1. ಭಾಮಿನಿಯಲ್ಲಿ ಜಗಣ ಪ್ರಯೋಗ ಸಾಧುವಲ್ಲ, 6ನೇ ಸಾಲಿನಲ್ಲಿ ‘ಅನಂತ’ ಎನ್ನುವಲ್ಲಿ ಜಗಣ ಬಂದುಬಿಟ್ಟಿದೆ
2. ಲಘುಬಾಹುಳ್ಯವಿರುವಲ್ಲಿ ಪದದ ಒಂದಕ್ಷರವನ್ನು ಹಿಂದಿನ ಅಥವಾ ಮುಂದಿನ ಗಣಕ್ಕೆ ಎರವಲು ಕೊಟ್ಟಾಗ ಗತಿ ತಪ್ಪುತ್ತದೆ, ನಿಮ್ಮ ಪ್ರಯೋಗದಲ್ಲಿ “ಮಾಸವ-ರುಷಗ-ಳನ೦ತ” ಬಂದಿದೆ ಸವರಿಸಿದರೆ ಇನ್ನೂ ಚೆನ್ನಾಗುತ್ತದೆ 🙂
ಕಡೆಯಲ್ಲಿ ಮಂಕುತಿಮ್ಮ ಬರುತ್ತೆ ಅಂತ ನಿರೀಕ್ಷಿಸಿದ್ದೆ 🙂 ಚೆನ್ನಾಗಿದೆ. ಐದೈದು ಮಾತ್ರೆಗಳ ಗಣಗಳ ಹರಿವು ಸ್ವಲ್ಪ ಏಕತಾನತೆಯನ್ನು ತಂದಿದೆ. ಸಮಪಾದಗಳ ಕೊನೆಯ ಪಂಚಮಾತ್ರಾಗಣದ ಬದಲಾಗಿ ಒಂದು ಗುರುವನ್ನೋ ಅಥವಾ ಗುರ್ವಂತವಾದ ಚತುರ್ಮಾತ್ರಾಗಣಚನ್ನೋ ಹಾಕಿದ್ದರೆ ಪರಿಹಾರವಾಗುತ್ತೆ.
ಶ್ರೀಕಾಂತರೇ! ಒಳ್ಳೆಯ ಪರಿಶೀಲನೆ. ನೀವೆಂದಂತೆ ಸಮಪಾದಗಳಲ್ಲಿ ಊನಗಣಗಳು ಬರದಿದ್ದರೆ ಈ ಬಗೆಯ ಚೌಪದಿಗಳು ಅನಿಯತಸಂಖ್ಯೆಯ ಪಾದಗಳನ್ನುಳ್ಳ ರಗಳೆಗಳ ಹಾಗೆ ಯುಕ್ತವಾದ ಮುಗಿತಾಯವಿಲ್ಲದೆ ಸಾಕಾಂಕ್ಷವಾಗಿ ತೋರುತ್ತವೆ. ಉಷಾ ಉಮೇಶ್ ಅವರು ಇದನ್ನು ಗಮನಿಸಿ ಗ್ರಹಿಸುವುದರಲ್ಲಿ ಸಂದೇಹವಿಲ್ಲ.
ಇಲ್ಲ ಉಷರವರೆ. ಮತ್ತೆಕೆಟ್ಟಿದೆ.ಸಮಪಾದಗಳ ಕಡೆಯ ಪಂಚಮಾತ್ರಾಗಣದ ಬದಲು ನೀವು ಆರುಮಾತ್ರೆಗಳನ್ನು ಹಾಕಿ ಹದವಿನ್ನೂ ಕೆಟ್ಟಿದೆ. ಎಲ್ಲರಿಗೂ ಹೀಗೇ ಮೊದಮೊದಲು ತೊಡಕೆನಿಸುತ್ತೆ. ಉದ್ದೇಶದಿಂದ ಪಳಗಿಸಬಹುದು. ಚಿಂತೆಯಿಲ್ಲ.
I am reminded by this picture of this verse I had composed many years ago in my late teen years:
पदसमुच्चयपदार्थसमुच्चयैः
अतिशयैरपि निघण्टुसुवीक्षणैः ।
कृतवता किल भवेत् किमु छन्दसा
स्थितवतेव तरुणा विगतौजसा ॥
ಕ್ರಿಸ್ತಂ ಸಾವಂಬಡೆದು ಪುನರುಜ್ಜೀವನಂಗೊಂಡು ನಾಕಂ
ಸ್ವಸ್ತಂ ಪೊಕ್ಕಾ ಬಳಿಕ ಬೆಳೆದಿರ್ಪೇನದಿಂದೆಲ್ಲ ಲೋಕಂ
ಗ್ರಸ್ತಂ ತ್ರಸ್ತಂ ಕಲುಷಿತಮಿದಂ ಕಂಡು ಪುಟ್ಟಲ್ ಮೃಡೀಕಂ
ನಿಸ್ತಾರಕ್ಕಾ ಪ್ರಕೃತಿ ಗಳುವಂ ಪತ್ತುವಳ್ ಕಾಣ್ ಪ್ರತೀಕಂ
ಏನ- ಪಾಪ; ಮೃಡೀಕ- ದಯೆ
ಏಸುಕ್ರಿಸ್ತನು ಸದೇಹವಾಗಿ ಸ್ವರ್ಗಾರೋಹಣ ಮಾಡಿದ ಬಳಿಕ ತುಂಬಿದ ಪಾಪಗಳಿಂದ ಮಲಿನವಾದ ಲೋಕವನ್ನು ಕಂಡು ದಯೆಗೊಂಡು ಅದರ ಪರಿಹಾರಕ್ಕಾಗಿ ಪ್ರಕೃತಿ ತಾನೇ ಗಳುವನ್ನು (ಶಿಲುಬೆಯನ್ನು) ಏರುವಳು ಅಂತ ಕಲ್ಪನೆ.
ಈ ನಿಮ್ಮ ಪದ್ಯದ ಗಂಭೀರಭಾವಕ್ಕೆ ಕಾಯಿ/ಕಾಯ ಶಬ್ದಗಳ ಚಿತ್ರಕವಿತಾಸದೃಶದ ಆಡಂಬರವು ಹೆಚ್ಚಾಯಿತೇನೋ:-) ಅಲ್ಲದೆ ಆದಿಪ್ರಾಸಕ್ಕೆ ತುಂಬ ಹೆಣಗಿದಂತೆಯೂ ಕಂಡಿದೆ. ದಯಮಾಡಿ ಅನ್ಯಥಾ ಗ್ರಹಿಸದೆ ಆಲೋಚಿಸಿರಿ.
ಎಲೆಗಳನ್ನು ಉದುರಿಸಿಕೊಂಡ ಮರದ ರೆಂಬೆಗಳು, ಬೇರುಗಳು ಹೊರಬಂದಂತೆ ಕಾಣುತ್ತಿವೆ ಎಂಬ ಕಲ್ಪನೆ ವಿನೂತನ. ಹಾಗೆ ಕಂಡ ಬೇರುಗಳು ಏನನ್ನು ಸಾರುತ್ತಿವೆ ಎಂದು ಕಲ್ಪಿಸಿದರೆ ತೀರ ಉಚಿತವಿರುತ್ತದೆ. ಪ್ರಯತ್ನಿಸಿ.
ಶಿಶಿರ ಸಮಾಗಮದಿಂದಂ
ಕೃಶಕಟಿ! ವಸನಂಗಳಂ ತೊರೆದೆಯೇನೌ ನೀಂ|
ವಶಮಾಗಲ್ಕೆ ಬಸಂತಂ
ವಿಶೇಷ ವಸ್ತ್ರಂಗಳಂ ತೊಡುವ ಪರಿಯೇನೌ??
ಗಣೇಶರ ಪದ್ಯದ ಪ್ರಭಾವದಿಂದ-
(ಒಂದು ಅರ್ಥದಲ್ಲಿ- ಕೃಶಕಟಿಯೇ.. ಶಿಶಿರನ ಸಮಾಗಮದಿಂದ ವಸ್ತ್ರಗಳನ್ನು ತೊರೆದೆ. ವಸಂತ ನಿನ್ನ ವಶವಾಗುವಾಗ ವಿಶೇಷ ವಸ್ತ್ರಗಳನ್ನು ತೊಡುವ ನಿನ್ನ ಈ ಪರಿ ಎಂತಹುದು??
ಇನ್ನೊಂದು ಅರ್ಥದಲ್ಲಿ- ಕೃಶಕಟಿಯೇ.. ಶಿಶಿರಕಾಲ (ಶಿಶಿರಹೇಮಂತಗಳು ಛಳಿಗಾಲ ಎಂಬರ್ಥದಲ್ಲಿ )ದಲ್ಲಿ ಬಟ್ಟೆಯನ್ನು ತೊರೆದು ವಸಂತಕಾಲದಲ್ಲಿ (ವೈಶಾಖ-ಬೇಸಿಗೆ) ಬಟ್ಟೆಯನ್ನು ತೊಡುವ ನಿನ್ನ ಈ ಪರಿಯೇನು??)
ಖಂಡಿತ ಹೌದು.. ನಿಮ್ಮ ಮೊದಲ ಶತಾವಧಾನದಲ್ಲಿ ೬ ಭಾಷೆಗಳಲ್ಲಿ ಅರ್ಥ ಬರುವಂತೆ ಕನ್ನಡ ಭಾಷೆಯೆ ಸ್ತುತಿಯಾಗಿ ರಚಿಸಿದ್ದ
ಚಾರುಸಮೀರಣ ಚಿರಸಂ-
ಚಾರಪರಂ ಭೂರಿವಾರಿಗಿರಿದರಿಭರಣಂ|
…….
ಈ ಪದ್ಯದ ಸಾಲನ್ನೇ ಕದ್ದುಕೊಂಡಿದ್ದೇನೆ:-);-)
ನಿಜ ಹೇಳುತ್ತೇನೆ. ಆ ಮೇಲಿನ ಐದು ಪದ್ಯಗಳನ್ನು ನಾನು ಇನ್ನೂ ಓದಿಲ್ಲ. ’ಕ್ತ’ಪ್ರಾಸದ ಈ ಪ್ರತಿಕ್ರಿಯಾಪದ್ಯವಂತೂ ತುಂಬ ಚೆನ್ನಾಗಿದೆ. ಉತ್ತರಾರ್ಧದಲ್ಲಿ ಅನುಪ್ರಾಸಗಳು ಕರ್ಣತಾಡಿತವಾಗಿವೆ.
ಪ್ರತ್ಯೇಕ ಪಂಕ್ತಿ / ಪದ್ಯಗಳು ಒಬ್ಬೊಬ್ಬರಿಗೆ ಹಿಡಿಸುವ ಸಂಗತಿ ನನಗೆ ಅತ್ಯಂತ ಆಸಕ್ತಿಕರವಾದದ್ದು. ಕೊನೆಯಪದ್ಯ ನನ್ನ ಕೊನೆಯ ಆಯ್ಕೆ !. ಹಣ್ಣೆಂದರೆ ಇಂದಿನ ಹಸಿಮನಸ್ಸಿಗೆ ಹೇಗೆ ತೋರುತ್ತದೆ ಎಂಬ ಭಾವವನ್ನು ತರಬೇಕಾಗಿ ಅದು ಹುಟ್ಟಿಕೊಂಡಿತು. ಧನ್ಯವಾದ.
” ಕ್ತ ” ಪ್ರಾಸ ಕರ್ಣರಂಜಕವಾಗದೆ, ಕರ್ಣತಾಡಿತವಾಗಿದ್ದಲ್ಲಿ, ಕ್ಷಮೆಯಿರಲಿ. ಪ್ರಾಸ ಕಿವಿಗೆ ಬಡಿಯುಲಿ ಎಂಬ ಉದ್ದೇಶ ಖಂಡಿತ ಇಲ್ಲ. ಅದು ಆ ಕ್ಷಣದಲ್ಲಿ ಹಾಗೆ ಬಂದದ್ದಷ್ಟೆ 🙂
೨ನೆಯ ಪದ್ಯದ ಉತ್ತರಾರ್ಧ ಹಾಗೂ ಕೊನೆಯ ಪದ್ಯ ತುಂಬ ಚೆನ್ನಾಗಿವೆ.
ಈ ಕೆಳಗೆ ಹೇಳಿರುವುವಾವುವೂ ಛಂದೋದೋಷಗಳಲ್ಲ:
೧ನೆಯ ಪದ್ಯ, ೩ನೆಯ ಪಾದ: ಸತ್ವದಿಂ ~ ಸತ್ತ್ವದಿಂ.
೩ನೆಯ ಪದ್ಯ: ತನ್ನೆಲ್ಲ ಸಾರ ಸಂಸಾರಕುಜಕೆರೆದರಳಿ – ಅದು ’ಅರಳಿಸಿ’ ಎಂದಲ್ಲವೆ.
೪ನೆಯ ಪದ್ಯ: ಮೈಯಲ್ಲ. Is it ಮೈಯೆಲ್ಲ or ಮೈಯಲ್ಲೆ?
೪ನೆಯ ಪದ್ಯ: ಸತ್ತಿಹುದೆ ಋತುಬಲವೆ ಚಿಗುರೆನೆನುವ – ’ಚಿಗುರುವೆನೆನುವ’ ಎಂದಲ್ಲವೆ? ಅಥವಾ ’ಚಿಗುರೆನೆನುತಲ್’ ಎಂದು ಸವರಬೇಕು
ಪ್ರಸಾದರೇ,
ಹೌದು. ಸತ್ತ್ವವೇ ಶುದ್ಧರೂಪ.
ಸಂಸಾರ ಕುಜಕ್ಕೆ ಸಾರವನ್ನು ಎರೆದು (ತಾನೇ) ಅರಳಿ, ಎಂದರೆ ಆ ತಾಯಿ ಅಲ್ಲೇ ವಿಕಾಸಗೊಂಡು ಎಂದು ಭಾವ. ಅರಳಿ ಪದ ಸರಿಯಾಗಿದೆ.
ಮೈಯೆಲ್ಲ ಮರಗಟ್ಟಿ ಎಂದೇ ಉದ್ದೇಶಿತ ಪದ. ’ಮೈಯಲ್ಲ ’ ಎಂದು ಟಂಕಿಸಿರುವುದು ದೋಷವೇ.
ಸತ್ತಿಹುದೆ, ಚಿಗುರೆನ್ ಎನುವ ಋತುಬಲವೆ? (ಈಋತುವಿನಲ್ಲಿ ಚಿಗುರನ್ನು ತಳೆಯನು ಎಂಬ ಋತು ಬಲವೆ?). ಚಿಗುರೆನ್ – ಚಿಗುರೆನು ಎನುವ ’ಚಿಗುರೆನೆನುವ’ ಪದ ಸರಿಯಿದೆ.
ಇಂಥ ತೋರ್ಕೆಗಳು ಎಚ್ಚರದಿಂದ ಟಂಕಿಸಲು ನಿಶ್ಚಯವಾಗಿಯೂ ಅಗತ್ಯ. ಪ್ರತಿಕ್ರಿಯೆಗೆ ಮತ್ತು ನಿಮ್ಮ ಸೂಚನೆಗಳಿಗೆ ಧನ್ಯವಾದಗಳು.
ಸುಸಿಲ್- ಸುರತ
ಭೂಜೋತ್ಸುಕ- ಭೂಜ/ಭೂಜೆ ಎರಡರಲ್ಲೂ ಉತ್ಸುಕನಾಗಿರುವ (ಅನುರಕ್ತ, ವಿಯೋಗಬಾಧಿತ)
ಸೀತಾಪಹರಣವಾದಾಗ ರಾಮನು ಅವಳ ವಿಯೋಗೋನ್ಮತ್ತನಾಗಿ ಕಾಡಿನ ಗಿಡಮರಗಳಲ್ಲೆಲ್ಲ ಅವಳ ಅಂಗಾಂಗವನ್ನು ಕಾಣುತ್ತ ಅಲೆಯುತ್ತಾನೆಂದು ರಾಮಾಯಣದಲ್ಲಿ ಬರುತ್ತೆ. ಅದ್ದನ್ನು ಚಿತ್ರಿಸುವ ಒಂದು ಪ್ರಯತ್ನ. ರಾಮನು ಉನ್ಮತ್ತೇಭ.
ಏನು ಹೇಳಿದರೂ ಗಣೇಶರು ಹೇಳಿರುವುದಕ್ಕಿಂತ ಚೆನ್ನಾಗಿ ಹೇಳಲಾಗದು. ಹಾಗಾಗಿ ಈ copy and paste with a minor spelling alteration: ನಮನೋದಾರಸುಮಂಗಳಂ ಸಲಿಪೆ ನಾನುಂ; ಮಂಗಳಂ ಕೋರುತುಂ||
ಸೋಮ,
ಆ ಚುಕ್ಕೆಗಳಿರುವಲ್ಲಿ ಒಂದು ಪದ ತುಂಬಬೇಕೆ? ಇದೋ: ಪ್ರತೀಸತಿಯು ಬಂದಾಗಳ್ (after every wife), ಹೊಳ್ಳಂ ನೀನಿಂತೆ ಪದ್ಯಮೀವೆನೆ ಬಗೆವೆಂ.
ಅಂದಹಾಗೆ, ಹೊಳ್ಳರಿಗೆ ಮೊದಲ ಹೆಂಡತಿಯನ್ನು ದೊರಕಿಸಿಕೊಟ್ಟ ಅಧ್ವರ್ಯು ನೀವೇ ಅಲ್ಲವೆ? ಈಗ ಆ ಪದದ (ಅಧ್ವರ್ಯು) ಉತ್ತರಾರ್ಧವನ್ನು ತಿರುಚುವ ಹವಣೆ? 😉
ದಯಾಹೀನ ಎಂಬುದು ಶುದ್ಧರೂಪ. ಏಕೆಂದರೆ ದಯಾ ಎಂಬುದು ಆಕಾರಾಂತ ಸ್ತ್ರೀಲಿಂಗಶಬ್ದ. ದಯೆಯಿಲ್ಲದ ಎಂಬುದು ಕನ್ನಡದಲ್ಲಿ ಯುಕ್ತ. ಆದರೆ ದಯವಿಲ್ಲದ ಎನ್ನುವುದೂ ಬಳಕೆಯಲ್ಲಿದೆ. ಇದನ್ನು ಹೇಗೋಒ ಸಹಿಸಬಹುದು:-) ಆದರೆ ದಯಹೀನ/ದಯವಂತ ಇತ್ಯಾದಿಗಳು ಸಂಸ್ಕೃತದ ಸಮಾಸವೇ ಆಗುವ ಕಾರಣ ಹೇಗೆ ಕಂಡರೂ ಸಾಧುವೆನಿಸವು.
ಗುರುಗಳಿಗೆ ಧನ್ಯವಾದಗಳು.ಬಹಳ ಉಪಯುಕ್ತ ಮಾಹಿತಿಗಳನ್ನಿತ್ತು ತಿದ್ದಿರುವಿರಿ.ನಾನು ಗದ್ಯದಲ್ಲಿ ಸಾಮಾನ್ಯವಾಗಿ ದಯಾಹೀನ,ಕೃಪಾಹೀನ ಮೊದಲಾದ ಪದಬಳಕೆಯನ್ನು ಮಾಡುವೆನಾದರೂ ಪದ್ಯದ ನಡೆಗೆ ಸರಿಯಾಗಿ ಅರಿವಿಲ್ಲದಂತೆ ತಪ್ಪಾಗಿದೆ. ದಯವಿಟ್ಟು ಪದ್ಯದ ಮೂರನೇ ಸಾಲನ್ನು -ಚೋರರೇಂ ?! ನೀಚರೇಂ ?! ಮತಿಹೀನರೇಂ ?! – ಎಂಬುದಾಗಿ ಪರಿಗಣಿಸಿರಿ.
ಈ ಪದ್ಯದಲ್ಲಿ ಒಂದು ತಪ್ಪೂ ಇರಬಾರದೆಂದುಕೊಂಡಿದ್ದೆ 🙁
ಬುವಿ ಕನ್ನಡ ಪದ ಸರಿಯಾಗಿದೆ. ನಡು-ನವ್ಯ ಕನ್ನಡ ಕಾವ್ಯಗಳಲ್ಲಿ ಹೇರಳವಾಗಿ ಪ್ರಯೋಗವಾಗಿದೆ. “ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ! …”ನಾನು ನಾಯಿ ಮೆಟ್ಟು ಕೊಡೆ ನಾಲ್ವರೆ ತಿರುಗಾಟಕೆ ಹೊರಟೆವಂದು ನಸುಕು ಬಿಡೆ ಬೆಳಗು ಸಿರಿಯ ನೋಟಕೆ: ಬಾನು ಬುವಿ ಮುಗಿಲು ರವಿ ಹೊರಟರೊಡನೆ ನಮ್ಮ ಒಡನೆ ರಸದೌತಣದೂಟಕೆ!”
.ಕುವೆಂಪು.”
“ಭುವಿ” ( ಸಂ-ಸ್ತ್ರೀ) ಯೇ ಕನ್ನಡಕ್ಕೆ ಬಂದು ಅಲ್ಪಪ್ರಾಣಿಯಾಗಿದೆಯೇ?
ಭೂಮಿ= ಸಂ. ಬುವಿ (ತದ್ಭವ) = ಕಾರಂತ, ಬುವಿ (ಜಿ.ವೆಂ).
ಶೋಧಿಸಿ ನೋಡಿ. ಪ್ರಯೋಗ ತಪ್ಪಾದರೆ ತಿದ್ದಿ ಕೊಳ್ಳೋಣ.
ಒಂದು ಪದ ಟಂಕಿತವಾಗಿ ಹಲವ್ರು ಪ್ರಯೋಗಗಳಿಂದ ನಾಣ್ಣುಡಿಯಲ್ಲಿ ಬೆರೆತು ಚಲಾವಣೆಗೊಂಡಾಗ ಅದಕ್ಕೆ ಉಪಯೋಗದ, ಅರ್ಥದ ಬೆಲೆ. ನಮ್ಮದೊಂದು ಪದ್ಯಕ್ಕೆ ಪ್ರಾಸದಕಾರಣದಿಂದ, ’ರಾಮಾಯಣ’ ವನ್ನು ’ರಾಮಯಣ’ ಎಂದು ಮಾಡಿಕೊಂಡು, ’ನಾರಯಣ’ ಎಂದು ಕುಮಾರವ್ಯಾಸ ಮಾಡಿಲ್ಲವೆ ಎನ್ನುವುದು ಸರಿಯಾಗಲಾರದು. ಇಲ್ಲಿ ನಾವು ಚರ್ಚಿಸಿದ್ದು ’ಬುವಿ’. ಅದು ನಮ್ಮಲ್ಲಿ ಒಪ್ಪಿತವಾಗಿದೆ. ಬೂವಿ ಹಾಗೆ ಒಪ್ಪಿತವಲ್ಲ. ಇಲ್ಲಿ ತಪ್ಪು ಸರಿ ಎಂಬುದಕ್ಕಿಂತ, ಒಂದು ಪದಪ್ರಯೋಗ ಮಾಡಿದಾಗ ಅದು ಉದ್ದೇಶಿತ ಅರ್ಥವನ್ನು ಓದುಗನ ಮನಸ್ಸಿನಲ್ಲಿ ಮೂಡಿಸುತ್ತದೆಯೇ ಎಂಬುದು ಮುಖ್ಯ. ನಮ್ಮ ಹಳ್ಳಿಗಳ ಕಡೆ ಮುಸಲ್ಮಾನರ ಹೆಣ್ಣುಮಗಳನ್ನು ಹೀಗೆ ಕರೆದಿದ್ದನ್ನು ಕೇಳಿದ್ದೆನೆ. ಅರ್ಥಸ್ಫುರಣ ಮುಖ್ಯ. ಇನ್ನು ’ ಬೂವಿ ಬಾನಿನ ನಡುವೆ’ ಯಾವ ಪದ್ಯವೋ ನನಗೆ ತಿಳಿಯದು.’ಭೂವಿಯನ್ಮಧ್ಯದಲಿ’ ಅದಕ್ಕೆ ಹೊಂದುವ ಪ್ರಾಸಮಾತ್ರಾಸಮಾನವಾದೀತು
ಧನ್ಯವಾದಗಳು ಸೋಮ & ಚಂದ್ರ ಮೌಳಿಯವರಿಗೆ .
1) ನಾನು ‘ಬುವಿ ‘ ಅಲ್ಪಪ್ರಾಣ ಪದವನ್ನು ಎಲ್ಲೋ ಇತ್ತೀಚೆಗೆ ಓದಿದ್ದೆ . ಅನುಮಾನದಲ್ಲಿ ಪದಕೋಶವನ್ನು ನೋಡಿದ್ದೆ . ಎರಡೂ ಪದಗಳಿಗೆ ಪ್ರತ್ಯೇಕ ಪುಟಗಳಲ್ಲಿ ‘ಭೂಮಿ ‘ ಎಂಬ ಅರ್ಥವಿದೆ .ನೆನಪಲ್ಲುಲಳಿಯಲೆಂದು ಉದ್ದೇಶ ಪೂರ್ವಕವಾಗಿ ಅದನ್ನೇ ಇಲ್ಲಿ ಬಳಸಿದೆ
2) ಮೇಲಿನ ಚೌಪದಿಯಲ್ಲಿ ಸರ್ವ ಲಘು ಪ್ರಯೋಗ ಸಾಧುವೇ ?
ಮರಕಿರ್ವ ನರರಚನೆ ವರವದಕೆ ನರರೂಪ
ಸೊರಗಿರ್ವ ರಸಭಾಗ ಹೊಸಚಿಗುರ ಮೂಲ
ಮೆರೆವ೦ಥ ಹೊಸತನವ ಕರಬೀಸಿ ಕರೆಯುತಿದೆ
ಸರಿಸುತ್ತ ಬುವಿಬಾನಿನತ್ತ ಜಾಲ
ರಸಭಾಗ =ಎಲೆಯ ಭಾಗ, ಜಾಲ =ಕಾಂಡ
&ಬೇರುಗಳು
ಎಲ್ಲವೂ ಲಘುವಾದಾಗ ‘ಲಗಂ ‘ ಬರುವ ಸಾಧ್ಯತೆ ? ಅರ್ಥವಾಗಿಲ್ಲ …..
Touching. ಇಂತಹ ಸಂದರ್ಭವಿಶಿಷ್ಟ (context specific) ವಿಷಯಗಳನ್ನು ಖಂಡಕಾವ್ಯ-ಕಥನಕವನಗಳಲ್ಲಿ ತಂದರೆ ಇಷ್ಟು ಕ್ಷೋಭಕರವಾಗಿರುವುದಿಲ್ಲ. ಇಲ್ಲಾದರೋ ಕಾವ್ಯಗುಣಗಳನ್ನು ಗಮನಿಸುವ ಮನಸ್ಸಾಗದು.
ಉಷಾರವರೆ ,
ನೆನಪು ಮರುಕಳಿಸಬಹುದು .ಆದರೆ, ಅವರು ನೋವಿನಿಂದ ಮುಕ್ತರಾಗಿರಾಗಿರಬಹುದೆಂದು ಸಮಾಧಾನ ತಂದುಕೊಳ್ಳಬಹುದಲ್ಲವೇ ?ನನ್ನ ಬಂಧುವೊಬ್ಬರ ಕೊನೆಯ ದಿನಗಳ ನರಳುವಿಕೆಯನ್ನು ನೋಡಿದ ಅನುಭವದಿಂದ ಹೇಳುತಿದ್ದೇನೆ .
(ಇದೇ ಭಾವದಲ್ಲಿ ಮತ್ತೊಂದು “ಶಿಶು”ಗೀತೆ)
ನೂರು ಹೂವಲೊಂದು ಮುಳ್ಳ ಬಿಟ್ಟ ಮರವ ಜರಿವ
ದೋರ ಹಣ್ಣ ನಡುವೆ ಗೆಣ್ಣ ಕೊಟ್ಟ ಮರಕೆ ಮುನಿವ
ತೂರು ಗಾಳಿಯೊಡನೆ ತರಗು ತಂದ ಮರವ ತರಿವ
ತೋರೆ ನೆಳಲ ಬಿಟ್ಟು ಬಿಳಲ ನಿಂದ ಮರವ ಕಡಿವ !
ತರಿದು ತಳಿರ ಹೊಸಕಿ ತುಳಿವ ಜನರ ನಡೆಯ ಕಂಡು
ಮರುಗಿದಿಳೆಯು ಮರಕೆ ನುಡಿಯಲಿವನೆ ಮನುಜನೆಂದು
ಮರೆತು ಹಗೆಯ ಮರವು ತೋರೆ ಹೊಸತು ಚಿಗುರಿನೊಗೆಯ
“ಅರುಳುಮರುಳ” ಮನುಜ ಕಾಣ “ಮರಳಿಯರಳೊ” ಬಗೆಯ ।।
Usha, your poem is nice too. It would flow even better if it ended with another guru at the end. In the first poem, you can achieve this by ending each of the lines as jareyuvA, muniyuvA, tariyuvA and kaDiyuvA.
OK, OK ಶ್ರೀಕಾಂತ್ ಸರ್, ಮತ್ತೆ ಅದೇ ರೀತಿ ಆಗಿದೆ ಅಲ್ಲವೇ?!, ಸರಿಪಡಿಸಿದ್ದೇನೆ.
ನೂರು ಹೂವಲೊಂದು ಮುಳ್ಳ ಬಿಟ್ಟ ಮರವ ಜರೆಯುವಾ
ದೋರ ಹಣ್ಣ ನಡುವೆ ಗೆಣ್ಣ ಕೊಟ್ಟ ಮರಕೆ ಮುನಿಯುವಾ
ತೂರು ಗಾಳಿಯೊಡನೆ ತರಗು ತಂದ ಮರವ ತರಿಯುವಾ
ತೋರೆ ನೆಳಲ ಬಿಟ್ಟು ಬಿಳಲ ನಿಂದ ಮರವ ಕಡಿಯುವಾ !
ಮುತ್ತಿ ಕಾಡಿಹ ಬೇಗೆಯೊಳು ತರು
ಹೊತ್ತುದುಳಿದಿಹ ಸೋಗು ಕಾಣಿದು
ಸುತ್ತ ಸುತ್ತುತೆ ಧರೆಯು ತಂದಿಹ ಸುಳಿವು ಸೃಷ್ಟಿಯಲೀ |
ಬತ್ತಿದೆದೆಯೊಳ ಸುಪ್ತ ಚೇತನ
ವೊತ್ತದೊಮ್ಮೆಲೆ ಹೊಮ್ಮಿದಾಕ್ಷಣ
ಸುತ್ತ ಕಾಣ್ವುದು ನಲಿವು ಮತ್ತಾ ಮಿಂದ ಮತ್ತಿನಲೀ ||
ಸೋದರಿ ಉಷಾ ಅವರಿಗೆ ಧನ್ಯವಾದ. ಒಳ್ಳೆಯ ಅನವದ್ಯಪದ್ಯವನ್ನು ನೀಡಿದುದಕ್ಕಾಗಿ ಅಭಿನಂದನೆಗಳು.
ಧನ್ಯವಾದಗಳು ಗಣೇಶ್ ಸರ್.
chennAgide padya
ಧನ್ಯವಾದಗಳು ಸೋಮ.
ತಗ್ಗುಬ್ಬುಗಳಂ ತೋರುತೆ
ಮಗ್ಗುಲಿಗೆಯ್ತಂದು ನಗ್ನಮಾಗಿರ್ಕುಮಿವಳ್
ಸಿಗ್ಗಿಲ್ಲದ ಶೂರ್ಪಣಖಿಯೊ?
ಬಗ್ಗದೆ ಸೆಟೆದಿರ್ಪಳಿಲ್ಲಿ ಬಾ ನೋಡೆನುತಂ
ಬಹುದಿನಗಳಿಂದಲೂ ತಮ್ಮ ಕಂದಪದ್ಯವನ್ನು ಕಾಣುವ ಬಯಕೆಯಲ್ಲಿದ್ದೆ. ಒಳ್ಳೆಯ ಕಂದನನ್ನೇ ನಿಮ್ಮ ಲೇಖನೀಕಾಂತೆ ಹಡೆದಿದ್ದಾಳೆ. ಧನ್ಯವಾದಗಳು.
ಬಹಳ ಚೆನ್ನಾಗಿದೆ ಪದ್ಯ 🙂
“ನಗ್ನಮಾಗಿರ್ಕುಂ” ನಪಂಸಕ ಲಿಂಗವಾಗುತ್ತದೆಯಲ್ಲವೇ!! “ನಗ್ನಮಾಗಿರ್ಪಳಿವಳ್” ಸರಿಯಾದ ರೂಪವಲ್ಲವೇ?
ನಗ್ನಮಾಗಿರ್ಕುಮಿವಳ್- ನಗ್ನವಾಗಿರುವ ಇವಳು ಅಂದು ಅರ್ಥ. ಅಲ್ಲದೆ ಇರ್ಕುಂ ಮಾಳ್ಕುಂ ಮುಂತಾದ ರೂಪಗಳಲ್ಲಿ ಬರುವ “ಉಂ”ಕಾರ ಲಿಂಗಭೇದವಿಲ್ಲದೆ ಎಲ್ಲ ಲಿಂಗಗಳಿಗೂ ಅನ್ವಯವಾಗುತ್ತೆ.
ಧನ್ಯವಾದಗಳು ಗಣೇಶ ಸೋಮರೆ.
Ref: http://padyapaana.com/?p=1577#comments
ಮೂರ್ತಿಗಳೆ,
ಹದಿವಯಸ ಬಾಲೆಯಳ ಚಿತ್ರಕಂದಿಂತೆ ಗರಿ
ಗೆದರಿದೆಮ್ಮಯ ಭಾವಕೇನೆಂದಿರೈ?
ಚದುರೆ ಸಂದಳೆಯಿಂದು ಭಾವರಾಹಿತ್ಯಳುಂ
ಹದನೆ ನಿಜಕೊಂದು ಪೆರರ್ಗೊಂದು ನೇಮಂ??
🙂
ವೃಕ್ಷವದು ಕೈ ಚಾಚಿ ನಿಂತಿದೆ
ಭಕ್ಷಿಸುವವರ ಯೇಸು ತಾನಂ
ದಕ್ಷರದಿರವ ಕಂಡು ಕರುಣೆಯ ಹರಿಯಗೊಟ್ಟಂತೆ
ವೀಕ್ಷಕರಿಗಿದು ತೋರ್ವ ರೂಪವು
ಸಾಕ್ಷಿಯಾಗಿಹುದೆ? ಧರೆಯೊಳಿರಲು
ಪಕ್ಷ ,ಮಾಸ ,ವರುಷಗಳನ೦ತ ಕಾಲ ಪರಿಧಿಯಲಿ
ಚೆನ್ನಾಗಿದೆ ಪದ್ಯ, ಎರಡು ಅಂಶಗಳನ್ನು ಗಮನಿಸಿರಿ:
1. ಭಾಮಿನಿಯಲ್ಲಿ ಜಗಣ ಪ್ರಯೋಗ ಸಾಧುವಲ್ಲ, 6ನೇ ಸಾಲಿನಲ್ಲಿ ‘ಅನಂತ’ ಎನ್ನುವಲ್ಲಿ ಜಗಣ ಬಂದುಬಿಟ್ಟಿದೆ
2. ಲಘುಬಾಹುಳ್ಯವಿರುವಲ್ಲಿ ಪದದ ಒಂದಕ್ಷರವನ್ನು ಹಿಂದಿನ ಅಥವಾ ಮುಂದಿನ ಗಣಕ್ಕೆ ಎರವಲು ಕೊಟ್ಟಾಗ ಗತಿ ತಪ್ಪುತ್ತದೆ, ನಿಮ್ಮ ಪ್ರಯೋಗದಲ್ಲಿ “ಮಾಸವ-ರುಷಗ-ಳನ೦ತ” ಬಂದಿದೆ ಸವರಿಸಿದರೆ ಇನ್ನೂ ಚೆನ್ನಾಗುತ್ತದೆ 🙂
ಧನ್ಯವಾದಗಳು ಸರ್
ವೃಕ್ಷವದು ಕೈ ಚಾಚಿ ನಿಂತಿದೆ
ಭಕ್ಷಿಸುವವರ ಯೇಸು ತಾನಂ
ದಕ್ಷರದಿರವ ಕಂಡು ಕರುಣೆಯ ಹರಿಯಗೊಟ್ಟಂತೆ
ವೀಕ್ಷಕರಿಗಿದು ತೋರ್ವ ರೂಪವು
ಸಾಕ್ಷಿಯಾಗಿಹುದೆ? ಧರೆಯೊಳಿರಲು
ಪಕ್ಷ,ರುತು ಸಂವತ್ಸರಗಳಾದ್ಯಂತ ಪರಿಧಿಯೊಳು
ಇಂಥ ಧ್ವನಿಪೂರ್ಣಚಿತ್ರವನ್ನು ರೂಪಿಸಿದ ಹಾಗೂ ಆಯ್ದ ರಸಜ್ಞಮಿತ್ರರಿಗೆ ಧನ್ಯವಾದ.
ನನ್ನ ಸದ್ಯಸ್ಕಕಲ್ಪನೆ ಇಂತಿದೆ:
ನಿಸರ್ಗಮೆನಿತಿರ್ದೊಡಂ ರುಚಿರಮಾದೊಡಂ ಭಾವಿಪೆಂ
ರಸಾರಿಶಿಶಿರಂ ಕರಂ ವಸನಚೌರ್ಯಮಂ ಗೆಯ್ದಿರಲ್ |
ವಸಂತವರನೊರ್ವನೇ ತರುವಧೂಟಿ! ನಿನ್ನಂಗದೀ
ವಿಸರ್ಗವಿಷನಗ್ನತಾವಿಕಟಭಾವಮಂ ನೀಗಿಪಂ |
ಗಣೇಶ್ ಸರ್,
“ಪೃಥ್ವಿ”ಯಲ್ಲಿ ಶಿಶಿರ-ವಸಂತರ ಕೃತ್ಯ! ಬಹಳ ಸೊಗಸಾಗಿದೆ. ಧನ್ಯವಾದಗಳು.
रसज्ञरागेण तु दत्तकाव्यप्रावारकात्पादपवेष्टनार्थात्
ऊष्मापहः प्रार्दयति स्वकार्यात् निवृत्तिराप्नोति तथा वसन्तः 😀
ಧನ್ಯವಾದ ರಾಘವೇಂದ್ರ; ಕೆಲವೊಂದು ಮುದ್ರಾರಾಕ್ಷಸದೋಷಮಾರ್ಜನವಾಗಬೇಕಿದೆ:-)
(ರಾಗೇಣ, ಪ್ರಾವಾರಕ)
गृहीतो राक्षसः 😛
ರಸಾರಿಕೃತಿಗಂ ಗಡಂ ಕವಿಯ ಮಾಂತ್ರಿಕಸ್ಪರ್ಶಮಯ್!
ಬಹಳ ಚೆನ್ನಾಗಿದೆ ಗಣೇಶ್ ಸರ್
गोमटेश्वररूप्यस्ति शिशिरे यो दिगम्बरः ।
वसन्तकाले सम्प्राप्ते स भवेद्धरिदम्बरः ॥
ಎಂದು ಚಿಂತಿಸುತ್ತಾ ಈಗ ತಾನೇ ಮನೆಗೆ ಬಂದು ನಿಮ್ಮ ಕವನವನ್ನು ನೋಡಿದೆ!!
ಪದ್ಯವೂ, ಅದರಲ್ಲಿ ಪುನಃಪುನಃ ಬಂದ ರಕಾರಾನುಪ್ರಾಸವೂ, ಕೊನೆಯಪಾದದ ವಿಕಾರಬಾಹುಳ್ಯವೂ ಚೆನ್ನಾಗಿದೆ.
ಆದರಣೀಯರಾದ ರಾಮಪ್ರಿಯ ಮತ್ತು ಶ್ರೀಕಾಂತಮೂರ್ತಿಗಳಿಗೆ ಧನ್ಯವಾದಪುರಸ್ಸರವಂದನೆಗಳು:-)
But,
ಪರ್ಯಂತಮಿರ್ದೊಡವನ್, ಆಂ
ತರ್ಯದೆ ತಳೆವಳೆ ವಸಂತನ ವನಸ್ಪತಿಯಳ್|
ಶೀರ್ಯಂಗೊಂಡೀಗಾಗ ವಿ
ಪರ್ಯಯದಿಂ ತುಂಬಿಕೊಳ್ವ ಖೇಲವಿದೆಂಬಳ್||
(ಖೇಲವಿದು ’ಎಂಬಳು’ ಅಲ್ಲ ’ಎಂಬುವವಳು’)
ಆದಿಯೊಳು ಬೊಮ್ಮ ನಿರವಿಸಿದನಿಂತೆಂತುಟೋ
ಮೇದಿನಿಯೊಳಂಕುಡೊಂಕಿನ ತರುಗಳಂ|
ಗೈದನೇಂ ಸೃಷ್ಟಿಯೆಮ್ಮವೊಲು ಮಾನಿಸರನುಂ
ಮೋದದಿಂದಾಯ್ದು ನಯಖಂಡಮಲ್ಲಿಂ||
ಮನುಜನಿರ್ಮಿತಿಗಜನು ಗೈದಬಗೆ ಚಂದವಯ್
ಬಹಳ ಚೆನ್ನಾಗಿದೆ ಕಲ್ಪನೆ ಪ್ರಸಾದು
tnx soma
ಒಳ್ಳಿತೆನೆ ಕಲ್ಪನೆಯಿದನ್ಯೋನ್ಯವಾಗರ್ಥ-
ಮುಳ್ಳ ಕವನಂ; ಮುಳ್ಳ ಕವನಮಲ್ತು 🙂
ಆಹಾ! ಉಳ್ಳಕವನಂ ಮುಳ್ಳಕವನಮಲ್ತು 🙂 🙂 🙂
ಸೋಮ, ರಾಗರಿಗೆ ಕೃತಜ್ಞತೆಗಳು
ಮುಳ್ಳಿಂದೆಽ ತಿವಿಯಽದೆಽ, ಗುಳ್ಳೆಽಯೆಬ್ಬಿಸದೆಽಲೆಽ-
ಯೊಳ್ಳೆಽ ಮಾತೊಳಗೆಽ ಕಲಿಸಿಽರೆಽ| ಗಣದೀಶಽ
ಪೊಳ್ಳನ್ನಽದೇಕೆಽ ಪಾಡೇವುಽ||
ಛಂದಶ್ಶಾಸ್ತ್ರದ ಮೊದಲ ತರಗತಿ ನಡೆದಾಗ ಶ್ರೀ ಗಣೇಶರೇ ಛಾತ್ರರಿಗೆ ಕಾಫಿ ಮಾಡಿಕೊಟ್ಟಿದ್ದರು.
ಕುಳ್ಳಿಽರಿಽಸೆಮ್ಮನುಽ ಕಾಫಿಽಯಽನೂಡಿಽಸಿಽ
ಬಳ್ಳಽದೊಳ್, ಮಿಳ್ಳೆಽಯೊಳ್ ಪದ್ಯಽ|
ಮುಳ್ಳಿಽನಿಂ ತಿವಿಯರ್ದಽ ಬೋಧಽಕಽರಾರಿರ್ಪಽ
ರಳ್ಳಽಕಽಮಾಗೆಽ ನಂ ಪದ್ಯಽ||
ಉಳ್ಳವರ್ ನೀಂ ರಚಿಪಿರೈ ಮಹಾಕಾವ್ಯಗಳ
ಕೊಳ್ಳೆಹೊಡೆಯುತ್ತೆ ಕಲ್ಪನೆಗಳಿಂದಂ|
ತಳ್ಳಬೇಕೆಮ್ಮ ನೀಂ ತೆರತೆರದೆ ಸಾಕಾರ
ಗೊಳ್ಳಲೊಂದೆರಡು ಪದ್ಯಗಳುಮಿಂತುಂ||
ಹೊಗಳಿಕೆ ಹೆಚ್ಚಾಯ್ತು ನಿಗಳಂಗಳಂತಾಯ್ತು |
ಮುಗುಳಾದುದೆನ್ನಂಜಲಿ ನಿಮ್ಮೊಳ್ | ನಾನಂದು |
ಸೊಗಸಾದ “ಟೀ”ಯಂ ನೀಡಿರ್ದೆಂ 🙂
ಕೃತಜ್ಞತೆಗಳು
ಅಯ್ಯಯ್ಯೋ!
ಭಂಟನು ನಾನಪ್ಪೆನೀಂಟುವೆ ವೆಗ್ಗಳ
ನಂಟಿದೇನೆಂಬೆಂ ಕಾಫಿಯ|ನೇನೆಲ್ಲ-
ಮೀಂಟಲು ಕಾಫಿಯಂತಿರ್ಕುಂ||
ಮಹಾಸ್ರಗ್ಧರ:
ಕಳೆಯುತ್ತವ್ಯಕ್ತಮಂ ಪಲ್ಲವಭುಜದಿನೆ ಕಾಂಡಾದಿಯಿಂ ಸತ್ತ್ವದೊಳ್ ತಾಂ
ಮೊಳೆಯಲ್ ಸಂವೃದ್ಧಿಯಾಂತಳ್ ಪ್ರಕೃತಿವನಿತೆ ಕೋಟ್ಯಾಂತರವ್ಯೂಹಮೊಡ್ಡು
ತ್ತಿಳೆಯೊಳ್ ವೈರಿಂಚದಸ್ತಿತ್ವಮನಡಗಿಸೆ ತೋರ್ಪೆಂ ವಿಲಾಸಪ್ರಕೃಷ್ಟ-
ಪ್ರಳಯಂ ಸತ್ತ್ವಕ್ಕೆನುತ್ತುಂ ಗಹಗಹಿಸಿರೆ ತಾಂ ಪೂರುಷಂ ಕಂಡು ಸುಯ್ದಂ
ಸತ್, ಅಕ್ಷರ = ನಿರ್ಗುಣ-ನಿರಾಕಾರ ಬ್ರಹ್ಮ
ತನ್ನಯ ತೋರಿಕೆಯಾದ ಪ್ರಕೃತಿಯ ಅಟ್ಟಹಾಸವನ್ನ ಕಂಡೂ ಪುರುಷನು ನಿರ್ಲಿಪ್ತನಾಗಿಯೇ ಇದ್ದನು(ಇರುವನು)
ಜವದಿಂದಂ ನೀಳ್ದ ನಿನ್ನೀ ಕವನಮನುಪಮಂ ಸೋಮ! ಭೂಮಾನಪಪ್ಪೀ
ನವಲೋದಾರೋಕ್ತಿಯುಕ್ತಂ ಗಹನಭಣಿತಿಯುದ್ಘಂ ಮಹಾಸ್ರಗ್ಧರಾತ್ಮಂ
ಧನ್ಯೋಸ್ಮಿ ಗಣೇಶ್ ಸರ್ 🙂
ಮುಡಿಮಪೀ ಪದ್ಯಪ್ರಯತ್ನಂ ತದನುಗತಯಶಂ ಮಾರ್ಗಮಂ ತೋರ್ದಪರ್ಗಂ
Very Nice soma.
ಒಂದಿದ್ದುದೆರಡಾಗೆ ದೃಷ್ಟಿಯೊಳು ಮತ್ತೆರಡು
ಮುಂದಾಗುತೆರಡೆರಡು ಕಂಡುದೇನೀ ಕರಡು ?
ಹೊಂದುತೆರಡೊಂದಾಗೆ ಸೃಷ್ಟಿಯೊಳು ಮತ್ತೊಡನೆ
ಸಂದಿರಲು ಹೊಸಹರಿವು ಬಂದುದೇನೀ ಹರವು ?
ಕಡೆಯಲ್ಲಿ ಮಂಕುತಿಮ್ಮ ಬರುತ್ತೆ ಅಂತ ನಿರೀಕ್ಷಿಸಿದ್ದೆ 🙂 ಚೆನ್ನಾಗಿದೆ. ಐದೈದು ಮಾತ್ರೆಗಳ ಗಣಗಳ ಹರಿವು ಸ್ವಲ್ಪ ಏಕತಾನತೆಯನ್ನು ತಂದಿದೆ. ಸಮಪಾದಗಳ ಕೊನೆಯ ಪಂಚಮಾತ್ರಾಗಣದ ಬದಲಾಗಿ ಒಂದು ಗುರುವನ್ನೋ ಅಥವಾ ಗುರ್ವಂತವಾದ ಚತುರ್ಮಾತ್ರಾಗಣಚನ್ನೋ ಹಾಕಿದ್ದರೆ ಪರಿಹಾರವಾಗುತ್ತೆ.
ಶ್ರೀಕಾಂತರೇ! ಒಳ್ಳೆಯ ಪರಿಶೀಲನೆ. ನೀವೆಂದಂತೆ ಸಮಪಾದಗಳಲ್ಲಿ ಊನಗಣಗಳು ಬರದಿದ್ದರೆ ಈ ಬಗೆಯ ಚೌಪದಿಗಳು ಅನಿಯತಸಂಖ್ಯೆಯ ಪಾದಗಳನ್ನುಳ್ಳ ರಗಳೆಗಳ ಹಾಗೆ ಯುಕ್ತವಾದ ಮುಗಿತಾಯವಿಲ್ಲದೆ ಸಾಕಾಂಕ್ಷವಾಗಿ ತೋರುತ್ತವೆ. ಉಷಾ ಉಮೇಶ್ ಅವರು ಇದನ್ನು ಗಮನಿಸಿ ಗ್ರಹಿಸುವುದರಲ್ಲಿ ಸಂದೇಹವಿಲ್ಲ.
ಧನ್ಯವಾದಗಳು ಗಣೇಶ್ ಸರ್, ಶ್ರೀಕಾಂತ್ ಸರ್,
“ಭಾಮಿನಿ”ಯಲ್ಲಿ ಪ್ರಯತ್ನಿಸಿ, ಅರ್ಥಪೂರ್ಣಗೊಳಿಸುವ ಪ್ರಯತ್ನದಲ್ಲಿ ಪಂಚಮಾತ್ರೆಗೆ ಮೊರೆಹೋದದ್ದು. ಛಂದಸ್ಸು(ವೃತ್ತಗಳ) ಆಯ್ಕೆಯಲ್ಲಿ ತೊಡಕಾಗುತ್ತಿದೆ.
ತಿದ್ದಿದ ಪದ್ಯ:
ಒಂದಿದ್ದುದೆರಡಾಗೆ ದೃಷ್ಟಿಯೊಳು ಮತ್ತೆರಡು
ಮುಂದಾಗುತೆರಡೆರಡು ಕೊರಡು ನಿಂದುದು ಕಾಣಾ !
ಹೊಂದುತೆರಡೊಂದಾಗೆ ಸೃಷ್ಟಿಯೊಳು ಮತ್ತೊಡನೆ
ಸಂದಿರಲು ಹೊಸಹರಿವು ಹರವು ಬಂದಿಹುದೇನಾ ?
ಇಲ್ಲ ಉಷರವರೆ. ಮತ್ತೆಕೆಟ್ಟಿದೆ.ಸಮಪಾದಗಳ ಕಡೆಯ ಪಂಚಮಾತ್ರಾಗಣದ ಬದಲು ನೀವು ಆರುಮಾತ್ರೆಗಳನ್ನು ಹಾಕಿ ಹದವಿನ್ನೂ ಕೆಟ್ಟಿದೆ. ಎಲ್ಲರಿಗೂ ಹೀಗೇ ಮೊದಮೊದಲು ತೊಡಕೆನಿಸುತ್ತೆ. ಉದ್ದೇಶದಿಂದ ಪಳಗಿಸಬಹುದು. ಚಿಂತೆಯಿಲ್ಲ.
ಓ, ಹೌದು ಶ್ರೀಕಾಂತ್ ಸರ್,
ಒಂದಿದ್ದುದೆರಡಾಗೆ ದೃಷ್ಟಿಯೊಳು ಮತ್ತೆರಡು
ಮುಂದಾಗುತೆರಡೆರಡು ಕೊರಡದುವು ಕಾಣಾ !
ಹೊಂದುತೆರಡೊಂದಾಗೆ ಸೃಷ್ಟಿಯೊಳು ಮತ್ತೊಡನೆ
ಸಂದಿರಲು ಹೊಸಹರಿವು ಹರಡಿದುದದೇನಾ ?
Yes much better now.
I am reminded by this picture of this verse I had composed many years ago in my late teen years:
पदसमुच्चयपदार्थसमुच्चयैः
अतिशयैरपि निघण्टुसुवीक्षणैः ।
कृतवता किल भवेत् किमु छन्दसा
स्थितवतेव तरुणा विगतौजसा ॥
ಮಿತ್ರವರ! ದ್ರುತವಿಲಂಬಿತವೃತ್ತಸ್ಯ ಮಧ್ಯೇ ಲಘುರೇಕಃ ಪ್ರವೇಶಿತಃ. ಅನೇನ ಛಂದ ಇದಂ ನೂತನಮಿವ ಭಾತಿ. ಕಿಂಚ ತೃತೀಯೇ ಪಾದೇ ವೃತ್ತಭಂಗೋ ಭವತಿ. ಯತಃ ಚ್ಛಂದಸಾ ಇತಿ ಕಿಲ ಲೇಖ್ಯಂ! ಕೃಪಯಾ ವಿಲೋಕಯತು
उपकृतोऽस्मि । आम् नूतनमेव छन्दः यस्य नामाहं न जाने । तृतीये पादे छन्दसा इति पदं निष्कास्य पादिना इति लिखामि चेत् वृत्तभङ्गः न भवति । पादिना इति पदं पद्यं सूचयति तथा तरुं च ।
पदसमुच्चयपदार्थसमुच्चयैः
अतिशयैरपि निघण्टुसुवीक्षणैः ।
कृतवता किल भवेत् किमु पादिना
स्थितवतेव तरुणा विगतौजसा ॥
दृष्ट्वोलूखलबद्धेन बालकृष्णेन संहृतौ ।
वृक्षरूपस्थितौ दैत्यौ भ्रातरौ यमलार्जुनौ ॥१॥
तिष्ठस्येकाकिनी किं त्वं दुःखिता वृक्षरूपिणी ।
अश्रुरूपेण पर्णानि पतितानीव भासते ॥२॥
ಕುಬೇರಪುತ್ರೌ ಕಿಲ ತೌ ಯಮಲಾರ್ಜುನರೂಪಿಣೌ 🙂
ಕ್ರಿಸ್ತಂ ಸಾವಂಬಡೆದು ಪುನರುಜ್ಜೀವನಂಗೊಂಡು ನಾಕಂ
ಸ್ವಸ್ತಂ ಪೊಕ್ಕಾ ಬಳಿಕ ಬೆಳೆದಿರ್ಪೇನದಿಂದೆಲ್ಲ ಲೋಕಂ
ಗ್ರಸ್ತಂ ತ್ರಸ್ತಂ ಕಲುಷಿತಮಿದಂ ಕಂಡು ಪುಟ್ಟಲ್ ಮೃಡೀಕಂ
ನಿಸ್ತಾರಕ್ಕಾ ಪ್ರಕೃತಿ ಗಳುವಂ ಪತ್ತುವಳ್ ಕಾಣ್ ಪ್ರತೀಕಂ
ಏನ- ಪಾಪ; ಮೃಡೀಕ- ದಯೆ
ಏಸುಕ್ರಿಸ್ತನು ಸದೇಹವಾಗಿ ಸ್ವರ್ಗಾರೋಹಣ ಮಾಡಿದ ಬಳಿಕ ತುಂಬಿದ ಪಾಪಗಳಿಂದ ಮಲಿನವಾದ ಲೋಕವನ್ನು ಕಂಡು ದಯೆಗೊಂಡು ಅದರ ಪರಿಹಾರಕ್ಕಾಗಿ ಪ್ರಕೃತಿ ತಾನೇ ಗಳುವನ್ನು (ಶಿಲುಬೆಯನ್ನು) ಏರುವಳು ಅಂತ ಕಲ್ಪನೆ.
ಮಂದಾಕ್ರಾಂತಾಗತಿಗಮಕಿತಂ ಕ್ರಿಸ್ತಕಾವ್ಯಂ ಗಭೀರಂ
ಸ್ಪಂದಂಗೊಂಡೀ ರುಚಿರನವಚಿತ್ರಾನುಬದ್ಧಂ ಪ್ರಬುದ್ಧಂ |
ಧನ್ಯವಾದಗಳು.
ಕಾಯಲೆಂದೇ ಬಾಳ್ವ ವೃಕ್ಷದಿ
ಕಾಯಿ ಹೂವೆಲೆ ಹಣ್ಣು ಕಾಣೆಯು
ಕಾಯುತಿದೆ ಹನಿ ನೀರು ದೊರಕೀತೆಂಬ ಹಂಬಲದಿ
ಕಾಯಕವ ಮರೆತೋಡಿ ಹೋಗದೆ
ಕಾಯಿ ಮಾಡದೆ ನಿನ್ನ ಕೇಳಿಗೆ
ಕಾಯವೊಣಗುವ ಮುನ್ನ ಕರುಣೆಯ ಸುರಿಬಿಡು ವರುಣನೇ
ಈ ನಿಮ್ಮ ಪದ್ಯದ ಗಂಭೀರಭಾವಕ್ಕೆ ಕಾಯಿ/ಕಾಯ ಶಬ್ದಗಳ ಚಿತ್ರಕವಿತಾಸದೃಶದ ಆಡಂಬರವು ಹೆಚ್ಚಾಯಿತೇನೋ:-) ಅಲ್ಲದೆ ಆದಿಪ್ರಾಸಕ್ಕೆ ತುಂಬ ಹೆಣಗಿದಂತೆಯೂ ಕಂಡಿದೆ. ದಯಮಾಡಿ ಅನ್ಯಥಾ ಗ್ರಹಿಸದೆ ಆಲೋಚಿಸಿರಿ.
ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.
“ಆದಿಪ್ರಾಸಕ್ಕೆ ತುಂಬ ಹೆಣಗಿದಂತೆಯೂ ಕಂಡಿದೆ.” – ಹೌದು, ನಿಜ. ಸರಿಯಾಗಿಯೇ ಹೇಳಿದ್ದೀರಿ. 🙂
ನೀವು ಹೇಳಿದ್ದನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸರಿಯಾಗಿ ಬರೆಯಲು ಪ್ರಯತ್ನಿಸುತ್ತೇನೆ.
ಲಕ್ಷ್ಮೀಶನ ಒಂದು ಪದ್ಯ ಹೀಗಿದೆ:
ಕಾಯದುಪಭೋಗಸಿರಿಯಂ ಬಯಸಿ ಸುಗತಿಯಂ
ಕಾಯದುರುತರ ವೈರದಿಂದಖಿಳ ಬಾಂಧವ ನಿ
ಕಾಯದುಪಹತಿಯನೆಸಗಿದ ಪಾತಕದ್ರುಮಂ ತನಗೆ ವಿಷಮಾಗಿ ಮುಂದೆ|
ಕಾಯದುಳಿಯದು. ಮಹಿಯನಿನ್ನಾಳ್ದೊಡಂ ಜಸಂ
ಕಾಯದುರೆ ಮಾಣದದರಿಂದರಸುತನವೆ ಸಾ
ಕಾಯದುಕುಲೇಂದ್ರನಂ ಭಜಿಸುವೆಂ ಚಿತ್ತಶುದ್ಧಿಯೊಳರಣ್ಯದೊಳೆಂದನು||
ಇಲ್ಲಿ ’ಕಾಯ’ ಎಂಬ ಅಕ್ಷರಗಳನ್ನು ಇಷ್ಟು ಅರ್ಥಗಳಿಗಾಗಿ ಬಳಸಿಕೊಂಡಿದ್ದಾನೆ: ದೇಹ, ಕಾಯ್ದುಕೊಳ್ಳುವುದು, ಸಮೂಹ (ನಿಕಾಯ), ಸುಡುವುದು, ಕಾಪಾಡುವಿಕೆ, ಸಾಕು+ಆ+ಯದು
ಇಲ್ಲಿ ಆನುಷಂಗಿಕವಾಗಿ ಒಂದು ವಿಷಯವನ್ನು ಗಮನಿಸಬೇಕು. ಪೂರ್ವಾರ್ಧಕ್ಕೆ ವಾಕ್ಯ ಮುಗಿದಿಲ್ಲ. ಗಣೇಶರ ಮಾತಿನಲ್ಲಿ ಹೇಳುವುದಾದರೆ, ’ಮಹಾಕವಿ ಮಾಡಬಹುದು, ನಾವು ಹಾಗೆ ಮಾಡಬಾರದು’.
ಕಾಲಕಾಲದೆ ಕಂಡ ಮರದ ಕಾಂಡವು ಕಾಣ
ನೀಲ ಹಿನ್ನೆಲೆಯೆಡೆಗೆ ರೆಂಬೆ ಕೊಂಬೆ |
ಲೀಲೆ ಕಂಡಿದೆಯಲ್ಲಿ ಮರದ ತಿರುಮುರುಗಲ್ಲಿ
ಮೂಲ ತೋರಿದೆ ಮೇಲೆ ಬೇರೆ ಬೇರೇ ||
ಎಲೆಗಳನ್ನು ಉದುರಿಸಿಕೊಂಡ ಮರದ ರೆಂಬೆಗಳು, ಬೇರುಗಳು ಹೊರಬಂದಂತೆ ಕಾಣುತ್ತಿವೆ ಎಂಬ ಕಲ್ಪನೆ ವಿನೂತನ. ಹಾಗೆ ಕಂಡ ಬೇರುಗಳು ಏನನ್ನು ಸಾರುತ್ತಿವೆ ಎಂದು ಕಲ್ಪಿಸಿದರೆ ತೀರ ಉಚಿತವಿರುತ್ತದೆ. ಪ್ರಯತ್ನಿಸಿ.
ನಿಮ್ಮ ಪದ್ಯವನ್ನು ನೋಡಿ ಕಠೋಪನಿಷತ್ತು ಮತ್ತು ಭಗವದ್ಗೀತೆಗಳ ವಿಶ್ವಾಶ್ವತ್ಥದ ನೆನಪಾಗುತ್ತಿದೆ.ಅಂತೆಯೇ ನಿಮ್ಮ ಕವಿತೆಯಿಂದ ನನಗೆ ಮತ್ತೊಂದು ಕಲ್ಪನೆಯೂ ಬಂದಿದೆ.
ನೆಲನಿಂದಾಚೆಗೆ ಬಂದ ಬೇರ್ಗಳಮಮಾ ಕಂಡೀ ಮಹಾಲೋಕಮಂ-
ಡಲಮಂ ಕೊಂಬೆಗಳಂತೆವೋಲ್ ಮೆರೆವುದೇ ಸಯ್ ತಾವುಮೆಂದಿರ್ದೊಡಂ |
ಮಲರೊಂದೊಯ್ಯನೆ ಸುಯ್ದು ನೀರ್ಗೆ ತವಿಪ ಪ್ರಾಣಾರ್ತಿಯಂ ಕಂಡು ಮ-
ರ್ತೆ ಲಯಂಗೊಂಡುವು ಭೂಮಿಯೊಳ್ ಪಿರಿಯರೌದಾರ್ಯಕ್ಕದೇಂ ಪೇಳ್ವುದೋ!!
ಮಲರ್ಗೇಂ ಪೇಳ್ವುದು ಭಾವಗಂಧಪರಿಕೀರ್ಣಂ ಪೊರ್ದು ತಾಂ ಸುಯ್ದುದಯ್
ಬಹಳ ಚೆನ್ನಾಗಿದೆ ಗಣೇಶ್ ಸರ್ 🙂
ಧನ್ಯವಾದ ಸೋಮ:-)
ಧನ್ಯವಾದಗಳು ಗಣೇಶ್ ಸರ್,
“ಬಂಧದೊಳ್ ಕಂಡಿಹಾ ರುಕ್ಷಿತಾ ವೃಕ್ಷಕುಂ
“ಛಂದ”ದಾ ಪರ್ಣದಿಂ ವರ್ಣವಂ ತಂದಿರೈ”
(ಕಲ್ಪನೆಯ ಒಣ ಮರವನ್ನ, “ಛಂದಸ್ಸಿನ” ಎಲೆಗಳಿಂದ ಹಸಿರಾಗಿಸಿದಿರಿ –
ಪದ್ಯ ಪ್ರತಿಕ್ರಿಯೆಯಲ್ಲಿ ತಪ್ಪಿದ್ದರೆ ಕ್ಷಮಿಸಿ.) ” Inverted Tree” ಎಂದಾಗ “ROOT” super user ಆಗಿರುವ Computerನ ನೆನೆಪಾಯಿತು, ಸಂಸಾರ ವೃಕ್ಷದ ಮೂಲ “ಪರಮಾತ್ಮ”ನ ಹಾಗೆ !
ಅಡ್ಡಿಯಿಲ್ಲ. ನಿಮ್ಮ ಕೃಷಿನೈರಂತರ್ಯವೇ ನಿಮಗೆ ರಕ್ಷೆ
ಉಷಾ ಅವರೇ, ಬಹಳಚೆನ್ನಾಗಿದೆ ಪದ್ಯ
ಧನ್ಯವಾದಗಳು ಗಣೇಶ್ ಸರ್, ಪ್ರಸಾದ್ ಸರ್, ಸೋಮ
ನಿಮ್ಮೆಲ್ಲರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ.
ದೈವ ಮೂಲದ ಮೇರು “ರಮ”ದ”ಮರ”ವಿದು ಕಾಣು
ಜೀವರೇನದರಿಳಿದ ಕೊಂಬೆಗಳುತಾವ್ |
ಕಾವ ಸಾರವದೊಂದೆ, ಸಾಗುತಿಹ ಸಂಸಾರ
ಬೂವಿಬಾನಿನ ನಡುವೆ ನಟ್ಟುದಿದುವೋ ||
ಶಿಶಿರ ಸಮಾಗಮದಿಂದಂ
ಕೃಶಕಟಿ! ವಸನಂಗಳಂ ತೊರೆದೆಯೇನೌ ನೀಂ|
ವಶಮಾಗಲ್ಕೆ ಬಸಂತಂ
ವಿಶೇಷ ವಸ್ತ್ರಂಗಳಂ ತೊಡುವ ಪರಿಯೇನೌ??
ಗಣೇಶರ ಪದ್ಯದ ಪ್ರಭಾವದಿಂದ-
(ಒಂದು ಅರ್ಥದಲ್ಲಿ- ಕೃಶಕಟಿಯೇ.. ಶಿಶಿರನ ಸಮಾಗಮದಿಂದ ವಸ್ತ್ರಗಳನ್ನು ತೊರೆದೆ. ವಸಂತ ನಿನ್ನ ವಶವಾಗುವಾಗ ವಿಶೇಷ ವಸ್ತ್ರಗಳನ್ನು ತೊಡುವ ನಿನ್ನ ಈ ಪರಿ ಎಂತಹುದು??
ಇನ್ನೊಂದು ಅರ್ಥದಲ್ಲಿ- ಕೃಶಕಟಿಯೇ.. ಶಿಶಿರಕಾಲ (ಶಿಶಿರಹೇಮಂತಗಳು ಛಳಿಗಾಲ ಎಂಬರ್ಥದಲ್ಲಿ )ದಲ್ಲಿ ಬಟ್ಟೆಯನ್ನು ತೊರೆದು ವಸಂತಕಾಲದಲ್ಲಿ (ವೈಶಾಖ-ಬೇಸಿಗೆ) ಬಟ್ಟೆಯನ್ನು ತೊಡುವ ನಿನ್ನ ಈ ಪರಿಯೇನು??)
ಕಲ್ಪನೆಯೊಳಿತಾದತ್ತಯ್
ಶಿಲ್ಪಿಸಿದೀ ಪದ್ಯಮಂತೆಯೇ ಸೊಗಸಾಯ್ತಯ್ |
ಸ್ವಲ್ಪವಯಸ್ಕ ಗಣೇಶಾ!
ತಲ್ಪಂ ತಾನಕ್ಕೆ ನಿನ್ನ ನುಡಿ ಶಾರದೆಗಂ ||
ಧನ್ಯೋಹಮ್:-)
ಚಾರು ಸಮೀರಣ ಚಿರಸಂ
ಚಾರಕ ಸಹೃದಯರ ನುಡಿಯ ಬೀಸಣಿಕೆಯಿನಾ
ಶಾರದೆ ವಿರಮಿಸಲಿಂತಾಂ
ಕ್ಷೀರದ ವಾರಿಧಿಯನುಂಡ ತೋಷಂಬಡುವೆಂ||
ಈ ಕಂದದ ಮೊದಲಿನ ಸಾಲು ನನ್ನ ಯಾವುದೋ ಅವಧಾನಪದ್ಯದ ಮೊದಲಪಾದವೆಂದು ನನ್ನ ನೆನಪು. ಹೌದೋ ಅಲ್ಲವೋ ಹೇಳಯ್ಯಾ! ಪುಣ್ಯಾತ್ಮ:-)
ಖಂಡಿತ ಹೌದು.. ನಿಮ್ಮ ಮೊದಲ ಶತಾವಧಾನದಲ್ಲಿ ೬ ಭಾಷೆಗಳಲ್ಲಿ ಅರ್ಥ ಬರುವಂತೆ ಕನ್ನಡ ಭಾಷೆಯೆ ಸ್ತುತಿಯಾಗಿ ರಚಿಸಿದ್ದ
ಚಾರುಸಮೀರಣ ಚಿರಸಂ-
ಚಾರಪರಂ ಭೂರಿವಾರಿಗಿರಿದರಿಭರಣಂ|
…….
ಈ ಪದ್ಯದ ಸಾಲನ್ನೇ ಕದ್ದುಕೊಂಡಿದ್ದೇನೆ:-);-)
ಆರು ಭಾಷೆಗಳಲ್ಲಿ ಅರ್ಥ ಬರುವಂತೆ?- ಆಹ. ಪೂರ್ತಿ ಪದ್ಯವನ್ನು ಹಾಕಿ ಯಾವಾರು ಭಾಷೆಗಳೆಂದು ತಿಳಿದಿದರೆ ಉಪಕಾರವಾಗುತ್ತೆ.
’ಸ್ವಲ್ಪ’ ಹೊಂದಿಸಿರುವುದು ಚೆನ್ನಾಗಿದೆ.
ಪ್ರಾಸಪಾಲನೆಯ ಸಾರ್ವಕಾಲಿಕ-
ತ್ರಾಸಮಂ ನೆಗೆವ ನೋಂಪಿಯೆಂತುಟೋ |
ಗ್ರಾಸಮಪ್ಪುದು ಭವದ್ವಿನೋದಕಂ
ಹ್ರಾಸಮಾಗದ ಮನೀಷೆ ನಿಮ್ಮದಯ್!!
ಪ್ರಿಯ ಪ್ರಸಾದು, You have hit at the right point.!
ವಾಹ್! ನಿಜಕ್ಕೂ ಆ ಪದ್ಯದಲ್ಲಿ ಇದುವೇ ಸಲ್ಲುವ ಚಮತ್ಕಾರ:-)
ಧನ್ಯೋಸ್ಮಿ
ಶಿಶಿರವಸಂತಂಗಳಾಟಮುತ್ಕರಮಲ್ತೇ, ಬಹಳ ಚೆನ್ನಾಗಿದೆ 🙂
ಖಾಂಡವ ದಹನದ ನಂತರ ಕೃಷ್ಣ ಅರ್ಜುನನಿಗೆ ಕೊಟ್ಟ ಸಾಂತ್ವನ –
अद्य दग्धे दशगुणं पुनः पल्लवयिष्यतः |
राज्यश्रीश्च वनश्रीश्च विबुध-द्विज-संश्रये ||
ಖಾಂಡವದಹನದ ಜೋಡಣೆ ಚೆನ್ನಾಗಿದೆ
Thanks..
ಚಿತ್ತಾರ ಹೆಣ್ಣಿನದು ಮೂಡಿಹುದು ವೃಕ್ಷದೊಳು
ಬಿತ್ತುತ್ತ ವಿಸ್ಮಯವನೆಲ್ಲರೊಳಗೆ !
ಚಿತ್ತಕ್ಕೆ ಬಿದ್ದಿರಲು ಬಲವಾದ ಪೆಟ್ಟೊಂದು
ಮತ್ತಾವ ರೂಪವದು ತಳೆಯಬಹುದು?
ಚೆನ್ನಾಗಿದೆ ಕಾಂಚನ ಅವರೆ
ಪೆಟ್ಟು ಬಿದ್ದಿರ್ಪುದೌ ಶಿರಕೆ ಕಾಂಬುದದಲ್ಲಿ
ಕೆಟ್ಟಿಹುದು ಚಿತ್ತವೆಂದೆಂತು ಪೇಳ್ವೆ?
ತಟ್ಟದೆಂಬೆಯ ಪೆಣ್ಣ ಮನದ ಬೇಗೆಯು ಗಂಡ
ಕಿಟ್ಟಹಿಡಿದಿರ್ಪ ನಿಸ್ಸ್ಪಂದ ಮನಕಂ??
ಬಿದ್ದಿರಲು ಪೆಟ್ಟು ಮೈಕೈಗೆಂದೆ ಬಗೆದರೂ
ಗೆದ್ದು ಗೆಲವಿಂ ಚಿತ್ತ ನಲಿಯಬಹುದೇ?
ಸದ್ದಿರದಲನುಭವಿಸಿ ನೋವನ್ನು ಬಗೆಬಗೆಯೊ
ಳಿದ್ದ ಧೃಡ ಚಿತ್ತವದು ಮೃದುವಾಗದೇ?
clap clap
Kanchana avare, superb!
ತಮದ ನೆಲದಲಿ ನಿಂತು ಬೇರಿಳಿಸಿ ಮೇಲೆ ಸಂ
ಭ್ರಮದೆದ್ದರಳಿ ಬೆಳೆವ ರಾಜಸತ್ವ
ವಿಮಲವಾಗಿಸಿ ಕುಲವ ಸತ್ತ್ವದಿಂ ಶೋಧಿಸುತ
ಸುಮಫಲವ ಪಡೆದೀವ ಜೀವ ತತ್ತ್ವ
ಮಣ್ಣಿನಿಂದೆದ್ದ ಕುಡಿ ಕಣ್ಣೆವೆತೆರೆವ ಮುನ್ನ
ಹೆಣ್ಣಿನೆದೆ ಜೀವರಸ ರಕ್ಷೆಯೊರತೆ
ಮಣ್ಣ ಹೊಸ್ತಿಲ ದಾಟಿ ಮಣ್ಣಾಗುವನಕ ನಡು
ಬಣ್ಣಗಳ ಕಣ್ಣಾದ ತಾಯ ಮಮತೆ
ಭಿನ್ನ ನೀರಸತೆಯನು ಬೇರಲ್ಲೆ ಬೇರ್ಪಡಿಸಿ
ಹೊನ್ನ ಹಣ್ಣನು ಬೆಳೆವ ಮಾಟಗಾತಿ
ತನ್ನೆಲ್ಲ ಸಾರ ಸಂಸಾರಕುಜಕೆರೆದರಳಿ
ಧನ್ಯತೆಯೆ ಸಾಕಾರಗೊಳುವ ರೀತಿ
ಹೆತ್ತು ತುತ್ತೂಡಿಸುತ್ತಾಡಿಸುತ್ತಾಳಿ ಬೇ-
ಸತ್ತಾಗ ಕೈನೀಡುತೆತ್ತಿಕೊಳುವ
ಬತ್ತದೊರತೆಯದೇಕೆ ಮೈಯೆಲ್ಲ ಮರಗಟ್ಟಿ
ಸತ್ತಿಹುದೆ ಋತುಬಲವೆ ಚಿಗುರೆನೆನುವ
ಪ್ರೇಮ ಮೂಲದ ಕಾಂತಿ ಯೇಳುಬಣ್ಣವಚೆಲ್ಲಿ
ಕಾಮಿ ಫ್ರಾಯ್ಡನ ಕಣ್ಣು ಹಳದಿಗೊಳಲು
ಭೌಮದರ್ಶನವಿರದ ಬಯಕೆ ಕಣ್ಣಾಗಿರಲು
ಕಾಮರೇಖೆಗಳಾಯ್ತೆ ಮರದ ಬಿಳಲು
ಪೊನ್ನಸೊಲ್ಗಳ ಕಬ್ಬಭೋರ್ಗರೆಯುತಿರ್ಪುದಯ್
ಮೂರನೇಯ ಪದ್ಯ ಬಹಳ ಹಿಡಿಸಿತು ಮೌಳಿಯವರೇ 🙂
Thank You Soma
ಮುಕ್ತಕಕ್ಕೊಂದಕ್ಕೆ ಮೀಟುಗೋಲಪ್ಪುದೆನೆ
ಶಕ್ತಮಾದುದು ಕುಲಕಕೇ ಚಿತ್ರಮಾಃ |
ಯುಕ್ತರಿರೆ ಕವನಿಸಲ್ ಬರಡುಮರನಾದೊಡಂ
ಶುಕ್ತಿಯಪ್ಪುದು ಕಾವ್ಯಮುಕ್ತೆಗಳ್ಗಂ ||
ಧನ್ಯವಾದಗಳು :
ಶಕ್ತಕವಿ ಮೆಚ್ಚೆ ಪುಡಿಗವನವೂ ಪುಷ್ಪವಲ
ರಕ್ತಸಂಚಾರದೆದೆ ಮಿಡಿವಪರಿಯೇ
ಯುಕ್ತ ಘನವಾಣಿಯಿಂ ಮುಕ್ತಮನನಿಂತಭಿ-
ವ್ಯಕ್ತಿಸದೆ ಮುಕ್ತಕ ವಿರಕ್ತಮಲ್ತೇ
ನಿಜ ಹೇಳುತ್ತೇನೆ. ಆ ಮೇಲಿನ ಐದು ಪದ್ಯಗಳನ್ನು ನಾನು ಇನ್ನೂ ಓದಿಲ್ಲ. ’ಕ್ತ’ಪ್ರಾಸದ ಈ ಪ್ರತಿಕ್ರಿಯಾಪದ್ಯವಂತೂ ತುಂಬ ಚೆನ್ನಾಗಿದೆ. ಉತ್ತರಾರ್ಧದಲ್ಲಿ ಅನುಪ್ರಾಸಗಳು ಕರ್ಣತಾಡಿತವಾಗಿವೆ.
ಪ್ರತ್ಯೇಕ ಪಂಕ್ತಿ / ಪದ್ಯಗಳು ಒಬ್ಬೊಬ್ಬರಿಗೆ ಹಿಡಿಸುವ ಸಂಗತಿ ನನಗೆ ಅತ್ಯಂತ ಆಸಕ್ತಿಕರವಾದದ್ದು. ಕೊನೆಯಪದ್ಯ ನನ್ನ ಕೊನೆಯ ಆಯ್ಕೆ !. ಹಣ್ಣೆಂದರೆ ಇಂದಿನ ಹಸಿಮನಸ್ಸಿಗೆ ಹೇಗೆ ತೋರುತ್ತದೆ ಎಂಬ ಭಾವವನ್ನು ತರಬೇಕಾಗಿ ಅದು ಹುಟ್ಟಿಕೊಂಡಿತು. ಧನ್ಯವಾದ.
” ಕ್ತ ” ಪ್ರಾಸ ಕರ್ಣರಂಜಕವಾಗದೆ, ಕರ್ಣತಾಡಿತವಾಗಿದ್ದಲ್ಲಿ, ಕ್ಷಮೆಯಿರಲಿ. ಪ್ರಾಸ ಕಿವಿಗೆ ಬಡಿಯುಲಿ ಎಂಬ ಉದ್ದೇಶ ಖಂಡಿತ ಇಲ್ಲ. ಅದು ಆ ಕ್ಷಣದಲ್ಲಿ ಹಾಗೆ ಬಂದದ್ದಷ್ಟೆ 🙂
‘ತಾಡನ’ ಎಂಬ ಪದವನ್ನು ‘ಹಿತತಾಡನ’ ಎಂಬ ಅರ್ಥದಲ್ಲೇ ಬಳಸಿದ್ದೇನೆ
೨ನೆಯ ಪದ್ಯದ ಉತ್ತರಾರ್ಧ ಹಾಗೂ ಕೊನೆಯ ಪದ್ಯ ತುಂಬ ಚೆನ್ನಾಗಿವೆ.
ಈ ಕೆಳಗೆ ಹೇಳಿರುವುವಾವುವೂ ಛಂದೋದೋಷಗಳಲ್ಲ:
೧ನೆಯ ಪದ್ಯ, ೩ನೆಯ ಪಾದ: ಸತ್ವದಿಂ ~ ಸತ್ತ್ವದಿಂ.
೩ನೆಯ ಪದ್ಯ: ತನ್ನೆಲ್ಲ ಸಾರ ಸಂಸಾರಕುಜಕೆರೆದರಳಿ – ಅದು ’ಅರಳಿಸಿ’ ಎಂದಲ್ಲವೆ.
೪ನೆಯ ಪದ್ಯ: ಮೈಯಲ್ಲ. Is it ಮೈಯೆಲ್ಲ or ಮೈಯಲ್ಲೆ?
೪ನೆಯ ಪದ್ಯ: ಸತ್ತಿಹುದೆ ಋತುಬಲವೆ ಚಿಗುರೆನೆನುವ – ’ಚಿಗುರುವೆನೆನುವ’ ಎಂದಲ್ಲವೆ? ಅಥವಾ ’ಚಿಗುರೆನೆನುತಲ್’ ಎಂದು ಸವರಬೇಕು
ಪ್ರಸಾದರೇ,
ಹೌದು. ಸತ್ತ್ವವೇ ಶುದ್ಧರೂಪ.
ಸಂಸಾರ ಕುಜಕ್ಕೆ ಸಾರವನ್ನು ಎರೆದು (ತಾನೇ) ಅರಳಿ, ಎಂದರೆ ಆ ತಾಯಿ ಅಲ್ಲೇ ವಿಕಾಸಗೊಂಡು ಎಂದು ಭಾವ. ಅರಳಿ ಪದ ಸರಿಯಾಗಿದೆ.
ಮೈಯೆಲ್ಲ ಮರಗಟ್ಟಿ ಎಂದೇ ಉದ್ದೇಶಿತ ಪದ. ’ಮೈಯಲ್ಲ ’ ಎಂದು ಟಂಕಿಸಿರುವುದು ದೋಷವೇ.
ಸತ್ತಿಹುದೆ, ಚಿಗುರೆನ್ ಎನುವ ಋತುಬಲವೆ? (ಈಋತುವಿನಲ್ಲಿ ಚಿಗುರನ್ನು ತಳೆಯನು ಎಂಬ ಋತು ಬಲವೆ?). ಚಿಗುರೆನ್ – ಚಿಗುರೆನು ಎನುವ ’ಚಿಗುರೆನೆನುವ’ ಪದ ಸರಿಯಿದೆ.
ಇಂಥ ತೋರ್ಕೆಗಳು ಎಚ್ಚರದಿಂದ ಟಂಕಿಸಲು ನಿಶ್ಚಯವಾಗಿಯೂ ಅಗತ್ಯ. ಪ್ರತಿಕ್ರಿಯೆಗೆ ಮತ್ತು ನಿಮ್ಮ ಸೂಚನೆಗಳಿಗೆ ಧನ್ಯವಾದಗಳು.
ಪೆಂಡಂತೆ ಕಂಡೊಡೆ ಮರನ್ ಪ್ರಿಯೆಯಕ್ಕುಮೇ ಪೇಳ್
ಪೆಂಡೆಂದು ನಂಬಿರೆ ಮರುಳ್ಪಿಡಿದಿರ್ಕುಮೀ ಬಾಳ್
ಕಂಡಂತೆಯೇ ಜಗತಿಯುಂಡೆನದಿರ್ಕೆಲೈ ಕೇಳ್
ಉಂಡೊಂದೆ ಸತ್ಯಮದೆ ಬೊಮ್ಮ ಅದಂ ಪುಡುಂಕೇಳ್
ಉಂಡು- ಉಂಟು
“ಬ್ರಹ್ಮ ಸತ್ಯಂ ಜಗನ್ಮಿಥ್ಯಾ”
ಬಹಳ ಚೆನ್ನಾಗಿದೆ
Thanks soma
ಪಳವಾತಿನೊಳಗುಟ್ಟು ನಿಮ್ಮ ಪಾಡಿಗೆ ಮಟ್ಟು
ನಳನಳಿಸಿತ್ತು ಮಹತ್ತು
ಬಿಳಲುಗಳ ಹರಡಿದೆಡೆ
ಪುಳಕಿತವಿ ಬಯಲಲ್ಲಿ
ಗಳಿಕೆಯಲಿ ಛಳಿಯೆಲ್ಲ ಧೂಳಿಪಟವು
ಹಳೆಹಳಿಯ ಪಯಣಿಗಳೊ
ಸುಳುಹಿಂದ ಕಲ್ಪನೆಯೊ
ತಳಬೇರು ಗುರುತರದೆದೆಯಭಿಯಾನ ||
ಶೈಲಜಾ ಅವರೆ, ಪದ್ಯಪಾನಕ್ಕೆ ಸ್ವಾಗತ, ನಿಮ್ಮ ಪದ್ಯ ಚೆನ್ನಾಗಿದೆ. ಕಡೆಯ ಸಾಲನ್ನು ಗಮನಿಸಿರಿ ಮತ್ರೆಯಲ್ಲಿ ವ್ಯತ್ಯಾಸವಾಗಿದೆ
ಧನ್ಯವಾದ….. ಹೀಗೆ ಮಾಡಿದರೆ?
ಪುಳಕಿತವಿ ಬಯಲಲ್ಲಿ
ಗಳಿಕೆಯಲಿ ಛಳಿಯೆಲ್ಲ ಧೂಳಿಪಟವು
ಹಳೆಹಳಿಯ ಪಯಣಿಗಳೊ
ಸುಳುಹಿಂದ ಕಲ್ಪನೆಯೊ
ತಳಹದಿಯು ಗುರುತರದೆದೆಯಭಿಯಾನ ||
ಶೈಲಜರವರಿಗೆ ಸ್ವಾಗತ. ಒಳ್ಳೆಯ ಪ್ರಯತ್ನ್.
ಪುಳಕಿತವಿ- ಪುಳಕಿತವೀ?
ನಗ್ನತೆಯವಸ್ತ್ರಮಂ ಪ್ರಕೃತಿಮಾತೆಗೆ ಪೊದಿಸೆ
ಭಗ್ನಳೆಂದಳ್ಕುವಳೆ? ತಾನೂರ್ಜೆಯಿಂ
ಆಗ್ನೇಯಳಂಬರಮನೊಂದೊಂದೆ ಪೆರ್ಚಿಸುತ-
ಲಗ್ನತೆಯನಾಂಪಳಲ್ತೇ ಶಿಶಿರನಿಂ
ಅಲಗ್ನತೆ – detachment
ಆಗ್ನೇಯ – ಅಗ್ನಿಗೆ ಸಂಬಂಧಪಟ್ಟವಳು (fire in the belly to fightback)
ಒಳ್ಳೆಯ ಪದ್ಯ ಸೋಮ, ಅಭಿನಂದನೆ
ಟಿಸಿಲಂ ಕಂಡೊರಟಾದುದೆಣ್ಣೆಯಿಲದೇ ಕೂದಲ್ ಪ್ರಿಯೇ ತಾಳದೀ
ಬಿಸಿಲಂ ತೋಲ್ ತೊಗಟಾದುದಾರಯಿಕೆಯಂ ತಾಂ ಕಾಣದೇ ಮೈಥಿಲೀ
ಸುಸಿಲಂ ಕೂರ್ತೆದೆಗಪ್ಪೆ ದೋರ್ಲತಿಕೆಯಂ ಚಾಚಿರ್ದೊಡಂ ನಾಣ್ಚಿ ಜೋ-
ಡಿಸಿ ಲಂಬೋರುವನಿರ್ಪಯೇಕೆನುವನಾ ಭೂಜೋತ್ಸುಕಂ ರಾಘವಂ
ಸುಸಿಲ್- ಸುರತ
ಭೂಜೋತ್ಸುಕ- ಭೂಜ/ಭೂಜೆ ಎರಡರಲ್ಲೂ ಉತ್ಸುಕನಾಗಿರುವ (ಅನುರಕ್ತ, ವಿಯೋಗಬಾಧಿತ)
ಸೀತಾಪಹರಣವಾದಾಗ ರಾಮನು ಅವಳ ವಿಯೋಗೋನ್ಮತ್ತನಾಗಿ ಕಾಡಿನ ಗಿಡಮರಗಳಲ್ಲೆಲ್ಲ ಅವಳ ಅಂಗಾಂಗವನ್ನು ಕಾಣುತ್ತ ಅಲೆಯುತ್ತಾನೆಂದು ರಾಮಾಯಣದಲ್ಲಿ ಬರುತ್ತೆ. ಅದ್ದನ್ನು ಚಿತ್ರಿಸುವ ಒಂದು ಪ್ರಯತ್ನ. ರಾಮನು ಉನ್ಮತ್ತೇಭ.
ಅಮಮಾ! ಕಾವ್ಯಮಿದೇಂ ರಸಾರ್ದಮಮಲಂ ಕಾರುಣ್ಯಗಣ್ಯಾಶಯಂ!!
ದ್ರುಮದ ವ್ಯಾಜದೆ ರಾಮ-ಸೀತೆಯರ ದಾಂಪತ್ಯಾಭಿಜಾತ್ಯಕ್ಕದೆಂ-
ತು ಮಹಿಷ್ಠಸಮೀಕೃತಿಪ್ರಕೃತಿಯಂ ನೀಮಿತ್ತಿರಯ್ ! ತೆತ್ತಿರಯ್ !
ನಮನೋದಾರಸುಮಗಂಗಳಂ ಸಲಿಸುವೆಂ ನಾಂ; ಮಂಗಳಂ ಕೋರುತುಂ ||
ಧನ್ಯವಾದಗಳು ಗಣೇಶರೆ.
ಏನು ಹೇಳಿದರೂ ಗಣೇಶರು ಹೇಳಿರುವುದಕ್ಕಿಂತ ಚೆನ್ನಾಗಿ ಹೇಳಲಾಗದು. ಹಾಗಾಗಿ ಈ copy and paste with a minor spelling alteration: ನಮನೋದಾರಸುಮಂಗಳಂ ಸಲಿಪೆ ನಾನುಂ; ಮಂಗಳಂ ಕೋರುತುಂ||
ಥ್ಯಾಂಕ್ಸ್ ಪ್ರಸಾದು. ಗಣೇಶರ ಆ ಸಾಲಿನಲಿ ಇನ್ನೊಂದು ಟೈಪೊ- ಸುಮಂಗಳಂ ಅಂತ ಬರಬೇಕು.
ಸಾವಿರವೆರಳಂ ಚಾಚುತೆ
ಬೇವಸದಿಂ ಕುಂದಿ ಬೆಂದದಾರಿಗೊರೆವೆಯೌ
ಗಾವಿಲರೊಳ್ ಬಲವಿಲ್ಲೌ
ಭಾವಿಸು ಸತಿಲೋಕಮಾನರಕ್ಷಕ ಕೃಷ್ಣಂ||
ಅನವದ್ಯಕಂದಪದ್ಯದ
ಭವನಂ ವಾಗ್ದೇವಿಗೊಪ್ಪುತಿರ್ಪುದು ನೆಲೆಸಲ್|
ಭಾವಿಸೆ ಕೃಷ್ಣಗೆ ಪೆರತಹ
ಯಾವೆಲ್ಲರು ಬಲವಿಹೀನ ಗಾವಿಲರೆಂದುಂ|
ಕೋವಿದ ನೀನುಂ ಮೇಣೀ
ದೇವಾನಾಂಪ್ರಿಯನುಮಾನು ಗಾವಿಲರಲ್ತೆಲ್?
Very nice raveendra
ಬಹಳ ಚೆನ್ನಾಗಿದೆ, ಪ್ರತೀಸತಿಯು…
ಹೊಳ್ಳಂ ನೀನಿಂತೆ ಪದ್ಯಮೀವೆನೆ ಬಗೆವೆಂ 🙂
ಸೋಮ,
ಆ ಚುಕ್ಕೆಗಳಿರುವಲ್ಲಿ ಒಂದು ಪದ ತುಂಬಬೇಕೆ? ಇದೋ: ಪ್ರತೀಸತಿಯು ಬಂದಾಗಳ್ (after every wife), ಹೊಳ್ಳಂ ನೀನಿಂತೆ ಪದ್ಯಮೀವೆನೆ ಬಗೆವೆಂ.
ಅಂದಹಾಗೆ, ಹೊಳ್ಳರಿಗೆ ಮೊದಲ ಹೆಂಡತಿಯನ್ನು ದೊರಕಿಸಿಕೊಟ್ಟ ಅಧ್ವರ್ಯು ನೀವೇ ಅಲ್ಲವೆ? ಈಗ ಆ ಪದದ (ಅಧ್ವರ್ಯು) ಉತ್ತರಾರ್ಧವನ್ನು ತಿರುಚುವ ಹವಣೆ? 😉
ಪ್ರಸಾದು, ಈ ಮಾತು ಆಡಬಹುದೇ ನಮ್ಮ ಹೊಳ್ಳಂಗೆ? ಉತ್ತರಾರ್ಧವನ್ನು ದಯವಿಟ್ಟು ತಿರುಚಬೇಡಿರಿ 🙂
Thanks Ganesh, Srikanth, Soma and Prasadu.
ಆರೆಸಗಿ ಪೋದರೀ
ಘೋರಕೃತ್ಯಂಗಳಂ ?
ಚೋರರೇಂ ?! ನೀಚರೇಂ ?! ದಯಹೀನರೇಂ ?! |
ಸಾರಮಳಿದಿರೆ ಬಲು ವಿ-
ಕಾರದಿಂ ವೃಕ್ಷಮಿ-
ನ್ನಾರು ರಕ್ಷಿಪರೆಂದು ದುಃಖಿಪುದು ತಾನ್ ||
ಬಹಳ ಚೆನಾಗಿದೆ ಶಕುಂತಲಾ ಅವರೆ
ದಯಾಹೀನ ಎಂಬುದು ಶುದ್ಧರೂಪ. ಏಕೆಂದರೆ ದಯಾ ಎಂಬುದು ಆಕಾರಾಂತ ಸ್ತ್ರೀಲಿಂಗಶಬ್ದ. ದಯೆಯಿಲ್ಲದ ಎಂಬುದು ಕನ್ನಡದಲ್ಲಿ ಯುಕ್ತ. ಆದರೆ ದಯವಿಲ್ಲದ ಎನ್ನುವುದೂ ಬಳಕೆಯಲ್ಲಿದೆ. ಇದನ್ನು ಹೇಗೋಒ ಸಹಿಸಬಹುದು:-) ಆದರೆ ದಯಹೀನ/ದಯವಂತ ಇತ್ಯಾದಿಗಳು ಸಂಸ್ಕೃತದ ಸಮಾಸವೇ ಆಗುವ ಕಾರಣ ಹೇಗೆ ಕಂಡರೂ ಸಾಧುವೆನಿಸವು.
ಗುರುಗಳಿಗೆ ಧನ್ಯವಾದಗಳು.ಬಹಳ ಉಪಯುಕ್ತ ಮಾಹಿತಿಗಳನ್ನಿತ್ತು ತಿದ್ದಿರುವಿರಿ.ನಾನು ಗದ್ಯದಲ್ಲಿ ಸಾಮಾನ್ಯವಾಗಿ ದಯಾಹೀನ,ಕೃಪಾಹೀನ ಮೊದಲಾದ ಪದಬಳಕೆಯನ್ನು ಮಾಡುವೆನಾದರೂ ಪದ್ಯದ ನಡೆಗೆ ಸರಿಯಾಗಿ ಅರಿವಿಲ್ಲದಂತೆ ತಪ್ಪಾಗಿದೆ. ದಯವಿಟ್ಟು ಪದ್ಯದ ಮೂರನೇ ಸಾಲನ್ನು -ಚೋರರೇಂ ?! ನೀಚರೇಂ ?! ಮತಿಹೀನರೇಂ ?! – ಎಂಬುದಾಗಿ ಪರಿಗಣಿಸಿರಿ.
ಈ ಪದ್ಯದಲ್ಲಿ ಒಂದು ತಪ್ಪೂ ಇರಬಾರದೆಂದುಕೊಂಡಿದ್ದೆ 🙁
ಕೃಪೆಹೀನರೇಂ – ಸರಿಯೆಂದಾದಲ್ಲಿ ಅದೇ ಒಳಿತು.
ದಯೆಯಿಲ್ಲರೇಂ, ಕೃಪೆಯಿಲ್ಲರೇಂ ಎಂದು ಹಾಕಿದರೆ ಸರಿಯಾಗುತ್ತೆ.
ಧನ್ಯವಾದಗಳು ಶ್ರೀಕಾಂತ ಸರ್.ಸಲಹೆ ಚೆನ್ನಾಗಿದೆ.ಹಾಗೇ ಆಗಲಿ.
ಶ್ರೀಯುತ ಸೋಮರಿಗೆ ಧನ್ಯವಾದಗಳು. ನಿಮ್ಮ ಪದ್ಯಗಳು ಬಹಳ ಚೆನ್ನಾಗಿರುತ್ತವೆ.
ಮರಕಿರ್ವ ನರರಚನೆ ವರವದಕೆ ನರರೂಪ
ಸೊರಗಿರ್ವ ರಸಭಾಗ ಹೊಸಚಿಗುರ ಮೂಲ
ಮೆರೆವ೦ತ ಹೊಸತನವ ಕರಬೀಸಿ ಕರೆಯುತಿದೆ
ಸರಿಸುತ್ತ ಬುವಿಬಾನಿನತ್ತ ಜಾಲ
ರಸಭಾಗ =ಎಲೆಯ ಭಾಗ, ಜಾಲ =ಕಾಂಡ &ಬೇರುಗಳು
ಬಹಳ ಚೆನ್ನಾಗಿದೆ, ಭುವಿ ಎಂದು ಟೈಪೋ ತಿದ್ದಬೇಕು
ಪ್ರಿಯ ಸೋಮ,
ಬುವಿ ಕನ್ನಡ ಪದ ಸರಿಯಾಗಿದೆ. ನಡು-ನವ್ಯ ಕನ್ನಡ ಕಾವ್ಯಗಳಲ್ಲಿ ಹೇರಳವಾಗಿ ಪ್ರಯೋಗವಾಗಿದೆ. “ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ! …”ನಾನು ನಾಯಿ ಮೆಟ್ಟು ಕೊಡೆ ನಾಲ್ವರೆ ತಿರುಗಾಟಕೆ ಹೊರಟೆವಂದು ನಸುಕು ಬಿಡೆ ಬೆಳಗು ಸಿರಿಯ ನೋಟಕೆ: ಬಾನು ಬುವಿ ಮುಗಿಲು ರವಿ ಹೊರಟರೊಡನೆ ನಮ್ಮ ಒಡನೆ ರಸದೌತಣದೂಟಕೆ!”
.ಕುವೆಂಪು.”
“ಭುವಿ” ( ಸಂ-ಸ್ತ್ರೀ) ಯೇ ಕನ್ನಡಕ್ಕೆ ಬಂದು ಅಲ್ಪಪ್ರಾಣಿಯಾಗಿದೆಯೇ?
ಭೂಮಿ= ಸಂ. ಬುವಿ (ತದ್ಭವ) = ಕಾರಂತ, ಬುವಿ (ಜಿ.ವೆಂ).
ಶೋಧಿಸಿ ನೋಡಿ. ಪ್ರಯೋಗ ತಪ್ಪಾದರೆ ತಿದ್ದಿ ಕೊಳ್ಳೋಣ.
.
ಚಂದ್ರಮೌಳಿ ಸರ್,
“ಬೂವಿ” (= ಭೂಮಿ) ಪದ ಪ್ರಯೋಗ ಸರಿಯೇ? (ಗುರುನಾಥ ಜೋಶಿ ಶಬ್ದಕೋಶದಲ್ಲಿದೆ) ಕ್ರ.ಸಂ. ೧೨ರ ಪದ್ಯದಲ್ಲಿ “ಬೂವಿಬಾನಿನನಡುವೆ…” ಎಂದು : “ವ”ಕಾರ “ಗಜ” ಪ್ರಾಸಕ್ಕಾಗಿ ಬಳಸಿದ್ದು. ತಪ್ಪಿದ್ದಲ್ಲಿ, ಮತ್ತಾವಪದ ಬಳಸಬಹುದು ತಿಳಿಸಿಕೊಡಿ.
ಒಂದು ಪದ ಟಂಕಿತವಾಗಿ ಹಲವ್ರು ಪ್ರಯೋಗಗಳಿಂದ ನಾಣ್ಣುಡಿಯಲ್ಲಿ ಬೆರೆತು ಚಲಾವಣೆಗೊಂಡಾಗ ಅದಕ್ಕೆ ಉಪಯೋಗದ, ಅರ್ಥದ ಬೆಲೆ. ನಮ್ಮದೊಂದು ಪದ್ಯಕ್ಕೆ ಪ್ರಾಸದಕಾರಣದಿಂದ, ’ರಾಮಾಯಣ’ ವನ್ನು ’ರಾಮಯಣ’ ಎಂದು ಮಾಡಿಕೊಂಡು, ’ನಾರಯಣ’ ಎಂದು ಕುಮಾರವ್ಯಾಸ ಮಾಡಿಲ್ಲವೆ ಎನ್ನುವುದು ಸರಿಯಾಗಲಾರದು. ಇಲ್ಲಿ ನಾವು ಚರ್ಚಿಸಿದ್ದು ’ಬುವಿ’. ಅದು ನಮ್ಮಲ್ಲಿ ಒಪ್ಪಿತವಾಗಿದೆ. ಬೂವಿ ಹಾಗೆ ಒಪ್ಪಿತವಲ್ಲ. ಇಲ್ಲಿ ತಪ್ಪು ಸರಿ ಎಂಬುದಕ್ಕಿಂತ, ಒಂದು ಪದಪ್ರಯೋಗ ಮಾಡಿದಾಗ ಅದು ಉದ್ದೇಶಿತ ಅರ್ಥವನ್ನು ಓದುಗನ ಮನಸ್ಸಿನಲ್ಲಿ ಮೂಡಿಸುತ್ತದೆಯೇ ಎಂಬುದು ಮುಖ್ಯ. ನಮ್ಮ ಹಳ್ಳಿಗಳ ಕಡೆ ಮುಸಲ್ಮಾನರ ಹೆಣ್ಣುಮಗಳನ್ನು ಹೀಗೆ ಕರೆದಿದ್ದನ್ನು ಕೇಳಿದ್ದೆನೆ. ಅರ್ಥಸ್ಫುರಣ ಮುಖ್ಯ. ಇನ್ನು ’ ಬೂವಿ ಬಾನಿನ ನಡುವೆ’ ಯಾವ ಪದ್ಯವೋ ನನಗೆ ತಿಳಿಯದು.’ಭೂವಿಯನ್ಮಧ್ಯದಲಿ’ ಅದಕ್ಕೆ ಹೊಂದುವ ಪ್ರಾಸಮಾತ್ರಾಸಮಾನವಾದೀತು
ಉಷರವರೆ- ಬೂವಿ ಎನ್ನುವ ಪ್ರಯೋಗಕ್ಕೆ ಕವಿಕಂಠಹಾರ ಗ್ರಂಥದ ಆಧಾರವುಂಟು. ಇದನ್ನು ಹಿಂದೆ ನಾನು ಬಳಸಿ ತಿಳಿಸಿದ್ದೆ.
https://padyapaana.com/?p=1407#comment-7353
ಚಂದ್ರಮೌಳಿಯವರೆ ‘ಬುವಿ’ ಪ್ರಯೋಗ ನಡುಗನ್ನಡ ಹೊಸಗನ್ನಡದಲ್ಲಿದೆ ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು 🙂
ಧನ್ಯವಾದಗಳು ಸೋಮ & ಚಂದ್ರ ಮೌಳಿಯವರಿಗೆ .
1) ನಾನು ‘ಬುವಿ ‘ ಅಲ್ಪಪ್ರಾಣ ಪದವನ್ನು ಎಲ್ಲೋ ಇತ್ತೀಚೆಗೆ ಓದಿದ್ದೆ . ಅನುಮಾನದಲ್ಲಿ ಪದಕೋಶವನ್ನು ನೋಡಿದ್ದೆ . ಎರಡೂ ಪದಗಳಿಗೆ ಪ್ರತ್ಯೇಕ ಪುಟಗಳಲ್ಲಿ ‘ಭೂಮಿ ‘ ಎಂಬ ಅರ್ಥವಿದೆ .ನೆನಪಲ್ಲುಲಳಿಯಲೆಂದು ಉದ್ದೇಶ ಪೂರ್ವಕವಾಗಿ ಅದನ್ನೇ ಇಲ್ಲಿ ಬಳಸಿದೆ
2) ಮೇಲಿನ ಚೌಪದಿಯಲ್ಲಿ ಸರ್ವ ಲಘು ಪ್ರಯೋಗ ಸಾಧುವೇ ?
ಭಾಲರೆ,
’ಲಗಂ’ ಇಲ್ಲದ ಪಂಚಮಾತ್ರಾಗಣ ಇರಬೇಕು. ಸರ್ವಲಘುವಾದರೂ ಸರಿಯಾಗುತ್ತದೆ. ಮತ್ತೊಂದು ಅಂಶ. ಮೆರೆವ೦ತ, ಎಂಬ ಪದ ಮೆರೆಯುವಂತಹ ಎಂಬ ಅರ್ಥ ಬರಲು ಮೆರೆವಂಥ ಆದರೆ ಚೆನ್ನ.
ಧನ್ಯವಾದಗಳು . ಸರಿಪಡಿಸಿದೆ …
ಮರಕಿರ್ವ ನರರಚನೆ ವರವದಕೆ ನರರೂಪ
ಸೊರಗಿರ್ವ ರಸಭಾಗ ಹೊಸಚಿಗುರ ಮೂಲ
ಮೆರೆವ೦ಥ ಹೊಸತನವ ಕರಬೀಸಿ ಕರೆಯುತಿದೆ
ಸರಿಸುತ್ತ ಬುವಿಬಾನಿನತ್ತ ಜಾಲ
ರಸಭಾಗ =ಎಲೆಯ ಭಾಗ, ಜಾಲ =ಕಾಂಡ
&ಬೇರುಗಳು
ಎಲ್ಲವೂ ಲಘುವಾದಾಗ ‘ಲಗಂ ‘ ಬರುವ ಸಾಧ್ಯತೆ ? ಅರ್ಥವಾಗಿಲ್ಲ …..
ಅಲ್ಲಲ್ಲ, ಮೌಳಿಯವರು ಹೇಳಿರುವುದೇನೆಂದರೆ, (ಉಚ್ಚಾರ ಕಷ್ಟವಾದರೂ) ಸರ್ವಲಘುವೂ ಸಾಧು, ಆದರೆ ‘ಲಗಂ’ ತಗದು ಎಂದು. ಮರಕಿರ್ವ/ಸೊರಗಿರ್ವ – ಮರಕಿರ್ಪ/ಸೊರಗಿರ್ಪ ಮೇಲು. ಪದ್ಯಭಾವ ಚೆನ್ನಾಗಿದೆ.
Sir,dhanyavaadagaLu
ನಿನ್ನಯಾ ನೀಳ ಜಡೆಯುದುರಾದ ಬೋಳುತಲೆ
ಕೆನ್ನೆಮೇಲ್ ಜಾರಿತೇಂ ಜೀವಕಳೆಯುಂ |
ಬೆನ್ನೆಲುಬ ಹಂದರಕೆ ತೊಗಲ ತೊಗಟೆಯ ಹೊದ್ದು
ದನ್ನೆಗಂ ಕಂಡುನಾಂ ದಿಗಿಲುಗೊಂಡೆಂ ||
(ಕ್ಯಾನ್ಸರ್ ನಿಂದ ನರಳುತ್ತಿದ್ದ “ಉದ್ದ ಜಡೆ”ಯ ನನ್ನಕ್ಕನನ್ನ ಬೋಳುತಲೆಯಲ್ಲಿ (ಈ ಮರವನ್ನೇ ಹೋಲುವಂತೆ) ಕಂಡ ನಿಜಾನುಭವದ ಪದ್ಯ – ಮೊನ್ನೆ ಸಾವನ್ನಪ್ಪಿದ ಅವಳಿಗೇ ಅರ್ಪಣೆ )
Touching. ಇಂತಹ ಸಂದರ್ಭವಿಶಿಷ್ಟ (context specific) ವಿಷಯಗಳನ್ನು ಖಂಡಕಾವ್ಯ-ಕಥನಕವನಗಳಲ್ಲಿ ತಂದರೆ ಇಷ್ಟು ಕ್ಷೋಭಕರವಾಗಿರುವುದಿಲ್ಲ. ಇಲ್ಲಾದರೋ ಕಾವ್ಯಗುಣಗಳನ್ನು ಗಮನಿಸುವ ಮನಸ್ಸಾಗದು.
ಹೃದಯಾಂತರಾಳದ ನೋವು ನುಡಿಸಿದಾಗ ಪದಗಳು ತಾನೇ ತಾನಾಗಿ ಹರಿಯುತ್ತವೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಉಷಾ ಅವರೆ, ಪದ್ಯ ಬಹಳ ಚೆನ್ನಾಗಿದೆ. ಪರಿಸ್ಥಿತಿ ಕೇಳಿ ಬಹಳ ಬೇಸರವಾಯಿತು
ಉಷಾರವರೆ ,
ನೆನಪು ಮರುಕಳಿಸಬಹುದು .ಆದರೆ, ಅವರು ನೋವಿನಿಂದ ಮುಕ್ತರಾಗಿರಾಗಿರಬಹುದೆಂದು ಸಮಾಧಾನ ತಂದುಕೊಳ್ಳಬಹುದಲ್ಲವೇ ?ನನ್ನ ಬಂಧುವೊಬ್ಬರ ಕೊನೆಯ ದಿನಗಳ ನರಳುವಿಕೆಯನ್ನು ನೋಡಿದ ಅನುಭವದಿಂದ ಹೇಳುತಿದ್ದೇನೆ .
ನೈಜಬಾಳಿನ ವಿಧಿಯ ವೈಕಟ್ಯ ತಾಕಿರಲು
ಸಾಜವೀ ಸಾದೃಶ್ಯ ನೊಂದ ಮನಕೆ
ನಿಜ, ನಿಜ. ಆತ್ಮೀಯ ಸ್ಪಂದನೆಗೆ ಪದ್ಯಪಾನ ಮಿತ್ರರೆಲ್ಲರಿಗೂ ವಂದನೆಗಳು.
ಮತ್ತೆ ಒಂದು ಸಣ್ಣ ಪಯತ್ನ ಮಾಡಿರುವೆ, ತಪ್ಪುಗಳನು ತಿದ್ದಿತೋರಿಸಬೇಕಾಗಿ ವಿನಂತಿ.
ಸಂದರ್ಭ: ಮಾನವನ ವಿನಾಶ ಲೀಲೆ ಸಹಿಸದೆ ಕಾಳಿಯು ಮರದಲ್ಲಿ ಕಾಣಿಸಿಕೊಂಡು ಮಾನವನಿಗೆ ಹೇಳುತಿರುವ ಮಾತು
————————————————————————
ಕಾಳ ಬೆಳೆಸುವ ಭೂಮಿಯಲಿ ಹಾಲಾಹಲದ ಹೊಳೆಯನು ಹರಿಸಿರಿವೆ
ಬಾಳ ನಿನ್ನದು ಬೆಳಗಿಸಲು ನೀ ಮೂಕ ಬದುಕಿನ ಬಲಿ ತೆಗೆತಿರುವೆ
ಹಾಳುಮಾಡಲು ಹೊರಟಿರುವೆ ನೀ ಬೆಳೆದುಬಂದಂತೀ ಲೋಕವನ್ ನೀ ಪಡೆದಂತ ದಿವ್ಯವರಂಗಳನ್
ಕಾಳರಾತ್ರಿಯು ನಾನು ಬಂದಿರುವೆ ಕಾಲಚಕ್ರವನು ತಿರುಗಿಸಲು
ಬೋಳುತಲೆಯಲಿ ನಿಂತಿರುವೆ ನಿನ್ನ ಪ್ರಾಣವಾಯುವನು ತಡೆದಿಡಲು
ಗೋಳು ನಿನ್ನದು ಪೇಳ್ಕೊಳಲಿಲ್ಲವಾಗಿಸುವೆನೆಲ್ಲವನು ನೀ ಬೆಳೆಸದಿರ್ದಡೆ ನವ್ಯಸಸ್ಯಕಾಶಿಯನ್
ಮತ್ತೆ ಒಂದು ಸಣ್ಣ ಪಯತ್ನ ಮಾಡಿರುವೆ, ತಪ್ಪುಗಳನು ತಿದ್ದಿತೋರಿಸಬೇಕಾಗಿ ವಿನಂತಿ.
ಸಂದರ್ಭ: ಮಾನವನ ವಿನಾಶ ಲೀಲೆ ಸಹಿಸದೆ ಕಾಳಿಯು ಮರದಲ್ಲಿ ಕಾಣಿಸಿಕೊಂಡು ಮಾನವನಿಗೆ ಹೇಳುತಿರುವ ಮಾತು
————————————————————————
ಕಾಳ ಬೆಳೆಸುವ ಭೂಮಿಯಲಿ ಹಾಲಾಹಲದ ಹೊಳೆಯನು ಹರಿಸಿರಿವೆ
ಬಾಳ ನಿನ್ನದು ಬೆಳಗಿಸಲು ನೀ ಮೂಕ ಬದುಕಿನ ಬಲಿ ತೆಗೆತಿರುವೆ
ಹಾಳುಮಾಡಲು ಹೊರಟಿರುವೆ ನೀ ಬೆಳೆದುಬಂದಂತ ಲೊಕವನೇ ನೀ ಪಡೆದಂತ ದಿವ್ಯವರಗಳನೇ
ಕಾಳರಾತ್ರಿಯು ನಾನು ಬಂದಿರುವೆ ಕಾಲಚಕ್ರವನು ತಿರುಗಿಸಲು
ಬೋಳುತಲೆಯಲಿ ನಿಂತಿರುವೆ ನಿನ್ನ ಪ್ರಾಣವಾಯುವನು ತಡೆದಿಡಲು
ಗೋಳು ನಿನ್ನದು ಪೇಳ್ಕೊಳಲಿಲ್ಲವಾಗಿಸುವೆನೆಲ್ಲವನು ನೀ ಬೆಳೆಸದಿರ್ದಡೆ ಹೊಸ ಸಸ್ಯಕಾಶಿಯನೇ
ಕಲ್ಪನೆ ಚೆನ್ನಾಗಿದೆ ಕಮಲಪಾದರೆ, ಛಂದಸ್ಸು ಯಾವುದೆಂದು ತಿಳಿಯುತ್ತಿಲ್ಲ, ಸವರಿಸಬೇಕು
ಎಂದಿನಂತೆ ನಿಮಗೆ ಧನ್ಯವಾದಗಳು. ಹಾ..ವಾರ್ಧಕ ಷಡ್ಪದಿ ಕೇವಲ ಐದು ಮಾತ್ರೆಯದು ಎಂದು ಮರೆತು, ಏಳು ಮಾತ್ರೆಗಳಲ್ಲಿ ಪ್ರಯತ್ನಿಸಿಬಿಟ್ಟೆ….. 🙁
ಕಮಲಪಾದ,
ಈ ತಪ್ಪೊಪ್ಪಿಗೆಯನ್ನೇ ಹೇಗೆ ಪಲ್ಲವಕ್ಕೆ (ಗೋವಿನ ಹಾಡಿನ ಧಾಟಿ) ತಿರುಗಿಸಬಹುದೆಂಬ ಮಾದರಿ ನೋಡಿ:
ಗೋತ್ರ-ಪ್ರವರವ ಪೇಳಿ ನಿಮಗೀ
ಛಾತ್ರ ವಂದಿಪ, ವಾರ್ಧಕದೊಳಂ
ಮಾತ್ರೆಯೈದೆಂಬುದನು ಮರೆತುಂ
ಮಾತ್ರವೇಳನು ತುಂಬಿಹನ್|
ನೀವು ಮೊದಲು ಛಂದಸ್ಸಿನ ಪಾಠಗಳನ್ನು ಚೆನ್ನಾಗಿ ಮನನ ಮಾಡಿಕೊಂಡು ಆ ಬಳಿಕ ಪದ್ಯರಚನೆಗೆ ಕೈಹಾಕಿರಿ. ಇಲ್ಲವಾದರೆ ಹೀಗೆ ತಪ್ಪಾಗುವುದು:-)
ಹೌದು ಗುರುಗಳೇ. ಮತ್ತೆ ಛಂದಸ್ಸಿನ ಪಾಠ ನೋಡಿಕೊಳ್ಳಬೇಕು. ಆದರೂ ಇಂತಹ ಪೆಟ್ಟು ಬೀಳದಿದ್ದಲ್ಲಿ ಪಾಠವಾದರೂ ಹೇಗೆ ಮೈಗೂಡುವುದು…:)
ಇಹುದು ಕೂರ್ಮೆ ಪ್ರಕೃತಿ ಮಾತೆಗೆ
ಬಹುಳ ತನ್ನಯ ಕಂದರೊಳಗಂ
ಚಹರೆ ಬಾಡಿರೆ ಮಿಡಿವಳಾಕೆಯು ನೋವನ್ನುಣ್ಣುತಲಿ
ಮಹತಿಯರಿಯುತ್ತೆನ್ನ ಬಳಗದ
ಗಹನ ಕಜ್ಜಮನೆಸಗುವಂತಹ
ದಹಿಸಿ ಬೇಸರ ಹಸಿರು ತೊಡಿಸುತ ಶಕ್ತಿ ತುಂಬುವಳೈ
ಬರಡಾದ ಮರವು ತಾ
ಕೊರಗುತಿಹ ಮಾನವನ
ತೆರನಿಪ್ಪ ಮರ್ಮವನು ನುಡಿವೆ ಕೇಳ |
ಮರ ಬೆಳೆಯೆ ನೀಬೆಳೆವೆ
ಮರವಳಿಯೆ ನೀನಳಿವೆ
ಮರವುಳಿಸಿ ಮಳೆಬರಿಸಿ ಬದುಕು ಮನುಜ ||
ಬಲು ಖರೆ 🙂
ಧನ್ಯವಾದ ಶಕುಂತಲಾರವರೆ
ತಿಳಿಯಾದ ಪದ್ಯ ನನ್ನ ಮಗಳಿಗೂ ಇದನ್ನು ಕಲಿಸಬಹುದು, ಧನ್ಯವಾದ 🙂
(ಇದೇ ಭಾವದಲ್ಲಿ ಮತ್ತೊಂದು “ಶಿಶು”ಗೀತೆ)
ನೂರು ಹೂವಲೊಂದು ಮುಳ್ಳ ಬಿಟ್ಟ ಮರವ ಜರಿವ
ದೋರ ಹಣ್ಣ ನಡುವೆ ಗೆಣ್ಣ ಕೊಟ್ಟ ಮರಕೆ ಮುನಿವ
ತೂರು ಗಾಳಿಯೊಡನೆ ತರಗು ತಂದ ಮರವ ತರಿವ
ತೋರೆ ನೆಳಲ ಬಿಟ್ಟು ಬಿಳಲ ನಿಂದ ಮರವ ಕಡಿವ !
ತರಿದು ತಳಿರ ಹೊಸಕಿ ತುಳಿವ ಜನರ ನಡೆಯ ಕಂಡು
ಮರುಗಿದಿಳೆಯು ಮರಕೆ ನುಡಿಯಲಿವನೆ ಮನುಜನೆಂದು
ಮರೆತು ಹಗೆಯ ಮರವು ತೋರೆ ಹೊಸತು ಚಿಗುರಿನೊಗೆಯ
“ಅರುಳುಮರುಳ” ಮನುಜ ಕಾಣ “ಮರಳಿಯರಳೊ” ಬಗೆಯ ।।
Soma, Usha- thanks very much.
Usha, your poem is nice too. It would flow even better if it ended with another guru at the end. In the first poem, you can achieve this by ending each of the lines as jareyuvA, muniyuvA, tariyuvA and kaDiyuvA.
OK, OK ಶ್ರೀಕಾಂತ್ ಸರ್, ಮತ್ತೆ ಅದೇ ರೀತಿ ಆಗಿದೆ ಅಲ್ಲವೇ?!, ಸರಿಪಡಿಸಿದ್ದೇನೆ.
ನೂರು ಹೂವಲೊಂದು ಮುಳ್ಳ ಬಿಟ್ಟ ಮರವ ಜರೆಯುವಾ
ದೋರ ಹಣ್ಣ ನಡುವೆ ಗೆಣ್ಣ ಕೊಟ್ಟ ಮರಕೆ ಮುನಿಯುವಾ
ತೂರು ಗಾಳಿಯೊಡನೆ ತರಗು ತಂದ ಮರವ ತರಿಯುವಾ
ತೋರೆ ನೆಳಲ ಬಿಟ್ಟು ಬಿಳಲ ನಿಂದ ಮರವ ಕಡಿಯುವಾ !
ತರಿದು ತಳಿರ ಹೊಸಕಿ ತುಳಿವ ಜನರ ನಡೆಯ ಕಂಡುತಾಂ
ಮರುಗಿದಿಳೆಯು ಮರಕೆ ನುಡಿಯಲಿವನೆ ಮನುಜನೆಂದುದಂ
ಮರೆತು ಹಗೆಯ ಮರವು ತೋರೆ ಹೊಸತು ಚಿಗುರಿನೊಗೆಯತಾಂ
“ಅರುಳುಮರುಳ” ಮನುಜ ಕಾಣ “ಮರಳಿಯರಳೊ” ಬಗೆಯನೀಂ ।।
ಶಾಪತ್ರಸ್ತಳಹಲ್ಯೆಯ
ರೂಪಪ್ರಾಪ್ತಳಿವಳಾವಳೆಂಬುದನರಿಯೆಂ|
ಭೂಪತಿ ರಾಮನಿರೀಕ್ಷಣ
ತಾಪದೊಳಿಂತು ನಿಂತು ಕೊರಡಾಗಿರ್ಪಳ್||
(ಶಾಪ ತ್ರಸ್ತ ಅಹಲ್ಯೆಯ ರೂಪಪ್ರಾಪ್ತಳಾದ ಇವಳು ಯಾರೋ ಗೊತ್ತಿಲ್ಲ. ರಾಮನ ನಿರೀಕ್ಷಣೆಯ ತಾಪದಲ್ಲಿಯೇ ನಿಂತು ಕೊರಡಾಗಿದ್ದಾಳೆ)
ಚೆನ್ನಾಗಿದೆ
ಎಲ್ಲ ಜೀವಕ್ಕಮಾಧಾರಂ ಎಲ್ಲ ಜೀವವಿಕಾಸಕಂ
ಇಲ್ಲಿದಂ ತೋರುವಾಪಾಂಗೊಳ್ ಇರ್ಕುಂ ಮಾನವನೊಲ್ ಮರನ್
ಕೊನೆಯ ಸಾಲಿನಲ್ಲಿ ಪ್ರಾಸ ಬಂದಿಲ್ಲವಲ್ಲ. ಪಾದಾಂತ್ಯದಲ್ಲಿ ಸಂಧಿ ಮಾಡಬೇಕಲ್ಲವೇ? “ಮರನ್” ಎಂಬುದು “ಮರಂ” ಎಂದು ಮಾಡುವುದು ಹೆಚ್ಚು ಸರಿಯಾದೀತು..
ಪ್ರತಿಕ್ರಿಯೆಗೆ ಥ್ಯಾಂಕ್ಸ್. ಅನುಷ್ಟುಪ್ಪಿನಲ್ಲಿ ಪ್ರಾಸದ ನಿಯಮವಿಲ್ಲ. ಅದರಿಂದ ನಾನು ರಚಿಸುವಾಗ ಸಾಮಾನ್ಯವಾಗಿ ವಿಷಮಪಾದಗಳಲ್ಲಿ ಪ್ರಾಸವಿಟ್ಟು ಸಮಪಾದಗಳಲ್ಲಿ ಯತಿ/ವಡಿ ಇಡುತ್ತೇನೆ. ಪಾದಾಂತ್ಯದಲ್ಕಿ ಸಂಧಿ ಅಗತ್ಯವಾಗಿ ಮಾಡಬಹುದು. ಮಾಡಿದರೂ ಛಂದಸ್ಸು ಕೆಡುವುದಿಲ್ಲ. ಅರ್ಥಸ್ಫುರಿಸಲಿ ಅಂತ ಬಿಡಿಸಿ ಬರೆದೆ.
ಶೀತಲತಾಂಡವಂ ನಡೆದ ಸೌಧಮೊ, ಬೆಂತರನಟ್ಟಹಾಸಮೋ
ಭಾತಿವಿಶೇಷದಿಂ ಮೆರೆದು ಸೂತಕಗೊಂಡಿಹ ಪಾಳುಹಂಪೆಯೋ
ಮಾತಿಗೆ ಸೋತು ಮೈಮರೆತು ಮೂರ್ಖನಮೊಪ್ಪಿದ ನಾಡ ಪಾಡಿದೋ
ಪಾತಕಿಯಾತ್ಮಚಿಂತನೆಯೊ ತಾನೆನೆ ತೋರ್ಪಳಗುರ್ವಿಸೆಮ್ಮನಂ||
(ಬೆಂತರ = ಪಿಶಾಚಿ, ಅಗುರ್ವಿಸು = ಭಯಪಡಿಸು, ದಿಗಿಲುಗೊಳಿಸು)
ರವೀಂದ್ರ- ಕೆಲವು ಅನಿಸಿಕೆಗಳು.
ನಿನ್ನ ಪದ್ಯದಲ್ಲಿ ಚಿತ್ರದಲ್ಲಿರುವ ಮರಕ್ಕೆ ನೇರ ಸಂಬಂಧ ಎಲ್ಲು ಕಲ್ಪಿಸಿಲ್ಲ. ಅದಿದ್ದರೆ ಒಳಿತು.
ಬೆಂತರನಟ್ಟಹಾಸಮೊ- ಬೆಂತರದಟ್ಟಹಾಸಮೊ ಆಗಬೇಕಿತ್ತಲ್ಲವೆ?
ಸೂತಕಗೊಂಡಿಹ- ಕೊಂಡಿಹ ಅನ್ನೊ ನಡುಗನ್ನಡ ರೂಪ ನುಸುಳಿದೆ
ಮೂರ್ಖನಮೊಪ್ಪಿದ- ಮೂರ್ಖನನೊಪ್ಪಿದ
ಅಗುರ್ವಿಸಿ+ಎಮ್ಮನಂ- ಅಗುರ್ವಿಸಿಯೆಮ್ಮನಂ ಎಂದಾಗಬೇಕೇ ಹೊರತು ಸಂಧಿಯಲ್ಲಿ ಇಕಾರಲೋಪವಾಗುವುದಿಲ್ಲ.
Thanks Srikanth for all pertinent comments. Will fix this.
ದಾರಿಪೋಕರನೆಲ್ಲರಂ ಸಲೆ ಕೈಯಬೀಸುತೆ ಕೂಗಿ “ಬಾ
ಭೂರಿ ಭೋಗಮನೀವೆನಯ್ ಸೆರಗಂ ತೆಕೋ” ಎನೆ ತನ್ನ ಮೇ-
ಲೇರಿ ಕಿಳ್ಳುತೆ ಕಚ್ಚಿಯುಣ್ಣುವ ಮಿಂಡರಂ ಪೊಡೆ ತುಂಬಿಪಾ
ವಾರೆಯೇ ಮರವಾಗಿ ತಾನ್ ಬರಿಮೈಯವೆಣ್ಣವೊಲಿರ್ಪುದಯ್.
ಶ್ಲೇಷಾರ್ಥದ ಒಂದು ಪದ್ಯ. ಅಶ್ಲೀಲವೆನಿಸಿದರೆ ಕ್ಷಮೆಯಿರಲಿ.
ಭೋಗ- ಔತಣ, ಊಟ; ಸೆರಗು- ಆಶ್ರಯ; ಮಿಂಡರ್- ಧೈರ್ಯವಂತರು; ವಾರೆ-ಬೆಲೆವೆಣ್ಣು, ವಾರಸ್ತ್ರೀ;
ಸೆಲೆಯಾರಿರ್ದೊಡೆ ವಾಪಿ, ನೀರಿನ ಬದಲ್ ಪಾಳೊಂದೆ ತುಂಬಿರ್ದವೊಲ್
ಫಲಪುಷ್ಪಂಗಳುಮಿಲ್ಲವೆನ್ನೊಳು ಕೊಡಲ್ ಲಜ್ಜಾಭಿಶಿಕ್ತಳ್ ಗಡಾ
ಬಲು ಬಿನ್ನಾಣದೊಳೆನ್ನ ಬಣ್ಣಿಪ ಜನಕ್ಕಿಂದೀಯಲೇಂ ರಿಕ್ತಮಂ?
ತಲೆಯಂ ತಗ್ಗಿಸಲಾಮಶಕ್ತಳಕಟಾ ತೋರಲ್ಕೆ ಬದ್ಧಳ್ ಮೊಗಂ
[ವಾಪಿ = ಬಾವಿ; ಪಾಳು = ಹಾಳು; ರಿಕ್ತ = ಬರಿದು; ಶೂನ್ಯ]
ಚೆನ್ನಾಗಿದೆ
ನೋವಿನಿಂ ಬಳಲುತಿಹ ಮರದೊಳ್
ಭಾವದಲೆಗಳು ಹೊಮ್ಮುತಿಹುದೈ
ಪೂವತೋರದೆ ಪಸಿರಬೀರದೆ ಸ್ತಬ್ಧವಾಗಿಹುದೈ
ಜೀವನದ ಸುಖವನ್ನು ನೆನೆಯುತ
ಲೀವನದೆ ಬೇರೂರಿ ನಿಲ್ಲುತೆ
ಸಾವನಪ್ಪುಗೆಯಿಂದ ಕೈಚಾಚುತ್ತೆ ಕರೆದಿಹುದೈ
ಭಾವ ಚೆನ್ನಾಗಿದೆ. ಹಳಗನ್ನಡದ ಬಿಕ್ಕಟ್ಟನ್ನು ಹೆಚ್ಚಿಸಬಹುದು, ಹೀಗೆ ಮಾಡಿದರೆ
ನೋವಿನಿಂ ಬಳಲಿರ್ಪ ಮರದೊಳ್
ಭಾವದಲೆಗಳ್ ಪೊಣ್ಮುತಿರ್ಪುವು
ಪೂವತೋರದೆ ಪಸಿರಬೀರದೆ ಸ್ತಬ್ಧವಾಗಿರೆ ತಾಂ
ಜೀವನದ ಸುಖಮನ್ನೆ ನೆನೆಯುತ
ಲೀವನದೆ ಬೇರೂರಿ ನಿಂದುರೆ
ಸಾವನಪ್ಪುಗೆಯಿಂದೆ ಕೈಚಾಚುತ್ತೆ ಕರೆದಪುದೈ
ಧನ್ಯವಾದಗಳು ಶ್ರೀಕಾಂತರೆ… ಹಳೆಗನ್ನಡದ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ! 🙂
ನಲಿದಾಡಿರ್ದುವು ಪಕ್ಷಿಸಂಕುಲಗಳುಂ, ಕೀಟಂಗಳುಂ ಭೋಗದಿಂ
ಮೆಲು ಮಾತಿಂದುಲಿದಾಡಿದರ್ ಪ್ರಣಯಿಗಳ್ ಪರ್ಣಂಗಳಾ ಹಾಸಿನೊಳ್
ವೆಲೆಯಂ ತೆತ್ತಿದೆನಲ್ತೆ ಕೂರ ಬಿದಿಗಂ ದಾರಿದ್ರ್ಯ ರಾರಾಜಿಸಲ್
ಸಲುವಾಗಿರ್ಕೆ ವಿದಗ್ಧತಾ ಕಥನಕಂ, ಸಂತ್ರಸ್ತರ ದ್ಯೋತಕಂ
[ಕೂರ = ತೀಕ್ಷ್ಣ, ಕ್ರೂರ; ಬಿದಿ = ವಿಧಿ; ವಿದಗ್ಧತೆ = ನೋವು, ಕಷ್ಟಕ್ಕೊಳಗಾಗುವಿಕೆ; ದ್ಯೋತಕ = ಸ್ಪಷ್ಟವಾಗಿ ತೋರಿಸುವುದು; icon]
ರಾಮಚಂದ್ರ. ಭಾವ ಚೆನ್ನಾಗಿದೆ.
ಮೊದಲ ಪಾದದಲ್ಲಿ ಛಂದಸ್ಸೆಡವಿದೆ. ಅಲ್ಲದೆ. ಹಳಗನ್ನಡದ ಸೊಗಡು ಅಲ್ಲಲ್ಲಿ ಕುಂದಿದೆ. ಸಂಕುಲಗಳ್ ಕೀಟಗಳ್ ಬದಲು ಸಂಕುಲಂಗಳ್ ಕೀಟಂಗಳ್ ಎಂದರೆ ಚೆನ್ನ. ಆದರೆ ಛಂದಸ್ಸು ಕೆಡುತ್ತೆ.
ಧನ್ಯವಾದ. ಕೀಟಂಗಳಂ ನಾಂ ಪೊಂದಿಸಿs, ಛಂದಮಂ ಸಮಗೈದೆನೈ.
ದಿಟಮಾಗಿ ನೀಂ ’ಕೀಟ್ಸ್’ ಕವಿ ಗಡಾ 🙂
ಬಣ್ಣಿಸಿದಳ್ ದುಃಖಿಸೆ ತಾಂ
ಮಣ್ಣೊಳು ನೆಲೆಸಲ್ ನಿಸರ್ಗ ನಗ್ನತೆಯಿಂದಂ
ಕಣ್ಣೊಳು ಕಂಬನಿ ಪೊತ್ತುತೆ
ಪೆಣ್ಣಿನವೊಲ್ತನ್ನರೂಪಮಂ ತೋರ್ದಪಳೈ
ಕಂದದಲ್ಲೊಂದು ಪ್ರಯತ್ನ – ತಪ್ಪಿದ್ದಲ್ಲಿ ದಯವಿಟ್ಟು ಸವರಿಸಿ…
ಕಂದ ಚೆನ್ನಾಗಿ ಮೂಡಿದೆ. ಆದರೆ ಅರ್ಥಸ್ಪಷ್ಟವಾಗ್ತಿಲ್ಲ ಚೇದಿ. ಮತ್ತೆ ಒಳ್ ಒಳು ಅಂತ ಬೆರೆಸಿ ಬಳಸಿದ್ದೀರ. ಅದನ್ನು ತಿದ್ದಿರಿ. “ಪೊತ್ತುತೆ” ಅಂದರೆ ಏನು
ಶಿಲ್ಪಿಗನಡವಿಗೆ
ಕಲ್ಪನೆಗೊಪ್ಪುವ
ಶಿಲ್ಪಂಗಳನಾಯಲ್ಪೋದನ್ |
ಕಲ್ಪಿತರೂಪಮ
ನಲ್ಪರ್ ಬಗೆಯದ
ವೊಲ್ಪಡೆದನ್,ಕೆತ್ತಿರೆ ಮರನಂ ! ||
ಸುಂದರ ಕವನವ
ಬಂಧುರ ಭಾವದೊ –
ಳಂದದಿ ಪೋಣಿಸಿ ನೀಡಿದಿರೌ 🙂
ಅಹುದಹುದು ರಾಮ! ಅದು ಸೊಗದ ಕಬ್ಬ; ನವಕಲ್ಪನೆಗಳ ಹಬ್ಬ!
ಗುರುಗಳು ಪದ್ಯವನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ತುಂಬ ಧನ್ಯವಾದಗಳು.
ಸುಂದರಪದ್ಯಮಿ-
ದೆಂದಿರೆ ರಾಮರ್,
ವಂದಿಪೆನಾನಂದದೆ ನಮಿಪೆಂ 🙂