Jun 142014
 

ಅಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ

  78 Responses to “ಪದ್ಯಸಪ್ತಾಹ ೧೧೩: ಸಮಸ್ಯಾಪೂರಣ”

 1. ಭಂಗಿಸಲೊಳ್ಪಿನಿಂದೆ ಹರಚಾಪಮನಾ ರಘುವಂಶಜಾತನಂ
  ದಂಗಜರೂಪದಿಂದೆ ಮಿಗೆ ರಾಜಿಸುತಿರ್ದೊಡೆ ಪ್ರೇಮದಿಂದೆ ಬಂ
  ದಂ ಗುಣವಾರ್ಧಿಗೆಯ್ಗೆ ನದಿಯಂದದ ಪುತ್ರಿಕೆಯೆಂದು ಪೇಳ್ದು ಮೃ
  ದ್ವಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ||
  (ಅಂದು ರಘುವಂಶಜಾತಂ ಹರಚಾಪಮಂ ಒಳ್ಪಿನಿಂದೆ ಭಂಗಿಸಲ್,ಅಂಗಜ ರೂಪದಿಂದೆ ಮಿಗೆ ರಾಜಿಸುತಿರ್ದೊಡೆ ಪ್ರೇಮದಿಂದೆ ಬಂದಂ ಜನಕಂ ‘ನದಿಯಂದದ ಪುತ್ರಿಕೆ ಗುಣವಾರ್ಧಿಗೆ ಎಯ್ಗೆ’ ಎಂದು ಪೇಳ್ದು ‘ಮೃದು+ಅಂಗದ ಸೀತೆಯಂ ವರಿಸೆ ಬಾ’ ಎನುತುಂ ನಿವೇದಿಪಂ)

 2. ಭಂಗಮಿದಿನ್ನೆಗಂ ತೆನೆಗಳೀಪರಿ ಪೋರ್ದಪ ಕೀಟವೃಂದದಿಂ-
  ದಿಂಗಿತಮೊಪ್ಪದೇಂ ಮಗನೆ ವಾರ್ಷಿಕನಷ್ಟಮನೆಂತು ತಾಳ್ದಪೆಂ
  ಸಂಗರಕೆಂದುನೀಂ ಬಲಮನೀವೊಡೆ ಗೆಯ್ಮೆಯ ಬಲ್ಮೆಯಲ್ತೆ ಪಾ-
  ತಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ

  ಹಲವು ವರ್ಷದಿಂದ ಕೀಟಬಾಧೆಯಿಂದ ಬೆಳೆಯ ನಷ್ಟ ಅನುಭವಿಸಿರುವ ರೈತ ಈ ವರ್ಷ ಉತ್ತಭೂಮಿಯ (ಮತ್ತು ಮುಂದಿನ) ಹೋಣೆಗಾರಿಕೆಯನ್ನು ತೆಗೆದುಕೊಳ್ಳಲು ಮಗನನ್ನು ನಿವೇದಿಸುತ್ತಿದ್ದಾನೆ

  ಪಾತಂಗದ ಸೀತೆ – (previously) pest-infected land

  • ’ಸೀತೆ’ ಎಂಬ ಹೆಸರಿನ ಪತಂಗವನ್ನು ವರಿಸುವುದೆ!

   ಇತ್ತೀಚೆಗೆಷ್ಟುಕಷ್ಟವು ವರಗಳಿಗೆ ವಧುವ
   ಗೊತ್ತುಮಾಡುವುದೆಂದು ನೀಂ ಬಲ್ಲೆಯೈ|
   ಎತ್ತ ನೋಡಿದೊಡಿಲ್ಲ ಹೆಣ್ಣೆಂದುಮಣುಗನಿಂ-
   ಗಿತ್ತೆಯೇಂ ಪಾತಂಗ-ಪಾವನ್-ಇಲಿಯಂ 🙁

   The situation is so worse that there is no point in insisting for homo sapiens. Other species will also serve. Only it has to be a female!

   Well, your pUraNa is fine sOma.

 3. ಸಂಗರ ನಾಟಕಂ ನಡೆದಿರಲ್ಲರೆನಿದ್ರೆಯಪಾತ್ರಧಾರಿತಾನ್
  ಮಂಗನ ವೇಷಮಂಧರಿಸಿದಾತನೆರಮನುಮೆಂದುಭಾವಿಸಲ್
  ರಂಗದೆಕೂಗುತುಂ ಬರಲುಕೇಳ್ ಪರಿಹಾಸಕನಾಗಿ ಪೇಳ್ದತಾನ್
  ಅಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ

  • ಮಂಗನ ವೇಶಮಂಧರಿಸಿದಾತನೆರಾಮನುಮೆಂದುಭಾವಿಸಲ್
   Second line typo corrected!

  • ಪದ್ಯದಲ್ಲಿ ತುಂಬ ’ತಾನ್’ ಬಂದು, ತನ್ನ ಹಿಂದಿಲ್ಲದ ’ರಾಗ್’ ಮತ್ತು ಮುಂದಿಲ್ಲದ ’ಪಲ್ಲವಿ’ಗಳನ್ನು ನೆನೆದಿದೆ:-)

 4. ಡಂಗುರ ಸಾರುತುಂ ಜರುಗುದೆಂದೆನೆ ರಾಮಕಥಾ ಪ್ರಸಂಗವುಂ
  ಸಂಗಡದೆ ಸ್ವಯಂವರದೆ ತಾಂ ನಟಿಸಲ್ ಜನಕಾರ್ಯನರ್ಥವಂ
  ಸಿಂಗರಗೊಂಡಿರಲ್ ಸರಿಗ, ಸೀತೆಯ ಪಾತ್ರದೊಳಂತು ಸಂಕೆಯಿಂ
  ರಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ ।।

  * ಜನಕ + ಆರ್ಯನ +ಅರ್ಥವಂ

 5. ಭಂಗಿಸಿ ಲೀಲೆಯಿಂ ಯಜನಘಾತಕರಂ ಮೆರೆಯಲ್ಕೆ ಸಾನುಜಂ
  ಸಂಗದಿ ವಿಶ್ವಮಿತ್ರಮುನಿಯಾ ನಡೆದಿರ್ದ ಮಹೌಜ ರಾಘವಂ |
  ಅಂಗಜನಿಂದನಂಗಳಹ ಯೋಗಿನಿ ಗೌತಮಧರ್ಮಪತ್ನಿಗಂ
  ಅಂಗದ, ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದೀಪಂ ||

  ಗೌತಮಧರ್ಮಪತ್ನಿಗಂ ಅಂಗದ – ಅಹಲ್ಯೆಗೆ ಶರೀರವನ್ನು ದಯಪಾಲಿಸಿದವನು

  • Beautiful possibilty

  • ಅತ್ಯುತ್ತಮವಾಗಿದೆ ಕೇಯೂರರೆ

  • ವಿಶ್ವಮಿತ್ರ ಅಪಾಣಿನೀಯವಲ್ಲವೇ!

   • ಕುಮಾರವ್ಯಾಸನು ‘ವೀರನಾರಾಯಣ’ ಎಂಬುದನ್ನು ಛಂದಸ್ಸಿಗಾಗಿ ‘ವೀರನಾರಯಣ’ ಎಂದು ಬರೆದ ರೀತಿಯಲ್ಲಿ ಇದೂ ಸರಿಯಾಗಬಹುದೆಂದುಕೊಂಡು ‘ವಿಶ್ವಮಿತ್ರ’ ಎಂದು ಬರೆದೆ. ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ.
    ಆ ಪಾದವನ್ನು ಈಗ –
    ‘ಸಂಗದಿ ಗಾಧಿನಂದನನ ತಾಂ ನಡೆದಿರ್ದ ಮಹೌಜ ರಾಘವಂ’ ಎಂದು ಸವರಿದರೆ ಸರಿಯಾಗಬಹುದೇ ?

 6. ಆಕಾಶ+ಯಾನ+ದ = ಅಧ್ವಂ+ಗ+ದ. ಇದು ಸರಿಯೆಂದಾದರೆ:

  ಹಿಂಗದ ಹಿಗ್ಗೊಳಾ ನರಪ ಗೈಯಲು ಸೀತೆಯಳ ಸ್ವಯಂವರಂ
  ಸಾಂಗದೆ ಸಲ್ಲಿಸಲ್ ಮದುವೆ, ಕಷ್ಟದರಣ್ಯನಿಬರ್ಹವನ್ನು ಮೇಣ್|
  ಸಿಂಗನು ಬಲ್ಲನೇಂ ಪರಿ ಭವಿಷ್ಯದ ಸೀತೆ-ದಶಾಸ್ಯಸಂಗದ
  ಧ್ವಂಗದ? ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ||

  ಅನ್ವಯ: ಭವಿಷ್ಯದ ಕಷ್ಟದರಣ್ಯನಿಬರ್ಹವನ್ನು ಮೇಣ್ ಸೀತೆ-ದಶಾಸ್ಯಸಂಗದಧ್ವಂಗದ ಪರಿ ಬಲ್ಲನೇಂ ಸಿಂಗನು? ಹಿಂಗದ ಹಿಗ್ಗೊಳಾ ನರಪ ಗೈಯಲು ಸೀತೆಯಳ ಸ್ವಯಂವರಂ, ಸಾಂಗದೆ ಸಲ್ಲಿಸಲ್ ಮದುವೆ, ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ

 7. ಗಂಗೆಯ ನೀರವೊಲ್ ಪರಮಪಾವನೆಯಾದ ಸುಪುತ್ರಿಯೈದಿದಳ್,-
  ಮಂಗಲಸೂತ್ರಮಂ ಧರಿಪ ಯೋಗ್ಯವಯಸ್ಸನೆನುತ್ತೆ ಯೋಚಿಸಲ್,|
  ಪಿಂಗದೆ ಸಾರ್ದು,ಸದ್ವರನ ಕಂಡಿರೆ ಕಲ್ಪನೆಗೊಪ್ಪುವಂತೆ,ಚೆ-
  ಲ್ವಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ ||

  ( ಸೀತೆ- ರಾಮಾಯಣದವಳಲ್ಲದ,ಸೀತೆಯ ಹೆಸರಿನ ಯುವತಿ,
  ಜನಕ- ಜನಸಾಮಾನ್ಯೆಯಾದ ಈ ಸೀತೆಯ ತಂದೆ)

  (“ಗಂಗೆಯ ನೀರವೊಲ್ ಪರಮಪಾವನೆಯಾದ ಸುಪುತ್ರಿಯು ಮಂಗಲಸೂತ್ರಮಂ ಧರಿಪ ಯೋಗ್ಯವಯಸ್ಸನೈದಿದಳ್”-ಎನುತ್ತೆ ಜನಕಂ ಯೋಚಿಸಲ್,ಕಲ್ಪನೆಗೊಪ್ಪುವಂತೆ ಸದ್ವರನ ಕಂಡಿರೆ,ಪಿಂಗದೆ ಸಾರ್ದು,ಚೆಲ್ವಂಗದ ಸೀತೆಯಂ ವರಿಸೆ ಬಾರೆನುತುಂ ನಿವೇದಿಪಂ.)

 8. ಮಂಗಳ ಬಂಧನಂ ನಲುಗೆ ,ವಂದಿಸುತಂ ಶಿರಬಾಗಿ ಭೂಜೆಗಂ,
  ಇಂಗಿತಪೂರ್ತಿಗಂ, ಮರಳಿ ಬರ್ದುಕಿನೊಳ್ ಬೆಳಕೀವ ಜಾಣ್ಮೆಯಿಂ,
  ಸಂಗತ,ಸುಂದರಾಂಗನನೆ ಶೋಧಿಸಿ “ಹಾ!ಒಲವಿಂದಲೆನ್ನ ತ-
  ನ್ವಂಗದ ಸೀತೆಯಂ ವರಿಸೆ ಬಾರ”ಎನುತುಂ ಜನಕಂ ನಿವೇದಿಪಂ
  (ಮಗಳ ಮದುವೆಯಲ್ಲಿ ಬಿರುಕು ಬಂದಾಗ, ರಾಮಪತ್ನಿ ಭೂಜೆಯ ತಾಳ್ಮೆಗೆ ನಮಿಸುತ್ತ, ತನ್ನ ಮಗಳನ್ನು ಸೀತೆಯೆಂದು ತಿಳಿದು(ಪತಿಯಿಂದ ದೂರಕ್ಕಟ್ಟಲ್ಪಟ್ಟ ಕಾರಣದಿಂದ!)),ಇನ್ನೊಮ್ಮೆ ಮಗಳ ವಿವಾಹಕ್ಕೆ ಅಣಿಯಾದನು)

  • ಚೆನ್ನಾಗಿದೆ, ಆದರೆ ಬರ್ದುಕನ್ನು ಶಿಥಿಲದ್ವಿತ್ವದೊಡನೆಯೇ ಬಳೆಸಬೇಕೆನಿಸುತ್ತದೆ ಅಲ್ಲವೇ

 9. ಮತ್ತೊಂದು ಪ್ರಯತ್ನ –

  ಅಂಗಭವಾಭರೂಪದ ಮಹಾಬಲವೀರ್ಯದ ಲೋಕಪಾಲನೋ-
  ತ್ತುಂಗಸುದೀಕ್ಷೆಯಿಂದೆಸಕವೆತ್ತ ನೃಪರ್ಷಿಗಳಿಂದಮೊಪ್ಪುವಾ |
  ಸಂಗರದೊಳ್ ದ್ಯುಲೊಕಪತಿಗಂ ನೆರವಿತ್ತ ವರಾರ್ಕವಂಶಕಂ
  ಅಂಗದ, ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದೀಪಂ ||

  ವರಾರ್ಕವಂಶಕಂ ಅಂಗದ – ಶ್ರೇಷ್ಠವಾದ ಸೂರ್ಯವಂಶಕ್ಕೆ ಭೂಷಣನಾದ (ಶ್ರೀರಾಮ)

  • ಕೇಯೂರರೆ ಚೆನ್ನಾಗಿದೆ, ಎರೆಡು ಅಂಶಗಳು:
   1. ಲೋಕಪಾಲನೋತ್ತುಂಗ ಆಗುವುದಿಲ್ಲ – ಲೋಕಪಾಲನುತ್ತುಂಗ ಅಲ್ಲವೇ
   2. ವರಾರ್ಕವಂಶಕಂ + ಅಂಗದ = ವರಾರ್ಕವಂಶಕಮಂಗದ ಎಂದಾಗುತ್ತದೆ ಆಗ ಛಂದಸ್ಸು ತಪ್ಪುತ್ತದೆ

   • ಧನ್ಯವಾದಗಳು…..
    1. ಲೋಕಪಾಲನ + ಉತ್ತುಂಗ ಎರಡೂ ಸಂಸ್ಕೃತ ಪದಗಳೇ ಆಗಿರುವುದರಿಂದ ಗುಣಸಂಧಿಯಾಗಿ ‘ಲೋಕಪಾಲನೋತ್ತುಂಗ’ ಎಂದೇ ಆಗಬೆಕಲ್ಲವೇ ?
    2. ವರಾರ್ಕವಂಶಕಂ ಎಂಬಲ್ಲಿಗೆ ಪಾದ ಮುಗಿಯುತ್ತದೆಯಲ್ಲ ? ಆದಾಗ್ಯೂ ಕಡ್ಡಾಯವಾಗಿ ಪದಗಳನ್ನು ಕೂಡಿಸಲೇಬೇಕೆ ? ಹಾಗಾದರೆ ನನ್ನ ಮೊದಲಿನ ಪದ್ಯದಲ್ಲೂ ಈ ಸಮಸ್ಯೆ ಬರುತ್ತದೆ. ಅಲ್ಲಿ ‘ಗೌತಮಧರ್ಮಪತ್ನಿಗಂ ಅಂಗದ’ ಎಂದು ಬಿಡಿಸಿ ಬರೆದಿರುವುದೂ ತಪ್ಪಾಗುತ್ತದೆ ಎಂದಾಯಿತು. ಹೊಸ ತಿಳುವಳಿಕೆಯೊಂದನ್ನು ನೀಡಿದುದಕ್ಕಾಗಿ ತಮಗೆ ಧನ್ಯವಾದಗಳು..

    • ಕೇಯೂರರೆ, ಕ್ಷಮಿಸಿರಿ 🙂 ‘ಲೋಕಪಾಲನ’ ಕನ್ನಡದ ಷಷ್ಠೀವಿಭಕ್ತಿಯೆಂಬ ಭ್ರಮೆಯಿಂದಾಗಿ ಬರೆದೆ, ಎರೆಡೂ ಸಂಸ್ಕೃತಪದಗಳಾದದುದರಿಂದ ನಿಮ್ಮ ಪ್ರಯೋಗ ಸರಿಯಾದದ್ದು.

     ಮೂರನೆಯ ಪಾದಾಂತ್ಯದ ಅಕ್ಷರವನ್ನು ನಾಲ್ಕನೆಯ ಪಾದದ ಆದ್ಯಕ್ಷರದೊಡನೆ ಸಂಧಿಮಾಡುವ ಅವಕಾಶವಿದ್ದರೆ ಸಂಧಿ ಮಾಡಲೇ ಬೇಕಾಗುತ್ತದೆ. ಈ ನಿಯಮ ಕನ್ನಡದೊಡನೆ ಸಂಸ್ಕೃತಕ್ಕೂ ಅನ್ವಯಿಸುತ್ತದೆಯೆಂದೇ ತಿಳಿದಿದ್ದೇನೆ.

 10. ಕೊಪ್ಪಲತೋಟ, ಕೇಯೂರ, ಸೋಮ, ಚೀದಿ, ಪ್ರಸಾದು, ಶಕುಂತಲಾ, ಉಷಾ, ಕಾಂಚನಾ ಮುಂತಾದ ಎಲ್ಲರ ಪೂರಣಗಳೂ ಚೆನ್ನಾಗಿವೆ. ಮುಖ್ಯವಾಗಿ ಕೊಪ್ಪಲತೋಟ, ಸೋಮ, ಕೇಯೂರರ ಪರಿಹಾರಗಳಲ್ಲಿ ಭಾಷೆ-ಭಾವಗಳ ನಯ-ನಾವೀನ್ಯ ಆಕರ್ಷಕವಾಗಿವೆ.

  ನನ್ನ ಅವಧಾನವೊಂದರಲ್ಲಿ ಎದುರಾಗಿದ್ದ ಈ ಸಮಸ್ಯೆಯನ್ನು ನಾನು ಪೂರಯ್ಸಿದ ಪರಿ ಹೀಗಿದೆ:

  ಸಂಗಮನೀಯರೂಪ! ಹೃದಯಂಗಮಸದ್ಗುಣದೀಪ! ಸರ್ವದಾ
  ಸಂಗತಸತ್ತ್ವ! ಸಾಧುಜನಜೀವನಭಾವ! ಭವಾತಿದೂರ! ಚಿ-
  ದ್ರಂಗನಟೇಷುಪೀಠಪರಿಲುಂಠನಕಾಲಕನನ್ಮನೋಜ್ಞಹೇ-
  ಮಾಂಗದ! ಸೀತೆಯಂ ವರಿಸೆ ಬಾ! ಯೆನುತುಂ ಜನಕಂ ನಿವೇದಿಪಂ

  ಶಿವನ (ಚಿದ್ರಂಗ+ನಟ) ಬಿಲ್ಲನ್ನು (ಇಷು+ಪೀಠ) ಮುರಿಯುವಾಗ (ಪರಿಲುಂಠನ+ಕಾಲ)ಎತ್ತಿದ ತೋಳಿನಲ್ಲಿ ಹೊಳೆಯುತ್ತಿದ್ದ (ಕನನ್) ಹೊನ್ನ ತೋಳ್ಬಳೆಯಿಂದ ಸೊಗಯಿಸಿದ ರಾಮನೇ! ಎಂಬ ಸಂಬೋಧನೆಯಿಂದ ಈ ಪೂರಣ ಸಿದ್ಧಿಸಿದೆ. ಉಳಿದಂತೆ ಕೇವಲ ಇಂಪಾದ ಪದಗಳ ಪಡಸಾಲೆ ಮಾತ್ರ ಈ ಪದ್ಯ; ರಸದ ಗರ್ಭಗೃಹವಲ್ಲ:-)

  • ಮನೋಜ್ಞವಾದ ಪೂರಣ. ಅಭಿನಂದನೆಗಳು.

  • ಬಹಳ ಚೆನ್ನಾಗಿದೆ ಸರ್, ಚಿದ್ರಂಗನಟೇಷುಪೀಠಪರಿಲುಂಠನಕಾಲಕನನ್ಮನೋಜ್ಞಹೇಮಾಂಗದ ಎಂಥ ಅದ್ಭುತ ಸಮಾಸ. ನೀವೇನೋ ಇಂಪಾದ ಪದಗಳ ಪಡಸಾಲೆ ಅನ್ನುತ್ತೀರಿ, ನನಗೆ ಈ ಪ್ರಯೋಗಗಳನ್ನು ಮನೆಯಲ್ಲಿ ಮಾಡುವುದೇ ಕಬ್ಬಿಣದ ಕಡಲೆ, ಇನ್ನು ವೇದಿಕೆಯಮೇಲೆ ಕನಸೇ ಸರಿ

   • ಸೋಮರೆ,ನನ್ನ ಅನಿಸಿಕೆಗಳನ್ನೆಲ್ಲ ನೀವೇ ಬರೆದಿದ್ದೀರಿ ! 🙂

    • ಚಂದ್ರ, ಸೋಮ, ಶಕುಂತಲೆಯರಿಗೆ ಧನ್ಯವಾದಗಳು.

 11. ಸಂಗಮಿಸಲ್ ಸಭಾಂಗಣಕೆ ನೀಂ ರಸರೂಪಿಣಿಯೀಕೆ ನಿಚ್ಚಮುಂ
  ಬೆಂಗದಿರಂಗೆ ಸೋಲ್ತ ವರತಾಮರಸೇಕ್ಷಣೆ ನಿನ್ನನೀಕ್ಷಿಪಳ್ |
  ಮಂಗಲಧಾಮ ! ನಲ್ಬಗೆಯಿನೀ ಪೆರರೊಳ್ ವರರೊಳ್ ಕ್ಷಣಾರ್ಧಮುಂ
  ತಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ ||

  ರಸ = ಪ್ರೇಮ.
  ಬೆಂಗದಿರ = ಸೂರ್ಯ.
  ತಾಮರಸ = ತಾವರೆ.
  ನಲ್ಬಗೆ = ಒಳ್ಳೆಯ ಮನಸ್ಸು.
  ತಂಗದ = ನಿಲ್ಲದ, ಆಶ್ರಯಿಸದ.
  ಯಾವುದೇ ಅನ್ಯವರನಲ್ಲಿ ಕ್ಷಣಾರ್ಧವೂ ಮನಸ್ಸನ್ನಿರಿಸದ, ನಿನ್ನಲ್ಲೇ ಆಸಕ್ತಳಾದ ಸೀತೆಯನ್ನು ವರಿಸು ಎಂದರ್ಥ.

  • ಪೆಜತ್ತಾಯರೆ ಬಹಳ ಚೆನ್ನಾಗಿದೆ. ಏಕೆ ಅಪರೂಪವಾದಿರಿ?

   • ಧನ್ಯವಾದ ಶರ್ಮರೆ.. ಒಂದಷ್ಟು ಸಮಸ್ಯೆಗಳು, ಕೆಲಸದೊತ್ತಡಗಳಿಂದ ಕವನಿಸುವುದು ಸಾಧ್ಯವಾಗಿರಲಿಲ್ಲ. ಕ್ಷಮಿಸಿ..

 12. ರಾಮನಿಂದ ತ್ಯಕ್ತಳಾದ ಸೀತೆಯ ಸ್ಥಿತಿಗೆ ಜನಕನ ಮರುಕ –

  ಇಂಗಿತೆ ಪುಣ್ಯತೈಲಮಕಟಾ ! ತಪನಾನ್ವಯದೀಪದೊಳ್ ಕೃಪೋ-
  ತ್ತುಂಗಗಮೆಂತು ಬಂದುದುರುದಾರುಣಭಾವಮಲಾ ! ನೃಪೇಶ ! ದುಃ-
  ಸಂಗವಿದೂರೆಯಂ ಮರಳ್ದು ನೀಂ ಬನದೊಳ್ ಪೊಸತಾದ ಪೊಲ್ಲಪ-
  ಲ್ಲಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ ||

  ಪೊಲ್ಲಪಲ್ಲಂಗ = ವಿಪತ್ತೆಂಬ ಪಲ್ಲಕ್ಕಿಯಲ್ಲಿರುವ.

  • ರಾಮಕೃಷ್ಣಕವಿ! ನಲ್ಬರವಯ್ ನಿ-
   ಮ್ಮೀ ಮನೋಜ್ಞಪರಿಹಾರಕೆ ಗೆಲ್ಲಯ್ |
   ಪ್ರೇಮದಿಂ ಕವಿತೆಯಂ ಪುನರೆಮ್ಮೀ
   ಸೀಮೆಯೊಳ್ ಪಸರಿಸಿರ್ಪುದುಮೆಂದುಂ ||

   • ಧನ್ಯವಾದಗಳು ಸರ್  ಅಪರೂಪನಾಗಿದ್ದಕ್ಕೆ ಕ್ಷಮಿಸಿ..
    ಪದ್ಯಪಾನಗೃಹದೊಳ್ ಸಹಜಂ ನಾಂ
    ವಿದ್ಯೆಯೊಳ್ ಗುರುಗಳೈ ಎನಗಂ ನೀವ್ |
    ಹೃದ್ಯಮುಂ ವಚನ ನಲ್ಬರವೆಂಬೀ
    ಸದ್ಯಮೀಯುವುದು ಲಜ್ಜೆಯನೆನ್ನೊಳ್ || 

 13. (ವಿನೋದವಾಗಿ ಬದಲಾವಣೆಗೊಂಡ ಪ್ರಸಂಗ !)

  ಡಂಗುರ ಸಾರುತುಂ ಜರುಗುದೆಂದೆನೆ ರಾಮಕಥಾ ಪ್ರಸಂಗವುಂ
  ಸಂಗಡದೆ ಸ್ವಯಂವರವನಭ್ಯಸಿಸಲ್ ಗೆಳೆಯರ್ಗಳೊಟ್ಟಿಗಂ
  ಸಿಂಗರಗೊಂಡುತಾಂ ತಮಿಳಮಿತ್ರಗೆ ಚೋದ್ಯದೆ ರಾಜಪಾತ್ರ, ಪಾ-
  ರಂಗ(ತ)ದ, ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ ।।

 14. Sita was (re)born as a princess in the demon kingdom Lanka. At her birth, however, the baby called out ill omens for Lanka and its demons. So they put her in an urn and floated her down the river. She then was discovered by a king who had left his throne to become a hermit farmer, who duly returned to his rightful rule once he found the beautiful Sita.
  ನೀಂಗುತೆ ರಾಜ್ಯಮಂ ಕೃಷಿಕಜೀವನಮಂ ಮಿಥಿಲಾಪ ಗೈದನೇಂ
  ಸಿಂಗರಗೊಳ್ಳಲಾತನ ಮಡಿಲ್ ಮರಳಿರ್ದಿರೆ ರಾಜ್ಯಭಾರಕಂ|
  ಸಂಗಡ ನಿಲ್ಲಳೈ ಮಗಳು ಶಾಶ್ವತಮೆನ್ನುತೆ ದುಃಖದಿಂದಭಿ-
  ಷ್ವಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ||
  (ಅಭಿಷ್ವಂಗ = intense attachment or affection to. ಮಿಥಿಲಾಪ = ಮಿಥಿಲಾಪತಿ=ಜನಕರಾಜ)

  • ನೀಂಗು, ತೂಂಗು ಇತ್ಯಾದಿ ಪದಗಳು ಅಸಾಧುರೂಪಗಳು. ಅಲ್ಲೆಲ್ಲ ಬಿಂದುವಿನ ಬಳಕೆ ಇಲ್ಲ. ಏನಿದ್ದರೂ ತೊಡಂಗು, ಬೆಡಂಗು, ಮಲಂಗು, ಕಡಂಗು ಇತ್ಯಾದಿ ಪದಗಳಲ್ಲಿ ಬಿಂದುವು ಬರುವುದುಂಟು.

  • ಕೃತಜ್ಞತೆಗಳು. ಮೊದಲ ಸಾಲನ್ನು ಹೀಗೆ ತಿದ್ದಬಹುದು: ತೆಂಗು-ಕವುಂಗನುಂ ಬೆಳೆಸೆ ರಾಜ್ಯವ ನೀಗಿದನೇಂ ವಿದೇಹಪಂ

 15. ಅಂಗನೆ ಸೋತಳೈ ಶಿವನಬಿಲ್ಮುರಿದಿರ್ದಹ ಶಾಂತಮೂರ್ತಿಗಂ
  ಕಂಗಳತೇವ ಶೋಭಿತ ಸುಹಾಸವು ಪೇಳ್ದಪುದಾಶೆ ಕನ್ಯೆಯಾ
  ಮಂಗಳಬಾಹುಬಂಧನಗಳಕ್ಷತೆಗೆಂ ತುಡಿಯುತ್ತೆ ಸ್ಫಂದಿಸಿರ್ – [ಶಿ.ದ್ವಿ]
  ಪಾಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ

 16. ಡಂಗುರಸಾರಿಸಿರ್ದಿರೆ ವಿವಾಹದೊಳೀವೆನುಮೆಂದು ಪುತ್ರಿಯಂ
  ಭಂಗಿಸಿದರ್ಗೆ ರುದ್ರಧನುವನ್ನುಮೆನಲ್, ರಘುರಾಮ ತಾನದಂ
  ಹೊಂಗೆಯ ಟೊಂಗೆವೋಲ್ ಮುರಿಯಲಾಗ, ಕಳಂಕಮದೊಂದುಮಿಲ್ಲದ-
  ವ್ಯಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ|| (ಅವ್ಯಂಗ=perfect)

 17. ಭಂಗಿಸಿ ಬಿಲ್ಲ ರಾಮನು ಮನೋಹರ ರೂಪಸಿಯನ್ನು ಗೆಲ್ದಿರಲ್,
  ಸಾಂಗದಿನೆಲ್ಲ ಶಾಸ್ತ್ರಗಳ ಗೈದನೆ ಪುತ್ರಿಯ ಲಗ್ನಕಾರ್ಯದೊಳ್
  ಮಂಗಳಧಾರೆಯೊಳ್ ಪೊಳೆಯುವಾ ತನುರಾಗದ ಮೇಣಿನುತ್ತರಾ-
  ಸಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ||

  ತನುರಾಗ = ಅಂಗರಾಗ (cosmetics)
  ಉತ್ತರಾಸಂಗ – an upper or outer garment – ವಿವಾಹದ ’ಧಾರೆ’ಯಲ್ಲಿ ಬಳಸುವ ಶ್ವೇತವರ್ಣದ ಸೀರೆ ಎನ್ನೋಣವೆ?

  • ಕಲ್ಪನೆಯೂ ಪೂರಣದ ಕೀಲಕವೂ ಸೂಗಸಾಗಿವೆ. ಆದರೆ ವ್ಯಾಕರಣವು ಸ್ವಲ್ಪ ಕೆಟ್ಟಿದೆ. ರೂಪಸಿ ಅಸಾಧುರೂಪ; ಅದು ರೂಪಿಣಿ ಎಂದಾಗಬೇಕು.

   • ಓ! ವಿಸ್ಮೃತಿಯಾಗಿತ್ತು. ಇನ್ನು ಮರೆಯುವುದಿಲ್ಲ. ಕೃತಜ್ಞತೆಗಳು.

 18. ಪಿಂಗಲಭೂಮಿಯನ್ನುಳೆ ತೆರಳ್ದನೆ ಆಶ್ರಮಕಂ ನೃಪಂ ವಲಂ
  ಮಂಗಲರೂಪಿಯನ್ನುಪಡೆದನ್ ಬುವಿಯಿಂದಲಿ ಸೀತೆಯನ್ನುಮಿ-
  ನ್ನುಂ ಗುರುವೋಲುಮಾ ವನಮೊದಂಗಿರೆ ದೇಹವ ದಂಡಿಸಿರ್ಪ ವೀ-
  ಡ್ವಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ||

  ವೀಡ್ವಂಗ strong-limbed, firm in body

  (ಬರಿಯ ಕೀಲಕ-ಕಸರತ್ತುಗಳು ಅಷ್ಟೆ. ಭಾಷೆ-ಅಲಂಕಾರಾದಿಗಳೇನೇನೂ ಇಲ್ಲ)

 19. ಜಾಂಗಲಭೂಮಿಯೊಳ್ ಜನನಮಾದೊಡಮೇನು ನೃಪಾಸ್ಪದಕ್ಕಮಂ-
  ದಂಗಜೆ ಸೇರಿದಳ್ ನಿಜಪ್ರಸಾದದೊಳೆಂತುಟೊ ಸೌಖ್ಯದಿಂದಿಹಳ್|
  ಸಿಂಗರಗೊಂಡಿರಲ್ ಯುವದವಸ್ಥೆಯ ಕಾಂತಿಯಿನಿಂದೆ, ರಾಮ ನೀಂ
  ಸ್ವಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ||

  ನೃಪಾಸ್ಪದಕ್ಕಮಂದಂಗಜೆ = ನೃಪಾಸ್ಪದಕ್ಕಂ(palace)+ಅಂದು+ಅಂಗಜೆ
  ನಿಜಪ್ರಸಾದ – ಅವಳದೇ ವಾಸ್ತವ್ಯ (ಅರಮನೆ) ಶಿ.ದ್ವಿ.
  ಸ್ವಂಗ – Having a beautiful body, well-shaped, fair-limbed, a good or handsome limb

 20. ಯಾಕೋ ಯಾರೂ ಕೀಲಕವಾಗಿ ’ಧನುರ್ಭಂಗದ’ವನ್ನೇ ಬಳಸಿಕೊಂಡಿಲ್ಲ (ಕೀಲಕವಾಗಲ್ಲದೆಯೂ ’ಧನುರ್ಭಂಗ’ವನ್ನು ಬಳಸಿಕೊಂಡಿಲ್ಲ) ಎಂದು ಉದ್ಯುಕ್ತನಾದೆ. ಏಕೆ ಎನ್ನುವುದು ತಿಳಿಯಿತು 🙂 . ಐಡಿಯಮೂಲ ’ರಾಮನ ಅವತಾರ…’ ಗೀತೆಯಿಂದ: …….., ಜನಕನ ಮಮತೆಯ (ಅಹಂಕಾರದ) ಕುಡಿಯೋ, ……. ಮುರಿದುದು ಮಿಥಿಲಾನಗರದಲಿ.

  ಹಿಂಗಿಸಿರಲ್ ವಲಂ ಜನಕರಾಜನಹಂತೆಯನುಂ ಕಿಶೋರ ತಾಂ
  ಸಂಗಮ ರಾಮ-ಸೀತೆಯರಿಗಾದುದು ನಾಂದಿಯದಾ ಪರಾಕ್ರಮಂ|
  ತೂಂಗಿದವೆಲ್ಲ ಶೀರ್ಷಗಳು ಮೆಚ್ಚುತೆ ರಾಮನ ರೀತಿಯಂ ಧನು-
  ರ್ಭಂಗದ! ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ||

  • ಭಂಗಿಸಿಬಿಟ್ಟಿರಲ್ತೆ ಹಳಗನ್ನಡದೆಲ್ಲ ವಚೋವಿಲಾಸಮಂ
   ಮಂಗಳಮೆಂದೆನಿಪ್ಪದರ ವ್ಯಾಕೃತಿಯಂ ಸಖ! ಹಾದಿರಂಪ! ಶು-
   ಭ್ರಾಂಗದ ಕಂದನಾಗಿ ಮಿಗೆ ಬರ್ಕೆ ಭವತ್ಕವಿತಾಪ್ರಸೂತಿ; ಈ
   ಪಾಂಗು ಮನೋಜ್ಞಮೆಂದೆನಿಸಿದತ್ತು ವಿನೂತನಕಲ್ಪನಾಪ್ತಿಯಿಂ ||

   • ಹೌದು. ಅದಕ್ಕೇ ಮೇಲೆ ೧೮ರಲ್ಲೇ ತಪ್ಪೊಪ್ಪಿಗೆ ಸಲ್ಲಿಸಿಬಿಟ್ಟಿದ್ದೇನೆ. ಮೆಚ್ಚುಗೆಗಾಗಿ ಕೃತಜ್ಞತೆಗಳು

  • ಪ್ರಸಾದು ಚೆನ್ನಾಗಿದೆ

 21. ಮಂಗಳದ ಸ್ವಯಂವರದೆ ರಾಘವ ಪೂರಯಿಸಲ್ ನಿಬಂಧ ಸಾ-
  ರಂಗದ, ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ ।
  ತಂಗಿರೆ ಮುಂದರಣ್ಯದೊಳು ಕಂಡು ವಿಹಾರದೊಳಾ ಸುವರ್ಣ ಸಾ-
  ರಂಗವ, ಸೀತೆತಾಂ ಬಯಸೆ ಬೇಡೆನುತುಂ ಪತಿಯುಂ ನಿವೇದಿಪಂ ।।

  ಸಾರಂಗ = ಬಿಲ್ಲು / ಮನೋಹರತೆ, ಜಿಂಕೆ !!

 22. ಭಂಗಿಸೆ ಬಿಲ್ಲ ಝಲ್ಲುಣಿಸೆ ಸಲ್ಲಿದನಾಕ್ಷಣ ಪಂಕ್ತಿಯುಕ್ತರೊಳ್
  ಪೊಂಗಿದ ಸಿಗ್ಗಿನಗ್ಗಳದೆ ಬಾಗಿರೆ ಕನ್ಯೆಯ ಮೋರೆಯುಂ ಕರಂ|
  ಸಂಗತಸರ್ವರಾಶಯಕೆ ಸೊಲ್ಲಿಡುವಂತೆ “ನಿರಸ್ತ ರಕ್ತ ಸಾ-
  ರಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ||

  saaranga = kaNNu. nirasta = sOlisida rakta = being in love.

  • ಇದು ಹೊಳ್ಳನ ಪದ್ಯದವೊಲ್
   ಸದಮಲಶೈಲೀಶಿಲಾಲಿಸೂತ್ರಿತವಾಣಿ-
   ನ್ಯುದಿತಗತಿಯೆ ದಲ್ ನವ್ಯಾಂ-
   ಬುದವಿದ್ಯುಲ್ಲತೆಯವೋಲ್ ಸುಕಲ್ಪನಶಿಲ್ಪಂ ||

  • ಬಹಳ ಚೆನ್ನಾಗಿದೆ.

  • ರವೀಂದ್ರರಿಗೆ ಪದ್ಯಪಾನಕ್ಕೆ ಸ್ವಾಗತ. ಈ ನಿಮ್ಮ ಮೊದಲಪದ್ಯ ನಿಜಕ್ಕೂ ಚೆನ್ನಾಗಿದೆ 🙂

  • Thanks Kachana and Prasadu. Ganesh sir, Special Thanks for your string of padya which can rope in any sahrudaya forever here.

  • ಹೊಳ್ಳ, ಸಾರಂಗದ ಬಹಳ ಚೆನ್ನಾಗಿದೆ ಕೀಲಕ. ದ್ವಿತೀಯ ವಿಘ್ನವೂ ಕಳೆದಿರುವುದು ಕಂಡು ಸಂತೋಷವಾಯಿತು 🙂

 23. ಸಂಗರಮಾಗುತುಂ ಕರುಳಕಂದನೊಡಂ ಹಠಮಾರಿಯೋರ್ವಗಂ,
  ತಿಂಗಳ ಕಾಂತಿಯೂ ತಣಿಪ ಬೀರದೆ,ತಾಪವನೈದು ಮೀಯಿಸಲ್,
  ಕಂಗಳ ರೆಪ್ಪೆಗಳ್ ಪೊಲಿಯದೇ ಒಲವಂ ಮಿಗೆ ತೋರುತುಂ,ಮನೋ-
  ರಂಗದ ಸೀತೆಯನ್ನು ವರಿಸೆ ಬಾರೆನುತುಂ ಜನಕಂ ನಿವೇದಿಪಂ
  (ಮಗುವಿನೊಡನೆ ಕಾದಾಡಿದ ತಂದೆಯು, ಈ ಮನಸ್ಸೆಂಬ ರಣರಂಗದ ನೆಲವನ್ನು ನೀನು ಒಪ್ಪಿಕೊ,ಅಪ್ಪಿಕೊ(ರಾಜಿಯಾಗು) ಎಂದು ಕೇಳಿದ್ದಾನೆ )

 24. ರಾಮಪರಿತ್ಯಕ್ತಸೀತೆಯ ಬಗೆಗೆ ಜನಕನ ಮರುಕ.

  ಸಂಗತಮೆಂತು ಲೋಗನುಡಿಗಳ್ಗೆ ಸುಶೀಲೆಯ ಚಾಗಮೆನ್ನುತುಂ
  ಕಂಗಳಿನಸ್ರಮಂ ಸುರಿಸುತುಂ ವಿಧಿಯಂ ಹಳಿಯುತ್ತಳಲ್ದು, ಪಾ-
  ತಂಗಕುಲೋತ್ತಮಾ ! ನಿರಪರಾಧಿನಿಯಂ ವನಭೂಮಿದೇವಿಯು-
  ತ್ಸಂಗದ ಸೀತೆಯಂ ವರಿಸೆ ಬಾರೆನುತುಂ ಜನಕಂ ನಿವೇದಿಪಂ ||

  ಚಾಗ = ತ್ಯಾಗ, ಪರಿತ್ಯಾಗ.

 25. DhanyavAdagaLu sir 🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)