Feb 022014
 

Hampi_ratha

  100 Responses to “೯೫: ಚಿತ್ರಕ್ಕೆ ಪದ್ಯ”

 1. ಪಂಚಮಾತ್ರ|| ಮತಸಂಗ್ರಹವ ಗೈಯಲಿಚ್ಛಿಪೆನು ಪಾನಿಗಳೆ
  ಜತನದಿಂ ಚಿತ್ರಮಂ ನೋಡಿ ಪೇಳಿಂ|
  ಸೃತಿಯನಾ ರಥದ ತಡೆಯುತ್ತಿಹುದೊ ದಂತಿಯದು
  ಶತಯತ್ನಮೋ ಪಿಂತೆ ನೂಕುವಂದಂ||
  (ಸೃತಿ=ಸರಿಯುವಿಕೆ)
  —————
  ಸ್ವಾಗತ|| ಧನ್ಯನಾ ರಥದ ವಾಹಕ ತಾನೈ
  ಅನ್ಯ ವಾಹನಮದೊಂದುಮಿರರ್ದೆಲ್|
  ಕನ್ಯೆಮಾರ್ಗದೊಳು ನಿಚ್ಚಮು ಪೋಪಂ
  ಮನ್ಯುವಾತನದುಮೆಂತುಟೊ ಶಾಂತಂ||
  (ಕನ್ಯೆಮಾರ್ಗ=virgin path. ಮನ್ಯು=mood)
  ——————
  ಸಂ.ಮ.ಗತಿ|| ಚಲಿಸಬೇಕಿದ್ದಿತಲ್ಲಮೇಂ ರಥವೆ ನಿರುತಮೆಲ್ಲು ನೀನುಂ
  ನಿಲಿಸಿ ನಿನ್ನ ಸಾರಥಿಯದೆತ್ತ ಪೋದನೆನುತರಿಯೆಯೇಂ ನೀಂ|
  ಕೆಲವು ಸಂದವೈ ನೂರುವರ್ಷಗಳು ಸಾಕ್ಷಿರೂಪಿ ನೀನೈ
  ಉಲಿಯೆಯೇಂ ಗಡೀಗಿನಿತು ಗಾಥೆಗಳ ಪೂರ್ವಸೂರಿಗಳದಂ||

  • ಸ್ವಾಗತಂ ನ ತು ರಥೋದ್ಧತಾ ಭವ-
   ದ್ರೂಪಿತಂ ಕವನಮಿತ್ಯುದೀರ್ಯತಾಮ್ |

   • ತಿದ್ದಿಹೆಂ ಪೆಸರಿದೀಗ ’ಸ್ವಾಗತಂ’
    ಬಿದ್ದನಂ ಪಿಡಿಯುತೆತ್ತೆ ದೇಶಿಕಂ||

 2. ಸೆರೆಪಿಡಿದರೀ ಪಳೆಯುಳಿಕೆಯಂ
  ತೆರೆದ ಕಂಗಳ ಮುಚ್ಚೆ ಕಾಣಲ್ (closed his opened eyes)
  ಮೆರೆಯುತಿರ್ದಪ ವಿಜಯನಗರಿಯ ನೆನೆಯುತಿರೆ ಮನದೊಳ್|
  ಮುರಿದು ಪಾಳಾದೀ ರಥಕೆ ನ-
  ಮ್ಮರಿಯರಿಂಗೈದಿರ್ಪ ಕೃತ್ಯವ
  ಮರೆತೆವೈ ಕ್ರೌರ್ಯದ ದಿನಗಳಂ ಸುಖದ ಜೀವನದೊಳ್||

  ಸೆರೆಪಿಡಿ – photographed, ಅರಿ – ವೈರಿ

  ತಪ್ಪಿದ್ದಲ್ಲಿ ಸವರಿಸಿ…

 3. ಕಡೆದಿರ್ಪನೀಜಗಮನೋರ್ವನೇ ಕಲೆಗಾರ
  ನಡಿಗಡಿಗೆ ಸೂಕ್ಶ್ಮಗಳ ಕಲಸಿವೆರಸಿ|
  ಕೊಡದೆಜೀವವಹಲಕೆ, ಸಾಫಲ್ಯವಂ ಪಡೆದ
  ಹಿಡಿದು ಸೌಂದರ್ಯವಂ ತೋರುವಲ್ಲಿ||

  ಹಿಡಿದು=ಕೆಡದಂತೆ(ಬಹಳ ಕಾಲ)

  • ಕಲೆಗಾರ ಅಡಿಗಡಿಗೆ ~ ಕಲೆಗಾರ-ನಡಿಗಡಿಗೆ
   ಸಾಫಲ್ಯ ~ ಸಾರ್ಥಕ್ಯ
   ತೋರುವಲ್ಲಿ ~ ತೋರುತಿಲ್ಲಿ or rephrase the last pAda thus: ಹಿಡಿದಿಟ್ಟವೋಲಿಲ್ಲಿ ಸೌಂದರ್ಯಮಂ||

 4. ನಡೆಯದ ರಥಕೆನಿತೆನಿತೋ
  ಸಡಗರ-ಸಿಂಗಾರಮೆಂದು ಬೇವಸಗೊಂಡೆಂ |
  ನಡೆದೊಡೆ ಶಿಲೆ, ನಿಂತೊಡೆ ಕಲೆ,
  ಬಿಡುವಾಗಳ್ ರಸಮದಂತಿರದಿರಲ್ ಭಾವಂ ||

  • ನಡೆದೊಡೆ ಶಿಲೆ ನಿಂತೊಡೆ ಕಲೆ ಎಂಬಲ್ಲಿ one which stands ‘time test’ is art ಎನ್ನುವಭಾವ ಬಹಳ ಚೆನ್ನಾಗಿದೆ ಸರ್

  • ದಯವಿಟ್ಟು ಕೊನೆಯ ಪಾದವನ್ನು ವಿವರಿಸಿ, ವಿಶೇಷತಃ ’ಬಿಡುವಾಗಳ್’.

 5. ಇದು ಚಾಲಕರಥವಲ್ಲ. ರಥರೂಪದ ಆಲಯ.
  ದೇವನು ಮೊದಲು ಎಲ್ಲವನ್ನೂ ಈ ರಥದಂತೆ ನಿರ್ಜೀವವಾಗಿಯೇ ನಿರ್ಮಿಸಿದ. ಅದಕ್ಕೆ ಚಕ್ರದಂಥ ಚಲನಪ್ರತೀಕವನ್ನೂ ಇತ್ತ. ಅವು ಚಲಿಸದಂತೆ ತಾನೇ ನಿಗ್ರಹಿಸಲೂಬೇಕಾಯಿತು.
  ನಿರ್ಜೀವವಸ್ತುಗಳನ್ನು ಚಲನರಹಿತ ಮಾಡುವ ಕೆಲಸವೇ ಸಾಕಷ್ಟಿದೆ, ನಿಮ್ಮ ನಿಗ್ರಹವನ್ನಾದರೂ ನೀವೇ ನೋಡಿಕೊಳ್ಳಿ ಎಂದು ವಿಧಿಸಿ, ನರ-ಮೃಗಗಳಿಗೆ ಬುದ್ಧಿಯನ್ನೂ ಅದನ್ನು ಬಳಸಿಕೊಳ್ಳಲು ಜೀವವನ್ನೂ ಇತ್ತ. ವಿಧಿಸಿದಂತೆ ಮಾಡಿದ್ದೇ ಆದರೆ ನರನೂ ರಥದಂತೆ ಶಾಶ್ವತನಾಗುತ್ತಾನೆ. (ತುಸು ರೂಪಕವನ್ನು ಮಾಡಿದ್ದೇನೆ)
  ಮಲ್ಲಿಕಾಮಾಲೆ||
  ದೇವಶಿಲ್ಪಿಯು ಪೇಳ್ವನೈ| ಸಲೆ ದೇಹಸ್ಯಂದನಮನ್ನು ನಾಂ
  ತಾವೊಳೇ ನಿಲಿಸಿರ್ದೆನೈ| ಸೆಟೆಸಂಗದಲ್ಭವ ಶಾಶ್ವತಂ| (ದಲ್ಭ=ಚಕ್ರ)
  ಜೀವಮಂ ನಿಜಶಕ್ತಿಯಂ| ಬಳಸೆನ್ನುತುಂ ನರಗಿತ್ತೆನಾಂ (ನಿಜ=ಸ್ವಂತ)
  ಜೀವಿ ಶಾಶ್ವತನಾಗುವಂ| ನಿಜತೃಷ್ಣವೇಗವನಿಂಗಿಸಲ್||

  • ಶಿಥಿಲದ್ವಿತ್ವವನ್ನು ಸಮಾಸದ ನಡುವೆ ಮಾಡುವಂತಿಲ್ಲ:-(

   • Hmm… Makes sense some. But then, shi.dvi. is just in the pronunciation: There is no compro in the visual form. Kindly explain a bit more so that it is fully imbibed.

 6. ಅತ್ಯಾಕರ್ಷಕಮಿರಲೇಂ
  ಸತ್ಯಮೆ? ಪಾಳಿಡದೆ ಪೋಕುಮೇ ಸ್ಥಾವರಗಳ್?
  ನಿತ್ಯಂ ಜಂಗಮತತ್ವಂ
  ಗತ್ಯಂತರಮಿಲ್ಲ ಕಾಲಮೇ ಸಾಕ್ಷಿ ಗಡಾ

 7. ಇನ್ನಿಲ್ಲವೆನ್ನಂ ಬಯಸಿದ್ದ ರಾಜರ್
  ಹೊನ್ನಂತೆ ಬಾಳ್ದಾ ಕರುನಾಡ ಪುತ್ರರ್
  ನನ್ನಂತರಂಗಂ ಮಿಡಿಯುತ್ತ ಕಾಯ್ಗುಂ
  ಮುನ್ನಾ ದಿನಂಗಳ್ ಬರುವನ್ನೆಗಂತಾಂ

  [ರಥದ ಅಂತರಂಗ ]

  • chennAgide

  • ಅತ್ಯುತ್ತಮಂ ವಾಸವ(ಇಂದ್ರ)ವಜ್ರವೃತ್ತಂ 🙂

   • ಧನ್ಯವಾದಗಳು 🙂 . ನನಗೂ ಈ ವೃತ್ತದ ಬಗ್ಗೆ ಹಾಗೇ ಅನಿಸಿತು.

    • 🙂 ha ha. Fine banter!

     ಅತ್ಯುತ್ತಮಂ ಮಾತ್ರಮದಲ್ತು ವೃತ್ತಂ
     ಸ್ತುತ್ಯಂ ಭವತ್ಪದ್ಯಮದೆಂಬೆ ತಾನುಂ|
     ಸತ್ಯೋಕ್ತಿಯಂ ರಾಗರು ಮಾಚಲೇನಿಂ
     ತತ್ಯುಕ್ತಿಯಾ ವಕ್ರದ ’ಸ್ಮೈಲಿ’ಯಿಂದಂ||

     (ಮಾಚು=ಮರೆಮಾಚು)

 8. ಗಜದಂಬಾರಿಯದರೆಯೊಳ್ (ಅರೆ=ಶಿಲೆ)
  ವಿಜಯಪ್ರಸ್ಥಾನವಿಳೆಯೊಳಜರಾಮರವುಂ ।
  ರುಜುವಾತಿದುವುಂ ವಜೆಯುಂ
  ವಜನಮಿದೆನೆ ವಿಜಯನಗರ ಸಾಮ್ರಾಜ್ಯದೊಳುಂ ।।

  (ವಿಜಯನಗರ ಸಾಮ್ರಾಜ್ಯದ ಹಿರಿಮೆಗೆ “ಗಟ್ಟಿ” ಸಾಕ್ಷಿಯಿದು ಎಂಬ ಅರ್ಥದಲ್ಲಿ )

  • ಪೂರ್ವಾಧಂ ಪಳಗನ್ನಡ-
   ದೌರ್ವಾನಲದೀಪ್ತಮುತ್ತರಾರ್ಧಂ ಮತ್ತೇಂ?
   ಚಾರ್ವಿತರಮಪ್ಪ ಹಿಂದಿಯ
   ಖರ್ವೀಕೃತಭಣಿತಿಯಿಂದೆ ಕಳ್ತಲೆಯಾಯ್ತೌ!!

   • ಕ್ಷಮಿಸಿ ಗಣೇಶ್ ಸರ್,
    ಇದು “ಜ”ಪ್ರಾಸದ ಹುಡುಕಾಟದಲ್ಲಾದ “ಎಡವಟ್ಟು!”. ಸರಿಪಡಿಸುತ್ತೇನೆ.

   • ಗಜದಂಬಾರಿಯದರೆಯೊಳ್
    ವಿಜಯಪ್ರಸ್ಥಾನವಿಳೆಯೊಳಜರಾಮರವುಂ ।
    ನಿಜದೊಳ್ ಸಂದುದು ಕಲೆಯೊಳ್
    ಯಜನವಿದುಂ ವಿಜಯನಗರ ಸಾಮ್ರಾಜ್ಯದೊಳುಂ ।।

    • ’ಯನಗರ’ ಎಂಬ ಸರ್ವಲಘುಗಣದಲ್ಲಿ ಮೊದಲನೆಯ ಅಕ್ಷರವಾದಮೇಲೆ ಯತಿ ಬರಬೇಕು. ’ವಿಜಯನಗರ’ ಬದಲು ’ಹಂಪಿ’ ಬಳಸಿನೋಡಿ.

     • ಪದ್ಯ ಚೆನ್ನಾಗಿದೆ.ಯತಿಭಂಗವೇನೂ ಆಗಿಲ್ಲ. ಹಂಪಿ ಎಂದು ಸವರಿಸಿದರೂ ತಪ್ಪಿಲ್ಲ.ಆದರೆ ವಿಜಯನಗರ ಮತ್ತೂ ಸೊಗಸು. ಈ ಬಾರಿ ಶ್ರೀಈಮತಿ ಉಷಾ ಅವರು ತುಂಬ ಸೊಗಸಾಗಿ ಭಾಷೆ ಬಂಧಗಳನ್ನು ಬಳಸಿದ್ದಾರೆ.

     • ಧನ್ಯವಾದಗಳು ಗಣೇಶ್ ಸರ್, ಪ್ರಸಾದ್ ಸರ್,
      ಚೌಪದಿಯಲ್ಲೇ ರಚನೆ ಪ್ರಾರಂಭವಾದರೂ, ಭಾಷೆ ಬದಲಾದಂತೆ ಛಂದಸ್ಸು ತಂತಾನೇ “ಕಂದ”ಕ್ಕೆ ಬದಲಾಯಿತು! ಗಣೇಶ್ ಸರ್. “ವಿಜಯನಗರ” ಬಂದದ್ದು ಅನುಪ್ರಾಸಕ್ಕಾಗಿ, “ಹಂಪಿ”ಯನ್ನ ತ್ರಿಪದಿಯಲ್ಲಿ ತಂದಿದ್ದೇನೆ.

  • ನನ್ನ objection sustain ಆಗಲಿಲ್ಲವಲ್ಲ! ನೀವು “ಧನ್ಯವಾದಗಳು ಗಣೇಶ್ ಸರ್. ಯಾಕೆ ಪ್ರಸಾದು?” ಎನ್ನಬೇಕಾಗಿತ್ತಲ್ಲ!

 9. ಶಿಲ್ಪಿಗಳ ಕೈಗೂಸರಸರ ಕನಸಿನ ಕನ್ಯೆ
  ಕಲ್ಪನೆಯ ಸಾಕಾರವಳಿದಿದಿಷ್ಟಿಹುದು
  ಅಲ್ಪಮತಿಗಳು ಕೆಡಹಿದರೊ?ಕಾಲನೆಡವಿಹನೊ?
  ಜಲ್ಪವಾದಕೆಡೆ ಬೇಡಾಸ್ವಾದಿಸು II

  ಕೈಗೂಸು +ಅರಸರ = ಕೈಗೂಸರಸರ
  ಸಾಕಾರವು +ಅಳಿದು +ಇದು +ಇಷ್ಟು +ಇಹುದು =ಸಾಕಾರವಳಿದಿದಿಷ್ಟಿಹುದು
  ಬೇಡ +ಆಸ್ವಾದಿಸು = ಬೇಡಾಸ್ವಾದಿಸು
  ಭಗ್ನಾವಶೇಷದ ಬಗ್ಗೆ ತಲೆಕೆಡಿಸದೆ ಇರುವಷ್ಟನ್ನು ಆಸ್ವಾದಿಸು ಎಂಬ ಸಾರ

  • ಇದನ್ನು ಬರೆಯಲು ಬಿಟ್ಟಿದ್ದೆ —–ಕನಸಿನ ಕನ್ಯೆ =ಶಿಲ್ಪ ಕಲೆ

  • ಶಿಲ್ಪಿಗಳ ಕೈಗೂಸರಸರ ಕನಸಿನ ಕನ್ಯೆ
   ಕಲ್ಪನೆಯ ಸಾಕಾರವಳಿದಿದಿಷ್ಟಿಹುದು
   ಅಲ್ಪಮತಿಗಳು ಕೆಡಹಿದರೊ?ಕಾಲನೆಡವಿಹನೊ?
   ಜಲ್ಪವಾದವದೇಕೆ ?ರಸನಿಮಿಷಕೆ!

 10. ಪದ್ಯದ ಭಾವವು ಉತ್ತಮವಾಗಿದೆ; ಧನ್ಯವಾದ. ಉತ್ತರಾರ್ಧದಲ್ಲಿ ಸ್ವಲ್ಪ ಭಾಷಾಶುದ್ಧಿಯನ್ನು ಪಾಲಿಸಿದ್ದಲ್ಲಿ ಮತ್ತೂ ಸೊಗಸಿರುತ್ತಿತ್ತು.

  • ಸರ್, ತಿದ್ದಿಕೊಂಡಿದ್ದೇನೆ . ಮತ್ತೂ ತಿದ್ದು ಪಡಿ ಬೇಕಿದ್ದಲ್ಲಿ ದಯವಿಟ್ಟು ತಿಳಿಸಿಬಿಡಿ.

 11. ರಥವೇನೊ ಸುಂದರವು ಮತ್ತೆ ನೂಕುವುದಕೇ-
  ನತಿ ಪುಟ್ಟದಾದಾನೆಗಳು ನೋಡದ
  ಮತಿಯೊಳಗೆ ಭಾವವಿರಲೊಂದು ಶಿಲ್ಪಿಯವನಿಗೆ
  ಗತಿಕಾಣಿಸಲ್ಕಾತುರವು ಕಾಡಿತೆ?

  ಆಷ್ಟು ದೊಡ್ಡದಾದ ಕಲ್ಲಿನ ರಥವನ್ನೆಳೆಯಲು ಅಷ್ಟು ಚಿಕ್ಕದಾದ ಆನೆ ಮರಿಗಳೇ? ಈ ರೀತಿಯಲ್ಲಿ ಕೆತ್ತಲು ಶಿಲ್ಪಿಗೆ (ಬಹುಶ:) ಅವನ ಮೇಲಧಿಕಾರಿಯಿಂದ ಶಿಲ್ಪವನ್ನು ಬೇಗ ಮುಗಿಸಲು ಬಂದ ಆದೇಶವು ಕಾರಣವಾಗಿರಬಹುದೇ?

  • ಎನ್ನಯೀ ಕರ್ಣಕಂ ಸಂದ ಸೊಲ್ಲೇ ಬೇರೆ
   ಘನ್ನ ರಾಜಂ ಗಜವ ನಿರ್ಮಿಸಿದನೌ|
   ಉನ್ನತಿಯನೈದುತಾತನ ಕುವರ ಮೆರೆಸುತ್ತೆ
   ಪನ್ನತಿಕೆ ನಿರವಿಸಿದ ದೊಡ್ಡತೇರಂ|| 🙂

   ನಿಮ್ಮ ಕಲ್ಪನೆ-ಪದ್ಯಗಳು ಚೆನ್ನಾಗಿದೆ. (ರಥ)ವೇನೋ ಪ್ರತ್ಯಯ ಸೊಗಯಿಸದು. ಸವರಿಸಿ.

  • ಕಲ್ಪನೆ ಚೆನ್ನಾಗಿದೆ. ಆದರೆ ಮೂರನೆಯ ಸಾಲಿನಲ್ಲಿ ಸ್ವಲ್ಪಪದ್ಯಗತಿ ಮತ್ತೂ ಹಿತವಾಗಬಹುದು. ಮುಖತಃ ವಿವರಿಸುವೆ. ಪ್ರಸಾದು ಅವರ lateral thinking ಕೂಡ ಚೆನ್ನಾಗಿದೆ.

   • ರಾಗ ಮತ್ತು ಪ್ರಸಾದರಿಗೆ ಧನ್ಯವಾದಗಳು. ಪದ್ಯವನ್ನು ಹೀಗೆ ತಿದ್ದಿದ್ದೇನೆ. ಸರಿಯಿದೆಯೇ ತಿಳಿಸಿರಿ.
    ರಥವೆನಿತು ಸುಂದರವು ಮತ್ತೆ ನೂಕುವುದಕೇ-
    ನತಿ ಪುಟ್ಟದಾದಾನೆಗಳು ನೋಡದ
    ಮತಿಯೊಳಗೆನಿತೊಭಾವವಿರೆ ಶಿಲ್ಪಿಗಾಕೃತಿಗೆ
    ಗತಿಕಾಣಿಸಲ್ಕಾತುರವು ಕಾಡಿತೆ?

 12. ನಡೆಯsದ ತೇರಿsದು | ನಡುವಾಗ ನಿಂತsದ
  ನುಡಿದsದ ಹಂಪಿ ಹಾಡsನ। ಕಲ್ಲಾಗ
  ಕಡವsರ ಕಾಣಿ ಕಡೆಗೀಲ ।।

  • ಸ್ವಲ್ಪ ತಿದ್ದುಪಡಿಯೊಂದಿಗೆ:

   ನಡೆಯsದ ತೇರಿsದು | ನಡುವಾಗ ನಿಂತsದ
   ನುಡಿದsದ ಹಂಪಿ ಕಥೆಯsನು । ಕಲ್ಲಾಗ
   ಕಡವsರ ಕಾಣಿ ಕಡೆಗೀಲು ।।

 13. ಕೆತ್ತಿರೆ ರಥಮಂ ಶಿಲ್ಪಿಯು
  ಪೊತ್ತುತೆ ಕಲ್ಗಳನದೆಷ್ಟು ಬರಿಸಂ ಶ್ರಮದಿಂ!
  ಧುತ್ತೆನೆ ಧಾವಿಸೆ ಖಳರುಂ
  ಕಿತ್ತೊಡೆದರ್ಕತ್ತಿಯಿಂದಮೆಲ್ಲಮನಕಟಾ|

  ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ… ಎಂಬ ಅರ್ಥದಲ್ಲಿ…

  • You have graduated to the next phase cheedi. Keep it up.
   ಬರಿಸಂ?
   ನದೆಷ್ಟು ~ ನದೆಂತು

   • ತುಂಬ ಒಳ್ಳೆಯ ಭಾಷೆ; ಅಭಿನಂದನೆಗಳು. ಬರಿಸಂ = ವರ್ಷ
    ಪ್ರಸಾದು ಎಂದಂತೆ ’ನದೆಂತು’ ಮತ್ತೂ ಯುಕ್ತರೂಪ.

 14. ವಿಜಯಶ್ರೀಯುತ ಕೀರ್ತಿಯ
  ಗಜರಥ ವೈಭವದ ಯಾನ ಸಾಗಿರೆ ನಾಡೊಳ್
  ಕುಜನರ ಕಣ್ತಾಗೆ ಚಲಿಪ
  ನಿಜರಥ ಕಲ್ಲಾಯ್ತೆ ಮ್ಲೇಚ್ಛರಶ್ಮಾಸುರರಿಂ

  ಅಶ್ಮಾಸುರ: ಕಣ್ತಾಗಿಸಿದ/ಮುಟ್ಟಿದ್ದೆಲ್ಲವನ್ನೂ ಕಲ್ಲುಮಾಡುವ ಮ್ಲೇಚ್ಛದಾನವ

  • Idea very good Mowly. I feel it would be better to make a samAsa of the last word rather than a sandhi:
   ನಿಜರಥ ಕಲ್ಲಾಯ್ತೆ ಮ್ಲೇಚ್ಛಕರ್ಕರಕುಶರಿಂ (ಕರ್ಕರ=stone. ಕುಶ=wicked)

   • Good suggestion. Thank you Prasad

    • ನನಗೇನೋ ಮೌಳಿಯವರ ಮೂಲಪದ್ಯವೇ ಸೊಗಸೆನಿಸುತ್ತದೆ. ಪೂರ್ವದ ಮಹಾಕವಿಪ್ರಯುಕ್ತವೂ ಅಲ್ಲದ,
     ತುಂಬ ನೈಘಂಟುಕವೂ ಆದ ಅಪ್ರಸಿದ್ಧಪದಗಳನ್ನು ವಿಶಿಷ್ಟವೂ ತೀರ ಅನಿವಾರ್ಯದ್ದೂ ಆದ (ಚಿತ್ರಕವಿತೆಯಂಥವುಗಳಲ್ಲಿ)
     ಸಂದರ್ಭಗಳಲ್ಲಿ ಬಳಸಿದರೆ ಚೆನ್ನವೇ ಹೊರತು ಇತರತ್ರ ಇಂಥ ಪ್ರಯೋಗಗಳು ಕವಿತೆಯ ಒಟ್ಟಂದದ ಶಿಲ್ಪವನ್ನೂ ಸುಬೋಧತೆಯನ್ನೂ ಮರೆಯಿಸಿಯಾವು. ಒಟ್ಟಿನಲ್ಲಿ ಇದೊಂದು ಚರ್ಚಾಸ್ಪದವಿಷಯವೇ ಸರಿ. ಏಕೆಂದರೆ ಇಲ್ಲೆಲ್ಲ ಯಾವುದು ಸುಉಪ್ರಚುರ,ಸುಬೋಧ,ಸುಭಗ ಎಂಬುದುದರ ಬಗೆಗೆ ನಿರ್ಣಾಯಕವಾಗಿ ಹೇಳುವುದು ಕಷ್ಟ. ಇದೆಲ್ಲ ತೀರ ಸಾಪೇಕ್ಷ,ಕೈತೂಕ ಬಾಯ್ಬಣ್ಣದ ಲೆಕ್ಕಾಚಾರ:-)

     • ಪದಪ್ರಯೋಗದ ಔಚಿತ್ಯದ ಬಗೆಗಿನ ಈ ನುಡಿಗಳು ಯುವಕವಿಗಳ ಮಾರ್ಗದರ್ಶನಕ್ಕೆ ನಿಜಕ್ಕೂ ಸಹಾಯಕ. ಧನ್ಯವಾದಗಳು. ನೀವೆಂದಂತೆ ಸುಬೋಧತೆಯ ಅಂಶ ಮುಖ್ಯ. ಸುಭಗತೆ-ಸುಲಭತೆ ಅಸಾಧ್ಯವಾದಾಗ ಭಾವವನ್ನು ಕಂಡರಿಸಲು ಕಠಿನ ಪದಪ್ರಯೋಗ ಅಗತ್ಯವಾಗಬಹುದು.
      ಮ್ಲೇಚ್ಛರು ಮತ್ತು ಅಶ್ಮಾಸುರರು ಎಂಬ ಭಾವವನ್ನೇ ಇಲ್ಲಿ ಪ್ರಧಾನವಾಗಿ ಬಳಸಿದೆ. ಅವರಿಬ್ಬರೂ ಒಬ್ಬರೇ ಆಗಬೆಂಕೆಂದೇನಿಲ್ಲ 🙂

  • ವಿಷಯಸ್ಪಷ್ಟೀಕರಣಕ್ಕಾಗಿ ಕೃತಜ್ಞತೆಗಳು ಸರ್. ಮ್ಲೇಚ್ಛರ+ಅಶ್ಮಾಸುರರು ಎಂದು ವಿಭಕ್ತಿಮಾಡಿ ಹಾಗೆ ಹೇಳಿದೆ. ಮ್ಲೇಚ್ಛರು+ಅಶ್ಮಾಸುರರು ಎಂದು ಹೊಳೆದಿದ್ದರೆ ಹಾಗೆ ಹೇಳುತ್ತಿರಲಿಲ್ಲ. ಎಲ್ಲ ಸಾಧ್ಯತೆಗಳನ್ನೂ ಗಮನಿಸಿಕೊಳ್ಳಬೇಕು ಎಂದು ಟಿಪ್ಪಣಿಮಾಡಿಕೊಂಡಿದ್ದೇನೆ.

 15. ಇರದಿರಲಾತ್ಮಂ ಕಾಯದೆ
  ಇರವುಂಟೇಂ ಮನುಜಗೀಯವನಿಯೊಳದೆಂದುಂ?
  ಹರಿಯುಮಿರದೀ ರಥಕ್ಕಂ
  ಪುರದೊಳ್ ಪೂಜೆಸಲುಗೇಂ?ಮೆರವಣಿಗೆಯಹುದೇಂ?

  • Very fine verse. Thanks.
   ಅಕ್ಕುಮೇಂ ಕೇಳಿದ್ದೇನೆ. ಅಕ್ಕೇಂ ಸಹ ಸಾಧುರೂಪವೆ? ಮೆರವಣಿಗೆಯಕ್ಕೆ+ಏಂ ಎಂದೂ ವಿಭಕ್ತಿಮಾಡಬಹುದೆ? ತಿಳಿದವರು ದಯವಿಟ್ಟು ಸ್ಪಷ್ಟೀಕರಿಸಿ.

   • ಪದ್ಯವು ಚೆಲುವಾಗಿದೆ. ಪ್ರಸಾದು ಅವರೆಂದಂತೆ ’ಅಕ್ಕು” (ಆಗುವುದು ಎಂಬರ್ಥವುಳ್ಳದ್ದು) ಎಂಬ ರೂಪವು ವ್ಯಾಕರಣದೃಷ್ಟ್ಯಾ ಸಾಧುವೇ ಆದರೂ
    ಇಲ್ಲಿ ಸಲ್ಲದು.ಏಕೆಂದರೆ “ಆಗುವುದೇ?” ಎಂಬ ಅರ್ಥದ ಪದವಿಲ್ಲಿ ಬೇಕಿದೆ. ಹೀಗಾಗಿ ಅಪ್ಪುದೇಂ? ಅಪ್ಪುದೆ? ಇತ್ಯಾದಿ ರೂಪಗಳು ಬೇಕು.

    • ನಿಮ್ಮಿಬ್ಬರಿಗೂ ಧನ್ಯವಾದಗಳು. ಸವರಣೆಯನ್ನು ಮಾಡಿಕೊಂಡಿದ್ದೇನೆ.

 16. ರಥಂ ಚೆಲುವಲುತ್ತಮಂ
  ವಿರೂಪಾಕ್ಷನಿಗಲ್ಲವೇಂ?
  ಮತಿಗೇನು ಭಯವಿಲ್ಲಂ
  ವಿಠ್ಠಲಂಗೆನೆ ವಿದ್ವಾಂಸರ್

  ಅನುಷ್ಟುಪ್ ನಲ್ಲಿ ಒಂದು ಪ್ರಯತ್ನ.

 17. ಹಿಂದಿನ ಪದ್ಯವನ್ನು ನಿರ್ಲಕ್ಷಿಸಿ.. ಈ ಪದ್ಯದಲ್ಲೂ ದುರಾಗ್ರಹ ಪದವು ಸರಿಯಾಗಿದೆಯೋ ಇಲ್ಲವೋ ತಿಳಿಯುತ್ತಿಲ್ಲ.

  ರಥಂ ಚೆಲುವಲುತ್ತಮಂ
  ವಿರೂಪಾಕ್ಷನಿಗಲ್ಲವೇಂ?
  ಮತಿಗಿಲ್ಲ ದುರಾಗ್ರಹ
  ವಿಠ್ಠಲಂಗೆನೆ ವಿದ್ವಾಂಸರ್

  ಅನುಷ್ಟುಪ್ ನಲ್ಲಿ ಒಂದು ಪ್ರಯತ್ನ.

  • ಎರಡನೆಯ ಸಾಲನ್ನು ತಿದ್ದಿದ್ದೇನೆ. ಇನ್ನೇನಾದರೂ ತಪ್ಪುಗಳಿದ್ದಲ್ಲಿ ತಿಳಿಸಿ.

   ರಥಂ ಚೆಲುವಲುತ್ತಮಂ
   ವಿರೂಪಾಕ್ಷನ ಸೊತ್ತೆಂಬರ್
   ಮತಿಗಿಲ್ಲ ದುರಾಗ್ರಹಂ
   ವಿಠ್ಠಲಂಗೆನೆ ವಿದ್ವಾಂಸರ್

   ಅನುಷ್ಟುಪ್ ನಲ್ಲಿ ಒಂದು ಪ್ರಯತ್ನ.

   • You have swapped the metrical rules between the odd and even lines. ಸೊತ್ತೆಂಬರ್ & ವಿದ್ವಾಂಸರ್ are suitable for odd lines. ವಲುತ್ತಮಂ & ದುರಾಗ್ರಹಂ are suitable for even lines. Notice how readability improves if you swap the odd and even lines entirely:
    ವಿರೂಪಾಕ್ಷನ ಸೊತ್ತೆಂಬರ್
    ರಥಂ ಚೆಲುವಲುತ್ತಮಂ|
    ವಿಠ್ಠಲಂಗೆನೆ ವಿದ್ವಾಂಸರ್
    ಮತಿಗಿಲ್ಲ ದುರಾಗ್ರಹಂ||
    Now make the minor corrections.

    • Thanks.I realised that the rows have got swapped after posting the verse.will work on the correction and post.

 18. (ಶಿಲ್ಪಕಲಾಕೃತಿಯ ಸೌಂದರ್ಯ)

  ತಾನಿರ್ದುದಂದಲ್ಲಿ, ಶಿಲೆಯೊಂದು ಕಳೆಗುಂದಿ,
  ಕಾನನದ ಮೂಲೆಯೊಳ್,ಶೋಕನಿರತಂ |
  ಸಾನುನಯದಿಂದದಕೆ ಶಿಲ್ಪಿಗಂ ನೀಡಿದಂ,
  ದೀನತ್ವಮಂ ತೊಡೆದು ದಿವ್ಯತ್ವಮಂ ||1|

  ತಂಗಿರ್ಪ ಕೆತ್ತನೆಯ ರಥದ ಮುಂಭಾಗದೊಳ್,
  ಸಿಂಗಾರದಾನೆಯಿರೆ ಮನಮೋಹಕಂ |
  ಕಂಗೊಳಿಪ ಚಕ್ರಂಗಳಂ ಪೊರ್ದಿ ಮೆರೆಯುತ್ತೆ,
  ಬಂಗಾರದೊಲ್ ಶ್ರೇಷ್ಠಮೆನಿಸುತಿರ್ಕುಂ ||2||

  ಸುತ್ತಲಿರ್ಪಾ ಕಿರಿಯ ಕುಶಲದಾಕೃತಿಗಳಂ,
  ಗತ್ತಿನಿಂ ಮೀರ್ದಪುದು ಕೌಶಲ್ಯದಿಂ |
  ಕೆತ್ತಿರ್ಪ ಬಾಲಿಕೆಯರಿಂ ಶೋಭೆಗೊಂಡಿರ್ದು,
  ಸುತ್ತಲುಂ ಸೆಳೆಗುಂ ಕಲಾರಸಿಕರಂ ||3||

  ನೀಲದಾಕಾಶದಿಂ ಪಿನ್ನೆಲೆಯ ಪಡೆದಿರ್ಪ,
  ಶೂಲದಿಂದಾಘಾತಗೊಂಡ ಶಿಲ್ಪಂ,|
  ಚಾಲನೆಯೊಳಿರ್ಪ ವೀಕ್ಷಕರನಾಕರ್ಷಿಪುದು,
  ಸೋಲದೆಯೆ ತಡೆಯೊಡ್ಡಿ, ಸೌಂದರ್ಯದಿಂ ||4||

  ಕಲ್ಲಿನಿಂದರಳಿದ ಕಲಾಕೃತಿಯನೀಕ್ಷಿಸುತೆ,
  ಕಲ್ಲಪಾಸಿನ ಮೇಲೆ ವಿರಮಿಪಾಗಳ್,|
  ಮೆಲ್ಲುತ್ತೆ ಸವಿಯಾದ ಭಕ್ಷ್ಯಂಗಳಂ,ದಣಿವ-
  ನಲ್ಲೆ ನೀಗುತೆ ಸುಖಿಸಿ ಮೋದಗೊಂಬರ್ ||5||

  • ’ಶಿಲ್ಪಿಗ’ ಎಂದಿರುವುದು ಚೆನ್ನಾಗಿದೆ:

   ಕರೆವೆವಾತ್ಮೀಯರನ್ನೇಕವಚನದೊಳಾವು- (ಬಾ)
   ಮೊರೆವೆವರ್ಧವಚದೊಳ್ ಸಲುಗೆ ಬಳೆಯೆ| (ಬಾರೋ/ಬಾರೇ)
   ಜರೆವವೋಲ್ ಪಾದ(1/4)ವಚನದೊಳಂಗೆ ಕೇವಲರ (ಬಾರೊಲೋ/ಬಾರೆಲೇ)
   ಬರಿದೆ ’ಶಿಲ್ಪಿಗ’ನೆಂದಿರೇಂ ಶಿಲ್ಪಿಯಂ?| 🙂

  • ತುಂಬಾ ಚೆನ್ನಾಗಿದೆ.

   • ಧನ್ಯವಾದ ಕಾಂಚನಾ,ನಿಮಗೆ.

    • ಒಳ್ಳೆಯ ಕವಿತೆಯನ್ನೇ ಬರೆದಿದ್ದೀರಿ; ಧನ್ಯವಾದ.

     • ಧನ್ಯವಾದ ಗುರುಗಳೆ.

 19. ಬಿಸಿಲಿನಿ೦ದ ಕಂಗೊಳಿಸುವ ರಥವನ್ನು ,ಸೂರ್ಯನ ರಥವೆಂಬ ಕಲ್ಪನೆಯಲ್ಲಿ .(ರಥ ಸಪ್ತಮಿ ಯಾದುದರಿಂದ )..

  ಮತಿಯಂ ಪ್ರೇರಿಪ ಛಾಯಾ
  ಪತಿ ನಿಜ ಪಥದೊಳ್ ಮನೋಹರ ರಥದೊಳಿಹನೇ೦?
  ತಿಥಿ ಸಪ್ತಮಿಯೊಳ್ ಸಾರಥಿ
  ಗತಿಯ೦ ತಿರುವಲ್ಕೆ ಧಾತ್ರಿಗೈತಂದಿಹನೇ೦?

  • ಚೆನ್ನಾದ ಕಲ್ಪನೆ. ಅಭಿನಂದನೆಗಳು

   • ಸರ್,
    ಈ ಕಲ್ಪನೆಯು ಕೂಡಾ ಗತಿಬದಲಾಣೆಯಿಂದಲೇ ಉಂಟಾಗಿದೆ ! ರಥ ಸಪ್ತಮಿಯಂದು ಸೂರ್ಯ ನಾರಾಯಣನಿಗೆ, ಪದ್ಯದ ಮೂಲಕ ನಮಿಸುವ ಉದ್ದೇಶ ನನ್ನದಾಗಿತ್ತು . ಆದರೆ ನನ್ನ ಮತಿಗೆ ಹಳೆಗನ್ನಡ ಪದಗಳು ಬೇಕಾದಂತೆ ಸಿಗದೆ ಈ ಗತಿ ಉಂಟಾಗಿದೆ . ಅಭಿನಂದನೆಗೆ ಧನ್ಯವಾದಗಳು .

 20. ಬೆಸನಂಗೊಂಡುದದೇಕೈ
  ರಸಿಕರ್ ಕಂಡು ಹಂಪಿಯೊಳ್ ಶಿಥಿಲತೆಯಂ ।
  ಪಸರಿದುದೈ ಮೇಣ್ನಾಲ್ಕುಂ
  ದೆಸೆಯೊಳ್ ಕರ್ಣಾಟ ವೈಭವವನೀ ಶಿಲ್ಪಂ ।।

  • ಎರಡನೆಯ ಸಾಲಿನಲ್ಲಿ ಮಾತ್ರೆಗಳ ಲೆಕ್ಕ ತಪ್ಪಿದೆಯೇ? ಪದ್ಯವು ಇಷ್ಟವಾಯಿತು.

   • ಹೌದು ಕಾಂಚನ, ಗಮನಿಸಿಲ್ಲ.(ಸರಿಪಡಿಸಿದ್ದೇನೆ) ಧನ್ಯವಾದಗಳು. ನಿಮ್ಮ ಪದ್ಯಗಳೂ ಬಹಳ ಸೊಗಸಾಗಿವೆ. ಮೆಚ್ಚುಗೆ ಸೂಸಲಾಗುತ್ತಿಲ್ಲ.
    * ರಸಿಕರ್ ಗಳ್ ಕಂಡು ಹಂಪಿಯೊಳ್ ಶಿಥಿಲತೆಯಂ ।

    • ಪದ್ಯವೂ ಭಾವವೂ ಚೆನ್ನಾಗಿವೆ:-)

     • ಧನ್ಯವಾದಗಳು ಗಣೇಶ್ ಸರ್, ಪ್ರಸಾದ್ ಸರ್.
      ಪ್ರಸಾದ್ ಸರ್ ಗೆ ಧನ್ಯವಾದಗಳು – “ಹಂಪಿ”ಯ ಜಗಣ(ಳ)ದಲ್ಲಿ ಮತ್ತೊಂದು ಪದ್ಯ ಸಾಧ್ಯವಾದುದಕ್ಕೆ !

 21. ಪ್ರಾಸರಹಿತವಾದ ಪದ್ಯ….

  ವಿರೂಪಾಕ್ಷನ ಸೊತ್ತೇನೀ
  ರಥಂ ಚೆಲುವಲುತ್ತಮಂ
  ವಿಠ್ಠಲಂದೆನೆ ವಿದ್ವಾಂಸರ್
  ಎನಗಿಲ್ಲವು ಸೋಜಿಗಂ

 22. ಕಲ್ಲಿನ ರಥಮೇ! ಕನ್ನಡ
  ಸೊಲ್ಲಿನ ಜಾತ್ರೆಗೆ ತದೇಕಚಿತ್ತದೆ ನೆರೆಕಾ-
  ದಿಲ್ಲಿಗೆ ಬಂದಿಹೆಯೇಂ? ಸರಿ!
  ಸಲ್ಲುವೆ ನೀಂ ಪದ್ಯಪಾನಕೆಂದುಂ ಹಬ್ಬಂ||

  ಒಳ್ಪಿಂ ಕಲೋತ್ಕರ್ಷವ ಸಾರುತಿರ್ಕುಂ
  ಬಲ್ಪಿಂ ಚರಿತ್ರೋನ್ನತಿಬೋಧೆಯಿತ್ತುಂ
  ಕಲ್ಪಂ ಸದಾಸ್ವಾದಕೆ ಮೇಣಿದೋ ಈ
  ಶಿಲ್ಪಂ ಹೃದಾರ್ದ್ರೀಕರಣಕ್ಕೆ ಮಾರ್ಗಂ

  ಒಳ್ಪು = ಶೋಭೆ
  ಬಲ್ಪು = ಗಾಢತೆ

 23. ಹಂಪಿಯ ಆ ಶಿಲಾರಥದ ಒಳಗೆ ಗರುತ್ಮಂತನ ಪ್ರತಿಮೆಯಿದೆ. ಹಂಪಿಗೆ ಭೆಟ್ಟಿ ಯಿತ್ತಿದ್ದಾಗ ಆ ಪ್ರತಿಮೆಯನ್ನು ನಾನು ಕಂಡಿದ್ದೇನೆ. ಗರುತ್ಮಂತನು ವಿಷ್ಣುವಿಗೆ ವಾಹನನಾಗಬೇಕು. ಆ ವಿಷ್ಣುವಾಹನನಿಗೇ ಒಂದು ಗಜವಾಹನವೇ (ಕೆಳಗಿರುವ ಆನೆಯನ್ನು ಗಮನಿಸಿ) ? ಎಂಬ ಕಲ್ಪನೆ ಪದ್ಯವಾಗಿ ಮೂಡಿಬಂದಿದೆ. ರಥೋದ್ಧತದಲ್ಲಿ ಇದು ನನ್ನ ಮೊದಲ ಪ್ರಯತ್ನ.

  ರಥೋದ್ಧತ || ಉಷ್ಣಪೂರ್ಣ ದಿಶೆಯೊಳ್ ಪ್ರಗೀತಮೀ
  ಕೃಷ್ಣ ಕಾಚಕ ಕಲಾಸಮುಚ್ಚಯಂ
  ವಿಷ್ಣುವಾಹನನೆನಿಪ್ಪ ತಾರ್ಕ್ಷ್ಯಗಂ
  ಜಿಷ್ಣುವಾಹನಮದೇತಕೋ ಗಡಾ ?

  ಜಿಷ್ಣುವಾಹನ = ಇಂದ್ರನ ವಾಹನ = ಆನೆ

  ಹಂಪಿಯ ಆ ಶಿಲಾರಥದ ಮೇಲೆ ಬಹಳ ಹಿಂದೆ ಗೋಪುರವಿದ್ದಿತಂತೆ. ನಂತರದಲ್ಲಿ ಅದು ಆಕ್ರಮಣಕ್ಕೆ ತುತ್ತಾಗಿ ಬಿದ್ದುಹೋಯಿತಂತೆ. ಹಾಗೆಂದು ಇತಿಹಾಸ ಹೇಳುತ್ತದೆ. ಈ ವಿಷಯಕ್ಕೆ ನನ್ನದೇ ಆದ ಕಲ್ಪನೆಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇನೆ.

  ಕನ್ನಡರಾಜ್ಯರಮಾರಮಣನಾದ ಕೃಷ್ಣದೇವರಾಯನೆಂಬ “ರಾಜಗೋಪುರವು” ಉರುಳಿಹೋಗಲು, ಆ “ರಾಜಗೋಪುರವೇ” ಇಲ್ಲವಾಗಿರಲು ನನಗೆ ಗೋಪುರವಿದ್ದೇನು ಪ್ರಯೋಜನ ಎಂದು ಖೇದದಿಂದ ಆ ಶಿಲಾರಥವೂ ಮ್ಲೇಚ್ಚರ ಆಕ್ರಮಣಕ್ಕೆ ತುತ್ತಾಗಿ ತನ್ನ ಗೋಪುರವನ್ನು ಕಳೆದುಕೊಂಡಿತು ಎಂಬ ಕಲ್ಪನೆ –

  ಕಂ || ಪೊರಳಲ್ಕಾ ಕನ್ನಡ ರಾ
  ಜ್ಯರಮಾರಮಣನೆನಿಸಿರ್ದ ನೃಪಗೋಪುರಮಾ
  ಸುರಥಂ ಮ್ಲೇಚ್ಛಾಕ್ರಮದಿಂ
  ವಿರಜಿಪ ಗೋಪುರಮನಿಂತು ಕಳೆದುದದಾಗಳ್

  • maurya,
   ನಿನ್ನ ಪದ್ಯಗಳು ತುಂಬ ಚೆನ್ನಾಗಿವೆಯಪ್ಪ. ಆದರೆ, ಗರುತ್ಮಂತನ ವಾಹನ ಆನೆಯಲ್ಲ, ಅವನ ವಾಹನ ಆ ರಥ. ಆನೆ ಆ ವಾಹನದ ಇಂಧನ ಮಾತ್ರ. ನಾಳೆ ಆ ಆನೆಗೆ ಹೊಟ್ಟೆಗೆ ತತ್ವಾರವಾದರೆ, ಆಗ ಕತ್ತೆ, ಹಂದಿ, ನಾಯಿಯನ್ನೂ ಕಟ್ಟಿ ನಡೆಸಿಯಾರು!

   ದಾಕ್ಷ್ಯವಾಹನ ರಥಂ ಖಗಕ್ಕೆ, ಸಾ
   ಪೇಕ್ಷ್ಯಮಲ್ತೆ ಗಜಮಿಂಧನಂ ಗಡಾ|
   ಭಕ್ಷ್ಯಕಿಲ್ಲದಿರೆ ನಾಗಕಾಗಳಂ
   ಲಕ್ಷ್ಯಮಾಗುವುದು ಕತ್ತೆ, ಹಂದಿ, ನಾಯ್||

   ದಾಕ್ಷ್ಯವಾಹನ – ಪ್ರತ್ಯಯವಿಲ್ಲದಿರುವುದು ಸಾಧುವೆ?

   • ನನ್ನ ಈ ಎರಡು ಪುಟ್ಟ ಪದ್ಯಗಳಿಗೆ ನಿಮ್ಮಿಂದ ಮತ್ತು ಒಳ್ಳೆಯ response ದೊರೆತಿದ್ದು ಮಹದಾನಂದವಾಯಿತು. ಆನೆಯು ರಥಕ್ಕೆ ಇಂಧನ ಎಂಬುದು ಸತ್ಯವಷ್ಟೇ. ಆದರೆ ಆದಿಪ್ರಾಸ ನಿಯಮ ಮತ್ತು ನನ್ನ ಕಲ್ಪನೆಗಳ ಮಿಶ್ರಣವಾಗುವಂತೆ ಬರೆಯಬೇಕಿತ್ತು. ಹಾಗಾಗಿ ಜಿಷ್ಣುವಾಹನ ಎಂದೇ ಪ್ರಯೋಗವನ್ನು ಮಾಡಬೇಕಾಯಿತು. ಇದೋ ನಿಮ್ಮ commentನಿಂದ ಸ್ಫೂರ್ತಿ ಪಡೆದುಕೊಂಡ ಮತ್ತೊಂದು ಪದ್ಯ. ಅಷ್ಟು ದೊಡ್ಡ ರಥಕ್ಕೆ, ಅಷ್ಟು ಸಣ್ಣ ಆನೆಯನ್ನು ಕಟ್ಟುವುದೇ ? ಅದರ ನೋವನ್ನು ಕೇಳುವವರಾರು ? ಅಂದು ಆನೆಯೊಂದರ ಕರೆಯನ್ನು ಕೇಳಿ ಧಾವಿಸಿ ಬಂದ ಪರಂಧಾಮನು ಇಂದು ಈ ಕಲ್ಲಿನ ಆನೆಯ ಮೊರೆಯನ್ನು ಕೇಳುವನೇ ?

    ಎಲೆಲೆ ಪಂಪಾಪುರಿಯೊಳೇನಿದು
    ಬಲವಿಪುಲಮೀ ಗಜಮನೆಂತಾ
    ಕುಲನಗದವೊಲು ಕಾಂಬ ಗರ್ತಕೆ ಬಂಧಿಸಿಹರಲಲಾ
    ಪಲರ ಕಾವ ಫಣೀಂದ್ರಶಯನನು
    ಸಲಗವೊಂದರ ಹರಣಗಾಯ್ದವ
    ನೊಲಿದು ಬರ್ಪನದೆಂದಿಗಶ್ಮದ್ವಿಪವ ಪಾಲಿಸಲು ?

    ಅಶ್ಮದ್ವಿಪ – ಕಲ್ಲಿನ ಆನೆ

  • ಬಹುದಿನಗಳ ಬಳಿಕ ಮೌರ್ಯ!! ಸ್ವಾಗತ…ತುಂಬ ಒಳ್ಳೆಯ ಪದ್ಯದಿಂದಲೇ ನಿನ್ನ ಈ ವರ್ಷದ ಇನಿಂಗ್ಸ್ ಪ್ರಾರಂಭವಾಗಿದೆ:-)

   • ಪದ್ಯಪಾನದ ಟೀಮ್ ನ ಕೋಚ್ ನೀವು. ನಾನೊಬ್ಬ ಯಂಗ್ ಅಮೆಚೂರ್ ಪ್ಲೇಯರ್ ಅಷ್ಟೇ. ನನ್ನ ಪ್ಲೇಯಿಂಗ್ ಸ್ಟೈಲ್ ನಿಂದ ತಾವು ತುಷ್ಟರಾಗಿದ್ದರೆ ನಾನು ಕೃತಾರ್ಥ. ಮನಸಾ ಧನ್ಯವಾದಗಳು ಗುರುಗಳೇ. 🙂

 24. ಸಂತತ ಧರ್ಮದ ರಕ್ಷಣೆ
  ಗಂ ತಾಮೆಯ್ದಿರ್ದ ಪಂಪೆಯರಸರ್ ಕಡೆದಿ
  ಟ್ಟಂತಿರ್ಪೀ ಕೀರ್ತಿರಥಂ
  ನಿಂತೆಡೆಯೊಳ್ ನಿಂತು ಜಗದೆ ಭ್ರಮಿಸುತ್ತಿರ್ಕುಂ||

  (ಕೊನೆ ಸಾಲನ್ನು ಸಮಸ್ಯಾ ಪೂರಣಕ್ಕೆ ಕೇಳಬಹುದಿತ್ತೇನೋ!! 😉 )

 25. ಕನ್ನಡ ನುಡಿಪಂಪೆಯೊಳುಂ
  ಮುನ್ನಡೆದಿರ್ಕುದವಧಾನ ರಥವುಂ ತಾಳ್ದಿಂ
  ದುನ್ನತಿಯಂ ಸೂಸಿಂ ಸಂ
  ಪನ್ನತೆಯಂ ಸಾಸಿರಗಜಗಂಭೀರತೆಯಿಂ ।।

  (ಸಾವಿರದವಧಾನಕ್ಕೆ ಸಜ್ಜಾಗಿರುವ ಭವ್ಯ (ಗಜ=ಅಷ್ಟ)ಅವಧಾನರಥದ ಕಲ್ಪನೆಯಲ್ಲಿ / ಆ ರಥೋತ್ಸವದಲ್ಲಿ ಪಾಲ್ಗೊಳ್ಳಲಿರುವ ಸಂಭ್ರಮದಲ್ಲಿ)

  • ಕನ್ನಡ ನುಡಿಪಂಪೆಯೊಳುಂ
   ಮುನ್ನಡೆದಿರ್ಕುದವಧಾನ ರಥವುಂ ತಾಳ್ದಿಂ
   ದುನ್ನತಿಯಂ ತಾಂ ನಿಜ ಸಂ-
   ಪನ್ನತೆಯಿಂ ಸಾಸಿರಗಜಗಂಭೀರತೆಯಿಂ ।।

   (“ಸೂಸಿಂ” ತಪ್ಪಿರಬಹುದೆಂದು ಈ ಬದಲಾವಣೆ )

 26. यानस् त्यक्तो मन्दिरो भग्नशेषः
  गाढान्धत्वं यावनं व्याप्तमस्ति।
  मध्ये रात्रौ कृष्णवज् जागृयान् नो
  वीर्यं क्षात्रं सूर्यवत् तामसान्तम्॥

 27. ಯಾತಾತಿವೈಭವವಹೋ ವಿಜಯಸ್ಯ ರಾಜ್ಯಾತ್
  ಸೂಕ್ಷ್ಮಾದ್ಭುತೈಃ ಕರಕೃತೈರ್ಜನಮಾನಸೇಽಥ |
  ಯಸ್ಯೇಭಸಾರಥಿಯಮೌ ದಹರಾಯಮಾನೌ
  ಶೈಲಾನುವಿದ್ಧಸುರಥೋ ನ ಯಯೌ ನ ತಸ್ಥೌ ||

  ಅಥ ಯಾತಾತಿವೈಭವವಹಃ ಗತವೈಭವಧರಃ ವಿಜಯರಾಜ್ಯಾತ್ ಸೂಕ್ಷೈಃ ಅದ್ಭುತೈಃ ಕರಕೃತೈಃ (ಕೈ ಕೆತ್ತನೆಗಳಿಂದ) ಜನಮಾನಸೇ ಯಸ್ಯ ಇಭಸಾರಥಿಯಮೌ ದಹರಾಯಮಾನೌ (ಯಾವುದಕ್ಕೆ ಸಾರಥಿಗಳಾದ ಅವಳಿ ಆನೆಗಳು ಚಿಕ್ಕಪ್ರಾಣಿಗಳಂತಾಗಿವೋ ಅಂಥ) ಶೈಲಾನುವಿದ್ಧಃ ಸುರಥಃ ಮಹಾರಥಃ ನ ಯಯೌ ನ ತಸ್ಥೌ (ಹೋಗಲೂ ಇಲ್ಲ, ನಿಲ್ಲಲೂ ಇಲ್ಲ).

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)