Sep 032013
 

ಶಕುಂತಲೆ, ರವಿವರ್ಮ

ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಈ ಚಿತ್ರದಬಗ್ಗೆ ಉತ್ತಮವಾದ ಪದ್ಯಗಳನ್ನು ರಚಿಸಿರಿ

  269 Responses to “ಪದ್ಯ ಸಪ್ತಾಹ ೮೦: ಚಿತ್ರಕ್ಕೆ ಪದ್ಯ”

  1. ಮನದೊಳ್ ಇನಿಯನ ಕಾಣುವೆ
    ನೆನುತಾ ಕಂಗಳನು,ತೆರೆದು ಚಿಂತಿಸಲವನಾ
    ಮನದೊಳ್ ತನ್ನನೆ ಕಾಣುತೆ
    ದಿನವುಂ ಕಾದಿರ್ಪಳಾಗಸವ ನೋಡುತಲೀ

    • ಒಳ್ಳೆಯ ಕಲ್ಪನೆ ಚೀದಿ; ಧನ್ಯವಾದ. ಮೊದಲ ಸಾಲಿನಲ್ಲಿ ಸಂಧಿಯಾಗಬೇಕು: ಮನದೊಳಗಿನಿಯನನೀಕ್ಷಿಪೆನೆನುತುಂ ಕಂಗಳನೆ ತೆರೆದು ಚಿಂತಿಸುತವನಂ|
      ಮನದೊಳ್, ತನ್ನನೆ ಕಾಣುತೆ ದಿನವುಂ ಕಾದಿರ್ಪಳಾಗಸಮನೀಕ್ಷಿಸುತುಂ ||
      ಎಂದು ಮತ್ತಷ್ಟು ಹಳಗನ್ನಡದ ಬಿಗಿ-ಸೊಗ ತರಬಹುದು:-)

  2. ಇದು ರವಿವರ್ಮನ ಚಿತ್ರವೇ ಹೌದಾದರೂ ಈಕೆ ಶಕುಂತಲೆಯಲ್ಲ, ಅಶ್ರಮವಾಸಿನಿ ಸೀತೆಯೆಂದು ಚಿತ್ರಕಾರನೇ ಹೆಸರಿಸಿದ್ದಾನೆ. ಈ ಚಿತ್ರವನ್ನು ಕಂಡೇ ಪ್ರಾಯಶಃ ಕೇರಳದ ಕವಿತ್ರಯರಲ್ಲಿ ಒಬ್ಬನಾದ ಕುಮಾರನ್ ಆಶಾನ್ ತನ್ನ ಅತ್ಯಂತಪ್ರಸಿದ್ಧವಾದ ಕವಿತೆ “ಚಿಂತಾವಿಷ್ಟಾಯಾಯ ಸೀತಾ” ಎಂಬುದನ್ನು ರಚಿಸಿದ. ಆದರೆ ಪದ್ಯಪಾನಿಗಳು ಈ ನಿರ್ಬಂಧಕ್ಕೆ ಸೀಮಿತವಾಗದೆಯೂ ತಮ್ಮ ಕಲ್ಪನೆಯನ್ನು ಹರಿಯಬಿಡಬಹುದು. ಏಕೆಂದರೆ ಸೀತೆಯಾಗಲಿ, ಶಕುಂತಲೆಯಾಗಲಿ ನಮಗೆ ಫೋಟೋ ಮೂಲಕ ನಿಖರವಾಗಿ ಗೊತ್ತಿಲ್ಲವಷ್ಟೆ:-) ಯಾದೃಶೀ ಭಾವನಾ ತಾದೃಶೀ ಕವಿತಾ…

    • Ganesh Sir, Thanks for correction. I removed the caption:)

    • Sir, the absence of MangalaSutra, Kaalungura, bangles, etc. nudges me to assume this may be Shakuntala before marriage. She seems pre-occupied. Also, it may be Doorvaasa in the left background. Comments please

      • In that case – this will be apt
        हा हन्त हन्त तरुणी मुनिनाभिशप्ता ! 🙂

    • Though, in those days they may not have been in vogue. But some indications are warranted

      • ನಾನು ಮೂಲದ ಚಿತ್ರವನ್ನೇ ನೋಡಿರುವೆ ಮತ್ತು ರವಿವರ್ಮನ ಶೀರ್ಷಿಕೆಯೂ ಸೀತೆಯನ್ನೇ ಕುರಿತಿದೆ. ಅಲ್ಲದೆ ಮತ್ತೂ ಅನೇಕಗ್ರಂಥಸಂದರ್ಭಗಳಲ್ಲಿ ಈ ಚಿತ್ರವು ಸೀತೆಯದೆಂದೇ ಗುರ್ತಿಸಲ್ಪಟ್ಟು ಪ್ರಸ್ತಾವಗೊಂಡಿದೆ. ಹೀಗಾಗಿ ಸೀತೆಯೆಂದು ನಾನೆಂದೆ. ಅಂತರ್ಜಾಲದಲ್ಲಿಯೂ ಇದು ಈ ಹೆಸರಿನಿಂದಲೇ ಲಭ್ಯ. ರವಿವರ್ಮನ ಶಕುಂತಲೆಯು “ಧರ್ಭಾಂಕುರೇಣ ಸಹಸಾ….” ಮತ್ತು “ತವ ನ ಜಾನೇ ಹೃದಯಂ…” ಎಂಬ ಪದ್ಯಗಳಿಗೆ ನಿದರ್ಶನವಾಗಿ ರಚಿತವಾಗಿರುವುದೂ ಲೋಕಪ್ರಸಿದ್ಧ. ಇನ್ನು ಮಾಂಗಲ್ಯದ ಬಗೆಗೆ ನನಗೆ ತಿಳಿಯದು:-)

        • ಸೀತೆಯೋ ನೀಂ ಶಕುಂತಲೆಯೊ ತಿಳಿಯದಾಗಿ
          ಸ್ಫೀತಚಿಂತಾಂತರಂಗೆ! ಸಂದಿರ್ಪೆಯೇನೌ?
          ನೀತನಾಗಿರ್ಪೆನಾನಂತುಮೀಗಳಿಲ್ಲಿ
          ವೀತನೂತ್ನಕಲ್ಪನನಪ್ಪ ಕವಿವರಾಕಂ:-)

    • ಅಲ್ಲವಿವಳುಂ ಸೀತೆಯವಳೊತಾಂ ಚಂದ್ರಮುಖಿ
      ಬಲ್ಲೆನಾಂ ಕೃಷ್ಣೆಯಾ ನೀಳಶಿಖೆಯಂ ।
      ಎಲ್ಲ ನಾರಿಯರೇಕರೂಪಧಾರಿಣಿಯಮ್ಮ
      ಮೆಲ್ಲಪೇಳ್ವೆನಿದು ರವಿವರ್ಮಮರ್ಮ (ಕಲಿಧರ್ಮವಮ್ಮಾ)।।

      (ಶಕುಂತಲೆಯನ್ನು ಪದ್ಯದಲ್ಲಿ ತರಲು ಸಾಧ್ಯವಾಗಲಿಲ್ಲ. ದಯವಿಟ್ಟು ಸಹಾಯಮಾಡಿ)

  3. ತೆರೆದ ಕಂಗಳಲಿ ಕಾದಿರುವೆ
    ಮರೆಯದೇ ಬರುವೆ ನೀನೆಂದು
    ತರತರದ ಬಾವಗಳುಕ್ಕಿ ಮನ ಕುಕ್ಕಿವೆ ನಲ್ಲಾ
    ಬರಬಾರದೇ ಕಾಯಿಸದೇ ನೀನು
    ಕೊರತೆಯಾಗದೇ ತುಂಬು ನೀ
    ಒರತೆಯೊಲುಮೆಯ ಒಮ್ಮೆಗೆ ಪ್ರೀತಿ ಸೊಲ್ಲಾ

    • ಮಿತ್ರರೇ! ಪದ್ಯಪಾನಕ್ಕೆ ಆದರದ ಸ್ವಾಗತ. ನಿಮ್ಮ ಪದ್ಯದಲ್ಲಿ ಪ್ರಾಸ-ಭಾಷೆಗಳ ಸೊಗಸಿದೆ. ಆದರೆ ವಿಹಿತವಾದ ಛಂದಸ್ಸು ಕಾಣುತ್ತಿಲ್ಲ. ದಯಮಾಡಿ ಛಂದಸ್ಸಿನ ಪಾಠಗಳನ್ನು ಇಲ್ಲಿಯೇ ಗಮನಿಸಿ ಮೈಗೂಡಿಸಿಕೊಳ್ಳಿರಿ:-)

    • ನಿಮ್ಮ ಪದ್ಯವನ್ನು ಭಾಮಿನೀಷಟ್ಪದಿಗೆ ಹೊಂದಿಸಿದ್ದೇನೆ:

      ತೆರೆದು ಕಂಗಳನೆವೆಯನಿಕ್ಕದೆ
      ಮರೆಯದೆಲೆ ಬಹೆಯೆಂದು ಕಾದಿಹೆ
      ತೆರತೆರನ ಭಾವಂಗಳುಕ್ಕಿವೆ ನಲ್ಲ ಮನದೊಳಗೆ|
      ಬರದದೇಕಿಹೆ ಕಾಯಿಸದೆ ನೀ
      ಕೊರತೆ ತುಂಬುವುದೊಮ್ಮೆ ವರ ನೀ
      ನೊರೆಯಲೊಲುಮೆಯ ಸೊಲ್ಲನೀ ವಿರಹಿಣಿಯ ಕಿವಿಯೊಳಗೆ||

      ನೀವು ಇನ್ನೊಂದು ಪ್ರಯತ್ನವನ್ನು ಮಾಡಿ

  4. ಹಿಂದಿರುವ ಬೆಟ್ಟದವೊಲೆನ್ನ ಜೀವನ ಕೂಡ
    ಬೆಂದು ಬರಡಾಗಿರ್ಪುದಕಟ ವಿಧಿಯೆ |
    ಎಂದು ಬರುವುದೊ ಭಾಗ್ಯವೆಂಬಾ ನಿರೀಕ್ಷೆಯಲಿ
    ಕುಂದಿ ಕುಳಿತಿಹಳಬಲೆ ತರುತಲದಲಿ ||

  5. ಮರ್ಯಾದಾಪುರುಷೋತ್ತಮಂ ತ್ಯಜಿಸಿದಂ ತಾನೆನ್ನನಂತಿರ್ಕೆ ಪೋ!
    ವಾರ್ಯಂ ದೂಷಿತಕಾಂತೆಯೊಳ್ಪು ನರಪಾಲಂಗಂ ಗಡಂ ಮತ್ತಮೆ-
    ನ್ನಾರ್ಯೋದಾರಕುಮಾರರಂ ಗ್ರಹಿಪನೇಂ ವಂಶಾಭಿಮಾನೋದ್ಧುರಂ?
    ಧೈರ್ಯಂ ಬೀತುದದೇಕೊ ಮೇಣೆನುತುಮಾ ಭೂಜಾತೆ ಚಿಂತಿಪ್ಪಳೇಂ?

    {ತನ್ನನ್ನಂತೂ ಪರಿತ್ಯಜಿಸಿದ ರಾಮನು ತನ್ನ ಮಕ್ಕಳನ್ನಾದರೂ ಒಪ್ಪುವನೋ ಇಲ್ಲವೋ ಎಂದು ಸೀತೆಯು ಚಿಂತಾಮಗ್ನಳಾದಳೇ?}

    • ಸೀತೆಯ ಆ ಪರಿಸ್ಥಿತಿಯಲ್ಲಿ ಮಕ್ಕಳನ್ನಾದರೂ ರಾಮನು ಒಪ್ಪುವನೆ ಎಂಬ ಭಾವ ಬರುವುದು ಬಹಳ ಸರಿಯಾದುದು, ಸುಂದರವಾಗಿ ಪದ್ಯದಲ್ಲಿ ಸೆರೆಹಿಡಿದಿದ್ದೀರಿ:)

      • ಧನ್ಯವಾದ ಸೋಮ; ನಿನಗಾದರೂ ನನ್ನ ಪದ್ಯ ಮೆಚ್ಚಾಯಿತಲ್ಲ:-)
        ಸಾಮಾನ್ಯವಾಗಿ ಎಲ್ಲರೂ ತಮ್ಮ ಪದ್ಯಗಳಿಗೆ ನನ್ನ ಪ್ರತಿಕ್ರಿಯೆಯನ್ನು ನನ್ನ ನಿರೀಕ್ಷಿಸುತ್ತಾರೆ. ಆದರೆ ನನ್ನ ಪದ್ಯಗಳಿಗೆ ಮಾತ್ರ ಹೆಚ್ಚಾಗಿ ಪ್ರತಿಕ್ರಿಯಿಸರು:-(…
        “ಅಪಿ ಮಾಂ ಪಾವಯೇತ್ ಸಾಧ್ವೀ ಸ್ನಾತ್ವೇತೀಚ್ಛತಿ ಜಾನ್ಹವೀ” ( ಗಂಗೆಯೂ ಸಹ ತನ್ನಲ್ಲಿ ಸತಿಯೊಬ್ಬಳು ಮಿಂದು ತನ್ನನ್ನು ಪಾವನಗೊಳಿಸಲೆಂದು ಅಶಿಸುವಳಂತೆ)

  6. ಹೊಳೆವ ಕಂಗಳೊಳುಳಿದ ಕಳವಳ
    ಕುಳಿತ ತಳವದು ಕುಸಿವ ತಳಮಳ
    ಕೆಳದಿ ನಿನ್ನಯ ತಿಳಿಯದೊಳಮನ ಮಾಯೆ ಮುಸುಕಿನಳು |
    ಸೆಳೆದ ಹೊಂಚಿನೊಳಳಿದುದಂಜಿಕೆ
    ಸುಳಿದ ನಂಟೊಳು ಮೂಡಿ ನಂಬಿಕೆ
    ಕೊಳಲ ನುಡಿಪನ ನಿಜದೆ ಕಾಣಲು ಕಾಯೆ ತಪಸಿನೊಳು ||

    • ಒಳ್ಳೆಯ ಪದಬಂಧ, ಆರ್ದ್ರಶೈಲಿ; ಅಭಿನಂದನೆಗಳು.

      • ಧನ್ಯವಾದಗಳು ಗಣೇಶ್ ಸರ್,
        ಪ್ರಾಸಕ್ಕಾಗಿ “ಕೊರಳ”ದನಿ “ಕೊಳಲ”ದನಿಯಾಗಿ – ಚಿತ್ರದ ನೀರೆ “ರಾಧೆ”ಯಾದದ್ದು !

    • ಳ ಕಾರದ ಅನುಪ್ರಾಸ ವಿಶೇಷವಾಗಿ ಮೂಡಿದೆ

    • nice usha. well done.

      • ಧನ್ಯವಾದಗಳು ಶ್ರೀಕಾಂತ್ ಸರ್, ಸೋಮ. (ಸರಿ ಪದ್ಯಗಳನ್ನು ಬರೆಲಾಗುತ್ತಿಲ್ಲವೆಂಬ ಕಳವಳ ನನ್ನನ್ನು ಕಾಡುತ್ತಿದೆ.)

  7. ಇಂತಪ್ಪಾಶ್ರಮದೊಳ್ ಮುನೀಂದ್ರರೆಡೆಯೊಳ್ ಕಾಂತಾರವಿಸ್ತಾರದೊಳ್
    ಕಾಂತಂ ಪುತ್ರಸಮರ್ಪಿತಕ್ಷಿತಿ ಸಲಲ್ ಮೇಣೆನ್ನೊಡಂ ಮುಪ್ಪಿನೊಳ್ |
    ಶಾಂತಿ-ಪ್ರೀತಿಸಮೈಕ್ಯಮಪ್ಪ ವರವಾನಪ್ರಸ್ಥಮಂ ಕಯ್ಕೊಳಲ್
    ಸ್ವಾಂತಂ ನೋಂತುದದಿಲ್ಲಮಕ್ಕಟೆನುತುಂ ಭೂಜಾತೆ ಚಿಂತಿಪ್ಪಳೇಂ?

    {ಈ ತೆರನಾದ ಪರಿಸರದಲ್ಲಿಯೇ ರಾಮನು ಮಕ್ಕಳಿಗೆ ರಾಜ್ಯವನ್ನೊಪ್ಪಿಸಿ ತನ್ನೊಡನೆ ನೆಮ್ಮದಿ-ನಲ್ಮೆಗಳಿಂದ ಮುಪ್ಪಿನಲ್ಲಿ ವಾನಪ್ರಸ್ಥವನ್ನು ಸಾಗಿಸುವ ಪುಣ್ಯವನ್ನು ವಿಧಿಯು ತನಗೆ ಈಯದಾಯಿತೇ ಎಂದು ಸೀತೆಯು ಚಿಂತಿಸುವಳೇ?}

    • ಗಣೇಶ್ ಸರ್, ನಿಮ್ಮ ಪದ್ಯದ ಹಳಗನ್ನಡದ ಶೈಲಿ ಎಂದಿನಂತೆ ನಮಗೆ ಮಾರ್ಗದರ್ಶನ ನೀಡುವಂತಿದೆ, ‘ಪುತ್ರಸಮರ್ಪಿತಕ್ಷಿತಿ’ ಪ್ರಯೋಗ ಬಹಳ ಹಿಡಿಸಿತು ಸರ್.

      • ಧನ್ಯವಾದ ….ಇದು ವಿಶೇಷ್ಯನಿಘ್ನವೆಂಬ ಪ್ರಯೋಗ. ಸಮಾಸದಲ್ಲಿ ಸಾಧ್ಯ. ಆಗ ಪದ್ಯಕ್ಕೆ ಅಡಕ ಮತ್ತು ಅಂದಗಳು ಬಂದಾವು

  8. Seeta, who dispensed her jewels as a trail for Rama, stops short of complete ನಿರ್ಮೋಹ and retains the ಝುಮುಕಿ!

    ಹರಿಣೀ|| ಲಲನೆ ಬಿಡೆ ನಿಶ್ಶೇಷಂ ವ್ಯಾಮೋಹಮಂ ತಗುಮೇಂ ಗಡಾ?
    ಖಲನೊಡನೆ ಪೋಪಾಗಳ್ ಬಂಗಾರದಾಭರಣಂಗಳಂ
    ಸಲುಗೆ ಪತಿದೇವಂಗೆನ್ನಂ ಸಾರಲೆಂದೆಸೆದಿರ್ದಿರ
    ಲ್ಕುಲಿಝುಮುಕಿಯಂ ಮಾತ್ರಂ ವ್ಯಾಮೋಹ ತಾಂ ತಡೆದಿರ್ದುದೇಂ!

    • ಪ್ರಸಾದು, ದುಷ್ಕರವೆನಿಸಿದ ಹರಿಣಿಯಲ್ಲಿ ಒಳ್ಳೆಯ ಪದ್ಯವನ್ನೇ ರಚಿಸಿದ್ದೀರಿ; ಧನ್ಯವಾದಗಳು.

    • ಪ್ರಸಾದು, ಕನ್ನಡದಲ್ಲಿ ಹರಣಿಯನ್ನು ಬಹಳ ಚೆನ್ನಾಗಿ ತಂದಿದ್ದೀರಿ, ಪಾಪ ಸೀತೆಯ ಪರಿಸ್ಥಿತಿಯಲ್ಲಿ ನಿಮಗೆ ಝುಮುಕಿಯು ಗಮನ ಸೆಳೆದದ್ದು ವಿಶೇಷ 🙂

      • ನಿಮ್ಮ ಚಕಾರಕ್ಕೆ ಕೆಳಗೆ ಸಂಖ್ಯೆ 12ರಲ್ಲಿ ಪರಿಹಾರವಿತ್ತಿದ್ದೇನೆ.

    • ಪ್ರಸಾದು ಹರಿಣಿ ಜಿಗಿದೇಳುತ್ತಿದ್ದಾಳೆ. ಚಲಝುಮುಕಿ- ಅರಿಸಮಾಸವಲ್ತೆ?

      • ’ಝುಮುಕಿ’ ನಾಮಪದ. ದಯಮಾಡಿ ವಿನಾಯಿತಿ ಕೊಡುವಿರಾದರೆ ಕೃತಜ್ಞತೆಗಳು. ಇಲ್ಲವಾದರೆ ಹೇಳಿ, ಸವರುತ್ತೇನೆ 🙂

      • ಪ್ರಸಾದರೆ. ನಾಮಪದಗಳಿಗೇ ಅಲ್ಲವೆ ಅರಿಸಮಾಸದ ಸೋಂಕಿರುವುದು. ಕ್ರಿಯಾಪದವಾಗಿದ್ದರೆ ರಿಯಾಯಿತಿ ಇರುತ್ತಿತ್ತು. ಬದಲಿಸಿದರೆ ಒಳಿತು

      • ಮೂಲದಲ್ಲೇ ಸವರಿದ್ದೇನೆ ಸರ್. ಕೃತಜ್ಞತೆಗಳು. ಕೆಲವು ಪದಗಳು ಸಂಸ್ಕೃತದ್ದು ಎಂದು ತೋರುವುದೇ ಇಲ್ಲ.

  9. ಶ್ರೀರಾಮಂ ಹಯಮೇಧದೀಕ್ಷಿತನೆನುತ್ತುಂ ಸುದ್ದಿಯಾದತ್ತು; ಪ-
    ತ್ನೀರಾಹಿತ್ಯಕೆ ಜನ್ನಮೆಂತೊಲಿವುದೋ? ಒತ್ತಾಯದಿಂದಾದೊಡಂ|
    ಬೇರೊಂದಂ ಬಗೆಗೊಳ್ವನೋ? ಹೃದಯದಿಂ ಶಾಸ್ತ್ರೋಕ್ತಿಯಂ ಗೆಲ್ವನೋ?
    ಭೀರುಶ್ರದ್ಧೆಯದೆನ್ನದೂರ್ಜಿಕೆನುತುಂ ಭೂಜಾತೆ ಚಿಂತಿಪ್ಪಳೇಂ?

    {ಅಶ್ವಮೇಧದ ಸುದ್ದಿ ಬಂದಿದೆ. ಪತ್ನೀರಹಿತನಿಗೆ ಯಾಗಾಧಿಕಾರವಿಲ್ಲ; ರಾಮನೇನಾದರೂ ಮತ್ತೆ ಮದುವೆಯಾದಾನೇ? ಅಥವಾ ತ(ನ)ನ್ನ ನಲ್ಮೆಯಿಂದ ಶುಷ್ಕಶಾಸ್ತ್ರವಿಧಿಯನ್ನು ಮೀರಿಯಾನೇ? ನನ್ನ ಭೀತಿಬದ್ಧಶ್ರದ್ಧೆ ಗಟ್ಟಿಯಾದೀತೇ? ಎಂದು ಸೀತೆಯು ಚಿಂತಿಸುವಳೇ?}

    • ಆಹಾ ಮತ್ತೆ ಬಹಳ ಸಹಜವಾಗಿ ಸೀತೆಗೆ ಮೂಡಿರಬಹುದಾದ ಪ್ರಶ್ನೆಗಳನ್ನು ಅತಿರಮಣೀಯವಾಗಿ ಪದ್ಯವಾಗಿಸಿದ್ದೀರಿ ಸರ್

      • ಧನ್ಯವಾದ. ರಘುವಂಶದ ಹದಿನಾಲ್ಕನೆಯ ಸರ್ಗ, ಉತ್ತರರಾಮಚರಿತೆಯ ಮೂರನೆಯ ಅಂಕ ಕುಂದಮಾಲಾ ನಾಟಕ ಮತ್ತು ತೆಲುಗಿನ ಲವ-ಕುಶ ಸಿನೆಮಾಗಳೆಲ್ಲ ಈ ಸಂದರ್ಭದಲ್ಲಿ ತುಂಬ ಸ್ಫೂರ್ತಿ ನೀಡಿವೆ.

  10. Friend, Don’t be fooled by that facade. If you go after her, all you get is ಕಲ್ಲು (the pew she is seated on) and ಮುಳ್ಳು (the tree behind her)!

    ವಸಂತತಿಲಕ||
    ಆ ದೈನ್ಯ ದಿಟ್ಟಿಗೆ ಸಖನ್ ಮರುಳಾಗದಿರ್ ನೀಂ
    ನೀ ಸೈಪಿನಿಂದವಳ ಸಾರ್ದೊಡಮಿಂತೆ ಕೇಳೈ|
    ಸ್ತ್ರೀ ಮೈಮೆಯಂ ತಿಳಿಯದನ್, ನಿನಗಿಂತೆ ಸಲ್ಗುಂ
    ತಾ ಶೈತ್ಯದಶ್ಮತಲ, ಕಂಟಕದಾ ಮರಂ ತಾಂ||

    • ನಿಷ್ಪ್ರಾಸಮಾಯ್ತೆ ಕವಿತಾಕಲನಂ ಪ್ರಸಾದೂ?
      ನಿಷ್ಪ್ರೇಮಳೇಂ ರುಚಿತಚಿತ್ರಗತೆ? ಪ್ರಬುದ್ಧಾ-
      ವಿಷ್ಪ್ರಾರ್ಥನಾರ್ಜವಕವಳ್ ಬರಳೇಂ? “ಸಖಾ” ಎಂ-
      ಬೀ “ಷ್ಪ್ರಾ”ಕ್ಷರಾಂಕಕವನಂ ಸೊಗಮಕ್ಕೆ ನಿಮ್ಮೊಳ್ 🙂

    • ನೀಮೆಂತೊ ಪೊಂದಿಸಿಹಿರೈ ಕಡುಪ್ರಾಸಮನ್ನುಂ (ಷ್ಪ್ರ)
      ತೇಮಾನ ಪ್ರಾಸದೊಳಗಂ ಗಡ ಗೈದು ನಾನುಂ|
      ಸಾಮಿಂದೆ ಮಾತ್ರಮಿರುವೊಲ್ ಸ್ವರಮ್’ಐ’ತ್ವಮೆಲ್ಲುಂ
      ಸೋಮಾರಿಯಾ(/ಯೀ) ಕುಸುಮವನ್ನ(/ನ್ನಿ)ದ ಕೊಳ್ಳಿರಿಂ ನೀಂ||

    • ಚೆನ್ನಾಗಿದೆ ಪ್ರಸಾದು ಆದರೆ, ಏನೀ ದ್ವೇಷವು ಸೀತೆಯೊಳ್ ರಂಪರೇ ನಲ್ವಾತುಗಳ್ ಬಾರದೇ 😉

      • ಅವಳು ಸೀತೆ ಎಂದು ಈ ಪದ್ಯದಲ್ಲಿ ಎಲ್ಲಿ ಸೂಚಿಸಿದ್ದೇನೆ?

  11. ಕ್ಷಣದಂತೆ ಕಳೆದುದೀ ವತ್ಸರಂ; ನಾಳೆಯೇ
    ಕ್ಷಣಗಣನೆಗಾರಂಭಮಾಣ್ಮನಾಯುವಿನಾ |
    ಕ್ಷಣದೆ! ನೀಂ ನಿಲ್ಲೆಂದು ಶೂನ್ಯಾರ್ಪಿತಾಂಜನೇ-
    ಕ್ಷಣದಿಂದೆ ನೋಂತಳೇಂ ಸಾವಿತ್ರಿಯಿಂತು?

    (ಆಣ್ಮ = ಪತಿ, ಕ್ಷಣದೆ = ಇರುಳು; ನಾಳೆ ಸಾಯಲಿರುವ ಸತ್ಯವಂತನಿಗಾಗಿ ಚಿಂತಿಸುವ ಸಾವಿತ್ರಿಯ ಪ್ರಸ್ತಾವವಿಲ್ಲಿರುವುದು ಸುವೇದ್ಯ)

    ಒಲಿದವನೇ ಮರೆತೆನೆನು-
    ತ್ತುಲಿಯುಲ್ ಸಖಿಯಾವ ಗತಿಗಮಾದಳೊ ಕಾಣೆಂ|
    ಚಲಿಪುದೆ ಮನಮಿದು ಮದುವೆಗ-
    ಮಲಿಪ್ತಮೆಂದಳಲ್ವಳೀಕೆ ಅನಸೂಯೆಯೆ ದಲ್ ||

    (ಜೀವದ ಗೆಳತಿ ಶಕುಂತಲೆಯನ್ನೇ ಅವಳ ಕಟ್ಟೊಲವಿನ ಕಾದಲನು ತೊರೆದನೆಂದ ಬಳಿಕ
    ತನಗೆ ಮದುವೆಯಲ್ಲಿ ಮನವಾದರೂ ಹೇಗಾದೀತೆಂದು ಅನಸೂಯೆಯು ಒಂಟಿಯಾಗಿ ಚಿಂತಿಸುವಳೇ?)

    ಅಂಧೀಕಾರಕಮಪ್ಪ ಕಾಂಚನಮೃಗಕ್ಕೋತಾಕೆಯಾನೆಂದೊ ಮೇಣ್
    ಗಂಧರ್ವಾಧ್ವರಕಿಂದು ಕಾಂತನೊಲವಿಂದೆಂನ್ನೊಂದು ಪೊನ್ಗೊಂಬೆಯಂ
    ಸಂಧಿಪ್ಪುಜ್ಜುಗಕಾದನೇಂ? ಕತದಿನಿನ್ನೇನೇನನರ್ಥಂಗಳು-
    ದ್ಬಂಧಂಗೆಯ್ದಪುವೋ ಎನುತ್ತೆ ಭಯದಿಂ ಭೂಜಾತೆ ಚಿಂತಿಪಳೇಂ?

    (ಗಂಧರ್ವಾಧ್ವರ = ಅಶ್ವಮೇಧ, ಕತ = ಸದ್ಯದ ಸಂದರ್ಭ, ಉದ್ಬಂಧ = ನೇಣು;
    ಹೊನ್ನ ಹರಿಣಕ್ಕೆ ಸೋತವಳೆಂದು ಬಗೆದು ರಾಮನು ತನ್ನ ಹೊನ್ನ ಮೂರ್ತಿಯನ್ನು ಯಜ್ಞಕ್ಕಾಗಿ ಮಾಡಿಸಿದನೋ? ಈ ಪರಿಯ ಹೊನ್ನ ಹಿಂದೆಹೋಗುವ ಹವಣಿನಿಂದ ಮತ್ತೇನು ಅನರ್ಥಗಳು ಬರುವುವೋ ಎಂದು ಸೀತೆಯು ಚಿಂತಿಸುವಳೇ?)

    • ಗಣೇಶ್ ಸರ್, ಪೂರಣಗಳು ಬಹಳ ಚೆನ್ನಾಗಿದೆ, ಅದರಲ್ಲು ಹೊನ್ನ ಜಿಂಕೆಗೆ ಆಸೆಪಟ್ಟಿದ್ದಕ್ಕೆ ಹೊನ್ನ ಪ್ರತಿಮೆ ರಾಮಮಾಡಿಸಿದನೆ ಎಂಬ ಪದ್ಯವನ್ನು ನಾನೂ ಬರೆಯೋಣವೆಂದಿದ್ದೆ, ಬಹಳ ಹಿಡಿಸಿತು 🙂

      • ಸಹೃದಯಶಿರೋಮಣೀ! ಸಾಂಪ್ರದಾಯಿಕಸುಕವಿತಾಗ್ರಾಮಣೀ! ಸೋಮಾಹ್ವಯಪದ್ಯಪಾನದ್ಯುಮಣೀ! ಧನ್ಯವಾದ:-)

    • ’ಚಿಂತಿಪಳೇಂ’ ಎಂಬಲ್ಲಿರುವುದು ಟಂಕನದೋಷವೇ ಹೊರತು ಛಂದೋದೋಷವಲ್ಲ ಎಂದು ಎಲ್ಲರಿಗೂ ಗೊತ್ತು. ಹಾಗಾಗಿ ಯಾರೂ ಚಕಾರವೆತ್ತಿಲ್ಲ. “ಅಪಿ ಮಾಂ ಪಾವಯೇತ್ ಸಾಧ್ವೀ ಸ್ನಾತ್ವೇತೀಚ್ಛತಿ ಜಾನ್ಹವೀ” ಎಂದು ಕೇಳಿಕೊಂಡಿದ್ದೀರಾಗಿ ಈಗ ಪ್ರಕಟಪಡಿಸಿದ್ದೇನೆ 😉

    • ಗಣೇಶರೆ- ತೆರತೆರನ ಕಲ್ಪನಾಲಹರಿಯನ್ನು ಮೆರೆವ ಕವನಗಳನ್ನು ಟಂಕಿಸಿದ್ದೀರಿ. ಚೆನ್ನಾಗಿವೆ. ಅನಸೂಯೆ ಶಕುಂತಲೆಗೆ ಪ್ರಾಣಸ್ನೇಹಿತಿಯೆ? ತಿಳಿದಿರಲಿಲ್ಲ. ಅದು ಗೊತ್ತಿಲ್ಲದೆ ಪದ್ಯ ಅರ್ಥವಾಗೋದಿಲ್ಲ

      • ಧನ್ಯವಾದ. ಕಾಳಿದಾಸನ ಶಾಕುಂತಲನಾಟಕದಲ್ಲಿ ಬರುವ ಅನಸೂಯೆ (ಅತ್ರಿಮುನಿಗಳ ಪತ್ನಿಯಲ್ಲ) ಶಕುಂತಲೆಯ ಪ್ರಿಯಸಖಿಯೆಂಬುದು ಕಾವ್ಯಲೋಕಪ್ರಸಿದ್ಧ. ಹೀಗಾಗಿ ಹಾಗೆ ಕವನಿಸಿದೆನಷ್ಟೆ:-)

    • ಪ್ರಿಯ ಗಣೇಶರೆ

      ಮುದ್ದಣ ,ಕುವೆಂಪು ಅವರಂತೆ ನವೀನ ಭಾವಾರ್ಥದ ಪ್ರಾಚೀನ ಭಾಷೆಯ ಪದ್ಯಗಳು ಬಲು ಸೊಗಸಾಗಿವೆ . ಧನ್ಯವಾದಗಳು

      • ಧನ್ಯವಾದ…ದಿಟವೇ, ಮುದ್ದಣನ ಹಳಗನ್ನಡದ ಪ್ರೌಢಿಮೆ ಮತ್ತು ಕುವೆಂಪು ಅವರ ವಿಶಿಷ್ಟಶೈಲಿಗಳು ನನ್ನನ್ನು ತುಂಬ ಪ್ರಭಾವಿಸಿವೆ.

  12. Corollary to my verse in SL No.8 – As to why Seeta retained the ear-drops – The jewels were dispensed to serve as trail not just to Rama, but to Lakshmana as well. But the latter cannot recognize the ear-drops as he has never seen Seeta in the face:
    ಉಲಿಝುಮುಕಿಯಂ ಕ್ಷೇಪಂ ತಾಗೈಯದಿರ್ದಿಹ ಕಾರಣಂ
    ನಲವಿನೊಳು ಪೇಳ್ವೆಂ ಕೇಳಿಂ ಮಹತ್ತರ ಮಾತಿದಂ|
    ಸಲುಗು ಪತಿಗಂ ಮೇಣಾ ಲಕ್ಷ್ಮಣಂಗೆನುತುಂ ಗಡಂ
    ಸಲೆ ಮುಖಮನೆಂದುಂ ತಾ ಕಾಣ ಮೈದುನನಲ್ಲಮೇಂ|

    • Dear Prasaadu,

      metre is derailed in the last three lines and language is also nagging behind undesirable forms:-)

    • ಹರಿಣಿಯ ಓಟ ಕಂಠಗತವಾಗಿಲ್ಲವಾಗಿ ’ಲಕ್ಷಣ’ವನ್ನು ಟಂಕಿಸಿಕೊಂಡು ಮಕ್ಕಿ-ಕಾ-ಮಕ್ಕಿ ಮಾಡುತ್ತಿದ್ದೆ. ಮೊದಲ ಪಾದ ಬರೆದಮೇಲೆ ಯಾವುದೋ ಮಾಯದಲ್ಲಿ ಒಂದು ಗುರ್ವಕ್ಷರ delete ಆಗಿಬಿಟ್ಟಿರಬೇಕು! ಸರಿಪಡಿಸಿದ್ದೇನೆ:
      ಉಲಿಝುಮುಕಿಯಂ ಕ್ಷೇಪಂ ತಾಗೈಯದಿರ್ದಿಹ ಕಾರಣಂ
      ನಲವಿನೊಳು ಪೇಳ್ವೆಂ ಕೇಳಿಂ ನೀಂ ಮಹತ್ತರ ಮಾತಿದಂ|
      ಸಲುಗು ಪತಿಗಂ ಮೇಣಾ ರಾಮಾನುಜಂಗೆನುತುಂ ಗಡಂ
      ಸಲೆ ಮುಖಮನೆಂದುಂ ಕಾಣಂ ಭ್ರಾತೃಜಾಯಳದಲ್ಲಮೇಂ||

    • ಪ್ರಸಾದು ಐಡಿಯ ಬಹಳ ಚೆನ್ನಾಗಿದೆ, ಚಲಝುಮುಕಿಯಂ ಅಂದರೇನು?

  13. ನಾರುಮಡಿಯನ್ನುಟ್ಟುದಾರಿದು
    ನಾರಿ ಸತ್ವವ ತೋರ್ದ ರೇಣುಕೆ,
    ಸಾರೆ ಕಾದಿಹ ನೀತೆ ಸೀತೆಯೊ, ಗೀತೆ ಕೃಷ್ಣೆಯದೋ |
    ಆರ ಬರುವಿಗೊ ಕಾದುದಾರಿದು
    ನೀರೆ ಶಾಕುಂತಲೆಯೊ, ರಾಧೆಯೊ,
    ಕೋರಿ ಕಾಲನ ಪತಿಯ ಕಾಯಲು ಸತಿಯು ಸಾವಿತ್ರೀ ||

    (ಗಣೇಶ್ ಸರ್ ರವರ, ವಿವಿಧ ನಾರೀಮಣಿಗಳ ಬಗೆಗಿನ ಪದ್ಯಗಳಿಂದ ಪ್ರೇರಿತ)

    • praasada mOhadalli arthada kaDege gamana tappide; nimma maamUlina jaaDu jhaaDisuttide:-)

      • ಕ್ಷಮಿಸಿ ಗಣೇಶ್ ಸರ್, ನಾಮಪದಗಳನ್ನು “ಭಾಮಿನಿಗೆ” ಹೊಂದಿಸುವ ಭರದಲ್ಲಿ ಪದ್ಯ ಅರ್ಥಹೀನವಾಗಿದೆ, ಶಾಕುಂತಲೆ, ನೀತೆ / ಗೀತೆ ಪದಬಳಕೆ ತಪ್ಪಿದೆಯಲ್ಲವೆ? ಮತ್ತೆ ಸರಿಪಡಿಸಿಕೊಳ್ಳುತ್ತೇನೆ.

  14. ಅರೆಮೇಲ್ ಕುಳಿತಾರದಳ್ಕರಿಂ-
    ದರಸುತ್ತಿರ್ಪಳದಾರನೀತೆರಂ
    ಮರೆತಿರ್ಪಳೆ ಮೈಮನಂಗಳಂ
    ಕರಮಂ ಜೋಡಿಸಿ ಕಾದಲಂಗೆ ತಾಂ

    • ಕಾದಲಂಗಾಕೆ ಜೋಡಿಸಿದ ಕೈಗಳ ದಿಕ್ಕ
      ಖೇದದಿಂ ನೀ ನೋಡು ಕಾಂತಶ್ರೀಯ|
      ಪಾದ ಮುಗಿದಿಹನವಳ ದೈನ್ಯದಿಂ ಬೇಡುತ್ತೆ
      ಕಾದಿರ್ಪನಾಕೆಯೊಂದಕ್ಷಿಕೃಪೆಗಂ||

      ಅವಳೋ, ’ಎದ್ದೋಗಪ್ಪ ಸಾಕು ನೀನು’ ಎಂಬಂತೆ ಕೈಜೋಡ್ಸಿ ಎತ್ಲಗೋ ನೋಡ್ತಾ ಕುಂತವ್ಳೆ. ಅವ್ನು ಈಗಷ್ಟೇ ಎದ್ದೋಗವ್ನೆ.

    • ಶ್ರೀಕಾಂತರೆ, ಚೆನ್ನಾಗಿದೆ ಪದ್ಯ

    • ತುಂಬ ಒಳ್ಳೆಯ ಪದ್ಯ. ಚಿಕ್ಕ ವೃತ್ತದಲ್ಲಿ ಚೊಕ್ಕ ಸಾಧನೆ

  15. सीता-स्वगतम्

    साकेतरामो नृपधर्मबद्दोऽ
    रण्येषु मद्बिम्बधृताम्बकः सः ।
    प्रव्राजनान्तः सुखदोऽपि नूनं
    स्मरामि वन्यानि मुदा दिनानि ॥

    The musings of Sita in exile before her abduction.

    Rama in Ayodhya is bound by kingly duties, but in the forests, his eyes behold my reflection. The end of the exile will surely yield pleasure – but I will remember these sylvan days with happiness………..

  16. ಕೊರೆದಿಪ ಚಿತ್ರವಲ್ತಿದುವು, ಭಾವಗಳಂ ಸಸಿದಿಟ್ಟ ನೀಳಸುಂ
    ದರ ವರಕಾವ್ಯಮಂಟಪದೆ ನಚ್ಚಣಗೈದಿತೊ ಕುಂಚಮೆಂಬವೋಲ್
    ಮೆರೆದುದ ಬಣ್ಣಿಸಲ್ಕರಿದು ವರ್ಣಕಲಾಕೃತಿ ಸೀತೆ ರಾಮನಿಂ
    ಸರಿದುದನಂ, ದಿಟಂ ಮಿಹಿರವರ್ಮಗೆವರ್ಮನೆ ಸಾಟಿಯಿರ್ಪನೈ.

    (ಇದು ಬಿಡಿಸಿದ ಚಿತ್ರವಲ್ಲ , ಹಲವು ಭಾವಗಳನ್ನ ಬಿಡಿಸಿಟ್ಟ (ಸುಂದರವೂ, ಶ್ರೇಷ್ಟವೂ ಆದ) ದೀರ್ಘವಾದ ಕಾವ್ಯವೆಂಬ ವೇದಿಕೆಯಲಿ ಕಲಾವಿದನ ಕುಂಚವು ನರ್ತಿಸಿತೋ ಎನ್ನುವಂತೆ ಶೋಭಿಸುವ ‘ಸೀತೆ ರಾಮನಿನಂದ ದೂರ ಸರಿದ’ ಕಲಾಕೃತಿಯನ್ನು ಬಣ್ಣಿಸಲು ಅಸಾದ್ಯ. ನಿಜವಾಗಿಯೂ

    ರವಿವರ್ಮಗೆ (ರವಿ) ವರ್ಮನೆ ಸಾಟಿ.)

    ಸಸಿದಿಟ್ಟ – ಬಿಡಿಸಿಟ್ಟ
    ನಚ್ಚಣ – ನರ್ತನ
    ಬಣ್ಣಿಸಲ್ಕರಿದು – ಬಣ್ಣಿಸಲಸಾದ್ಯ.
    ಮಿಹಿರವರ್ಮ – ರವಿವರ್ಮ (ಛಂದಸ್ಸಿನ ಸಮತೋಲನಕ್ಕಾಗಿ ಹೀಗೆ ಬಳಸಿದ್ದು )

    • ಈವರಂ ’ಹೃದಯರಾಮ’ನೆನುವೀ ಕಬ್ಬಿಗಂ
      ಯಾವಕಾರಣ ಬರಿಯ ’ಹೃದಯ’ನಾದನ್?
      ಶೈವನಲ್ಲದೊಡಾತ ರಾಮಕಥನಕ್ಕೆ ತಾ-
      ನೀವನೇಂ ’ರಾಮ’ನಂ ಕೋದು ಪೆಸರಿಂ?

    • ಚೆನ್ನಾಗಿದೆ ಹೃದಯರಾಮರೆ

    • ವಿನೂತನವಾದ ಕಲ್ಪನೆಯ ಪದ್ಯಕ್ಕಾಗಿ ಧನ್ಯವಾದಗಳು ಹೃದಯರಾಮರೇ!

    • Good imagination. thanks

  17. ಚಿತ್ರ ಸೀತೆಯದೇ ಆಗಿದ್ದಿರಬಹುದು. ಈ ಚಿತ್ರ ಸೀತೆಯದೇ, ಮತ್ಸ್ಯಗಂಧಿಯದೇ, ಅಲ್ಲ, ಮತ್ತಾರದೋ ಎಂದು ಹಿಂದೆ ಓದಿದ್ದ ನೆನಪು. ನಂತರ, ರವಿವರ್ಮನ ಎಲ್ಲಾ ಚಿತ್ರಗಳಿರುವ ಒಂದು ಪುಸ್ತಕವನ್ನು ಬಹಳ ಹಿಂದೆ ಕೇರಳಕ್ಕೆ ಹೋಗಿದ್ದಾಗ ಆರ್ಟ್ ಗ್ಯಾಲರಿಯಲ್ಲಿ ಕೊಂಡದ್ದು ನೆನಪಾಗಿ ಹುಡುಕಿದೆ. ಆ ಪುಸ್ತಕದ ರಕ್ಷಾಪುಟದಲ್ಲೇ ಈ ಚಿತ್ರವಿದೆ. ಅದರ ಶೀರ್ಷಿಕೆ “ ಶಕುಂತಲ” ಆ ಭಾವದ ಜಾಡಿನಿಂದ ಈ ಪದ್ಯತ್ರಯ.

    ಪರವಶದಿ ವನಜೋತ್ಸ್ನೆಸೂಸಿದ ಪೂಗಳೈದಿದುವೆಲ್ಲಿಗೆ?
    ಕೊರತೆಯೇಂ? ದುಷ್ಯಂತ ನೆಲ್ಲೆಡೆ ಕಾಂಬ, ಕಾಣದು ಮಲ್ಲಿಗೆ!
    ಎರೆದ ನೀರಿಗೆ ಬಳ್ಳಿ ತಬ್ಬುತ ಮುತ್ತನಿತ್ತುದ ಮರೆಯುತ
    ಬಿರಿದು ಬೆದರುವ ತಳಿರತುಟಿ ಜಪಿಸಿಹುದು ರಾಜನ ನೆನೆಯುತ

    ಎಲೆಯಮೇಲುಗುರಾಡೆ ಪಡೆಯಿತೆ ಭಾವದಕ್ಷರ ರೂಪವ
    ಕೊಲುವ ಮದನನ ಶಮಿಸ ಬಯಸಿರಲವನೆ ತಂದಿಹ ತಾಪವ
    ಬಲವೆ ಗಾಂಧರ್ವವಿಧಿ? ನಂಬಿದೆ, ತಳಿರಮಂಟಪ ನಗುತಿದೆ!
    ಒಲವ ನುಂಗಿದ ಬೆರಳಿ ನುಂಗುರ ನೆನಪಿನಿಂ ಸಂತೈಸಿದೆ!

    ತಪ್ಪದಾಚರಿಸಿದರು ಧರ್ಮವ ತಾಪಸಿಗಳನುಜೀವನ
    ತಪ್ಪಿದೆನೆ ಚಣ ಮದನಭಾವಕೆ? ಸೋತು ಸಂದಿತೆ ತನುಮನ
    ತಪ್ಪುವನೆ ಮನದಾಣ್ಮ ’ದೀರ್ಘಾಪಾಂಗ ’ ಕರುಣಾಶಾಲಿಯು
    ತಪ್ಪದಾರದೊ ನನದೊವಿಧಿಯದೊ ಋತವೆ ಕಾವಲ ಬೇಲಿಯು

  18. ಬರವಿಹುದೆ ಧರಣಿಯೊಳು ನೊಂದಿಹನೆ ನರನಿಂದು
    ಬರಿದಾಯ್ತೆ ಗಿರಿಯದುವು ನೆಲದೊಡನೆತಾಂ |
    ತರುಣಿ ನೋಡಂಬಿಕೆಯು ಕುಳಿತಿಹಳೆ ಕಳವಳದಿ
    ಮರಳಿ ನಳನಳಿಪ ನಂಬಿಕೆಯೊಡನೆತಾಂ ||

    (ಬರಲಿರುವ ಸ್ವರ್ಣಗೌರಿಗೆ ಸ್ವಾಗತಕೋರುತ್ತಾ…)

  19. ಸೀತೆಯ ಭಾವನೆಗಳು

    ಹರಿಣಂ ಮಾಯೆಯೆ ಮೇಣ್ ಮಂ-
    ಥರೆಯಾತ್ಮಕುಟಿಲತೆ ಮಾಯೆ ಹಾ ಲಂಕೆಯೊಳಾ
    ಖರರಾಜಂ ಗೈದಪುದಂ
    ಪುರಜನರರ್ಥೈಸಿ ಪೇಳ್ದ ಪರಿ ಮಾಯೆಯೆ ದಲ್

    • ಆಹಾ! ತುಂಬ ಒಳ್ಳೆಯ ಕಲ್ಪನೆ…ಭಾಷೆಯು ಮತ್ತೂ ಬಿಗಿಯಾದರೆ ಇನ್ನೂ ಸೊಗಯಿಸುತ್ತಿತ್ತು..

      • ಗಣೇಶ್ ಸರ್, ಒಂದು ಸ್ವಲ್ಪ ಸವರಣೆಯ ಯತ್ನ ಮಾಡಿದ್ದೇನೆ, ಮೂಲದಲ್ಲೇ ತಿದ್ದಿದ್ದೇನೆ ಸರಿಹೊಂದುತ್ತದೆಯೇ?

  20. ಸೀತೆಯ ಹಿಂದೆ ಒಬ್ಬ ವ್ಯಕ್ತಿ ಬರುತ್ತಿದ್ದಾನಲ್ಲ… ಅವನು ರಾಮನೇ ಇದ್ದಿರಬಹುದು ಹಿಂದೆಯಿಂದ ಬಂದು ಆಶ್ಚರ್ಯವನ್ನು ಉಂಟುಮಾಡುವನೆಂಬ ಸೀತೆಯ ಭಾವನೆ

    ಒಡವುಟ್ಟಿದವರಿಗರಸುಗೆ
    ಪಿಡಿಸುತ್ತಾರ್ತೆಗೆನೆ ಮನಮನೀವೆಂದೆನುತುಂ
    ತೊಡುವಂ ನಾರ್ವಟ್ಟೆಗಳಂ
    ಗಡಿಯಂ ದಾಂಟುತ್ತಲಾಣ್ಮನಕ್ಕಜಮೀವಂ

  21. ಸೀತೆಗೆ ರಾಮನ ಮೇಲೆ ಸಿಟ್ಟೂ ಬಂದಿರನಹುದಲ್ಲವೇ, ಆ ಭಾವನೆ…

    ಸುಡುವಿಸಿಲೊಳ್ನೆರಳ್ಗೆನುತುಂ
    ಚಡಪಡಿಸೆನೆ ಗರ್ಭಧಾರಿಣಿಯನುಂ ಪುರುಷಂ
    ತೊಡೆದಂ, ತಾನಾ ಜನ್ನದೆ
    ಪಿಡಿಯಲ್ ಪುತ್ಥಳಿಯನುತ್ತಮಿಕೆಯೇನದರೊಳ್?

    • ಆಹಾ! ಒಳ್ಳೆಯ ಕರುಣಸ್ಥಾಯಿ ಮತ್ತು ಕ್ರೋಧವ್ಯಭಿಚಾರಿಗಳ ಸಮಾಹಾರ! ಪದ್ಯಬಂಧವೂ ಚೆಲುವಾಗಿದೆ.

  22. कञ्चित् कान्तं विरहितहृदा सन्ततं चिन्तयन्ती
    चन्द्रं माध्यन्दिनमिव मुखं दर्शयन्ती विभासि ।
    एवम्भूता मुनिवरमिमं त्वागतं नैव दृष्ट्वा
    शापाक्रान्ता शरणमिह कं यासि हे कण्वपुत्रि ॥
    ಕ್ಷಮಿಸಬೇಕು. ಮೊದಲನೆಯದಾಗಿ ಈ ಚಿತ್ರದಲ್ಲಿರುವವಳು ಶಕುತಲೆಯೆಂದುಕೊಂಡೆ. ಮತ್ತು ಎರಡನೆಯದಾಗಿ ಸಂಸ್ಕೃತದಲ್ಲಿ ರಚಿಸಿದೆ – ಮಂದಾಕ್ರಾಂತಾವೃತ್ತದಲ್ಲಿ. ಆದರೂ ಇಲ್ಲಿ ಲಗತ್ತಿಸಿದರೆ ಉಪಯೋಗಕ್ಕೆ ಬರಬಹುದೆಂದುಕೊಂಡಿದ್ದೇನೆ. ತಪ್ಪುಗಳಿದ್ದರೆ ದಯವಿಟ್ಟು ತೋರಿಸಿ.

  23. ಚಿತ್ರದಲ್ಲಿರುವಾಕೆ ಕುರುಕ್ಷೇತ್ರಯುದ್ಧದಲ್ಲಿ ಮಡಿದ ಸಾಮಾನ್ಯಸೈನಿಕನ ಪತ್ನಿಯೆಂದು ಕಲ್ಪಿಸಿ ರಚಿಸಿದ ಪದ್ಯ.

    ಸವಿಯೇಂ ಯೋಧರ ಮಾಂಸಪಿಂಡರುಧಿರಂಗಳ್ ಶಾಕಿನೀವೃಂದಕಂ ?
    ಬುವಿತಾಯ್ ತಾಂ ಶುಚಿಯಾಪಳೇಂ ಬವರದೊಳ್ ಬೆನ್ನೆತ್ತರಿಂ ಮಿಂದೊಡಂ ?
    ದಿವಿಜರ್ ಕಾಣುತೆ ಯುದ್ಧಮಂ ಪಡೆವರೇನ್ ಆನಂದಸಂದೋಹಮಂ ?
    ಶಿವನೇ ! ಭೂಪರ ವೈರಕಂ ಬಲಿಗಳೇತಕ್ಕಿಂತು ಯೋಧಾಸುಗಳ್ ?

    • ಅಮಮಾ! ನೂತನಕಲ್ಪನಾತ್ಮಕಲಿತಂ ಶ್ರೀಮತ್ಪೆಜತ್ತಾಯರು-
      ದ್ಗಮಮೀ ಪದ್ಯವನೀವಿಷಾದಸುಷಮಾಸ್ವಾರಸ್ಯಮೇನೊಪ್ಪುಗುಂ!!
      ಸಮೆಯಲ್ “ತಾಂ ಶುಚಿಯಪ್ಪಳೇಂ” ಎನೆತೆ ನೀಂ, ಮತ್ತಷ್ಟು ಚೆನ್ನಪ್ಪುಗುಂ
      ಸ್ವಮತ್ಪದ್ಯಮನೇನಸಂ; ಸುರುಚಿರಂ “ಬೆನ್ನೆತ್ತರ್”ಎಂಬುಕ್ತಿಯುಂ ||

      • ಮೆಚ್ಚುಗೆ-ಸವರಣೆಗಳಿಗೆ ಕೃತಜ್ಞತೆಗಳು ಸರ್ 🙂

    • ಚೆನ್ನಾದ ವಿಷಯವ್ಯಾಪ್ತಿ, ಭಾಷೆ. ಅಭಿನಂದನೆಗಳು.

    • ಪೆಜತ್ತಾಯರೆ, ನಿಮ್ಮ ಕಲ್ಪನೆ ಬಹಳ ಚೆನ್ನಾಗಿದೆ

  24. ನಿರುಪಾಯದೆ ನೀರೆಯೋತನಂ
    ನಿರುಕಿಪ್ಪಳ್ ಶಿಲೆನೆರ್ಮಿ ಚೇತನಂ
    ಮರುಗುತ್ತನುಮಾನಿಪಳ್ ಕ್ಷಣಂ
    ಮರಳ್ದೆನ್ನಂ ಬರಮಾಡಿಕೊಳ್ವನೇಂ

  25. ಕಳೆಗುಂದಿಹ ಮೊಗದಿಂದಲಿ
    ಕುಳಿತಿರ್ಪವಳಾರು?
    ರವಿವರ್ಮನು ಬರೆದಿರ್ಪನು
    ಕವಿವರ್ಯರೆ ಪೇಳಿ!!

    • ಸ್ವತಃ ರವಿವರ್ಮನನ್ನು ಕೇಳಿದರೂ ಅವನು ಹೇಳಲಾರ:
      ಕೇಳ್ದೊಡಂ ರವಿವರ್ಮನುಂ ತಾಂ
      ಪೇಳ್ದೊಡಂ ನಿನಗಾಣೆ ರಾಮನೆ
      ನೋಳ್ದೊಡಮಳಮೆ ಪೇಳೆ ಮನಮ
      ನ್ನಾಳ್ದ ಭಾವಮನಂತೆಯೇ||

  26. ತಾಪ ಚಂಡಕಿರಣನದೋ? ಸಂ-
    ತಾಪವಾತನ ಕುಲಜನದೊ? ವನು-
    ರೂಪಿ ಕರುಣಾಮಯರ ಕಾಲಾಂತರದ ಸಂಕಟವೋ?
    ಕೂಪದೊಳ್ ಬೆಂದಿರ್ಪಳ ಸಮಾ-
    ರೋಪಕೆಂದಾಗಿರ್ದುದೋ ಮೇ-
    ಣೀ ಪರಿಯ ಬೆಂಗಾಡದಾದುದೊ, ಹಚ್ಚನೆಯ ವಿಪಿನ?
    [ಚಂಡಕಿರಣ = ಸೂರ್ಯ, ಅವನ ಕುಲಜ = ರಾಮ]
    [ಆಶ್ರಮದ ಹಸಿರು ಪರಿಸರ ಬೆಂಗಾಡಿನಂತಾದುದರ ಬಗೆಗೆ ಸೀತೆಯ ವಿಚಾರ]

    • ಸಸಂದೇಹಾಲಂಕಾರದ ಸಾಲುಗಳ ತರ್ಕಗಳು ಚೆನ್ನಾಗಿದೆ ರಾಮ್

    • ವನುರೂಪಿ ಕರುಣಾಮಯರ್?

      • ಅನುರೂಪಿ ಕರುಣಾಮಯರು – empathetic people – ಸಹೃದಯರು [‘?’ ಬಂದರೂ, ವಿಸಂಧಿ ದೋಷ ಸಲ್ಲದು ಎಂದು ನೀವು ಹೇಳಬಹುದೆಂದು ವನುರೂಪಿ ಎಂದಾಗಿದೆ. :-)]
        ಕಾಲಾಂತರದಿ – across times, future included

  27. ಒಂದು ಹೈಕು

    ನಂದನವನಂ
    ಬೆಂದ ತರು ಸುಮನಂ
    ಪೊಂದೆ ಪೆಣ್ಮನಂ

    • ರಾವಣನು ಸೀತೆಯನ್ನು hike ಮಾಡಿದ್ದರಿಂದ, ನಿಮ್ಮ haiku ಪ್ರಕೃತವಾಗಿದೆ 😉

    • ಏನಿದು ಹೈಕು? ಛಂದಸ್ಸಿನ ಯಾವುದಾದರು ಪ್ರಾಕಾರವೇ ?

  28. ಸೀತೆಯ ಭಾವನೆಗಳನ್ನು ಮುಂದುವರಿಸುತ್ತಾ…

    ಪೊನ್ನಿನ ಪ್ರತಿನಿಧಿಯ ಜಸಮನುಳಿವೆಂ ಗಡಾ
    ಮನ್ನಿಪೆಂ ಜನರಿತ್ತ ಮುಳಿತಂಗಳಂ
    ಚೆನ್ನನಾ ನಿರ್ಣಯಮನವನಿಂದೆ ಕೇಳದಿರ-
    ಲಿನ್ನೆಗುಂ ಖಿನ್ನಳಾಂ ಕ್ರೂರವಿಧಿಯೇ

  29. ನೇಪಥ್ಯದಲ್ಲೊಬ್ಬ ಕಾವಲಿನವನಿದ್ದಾನೆ:

    ತರಳ|| ಪಹರೆಯಾತನು ಕಾಯ್ವ ಮಾತ್ರಮೆ ಭೌತದೇಹವನೆಂದಿಗುಂ
    ವಿಹಿತವಪ್ಪುದೆ ಕಾಯಲಾಕೆಯ ಚಿಂತನಂಗಳನೆಂದಿಗುಂ|
    ಸಹಿತ ಮೇಣಹಿತಂಗಳಿರ್ಪುವು ಸೀತೆಯಾ ಪರಿಭಾವಗಳ್
    ಗುಹೆಯು ಗಹ್ವರಮುಳ್ಳ ಮೋಚನಮಾರ್ಗಮಲ್ಲವೆ ಮಾನಸಂ||

  30. ಪೂಜ್ಯ ಗುರುಗಳಾದ ಶತಾವಧಾನಿ ಡಾ|| ರಾ. ಗಣೇಶರಿಗೆ ಭಕ್ತಿಪೂರ್ವಕ ನಮನಗಳು.
    ಪದ್ಯಪಾನಿಗಳಿಗೆಲ್ಲ ಶ್ರೀ ಗಣೇಶ ಚತುರ್ಥಿಯ ಶುಭಾಶಂಸೆಗಳು.
    ಪದ್ಯಪಾನ, ಪದ್ಯಾಸಕ್ತರಿಗೆ ಬಹಳ ಉಪಯುಕ್ತ ತಾಣ.
    ತಮ್ಮ ಪರಿಶ್ರಮಕ್ಕಾಗಿ ಧನ್ಯವಾದಗಳು.
    ಚಿತ್ರದ ಮಾನಿನಿಗೆ ನನ್ನ ಪದ್ಯ . ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿರಿ.

    ಏಕಿನಿತು ಚಿಂತಿಸುವೆ ?
    ಸಾಕು ಬಿಡು ಮಾನಿನಿಯೆ
    ನೂಕು ಬಾಳ್ವೆಯ ಕಠಿನವಿಧಿನಿಯಮದೊಳ್ |
    ನಾಕು ದಿನಗಳ ಬವಣೆ
    ಶೋಕ ಪಡುವುದು ಸಲ್ಲ
    ಲೋಕನಾಥನ ನೆನೆದು ಮುದವಾಗಿರು ||

    • ತಿದ್ದುಪಡಿ:

      ಕ್ಷಮಿಸಿರಿ, ಪದ್ಯಪಾನಿಗಳಿಗೆಲ್ಲ ಎಂಬುದನ್ನು ಪದ್ಯಪಾನದವರಿಗೆಲ್ಲ ಎಂದು ಓದಬೇಕು.

      ಪದ್ಯದ ನಾಲ್ಕನೇ ಸಾಲನ್ನು- ನಾಕು ದಿನಗಳ ಬದುಕು – ಎಂಬುದಾಗಿ ತಿದ್ದಿಕೊಂಡರೆ ಹೆಚ್ಚು ಸಮರ್ಪಕವೇ ? ಆ ಸಾಲು ಸರಿಯಿಲ್ಲವೇನೋ ಎಂಬ ಸಂದೇಹವಿದೆ.(ಇದು ನಾಕು ದಿನಗಳ ಬವಣೆ, ಇದಕ್ಕಾಗಿ ಶೋಕಪಡುವುದು ಸಲ್ಲದು ಎಂಬರ್ಥದಲ್ಲಿ ಮೊದಲಿಗೆ ಬರೆದಿರುತ್ತೇನೆ)

  31. ಎಲ್ಲರನ್ನೂ ವಂದಿಸುತ್ತಾ ,

    ಇಂದಿನ ಸಾಮಾಜಿಕ ಪರಿಸ್ಥಿತಿಗೆ ಅಳವಡಿಸಿ — ನ್ಯಾಯಾಲಯವು ವಿಚ್ಹೇದನದ ತೀರ್ಪು ನೀಡುವ ಮೊದಲು, ದಂಪತಿಗಳಲ್ಲಿ ಆತ್ಮಾವಲೋಕನ ಮಾಡಲು ಹೇಳಿದಂತಹ ಒಂದು ಸಂದರ್ಭದಲ್ಲಿ ನಾರಿಯ ದ್ವಂದ್ವದ ಕಲ್ಪನೆ

    ತೊರೆಯಲೋ ? ತೊಡಕಾದ ‘ಕಾಲ’ಗೆ ಸಂದ ದೋಷವ ಹೇರಲೋ ?
    ಮರೆಯಲೋ ? ಮದಮತ್ಸರಂಗಳ ಬಿಟ್ಟು ಸಾರಥಿಯಾಗಲೋ?
    ಮರಳಲೋ ?ಮಣಿದೊಂದು ಸಾರ್ಥಕ ಬಾಳಿನಾ ಸವಿಯುಣ್ಣಲೋ ?
    ಮರುಗಿತೋ ?ಮನನೊಂದು ಬೆಂದಿಹ ನಾರಿಗೀಪರಿ ಚಿಂತೆಯೋ ?

    ತೊಡಕಾದ ಕಾಲ = ಕಲಹಕ್ಕೆ ಕಾರಣವಾದ ವಿಷ ಗಳಿಗೆ

    • ಭಲಾ!

      • ಸರ್ ,
        ಪ್ರೋತ್ಸಾಹದ ನುಡಿಗೆ ಧನ್ಯವಾದಗಳು. ಹೆಸರನ್ನು ಇಂಗ್ಲಿಷ್ ನಲ್ಲಿ ಚುಟುಕಾಗಿ ಬರೆದುದು ನನ್ನ ಪಾಲಿಗೆ ಕನ್ನಡದ ‘ಲಾಭ’ವಾಯಿತು !

    • ಭಲಾ ಅವರಿಗೆ ಸ್ವಾಗತ. ದಯಮಾಡಿ ತಮ್ಮ ಪರಿಚಯವನ್ನು ನೀಡುವಿರಾ?

      • ಸರ್ ,
        ಹೆಸರು ಭಾಗ್ಯಲಕ್ಷ್ಮಿ . ಗೃಹಿಣಿ . ಪದ್ಯಪಾನದ ವಿಡಿಯೋ ಮೂಲಕ ಪದ್ಯ -ವಿದ್ಯೆಯ ಬಾಲ ಪಾಠಗಳನ್ನು ಕಲಿತುದರಿಂದ ತಮ್ಮ ಶಿಷ್ಯೆ .opaanna .com ನಲ್ಲಿ ಸಮಸ್ಯಾ ಪೂರಣದಲ್ಲಿ ಭಾಗವಹಿಸುತ್ತಾ , ಕಲಿಯುತ್ತಿದ್ದೇನೆ .ಇಲ್ಲೂ ಒಂದು ಪ್ರಯತ್ನ ಕೈಗೊಂಡೆ.

  32. ಸಹೋದರಿ ಶಕುಂತಲಾ ಮೊಳೆಯಾರರಿಗೆ ಸ್ವಾಗತ. ಕುಶಲವಷ್ಟೆ? ನಿಮ್ಮ ಪದಯ್ವ್ ಚೆನ್ನಾಗಿದೆ. ಅದಕ್ಕೆ ಸವರಣೆ ಬೇಕಿಲ್ಲ:-)
    ಸಹಪದ್ಯಪಾನಿಗಳಿಗೆ ಒಂದು ಸಂತಸದ ಸುದ್ದಿ; ಈ ಶಕುಂತಲಾ ಅವರ ತಂದೆ ಕೀ. ಶೇ. ಗಣಪತಿ ಮೊಳೆಯಾರರು ಒಳ್ಳೆಯ ಕಂದ-ವೃತ್ತ-ಚೌಪದಿ-ಷಟ್ಪದಿ ಮುಂತಾದುವನ್ನು ರಚಿಸುವಲ್ಲಿ ಕೋವಿದರು. ಸಂಸ್ಕೃತದ ಅನೇಕಕಾವ್ಯ-ನಾಟಕಗಳನು ಸೊಗಸಾಗಿ ಕನ್ನಡಿಸಿದವರು. ಮುಖ್ಯವಾಗಿ ಮೇಘದೂತವನ್ನು ಮಂದಾಕ್ರಾಂತೆಯಲ್ಲಿಯೇ ಕನ್ನಡಕ್ಕೆ ತಂದ ಧೀಮಂತರು. ಶಾಕುಂತಲದ ಗೌಡೀಯಪಾಠಾಂತರವನ್ನು ಅತಿಮನೋಹರವಾಗಿ ಅನೂದಿಸಿದವರಿವರು.

    • ಶಕುಂತಲಾ ಅವರಿಗೆ ಪದ್ಯಪಾನಕ್ಕೆ ಸ್ವಾಗತ, ನೀವು ಪದ್ಯಪಾನತಾಣದಲ್ಲಿ ಆಸಕ್ತಿ ವಹಿಸಿರುವುದು ನಮ್ಮ ಸೌಭಾಗ್ಯ. ಒಂದು ಉಪಕಾರವಾಗಬೇಕಿತ್ತು, ಕೀ. ಶೇ. ಗಣಪತಿ ಮೊಳೆಯಾರರ ಮೇಘಧೂತ ಮತ್ತು ಶಾಕುಂತಲಾನುವಾದಗಳು ಬೇಕಿತ್ತು ನಿಮ್ಮಲ್ಲಿ ಇವುಗಳ ಪ್ರತಿಗಳು ಸಿಗುತ್ತವೆಯೆ? ಮಾಹಿತಿ ತಿಳಿಸುವುದು.

      • ಶ್ರೀಯುತ ಸೋಮರಿಗೆ ಧನ್ಯವಾದಗಳು.ಪುಸ್ತಕಗಳ ಬಗೆಗಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸುವೆ.

        • ದಯವಿಟ್ಟು ತಿಳಿಸಿಕೊಡಿರಿ, ಧನ್ಯವಾದಗಳು

          • ಶ್ರೀಯುತ ಸೋಮರೆ,

            ದಯವಿಟ್ಟು ಪುಸ್ತಕಗಳ ಮಾಹಿತಿಗಾಗಿ ನಿಮ್ಮ ಮಿಂಚಂಚೆ ವಿಳಾಸ ತಿಳಿಸಿರಿ.

          • ಶಕುಂತಲಾ ಅವರೇ,
            ನನ್ನ ಮಿಂಚಂಚೆ: sssomashekhara@gmail.com
            ಧನ್ಯವಾದಗಳು, ದಯವಿಟ್ಟು ಮಾಹಿತಿಯನ್ನು ಕಳುಹಿಸಿಕೊಡಿ

    • ಪೂಜ್ಯ ಗುರುಗಳೇ,

      ಇಲ್ಲಿ ಕುಶಲ.ನೀವೂ ಹಾಗೆಂದು ಭಾವಿಸುವೆ.ನನ್ನ ಪದ್ಯವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.ಅಂತೆಯೇ ನನ್ನ ತೀರ್ಥರೂಪರ ಸಾಹಿತ್ಯ ಸಾಧನೆಯ ಕುರಿತು ಪದ್ಯಪಾನ ಬಳಗಕ್ಕೆ ತಿಳಿಸಿದ್ದು ಮುದ ನೀಡಿತು.ನಿಮ್ಮ ಪುಸ್ತಕಗಳಲ್ಲಿ ,ಭಾಷಣಗಳಲ್ಲಿ ಈ ಮೊದಲು ಹಲವು ಬಾರಿ ಅವರ ಪಾಂಡಿತ್ಯದ ಬಗೆಗೆ ಆದರಾಭಿಮಾನಗಳನ್ನು ವ್ಯಕ್ತಪಡಿಸಿದ್ದೀರಿ.ಅದು ನಿಮ್ಮ ದೊಡ್ಡಗುಣ ಹಾಗೂ ಅವರ ವಿದ್ವತ್ತಿಗೆ ಸಂದ ಹಿರಿದಾದ ಮತ್ತು ಘನವಾದ ಮನ್ನಣೆ! ಅದಕ್ಕಾಗಿ ಕೃತಜ್ಞತೆಗಳು.

      • ಧನ್ಯವಾದಗಳು,ಶ್ರೀ ಪ್ರಸಾದು ಅವರಿಗೆ.

  33. A few attempts .. Will post as separate messages.

    नयनसुमधुरो मे प्राणनाथो दिनान्ते
    सदनमधिगतोऽसौ दर्शनेनैव नूनम् ।
    शमयति हृदि तापं वर्तमानं वियोगा-
    -दिति मननरता सा गेहकार्यातिदूरा ॥

    ಭಾವಾರ್ಥ – ಚೆಲುವ ನನ್ನ ಪ್ರಾಣನಾಥ ಸಾಯಂಕಾಲ ಮನೆಗೆ ಬಂದು ಅವನ ದರ್ಶನದಿಂದಲೇ ನೊಂದಮನನ್ನು ಶಾಂತಮಾಡುತ್ತಾನೆ ಎಂದು ಮನೆಯಕೆಲಸವನ್ನು ಮರೆತವಳು ಯೋಚಿಸಿದಳು.

    • ಕೆ.ಎಸ್.ನ.ರವರ ಕವನ ‘ಅಕ್ಕಿ ಆರಿಸುವಾಗ’ ನೆನಪಿಗೆ ಬರುತ್ತದೆ:
      ಮನೆಗೆಲಸ ಬೆಟ್ಟದಷ್ಟಿರಲು, ಸುಮ್ಮನೆ ಇವಳು ಚಿತ್ರದಲಿ ತಂದಂತೆ ಇಹಳು…

    • ನರೇಶರೆ ನಿಮ್ಮ ಹೊಸ ಕಲ್ಪನೆಗಳು, ಚೆನ್ನಾಗಿವೆ

  34. ಸೀತೆ, ಶಕುಂತಲೆಯರನ್ನು ಬದಿಗಿಟ್ಟು ಚಿತ್ರದಿಂದ ಬಂದೊಂದ ಸಾಮಾನ್ಯ ಕಲ್ಪನೆ.
    करे धरन्ती नवपुष्पबन्धनं
    स्मराभितप्ता गमिता प्रियात्मनि ।
    शृणोति संगीतरवं नगोत्थितं
    यतौ न तस्याः क्वचिदीक्षणं तदा ॥

    ಭಾವಾರ್ಥ -ಕೈಯಲ್ಲಿ ಹೂವುಗಳ ಬಂಧನವನ್ನು ಧರಿಸಿದ ಇವಳು ಮನ್ಮಥನಿಂದ ಕಾಡಿಸಲ್ಪಡಲಾಗಿ, ಪ್ರಿಯನನ್ನು ನೆನೆಯುತ್ತಾ ಪರ್ವತದಲ್ಲಿ ಸಂಚರಿಸುವ ಗಾಳಿಯಿಂದ ಮೂಡುವ ಸಂಗೀತವನ್ನು ಕೇಳುತ್ತಾ ಕುಳಿತಳು. ಆಗ ಬಂದ ಯತಿಯಲ್ಲಿ ಅವಳ ಪರಿವೆಯೇ ಇಲ್ಲ.

  35. ಇದರಲ್ಲಿ ಸೀತೆಯೆಂದು ಭಾವಿಸಿ ಒಂದು ಪ್ರಯತ್ನ
    काचिद्बाल्ये क्षतिरपि न मे स्यादितीच्छा तवासीत्
    गाढप्रीत्या सकलसुविधं कल्पितं पालनेषु ।
    स त्वं तात प्रिय जनपते वन्यवासं ममैनं
    सोढुं शक्तः कथमपि भवेर्मामकीनक्षमार्थम् ॥

    ಭಾವಾರ್ಥ – ಚಿಕ್ಕಂದಿನಲ್ಲಿ ನನಗೆ ಸ್ವಲ್ಪವೂ ಕಷ್ಟಬರಬಾರದೆಂಬ ಇಚ್ಛೆಯಿತ್ತಲ್ಲವ ನಿನಗೆ. ಹಾಗೆ ಪ್ರೀತಿಯಿಂದ ಬೇಕಾದದ್ದನ್ನೆಲ್ಲಾ ಮಾಡಿಕೊಡಿಸಿದೆ. ಅಂತಹ ಓ ನನ್ನ ಪ್ರೀತಿಯ ತಂದೆ, ನೀನು ನನ್ನ ಈ ವನವಾಸವನ್ನು ಹೇಗಾಗರೂ ಮಾಡಿ, ನನಗೋಸ್ಕರವಾಗಿ, ಸಹಿಸು.

    • अयि नरेश।

      १। “मामकीन”-शब्दो नावगतः – विवर्णयतात्।

      २। किं भवता स्वकृतिभ्योऽन्यैर् दत्तोत्तराणां सूचना विपत्रैः प्राप्यते?

      • विश्वास, वन्दे ।
        १. मामकीनः = मम अयम् । विशेषणम् एतत् । त्रिषु लिङ्गेषु भवति ।
        २. नैव प्राप्यन्ते । यदा यदा अत्र यामि तदैव पश्यामि ।

  36. सूर्यो हित्वातिदहनपदं रम्यरूपं निधत्ते
    मेघा भूयो नभसि किरणान् वारयन्तो वहन्ति ।
    अद्रेर्वायुर्विगतरभसो वाति विश्रामहेतोः
    तस्मिन् काले रमणरहितं दृष्टिदूरे किमास्से ॥

    ಭಾವಾರ್ಥ – ಆಹಾ. ಎಂಥ ಒಳ್ಳೆ ದಿನ. ಸೂರ್ಯ ಹೆಚ್ಚು ಬೇಯಿಸುತ್ತಿಲ್ಲ. ಮೋಡಗಳೂ ಮಧ್ಯೆ ಮಧ್ಯೆ ನೆರಳ ಕೊಡುತ್ತಿವೆ. ಹಾಗೆ ಬೆಟ್ಟಗಳಿಂದ ತಂಪಾದ ಗಾಳಿ ಬೀಸುತ್ತಿದೆ. ಇಷ್ಟೆಲ್ಲಾ ಇದ್ದರೂ ಪೆಚ್ಚುಮೋರೆ ಹಾಕಿಕೊಂಡು, ದೂರ ನೋಡುತ್ತ ಏಕೆ ಕುಳಿತೆಯೇ?

  37. रामस्य चिन्तनरता मनुते सुशीला
    कोदण्डपाणिरभियाति सदाभिरामः ।
    को दण्डपाणिरभियाति सदाभिरामोऽ
    दृष्ट्वा मुनिं जनकजाधिजगाम शापम् ॥

    ’कोदण्डपणिः सदाभिरामः अभियाति’ इति रामस्य चिन्तनरता सुशीला मनुते । (तदा) ’कः दण्डपाणिः सदाभिरामः अभियाति’ इति मुनिम् अदृष्ट्वा जनकजा सीता शापम् अभिजगाम ।

    ಭಾವಾರ್ಥ – ಸುಶೀಲೆಯು ’ಸದಾ ಸುಂದರನಾದ ಕೋದಂಡಪಾಣಿಯು ಬರುತ್ತಾ’ನೆಂದು ರಾಮನ ಯೋಚನೆಯಲ್ಲಿ ನಿರತವಾಗಿದ್ದಳು. ಆಗ ಯಾರೋ ದಂಡಪಾಣಿಯು (ಕೈಯಲ್ಲಿ ಕೋಲುಹಿಡಿದು ಬಂದು ಯತಿಯು) ಸದಾ (ಸದ್ಗುಣೇನ) ಅಭಿರಾಮಃ (ಹಿತಕರನು) ಬರುವನೆಂದು ನೋಡದ ಸೀತೆಯು ಶಾಪಗ್ರಸ್ತಳಾದಳು.

    • ನರೇಶ
      ನಿಮ್ಮ ಎಲ್ಲ ಪದ್ಯಗಳು ಚೆನ್ನಾಗಿವೆ. ಈ ಪದ್ಯದ ಬಗೆಗೆ ಒಂದು ಅನುಮಾನ. ಸೀತೆ ಯಾವ ಮುನಿಯಿಂದ ಶಾಪಗ್ರಸ್ತಳಾದಳು? ಅದು ಶಕುಂತಲೆಯಲ್ಲವೆ?

      • ಕಾಮೆಂಟ್ಗಳ ನೋಡಿ ಸಂತೋಷ.

        ಶ್ರೀಕಾಂತರೆ, ಚಿತ್ರದಿಂದ ಮೂಡಿದ ಕಲ್ಪನೆಯಷ್ಟೇ. ಹಾಗೂ, ಕಲ್ಪನೆಯಲ್ಲಾದರೂ ಶಾಪ ಕೊಡಿಸುವಾಗ ಸ್ವಲ್ಪ ಬೇಜಾರೇನೊ ಆಯ್ತು. ಪಾಪ ಅಂತಹ ಕಷ್ಟಪಟ್ಟವಳಿಗೆ ಇನ್ನೊಂದು ಶಾಪವೇ ಅಂತ!

    • ಪ್ರಿಯ ನರೇಶ,
      ನಿಮ್ಮ ಪದ್ಯಗಳು ತುಂಬ ಅಡಕವಾಗಿ ಚೆನ್ನಾಗಿವೆ. ಕೆಲವು ಪ್ರಯೋಗಗಳನ್ನು ಕಲುಯಲೂ ಆಸ್ಪದವಾಗುತ್ತಿದೆ. भवेर्मामकीनक्षमार्थम् ಹಾಗೂ किमास्से ಇವುಗಳನ್ನು ಬಿಡಿಸಿ ತಿಳಿಸಿ.

      • ಪ್ರಸಾದು, thank you.
        भवेः मामकीनक्षमार्थम्
        भवेः = भू धातोः विधिलिङ् लकारे मधमपुरुषे एकवचनम् । ’सोढुं शक्तः भव’ इत्यर्थः ।
        किम् आस्से । आस् धातोः लटि म.पु.एक. । किमर्थम् एवम् उपविशसि इत्यर्थः।

  38. During the hijack of Seeta, Ravana did not break journey anywhere (ಲವವೂ) in the Kerala country.
    ಸಾಂಗತ್ಯ||
    ಅವನಂದು ಸೀತೆಯನಪಹರಿಸೊಯ್ವಾಗ
    ಲವ ನಿಂದನೇಂ ಕೇರಳದೊಳು?
    ರವಿ(ವರ್ಮ) ಕೇರಳೀಯನಾದುದರಿಂದಲಲ್ತೆಲೆ
    ಛವಿಯಂತಿಹುದು ವಸ್ತ್ರದ್ದವಳ|

  39. How come she has no cracked heels?
    ಸಾಕಷ್ಟು ವಾರಂಗಳ್ ವನವಶೋಕದೊಳಂಗೆ
    ಶೋಕದಿಂ ಸೀತೆ ತಾ ಕಳೆಯಲ್|
    ಹೋಕಳಾಗಿದ್ದಾಗಳ್ ಕಾಡೊಳು ಪಾದವ-
    ದಾಕಾರಗೆಟ್ಟಿಂದು ನುಣುಪುಂ||

  40. ರಾಮನಿಗೆ ಕಾಣದ ರಾವ
    ಣನ ಕೊಂದ ಮನ ರವಿಕುಂಚಕೆ ಕರಗಿ ನೋಡಾ ।।
    ತಿಳಿಯದೆ ನಿನಗದು ನಿನ್ನ ಮ
    ನ ತಿಳಿವುದೊಬ್ಬಗೆ ಅದು ರಘುವಂಶಜಗೆ ಕಣಾ ।।

    ತಪ್ಪಿದ್ದಲ್ಲಿ ಕ್ಷಮಿಸಿ, ತಿದ್ದಬೇಕೆನ್ದು ವಿನಂತಿ….!!

    • ವೇದಪ್ರಕಾಶರಿಗೆ ಪದ್ಯಪಾನಕ್ಕೆ ಸ್ವಾಗತ :),

      ನಿಮ್ಮ ಪದ್ಯದ ಅರ್ಥ ಪೂರ್ಣವಾಗಿ ತಿಳಿಯಲಿಲ್ಲ, ಹಾಗು ಕಂದ ಪದ್ಯದ ನಿಯಮಗಳನ್ನು ಇನ್ನೊಮ್ಮೆ ಗಮನಿಸಿಕೊಳ್ಳಿರಿ (http://padyapaana.com/?page_id=438). ಕೆಳಕಂಡ ದೋಷಗಳು ಸುಳಿದಿವೆ:
      1. ಮೊದಲನೇಯ ಸಾಲಿನ ಮೂರನೆಯ ಗಣ (ದ ರಾವ) ಜಗಣವಾಗುವಂತಿಲ್ಲ
      2. ನಾಲ್ಕನೇಯ ಸಾಲಿನ 3ನೇ ಗಣ ಜಗಣ ಅಥವಾ ಮೊದಲಕ್ಷ್ರರದಲ್ಲಿ ಯತಿಯಿರುವ ಸರ್ವಲಘು ಆಗಿಲ್ಲ
      3. ತಿಳಿವುದೊಬ್ಬಗೆ ಅದು -> ತಿಳಿವುದೊಬ್ಬಗದು ಸಂಧಿಯಾಗಲೇಬೇಕು
      4. ಆದಿಪ್ರಾಸ ಬಿಟ್ಟುಹೋಗಿದೆ.

      ದೋಷಗಳನ್ನಷ್ಟೆ ತೋರಿಸಿದ್ದೇನೆಂದು ಬೇಸರಿಸದಿರಿ, ಆರಂಭದಲ್ಲಿ ಹೀಗಾಗುವುದುಂಟು.

      • ತಿದ್ದಿಕೊಟ್ಟಿದ್ದಕ್ಕೆ ಧನ್ಯವಾದಗಳು….ಅಶೋಕವನದಲ್ಲಿದ್ದ ಸೀತೆಯ ಮನಸ್ಸು ರಾಮನಿಗೆ ಕಾಣಲಿಲ್ಲ, ಆದರೆ ಅದು ರವಿ ವರ್ಮರ ಚಿತ್ರ ಸೆರೆ ಹಿಡಿದಿದೆ. ಮತ್ತು ರಾಕ್ಷಸ ಸಂಹಾರ ಮಾಡಿದ ಸೀತೆಯ ಮನಸ್ಸಿನ ಶಕ್ತಿ ಅವಳಿಗೆ ತಿಳಿಯಿತೋ ಇಲ್ಲವೋ, ಆದರೆ ಅದು ಕಾಳಿದಾಸ/ ರಾಮ ( ರಘುವಂಶಜ) ನಿಗೆ ಕಂಡಿತು….ಎನ್ದು ಮಾಡಲು ಪ್ರಯತ್ನ ಮಾಡಿ ಅದು ಹೀಗಾಗಿದೆ…. ನೀವು ನೀಡಿದ ಅಂಶಗಳೊ೦ದಿಗೆ ಮತ್ತೊಮ್ಮೆ ಪರಿಷ್ಕರಿಸಿ ಬರೆವ/ ತಿದ್ದುವ ಪ್ರಯತ್ನ ಮಾಡುವೆ …… ಮತ್ತೊಮ್ಮೆ ಧನ್ಯವಾದಗಳು….

    • ವೇದಪ್ರಕಾಶರೆ,
      ನನಗೆ ತಿಳಿದಂತೆ ಸವರಿದ್ದೇನೆ:

      ಕಾಣಂ ರಾಮಂ ಸೀತೆಯ
      ತಾಣಂ-ಪಾಡನಿನವರ್ಮ ಸಲೆ ಕಂಡಂ ತಾಂ|
      ಕೌಣಪರಂ ಗೆಲ್ದುದಕಂ
      ಸಾಣೆಯವಳ ಶಕ್ತಿಗಂ ಪಿಡಿದ ಕಾಳ್ಯನುಗಂ||
      (ಇನವರ್ಮ=ರವಿವರ್ಮ. ಕೌಣಪರು=ರಾಕ್ಷಸರು. ಕಾಳ್ಯನುಗ = ಕಾಳಿದಾಸ)

      • ಭಾವಕ್ಕೆ ಪದ್ಯರೂಪ ಕೊಟ್ಟಿದ್ದಕ್ಕೆ ಧನ್ಯವಾದಗಳು….. ಮತ್ತೊಮ್ಮೆ ಪ್ರಯತ್ನ ಮಾಡುವೆ…

        • ಇದೇ ಭಾವಾರ್ಥದಲ್ಲಿ ನಾನೂ ಒಂದು ಪದ್ಯವನ್ನು ಬರೆಯ ಬೇಕೆಂದಿದ್ದೆ.. ನೀವೇ ಬರೆದಿರಿ.. 🙂

          ಕಂದರದಶನಮದಟದೊಳ್
          ಕೊಂದಾದಿತ್ಯಕುಲ ತಿಲಕನುಂ ಸಲೆ ಕಾಣನ್ |
          ಚಂದಿರಮೊಗದವಳಳಲನ್
          ಕುಂದದೆಕಂಡ ರವಿವರ್ಮ ಕಲೆಗಾರನವೊಲ್

          ಕಂದರದಶ : ರಾವಣ
          ಅದಟದೊಳ್ : ಶೌರ್ಯದೊಳ್
          ಆದಿತ್ಯಕುಲತಿಲಕನುಂ : ರಾಮನೂ
          ಚಂದಿರ ಮೊಗದವಳ : ಸೀತೆಯ
          ಅಳಲನ್ : ದುಃಖವನ್ನು

      • ಹೃ.ರ‍ಾ,
        ’ಕಲೆಗಾರನವೊಲ್’ ಗಿಂತ ’ಕಲೆಗಾರಂ ದಲ್’ ಎಂದರೆ ಇನ್ನೂ ಸೊಗಯಿಸುತ್ತದಲ್ಲವೆ?

        • ಹೌದು ಪ್ರಸಾದ್, ಅರ್ಥ ಬೇರೆಯಾದರೂ, ಎಫ್ಫೆಕ್ಟಿವ್ ಆಗಿ ಕಾಣ್ಸತ್ತೆ. ಧನ್ಯವಾದಗಳು.

  41. ಚಿಂತೆ ಕಾಡುತಿದೆ ಇನ್ನು
    ಮುಂಚೆ ಇದ್ದ ಪ್ರೀತಿ ಸಿಗಲಾರದೆಂದು
    ಹಂಚಿನಂತಾಗಿದೆ ಬದುಕು
    ಕೊಂಚವೂ ಉಳಿದಿಲ್ಲ ಧರೆಯಲಿ ನನ್ನದೆಂದು

    • ಪ್ರಭಂಜನರೆ,
      ಮೊದಲ ಸಾಲಿನಲ್ಲಿ ಮಾತ್ರ ಪ್ರಾಸ ತಪ್ಪಿದೆ (ಇದೀಗ ಸಂಪನ್ನಗೊಂಡ ಟೆನ್ನಿಸ್ ಯು.ಎಸ್. ಓಪನ್ ಪರಿಭಾಷೆಯಲ್ಲಿ ಇದು 1-6, 6-2, 6-3, 6-4 ಗೆಲುವು ;)). ಛಂದೋದೋಷಗಳಿವೆ. ಬಿಡದೆ ಪ್ರಯತ್ನ ಮುಂದುವರಿಸಿ.
      ನನಗೆ ತಿಳಿದಂತೆ ಸವರಿದ್ದೇನೆ:

      ಸಂಚಿತವು ಕಾಡುತಿರ್ಪುದು
      ಮುಂಚಿನೊಲನುರಾಗ ದಕ್ಕದೆನಗೆಂದೆನುತುಂ|
      ಹಂಚಿಹರಿದಿರ್ಪುದು ಬದುಕು
      ಕಿಂಚಿತ್ತುಮುಳಿದಿರದೆನ್ನ ಬಾಳೊಳಗೇನುಂ||

      ನೀವು ಆ ಮೊದಲಸಾಲಿನ ’ತ’ಕಾರಪ್ರಾಸವುಳಿಸಿಕೊಂಡು (ಚಿಂತೆ) ಸವರಲು ಪ್ರಯತ್ನಿಸಿ

      • ಪ್ರಭುಗಳೇ ,

        ತುಂಬಾ ಸುಂದರವಾಗಿ ತಿದ್ದಿದ್ದಿರ … ಮತ್ತು ನಿಮ್ಮ ಹೋಲಿಕೆ ರಮಣೀಯ.
        . ಛಂದಸ್ಸಿನ ಮೇಲೆ ಇನ್ನು ಹಿಡಿತ ಕಮ್ಮಿ! ನನ್ನ ಪ್ರಯತ್ನ ಮುಂದುವರಿಸುವೆ
        ಧನ್ಯವಾದಗಳು

      • ಚಿಂತೆಯಲ್ಲಿ ಮುಳುಗಿ ಮರುಗದಿರು
        ಕಾಂತೆ, ಸುರಿಸದಿರು ಸೊರಗಿದ ಕಂಗಳಲಿ ಕಣ್ಣೀರ
        ಶಾಂತವಾಗಿರು ಸಮಯ ಬರುತಲಿ
        ಭ್ರಾಂತರಾದವರು ಬವಣೆ ಸರಿಸುವರು ನಿಜವರಿತು

        ’ತ’ಕಾರಪ್ರಾಸವುಳಿಸಿಕೊಂಡು (ಚಿಂತೆ) ಸವರಿದ್ದೇನೆ: ಹಾಗೆ ಛಂದಸ್ಸು ಪ್ರಯತ್ನ ಮಾಡಿದ್ದೇನೆ .. ಓದಿ ತಿದ್ದಿ.

      • ೧) ‘ನಿಮ್ಮ ಹೋಲಿಕೆ ರಮಣೀಯ’ ಎಂದಿರೆ? ಆತ್ಮಶ್ಲಾಘವಾಯಿತಲ್ಲ! ಕಾರಣ, ಅದು ನಿಮ್ಮದೇ ಹೋಲಿಕೆ. ನಾನು ಪುನಾರಚಿಸಿದೆ ಅಷ್ಟೆ.
        ೨) ನನ್ನನ್ನು ‘ಪ್ರಭು’ ಎನ್ನದಿರಿ. ನನಗೆ ಯಾವುದೇ ಆಸ್ಥಾನವಿಲ್ಲ. ಈ ಬ್ಲಾಗ್‍ನ ಯಾವುದೋ ವ್ಯೋಮಮೂಲೆಯಲ್ಲಿ surreal ಆಗಿ ಕುಳಿತಿರುವೆ 🙂
        ೩) ನೀವು ಹೇಳಿರುವುದು ಸರಿ. ಛಂದಸ್ಸಿನ ಮೇಲೆ ನನ್ನ ಹಿಡಿತ ಅಲ್ಪವೇ 😉

        • ಪ್ರಸಾದರೆ,

          ಪುನಾರಚನೆ ಸುಂದರವಾಗಿದೆ
          ಟಿನ್ನಿಸ್ ಅಂಕಗಳಿಗೆ ಹೋಲಿಸಿದ್ದು ರಮಣೀಯವಾಗಿದೆ 🙂

  42. ಇನ್ನನೆನಗೆ ಪತಿಯಾದುದೆ
    ನನ್ನಯ ಸೌಭಾಗ್ಯಮೆಂದು ನಲಿಯುತೆ ಕುಳಿತಳ್
    ಚೆನ್ನಗೆ ಕಾಯುತೆ ಜಾನಕಿ
    ಚಿನ್ನದ ಜಿಂಕೆ ತರವೋದ ಸಿರಿರಾಮಗೆ ತಾಂ

    • ಪದ್ಯಕ್ಕೆ ಬೇರೆಯದೇ ಸಂದರ್ಭ ಕಲ್ಪಿಸಿದ್ದೀರಿ, ಚೆನ್ನಾಗಿದೆ.
      ಇನವಂಶದವನು ‘ಇನ್ನ’ ಎಂತಲೋ, ಬೇರೆ ನಿಷ್ಪತ್ತಿ ಇದೆಯೋ ದಯವಿಟ್ಟು ತಿಳಿಸಿ.

      • ಧನ್ಯವದ ಪ್ರಸಾದು. ಇನ್ನನು ಎಂದರ್ರೆ ಇಂಥವನು ಎಂದರ್ಥ

        • ಶ್ರೀಕಾಂತರೇ! ಒಳ್ಳೆಯ ಕಲ್ಪನೆಯುಳ್ಳ ಪದ್ಯವನ್ನೇ ನೀಡಿದ್ದೀರಿ; ಧನ್ಯವಾದ.

          @ಪ್ರಸಾದು; ಹಲವರು ಹೊಸಗೆಳೆಯರ ಪದ್ಯಗಳನ್ನು ತಾಳ್ಮೆಯಿಂದ ತಿದ್ದಿ, ವಿವರಿಸಿ ನಮಗೆಲ್ಲ ಉಪಕರಿಸಿದ್ದೀರಿ; ಧನ್ಯವಾದಗಳು

    • ಶ್ರೀ ಗಣೇಶ್‍ರವರೆ,
      ಧನ್ಯವಾದ-ಅಭಿವಾದಗಳನ್ನು ಹೇಳಬೇಕಾದವನು ನಾನು, ನನ್ನನ್ನು ಇಷ್ಟುಮಟ್ಟಕ್ಕೆ ಬೆಳೆಸಿದ ನಿಮಗೆ. ನಮಸ್ಕುರ್ಮೋ ಯಥಾಬಲಂ.

  43. (ಬರಗಾಲದ ವಾತಾವರಣವನ್ನು ಬಿಂಬಿಸುವ ಚಿತ್ರದ ಕಲ್ಪನೆಯಲ್ಲಿ.)
    ಹಸಿವು ಬಾಯಾರಿಕೆಗಳನ್ನು ನೀಗಿಸಿಕೊಳ್ಳುವ ಸಲುವಾಗಿ ಭಿಕ್ಷೆ ಬೇಡಲು ತನ್ನ ಹಸುಳೆಗಳನ್ನು ಕರೆದು ಕೊಂಡು ಹೋದ ಪತಿ ಇನ್ನೂ ಬರಲಿಲ್ಲವಲ್ಲ ಎಂದು ಆತನ ಪತ್ನಿ ಚಿಂತಿಸುವ ಕಲ್ಪನೆಯಲ್ಲಿ ಬರೆಯಲ್ಪಟ್ಟಿದೆ.

    ಪಸಿರಿಲ್ಲದನೆಲ! ದಾವರ
    ಪಸಿವಿಂ ತೊಳಲಾಡುತಿರ್ಕುಮೆನ್ನಯ ಕುಡಿಗಳ್ |
    ಪಸದೊಳ್ ಬೈಕಂದಿರಿಯಲ್
    ಪಸುಳೆಗಳೊಡಗೂಡಿ ಪೋದನೆತ್ತನ್ ನಲ್ಲನ್ ||

    ಪಸಿರು : ಹಸಿರು
    ದಾವರ : ಬಾಯಾರಿಕೆ
    ಪಸ : ಬರ, ಕ್ಷಾಮ
    ಬೈಕಂದಿರಿಯಲ್ : ಭಿಕ್ಷೆ ಬೇಡಿಕೊಂಡು ತಿರಿಯಲು.

    • ಮೂರನೆಯ ಪಾದದಲ್ಲಿ ಒಳ್ಳೆಯ ಶ್ಲೇಷ ಇಟ್ಟಿದ್ದೀರಿ – Bikeನಲ್ಲಿ ಹೋದ ಎಂದು 😉
      ಮೂರು ಪದಗಳನ್ನು ಕಲಿತಂತಾಯಿತು, ಧನ್ಯವಾದ.

  44. ಕಾಯುತಿಹಳು ಸೀತ ಬಹು ಸಮಯದಿಂ
    ಭಯವ ಸೂಸುತ ಕಲ್ಲೇರಿ ಕುಳಿತು
    ಕಾಯುತ ಕಾವಿ ಕಮಂಡಲ ಹಿಡಿದು ಉ
    ಪಾಯದಿ ಬಂದಿರುವನು ಅಪಹರಿಸಲು

    • ಪ್ರಿಯರೇ! ನೀವು ದಯಮಾಡಿ ಮೊದಲು ಛಂದಸ್ಸಿನ ಪಾಠಗಳನ್ನು ಚೆನಾಗಿ ಗಮನಿಸಿಕೊಂಡು ಆ ಬಳಿಕ ಪದ್ಯಗಳ ನಿರ್ಮಾಣದತ್ತ ಗಮನ ಹರಿಸಿರಿ.

      • gurugale,

        neevu tilisidante maduthene, kalikeyali kelavu chandassu innu nanage arthavaguthila,
        prayatna munduvarisuthene.

        dhanyavadagalu

  45. ಕುಡಿತದ ಚಟಕ್ಕಾಗಿ ತನ್ನೆಲ್ಲಾಭರಣಗಳನ್ನು ಮಾರಿದ ಗಂಡನಿಂದ ತನಗೊದಗಿದ ದುಸ್ಥಿತಿಗಾಗಿ ಯೋಚಿಸುತ್ತಿರಬಹುದೇ ?

    ಪೊನ್ನತುಡಿಗೆಯಂ ವಿಕ್ರಯಿ-
    ಸೆನ್ನನಿರಾಭರಣೆಯಂತೆ ಮಾಳ್ದನ್ ದಯಿತನ್ |
    ಬಿನ್ನಗೆ ಚಿಂತಿಸೆ ಫಲಮೇನ್
    ತನ್ನನಿಟಿಲದೆ ಬರೆದಿರ್ಪುದಂ ತಡೆವವರಾರ್ ||

    ದಯಿತ : ಪತಿ
    ಬಿನ್ನಗೆ : ಸುಮ್ಮನೆ,

    • ೧) ‘ಬೆನ್ನಿಗೆ’ ಪ್ರಯೋಗ ಚೆನ್ನಾಗಿದೆ
      ೨) ದೋಷ ಎಂದಲ್ಲ. ಮೊದಲ ಮೂರು ಪಾದಗಳು direct speechನಲ್ಲಿರುವುದರಿಂದ, …ಫಲಮೇನೆನ್ನನಿಟಿಲದೆ … ಎಂದು ತಿದ್ದಬಹುದಲ್ಲವೆ?

  46. ಬೆಂಗಾಡು ಬಿಸಿಲಿಗೆ ಕಂಗಾಲಾಗಿಹ ಚೆನ್ನೆ
    ಚೆಂಗಣ್ಣೆ ನೀರು ಕೊಡಲೇನೆ? ಈಚಲ
    ಹಂಗೇಕೆ ನೀರೆ ಕುಡಿ ಕೊಳ್ಳೆ

    ಎಲ್ಲರೂ ಸೀರಿಯಸ್ಸಾಗೆ ಸೀತೆ ಎಂದಿದ್ದಾರೆ; ಒಂದಾದರೂ ಇರ್ರೆವೆರೆಂಟ್ ಪದ್ಯ ಇರಬೇಡವೆ?

    • ಸೀತೆsಯೀಕೆಯಳೆಂದುs ಗೀತೆsಯೊಳ್ ಪೇಳರ್ದೆs
      ಬೇತುsಕೊಂಡಿರ್ಪೆs ಗದ್ಯsದೊಳ್| ಜೀವೆಂಕ
      ಪ್ರೀತsವಂತವಳಿಂಗೀಚsಲs||

      • ನನ್ನ ಮೊದಲ ತ್ರಿಪದಿ, ಛಂದೋಬದ್ಧವಾಗಿದೆಯೇ ನೋಡಿ..

        ಬಾಲೆ ಬೆಡಗ ನೋಡಿ ವಾಲೆಯ ಮರ ನಿಮಗೆ
        ಕೈಲಿಲ್ಲದೀಚಲ ಮರವಾಯ್ತೆ? ದಣಿಯದ
        ಬಾಲೆಗೆ ನೀರ ನೀಡುವಿರೇನ್ ?

        ವಾಲೆಮರ : ತಾಳೆಮರ ( in the picture, the tree shown is Palmyra palm)
        ಕೈಲು : ಈಚಲ ಹಣ್ಣಿನ ಗೊಂಚಲು

      • http://padyapaana.com/?page_id=1024 ಪ್ರಕಾರ ನನನನನ (ಮರ ನಿಮಗೆ) ಹಾಗೂ ನಾನನನಾ (ನೀಡುವಿರೇನ್)ಗಳಿಗೆ ಅವಕಾಶವಿಲ್ಲ. ಸವರಿಸಿ.
        2) ’ಕೈಲಿಲ್ಲ’ ಬದಲು ’ಹೋಲಿಕೆ’ ಪದ ಬಳಸಿಕೊಳ್ಳಬಹುದೇನೋ.

      • ಹೃದಯರಾಮರೆ
        ತಾವು ಯಾವ ಬಗೆಯ ತ್ರಿಪದಿಯನ್ನು ರಚಿಸ ಹೊರಟಿರಿ? ಅಂಶಗಣಯುಕ್ತವಾದ ಮೂಲರೂಪದಲ್ಲೋ ಅಥವಾ ಅನಂತರದ ಪರಿವರ್ತಿತರೂಪವಾದ ಮಾತ್ರಾಗಣಗಳದ್ದೋ? ಎರಡೂ ರೀತಿಯಿಂದ ನಿಮ್ಮ ಪದ್ಯದಲ್ಲಿ ತಪ್ಪುಗಳಿವೆ. ಪ್ರಸಾದರು ಅಂಶಗಣದ್ದೆಂದು ಭಾವಿಸಿ ತಿದ್ದಿದ್ದಾರೆ. ಅಂಶಗಣದ್ದೇ ಆದಲ್ಲಿ ಎರಡನೆಯ ಪಾದದ ಎರಡನೆಯ ಗಣ ಬ್ರಹ್ಮವಾಗಬೇಕು. ವಿಷ್ಣುವಲ್ಲ. ಮುಂದೆ ಮೂರನೆಯ ಪಾದದ ಕೊನೆಯಗಣ ವಿಷ್ಣುವು. ರುದ್ರವಲ್ಲ.

        ಪ್ರಾಸವನ್ನು ಸರಿಯಾಗಿ ಇಟ್ಟಿದ್ದೀರ. ಒಳಿತು.

      • ‘ಅಂತೆ’ ಎಂದರೆ ಸಾಕೆ, ಇಂತಿಷ್ಟೂ ಪ್ರೂಫಿಲ್ದೆ?
        ಎಂತಾಯ್ತು ಪ್ರೀತಿ ಈಚಲೊಳ್ ಸೀತೆಗೆ?
        ಕಂತೆಯ ಹಾದಿರಂಪಯ್ಯ

      • ಎಂದೆಂದೂ ‘ರಂಪಾರ್ಯ’ರೆಂದೆನ್ನುತಿದ್ದವರ್
        ಇಂದೆಂದಿರಿರಲೈ ‘ರಂಪಯ್ಯ’| ಪೇಳಿರ್ಪ
        ಳೆಂದೋನೆ ಸೀತೆ ಕನಸಿನೊಳ್|| (ತನಗೆ ಈಚಲು ಇಷ್ಟ ಎಂದು)

      • ಅಯ್ಯಾ ಎಂದೊಡೆ ಸ್ವರ್ಗವಯ್ಯ ಮೇಣ್ ತಿಳಿಯರೇಂ
        ಅಯ್ಯಾ ತದ್ಭವವೈ ‘ಆರ್ಯ’ದ; ಕನಸಿನೊಳ್
        ಒಯ್ಯಾದೆ ತೋರೈ ಸಾಕ್ಷಿಯ

        • ನಿಖರವಾಗಿ ಇದೇ ಪ್ರತಿಕ್ರಿಯೆ ಬರುತ್ತದೆ ಎಂದು ತಿಳಿದಿತ್ತು 🙂
          ಭವವನ್ನು ಬಿಟ್ಟು ತದ್ಭವವನ್ನು ನೀನಿಂತು
          ಜವದಿಂದಲಾಶ್ರಯಿಸಲೇಕೈ| ವೇಂಕಾರ್ಯ
          ಸವಿಯಾದ ಕನಸೇಂ ನನಸಿನ್ನೇಂ||

    • ಜೀವೆಂ
      ನಾನು ಸಂದರ್ಭವನ್ನು ಬದಲಾಯಿಸಿ ಭಾವನೆಯನ್ನೂ ಬದಲಾಯಿಸಿದ್ದೆ. ನೀವು ಅದನ್ನೇ ಮುಂದುವರಿಸಿ ಪಾತ್ರವನ್ನೇ ಬದಲಿಸಿದ್ದೀರ 🙂

      @ಪ್ರಸಾದು
      ತ್ರಿಪದಿಯಲ್ಲಿ ನೀವು ನಿಮ್ಮ ಯಾವಾಗಿನ ತಪ್ಪನ್ನು ಮತ್ತೆ ಎಸಗಿದ್ದೀರ. ಮೊದಲ ಪಾದದಲ್ಲಿ ಮೊದಲನೆಯ ಮತ್ತು ಮೂರನೆಯ ಗಣಗಳ ಮಧ್ಯೆ ಪ್ರಾಸವಿರಲೇ ಬೇಕು 🙂

  47. ಅವಳು ಸೀತೆಯಾದರೆ ರಾಮನಿಗಾದಳು; ಶಕುಂತಲೆಯಾದರೆ ದುಷ್ಯಂತನಿಗಾದಳು… ನನಗೆ ಬಂದ ಭಾಗ್ಯ (ನಿಜಭಾಗ್ಯ) ಏನು?

    ಸೀತೆಯೋ ಶಾಕುಂತಲೆಯದಾದೊಡೇನಾಕೆ
    ಸೂತಳೋ ಮೇಣಿನ್ನದಾವಾವಳೋ|
    ಚೇತನವ ತುಂಬುವಳು ರಾಮ-ದುಷ್ಯಂತರ
    ರ್ಗೇತರದೊ ನಿಜಭಾಗ್ಯ -ಹಾದಿರಂಪ||

  48. Though a captive, Seeta’s chastity was not eroded because:
    ಹೇವವನ್ನತಿಕ್ರಾಂತ ಪೆಣ್ಗಳೊಳು ತಾಳಿರ್ದು,
    ಸೋವಿಂಗಳಿಂದಿರದು ಸುಖಮೆನ್ನುತುಂ|
    ರಾವಣಂ ಸ್ವೇಚ್ಛೆಗಂ ಕಾದಿದ್ದ ಸೀತೆಯಳ,
    ದೈವ ತಾನಿತ್ತವಳ ಪಾಲೊಳಂದು||

    ಹೇವ = disgust. ಸೋವಿಂಗಳು = ಅಗ್ಗದವರು

    • ಸುಮ್ಮನೆ ಶಿಥಿಲದ್ವಿತ್ವಕ್ಕೆ ಮೊರೆಹೊಗುವುದೇಕೆ? “ಹೇವವನತಿಕ್ರಮಿತ” ಎಂದು ಹಾಕಬಹುದಲ್ಲ.

      • ’ತಿಕ್’ ಎಂಬುದು ತುಸು ಜಾರಿಂಗ್ ಆಗಿಲ್ಲವೆ?

        • ಸದಾ ಶಿಥಿಲದ್ವಿತ್ವಕ್ಕೆ ಶರಣು ಹೊಡೆಯುವುದಕ್ಕಿಂತ ಜಾರಿಂಗ್ ಬೆಟರ್ರು

      • ಕ್ರಮಿತ ಎಂಬುದು ಈ ಸಂದರ್ಭದಲ್ಲಿ ಅಸಾಧುರೂಪ. ಅದು ಕ್ರಾಂತ ಎಂದಾಗಬೇಕು.

  49. ಶಿಲೆಗಳಲಿ ಬಳಲಿ
    ಕುಳಿತವಳು ತೊಳಲಿ
    ಕಳವಳಗೊಳುತಿಹ ಕಮಲಮುಖಿ |
    ಕಳೆಮೊಗವಳಿದಿದೆ
    ತಿಳಿನಗೆ ತೊಲಗಿದೆ
    ಕುಲನೆಲ ವಿವರಗಳರಿಯದಿದೆ ||

    ಪದ್ಯದ ಸ್ವಾರಸ್ಯ:
    ತೊಳಲಿ ಕಳವಳಗೊಳುತಿಹ- ಎಂಬಲ್ಲಿ, ಯಾವುದಕ್ಕಾಗಿ / ಯಾರಿಗಾಗಿ ತೊಳಲಿ ಎಂಬುದು ರಸಿಕರ ಭಾವಕ್ಕೆ ಬಿಟ್ಟ ವಿಚಾರ.

    ಕುಲನೆಲ ವಿವರಗಳರಿಯದಿದೆ- ಎಂಬಲ್ಲಿ , ಅವಳು ತೀವ್ರವಾದ ಕಳವಳದಲ್ಲಿ ತನ್ನ ಕುಲನೆಲದ ವಿಚಾರಗಳನ್ನು ಮರೆತವಳಾಗಿದ್ದಾಳೆ ಮತ್ತು ನಮಗೂ ಅವಳು ಶಕುಂತಲೆಯೋ, ಸೀತೆಯೋ ಮತ್ತಿನ್ನಾರೋ ಎಂಬುದು ಅರಿಯದೆ ಗೊಂದಲವಾಗಿದೆ ಎಂಬ ಭಾವ 🙂

    ಪದ್ಯದಲ್ಲಿ ಸರ್ವಲಘು ಅಕ್ಷರಗಳನ್ನು ಅನುಪ್ರಾಸದೊಡನೆ ಬಳಸಿರುವೆ.

    • ಒಳ್ಳೆಯ ಚಿತ್ರಕಾವ್ಯಸದೃಶಯತ್ನವು ಶರಷಟ್ಪದಿಯಲ್ಲಿ ಸಾಗಿದೆ; ಧನ್ಯವಾದ.

      • ಗುರುಗಳೇ,

        ನಿಮ್ಮ ಸಮಯಕ್ಕಾಗಿ,ಪ್ರೋತ್ಸಾಹಕ್ಕಾಗಿ ತುಂಬ ಧನ್ಯವಾದಗಳು.

    • ಕ್ಷಮಿಸಿರಿ, ಕೊನೆಯ ಪಾದವನ್ನು, ಕುಲನೆಲ ವಿವರಗಳರಿಯದಿವೆ ಎಂಬುದಾಗಿ ಓದಬೇಕು.ಟಂಕನ ದೋಷವಾಗಿದೆ.

    • ಶಕುಂತಲಾ ಅವರೆ, ನಿಮ್ಮ ಈ ಸರ್ವಲಘು ಬಂಧ ಬಹಳ ಚನ್ನಾಗಿದೆ, ನಿಮ್ಮ ಪರಿಚಯವಾದದ್ದು ಚಿತ್ರದ ಶಕುಂತಲೆಯ ಪರಿಚಯವಾದಂತೇ ಸಂತೋಷವಾಯಿತು.

      • ಉಷಾ ಅವರಿಗೆ ಧನ್ಯವಾದಗಳು.ನಿಮ್ಮ ಸೊಗಸಾದ ಪದ್ಯಗಳು ನಿಮ್ಮನ್ನು ಪರಿಚಯಿಸುತ್ತಿದ್ದು, ನನಗೂ ಅಷ್ಟೇ ಸಂತೋಷವಾಗಿದೆ 🙂

  50. ರಾಜಕುವರಿ ಮಿಥಿಲೆಗೆ ಅರ
    ಸಿ ನೀ ಅಯೋಧ್ಯೆಗೆ ನಿರಾಭರಣಿ ಧರಣಿ ಸುತೇ ।।
    ಚಿಂತೆ ಸುಡುತ ಚಿತ್ತದೊಳಗೆ
    ಲಂಕೆ ಕರಗಿತಗ್ನಿಯಲ್ಲಿ ಮನದ ಬಿರುಕಿಗೇ ।।

    ತಪ್ಪಿದ್ದಲ್ಲಿ ಮತ್ತೊಮ್ಮೆ ಕ್ಷಮಿಸಿ, ತಿದ್ದಬೇಕೆನ್ದು ವಿನಂತಿ….!!
    ಕಂದಪದ್ಯದಲ್ಲಿ, ನಾಲ್ಕು ಸಾಲುಗಳಲ್ಲೂ ಆದಿ ಪ್ರಾಸ ಏಕ ಪ್ರಕಾರವಾಗಿ ಇರಬೇಕೆ.. ? ಅಥವಾ ಎರಡೆರಡು ಸಾಲುಗಳಿಗೆ ಮಾಡಬಹುದೇ …? ಆಥವ ಮೊದಲ ಗಣ ಮಾತ್ರ ಪ್ರಾಸವಾಗಬೇಕೆ…?

    • ವೇದಪ್ರಕಾಶ್

      ಕಂದದಲ್ಲಿ ಗಣದ ವಿಂಗಡಣೆಯನ್ನು ತಾವು ಅರ್ಥಮಾಡಿಕೊಂಡಹಾಗಿದೆ. ಆದಿಪ್ರಾಸ ನಾಲ್ಕೂ ಪಾದಗಳ ಆದಿಯಲ್ಲಿ ಒಂದೇ ತೆರನಾಗಿ ಬರಬೇಕು- ನೀವು ಪ್ರಾಸವನ್ನು ಸಂಪೂರ್ಣವಾಗಿ ಬಿಟ್ಟು ರಚಿಸಿದ್ದೀರ.

    • 1. ಯಾವುದೇ ಛಂದಸ್ಸಿನ ಪದ್ಯಗಳಲ್ಲಿ ಸ್ವರಾಕ್ಷರಗಳು ಪದ್ಯದ ಮಧ್ಯೆ ಬರುವಂತಿಲ್ಲ. ಹಾಗೆ ಬಂದರೆ ಅದು ವಿಸಂಧಿ ದೋಷವಾಗುತ್ತದೆ. ಸಂಧಿ ಮಾಡಲು ಅವಕಾಶವಿದ್ದಲ್ಲಿ ಸಂಧಿಮಾಡಲೇ ಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಪದ್ಯದಲ್ಲಿ ’ಮಿಥಿಲೆಗೆ ಅರಸಿ’ ಎಂದು ಬರುವಂತಿಲ್ಲ. ’ಮಿಥಿಲೆಗರಸಿ’ ಅಥವಾ ’ಮಿಥಿಲೆಯರಸಿ’ ಎಂದು ಸಂಧಿ ಮಾಡಬೇಕಾಗುತ್ತದೆ. ಅದೇ ರೀತಿ ’ನೀ ಅಯೋಧ್ಯೆಗೆ’ ಎಂದು ಬರುವಂತಿಲ್ಲ. ’ನೀನಯೋಧ್ಯೆಗೆ’ ಅಥವಾ ’ನೀಮಯೋಧ್ಯೆಗೆ’ ಎಂದು ಸಂಧಿ ಮಾಡಬೇಕಾಗುತ್ತದೆ.

      2. ಕಂದಪದ್ಯದ ಪ್ರತಿ ಸಾಲಿನ ಎರಡನೆ ಅಕ್ಷರದಲ್ಲಿ ಪ್ರಾಸ ಬರಬೇಕು. ಪ್ರಾಸ ಈ ಕೆಳಗಿನ ಯಾವ ರೀತಿಯದ್ದಾದರೂ ಇರಬಹುದು.
      ಸಿಂಹ ಪ್ರಾಸ : ಮಿಥಿಲೆ,ಮಥುರ,ಪಥ,ರಥ,
      ಗಜಪ್ರಾಸ : ರಾಮ,ಭಾಮ,ಸೋಮ,ನಾಮ.
      ವೃಷಭ ಪ್ರಾಸ : ಅಂದ,ಚೆಂದ,ಮಂದ,ಕಂದ. ಇತ್ಯಾದಿ.
      ಅಷ್ಟೇ ಅಲ್ಲದೆ, ಅರ್ಪಿತ, ದರ್ಪಣ, ತರ್ಪಣ ಹೀಗೆಲ್ಲ ಪ್ರಾಸಗಳನ್ನು ಬಳಸ ಬಹುದು.

      —————–
      ಕಂದಪದ್ಯದ ಇತರೆ ಲಕ್ಷಣಗಳು..

      ೧. ಕಂದಪದ್ಯದಲ್ಲಿ ಒಟ್ಟು ೨ ಪಾದಗಳು. ಪ್ರತಿ ಪಾದವನ್ನು ೨ ಸಾಲಿನಲ್ಲಿ ಬರೆಯಲಾಗುತ್ತದೆ. ಮೊದಲನೆ ಸಾಲಿನಲ್ಲಿ ೪ ಮಾತ್ರೆಗಳ ಮೂರು ಗಣಗಳು ಹಾಗೂ ೨ ನೇ ಸಾಲಿನಲ್ಲಿ ೪ ಮಾತ್ರೆಗಳ ೫ ಗಣಗಳು.

      ೨. ಪ್ರತಿ ಪಾದದ ೬ ನೆಯ ಗಣ (ಎರಡನೆ ಸಾಲಿನ ೩ ನೇ ಗಣ) ಜಗಣವಾಗಿರ ಬೇಕು. ಅಥವಾ ಪಾದದ ೬ನೇ ಗಣದ ಮೊದಲಲ್ಲಿ ಯತಿ ಬಂದು, ಉಳಿದ ಮೂರುಮಾತ್ರೆಗಳು ಲಘುಗಳಾಗಿರಬೇಕು.

      ಉದಾ: ಈ ಕೆಳಗಿನವುಗಳಲ್ಲಿ ಪಾದದ ೬ನೇ ಗಣಗಳು (ಯೆ ನೆಗೆದ, ಪೊ ಸಕಲ) UUUU ಆಗಿದೆ . ಇವುಗಳಲ್ಲಿ ಯತಿ ’ಯೆ’ ಹಾಗೂ ’ಪೊ’ ಎಂಬಲ್ಲಿ ಬರುತ್ತದೆ.

      ಸಿಂಗಂ ಮಸಗಿದವೊಲ್ ನರ
      ಸಿಂಗಂ ತಳ್ತಿರಿಯೆ ನೆಗೆದ ನೆತ್ತರ್ ನಭದೊಳ್ |
      ಕೆಂಗುಡಿಗವಿದಂತಾದುದಿ
      ದೇಂ ಗರ್ವದಪೆಂಪೊಸಕಲ ಲೋಕಾಶ್ರಯನ ||

      ಅಥವಾ ಪ್ರತಿ ಪಾದದ ೬ನೇ ಗಣ ಜಗಣವಾಗಿರಬೇಕು
      ಜಗಣಕ್ಕೆ ಉದಾ : ಸುನಂದ, ಅಮೇಯ, ಭಾ’ರತೀಯ’ ಇತ್ಯಾದಿ.

      3. ಪ್ರತಿ ಪಾದದ ಕೊನೆಯಲ್ಲಿ ಗುರ್ವಾಕ್ಷರಗಳು ಬರಬೇಕು.
      4. ಪಾದದ ಬೆಸ ಸ್ಥಾನದ ಗಣಗಳಲ್ಲಿ ಜಗಣ ಬರುವಂತಿಲ್ಲ.

      • Dear hR,
        Regarding point No.3: ‘ಪ್ರತಿಪಾದದ ಕೊನೆಯಲ್ಲಿ’ ಅಲ್ಲ, ‘ಪ್ರತಿ ಅರ್ಧದ ಕೊನೆಯಲ್ಲಿ’ ಎಂದಾಗಬೇಕು. ಅಲ್ಲದೆ, ನೀವು ಉದ್ಧರಿಸಿರುವ ಪದ್ಯದ ಉತ್ತರಾರ್ಧವು ಗುರ್ವಕ್ಷರದಿಂದ ಕೊನೆಯಾಗಿಲ್ಲವಲ್ಲ (ಲೋಕಾಶ್ರಯನ)!

      • ಕಂದಪದ್ಯದ ಪ್ರಾಸದ, ವಿಸಂಧಿಯ ವಿಷಯಗಳನ್ನು ನಾನು ಗಮನಿಸದೆ ಮತ್ತೆ ಎಡವಿದ್ದಕ್ಕೆ ವಿಷಾದಗಳು…. ತಿದ್ದಿಕೊಟ್ಟ ಎಲ್ಲ ಸಹೃದಯರಿಗೂ ವoದನೆಗಳು…

      • ಒಳ್ಲೆಯ ವಿವರಣೆಯನ್ನು ನೀಡಿ ಸಹಕರಿಸಿದ ನೂತನಮಿತ್ರರಾದ ತಮಗೆ ಸ್ವಾಗತ. ತಮ್ಮ ಪರಿಚಯವನ್ನರಿಯಬಹುದೇ?

    • ವೇದಪ್ರಕಾಶರೆ,
      ಕಲಿಕೆಯ ಹಂತದಲ್ಲಿ ನಾನೂ ಆದಿಪ್ರಾಸ ಪಾಲಿಸಲಿಲ್ಲ. ಸ್ವಲ್ಪ ಕೈಕುದುರಿದಮೇಲೆ ಪ್ರಾಸ ತಾನಾಗೇ ಸಿದ್ದಿಸುತ್ತದೆ. ಆದ್ದರಿಂದ ಸದ್ಯಕ್ಕೆ ಪ್ರಾಸಬಿಟ್ಟು ಮುಂದುವರಿಸಿ. ಉಳಿದ ವಿಷಯವಾಗಿ ಶ್ರೀಕಾಂತಮೂರ್ತಿಗಳೂ ಎಚ್.ಆರ್.ರವರೂ ಸರಿಯಾಗಿ ವಿಶ್ಲೇಷಿಸಿದ್ದಾರೆ. ಅವನ್ನು ಗಮನಿಸಿಕೊಳ್ಳಿ.

      • ಪ್ರಸಾದು, ದಯಮಾಡಿ ಪ್ರಾಸವನ್ನು ಪದ್ಯಪಾನಿಗಳು (ಈ ಜಾಲಸ್ಥಾನದಲ್ಲಿ) ತೊಡೆ(ರೆ)ಯದಂತೀಚ್ಚರವಹಿಸಬೇಕು. ಏಕೆಂದರೆ ಮುಖ್ಯವಾಗಿ ಇದು ಅಭಿಜಾತಸಾಹಿತ್ಯಪದ್ಧತಿಯ ಛಂದಸ್ಸು-ವ್ಯಾಕರಣ-ಅಲಂಕಾರಗಳ ಪರಿಚಯ-ಪ್ರಯೋಗ-ಅಭ್ಯಾಸಗಳಿಗಿರುವ ತಾಣ. ಇಲ್ಲಿಯೇ (ಈಗಲೇ) ಅವುಗಳ ಬಗೆಗೆ liberty ತೆಗೆದುಕೊಳ್ಳುವುದು ಬೇಡ. ಪದ್ಯಪಾನಿಗಳು ತಮ್ಮ ಅಭ್ಯಾಸಕ್ಕಾಗಿ ಅಥವಾ ಆನಂದಕ್ಕಾಗಿ ಪ್ರಾಸ-ಛಂದಸ್ಸು-ವ್ಯಾಕರಣ-ಅಲಂಕಾರಗಳಿಲ್ಲದ ಪದ್ಯಗಳನ್ನು ಇಲ್ಲಿ ಸಂಕಲ್ಪಪೂರ್ವಕವಾಗಿ ಬರೆಯದಿರಲಿ:-) ಅದೆಲ್ಲ ಅವರ ಮನೆ-ಮನಗಳಲ್ಲಿ ಹಾಗೂ ಮತ್ತಿತರಸ್ಥಳಗಳಲ್ಲಿ ಸೊಗಸಾಗಿ ಸಾಗಲಿ. ಇಲ್ಲವಾದರೆ ನಮ್ಮ ಮೂಲೋದ್ದೇಶವೇ ಮುರುಟೀತು.

        • ಓಹ್. ಸರಿಯೆ. ವೇದಪ್ರಕಾಶರೆ, ನನ್ನ ಮಾತನ್ನು ಹಿಂದೆಗೆದುಕೊಂಡಿದ್ದೇನೆ. ಹಾಗೆ ನೋಡಿದರೆ, ಉಳಿದೆಲ್ಲವನ್ನೂ ಸಿದ್ಧಿಸಿಕೊಂಡಿರಾದರೆ, ಪ್ರಾಸ ಸಾಧಿಸುವುದು ಕಷ್ಟವೇನಲ್ಲ.

          • ಅಮೇಯವಾದ ಭಾವವನ್ನು ಗುಣಮಟ್ಟದ ಛಂದಸ್ಸಿನಲ್ಲಿ ತರಲು ಪ್ರಯತ್ನಿಸುತ್ತೆನೆ… ಧನ್ಯವಾದಗಳು…

  51. ಕಲ್ಪನೆಗಾಗಿ ಒಂದು ಕಲ್ಪನೆ -ಸೀತೆಯನ್ನು ಚಿತ್ರಿಸಲಿಕ್ಕಾಗಿ ರವಿವರ್ಮರು ಕುಳ್ಳಿರಿಸಿದ ರೂಪದರ್ಶಿಯಾಗಿ (model) ಈಕೆ. ಚಿತ್ರಗಾರ ಮತ್ತು ಪರದೆ ನಮಗಿಲ್ಲಿ (ಫೋಟೋದಲ್ಲಿ ) ಕಾಣಿಸುತ್ತಿಲ್ಲ 😉

    ಕತ್ತಿಲ್ಲಿ ನೋಯುತಿದೆ
    ಹೊತ್ತಲ್ಲಿ ಮೀರುತಿದೆ
    ಬತ್ತಿಯಾರುತಿವೆ ಭಾವಗಳ ಬೆಳೆಯು
    ತುತ್ತು ಅನ್ನಕ್ಕಾಗಿ
    ತೊತ್ತಾಗಿರುವೆನು ನಾ
    ಚಿತ್ತದಲ್ಲಾ ಸೀತೆಯಾಗಲಾರೆ

    ಬತ್ತಿಯಾರುತಿವೆ ಭಾವಗಳ ಬೆಳೆಯು =ಕೃತಕವಾಗಿ ಸೃಷ್ಟಿಸಿದ ಭಾವಗಳು. ತೊತ್ತು = ದಾಸಿ
    ಹಣಕ್ಕಾಗಿ ದುಡಿಯುವ ಪ್ರಜ್ಞಾವ೦ತ ರೂಪದರ್ಶಿ ಮತ್ತು ಆಕೆಗೆ ಸೀತೆಯ ಬಗ್ಗೆ ಇರುವ ಪೂಜ್ಯ ಭಾವನೆಗಳ ಅಭಿವ್ಯಕ್ತಿಯ ಪ್ರಯತ್ನವಿದು .

    • 1) ಐಡಿಯ ತುಂಬ ಚೆನ್ನಾಗಿದೆ
      2) ಒಗ್ಗಿಕೊಳುವುದೆ ರೀತಿ ಒಪ್ಪಿದುದಕೆ – ಡಾ|| ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ (‘ಎಲ್ಲಿ ಹಾರಿತೊ ನನ್ನ ಮುದ್ದುಹಕ್ಕಿ…’ ಕವನದಿಂದ)
      3) ಭಾಷೆಯನ್ನು ಹೀಗೆ ತುಸು ರೂಢಿಸಬಹುದು:
      ಕತ್ತೆಲ್ಲೊ ನೋಯುತಿರೆ
      ಹೊತ್ತು ತಾ ಮೀರುತಿರೆ
      ಬತ್ತಿಯಾರುತಿರೆ ಭಾವಗಳ ಬೆಳೆಯು|
      ತುತ್ತು ಕೂಳಿಂಗಾಗಿ
      ತೊತ್ತಾಗಿಹೆನು ನಾನು
      ಚಿತ್ತದೊಳುಮಾ ಸೀತೆಯಾಗಲಾಪೆಂ||

      • ಸರ್ ,
        ಈ ಕವನ ಓದಿಲ್ಲ , ಕೇಳಿಲ್ಲ . ಇದು , ಪುಸ್ತಕ / cd ಗಳ ಮೂಲಕ ಇದು ಲಭ್ಯವೇ ?

        • ಇದು ಅವರ ದೀಪಿಕಾ ಅಥವಾ ಬಾರೋ ವಸಂತ ಕವನಸಂಕಲನದಲ್ಲಿರಬೇಕು; ಅಡಕಮುದ್ರಿಕೆಯಲ್ಲೂ. ನೆನಪಿನಿಂದ ಹೇಳುತ್ತೇನೆ:
          ಎಲ್ಲಿ ಹಾರಿತೊ ನನ್ನ ಮುದ್ದುಹಕ್ಕಿ
          ಎಲ್ಲಿ ಕೂಗುತಲಿದೆಯೊ ವ್ಯಥೆಗೆ ಸಿಕ್ಕಿ
          ಕಣ್ಣುತಪ್ಪಿಸಿ ಹಾರಿ ಬೇಲಿಸಾಲನು ಮೀರಿ
          ಅಡವಿಪಾಲಾಯಿತೊ ದಾರಿತಪ್ಪಿ|ಪ|
          ಮನೆಯಕಾಳನು ತಿಂದು ಬೇಸರಾಗಿ
          ವನದ ತೆನೆಯನು ತಿನುವ ಚಪಲ ರೇಗಿ
          ಹೊಸಸಂಗ ಬೇಕೆನಿಸಿ ಹಾರಿತೇನೋ
          ಹಳೆಯ ಪರಿಚಯ ಬೇಸರಾಯಿತೇನೋ|೧
          ಎಲ್ಲಾದರೂ ಇರಲಿ ತನ್ನ ರೀತಿ
          ನಡುವೆ ನೆನಪಾದೀತು ಹಳೆಯ ಪ್ರೀತಿ
          ಎಂದೂ ನೋಯದೆ ಇರಲಿ ತಪ್ಪಿದುದಕೆ
          ಒಗ್ಗಿಕೊಳುವುದೆ ರೀತಿ ಒಪ್ಪಿದುದಕೆ|೨

          • @ prasAdu
            sir,
            ಮಾಹಿತಿಗೆ, ಕವನವನ್ನು ಬರೆಯಲು ವಹಿಸಿದ ಶ್ರಮಕ್ಕೆ +ಷಡ್ಪತಿಯನ್ನು ತಿದ್ದಿ ತೋರಿಸಿದ್ದಕ್ಕಾಗಿ ಕೃತಜ್ಞತೆಗಳು

    • ಅತಿರಮಣೀಯಂ ಕಲ್ಪನೆ
      ಚತುರವಿನೂತನವಿಧಾನಮಿದು ಸೊಗಸಾಯ್ತೌ!!
      ಹಿತಕುಸುಮಷಟ್ಪದಿಯುಮೀ
      ಕೃತಿಗಾಗಿರೆ ಹಾ! ವಿಸಂಧಿದೋಷಮೆ ಲೋಪಂ:-(

      • ಸರ್ ,
        ಕತಜ್ಞತೆಗಳು . ತಿಳಿದುದನ್ನು ಈ ರೀತಿಯಲ್ಲಿ ಸರಿಪಡಿಸುತ್ತೆನೆ . ಬೇರೆ ಕಡೆಗಳಲ್ಲಿ ವಿಸಂಧಿಗಳಿವೆಯೇ ತಿಳಿಯುತ್ತಿಲ್ಲ .

        ಕತ್ತಿಲ್ಲಿ ನೋಯುತಿದೆ
        ಹೊತ್ತಲ್ಲಿ ಮೀರುತಿದೆ
        ಬತ್ತಿಯಾರುತಿವೆ ಭಾವಗಳ ಬೆಳೆಯು
        ತುತ್ತನ್ನಕಾಗಿಯೇ
        ತೊತ್ತಾಗಿರುವೆನು ನಾ
        ಚಿತ್ತದಲ್ಲಾ ಸೀತೆಯಾಗಲಾರೆ

    • ನಿಮ್ಮ ಕಲ್ಪನೆಯ ಕಲ್ಪನೆ ಬಹಳ ಇಷ್ಟವಾಯಿತು ಭಾಗ್ಯಲಕ್ಷ್ಮಿಯವರೆ. “ಸಂಖ್ಯೆಇಲ್ಲದ ಸಾಲನು ಕೊಟ್ಟು ……ಭಾಗ್ಯದ ಲಕ್ಷ್ಮಿಬಾರಮ್ಮ” ಎಂದು ಸ್ವಾಗತಿಸುವೆ.

  52. ರಘುಕುಲ-ತಿಲಕಸ್ಯ ಪ್ರಾಣತಃ ಪ್ರೀತಿಪಾತ್ರಾಂ
    ಪರಿಜನ-ಪರಿವಾದೈರ್-ನೂನಮಾರಕ್ಷಣಾರ್ಥಮ್ |
    ವನಿ-ಮುನಿ-ಪರಿಸರ್ಯಾ-ಸ್ಥಾಪಿತಾಂ ಮಾಂ ಚಕಾರ
    ವ್ರಣಮುಪಚರಿತುಂ ವೈ ಲೇಪಮಾಲೇಪಯನ್ತಿ ||

    ರಘುಕುಲತಿಲಕನ ಪ್ರಾಣಕ್ಕಿಂತ ಪ್ರೀತಿಪಾತ್ರಳಾದ ನನ್ನನ್ನು, ಪರಿಜನರ* ನಿಂದೆಯಿಂದ ರಕ್ಷಿಸಲೋಸುಗವೇ ಕಾಡಿನಲ್ಲಿ ಮುನಿಗಳ ಹತ್ತಿರ (ಮುನಿಗಳ ಸೇವೆಗಾಗಿ) ಇಟ್ಟನು. ವ್ರಣಕ್ಕೆ ಉಪಚಾರ ಬೇಕಾದಾಗಲೇ ಲೇಪವನ್ನು ಹಚ್ಚುತ್ತಾರಲ್ಲವೇ ! (ವ್ರಣದ ಮೇಲಿನ ಲೇಪನವು ಸುಖವಲ್ಲದಿದ್ದರೂ ಹಿತ)

    • lalitA oLLeya pUraNa

    • Good one. ArthAntaranyAsa in the end is also very pertinent. 🙂

    • ಉತ್ತಮಂ ಪದ್ಯಮಪಿ ಕ್ವಚಿವ್ಯ್ಯಾಕರಣದುಷ್ಟಮಿವ ಭಾತಿ. ಪ್ರಾಣಾಃ ಸದಾ ಬಹುವಚನೇ ಭವನ್ತಿ. ಪ್ರಾಣ ಇತಿ ಏಕವಚನಂ ತು ಶ್ವಾಸ-ವಾತರೂಪೇಣ ಭವತಿ. ವನೀ ಇತೀಕಾರರೂಪಂ ಕಿಲ! ಪರಿಸರ್ಯಾ ಇತಿ ಪದಸ್ಯ ಕಥಮರ್ಥಃ?

      • ಧನ್ಯವಾದಗಳು ಸರ್.
        ವನಿ-ಮುನಿ ಎಂಬ ಶಬ್ದಾಲಂಕಾರದ ಗಲಾಟೆ ಮಾಡಿಕೊಂಡು ವ್ಯಾಕರಣವನ್ನೇ ನಿರ್ಲಕ್ಷಿಸಿಬಿಟ್ಟೆ.
        ಈ ಪದ್ಯವನ್ನು ಹೀಗೆ ಸವರಿಸಿದರೆ ಸರಿಯೇ?

        ರಘುಕುಲತಿಲಕಸ್ಯ ಪ್ರಾಣವತ್ ಪ್ರೀತಿಪಾತ್ರಾಂ
        ಪರಿಜನ-ಪರಿವಾದೈರ್ನೂನಮಾರಕ್ಷಣಾರ್ಥಂ |
        ಮುನಿಜನಪರಿಚರ್ಯಾ-ಸಂಸ್ಥಿತಾಂ ಮಾಂ ಚಕಾರ
        ವ್ರಣಮುಪಚರಿತುಂ ವೈ ಲೇಪಮಾಲೇಪಯನ್ತಿ ||

        ಮತ್ತು ಪರಿಸರ್ಯಾ ಎಂದರೆ ಮೋನಿಯರ್ ವಿಲಿಯಮ್ಸ್ ನಿಘಂಟುವಿನ ಪ್ರಕಾರ
        परि-सर्या [L=119030] f. = °सरण Pa1n2. 3-3 , 101 Pat.
        [L=119031] near approach W.
        [L=119032] service W. (cf. परी-स्°).

        ಆದರೆ ಪರಿಚರ್ಯಾ ಎಂದು ಬದಲಾಯಿಸಿದ್ದೇನೆ.

        • पात्रामित्यसाधु, गुणाः पूजास्थानमित्यादिष्विव पात्रमपि सर्वदा विशेष्यानपेक्षया नपुंसकलिङ्गतां भजते. अतः प्रीतिपात्रमित्येव समासेन भवितव्यम् । अन्यत्र प्राणतः इति प्रयोगः समीचीन इत्येव प्रतिभाति मे, प्राणात्, प्राणेभ्यः इत्यस्य पदद्वयस्यापि तसिल्प्रत्यययोगात् प्राणतः इति अव्ययं जायत इति मन्ये । सन्ति चेद्वैयाकरणाः प्रमाणयन्त्विदम् । इतरथा पद्यं मनोहारि ।

  53. ಚಿತ್ರದಲ್ಲಿರುವುದು ಸೀತೆ ಎಂದು ಹಾಗೂ ಈ ಚಿತ್ರ ವಾಲ್ಮೀಕಿ ಆಶ್ರಮದಲ್ಲಿ ಲವಕುಶರ ಜನನದ ನಂತರದ ಕಾಲದ್ದೆಂದು ಪರಿಗಣಿಸಿ ಈ ಪದ್ಯ. ಸೀತೆ ತುಂಬಾ ದುಃಖತಪ್ತಳಾದ ಸಂದರ್ಭದಲ್ಲಿ ವ್ಯಭಿಚಾರಿಭಾವವಾಗಿಯಾದರೂ ಈ ಚಿಂತೆ ಕಾಡಿರಬಹುದಲ್ಲವೇ?

    रामो गतो यत्र हि सर्वपौराः
    तत्र त्वयोध्येति पुरा गतास्ते |
    नाहञ्च पुत्री खलु कोसलस्य
    क्व मैथिली कोसलवासिनः क्व? ||

    पुरा रामः यत्र (अरण्यं) गतः तत्र हि अयोध्या इति (मत्वा) ते सर्वपौराः गताः (आसन्) | (किन्तु) अहं कोसलदेशस्य पुत्री न खलु (अतः एव) क्व मैथिली क्व कोसलवासिनः?

    ಹಿಂದೆ ರಾಮನು ಕಾಡಿಗೆ ಹೋದಾಗ ಇಡೀ ಅಯೋಧ್ಯೆಯೇ ರಾಮನೆಲ್ಲಿರುವನೋ ಅದೇ ಅಯೋಧ್ಯೆಯೆಂದು ಕಾಡಿಗೆ ತೆರಳಿತು. ಆದರೆ ನಾನು ಕೋಸಲದೇಶದವಳಲ್ಲ ಅಲ್ಲವೇ? (ಅದರಿಂದಲೇ) ಮೈಥಿಲೀ ಎಂದರೆ ಯಾರೋ ಕೋಸಲವಾಸಿಗಳೆಂದರೆ ಯಾರೋ!!

    ಎಂದಿನಂತೆ ವ್ಯಾಕರಣ ಇತ್ಯಾದಿ ದೋಷಗಳನ್ನು ತಿಳಿಸಿರಿ

    • GS, Verygood kalpane

    • ಅತ್ಯುತ್ತಮವಾದ ಕಲ್ಪನೆ ರಾಘವೇಂದ್ರ! ಧನ್ಯವಾದಗಳು. ಎಲ್ಲ ಚೆನ್ನಾಗಿದೆ ಆದರೆ ಸಮಾಸದಲ್ಲಿ ಬಂದಾಗ ವ್ಯಭಿಚಾರೀ ಎಂಬ ಪದವು ವ್ಯಭಿಚಾರಿಭಾವ ಎಂದೇ ಆಗುತ್ತದೆ.ಹೀಗೆಯೇ ಸ್ಥಾಯಿಭಾವ, ಸಂಚಾರಿಭಾವ ಇತ್ಯಾದಿಪದಗಳು

      • ಧನ್ಯವಾದಗಳು. ಅಯ್ಯೋ ಪದ್ಯದಲ್ಲಿ ಬಂದದ್ದನ್ನ ಗದ್ಯದಲ್ಲಿ ಕಳೆದಂತಾಯಿತು 😛 ಹೌದು ಸಮಾಸದಲ್ಲಿ ‘ವ್ಯಭಿಚಾರೀ’ಯನ್ನು ಹ್ರಸ್ವಮಾಡಿ ‘ವ್ಯಭಿಚಾರಿ’ ಮಾಡಬೇಕು ಅಂತೆಯೇ ತಿದ್ದಿದ್ದೇನೆ

        • राघवेन्द्र तव यद्वचोऽम्रृतं
          स्तोतुमस्मि तदहं कुतूहली ।
          प्रार्थये विधिमतो विधेहि मे
          तूर्णमेव दशवक्त्रतामिति ॥

          Oh Raghavendra (also Rama, the Lord of Raghavas), intent on praising your nectarine words, this is what I ask of Brahma – ” Turn me soon in to somebody with ten faces” (also Ravana)

          • ಧನ್ಯೋಸ್ಮಿ.
            ಕವಿವರ್ಯ ಧನ್ಯವಾದ ಬಿಟ್ಟು ಬೇರೇನೂ ಹೇಳುವ ಶಕ್ತಿಯಿಲ್ಲ 😛

  54. ಕೈಲಾಸ ಪರ್ವತವನ್ನೇ ಎತ್ತಿ ಶಿವನಿಂದ ದಶಶಿರಗಳನ್ನು ಪಡೆದ ರಾವಣನಂಥ ಪರಾಕ್ರಮಿಯನ್ನು ಕೊಂದ ರಾಮನು ಜನರ ಸಂಶಯಗಳನ್ನು ಕೊಲ್ಲುವಲ್ಲಿ ಸೋತನು. (ಸಂಶಯವೇ ಮನುಷ್ಯನ ಅತಿದೊಡ್ಡ ವೈರಿ.)

    ಭವಗಿರಿಯಂಪಿಡಿದೆತ್ತಿಯ
    ಭವನಿಂ ಪತ್ತಲೆಗಳನ್ ಬಡೆದರಾವಣನಂ |
    ಭವಮುಕ್ತಿಗೈದ ಭೂಸಂ
    ಭವೆ ಪತಿ ಜನಸಂಶಯಂಗಳನರಿಯೆ ಸೋತನ್ ||

    ಭವಗಿರಿ ; ಕೈಲಾಸ ಪರ್ವತ
    ಅಭವ : ಶಿವ
    ಪತ್ತಲೆ : ಪತ್ತು ತಲೆ, ದಶಶಿರ
    ಭೂಸಂಭವೆ ಪತಿ : ರಾಮ
    ಅರಿಯೆ : ಕೊಲ್ಲಲು

    • ಭಾವ ಚೆನ್ನಾಗಿದೆ. ಪತ್ತಲೆ ಎನ್ನುವುದು ತಪ್ಪಾದ ರೂಪ.

      • ಧನ್ಯವಾದ ಶ್ರೀಕಾಂತರೆ, ಇದರ ಮೇಲೆ ಸಂದೇಹ ಮೊದಲೇ ಇತ್ತು.

        (ಅ)ಭವನಿಂ ಪತ್ತುತಲೆಯಂಬಡೆದರಾವಣನಂ

        ಎಂದು ತಿದ್ದುತ್ತೇನೆ..

  55. ಚಿತ್ರದಾಕೆಯನ್ನು ಪ್ರೇಮವಂಚನೆಗೊಳಗಾದ ಹಳ್ಳಿಯ ಮುಗ್ಧೆಯನ್ನಾಗಿ ಕಲ್ಪಿಸಿದ್ದು,ಅವಳ ಮನದಾಳದಳಲು ಪದ್ಯದಲ್ಲಿ ವ್ಯಕ್ತವಾಗಿದೆ.

    ಹೊತ್ತು ಮುಳುಗಿದ ಮೇಲೆ ಹತ್ತು ಹೂಗಳ ಮಾಲೆ
    ಕತ್ತಲ್ಲಿ ಇರಿಸಿ ” ನನ ರಾಣಿ ಬಾ”ರೆಂದು
    ಮುತ್ತಿಟ್ಟ ಚೆಲುವ ಬರಲಿಲ್ಲ

    • ತಿದ್ದುಪಡಿ:

      ಕ್ಷಮಿಸಿರಿ,ಪದ್ಯದ ಎರಡನೇ ಪಾದವನ್ನು – ಕತ್ತಲ್ಲಿ ಹೊಗಿಸಿ “ನನ ರಾಣಿ ಬಾ”ರೆಂದು-ಎಂಬುದಾಗಿ ಓದಬೇಕು.ಪದ್ಯವನ್ನು ತಿದ್ದಿದ ಬಳಿಕ-

      ಹೊತ್ತು ಮುಳುಗಿದ ಮೇಲೆ ಹತ್ತು ಹೂಗಳ ಮಾಲೆ
      ಕತ್ತಲ್ಲಿ ಹೊಗಿಸಿ ” ನನ ರಾಣಿ ಬಾ”ರೆಂದು
      ಮುತ್ತಿಟ್ಟ ಚೆಲುವ ಬರಲಿಲ್ಲ

      • ಕ್ಷಮಿಸಿರಿ,

        ಕತ್ತಲ್ಲಿ ತೊಡಿಸಿ “ನನ ರಾಣಿ ಬಾ”ರೆಂದು – ಎಂಬುದಾಗಿ ಎರಡನೇ ಪಾದವಿದ್ದಲ್ಲಿ ತುಂಬ ಸಮರ್ಪಕವೆಂದು ನನ್ನ ಭಾವನೆ. ದಯವಿಟ್ಟು ಹಾಗೆ ಪರಿಗಣಿಸಿರಿ.

  56. ಸೀತೆಯೆಂದು ಪದ್ಯ ಬರೆದಮೇಲೆ ಶಕುಂತಲೆಯ ಬಗ್ಗೆ ಒಂದು ಪ್ರಯತ್ನ. ಇದು ಭರತ ಹುಟ್ಟಿದಮೇಲೆ ಆಗಿರಬಹುದೆಂಬ ಒಂದು ಊಹೆ. ಎಂದಿನಂತೆ ವ್ಯಾಕರಣ ಮತ್ತು ಶೈಲಿಯ ವಿಷಯದಲ್ಲಿ ಸ್ವಲ್ಪ ಸವರಣೆಗಳು ಆಗಬೇಕೆನೋ.

    किं दुष्यन्तनृपस्मृतेर्विचलिता? पुत्रेण किं बाधिता?
    ज्योत्स्नायाः कुसुमप्रसूतिविषये किं चिन्तिता? शङ्किता |
    किं वा त्वं मृगपुत्रकस्य कुशले मुग्धस्य दर्भाशने?
    संतप्ता विषयेषु वा सवयसोः वप्तुर्?न जानाम्यहम् ! ||

    अन्वय : किं दुष्यन्तनृपस्मृतेः विचलिता? किं पुत्रेण बाधिता? किं ज्योत्स्नायाः कुसुमप्रसूतिविषये चिन्तिता? (अथ)वा किं त्वं दर्भाशने मुग्धस्य मृगपुत्रकस्य कुशले शङ्किता? (अथ)वा (किं) वप्तुः सवयसोः विषये संतप्ता? न जानामि अहं |

    ದುಷ್ಯಂತರಾಜನ ನೆನಪುಗಳಿಂದ ವಿಚಲಿತಳಾಗಿರುವೆಯಾ? ಅಥವಾ ಮಗನಿಂದ (ಭರತನ ತುಂಟತನದಿಂದ) ಬಾಧಿತಳಾಗಿರುವೆಯ? ವನಜ್ಯೊತ್ಸ್ನೆಯು (ಶಕುಂತಲೆ ನೆಟ್ಟಿದ್ದ ಮಲ್ಲಿಗೆಯ ಗಿಡ) ಹೂ ಬಿಡುವ ವಿಷಯದಲ್ಲಿ ಚಿಂತಿತಳಾಗಿರುವೆಯಾ? ಹುಲ್ಲುತಿನ್ನುವುದರಲ್ಲಿ ಇನ್ನೂ ಪರಿಣತಿ ಪಡೆಯದ ಜಿಂಕೆಮರಿಯು ಹೇಗಿರಬಹುದೆಂದು ಶಂಕಿತಳಾಗಿರುವೆಯಾ? ಸ್ನೇಹಿತರಾದ ಅನಸೂಯೆ ಮತ್ತು ಪ್ರಿಯಂವದೆಯರ ಅಥವಾ ತಂದೆ ಕಣ್ವರ (वप्तृ ಪದವನ್ನು ತಂದೆ,ಕವಿ/ಮನೀಷಿ ಎಂಬ ಅರ್ಥದಲ್ಲಿ ಕಣ್ವರಿಗೆ ಬಳಸಿದ್ದೇನೆ) ವಿಷಯದಲ್ಲಿ ಸಂತಪ್ತಳಾಗಿರುವೆಯಾ? ನನಗೆ ತಿಳಿಯದು.

  57. ಮನದಲ್ಲಿ ಮೂಡಿದ ಚೆಲುವೆಯ ದೇಹ ಸಿರಿಯನ್ನು ಕುಂಚದಿಂದ ಮೂಡಿಸಲು, ಗಟ್ಟಿ ಬಣ್ಣಗಳನ್ನು ನೀರಿನಲ್ಲೂ, ಬಾಲೆಯ ಮನವನ್ನು ಚಿಂತೆಯಲ್ಲೂ ಕಲೆಗಾರ ಕದಡಿದನು.

    ಮನದೊಳ್ಮೂಡಿದ ಚೆಲ್ವೆಯ
    ತನುವಂ ಕೈ ಕುಂಚದೊಳ್ಗೆ ಮೂಡಿಪ ನೆವದಿಂ
    ಘನಬಣ್ಣಂಗಳ ಜಲದೊಳ್,
    ಮನಬಾಲೆಯದಂ ವಿತಾಳದೊಳ್ ಕದಡಿದನಂ

    ವಿತಾಳ : ಚಿಂತೆ, ಅಳಲು

    (this oil painting is assumed as water color painting)

  58. ಚಿತ್ರದಲ್ಲಿರುವ ಮಹಿಳೆ ಶಕುಂತಲೆ ಯಾ ಸೀತೆಯೇ ಏಕಾಗಿರಬೇಕು ? ಗುರುಗಳು “ಯಾದೃಶೀ ಭಾವನಾ ತಾದೃಶೀ ಕವಿತಾ” ಎಂದು ಹೇಳಿರುವುದರಿಂದ ಈಕೆಯನ್ನು “ಮಗುವಿನ ಬರುವಿಕೆಯನ್ನು ಕಾಯುತ್ತಿರುವ ಓರ್ವ ಗರ್ಭವತಿ”ಯೆಂದು ಭಾವಿಸುತ್ತಾ ಈ ಪದ್ಯಾರ್ಪಣೆ –

    ಉ || ಬಪ್ಪೆಯದೆಂದೊ ಕಂದ ಸೊಗಮೀಯಲಪಾಂಗಪತಂಗತಾರನ್ ? ಇಂ-
    ತಪ್ಪ ಪೊರಳ್ಕೆಯಿಂ ಪೊರೆದು ಪೊಣ್ಮುತುಮಿಪ್ಪೆನ್ ; ಅಮರ್ದನಿಂತು ನೀ
    ನಪ್ಪುಗೆಯಿಂದಲಪ್ಪಯಿಸು ತಪ್ಪಿಸುತೊಪ್ಪದಿನ್ ಅವ್ವೆಯಾಸೆಯಂ
    ದಪ್ಪಗನಂತೆವೊಲ್ ಗಿಳಿಯ ನಲ್ನುಡಿಯಿಂ ತವಿಸೆನ್ನ ಬಾಧೆಯಂ

    ದಪ್ಪಗ (ದರ್ಪಕ) – ಮನ್ಮಥ
    ಅಪಾಂಗಪತಂಗತಾರ – ಸೂರ್ಯನಂತೆ ಹೊಳೆಯುವ ಕಡೆಗಣ್ಣಿನ ನೋಟವುಳ್ಳವನು

    • balu celuvaada padya, priya maurya… aadare iShTu sogasaada padyagalannu breyuva nIvu I ella dinagaLiMdalU padyapaandalli kaaNadaMtaada apraadhakkeMdu nimage naavella yaava daMDane vidhisabEku? 🙂 🙂

      • ಗುರುಚರಣಸ್ಪರ್ಶಗಳು,
        ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ. 🙂 ಎಲ್ಲವೂ vtuನ ಮಹಿಮೆ. 🙂 ಸುಮಾರು ಒಂದೂವರೆ ತಿಂಗಳಿಂದಲೂ ಅಲುಗಾಡಲಾರದಂತಹ ಪರಿಸ್ಥಿತಿ. ಅದೃಷ್ಟವಶದಿಂದ ಬೆಂಗಳೂರಿನಲ್ಲಿಯೇ RNS Institute of technologyಯಲ್ಲಿ ಅಧ್ಯಯನ ಮಾಡುತ್ತಿರುವೆನು. ತಮಗೆ ವಿಷಯವನ್ನು ತಿಳಿಸಲಾರದೆ ಹೋದುದಕ್ಕೆ ಕ್ಷಮೆಯಿರಲಿ. ಒಂದಾದ ಮೇಲೊಂದರಂತೆ ಪರೀಕ್ಷೆಗಳು ಅಕ್ಷಯತುಣೀರದ ಶರಗಳಂತೆ ಎರಗಿಬರುತ್ತಿದ್ದರೆ ಅಸಹಾಯಕನಾದ ನಾನು ಏನನ್ನು ತಾನೆ ಮಾಡಬಲ್ಲೆನು ? ಖಂಡಿತವಾಗಿಯೂ ಪದ್ಯಪಾನವನ್ನು ತೊರೆಯೆನು. ಕೊಂಚ ತಡವಾದರೂ ಸೈ ಭಾಗವಹಿಸುವೆನು. ಇದು ತಮಗೆ ಮತ್ತು ಇತರ ಪದ್ಯಪಾನಿ ಶ್ರೇಷ್ಠರಿಗೆ ನಾನೀಯುತ್ತಿರುವ ವಾಗ್ದಾನ. 🙂

    • ಪದ್ಯಪಾನಿಶ್ರೇಷ್ಠ!
      ತ್ರಿಪದಿ|| ಮುರಿದರೂ ನೀನಿತ್ತ ವರವಾಗ್ದಾನವ ಮೌರ್ಯ
      ಪರಿಪ್ರಶ್ನಿಸುವ ದಾರ್ಷ್ಟ್ಯವ ತೋರೆಂ| ಸು’ಶ್ರೇಷ್ಠ’-
      ತರ’ಪದ್ಯಪಾನಿ’ ನಾನಲ್ತು||

      • ಪದ್ಯದ ಭಾವವೇನೋ ಸೊಗಸಾಗಿದೆ. ಆದರೆ ಇದು ತ್ರಿಪದಿಯೋ ಸಾಂಗತ್ಯವೋ? ಏಕೆಂದರೆ ಎರಡನೆಯ ಸಾಲಿನಲ್ಲಿ ಸಾಂಗತ್ಯದ ಲಕ್ಷಣಗಳು ಇಣಿಕಿವೆ.

    • ಎಂಥ ಸುಂದರ ಪದ್ಯ, ನಾನೇ ನಿನಗೆ ಹೇಳಿದಂತಿದೆ, ಮೌರ್ಯ!

  59. ವಿಚಲಿತಳೆ ಸೀತೆಯುಂ “ಕುಶಲವ”ನು ಕೇಳ್ವೆನೆನ
    ಲಚರಳುಂ ತಾಂ ಕುಳಿತ ಶಿಲೆಯವೊಲುತಾಂ |
    ಸುಚರಿತಳ ಸುತರನುಂ “ಲವಕುಶ”ರ ಕಾಣನೆಲೆ
    ರಚಿಸುದೀ ರವಿವರ್ಮ ಕಲೆಯೊಳುಂ ನಾಂ ||

Leave a Reply to Sudheer Kesari Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)