇದೆ.). ಮತ್ತೂ ಕಾಣಿಸ ಬಹುದಾದ ತಪ್ಪುಗಳನ್ನು ದಯವಿಟ್ಟು ತಿಳಿಸಿ.
  ಪದ್ಯದಲ್ಲಿ ಪಾರ್ಥ ಸಾರಥಿಯೆಂಬ ಪದ ಬಳಕೆ ಮಾಡಿದ್ದೇನೆ. ದ್ರೌಪದಿ ವಸ್ತ್ರಾಪಹರಣ ಸಂಗತಿ ನೆಡೆದಾದ ಮೇಲಷ್ಟೇ ಕೃಷ್ಣ ಅರ್ಜುನನನಿಗೆ ಸಾರಥಿಯಾಗಿದ್ದು. ಈ ಘಟನೆಯನ್ನು ವಿವರಿಸುವಾಗ ‘ಪಾರ್ಥ ಸಾರಥಿ’ ಎಂಬ ಪದ ಬಳಕೆ ಮಾಡಬಹುದೇ..?

  ಮತ್ತಷ್ಟು ತಪ್ಪುಗಳೊಂದಿಗೆ ತಮ್ಮ ವಿಶ್ವಾಸಿ

 21. ಸೋತ ಮುಖವಂ ತೋರುತಿರ್ತಲೆ
  ದೂತನಾಗಮಿಸಿದನು ಸಭೆಯಲಿ
  ನಾಥನಾಬಳಿ ಪೋಗಿ ಪೇಳ್ದನು ಅರಸಿ ಬಿನ್ನಹವ|
  ಸೋತಿರಲ್ ತನ್ನನ್ನೆ ಧರ್ಮಜ
  ದ್ಯೂತದೋಳ್ ತನ್ನನ್ನುನೊಡ್ಡಲಿ-
  -ಗೀತಗಧಿಕಾರವದುದೆಲ್ಲಿಯಳೆಂದಳಿಂದುಮುಖಿ||

  ಕೆಲವು ಸಂದೇಹಗಳಿವೆ:
  ೧) ಪ್ರಾಸಕ್ಕೆ “ತ” ಹಾಗೂ “ಥ” ಬಳಸಬಹುದೇ?
  ೨) ೩ ಸಾಲಿನಲ್ಲಿ “ಪೇಳ್ದನುನರಸಿ ಬಿನ್ನಹವ” ಎಂದು ಬರೆಯಬೇಕೆ? ಅಥವ ಅದು ವಿಸಂಧಿ ದೋಷವಾಗದೇ ಇರುವುದೇ?
  ೩) ಕೊನೆಯ ಸಾಲಿನಲ್ಲಿ “ಇಂದುಮುಖಿ” ಎಂದು ಬರೆಯಬಹುದೆ ಅಥವಾ ಅದು ದೂತ ವರದಿ ಕೊಡುತ್ತಿರುವ ಕಾರಣ ಹಾಗೆ ಬರೆಯ ಕೂಡದೆ?

  • ಇಲ್ಲ, ಅಲ್ಪಪ್ರಾಣಾಕ್ಷರಕ್ಕೆ ಮಹಾಪ್ರಾಣಾಕ್ಷರವನ್ನು ಪ್ರಾಸವಾಗಿ ಬಳಸುವುದು ಹಿತವಲ್ಲ.
   ಪ್ರಾಸದ ಬಗೆಗೆ ಸಾಕಷ್ಟು ಚರ್ಚೆಗಳಾಗಿವೆ. ಇವುಗಳ ಮಥಿತಾರ್ಥವೇನೇ ಇರಲಿ, ಅಭ್ಯಾಸಿಗಳ ಹಂತದಲ್ಲಂತೂ ಎಲ್ಲ ನಿಯಮಗಳನ್ನೂ ಚೆನ್ನಾಗಿ ಪಾಲಿಸಲು ಸರ್ವಥಾ ಯತ್ನಿಸೋಣ:-) ಇನ್ನು ನೀವೇ ಗಮನಿಸಿದಂತೆ ಅರಸಿ ಬಿನ್ನಹ ಎಂಬಲ್ಲಿ ಸಂಧಿಯಾಗಬೇಕು. ಹಾಗಾದರೆ ಛಂದಸ್ಸು ಕೆಡುತ್ತದೆ. ಆದುದರಿಂದ ಎಲ್ಲವನ್ನೂ ತಿದ್ದಬೇಕಷ್ಟೆ:-) ನೀವು ಸಮರ್ಥರು, ಮಿಗಿಲಾಗಿ ಉತ್ಸಾಹಿಗಳು. ಹೀಗಾಗಿ ಎಲ್ಲವೂ ಸಾಧ್ಯ. ಯತ್ನಿಸಿ ಗೆಲ್ಲಿರಿ. ಇಂದುಮುಖಿ ಎಂದಲ್ಲಿ ಅನೌಚಿತ್ಯವಾದೀತು. ಹೀಗಾಗಿ ಬದಲಾಯಿಸಿರಿ. ಅಲ್ಲದೆ ತನ್ನನ್ನುನೊಡ್ದಲಿ…ಎಂಬುದು ಅಸಾಧುರೂಪ. ತನ್ನನ್ನೊಡ್ಡಲಿ ಎಂದಾಗಬೇಕು. ಹಾಗೆಯೇ ಅಧಿಕಾರವದುದೆಲ್ಲಿ….ಎಂಬುದೂ ಅಧಿಕಾರವದೆಲ್ಲಿ ಎಂದಾಗಬೇಕು. ಉಭಯತ್ರ ಛಂದಸ್ಸು ಲೋಪಿಸುತ್ತದೆ. ದಯವಿಟ್ಟು ತಿದ್ದಿ ಬರೆಯಿರಿ:-)

   • ಧನ್ಯವಾದಗಳು ಗಣೇಶ್ ಸರ್. ಸಾಕಷ್ಟು ತಪ್ಪು ಮಾಡಿದ್ದೇನೆ. ಕ್ಷಮಿಸಿ. ಪುನಃ ತಿದ್ದಿ ಬರೆಯುತ್ತೇನೆ.

   • ಪದ್ಯವನ್ನು ಸವರಿಸುತ್ತ ಸ್ವಲ್ಪ ಬೇರೇ ಪದ್ಯವನ್ನೇ ಬರೆದಂತಾಯಿತು. ನನ್ನ ಪದ್ಯದಿಂದ ಕಥೆ ಸ್ವಲ್ಪ ಶೀಘ್ರವಾಗಿದ್ದಲ್ಲಿ ಕ್ಷಮಿಸಿ. ತಪ್ಪಿದ್ದಲ್ಲಿ ದಯವಿಟ್ಟು ಹೇಳಿ.

    ಸೋತ ಮುಖವಂ ತೋರುತಿರ್ತಲೆ
    ದೂತ ಸಭೆಯೊಳ್ ಬಂದು ಕೌರವ
    ದಾತಗೆ ನಮಿಸಿ ಪೇಳ್ದನಾ ದ್ರೌಪದಿಯ ಬಿನ್ನಹವ||
    ಮಾತು ಕೇಳ್ದೊಡೆ ಕೌರವಂ ಸಂ-
    ಪ್ರೀತಿಯಾ ಸೋದರನ ಕಳುಹಿದ
    ಸೋತ ಧರ್ಮಜಸತಿಯ ತಾ ನೀನಿಲ್ಲಿಗಂತೆಂದ||

    • ಕೆಲವೊಂದು ತಿದ್ದುಪಡಿ:
     ದಾತಗೆ ನಮಿಸಿ ಪೇಳ್ದನಾ………..
     ದಾತಗೆ+ವಂದಿಸಿ ಎಂಬುದು ದಾತಗೊಂದಿಸಿ ಎಂದು ಸಂಧಿಯಾಗದು. ಅದು ಹಾಗೆಯೇ ಉಳಿಯುತ್ತದೆ. ಆದರೆ ಆಗ ಛಂದಸ್ಸು ಕೆಡುವುದು. ಇದಕ್ಕಾಗಿ ಈ ಮಾರ್ಪಾಡು.
     ಪೇಳ್ದನಂ ತಪ್ಪಾದ ರೂಪ. ಪೇಳ್ದಂ ಎಂದು ಹಳಗನ್ನಡವಾದರೂ ಆಗಬೇಕು ಅಥವಾ ಪೇ(ಹೇ)ಳಿದಂ/ಪೇಳ್ದನು ಎಂದು ನಡುಗನ್ನಡವಾದರೂ ಆಗಬೇಕು. ಹೇಳಿದನು ಎಂಬ ಹೊಸಗನ್ನದವೂ ಆದೀತು.ಆದರೆ ಇದು ಸದ್ಯದ ಪದ್ಯದಲ್ಲಿ ಛಂದಸ್ಸನ್ನು ಎಡವಿಸುತ್ತದೆ. ಹೀಗಾಗಿ ನನಗೆ ತೋರಿದ ಮಾರ್ಪಾಡು ಮಾಡಿದ್ದೇನೆ.

     • ಧನ್ಯವಾದಗಳು ಗಣೇಶ್ ಸರ್. ಪದ್ಯದಲ್ಲಿ ನೀವು ಹೇಳಿದಂತೆ ತಿದ್ದಿದ್ದೇನೆ.

 22. ಈ ಮಾತನ್ ಕೇಳಿದಾ ದೂತನೆತ್ತಿ ಕೈ ಮುಗಿಯುತ್ತೆ ತಾನ್
  ಕೋಮಳಾಂಗಿಯನಾಗಳ್ಬೀಳ್ಕೊಂಡೋಲಗಮನೈದಿದಂ ||

  • ಮೂರನೆಯ ಸಾಲಿನಲ್ಲಿ ಶ್ಲೋಕಚ್ಛಂದಸ್ಸಿನ ದಿಟವಾದ ಗತಿಸುಭಗತೆ ತಪ್ಪಿದೆ. ದಯಮಾಡಿ ಸಂಸ್ಕೃತದ ಛಂದಃಪಾಠಗಳ ವಿಡಿಯೋ ಗಮನಿಸಿರಿ. ನಿಮ್ಮ ಪದ್ಯವು ಶ್ಲೋಕದ ಅಪರ್ಯಾಪ್ತಲಕ್ಷಣವಾದ “ಪಂಚಮಂ ಲಘು……”ಇತ್ಯಾದಿ ವಾಕ್ಯವನ್ನು ಅನುಸರಿಸಿದೆ. ಆದರೆ ಇದು ಅದರ ಪೂರ್ಣಗತಿನಿರ್ದೇಶಕವಾಗಿಲ್ಲ. ಈ ಬಗೆಗೆ ವಿಸ್ತರಿಸಿ ವಿವರಿಸಲು ಮುಖತಃ ಮಾತ್ರ ಸಾಧ್ಯ.

   • ಗಣೇಶರೆ. ನಿಮ್ಮ ಆ ಒಂದು ವಿಡಿಯೊ ನಾನು ನೋಡಿದ್ದೀನಲ್ಲ. ಪೂರ್ವಾರ್ಧದಲ್ಲಿ ಎರಡೇ ಲಘುಗಳನ್ನು ಮಾತ್ರ ಒಟ್ಟು ಹಾಕಿದ್ದೇನೆ. ನಂತರ ಒಂದು ಗುರು ಕೂಡ ಬಂದಿದೆಯಲ್ಲ. ಇನ್ನೆಲ್ಲಿಂದ ತಪ್ಪಿದೆ?

    • ದಿಟವೇ, ಆದರೆ ಅದು’ಭಗಣ’ದಂತೆ ಬರಬಾರದು. ಅಂದರೆ ಹೀಗೊಂದು ಮಾದರಿ:
     ವಿಮಲಾತ್ಮರ ಸೌಹಾರ್ದಂ ಮಮತಾರ್ತಿಯನಾವಗಂ |
     ದಮಿಕುಂ ಸಜ್ಜನರ್ ಸಲ್ವರ್ ಕ್ರಮಕ್ಕೆಂದುಮಿದರ್ಕೆ ದಲ್ ||ದಯಮಾಡಿ ಬಾಣಭಟ್ಟನ ಹರ್ಷಚರಿತದ ಮೊದಲ ಕೆಲವು ಶ್ಲೋಕಗಳನ್ನು ನಿಮ್ಮೊಳಗೇ ಗಟ್ಟಿಯಾಗಿ ಓದಿಕೊಳ್ಳಿ. ಅಥವಾ ಗಂಗಾದೇವಿಯ ಮಧುರಾವಿಜಯದ್ದಾದರೂ ಸರಿ.

     • ಸ್ಪಷ್ಟವಾಯಿತು. ತಿದ್ದಿದ್ದೀನಿ

 23. ನನಗೆ ಕಥೆ ಬೆಳೆಸುವಷ್ಟು ಶಕ್ತಿಯಿಲ್ಲ. ಆದರೂ participate ಮಾಡಬೇಕೆಂಬ ಇಚ್ಛೆಯಿಂದ ’ಚಿತ್ರಕ್ಕೆ ಪದ್ಯ’ದ ರೀತಿಯಲ್ಲಿ ನನ್ನ ಪದ್ಯವನ್ನು ಕೊಡುತ್ತಿದ್ದೇನೆ.

  ನಾನಾರ್ತಿ-ಪಾಪ-ವೃತ-ನೂತನ-ಲೋಕ-ಕೃಷ್ಟಾ
  ಸಾಯೋನಿಜಾಪ್ಯಲಘು-ರೋದನ-ಮಾತ್ರ-ಶಕ್ತಾ |
  ದೈವಾದನಂತ-ವಸನಾಕೃತಿ-ನಾಭಿನಾಲಾ
  ಪ್ರಾಪ್ತೇವ ತತ್ರ ನವ-ಜನ್ಮ ರರಾಜ ಕೃಷ್ಣಾ ||

  ಆಗತಾನೇ ಹುಟ್ಟಿದ ಮಗುವು ಪಾಪ, ಕಷ್ಟಗಳಿಂದ ತುಂಬಿದ ಪ್ರಪಂಚಕ್ಕೆ ದಬ್ಬಲ್ಪಟ್ಟು ಅಳುತ್ತಿರುತ್ತದೆ. ಹೊಕ್ಕಳು ಬಳ್ಳಿ ಇನ್ನೂ attach ಆಗಿರುತ್ತದೆ. ಹಾಗೆಯೇ ಕೃಷ್ಣೆಯು ಪಾಪ, ದುರ್ಬುದ್ಧಿಗಳಿಂದ ತುಂಬಿದ ಸಭೆಗೆ ಎಳೆದೊಯ್ಯಲ್ಪಟ್ಟಿದ್ದಾಳೆ. ಆಳುತ್ತಿದ್ದಾಳೆ. (ದ್ರೌಪದೀ ಅಯೋನಿಜೆಯಾದ್ದರಿಂದ ಅವಳಿಗೆ ಹೊಕ್ಕಳು ಇದ್ದಿರಲಾರದು :-)) ಆದರೂ ತನ್ನ ಸೊಂಟದಿಂದ ಆಂತರಿಕ್ಷದಲ್ಲಿದ್ದ ಕೃಷ್ಣನವರೆಗೆ ಇದ್ದ ಅಕ್ಷಯವಸನವು ಅವಳಿಗೆ ಹೊಕ್ಕಳುಬಳ್ಳಿಯಂತೆ ಕಾಣಿಸುತ್ತಿತ್ತು. (ದೇವರು ಎಲ್ಲರಿಗೂ ತಾಯಿಯಂತೆಯೂ ಅಲ್ಲವೇ!) ಮಾನ ಉಳಿದಿದ್ದರಿಂದ ಅವಳಿಗೆ ಪುನರ್ಜನ್ಮವೇ ಆಯಿತು ಎಂದು ಭಾವ.

  Please feel free to suggest corrections/improvements.

  • super sir…really wonderful imagination backed by erudition…thanks.

  • ಶ್ರೀ ಸುಧೀರ್,
   ಚೀರ-ನಾಭಿನಾಳ ಹಾಗೂ ಸಹಜ-ನಾಭಿನಾಳಗಳ ಪರಸ್ಪರ ಉದ್ದಗಳಿಂದ ಸ್ಪಷ್ಟವಾಗುವುದೇನೆಂದರೆ, ತಾಯಿಗಿಂತ ದೇವರು ದೂರ ಎಂಬುದು.
   मातुरप्यतिदूरं स्यात्
   देव इत्यूह्यते मया।
   दैर्घ्यभेदादिदं स्पष्ट-
   मुभयोर्नाभिनालयोः॥

 24. ಅತ್ಯುತ್ತಮಂ ಕವಯತೇ ಸತತಂ ಸುಧೀರಃ
  ಪ್ರತ್ಯಗ್ರಸುಂದರಮಿದಂ ವಚಸಾಂ ವಧೂಟ್ಯಾಃ |
  ನಾಥಸ್ಯ ಪೀಠಕಮಲೋದರಸಂಭೃತಾಚ್ಛಂ
  ಪೀತ್ವಾ ಮಧು ಪ್ರಣಯತೀಹ ಭವಾನಭೌಮಮ್ ||

  • ಗಣೇಶರಿಗೆ ನಮಸ್ಕಾರ. ಅದೊಂದು brand-ಅನ್ನು taste ಮಾಡಿರಲಿಲ್ಲ. ನಿಮ್ಮ ದಯೆಯಿಂದ ಅದೂ ನೋಡಿದ್ದಾಯಿತು. ಪದ್ಯಪಾನಿಗಳ ಜೊತೆ ಮಧುಪಾನ ಮಾಡುವವರನ್ನೂ ಸೇರಿಸಿಕೊಂಡಿದ್ದೀರಿ. ಧನ್ಯೋಸ್ಮಿ.

  • ಈ ಕಥೆಯ ಆರಂಭದಲ್ಲಿ ಅಥವಾ ಅದಕ್ಕೂ ಮುಂಚೆ ಸೇರಿಸಬಹುದಾದ ಶ್ಲೋಕ.

   ಅಂಬಿಕಾತನಯದತ್ತಾಶೀಶ್ಶಕುನಿರ್ಭೂಪತಿಪ್ರಿಯಃ |
   ಅಂಬಿಕಾತನಯದತ್ತಾರ್ಘಃ ಪ್ರೇರಯಾಮಾಸ ಪಾಶಕೌ ||

   ಅಂಬಿಕೆಯ ಮಗನಾದ ಧೃತರಾಷ್ಟ್ರನ ಅನುಮೋದನೆಯನ್ನು ಪಡೆದು, ದುರ್ಯೋಧನ-ಪ್ರಿಯನಾದ ಶಕುನಿಯು, ಅಂಬಿಕೆಯ ಮಗನಾದ ಗಣೇಶನನ್ನು (ಮನಸ್ಸಿನಲ್ಲಿಯೇ ಧ್ಯಾನಿಸಿ) ಪೂಜಿಸಿ, ದಾಳಗಳನ್ನು (ಸರಿಯಾದ ಗರಗಳು ಬೀಳುವಂತೆ) ಪ್ರೇರೇಪಿಸಿದನು. (ಪಾಶಕಃ = ದಾಳ)
   (ದತ್ತ ಪದವನ್ನು ಕನ್ನಡ ಪದ್ಯದಲ್ಲಿ ತರಲು ಕಷ್ಟವೆನಿಸಿ ಸಂಸ್ಕೃತದಲ್ಲಿ ಬರೆದೆ.)

 25. ನೊಂದಿಹಳು ಪಾಂಚಾಲಿ ತಾನೆದೆ
  ಗುಂದಿಹಳು ಬೆಂದಿಹಳು ಧರ್ಮಜ
  ನಿಂತು ಪಣಕಿಟ್ಟವಳ ಸೋತುದನರಿತು ಚಣದಲಿತಾ |
  ನಂದು ಮಿಂದಿರಲವಳ ನಾಗಲೆ
  ಬಂದು ನೀ ಬಾರೆಂದು ಪೀಡಿಸಿ
  ಮುಂದಲೆಯ ಹಿಡಿದೆಳೆದು ಮೈದುನ ಸಭೆಗೆ ಕರೆತರಲು ||

  ಹೆದರಿ ಕಂಗಾಲಾಗಲಂಗನೆ
  ಮುದುರಿ ತಾ ಸೀರೆ ಬಿಗಿಹಿಡಿದಿರ
  ಲೆದುರು ಕಂಡಿರೆ ಕುಲದ ಹಿರಿಯರ ಕೇಳೆ ಮರುಕದಲೆ |
  ಅದುರಿರಲವಳ ತುಟಿನಡುಗಿರ
  ಲುದುರೆ ಕಂಬನಿ ಕಾಣದಾರನು
  ಹದುಳದಿಂದಲೆ ತನ್ನನಾಲಿಸಿ ಹರಸೆ ಮನಕರಗೆ ||

 26. ಇಟ್ಟನ್ ತಾನೇತಕೆನ್ನನ್ ಹಿಡಮುಡುಗಿದನೇನ್ ಹೀನಕಾರ್ಯಕ್ಕೊಡನ್ ತಾಂ
  ಪಟ್ಟಿರ್ದಾ ನಾಲ್ವರಿನ್ನೇನ್ ಬಳೆವಡೆದಪರೇನ್ ಬಾಯುಮನ್ ಕೆಟ್ಟರೆಂತಾಂ
  ತಿಟ್ಟೆನ್ ಬೇರಾರುಮನ್ ಛಿಃ ತಿಳಿಯದಲಿವರನ್ ಧೀರರೆಂದೆಣ್ಣಿ ಕಳ್ತಂ
  ಕೊಟ್ಟೆನ್ ಕೊಯ್ಯಲ್ಕೆ ಹಯ್ಯೋ ಕುದಿವುದು ರುಧಿರಂ ಕೊಳ್ವರಾರ್ ಬೊಮ್ಮನೆಳ್ತಂ

 27. ಇಷ್ಟದೈವರ ಮುಷ್ಟಿ ಬಿಗಿದಿರೆ
  ದುಷ್ಟ ನಾಲ್ವರ ದೃಷ್ಟಿ ಕೆಟ್ಟಿರೆ
  ಶಿಷ್ಟರೆಲ್ಲರು ಪುಷ್ಟಿ ಕೊಟ್ಟಿರೆ ಧರ್ಮಸೂಕ್ಷ್ಮದೆ ಸಂ
  ಕಷ್ಟ ಕಾಲದೆ ಪೇಳ್ವೆ ಕೇಳು ಬ
  ಹಿಷ್ಠೆಗಿಲ್ಲವಿವಸ್ತ್ರ ಶಾಪ ವಿ
  ಶಿಷ್ಟವಲ್ಲವೆ ಸೃಷ್ಟಿ ನಿಯಮದದೃಷ್ಟ ದಾಟದೊಳು ॥

  (ಧರ್ಮ ಸೂಕ್ಷ್ಮತೆಯ ಸಂದಿಗ್ಧದಲ್ಲಿ “ಕಾಲ”ನ ಮಾತುಗಳು)

 28. पाण्डुपुत्रवधूव्रीडावस्त्रसीवनसूचये ।
  नमोऽस्त्वदीर्घसूत्रायै दयायै दनुजद्विषः ॥१॥
  पुरा द्यूतसभा काचिद्बभूव कुरुमण्डले ।
  कानीनः कविरेको यां वर्णयेदजुगुप्सितः ॥२॥
  यत्र धर्मविचाराणां पातोऽक्षाणामिवाभवत् ।
  शारीणामिव बुद्धीनां भ्रमोप्यासीदनेकशः ॥३॥
  दुर्जनैस्तादृशैर्यत्र जिते दुर्योधनादिभिः ।
  जाता भीष्मादयो मौनस्तम्भालङ्कारपुत्रिकाः ॥४॥
  सुदत्यां पाण्डुसूनूनां रुदत्यामपि सम्मुखम् ।
  विकर्णमन्तरा भेजे सर्वो यत्र विकर्णताम् ॥५॥
  विहिते यत्र पाञ्चालीकेशकर्षणवैशसे ।
  अन्धता धृतराष्ट्रस्य जगाम स्तवनीयताम् ॥६॥
  वर्धमाने वरारोहाविलोचनपयोभरे ।
  यत्र गङ्गातनूजोऽपि चकम्पे विकलेन्द्रियः ॥७॥
  नालं मातुमभूद्यत्र द्रोणो द्रुपदजारुजम् ।
  चिन्ताया दासतां मेने विदुरश्च निजोचिताम् ॥८॥
  ह्रीनम्रनयनो यत्र मरुत्सूनुरलक्ष्यत ।
  विचिन्वन्निव पातालप्रवेशाय बिलोदरम् ॥९॥
  शौर्यप्रासादमुत्तालमीहमानोऽपि गाहितुं ।
  धर्मजभ्रूप्रतीहार्या पार्थो यत्र नियन्त्रितः ॥१०॥

 29. ದೀನಭಾವದ ಪರಾಧೀನ ಹೀನತೆಯೇಕೆ? ಸ್ಥಾನಪಾಲರು ಮೂಕರಾದರೇಕೆ?
  ಮೌನಬಡಬಾಗ್ನಿ ಬಾಲ್ಯದ ಕಿಚ್ಚೆ? ದಾಯಾದಿ ಮಾತ್ಸರ್ಯದರಗಿನುರಿ ಯೊಡಲ ಸಿಡಿಲೆ?
  ತಾನು ಮೊದಲೇ ಸೋತ ಧರ್ಮವೊಡ್ಡಿದ ಪಣವೆ? ಮಾನಕಂಜದೆ ಮೌಲ್ಯಕುಸಿದ ಹೆಣವೆ?
  ತಾನು ಬೆಂಕಿಯಮಗಳು ಮೇಲೆಮುಚ್ಚಿದ ಬೂದಿ ನಗ್ನವಾಗಿಸಲೂದಲಳಿವು ಯುಗಕೆ

  ಮಲಿನವಸ್ತ್ರವೋ ಮೃತ್ಯುಮುಖತಳೆದತೆರೆಯೊ
  ಕಲಿಗಳಳಿಯಲು ಕಲೀಶಂಗೆ ನೆಲನ ಹಾಸೊ
  ಬಲಿತ ಯುಗದಋಣ ವ್ರಣವಾದ ರಣದಛಾಪೊ
  ಸಲುವ ಋತ-ಧರ್ಮಚಕ್ರಗತಿಪಥಕೆ ರೂಪೊ

 30. ದ್ರೌಪದಿಯು ಸಭಿಕರೆಲ್ಲರನ್ನೂ “ನನ್ನನ್ನು ಹೀಗೆ ಅಪಮಾನಿಸುತ್ತಿರುವುದು ತರವೇ” ಎಂದು ಪ್ರಶ್ನಿಸುತ್ತಿರುವಾಗ, ದುಷ್ಟಚತುಷ್ಟಯರಲ್ಲಿ ಒಬ್ಬನಾದ ಕರ್ಣನು “ಐವರು ಗಂಡಂದಿರನ್ನು ಹೊಂದಿರುವ ಜಾರೆಗೆ ಮಾನಾಪಮಾನವೇನು ?” ಎಂದು ದ್ರೌಪದಿಯನ್ನು ನಿಕೃಷ್ಟ ವಚನಗಳಿಂದ ಹೀಯಾಳಿಸುತ್ತಾನೆ. ಆ ಕರ್ಣನ ಕಠೋರ ಮಾತುಗಳೆಂಬ ಕಲ್ಲಿನ ಎಸೆತದಿಂದ ಪಾಂಚಾಲಿಯ ಕಣ್ಣೆಂಬ ಸರೋವರವು ಕ್ಷೋಭೆಗೊಂಡು ಅದರಿಂದ ಕಣ್ಣೀರು ಉಕ್ಕಿತು. ಆ ಕಣ್ಣೀರಿನಿಂದ ದ್ರೌಪದಿಯ ಕಣ್ಣಿನ ಕಾಡಿಗೆಯು ಹರಡಿ ಸರೋವರದ ಸುತ್ತಲಿರುವ ಕಪ್ಪುಮಣ್ಣಿನಂತೆ ಕಂಡುಬಂದಿತು ಎಂಬ ಕಲ್ಪನೆಯೊಳಗೊಂಡಿರುವ ಪದ್ಯ (ಶಿಥಿಲದ್ವಿತ್ವವು ಒಮ್ಮೆ ಪದ್ಯದಲ್ಲಿ ಬಳಕೆಯಾಗಿದೆ) –

  ಮಸುರಾ, ಕಾಮಿನಿ, ಭೋಗ್ಯೆ, ಜಾರಿಣಿಯೆನಲ್ಕಾ ಸೂತಸೂನಕ್ಕಟಾ
  ವಸುಷೇಣೋಕ್ತದುರ್ಮರ್ಷಘೋರವಚನಾಶ್ಮಾಘಾತದುತ್ಪಾತದಿಂ
  ದಸಿದಪ್ಪ ಚ್ಯುತವಾಮೆಯಕ್ಷಿಪುಟಕಾಸಾರಂ ಮಹಾಕ್ಷೋಭೆಯಿಂ
  ಕಸಿಯಲ್ಕಾ ನಯನಾಂಜನಂ ಮಡಲುತುಂ ಕಾರ್ಮಣ್ಣಿನೊಲ್ ತೋರ್ದುದೈ

 31. ಅನಿವಾರ್ಯಕಾರಣಗಳಿ೦ದಾಗಿ ಪದ್ಯಪಾನದಲ್ಲಿ ಕೆಲವು ದಿನಗಳು ತೊಡಗಿಸಿಕೊಳ್ಳಲಾಗಲಿಲ್ಲ.
  ಕಥೆಯು ಬಹಳ ಮು೦ದೆ ಸಾಗಿರುವುದರಿ೦ದ ಸದ್ಯದ ಸ೦ದರ್ಭಕ್ಕೆ ಬರಲಿಕ್ಕೆ ಸೋಪಾನವಾಗಿ
  ಈ ಕೆಲವು ಪದ್ಯಗಳು ಮೂಡಿವೆ. ತಪ್ಪುಗಳಿದ್ದರೆ ತಿಳಿಸಿ.

  ಧರ್ಮನಂಶದಿ ಜನಿಸಿದಾತನು
  ಧರ್ಮರಾಜನು ಕೀರ್ತಿವೇತ್ತನು
  ಧರ್ಮದಿಂದಲಿ ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿಹನು |
  ಧರ್ಮಯುದ್ಧದ ದ್ಯೂತದಾಟದ
  ಮರ್ಮವನು ತಿಳಿದವನು ಜಾಣನು
  ಕರ್ಮಫಲ, ವಿಧಿಬರಹವಂತಿರೆ ಜೂಜಿಗೆಳಸಿದನು ||೧||

  ಲೆತ್ತದಾಟದಲ್ಲಿ ಗೆದ್ದು ವಿತ್ತರಾಜ್ಯಕೋಶಮಂ
  ಅಟ್ಟಹಾಸದಲ್ಲಿ ನಕ್ಕು ಬೀಗಿರಲ್ಸುಯೋಧನಂ
  ಭೀಷ್ಮದ್ರೋಣರಾದಿಯಾಗಿ ಮೂಕರಾದರೆಲ್ಲರುಂ
  ಮತ್ತೆ ಗೆಲ್ಲುವಾಸೆಯಿಂದೆ ಲೆತ್ತ ಬೀಸೆ ಧರ್ಮಜಂ ||೨||

  ಶಕುನಿ ಬೇಡಿದ ಗರವು ದಾಳದಿಂ ಬೀಳುತಿರ-
  ಲಕಟಕಟ ಧರ್ಮನಿಗೆ ಗೆಲುವದೆಂತು !
  ಸಕಲಸಂಪದದೊಡನೆ ಸಹಜರಂ ತನ್ನನುಂ
  ವಿಕಲಮತಿ ಸೋತಿಹನು ಯಜ್ಞಜೆಯನೂ ||೩||

  ಧರ್ಮಶಾಸ್ತ್ರವನರಿತ ಪ೦ಡಿತೋತ್ತಮರವರು
  ಧರ್ಮಜ್ಞರೆಲ್ಲರೂ ಗುರುಹಿರಿಯರು |
  ಧರ್ಮನನು ಸೋಲಿಸಿದ ಶಕುನಿಯಾ ತ೦ತ್ರಗಳ
  ಮರ್ಮವದು ತಿಳಿದರೂ ಸುಮ್ಮನಿಹರು ||೪||

  ದ್ಯೂತದಲ್ಲಿ ಗೆಲ್ದೆನೆ೦ಬ ಪೆರ್ಮೆಯಿ೦ದ ಸರ್ಪಧ್ವಜನು
  ದೂತನನ್ನು ಕಳುಹಿಸಿದನು ಕೃಷ್ಣೆಯಲ್ಲಿಗೆ |
  ಸೋತಿರ್ಪನು ಪಣದಿ ನಿನ್ನ ಪತಿರಾಯನು ಅನುಜರೊಡನೆ
  ಮಾತಿಲ್ಲದೆ ಸಭೆಗೆ ಬರ್ಪುದೆ೦ದು ತಿಳಿಸಲು ||೫||

  ಅ೦ತರ್ಗೃಹದಲಿ ದೂತನಿ೦ತುವೊರೆಯಲ್ ಬೆಚ್ಚಿರ್ದಳಾ ದ್ರೌಪದೀ |
  ನಿ೦ತಾವನಿಯದು ಕುಸಿದು ಬೀಳ್ವ ತೆರದೋಳ್ ಕಣ್ ಕತ್ತಲಾಯ್ತಾಗಳೇ |
  ಎ೦ತಾಗಿಹುದೀ ವೈಪರೀತ್ಯವಿದ ನೀ೦ ವಿಸ್ತಾರದಿ೦ ಪೇಳ್ವುದೈ
  ಇ೦ತಾದೇಶಿಸಲಾತನುಲಿದನಮಮಾ ನಾ ದೂತನದ ಪೇಳೆನೈ ||೬||

  ಪತಿ ಕೈ ಬಿಟ್ಟನು ಮೈದುನರ್ಗಳಿನಿತು೦ ಸೊಲ್ಲಿಲ್ಲದ೦ತಿರ್ದಪರ್ |
  ಧೃತರಾಷ್ಟ್ರ೦ ತನಗೇನುಮಾಗದವನ೦ತಿರ್ದ೦ ಸಭಾಮಧ್ಯದೊಳ್ |
  ನುತರಾ ಭೀಷ್ಮನುಮಾರ್ಯದ್ರೋಣಪ್ರಮುಖರ್ ಕುಳ್ಳಿರ್ದರಾಘಾತದೊಳ್|
  ಹಿತರಾರೆನ್ನನು ರಕ್ಷಿಸಲ್ಕೆ ತಗರೆ೦ದಾ ಸಾಧ್ವಿ ಹೌಹಾರಿದಳ್ ||೭||

  ಬ೦ದಳಾ ದ್ರೌಪದಿಯು ಬಲವ೦ತದಿ೦ದಲೇ
  ಬ೦ದಿಯಾಗೆಳೆತರಲ್ ದುಶ್ಶಾಸನ೦ |
  ಇ೦ದೆನಗೆ ಬ೦ದಿರುವ ಕಷ್ಟವಾರಿಗು ಬೇಡ-
  ವೆ೦ದಳುತ ನಿ೦ತಳಾ ಕುಲನಾರಿಯು ||೮||

 32. ಮರಳ್ದಾ ದೂತನ ಮಾತನಾಲಿಸುತಮಾ ಮಾರಾಯದುರ್ಯೋಧನಂ
  ಕೆರಳ್ದೆನ್ನಾಣೆಯನೆಂತು ತಟ್ಟಿದಳವಳ್ ಕೀರಲ್ ಮಹಾಕ್ರೋಧನಂ
  ಪೊರಳ್ದಂ ಬುದ್ಧಿಯಿನಯ್ಯೊ ರಾಧೆಮಗನುಂ ಪೂಡಲ್ಕೆ ದುರ್ಬೋಧನಂ
  ತೆರಳ್ದಾ ಜಾರೆಯನೀಳ್ದು ತಾರನುಜನೇ ತೀರ್ಚೆಂದನಾ ಭೂಧನಂ

 33. ಅಂದು ಭೇದಿಸಿ ಮತ್ಸ್ಯಯಂತ್ರವ
  ತಂದನರ್ಜುನ ಗೆದ್ದು ನಾರಿಯ
  ಮಂದಿಯೈವರು ಹೊಂದಿ ವರಿಸಿರಲವಳನೋರ್ವಳನು |
  ಬಂಧು ಮತ್ಸರ ತಂತ್ರ ಬಾಧಿಸ
  ಲಿಂದು ಧರ್ಮಜ ಸೋಲೆ ಪಣದಲಿ
  ನೊಂದರೈವರು ಪರಿತಪಿಸಲಾಪತ್ನಿಯೋರ್ವಳೆತಾಂ ||

 34. ದಾಸಿ ನೀನೆಂದರವಳನು ಪರ-
  ದೇಸಿಯೆಂದರು ದುಷ್ಟ ದುರುಳರು
  ಬೀಸಿ ಜಾಲವ ಮೋಸದಿಂದಲಿ ಗೆದ್ದು ಮೆರೆದಟ್ಟ-
  ಹಾಸದಲವಳ ಮುಡಿಯನೆಳೆದಿರೆ
  ಘಾಸಿಗೊಂಡಳು ಸೆಳೆಯೆ ಮಡಿಯನು
  ಲೇಸಿದಲ್ಲವು ನಾರಿಗೀಪರಿ ದೋಷಿಯಲ್ಲವಳು ॥

  (ಈ ಪದ್ಯವು ನನ್ನ ಹಿಂದಿನ ಪದ್ಯದ (ಕ್ರಮ ಸಂಖ್ಯೆ 27) ಮೊದಲು ಬರತಕ್ಕದಾದ್ದರಿಂದ, ಮತ್ತೆ ಸೇರಿಸಿದ್ದೇನೆ.)

  ಇಷ್ಟದೈವರ ಮುಷ್ಟಿ ಬಿಗಿದಿರೆ
  ದುಷ್ಟ ನಾಲ್ವರ ದೃಷ್ಟಿ ಕೆಟ್ಟಿರೆ
  ಶಿಷ್ಟರೆಲ್ಲರು ಪುಷ್ಟಿ ಕೊಟ್ಟಿರೆ ಧರ್ಮಸೂಕ್ಷ್ಮದೆ ಸಂ
  ಕಷ್ಟ ಕಾಲದೆ ಪೇಳ್ವೆ ಕೇಳು ಬ
  ಹಿಷ್ಠೆಗಿಲ್ಲವಿವಸ್ತ್ರ ಶಾಪ ವಿ
  ಶಿಷ್ಟವಲ್ಲವೆ ಸೃಷ್ಟಿ ನಿಯಮದದೃಷ್ಟ ದಾಟದೊಳು ॥

  (ಧರ್ಮ ಸೂಕ್ಷ್ಮತೆಯ ಸಂದಿಗ್ಧದಲ್ಲಿ “ಕಾಲ”ನ ಮಾತುಗಳು)

 35. ಸೆಳೆದು ದುಶ್ಯಾಸನನು ಸೀರೆಯ
  ಕಳೆದನೇ ಕುರುಕುಲದ ಶೀಲವ
  ನಿಳೆಯು ಕಂಡಿತೆ ನಾರಿ ಸಂಕಟ ತೆರೆದ ಸಭೆಯೊಳಗೆ |
  ಸುಳಿದು ಕೃಷ್ಣನು ಸುರಿಸೆ ಸೀರೆಯ
  ಕಳದುಕೊಂಡವುವೇನು ಗೋಪಿಯ
  ರುಳಿದು ಕೊಂಡಿತೆ ನಾರಿ ಸಂಕುಲ ಮೊರೆದು ಧರೆಯೊಳಗೆ ||

  • ಅಂದು ಗೋಪಿಯರುಗಳ ಸೀರೆಯ-
   ನೊಂದನುಂ ಬಿಡದಂತೆ ಕೊಂಡುದು
   ಮುಂದೆ ಕೃಷ್ಣೆಯ ಮಾನರಕ್ಷಣೆಗೆಂಬುದರಿಯಿರ ನೀಂ?
   ಪಿಂದೆ ತ್ರೇತಾಯುಗದ ಋಷಿಗಳೆ
   ಚೆಂದಗೋಪಿಯರಾದುದೀಗಳ್
   ಕುಂದನೆಣಿಸದೆ ಪರಮಪಿತನಿಗೆ ವಸನವಿತ್ತಿಹರೈ||

 36. ಕೊಳದ ದಡದೊಳು ನಾರಿ
  ಕಳಚಿಟ್ಟವುಡುಗೆಯನು
  ಕಳವು ಮಾಡಿದ ಕೃತ್ಯವಳಿಸುವಂತೆ |
  ಸೆಳೆಯಲಾರದ ಪರಿಯ-
  ಲಳತೆ ಮೀರಿದವುಡೆಯ
  ಕಳುಹಿದನು ಗೋಪಾಲ ನಭದ ಮರೆಯಿಂ ||

  • ಭಾಮಿನಿಗೆ ಅಳವಡಿಸಿದ್ದೇನೆ:
   ಕೊಳದ ದಡದೊಳು ಗೋಪಸ್ತ್ರೀಯರು
   ಕಳಚಿ ಬೈತಿಟ್ಟುಡುಗೆಗಳನುಂ
   ಕಳವು ಮಾಡಿಹನೆಂಬ ದೂಷಣವನ್ನು ತೊಡಗಿಪವೋಲ್|
   ಸೆಳೆಯಲಾರದೆ ಸೋಲುವಂದದೊ
   ಳಳತೆ ಮೀರಿದ ವಸ್ತ್ರಮಾತ್ರವ
   ಕಳುಹಿದನು ಗೋಪಾಲನಾಗಸದಾಚಿನಿಂದಲಿ ತಾಂ||

 37. ಕಳೆದುಹೋಯಿತು ರಾಜ್ಯಕೋಷವು
  ಕಳೆದುದಾತನ ಮಾನಗೌರವ
  ಕಳೆದುಕೊಂಡನು ತನ್ನನೂ ಸಹಜರನು ಪತ್ನಿಯನೂ |
  ಉಳಿದುದಾತನ ಪ್ರಾಣಮಾತ್ರವೆ
  ತಳೆದಿರಲು ಬಲು ದೀನಭಾವವ
  ಗಳಿಸಲಾಪನೆ ಧರ್ಮಜನು ನಿಜವಿಗತವೈಭವವ ?

  ಕುದಿಯುತಿದ್ದಿತು ರುಧಿರವನುಜರಿ-
  ಗದುರುತಿದ್ದಿತು ತುಟಿಯು ರೋಷದ-
  ಲದರಿನೇನಹುದಯ್ಯ ದಾಸರು ಕೌರವನಿಗವರು |
  ಮದವ ಹೆಚ್ಚಿಸಿ ರೋಷವುಕ್ಕಿಸ-
  ಲದಕೆ ಮಾರ್ಗವಿಕಲ್ಪವೆನೆ ದ್ರೌ-
  ಪದಿಗೆ ತಂದನೆ ಶೀಲಭಂಗದ ಸ್ಥಿತಿಯನಾ ಹರಿಯು !!

  ಹತವೀರ್ಯರಾಗಿರುವ ಪಾಂಡವರಲ್ಲಿ ಮತ್ತೆ ಕ್ಷಾತ್ರತೇಜವೂ ರೋಷವೂ ಉಕ್ಕದಿದ್ದರೆ ಮಹಾಭಾರತ ಕಥೆಯು ಮುಂದುವರೆಯದು ಎಂದು ಪರಮಾತ್ಮನು ಈ ಮಾನಭಂಗದ ಪ್ರಸಂಗವನ್ನು ಯೊಜಿಸಿದನೇ ಎಂದು ಒಂದು ಅನಿಸಿಕೆ.

  • ಕೆಲವು ಸವರಣೆಗಳು: ರಾಜ್ಯಕೋಶವು, ಪತ್ನಿಯನುಂ, ವೈಭವಮಂ, ದಾಸರ್ ಕೌರವಂಗವರು, ಮದವನುರುಬಿಸಿ, ವಿಕಲ್ಪಮೆನೆ. ‘ಸ್ಥಿತಿ’ಗೆ ಬೇರೆ ಪದ ಹುಡುಕಿ (ವಿಧಿ)

 38. ಕುರುಡು ರಾಜನ ಪಕ್ಕದೊಳ್ ಕ-
  ಣ್ಗರಿವೆ ಕಟ್ಟಿಹ ಮಡದಿ ಸುತ್ತಲು
  ದುರುಳುಗೈವರ ಮರುಳರೈವರ ಕಣ್ಣುಕಟ್ಟಿರಲು |
  ಹಿರಿಯರೊಲ್ಲದೆ ಕಣ್ಣು ಮುಚ್ಚಿರೆ
  ಸರಿದ ನಾರಿಯ ಸೆರಗದಾರಿಗು
  ಸುರಿದ ಬೆಳಕಲಿ ಕಾಣದಾಗಿದೆ “ಕಣ್ಣ”ಸುತ್ತಿರಲು ||

  ( ಅಂದು ಸಭೆಯಲ್ಲಿ ನಡೆದ ದ್ರೌಪದಿಯ ವಸ್ತ್ರಾಪಹರಣವನ್ನು, ಕಣ್ಣು ಮುಚ್ಚಿದ್ದ? / ಕಣ್ಣು ತೆರೆದಿದ್ದ? ಯಾರೂ ಕಾಣಲಿಲ್ಲ, (ಮುಗುಳುಗಣ್ಣ ಕೃಷ್ಣನೂ / ದುಗುಡಗಣ್ಣ ಕೃಷ್ಣೆಯೂ) ಎಂಬ ಕಲ್ಪನೆಯಲ್ಲಿ ! )

 39. ರಾಜಸೂಯವ ಕಂಡಸೂಯದಿ
  ಜೂಜ ಹೂಡಿರೆ ಕುರುಡು ಕುಲಜರು
  ಬಾಜಿಗಿಡೆ ಕುಲನಿಧಿಯನಂದಾಗದೆ ಸಭಾಪೂರ್ಣಂ ।
  ರಾಜದರ್ಮದಿ ಸಂದ ಕರ್ಮದೆ
  ಬೀಜದೊಳಗಣ ಬೀಜ ಮರ್ಮದೆ
  ಸೋಜಿಗವು ಕುಲವಧುವತಂದಾದುದೆ ಸಭಾಪರ್ವಂ ॥

  (ಬೀಜದೊಳಗಣ ಬೀಜಮರ್ಮ = ಕಾರಣಕ್ಕೆ ಕಾರಣ ಮಹಾಕಾರಣ)
  (ತೆರೆದ ಸಭೆಯಲ್ಲಿ ನಡೆದ ದ್ರೌಪದಿಯ ವಸ್ತ್ರಾಪಹರಣ ಪ್ರಸಂಗವು, ಮಹಾಭಾರತದ “ಸಭಾಪರ್ವ!!” ಹೇಗಾಯಿತೆಂಬ ವಿವರಣೆ)

 40. ಕಥೆಯನ್ನು ಸ್ವಲ್ಪ ಹಿಂದಕ್ಕೆ ಒಯ್ಯುತ್ತಿದ್ದೀನಿ. ದೂತ ಹಿಂದಿರುಗಿ ಹೋದಾಗ ನಡೆದುದು.

  ಮೊದಲು ದುರ್ಯೋಧನನ ಮಾತು

  ಅವಮಾನಂ ಸಲೆ ಮಾನಮುಳ್ಳರಿಗೆ ಹಹ್ಹಾ ಶೂಲೆಗೆಲ್ಲಿಂದಲಯ್
  ಧವರೈವರ್ಗೊಲಿದಂಚಲಂ ಪರಡಿಯೋತಾ ದಾಸಿ ಪಾಂಚಾಲಿಯಯ್
  ನವಕನ್ಯಾಮಣಿಯಂತೆ ನಾಟಕದೆ ತಾನ್ ನಾಣ್ಚಿರ್ಪಳಯ್ ಸುಮ್ಮನೇ
  ನೆವಮಂ ಪೂಡುತೆ ಬಾರದಿರ್ಪಳೆಳೆತಾ ನೀನೀಗಳೇ ತಮ್ಮನೇ

 41. duHSAsana’s response

  ಸಂದೆಂ ಸಂದೆಂ ಸಡಗರಿಸುತುಂ ಸ್ವಾಮಿಯಾಜ್ಞಾಪನಂಬೋಲ್
  ಕುಂದೆಂ ಕುಂದೆಂ ಗುರುಗುರೆನುವಾ ಕುನ್ನಿಗಳ್ ಕೂಗಿರೇಗಲ್
  ತಂದೆಂ ತಂದೆಂ ದರದರನೆಯಾ ದಾಸಿ ಪಾಂಚಾಲಿಯಂ ದಲ್
  ಬಂದೆಂ ಬಂದೆಂ ಪಗೆಯ ಸಿರಿಸೌಭಾಗ್ಯಮಂ ದೋಚಿಯೀಗಳ್

 42. ದ್ರೌಪದಿಗೆ ದುಶ್ಶಾಸನನ ಮಾತು

  ದಾಸರ್ ಧವರ್ ದಾಸ್ಯಮನೊಂದಿದಯ್ ನೀನ್
  ಶ್ವಾಸಂ ನಿನತ್ತಲ್ತೆಲೆ ಸಾಕು ಬಿಂಕಂ
  ತಾಸಂ ಕಳಲ್ಚಿರ್ದಪಯೇತಕಿನ್ನುಂ
  ಬಾ ಸಂಗಡಂ ದ್ರೌಪದಿ ಈಗಳೀಗಳ್

  • ಮೊದಲಪಾದದಲ್ಲಿ ಛಂದಸ್ಸು ತಪ್ಪಿದೆ
   ಮೂರನೆಯ ಪಾದದಲ್ಲೊಂದು ಟೈಪೊ

   • ಥ್ಯಾಂಕ್ಸ್. ತಿದ್ದಿದ್ದೀನಿ. ಟೈಪೋ ತಿಳಿಯಲಿಲ್ಲ

 43. ದುಶ್ಶಾಸನನಿಗೆ ದ್ರೌಪದಿಯ ಮನವಿ

  ಉಡುಪೊಂದನೆಯುಟ್ಟಪೆನ್ ದಿಟಂ
  ಕೆಡುಕೈ ಬಂದೊಡೆ ಕೇಕೆಯಾರ್ಭಟಂ
  ಬಿಡು ಮೈದುನ ಬೇಡಮೀ ಹಠಂ
  ಗಡ ನೀಂ ವಂಶಕೆ ಗಯ್ಯದಿರ್ ಶಠಂ

 44. ನೀಚ ದುಶ್ಶಾಸನನ್ ಚಾಚೆ ತನ್ನ ಕೈಯಂ
  ಛೀ ಚೀ ಪೋಗೆನುತಂ ಜಿಗಿದಳಾ ಪಾಂಚಾಲಿ
  ಮಾಚಲ್ಕೆ ಮೊಗಮಂ ಸಖಿಯರೊಳ್

 45. ಗದರಿದನವನ್ ಗರ್ಜಿಕ್ಕುಂ ಸಿಂಹದೊಲ್ ಕರನೀಡುತಂ
  ಚೆದರಿತದಗೋ ಚೇಟೀಜಾಲಂ ದಿಟಂ ಚಿಗಿದೋಡುತಂ
  ಬೆದರಿದ ಮಿಕಂ ಬೇಡಂ ಬೇಡೆಂದೊಡಾ ಬಿಯದಂ ಬಿಡಂ
  ವದರಿದಳವಳ್ ಬಂದೆಮ್ಮಂ ಕಾಯಲಾರ್ಪರದಾರ್ ಗಡಂ

 46. ಚಟಕ್ಕೆಂದು ದುಃಶಾಸನಂ ಜಗ್ಗುತೀಳಲ್
  ಪುಟಕ್ಕೆಂದು ಕೂದಲ್ ಪೊಗರ್ಗುಂದಿ ಬೀಳಲ್
  ಸಟಕ್ಕೆಂದು ದುಃಖಂ ಛಲಂ ಕೂಡೆಯೇಳಲ್
  ಪಿಟಕ್ಕೆನ್ನರೂರೊಳ್ ಪೆರರ್ ನ್ಯಾಯಕೇಳಲ್

 47. ಪೊಯ್ವಳ್ ಪೊಯ್ಲೆದ್ದ ಗುಂಡನ್ ಪೊಡೆತಮಡಗು ನೀನ್ ಪೋಗುಪೋಗೆಂದನೇಕಂ
  ಬಯ್ವಳ್ ಬಯ್ಯಲ್ಕೆ ತಾಣಂಬಡೆಯದ ಬುವಿಯಂ ಪಾರ್ವುದಳ್ಕುತ್ತ ಲೋಕಂ
  ಸುಯ್ವಳ್ ಸುಯ್ಯೇಕದಿನ್ನುಂ ಸೊರಗದೆನಿಸುತುಂ ಸುತ್ತುಗಟ್ಟಿತ್ತು ಶೋಕಂ
  ತುಯ್ವಳ್ ತುಯ್ಯಲ್ಕೆ ಧೂರ್ತಂ ತುರುಬನುರುಬಿನಿಂ ಧರ್ಮಮಾದತ್ತರೋಕಂ

 48. ವೀರಕರ್ಣನ ಶೌರ್ಯಮಿದೆಯೇನ್?
  ನಾರಿಕುಲವಮ್ಮಳಿದು ಕ್ರೌರ್ಯದಿ
  ನೀರೆಯುಡೆಯಂ ಸೆಳೆವ ದುಷ್ಟರಸಂಗವೆರಸಿಹನು |
  ಚಾರುಮತಿಗುರು ದ್ರೋಣಪುತ್ರನ
  ಧೀರತನದೊಳ್ಮಂಕು ಕವಿಯಿತೆ?
  ವಾರಿಜಾಕ್ಷಿಯ ಮನದ ಮೊರೆಯಂ ಕೇಳದಾಗಿಹನು ||

  • ‘ನಾರಿಕುಲವಮ್ಮಳಿದು’ ಎಂದರೆ ’ನಾರಿಕುಲವಂ+ಹಳಿದು’ ಎಂತಲೆ?
   ದುಷ್ಟರಸಂಗವೆರಸಿಹನು ~ ದುಷ್ಟರಸಂಗವೆರತಿಹನು
   ಶೌರ್ಯಮಿದೆಯೇನ್ – ಯೇಂ
   ಕೇಳದಾಗಿಹನು – ಹನೇಂ

   • ಧನ್ಯವಾದ ಪ್ರಸಾದು, ನಿಮ್ಮ ತಿದ್ದುಪಡಿ ಸರಿಯಾಗಿದೆ.. ತಿದ್ದಿದ್ದೇನೆ

    ವೀರಕರ್ಣನ ಶೌರ್ಯಮಿದೆಯೇಂ?
    ನಾರಿಕುಲವಂ ಹಳಿದು ಕ್ರೌರ್ಯದಿ
    ನೀರೆಯುಡೆಯಂ ಸೆಳೆವ ದುಷ್ಟರಸಂಗವೆರತಿಹನು |
    ಚಾರುಮತಿಗುರು ದ್ರೋಣಪುತ್ರನ
    ಧೀರತನದೊಳ್ಮಂಕು ಕವಿಯಿತೆ ?
    ವಾರಿಜಾಕ್ಷಿಯ ಮನದ ಮೊರೆಯಂ ಕೇಳದಾಗಿಹನೇಂ ? ||

 49. ಮಡದಿ ರೋದಿಸುತಿರಲು ಕನಲಿದಾ ಕಲಿಭೀಮ-
  ನಡಗಿರ್ದ ರೋಷಮುಮ್ಮಳಿಸಲೊಡನೇ |
  ಗುಡುಗಿದನು ಸರ್ಪಕೇತನ ಎನ್ನ ಶಪಥವಿದು
  ತೊಡೆಯ ಮುರಿದೇ ಕೊಲ್ವೆ ನಿನ್ನ ರಣದೋಳ್ ||

  ಹೊಡತಿಯ ಚೀರಮ೦ ಸೆಳೆದ ದುಶ್ಶಾಸನನೆ
  ಗ೦ಡುಗಲಿಯೆನ್ನ ಪಣವಿದು ಕೇಳು ನೀ |
  ಮುಡಿ ಪಿಡಿದು ರು೦ಡವ೦ ಚ೦ಡಾಡಿಯುರುಳಿಸುವೆ
  ಕುಡಿವೆ ರುಧಿರವನವಳ ಮುಡಿ ಕಟ್ಟುವೆ೦ ||

  • ಪಣವಿದು ಕೇಳು ನೀ – ಪಣವಿದ ಕೇಳು ನೀಂ
   ಹೊಡತಿಯ – ಒಂದು ಮಾತ್ರೆ ಕಡಿಮೆ ಇದೆ. ಸವರಿಸಿ.
   ಕುಡಿವೆ ರುಧಿರವ,ನವಳ ಮುಡಿ ಕಟ್ಟುವೆ೦ – ಮುಡಿಯನ್ನು ರಕ್ತದಿಂದ ಕಟ್ಟುವೆ ಎಂದು ಹೇಳಿದಂತಾಗಲಿಲ್ಲ. ಕುಡಿಯುವುದು-ಕಟ್ಟುವುದೆರಡನ್ನೂ ಹೇಳಲಾಗದಿದ್ದರೆ, ಒಂದನ್ನೇ ಹೇಳಬಹುದು: ಮುಡಿಯವಳನಾ ರುಧಿರದಿಂ ಕಟ್ಟುವೆಂ

   • ಮುದ್ರಣದೋಷದಿಂದ ಹೆಂಡತಿ ಹೊಡತಿ ಆಗಿದೆ. ಮಿಕ್ಕ ದೋಷಗಳನ್ನು ಸರಿಪಡಿಸಿದ್ದೇನೆ. ಧನ್ಯವಾದಗಳು.

    ಹೆಂಡತಿಯ ಚೀರಮಂ ಸೆಳೆದ ದುಶ್ಶಾಸನನೆ
    ಗಂಡುಗಲಿಯೆನ್ನ ಪಣವಿದ ಕೇಳು ನೀಂ |
    ಮುಡಿಪಿಡಿದು ರುಂಡವಂ ಚಂಡಾಡಿಯುರುಳಿಸುವೆ
    ಮುಡಿಯವಳದಾ ರುಧಿರದಿಂ ಕಟ್ಟುವೆಂ ||

    • ನಾಲ್ಕೂ ಪಾದಗಳಲ್ಲಿ ಆದಿಪ್ರಾಸ ಒಂದೇ ಮಾಡಬೇಕಲ್ಲವೆ.

     ಅನುನಾಸಿಕವನ್ನು ಬಿಟ್ಟರೂ ಆದೀತು. ಹೆಂಡತಿಯ ಬದಲು ಮಡದಿ ಎಂದು ಹಾಕಿ, ಪಂಚಮಾತ್ರಾಗಣ ಸರಿ ಹೊಂದಿಸುವಂತೆ ಹಾಕಿದರೆ, ಎರಡನೆಯ ಪಾದಕ್ಕೆ, ಗಂಡನ್ನು ಬಿಟ್ಟು “ಕಡುಗಲಿಯು ನನ್ನ ಪಣ–” ಹಾಕಿದರೂ ಸರಿಯೇ.

   • ಮಾರ್ಮಿಕವಾದ ಮುದ್ರಣದೋಷ! ‘ಹೊಡೆತ’ದವಳೇ ವಾಸಿಯೇನೋ? ಈಗ ನೋಡಿ, ಪ್ರಾಸದೋಷವಾಯಿತು (ಮೊದಲೂ ಇತ್ತು ಎರಡನೆಯ ಪಾದದಲ್ಲಿ, ನಾನು ಗಮನಿಸಿರಲಿಲ್ಲ). ಮೊದಲೆರಡು ಪಾದಗಳು ವೃಷಭಪ್ರಾಸ (ಅನುನಾಸಿಕ), ಮಿಕ್ಕೆರಡು ಸಿಂಹಪ್ರಾಸವಾಯಿತು (ಹ್ರಸ್ವ). ಮೂರನೆಯ ಪ್ರಾಸದ ‘ರುಂಡ’ ಪದವನ್ನು ‘ಮುಂಡ’ ಮಾಡಿ ಮೊದಲಿಗೆ ಹಾಕಿ ಸರಿಪಡಿಸಬಹುದು (ರುಂಡ ಎಂದರೆ torso. ಮುಂಡ>ಮುಂಡಾಸು>ಮುಂಡನ). ನಾಲ್ಕನೆಯದಕ್ಕೆ ಇನ್ನೊಂದು ‘ಣ್ಡ’ ಆದಿಪ್ರಾಸ ಹುಡುಕಿ.

    • ಅರ್ಥವ್ಯತ್ಯಾಸವಿಲ್ಲದ೦ತೆ ಪದ್ಯವನ್ನೇ ಬದಲಿಸಿದ್ದೇನೆ. ಸರಿಯಾಗಿದೆಯೇ ತಿಳಿಸಿ.

     ಗರತಿಯಳ ಚೀರವ೦ ಸೆಳೆದ ದುಶ್ಶಾಸನನೆ
     ಬಿರಿದ ಮುಡಿಯಾಣೆ ಕೇಳೆನ್ನ ಪಣವ೦ |
     ತರಿದು ರು೦ಡವ ರಣದಿ ಚ೦ಡಾಡಿಯುರುಳಿಸುವೆ
     ಹರಿವ ರಕುತದಿನಾಕೆ ಮುಡಿ ಕಟ್ಟುವೆ೦ ||

     • ಆಕೆ not= ಆಕೆಯ

      ಚೆ೦ಡಾಡಿಯುರುಳಿಸುತೆ
      ಹರಿವ ರಕ್ತದಿನವಳ ಮುಡಿ ತೊಯ್ಸೆನೇಂ||

    • ಹೆ೦ಡತಿ ಎ೦ಬ ಪದಪ್ರಯೋಗ ನನಗೇ ಅಷ್ಟಾಗಿ ಸರಿಕಾಣದಿದ್ದರೂ ಪ್ರಸಾದ್ ರವರು ಸೂಚಿಸಿರುವ೦ತೆ ಪದ್ಯವನ್ನು ಸವರಿಸಲು ಪ್ರಯತ್ನಿಸಿದ್ದೇನೆ.

     ಹೆ೦ಡತಿಯ ಚೀರಮ೦ ಸೆಳೆದ ದುಶ್ಶಾಸನನೆ
     ಗ೦ಡುಗಲಿಯೆನ್ನ ಪಣವಿದ ಕೇಳು ನೀ೦ |
     ಮು೦ಡದಿ೦ ರು೦ಡವ೦ ಕತ್ತರಿಸಿ ಸಮರದೋಳ್
     ಗು೦ಡಿಗೆಯ ಬಿಸಿರಕುತವನೆ ಕುಡಿಯುವೆ೦ ||

  • ಯಾವ ಛಂದಸ್ಸಿನ ಪ್ರಾಕಾರವಿದು. final-chandas.pdf ನಲ್ಲಿ ಇದರ ಬಗ್ಗೆ ಕೊಟ್ಟಿದೆಯೆ..?

 50. ಉಟ್ಟುಡುಗೆಸೆಳೆದಳಿಪರೆಂದಂಜಿ ನಡುಕದಿಂ
  ದುಟ್ಟಲೋಗರ ನಡುವೆ ಲಜ್ಜೆಯಂತಾಳದಿರು
  ಕೆಟ್ಟೆಣಿಸುವಾಕುಲದಿ ಪುರುಷತನವೆಲ್ಲಿಹುದು
  ದಿಟ್ಟೆ ನಾರಿಯನಾರಿಕುಲಮುಟ್ಟುತಿರೆ ಕೇಡೆ?

 51. ಸಭೆಯಲ್ಲಿ ಅಸಹಾಯಳಾಗಿ ನಿ೦ತ ದ್ರೌಪದಿಯು ತನಗಿರುವುದೊ೦ದೇ ದಾರಿಯೆ೦ದು ಭಾವಿಸಿ ಕೃಷ್ಣನನ್ನು ಭಕ್ತಿಯಿ೦ದ (ಎಲ್ಲಾ ವಿಭಕ್ತಿಗಳಲ್ಲಿ) ಹೀಗೆ ಧ್ಯಾನಿಸಿದಳು.

  ಕೃಷ್ಣನೆನ್ನಯ ಮೊರೆಯ ಕೇಳ್ವನು
  ಕೃಷ್ಣನನು ಮನದಲ್ಲಿ ನೆನೆಯುವೆ
  ಕೃಷ್ಣನಿ೦ದಲೆ ಭವನಿವಾರಣ ಕೃಷ್ಣನಿಗೆ ನಮನ |
  ಕೃಷ್ಣನಾ ದೆಸೆಯಿ೦ದ ಮುಕುತಿಯು
  ಕೃಷ್ಣನಾ ಕೃಪೆಯಿರಲಿಯೆನುತಲಿ
  ಕೃಷ್ಣನಲಿ ಬೇಡಿದಳು ಕೃಷ್ಣೆಯು ಕೃಷ್ಣ ರಕ್ಷಿಪುದು ||

 52. ನನ್ನ ಅನಾರೋಗ್ಯದ ಕಾರಣ ಈ ಬಾರಿಯ ಪದ್ಯಪಾನದ ಸಂಚಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಗಲಿಲ್ಲ. ವಿಶೇಷತಃ ಶ್ರೀಕಾಂತ್ ಮೂರ್ತಿ, ಉಷಾ ಉಮೇಶ್, ರಾಜಗೋಪಾಲ್, ಪ್ರಸಾದು ಮುಂತಾದವರು ತುಂಬ ಉತ್ಸಾಹದಿಂದ ಬಲುಮಟ್ಟಿನ ಪದ್ಯಗಳನ್ನು ರಚಿಸಿ ಇಡಿಯ ಸಂಚಿಕೆಯನ್ನು ಕಾಯ್ದುಕೊಂಡಿದ್ದಾರೆ. ಇವರಿಗೆಲ್ಲ ನನ್ನ ಹಾರ್ದಿಕಧನ್ಯವಾದಗಳು. ಮುಖ್ಯವಾಗಿ ಶ್ರೀಕಾಂತಮೂರ್ತಿಯವರಂತೂ ಬಗೆಬಗೆಯ ವೃತ್ತಗಳಲ್ಲಿ ಕಥಾತಂತುವನ್ನು ಬಲುತೆರನಾದ ಪದ್ಯಶಿಲ್ಪಗಳ ಗುಂಫನದ ಮೂಲಕ ಕೊಂಡೊಯ್ದ ಪರಿ ನಿತಾಂತಸ್ತವನೀಯ. ಎಲ್ಲ ಗೆಳೆಯರಿಗೆ ಮತ್ತೆ ಧನ್ಯವಾದಗಳು.

  • ಗಣೇಶರೆ- ನಿಮ್ಮ ಈ ಮಾತುಗಳಿಗಾಗಿಯೇ ಪದ್ಯಪಾನಿಗಳು ಹಾತೊರೆಯೋದು. ಧನ್ಯವಾದ. ಆರೋಗ್ಯವನ್ನು ಸರಿಮಾಡಿಕೊಂಡು ಬನ್ನಿ. ಈ ವಿಶ್ರಾಂತಿವೇಳೆಯಲ್ಲಿ ನೀವಾಗಲೆ ಹಲವು ಪದ್ಯಗಳನ್ನು ರಚಿಸಿರಬಹುದು

  • ಗಣೇಶ್ ರವರೇ, ನಿಮ್ಮ ಮೆಚ್ಚುಗೆಯೇ ನಮಗೆಲ್ಲಾ ಒಳ್ಳೆಯ ಪ್ರೇರಣೆ. ಧನ್ಯವಾದಗಳು. ನಿಮ್ಮ ಆರೋಗ್ಯ ಸರಿಯಾಗಿ ನೋಡಿಕೊಳ್ಳಿ.

 53. (ದೇಹಾಭಿಮಾನವನ್ನೂ ಅಹಂಕಾರವನ್ನೂ ತ್ಯಜಿಸಿ ಸಂಪೂರ್ಣ ಶರಣಾಗತರಾದವರಿಗೆ ಮಾತ್ರ ಭಗವತ್ಕೃಪೆ ಶೀಘ್ರದಲ್ಲಿಯೇ ದೊರೆಯುವುದೆಂಬ ಶ್ರೀವೈಷ್ಣವ ಸಿದ್ಧಾಂತವನ್ನಾಧರಿಸಿ)

  ಇರಿವ ಕಣ್ಗಳ ನೋಟ ಸಹಿಸದೆ
  ಎರಡು ಕೈಗಳಲುರವ ಮುಚ್ಚುತ-
  ಲರಿಯದೆಲೆಯಭಿಮಾನವಂ ಬಿಡಲೊಲ್ಲಳಾ ಸತಿಯು|
  ಇರದೆ ಕೊನೆಯೊಳ್ ಪೂರ್ಣರೂಪದೆ
  ಹರಿಸಮರ್ಪಣೆ ಮಾಡುತೆಲ್ಲವ
  ಶರಣು ನಿನಗೆಂದೆತ್ತಿದಳು ತನ್ನೆರಡು ಕೈಗಳನೂ ||

  ದ್ರುಪದಕುವರಿಯ ಮೊರೆಯನಾಲಿಸಿ
  ನೃಪರ ನೃಪನಾ ದ್ವಾರಕಾಧಿಪ-
  ನಪರಿಮಿತ ವೇಗದಲಿ ಬಂದನು ಹಸ್ತಿನಾಪುರಕೆ |
  ನೆಪವಿದಾಗಲು ದುಷ್ಟನಾಶಕೆ
  ಕಪಟನಾಟಕಸೂತ್ರಧಾರಿಯು
  ವಪುವ ಮರೆಯಿಸಲಕ್ಷಯಾಂಬರವಿತ್ತನಾ ಸತಿಗೆ ||

 54. ದ್ರೌಪದಿಗೆ ಅಕ್ಷಯಾಂಬರವಿತ್ತ ಮೇಲೆ ಕೃಷ್ಣನು ಸಭಿಕರಿಗೆ ಬೋಧಿಸಿ ಆಟವನ್ನು ನಿಲ್ಲಿಸಿ ಪಾಂಡವರಿಗೆ ಮತ್ತೆ ಸಮ್ಮಾನವೀಯಲು ಹೇಳುತ್ತಾನೆ ಎಂಬ ಕಲ್ಪನೆ.

  ಅನ್ಯರಿತ್ತುದಂ
  ತನ್ನಲಿದ್ದುದಂ
  ಸೋಲ್ತನೆಲ್ಲವಂ
  ಧರ್ಮನಂದನಂ |

  ಎಂತು ಪತ್ನಿಯಂ
  ದಾಸನಾದವಂ
  ಪಂಥಕೊಡ್ಡಿದಂ?
  ಕೇಳ್ವರಾರಿದಂ |

  ಆಗದೆಂದಿಗುಂ
  ಧರ್ಮಸಮ್ಮತಂ
  ಪೂಜ್ಯರೆಲ್ಲರುಂ
  ಸುಮ್ಮನಾದಿರೇಂ ?

  ಅಂಧಭೂಪನುಂ
  ಪುತ್ರಮೋಹದಿಂ
  ಅಂಧನಾಗಿಹಂ
  ಏನಿದದ್ಭುತಂ !!

  ಜಂಘೆ ತಟ್ಟಿದಂ
  ಕೌರವಾಗ್ರಜಂ
  ಶಪ್ತನಾಗಿಹಂ
  ನಾರಿಯತ್ತಣಿಂ ||

  ನಿಲ್ಲಲೀ ಪಣಂ
  ಸಲ್ಲಲೀಕೆಗಂ
  ಪಾಂಡುಪುತ್ರಗಂ
  ಮಾನಮಾದರಂ ||

  ಇಂತು ಪೇಳ್ದೊಡಂ
  ವಾಸುದೇವನಂ
  ಲೋಗರೆಲ್ಲರುಂ
  ಪಾಡಿ ಪುಗಳಿದರ್ ||

  ನಂದನವೃತ್ತದಲ್ಲಿ ಒಂದು ಪ್ರಯತ್ನ. ಇದರಲ್ಲಿ ಪ್ರಾಸನಿಯಮಗಳೇನಾದರೂ ಇವೆಯೇ ತಿಳಿಸಿರಿ. ಲೋಪದೋಷಗಳಿದ್ದರೂ ತಿಳಿಸಬೇಕೆಂದು ವಿನಂತಿ.

 55. ತೊಟ್ಟೆಂ ಶಪಥಮನಿದಿಗೋ
  ಬಿಟ್ಟೆಂ ಸಿರಿಮುಡಿಯನಿಂತೆ ಬಿಚ್ಚಿ ಬಿರಿದಿದಂ
  ಕಟ್ಟೆಂ ನಿನ್ನೆದೆಗೂಡಂ
  ಕುಟ್ಟಿಯುಗಿದ ರಕ್ತತೀಡಿಕೊಳ್ಳದವರೆಗಂ

 56. ಪತಿಯೇಗೈದೊಡಮಾತನ
  ಸತಿಯದನೊಪ್ಪಿ ಸರಿಯೆಂದು ಸಹಿಪುದುವೇಳ್ಕುಂ
  ಕ್ಷಿತಿಯಿದನೇ ವೇಡಿಕೆಯೆನೆ
  ಮತಿಭ್ರಮಿಸಿ ಕಣ್ಣಲರ್ದು ಮೌನದೆ ನೋಳ್ಕುಂ

 57. ಗಹಗಹಿಸುತೆ ಕರ್ಣನೆಂದನಾಗಳ್
  ವಹ ವಹ! ಪಾರಿರೊ ಪಾಣ್ಬೆ ಸೂರುಳೀವಳ್
  ಬಹುಪತಿಗಳ ಬಾಹುಬಂಧದೊಳ್ ತಾ-
  ನಹಹೆನುತಂ ಸುಖಮಂ ಪೊದಳ್ದ ಪೂತಳ್

 58. ಕೆಡೆದಾ ಸತಿಯಂ ಕಾಸಿಗೆ
  ಕಡೆಯೆನೆ ಕಂಡು ಜರೆದಾಡಿ ಕಾಕುಜನರ್ ತಾಂ
  ಪೊಡೆ ಪುಣ್ಣಾಗೆ ನಗಲ್ ಬರಿ-
  ದೊಡೆ ತಟ್ಟುತೆ ಸನ್ನೆ ಗೈದ ದುರ್ಯೋಧನನುಂ

 59. ಸುರುಕ್ಕೆಂದಾ ದೃಶ್ಯಂ ನಯನಕದು ತಾನ್ ಚುಚ್ಚಿ ಭಾಮಂ
  ಸರಕ್ಕೆಂದೆದ್ದಾಗಳ್ ಜ್ವಲಿಸೆ ಬೆಮರಾದತ್ತು ಧೂಮಂ
  ಮೊರಕ್ಕೆಂದಾಂ ಪೋಳ್ವೆಂ ತೊಡೆಯನುನಗಂದಾವನೋಮಂ
  ಸೊರಕ್ಕೆಂದೀಂಟುಂ ಶೋಣಿತಮನೆನುವಂ ಶೂರಭೀಮಂ

 60. ಪೋಲ್ಗುಂ ನಿನ್ನೀ ಸ್ವರೂಪಂ ಬುಸುಬುಸುಗುಡುವಾ ಬೊಚ್ಚಪಾವಂ ಪ್ರಲಾಪಂ
  ಸಾಲ್ಗುಂ ಕಂಡಿರ್ಪೆನುನ್ನಂ ಸಡಗರಿಸದಿರಯ್ ಷಂಡ ತೋರ್ವಪ್ರತಾಪಂ
  ಜೋಲ್ಗುಂ ನಿನ್ನೀ ಮೊಗಂಬೋಲ್ ತೊಡೆನಡುಗೊರಲುಂ ಜೋಕೆ ನೀನಯ್ಯೊಪಾಪಂ
  ನಾಲ್ಗುದ್ದಂ ಕಲ್ತೊಡೇನ್ ನೀನ್ ನನಗೆಣೆಯಲವೋ ನನ್ನ ತೊತ್ತೆಂದ ಭೂಪಂ

 61. ಕುಣಿಯೆಂದೊಡೆ ನೀಂ ಕುಣಿಯೈ ತಕಥೈ
  ಮಣಿಯೆಂದೊಡೆ ನೀಂ ಮಣಿಯೈಯದು ಸೈ
  ದಣಿವೆಂದೊಡೆ ನಾಂ ಸೃಣಿ ಪಾಯ್ಕುವೆಮೈ
  ಧಣಿ ನಾನೊರೆದಂತಣಿ ತಪ್ಪದೆ ಗೈ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)