Jul 202014
 

ಕಣಮಲ್ತೆ ಸಾಗರನ ಸನ್ನಿಧಾನಂ

  85 Responses to “ಪದ್ಯಸಪ್ತಾಹ ೧೧೮: ಸಮಸ್ಯಾಪೂರಣ”

 1. ಹೊಣೆಯೆನ್ನದೀ ಲೋಗರನು ಕಾವುದೆಂದಾ ಕ-
  ರುಣಸಾಗರವು ಕಾಲಕಾಲಕ್ಕೆ ತಾಂ|
  ಉಣಿಸವರಿಗೆಂದು ಸೂರ್ಯಂಗೆ ನೀಡಿರುವಂಬು-
  ಕಣಮಲ್ತೆ ಸಾಗರನ ಸನ್ನಿಧಾನಂ||

 2. ಎಣೆಯಿಲ್ಲ ವಿಸ್ತಾರವರಬಿಸಾಗರಕೆ ಕೇಳ್ (Arabian Sea)
  ಗಣಿಸೆನಿತು ದೇಶಂಗಳದರ ತಟದೊಳ್|
  ಎಣಿಸಲಾ ಆಫ್ರಿಕಾ ಖಂಡದಿಂ ವರೆಗೆ ಕೂಂ-
  ಕಣಮಲ್ತೆ ಸಾಗರನ ಸನ್ನಿಧಾನಂ||

 3. ಇಣುಕಿ ನೋಡಲು ಸಾಗರದ ತಳದೊಳೆಲ್ಲೆಲ್ಲು
  ಬಣಮಲ್ತೆ ಜಲಜೀವರಾಜಿಯದಕೆ|
  ನುಣುಪುಪಾಚಿಗ್ರಾಸವಿಹುದಮಿತವದಕೆ ಚಿ-
  ಕ್ಕಣಮಲ್ತೆ ಸಾಗರನ ಸನ್ನಿಧಾನಂ|| (ಚಿಕ್ಕಣ=slippery)

 4. ಕುಣಿವಲೆಗಳಾಕ್ರಮಕೆ ಸಿಕ್ಕು ನುಣುಪಾಗಿ ಮೇಣ್
  ಮಣಭಾರದಶ್ಮಗಳು ಕಿರಿದಾದವೇಂ|
  ಮಿಣಮಿಣನೆ ಪೊಳೆವ ಕೋಟ್ಯಂತರದ ರಸದೃಷ- (ರಸ=gold. ದೃಷತ್ಕಣ=pebble)
  ತ್ಕಣಮಲ್ತೆ ಸಾಗರನ ಸನ್ನಿಧಾನಂ||

  • ಎಲ್ಲ ಪೂರಣಗಳೂ ಚೆಲುವಾಗಿವೆ. ಕೀಲಕಪದಗಳಿಗಾಗಿ ಆನ್ ಲೈನ್ ಡಿಕ್ಷನರಿ ಚೆನ್ನಾಗಿ ಬಳಕೆಗೆ ಬಂದಿದೆ:-)

 5. ಕುಣಿಪ ಶಿವನೇ ಬಡುಗಣದ ಬೆಟ್ಟಮೆಟ್ಟೆ ತೆಂ-
  ಕಣಮಲ್ತೆ ಸಾಗರನ ಸನ್ನಿಧಾನಂ
  ಅಣುವನಾಣ್ಮಂ ದಾಂಟಿದನ್ನೆಗಂ ಕ್ಷಿತಿವೆತ್ತ
  ಕಣಕಣಂಗಳ್ ಸಂಸ್ಕೃತಿಯ ಪಾಡುಗುಂ

  ಹಿಮಾಲಯದಿಂದ ಹಿಂದೂಮಹಾಸಾಗರದವರೆಗೆ ಪ್ರತಿ ಕಣಕಣವು (ಶಿವ, ರಾಮರ ಆದರ್ಶದ) ಸಂಸ್ಕೃತಿಯನ್ನು ಹಾಡುವುದು

 6. ತೃಣಶೈಲಜಡಚೇತನಂಗಳೊಂದೆಬುವರ್
  ಗಣಿಪರಧ್ಯಾತ್ಮಮಂ ಸೂಜಿಮೊನೆಯೊಳ್
  ಎಣೆಯಿರ್ಪುದೇಂ ದ್ವೈತವಾದಿಗಳ್ಗೆ ಪ್ರತ-
  ರ್ಕಣಮಲ್ತೆ ಸಾಗರನ ಸನ್ನಿಧಾನಂ

  ಪ್ರತರ್ಕಣ – reasoning

  ತೃಣಶೈಲಜಡಚೇತನಂಗಳೊಂದೆಬುವರ್ – ಅದ್ವೈತಿಗಳು

  ಅದ್ವೈತಿಗಳಿಗೆ ಅಧ್ಯಾತ್ಮವು ಸೂಜಿಮೊನೆಯಷ್ಟೆ (ನಿರ್ದಿಷ್ಟವಾದದ್ದು), ದ್ವೈತಿಗಳಿಗೆ (ನಾಮ ರೂಪಭೇದಾದಿಗಳ) ತರ್ಕವು ಸಾಗರದ ಸನ್ನಿಧಾನದಂತೆ (ವಿಸ್ತಾರವದದ್ದು)

 7. ಉಣುವುದುಡುವೆಂಬೆರೆಡ ಸಂಚಯದ ಜೋಗಿಗಂ
  ಮಣಿದಪೆಂ ಮುಕ್ತಚೇತನದಧಿಪಗಂ
  ಗುಣಸತ್ತ್ವಮರಸುತ್ತೆ ಕಾಣಲ್ಕವಂ ರಜ:-
  ಕಣಮಲ್ತೆ ಸಾಗರನ ಸನ್ನಿಧಾನಂ

  ಇಂದಿನ ಊಟ/ಬಟ್ಟೆಯನ್ನಷ್ಟೆ ಸಂಚಯ ಮಾಡುವ ಜೀವನ್ಮುಕ್ತನಾದ ಯೋಗಿಗೆ ನಮಿಸುತ್ತೇನೆ, ಸಾತ್ತ್ವಿಕಗುಣವನ್ನಷ್ಟೇ ಕಾಣವ ಅವನಿಗೆ (ಸಂಪತ್ತಿನ ಆಕರವಾದ) ಸಾಗರನ ಸನ್ನಿಧಾನ(ವೂ ಕೂಡ) ಧೂಳಿನ ಸಮವಲ್ಲವೇ?

  ರಜ:ಕಣ – dust

 8. ಮೊಣಕೈಗಳಿಂದೆ ಪಾಲ್ವಟ್ಟೆಯಂ ಪೇಳ್ಗುಮಾ
  ಚಣಮಿರ್ಪುದೆಮಗೆ ಮನ್ವಂತರಂಗಳ್
  ಮಣಿದಪೆಂ ಗಡ ವಿರಾಟ್-ಪುರುಷಂಗೆ ಕಾಲ್ವೆರಳ
  ಕಣಮಲ್ತೆ ಸಾಗರನ ಸನ್ನಿಧಾನಂ

  ಮೊಣಕೈಗಳಿಂದೆ ಪಾಲ್ವಟ್ಟೆಯಂ ಪೇಳ್ಗುಮಾ – ಕ್ಷೀರಪಥವನ್ನು (milkyway) ತನ್ನ ಮೊಣಕೈಗಳಿಂದ (ಅಳೆದು) ಹೇಳುವನು, ಅವನ ಕ್ಷಣವು ನಮಗೆ ಮನ್ವಂತರವು, ಅವನ ಕಾಲ ಬೆರಳ ಧೂಳಿಯು ಸಾಗರನ ಸನ್ನಿಧಾನವು, ಅಂತ ವಿರಾಟ್ ಪುರುಷನಿಗೆ ನಮಿಸುತ್ತೇನೆ

  • ಭವ್ಯವಾದ ಪರಿಹಾರ

  • ನನ್ನ ಸವರಣೆಯನ್ನು ಪರಿಶಿಲಿಸಿ:

   ———— ಪಾಲ್ವಟ್ಟೆಯನ್ನಳೆವನೈ
   ಚಣಮಿರ್ಪುದವಗೆಮ್ಮ ಮನ್ವಂತರಂ
   ಮಣಿದಿರ್ಪೆನಾ ವಿರಾಟ್-ಪುರುಷಗಾತನ ಪಾದ-
   ——

   • ಸವರಣೆ ಯುಕ್ತವಾಗಿದೆ, ಧನ್ಯವಾದಗಳು ಪ್ರಸಾದು 🙂

    ಮೊಣಕೈಗಳಿಂದೆ ಪಾಲ್ವಟ್ಟೆಯನ್ನಳೆವನೈ
    ಚಣಮಿರ್ಪುದವಗೆಮ್ಮ ಮನ್ವಂತರಂ
    ಮಣಿದಿರ್ಪೆನಾ ವಿರಾಟ್-ಪುರುಷಗಾತನ ಪಾದ-
    ಕಣಮಲ್ತೆ ಸಾಗರನ ಸನ್ನಿಧಾನಂ

 9. ಋಷ್ಯಾಶ್ರಮಗಳಲ್ಲಿ ಜಿಂಕೆಗೆ ವಿಶೇಷ ಮಾನ್ಯತೆ. ಅವು ಆಶ್ರಮದ ಒಳಾಂಗಣಗಳಲ್ಲೆಲ್ಲ ಓಡಾಡಿಕೊಂಡಿರುತ್ತವೆ.

  ಗಣಿಪುದೊಳ್ಳಿತು ಸೃಷ್ಟಿಯೊಳಗೆಲ್ಲ ಸಮರೆಂದು
  ಗಿಣಿ-ಸಿಂಹ-ಪಾವಾನೆ-ಮನುಜರೆಂದುಂ| (As it happens in Rishyashramas)
  ನುಣುಪುಬಗೆಯಿಂ ಹೃದ್ಯ! ತಾಪಸಾಶ್ರಮಗಳಂ-
  ಕಣಮಲ್ತೆ ಸಾಗರನ (ಜಿಂಕೆಯ) ಸನ್ನಿಧಾನಂ||

  ಕನ್ನಡದಲ್ಲಿ ’ಜಿಂಕೆ’ ನಪುಂಸಕಲಿಂಗವೇ. ಇಲ್ಲಿ ಪುಲ್ಲಿಂಗವಾಗಿ ಗಣಿಸಿದ್ದೇನೆ. ಮನ್ನಿಸಿ.

  • ನುಣುಪುಭಾವ ಎಂಬುದು ಅರಿಸಮಾಸ; ಸಾಗರ ಎಂದರೆ ಜಿಂಕೆಯೇ?

  • ಅರಿಸಮಾಸವನ್ನು ಸರಿಪಡಿಸಿದ್ದೇನೆ.
   ಮೊದಲ ೪ ಪದ್ಯಗಳಲ್ಲಿ ನನ್ನ ಕೈಹಿಡಿದ ನಿಘಂಟು ಇಲ್ಲಿ ನನ್ನ ಕೈಬಿಟ್ಟಿತೆ! http://www.spokensanskrit.de ಇಲ್ಲಿ ಹಾಗೆಂದು ಅರ್ಥೈಸಿದ್ದಾರೆ.

   • ಪ್ರಸಾದು – ಅದು ಒಂದು ಬಗೆಯ ಜಿಂಕೆಯ ಬದಲಿಗೆ, ಒಂದು ಜಿಂಕೆಯಾಗಿರಬಹುದು 🙂

 10. ಸೋಮ ಪ್ರಸಾದರ ಈ ಭಾರೀ ಪದ್ಯಗಳ ಮಳೆಯಲ್ಲಿ ನನ್ನದೊಂದು ಪನಿ

  ಗಣಿಕೆಗೂ ಮೀರಿರ್ದ ಜಗದವಿಸ್ತಾರವನು
  ಪಣದಿಂದ ಮಾನವನಳೆವ ಮೂಢನು|
  ಚಣದೆ ಮೂರ್ಲೇಕಮನ್ನಾಡಿಸುವ ದೇವನಿಗೆ
  ಕಣಮಲ್ತೆ ಸಾಗರನ ಸನ್ನಿಧಾನಂ|

  • ಒಳ್ಳೆಯ ಪರಿಹಾರ.”ಮೂರ್ಲೋಕವನ್ನಾಡಿಸುವ…’ ಎಂಬುದಕ್ಕಿಂತ ಮೂಜಗಮನಾಡಿಸುತಿರ್ಪ ಎನ್ನುವ ಸವರಣೆ ಯುಕ್ತ.

  • (ಇ)ದೇನೆಂಬೆ ಚೀದಿ ನೀ, ಜಗದವಿಸ್ತಾರವದು
   ಪೀನಮೇಂ ಮೀರ್ವವೋಲ್ ಗಣಿಕೆಯರನುಂ!
   ಐನಾತಿ ಕಸುಬದೈ ದೇಶ-ಕಾಲಾತೀತ
   ಮಾನಪ್ರಚುರೆ ಸಲ್ವಳೆಲ್ಲೆಲ್ಲಿಯುಂ!! 😉
   —–
   ಸೋಮನೀವರೆಗೆ ಕಬ್ಬವ ನಾಲ್ಕ ರಚಿಸಿಹನ್
   ನಾಮಾಂಕ ಹಾದಿರಂಪನುಮೈದನುಂ|
   ಪೂಮಾಲೆಯಂ ಸಲ್ಲಿಸಿಹೆ ಕಕ್ಕುಲತೆಯಿಂದೆ
   ಜಾಮಿಯಂಗಿದು ನ್ಯಾಯಮೇನು ಚೀದಿ?|
   (ಜಾಮಿ = ಅಣ್ಣ/ ತಮ್ಮ/ ಕಸಿನ್)

 11. ಪಣತೆಯೊಲ್ ಬೆಳಗುತಿರಲಂಧಕಾರವನು ಸ
  ದ್ಗುಣಿಗಳೊಪ್ಪದ ಸಂಗಮಿಂದು ಬಾಳೊಳ್
  ಚಣಗಾಲಮೆಂಬೆಣಿಕೆಯೇಂ?ಸಖಿಯೆ,ಕಾವ ಕಂ-
  ಕಣಮಲ್ತೆ?ಸಾಗರನ ಸನ್ನಿಧಾನಂ!
  (ದೊಡ್ಡವರ ಸಾಮಿಪ್ಯವು ಬದುಕಿನಲ್ಲಿ ಚಣಕಾಲ ದೊರೆತರೂ,ಅದು ಕಾಯುವ ಕಂಕಣ)
  ಸಾಗರ=ದೊಡ್ಡವ,ಗುಣಸಾಗರ)

  • ತುಂಬ ಸೊಗಸಾದ ಪೂರಣ. ” ಅಂಧಕಾರವನು…” ಎಂದು ತಿದ್ದಿದಲ್ಲಿ ನಡುಗನ್ನಡಕ್ಕೆ ಹೆಚ್ಚು ಸಹಜವಾಗುವುದು.

 12. ಇಣುಕಿತೇಂ ತನಿವೆಳಕು ದಿನನಿತ್ಯ ಬದುಕಿನೊಳ್
  ಕುಣಿಕೆ ಮೀಂಗಳಿರದಿರೆ ಬೆಸ್ತಕುಲದಾ?
  ತಣಿಸುತಲೆ ಬಯಕೆಯಂ,ಸಂತೈಸೆ,ಜೀವನದ
  ಕಣಮಲ್ತೆ?ಸಾಗರನ ಸನ್ನಿಧಾನಂ?
  ಕಣ=ಕಿಡಿ

 13. ಗುಣವಂತರಿಂಗಾವ ಕಾಯಕಮಸಾಧ್ಯಮಯ್
  ಗಣಿಸಲ್ಕೆ ಸಿಗದೊಂದುಮೀ ಧರಾತಳದೊಳ್ |
  ಚಣದೊಳ್ ಸಮಂತು ಪೀರಿದಗಸ್ತ್ಯಗಂ ನೀರ
  ಕಣಮಾಯ್ತು ಸಾಗರನ ಸನ್ನಿಧಾನಂ ||

 14. ಒಣಭೂಮಿಯೊಳ್ವಾಸಿಪರ್ಗೆ ತೋಷವಹುದುಂ
  ಪಣಸಿಕ್ಕವೊಲ್ ರಾಶಿಯಂಬುವಿಂದಂ
  ತೊಣೆಯೊಳಿರ್ಪಮರಿಗೇಂ ಬೆಲೆಯಿದರ? ಮತ್ತವಗೆ
  ಕಣಮಲ್ತೆ ಸಾಗರನ ಸನ್ನಿಧಾನಂ?
  ತೊಣೆ=ಒಡನಾಟ
  (ಸಮುದ್ರದ ನೆರೆಯಲ್ಲಿರುವವರಿಗೆ ಅದರ ಸಾಮಿಪ್ಯವು ತೀರಾ ಸಣ್ಣ ವಿಷಯ)

  • What a punch! Permit me to rephrase it:
   ಒಣಭೂಮಿಯೊಳು ವಾಸಿಪರ್ಗಂಬುರಾಶಿ ತಾಂ
   ಪಣಸಿಕ್ಕವೊಲ್ ತೋಷ ನೀಡುಗೆಂದುಂ|
   ತೊಣೆಯಂಗೆ ವಾರ್ತ್ತವದರಸ್ತಿತ್ವವವನಿಂಗೆ (ವಾರ್ತ್ತ=ordinary)
   ಕಣಮಲ್ತೆ ಸಾಗರನ ಸನ್ನಿಧಾನಂ||

 15. ರಣರಣಕದಿಂದಿಕ್ಕೆಲದೆ ದೇವದಾನವರ
  ಗಣಮಂಬುನಿಧಿಮಥನಲೀಲೆಗಂ ತೊಡಗಲ್ |
  ಗುಣಮಾದನಾ ಶೇಷ ಗಿರಿಯೆ ಕಡೆಗೋಲಾಯ್ತು
  ಕಣಮಾಯ್ತು ಸಾಗರನ ಸನ್ನಿಧಾನಂ ||

  ಕಣ = ಕ್ರೀಡಾಂಗಣ.
  ರಣರಣಕ = ಅತ್ಯುತ್ಸಾಹ.

  • ಛೆ! ನಾನು ರೈತ. ’ಕಣ’ ಎಂಬುದನ್ನು ಅಂಗಣ ಎಂಬ ಅರ್ಥದಲ್ಲಿ ಸದಾ ಕೇಳಿಬಲ್ಲವನು. ಆದರೂ ಇಲ್ಲಿ ಹಾಗೆ ಬಳಸಲು ಹೊಳೆಯಲಿಲ್ಲ. ಛೆ!

 16. ಪ್ರಣಮಿಸುತೆ ರಾಮಗಂ ಕಡುಪಿಂದೆ ಮುನ್ನೀರ್ಗೆ
  ಗುಣಿಸಲ್ಕೆ ಸೇತುವಂ ಸೇರ್ದ ಮಂಗಗಳಾ |
  ಗಣದ ಲೋಕಕಮಕ್ಕಜಮನೀವ ಸಾಸಕಂ-
  ಕಣಮಾಯ್ತು ಸಾಗರನ ಸನ್ನಿಧಾನಂ |
  ಸಾಸಕೆ ( ಸಾಹಸಕ್ಕೆ ) ಅಂಕಣ ( ಸ್ಥಳ )

  • ಪೆಜತ್ತಾಯರೆ – ಎಲ್ಲ ಪೂರಣಗಳೂ ಇಷ್ಟವಾಯಿತು. ಸಾಸಕಂಕಣಮಾಯ್ತು ಎಂಬ ಪ್ರಯೋಗ ಬಹಳ ಚೆನ್ನಾಗಿದೆ.

  • ಹೌದು ರಾಮ್. ಇವರ ಎಲ್ಲ ಪೂರಣಗಳೂ ಪ್ರಶಸ್ತವಾಗಿವೆ.

  • Ramachandra-PrasAdarige DhanyavAdagaLu 🙂

 17. ತೃಣಮಾಗೆ ಜೀವನವು ಗ್ರಹಚಾರದಿಂ ಬಿದಿಯು
  ಹಣಿದಿರ್ದು ಕಾಡಿರ್ದುದೈ ಪಾಪಿಯಂ
  ಗಣಿಸುವನ್ನೆಗು ಬರಿಯ ಜಲಮಾದ ದುರ್ದಶೆಗೆ
  ಕಣಮಲ್ತೆ ಸಾಗರನ ಸನ್ನಿಧಾನಂ

  [ಸಾಗರದಲ್ಲಿ ಕಳೆದು ಹೋದವನ ದುರ್ದಶೆಯ ಬಗೆಗೆ]

 18. ಭಣಭಣಿಪ ರತ್ನಂಗಳಾಕರಂ ಪೊರೆಯುವಂ
  ಗುಣಗಾತ್ರದಾ ತಿಮಿಂಗಳನಿಕರಮಂ
  ಅಣುವ ಪೋಲುವ ಜೀವರಾಶಿಗಳಿಗಿರ್ಕೆ ಕಣ-
  ಕಣಮಲ್ತೆ ಸಾಗರನ ಸನ್ನಿಧಾನಂ

 19. ಪಣಮಿರ್ದೊಡೇಂ ಗೆಯ್ಮೆಯೌದ್ಯೋಗಮುತ್ಕರಿಸು-
  ತಣಿಗೊಳಿಸಲಾ ಬೃಹಜ್ಜಲಯಾನಮಂ
  ಚಣದ ವಿಧಿಯಾಟಕ್ಕೆ ವಿಪ್ಲವಮೆ ದಿಟವು ಕಣ-
  ಕಣಮಲ್ತೆ ಸಾಗರನ ಸನ್ನಿಧಾನಂ

  ಟೈಟಾನಿಕ್ ಹಡಗು ಮುಳುಗಿದಬಗ್ಗೆ ಪೂರಣ

 20. ಗುಣವಂತ ರಾಮನೊಡೆ ಸಾನ್ನಿಧ್ಯ ಬೇಡಲ್ ಕ-
  ರುಣಿಸಿರ್ದನೈ ಬಿಚ್ಚುಹೃದಯದಿಂದೆ
  ಋಣದಿ ಗುಂಡಿಗೆಯಲ್ಲೆ ಬಂಧಿಸಿದ ಹನುಮಂಗೆ
  ಕಣಮಲ್ತೆ ಸಾಗರನ ಸನ್ನಿಧಾನ

  [ಸಾಗರ = ಸಗರ ವಂಶಜ = ರಾಮ]
  [ಹನುಮ ರಾಮನ ಸಾನಿಧ್ಯವನ್ನು ಮಾತ್ರ ಕೇಳಿದ. ಅದನ್ನು ರಾಮ ಬಿಚ್ಚುಹೃದಯದಿಂದ ಕರುಣಿಸಿದ. ಆದರೆ, ತಾನು ಗಳಿಸಿದ ಋಣದಿಂದ ರಾಮನನ್ನೇ ಗುಂಡಿಗೆಯಲ್ಲಿ ಬಂಧಿಸಿದ ಹನುಮನಿಗೆ ಸಾಗರನ (ರಾಮನ) ಸನ್ನಿಧಾನ ಕಣಮಾತ್ರವಲ್ತೆ?]

  • ಅದು ’ಸಾನ್ನಿಧ್ಯ’ ಎಂದಾಗಬೇಕು.

   • ಸರಿಪಡಿಸಿದ್ದೇನೆ. ಧನ್ಯವಾದ.

    • ಇದೀಗ ಸರಿಯಾಯಿತು. ಇನ್ನು ಟೈಪೊ ಸರಿಪಡಿಸಿಧ 😉 ರಾಯಿತು ಅಷ್ಟೆ!

  • ಗುಣವಂತ ಎಂಬುದು ಸಾಧುರೂಪ. ಇದರಂತೆಯೇ ಧನವಂತ, ಬಲವಂತ, ಯಶೋವಂತ ಇತ್ಯಾದಿ. ಅಕಾರಾಂತೇತರವಾದ ಪದಗಳು ಮಾತ್ರ ಮತ್ವವನ್ನು ಹೊಂದುತ್ತವೆ. ಉದಾ: ಶ್ರೀಮಂತ, ಧೀಮಂತ ಇತ್ಯಾದಿ. ಆದರೆ ಕನ್ನಡದಲ್ಲಿ ಎಷ್ಟೋ ಬಾರಿ ಇವೂ ವತ್ವವನ್ನೇ ತಳೆಯುತ್ತವೆ. ಉದಾ: ಸಿರಿವಂತ, ಮತಿವಂತ, ನೀತಿವಂತ ಇತ್ಯಾದಿ.

 21. ಪೆಜತ್ತಾಯರ ಪರಿಹಾರಗಳು ನಿಜಕ್ಕೂ ತುಂಬ ಸೊಗಸಾಗಿವೆ. ಅಂತೆಯೇ ಸೋಮ, ಪ್ರಸಾದು, ಕಾಂಚನಾ ಮುಂತಾದವರ ಅನರ್ಗಳಪದ್ಯಪ್ರವಾಹವೂ ಇತ್ತೀಚೆಗೆ ಕುದುರಿಕೊಂಡ ಮುಂಗಾರು ಮಳೆಯನ್ನು ನೆನಪಿಸಿವೆ. ರಾಮ್ ಸಹ ಬಹುದಿನಗಳ ಬಳಿಕ ಪದ್ಯಪಾನಕ್ಕಾಗಿ ಚಷಕವನ್ನು(goblet) ಚಾಚಿರುವುದು ಮುದಾವಹ:-)
  ಇದೀಗ ನನ್ನದೂ ಒಂದು ಪರಿಹಾರ; ಇದಕ್ಕೆ ನಿಮ್ಮೆಲ್ಲರದೇ ಪ್ರೋತ್ಸಾಹ:

  ಗಣಿಸಲಿನ್ನೂ ಸೋಮವಾರಮಿಂದಾಗಳೇ
  ಗಣನೆಗೆಟುಕದ ಪದ್ಯಪಾನದಾನ !
  ಗುಣಗಣ್ಯಕಾವ್ಯಾಮೃತಾಬ್ಧಿಯೆದುರೆಂದಿಗಂ
  ಕಣಮಲ್ತೆ ಸಾಗರದ ಸಂನಿಧಾನ ||

  • ಪ್ರೋತ್ಸಾಹ ದೊರೆತ ನೆಪವೊಡ್ಡಿ, ಪದ್ಯಪಾನಿಗಳಿಗೆ ಪ್ರೋತ್ಸಾಹಸಾಗರವನ್ನೇ ಕರುಣಿಸಿದ ಬಗೆ..ಚೆನ್ನಾಗಿದೆ.

  • DhanyavAdagaLu sir 🙂 meccuge sUsuva padyavannE pUraNavannAgisida rIti tumbA iShTavAyitu 🙂

 22. ಗಣಿಸುವರೆ ಗಾತ್ರಗಳ ಹಿರಿಕಿರಿಯ ಭೇದ ನಿ –
  ರ್ಗುಣಿಗಳ್ಗೆ ಸಮವೆಲ್ಲವೀ ವಿಶ್ವದೊಳ್
  ಅಣುಮೇಣು ಬ್ರಹ್ಮಾಂಡದಂತರವ ಕಾಣದಗೆ
  ಕಣಮಲ್ತೆ ಸಾಗರನ ಸನ್ನಿಧಾನ

 23. ಪಣತೊಟ್ಟು ಬಿಜ್ಜೆಯಂ ಕಲಿಯುತ್ತುಮನುದಿನಂ,
  ತೃಣಮೆಂದು ತೊರೆಯುತ್ತೆ ಭೋಗಂಗಳಂ,|
  ಮಣಿದೆಂಬೆನೀ ಜ್ಞಾನಶರಧಿಯಿದಿರೊಳ್ ಸದಾ,
  ಕಣಮಲ್ತೆ ಸಾಗರನ ಸನ್ನಿಧಾನಂ ||

 24. ಮಂಜುಭಾಷಿಣಿವೃತ್ತಕ್ಕೆ ಅಳವಡಿಸಿಕೊಂಡಿದ್ದೇನೆ:

  ಸೆಣಸುತ್ತುಮಾಕ್ರಮಿಪರನ್ನು ಕಾವೆವೌ
  ಹಣೆಯಿಟ್ಟು ವಂದಿಪೆವು ಭಾರತೀಕ್ಷಿತೀ|
  ಭಣಿತಂ ಹಿಮಾಲಯವದುತ್ತರಕ್ಕೆ ತೆಂ-
  ಕಣಮಲ್ತೆ ಸಾಗರನ ಸನ್ನಿಧಾನ ತಾಂ|

  ‘ಭಾರತೀಕ್ಷಿತೀ’ ಸರಿಯೆ?

  • ಆಹಾ! ತುಂಬ ರಚನಾತ್ಮಕವಾದ ಅಳವಡಿಕೆ. ಸಮಸ್ಯಾಪಾದದ ರೂಪಣವೂ ಪರಿಹಾರವೂ ಚೆನ್ನಾಗಿವೆ. ಭಾರತೀಕ್ಷಿತೀ ಎಂಬ ಸಂಬೋಧನರೂಪವೂ ಸಾಧು. ಸಮಸ್ಯಾಂತದಲ್ಲಿ ’ಸಂನಿಧಾನಮಯ್’ ಎಂದೋ ’ಸಂನಿಧಾನಮೌ’ ಎಂದೋ ಸರಿಸಿಕೊಂಡರೆ ಹಳಗನ್ನಡದ ಚೆಲುವು ಎದ್ದು ತೋರೀತು.

  • ನಿಮ್ಮ ಈ ಮಂಜುಭಾಷಿಣೀಸಮಸ್ಯಾಪಾದವು ವೃತ್ತರಚನಾಪಕ್ಷಪಾತದ ನನ್ನನ್ನು ಸಹಜವಾಗಿಯೇ ಪೂರಣಕ್ಕೆ ತೊಡಗಿಸಿದೆ:

   ಗುಣರಾಗಿಯಪ್ಪ ಸಖನೊಲ್ಮೆ ಸಂದಿದರಲ್
   ಋಣಮುಕ್ತಭಾವಮೆರ್ದೆಯಲ್ಲಿ ಪೊಂಗಿರಲ್ |
   ಘೃಣಿಯಸ್ತಮಾನದೆ ಕೃತಾರ್ಥರಮ್ಯಚಿ-
   ಕ್ಕಣಮಲ್ತೆ ಸಾಗರನ ಸಂನಿಧಾನಮೇ ||

   (ಒಳ್ಳೆಯ ಜೀವನಸಂಗಾತಿ ದಕ್ಕಿರುವಾಗ ಹಾಗೂ ಯಾವುದೇ ಹೊಣೆ-ಋಣಗಳಿಲ್ಲದ
   ಬಾಳು ಸಿದ್ಧಿಸಿರುವಾಗ ಸೂರ್ಯಾಸ್ತದ ಕಾಲದಲ್ಲಿ ಕಾಣಸಿಗುವ ಸಮುದ್ರ ತುಂಬ ಸುಂದರ ಎಂದು ತಾತ್ಪರ್ಯ)

   • ಹೊಣೆ-ಋಣಗಳಿರದ ದಾಂಪತ್ಯದಾಯತನಕ್ಕ-
    ಮಣಿಗೊಳ್ಳುತಮೆರಿಕೆಗೆ ಪೊರಟೆಯೀಗಳ್|
    ಘೃಣಿಯಸ್ತವನ್ನುಮಟ್ಲಾಂಟಿಕೊಳೊ ಪೆಸಿಫಿಕೊಳೊ
    ಗೆಣೆಯ/ಗಣಿಯೆ ನೋಡುವೆ ಯಾರ ಸಾಹಿತ್ಯದೊಳ್?! 😉

  • ’ಕಣ’ವಿಲಕ್ಷಣ ದಕ್ಷಿಣಾಂಕುರಾರ್ಪಣ ಸೊಗಂ !

 25. ತಣಿಪ ತೆರೆನೊರೆ ಮೊರೆಯೆ, ಮರೆಯ ಮಂಥನಕೆ ಕಾ-
  ರಣಮಲ್ತೆ ಸಾಗರನ ಸಂವಿಧಾನಂ ।
  ಚಣಚಣವು ಲವ-ಲವಣ- ಲಾವಣ್ಯ-ಲಾಸ್ಯ ದಂ-
  ಕಣಮಲ್ತೆ ಸಾಗರನ ಸನ್ನಿಧಾನಂ ।।

  • ಬೆಸಪಾದಗಳಲ್ಲಿ ಲಘುಬಾಹುಳ್ಯವಿದ್ದರೂ ಶ್ರವಣಕ್ಲೇಶವಿಲ್ಲ. ಗಣೇಶರು ಹೇಳಿರುವ ‘ಪದಪದ್ಧತಿ’ ಇದೇ ಇರಬೇಕು. ಪದ್ಯ ಚೆನ್ನಾಗಿದೆ. ನಿಮ್ಮ ಛಾಪು ಇದೆ.

  • ಬಣದೊಳುಟ್ಟಂಕಣಿಪ ಚೌಪದೋತ್ಕಣದ ಕಂ
   ಕಣಮತರ್ಕಣಮೆ ಪೂರಣರಣದೊಳೇಂ

  • “ಪ್ರೇರಣದ ಒಕ್ಕಣೆಯೆ ಪೂರಣಕೆ ಕಾರಣವು” – ಎಲ್ಲರಿಗೂ ಧನ್ಯವಾದಗಳು.

 26. ಒಳ್ಳೆಯ ಪದಪದ್ಧತಿಯೊಡವರಿದ ಪೂರಣ.

 27. ಅಣುಗಳೊಂದುತ್ತೆ ನವನವಸೃಷ್ಟಿಯಾಗೆ,ಕಾ-
  ರಣಮಿರಲ್ ಸೂಕ್ಷ್ಮಮೇ ಸ್ಥೂಲಕೆಂದುಂ,|
  ಋಣದಿಂದೆ ಶರಧಿ ತನ್ನೊಡಲ ಪನಿಪನಿಗೆ,ಜಲ-
  ಕಣಮಲ್ತೆ ಸಾಗರನ ಸನ್ನಿಧಾನಂ ||

  • ಜಲಕಣವನಾಗಸಕ್ಕಿತ್ತವರದಾರೆಂಬೆ
   ಜಲಧಿಯೇ ತಾನಲ್ತೆಲಿನ್ನು ಋಣಮೇಂ|
   ಸಲಿಲವಹುದೇಂ ಕ್ಷಾರವಿಳಿವಾಗ ಮೋಡದಿಂ
   ಸಲೆ ಋಣಿಗಳಾವಲ್ತೆಲರ್ಕನಿಂಗಂ||

 28. ತಣಿಜಗದ ಬೆಣಚಾಗಿ,ಬಿಸಿಲಾಗಿ,ಬೆಮರಿರಲ
  ರುಣ,ಸೌಖ್ಯವಾತನದ ಕಾಯಲೆಂದೇ,
  ಉಣಿಸೆ ತಂಪನು ದೇವ,ರವಿಗಿತ್ತ ವಿರಮದಂ
  ಕಣಮಲ್ತೆ?ಸಾಗರನ ಸನ್ನಿಧಾನಂ?

  • ಪರ್ಸೆಪ್ಶನ್ ಚೆನ್ನಾಗಿದೆ. ಬೆಮರಲ್ಕರುಣ = ಬೆಮರಲ್ಕೆ+ಅರುಣ = ’ಬೆವರುವುದಕ್ಕೋಸ್ಕರ’ ಎಂದಾಗುತ್ತದೆ. ನೀವು ಹೇಳಚಿಚ್ಛಿಸಿರುವುದು ’ಬೆವರುತ್ತಾನಾಗಿ’ ಅಲ್ಲವೆ?

 29. ಋಣಮೆನುವ ಜೀವಾರ್ಥವಂ ಕಾಮದಿನೆ ಪೊಂದಿ
  ಎಣೆಮೀರ್ದು ಧರ್ಮಕಾರ್ಯವನೆ ಗೈದು
  ಕುಣಿದು ಕಡೆಯೊಳ್ ನದಿಯು ಕಾಂಬತೀ ಪುಣ್ಯದಂ
  ಕಣಮಲ್ತೆ?ಸಾಗರನ ಸಂನಿಧಾನಂ?
  ಋಣ=ನೀರು

 30. ಎಣಿಸಲಾಗದ ತೆರೆಯನಳಿಸಲಾರದ ತರವು
  ಗುಣಿಸಲಾ ಹರವ ತಾ ಮಣಿಯೆ ನರನುಂ ।
  ಅಣಿಗೈದುದಾರೋಹದವರೋಧ(ಹ)ವಿದು ವಿಲ-
  ಕ್ಷಣಮಲ್ತೆ ಸಾಗರನ ಸನ್ನಿಧಾನಂ ।।

  • ಸಮಸ್ಯಾಪಾದವನ್ನೇ ಬದಲಾಯಿಸಿಬಿಟ್ಟಿರಿ (ಷಣಮಲ್ತೆ …..)! ಪದ್ಯದ ಒಟ್ಟು ತಾತ್ಪರ್ಯವಾಯಿತು. ಆದರೆ ‘ಆರೋಹದ ಅವರೋಹ’ ಎಂದರೇನು?

   • “ವಿಲಕ್ಷಣ” = “ವಿಲಕ್ಕಣ” ವಾಗಬಹುದೇ ? ಇಲ್ಲದಿದ್ದಲ್ಲಿ ಪದ್ಯವನ್ನೇ ಬದಲಿಸಬೇಕಾದೀತು.
    “ಆರೊಹದವರೋಧ(ಹ)” = ಸಾಗರದ ಅಲೆಗಳ ಏರಿಳಿತವನ್ನು ಸೂಚಿಸಿದ ಬಗೆ – ಸರಿಯಾಗಲಿಲ್ಲವೇ?
    (“ಅಣಿಗೊಳಿಸುತಣಗಿಸಿಹ ತೆರೆತೆರೆಯಬಗೆ ವಿಲ-ಕ್ಷಣ.. ” ಎಂದು ಮೊದಲು ಬರೆದದ್ದು. ಲಘುಬಾಹುಳ್ಯ ತಪ್ಪಿಸಲು ಬದಲಿಸಿದ್ದು.)

 31. ಉಪ್ಪಿನ ಜಾಡಿಯೇ ಸಾಗರನ ಸನ್ನಿಧಾನ …

  ಎಣಿಸಿದೊಳ್ ಸಿಗದ ರುಚಿ ಗುಣಿಸಿದೊಳ್ ಬರದು ಕಡೆ
  ಗಣಿಸಿದೊಳ್ ವ್ಯಂಜನಕೆ ಸವಿರುಚಿಯದಿರದು I
  ಅಣಕಿಸುತ್ತಿರ್ಪಡುಗೆ ಮನೆ ಲವಣ ಷಡ್ರಸದ
  ಕಣಮಲ್ತೆ ಸಾಗರನ ಸನ್ನಿಧಾನಂ II

  ಉಪ್ಪು ವ್ಯಂಜನದಲ್ಲಿ ಸರಿಯಾದ ಪ್ರಮಾಣದಲ್ಲಿದ್ದಾಗ (ಎಣಿಸಿದೊಳ್-ಯೋಚಿಸಿದರೆ ) ತಿಳಿಯುವುದಿಲ್ಲ . ಜಾಸ್ತಿಯಾದಾಗ (ಗುಣಿಸಿದೊಳ್ ) ಮತ್ತು ಹಾಕಲು ಮರೆತಾಗ ಸವಿರುಚಿ ಬಾರದು. (ಆ ಸಂದರ್ಭದಲ್ಲಿ ಉಪ್ಪಿನ ಬೆಲೆ ಗುರುತಿಸಲ್ಪಡುತ್ತದೆ). ಪದ್ಯ ಪಾನದಲ್ಲಿ ಈ ಸಮಸ್ಯೆ ನೋಡಿದ ಮೇಲೆ ಅಡುಗೆ ಮನೆಯೊಳಗೆ ಉಪ್ಪಿನ ಜಾಡಿಯೇ ನನಗೊಂದು ಸಮಸ್ಯೆಯಾಗ್ತಾ ಇದೆ 🙂 ಅದಕ್ಕಾಗಿ ಈ ಪೂರಣ.

  • ’ಪದ್ಯಪಾನದಲ್ಲಿ ಈ ಸಮಸ್ಯೆ ನೋಡಿದ ಮೇಲೆ ಅಡುಗೆ ಮನೆಯೊಳಗೆ ಉಪ್ಪಿನ ಜಾಡಿಯೇ ನನಗೊಂದು ಸಮಸ್ಯೆಯಾಗ್ತಾ ಇದೆ’ ಎಂದು ಹೇಳುವ ಮೂಲಕ, ಈ ಸಮಸ್ಯೆಯನ್ನು ಕೊಟ್ಟುದಕ್ಕಾಗಿ:
   ಪಲ್ಲವ|| ಇಷ್ಟು ದಿನಗಳು ಸಹಜ ರುಚಿಯಿಂ
   ಪುಷ್ಟಗೊಳ್ಳುತ್ತಿದ್ದ ಪಾಕವು|
   ಕ್ಲಿಷ್ಟವಾದುದು ಇಂದೆನುತ್ತಲಿ
   ದುಷ್ಟನೆಂಬಿರ ಸೋಮನಂ||

 32. ಎಣೆಯಿಲ್ಲದೆನ್ತೊ ಭೂಖಣ್ಡಗಳ ಬಡಗು-ಪಡು
  ವಣಮೆಲ್ಲಮಾವರಿಸಿ ತೆಙ್ಕು-ಮೂಡಂ|
  ಮಿಣಮಿಣನೆ ಬೆಳ್ಳಿಯೊಲ್ ಪೊಳೆದಿರ್ಪ ಮಿಱುಗುಕ-
  ಙ್ಕಣಮಲ್ತೆ ಸಾಗರನ ಸನ್ನಿಧಾನಂ||

 33. ಪ್ರಣಮಿಪೆ ಪಯೋಧಿಯನ್ನಬ್ಧಿ-ಅಮ್ಬುಧಿ-ಮುತ್ತ-
  ಗಣಿ-ಅರ್ಣವ-ನದೀಶ-ಉದಧಿ-ಜಲಧಿ|
  ಎಣೆಯಿರದ ವಾರಿಧಿ-ಸಮುದ್ರ-ಸಿನ್ಧುವೆನುತೊ-
  ಕ್ಕಣಮಲ್ತೆ ಸಾಗರನ ಸನ್ನಿಧಾನಂ||
  (ಒಕ್ಕಣೆ> ಒಕ್ಕಣಂ)

  • ಅರೆ -ಬರೆ ಹಳೆ ಕನ್ನಡದಲ್ಲಿ ಸಾಗರನ ಸಾಮೀಪ್ಯದಲ್ಲಿ ದಂಡಿ ಯಾತ್ರೆಯ(ಉಪ್ಪಿನ ಸತ್ಯಾಗ್ರಹ ) ಬಗ್ಗೆ ಬರೆಯುಲು ಯೋಚಿಸುತ್ತಿದ್ದೆ . ಅಡುಗೆ ಮನೆಯೊಳಗೆ ಉಪ್ಪಿನ ಜಾಡಿ ” ದಂಡಿ ಯಾತ್ರೆಗೆ ಕಾರಣ ನಾನೆ . ನೀನು ದಂಡ” ಎಂದು ನನ್ನನ್ನು ಅಣಕಿಸ್ತ ಇತ್ತು

   • ವೃಥಾ ಏಕೆ ಉಪ್ಪನ್ನು ಬೈಯುವಿರಿ. ಅದರ ಬಗೆಗೇ ನೀವು ಲೇಖನ ಬರೆದರೆ ನಿಮ್ಮ ಉಪ್ಪಿನಋಣವನ್ನು ಎಂದೂ ನೆನೆಯುತ್ತದೆ ಅದು; ’ದಂಡ’ ಎಂದು ಬೈಯುವುದಿಲ್ಲ.

    ’ಉಪ್ಪಿನ ಋಣ’ಮೆಂಬರು ನಾಣ್ಣುಡಿಯೊಳು
    ಸಪ್ಪೆಯ ಮಾತೇಕೆಂಬಿರಿ ನೀಂ|
    ಒಪ್ಪದೆ ತನ್ನಯ ಬಗೆಗೇ ಬರೆದೊಡೆ?
    ತಪ್ಪೆಣಿಸುವುದೇಂ ನಿಮ್ಮೊಳದು?|

  • sl.no 31 kke -ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದೆ .ತಪ್ಪಿ ಇಲ್ಲಿ ಕ್ಲಿಕ್ಕಿಸಿದೆ . ಕ್ಷಮಿಸಿ

   • ನೀವು ಫೋಟೊಗ್ರಾಫರ್ ಅಲ್ಲ ತಾನೆ?

    ಕ್ಲಿಕ್ಕಿಸಿದೊಡಮೆಲ್ಲೆಂದೊಡಮಲ್ಲಿಯೆ,
    ಚಿಕ್ಕದು ದೋಷವು, ಮೌಸಿನೊಳು|
    ಕ್ಲಿಕ್ಕಿಸಿದೊಡೆ ಕ್ಯಾಮರದೊಳಗಂತೆಯೆ
    ಎಕ್ಕುಟ್ಟೋಗ್ವುದು ಚಿತ್ರವು ತಾಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)