Aug 102013
 

ಶತಾವಧಾನಿ ಗಣೇಶರು ಈ ವಾರದ ಪದ್ಯರಚನೆಯ ಬಗ್ಗೆ ಕೆಳಕಂಡಂತೆ ಸೂಚನೆಗಳನ್ನು ಕೊಟ್ಟಿದ್ದಾರೆ, ಗಮನಿಸಿರಿ ಮತ್ತು ಎಂದಿನಂತೆ ಉತ್ಸಾಹದಿಂದ ಭಾಗವಹಿಸಿರಿ.

ಸಂಭಾಷಣೆಯು ಗದ್ಯದ ಗುತ್ತಿಗೆಯೇ ಆದರೂ ಪದ್ಯದಲ್ಲಿ ಕೂಡ ಅದು ಆಗೀಗ ಸುಳಿಯುವುದುಂಟು. ಅಭಿಜಾತ(classical)ಕವಿತೆಯಲ್ಲಿ ಸಂಭಾಷಣಾತ್ಮಕತೆಯು ದಿಟವಾಗಿ ಕವಿಗೆ ಸವಾಲು. ಏಕೆಂದರೆ ಛಂದಸ್ಸಿನ ಕಟ್ಟು, ವ್ಯಾಕರಣದ ನಿಟ್ಟು, ಪ್ರಾಸಾದಿಗಳ ಪೆಟ್ಟು (:-) ಮುಂತಾದುವೆಲ್ಲ ಕವಿಯನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಆದರೂ ಇಂಥ ಸಾಧನೆಯನ್ನು ಮಾಡಿದಾಗಲಲ್ಲವೇ ಸಿದ್ಧಿಯ ಹಿಗ್ಗು; ವೆಗ್ಗಳಗಳು!

ಆದುದರಿಂದಲೇ ಪದ್ಯಪಾನದ ಈ ಸಂಚಿಕೆಯಲ್ಲಿ ಪದ್ಯಪಾನಿಗಳಿಗೆಲ್ಲ ಸಂಭಾಷಣಪದ್ಯವನ್ನು ರಚಿಸುವ ಸಂದರ್ಭ ಬಂದಿದೆ. ಸಂಭಾಷಣಪದ್ಯರಚನೆಗೆ ಚೆನ್ನಾಗಿ ಒಗ್ಗಿಬರುವಂಥ ಸುಲಭವೂ ವ್ಯಾಪಕವೂ ಆದ ಛಂದಸ್ಸುಗಳು ಹಲವಾರು. ಮುಖ್ಯವಾಗಿ ಸೀಸಪದ್ಯ, ಭಾಮಿನೀ-ವಾರ್ಧಕಷಟ್ಪದಿಗಳು, ಚೌಪದಿ, ಕಂದ, ಸಾಂಗತ್ಯ, ಅನುಷ್ಟುಪ್ ಶ್ಲೋಕ, ಶಾರ್ದೂಲ-ಮತ್ತೇಭವಿಕ್ರೀಡಿತಗಳು, ಚಂಪಕ-ಉತ್ಪಲಮಾಲೆಗಳು, ರಗಳೆ ಮುಂತಾದುವನ್ನು ಹೆಸರಿಸಬಹುದು. ದೊಡ್ಡ ಸಂವಾದಗಳಿಗೆ ದೊಡ್ಡ ಛಂದಸ್ಸುಗಳೂ ಚಿಕ್ಕವಕ್ಕೆ ಚಿಕ್ಕವೂ ಸಹಜವಾಗಿ ಒದಗಿಬರುತ್ತವೆ. ಮಾದರಿಯಾಗಿ ಕೆಲವೊಂದು ಪದ್ಯಗಳಿಲ್ಲಿವೆ: ೧. ರಾಘವಾಂಕನ ಹರಿಶ್ಚಂದ್ರಕಾವ್ಯದಿಂದ ಆಯ್ದ ವಿಶ್ವಾಮಿತ್ರ-ಹರಿಶ್ಚಂದ್ರರ ಸಂವಾದಸಂದರ್ಭದ ಒಂದು ಪದ್ಯ.(ಇಲ್ಲಿ ಸಂವಾದವನ್ನು ಎತ್ತಿ ತೋರಿಸಲು ಸಂಧಿಯನ್ನು ಬಿಡಿಸಲಾಗಿದೆ. ಎಲ್ಲೆಡೆ ಸಂಧಿಯನ್ನು ಮಾಡಿಕೊಂಡರೆ ಇಡಿಯ ಪದ್ಯವು ಛಂದೋಧಾಟಿಯಲ್ಲಿ ಸಾಗುವುದು)

’ನಡೆ ರಥವನೇರಿಕೊಳ್’ ’ಒಲ್ಲೆನ್’ ಏಕೊಲ್ಲೆ?’ ’ಪರ-

ರೊಡವೆಯೆನಗಾಗದು’ ’ಏಕಾಗದು?’ ’ಆನಿತ್ತೆನ್’ ’ಇ-

ತ್ತಡೆ?’ ‘ಕೊಳಲು ಬಾರದು’ ‘ಏಂ ಕಾರಣಂ?’ ’ಬಾರದೆಮಗಂ ಪ್ರತಿಗ್ರಹ ಸಲ್ಲದು’ |

’ಕಡೆಗೆ ನಿನ್ನೊಡವೆಯಲ್ಲವೆ?’ ’ಅಲ್ಲವು’ ಏಕಲ್ಲ?’

ಕೊಡದ ಮುನ್ನೆನ್ನೊಡವೆ ಕೊಟ್ಟ ಬಳಿಕೆನಗೆಲ್ಲಿ

ಒಡವೆ?’ ಎಂದರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿಗೊಟ್ಟನು || (VIII-೬೬)

 

೨.ನನ್ನ ಅವಧಾನವೊಂರಲ್ಲಿ  ಅಪ್ರಸ್ತುತಪ್ರಸಂಗಿಗಳ ಹಾಗೂ  ನನ್ನ ನಡುವೆ ಸಾಗಿದ ಸಂವಾದಪದ್ಯ.

’ಮರೆವಾಯ್ತೇ ಅವಧಾನಿ?’ ’ನಿಮ್ಮ ಸಿರಿಯಾ ಸತ್ತ್ವಂ’ ’ಅದೇಂ ದೇಶಮೋ?’

ಒರೆದೆಂ ಕಾಲಮನಾಂ’ ’ಚಮತ್ಕೃತಿಯಿದೇಂ?’ ’ಸರ್ವಾವಧಾನೋಚಿತಂ’ |

’ಸರಿ’ ’ಎತ್ತಲ್?’ ’ಮುಗುಳೆತ್ತಲಾನುಂ’ ’ಅರರೇ! ನೀಂ ಮಾಳ್ಪಿರೇಂ ಕಬ್ಬಮಂ?’

’ಕೊರೆಯೇನೆನ್ನೊಳ್?’ ’ಅದೇಕೆ, ನೀಂ ಕೊರೆದಿರಲ್ ಬೆಚ್ಚಿರ್ಪುವಾ ಕಾಗೆಗಳ್ !!’

 

೩.ಗಂಡ-ಹೆಂಡಿರ ಸಂವಾದವೊಂದನ್ನು ಎಸ್.ವಿ. ಪರಮೇಶ್ವರಭಟ್ಟರು ಹೀಗೆ ಅಂತ್ಯಪ್ರಾಸಮಾತ್ರದ ಸಾಂಗತ್ಯದಲ್ಲಿ ಕಂಡರಿಸಿದ್ದಾರೆ:

’ಜ್ಯೋತಿಷಿಯೆಂದನು ಬಡತನವಿಹುದಂತೆ

ನನಗೆ ನಲ್ವತ್ತರ ವರೆಗೆ’ |

’ಆಮೇಲೆ?’ ’ಆ ಮೇಲೆ ಒಗ್ಗಿಹೋಗುವುದಂತೆ

ಬಡತನದೊಳೆ ಬಾಳ್ವುದೆಮಗೆ’ ||

  214 Responses to “ಪದ್ಯಸಪ್ತಾಹ ೭೮ – ಸಂಭಾಷಣೆಯ ಪದ್ಯರಚನೆ”

  1. ಮೊದಲ ಭೇಟಿಯಲ್ಲಿ ನಡೆದ ಚೆಲುವ(ಒಬ್ಬ ಸಂಚಾರಿ) ಮತ್ತು ಚೆಲುವೆಯರ ಸರಸ ಸಂವಾದ:

    ‘ವನಿತೇ ನಿನ್ನೊಡೆ ನೇಹಮಲ್ತೆ ಮಧುರಂ!’ ‘ಸಂಭ್ರಾಂತಿಯೇಂ? ಸಲ್ಲದಯ್’
    ‘ಮನದೊಳ್ ಭ್ರಾಂತಿಯ ಹೇತು ನೀನೆ!’ ‘ಪಥಿಕಾ! ನಿರ್ಹೇತು ಬಾಂಧವ್ಯಮಯ್’
    ‘ತನುವಿಂ ಬಂಧಿಸು ಹೇತುತರ್ಕಮುಳಿ’ ‘ಪೋ! ಆರಕ್ಷಕಂ ಬಂಧಿಪಂ’
    ‘ಜನರಂ ರಕ್ಷಿಪ ಯೋಧನಾನುಂ’ ಎನಲಾ ಲಜ್ಜಾವೃತಳ್ ಸೋಲ್ತಳಯ್ 🙂

    ತರ್ಕಮುಳಿ – ತರ್ಕಂ ಉಳಿ
    ಯೋಧನಾನುಂ – ಯೋಧಂ ಆನುಂ

    • ಪದ್ಯದಲ್ಲಿ ಸುಳಿದ ವಿಭಕ್ತಿಪಲ್ಲಟದೋಷವನ್ನು ದೂರವಾಣಿಯಲ್ಲಿ ತಿಳಿಸಿಕೊಟ್ಟ ಮಹೇಶರಿಗೆ ಧನ್ಯವಾದಗಳು, ಮೂಲದಲ್ಲೆ ಸವರಿಸಿದ್ದೇನೆ.

    • ನಿಮ್ಮ ಬ್ಯೂಟಿ ಬಹುಸುಲಭವಾಗಿ ಬುಟ್ಟಿಗೆ ಬಿದ್ದಳಲ್ಲ 🙂

      ಅಂಶಗಣಗಳನ್ನೇ ತಲೆಯಲ್ಲಿ ತುಂಬಿಕೊಂಡು ನಿದ್ದೆಗೆಟ್ಟು ನೋಡಿದ್ದರಿಂದ ಇದು ಮತ್ತೇಭವಿಕ್ರೀಡಿತ ಅನ್ನೋದೆ ಹೊಳೆದಿರಲಿಲ್ಲ. ಪ್ರತಿಪಾದದಲ್ಲೂ ಬ್ರಹ್ಮ ವಿಷ್ಣು ರುದ್ರ ಬ್ರಹ್ಮ ವಿಷ್ಣು ರುದ್ರ ಅಂತ ವಿಂಗಡಣೆ ಮಾಡಿಕೊಂಡು ತಲೆಕೆಡಿಸಿಕೊಂಡಿದ್ದೆ 🙂

      • ಶ್ರೀಕಾಂತರೆ, ಏನು ಮಾಡಲಿ, ಚೆಲುವೆಯನ್ನು ನಾಲ್ಕೇ ಸಾಲಿನಲ್ಲಿ ಒಲಿಸಬೇಕಿತ್ತಲ್ಲ, ನಮ್ಮ ಪಥಿಕನು ಸುರಸುಂದರನೇ ಇರಬೇಕು! 🙂

        ಮತ್ತೇಭವಿಕ್ರೀಡಿತದಲ್ಲು ಅಂಶರಚನೆಯನ್ನು ಗುರುತಿಸುವ ನಿಮ್ಮ ಅಂಶ ಛಂದಸ್ಸಿನ ಬಲ್ಮೆಯನ್ನು ಮೆಚ್ಚಲೇಬೇಕು 🙂

      • ಶ್ರೀಕಾಂತರೆ,
        ’ಅಕ್ಷರ(ವೃತ್ತ)ದ’ ಒಂದು ’ಅಂಶ’ವಾದರೂ ಹೊಳೆದಿದ್ದರೆ ಚೆನ್ನಾಗಿತ್ತು 🙂

  2. ಅರಸಾ ಕೇಳ್ದುದನೀವಯೇನ್? ಅಕ್ಕೆ ನೀಮಾಣವಿಸಿಂ
    ಶಿರಸಾ ವಹಿಪುದೆಮ್ಮಯ ಭಾಗ್ಯಂ
    ಅಧ್ವರಮಂ ರಕ್ಷಿಸಲ್
    ಬರವೇಳ್ ರಾಮನಿಗೆನ್ನೊಡಂ ಪದಿನಾರುಂ ತುಂಬಿಲ್ಲದಂ
    ಅರಸನಾಂ ಬರ್ಪೆನ್
    ಎನೆ ಮುನಿ ಮುನಿದಂ ಕೋಸಲಪನಳ್ಕಲ್

    • ದಶರಥ ವಿಶ್ವಾಮಿತ್ರರಲ್ಲಿ ನಡೆವ ಸಂಭಾಷಣೆ- ರಾಮನನ್ನು ಯಾಗಸಂರಕ್ಷಣೆಗೆ ಕಳಿಸುವ ಸಂದರ್ಭ. ನಡುವಣಕ್ಕರದಲ್ಲಿದೆ – ಒಂದು ಬ್ರಹ್ಮ, ಮೂರು ವಿಷ್ಣು, ಒಂದು ರುದ್ರ

  3. ನಲ್ಲೆ ನೀನಿಂತೇತರ್ಕಿರ್ಪಯ್? ನನ್ನಂ ಮಾತಾಡಿಸದಿರ್ಕೆ
    ಸೊಲ್ಲದೇ ತಿಳಿವುದೇನೆಮಗೆ ಸೊಲ್ಲೇತರ್ಕೊಲ್ಲದವರೊಡಂ
    ಸಲ್ಲದೀ ಸೊಲ್ಲೆನ್ನ ಕಾಂತೆ ಸಾಲ್ಗುಂ ಪೋ ಬರಿಮಾತಿಂದೇನಯ್
    ಎಲ್ಲೆನ್ನಿಂದಪಚಾರಮಾದುದೆನೆ ಕೇಳಲ್ ಕೈಕೇಯಿ ಸೆಟೆದಳ್

    • ಶ್ರೀಕಾಂತರೆ ನಿಮ್ಮ ಪೂರಣಗಳು ಯಾವ ಛಂದಸ್ಸಿನಲ್ಲಿವೆ? ಸ್ಥೂಲವಾಗಿ ಅರ್ಥವಾಯಿತು, ಭಾವಾರ್ಥವನ್ನು ತಿಳಿಸಿಕೊಡಿರಿ 🙂

    • ರಾಮ ಪಟ್ಟಾಭಿಷೇಕದ ಹಿಂದಿನ ದಿನ ಕೈಕೇಯಿ ಮಂಥರೆಯ ಮಾತಿನ ಮೇರೆಗೆ ಕೋಪಗೃಹದಲ್ಲಿದ್ದಾಗ ಅವಳಿಗೂ ದಶರಥನಿಗೂ ನಡೆವ ಸಂಭಾಷಣೆ. ವಿವರಣೆಯಿಲ್ಲದೆಯೇ ಅರ್ಥವಾಗುತ್ತೆ ಅಂದುಕೊಂಡಿದ್ದೆ. ತಪ್ಪು ತಿಳಿದಿದ್ದೆ ಅಂತಾಯ್ತು. ಇದು ದೊರೆಯಕ್ಕರದಲ್ಲಿದೆ. ಪ್ರತಿಪಾದದಲ್ಲಿ ಎರಡು ವಿಷ್ಣು ಒಂದು ಬ್ರಹ್ಮ ಎರಡು ವಿಷ್ಣು ಒಂದು ಬ್ರಹ್ಮ

      • ಶ್ರೀಕಾಂತರೆ ಚೆನ್ನಾಗಿದೆ :),

        ಧನ್ಯವಾದಗಳು, ಕ್ಷಮಿಸಿರಿ ಪದೇ ಪದೇ ಛಂದಸ್ಸು ಯಾವುದೆಂದು ನಿಮಗೆ ಹಿಂದಿನ ಸಂಚಿಕೆಗಳಿಂದ ಕೇಳುತ್ತಿದ್ದೇನೆ. ಕಾರಣವಿಷ್ಟೆ, ಅಕ್ಕರದ ಛಂದಸ್ಸುಗಳು ನನಗೆ ಇನ್ನೂ ಮೈಗೂಡಿಲ್ಲ, ಹಾಗಾಗಿ ಈ ಬಾರಿಯೂ ಗುರುತಿಸಲಾಗಲಿಲ್ಲ. ಈ ವಾರದ ಮೃಚ್ಛಕಟಿಕದ ಪಾಠದಲ್ಲೂ ಗಣೇಶರಲ್ಲಿ ಈ ಬಗ್ಗೆ ಮಾತನಾಡಿದ್ದೆ, ಪದ್ಯಪಾನದಲ್ಲಿ ಅಕ್ಕರಗಳ ಲಕ್ಷಣಗಳನ್ನು ಹಾಕಬೇಕು, ನಮಗೆ ಕಲಿಕೆಗೆ ಹಾಗು ಪ್ರಯೋಗಕ್ಕೆ ಸುಲಭವಾಗುವುದು ಎಂದು. ನಿಮ್ಮ ಪದ್ಯ ವಿವರಣೆ ಇಲ್ಲದೆಯೇ ತಿಳಿಯುತ್ತದೆ, ಆದರೆ ಗತಿತಿಳಿಯದ ಕಾರಣ ಪದ್ಯರೂಪದಲ್ಲಿ ಓದುವುದು ನನಗೆ ಸ್ವಲ್ಪ ಕಷ್ಟವಾಯಿತು ಅಂತೆಯೆ ಗತಿಗೆ ತೊಳಲಿ ಅರ್ಥವನ್ನು ಗಮನಿಸಲಿಲ್ಲ. ಬೇಗ ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳುವೆ.

  4. A student’s complaint to an elder:

    “किं शालानरकेन तात वद भोः!” “विद्यालयावेशनं”
    “किं तेनापि घुणीकृतेन युवकान्?” “संशोधनावेशनं” ।
    “किं मूर्खैः गुरु-नाम-धूर्त-पतिभिः?” “कार्यालयावेशनं”
    “धिक् धिक् वेशन-भूत-विभ्रम-हृतं लोकं भवद्-वर्जितं” ॥

    “What is the point of going through this hell called school?” “So that you may enter college”
    “What’s the point of college, which turns youths into bookworms [literally]? “So that you may enter research”
    “What’s the point of [serving] cheats in the guise of Gurus?” “So that you may enter a job”
    “To hell with this world, being twirled around by the ghost of ‘entrances’ and neglecting to live in the present!”

    A conversation between a modern manager and an employee:

    “अश्मानं हर शीघ्रम् एकम् इह!” “भो! लब्धो ह्ययम्, स्वीकुरु”
    “मा माऽयं कपिलोऽवदातविमलं वर्णीयकं वाञ्छितम्” ।
    “कष्टेनामृतशैलको ह्यधिगतो, तम् स्वीकुरु स्वामि भोः”
    “स्थूरोऽयम्! न भजे!” रुषा त्विति वदन् तूलीस्पृहोऽकुप्यत ॥

    “Bring me a rock!” “Sir, I found one, here it is”
    “No no, this is brown. I wanted one that is spotless white”
    “Sir, with great difficulty I found this marble stone, please accept this”
    “Bah, this is heavy, I don’t like it!” — saying thus, [the boss] who actually wanted cotton, got angry.”

    🙂

  5. ಈ ಪದ್ಯವನ್ನು ನನ್ನನ್ನು ಪೃಚ್ಛಕನಾಗಿ ಅಷ್ಟಾವಧಾನದಲ್ಲಿ ಮೊದಲನೇಯ ಬಾರಿ ಕರೆದಾಗ ಬರೆದದ್ದು. ವಾಸು ಮತ್ತು ಶಂಕರರು ಸಹಾಯಹಸ್ತ ನೀಡಿದ್ದರು.

    ವಸ್ತು: ಹಿಮದಮಳೆ ಮತ್ತು ನೀರಿನ ಮಳೆಯ ಸಂವಾದ

    ಹಿಮ – तुषाराद्रिकिरीटोस्मिs
    ನೀರು – सन्तापे का गतिस्तवs?|
    ಹಿಮ – सितिम्नोस्मि महोल्लेख:
    ನೀರು – स्रष्टाहं सप्तवर्णिन:||

    ಮೊದಲನೇಯಪಾದದಲ್ಲಿ ಗತಿಯನ್ನು ಇನ್ನೂ ಸುಧಾರಿಸಬಹುದೆನಿಸುತ್ತದೆ.

    • ಅನುಷ್ಟುಪ್ ಗತಿಯನ್ನು ತಿದ್ದಲು ತುಹಿನಾದ್ರಿಯನ್ನು ತುಷಾರಾದ್ರಿ ಮಾಡಿದ್ದೇನೆ, ಸೂಚಿಸಿದ ಮಹೇಶರಿಗೆ ಧನ್ಯವಾದಗಳು

  6. ತೆರೆದ ಪುಟದೊಳಗೇನ ಯೋಚಿಸಿ
    ಕೆರೆಯುತಿಹೆ ನೀಂಬೊಕ್ಕತಲೆಯ-
    ನ್ನಿರುವ ಕೆಲಸವಬಿಟ್ಟು ಸಮಯವನೇಕೆ ಕೊಲ್ಲುವಿರಿ?|
    ಬರೆಯುತಿಹೆ ನಾಂಪದ್ಯಗಳ ನೀ-
    ನರಿಯದಿರೆ ನಾನೇನಮಾಡಲಿ!
    ಮರುಳೆ, ನಿನಗರ್ಥವನುಮಾಡಿಪುದಾಗದಾ ಕೆಲಸ|

    ಒಬ್ಬ ಕವಿ ಹಾಗೂ ತನ್ನ ಹೆಂಡತಿಯೊಡನೆ ನಡೆಯುವ ಸಂವಾದ

    • ಚೀದಿಯ ardent ಅಭಿಮಾನಿಯೊಬ್ಬಳ emotional ನಿವೇದನ:

      ಪಲ್ಲವ||
      ಪದ್ಯಮಿದೆನಗೆ ಸುಲಭಗ್ರಾಹ್ಯಂ
      ಹೃದ್ಯನಲ್ತೆಲೆ ಕರ್ತೃವಿದರಂ|
      ವೇದ್ಯಮಲ್ತೆಲದರ್ಹಳೆನುತುಂ
      ‘ಚೀದ್ಯಸತಿ’ಯಿವಳೆನಿಸಲುಂ||

  7. ಸಂಸ್ಕೃತದಲ್ಲಿ ಮಾತ್ರ ಸಂಭಾಷಿಸುವೆನೆಂಬ ವ್ರತ ಕೈಗೊಂಡಿದ್ದವನು ಸಂಸೃತವನ್ನು ಎಳ್ಳಷ್ಟೂ ಅರಿಯದಾಕೆಯನ್ನು ವರಿಸಿದ ನಂತರ ಏಕಾಂತದಲ್ಲಿ ನಡೆದ ಸಂಭಾಷಣೆ 😉

    ’ದೇಹ್ಯಾಶ್ಲೇಷಸುಖಮ್’ ’ಅದಲ್ತು ರಮಣಾ ! ಪುಟ್ಟಿರ್ಪೆನಾಂ ಪುಬ್ಬೆಯೊಳ್’
    ’ಪ್ರೀತಿಸ್ತೇಂಕುರಿತಾ’ ’ಇದೇಂ ಕುರಿಯೆನುತ್ತುಂ ಪೇಳ್ವುದೇ ಪೆಂಡಿರಂ’ |
    ’ಹಾ ಹಾ ! ಧಿಕ್ ! ಕಿಮು ಘೋರವಿಪ್ರಲಪಿತೈಃ ಕ್ಲಿಶ್ನಾಸಿ ಮಾಂ ಭಾಮಿನಿ !’
    ’ನೀರುಂ ಸಾರದ ಗಂಟಲೊಳ್ ಕಡುಬನಿಂತೇತಕ್ಕೆ ನೀಂ ತಳ್ವುದೈ’ ?||

    • ಅದ್ಭುತವಾಗಿದೆ ಪೆಜತ್ತಾಯರೆ ಬಹಳ ಹಿಡಿಸಿತು 🙂

    • Brilliant!

    • ರಮಣೀಯವಾದ ಪದ್ಯ 🙂

    • ಆಶ್ಲೇಷದಲ್ಲಿ ನವಪತ್ನಿ ತವರಿಗೆ ಹೋಗುತ್ತಾಳೆ. ಅದೊಂದುಳಿದು, ನಂತರದೆಲ್ಲ ಆಶ್ಲೇಷಗಳಲ್ಲಿ ಅವಳು ತವರಿಗೆ ಹೋಗುವುದು ಸುಖಪ್ರದವೆ. ಆ ಸುಖ ಅಪೇಕ್ಷಿಸಿದಿರೆ? 🙂
      ಪದ್ಯವಂತೂ ಬಹಳ ಚೆನ್ನಾಗಿದೆ.

      • Tumba chennaagide Sir

      • ಗೊತ್ತಿಲ್ಲ ಸರ್ 😉 ಮದುವೆಯಾಗಿ ೨ ತಿಂಗಳು ಕಳೆದಿದ್ದಷ್ಟೇ 😉
        ಮೆಚ್ಚುಗೆಗೆ ಕೃತಜ್ಞತೆಗಳು 🙂

    • Tumba chennaagide sir

      • शङ्करस्य प्रसादेन लोकः को वा न नन्दति ? 🙂
        धन्योस्मि 🙂

  8. ಅಕ್ಕ ನಿನ್ನ ಗಂಡ ಆಗೋರು ತುಂಬಾ ಕಪ್ಪು ಕಣೇ
    ಪಕ್ಕದ ಮನೆಯ ಹುಡುಗನಿಗಿಂತ ಬೆಳ್ಳಗೆ ಇಲ್ಲವೇನೇ

    ಕೆಕ್ಕರಿಸಿ ನಿನ್ನ ನೋಡೋ ನೋಟ ಸೊಟ್ಟ ಇಲ್ಲವೇನೇ
    ಅಕ್ಕರೆಯಿಂದ ನೋಡೋವಾಗ ಕಾಣೋದು ಸೋಟ್ಟನೇ ಕಣೇ

    ಸೊಕ್ಕು ತುಂಬಾ ಜಾಸ್ತಿ ಅವನು ಈಗಲೇ ತೋರಿಸ್ತಾನೆ
    ರೊಕ್ಕ ಇರೋ ಹುಡುಗರಿಗೆ ಅದು ಸಹಜ ಅಲ್ಲವೇನೇ

    ಸಿಕ್ಕ ಸಿಕ್ಕ ಹುಡಿಗಿಯರ ಹಿಂದೆ ಓಡಿ ಹೋಗ್ತಾನೇ
    ಕೊಕ್ಕೆ ಹಾಕಿ ಹಿಡಿದು ತರಲು ಬೇಗ ಮದುವೆ ಅಗ್ತೀನೇ

    ಚಿಕ್ಕ ಚಿಕ್ಕ ವಿಷಯಕ್ಕೆಲ್ಲಾ ತುಂಬಾ ತರಲೆ ಮಾಡ್ತಾನೇ
    ಚೊಕ್ಕವಾಗಿ ಜೀವನ ನೆಡೆಸೊರು ಸ್ವಲ್ಪ ಹಗೇನೇ ಕಣೇ

    ಅಕ್ಕ ಏನೇ ಹೇಳು ಅವನು ನಿನಗೆ ಸರಿ ಹೊಂದೋದಿಲ್ಲವೇ
    ಪಕ್ಕ ಅವನ್ನೇ ಮದುವೆ ಅಗಿ ನಾನು ಸುಖವಾಗಿ ಇರ್ತ್ತೇನೇ

    • ಐಡಿಯ ಹಾಗೂ ಭಾಷೆ ಚೆನ್ನಾಗಿದೆ. ಅರ್ವಾಚೀನ ಜಾನಪದದಂತಿದೆ.

      ’ಬ್ರಹ್ಮs ನಿಂಗೆs ಜೋಡುsಸ್ತೀನಿs ಎಂಡs ಮುಟ್ಟಿದ್ ಕೈನs’ ರೀತಿಯಲ್ಲಿ 7 ಬ್ರಹ್ಮಗಣಗಳಿಗೆ ಹೊಂದಿಸಿ.

      ಮಾದರಿ:
      ಅಕ್ಕs ನಿನ್ನs ಗಂಡsನಾಗೋನ್ ತುಂಬs ಕಪ್ಪುs ನೋಡೇ|
      ಪಕ್ಕದ್ ಹಟ್ಟಿs ಹುಡ್ಗನ್ಗಿಂತs ಬೆಳ್ಳsಗಿಲ್ಲsವೇನೇ||

      ’ಕಣೇ’ ಎನ್ನುವುದನ್ನು ’ನೋಡೇ’ ಎಂದು ತಿದ್ದಿರುವ ಕಾರಣವೆಂದರೆ, ಕರ್ಷಣಕ್ಕೆ ಅವಕಾಶವಿರುವ ಅಂಶಛಂದಸ್ಸಿನಲ್ಲಿಯೂ ಲಗಾದಿ ಬರುವಂತಿಲ್ಲ.

      • ಪ್ರಸಾದು ಅವರೇ ಧನ್ಯವಾದಗಳು, ನೀವು ತಿಳಿಸಿದಂತೆ ಬದಲಾವಣೆ ಮಾಡುತ್ತೇನೆ
        ನನಗೆ ಇನ್ನು ಛಂದಸ್ಸಿನ ಮೇಲೆ ಹಿಡಿತ ಕಮ್ಮಿ, ಮುಂದೆ ಇನ್ನು ಚನ್ನಾಗಿ ಪ್ರಯತ್ನ ಮಾಡುತ್ತೇನೆ

  9. “ಅಮ್ಮಾ!” “ಏನ್ಮಗ?” “ರಾತ್ರಿಯಾಯ್ತೆ?” “ಅಹುದೈ”. “ನೀನೆಂತು ಕಂಡಿರ್ಪೆಯೌ?”
    “ತಮ್ಮಾ ನೋಡದೊ ಚಂದಿರಂ” “ನನಗೆ ಬೇಕೈತಂದು ನೀಡೌ” “ಅದೋ
    ಬಿಮ್ಮಾದಾಟಿಕೆ” “ಬೇಡ ಬೇಡವೆನಗಂ” “ಕೋ ದರ್ಪಣಂ” ನೋಡುತುಂ
    ದುಮ್ಮಾನಂಗಳ ಬಿಟ್ಟು ಹಾಸ ಮೆರೆದಿರ್ದಾ ರಾಮಚಂದ್ರಾ! ನಮೋ

    • ಸೊಗಸಾದ ಕಲ್ಪನೆ ರಾಮಚಂದ್ರ. ಕೊನೆಯ ಪಾದದಲ್ಲಿ ಛಂದಸ್ಸೆಡವಿದೆ. ಉಳಿದದ್ದೆಲ್ಲ ಟಾಪ್-ಕ್ಲಾಸ್

      ಕೆಮ್ಮಾದಾಟಿಕೆ ಎಂದರೆ ಯಾವ ಆಟಿಕೆ?

      • ಕಲ್ಪನೆ ನನ್ನದಲ್ಲ. ಕುವೆಂಪುರವರ ರಾಮಾಯಣ ದರ್ಶನದಲ್ಲಿ ಮಂಥರೆ ಕನ್ನಡಿಯನ್ನು ತರುತ್ತಾಳೆ.
        ಛಂದಸ್ಸನ್ನು ಸರಿಪಡಿಸಿದ್ದೇನೆ.
        ಕೆಮ್ಮು ಅಂದರೆ ಕೆಂಪು ಎಂದು ತಿಳಿದಿದ್ದೆ. ಆದರದು ‘ಸುಮ್ಮನೆ’, ‘ಪೊಳ್ಳು’ ಎಂಬರ್ಥಗಳನ್ನು ಹೊಂದಿರುವುದರಿಂದ, ಅದನ್ನು ಬಿಮ್ಮು ಎಂದು ಮಾಡಿದ್ದೇನೆ. ಬಿಮ್ಮಾದಾಟಿಕೆ ಅಂದರೆ ಹಿರಿದಾದ ಆಟಿಕೆ ಎಂದರ್ಥ.

      • ಶ್ರೀರಾಮಾಯಣದರ್ಶನವನ್ನು ನಾನೋದಿ 15-20 ವರ್ಷಗಳೆ ಕಳೆದಿವೆ. ಆದ್ದರಿಂದ ಸರಿಯಾಗಿ ಜ್ಞಾಪಕವಿಲ್ಲ. ನಿಜವಾಗಿ ಏನು ಸೊಗಸಾದ ಕಲ್ಪನೆ. ರಾಮನಮುಖವೇ ಚಂದ್ರ ಅನ್ನೋದಿಲ್ಲಿ ತಾತ್ಪರ್ಯ. ಅದಕ್ಕೆ ಚಂದ್ರನನ್ನು ಕೇಳೀದವನಿಗೆ ತನ್ನ ಮುಖದ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಿದ ತತ್ಕ್ಷಣ ಸಮಾಧಾನವಾಯಿತು ಎನ್ನುವ ಚಿತ್ರಣ- ಸೂಚ್ಯರೂಪಕ. ಗಣೇಶರೆ ಇದು “ವಿಶೇಷ” ಅಲಂಕಾರವಾದೀತೆ.

    • ರಾಮಾಯಣದರ್ಶನದೊಳ್
      ರಾಮಂ ಬಾಲ್ಯದೆ ಹಿಮಾಂಶುವನ್ನಾಶಿಸೆ ತಾಂ
      ಪ್ರೇಮಮನೀಯುವ ಮಂಥರೆ
      ರಾಮನ ಪದ್ಯಕೆ ನೆಗಳ್ತಿಯಾ ಸ್ಪೂರ್ತಿಯು ದಲ್

      ಚೆನ್ನಾಗಿದೆ ರಾಮ್ 🙂

    • ರಾಮನು ಹಗಲಿನಲ್ಲಿ ಹುಟ್ಟಿದನೆ! ನಾನು ನೋಡಲಾಗಲಿಲ್ಲವೆ! ಎಂದು ಚಂದ್ರನ ದುಃಖ. ಆ ದುಃಖವನ್ನು ನೀಗುವಂದದೆ ’ಚಂದ್ರ’ ಅವನ ಹೆಸರಿನಲ್ಲಿ ಸೇರಿಹೋಗಿದೆ (ರಾಮಚಂದ್ರ):

      ರಥೋದ್ಧತ||
      “ಪೂರ್ವಾಹ್ನದೊಳ್ ಪುಟ್ಟಿರೆ ರಾಘವಂ, ನಾ-
      ನೊರ್ವಂ ಚಿರಂ ವಂಚಿತನಪ್ಪೆ, ಕಾಣೆಂ”
      ಮೀರ್ವಂದದೊಳ್ ಚಂದ್ರನ ದುಃಖಮೆಂದುಂ
      ಸರ್ವರ್ ವಲಂ ಭಾವಿಸೆ ರಾಮ’ಚಂದ್ರಂ’

  10. ಕರುವಿಗೆ ಪಾಲನೂಡಿ ಬರಲೇನ್? ಗಹಹಾ! ನುಸುಳಲ್ಕೆ ಪೂಟಮೇಂ!
    ಸರಸರ ಪೋಗಿಬರ್ಪೆನಿದಿಗೋ ಸಲೆ ಸುಳ್ಳೆನದಿರ್ಕಿದಾಟಮೇಂ?
    ಹರಹರ ಸುಳ್ಳನೆಂದು ನುಡಿಯೆಂ ಪಸಿದಿರ್ಪೆನಗಿಂತು ಕಾಟಮೇಂ!
    ತ್ವರಿತದೆ ಬರ್ಪೆನೆಂದು ಪುಲಿಗೊಪ್ಪಿಸಿಯೋಡಿತು ಪುಣ್ಯಕೋಟಿ ತಾಂ

  11. “ಯಾಕೋ ಸ್ಕೂಲಿಗೆ ಲೇಟು ಮಾಣಿ” “ಬಿಡಿಸಾ ವೃದ್ಧರ್ಗೆ ಹೆಲ್ಪ್ಮಾಡಿದೆಂ”
    “ಬೇಕಾದಂತೆ ಬರೋಕಿದೇನ್ ಗಡವ ನಿನ್ನಪ್ಪನ್ ಮನೇ ಕೆಟ್ಟಿತೇಂ
    ಸಾಕೀ ಮೋಸದ ಮಾತುಗಳ್ ಸಮಯವೇಕಿಷ್ಟಪ್ಪುದೋ”
    “ಅಲ್ಲ ಸಾ
    ಏಕಷ್ಟೆಲ್ಲರು ದಾರಿದಾಟಿಪೆನೆನಲ್ಕೊದ್ದಾಡಿದರ್ ಕಾಣೆನಾಂ”

    [based on an old joke about a student forcibly helping unwilling elders to cross the street]
    [please excuse the lack of classicality]

    • ಕೊನೆಯ ಪಾದದಲ್ಲಿ ಒಂದು ಮಾತ್ರೆ ಹೆಚ್ಚಾಗಿತ್ತು. ಅಲ್ಲೇ ಸರಿಮಾಡಿಯಾಗಿದೆ. ತೋರಿದ ಮಹೇಶ ಭಟ್ಟರಿಗೆ ಧನ್ಯವಾದಗಳು

  12. ಹೊಲೆಮನೆಯೊಳಗಿಂದಂ ಹುಟ್ಟುತಂದಾಪುಟ್ಟ,
    ಹೆರಲುತಾನುಂಪಟ್ಟಳುವೊಂದುಂ ಬಂದಿಹುದು
    ಏತಕೀ”ಅಳು” ಮಗುವೆ, ಕರುಳಕೊಯ್ದಾ ನೋವೇ?
    ಹೊರಬಂದುದಕೆ ಭಯವೆ? ಇಲ್ಲವಮ್ಮಾ ನೋಡು,
    ನಿನ್ನಳುವೆ ಬಂದಿಹುದು ನನ್ನಕಣ್ಣಲ್ಲಿಂದು.
    ನಿನ್ನಳುವು ತಂದಿಹುದು ನನ್ನಲ್ಲಿ ಹೊಸ”ಇರವು”
    ನಾನಳೆನು ನೋಡುಮಗು ನಗುತಿಹೆನು ನೀನುನಗು ।।೧।।

    ಹೊಸಮನೆಯೊಳಗಿಂದಂ ತೊಟ್ಟಿಲಾ ಕಂದನುಂ,
    ಅಮ್ಮನೆತ್ತಲುಪಟ್ಟಳುವೊಂದುಂ ಬಂದಿಹುದು
    ಏತಕೀ”ಅಳು” ಮಗುವೆ, ಪುಟ್ಟ ಹೊಟ್ಟೆಯ ನೋವೇ?
    ಒದ್ದೆಯಾಯಿತೆ ಅರಿವೆ? ಇಲ್ಲವಮ್ಮಾ ನೋಡು,
    ನಿನ್ನೊಲವೆ ಬಂದಿಹುದು ನನ್ನಕಣ್ಣಲ್ಲಿಂದು.
    ನಿನ್ನಳುವು ತಂದಿಹುದು ನನ್ನಲ್ಲಿ ಹೊಸ”ಒಲವು”
    ನಾನಿನ್ನ ಮರೆತಿಲ್ಲ ಬಂದಿಹೆನು ನೀನುನಗು ।।೨।।

    ಮದುಮನೆಯೊಳಗಿಂದಂ ಮಗಳ ಹೊರಡುವತವಕ,
    ತಾಯ ಕಳಿಸುವತವಕದಳುವೊಂದು ಬಂದಿಹುದು
    ಏತಕೀ”ಅಳು” ಮಗಳೆ, ಹೊಸಬಾಳ ಸಂಭ್ರಮವೊ?
    ಅಗಲಿಕೆಯ ಸಂಕಟವೊ? ಇಲ್ಲವಮ್ಮಾ ನೋಡು,
    ನಿನ್ನನಲಿವೇ ಬಂತು ನನ್ನಕಣ್ಣಲ್ಲಿಂದು.
    ನಿನ್ನಳುವು ತಂದಿಹುದು ನನ್ನಲ್ಲಿ ಹೊಸ”ಅರಿವು”
    ನಾನರಿತೆನೇನಿಂದು ನಿನ್ನಮನ ನೀನುನಗು ।।೩।।

    ಸಾವಮನೆಯೊಳಗಿಂದಲೊತ್ತೊತ್ತಿಮುತ್ತಿದ್ದ,
    ಬತ್ತಿತಾಮೆತ್ತಿದ್ದಳುವೊಂದುಂ ಬಂದಿಹುದು
    ಏತಕೀ”ಅಳು” ಮನವೆ, ತಬ್ಬಲಿಯ ಮೊರೆಯದೋ?
    ತಬ್ಬಲಿಹ ಹೊರೆಯದೋ? ಇಲ್ಲವಮ್ಮಾ ನೋಡು,
    ನಿನ್ನರಿವೆ ಬಂದಿಹುದು ನನ್ನಕಣ್ಣಲ್ಲಿಂದು.
    ನಿನ್ನಳುವು ತಂದಿಹುದು ನನ್ನಲ್ಲಿ ಹೊಸ”ಗೆಲವು”
    ನಾಗೆದ್ದು ಹೊರಟಿಹೆನು ಕಣ್ಣೊರೆಸಿ ನೀನುನಗು ||೫||

    ನಿಜಮನೆಯೊಳಗಿಂದಂ ಕಣ್ಣೀರ ತವಕದಿಂ,
    ದೊಡಲಿನಾ ತಪನದೊಳಗಳುವೊಂದು ಬಂದಿಹುದು
    ಏತಕೀ”ಅಳು” ಮಗುವೆ, ಪಟ್ಟ ಪರಿತಾಪವೋ?
    ಪಡೆದ ಪರಿಣಾಮವೋ? ಹೌದಲ್ಲವೇನಮ್ಮ,
    ನಿನ್ನಿರವೆ ಬಂದಿಹುದು ನನ್ನಕಣ್ಣಲ್ಲಿಂದು,
    ನನ್ನಳುವು ನಿನ್ನದೇ ಕಣ್ಣೀರ ಕಡಲಿಂದೆ
    ಅದಕೆಹೀಗದು”ಉಪ್ಪು” ಬಾನನ್ನನೀನಪ್ಪು ।।೫।।

    (ಪಂಚಮಾತ್ರ ಚೌಪದಿ / ವಾರ್ದಕ ಷಟ್ಪದಿಯಲ್ಲಿ ಪ್ರಯತ್ನಿಸಬಹುದಿತ್ತು, ಆದಿಪ್ರಾಸ ಕಷ್ಟವಾಯ್ತು. ಹಾಗಾಗಿ ಲಲಿತ ರಗಳೆಯಲ್ಲಿ ಪ್ರಯತ್ನಿಸಿದ್ದು. ಆದಷ್ಟೂ ವಿಸಂಧಿ ದೋಷಗಳನ್ನ ಪರಿಹರಿಸಿದ್ದೇನೆ. ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿಕೊಡಿ)

  13. “ಅಮ್ಮಾ!” “ಏನ್ಮಗ?” “ನೋಡು ನಿನ್ನ ಮಗನಂ” “ಏನ್ಮಾಡಿದಂ?” “ಒದ್ದನೌ”
    “ತಮ್ಮನ್ನೊರ್ದಿಪರೇನೊ?” “ಸುಳ್ಳು ನುಡಿವಂ ಕಾಲ್ತಾಗಿತಷ್ಟೇ” “ಅಹಾ!
    ಬಿಮ್ಮಾನಂಗಳವೇನು ಕೂಟ ನಗಯೊಳ್”
    “ಪಾವ್ ಭೀತಿಯಂ ಕಂಡೆನಾಂ”
    “ಸುಮ್ಮಂಗಿರ್ದೊಡೆಯುಂಡೆ ನೀಳ್ಪೆ” ನೆನುತುಂ ನಕ್ಕಂಬೆಗಂ ವಂದಿಪೆಂ ||

    [ಗಣೇಶ, ಶಣ್ಮುಖ, ಪಾರ್ವತಿಯರ ಸಂಭಾಷಣೆ]

  14. ಒಳ್ಳೆಯ ಹುಮ್ಮಸ್ಸಿನಿಂದಲೇ ಮೊದಲಾಗಿದೆ.ತುಂಬ ಸಂತೋಷ. ಸಾಮೂಹಿಕವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ದಯ್ಮಾಡಿ ಅವಿನಯವನ್ನು ಮನ್ನಿಸಿರಿ.ಮೊತ್ತಮೊದಲಿಗೆ ನನಗೆ ಪೆಜತ್ತಾಯರ ಪದ್ಯ ತುಂಬ ಮೆಚ್ಚಾಯಿತು. ಶ್ರೀಕಾಂತರ ಪದ್ಯಗಳೆಲ್ಲ ಲಕ್ಷಣಶುದ್ಧವಾಗಿ, ನಿಯಮ ನಿಯಂತ್ರಿತವಾಗಿ, ಸ್ವಯಂಪೂರ್ಣವೆನಿಸಿವೆ.ರಾಮಚಂದ್ರನ ಭಾಷೆ ತುಂಬ ವಾಡಿಕೆಯದಾಗಿ ಎಲ್ಲ ಬಗೆಯ ಕನ್ನಡಗಳ ಅವಿಚಾರಿತಮಿಶ್ರಣವಾಯಿತೆನಿಸುತ್ತದೆ. ವೈ ಎನ್ ಕೆ ಹೇಳುವಂತೆ “ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ? 🙂 ಅದರೆ ಛಂದಸ್ಸಿನಲ್ಲಿ ಮಾತ್ರ ಬಿಕ್ಕಟ್ಟಿದೆ.@ ಶ್ರೀಕಾಂತರೇ! ರಾಮ್ ಬರೆದ ಪದ್ಯದಲ್ಲಿಪ್ರೇಯೋಲಂಕಾರವನ್ನು ಗುರುತಿಸಬಹುದು. ಸೋಮನ ಸಂಸ್ಕೃತಪದ್ಯವನ್ನು ಈ ಮೊದಲೇ ನೋಡಿದ್ದೆ; ಅದು ಚೆನ್ನಾಗಿಯೇ ಇದೆ.ಆತನ ಕನ್ನಡಪದ್ಯವೂ ಚೆನ್ನಾಗಿದೆ. @ಸೋಮ, ಅಕ್ಕರಗಳಿರಲಿ, ಎಲ್ಲ ಅಂಶಬಂಧಗಳೂ ಕಾಶ್ಯಪಗೋತ್ರದಂತೆ; ಕರ್ಷಣಕ್ಕೆ ಒಳಪಡಿಸಿ ಯಾವ ವೃತ್ತವನ್ನೂ ಈ ಹಳಿಗೆ ಜಾರಿಸಬಹುದು:-) ಹೀಗಾಗಿಯೇ ಈ ಬಂಧಗಳು ನಿಬಿಡವಾದರೆ ಚೆನ್ನೆನಿಸವು. ಇವು ಸುಕುಮಾರವೇ ಆಗಬೇಕು. ಹೀಗಾದರೆ ಏಕತಾನತೆ ತಪ್ಪದು. ಸಂಗೀತವೇ ಇವುಗಳಿಗೆ ಭೂಷಣ. ಓದುಗಬ್ಬದಲ್ಲಿ ಆ ಸವಲತ್ತೆಲ್ಲಿ? ಆದುದರಿಂದಲೇ ವೃತ್ತಗಳ ವೈವಿಧ್ಯವಿಲ್ಲಿ ಮೃಗ್ಯ. ಉಷಾ ಅವರು ಈ ಬಾರಿ ತೀರ ಕವಿತೆಯನ್ನು ಜಾಳಾಗಿಸಿದ್ದಾರೆ, ಸಂಕ್ಷೇಪ ಮತ್ತು ಸಲ್ಲಕ್ಷಣವನ್ನು ಮರೆಯಬಾರದು. ತುಂಬ ನಿಡಿದಾದ ರಚನೆಯನ್ನು ಕೂಲಂಕಷವಾಗಿ ತಿದ್ದುವುದು ಕಷ್ಟ:-). ಮೋಹನ್ ಅವರ ಕಲ್ಪನೆ ಅತಿಸುಂದರ ಮತ್ತು ಸ್ವೋಪಜ್ಞ. ಆದರೆ ಭಾಷೆಯಲ್ಲಿ ಸುಧಾರಣೆಗಳು ಬೇಕಿವೆ.

    • ಗಣೇಶ್ ಸರ್,

      ಅಂಶ ಛಂದಸ್ಸುಗಳು ಸುಕುಮಾರಬಂಧಪ್ರಧಾನವಾಗಿವೆ ಹಾಡಿಕೊಳ್ಳುವುದಕ್ಕೆ ಹೆಚ್ಚು ಸೂಕ್ತ, ನಿಬಿಡಬಂಧಗಳನ್ನು ತೋರಬಹುದಾದ ವೃತ್ತಗಳಲ್ಲಿ ಓದುಗನಿಗೆ ಗತಿಯನ್ನು ಸ್ಫುಟವಾಗಿ ಕಾಣಬಹುದೆಂಬುದನ್ನು ಮತ್ತು ನಿಬಿಡಬಂಧಗಳ ಸಂಸ್ಕೃತಸಮಾಸಗಳಿಂದ ಪದ್ಯ ಹೆಚ್ಚು ಸೊಗಸಾಗಿ ಅಡಕವಾಗಿ ಅಚ್ಚುಕಟ್ಟಾಗಿ ಮಾಡಬಹುದನ್ನು ಒಪ್ಪುತ್ತೇನೆ. ಅಕ್ಕರಗಳ ನಿಯಮಗಳು ನನಗೆ ಸ್ಫುಟಬವಾಗಿಲ್ಲವೆಂದು, ತಿಳಿದುಕೊಳ್ಳೋಣವೆಂದು ಅಕ್ಕರಗಳ ಮಾಹಿತಿ ಕೇಳಿದೆ ಅಷ್ಟೆ :). ಮಾಹಿತಿಗೋಸ್ಕರ ಇನ್ನೊಂದೆರಡು ಪ್ರಶ್ನೆಗಳಿವೆ:
      ಹಳಗನ್ನಡದಲ್ಲಿ ಮತ್ತು ಸಂಸ್ಕೃತದಲ್ಲಿ ಅಂಶಛಂದಸ್ಸಿನ ಬಳಕೆ ಪ್ರಧಾನವಾಗಿಲ್ಲವೆಂದೆನಿಸುತ್ತದೆ, ಸರಿಯೇ? ಇದು ನಡುಗನ್ನಡಲ್ಲಿ ಮಾತ್ರ ಪ್ರಚಲಿತವಾಯಿತೆ? ನಡುಗನ್ನಡದಲ್ಲಿ ಇದನ್ನು ಬಿಡಿಪದ್ಯಗಳಿಗೆ/ಯಕ್ಷಗಾನಕ್ಕೆ ಬಿಟ್ಟರೆ ಇನ್ನಾವುದಾದರು ಕಾವ್ಯಗಳಲ್ಲಿ ಬಳಸಿದ್ದಾರೆಯೆ?

      • ನಾನು ಸಾಂಗತ್ಯ-ತ್ರಿಪದಿಗಳನ್ನು ಕುರಿತು ವಿವರಿಸಿದ್ದೇನಷ್ಟೆ; ಅಲ್ಲಿಯ ತ್ರಿಮೂರ್ತಿಗಣಗಳೇ ಅಕ್ಕರಗಳಲ್ಲಿಯೂ ಸೀಸ, ಗೀತಗಳಲ್ಲಿಯೂ ಯಕ್ಷಗಾನದ ಅನೇಕಬಂಧಗಳಲ್ಲಿಯೂ (ಉದಾ:ಕಲ್ಯಾಣಿ-ಅಷ್ಟ, ನವರೋಜು-ಏಕ ಇತ್ಯಾದಿ) ಇವೆ. ಸಂಸ್ಕೃತದಲ್ಲಿಯಾದರೂ ಜಯಕೀರ್ತಿಯು ತನ್ನ ಛಂದೋನುಶಾಸನದಲ್ಲಿ ಇವುಗಳನ್ನೇ ರತಿ-ಬಾಣ-ಮನ್ಮಥ ಎಂಬ ಹೆಸರಿನಿಂದ ಕರೆದಿದ್ದಾನೆ. ತೆಲುಗರು ಇವನು ಇಂದ್ರ-ಚಂದ್ರ-ಸೂರ್ಯಗಣಗಳೆಂದು ಹೆಸರಿಸಿದ್ದಾರೆ. ಇನ್ನು ತಮಿಳು-ಮಲಯಾಳಗಳ ಅಶೈ, ಶೀರ್, ವಾಯ್ಪಾಟ್ಟು ಮುಂತಾದುವೆಲ್ಲ ಇವುಗಳ ದಾಯಾದರೇ. ಏಕೆಂದರೆ ಕರ್ಷಣವೇ ಇಲ್ಲಿಯ ಮೂಲತತ್ತ್ವ. ಹಿಂದಿ-ಅವಧಿ-ಭೋಜಪುರಿ-ಅಪಭ್ರಂಶ-ಪ್ರಾಕೃತಗಳ ವಿವಿಧಗೇಯವೃತ್ತಗಳು ಕೂಡ ಈ ಜಾಡಿನವೇ.
        ಎಲ್ಲ ಅಂಶಚ್ಛಂದಸ್ಸಿನ ಬಂಧಗಳಲ್ಲಿಯೂ ವಿಷ್ಣುಗಣಪ್ರಾಧಾನ್ಯದ ಕಾರಣ (ಮತ್ತು ಇದೇ ಎಲ್ಲ ಭಾರತೀಯಭಾಷೆಗಳ ಮೂಲಗತಿಯನ್ನು ಮಿಗಿಲಾಗಿ ಒಳಗೊಳ್ಳುವ ಕಾರಣ ಏಕತಾನತೆ ತಪ್ಪದು.ಜೊತೆಗೆ ಸುಕುಮಾರಬಂಧವಿಲ್ಲದಿದ್ದಲ್ಲಿ ಪದ್ಯದ ಅರ್ಥಕ್ಕೂ ಗತಿಸೌಖ್ಯಕ್ಕೂ ಸಂಚಕಾರ ಬರುವುದು! ಹೀಗಾಗಿ ಮಾತ್ರಾಸಮತ್ವವನ್ನು (ತೆಲುಗಿನಲ್ಲಿ ಶ್ರೀನಾಥಾದಿಗಳು ಸೀಸ-ಗೀತಪದ್ಯಗಳಲ್ಲಿ ಮಾಡಿದಂತೆ, ಕನ್ನಡದ ಶರಣರು ತ್ರಿಪದಿ-ಸಾಂಗತ್ಯಗಳನ್ನು ತ್ರಿವಿಧಿ-ಚೌಪದಿಗಳಾಗಿ ರೂಪಿಸಿದಂತೆ) ಸಾಧಿಸದಿದ್ದಲ್ಲಿ ನಿಸ್ತಾರವಿಲ್ಲ. ಇಲ್ಲವಾದರೆ ಯಕ್ಷಗಾನಗಳಲ್ಲಿ ಮಾಡುವ ಹಾಗೆ ಎಲ್ಲಬಗೆಯ ತಾಳಗಳಲ್ಲಿಯೂ (ಆದಿ.ರೂಪಕ, ಮಿಶ್ರಛಾಪು, ಖಂಡಛಾಪು) ಹಾಡಲು ಮುಂದಾಗಬೇಕು. ಆಗ ಓದುಗಬ್ಬವು ಹಾಡುಗಬ್ಬವಾಗುವುದು; ಕವಿತೆಯು ಹಿಂದಾಗಿ ಗಾನವು ಮುಂದಾಗುವುದು.

        ನನ್ನ ಮಟ್ಟಿಗೆ ಹೇಳುವುದಾದರೆ ಪಿರಿಯಕ್ಕರಕ್ಕಿಂತ ಸೀಸವು ತುಂಬ ಸೊಗಸು (ಈ ಬಗೆಗೆ ಸೇಡಿಯಾಪು ಅವರ ಮಾತು ಕೂಡ ನನ್ನ ಬೆಂಬಲಕ್ಕಿದೆ:-).ಅಕ್ಕರಗಳ ಪೈಕಿ ಎಡೆಯಕ್ಕರ (ತುಲುಗಿನ ಮಧ್ಯಾಕ್ಕರ) ಚೆನ್ನ. ತ್ರಿಪದಿಗಿಂತ ಸಾಂಗತ್ಯ ಚೆನ್ನ. ಗೀತಿಕೆಯೇ ತುಂಬ ಕೆಟ್ಟ ಅಂಶಬಂಧ. ಎಲ್ಲ ಅಂಶಬಂಧಗಳ ನಡುವೆ ಕನ್ನಡದ ಕಥನಕಾವ್ಯಕ್ಕೆ (ಮುಖ್ಯವಾಗಿ ನಡುಗನ್ನಡಕವಿತೆಗೆ) ತುಂಬ ಒದಗಿಬಂದದ್ದು ಸಾಂಗತ್ಯವೊಂದೇ. ತ್ರಿಪದಿಯು ಕೇವಲ ಮುಕ್ತಕಗಳಿಗೆ ಸೀಮಿತವಾಯಿತು.

      • ಗಣೇಶರೆ- ಸಾಂಗತ್ಯದ ನೆನಪು ನನಗೆ ಬರದೆ ನಡುಗನ್ನಡದ ಕಾಲಕ್ಕೆ ಇವು ಪ್ರಾಚುರ್ಯ ತಪ್ಪಿದ್ದವು ಅಂತ ಕೆಳಗೆ ಹೇಳಿದೆ. ತ್ರಿಪದಿಗಳು ಹಲವು ಕಾವ್ಯಗಳಲ್ಲಿ ಸೂಳೆಗೇರಿಯ ವರ್ಣನೆಗೆ ಬಳಕೆಯಾಗಿದೆಯಲ್ಲವೆ! “ಛಂದೋರೂಪ”ದಲ್ಲಿ ಈಕುರಿತು ನೋಡಿದ ನೆನಪು. ಪಿರಿಯಕ್ಕರದ ಸುಭಗತೆಯ ಬಗ್ಗೆ ನಿಮ್ಮಮಾತನ್ನು ನಾನೊಪ್ಪುವುದಿಲ್ಲ. ಅದಕೆ ಕ್ಷಮೆಯಿರಲಿ. ನಾನು ಹಿಂದೊಮ್ಮೆ ನಿಮಗೆ ಮಿಂಚೆಯಲ್ಲಿ ಬರೆದಿದ್ದಂತೆ ಈಬಂಧ ಸೊಗಸಾಗಿ ತ್ರ್ಯಶ್ರಗತಿಯ ಆದಿತಾಳಕ್ಕೆ ಕೋತುಕೊಳ್ಳುತ್ತೆ. ಕೊನೆಯಲ್ಲಿ ಒಳ್ಳೆಯ ವಿರಾಮವೂ ಸಿಗುತ್ತೆ. ಯಾವುದೇತಾಳಕ್ಕೆ ಅಕ್ಕರಗಳನ್ನು ಹಿಗ್ಗಾಮುಗ್ಗಾ ಎಳೆದು ಕೂರಿಸಬಹುದು ನಿಜ. ಆದರೆ ಸಹಜವಾಗಿರುವ ಲಯತಾಳಗಳು ಪಿರಿಯಕ್ಕರಕ್ಕೆ ನಾನುಹೇಳಿದಂತೆ ಅಷ್ಟೆ.

        • ಪ್ರಿಯ ಶ್ರೀಕಾಂತರೇ!
          ಅಭಿಪ್ರಾಯಭೇದಗಳಿಗೆ ಸಂಕೋಚಪಡಬೇಕಿಲ್ಲ. ವಸ್ತುನಿಷ್ಠೆ ಮತ್ತು ತರ್ಕಶುದ್ಧಿಗಳೊಡನೆ ಸಹೃದಯತೆಯಿರುವ ಯಾರೇ ಆಗಲಿ ತಮ್ಮ ಅಭಿಪ್ರಾಯಗಳನ್ನು ವಿವೇಕಿಗಳ ವಲಯದಲ್ಲಿ ಮುಕ್ತವಾಗಿ ಚರ್ಚಿಸಬಹುದಲ್ಲವೇ!

          ನಮ್ಮ ಪ್ರಾಚೀನಚಂಪೂಕಾವ್ಯಗಳಲ್ಲಿ ಪಿರಿಯಕ್ಕರ, ತ್ರಿಪದಿಗಳಂಥವುಗಳಿಗೆ ಕಂದ-ವೃತ್ತಗಳ ಹಾಗೆ ಹೆಚ್ಚಿನ ವಿನಿಯೋಗ ಸಂದಿಲ್ಲ.ಅಷ್ಟೇಕೆ, ಹರಿಣಿ, ಶಿಖರಿಣಿ, ಪೃಥ್ವಿ, ಮಂದಾಕ್ರಾಂತೆ ಮುಂತಾದ ವೃತ್ತಗಳಿಗೂ ಇದೇ ಗತಿ .ಇವೆಲ್ಲ ಬೆರಳೆಣಿಕೆಯಲ್ಲಿ ಮಾತ್ರ ವೈವಿಧ್ಯಕ್ಕೆಂಬಂತೆ ಬಂದಿವೆ.ಹಗೆಂದು ನಾವಿವನ್ನು ಇದೀಗ ವ್ಯಾಪಕವಾಗಿ ಬಳಸಬಾರದೆಂದೇನಿಲ್ಲ. ಪಿರಿಯಕ್ಕರದಲ್ಲಿ ಮೊತ್ತಮೊದಲ ಸಮಗ್ರಕಾವ್ಯವನ್ನು ಸೇಡಿಯಾಪು
          ಬರೆದರು. ಪರಮೇಶ್ವರಭಟ್ಟರು ಏಳೆಯಂಥ ಛಂದಸ್ಸನ್ನು ಮೊತ್ತಮೊದಲಿಗೆ ನೂರಾರು ಸಂಖ್ಯೆಯಲ್ಲಿ ರಚಿಸಿದರು.
          ಅಷ್ಟೇಕೆ, ಪಂಪಾದಿಗಳಲ್ಲಿ ಆಗೀಗ ಬಂದ ರಗಳೆಯನ್ನು ಬಳಸಿ ಹರಿಹರನು ರಘಟಾಕಾವ್ಯವಿಶ್ವರೂಪವನ್ನೇ ತೋರಿದ.ಇದು ಸರಳರಗಳೆಯ ರೂಪದಲ್ಲಿ ಹೊಸಗನ್ನಡದಲ್ಲಿ ಅಕ್ಷರಶಃ ಲಕ್ಷಾಂತರಪಂಕ್ತಿಗಳಷ್ಟು ನಿಡಿದಾದ ಕಾವ್ಯ-ನಾಟಕರಾಜಿಗೆ ಕಾರಣವಾಯಿತು. ಇದೆಲ್ಲ ತಮಗೆ ತಿಳಿಯದ್ದೇನಲ್ಲ. ಎಲ್ಲ ಗೆಳೆಯರಿಗೆ ವ್ಯುತ್ಪಾದಕವಾಗಲೆಂದು ಇಷ್ಟು ವಿಸರಿಸಿದೆನಷ್ಟೆ.
          ಇನ್ನು ಪಿರಿಯಕ್ಕರಕ್ಕಿಂತ ಸೀಸಪದ್ಯವು ನನಗೇಕೆ ಇಷ್ಟವೆಂಬುದಕ್ಕೆ ಕಾರಣಗಳನ್ನು ಹೇಳುವುದೆಂದರೆ ಅದೇ ಒಂದು ಲೇಖನವಾದೀತು. ಇದನ್ನೆಲ್ಲ ನನ್ನ ಸೀಸಪದ್ಯ ಮತ್ತು ಸಾನೆಟ್ ಎಂಬ ಬರೆಹದಲ್ಲಿ ವಿವರಿಸಿರುವೆ.ತಾತ್ಪರ್ಯವಿಷ್ಟು: ಪಿರಿಯಕ್ಕರದ ಮೊದಲ ಬ್ರಹ್ಮಗಣವನ್ನು ವಿಷ್ಣುವಿನಂತೆಯೇ ಕರ್ಷಿಸಬೇಕೆಂದು ಸೇಡಿಯಾಪು ಕೃಷ್ಣಭಟ್ಟರು ಸಹೇತುಕವಾಗಿ ನಿರೂಪಿಸುತ್ತಾರೆ.ಇಲ್ಲವಾದಲ್ಲಿ ಅದು ಸಾಮಾನ್ಯಮಟ್ಟದ ನಿಬಿಡಬಂಧಕ್ಕೂ ಎರವಾಗುವುದೆಂಬುದು ನನ್ನ ತರ್ಕವೂ ಹೌದು.ಇನ್ನು ಕೊನೆಯ ರುದ್ರಗಣವು ಎರಡು ಬ್ರಹ್ಮಗಣಗಳ ಜೋಡಿಯೆಂಬಷ್ಟರ ಮಟ್ಟಿನ ನಿಡಿದನ್ನು ಪಡೆದಾಗ ಪದ್ಯದ ಗತಿಗೆ ಹೆಚ್ಚಿನ ಶೋಭೆಯೂ ಸ್ಮತ್ವವೂ ಬರುವುದರಲಿ ಸಂದೇಹವಿಲ್ಲ. ಸೀಸದಲ್ಲಿಯಾದರೂ ಇರುವ ಕೊನೆಯ ಎರಡು ಬ್ರಹ್ಮಗಣಗಳನ್ನು ರುದ್ರಚ್ಛೇದವೆಂದೇ ಅನೇಕವಿದ್ವಾಂಸರು ತರ್ಕಿಸಿದ್ದಾರೆ. ಇಂತಾದಲ್ಲಿ ಪಿರಿಯಕ್ಕರವು ಸೀಸಪದ್ಯಕ್ಕಿಂತ ರೂಪದಲ್ಲಿ ಬೇರೆಯೇನೂ ಆಗದು. ಆದರೆ ಸೀಸವು (ಮುಖ್ಯವಾಗಿ ಶ್ರೀನಾಥಾದಿಗಳ ಮಾದರಿ) ತನ್ನ ವಿಷ್ಣುಗಣೀಯತೆಯಲ್ಲಿಯೂ ಕೆಲವೊಂದು ಪ್ರಸ್ತಾರಗಳನ್ನು ಮಾತ್ರ ಒಪ್ಪಿರುವ ಕಾರಣ (UU – -, – – U, – U -,
          UUU – ) ಪಾಠ್ಯ ಮತ್ತು ಗೇಯಪದ್ಧತಿಗಳೆರಡಕ್ಕೂ
          ಸೊಗಸಾಗಿ ಒಗ್ಗಿ ಬರುವುದಲ್ಲದೆ ನಿಬಿಡ ಮತ್ತು ಸುಕುಮಾರ ಪ್ರಕಾರದ ಬಂಧಗಳೆರಡಕ್ಕೂ ಅತ್ಯುತ್ತಮವಾಗಿ ಸಲ್ಲುತ್ತವೆ. { ಈ ಬಗೆಯಲ್ಲಿ ಕಂಡಾಗ ಸೀಸವು ಮಾತ್ರಾಸಮತ್ವವನ್ನೂ ಸಾಧಿಸಿರುವುದು ಗಮನಾರ್ಹ. ಅಲ್ಲದೆ ಇದೀಗ ಅದರ ಗತಿ-ರೂಪಗಳು ಎರಡು ಪಂಚಮಾತ್ರಾಚೌಪದಿ(ಕುಸುಮಷಟ್ಪದಿ)ಗಳೇ ಆಗಿರುವುದು ಸುವೇದ್ಯ} ಈ ಸೌಲಭ್ಯಗಳು ಪಿರಿಯಕ್ಕರದಲ್ಲಿಲ್ಲ. ಅಲ್ಲದೆ ಎತ್ತುಗೀತಿಯ ರೂಪದಲ್ಲಿ ಆಟವೆಲದಿ ಅಥವಾ ತೇಟಗೀತಿಯು ಸೀಸಕ್ಕೆ ಅನಿವಾರ್ಯವೆಂಬಂತೆ ಬರುವ ಕಾರಣ ಅದರ ಶಿಲ್ಪವು ಇನ್ನಷ್ಟು ಸೊಗಯಿಸುತ್ತದೆ; ಮತ್ತಷ್ಟು ವೈವಿಧ್ಯದಿಂದ ಕಂಗೊಳಿಸುತ್ತದೆ. ಇದು ಪಾಶ್ಚಾತ್ಯರ ಸಾನೆಟ್ಟಿಗಿಂತ ಸಮರ್ಥವಾದ ಬಂಧ. ಇದನ್ನು ಈ ಕಾರಣದಿಂದಲೇ ಆಧುನಿಕತೆಲುಗುಕವಿಗಳೂ ಡಿವಿಜಿ, ಬೇಂದ್ರೆ, ಕುವೆಂಪು ಮುಂತಾದವರೂ ಸಾನೆಟ್ಟಿಗೆ ಸಂವಾದಿಯಾಗಿ ಬಳಸಿದ್ದಾರೆ.ಇಲ್ಲಿಯ ವೈವಿಧ್ಯಗಳನ್ನೂ ಪದ್ಯಶಿಲ್ಪದ ಅನೇಕಸಾಧ್ಯತೆಗಳನ್ನೂ ತಿಳಿಯಲೆಳಸುವವರು ನನ್ನ “ಋತುಷಡ್ವರ್ಗ” ಎಂಬ ಕವಿತೆಯನ್ನು ಕಾಣಬಹುದು.
          ಇಂಥ ಸೀಸಪದ್ಯವನ್ನು(ಎತ್ತುಗೀತಿಯ ಹೊರತಾಗಿ)
          ಆದಿ, ರೂಪಕ, ಖಂಡ ಮತ್ತು ಮಿಶ್ರಚಾಪು ತಾಳಗಲಲ್ಲಿ ಸ್ವಲ್ಪವೂ ಸಾಹಿತ್ಯಕ್ಕೆ ಚ್ಯುತಿಯಾಗದಂತೆ ಹಾಡಬಹುದು. ಯಾರಿಗೆ ಬೇಕಿದ್ದರೂ ನಾನು ಹೀಗೆ ಹಾಡಿ ತೋರಬಲ್ಲೆ.
          ಈ ಬಗೆಯನ್ನು ಗಮಕಿಗಳ ಹಾಅಗೂ ಸಂಗೀತಜ್ಞರ ಸಭೆಗಳಲ್ಲಿಯೂ ಸಾಹಿತಿ-ಛಂದೋಜ್ಞರ ಗೋಷ್ಠಿಗಳಲ್ಲಿಯೂ
          ವಿನಿಕೆಮಾಡಿದ್ದೇನೆ. ಹೀಗಾಗಿ ಸುಕುಮಾರಬಂಧವಾದಲ್ಲಿ ಯಾವ ಅಂಶಪದ್ಯವನ್ನೂ ಪೂರ್ವೋಕ್ತಸೀಸಪದ್ಯದ ಯಾವುದೇ ಪ್ರಕಾರವನ್ನೂ ಈ ತೆರನಾಗಿ ಹಾಡಬಹುದು.
          ಅಷ್ಟೇಕೆ, ಇದನ್ನು ಏಳ್ನೂರು ವರ್ಷಗಳ ಕೆಳಗೇ ಮೂರನೆಯ ಸೋಮೇಶ್ವರನು ತನ್ನ ಮಾನಸೋಲ್ಲಾಸದ ಗೀತವಿನೋದಾಧ್ಯಾಯಲ್ಲಿ ಸ್ಪಷ್ಟವಾಗಿ ಒಕ್ಕಣಿಸಿದ್ದಾನೆ.
          ಆಸಕ್ತರು ಇವನ್ನೆಲ್ಲ ನನ್ನೊಡನೆ ಮುಖತಃ ಚರ್ಚಿಸಬಹುದು. (೯೪೪೯೦೮೯೮೯೮)

        • ಗಣೇಶರೆ- ಸವಿಸ್ತಾರವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ನಮ್ಮೆಲ್ಲರಿಗೂಗ್ರಾಸವಿದು,ತಿಳಿವಳಿಕೆಗೆ ಒಳ್ಳೆಯ ಗ್ರಾಸವಿದು. ಸೀಸಪದ್ಯವನ್ನು ಹಲವು ತಾಳಗಳಿಗೆ ಅಳವಡಿಸಿ ಹಾಡಬಹುದೆಂದಿದ್ದಿದ್ದೀರಿ. ಅಗತ್ಯವಾಗಿ ಮಾಡಬಹುದು- ಅದು ನಾವು ಎಷ್ಟು ಕರ್ಷಣ ಮಾಡ್ತೀವಿ ಅನ್ನೋದಕ್ಕನುಗುಣವಾಗಿರುತ್ತೆ. ಸಂಗೀತದಲ್ಲಿ ಸಾಹಿತ್ಯದೆ ಎಳೆಯುವಿಕೆ ಸಾಮಾನ್ಯವೆ. ಸೀಸದಹಾಗೆ ಪಿರಿಯಕ್ಕರವನ್ನೂ, ಅಂತೆಯೇ ಇತರ ಬಂಧದ ಪದ್ಯಗಳನ್ನೂ ಮಾಡಬಹುದು ನಿಜ. ಆದರೆ ನಾನು ಹೇಳ್ತಿರೋದು ಆಯಾ ಅಕ್ಷರಗಳನ್ನು ಆಯಾ ಗಣಗಳನ್ನೂ ಅವಕ್ಕೆ ಇರುವ ಮೂಲದ ಉದ್ದಳತೆಗಳಷ್ಟೆ ಇಟ್ಟು ನೋಡಿದಾಗ ಬರುವ ಲಯ ತಾಳದ ವಿಚಾರ. ಇದಕ್ಕೆ ಪದದ ಕೊನೆಯ ಗಣವನ್ನು ಹೊರತುಪಡಿಸಬಹುದು- ಕೇವಲ ಉಸಿರಿಗಾಗಿ ಮತ್ತೆ ಪರಿಣಾಮಕ್ಕಾಗಿ ಮಾತ್ರ ಕೊನೆಯಲ್ಲಿ ಒಂದು ವಿಷ್ಣುವಷ್ಟು ಉಸಿರುತೆಗೆದುಕೊಳ್ಳುವುದು. ಬಿಟ್ಟೂ ಹೇಳಬಹುದು. ಆದರೆ, ಮೊದಲು ಬರುವ ಬ್ರಹ್ಮವನ್ನು ವಿಷ್ಣುವಾಗಿ ಹಿಗ್ಗಿಸದೆ ಬ್ರಹ್ಮವಾಗಿಯೇ ಹೇಳಿದಾಗ ಕೂರುವ ತಾಳ ತ್ರ್ಯಶ್ರಗತಿಯ ಎಂಟು ಅಕ್ಷರಗಳ ತಾಳ (ಕೊನೆಯಲ್ಲಿ ಒಂದು ವಿಷ್ಣವಿನ ಉಸಿರೆಳೆದರೆ). ಬ್ರಹ್ಮಗಣ ಅತೀತವಾಗಿ ಬರುತ್ತೆ. ಸೊಗಸಾಗಿ ಹಾಡಬಹುದು.

          • ಪ್ರಿಯ ಶ್ರೀಕಾಂತರೇ!, ನನ್ನ ಇಂಗಿತವನ್ನು ನೀವು ಗ್ರಹಿಸಿದಂತಿಲ್ಲ. ಇರಲಿ; ನನ್ನ ನಿಲವನ್ನು ಮತ್ತೆ ಸಂಕ್ಷೇಪಿಸಿ ಸ್ಪಷ್ಟಗೊಳಿಸುವೆ: ನಿಮ್ಮ ಮತದ ಅಕ್ಕರಗಳಿಗಿಂತ ನನ್ನ ಮತದ ಸೀಸವೇ ಅತ್ಯಂತ ಕಡಮೆ ಕರ್ಷಣಕ್ಕೊಳಪಟ್ಟೂ (ಹೀಗಾಗಿಯೇ ಸಾಹಿತ್ಯದ ಅರ್ಥವಿಕಾರಕ್ಕೆ ಆಸ್ಪದವೀಯದೆ) ಎಲ್ಲ ಮೂಲಭೂತ ತಾಲಗಳಲ್ಲಿ ನುಡಿಯಬಲ್ಲುದು. ಆದರೆ ನೀವು ಬರೆದಿರುವ ಗೀತಿಕೆ, ಅಕ್ಕರಗಳನ್ನೇ ಮಾದರಿಯಾಗಿ ಕಂಡಾಗಲೂ ಅವುಗಳಿಗೆ ಈ ಸೌಲಭ್ಯವು ಕಡಮೆಯೆಂದು ತೋರುತ್ತದೆ. ಮತ್ತು ನಿಮ್ಮ ಬಂಧಗಳಲ್ಲಿ ಪಾಠ್ಯವು ಸರ್ವಥಾ ಛಂದೋಗತಿಯನ್ನು ಉನ್ಮೀಲಿಸುತ್ತಿಲ್ಲ. ಆದರೆ ಸೀಸವಾಗಲಿ, ಅಕ್ಕರ, ತ್ರಿಪದಿ, ಗೀತಿಕೆ ಮತ್ತು ಸಾಂಗತ್ಯಗಳಾಗಲಿ ಗಣಸಮತ್ವದ ಒಂದು ಹದಕ್ಕೆ ಬಂದು ಛಂದಃಪದಗತಿ ಮತ್ತು ಭಾಷಾಪದಗತಿಗಳ ನಡುವೆ ಒಳ್ಳೆಯ ಸಾಮರಸ್ಯವನ್ನು ಸಾಧಿಸಿದರೆ ಮಾತ್ರ ಅವು ಸರ್ವಕ್ಷಮವಾಗಬಲ್ಲುವು. ಇಲ್ಲವಾದರೆ ತಾತಸ್ಯಕೂಪೋsಯಮಿತಿ ಬ್ರುವಾಣಾಃ ಕ್ಷಾರಂ ಜಲಂ ಕಾಪುರುಷಾಃ ಪಿಬಂತಿ ಎಂಬಂತಾಗುವುವು. ಈಗಾಗಲೇ ತುಂಬ ಚರ್ಚೆಯು ಬೆಳೆದ ಕಾರಣ ಮತ್ತೆಂದಾದರೂ
            ನೀವಿತ್ತ ಬಂದಾಗ ಮುಖತಃ ಮಾತಾಡೋಣ
            ಮುಖ್ಯವಾಗಿ ನೀವು ಸೇಡಿಯಾಪು ಅವರ ಗ್ರಂಥಗಳನ್ನು ಓದಿಬಂದರೆ ಚರ್ಚೆಗೆ ಮತ್ತೂ
            ಗಟ್ಟಿಯಾದ ನೆಲೆಗಟ್ಟು ಸಿಗುತ್ತದೆ. ಪದ್ಯಪಾನದಲ್ಲಿ ಈ ಪರಿಯ “ಗದ್ಯಗಾಣ”ಕ್ಕಾಗಿ ಎಲ್ಲರ ಕ್ಷಮೆ ಯಾಚಿಸುವೆ:-)

    • ಭಾಷೆ ಕಲಸುಮೇಲೋಗರವಾದದ್ದು ಹೌದು. ಶಾಲೆಗ ತಡವಾಗಿ ಬಂದ ವಿದ್ಯಾರ್ಥಿಯ ಪದ್ಯ ಸರಿ ಮಾಡುವುದು ಕಷ್ಟ. ಉಳಿದೆರಡರ ಬಗೆಗೆ ಪ್ರಯತ್ನಿಸಬಹುದು 🙂

    • ಧನ್ಯವಾದಗಳು ಸರ್ 🙂

    • ಸದ್ಯ, ನಾನಿನ್ನೂ ಕವನಿಸಿಲ್ಲ!

    • ಹೌದು ಗಣೇಶ್ ಸರ್, ನನಗೂ ಹಾಗೆ ಅನ್ನಿಸಿತ್ತು (ಆದಿ – ಅಂತ್ಯ ಪ್ರಾಸಗಳ ಬಿಗಿಯಿಲ್ಲದೆ ನೀಳವಾಗಿ ಜಾಳಾಯಿತೆಂದು). ಮೊದಲು ಬರೆದದ್ದು ಒಂದೇ ಮೊದಲಪದ್ಯ, ಹಾಗೆ ಮಿಕ್ಕ ಪದ್ಯಗಳು ಜೊತೆಯಾದದ್ದು . ಹಾಕೋಣವೋ ಬೇಡವೋ ಎಂದೇ ಹಾಕಿದ್ದು. ಬೇರೊಂದು ಪ್ರಯತ್ನಿಸುತ್ತೇನೆ.

  15. ಸುಲ್ತಾನನ ಅರಮನೆಯಲ್ಲಿ “ಮಹಾಭಾರತವನ್ನು” ಸಮರ್ಥವಾಗಿ ಪ್ರವಚಿಸಿದ ಪಂಡಿತನನ್ನು, ಸುಲ್ತಾನ, ಬೇಗಂ, ರಾಜಕುಮಾರಿ ಮತ್ತು ಮಂತ್ರಿ ಬೀಳ್ಕೊಡುವಾಗ, ಆತ ಮಹಾಭಾರತದ ಕಥಾಪ್ರಸಂಗಗಳಲ್ಲಿ ನಿಮಗೆ ಯಾವ ಭಾಗ ಇಷ್ಟವಾಯಿತು ಎಂದು ವಿಚಾರಿಸಿದಾಗ, ಅವರೊಂದಿಗೆ ನಡೆದ ಸಂಭಾಷಣೆ…

    ಸೀ||
    “ಕೇಳಿದೆಯ ಸುಲ್ತಾನ, ಭಾರತದ ಕಥೆ?, ನಿನಗೆ ಮೆಚ್ಚುವಂಶವದೇನು?” “ಅಚ್ಛ ! ಬೊಮ್ಮನ್ ”
    “ಹೇಳಿದಿರಿ ಭಲೆ!, ಮೆಚ್ಚಿದೆನು, ಕೃಷ್ಣ ಹದಿನಾರು ಸಾವಿರವ ರಮಿಸಿದದ್ಭುತದ ಕಥನ!! “
    “ಪೇಳಮ್ಮ ಮಹರಾಣಿ ನಿನಗೊ?” “ಪೂಜ್ಯರೇ, ನನಗೆ ಪಾಂಚಾಲಿ ಪಂಚ-ಪತಿ-ಕಥೆಯೆ ರಮ್ಯ”
    “ತಾಳುಮೆಯರಸುಕುವರಿ ನಿನಗೊ?” “ಕುಂತೀಕನ್ಯೆ ಗರ್ಭಧರಿಸಿದ ಮರ್ಮ ಬಲುಸೊಗಸಿತೈ

    ತೇ|ಗೀ||

    “ಹೆಡ್ಡ ನಾನಲ್ತೆ! ಮಂತ್ರಿನೀನೆಂಬುದೇನು?”
    “ಬುಡ್ಡ ಏಕ್ ಛೋಕ್ರಾ ಏಕ್ ಮಾದ್ರಚೋದನೊಬ್ಬ”
    “ದಡ್ಢ, ಭೀಷ್ಮಾಭಿಮನ್ಯುಕೃಷ್ಣರಿಗೆ ತಿಥಿಯೇ?
    ಮಡ್ದಿಗಳಿಗೆ ಭಾರತವೊರೆಯೆ ಹತವು ಮತಿಯೇ”

  16. Krishna noticed the knot in the uttareeya of Kucela and asked what it was. Kucela vacillates:
    ಕುಚೇಲ: ರಾಜನ್
    ಕೃಷ್ಣ: ಹ್ಙಾ! ಪೊಸರೀತಿಯಿಂ ಕರೆವೆಯೇಂ?
    ಕು: ನೀ ರಾಜ, ಸಾಮಾನ್ಯನಾಂ
    ಕೃ: ಸಾಜಂ ನೀ ಕರೆ ನನ್ನನಂದು ಕರೆದೊಲ್ ‘ಕಿಚ್ಚಣ್ಣ’ನೆಂದೆನ್ನುತುಂ

    ಇನ್ನು ಅವಲಕ್ಕಿಯನ್ನು ಕುರಿತು:
    ಕು: ನಾ ಜೋಪಾನಮನೇನ ಮಾಳ್ಪೆನಕಟಾ?
    ಕೃ: ತೋರೀಗಲಾ ಗಂಟನುಂ
    ಕು: ಲಾಜಂ, ನನ್ನಯ ದಾರಿಗಿರ್ದ ದವಸಂ
    ಕೃ: ಸುಳ್ಳಲ್ತೆ ನೀಂ ಪೇಳ್ವುದುಂ?

    (Inspired by Masti’s short story ‘ಕುಚೇಲನ ಭಾಗ್ಯ’. ಲಾಜ – Substitute for ಅವಲಕ್ಕಿ)

  17. ಸೋಮ

    ಅಂಶಗಣಗಳು ಮತ್ತು ಅವನ್ನಾಧರಿಸಿದ ಛಂದೋರೂಪಗಳ ಬಗ್ಗೆ ನಾನು ಕಂಡು ಕಂಡುಕೊಂಡಿರುವುದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಅದರಿಂದ ಸಹೃದಯೊಗಳಿಗೆ ಪ್ರಯೋಜನವಾಗಬಹುದು. ಆಗದಿದ್ದರೂ ನನ್ನ ಮಾತನ್ನು ಹೇಳುವ ಚಪಲವನ್ನು ನಾನು ತೀರಿಸಿಕೊಳ್ಳಬಹುದಲ್ಲ 🙂

    ಗಣೇಶರು ಹೇಳಿರುವಂತೆ ಅಂಶಗಣಗಳ ಛಂದಸ್ಸೆಲ್ಲ ಹಾಡುಗಬ್ಬಗಳು ಮತ್ತೆ ಗೇಯಗುಣಪ್ರಧಾನವಾದವೆ. ಇವುಗಳ ಲಯವನ್ನು ಗುರುತಿಸಿದರೆ ಓದುವುದು ಸುಲಭ. ಇವುಗಳಿಗೆ ರಾಗಗಳನ್ನು ಹಾಕಿಯೇ ಹಾಡಬೇಕೆಂದಿಲ್ಲ. ಲಯಬದ್ಧವಾಹಿ ಗುನುಗಿಕೊಂದರೆ ಸಾಕು.

    ನಾನು ಕಂಡಂತೆ ಅಂಶಚ್ಛಂದಸ್ಸಿನ ಸಹಜವಾದ ಓಟ – ಸಂಗೀತದಲ್ಲಿ ತ್ರ್ಯಶ್ರ ಗತಿ ಎಂದು ಹೇಳುವ ನಡೆ- ಎಂದರೆ ತಕಿಟ ( ಮಧ್ಯಲಯ). ಎಂದ ಮೇಲೆ ಬ್ರಹ್ಮ ವಿಷ್ಣು ಮತ್ತು ರುದ್ರ ಗಣಗಳಲ್ಲಿ ವಿಷ್ಣುವೇ ಸ್ವಾಭಾವಿಕವಾದದ್ದು. ಇದರಿಂದ, ಗತಿಭೇದಕ್ಕಾಗಿ ಇನ್ನೆರಡು ಗಣಗಳು ಬರುತ್ತವೆ. ಓದುವಾಗ ವಿಷ್ಣು ಗಣದ ಮೂಲ “ತಕಿಟ” ಗತಿಗೆ ಅವೂ ಹೊಂದಿಕೊಳ್ಳುತ್ತವೆ. ಹಾಗೆ ಇದ್ದರೇ ಗಮನ ಸುಗಮವಾಗಿರೋದು. ಇದರಿಂದಲೇ ಅಂಶಗಣಗಳ ಛಂದೋರೂಪಗಳಲ್ಲಿ ವಿಷ್ಣುಗಣಗಳದೇ ಪ್ರಾಧಾನ್ಯ. ಆಮೇಲೆ ಬ್ರಹ್ಮ, ಇನ್ನೂ ಕಡಮೆಯಾಗಿ ರುದ್ರ. ರುದ್ರ ಸಾಮಾನ್ಯವಾಗಿ ಪಾದದ ಕೊನೆಯಲ್ಲಿ ಬರುವುದು.

    ಪದ್ಯಗಳಲ್ಲಿ ಅಂಶಗಣಗಳನ್ನು ಓದುವಾಗ, ಎಲ್ಲ ಅಕ್ಷರಗಳು ಗುರುವಾಗಿ ವರ್ತಿಸುವುದು ಪ್ರಕೃತಿ. ಒಮ್ಮೊಮ್ಮೆ, ಗಣಗಳ ಆದಿಯಲ್ಲಿಮಾತ್ರ ಅವನ್ನು ಲಘುಗಳಾಗಿಯೇ ಉಳಿಸಿಕೊಳ್ಳುತ್ತೇವೆ. ಎಂದರೆ ಬ್ರಹ್ಮಗಣದ ಓಟ- “ತಕ್ಕ”. ವಿಷ್ಣುವಿನದು “ತಕ್ಕಿಟ್ಟಾ”. ರುದ್ರನದು “ತಕ್ಕದ್ಧಿಮ್ಮೀ”. ಪರ್ಯಾಯವಾಗಿ ಇವುಗಳ ಗತಿ ಕ್ರಮವಾಗಿ “ತಕಧೀಂ”, “ತಕಧಿತ್ತಾಂ”, “ತಕತಾಂಧಿತ್ತಾಂ” ಎಂದು ಬರಬಹುದು. ಇದು ಗಣಾದಿಯ ಗುರ್ವಕ್ಷರದ ಜಾಗದಲ್ಲಿ ಎರಡು ಲಘುಗಳು ಬರುವುದನ್ನು ಬಿಂಬಿಸುತ್ತೆ. ಗಣಾದಿಯಲ್ಲಿ ಲಗಂ ಬರುವಹಾಗಿಲ್ಲ. ಹಿಂದೆಯೇ ಹೇಳಿದಂತೆ ಅನಾದಿ (ಮೊದಲಲ್ಲದ) ಅಕ್ಷರಗಳು ಲಘುವಾಗಿದ್ದರೂ ಗುರುವಂತೆ ವರ್ತಿಸುತ್ತವೆ ಮತ್ತೆ ಹಾಗೇ ಓದಿಕೊಳ್ಳುವುದು. ಕನ್ನಡದ ಸಹಜಗುಣವಿದು., ಆಡುಮಾತ್ನಲ್ಲೂ ಇದನ್ನುಸಹಜಗುಣವಿದು.ಕೆಲವು ಉದಾಹರಣೆಗಳನ್ನು ಇಲ್ಲಿ ನೋಡಬಹುದು.

    ಕನ್ನಡ- ಕನ್ನಾಡಾ ಅಂತ ಹಾಡಿದರೆ ವಿಚಿತ್ರವಾಗಿ ಕೆಡುತ್ತೆ. ಅರ್ಥವೂ ಸ್ಪಷ್ಟವಾಗಿಯೇ ತಿಳಿಯುತ್ತೆ.
    ಬರುವನೆ- ಬರುವಾನೇ ಅಂದರು ಚೆನ್ನಾಗಿಯೇ ಕೇಳುತ್ತೆ. ಆದರೆ ಇದನ್ನ “ಬಾರೂವಾನೇ” ಅಂತ ಓದಿದರೆ ಆಭಾಸ. ಅರ್ಥವೇ ಸ್ಫುಟವಾಗೊಲ್ಲ, ಕೆಡುತ್ತೆ.
    ಕಮಲೆ- ಕಾಮಾಲೇ ಆಗೋಲ್ಲ 🙂

    ಅಂಶಚ್ಛಂದೋಪ್ರಕಾರಗಳಲ್ಲಿ ಕವನಿಸುವಾಗ ಕೇವಲ ಗಣಗಳ ಗಣನೆಯ ಲೆಕ್ಕಾಚಾರಕ್ಕೆ ಹೇಗೋ ಹೊಂದಿಸಿ ಪದಗಳನ್ನು ಹಿಗ್ಗಾಮುಗ್ಗಾ ತುಂಡರಿಸಿ ವಿಂಗಡಿಸಬಾರದು. ಒಂದು ಗಣದಿಂದ ಮುಂದಿನ ಗಣಕ್ಕೆ ಸಾಗುವಾಗ ಆದಷ್ಟು ಸ್ವಾಭಾವಿಕವಾಗಿ ಮತ್ತು ಸಹಜವಾಗಿ ಒಡೆದು/ ಬಿಡಿಸಿಕೊಂಡು ಅರ್ಥಸ್ಫುಟವಾಗಬೇಕು. ಉದಾಹರಣೆಗೆ ಇಲ್ಲಿ ನೋಡಿ.

    ಮಾತೇನೆಂದು ತಿಳಿಯಲಿಲ್ಲ.

    ಇದನ್ನು ನಾಲ್ಕು ಬ್ರಹ್ಮಗಳಾಗಿ ವಿಂಗಡಿಸಬಹುದು- ಮಾತೇ ನೆಂದು ತಿಳಿಯ ಲಿಲ್ಲ. ಇದನ್ನು ಓದುವಾಗ ಇದು ಮಾತೇನ್ ಎಂದು ತಿಳಿಯಲ್ ಇಲ್ಲ ಅಂತ ಬಿಡಿಸಿ ಕೊಳ್ಳುತ್ತೆ.

    ಇದೇ ವಾಕ್ಯವನ್ನು ಎರಡು ಬ್ರಹ್ಮ ಒಂದು ರುದ್ರ ಎಂದೂ ಕೂರಿಸಬಹುದು.

    ಆದರೆ ಮೂರು ವಿಷ್ಣುಗಳಾಗಿ ಬಿಡಿಸಲು ಬರುವುದಿಲ್ಲ. ಹಾಗೆ ಮಾಡಿದರೆ ” ಮಾತೇನೆಂ ದೂತಿಳಿ ಯಲಿಲ್ಲ” ಹೀಗೆ ಆಭಾಸವಾಗುತ್ತೆ.

    ಎಂದಮೇಲೆ ಅಂಶಗಣಗಳ ಸಹಜಸರಳತೆಗಳೆ ಅವುಗಳಿಗೆ ಹಾಕುವ ಕಟ್ಟುಪಾಡು ಕೂಡ. ಅವನ್ನು ತಿಳಿದು ಕವನಿಸಿದರೆ ಸೊಗಯಿಸುತ್ತೆ. ಹಿಡಿತಕ್ಕೆ ಸಿಗದೆ ಅಗಿದುಗಿದರೆ ತಲೆಬುಡ ತಿಳಿಯದೆ ಹೋಗುತ್ತೆ.

    ಕನ್ನಡದ ಪದ್ಯಗಳು ಪ್ರಸಿದ್ಧವೃತ್ತಗಳ ಗತಿಗೆ ಹೊಂದದಂತಿದ್ದಗ, ಅಥವಾ, ಪಾದದಿಂದ ಪಾದಕ್ಕೆ ಅಕ್ಷರಗಳ ಉದ್ದ ಗಣನೆಗಳು ವ್ಯತ್ಸಯಸ್ತವಾಗಿದ್ದಾಗ ಒಮ್ಮೆ ಅಂಶಗಣಗಳನ್ನು ನೆನಪಿಸಿಕೊಂಡು ನೋಡೋದು ಒಳ್ಳೆಯದು. ಆಗ ಧಾಟಿ ಚೊಕ್ಕವಾಗಿ ಕಂಡೀತು.

    • ತಕಿಟ ತ್ರ್ಯ್ಯಶ್ರಗತಿ ಪ್ರಧಾನವಾಗಿರುವುದು ಇದು ಜಾನಪದ/ ಜನಸಾಮಾನ್ಯರ ಹಾಡುಗಬ್ಬ ಮೂಲದಿಂದ ಬಂದವು ಅನ್ನದನ್ನ ಗುರುತಿಸಬಹುದು. ಪ್ರಸಿದ್ಧ ಜಾನಪದಗೀತೆಗಳು ಇದೇ ಗತಿಯಲ್ಲಿ ಗಮಿಸಿವುದನ್ನ ಗಮನಿಸಬಹುದು. ಉದಾಹರಣೆಗೆ

      ಮಾಯದಂಥಾ ಮಳೇ ಬಂತಣ್ಣಾ ಮದಗಾದಕೆರೆಗೆ ನೋಡಬಹುದು. ಇದರ ಒಂದು ನುಡಿ ಹೀಗಿದೆ

      ಅಂಗೈ ಯಷ್ಟೂ ಮೋಡಾನಾಗೀ ಭೂಮೀ ತೂಕದ ಗಾಳೀ ಬೀಸೀ. ಇಲ್ಲಿ ಎಂಟು “ತಕಿಟ” ಗಳು ಬಂದಿವೆ. ಚತುರಶ್ರ ಗತಿ (ತಕಧಿಮಿ) ತ್ರ್ಯಶ್ರದಷ್ಟು ಸಾಮಾನ್ಯವಲ್ಲ. ಸ್ವಾಭಾವಿಕವೂ ಅಲ್ಲ. ಉಳಿದಗತಿಗಳಂತೂ ಜಾನಪದಗೀತೆಗಳಲ್ಲಿ ಅತಿವಿರಳ, ಕೃತಕವೆನ್ನುವಷ್ಟು.

    • ಶ್ರೀಕಾಂತರೆ,
      ಅಂಶ ಛಂದಸ್ಸಿನ ವಿಷ್ಣು, ಬ್ರಹ್ಮ ರುದ್ರಗಣಗಳ ಕರ್ಷಣೆಯ ಬಗ್ಗೆ ಮತ್ತು ತಾಳದ ಬಗ್ಗೆ ತಿಳಿಸಿದ್ದೀರಿ, ಎಲ್ಲಾ ಗಣಗಳಲ್ಲಿಯೂ ವಿವಿಧ ಸಂಭಾವ್ಯತೆಗಳನ್ನು ಪದ್ಯಪಾನದಲ್ಲೆ ಕೊಟ್ಟಿದೆಯಾದರೂ ನಾನೆಲ್ಲೂ ಪ್ರಯೋಗಿಸದ ಕಾರಣ ಮತ್ತು ಒಂದು ಪದವನ್ನು ಮೂರ್ನಾಲ್ಕು ರೀತಿಯಲ್ಲಿ ಹೇಳಬಹುದಾದ ಕಾರಣ ಇದು ಮನದಟ್ಟಾಗಲು ಸ್ವಲ್ಪ ಪರಿಶ್ರಮ ಬೇಕೆನಿಸುತ್ತದೆ. ಅಂಶದಲ್ಲಿ ಎಲ್ಲವನ್ನು ಗುರುವಾಗೇ ಹೇಳಿಕೊಳ್ಳುವುದಾದರೂ, ಆದಿಯಲ್ಲಿ ಕೆಲವೊಮ್ಮೆ ಕರ್ಷಣೆಯಿಲ್ಲದ ಲಘುವನ್ನು ಅರ್ಥವ್ಯತ್ಯಯವಾಗಬಾರದೆಂಬ ದೃಷ್ಟಿಯಿಂದ ಬಳಸುವುದರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು 🙂

    • ಪದ್ಯಪಾನದಲ್ಲಿಯೇ ಗಣಗಳ ಪ್ರಸ್ತಾರವೇನೊ ಕೊಟ್ಟಿದೆ ನಿಜ. ಅದರ ಲಯದ ಬಗ್ಗೆ ಇಲ್ಲ. ಅಲ್ಲಾದೆ ನನ್ನ ಕ್ವಚಿತ್ಸ್ವಾನುಭವದಿಂದ ಅದರ ಪ್ರಯೋಗಪ್ರಸ್ತಾರಗಳ ಬಗ್ಗೆ ಹೇಳಿದೆ ಅಷ್ಟೆ.

      ಅಕ್ಕರಗಳು ಮತ್ತು ಅಂಶಗಣಾಧಾರಿತ ಪದ್ಯಗಳ ಕಾವ್ಯಪ್ರಯೋಗದ ಬಗ್ಗೆ ಮೇಲೆ ಕೇಳಿದ್ದೀರ. ಇವುಗಳ ಬಳಕೆ ಕಡಮೆಯೇ ಆದರೂ ಅವೂ ಕೂಡ ಹೆಚ್ಚಾಗಿ ಹಳಗನ್ನಡದಲ್ಲಿಯೆ ಬಳಕೆಯಾಗಿರುವುದು. ನಡುಗನ್ನಡದಹೊತ್ತಿಗೆ ಇವುಗಳ ಬಳಕೆ ಮತ್ತು ತಿಳ್ವಳಿಕೆಯೂ ಸಹ ಕಡಮೆಯಾಗಿತ್ತು. ಪಂಪನೇ ಪಿರಿಯಕ್ಕರವನ್ನು ಪ್ರಯೋಗಿಸಿದ್ದಾನೆ. ಶಾಸನ ಸಾಹಿತ್ಯಗಳಲ್ಲಿಯೂ ಅಕ್ಕರಗಳು ಸಾಕಷ್ಟು ಸಿಗುತ್ತವೆ. ತ್ರಿಪದಿಗಳಂತೂ ವಿಪುಲವಾಗಿಯೇ ಸಾಹಿತ್ಯದಲ್ಲೂ ಶಾಸನಗಳಲ್ಲೂ ದೊರೆಯುತ್ತವೆ. ಸಿಕ್ಕಿರುವ ಕೃತಿಗಳಲ್ಲಿ ಮಾತ್ರವಲ್ಲದೆ, ಅಕ್ಕರಾದಿ ಅಂಶಚ್ಛಂದಸ್ಸಿನ ರೂಪಗಳನ್ನು ಇತರ ಆಕಾಲಕ್ಕೆ ಪ್ರಚುರ ಕೃತಿಗಳಲ್ಲಿ ಬಳಸಿರುವ ಉಲ್ಲೇಖಗಳೂ ಬಹುವಾಗಿವೆ. ಒಟ್ಟಿನಲ್ಲಿ ಪಿರಿಯಕ್ಕರವೇ ಅಕ್ಕರಗಳಲ್ಲಿ ಹೆಚ್ಚಾಗಿ ಸಿಗುವುದು. ತೆಲುಗಿನಲ್ಲೂ ಅಕ್ಕರಗಳ ಬಳಕೆಯುಂಟು.

      ಯಕ್ಷಗಾನದಲ್ಲಿ ಇವು ಬಳಸಲ್ಪಟ್ಟಿವೆ ಎಂದಿದ್ದೀರ. ಯಾವ ಪ್ರಕಾರಗಳಿವು? ಅಕ್ಕರಗಳೂ ಉಂಟೆ? ಉದಾಹರಣೆಗಳಿದ್ದರೆ ದಯವಿಟ್ಟು ತಿಳಿಸಿ.

      ಮೇಲಿನ ನಿಮ್ಮ ಮತ್ತೇಭವನ್ನೇ ಅಂಶಗಳಾಗಿ ಬಿಡಿಸಿ ತೋರಿಸಿದರೆ ನಿಮಗೆ ಹೆಚ್ವು ಸ್ಪಷ್ಟವಾದೀತು.

      ವನಿತೇ ನಿನ್ನೊಡೆ ನೇಹಮಲ್ತೆ ಮಧುರಂ ಸಂಭ್ರಾಂತಿ ಏನ್ಸಲ್ಲದಯ್

      ಇಲ್ಲಿ ಬಿಡಿಸಿರುವ ಭಾಗಗಳು ಕ್ರಮವಾಗಿ ಬ್ರಹ್ಮ, ವಿಷ್ಣು, ರುದ್ರ, ಬ್ರಹ್ಮ ವಿಷ್ಣು ರುದ್ರ ಎಂದಿವೆ. ಹೀಗೇ ಪ್ರತಿಯೊಂದು ಪಾದವನ್ನು ಬಿಡಿಸಿ ಗುನುಗಿಕೊಳ್ಳಿ. ಹೇಳುವಾಗ ನಾನು ತಿಳಿಸಿದ ಲಯದ ಧಾಟಿಯನ್ನು ಗಮನದಲ್ಲಿಟ್ಟುಕೊಂದರೆ ಸಲೀಸಾಗಬಹುದು.

      ಹಾಗೆಯೇ ನಾನು ಮೇಲೆ ಕೊಟ್ಟಿರುವ ನನ್ನ ನಡುವಣಕ್ಕರದ ಮೊದಲ ಪಾದದ ಪ್ರಸ್ತಾರ ಹೀಗಿದೆ.

      ಅರಸಾ ಕೇಳ್ದುದನ್ ಈವಯೇನ್ ಅಕ್ಕೆನೀಂ ಆಣವಿಸಿಂ

      ಇಲ್ಲಿ ಕ್ರಮವಾಗಿ ಬ್ರಹ್ಮ, ವಿಷ್ಣು ವಿಷ್ಣು ವಿಷ್ಣು ರುದ್ರ ಬಂದಿವೆ. ಇವುಗಳ ಲಯ ತಕಧೀಂ ತದ್ದೀಂದೀಂ ತದ್ದೀಂದೀಂ ತದ್ದೀಂದೀಂ ತದ್ಧಿಮ್ಮಿತ್ತಾ ಅಂತ ಓದಿಕೊಳ್ಳಿ.

      ನೀವೆ ಹೇಳಿರುವಂತೆ ಅಂಶಗಳನ್ನು ಅರ್ಥಮಾಡಿಕೊಳ್ಳುವಿಕೆಯಲ್ಲಿ ನಿಮಗಾಗುತ್ತಿರುವ ತೊಡಕಿಗೆ ಕಾರಣ ನೀವು ಇದನ್ನು ಪ್ರಯೋಗಿಸದೆ ಇರುವುದೇಯೆ. ನೀವು ಪ್ರಯೋಗಶೀಲರು. ನಿಮಗೆ ನಿಲುಕದ್ದು ಯಾವುದೂ ಇರೋದಿಲ್ಲ ಅಂತ ಅಂದುಕೊಂಡಿದ್ದೀನಿ. ಇನ್ನೇನಾದರೂ ಪ್ರಶ್ನೆಗಳಿದ್ದರೆ ಕೇಳಿ. ನನಗೆ ಗೊತ್ತಾದಷ್ಟನ್ನು ನಾನು ಹಂಚಿಕೊಳ್ಳುತ್ತೇನೆ.

      • ಶ್ರೀ ಕಾಂತರೇ ಯಕ್ಷಗಾನ ಎಂಬುದು ಕರಾವಳಿ ಭಾಗದಲ್ಲಿ ಕಂಡುಬರುವ ಕಲೆ… ಅದಕ್ಕೆ ಅದರದ್ದೇ ಆದ ಆಹಾರ್ಯ ಕ್ರಮಗಳಿವೆ,ನೃತ್ಯ ವಿನ್ಯಾಸಗಳಿವೆ.ಇಲ್ಲಿ ಆಹಾರ್ಯ,ವಾಚಿಕ,ಆಂಗಿಕ,ಸಾತ್ವಿಕಗಳೆಂಬ ಚತುರ್ವಿಧಾಭಿನಯಗಳಿವೆ ಮತ್ತು ನವರಸಗಳೂ ಇವೆ. ಇಲ್ಲಿ ಪ್ರದರ್ಶನಗೊಳ್ಳುವ ಕಥಾಭಾಗಗಳಿಗೆ ಪ್ರಸಂಗಗಳೆನ್ನುವರು… ಪ್ರಸಂಗ ಕೃತಿಯಲ್ಲಿ ಕವಿ ವಿವಿಧ ಛಂದೋಬಂಧಗಳನ್ನು ಬಳಸಿ ಕಥೆಯನ್ನು ಪದ್ಯರೂಪದಲ್ಲಿ ರಚಿಸಿರುತ್ತಾನೆ.ಇದು ಖಂಡಕಾವ್ಯದಂತೆ ಕಂಡರೂ ಖಂಡಕಾವ್ಯವಲ್ಲ ಕಾರಣ ಇಲ್ಲಿ ವಿವಿಧ ಲಯಗಳ ಛಂದೋಬಂಧಗಳಿವೆ, ಒಂದೇ ಮಟ್ಟಿನ ಬಳಕೆ ಮಾಡುವುದಿಲ್ಲ ಕಾರಣ ಯಕ್ಷಗಾನ ಪ್ರದರ್ಶನದ ಕಲೆ ಇಲ್ಲಿ ಒಂದೇ ಬಂಧಗಳ ಬಳಕೆಯಿಂದ ಪ್ರದರ್ಶನ ಏಕತಾನತೆಯನ್ನು ಕಾಣುವುದೆಂಬುದ್ದೇಶದಿಂದ.ಯಕ್ಷಸಾಹಿತ್ಯವು ಕನ್ನಡ ಸಾಹಿತ್ಯದ ಪ್ರಕಾರವಾಗಿದೆ. ಇಲ್ಲಿ ಕನ್ನಡದ ಎಲ್ಲಾ ಬಂಧಗಳೂ ಬಳಕೆಯಾಗಿವೆ.ಆದರೆ ಅವುಗಳು ರಾಗ-ತಾಳಗಳ ನಾಮನಿರ್ದೇಶದಿಂದ ಗುರುತಿಸಿಕೊಳ್ಳುತ್ತವೆ.. ಉದಾ:- ಕಲ್ಯಾಣಿ ಅಷ್ಟತಾಳ… ಹೀಗೆ.
        ಯಕ್ಷಗಾನದಲ್ಲಿ ಕನ್ನಡ ಸಾಹಿತ್ಯದ ಇತರ ಪ್ರಕಾರಗಳಲ್ಲಿರುವ ಛಂದೋಬಂಧಗಳಿಗಿಂತಲೂ ಹೆಚ್ಚಿನವಿವೆ. ಅವುಗಳು ಮೂಲ ಛಂದಸ್ಸುಗಳಿಂದಾಗಿ ಕವಿಗಳು ತಮ್ಮ ಪಾಂಡಿತ್ಯದ ಮುಖೇನ ಸೃಜಿಸಿದ್ದಾಗಿದೆ. ಸುಮಾರು ೩೦೦ ರಷ್ಟು ಛಂದೋಬಂಧಗಳು ಯಕ್ಷಗಾನದಲ್ಲಿದೆ. ಈ ಕಲೆಯಿಂದಾಗಿ ಎಷ್ಟೋ ಕವಿಗಳು ಪ್ರೇರಕರಾದ ವಿಷಯ ಶತಾಂಶಸತ್ಯ. ಇದನ್ನು ಖ್ಯಾತ ಕವಿಗಳಾದ ಚ್.ಎಸ್. ವೆಂಕಟೇಶಮೂರ್ತಿಯವರೂ ಹೇಳುತ್ತಾರೆ. ಮೊಗೇರಿ ಗೋಪಾಲಕೃಷ್ಣ ಅಡಿಗರು, ಪಂಜೆ ಮಂಗೇಶರಾಯರು, ಮಂಜೇಶ್ವರ ಗೋವಿಂದ ಪೈಗಳು, ಕುವೆಂಪುರವರು,ಬೇಂದ್ರೆಯವರು,ಮಾಸ್ತಿ ವೆಂಕಟೇಶ ಐಯ್ಯಂಗಾರರು,ಡಾ| ಅಮೃತಸೋಮೇಶ್ವರರು,ಡಾ| ಕಯ್ಯಾರ ಕಿಂಞಣ್ಣ ರೈಗಳು ಹೀಗೆ ಹಲವು ಕವಿಗಳು ಯಕ್ಷಗಾನದಲ್ಲಿ ಬಳಸಿದ ಬಂಧಗಳಲ್ಲಿ ಬಹಳಷ್ಟು ಕಾವ್ಯ ರಚನೆ ಮಾಡಿದ್ದಾರೆ. ಈ ಸಾಹಿತ್ಯ ಪ್ರಕಾರದ ವಿಶೇಷತೆಯೆಂದರೆ ಯಕ್ಷಗಾನ ಪ್ರಸಂಗ ರಚನೆಯನ್ನು ಕಲಿತರೆ ಉಳಿದ ಸಾಹಿತ್ಯಗಳಲ್ಲೂ ಲೀಲಾಜಾಲವಾಗಿ ಕೈಯ್ಯಾಡಿಸುವಷ್ಟು ನೈಪುಣ್ಯತೆ ಮೂಡುತ್ತದೆ.ಯಕ್ಷಗಾನ ಪ್ರಸಂಗ ಸಾಹಿತ್ಯಗಳು ನಡುಗನ್ನಡದಲ್ಲಿದ್ದು ಹಗುರವಾದ ಸಾಹಿತ್ಯಗಳ ಬಳಕೆಮಾಡದೇ ಪ್ರೌಢ ಸಾಹಿತ್ಯಗಳ ಬಳಕೆಯೇ ಮಾಡಲಾಗುವುದು.
        ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ
        ಕನ್ನಡ ಸಾರಸ್ವತ ಲೋಕದ ಇತರೇ ಪ್ರಕಾರಗಳಿಗಿಂತಲೂ ಹೆಚ್ಚು ಕಾವ್ಯ ರಚನೆಯಾದ ಪ್ರಕಾರ ಯಕ್ಷಗಾನ…‌ಇಲ್ಲಿ ಈವರೆಗೆ ಸುಮಾರು ೫೦೦೦ ಸಾವಿರ ಯಕ್ಷಗಾನ ಪ್ರಸಂಗಗಳು ನೂರಾರು ಕವಿಗಳಿಂದ ರಚಿತವಾಗಿದೆ.ಕನ್ನಡದ ಇತರ ಸಾಹಿತ್ಯ ಪ್ರಕಾರದಲ್ಲಿ ಆದಿಪ್ರಾಸ ತೊರೆದು ಪದ್ಯ ರಚಿಸುವ ಸಂಪ್ರದಾಯ ಬಂದು ಹಲವು ದಶಕಗಳಾಯ್ತು ಆದರೂ ಯಕ್ಷಗಾನದಲ್ಲಿ ಇಂದಿಗೂ ಆದಿಪ್ರಾಸವನ್ನು ತೊರೆದು ರಚಿಸುವುದಿಲ್ಲ. ನಾನೂ ಓರ್ವ ಕವಿಯಾಗಿದ್ದು ಕಥೆಗಳು,ಕವನ,ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದೇನೆ.

  18. ಮನೋರಮೆಯು ಮುದ್ದಣನನ್ನು ಕೆಥೆ ಹೇಳುವಂತೆ ಪೀಡಿಸಿದಾಗ ನಡೆದ ಸಂಭಾಷಣೆ
    ಮು : “ಕತೆಯಂ ಕೇಳಿದ ರಾಜನೀವ ಸರಮಂ ನೀನೇನನಿಂದೀಳ್ಪೆಯೌ ?”
    ಮ : “ಹಿತವಪ್ಪಂದದಲೆನ್ನನೀವೆ ನಿಮಗಂ ಇನ್ನೇತಕೈ ಚಿಂತೆಯುಂ ?”
    ಮು: “ನುತಿಸುತ್ತಿತ್ತಿಹರಲ್ತೆ ನಿನ್ನ ಮೊದಲೇ ತಾಯ್ತಂದೆವಿರ್ ಜಾಣ್ಮೆಯಿಂ”
    ಮ: “ಅತಿಯಾಯ್ತೀಗಲದಂತ್ಯದೊಳ್ ಲಭಿಪುದೈ ಆಸ್ಥಾನ ಪಾಂಗಂತೆವೊಲ್”

    • ಚೆನ್ನಾಗಿದೆ.
      ಕೊನೆಯ ಪಾದ: ‘ಹಾಗಾದರೆ ನಾನೂ ಅರಮನೆಯ ರಿವಾಜಿನಂತೆ ಸರವನ್ನು ಮಾತ್ರ ಕೊಡುತ್ತೇನೆ, ನನ್ನನ್ನಲ್ಲ’ ಎಂದೇ?

      • ಹಾಗಲ್ಲ. ಅರಮನೆಯಲ್ಲಿ ಕೆಲಸ ಮೊದಲು ಮಾಡಿದನಂತರ ಉಡುಗೊರೆ ಸಿಗುವುದು. ಹಾಗೆಯೇ, ಇಲ್ಲಿಯೂ ಕೂಡ.

    • ನಾನು ಸಮಾಜಶಾಸ್ತ್ರದ ಪರಿಧಿಯೊಳಗೇ ಇದ್ದೇನೆ. ನೀವು ಅರ್ಥಶಾಸ್ತ್ರದ ವಲಯದಲ್ಲಿದ್ದೀರಿ 🙂

  19. ನಾರದನು ದೇವಲೋಕದಿಂದ ತಂದ ಪಾರಿಜಾತವನ್ನು ಕೃಷ್ಣನಿಗಿತ್ತನು. ಕೃಷ್ಣ ಅದನ್ನು ಪ್ರಿಯಪತ್ನಿಯಾದ ರುಕ್ಮಿಣಿಗೀಯಲು, ಕುಪಿತಳಾದ ಸತ್ಯಭಾಮೆ ತನ್ನ ಅಂತಃಪುರದಲ್ಲಿ ಬಾಗಿಲು ಮುಚ್ಚಿ ಕುಳಿತಿರುತ್ತಾಳೆ. ಇದನ್ನರಿತ ಕೃಷ್ಣನು ಆಕೆಯನ್ನೊಲಿಸಲು ಬರುವನು. ಆಗ ಬಾಗಿಲು ತೆರೆಯದಿದ್ದ ಸತ್ಯಭಾಮೆಗೂ ಕೃಷ್ಣನಿಗೂ ನಡೆಯುವ ಸಂಭಾಷಣೆಯಿದು.
    ಶ್ರೀಕೃಷ್ಣಪಾರಿಜಾತವೆಂಬ ಯಕ್ಷಗಾನ ಪ್ರಸಂಗದಲ್ಲಿ ಬರುವ ಈ ಸುಂದರಸಂವಾದವನ್ನು ಸ್ವಕಲ್ಪನೆಯಿಂದ ವಿಸ್ತರಿಸಿ ಭಾಮಿನೀರೂಪವನ್ನಿತ್ತು ನಿಮ್ಮ ಮುಂದಿಡುತ್ತಿದ್ದೇನೆ 🙂

    ’ನೀರೆ ಬಾಗಿಲ ತೆರೆಯೆ ಬಂದಿಹೆ’
    ’ನಾರು ನೀಂ ?’ ’ಗೋಪಾಲ’ ’ನಾದೊಡೆ
    ಸಾರು ತುರುಗಳ ಮೇಯಿಸಲ್’ ’ಕೇಳ್ ಶಕಟಭಂಜನನಾಂ’ |
    ’ಪೋರ ! ಗಾಡಿಯ ಮುರಿದಪನೆ ನೀಂ ?’
    ’ಶೂರಸುತ’ ’ನೀಂ ಶೂರನಲ್ತೇಂ ?’
    ’ಕ್ರೂರ ಕಾಳಿಂಗನನು ಮಥಿಸಿದ ಧೀರನಾಂ ಕೇಳೌ ’ ||
    ’ಧೀರ ಹಾವಾಡಿಗನೆ ! ಪೋ ಪೋ !
    ಗಾರುಡಿಗಗಡಣವನು ಸೇರಿಕೋ’
    ’ಮೋರೆಯೊಳು ಮೂಜಗವ ಮಾತೆಗೆ ತೋರಿದಾತನು ನಾಂ’ |
    ’ತೋರುವನೆ ನೀನಿಂದ್ರಜಾಲವ ?’
    ’ನೀರಜೇಕ್ಷಣೆ ಪಾದಕೆರಗುವೆ
    ತೋರು ವದನವ’ನೆನಲು ಭಾಮೆ ದ್ವಾರಮಂ ತೆರೆದಳ್ ||

  20. ಮಾಲೆ ಧರಿಸಿಹ ಹುಡುಗನೊಂದಿಗೆ
    ನೀಲಿಸೀರೆಯನುಟ್ಟ ಹುಡುಗಿಯು
    ಹೇಳದಾರಮ್ಮಾ , ಅದುವೆ ನಮ್ಮಯ ಮದುವೆಚಿತ್ರಾ-
    ಬಾಲ, ನಾನೇಕಲ್ಲಿ ಕಾಣೆನು?
    ಭೋಳ ನೀಮರೆತಂದು ಮಲಗಿದ
    ಕಾಲದಲಿ ತೆಗೆದಿದ್ದುದೀ ಚಿತ್ರವದುವೈಚಿತ್ರ್ಯ ||

  21. ಸರಿ ಪೋಗಿ ಬರಲೇನ್? ಸಾಲ್ಗುಂ ನಿಮ್ಮವಸರಂ.
    ಮರಿ ನನ್ನ ಕೆಲಸಂ. ಮಹ! ಕಂಡಿರ್ಪೆಂ!
    ಅರಿಯದ ಪುಡುಗಿ! ಅಯ್ಯೋ ನಾನೇನ್ ಬಲ್ಲೆಂ.
    ತ್ವರೆಮಾಡು ಬಂಡಿ ತಪ್ಪೀತಲ್ತೆ

    ತಿರುಗುವುದೇಗಳ್? ತಿಂಗಳ ಪೊತ್ತಿಗೇ!
    ಅರೆದಿಂಗಳ್ಗಾಗಲಾರದೇನೊ.
    ಸರಿವೋಯಿತೇಕೊ? ಸಂಬಳ? ನಿಮಗಿಷ್ಟೆ!
    ಬರಿವೊಟ್ಟೆ ಕೂರಲ್ ಬಂದೀತಷ್ಟೆ!

    ಹರ! ಬಿಟ್ಟಿತೆನ್ನಿಂ. ಆಕ್ಕೆ ಪೊತ್ತಾಯ್ತಲ್ತೆ.
    ಇರಿಮಿದೋ ಬಂದೆಂ. ಇನ್ನೇನೀಗಳ್?
    ಚರಪೀವೆನ್ ಕೊಳ್ಳಿಂ. ಸರಿ ಬರ್ಪೆಂ. ಜೋಪಾನಂ!
    ಸರಿ ನೀನುಂ ಜೋಕೆ! ಸರಿಯಾಗುಣ್ಣಿಂ.

    ಪೊರೆಯೆನೆ ಪೆಜ್ಜೆವೊತ್ತಾಣ್ಮಂ ಪೋದೊಡೆ
    ಪೊರಮಟ್ಟು ಬಂಡಿ ಪೋಗಿತ್ತಲ್ತೆ
    ತಿರುಗಿದಗಾಕೆ ತಿಟ್ಟಿದಳ್ ತಿಂಗಳ
    ವರೆಗೊಂದುಂ ಪತ್ರಂ ಬರೆದಿಲ್ಲಿರೆ?

    ಚರಪು- ಪ್ರಸಾದ
    ತಿಟ್ಟು-ಬೈಯು, ದೂರು

    ಕೆ.ಎಸ್.ನರಸಿಂಹಸ್ವಾಮಿಯವರ “ತಿಂಗಳಾಯಿತೆ” ಭಾವಗೀತೆಯಿಂದ ಪ್ರೇರಿತವಾಗಿ ಮೇಲಿನ ಪದ್ಯಗಳನ್ನು ಬರೆದೆ. ಇದೂ ಅಂಶಚ್ಛಂದಸ್ಸಿನ ಒಂದು ಬಂಧವೆ. “ಗೀತಿಕೆ”- ಒಂದು ಮಾರ್ಪಾಟು ಮಾತ್ರ ಗಾನಸುಭಗತೆಗಾಗಿ ಮಾಡಿಕೊಂದಿದ್ದೀನಿ. ಸಮಪ್ರಾಸಸ್ಥಾನಗಳು ಗೀತಿಕೆಯಲ್ಲಿ ನಾಲ್ಕನೆಯ ಗಣಾದಿಯಲ್ಲಿ ಬರುವುದು ನಿಯಮ. ಅದನ್ನ ನಾನು ಐದನೆಯ ಗಣಾದಿಗೆ ವರ್ಗಾಯಿಸಿದ್ದೇನೆ. ವಿಷಮಪಾದಗಳಲ್ಲಿ ವಿಷ್ಣು ಬ್ರಹ್ಮ ವಿಷ್ಣು ವಿಷ್ಣು. ಸಮಪಾದಗಳಲ್ಲಿ ವಿಷ್ಣು ಬ್ರಹ್ಮ ರುದ್ರ.

    • ಮೇಲಿನ ಗೀತಿಕೆಯ ಸೊಗಸನ್ನು ಸವಿಯಲು ಗೀತೆಯಾಗಿ ಹಾದಿದರೆ ಚೆನ್ನ ಅನ್ನಿಸ್ತು. ಒಂದು ಪ್ರಯತ್ನ

      http://www.tunescoop.com/play/323136313736/geetike-shrikaanth-padyapaana-13813-mp3

      • Or try this

        http://tindeck.com/listen/ppgy

        • ಬಹಳಸುಂದರ 🙂

          ರಸಮೋಹsನದೊಳಂ ಭೂಪಾಳsದೊಳುಮೈದೆs
          ಪೊಸಪಾಂಗಿsನೊಳು ನೀಂ ಭೈರsವಿsಯಂ
          ಜಸದಿಂದsಲಮೃತs-ವರ್ಷಿsಣಿsಯೊಳು ಪಾಡೆs
          ನಸುನsಗುs ರಸಿಕಂ ಬೀರುsವsನಯ್

          • ಧನ್ಯವಾದಗಳು ಸೋಮ. ನಿಮಗೆ ಈಗಾಗಲೆ ಅಂಶಗಣಗಳು ಮನದಟ್ಟಾಗಿಯಾಯಿತಲ್ಲ 🙂 ಭಳ.

            ನಿಮ್ಮ ಪದ್ಯದ ಕೊನೆಯ ಪಾದದಲ್ಲಿ ಎರಡನೆಯ ಗಣ ಬ್ರಹ್ಮವಾಗ ಬೇಕು. ಅದನ್ನು ವಿಷ್ಣುವಾಗಿಸಿದ್ದೀರ. ಅದನ್ನು ಸರಿಪದಿಸಿದರೆ ಸರ್ವತೋಭದ್ರವಾದ ಪದ್ಯವಾಗುತ್ತೆ.

          • Shrikaanthare dhanyavaada, mUladalle savarisiddEne

    • ಪ್ರಿಯ ಶ್ರೀಕಾಂತರೇ!, ನಿಮ್ಮ ಈ ಹೊಸಪರಿಯ ಗೀತಿಕೆ ತುಂಬ ಸೊಗಸಾಗಿದೆ. ಇಲ್ಲಿಯ ಮಾರ್ಪಾಡು ತುಂಬ ಉಚಿತವೆನಿಸಿದೆ. ಕನ್ನಡದ ಈ ಪ್ರಾಚೀನಬಂಧದ ಗತಿಸುಭಗತೆಯ ಬಗೆಗೆ ತೀರದ ವಿದ್ವಸಂಗ್ರಾಮಗಳೇ ಆಗೆವೆ. ಆದರೂ ಅದು ಬಗೆಹರಿದಂತಿಲ್ಲ. ಆದರೆ ನಿಮ್ಮ ಈ ಮಾರ್ಪಾಡು ಮಾತ್ರ ತುಂಬ ಒಳ್ಳೆಯ ಗತಿಸುಭಗವೂ ಶ್ರುತಿಹಿತವೂ ಆದ ಯತ್ನ.ಇಲ್ಲಿಯ ಕವಿತೆ-ಭಾಷೆಗಳೂ ಚೆಲುವಾಗಿವೆ.

  22. त्वयि फलति कृता रतिर्नवा मे भवति महत्यपराधिताद्य का मे ।
    नम इदमिदमस्तु तुभ्यमारादिति शिवयोः कलहात्ययोक्तिरव्यात् ॥
    ಇದು ಪ್ರೇಮಕಲಹದ ಕೊನೆಯಲ್ಲಿ ಶಿವಶಿವೆಯರ ಮಧ್ಯೆ ನಡೆದ ಸಂವಾದವನ್ನೊಳಗೊಂಡ ಪದ್ಯ. ಶಿವ-ಪಾರ್ವತಿಯರು ಒಂದೇ ದೇಹವನ್ನಾಶ್ರಯಿಸಿರುವ ಕಾರಣ ಇಬ್ಬರಿಗೂ ಇರುವಿದು ಒಂದೇ ಬಾಯಿ. ಹಾಗಾಗಿ ಇಲ್ಲಿರುವ ಸಂವಾದಘಟಕಗಳು ಇಬ್ಬರಿಗೂ ಸಮವಾಗಿ ಹೊಂದಿತ್ತವೆ.
    ಶಿವ – ತ್ವಯಿ ಫಲತಿ ಕೃತಾ ರತಿರ್ನವಾ ಮೇ
    ನಿನ್ನಲ್ಲಿ ನಾನು ಹೊಸದಾದ (ನವಾ) ಪ್ರೀತಿಯನ್ನಿಟ್ಟರೆ ಅದು ಫಲಿಸುತ್ತದೆ
    ಪಾರ್ವತೀ – ತ್ವಯಿ ಫಲತಿ ಕೃತಾ ರತಿರ್ನ ವಾಮೇ
    ಪ್ರತಿಕೂಲವಾಗಿರುವ (ವಾಮೇ) ನಿನ್ನಲ್ಲಿ ಪ್ರೀತಿಯನ್ನಿಟ್ಟರೆ ಅದು ಫಲಿಸುವಿದಿಲ್ಲ
    ಶಿವ – ಭವತಿ ಮಹತ್ಯಪರಾಧಿತಾದ್ಯ ಕಾ ಮೇ
    ನಾನೀಗ ಯಾವ ದೊಡ್ಡ ಅಪರಾಧವನ್ನು ಮಾಡಿದ್ದೇನೆ?
    ಪಾರ್ವತೀ – ಭವತಿ ಮಹತ್ಯಪರಾಧಿತಾದ್ಯ ಕಾಮೇ
    ಇಂದು ದೊಡ್ಡ ಅಪರಾಧವನ್ನು ಮಾಡಿರುವುದು ಕಾಮ (ನೀನಲ್ಲ. ನಿನ್ನನ್ನು ನಾನು ಪ್ರೀತಿಸುವಂತೆ ಮಾಡಿದ ಕಾಮನದೇ ತಪ್ಪು)
    ಶಿವ – ನಮ ಇದಮಿದಮಸ್ತು ತುಭ್ಯಮಾರಾತ್
    ಇಗೋ ನಿನಗೆ ಹತ್ತಿರದಿಂದ (ಆರಾತ್) ನಮಸ್ಕರಿಸುತ್ತೇನೆ (ನನ್ನನ್ನು ಕ್ಷಮಿಸು ಎಂದರ್ಥ)
    ಪಾರ್ವತೀ – ನಮ ಇದಮಿದಮಸ್ತು ತುಭ್ಯಮಾರಾತ್
    ಇಗೋ ನಿನಗೆ ದೂರದಿಂದಲೇ (ಆರಾತ್) ನಮಸ್ಕರಿಸುತ್ತೇನೆ (ನನ್ನನ್ನು ಬಿಟ್ಟುಬಿಡು. ನಿನಗೆ ದೊಡ್ಡದೊಂದು ನಮಸ್ಕಾರ ಎಂದು ವ್ಯಂಗ್ಯ)
    ಇತಿ ಶಿವಯೊಃ ಕಲಹಾತ್ಯಯೊಕ್ತಿರವ್ಯಾತ್ – ಪ್ರೇಮಕಲಹದ ಕೊನೆಯಲ್ಲಿ ಶಿವಪಾರ್ವತಿಯರ ಮಧ್ಯೆ ನಡೆದ ಈ ಸಂವಾದವು ನಮ್ಮನ್ನು ಪೊರೆಯಲಿ.

    • Just an observation; not to undo the beauty of the verse: When they both are one body, how can she say ‘dUrAt namaskAraH’?

    • Simply marvelous Shankar.

      Prasad,
      That is the “maanasika doora” 🙂

      • Thanks Shreesha. It is appropriate that Shreesha should come to Shankara’s rescue when the latter integrity is under question 🙂

    • Very beautiful

    • ತುಂಬಾ ಚೆನ್ನಾಗಿದೆ ಶಂಕರ್ ಅದ್ಭುತ!

    • ಪ್ರಿಯ ಶಂಕರ್ – ಬಹಳ ಸುಂದರವಾಗಿದೆ ಹಾಗೂ ಚಮತ್ಕಾರದಂತಿದೆ. ನಿಮ್ಮ ಅರ್ಧನಾರೀಶ್ವರ ವಿಷಯದ ಪದ್ಯಗಳು ಕಲ್ಪನೆಗೆ ಮೀರಿ ಸುಂದರವಾಗಿರುತ್ತವೆ. ಹಿಂದೆ ಪದ್ಯಪಾನದಲ್ಲೇ, ಪಾರ್ವತಿ ಜಡೆ ಗಟ್ಟಿಯಾಗಿ ಹೆಣೆದದ್ದರಿಂದ ಶಿವನಿಗೆ ತಲೆ ನೋಯುತ್ತಿದೆ ಎಂಬಂತೆ ಬರೆದ ಸಂಭಾಷಣೆಯ ಪದ್ಯ ನೆನಪಾಗುತ್ತಿದೆ. ಇದೇ ಜಾಡಿನ ಇತರ ಪದ್ಯಗಳಿದ್ದಲ್ಲಿ ದಯವಿಟ್ಟು ಹಾಕಿ 🙂

    • स्वादं स्वादमिदं पद्यं चित्तं द्रवति सोदर ।
      परन्तु नयनद्वन्द्वमार्द्रीभवति पाथसा ॥ 🙂

      • यदसौ वर्धते नित्यं मदीयप्रतिभालता ।
        हेतुस्तत्र रसज्ञस्य तवानन्दाश्रुवाःकणाः ॥ 🙂

  23. ಯುದ್ಧಕ್ಕೆ ಹೊರಟ ಉತ್ತರಕುಮಾರನಿಗೂ ಅಂತಃಪುರಸ್ತ್ರೀಯರಿಗೂ ನಡೆಯುವ ಸಂಭಾಷಣೆ.

    ’ನೀರಾ ! ಕೌರವಸೇನೆ ಭೋರ್ಗರೆವ ಮಾಮುನ್ನೀರವೋಲೆಂಬರೈ’
    ’ಪಾರಾವಾರವನೈದು ಕುಂಭಜನವೋಲ್ ಆಪೋಶನಂಗೆಯ್ವೆನಾಂ’ |
    ’ಮಾರಾಕಾರ !ಸುಧೀರ ! ಶೂರ ! ಮರಣಕ್ಕಂಜಿರ್ಪನಲ್ತೇಂ ? ಗಡಾ’ !
    ತೇರನ್ನೇರುತೆ ಸಾರ್ದೊಡಂ ಜವನುಮಾ ದಿಕ್ಕೆಟ್ಟು ತಾನೋಡುವಂ’ ||

    ’ನಲ್ಲಾ ! ನೀಂ ಬಲುಸಾಸಿ ! ಪೋರ್ವ ಪರಿಯಂ ಪೇಳೈ ರಣಕ್ಷೋಣಿಯೊಳ್ ’
    ’ಫುಲ್ಲಾಂಭೋರುಹನೇತ್ರೆ ! ಚಾಪಧರನಾಂ ಸಾಕ್ಷಾತ್ ಪಿನಾಕಿ, ಪ್ರಭೋ-
    ತ್ಫುಲ್ಲಂ ದ್ವಾದಶಸೂರ್ಯತುಲ್ಯನುರಿವೆಂ ಸರ್ವಾರಿಲೋಕಾನಲಂ’
    ’ಮಲ್ಲಾಗ್ರೇಸರ ! ಷಣ್ಮುಖಾಭ ! ಕದನಕ್ಕಾರಿರ್ಪರೈ ತ್ವತ್ಸಮರ್ ?’ ||

    ’ದ್ರೋಣಂ ಹಾರುವನಲ್ತೆ ! ಸೈಂಧವನಲಾ ಭಾರ್ಯಾಲಯೈಕಾಶ್ರಯಂ
    ಜೀನಾಂಗಂ ಮಿಗೆ ಭೀಷ್ಮ, ಸೀರೆ ಸೆಳೆಯಲ್ ದುಃಶಾಸನಂ ಸಲ್ವನಯ್ |
    ದಾನಾಗ್ರೇಸರ ಸೂತಸೂನುವಹಹಾ ! ಈಡಪ್ಪರಾರಿರ್ಪರಯ್ ?’
    ’ಪ್ರಾಣೇಶಾ ! ಭಲೆ ಭಾಪು ಭಾಪು !’ ಎನುತುಂ ಕೈತಟ್ಟಿದರ್ ನೀರೆಯರ್ ||

    • ಆಹಾ ತುಂಬಾ ಚೆನ್ನಾಗಿದೆ ಉತ್ತರನ ಪೌರುಷ ಪೆಜತ್ತಾಯರೆ 🙂

      • ಮೆಚ್ಚುಗೆಗೆ ನಮನಗಳು ಶರ್ಮರೆ 🙂

    • ಚೆನ್ನಾಗಿದೆ ಪೆಜತ್ತಾಯರೆ

    • ಸದಪರವಕ್ತ್ರ|| ಕವನಗಳನು ನಿಮ್ಮವೀವರಂ
      ನೆವದಿನದಾವುದೊ ಟೀಕಿಸಿರ್ದಪೆನ್|
      ಭವಿಯಿವನನು ಮನ್ನಿಸಿಂ ಪ್ರಭೋ
      ಕಿವಿಯನು ಹಿಗ್ಗಿಸಿ ಬಾಯಮುಚ್ಚುವೆಂ||

      • ಪ್ರಸಾದು ಸರ್ 🙂

        ಎಂದು ಟೀಕಿಸಿದುದೆನ್ನನಾರ್ಯ ! ನೀವ್
        ಬಂದುದಿಲ್ಲ ಮನಕಿಂಥ ಭಾವನೆ |
        ಕಂದನಾಂ ಮಹಿತಪದ್ಯವಿದ್ಯೆಯೊಳ್
        ಸ್ಪಂದಿಪರ್ಗೆ ಮುದದಿಂದೆ ವಂದಿಪೆಂ || ( ರಥೋದ್ಧತಾ )

        ಸರ್ ! ಏಕೆ ಹೀಗೆ ಹೇಳಿದಿರೆಂದು ಅರ್ಥವಾಗಲಿಲ್ಲ. ನೀವು ಟೀಕಿಸಿದಿರೆಂದು ನನಗೆಂದೂ ಅನಿಸಿಲ್ಲ. ಎಲ್ಲಾದರೂ ನನ್ನಿಂದಾಗಿ ನಿಮಗೆ ಹಾಗನಿಸಿದ್ದಲ್ಲಿ ಕ್ಷಮಿಸಿ. ನಿಮ್ಮ ಪ್ರತಿಕ್ರಿಯೆಗಳು ಮತ್ತು ಸವರಣೆಯ ಸೂಚನೆಗಳು ನನಗೆ ಉಪಕಾರಕಗಳೂ ಉತ್ಸಾಹವರ್ಧಕಗಳೂ ಆಗಿವೆ 🙂

      • ಇದೇನು ಇಷ್ಟು ಗಂಭೀರವಾಗಿ ಗಣಿಸಿದಿರಿ? ನಿಮ್ಮ ಪದ್ಯಗಳು ತುಂಬ ಉನ್ನತಮಟ್ಟದವಾಗಿವೆ/ಗುತ್ತಿವೆ ಎಂಬುದನ್ನು ಪದ್ಯರೂಪವಾಗಿ ಹಾಗೆ ಹೇಳಿದೆ ಅಷ್ಟೆ. ಪದ್ಯ ಬರೆಯುವಾಗ ಏನೇನೋ ’ಅಹಮಹಪಿತ್ಯಾಪತಂತಿ’ ಎಂಬುದು, ಮಾತ್ರ ಪದ್ಯಶಿಲ್ಪಿಯಾದ ನನಗಿಂತ ಕವಿಯಾದ ನಿಮಗೆ ಸುವೇದ್ಯವಲ್ಲವೆ? 🙂

        • ಓಹ್ ! ಈಗ ಸಮಾಧಾನವಾಯ್ತು ಸರ್ 🙂 ಮೊದಲು ಹಾಗೆಯೇ ಅಂದುಕೊಂಡರೂ ಎಲ್ಲೂ smiley ಇಲ್ಲದಿದ್ದುದರಿಂದ ಹಾಗನಿಸಿತು.

          ಸ್ಮೈಲಿಯಿಲ್ಲದುದ ಕಂಡು ವಕ್ತ್ರದೊಳ್ ( ಸದಪರವಕ್ತ್ರ !)
          ಫೀಲು ಬಂದುದೆನಗಿಂತು ಕಾಣಿರೈ 😉

        • ‘ವಕ್ತ್ರ’ದ ಶ್ಲೇಷೆ ಚೆನ್ನಾಗಿದೆ.

  24. ತಿಳಿದಪರೆಂದು ಕೋವಿದರ ಸಾರ್ದುಬೆಸಂಗೊಳೆಕಾಂಬರಿಲ್ಲದಂ
    ತಿಳಿಪಿರಿ ಮಾಣದಿಂದೆನಗೆ ಯಿರ್ಪುದೆ ದೈವವು ಕಂಡಿರೇನದಂ ?
    ತಿಳಿಪೆನು ಬಾ ನರೇಂದ್ರನದ ಕಂಡಿಹೆ ನಿನ್ನನು ಕಾಣ್ವ ಮಾಳ್ಕೆಯೊಳ್,
    ತಿಳಿಯುವೆನೀನದಂ ಸಕಳ ಜೀವರಸೇವೆಯ ಪೂತ ಕಜ್ಜದೊಳ್

    (ಪೂತ – ಪವಿತ್ರವಾದ )

  25. ಎನಗೀ ಶೇಡಿನ ಬಟ್ಟೆ ಬೇಕಿದೆಯಿದನ್ನಿಲ್ಲೀಗಲೇ ಕೊಳ್ಳಲೇ?
    ಮನೆಯಲ್ಲೀ ಕಲರಿಂದಿದಕ್ಕು ಬೆಟರಾ ಕೋನಾದ ಪೀಸಿಲ್ಲವೆ?
    ಮನವಂ ಗೆದ್ದಿರುವಾ ಡಿಸೈನಿಗಿದುವೇ ಪ್ರಿಂಟಿದ್ರೆಚೆನ್ನಾಗಿರು
    ತ್ತೆನಿಸುತ್ತಾದರೆ ಜಾಗವಿಲ್ಲವಿರಿಸಲ್ಕೊಂದೇ ಗಜಂ ಕೊಳ್ಳುವೆಂ. ||೫||

    ನನ್ನ ಅರ್ಧಾಂಗಿನಿಯ Quilting ಹವ್ಯಾಸಕ್ಕೆ ಮೇವು ಒದಗುವ ಸಂದರ್ಭದಲ್ಲಿ ನನ್ನ ಆಕೆಯ ನಡುವೆ ನಡೆಯಬಹುದಾದ (ಪೂರಾ)ಕಾಲ್ಪನಿಕ(ವಲ್ಲದ) ಸಂಭಾಷಣೆ (ನನ್ನ ಬೊಂತೆಪುರಾಣವೆಂಬ ವಸ್ತ್ರಖಂಡ ಕಾವ್ಯದಿಂದ ಉದ್ಧೃತ)

  26. Usual accident scene conversations 🙂

    ಏನಯ್ ಬಂಡಿಯನೆಂತು ಚಾಲಿಪುದು ಪೇಳ್?ನೀಂ ಮುನ್ನಮೇಂ ಬಂದುದಯ್?
    ಪಾನಂ ಪೊಕ್ಕಿಹುದೇಂ?ಪ್ಲವಂಗನಲ ನೀಂ ನಲ್ವಾತುಗಳ್ ಸಲ್ಲದೇಂ?
    ನೀನಯ್ ಪೆಗ್ಗಣಮೆರ್ಮೆ ನೀಂ ಗಡ ಪಣಸ್ತ್ರೀ ಪೆತ್ತಳೇಂ ನಿನ್ನ ಹಾ!
    ನಾನಾ ಪಾಲಕನಾಪ್ತನಿರ್ಪೆನಳಿವೆಂ ನಿನ್ನ
    ನ್ನೆನುತ್ತಾಡಿದರ್

    • Swabhaavokti tumba chennaagide Soma.

    • ಕಲ್ಪನೆ ಚಂದ ಸೋಮ.

      ಕೆಲವು ಒಬ್ಸರ್ವೇಷನ್ಸ್. ವಂಡಿ ಅಂತ ಉದ್ದೇಶಪೂರ್ವಕವಾಗಿ ಹಾಕಿರುವುದೆ? ಕನ್ನಡದಲ್ಲಿ ಬಂಡಿಯೆ ಸರಿ. ಎರಡನೆಯ ಪಾದದಲ್ಲಿ ವಿಸಂಧಿ. ಸಂಧಿ ಮಾಡಿದ್ರೆ ಛಂದಸ್ಸು ಕೆಡುತ್ತೆ. ಚಾಲಿಪುದು ಸರಿಯಲ್ಲಾನ್ಸುತ್ತೆ. ಚಲಿಪುದು ಸರಿ, ಛದಂಸ್ಸಿಗೆ ಸರಿಯಲ್ಲ. ಓಡಿಪುದು ಅಂತ ಹಾಕಿ ಹಿಂದೆ ಅಡ್ಜಸ್ಟ್ ಮಾಡಿದರೆ ವಿಸಂಧಿಯೂ ತಪ್ಪುತ್ತೆ.

      • ಇಲ್ಲ ಶ್ರೀಕಾಂತರೇ, ಚಾಲಿಪುದು ಎಂಬುದೇ ಸರಿ. ಏಕೆಂದರೆ ಬಂಡಿಯನ್ನು ನಡಯಿಸಬೇಕಲ್ಲದೆ ಅದೇ ನಡೆಯದು. ಹೀಗಾಗಿ ಪ್ರೇರಣಾರ್ಥಕವಾಗಿ ಚಲ್ ಧಾತುವಿಗೆ ಣಿಚ್ ಪ್ರತ್ಯಯವು ಬಂದು ಅದು ಚಾಲನವೆಂದಾಗುವುದಲ್ಲದೆ ಚಲನವೆಂದಲ್ಲ. ಆದ್ರೆ ನೀವೆಂದಂತೆ ಬಂಡಿ ಎನ್ನುವ ರೂಪವೇ ಸಾಧು. ಎರದನೆಯ ಪಾದದ ವಿಸಂಧಿಯನ್ನು ಮಾನಂ ಸಂದಪುದೇ(ಂ) ಇತ್ಯಾಗಿಯಾಗಿ ಸವರಿಸಬೇಕು.

        • Ok cheers

        • ಗಣೇಶ್ ಸರ್,
          ನೀವು ಕಾಮೆಣ್ಟ್ ಮಾಡುವಾಗಲೇ ನಾನು ‘ಪಾನಂ ಪೊಕ್ಕಿಹುದೆ’ ಎಂದು ವಿಸಂಧಿಯನ್ನು ಸವರಿಸಿದ್ದೇನೆ. ವಂಡಿಯನ್ನು ಸವರಿಸಿದ್ದೇನೆ.

          ಶ್ರೀಕಾಂತರೆ ಧನ್ಯವಾದಗಳು

    • Very good paraphrasing of swear words.

    • Soma Sharmare

      Brilliant, funny, exquisitely crafted padya. Congratulations

  27. ಕೃಷ್ಣನ ಕೊಳಲಿಗೂ ಮತ್ತು ಗೋ ಪಿಕೆಯ ನಡುವಿನ ಸಂಭಾಷಣೆ……‍

    ಕೊಳಲಿನ ಬಗ್ಗೆ ಅಸೂಯೆ ಪಟ್ಟ ಗೋಪಿಕೆಯರಿಗೆ, ಕೊಳಲು ಹೇಳುತ್ತದೆ, ಕೃಷ್ಣನು ತನ್ನನ್ನು ಬರೀ ಗೋಪಿಕೆಯರನ್ನು ಕರೆಯಲು ಬಳಸುತ್ತಾನೆಂದು

    ಮುರಳಿ ನೀನೇ ಧನ್ಯನೈಯೆಮ‌
    ಗಿರದ ಭಾಗ್ಯದೆ ಕೃಷ್ಣ ನಿನ್ನನು
    ತೆರೆದ ತುಟಿಗಳಿಗೊತ್ತಿ ನಂತರ ಸೊಂಟದೊಳಗಿಡುವಂ
    ಬರಿಯಗಣ್ಣಿಗೆ ಮೋಸಗೈಯುತ‌
    ಕರೆಯುತಾ ಗೋಪಿಕೆಯರನು ತೆರೆ
    ಮರೆಯೊಳಿಂದೆನ್ನಾರ್ತನಾದವುಕೇಳದವಗೆ ಸkhi

  28. ಸೋಮ. ಹಳಗನ್ನಡದಲ್ಲಿ ಬಕಾರಾದಿಯು ವಕಾರವಾಗುವುದು ಸಂಧಿಮಾಡುವಾಗ ಮಾತ್ರ. ಇದಕ್ಕೂ ಅಪವಾದಗಳುಂಟು. ಇವನ್ನುನ್ಪ್ರಯೋಗದಿಂದ ತಿಳಿವುದೆಂದಷ್ಟೆ ವೈಯಾಕರಣಿಗಳು ಹೇಳಿಬಿಡುತ್ತರೆ. ಪೂರ್ವದಹಳಗನ್ನಡದಲ್ಲಿ ವಕಾರಾದಿಗಳೆ ಸ್ವಾಭಾವಿಕವಾಗಿ ತಮಿಳಿನಲ್ಲಂತೆ ಇದ್ದಿರುವ ಆಧಾರಗಳಿವೆ. “ವಿತ್ತಿದಲ್ಲಿ ವೆಳೆಯಾದೆ ಕಿಡುಗೆ” ಎಂದು ಶಾಸನವೊಂದರಲ್ಲಿದೆ

    • ಶ್ರೀಕಾಂತರೆ ಧನ್ಯವಾದಗಳು

      ಪ್ರತ್ಯೇಕವಾಗಿಯೂ ವಂಡಿಯನ್ನು ಸರಿಯೆಂದೇ ತಿಳಿದಿದ್ದೆ, ನೀವು ಹೇಳಿದಹಾಗೆ ಸಂಧಿಯಲ್ಲಿ ಮಾತ್ರ ಬಳೆಸುತ್ತೇನೆ, ಸವರಿಸಿದ್ದೇನೆ

    • Shrikanth, I read your comment and replied for that, but your comment dissappeared 🙂

  29. ಎಲ್ಲರಿಗೆ ಸಾಮೂಹಿಕವಾಗಿ ಪ್ರತಿಕ್ರಿಯಿಸುತ್ತಿದ್ದೇನೆ; ನನ್ನ ಬೆನ್ನು-ಬೆರಳುಗಳು ನೋವಿಂದ ಮುಷ್ಕರ ಹೂಡಿವೆ; ಮನ್ನಿಸಿರಿ:-) ಪೆಜತ್ತಾಯರ ಪದ್ಯಗಳಿಗೆ ನನ್ನ ಮೆಚ್ಚುಗೆ ಸಂದಿವೆ.ಚಂದ್ರಮೌಳಿಯವರ ಸೀಸವು ಸೊಗಸಾಗಿದೆ. ಅದೇಕೋ ಯಾರಿಗೂ ಅತ್ತ ಪ್ರಯೋಗಕುತೂಹಲವು ಬಂದಿಲ್ಲ! ಚೀದಿ ಹಾಗೂ ಸೋಮರ ಪದ್ಯಗಳೂ ಚೆನ್ನಾಗಿವೆ.
    ಕಾಂಚನ ಅವರ ಪದ್ಯದಲ್ಲಿ ವಿಸಂಧಿದೋಷವಾಗಿದೆ. ದಯಮಾಡಿ ಸವರಿಸಿಕೊಳ್ಳುವುದು
    ಪ್ರಸಾದರ ಪದ್ಯವು ಸ್ಪಷ್ಟವಾಗಲಿಲ್ಲ. ಹೃದಯರಾಮರ ಪದ್ಯದಲ್ಲಿ ಮತ್ತೂ ಸ್ಪಷ್ಟತೆ ಅಪೇಕ್ಷಿತ.ಶಂಕರನ ಸಂಸ್ಕೃತಪದ್ಯವು ಪಾರ್ವತೀ-ಪರಮೇಶ್ವರರ ದಾಂಪತ್ಯದಷ್ಟೇ ಶ್ಲೇಷಗಹನವಾಗಿದ್ದು ಅದೊಂದು ಬಗೆಯ ಉತ್ತರಾಲಂಕಾರದಿಂದ ಲೋಕೊತ್ತರವಾಗಿದೆ.
    ಮಿತ್ರರಿಗೆಲ್ಲ ಒಂದು ವಿನಮ್ರಸೂಚನೆ: ದಯಮಾಡಿ ಎಲ್ಲರೂ ಈ ಸಂವಾದಪದ್ಯದ ರಚನೆಗಳನ್ನು ಹಂಸಗ್ರೀವಗಳ (inverted comma-s) ನಡುವೆ ಹೊಂದಿಸಿರಿ.ಇಲ್ಲವಾದರೆ ಸಂವಾದದ ಸ್ವಾರಸ್ಯವನ್ನು ಅರಿತುಕೊಳ್ಳಲು ತೊಡಕಾಗುವುದು. ಸೋಮ, ಮೌಳಿ ಮುಂತಾದ ಕೆಲವರು ಮಾತ್ರ ಇದನ್ನು ಪಾಲಿಸಿರುವುದು ಮುದಾವಹ.

    .

    • ನನ್ನ ಪದ್ಯವನ್ನು ಸಂಭಾಷಣೆ ರೂಪಕ್ಕೆ ಅಲ್ಲಿಯೇ (ಸಂಖ್ಯೆ 16) ಬದಲಿಸಿದ್ದೇನೆ.

  30. “ನೋಡು ನಾ”ಲೇ”ಯೆಂದು ನಿನ್ನ ಲೇವಡಿಮಾಡೆ
    ಲೇಡಿ ನೀನಾದೆಯೆಲೆ ಮೋಡಿಯೇನೇ” ?!
    “ಛೇಡಿಸುವಿರೇಕೆನ್ನ ನಾನಾಗ “ರೀ”ಯೆಂದು
    ಚೋಡಿಮಾಡುದನರಿಯಿರಿ ನೀವೆನ್ನರೀ” !!

    (ನೀವೆನ್ನರೀ = ನೀವು + ಎನ್ನ + “ಅರಿ” – ಸಂಸಾರದ “ಅರಿ” ಸಮಾಸದ ಚಿತ್ರಣ !! )

    • ಕೊನೆಯ ಸಾಲು ಸ್ವಲ್ಪ ಸವರಣೆಯೊಂದಿಗೆ :

      “ನೋಡು ನಾ”ಲೇ”ಯೆಂದು ನಿನ್ನ ಲೇವಡಿಮಾಡೆ
      ಲೇಡಿ ನೀನಾದೆಯೆಲೆ ಮೋಡಿಯೇನೇ” ?!
      “ಛೇಡಿಸುವಿರೇಕೆನ್ನ ನಾನಾಗ “ರೀ”ಯೆಂದು
      ಚೋಡಿಮಾಡುದನರಿಯಿರೀಯನ್ನರೀ” !!

    • ಅಷ್ಟೆಲ್ಲ ಕೊಂಕಣ ಸುತ್ತಿ ಮೈಲಾರ ಏಕೆ?

      ಪಲ್ಲವ|| ಸ್ಥೂಲನಡು’ವ’ಳ ’ಲೇವಡಿ’ಸದೆಲ್
      ತೂಲದಿಂದೆಬ್ಬಿಸವಳನು ತುಸು|
      ಚಾಲವಾಗಿಸಲಾಗ ನಡು’ವ’ದು
      ಖಾಲಿಯಾಗುತೆ ’ಲೇಡಿ’ಯೌ||

  31. ಈ ಮಾತುಕತೆಯ ಪದ್ಯವು ಒಂದು ಸಂಸ್ಕೃತ ಪದ್ಯದ ಅನುವಾದ – ಛಂದಸ್ಸಿಗಾಗಿ ನಾಲ್ಕನೇ ಸಾಲನ್ನು ಅಷ್ಟು ಚೆನ್ನಾಗಿ ಅನುವಾದಿಸಲಾಗದಿದ್ದದ್ದು ನನ್ನ ಕೊರತೆಯಷ್ಟೇ)

    ತರಳೆಯೇನಿದು ಬೆವೆತೆ ಕಣ್ಗಳೊ
    ಳಿರುವ ಬೆಂಕಿಗೆ ನಡುಕವೇತಕೆ
    ಪೆರೆಮೊಗದವಳೆ ದಿಟದಲಂಜಿಕೆ ಕೊರಳ ಹಾವಿನಲಿ ।
    ಅರರೆ ಮೈಯಲಿ ಪುಳಕವೇನಿದು
    ಶಿರದ ಮೇಲಿನ ಗಂಗೆ ತುಂತುರು
    ತರುವ ಚಳಿಗೆನ್ನುತಲಿ ಗುಟ್ಟನು ಕಾಯ್ವವಳೆ ಕಾಯ್ಗೆ ॥

    “ತರಳೆಯೇನಿದು ಬೆವೆತೆ?” “ಕಣ್ಗಳೊ
    ಳಿರುವ ಬೆಂಕಿಗೆ!” “ನಡುಕವೇತಕೆ
    ಪೆರೆಮೊಗದವಳೆ?” “ ದಿಟದಲಂಜಿಕೆ ಕೊರಳ ಹಾವಿನಲಿ!” ।
    “ಅರರೆ ಮೈಯಲಿ ಪುಳಕವೇನಿದು?”
    “ಶಿರದ ಮೇಲಿನ ಗಂಗೆ ತುಂತುರು
    ತರುವ ಚಳಿಗೆ”ನ್ನುತಲಿ ಗುಟ್ಟನು ಕಾಯ್ವವಳೆ ಕಾಯ್ಗೆ ॥

    ಸಂಸ್ಕೃತ ಮೂಲ: (ಸುಭಾಷಿತ ರತ್ನಕೋಶದಿಂದ)

    ಸ್ವೇದಸ್ತೇ ಕಥಮೀದೃಶಃ ಪ್ರಿಯತಮೇ ತ್ವನ್ನೇತ್ರವಹ್ನೇರ್ವಿಭೋ
    ಕಸ್ಮಾದ್ವೇಪಿತಮೇತಾದಿಂದು ವದನೇ ಭೋಗೀಂದ್ರಭೀತೇರ್ಭವ ।
    ರೋಮಾಂಚಃ ಕಥಮೇಶ ದೇವಿ ಭಗವನ್ ಗಂಗಾಂಭಸಾಂ ಶೀಕರೈಃ
    ಇತ್ಥಂ ಭರ್ತಾರಿ ಭಾವಗೋಪನಪರಾ ಗೌರೀ ಚಿರಂ ಪಾತು ವಃ ॥

    • ಸರಿಯೇ. ಸಂಸ್ಕೃತದ ’ಗೌರೀ’ ಕನ್ನಡಿಗರ ’ಪಾತು’ 🙂
      (ಚತುರ್ಥೀ ಹಾಗೂ ಷಷ್ಠೀ ಈ ಎರಡೂ ವಿಭಕ್ತಿಗಳಲ್ಲಿ ’ವಃ’ ಇರುವುದರಿಂದ ’ಗೌರೀ ವಃ ಪಾತು’ ಎಂಬುದು ಹಾಗೂ ಸರಿಯಾದೀತು. ವಃ ಎನ್ನುವುದಕ್ಕಿಂತ ನಃ ಎಂದರೆ ಸೂಕ್ತವಲ್ಲವೆ?)

      • >>>>ಸಂಸ್ಕೃತದ ’ಗೌರೀ’ ಕನ್ನಡಿಗರ ’ಪಾತು’ 🙂

        ಹ್ಹ ಹ್ಹ ಆ ವಿಷಯ ನಾನು ಯೋಚಿಸಿರಲೇ ಇಲ್ಲ!

  32. (ತನ್ನೊಡೆಯನಾ ಸೀತಾವಲ್ಲಭನಿತ್ತ ಕುರುಪಿನುಂಗುರಮಂ ಭೂಜೆಗೆ ತೋರಲ್ಕೆವಂದನಲಸಖಜನಶೋಕವನಮಂ ಪೊಕ್ಕವನಿಜೆಯೊಡಾಳಾಪಂಗೆಯ್ದ ವೃತ್ತಾಂತಂ.)

    ತರುಚರ ಗುಣಕ್ಕೊಪ್ಪುವವೊಲ್ ತರುಚರವರನಶೋಕೋದ್ಯಾನಮಂ ಪೊಕ್ಕು ಬಂದ ವೃಕ್ಷಂಗಳ ಕಳಿತಫಲಂಗಳನ್ ಬಗೆಗೆವಂದುವನ್ ಕಿಳ್ತು ಸವಿಯುತ್ತಿರನ್ನೆಗಂ ವೃಕ್ಷ ತಳದೊಳ್ ನಾರಂಗವಟ್ಟೆಯಂ ತೊಟ್ಟ ಮಂಗಳಾಂಗನೆಯೋರ್ವಳ್ ಕಣ್ಗೆವರೆ ಇಂತು ಬೆಸಗುಂ

    “ಆರಂಬೆ ನೀಮಿಲ್ಲಿ ರಕ್ಕಸೋದ್ಯಾನದೊಳ್
    ಶ್ರೀರಾಮನಾಧರ್ಮ ಮಡದಿಸೀತಮ್ಮಳೇಂ”
    “ದೂರಸರಿಯೇಕಪಿಯೆ ನಾನರಿಯೆನೇನಿನ್ನನುಕ್ಕೇವದೊಳ್ ಸಾರ್ದನಂ” ||
    “ಶ್ರೀರಾಮನಾಣೆನಾನಸುರಕುಲ ಕಪಿಯಲ್ತು”
    “ವೈರಿ ದಶಕಂಠನುಂ ಪಿಂತೆಯಿಂತೆಯೆವಂದು
    ನಾರಿನನ್ನಂಕದ್ದನಳಿಪದಿರು ವಾನರನೆ ಬಳಿಸಾರ್ದುಯೀ ಸೀತೆಯಂ” ||

    (ಮಲ್ಲಿಕಾ ಮಾಲೆ)
    “ತಿಳಿದು ಸಂತಸಮಾಯ್ತು ಜಾನಕಿ ಸೀತೆಯಂ ಪ್ರಭು ಕಾಂತೆಯಂ”
    “ಬಳಿಯಲಿರ್ಪುದೆ ರಾಮನಿನ್ನಯ ಮಿತ್ರನೆನ್ನಲು ಚಿಹ್ನೆಗಳ್ ”
    “ಕಳಚಿಯಿತ್ತನು ನಿಮ್ಮ ವಲ್ಲಭ ತನ್ನಯಾ ಬೆರಲುಂಗುರಂ”
    “ಕಳುಹಿದುಂಗುರತೋರು ಪುತ್ರನೆ” “ತಾಯಿ ಕೊಳ್ಳಿರಿ ಮುದ್ರೆಯಂ”

    ಇಳೆಯಪುತ್ರಿಯು ಧನ್ಯಳಾದಳು ಕಾಣುತೆ ಪತಿ ಮುದ್ರೆಯಂ

    ಅನಲಸಖಜಂ – (ತರುಚರವರಂ) — ಹನುಮಂತನು

    • ಇಳೆಯಪುತ್ರಿಯು ಧನ್ಯಳಾದಳು ಕಾಣುತಲ್ ಪತಿ ಮುದ್ರೆಯಂ

      ಅನಲಸಖಜಂ – (ತರುಚರವರಂ) – ವರಹನೂಮಂತನಿವನುಂ

      ಎಂದು ತಿದ್ದಿದರೆ, ಈ ಎರಡು ಸಾಲುಗಳೂ ತರಳದಲ್ಲಿರುತ್ತವೆ.

    • ಹಳಗನ್ನಡ ಚಂಪೂ ಚೆನ್ನಾಗಿದೆ.
      ಅಳಿಪು ಎಂಬ ಪದದ ಪರಿಚಯವಾಯಿತು. ಕೃತಜ್ಞತೆಗಳು.
      ಉಕ್ಕಿವ, ಉಕ್ಕೆವ ಎಂಬ ರೂಪಗಳಿವೆ (ನಿಘಂಟುವಿನಲ್ಲಿ); ’ಉಕ್ಕೇವ’ ಪೂರ್ವಪ್ರಯುಕ್ತವೆ?

    • ಹೃದಯರಾಮ ಅವರೆ,
      ನೀವು ಬರೆದ ಪದ್ಯ ತರಳವೃತ್ತದಲ್ಲಿದೆ, ಮಲ್ಲಿಕಾಮಾಲೆಯಲ್ಲಿ ಅಲ್ಲ. ಅವೆರಡರ ಲಕ್ಷಣವಿಂತಿದೆ-
      ಮಲ್ಲಿಕಾಯುತಮಾಲೆಯಪ್ಪುದು ರಂ ಸಜಂ ಜಭರಂ ಬರಲ್ |
      ತರಳವೃತ್ತಮೆನಿಪ್ಪುದೊಪ್ಪಿರೆ ನಂ ಭರಂ ಸಜಜಂ ಗಮುಂ |

      ಧರ್ಮಮಡದಿ ಎಂಬುದು ಅರಿಸಮಾಸವಾಯ್ತಲ್ಲ!
      ಶ್ರೀರಾಮನಾ ಎಂದು ಎಳೆಯುವುದು ಹೆಚ್ಚು ಯುಕ್ತವಲ್ಲ. ಹೆಚ್ಚೇಕೆ, ಆ ಧರ್ಮಪತ್ನಿ ಎಂದರೆ ಬಹಳಷ್ಟು ಮಂದಿ ಧರ್ಮಪತ್ನಿಯರಿರುವರೆಂಬ ವಿಪರೀತಾರ್ಥವೇ ಹೊಮ್ಮೀತು! 🙂

      • ಮಾತ್ರವಲ್ಲ, ಅಧರ್ಮದವಳು ಒಬ್ಬಳಾದರೂ ಇದ್ದಾಳೆ ಎಂದು ಬೋಧೆಯಾಗುತ್ತದೆ.

        • ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಮಹೇಶ್, ಪ್ರಸಾದು .. ಭಾಮಿನಿಯಲ್ಲಿ ಹಾಡಿಕೊಂಡು ಬರೆದಿದ್ದರಿಂದ ಉಕ್ಕೆವ ‘ಉಕ್ಕೇವ’ ವಾಯ್ತು ( ಬಹುಶಃ, ಉಕ್ಕೆವ ಎನ್ನುವುದರ ಬದಲು ಉಕ್ಕೇವವೆಂದು ಎಳೆದು ಹಾಡಿಕೊಂಡೆ ಎನ್ನಿಸುತ್ತದೆ ). ಮಲ್ಲಿಕ ಮಾಲೆ ಹಾಗೂ ತರಳ ವೃತ್ತದ ಪದ್ಯಗಳನ್ನು ಹಾಡುವ ದಾಟಿ ಒಂದೇ ಹಾಗಿದ್ದರಿಂದ ಮಹೇಶ್ರವರು ತರಳವೃತ್ತ ಎಂದು ಅದನ್ನ ಜ್ಞಾಪಿಸುವವರೆಗೂ ಅದು ಮಲ್ಲಿಗೆ ವೃತ್ತ ಅನ್ನೋ ಭ್ರಮೆಯಲ್ಲೇ ಇದ್ದೇ.
          ಹಾಗೂ ‘ಶ್ರೀ ರಾಮನಾಧರ್ಮ ಮಡದಿ’ ಎಂದು ಬರೆದಿದ್ದರ ಉದ್ದೇಶ ಕೇವಲ ಪದ್ಯವನ್ನ ಭಾಮಿನಿಗೆ ಹೊಂದಿಸುವುದಾಗಿತ್ತು.. ಅದರ ಅರ್ಥಾಪರ್ಥಗಳನ್ನ ತಿಳಿಸಿ ಕೊಟ್ಟಿದ್ದಕ್ಕೆ ನನ್ನ ಕೃತಜ್ಞತೆಗಳು.
          ಅದಲ್ಲದೆ ಮಸಾಲಾ ದೋಸೆಗೆ ಫೇಮಸ್ ಆದ ಮೈಸೂರಿನ ಮಹೇಶ್ ಪ್ರಸಾದ್‌ ಹೋಟೆಲನ್ನ(ದೋಸೆಯ ರುಚಿಯನ್ನು ಕೂಡ) ಕೂಡ ನನ್ನ ನೆನಪಿಗೆ ತಂದಿರಿ…ಧನ್ಯವಾದಗಳು…

        • ಪ್ರಸಾದು ಅವರೆ, ಅಧರ್ಮದವಳು ಎಂದು ಹೇಗಾಗುತ್ತದೆ?!!

        • ಮಡದಿಯು ಧರ್ಮಿಷ್ಟಳು ಎಂದರೆ ಅನುಮಾನಕ್ಕೆ ಆಸ್ಪದವಿಲ್ಲ. “ಇವಳು ಧರ್ಮಪತ್ನಿ” ಎಂದರೆ, “ಅವಳು?” ಎಂಬ ಪ್ರಶ್ನೆ ಉಳಿಯುತ್ತಲ್ಲವೆ! ಇಷ್ಟಕ್ಕೆ ಬಿಟ್ಟುಬಿಡಿ. ತುಂಬ ಎಳೆಯಬೇಡಿ 😉

  33. “ಕೊಡದೊಳು ಬಿದ್ದಿರ್ಪ ಪೋಟೆಯನೆಂತಾನು ಮುಚ್ಚಲೌ” “ಕಟ್ಟಿಗೆಯಿಕ್ಕಿ ಮುಚ್ಚೈ”
    “ನಿಡಿದಪ್ಪುದೌ ಕಟ್ಟಿಗೆಯು” “ಕಡಿ” “ಕಡಿವುದದೆಂತಕ್ಕುಂ” “ಕೊಡಲಿಯಿಂ” “ಕೊಡಲಿ ಮೋಟೌ”
    “ಪಿಡಿಸಾಣೆಯಂ” “ಸಾಣೆಯೊಣಗಿರ್ಕುಂ” “ತೊಯ್ಸದಂ” “ನೀರಿಲ್ಲೌ” “ಕೊಡಮುಂಟು ತೀವಿ ತಾರೈ”
    “ಕೊಡದೊಳೊಂದಪ್ಪುದೌ ಪೋಟೆಯು ಮುಚ್ಚವುದದನೆಂತು” “ತಲೆಯನ್ನು ಬಳಸಿ ಮುಚ್ಚೈ”

    (“There’s a hole in the bucket”ನ ಭಾಷಾಂತರ)

    ಇಂತು ಲೀಸಾ ಹೆನ್ರಿಯೀರ್ವರ ಸಲ್ಲಾಪಂ
    ನಿಂತು ಕೇಳ್ದ ನಿಮಗಮಾಂಗ್ಲದಿಂದೆ
    ನೋಂತು ಕನ್ನಡಿಸಿದಂಗೀಯಲಿ ಪರಮಾತ್ಮ
    ಸ್ವಂತ ಸಂಭಾಷಣೆಯ ಪದ್ಯರಚನೆ

    • ೧) ಕೊನೆಗೆ “ತಲೆಯನ್ನು ಬಳಸಿ ಮುಚ್ಚೈ” ಎನ್ನುವ ಬದಲು, “ಕಟ್ಟಿಗೆಯಿಕ್ಕಿ ಮುಚ್ಚೈ” ಎಂದು loop ಮಾಡಿದ್ದರೆ ವಾರಾಂತ್ಯದವರೆಗೆ (ಮುಂದಿನ ಸರಣಿ ಶುರುವಾಗುವವರೆಗೆ) ಎಲ್ಲರಿಗೂ ವಿರಾಮವಿರುತ್ತಿತ್ತು 🙂
      ೨) ’ನಿಂತು ಕೇಳ್ದ ನಿಮಗಂ (standing ovation)’ ಎಂದಿರುವಿರಲ್ಲ! ನಿಮ್ಮ ಆತ್ಮಪ್ರತ್ಯಯಕ್ಕೆ ಶರಣು 😉

      • ಒರಲಲೇನನೊ ನಾನು ಮರುಗಿ ಕೇಳ್ದರಿಗಂತು ಪರಕೆಯಂ ಬೇಡಿರ್ಪೆಂ; ಅಣಕಿಸುವಿರಾ?
        ತರವಲ್ತೆ? ನರರೇನ ಭಾವಿಪರೊ ಅದರಂತೆ ತೋರುವುದು ಸಾಜಮೈ ಕಾವ್ಯ ತತ್ತ್ವಮ್

        😉

  34. ಪಾನಮತ್ತನಾಗಿ ಮನೆಗೆ ಬಂದ ಪತಿಗೂ ಪತ್ನಿಗೂ ನಡೆಯುವ ಸಂಭಾಷಣೆ 🙂

    ’ರಾ-ರಾ-ರಾಜಿ ! ಬ-ಬಾಗಿಲಂ ತೆ-ತೆರೆಯೌ’ ’ಛೀ ! ನಾತವೇಂ’ ? ’ಬಾ ! ಬ-ಬಾ-
    ನ್ನೀರೇ ! ಮುದ್ದಿಪೆನ್’ ’ಒಲ್ಲೆ ಪೋ ! ಕುಡುಕ !’ ’ನಿನ್-ನಿನ್ನಾಣೆ ಕುಡ್ದಿಲ್ಲವಯ್’ |
    ’ತೂರುತ್ತಿರ್ಪುದು ಕಾಣದೇಂ’ ? ’ಇದು ಭು-ಭೂವಿಸ್ತಾರದಾ ಮಾಪನಂ’
    ’ಬೀರಂ ನೀಂ ಸಟೆವೇಳಲ್’ ಎಂದೆರಚಿದಳ್ ನೀರಂ ಮೊಗಕ್ಕಂ ಗಡಾ !

    ರಾಜಿ – ಪತ್ನಿಯ ಹೆಸರು 😉
    ಬಾನ್ನೀರೆ = ಅಪ್ಸರೆ.
    ಕುಡುಕನ ಮಾತುಗಳಲ್ಲಿ ಬರುವ ’ರಾ-ರಾ’ ಇತ್ಯಾದಿ ದ್ವಿತ್ವಗಳು ತೊದಲುವಿಕೆಯಿಂದ 😉

    • ಪೆಜತ್ತಾಯರೆ ಬಹಳ ಚೆನ್ನಾಗಿದೆ 🙂

    • ಭಟ್ಟರ ಗುಟ್ಟನ್ನು ರಟ್ಟು ಮಾಡಿದಿರಲ್ಲ!
      ಕೆಟ್ಟಿರಿ ರಾಮಕೃಷ್ಣಾಖ್ಯ ಓಡಿರಿ
      ನೆಟ್ಟನೆ ಬಯ್ತಿ ಕೊಳ್ರಯ್ಯ

      ಈ ಪದ್ಯಕ್ಕೆ ಮಾಹಿತಿಯನ್ನು ಭಟ್ಟರು ಕೊಟ್ಟಿದ್ದೇ ಆದರೆ ನಿಮ್ಮನ್ನು ಆತ ಸುಮ್ಮನೆ ಬಿಡಲಾರರು. 😉 ಪದ್ಯವೇನೋ ವೈನಾಗಿದೆ

      • ಅಯ್ಯೋ ! ಹಾಗಲ್ಲ ಸರ್. ವೈನು-ವಾಟರುಗಳೆಲ್ಲ ನನ್ನವೇ 😉 ಅವರು ನೀಡಿದ್ದು ಸವರಣೆಗೆ ಸಂಬಂಧಿಸಿದ ಮಾಹಿತಿಗಳನ್ನು 🙂
        ಮೆಚ್ಚುಗೆಗೆ ಧನ್ಯವಾದಗಳು ಸರ್ 🙂

  35. ದೂರವಾಣಿಯಲ್ಲಿ ವಿಚಾರಿಸಿದಾಗ ಉಪಯುಕ್ತ ಮಾಹಿತಿಗಳನ್ನೂ ಸವರಣೆಗಳನ್ನೂ ಸೂಚಿಸಿದ ಸನ್ಮಿತ್ರರಾದ ವಿ | ಮಹೇಶ ಭಟ್ಟರಿಗೆ ಕೃತಜ್ಞತೆಗಳು 🙂

    • ಓ, ಇದಾಗಿದ್ದಿತೋ ನಿಮ್ಮ ಗುಟ್ಟು 😉

      • 🙂

      • ಇಲ್ಲ ಪ್ರಸಾದು ಅವರೆ, ಹೆಚ್ಚಾಗಿ ನಾನು ಪೆಜತ್ತಾಯರ ಪದ್ಯಶಿಶುವಿಗೆ ದಿಟ್ಟಿಬೊಟ್ಟಿಡುವ ಕೆಲಸವನ್ನು ಮಾಡುತ್ತೇನೆ ಅಷ್ಟೆ 🙂

      • ವಿಪರ್ಯಾಸವೆಂದರೆ, ಆ ಶಿಶುವಿಗೆ ದಿಟ್ಟಿಬೊಟ್ಟಿಡುವ ಮುನ್ನ ತಗಲುವ ದಿಟ್ಟಿ ನಿಮ್ಮದೇ. ಹಾಗಾಗಿ ನಿಮ್ಮ ಕಾರ್ಯವನ್ನು ’ಪ್ರಾಯಶ್ಚಿತ್ತ’ ಎನ್ನೋಣವೆ? ಧರ್ಮಶಾಸ್ತ್ರದ ದಿಟ್ಟಿಯಿಂದ, ಮತ್ತೆಮತ್ತೆ ದಿಟ್ಟಿಬೊಟ್ಟಿಡುವಂತಿಲ್ಲ, ಏಕೆಂದರೆ ’ಅದೇ ತಪ್ಪನ್ನು ಮತ್ತೆ ಮಾಡುವುದಿಲ್ಲ’ ಎಂಬುದೇ ಪ್ರಾಯಶ್ಚಿತ್ತದ ಪೂರ್ವಾಪೇಕ್ಷೆ. ವ್ಯವಹಾರದಲ್ಲಿ ’ಅಪರಾಧ ಮತ್ತು ದಂಡ’ ಎಷ್ಟು ಬಾರಿಯೂ ಪುನರಾವರ್ತನೆಯಾಗಬಹುದು; ಆಚಾರದಲ್ಲಿ ’ಪಾಪ ಮತ್ತು ಪ್ರಾಯಶ್ಚಿತ್ತ’ ಒಮ್ಮೆ ಮಾತ್ರ. 😉

  36. ಯಶೋದೆ ಮತ್ತು ಕೃಷ್ಣ ಇವರಿಬ್ಬರ ಸಂಭಾಷಣೆ –

    ’चोरयित्वा कुतोऽश्नासि वारितोऽपि नवोद्धृतम्’ ?
    ’अशिते धवले तस्मिन् वर्णो मे धवलो भवेत्’॥
    ’चौर्येण भक्षणात् कृष्ण! कृष्णतां प्राप्तवानसि’।
    ’ततः खादामि सामोदं तवैव पुरतोऽद्य तत्’॥
    इत्युक्त्वा सस्मितं धावन् शिक्यस्याभिमुखं पुनः ।
    यशोदाबाहुपाशेन बद्धः कृष्णोऽवतात् सदा ॥

    ಯಶೋದೆ- ತಡೆದರೂ ಕೂಡ ಬೆಣ್ಣೆಯನ್ನೇಕೆ ಕದ್ದು ತಿನ್ನುವೆ?
    ಕೃಷ್ಣ- ಬಿಳಿಯಾದ ಬೆಣ್ಣೆಯನ್ನು ತಿಂದರೆ ನನ್ನ ಬಣ್ಣವು ಬೆಳ್ಳಗಾಗಬಹುದು ಎಂದು.
    ಯಶೋದೆ- ಕೃಷ್ಣ! ಕದ್ದು ತಿಂದುದರಿಂದ ಕಪ್ಪುಬಣ್ಣವನ್ನು ಹೊಂದಿರುವೆ.
    ಕೃಷ್ಣ- ಹಾಗಿದ್ದರೆ ಈಗ ನಿನ್ನ ಎದುರುಗಡೆಯೇ ಸಂತೋಷದಿಂದ ಬೆಣ್ಣೆಯನ್ನು ತಿನ್ನುತ್ತೇನೆ.
    ಈ ರೀತಿಯಾಗಿ ಹೇಳಿ ನಗುತ್ತ, ಶಿಕ್ಯಕ್ಕೆ (ಬೆಣ್ಣೆಯ, ಮೊಸರಿನ ಪಾತ್ರೆಗಳನ್ನು ಇಡಲು ಮಾಡಿರುವ ತೂಗುಹಗ್ಗ) ಎದುರಾಗಿ ಓಡುತ್ತ ಯಶೋದೆಯ ಬಾಹುಪಾಶದಿಂದ ಬಂಧಿಸಲ್ಪಟ್ಟ ಕೃಷ್ಣನು ಸದಾ ಕಾಪಾಡಲಿ.

    • ಇನ್ನೊಮ್ಮೆ ಶಿಕ್ಯಕ್ಕೆ ಎದುರಾಗಿ ಓಡುತ್ತ, -ಎಂದಾಗಬೇಕು.

    • सत्पद्यनवनीतेन मोदधावल्यमेति हृत् ।
      यन्नैव चोरितं किन्तु जालेऽमुष्मिन् निवेशितम् ॥ 😉

      ಜಾಲ = ಶಿಕ್ಯ & Website 😉

      • मधुरं भवति क्षीरं मधुरं दधि मधुरमेव नवनीतम् ।
        मधुरस्तच्चोरो हरिरतिमधुरा त्वत्कृता स्तुतिस्तस्य ॥ 🙂

        • स्तुत्या तस्यैति माधुर्यं बालिशस्यापि भारती ।
          इदं मे पद्यमेवात्र सखे मन्ये निदर्शनम् ॥

      • सखे! धन्योऽस्मि 🙂

    • ಭಟ್ಟರೇ

      ದಾಸ ಸಾಹಿತ್ಯದ ಜಾಡಿನಲ್ಲಿರುವ ನಿಮ್ಮ ಪದ್ಯ ಬಹಳ ಹಿಡಿಸಿತು. ಧನ್ಯವಾದಗಳು

      • ಬದರೀನಾಥ ಅವರೆ, ಧನ್ಯವಾದ 🙂

    • ನಿಮ್ಮ ಪದ್ಯ ’ಯಶೋಮತಿ ಮಯ್ಯಾ ಸೆ’ ಎಂಬ ಹಾಡನ್ನು ನೆನಪಿಗೆ ತಂದಿತು. Lyrics and audio here: http://www.lyricsmasti.com/song/6697/get_lyrics_of_Yashomati-Maiyaa-Se…[Part-I-].html

  37. ಕಳ್ಕುಡಿದಿರ್ಪೋರ್ವ ಬಸ್‌ ಪಯಣಿಗನುಂ ಮೇಣಾ ಬಸ್‌ ನಿರ್ವಾಹಕನೊಡ ನೆಗೞ್ದ ಸಂವಾಜ

    “ಕುಡಿದು ಪತ್ತಿದೆಯೇಮಿ ಸರ್ಕಾರಿ ಬಂಡಿಯಂ?”
    “ಕುಡಿದಿಲ್ಲ ಕಂಡಕ್ಟ್ರೆ” “ನಿನ್ನಿರ್ಕೆ ಪೇಳ್ವುದದ
    ನೊಡನೆಯೇ ನೀನೆರಂಗೀವಂಡಿಯಿಂ ಪತ್ತಗುಡೆಂ” “ನಿನ್ನಪ್ಪನದ್ದೋ? ||
    ಕುಡಿಯದೇ ಡೀಸಲ್ಲ ಪರಿವುದೇನೀವಂಡಿ ?”
    “ಬಡವನನ್ಮಗನೆಯಿಳಿಯೀಬಂಡಿಯೆನ್ನದುಂ”
    “ಬಡವನಿನ್ಮಗನಾಗಾಲೀ ಕ್ರೋಧ ತರಮಲ್ತು ನನ್ನಪ್ಪನದ್ದುಬಂಡಿ” ||

    =======================================

    “ಕುಡಿದು ಪತ್ತಿದೆಯೇಮಿ ಸರ್ಕಾರಿ ಬಂಡಿಯಂ?”
    “ಕುಡಿದಿಲ್ಲ ಕಂಡಕ್ಟ್ರೆ”
    “ನಿನ್ನಿರ್ಕೆ ಪೇಳ್ವುದದನೊಡನೆಯೇ ನೀನೆರಂಗೀವಂಡಿಯಿಂ ಪತ್ತಗುಡೆಂ”
    “ನಿನ್ನಪ್ಪನದ್ದೋ?, ಕುಡಿಯದೇ ಡೀಸಲ್ಲ ಪರಿವುದೇನೀವಂಡಿ ?”
    “ಬಡವನನ್ಮಗನೆಯಿಳಿ ಯೀಬಂಡಿಯೆನ್ನದುಂ”
    “ಬಡವನಿನ್ಮಗನಾಗಾಲೀ ಕ್ರೋಧ ತರಮಲ್ತು ನನ್ನಪ್ಪನದ್ದುಬಂಡಿ”
    =======================================

    • ಎರಂಗು : (ಎರಗು , ಇಳಿದುಕೋ )
      ಪತ್ತಗುಡೆಂ – ಹತ್ತಗೊಡೆನು

    • ಡೀಸಲ್-ಮದ್ಯಗಳ ಸಮೀಕರಣ ಹಾಗೂ ತಂದೆ-ಮಗನ ಬಾದರಾಯಣಸಂಬಂಧಗಳು ಚೆನ್ನಾಗಿವೆ.
      ಒಂದನೆಯ ಪಾದ: ’ಪತ್ತಿದೆಯೇಮೀ’ ಆಗಬೇಕಲ್ಲವೆ? ’ಕುಡಿದು ಸರ್ಕಾರದೀ ಬಂಡಿಯಂ ಪೊಕ್ಕೆಯೇಂ’ ಅಥವಾ ’ಕುಡಿದು ಪೊಗಲಕ್ಕುಮೇ ಬಂಡಿಸರ್ಕಾರದಂ’ ಎಂದು ಸವರಬಹುದು.
      ಮೂರನೆಯ ಪಾದದ ’ಗುಡೆಂ ನಿನ್’: ಲಗಂ ಆಯ್ತಲ್ಲ?
      ಐದನೆಯ ಪಾದ: ಬಡವ – ಭಡವಾ ಅಥವಾ ಬಡವಾ ಎಂದಾಗಬೇಕು.
      ಕೊನೆಯ ಪಾದದಲ್ಲಿ ಒಂದು ಟೈಪೊ ಇದೆ ಸರಿಮಾಡಿ.

      • prasadu avare nimma email id kodi.. kelvondu prashenegalu nimmalli kelabeku..

        • ಮೊದಲನೆಯದಾಗಿ, ನಿಮ್ಮ ಹೆಸರಿನಲ್ಲಿಯ ಕಾಗುಣಿತದೋಷವನ್ನು (ಪಾ/ಪ್ರ) ತಿದ್ದುಕೊಂಡುದಕ್ಕಾಗಿ ಅಭಿನಂದನೆಗಳು.
          ’ಸುರಿವೆನೆನ್ನೆದೆಚೀಲದೆಲ್ಲ ಪುರುಳುಗಳ’ ಎಂದು ಮರುಳಮುನಿಯನು ಹೇಳಿದಂತೆ, ನಿಮ್ಮ ಪ್ರಶ್ನೆ ಏನಿದ್ದರೂ ಈ ಗಡಂಗಿನಲ್ಲಿಯೇ ತೇಲಿಬಿಡಿ. ತರಹೆವಾರಿ ಉತ್ತರಗಳೂ, ಪ್ರತ್ಯುತ್ತರಗಳೂ, ಪ್ರತಿಕ್ರಿಯೆಗಳೂ, ಉತ್ತರಕ್ರಿಯೆಗಳೂ, ಮಾರ್ದನಿಗಳೂ ಮೊಳಗುತ್ತವೆ.
          ನನ್ನ ಮಿಂಚೆ sanaatani@gmail.com

  38. ಇನ್ನೊಂದು ಅನುವಾದ – ಸಂಭಾಷಣಾ ಪದ್ಯ:

    ತಿರುಪೆ ಬೇಡುವನೆಲ್ಲಿ? ಬಲಿಯೊಳು
    ಮೊರೆಯಿಡುತ!” “ಪಶುಪತಿಯೆ?” “ಕಾಯ್ವನು
    ತುರುಗಳನು ಗೋಕುಲದಿ!” “ಮುಗುದೇ! ಹಾವೆ ಸರವಾಯ್ತೇ?”
    “ಒರಗಿಹನದರ ಮೇಲೆ ದಿನವಿಡಿ!”
    “ತೊರೆಯೆ ದುಃಖವ ಗಿರಿಜೆ!” “ನೆಲೆಯೊಂ-
    ದಿರದವಳು ನಾನಲ್ಲ ಸಿರಿ”ಯೆನ್ನುತಿಹ ನುಡಿ ಕಾಯ್ಗೆ !

    (ಲಗಂ ದೋಷಗಳನ್ನು ಮನ್ನಿಸಿ)

    ಸಂಸ್ಕೃತ ಮೂಲ:

    भिक्षुः क्वास्ति बलेर्मखे पशुपतिः किं नास्त्यसौ गोकुले ।
    मुग्धे पन्नगभूषणः सखि सदा शेते च तस्योपरि ।
    आर्ये मुञ्च विषादमाशु कमले नाहं प्रकृत्या चला ।
    चेत्थं वै गिरिजासमुद्रसुतयोः सम्भाषणं पातु वः ॥

    • ಎಲ್ಲೂ ಲಗಾದಿ ಬಂದಿಲ್ಲ. ಆದರೆ, ’ಹಾವೆ ಸರವಾಯ್ತೆ’ ಸರಿಯಾಗದು.
      ನನ್ನ ಸವರಣೆ:

      “ಚರಮಭಿಕ್ಷುವದೆಲ್ಲೆ?” “ಬಲಿಯೊಳು
      ಕರವ ಚಾಚಿಹ!” “ಪಶುಪತಿಯೆ?” “ತಾ
      ಗಿರಿತಲದೆ ಗೋಕುಲದಿ!” “ಪನ್ನಗಭೂಷ ತಾನೆಲ್ಲೇ?”|
      “ಒರಗಿಹನದರ ಹಾಸೊಳೆಂದುಂ!”
      “ತೊರೆಯೆ ದುಃಖವ ಗಿರಿಜೆ!” “ನೆಲೆಯೊಂ-
      ದಿರದ ಚಂಚಲೆ ನೀನೆ”ಯೆನ್ನುತೆ ಕಾಯುತಲಿ ಕಾಯ್ಗೆ||

      ಪದ್ಯದಲ್ಲಿ ’ಅವನೀಧರತನಯೆ-ಸರಿತ್ಪತಿತನಯೆಯ’ರೆಂಬ ೧೮ ಮಾತ್ರೆಗಳನ್ನು ತರಲಾಗದುದಕ್ಕೆ ಒಂದು ಪಿಳ್ಳೆನೆವ ಇದೆ. ಭಾಮಿನಿಯಲ್ಲಿ ಒಟ್ಟು ೧೦೨ ಮಾತ್ರೆಗಳು. ಶಾರ್ದೂಲದಲ್ಲಿ ಲೆಕ್ಕಕ್ಕೆ ೧೨೦ ಮಾತ್ರೆಗಳು. ಆದಾಗ್ಯೂ, ಪ್ರಾಸಕ್ಕೆ ಬೇಕಾಗಬಹುದೆಂದು ಎರಡು ರೇಫಗಳನ್ನು ಅಡಕಿಸಿದ್ದೇನೆ 🙂

      • ಪ್ರಸಾದು,

        ನೀವೆಂದಂತೆ ಷಟ್ಪದಿ ಸಲಕ್ಷಣವಾಗಿಯೇ ಇದೆ. ’ಹಾವೆ ಸರವಾಯ್ತೆ’ ಪ್ರಯೋಗಕ್ಕೆ ಅಡ್ಡಿಯೇನು ತಿಳಿಯಲಿಲ್ಲ.

      • “ಹಾವೆ ಸರವಾಯ್ತೆ?” ಎಂದರೆ “ಸರ್ಪಭೂಷಣನು ಎಲ್ಲೆ?” ಎಂದು ಲಕ್ಷ್ಮಿಯು ಗಿರಿಜೆಯನ್ನು ಪ್ರಶ್ನಿಸಿದಂತಾಯಿತೆ?
        ಅಲ್ಲದೆ ’ಸರ್ಪಭೂಷಣ’ ಎಂಬುದು ಹೊಗಳಿಕೆ, ’ಹಾವೆ ಗತಿಯಾಯ್ತೆ’ ಎಂಬುದು ಮೂದಲಿಕೆ.
        ಇಡಿಯ ಪದ್ಯದಲ್ಲಿ, ಮೂದಲಿಸುತ್ತಿರುವ ಪಾತ್ರ ಗಿರಿಜೆಯದು. Lakshmi is at the receiving end. ಅದೊಂದು ಸಾಲಿನಲ್ಲಿ ಲಕ್ಷ್ಮಿ ಮೂದಲಿಸಿದಳೆನ್ನುವಿರಾ?
        ತಿರಿಯುವುದೆ ಗತಿಯಾಯ್ತೆ, ದನ ಕಾವುದಾಯ್ತೆ, ಹಾವೆ ಸರವಾಯ್ತೆ – ಒಂದು ವರಸೆ.
        ಆದಿಭಿಕ್ಷುವೆಲ್ಲಿ, ಪಶುಪತಿಯೆಲ್ಲಿ, ಸರ್ಪಭೂಷನೆಲ್ಲಿ – ಒಂದು ವರಸೆ.
        ಮೊದಲಸಾಲಿನ ’ತಿರುಪೆಬೇಡುವನೆಲ್ಲೆ?’ ಬಗೆಗೆ ನೀವು ಆಕ್ಷೇಪಿಸಿದ್ದರೆ ಒಪ್ಪುತ್ತಿದ್ದೆ. ಈ ದೋಷವನ್ನು ಪರೋಕ್ಷವಾಗಿ ನನಗೆ ತಿಳಿಯಪಡಿಸಿದ್ದಕ್ಕಾಗಿ ಕೃತಜ್ಞತೆಗಳು. ಮೂಲದಲ್ಲೇ ತಿದ್ದಿದ್ದೀನೆ.

        • ಪ್ರಸಾದು, ಈ ಪದ್ಯವನ್ನು ಗಿರಿಜೆಯ ಮೂದಲಿಕೆಯಂತೆ ಓದದೆ ಲಕ್ಷ್ಮಿಯ ಮೂದಲಿಕೆಗೆ ಗಿರಿಜೆಯ ಉತ್ತರವೆಂಬಂತೆ ಓದಿದರೆ “ಹಾವೇ ಸರವಾಯ್ತೆ” ಉಚಿತವಾಗುತ್ತೆ..

          • ಎರಡೂ ಮೂದಲಿಕೆಗಳೇ. ಪ್ರಶ್ನೆ ಕೇಳುವ ಲಕ್ಷ್ಮಿಯದು ಸೂಕ್ಷ್ಮವಾದದ್ದು, ಗಿರಿಜೆಯ ಉತ್ತರ ವಾಚ್ಯವಾದದ್ದು.
            ಹಾವೇ ಸರವಾಯ್ತೇ ಎಂಬಲ್ಲಿ ’ವ್ಯಕ್ತಿ’ ಇಲ್ಲ (ಅದಕ್ಕೆ ಪೂರಕವಾದ ’ನಿನ್ನ ಗಂಡಂಗೆ’ ಎಂಬುದೂ ಅಲ್ಲಿಲ್ಲ) ಎಂಬುದಷ್ಟೇ ನನ್ನ ನಿಲವು. ಶಂ||

        • ಜೊತೆಗೆ, “आर्ये मुञ्च विषादम” ಎಂಬುದನ್ನು “ಮೂದಲಿಸುತ್ತಿರುವ ಪಾತ್ರ ಗಿರಿಜೆಯದು” ಎಂಬುದರೊಂದಿಗೆ ಸಮನ್ವಯಿಸುವುದು ಕಷ್ಟ

          • ನಾನು ಮೊದಲೇ ಹೇಳಬೇಕೆಂದಿದ್ದೆ. ಬೆಟ್ಟದ್ದು ತಪ್ಪಾಯಿತು. ಈ ಕೊನೆಯ ಸಾಲು ಸಮಾರೋಪದಂತಿದೆ. ಆ seriesಗೆ ಹೊರತಾಗಿದೆ.

  39. ignore/delete

  40. ‘ಸರಸತಿಯು ಸರದಿಯಿಂ ಚುಂಬಿಸೆ ನಾಲ್ಮೊಗನ ಮೊಗಮಿಂತಾಯ್ತು (ಅಸೂಯೆಯಿಂದ ಒಂದೊಂದೂ ಒಂದೊಂದು ದಿಕ್ಕಿಗೆ ತಿರುಗಿತು)’ – Thus said Sri Ganesh in Hasyotsava quite a few years back. Mandodari has learned from history:
    ಸರಸ್ವತಿ-
    ಗುಟ್ಟೇನೆ ಪೇಳಬ್ಬೆ ನಿನ್ನಯ ಗಂಡನ
    ದೊಟ್ಟಿಗಂತಿರಲುಂಟೆ ಶಿರಗಳ್|
    ಮಂಡೋದರಿ-
    ಬಿಟ್ಟೊಂದನಿನ್ನೊಂದ ಚುಂಬಿಸುತಿಹೆನವ್ವ
    ಕೆಟ್ಟ ನಡುವ ಕಾಯ್ವ ತೋಲ||

  41. ಪ್ರಸಾದು,

    ಪಡಿನಿಚ್ಚಂ ಪಳ ಗನ್ನಡ
    ನುಡಿ ಕಂಪಂ ಪೊಣ್ಮುತಿರ್ದ ಪದ್ಯಪ್ರಿಯರಿ
    ರ್ದೆಡೆಯೊಳದೆತ್ತಣ ಪೋದರ್
    ತುಡಿತದ ನವಪದ್ಯಪಾನ ಬೆಸನಿಜನಂಗಳ್ ?

    ಬೆಸನಿ : ವ್ಯಸನಿ

    • Sri. Ganesh is just back from Europe. ಬೆಸನಿಗಳಾದರೋ,

      ಪೋಗಿರರೆ ಹೂಣದೇಶಕೆ
      ಜಿಗಿದುಂ ಬೆನ್ನಿಗವಧಾನಿಗಳದೆಂಬೆಂ ನಾಂ?
      ಮಗಮಗಿಪ ಪಾಶ್ಚಿಮದ ಮ
      ದ್ಯಗುಣಂ ದೇಶಿಯೊಳಗಿಲ್ಲೆನುವರೀ ವಿಜ್ಞರ್||

      HR, will you please redraft my verse in your brand haLagannaDa?

      • ತಿರ್ದೊರೆಯುವನಿತು ರಂಪರ
        ಪದ್ಯಪ್ರಗಲ್ಭರ ಕಾವ್ಯ ನಲ್ಗನ್ನಡದಂ
        ಬುದ್ದಿಯೊಡೆಯನಲ್ತದರಿಂ
        ಹೃದ್ರಾಮನದೇಂ ಗಡಂ! ಕವಿನಿಕರ ನಡುವೊಳ್ ||

        ತಿರ್ದು (ತಿದ್ದಿ) ಒರೆ(ಹೇಳು)
        ಹೃದ್ರಾಮ – ಹೃದಯ ರಾಮ

        ಮನ್ನಿಸಲ್ವೇಳ್ಕುಮೀ ಹೆಚ್ಚಾರ್(ಹೃದಯ ರಾಮ) ಬೆಳ್ಪನಂ ,

        ಬಳಿವಿಡಿದವಧಾನಿಗಳಂ
        ಪಳಗನ್ನಡಬರೆಪಕಾರ ಜನಪೋಗಿರರೇನ್ ?
        ಪೞಸಿದ ವಿಲಾಪಮದ್ಯಂ
        ಸೆಳೆದೊಗೆದಿರೆ ಪದ್ಯಪಾನವಂ ಜನ ಮಱತರ್ !!

      • ಬೋಧಪ್ರದವಾಗಿದೆ. ಕೃತಜ್ಞತೆಗಳು.

        First Verse
        ಕಂದದಲ್ಲಿ ಮೊದಲ ಅಕ್ಷರದ ಪ್ರಾಸಕ್ಕೆ ವಿನಾಯಿತಿ ಉಂಟು (ನೀವು ಬಳಸಿಕೊಂಡಿಲ್ಲ ಸರಿ); ದ್ವಿತೀಯಾಕ್ಷರಪ್ರಾಸಕ್ಕಲ್ಲ, ಅಲ್ಲವೆ?
        ಎರಡನೆಯ ಪಾದದ ಎರಡನೆಯ ಗಣ ಲಗಂ ಆಗಿದೆ. ಶಿಥಿಲದ್ವಿತ್ವದ (ಪ್ರ) ಪ್ರಯೋಜನ ಪಡೆದುಕೊಂಡರೆ, ಒಂದು ಮಾತ್ರೆ ಕಡಿಮೆಯಾಗುತ್ತದೆ. ಸವರಬೇಕು.

        Second Verse
        ’ಬಳಿವಿಡಿ’ ಪರಿಚಿತವೇ. ಹೊಳೆಯಲಿಲ್ಲ.
        ಅಂಚೆವಿಂಡಾಡದ ಕೊಳಂ, ಕೊಳಗಳೊಳು ಸಲೆ ಪ ಳಂಚಿ ಸುಳಿಯದ ಗಾಳಿ, ಗಾಳಿಗಳ ಬಳಿವಿಡಿದು ಸಂಚರಿಸದೆಳದುಂಬಿ, ದುಂಬಿಗಳ … (ಲಕ್ಷ್ಮೀಶ)

        ಕಾರ ಎಂಬ ಪ್ರಯೋಗ ತಿಳಿದಂತಾಯಿತು.
        ವಿಲಾಪ – ವಿಲಾಸೀ ಎಂಬ ಅರ್ಥವಿದೆಯೆ?

        • ವಿಲಾಪ : ಇದರ ಪದ ಬಳಕೆಯನ್ನು ಎಲ್ಲಿ ನೋಡಿದ್ದೆ ಅರಿವಿಲ್ಲ. ಆದರೂ ಶಬ್ದ ಕೋಶದಲ್ಲಿ ಅನ್ಯದೇಶ, ಪರದೇಶ ಎಂಬ ಅರ್ಥಗಳಿವೆ.
          ಬಳಿವಿಡಿದು : ಹಿಂದೆ ಬಂದು(ಹೋಗಿ), ಅನುಸರಿಸಿ ಎಂಬ ಅರ್ಥಗಳಿವೆ. ಬೆರಳ್ಗೆ ಕೊರಳ್ ನಾಟಕದಲ್ಲಿ ನೋಡಿದ ನೆನಪು. ಬಹುಷಃ ಈ ರೀತಿ ಬಳಕೆಯಾಗಿತ್ತು. ನೆನಪಿಲ್ಲ. (“ನಾನ್ ಎನಿತಟ್ಟಿದೊಡಂ ಬಳಿವಿಡಿದು ಬಂದುದಲ್ತೆ, ಛಿಃ ಕಳ್ಳಮರಿ, ಒರು ದಿನಂ ತೋಳನುಣಿಸಪ್ಪೆ ನೀಂ “) .

          ಬರೆಪಕಾರ : ಲಿಪಿಕಾರ ಎಂದರ್ಥ, ಕುಮಾರ ವ್ಯಾಸರ ಕರ್ಣಾಟ ಭಾರತ ಕಥಾ ಮಂಜರಿಯಲ್ಲಿ ಬಳಕೆಯಾಗಿದೆ. ಪಾದ ನೆನಪಿಲ್ಲ. ಬಹುಷಃ ಮೊದಲೆರಡು ಆಶ್ವಾಸದಲ್ಲೇ ಸಿಗಬಹುದು. ನಡುಗನ್ನಡದ್ದು ಅನ್ನಿಸತ್ತೆ.

          ಪಾದದ ವಿಷಮ ಗಣಗಳಲ್ಲಿ ಜಗಣ ಬರುವ ಹಾಗಿಲ್ಲ ಎಂದು ಓದಿದ ನೆನಪು. ಎರಡನೆಯ ಪಾದದ ಎರಡನೆ ಗಣ ಪ್ರಗಲ್ಭ ಎಂಬಲ್ಲಿ ಲಗಂ ಬರುವುದು ನಿಷಿದ್ದವೇ?.
          ( ಬಹುಷಃ ಕಂದದಲ್ಲಿ ವಿಷಮ ಗಣ ಜಗಣ ಬರ ಬಾರದು ಎಂದಿದ್ದಿರ ಬಹುದು. ನಾನೇ ತಪ್ಪಾಗಿ ಅರ್ಥೈಸಿ ಕೊಂಡೆ ಅನ್ನಿಸತ್ತೆ. )

          ಪ್ರಸಾದು, ೞ ಹಾಗೂ ಳ ನಡುವೆ , ಱ ಹಾಗೂ ರ ನಡುವೆ ಪ್ರಾಸಗಳನ್ನು ಹೊಂದಿಸಬಹುದೇ?

          • ಹೃದಯರಾಮರೆ
            ಕಂದದಲ್ಲಿ ಎರಡೇ ಪಾದಗಳು. ಪ್ರತಿಯೊಂದು ಪಾದವನ್ನು ನಾವು ಪ್ರಾಸವಿಟ್ಟು ಎರಡಾಗಿ ಮಾಡಿಕೊಳ್ಳುವುದಷ್ಟೇ. ಆದ್ದರಿಂದ ನೇವು ಸಮಗಣ ಅಂದುಕೊಂಡಿರೋದು ವಿಷಮಗಣವೆ. ಎರಡನೆಯ ಪಾದದ ಆದಿಗಣದಲ್ಲಿ ಜಗಣವನ್ನು ಹೊಂದಿಸಬಹುದು.

            ಇನ್ನು ಕುಳ ಕ್ಷಳಗಳ ಮತ್ತು ಇಬ್ಬಗೆಯ ರಕಾರಗಳ ವಿಷಯ. ನಡುಗನ್ನಡದಹೊತ್ತಿಗೆ ಇವುಗಳ ಭೇದ ಮರೆಯಾಗಿದ್ದರಿಂದ ಎಲ್ಲವನ್ನು ಳ್ ಮತ್ತ್ಯ್ ರ ಅಕ್ಷರಗಳಿಂದ ಪ್ರತಿನಿಧಿಸುವುದರಿಂದ ಪ್ರಾಸಮಾಡಿದರೆ ತಪ್ಪಿಲ್ಲ. ಆದರೆ ಆವನ್ನು ಸರಿಯಾಗಿ ಮೂಲರೂಪದಲ್ಲಿಯೆ ಬರೆದು ಕವನಿಸುವಾಗ ಅವುಗಳನ್ನು ಬೆರೆಸಿ ಪ್ರಾಸಮಾಡದೇ ಇರುವುದೇ ಒಳಿತು. ಕೇಶಿರಾಜನೇ ಇದನ್ನು ಹೇಳಿದಾನೆ ಅಂತ ಜ್ಞಾಪಕ.

        • ವಿಲಾಪ: ನಿಮ್ಮಲ್ಲಿರುವುದು ಯಾವುದೋ ಒಳ್ಳೆಯ ನಿಘಂಟುವೇ ಇರಬೇಕು. ಕಿಟ್ಟೆಲ್ ನಿಘಂಟು ಸರಿಯಿಲ್ಲ! ವಿಲಾಪ = lamentation, crying, weeping, wailing, moaning, ಪರಿವೇದನ ಎಂದಷ್ಟೇ ಹೇಳಿದ್ದಾನೆ ಮತಾಂಧ 😉

      • ನಿಮ್ಮ ಮೊದಲಪದ್ಯವನ್ನು ಹೀಗೂ ಅನ್ವಯಮಾಡಬಹುದು:
        ಪದ್ಯಪ್ರಗಲ್ಭರ ರಂಪರ ನಲ್ಗನ್ನಡಕಾವ್ಯಮಂ ತಿರ್ದೊರೆಯುವನಿತು ಬುದ್ದಿಯೊಡೆಯನಲ್ತೇಂ? ಅದರಿಂ ಪೇಳಿಂ ಗಡೀಗ ಕವಿನಿಕರ ನಡುವೊಳೀ ಹೃದ್ರಾಮನೇನೆಂದುಂ.

  42. “ಎನಿತಪಾರವು ದೇವ ನಿನ್ನಯಾ ಮಹಿಮೆಯದು?”
    “ಮನುಜ ನಿನ್ನಯ ‘ಕೋಟಿ’ವರಹವೆನಗೊಂದದುವೆ!”
    “ಇನಿ’ತೊಂದು’ ವರಹವನು ನೀಡಯ್ಯ ನನಗಿಂದು”
    “ಧನಿಕನಾಗುವ ಬಯಕೆ! ಕಾಯೊಂದು ನಿಮಿಷನೀ !!”
    “ನಿನದೊಂದು ನಿಮಿಷವದು ನನಗೆನಿತು ವರುಷವೆಲೆ?!”
    “ಜನುಮ ಜನುಮದ ವರವೆ ವರಹವದು ಮನುಜನೆಲೆ !!”

    (ದೇವ – ಮಾನವನ ಸಂವಾದ)

    • ಐಡಿಯ ಚೆನ್ನಾಗಿದೆ. ಯಾವ ಛಂದಸ್ಸು?

      • ಧನ್ಯವಾದಗಳು ಪ್ರಸಾದ್ ಸರ್, “ಚೌಪದಿ” ಹೋಗಿ “ಲಲಿತ ರಗಳೆ”ಯಾದದ್ದು. ಅಂತೂ ಕವಿತೆಯಲ್ಲಿ ಸಂಭಾಷಣೆ ನಿಜವಾಗಿ ಸವಾಲೇ!

  43. ತೆರೆಯೆ ಬಿಗಿ ಬೀಗವನು, ಗಂಡ ಸಿಡುಕಿದನಾಗ
    ” ಟೈಟಾಗಿದೆ ಸ್ವಲ್ಪ “ಎಣ್ಣೆ” ಹಾಕೇ ” |
    ಮುರಿದು ಮೌನದ ಬೀಗ, ನುಡಿದ ಹೆಂಡತಿರಾಗ
    ” “ಎಣ್ಣೆ” ಹಾಕಿದರಲ್ವೆ ಟೈಟಾಗುದೂ?! ” ||

    ( xyz ಪ(ಮ)ದ್ಯಪಾನಿಗಳ ಅನುಮತಿಯೊಂದಿಗೆ)

    • ನಾನು ಅನುಮತಿ ಕೊಟ್ಟಿಲ್ಲ. ಕೊಟ್ಟದ್ದೇ ಆದರೆ, ನಾನು xyz ಎಣ್ಣೆಪಾರ್ಟಿ ಎಂದು ಸಿದ್ಧವಾಗುತ್ತದೆ! ನಿಮ್ಮ ಹುನ್ನಾರಕ್ಕೆ ಬಲಿಬೀಳಲಾರೆ.

  44. […] ಸಂಭಾಷಣೆಯ ಪದ್ಯರಚನೆಯ ಉದಾಹರಣೆಗೆ, ಈ ಕೊಂಡಿಯನ್ನು ಬಳಸಿ ಉದಾಹರಣೆ […]

Leave a Reply to ಜೀವೆಂ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)