Oct 182013
 

nut(ನಟ್), but(ಬಟ್), wit(ವಿಟ್), cut(ಕಟ್) ಪದಗಳನ್ನು ಬಳಸಿ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಮಹಾಭಾರತದ ಯಾವುದಾದರೂ ಘಟನೆಯನ್ನು ಕುರಿತು ಪದ್ಯ ರಚಿಸಿ

 

  104 Responses to “ಪದ್ಯ ಸಂಚಿಕೆ ೮೩: ದತ್ತಪದಿ”

  1. दृष्टा श्रीहरिनटता ध्वस्तः कौरवकदम्बटङ्कश्च ।
    नष्टा नृपभूविटताऽपास्ता कौन्तेयसङ्कटौघश्च ॥

    ದೃಷ್ಟಾ ಶ್ರೀಹರಿನಟತಾ ಧ್ವಸ್ತಃ ಕೌರವಕದಂಬಟಂಕಶ್ಚ ।
    ನಷ್ಟಾ ನೃಪಭೂವಿಟತಾಽಪಾಸ್ತಾ ಕೌಂತೇಯಸಂಕಟೌಘಶ್ಚ ॥

    ಕದಂಬ – ಸಮೂಹ.
    ಟಂಕ – ಗರ್ವ.

    ತಾತ್ಪರ್ಯ – ಕೃಷ್ಣನ ನಟನಾಪಟುತ್ವವು ನೋಡಲ್ಪಟ್ಟಿತು. ಕೌರವಸಮೂಹದ ಗರ್ವವು (ಟಂಕ – ಗರ್ವ) ಅಡಗಿತು. ಮಾಗಧ-ಶಿಶುಪಾಲರೇ ಮೊದಲಾದ ದುಷ್ಟನೃಪಾಲರ ಭೂಲಲನಾಲಂಪಟತ್ವವೂ ಅಳಿಯಿತು. ಕೌಂತೇಯರ ಸಂಕಟಪರಂಪರೆಯೂ ದೂರವಾಯಿತು.

    • क्षम्यतां प्रमादः । चरमपादे अपास्तः इति स्यात् ।
      ಕೊನೆಯ ಪಾದದಲ್ಲಿ ಅಪಾಸ್ತಃ ಎಂದಾಗಬೇಕು.

  2. ನಟ್ಟನಡುವೋಲಗದೆ ದುಟ್ಟರೆಡೆ ಮಾನಂ
    ಬಟ್ಟಬಯಲಕ್ಕುಮೆನೆ ಬಟ್ಟೆವಿಡಿದತ್ತಳ್
    ಕಟ್ಟಕಡೆಗೆಲ್ಲವನು ಬಿಟ್ಟು ಸಲಹೆಂದಾ
    ವಿಟ್ಟಲನ ಕೂಗಲದೊ ಕೊಟ್ಟನೆ ದುಕೂಲಂ!

  3. ಶ್ರೀಕಾಂತರೆ,
    ಎಂತುಟದೊ ಮೋಹಕತೆ ನರ್ತಸಿರೆ ಬರ್ಹಿನ್ (ವನಮಯೂರ)
    ಎಂತುಟಿದೊ ವಿಹ್ವಲತೆ ರೋದಿಸಲು ಕೃಷ್ಣಳ್|
    padya is good sir

    • ಧನ್ಯವಾದಗಳು ಪ್ರಸಾದು.

      ಚಂಪಕಮಾಲೆಯೆಂದೊಡದರೊಳ್ ಬರೆ ಸಂಪಿಗೆವೂ ಪೊಗಳ್ವರೇಂ?

      ವನಮಯೂರದ ಓಟ ವೆಗ ಆವೇಗಗಳನ್ನೂ ತ್ವರೆಯನ್ನೂ ಚೆನ್ನಾಗಿ ಬಿಂಬಿಸುತ್ತೆ ಅಂತ ನನಗೆ ಅನ್ನಿಸಿತು. ಇನ್ನೂ ಇದರ ಹೆಸರು ಕೂಡ ನೆನಪಿಗೆಬರಲಿಲ್ಲ. ಅರುಣಗಿರಿನಾಥರ ಒಂದು ತಿರುಪ್ಪುಗಳ್ (ತಮಿಳು) ಹೀಗೆಯೇ ಓಡುವ ನೆನಪಾಯಿತು. “ಏರುಮಯಿಲೇರಿ ವಿಳಯಾಡು ಮುಗಮೊನ್ರೇ—–“

      • ಇನ್ನೆರಡು ಸಾಲುಗಳನ್ನು ಹಿಂದೆಯೇ ಬರೆದೆ. ಇಂಟರ್‍ನೆಟ್ ಸ್ಥಗಿತಗೊಂಡಿತ್ತಾಗಿ ಈಗ ಹಾಕುತ್ತಿದ್ದೇನೆ:
        ಎಂತುಟದೊ ಮೋಹಕತೆ ನರ್ತಿಸಿರೆ ಬರ್ಹಿನ್
        ಎಂತುಟಿದೊ ವಿಹ್ವಲತೆ ರೋದಿಸಲು ಕೃಷ್ಣಳ್|
        ಚಿಂತಿಸದೆ ನೀಮಿರುತೆ ತೀರಿಸಿರಿ ಪಣ್ಯಂ
        ಕಂತೆವೊಲು ಪದ್ಯನಿಜ ಬರ್ಪುದಿದೊ ನೋಡಿಂ||
        (ಪದ್ಯನಿಜ = ನನ್ನ ಪದ್ಯ)

  4. ಮಣಿರಂಗ ವೃತ್ತದಲ್ಲಿ

    ನಟ್ಟದಿಟ್ಟಿಯಿನಾ ಧೃತರಾಷ್ಟ್ರಂ
    ಬಟ್ಟೆಕಾದೊಡೆ ಬರ್ಪನೆ ಪುತ್ರಂ?
    ವಿಟ್ಟಲಂ ಬಗೆದಿರ್ಪುದೆ ಬೇರೈ
    ಕಟ್ಟಲೇನ್ ಕನಸಂ ಕುರುಡಂ ಹಾ!

    • ಬೇರೈ ಎಂದರೆ ’ಬೇರು’ ಎಂದಾಗುತ್ತಲ್ಲವೆ? ನಿಮ್ಮ ಉದೇಶ ’ಬೇರೆಯೈ’ ಎಂದಲ್ಲವೆ?
      ಈ ಛಂದಸ್ಸಿನ ಬಗೆಗೆ ನಾನು ಗಮನಿಸಿದುದು: ಸ್ವಾಗತದಿಂದ ಮಧ್ಯಮಣಿ (ಲಘು) ತೆಗೆದರೆ ಮಣಿರಂಗ.

      • ಆ ಬೇರೀ ಬೇಱಿಂ ಬೇಱೈ

        ಬೇರೇನು, ಬೇರ್ಪಡು, ಬೇರಿಲ್ಲ ಇತ್ಯಾದಿಯನ್ನು ಹೋಲಿಸಿ

  5. ಭದ್ರಕ ವೃತ್ತದಲ್ಲಿ

    ಬಟ್ಟ ಮೊಗಕ್ಕೆ ಶೋಭೆ ಬರೆ ಬಟ್ಟನಾ ನೊಸಲಿಗಿಟ್ಟು ಕೂದಲಿಗೆ ಪೂ
    ವಿಟ್ಟುರೆ ಕಣ್ಗೆ ಕಾಡಿಗೆಯನೆಚ್ಚಿ ಬಯ್ತಲೆಗೆ ಚುಟ್ಟಿಯಿಟ್ಟು ಕಟಿಗಂ
    ಕಟ್ಟಿದ ಪಟ್ಟಿಗೀಡುಕೊಡೆ ಕಾಲಿನಾ ಗೊಳಸು ಘಲ್ಲುಘಲ್ಲೆನಲಹಾ
    ನಟ್ಟಮನಾಡಿ ಪೆಜ್ಜೆಯಿಡುವಳ್ ತಥೈಯೆನುತಲಾ ಬೃಹನ್ನಳೆಯಗೋ

  6. ಕಟ್ಟಿರ್ದ ಮೀನಪಡಿ ಕಂಡು ಧನಂಜಯಂ ಕೋಲ್
    ವಿಟ್ಟಂ ಸರಕ್ಕನದು ವೇಗದೆ ಪೋಗಿ ಕಣ್ಣೊಳ್
    ನಟ್ಟಿರ್ಪುದಂ ದ್ರುಪದನಂದಿನಿ ಕಂಡು ತೋಷಂ
    ಬಟ್ಟಳ್ ಪರರ್ ಕರುಬಿ ಪಲ್ಮಸೆದತ್ತ ನಿಂದರ್

  7. ಕಟ್ಟೆಸಕಂಗಳಂ ಪಲವು ಗೈದಪಯಾದೊಡಮೀಗಳೀಗಳೇ
    ಬಟ್ಟಬಯಲ್ಗೆ ಬಾರೆಲವೊ ಭಂಡನೆ ಷಂಡನ ಪಾಂಗೊಳಿಂದು ನಾಣ್
    ವಿಟ್ಟು ಸರೋವರಂಬುಗುವ ವೀರನೆ ನೀಂ ಸಲೆಯೆಲ್ಲಿ ಬೈತರೇ-
    ನಟ್ಟಿ ಪುಡುಂಕಿ ನಿನ್ನುಸಿರನಳ್ಗಿಪೆನಲ್ಲದೆ ಭೀಮನಲ್ಲೆನಾಂ

  8. विष्णुं स्तौमि परेण नट्ययशसा ख्यातं सुधारक्षणेऽ
    च्छम्बट्कार्यमतौ तथा तमनलं स्वाहासमेतं वरम् ।
    इन्द्रं नौमि च मार्गदर्शनरतं विट्पालकानामिति
    शौनःशेपनुतेन रक्षितुममी प्राकट्यभूताः सुराः ॥

    ವಿಷ್ಣುಂ ಸ್ತೌಮಿ ಪರೆಣ ನಟ್ಯಯಶಸಾ ಖ್ಯಾತಂ ಸುಧಾರಕ್ಷಣೇಽ
    ಚ್ಛಮ್ಬಟ್ಕಾರ್ಯಮತೌ ತಥಾ ತಮನಲಂ ಸ್ವಾಹಾಸಮೆತಂ ವರಮ್ |
    ಇಂದ್ರಂ ನೌಮಿ ಚ ಮಾರ್ಗದರ್ಶನರತಂ ವಿಟ್ಪಾಲಕಾನಾಮಿತಿ
    ಶೌನಃಶೇಪನುತೇನ ರಕ್ಷಿತುಮಮೀ ಪ್ರಾಕಟ್ಯಭೂತಾಃ ಸುರಾಃ ||

    ಕಚಟತಪಗಳ ಮಧ್ಯಮವರ್ಗದ ಅಕ್ಷರವನ್ನು ಕಂಡು ಮಧ್ಯಮಪುತ್ರನಾದ ಶುನಃಶೇಪನು ಮನಸ್ಸಿಗೆ ಬಂದನು. ವಿಶ್ವಾಮಿತ್ರರು ಉಪದೇಶೆಸಿದಂತೆ ಅವನು ತನ್ನ ಪ್ರಾಣರಕ್ಷಿಸಲು ಇಂದ್ರ, ಅಗ್ನಿ, ವಿಷ್ಣು – ಈ ಮೂವರನ್ನು ಸ್ತುತಿಸಿದನಂತೆ. ಇದನ್ನು ಕುರಿತು ನಟ್, ಬಟ್, ವಿಟ್, ಕಟ್ ಗಳು ಅಂತಯೇ ಬರುವಂತೆ (ಅಂದರೆ ನಟ, ವಿಟ, ಇತ್ಯಾದಿಗಳಲ್ಲದೆ) ಮಾಡಿದ ಪ್ರಯತ್ನ. ’ಬಟ್’ – ಅಚ್ಛಮ್ಬಟ್ಕಾರ ಎಂಬ ಕೋಷಗತಪದವನ್ನು ಬಳಸಿದೆ. ಅಲ್ಲಿ ಸುಲಭವಾಗಿ ಬೇರೆ ಏನೂ ಹೊಳೀಲಿಲ್ಲ. ’ಅಚ್ಛಮ್ಬಟ್ಕೃ’ ಅಂದರೆ ವಿನಾಶ ಆಗದಿರುವಿಕೆ.

    ಇಷ್ಟು ದೊಡ್ದ್ದ ಪ್ಲೇಟ್ ಹಾಕಿ ಪದ್ಯದ ತಾತ್ಪರ್ಯದ ಕಡೆಗೆ ಬಂದೆ.. ನಟನೆಮಾಡಿ ಅಮೃತದ ರಕ್ಷಣೆ ಮಾಡಿದ ವಿಷ್ಣುವನ್ನು, (ನನ್ನ) ವಿನಾಶವಾಗದೇ ಇರಲಿ ಎಂಬ ಮತಿಯಿಂದ ಸ್ವಾಹಾಸಮೇತನಾದ ಪರಮಾಗ್ನಿಯನ್ನು, ಭೂಲೋಕದ ರಾಜರಿಗೆ ಮಾರ್ಗದರ್ಶಕನಾದ ಇಂದ್ರನನ್ನು ಸ್ತುತಿಸುವೆ. (ರಾಜಾ ಅಂಬರೀಷ ಅವನನ್ನು ಬಲಿಪಶುವಾಗಿ ಮಾಡಿರುವುದು. ಅದಕ್ಕೆ ಇಂದ್ರನು (ಈ) ರಾಜನಿಗಿ ಬುದ್ಧಿಹೇಳಲಿ ಎಂದು ಭಾವನೆ). ಶುನಃಶೇಪನ ಈ ಮಾತುಗಳ ಕೇಳಿ ಸುರರು ರಕ್ಷಿಸಲು ಪ್ರತ್ಯಕ್ಷರಾದರು.
    ನಟ್ಯ = ನಟರ ಸಮೂಹ.

    • ನಿಮ್ಮ ಪದ್ಯವು ಕಠಿಣಾರ್ಥಗಳಿಂದ ಕೂಡಿ ನಾಲ್ಕೈದು ಬಾರಿ ಓದಿಸಿತು :), ಶುನ:ಶೇಪನ ವೃತ್ತಾಂತವನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು

  9. ಕುರುಕ್ಷೇತ್ರ ಯುದ್ಧಾರಂಭದಲ್ಲಿ ಅರ್ಜುನ ಕೃಷ್ಣನಿಗೆ —

    ಸಂಚರಿಸಲೀ ರಥದಿ ಬಟ್ಟ ಬಯಲೊಳು ನಾನು
    ಸಂಚಿಗೊಳಗಾಗಿಹೆನೆ?ನಟ್ಟ ನಡುವಿರಲು
    ವ೦ಚಿಸುತ್ತಿರುವೆನೇ?ನನ್ನವರ ದಯವಿಟ್ಟು
    ಸಂಚೊಂದ ಹೂಡಿ ಕಟ್ಟೆನ್ನ ಮನವ

  10. ದುಟ್ಟನ ಕೈಯಿಂ ತಾನಟ್ಟುಳಿಯಂಬಟ್ಟು
    ತೊಟ್ಟಳಾ ಕೃಷ್ಣೆ ಪಣಮೊಂದನಿಳಿವಿಟ್ಟ
    ದಟ್ಟನೀಳ್ಮುಡಿಯಂ ಕಟ್ಟಳೈ

    • ಶ್ರೀಕಾಂತರೆ,
      ವಿವಿಧ ವೃತ್ತಗಳಲ್ಲಿ ರಸಮಯ ಪೂರಣಗಳ ವೇಗಕ್ಕೆ ಮತ್ತು ಓಘಕ್ಕೆ ನಮನಗಳು, ನಿಮ್ಮಿಂದ ಇನ್ನೂ ಪೂರಣಗಳು ಈ ಸಂಚಿಕೆಗೆ ಬರಲಿವೆ ಎಂದು ನಂಬಿದ್ದೇನೆ 🙂

  11. ಧರ್ಮಜನಿಗೆ ಭೀಮನ ನುಡಿ –

    ದುಟ್ಟರ ಗನ್ನಟ್ಟುಳಿಯಂ-
    ಬಟ್ಟಿರ್ದುದಕೀಗಳೈದು ಧುರಕುಬ್ಬಟೆಯಿಂ-
    ದಟ್ಟಿಸೆ ಜವನೂರಿಗೆ ನಾ-
    ವಿಟ್ಟೆಯಳಾ ಕಟ್ಟಳಲ್ಗುಮದೆ ನಲ್ಮುಯ್ ದಲ್ ||

  12. ಮತ್ತೊಂದು ನುಡಿ –

    ನೋಡಲ್ಕಕ್ಕೇಂ ? ಸ್ಮಯಮಯನಟಾಟೋಪಮಂ ನಿಚ್ಚವುಂ ಮೇಣ್
    ನೀಡಲ್ಕಕ್ಕೇಂ ? ಧರೆಯನುರೆ ಪೊಂಬಟ್ಟಲೊಳ್ ದ್ರೋಹಿಗಳ್ಗುಂ |
    ಪಾಡಲ್ಕಕ್ಕೇಂ ? ವಿಟಪಿತಟಶಾಯಿತ್ವಬೀಜಂಗಳಂ ಪೊ-
    ಕ್ಕೂಡಲ್ಕಕ್ಕೇಂ ? ಶಠವಿಕಟದುಷ್ಟರ್ಗಳಂ ಕೂರ್ಮೆಯಿಂದಂ ||

    • ಪೆಜತ್ತಾಯರೆ, ಬಹಳ ಚೆನ್ನಾಗಿದೆ ನಿಮ್ಮ ಪೂರಣಗಳು ‘ಪಿತಟ’ ಎಂದರೇನು?

    • ಪೆಜತ್ತಾಯರೆ ಈ ನಿಮ್ಮ ಪದ್ಯದ ಉತ್ತರಾರ್ಧದ ಅರ್ಥ ಸ್ಪಷ್ಟವಾಗ್ತಿಲ್ಲ. “ಅಕ್ಕೇಂ” ಪ್ರಯೋಗ ಸರಿಯಲ್ಲವನ್ಸುತ್ತೆ. ಹಾಗೆಯೆ ಪೊಕ್ಕು+ಕೂಡಲ್ ಪೊಕ್ಕೂಡಲ್ ಆಗುವುದಿಲ್ಲ. ಪೊಕ್ಕುಕೂಡಲ್ ಎಂದೇ ಉಳಿಯುತ್ತೆ.

      • ಶ್ರೀಕಾಂತರೇ,
        ಉತ್ತರಾರ್ಧದ ಅರ್ಥ – ಮರದಡಿಯಲ್ಲಿ ಮಲಗುವಂತೆ ಮಾಡಿದವರನ್ನು (ವನವಾಸಕಾರಣರನ್ನು) ಹೊಗಳಲಾದೀತೇ ? ಶಠರೂ ವಿಕಟರೂ ದುಷ್ಟರೂ ಆದ ಆ ಕೌರವರನ್ನು ಪ್ರೀತಿಯಿಂದ ಕೂಡಿಕೊಳ್ಳಲಾದೀತೇ ? ಎಂಬುದಾಗಿ.
        ಸಂಗ್ರಾಮ ಬೇಡ, ಸಂಧಾನವೇ ಆಗಬೇಕೆಂದು ಹೇಳುವ ಧರ್ಮಜನಿಗೆ ಭೀಮನ ಮಾತು.

        ನೋಡಲಾದೀತೇ or ನೋಡಬೇಕೋ ಎಂಬರ್ಥದಲ್ಲಿ ನೋಡಲ್ಕಕ್ಕೇಂ ಎಂದು ಬಳಸಿದ್ದೇನೆ. ಹಳೆಗನ್ನಡ ವ್ಯಾಕರಣದ ಹೆಚ್ಚಿನ ಅರಿವಿಲ್ಲ.ತಪ್ಪಿದ್ದಲ್ಲಿ ತಿಳಿಸಿ ಸರ್ 🙂

      • ಉತ್ತರಾರ್ಧವನ್ನು ಪರಿವರ್ತಿಸಿದ್ದೇನೆ.
        ಬೇಡಲ್ಕಕ್ಕೇಂ ? ವಿಟಪಿತಟಶಾಯಿತ್ವಬೀಜಂಗಳಂ ಕೊಂ-
        ಡಾಡಲ್ಕಕ್ಕೇಂ ? ಶಠವಿಕಟದುಷ್ಟರ್ಗಳಂ ಕೂರ್ಮೆಯಿಂದಂ ||

        ಧನ್ಯವಾದ ಸರ್ 🙂

        • ನೋಡಲ್ಕಕ್ಕುಮೆ, ಕೊಂಡಾಡಲ್ಕಕ್ಕುಮೆ ಇತ್ಯಾದಿ ರೂಪಗಳು ಸಾಧು.

          • ಧನ್ಯವಾದಗಳು ಸರ್. ಈ ಶಬ್ದಗಳು ಮಂದಾಕ್ರಾಂತಕ್ಕೆ ಹೊಂದುವುದಿಲ್ಲವಾದ್ದರಿಂದ ಬೇರೆ ವೃತ್ತದಲ್ಲಿ ಪರಿಷ್ಕರಿಸುವೆ.

  13. ಢಾಳಂ ಮರ್ತ್ಯನಟರ್ಗಳಿಂಗೆ, ವಿಧದಾ ಸಂಭಾವ್ಯದೊಳ್ ಭೌಮಮಂ
    ನೀಳಂಗೈದಪ ಪಾತ್ರಕೋಟಿ ತಳೆಸುತ್ತುಬ್ಬಟ್ಟೆಯಂ ತೋರ್ಪ ಕಾ-
    ವ್ಯಾಳಿ, ಸ್ಫಾಲನಸಾಂತ್ವನಪ್ರಕೃತಿನಿರ್ಘೋಷಂ, ವಿಟಕ್ಲೇಶದಂ-
    ಭೋಳಿತ್ರಸ್ತಪರಂಪರೋತ್ಕರನ ಧರ್ಮಕ್ಕಪ್ಪ ಕಟ್ಟಳ್ಕೆಯಯ್

    ಮಹಾಭಾರತವನ್ನು ಕುರಿತು ಎಲ್ಲವನ್ನು ಪ್ರಥಮಾವಿಭಕ್ತಿಯಲ್ಲಿ ಬರೆದಿದ್ದೇನೆ, ತಪ್ಪಿದ್ದರೆ ತಿದ್ದಬೇಕು

    ಢಾಳ – banner
    ಭೌಮ – story/plot
    ಉಬ್ಬಟ್ಟೆ – greatness
    ಕಾವ್ಯಾಳಿ – ಕಾವ್ಯ
    ಸ್ಫಾಲನಸಾಂತ್ವನ – friction/conciliation
    ನಿರ್ಘೋಷಂ – outcry
    ವಿಟಕ್ಲೇಶ – ವಿಲಾಸಿಜೀವನದ ಕ್ಲೇಶ (ಜೂಜು, ಹೆಣ್ಣು, ಭೂಮಿಯ ಒಡೆತನದ ಸಂಘರ್ಷ)
    ದಂಭೋಲಿ – ಇಂದ್ರಾಯುಧ
    ಉತ್ಕರ – uplifting
    ವಿಟಕ್ಲೇಷದಂಭೋಲಿತ್ರಸ್ತಪರಂಪರೋತ್ಕರನ – ಕೃಷ್ಣನ
    ಕಟ್ಟಳ್ಕೆ – tight embrace

    • Nice Soma

    • ಅತ್ಯದ್ಭುತ ಪದಪ್ರಯೋಗ ಸೋಮ. ತುಂಬಾ ಚೆನ್ನಾಗಿದೆ. 🙂
      ಆದರೆ ಒಂದು ಸಂಶಯ. ಪ್ರಾಸ ಶಬ್ದದಲ್ಲಿ “ಳಂ” “ಳ” “ಲ” ಬರಬಹುದೇ?

      • ಕಶ್ಯಪ ಧನ್ಯವಾದಗಳು,

        ಪ್ರಾಸದ ಪ್ರಶ್ನೆಯ ಬಗ್ಗೆ:

        1. ‘ಳ’ ಮತ್ತು ‘ಲ’ ಬಳಕೆ ಉತ್ತಮವಾದದ್ದಲ್ಲ, ಇದನ್ನು ಸಮೀಪ ಪ್ರಾಸ ಎನ್ನುತ್ತಾರೆ. ಕೆಲವೊಮ್ಮೆ ಅಶಕ್ತಿಯಿಂದಲೋ ಮತ್ತಾವ ಕಾರಣದಿಂದಲೋ ಸಮೀಪಪ್ರಾಸವನ್ನು ಬಳಸುವುದುಂಟು, ನಾನು ಮೇಲಿನ ಪದ್ಯದಲ್ಲಿ ಬಳಸಿದ್ದೇನೆ :). ಇದನ್ನು ಸಾಧ್ಯವಾದಷ್ಟು ತಪ್ಪಿಸುವುದೇ ಸರಿ ಎನಿಸುತ್ತದೆ.

        2. ಆದಿಪ್ರಾಸಕ್ಕೆ ವ್ಯಂಜನಸಾಮ್ಯವಷ್ಟೇ ಕಡ್ಡಾಯ ಸ್ವರಸಾಮ್ಯ ಕಡ್ಡಾಯವಲ್ಲ ಮತ್ತು ಅದು ತೊಡಕೂ ಆಗುತ್ತದೆ. ಆದರೆ ಯಾವುದೇ ವೃತ್ತದ ಸಾಲಿನಲ್ಲಿ ಪ್ರಾಸಸ್ಥಾನ ಗುರುವಾಗಿದ್ದಲ್ಲಿ ಪ್ರಾಸಾಕ್ಷರಕ್ಕೆ ಹ್ರಸ್ವಾಕ್ಷರದ/ದೀರ್ಘಾಕ್ಷರ ಯಾವುದನ್ನಾದರೂ ಬಳಸಬಹುದು, ಹ್ರಸ್ವಾಕ್ಷರದ ಬಳೆಕೆಯಾಗಿದ್ದರೆ ಮುಂದಿನ ಅಕ್ಷರ ಕಡ್ಡಾಯವಾಗಿ ಸಂಯುಕ್ತಾಕ್ಷರವಾಗಬೇಕು. ನನ್ನ ಪದ್ಯದಲ್ಲಿ “ವ್ಯಾಳಿ, ಸ್ಫಾ…” ಇರುವುದರಿಂದ ಸಮಸ್ಯೆಯಿಲ್ಲ

        ರನ್ನನ ಪದ್ಯದ ಉದಾಹರಣೆ:
        ಆರಾತೀಯ ಕವೀಶ್ವರ-
        ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ-
        ಡಾರದ ಮುದ್ರಿಕೆಯೊಡೆದಂ
        ಸಾರಸ್ವತಮೆನಿಪ ಕವಿತೆಯೊಳ್ ಕವಿರನ್ನಂ

        • ತಿಳಿಸಿದ್ದಕ್ಕೆ ಧನ್ಯವಾದಗಳು ಸೋಮ. ಪ್ರಾಸಾಕ್ಷರಕ್ಕೆ ಹ್ರಸ್ವಾಕ್ಷರ/ ದೀರ್ಘಾಕ್ಷರ ಬಳಸಬಹುದೆಂದು ಗೊತ್ತಿರಲಿಲ್ಲ. ಧನ್ಯವಾದ.

        • ಸೋಮ
          “ಅಂಭೋಳಿ” ಎಂದು ಹಾಕಿದರೆ ವ್ಯಾಜ್ಯ ತೀರುತ್ತೆ. ಸಂಸ್ಕೃತಪದವಾದ್ದರಿಂದ ಲಕಾರಕ್ಕೆ ಳಕಾರ ಪರ್ಯಾಯವಾಗಬಹುದು.

          ತಮ್ಮ ಪಾಯಿಂಟ್ 2 ರಲ್ಲಿ ಸಂಯುಕ್ತಾಕ್ಷರದಬಗ್ಗೆ ಹೇಳಿದ್ದು ಅರ್ಥವಾಗ್ತಿಲ್ಲ. ಬಿಡಿಸಿ ಹೇಳುವುದು.

          @ಕಶ್ಯಪ್
          ದ್ವಿತಿಯಾಕ್ಷರಪ್ರಾಸದಲ್ಲಿ ಪ್ರಾಸಾಕ್ಷರದ ಹಿಂದಿನ ಅಕ್ಷರದ ಮಾತ್ರೆ ಸಮಾನವಾಗಿರಬೇಕು- ಅರ್ಥಾತ್ ಎಲ್ಲವೂ ಲಘು ಅಥವಾ ಎಲ್ಲವೂ ಗುರುವಾಗಿರಬೇಕು. ಪ್ರಾಸಾಕ್ಷರಕ್ಕೆ ಈ ಕಟ್ಟಳೆಯಿಲ್ಲ. ಪ್ರಾಸಾಕ್ಷರ ಸಂಯುಕ್ತಾಕ್ಷರವಾದರೆ ಅದನ್ನು ಹಾಗೆಯೇ ಪ್ರತಿಪಾದದಲ್ಲಿಯೂ ಇಡಬೇಕ್- ಉದಾಹರಣೆಗೆ “ಸ್ಥ” ಗೆ ಉಳಿದ ಪಾದಗಳಲ್ಲಿ ಸ್ಥಿ ಸ್ಥೈ ಸ್ಥೂ ಸ್ಥ ಇತ್ಯಾದಿ ಬರಬಹುದು. “ಸ್ಕ” “ಸ್ವ” ಇತ್ಯಾದಿ ಬರುವಹಾಗಿಲ್ಲ.

          • ಶ್ರೀಕಾಂತರೆ,

            ದಂಭೋಳಿ ಮಾಡಿದ್ದೇನೆ

            2ನೇಯದು ಪ್ರಾಸಸ್ಥಾನಕ್ಕಷ್ಟೇ ಸೀಮಿತವಾದ ಅಂಶವಲ್ಲ, ಯಾವುದೇ ಸ್ಥಾನದಲ್ಲಿ ಗುರ್ವಕ್ಷರವು ಬೇಕಿದ್ದಲ್ಲಿ ಹ್ರಸ್ವವನ್ನು ಬಳಸಿದರೆ ಮುಂದಿನ ಅಕ್ಷರವನ್ನು ಸಂಯುಕ್ತಾಕ್ಷರ ಮಾಡಬೇಕಾಗುತ್ತದೆ ಸಾಮಾನ್ಯ ಎನ್ನುವ ನಿಯಮವನ್ನ ನಮ್ಮ ಕಶ್ಯಪನಿಗೆ ಮನದಟ್ಟು ಮಾಡಿಸಿದೆ. ಈ ವಿಷಯದಲ್ಲಿ ಹಿಂದೆ ಕಶಪ ಸಂದೇಹ ಕೇಳಿದ್ದು ನೆನಪು 🙂

  14. ಕಟ್ಟಿದಾ ಮೀನಿನ ಪ್ರತಿಬಿಂಬವನೆ ನೋಡಿ
    ಬಿಟ್ಟ ಬಾಣವು ನೆಟ್ಟಿತು ಕಣ್ಣಿನ ನಟ್ಟ ನಡುವೆ
    ವಿಟ್ಟ ಪುಷ್ಪಹಾರವನು ಹಾಕಲು ದ್ರೌಪತಿಯ
    ಬೆಟ್ಟ ಬೆರಗಾಗಿ ನಿಂತರಾ ಅತಿಮಹಾರಥರು

    • ಪ್ರಭಂಜನರೆ, ಒಳ್ಳೆಯ ಪ್ರಸಂಗವನ್ನು ಆಯ್ದುಕೊಂಡಿದ್ದೀರಿ. ನಿಮ್ಮ ಪದ್ಯದ ಛಂದಸ್ಸನ್ನು ಗಮನಿಸಿಕೊಳ್ಳಿರಿ, ಛಂದಸ್ಸು ಯಾವುದೆಂದು ಸ್ಫಷಟವಾಗುತ್ತಿಲ್ಲ. ಅಂತೆಯೇ ದತ್ತಪದಿಯಾದ ‘ಬಟ್’ ಪದ್ಯದಲ್ಲಿ ಬಂದಿಲ್ಲ. ‘ವಿಟ್ಟ ಪುಷ್ಪಹಾರವ’ ಎಂದರೇ ‘ಇಟ್ಟ ಪುಷ್ಪಹಾರವ’ ಎಂಬುದು ನಿಮ್ಮ ಆಶಯವೇ ಹಾಗಿದ್ದಲ್ಲಿ ‘ವಿಟ್ಟ’ ಅಲ್ಲಿ ಸರಿಯಾದ ಪ್ರಯೋಗವಲ್ಲ, ನಿಮ್ಮ ಪದ್ಯದ ಛಂದಸ್ಸಿನ ಎರಡನೇ ಪಾದದ ಕೊನೆಗೆ ಊನಗಣವಿಲ್ಲದಿದ್ದಲ್ಲಿ ಮಾತ್ರ ಮೂರನೇಪಾದದ ಮೊದಲಗಣಕ್ಕೆ ಸಂಧಿ ಮಾಡಲು ಸಾಧ್ಯ. ಪ್ರಯತ್ನವನ್ನು ಮುಂದುವರೆಸಿರಿ 🙂

  15. ಕುಕ್ಕಟ್ಟಿಗೊಂದು ಪೂವಿಟ್ಟು ಗೊಲ್ಲಗಂದನ ಕೆನ್ನೆಗಂ
    ಚೊಕ್ಕಮಾದೊಂದು ಬಟ್ಟಿಟ್ಟೆಸೋದೆ ಕೆಟ್ಟುದನಟ್ಟಿದಳ್

    • ಶ್ರೀಕಾಂತರೆ, ನಿಮ್ಮೆಲ್ಲ ಪದ್ಯಗಳೂ ರಸವತ್ತಾಗಿದ್ದು, ಹಳೆಗನ್ನಡದ ಆಳ-ಅಗಲಗಳನ್ನು ಚೆನ್ನಾಗಿ ಪರಿಚಯಿಸುತ್ತಿವೆ. ಇನ್ನಷ್ಟು ಪದ್ಯಗಳ ನಿರೀಕ್ಷೆಯೊಂದಿಗೆ ಧನ್ಯವಾದಗಳು 🙂

      • ಧನ್ಯವಾದ ಪೆಅತ್ತಾಯರೆ. ಲಹರಿ ಉಂಟು- ಸಮಯ ಕಡಿಮೆ- ಕೈಗೂಡಿದರೆ ಹಾಕುತ್ತೇನೆ

  16. ನಾನಾವೃತ್ತವಿಲಾಸರಾಸರಸಿಕಂ ಶ್ರೀಕಾಂತನೇ ಕಾಂತನ-
    ನ್ಯೂನೋದಾರಕವಿತ್ವವಿತ್ತ್ವನೆ ಪೆಜತ್ತಾಯಂ ಸಮಾತ್ತಾಯನು-
    ದ್ಯಾನಂ ಸೋಮನನನ್ಯಪದ್ಯರಚನಾ-ಸಮ್ಯಕ್ಪ್ರತಿಸ್ಪಂದನ-
    ಧ್ಯಾನಂ ಮೇಣಿತರರ್ ಸುಹೃದ್ವರರಿರಲ್ಕೀ ಸಂಚಿಕೆ ಪ್ರಸ್ತುತಂ ||

  17. ಬಟ್ಟೆಯ ಕಣ್ಣಿಗೆ ತಾನೇ
    ಕಟ್ಟಿ ಪಡೆದಳೇನು ತಾ ನಟಿಸಿ ಗಾಂಧಾರೀ |
    ಪಟ್ಟದರಸಿಭಾಗ್ಯವನಡ-
    ವಿಟ್ಟು ವಿಧಿಯಗಿರವಿಯಂಗಡಿಯಲಿ ಬೆಳಕನಂ ? ||

    • ಸುಧೀರ್ ಸರ್, ಚೆನ್ನಾಗಿದೆ ಪದ್ಯ :), ಕನ್ನಡಪದ್ಯಗಳಲ್ಲಿ ಎರಡು ವಿಷಯ:
      1. ‘ಬೆಳಕಂ’ ಸರಿ ಪ್ರಯೋಗ ‘ಬೆಳಕನಂ’ ಆಗುವುದಿಲ್ಲ.
      2. ‘ಗಾಂಧಾರೀ’ ಸಂಭೋದನೆಯಾಗುತ್ತದೆ ಪ್ರಥಮಾವಿಭಕ್ತಿಯಾಗುವುದಿಲ್ಲ, ಪ್ರಥಮಾವಿಭಕ್ತಿಗೆ ಹ್ರಸ್ವವಾಗುತ್ತದೆ

  18. ಛಲದಿದುರ್ಯೋಧನಂ ಬೆನ್ನಟ್ಟಿ ಬರುತಿರಲ್
    ಭಲವಿಟ್ಟು ಬೀಸಲ್ಕೆ ಭೀಮನುರುಳಲ್|
    ನೆಲದೆ ಕೈಕಟ್ಟಿತೋರುತೆ ಕೃಷ್ಣ ಸಂಜ್ನೆಯಂ
    ಹುಲಿಯಂತೆಭೀಮನಾರ್ಭಟಿಸಿ ಕೊಂದನ್|

  19. ಉಬ್ಬಟೆ >> copied from Soma 😉

    ಬನದೊಳ್ ರಕ್ಕಸರರೆಲ್ಲರಂ ವಧಿಸುತುಂ ಸಾವನ್ನು ತಾನಟ್ಟಿದಂ
    ಎನುತುಂ ದ್ರೌಪದಿ ಭೀಮನಂ ಸ್ಮರಿಸುವಳ್ ತಾಕಟ್ಟುತುಂ ಪೂಗಳಮ್
    ಮನೆಯೊಳ್ ಭೀಮನ ವಿಟ್ಟದಾರೆನಗೆ ಪೇಳೆನ್ನುತ್ತ ತಾ ರೋದಿಪಳ್
    ನೆನೆವಳ್ ನಿತ್ಯವು ಭೀಮನುಬ್ಬಟೆಯತಾನ್ ಸಂತೋಷದಿಂದೆಲ್ಲರೊಳ್

    • ಪದ್ಯಶೈಲಿಯು ಸುಧಾರಿಸಿದೆ. ಆದರೆ ಎರಡನೆಯ ಪಾದದ ಆರಂಭದಲ್ಲಿ ಸಂಧಿಯಾಗಬೇಕಿತ್ತು.

  20. ಉತ್ಸಾಹ ವೃತ್ತ
    ದ್ರೋಣಾಚಾರ್ಯ ಮತ್ತು ಅರ್ಜುನರ ನಡುವೆ ಸಂಭಾಷಣಾ ರೂಪದಲ್ಲಿ –

    ಕಟ್ಟಿಯಿಟ್ಟ ಪಕ್ಷಿಯನ್ನು ನಿಂದುಯಿಲ್ಲಿ ನೋಡು ನೀ
    ವಿಟ್ಟ ಪುಟ್ಟ ಹಕ್ಕಿಗಿಪ್ಪ ಕಣ್ಣು ಮಾತ್ರ ಕಾಂಬೆ ನಾ
    ನೆಟ್ಟಿಸಿಟ್ಟ ನೋಟದಲ್ಲೆ ಹೂಡು ಬೇಗ ಬಾಣವಾ
    ಬಟ್ಟಗಣ್ಣ ಗೊಂಬೆ ಹಕ್ಕಿ ಬಿತ್ತು ನೋಡಿ ಭೂಮಿಗೇ
    ಬಟ್ಟ = ಗೋಲವಾಗಿರುವ .

    • ಒಳ್ಳೆಯ ಸನ್ನಿವೇಶ ಮತ್ತು ಯತ್ನ. “ನಟ್” ಬಂದಿಲ್ಲ. ಮತ್ತೆ ಮೊದಲ ಪಾದದಲ್ಲಿ “ನಿಂದುಯಿಲ್ಲಿ” ತಪ್ಪು. ನಿಂದಿಲ್ಲಿ ಎಂದಾಗಬೇಕು. ಹಾಗೆಮಾಡಿದರೆ ಛಂದಸ್ಸು ಕೆಡುತ್ತೆ. ನೋಡಿ ಸರಿಮಾಡಿ.

      • Thank you sir.
        ಕಟ್ಟಿ ಗೆಲ್ಲೊಳಿಟ್ಟ ಪಕ್ಷಿಯನ್ನೆ ಬಂದು ನೋಡು ನೀ
        ವಿಟ್ಟ ಪುಟ್ಟ ಹಕ್ಕಿಗಿಪ್ಪ ಕಣ್ಣು ಮಾತ್ರ ಕಾಂಬೆ ನಾ
        ನಟ್ಟ ನಡ್ವೆ ಈಡನಿಟ್ಟೆ ಹೂಡು ಬೇಗ ಬಾಣವಾ
        ಬಟ್ಟಗಣ್ಣ ಗೊಂಬೆ ಹಕ್ಕಿ ಬಿತ್ತು ನೋಡಿ ಭೂಮಿಗೇ
        ಬಟ್ಟ = ಗೋಲವಾಗಿರುವ , ಈಡು =ಗುರಿ

  21. ಕೌರವರೊಡನೆ ಸಂಧಿ ಬೇಡವೆಂದು ಧರ್ಮಜನಿಗೆ ಭೀಮನ ಮತ್ತೊಂದು ನುಡಿ.

    ಸ್ಮಯದಿಂ ಮಾಳ್ದಪನಾಣ್ಮೆಬಟ್ಟಮೊಗಮಂ ಕಣ್ಣೀರ ಮುನ್ನೀರನ-
    ನ್ನೆಯದಿಂ ದ್ಯೂತಮನಾಡಿ ನೀಳ್ದನಟವೀವಾಸಿತ್ವಮಂ ಮೇಣ್ ಧರಿ-
    ತ್ರಿಯನೇ ಬಾಳ್ಮೊನೆಯೊಳ್ ಪೊಣರ್ಚಿ ಕೊಳೆ ನಾವಿಟ್ಟಿರ್ಪೆವೆಂದಿರ್ಪನಾ
    ಕುಯಶೋಧಾಮನ ಕೂಡೆ ಸಂಧಿಯೆಮಗಂ ಕಟ್ಟಾಳ್ಗಳಿಂಗಕ್ಕುಮೇ ?

    • ಒಳ್ಳೆಯ ಶೈಲಿಯಲ್ಲಿ ಚೆನ್ನಾದ ರಸ-ಭಾವಗಳನ್ನು ಗ್ರಹಿಸಿ ಸೊಗಸಾದ ಪದ್ಯವನ್ನು ನೀಡಿದ್ದೀರಿ; ಧನ್ಯವಾದ.

    • ಬಿಗಿಯಾದ ಶೈಲಿಯ ಪದ್ಯ- ಛಲೋ ಅದೆ

    • ಪೆಜತ್ತಾಯರೆ ಬಹಳ ಚೆನ್ನಾಗಿದೆ ಪದ್ಯ 🙂

    • ಗಣೇಶ್ ಸರ್, ಶ್ರೀಕಾಂತರೆ, ಶರ್ಮರೆ,
      ನಲ್ವಾತಿಗೆ ನಮನಗಳು 🙂

  22. ನಟ್ಟಿರೆ ಕಂಬಮಂ ಕುಟಿಲ-ಕೌರವ-ತೇಜಿಯ ಮೇಧಕೆಂದೊಡಂ-
    ಬಟ್ಟಿರೆ ಕೃಷ್ಣನಿಂದರಮಗಂ ಗಡಮಾಹವದಗ್ನಿಯಾ ಇದಿರ್
    ಕಟ್ಟಿದನಲ್ತೆ ಶಿಂಜಿನಿಯ ಕಂಕಣಮಂ ಬಲಿಯಂ ಸುರರ್ಗೆ ತಾಂ
    ಕೊಟ್ಟವನಂತು ತೊಟ್ಟನರಮಂ ದಿಟದಿಂ ಗುರುವಿಟ್ಟ ಬಟ್ಟೆಯೊಳ್||

    ಮಹಾಭಾರತದ ಯುದ್ಧವನ್ನು ಅಶ್ವಮೇಧ ಯಾಗಕ್ಕೆ ಹೋಲಿಸಿ-ಕುಟಿಲನಾದ ಕೌರವನೆಂಬ ಅಶ್ವ(ತೇಜಿ)ವನ್ನು ಬಲಿಕೊಡಲೆಂದು ಯೂಪಸ್ಥಂಬವನ್ನು ನೆಟ್ಟಿರಲು, ಕೃಷ್ಣನಿಂದ ಧರ್ಮಸುತ(ಅರಮಗ) ಒಡಂಬಟ್ಟು , ಯುದ್ಧವೆಂಬ ಅಗ್ನಿಯ ಎದುರಲ್ಲಿ ಚಾಪದ ಶಿಂಜಿನಿಯೆಂಬ ಕಂಕಣವನ್ನು ಕಟ್ಟಿದ. ದೇವತೆಗಳಿಗೆ ಹಾಗೆ ಬಲಿಯನ್ನು ಕೊಟ್ಟವನು ದಿಟದಿಂದ ಗುರು ಇಟ್ಟ ಮಾರ್ಗದಲ್ಲಿ ಸಾಗಿ ಧರ್ಮವನ್ನು ಧರಿಸಿದ.

    • ಕೊಪ್ಪಲತೋಟದ ಪಣ್ಣಿದು
      ಸೊಪ್ಪುಂ ಸವಡಾಗದಂತೆ ಕವಿತಾರಣದೊಳ್ |
      ಕುಪ್ಪಳಿಸಿರ್ಪುದು ರಸದಿಂ
      ತಪ್ಪಣಮುಮಿರದ ಬೆಡಂಗಿನಿಂದಿದು ನವ್ಯಂ ||

      (ನವ್ಯಂ = ಸ್ತವನೀಯಂ)
      ತೇಜಿ ಎಂಬುದು ಮರಾಠಿಶಬ್ದ. ಇದು ಕುಮಾರವ್ಯಾಸ, ಕುವೆಂಪು ಮುಂತಾದವರಿಂದ ಆಮದಾಗಿದೆ. ಸಮಾಸದಲ್ಲಿ ಇದು ಸರಿಯಾಗದು. ವಾಜಿ ಎಂಬ ಸಂಸ್ಕೃತಪದವೇ ಯುಕ್ತ.

      • ಧನ್ಯವಾದಗಳು ಸರ್, ತೇಜಿ ಎಂಬುದರ ಬದಲಿಗೆ ವಾಜಿ ಎಂಬ ಶಬ್ದ ನೆನಪಿಗೇ ಬರಲಿಲ್ಲ:-(

    • ಸೊಗಸಾದ ಕಲ್ಪನೆ- ರೂಪಕಾಲಂಕಾರ ಭಳಾ
      ತಪ್ಪಣಮುಂಟಲ್ತೆ?

      ಆಹವದಗ್ನಿಯಾ ಇದಿರ್- ವಿಸಂಧಿ- ಇದು ಆಹವದಗ್ನಿಯಿದಿರ್ ಎಂದಾಗಬೇಕಲ್ಲವೆ.

      • ಆಹವದಗ್ನಿಯ ಎಂದಿದ್ದರೆ ಸಂಧಿಯಾಗಲೇಬೇಕಿತ್ತು. ಆಹವದಗ್ನಿಯಾ ಎಂದು ದೀರ್ಘವಿರುವ ಕಾರಣ ವಿಸಂಧಿ ದೋಷ ತಾಗುವುದಿಲ್ಲ ಎಂದು ಕೊಂಡಿದ್ದೇನೆ:-)

    • ಕೊಪ್ಪಲತೋಟರೆ, ಬಹಳ ಚೆನ್ನಾಗಿದೆ ಪದ್ಯ.

  23. ನಟ್ಟಡವಿಯೊಳಗೆಯ್ತಂದ ಋಷಿಗಣಕೌತಣಮಿಡಲನ್ನಮಿಲ್ಲದ ಬಿ-
    ಕ್ಕಟ್ಟನೆಣಿಸುತ್ತೆ ಕೈಕೈಯಂ ಪಿಸುಕುತ್ತೆ ದ್ರೌಪದಿ ಕೃಷ್ಣನನೆಣಿಸುತ್ತಶ್ರು
    ವಿಟ್ಟು ಕರೆದಾಗಳ್ ಬಂದವನುಳಿದಿರ್ದ ಕಡೆಯಗುಳುಂಡೊಡಂ ಜಗಕೆಲ್ಲಮಾಹ್ !
    ಬಟ್ಟಿಯೊಡೆವಂತೆ ತುಂಬಿದುದಚ್ಚರಿಯಲ್ಲವೈಯಾತನೆ ವಿಶ್ವಂಭರಂ

    ಬಟ್ಟಿ- ಹೊಟ್ಟೆ.

    ಈಪದ್ಯ ಪಿರಿಯಕ್ಕರ- ಒಂದುಬ್ರಹ್ಮ, ಐದು ವಿಷ್ಣು, ಒಂದು ರುದ್ರ ಹೀಗೆ ಗಣಗಳ ವಿಂಗಡಣೆ.

    • chennAgide 🙂

    • ಪದ್ಯವೇನೋ ಸೊಗಸಾಗಿದೆ. ಆದರೆ ಪಿರಿಯಕ್ಕರದಂಥ (ಉಳಿದಂತೆ ಮಿಕ್ಕ ಅಕ್ಕರಗಳಿಗೂ ಇದು ಸಲ್ಲುತ್ತದೆ) ಪಾದಾಂತಸಂಸ್ಥೋನಗಣಗಣ್ಯವಾದ ಕರ್ಷಣಪ್ರವಣಬಂಧಗಳಲ್ಲಿ ಖಂಡಪ್ರಾಸವು ಅರ್ಥಗತಿದೃಷ್ಟ್ಯಾ ಹಿತವಾದೀತೇ? ದಿಟವೇ, ಪಂಪಾದಿಗಳಿಂದಲೂ ಈ ಸಂಪ್ರದಾಯ ಸಾಗಿ ಬಂದಿದೆ. ಆದರೆ ಸೇಡಿಯಾಪು ಅವರು ಇದನ್ನು ಹೀಗೆ ಭಾವಿಸಿದ್ದಾರೆ. ಮತ್ತಿದು ವಿಚಾರಸಹವಾಗಿಯೂ ತೋರುತ್ತದೆ.

      • ನಿಮ್ಮ ಮಾತು ಸಾಧುವೇ. ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ಬಂದರೆ ಲಯಕ್ಕೆ ಧಕ್ಕೆ ಬಾರದ ಹಾಗೆ ಹೇಳ/ಹಾಡ ಬಹುದು. ಪಿರಿಯಕ್ಕರದ ಮಟ್ಟಿಗಂತೂ ಇದು ನಿಜ

  24. ವಿಟ್ಟಂ (wit) ಕೇಳಿವನೆನ್ನ ಪುತ್ರನೆನುವಂ ನಟ್ ಕೇಸೆನಲ್ (nut case) ರೇಗಿ ರೀ-
    ಬಟ್ಟಲ್ (rebuttal) ನೀಡುತೆ ಬಭ್ರುವಾಹನನೆಲೋ! ಬಟ್ (butt) ಮಾಡದಿರ್ ಹಾಸ್ಯಕೇ!
    ಷಟ್ ಅಪ್ (shut up) ಜಾರೆಗೆ ಪುಟ್ಟಿದಯ್ ತಿರುಗೊ ಛಿಃ ಎಂದರ್ಜುನಂ ಪೇಳಲೋಯ್!
    ಕಟ್ ಇಟ್ (cut it) ಇಲ್ಲದೆ ಪೋಗೆ ನಾಲಿಗೆಯನೇ ಕಟ್ (cut) ಗೈವೆನೆಂದಂ ಸುತಂ

    • ಕರ್ಣಾಟಾಂಗ್ಲಮಣಿಪ್ರವಾಳರಚನಾರೋಚಿಷ್ಣು! ವಾಗರ್ಥವಿ-
      ದ್ಯಾರ್ಣಾ! ಕಾವ್ಯಕರಿಷ್ಣು! ಭೂಷ್ಣು! ಜನಹೃಜ್ಜಿಷ್ಣೂ! ರಸಿಷ್ಣೂ! ವಲ-
      ದ್ವರ್ಣಾ! ತಾವಕಜೀವಕಪ್ರತಿನವಕ್ರೀಡಾಪತತ್ರಿಚ್ಛಟಾ-
      ಕೀರ್ಣಂ ಕಂಗೊಳಿಕುಂ ಕಳಂ ಪ್ರತಿದಿನಂ ಶ್ರೀಪದ್ಯಪಾನಾಖ್ಯೆಯಾ !!

  25. ಕುಂತಿಯ ಅಳಲು.
    || ಶಿಖರಿಣೀ ||
    ಸದಾ ಸಂಕಷ್ಟಂಗಳ್ ಸುತರನುರೆ ಬೆನ್ನಟ್ಟಿ ಬರುತಿ-
    ರ್ಪುದಂ ನೋಡಲ್ಕಾ ಭಾಗ್ಯಮೆ ಪಿರಿದು ಬಾಳ್ಬಟ್ಟೆನಡೆಗೆಂ-
    ಬುದೇ ಸತ್ಯಂ ವಿದ್ಯಾದಿಗುಣವಿಟಪಿಂ ನಿಷ್ಫಲಮೆ ಕೋ-
    ವಿದರ್ಕಳ್ ಶೂರರ್ಕಳ್ ಬನದೊಳಲೆಯುತ್ತಿರ್ಪರಕಟಾ |

    ಯತಿಭಂಗವನ್ನನಿವಾರ್ಯವಾಗಿ ಆಶ್ರಯಿಸಬೇಕಾಯ್ತು.

    • ಅಡ್ಡಿಯಿಲ್ಲ. ವಿತಾನವೃತ್ತಗಳಿಗಂತೂ ಪ್ರಾಸದ ತ್ರಾಸವೇ ಸಾಕಷ್ಟಿರುವಾಗ ಯತಿಗೆ ಭಿಕ್ಷೆ ಹಾಕಲು ಎಡೆಯೆಲ್ಲಿ? ಅಲ್ಲದೆ ಖಂಡಪ್ರಾಸವು ಮತ್ತೂ ಸಲೆಸೊಗಸೆಂದು ಹಳಗನ್ನಡದ ಆಚಾರ್ಯರುಗಳ ನಿಲವೂ ಉಂಟು. ಚಿಂತೆಯಿಲ್ಲದೆ ಈ ಹಾದಿಯಲ್ಲಿ ಮುಂದುವರಿಯಿರಿ; ನಾನಾದರೂ ಇಲ್ಲಿ ನಿಮ್ಮ ಸಹಪಥಿಕನೇ ಆಗಿದ್ದೇನೆ.

  26. ದಟ್ಟ ಕಾಡೊಳಗಂದದಾಪರಿ
    ವಿಟ್ಟು ಬಿಟ್ಟಿಹ, ನಾಯ ಬಾಯೊಳು
    ನೆಟ್ಟ ಬಾಣವ ಕಂಡು ವಿಸ್ಮಯಗೊಂಡ “ದ್ರೋಣ”ನು ತ
    ನ್ನಿಷ್ಟ ಪಾರ್ಥಗೆ ಕೊಟ್ಟ ಭಾಷೆಗೆ
    ಕಟ್ಟುಬಿದ್ದು ಹೆಬ್ಬೆಟ್ಟ ಕೇಳಿರೆ
    ತಟ್ಟನಿತ್ತಿಹ ದಿಟ್ಟ ಶಿಷ್ಯನು “ಏಕಲವ್ಯ”ನು ತಾ ||

    (ಕಟ್ಟುನಿಟ್ಟನು ಬಿಟ್ಟು, “ಹೆಬ್ಬೆಟ್ಟ”ಲಿ “ಬಟ್ಟು”ಕಾಣಿರಿ ದಯವಿಟ್ಟು)

    • (೫ನೇ ಸಾಲು)
      * ಕಟ್ಟು ಬಿದ್ದವ ಬೆಟ್ಟ ಕೇಳಿರೆ

    • ಉಷ-ರವರೆ, ನಟ್, ಬಟ್ ಎಲ್ಲಿ?

      ಪರಿವಿಟ್ಟು ಏನರ್ಥ?

      ಇಷ್ಟ ಅನ್ನೋ ಕಡೆ ಪ್ರಾಸ ತಪ್ಪಿದೆ. ಇಟ್ಟ ಅಂತ ತದ್ಭವ ಬೇಕಾದರೆ ಮಾಡಬಹುದು.

      • ಧನ್ಯವಾದಗಳು ಶ್ರೀಕಾತ್ ಸರ್,
        – “ಪರಿವಿಡಿ”ಯ ಕ್ರಿಯಾರೂಪವಾಗಿ “ಪರಿವಿಡು” / “ಪರಿವಿಟ್ಟು” ತಂದದ್ದು – “ವಿಟ್” ಗಾಗಿ
        – ಇನ್ನು, ನಟ್-ಬಟ್ ಗಳನ್ನು ನೆಟ್ಟ-ಹೆಬ್ಬೆಟ್ಟಿನಲ್ಲೇ ಕಾಣಬೇಕು !
        – “ಹೆಬ್ಬೆಟ್ಟ”ನ್ನು ತೆಗೆದು “ಬೆಟ್ಟ” ಮಾಡಿದಾಗ (ಒಂದು “ಗುರು” ಹೆಚ್ಚಾಯಿತೆಂದು) – “ಹೆಬ್ಬೆಟ್ಟ” ಕೇಳಿದ ಗುರು “ದ್ರೋಣ”ರ ಪರಿಸ್ಥಿತಿಯೂ ಹಾಗೆ ಇದೆಯಲ್ಲ ಎನ್ನಿಸಿತು.
        “ಶಿಥಿಲದ್ವಿತ್ವ”ದ ಹಾಗೆ ( “ಒತ್ತ” ಹಿಂದಿನ “ಗುರು”ವು ನಿಯಮಾನುಸಾರ “ಲಗು”ವಾಗುವಂತೆ)
        – “ಇಷ್ಟ” ಶಿಷ್ಯನನ್ನು “ಪಟ್ಟಶಿಷ್ಯ”ನನ್ನಾಗಿಸಿ ತಿದ್ದಿದ ಪದ್ಯ :
        ದಟ್ಟ ಕಾಡೊಳಗಂದದಾಪರಿ
        ವಿಟ್ಟು ಬಿಟ್ಟಿಹ, ನಾಯ ಬಾಯೊಳು
        ನೆಟ್ಟ ಬಾಣವ ಕಂಡು ವಿಸ್ಮಯಗೊಂಡ ಗುರುವರತಾಂ |
        ಪಟ್ಟ ಶಿಷ್ಯಗೆ ಕೊಟ್ಟ ಭಾಷೆಗೆ
        ಕಟ್ಟುಬಿದ್ದವ “ಬೆಟ್ಟ” ಕೇಳಿರೆ
        ತಟ್ಟನಿತ್ತಿಹ ದಿಟ್ಟ ಶಿಷ್ಯನು “ಏಕಲವ್ಯ”ನುತಾಂ ||

        • ನೀವು ಹೇಳುವಂತೆ ಪರಿವಿಡು ಅಂತ ಕ್ರಿಯಾರೂಪವನ್ನು ಮಾಡೋಕಾಗೋಲ್ಲ.

          ಇನ್ನು ನಟ್ ಬಟ್- ನೆಡು/ನೆಟ್ಟ ಅನ್ನುವಪದ ನಡು/ನಟ್ಟ ಅಂತಲೂ ಬರೆಯಬಹುದು. ನ್ಯಾಯವಾಗಿ ಅದೆ ಮೂಲರೂಪ. ಹಾಗೆಯೆ ಬೆಟ್ಟಿಗೆ ಬಟ್ಟು ಅನ್ನುವ ರೂಪವು ಇದೆ. ಅವುಗಳನ್ನು ಹಾಕಿ ತಿದ್ದಿ.

          ಶಿಷ್ಯನು ಏಕಲವ್ಯನು- ಇಲ್ಲಿ ವಿಸಂಧಿಯಾಯಿತಲ್ಲ.

          • ಓ ಹೌದೇ !?
            ದಟ್ಟ ಕಾಡೊಳಗಂದದೋ ಮನ
            ವಿಟ್ಟು ಬಿಟ್ಟಿಹ, ನಾಯ ಬಾಯೊಳು
            ನಟ್ಟ ಬಾಣವ ಕಂಡು ವಿಸ್ಮಯಗೊಂಡ ಗುರುವರತಾಂ |
            ಪಟ್ಟ ಶಿಷ್ಯಗೆ ಕೊಟ್ಟ ಭಾಷೆಗೆ
            ಕಟ್ಟುಬಿದ್ದವ “ಬಟ್ಟು” ಕೇಳಿರೆ
            ಕಟ್ಟಿ ಕೊರಳನು ಬೆರಳನಿತ್ತಿಹ ದಿಟ್ಟ ಶಿಷ್ಯನು ತಾಂ ||
            (ಕೊನೆಯಲ್ಲಿ ದ್ರೋಣ,ಪಾರ್ಥ,ಏಕಲವ್ಯ ಎಲ್ಲರೂ ಕಟ್ ಆದರು !)

  27. ದೇವವ್ರತನು ತಂದೆಗಾಗಿ ದಾಶರಾಜನೆದುರು ಆಜೀವನ ಬ್ರಹ್ಮಚರ್ಯಪಾಲನೆಯ ಭೀಷಣ ಪ್ರತಿಜ್ಞೆಯನ್ನು ಗೈದು ತನ್ನ ಭವಿಷ್ಯವನ್ನೇ ಬಲಿಕೊಟ್ಟ ವಿಚಾರವು ಶಂತನು ಮಹಾರಾಜನಿಗೆ ತಿಳಿದು ಆತನನ್ನು ಅತಿಯಾಗಿ ಪೀಡಿಸಿತು. ಇದಕ್ಕಾಗಿ ಶಂತನುವು ದೇವವ್ರತನಲ್ಲಿ (ಭೀಷ್ಮನಲ್ಲಿ) ಆಗ್ರಹವನ್ನು ವ್ಯಕ್ತಪಡಿಸಿದಾಗ ದೇವವ್ರತನು ಪಿತನನ್ನು ಉಚಿತೋಕ್ತಿಗಳಿಂದ ಸಂತೈಸಿದ ಪರಿ –

    ಕಟ್ಟಂಕಂಗಳ ಗೆಲ್ದ ನಿಟ್ಟೆಯವರೆನ್ನೋಜರ್ ಗಡೆನ್ನವ್ವೆಯಂ
    ವೆಟ್ಟಾಣ್ಮಂ ಜಡೆಯಿಂದಲಟ್ಟಿದನಲಾ, ನಾ ಗೆಯ್ದುದೇನಯ್ಯನೇ ?
    ತೊಟ್ಟಿರ್ಪೆಂ ಬ್ರತಮಿಂತು ನಟ್ಟಿರುಳೊಳಂ ಕಾಣಲ್ಕಮಾಂ ಬಟ್ಟೆಯಂ
    ಕೆಟ್ಟಾನೆಂದಿಗಮಿತ್ತ ಪೂಣ್ಕೆ ಮರೆಯೆಂ ನಾನಾದೆನೇನಯ್ ವಿಟಂ ?

    • ಮೌರ್ಯ ಭಾಷೆ ಬಹಳ ಹಿಡಿಸಿತು

    • ಆತ್ಮೀಯರಾದ ಅದಿತಿ, ಸೋಮ ಮತ್ತು ಶ್ರೀಕಾಂತರಿಗೆ ಧನ್ಯವಾದಗಳು:-)

      ಮೌರ್ಯನ ಪದ್ಯವಂತೂ ತುಂಬ ಬನಿ-ಬಿಗಿಗಳ ಭಾಷೆಯಿಂದ ಮನಸೂರೆಗೊಂಡಿದೆ.

  28. ಅನೇಕವರ್ಷಗಳ ಮುನ್ನ ಅವಧಾನವೇದಿಕೆಯಲ್ಲಿ ಪರಿಹರಿಸಿದ್ದ ಈ ದತ್ತಪದಿಯ ಮೂಲಪದ್ಯವನ್ನೇ ಇಲ್ಲಿ ರಸಿಕರ ಅವಗಾಹನೆಗಾಗಿ ನೀಡುತ್ತಿದ್ದೇನೆ. ನಾನಿಲ್ಲಿ ಆಯ್ದುಕೊಂಡದ್ದು ವಿರಾಟಪರ್ವದ ಪಾಂಡವರಿಗೆ ಬಂದ ವಿಧಿವೈಕಟ್ಯವನ್ನು. ಮುಖ್ಯವಾಗಿ ಧರ್ಮರಾಜನ ಅವಿವೇಕದಿಂದ ಭೀಮಾರ್ಜುನರಂಥ ಮಹಾವೀರರೂ ದ್ರೌಪದಿಯಂಥ ಸಾಧ್ವಿಯೂ ಪಟ್ಟ ಪಾಡುಗಳ ಪರಾಮರ್ಶೆಯಿಲ್ಲಿದೆ:

    ನಟ್ಟುವನಾಗಿರಲ್ಕೆ ಹರನೊಳ್ ಸೆಣಸಿರ್ದ ಸುರೇಂದ್ರಸೂನು ಬಾಂ-
    ಬಟ್ಟಿಗನಾತ್ಮಜಂ ಬರಿದೆ ಸಟ್ಟುಗಮಂ ಗದೆಯಂತೆ ಸಾರ್ಚೆ ಕಾ-
    ವಿಟ್ಟ ರಣಾರುಣೋದಯಪದಾಯುಧೆ ವಹ್ನಿಜೆ ದಾಸಿಯಾಗೆ ಬಿ-
    ಕ್ಕಟ್ಟನದೆಂತು ಪೇಳ್ವುದಕಟಾ ವಿಧಿಯಾ ಯಮಜಾತಕೃತ್ಯದಿಂ !!

    (ನಟ್ಟುವ = ನರ್ತನನಿರ್ದೇಶಕ, ಬಾಂಬಟ್ಟಿಗ = ವಾಯು, ಅರುಣೋದಯಪದಾಯುಧೆ =
    ಮುಂಗೋಳಿ, ಯಮಜಾತ = ಧರ್ಮರಾಜ)

    • ತುಂಬಾ ಚೆನ್ನಾಗಿದೆ

    • ಧರ್ಮರಾಯನ ವಿವೇಕದ ಪ್ರಶಂಸೆಯ ( 😉 ) ಪದ್ಯ ಅತ್ಯುತ್ತಮವಾಗಿದೆ, ದತ್ತಪದಿಗಳ ಪ್ರಯೋಗ ಬಹಳ ಚೆನ್ನಾಗಿದೆ

    • ಚೆನ್ನಾಗಿದೆ ಗಣೇಶರೆ. ಯುದ್ಧದ ಮುಂಗೋಳಿ ದ್ರೌಪದಿ ಅನ್ನೋ ಅಭಿಪ್ರಾಯವನ್ನ ಚಮತ್ಕಾರವಾಗಿ ಹೆಣೆದಿದ್ದೀರ.

  29. ಬಿಟ್ಟು ಜರತಾರಿ ಬಟ್ಟೆಯ
    ಕಟ್ಟಿಟ್ಟು ಕಲಿತನವಂ ಶಮೀವಟ ದೋಳ್ನೀ-
    ವಿಟ್ಟ ನುಡಿಗೆ ರಾಜ್ಯತೊರೆದು
    ದಟ್ಟಡವಿಯ ನಟ್ಟ ನಡುವೆ ಧರ್ಮ ವಿಭೋಗಂ ।।

    ತಪ್ಪಿದ್ದಲ್ಲಿ ಕ್ಷಮಿಸಿ……!!

    • ವೇದಪ್ರಕಾಶರೆ,ಪ್ರಯತ್ನಕ್ಕೆ ಧನ್ಯವಾದಗಳು. ಭಾಷೆ, ವಸ್ತು ಮತ್ತು ಅನ್ವಯದ ಬಗ್ಗೆ ಇನ್ನು ಗಮನವಹಿಸಿರಿ

  30. ಹುಟ್ಟು ಕುರುಡಿಹ ಪತಿಗೆ, ಕಣ್ಗದೊ
    ಬಟ್ಟೆ ಕಟ್ಟಿದ ಸತಿಗೆ, ಜನಿಸಿದು
    ದೊಟ್ಟು ಕುವರರು ನೂರು, ಕಣ್ಣಿದ್ದು ಕಾಣ್ದ ದುರುಳರು ತಾವ್ |
    ದಿಟ್ಟಿ ತೋರದೆ ಕಟ್ಟಿ ಕಾಣದೆ
    ನೆಟ್ಟ ನೋಡದೆ ಕೆಟ್ಟುದನು ಪದ
    ವಿಟ್ಟು ಕಟ್ಟಿದೆ ಪುಟವನಿಟ್ಟಿದೆ ಮಹಾಭಾರತದೊಳ್ ||

    • ಮೂರನೇ ಮತ್ತು ಆರನೇ ಸಾಲಿನಲ್ಲಿ ಐದನೇ ಗಣ ಜಗಣವಾಗಿದೆ, ಮೂರನೇ ಸಾಲಿನಲ್ಲಿ ಒಂದು ಮಾತ್ರೆ ಹೆಚ್ಚಾಗಿದೆ, ಗಮನಿಸಿರಿ

    • ಕಣ್ಣಿದ್ದು ಕಾಣ್ದ- ಈ ಭಾಗವನ್ನು ತಿದ್ದಿದರೆ ಅಕ್ಷರದ ಎಣಿಕೆ ಮತ್ತೆ ಜಗಣ ಎರಡೂ ಸರಿಹೋಗುತ್ತವೆ. ಕಾಣ್ದ ಅನ್ನೋ ಪ್ರಯೋಗ ತಪ್ಪು- ಕಾಣದ ಅಂತಲೆ ಬರಬೇಕು.

      ಮತ್ತೆ ನಟ್ ಕಳಚಿಕೊಂಡು ಹೋಗಿದೆಯಲ್ಲ 😉

  31. ಧನ್ಯವಾದಗಳು ಸೋಮ, ಶ್ರಿಕಾಂತ್ ಸರ್,
    ತಿದ್ದಿದ ಪದ್ಯ:
    ಹುಟ್ಟು ಕುರುಡಿಹ ಪತಿಗೆ, ಕಣ್ಗದೊ
    ಬಟ್ಟೆ ಕಟ್ಟಿದ ಸತಿಗೆ, ಜನಿಸಿದು
    ದೊಟ್ಟು ಕುವರರು ಕಣ್ಗಳಿದ್ದಾ ನೂರು ದುರುಳರು ತಾವ್ |
    ದಿಟ್ಟಿ ತೋರದೆ ಕಟ್ಟಿ ಕಾಣದೆ
    ನೆಟ್ಟ ನೋಡದೆ ಕೆಟ್ಟುದನು ಪದ
    ವಿಟ್ಟು ಕಟ್ಟಿದೆ ಪುಟವನಿಟ್ಟಿದೆಯೇನ “ಭಾರತ”ದೊಳ್ ||
    (ಈ ಬಾರಿಯೂ “ನಟ್ ” ಕಳಚಿದೆ, ಹುಡುಕಿಕೊಡಿ ಪ್ಲೀಸ್)

  32. Better late than never.
    ಶ್ರೀ ಎಸ್. ಎಲ್. ಭೈರಪ್ಪನವರ ’ಪರ್ವ’: ಉಪಪಾಂಡವರು ಸತ್ತಾಗ ದ್ರೌಪದಿಯು ದುಃಖದಿಂದ ಕೃಷ್ಣನಿಗೆ ಹೇಳುತ್ತಾಳೆ: ನೋಡು, ಘಟೋತ್ಕಚ-ಅಭಿಮನ್ಯುಗಳು ಮಡಿದಾಗ ಭೀಮಾರ್ಜುನರು ಎಷ್ಟು ದುಃಖಿಸಿದರು. ಈಗ ಈ ಉಪಪಾಂಡವರು ಸತ್ತಿರುವಾಗ ಪಾಂಡವರೈವರೂ ಹೇಗೆ ನಿರ್ಲಿಪ್ತಿಯಿಂದಿದ್ದಾರೆ!

    ತರಳ|| ಬಟುಘಟೋತ್ಕಚ ತೀರೆ ಮೇಣಭಿಮನ್ಯು ತಾ ರಣರಂಗದೊಳ್
    ವಿಟಪಕೋದಿಪ ವೃಕ್ಷದೊಲ್ ಪಿತರೀರ್ವರೆಂತುಟೊ ದುಃಖಿಸಲ್|
    ನಟನೆಯೇಂ! ಸಲೆ ಪಾಂಡವರ್ ತಲೆತಗ್ಗಿಸಲ್ ಬರಿದಿಂದು ತಾಂ
    ಕಟುಕರೈ, ಮಮನಂದನರ್ ಮಡಿದಾಗ ದುಃಖಿಸದಿರ್ದಪರ್||

    ಶ್ರೀಕಾಂತಮೂರ್ತಿಗಳ ಗಮನಕ್ಕೆ,
    ಮೇಲೆ ಸಂಖ್ಯೆ 3ರಲ್ಲಿ ಹೇಳಿರುವ ’ಕಂತೆ’ ಇದೇ. ಪಣ್ಯ ತೀರಿಸಿ.

    • ಚಿತ್ತೈಸಿದೆವು ಪ್ರಸಾದು. ದತ್ತಪದಗಳೆಲ್ಲ ಚೆನ್ನಾಗಿ ಮೂಡಿ ಬಂದಿವೆ.

      ಅರ್ಜುನಸೂನು- ಅಭಿಮನ್ಯುವೇ ಅಲ್ಲದೆ ಉಪಪಾಂಡವರಲ್ಲೊಬ್ಬನನ್ನು ಸೇರಿಸಿ ಇತರ ಸುತರೂ ಆಗಬಹುದು. ಆದ್ದರಿಂದ ಅಭಿಮನ್ಯು ಅಂತ ಬಂದರೆ ವಾಸಿ.
      ವಿಟಪಕೋದಿಪ?
      ನಟನಮೇಂ- ನಟನೆಯೇಂ?
      ಕಟುಕರಲ್ತುಪಪಾಂಡವರ್ ಅಂದರೆ ಕಟುಕರಲ್ಲ ಅಂತಲೇ ಅರ್ಥ ಹುಟ್ಟುವುದು. ಕಟುಕರೈ ಅಂತ ಹಾಕಬಹುದು.
      ಅಲ್ತೆ+ಉಪ– ಅಲ್ತುಪ– ಅಂತ ಸ್ವರಲೋಪಸಂಧಿ ಆಗೊಲ್ಲ.
      ಕಟುಕರ್ ಬಂದಿರುವ ಜಾಗದಿಂದ ಅದು ಉಪಪಾಂಡವರಿಗೂ ಅನ್ವಯಿಸುವ ಹಾಗೆ ಅರ್ಥ ಬರುತ್ತಿದೆ.
      ಕಡೆಯಲ್ಲಿ ಉಪಪಾಂಡವರ್ ಅಂತ ಹೇಳೋದು ತೀರ ಇಂಪರ್ಸನಲ್ ಆಯಿತು. ಒಂದು ತಾಯಿ ಹಾಗೆ ಹೇಳಲು ಸಾಧ್ಯವೆ?
      ಇರ್ದಿಪರ್ ಅಸಾಧು. ಇರ್ದಪರ್ ಅಂತ ಬದಲಾಯಿಸಿ.

      ನಾನು ಓವರ್ ಅನಲೈಸ್ ಮಾಡಿರಬಹುದು. ಅದಕ್ಕೆ ಕ್ಷಮೆಯಿರಲಿ.

    • ಇಲ್ಲ ಇಲ್ಲ. ನೀವು ಇಷ್ಟು ಆಸ್ಥೆಯಿಟ್ಟು ತಿದ್ದಿರುವುದು ಸಂತೋಷದಾಯಕವೇ. ಅನುಕ್ರಮವಗಿ ಉತ್ತರಿಸುವೆ:
      ವಿಟಪಕೋದಿಪ – ಕೊಂಬೆಯನ್ನು ಕಡಿದಿಹ
      ಉಪಪಾಂಡವರ್ – ತಾಯಿ ಹಾಗೆ ಹೇಳದಿದ್ದರೂ, ಓದುಗರಿಗೆ ಸಲೀಸಾಗಿ ಅರ್ಥವಾಗಲಿ ಎಂದು ಹಾಗೇ ಉಳಿಸಿಕೊಂಡಿದ್ದೇನೆ.
      ಉಳಿದವನ್ನು ನಿಮ್ಮ ಸಲಹೆಗಳ ಮೇರೆಗೆ ತಿದಿದ್ದೇನೆ. ಕೃತಜ್ಞತೆಗಳು.

    • ಈಗ ವಾಸಿ ಪ್ರಸಾದು. ವಿಟಪ ಅಂದರೆ ಕಿಂಬೆ ಅನ್ನೋ ಅಷ್ಟನ್ನು ಊ ಹಿಸಿದ್ದೆ. ಅದರೆ “ಕೋದಿಪ” ಪದ ಇನ್ನು ಗೊತ್ತಾಗ್ತಿಲ್ಲ. ಎಲ್ಲಿ ಸಿಕ್ಕಿತು ನಿಮಗೀ ಪದ?
      ತಾ, ತಾವ್ ಬದಲಾಗಿ ತಾಂ ಹಾಕಿ.
      ಉಪಪಾಂಡವರ್ ಬದಲಾಗಿ ಮಮನಂದನರ್ ಅನ್ನ ಬಹುದೆ?

    • ಸೂಚಿಸಲಾದ ಸವರಣೆಗಳನ್ನು ಮಾಡಿದ್ದೇನೆ.
      ಕೋದು – Pp of ಕೊಯ್ – ಕಿಟ್ಟೆಲ್
      ನನ್ನ ಪದ್ಯವನ್ನು ಚೊಕ್ಕಗೊಳಿಸಲು ಸಹಾಯ ಮಾಡಿದ್ದಕ್ಕಾಗಿ ಕೃತಜ್ಞತೆಗಳು.

    • ಪೂವಂ ಕೊಯ್ದಮೇಲ್ ಕೋದೆನೆನ್ನ ಬರ್ಪುದು.
      ಕೋದು= ಪೋಣಿಸಿ

      ಕೊಯ್ ಧಾತುವಿನಿಂದ ಕೊಯ್ದ ಆಗುತ್ತೆ. ಮುಂದೆ “ಇಪ” ಅಂಟ ಹಾಕಿದ್ದೀರ. ಇರ್ಪ ಅನ್ನೋದು ನಡುಗನ್ನಡದಲ್ಲಿ ಇಪ್ಪ, ಇಹ ಆಗುತ್ತೆ. ಇಪ ಅನ್ನೋ ರೂಪವನ್ನು ನಾ ತಿಳಿಯೆ. ಕೊಯ್ದಪ ಆಗಬಹುದು- ವರ್ತಮಾನ ಕಾಲವನ್ನು ಸೂಚಿಸುವುದು.

  33. ಏಕಚ್ರದೊಳಿದ್ದ ಭಯವನಟ್ಟಿದ ಭೀಮ
    ರಕ್ಕಸಗೆ ಯಮಪುರಿಗೆ ತೋರಿದನು ಬಟ್ಟೆಯನು
    ನಾಕವಾಯಿತು ನಗರ ಹರ್ಷವಿಟ್ಟಿತು ಚರಣ
    ಚೌಕಟ್ಟ ಮೀರಿತೈಪೊಳವಿಜನಮುದಪರಿಧಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)