Sep 142014
 

ಈ ಸಮಸ್ಯೆಯನ್ನು ಬಗೆಹರಿಸಿರಿ

“ಕೊಳಲನೂದಿದಂ ಶ್ರೀರಾಮನೊಲವಿನಿಂದಂ”

ಈ ಸಮಸ್ಯೆಯ ಸಾಲು ತೇಟಗೀತಿಯಲ್ಲಿ ನಿಬದ್ಢವಾಗಿದೆ

ತೇಟಗೀತಿಯ ನಿಯಮವನ್ನು ಕೆಳಕಂಡ ಕೊಂಡಿಗಳಲ್ಲಿ ಕಾಣಬಹುದು:
1. http://padyapaana.com/?p=2328#comment-20040

2. http://padyapaana.com/?page_id=1024

  178 Responses to “ಪದ್ಯಸಪ್ತಾಹ ೧೨೬: ಸಮಸ್ಯಾಪೂರಣ”

  1. ಕೊಳಗುಳಕ್ಕೆಯ್ದು ಸೋಲ್ತೊಡಂ ಜಾಂಬವಂತಂ
    ಮುಳಿದು ಮತ್ತೊರ್ಮೆ ಸಾರ್ದೊಡಂ ಕೃಷ್ಣನಾಗಳ್
    ತಳೆದು ಪೂರ್ವಾವತಾರಮಂ ತೋರ್ದನೆನೆ ತಾಂ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ||
    (ಸ್ಯಮಂತಕೋಪಾಖ್ಯಾನವನ್ನು ಆಧರಿಸಿಕೊಂಡು ಪರಿಹಾರ ಮಾಡಿದ್ದು-ಕೃಷ್ಣ ಜಾಂಬವಂತನಿಗೆ ತನ್ನ ಪೂರ್ವಾವತಾರವನ್ನು ತೋರಿಸಿದ ಸಂದರ್ಭದಲ್ಲಿ ಕೊಳಲನ್ನು ಊದಿದ ಎಂದು ಕಲ್ಪನೆ)

    • ಏನು ಕೊಪ್ಪಲತೋಟ ಶರವೇಗದ ಸರದಾರನಂತೆ ಪೂರಣವನ್ನು ಹತ್ತೇ ನಿಮಿಷದಲ್ಲಿ ನೀಡಿದೆ, ಬಹಳ ಚೆನ್ನಾಗಿದೆ 🙂

      • ಮನೆಗೆ ಬರುವಾಗಳೇ ಚಿಂತಿಸುತ್ತೆ ಬಂದೆಂ
        ಮನದೆ ಕಂಡಿರ್ದ ಪೂರಣಮನಿಂತು ಪೇಳ್ದೆಂ|
        ಅನವರತಮೆಲ್ಲರಂ ಮೆಚ್ಚುತಿರ್ಪ ಸೋಮ-
        ಣ್ಣನಿಗೆ ಸಲ್ಗುಂ ಮದೀಯಶತಧನ್ಯವಾದಂ||

      • ಹೌದು ಸೋಮ, ಕೊಪ್ಪಲತೋಟನ ಪದ್ಯದಲ್ಲಿ ಕುಪ್ಪಳಿಸಿಕೊಂಡು ಕಲ್ಪಕನಾವೀನ್ಯಲಕ್ಷ್ಮಿಯು ನೆಲೆಸಿದ್ದಾಳೆ:-)

    • You got the early bird prize man. Let us wait and see if anybody will better this.

  2. ಇಳೆಯೊಳವತಾರಮಂ ಗೈದ ರಾಮಕೃಷ್ಣರ್
    ತಿಳಿಯದೊಂದೆಂಬುದಂ ಸಾರ್ವ ಶಿಲ್ಪಿಯಿಂದಂ
    ಕಳೆಯಕೃಷ್ಣಂಗೆ ಕೋದಂಡಲಬ್ಧಮಂತೇ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

  3. ಪೊಳೆವ ಕಂಗಳಿಂ ಕಂಡಿರ್ಪ ನಾಟಕಂ ತಾಂ
    ಬಳಿಕ ಮದ್ಯಮಂ ಪೀರುತ್ತೆ ಹುಚ್ಚನಂತೀ
    ಮಳೆಯ ರಾತ್ರಿಯೊಅಳ್ ನಶೆಪೆರ್ಚಿ ಪಾಡುತಿರ್ಪಂ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    • ಅತಿಸುಲಭಮಪ್ಪ ಪರಿಹಾರಮಾರ್ಗದೊಳ್ ನೀಂ
      ಚತುರತೆಯನಿಂತು ಮೆರೆದುದೇನರರೆ! ಚೀದಿ|| 🙂

      • ಧನ್ಯವಾದ ಕೊಪ್ಪಲತೋಟ, ಏನು ಮಾಡಲಯ್ಯ, ತಕ್ಷಣಕ್ಕೆ ಹೊಳೆದ ಒಂದು feeble ಪರಿಹಾರವನ್ನು post ಮಾಡಿದೆ.. ಇನ್ನೊಂದು ಒಳ್ಳೆಯದನ್ನು ಪ್ರಯತ್ನಿಸುವೆ..

  4. ಎಳೆವಿದಿರ್ಗಳಿಂದೆಂತಿಂತು ಕೃಷ್ಣನೀಗಳ್
    ಸೆಳೆದಪಂ ಲಲನೆಯರ್ಕಳಂ ನೋಳ್ಪೆನೆಂದು|
    ಹಲಮನೆತ್ತಿಟ್ಟು ಕೆಲದೊಳಾ ಕುತುಕದಿಂದಂ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ||
    (ಬಲರಾಮ ಕೊಳಲನೂದಿದನೆಂಬ ಪರಿಹಾರ)

    • KoppalatOTa, ತೋಟಕದಲ್ಲಿ ಪ್ರತಿ ಪಾದದ ಪಾದಾಂತ್ಯದಲ್ಲಿ ಗುರುವಿರಬೇಕೆಂದುಕೊಂಡಿದ್ದೆ.. ದಯವಿಟ್ಟು ಇದರ ನಿಬಂಧಗಳೇನೆಂಬುದನ್ನು ತಿಳಿಹೇಳಿರಿ.. 3+5+5+3+4 ಬಿಟ್ಟು ಇದರಲ್ಲಿ ಲಘು ಗುರುಗಳ ಕಟ್ಟುಪಾಡುಗಳೇನಾದರೂ ಇದೆಯೇ?

    • ಬಲರಾಮನಿಂದ ಕೊಳಲನೂದಿಸಿದ ಜಾಣ್ಮೆಯ ಪದ್ಯ ಚೆನ್ನಾಗಿದೆ

      • ಕಮೆಂಟ್ ೧ರಲ್ಲಿ ನಿಮ್ಮ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ ಪದ್ಯದ ಉತ್ತರಾರ್ಧವೇ ಇಲ್ಲಿಯೂ ಸಲ್ಗುಂ 🙂

    • ಏನಯ್ಯ! ಕೊಪ್ಲ ತೋಟಾ!
      ಮಾನಿನಿ ಮೈಥಿಲಿಯನುಯ್ದ ರಾವಣನಂದಂ |
      ನೀನೆನ್ನಯ ಪೂರಣಮಂ
      ಹಾ! ನೋನೋಡುತ್ತಿರಲ್ಕೆ ಸೆಳೆದೊಯ್ದೆಯಲಾ!! 🙂

      • ಆನುಯ್ದವಳಲ್ತು ಗಡಾ
        ಮಾನಿನಿ ಮೈಥಿಲಿ, ಕಯಾಧುವವಳೇ ಸಲ್ವಳ್
        ದೀನಳ ರಕ್ಷಿಪೆನಾದೊಡ
        ನಾ ನಾರದ(!)ಮುನಿಯ ವೋಲೆ ಸಲ್ವೆಂ ನಾನುಂ||
        🙂

    • ಭಾಗವತಕ್ಕೆ ದಾಂಗುಡಿ! ಎಂದಿನಂತೆ ಚೆನ್ನಾಗಿದೆ.

  5. ತೇಟಗೀತಿಯ ಲಕ್ಷಣದಲ್ಲಿ ಸ್ವಲ್ಪ ತಪ್ಪಾಗಿದೆ ಸೋಮ!
    ಅಲ್ಲಿ ಪ್ರತಿಪಾದವೂ ೩+೫+೫+೩+೩ ಮಾತ್ರೆಗಳ ವಿನ್ಯಾಸವನ್ನು ಹೊಂದಿರಬೇಕು.

  6. ನನ್ನ ಶತಾವಧಾನವೂಂದರಲ್ಲಿ ತುಂಬ ಹಿಂದೆ ಈ ಸಮಸ್ಯೆ ಎದುರಾಗಿದ್ದಿತು. ಆಗ ಇಬ್ಬಗೆಯಲ್ಲಿ ಪರಿಹಾರವನ್ನು ನೀಡಿದ್ದೆನು. ಅಂದಿನ ಪೂರಣಗಳಿಂತಿವೆ:
    ೧. ತಿಳಿಯಲಳವೇನು? ಹರಿಮಾಯೆ; ಕೃಷ್ಣನಾಗಿ
    ಸೆಳೆಯೆ ಗೋಪೀಮನಂಗಳಂ ರಾಸರಸದೊಳ್|
    ಕೊಳಲನೂದಿದಂ. ಶ್ರೀರಾಮನ್, ಒಲವಿನಿಂದಂ
    ಸುಳಿದ ದಶಕಂಠಭಗಿನಿಗಂ ಸಿಡಿಲೆ ಆದಂ!!

    (ದಶಕಂಠಭಗಿನಿ = ಶೂರ್ಪಣಖೆ)

    ೨. ಬೆಳಗುತಿರ್ಪಾಂಧ್ರಭೂಮಿಯಿಂ ಬಂದ ಕವಿಯೇ!
    ತಿಳಿಯಲೀ ಸಮಸ್ಯಾಪೂರ್ತಿ ಪರಮಸುಲಭಂ|
    ಚಲನಚಿತ್ರಂಗಳೊಳ್ ನೋಡೆ ಕೃಷ್ಣನಾಗಿ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ:-)
    (ಅಂದಿನ ಪೃಚ್ಛಕರು ತೆಲುಗಿನವರಾಗಿದ್ದರು. ಹೀಗಾಗಿ ತೆಲುಗಿನ ಚಲನಚಿತ್ರನಟ ಎನ್ ಟಿ ರಾಮರಾವ್ ಅವರು ತಮ್ಮ ವಿಶ್ವವಿಶ್ರುತವಾದ ಶ್ರೀಕೃಷ್ಣಪಾತ್ರವನ್ನು ನಿರ್ವಹಿಸುತ್ತಿದ್ದ ಪರಿಯನ್ನು ಮನದಲ್ಲಿರಿಸಿ ಸದ್ಯದ ಪರಿಹಾರವನ್ನು ಕಲ್ಪಿಸಿದ್ದಾಯಿತು:-)

    • ಗಣೇಶ್ ಸರ್, ನಿಮ್ಮ ಬೋನಸ್ ಪೂರಣವು ಮತ್ತು ಮೊದಲನೇಯ ಪೂರಣದ ಜಾಣ್ಮೆಯೂ ಬಹಳ ಹಿಡಿಸಿತು 🙂

    • ಇಂತು ಅವಧಾನದೊಳಗಿದರ ಪರಿಹರಣದಿಂ
      ಪಿಂತೆ ನೀಮಿತ್ತ ಪದ್ಯಂಗಳೆರಡುಮಿಲ್ಲಿ
      ಕಂತುಕೋದಂಡದಿಂದೆಯ್ದ ಕಣೆಗಳೆರಡೆಂ-
      ಬಂತೆ ತೋರ್ದತ್ತು, ಜ್ಯಾಕೃಷ್ಟಿಯೇಕೆ ಮರ್ತೆ!!??

      • “ಏಕೆ ಮರ್ತೆ” ಎಂದು ನೀವು ಹೇಳಿರುವುದು ಸರಿಯಾಗಿದೆ. ಶ್ರೀ ಗಣೇಶರ ಅಭಿಪ್ರಾಯವೂ ಅದೇ:
        “ಪಿಂತೆ ಬಿಟ್ಟಿರ್ಪ ಬಾಣಮಂ ಹೂಡೆ ಮತ್ತೆ
        ಇಂತುಮೆನ್ನುತ್ತೆ ಮರೆತೆ (ಮರ್ತೆ) ನಾ ಜ್ಯಾಕ್ರಿಷ್ಟಿಯನು” 🙂

    • The first verse is unsurpassable. Yet,
      ಪೂತನಿಯನು ಕೊಲ್ಲಲಿಲ್ಲಮೇಂ ಕೃಷ್ಣನಾಗಿ
      ಗೌತಮಿಯನು ಕಾಯಲಿಲ್ಲಮೇಂ ರಾಮನಾಗಿ|
      ರೀತಿಗಪ್ರತಿಭರುಮದಾಗೆ ಪೊರಗಿನದಕೆ
      ಸೀತೆಯರಸ ಮೇಣ್ ಕೃಷ್ಣರುಂ ಮನ್ಸ್ರ್ ಕೆಟ್ಟೋದ್ರೆ|| 🙂
      (ಕೆಟ್ ಎಂಬುದನ್ನು ಶಿ.ದ್ವಿ.ವೆಂದು ಪರಿಗಣಿಸಬಹುದೆ?)

  7. ಬಳಲುತಿರ್ಪ ಗೋವಂ ಮೇಯಿಸುತಿರೆ,ಪಾಲಂ-
    ಕೊಳಲನೂದಿದಂ,ಶ್ರೀರಾಮನೊಲವಿನಿಂದಂ|
    ಮೊಳೆತ ಸಂಗೀತಮಾಧುರ್ಯಭರಿತಪದ್ಯಂ-
    ಗಳನತಿಪ್ರೀತಿಯಿಂ ಪೊಣ್ಮಿಸುತ್ತೆ,ಕಾಡೊಳ್ ||

    • ಚೆನ್ನಾಗಿದೆ

      • ಶ್ರೀಯುತ ಸೋಮರಿಗೆ ಧನ್ಯವಾದಗಳು.

    • ಸೊಗಸಾಗಿದೆ 🙂

      • ಪಾಲಂಕೊಳಲನ್ ಊದಿದಂ ಎಂಬ ಪದಚ್ಛೇದವು ನಿಮ್ಮ ಉದ್ದೇಶವೇ? ಹಾಗಿದ್ದಲ್ಲಿ ವ್ಯಾಕರಣವು ಒಪ್ಪದಲ್ಲಾ! ಇದು ಪಾಲಂ ಕೊಳಲ್ ಎಂದಾಗಬೇಕಲ್ಲವೇ?…ದಯಮಾಡಿ ಸ್ಪಷ್ಟಗೊಳಿಸುವುದು..

        • ಕ್ಷಮಿಸಿರಣ್ಣ.” ಪಾಲಂ,ಕೊಳಲನೂದಿದಂ ” ಎಂಬುದು ನನ್ನ
          ಉದ್ದೇಶ. “ಗೋವಂ ಮೇಯಿಸುತಿರೆ,ಪಾಲಂ”ಎಂಬಲ್ಲಿ “ಪಾಲಂ” ಎಂಬುದನ್ನು “ಗೋಪಾಲಂ ” ಎಂಬರ್ಥದಲ್ಲಿ ಬಳಸಿದ್ದೇನೆ.ಮೂಲದಲ್ಲಿ ,ಪಾಲಂ ಆದ ಬಳಿಕ ಅಡ್ಡಗೆರೆಯ ಬದಲು ಅಲ್ಪವಿರಾಮವಿರಬೇಕಿತ್ತು.ನೀವು ಎಚ್ಚರಿಸಿದ ಪರಿ, ಬಹಳ ಸೊಗಸಾಗಿದೆ.ಪದ್ಯದಲ್ಲಿ,(ಶ್ರೀರಾಮನ+ಒಲವಿನಿಂದಂ) ಎಂದು ಸಂಧಿಯಾಗಿದೆ.ಕೆಳಗಿನಂತೆ ಸವರಿದ್ದೇನೆ.ದಯಮಾಡಿ ತಪ್ಪಿದ್ದಲ್ಲಿ ತಿಳಿಸಿರಿ.

          ಬಳಲುತಿರ್ಪ ಗೋವಂ ಮೇಯಿಸುತಿರೆ ಪಾಲಂ,
          ಕೊಳಲನೂದಿದಂ,ಶ್ರೀರಾಮನೊಲವಿನಿಂದಂ |
          ಮೊಳೆತ ಸಂಗೀತಮಾಧುರ್ಯಭರಿತಪದ್ಯಂ-
          ಗಳನತಿಪ್ರೀತಿಯಿಂ ಪೊಣ್ಮಿಸುತ್ತೆ,ಕಾಡೊಳ್ ||

      • ಶ್ರೀಯುತ ಕೊಪ್ಪಲತೋಟರಿಗೆ ಧನ್ಯವಾದಗಳು.

  8. Soma,
    ತೇಟಗೀತಿ – ಬ್ರಹ್ಮ ವಿಷ್ಣು ವಿಷ್ಣು ಬ್ರಹ್ಮ ಬ್ರಹ್ಮ
    3 + 5 + 5 + 3 + 2 + 2 ಎಂದರೆ ಮಾತ್ರಾಗೀತಿಯೆ?

    • ಪ್ರಸಾದು, ನಾನು ತೇಟಗೀತಿಯ ನಿಯಮವನ್ನು ಸರಿಯಾಗಿ ಹಾಕಲಿಲ್ಲ ಕ್ಷಮಿಸಿರಿ, ಈಗ ನನ್ನ ಕಾಮೆಂಟನ್ನು ಸರಿಪಡಿಸುತ್ತೇನೆ

  9. Mr. Manjunath Sharma has discovered a queer way of praising the n-th verse/comment. Evidently even my this comment will recede in chronology. I am tempted to write “I don’t like you Manjunath” 🙂

  10. ತಿಳಿಯದಿರೆಕಂದ ನಿಗೆರಾಮಕಥೆಯ ಪೇಳೆ
    ಬಳಿಯ ಕಿರುತೆರೆಯಕೃಷ್ಣನ್ನ ನೋಡುತ್ತೆತಾಯ್
    “ಕೊಳಲನೂದಿದಂ ಶ್ರೀರಾಮನೊಲವಿನಿಂದಂ
    ಖಳನ ಮಾವನ್ನ ಕೊಂದನೀ ರಾಮನೆಂದಳ್”

    (ಪುರಾಣದ ಕಥೆಯನ್ನರಿಯದೆ, ರಾಮನ ಕಥೆಯನ್ನು ಮಗುವಿಗೆ ಹೇಳುತ್ತಾ TV ನಲ್ಲಿ ಕೃಷ್ಣನ serial ನೋಡುತ್ತಾ ಏನೇನೋ ಇಂತು ಹೇಳಿದಳು)

    ಇನ್ನೊಂದು ಪ್ರಯತ್ನ… ವಿಫಲವಾಗಿದ್ದಲ್ಲಿ ತಿಳಿಹೇಳಿರಿ…

  11. ನಳಿನಕಾಂತಿಯೊಳು ರಾಗಮಂ ವಿಸ್ತರಿಸುತುಂ
    ಭಳರೆನಿಸುವಂತೆ ಪಲ್ಲವಿಯ ನಿನಿತು ಮುದದಿಂ
    ಕೊಳಲನೂದಿದಂ “ಶ್ರೀರಾಮನೊಲವಿನಿಂದಂ
    ಸೆಳೆದಸೀತೆಯಮನವನೊಂದೆ ನೋಟದಿಂದಂ”

    ನಳಿನಕಾಂತಿ ರಾಗದಲ್ಲಿ ಹೀಗೊಂದು ಪಲ್ಲವಿಯನ್ನು ಕೊಳಲಿನಿಂದೂದಿದ ಎಂಬ ಅರ್ಥದಲ್ಲಿ

    • ರಾಮನಿಗೆ ಕೊಳಲು ಬರುವುದರಜೊತೆಗೆ ನಳಿನಕಾಂತಿ ರಾಗವೂ ಬರುತ್ತಿತ್ತೆಂಬ ಸಂಶೋಧನೆಯನ್ನು ಮಾಡಿರುವ ಚೀದಿಯ ಪೂರಣಕ್ಕೆ, ಚೀದಿಯ ಹಿಂದಿನ ಪದ್ಯವನ್ನು ಸೇರಿಸಿ ಹೇಳಬಹುದೆ? 😉

      • ಸೋಮ, ಇಲ್ಲಿ ಒಬ್ಬ ಸಂಗೀತಗಾರನ ಬಗ್ಗೆ ಬರೆದದ್ದು, ರಾಮನೂದಿದನೆಂದಲ್ಲ… Yes, but missed something here…

        • ಸೋಮನ witಏ witಉ!!….ಚೀದಿಯು ಸೀತೆಯನ್ನು ತರುವುದಕ್ಕೆ ಬದಲಾಗಿ ಮತ್ತಾರನ್ನೋ ಅಥವಾ ಸುಮ್ಮನೆ generic name ಆಗಿ ಆಣ್ಮೆ, ನಲ್ಲೆ ಇಂಥದ್ದನ್ನೋ ತಂದಿದ್ದಲ್ಲಿ ಸೋಮನ ಆಕ್ಷೇಪಕ್ಕೆ ಅವಕಾಶ ತಗ್ಗುತ್ತಿತ್ತು. ಏಕೆಂದರೆ ಸೀತಾ-ರಾಮರಿಬ್ಬರೂ ಬಂದಲ್ಲಿ ಅದು ರಾಮಾಯಣಕ್ಕೇ ಸಾಮಾನ್ಯವಾಗಿ ಅನ್ವಿತವಾಗುವ್ದುಅಷ್ಟೆ:-)
          ಇಲ್ಲವೇ ನಾಲ್ಕನೆಯ ಪಾದವನ್ನು ಹೀಗೆ ರೂಪಿಸಬಹುದಿತ್ತು:
          “ಪೊಳೆವನೀ ಕಲಾವಿದನೆಂದರೆಲ್ಲ ಸಭ್ಯರ್(ರಸಿಕರ್)”
          ಈ ಮಾರ್ಪಾಟಿನಿಂದ ಇಡಿಯ ಸಂನಿವೇಶವು ಸಾಮಯಿಕ ಸಂಗೀತಕಲಾವಿದನೊರ್ವನ ಆವಿರ್ಭಾವ ಎಂಬ ಇಂಗಿತವನ್ನು ತೋರುವಂತಾಗುತ್ತದೆ.

          • ಹೌದು ಸರ್, ಇದು ಸರಿಯಿಲ್ಲ…. ತಪ್ಪಿಗಾಗಿ ಕ್ಷಮೆ ಕೋರುತ್ತೇನೆ..

      • ಪ್ರಿಯ ಚೀದಿ – ನಾನು ಅರ್ಥ ಮಾಡಿಕೊಂಡಿದ್ದು ಹೀಗೆ – ಸಂಗೀತಗಾರನೊಬ್ಬನು ನಳಿನಕಾಂತಿ ರಾಗದಲ್ಲಿ “ಶ್ರೀರಾಮನೊಲವಿನಿಂದಂ ಸೆಳೆದಸೀತೆಯಮನವನೊಂದೆ ನೋಟದಿಂದಂ” ಎಂಬ ಕೃತಿಯನ್ನು ಕೊಳಲಲ್ಲು ನುಡಿಸಿದನು ಎಂದು. ಆಗ ಪರಿಹಾರ ಕ್ರಮವು ಬೇರೆಯದಾದರೂ, ಆಕ್ಷೇಪ ನಿಲ್ಲಲಾರದು 🙂

    • ಮತ್ತೊಂದು ವಿಶಿಷ್ಟ ಕೀಲಕಕ್ಕಾಗಿ ಧನ್ಯವಾದ ಚೀದಿ.
      ’ಸೆಳೆದ/ಸೀತೆಯ/ಮನವನೊಂ/ದೆ ನೋಟ/ದಿಂದಂ’ – ಇಲ್ಲಿ /ದೆ ನೋಟ/ ಎಂಬುದು ಲಗಂ ಆಯಿತು. ಅಂಶದಲ್ಲಿ ಕರ್ಷಣಕ್ಕೆ ಅವಕಾಶವಿದ್ದರೂ, ದೃಶ್ಯರೂಪದಲ್ಲಿ ಲಗಂ ತಗದು. ’ಸೆಳೆದ/ ಸೀತೆಯಂ/ ತಾನೊಂದೆ/ ನೋಟ/ದಿಂದಂ’ ಎಂದು ಸವರಬಹುದು.

      • ಸವರಣೆಗೆ ಧನ್ಯವಾದಗಳು ಪ್ರಸಾದರೆ…

      • ಚೀದಿಯವರ ಪದ್ಯದಲ್ಲಿ ಛಂದಸ್ಸು ಸರಿಯಾಗೇ ಇದೆ, ಅಂಶಚ್ಛಂದಸ್ಸಿನಂತೆಯೇ ಇದ್ದರೂ ತೇಟಗೀತಿ ಮಾತ್ರಾಗತಿಯಲ್ಲಿ ಬಳಸಲ್ಪಡುತ್ತದೆ, ೩+೫+೫+೩+೩(೪)
        ಸೆಳೆದ/ಸೀತೆಯಮ/ನವನೊಂದೆ/ನೋಟ/ದಿಂದಂ||

        • Thanks K. Sorry C. ಗಣವಿಭಜನೆಯಲ್ಲಿ ಎಡವಿದ್ದೆ. ಆದರೂ, ಒಂದು ಅಕ್ಷರವನ್ನು (ಮ/) ಬೇರ್ಪಡಿಸದಿರುವುದೊಳ್ಳೆಯದಲ್ಲವೆ?

        • ನನ್ನ ಪದ್ಯವನ್ನು ಬಚಾವ್ ಮಾಡಿದ್ದಕ್ಕೆ ಕೊಪ್ಪಲತೋಟನಿಗೆ ಧನ್ಯವಾದಗಳು

        • ನನ್ನ ಪಾಲಿನ ಕೆಲಸವನ್ನು ಹಗುರವಾಗಿಸಿದುದಕ್ಕಾಗಿ ಕೊಪ್ಪಲತೋಟನಿಗೆ ಧನ್ಯವಾದಗಳು.

  12. ಇಳೆಯನಾಳ್ದ ಕತಮಂ ಕಳೆಯೆ ಗೋಪಶಿಶುಸಂ-
    ಕುಳದೊಳುದಿಸುತುಂ ದ್ವಾಪರದೆ ಕೃಷ್ಣವಪುವಿಂ |
    ತೊಳಗುತಾಶ್ರಯಿಸಿ ನೆಳಲಿನೊಳ್ ತುರುಕರುಗಳಂ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ ||

    ರಾಜನಾಗಿದ್ದಾಗ ಅನುಭವಿಸಿದ ವ್ಯಥೆಗಳು ನೂರಾರು. ಕೆಲವೊಂದು ಸಣ್ನಪುಟ್ಟ ಬಯಕೆಗಳ ಅನುಭವಕ್ಕೂ ಎಡೆಯಿಲ್ಲ! (ಕ್ಲಿಶ್ನಾತಿ ಲಬ್ಧಪರಿಪಾಲನವೃತ್ತಿರೇನಮ್! ಎಂಬ ಕಾಳಿದಾಸನ ನುಡಿ ಸ್ಮರಣಾರ್ಹ) ಇದನ್ನೆಲ್ಲ ಕಳೆದು, ಆನಂದವನ್ನನುಭವಿಸಲೆಂದು ಆ ರಾಮನೇ ಕೃಷ್ಣರೂಪದಲ್ಲಿ ಗೋಪಕುಲದಲ್ಲುದಿಸಿ, ಮರದ ನೆರಳಿನಲ್ಲಿ ಗೋವುಗಳಿಗೊರಗಿ ಸಂತೋಷದಿಂದ ಕೊಳಲನೂದಿದನೆಂದು ತಾತ್ಪರ್ಯ.

    • ಬಹಳ ಚೆನ್ನಾಗಿದೆ ಪೆಜತ್ತಾಯರೆ

    • ಹರಿಯ ರೂಪದಾ ರಾಮನೆಂತೆಂಬ ಪದದಿಂ
      ಪರಿಹರಿಸುತಿರ್ಪ ನಿಮ್ಮ ಪದ್ಯಕ್ಕೆ ನಮಿಪೆಂ||

    • ಕೃಷ್ಣನಂತಹನೆ ಈಯಲಾಶ್ರಯವ ತುರುಕರುಗಳಿಗಂ ತಾಂ
      ಜಿಷ್ಣುವೆಂದು ಮೆರೆಯಲ್ಕೆ ರಾಜಕಾರಣಿಯುಮಂತೆ ಗೈವನ್|

    • ತುಂಬ ಚೆನ್ನಾಗಿದೆ

    • ಸೋಮಕೊಪ್ಲತೋಟರ್ಗೆನ್ನ ಧನ್ಯವಾದಂ
      ಭೂಮವಿದ್ಯಪ್ರಸಾದರ್ಗೆ ಶ್ರೀಧರರ್ಗುಂ 🙂

  13. ಎಳೆಯ ಬಾಲನೊರ್ವಂ ರಾಜನೆದಿರಯೋಧ್ಯಾ-
    ವಳಯಮೇ ಆರ್ದ್ರಮಪ್ಪಂತೆ ಹದನದಿಂದಂ
    ಕೊಳಲನೂದಿದಂ, ಶ್ರೀರಾಮನೊಲವಿನಿಂದಂ
    ಭಳರೆ ಕೋ ಎನ್ನುತುಂ ಕೊರಳ ಸರಮನಿತ್ತಂ

  14. ಎಳೆಯ ಕುಶನೊಡನೆ ಕೂಡುತ್ತೆ ರಾಮಕತೆಯ
    ತೊಳಗುವಂದದೊಳ್ ಪೇಳುತ್ತೆ ಲವನು ತಾನು|
    ಕೊಳಲನೂದಿದಂ, ಶ್ರೀರಾಮನೊಲವಿನಿಂದಂ
    ಪುಳಕಗೊಳ್ಳುತ್ತೆ ಪಾಡಿರೆಂದೆನಲುಮಾಗಳ್||

    • ಚೆನ್ನಾಗಿದೆ 🙂 you got second Early bird award since SomaNNa used same idea 😉

      • Yes 🙂
        6 ಗಂಟೆಗೇ ನನ್ನ ಪದ್ಯ ಹೆಚ್ಚುಕಮ್ಮಿ ಮುಗಿದಿತ್ತು. ಅತ್ಲಗ್ ಪೋಸ್ಟ್ ಮಾಡಿಬಿಟ್ಟಿದ್ದರೆ ಚೆನ್ನಾಗಿತ್ತು. ಕಾಫಿ ಆಸೆಗೆ ಕೆಳಗಿಳಿದುಹೋದೆ. ಬರೋಷ್ಟರಲ್ಲಿ ಸೋಮಣ್ಣ…..

        • ನಾನೂ ೩ ದಿನ ಮೊದಲೆ ಈ ಎಲ್ಲ ರೀತಿಯ ಪರಿಹಾರಗಳನ್ನು ಮಾಡಿಟ್ಟುಕೊಂಡೆ. ಸ್ವಲ್ಪ ಕೆಲಸ ಮುಗಿಸಿ ಬರೋಣವೆಂದು ಮುಂಬೈಗೆ ಹೋಗಿರಲಾಗಿ, ನೀವೆಲ್ಲರೂ ಹಾಕಿಬಿಟ್ಟಿದ್ದೀರಿ. ಇರಲಿ … 😀

          • ಬರುವ ವಾರದಲ್ಲಿ ನಾವೆಲ್ಲ ಮೂರುದಿನ ಸುಮ್ಮನಿದ್ದುಬಿಡುವುದು ಎಂದು ತೀರ್ಮಾನಿಸಿದ್ದೇವೆ 🙁

        • ha ha :),

          BTW prasAdu, koppalatOTa I was not the first one to use this kElaka in this post. Dr. G had already used it in earlier comment http://padyapaana.com/?p=2328#comment-20044
          I took idea from him 🙂

    • ಪ್ರಸಾದು! ಕೊಳಲನ್ನೂದುವ ಭರದಲ್ಲಿ ತೇಟಗೀತಿಯ ಛಂದೋಲಕ್ಷಣವನ್ನೇ ನುಂಗಿಬಿಟ್ಟಿರಲ್ಲಾ!! ಇದು ತ್ರಿಮೂರ್ತಿಗಣೀಯವಾದರೂ ಮಾತ್ರಾಸಮತ್ವದಿಂದಲೇ ಸೊಗಯಿಸುವ ಬಂಧ. ಇಲ್ಲಿ ಕರ್ಷಣವಿಲ್ಲ.

      • ಕೃತಜ್ಞತೆಗಳು. ನನ್ನ ಪದ್ಯಗಳನ್ನು ತಿದ್ದಿದ್ದೇನೆ.

        ಸೀಸವನ್ನು ಕರ್ಷಣಯುಕ್ತವಾದ ಬ್ರಹ್ಮ-ವಿಷ್ಣುಗಣೀಯವಾಗಿಯೂ ಮಾತ್ರಾಗಣರೀತಿಯಾಗಿಯೂ ಮಾಡಬಹುದು ಎಂದು ತಿಳಿದಿದ್ದೆ (http://padyapaana.com/?page_id=1024 – ಸೀಸ-ಗೀತಗಳನ್ನು ಪೂರ್ಣಪ್ರಮಾಣದ ಮಾತ್ರಾಛಂದಸ್ಸಾಗಿಯೂ ರೂಪಾಂತರಗೊಳಿಸಿರುವುದುಂಟು).

        ಚೀದಿ, ಭಾಲ ಹಾಗೂ ಶ್ರೀಕಾಂತ್‍ರವರ ಪದ್ಯಗಳ ಬಗೆಗೆ ಪ್ರತಿಕ್ರಿಯೆ ನೀಡುವಾಗ, ಅಂಶವಾಗಿ ಪರಿಗಣಿಸಿದ್ದೇನೆ; ಮಾತ್ರೆಯಾಗಿ ಅಲ್ಲ.

        http://padyapaana.com/?page_id=1024 ರಲ್ಲಿನ ಹಾಗೂ ಇಲ್ಲಿನ ನಿಮ್ಮ ಪದ್ಯಗಳಿಂದ ತೇಟಗೀತಿಯ ನಿಯಮ ಹೀಗೆಂದು ತಿಳಿದುಬರುತ್ತದೆ: 3-5-5-3-3 or 4 (ಕೊನೆಯ ಗಣವು ಮಾತ್ರ). ನನ್ನ ಗ್ರಹಿಕೆ ಸರಿಯೆ ಎಂದು ದಯವಿಟ್ಟು ತಿಳಿಸಿ.

  15. ಕುಳಿತು ಮಾಧವನುಮಿಂಪಾದ ನಾದದಿಂದಂ
    ಕೊಳಲನೂದಿದಂ, ಶ್ರೀರಾಮನೊಲವಿನಿಂದಂ
    ಇಳಿದು ಬಂದಿರ್ಪ ಕಣ್ಮುಚ್ಚುತಾಲಿಸಿರ್ಪಂ
    ಪುಳಕ ಗೊಂಡು ಶಿರಬಾಗಿಕೃಷ್ಣಂಗೆ ನಮಿಪಂ

  16. ಬೆಳೆದ ಸಪ್ತವೇಣುಗಳಲ್ತೆ, ತಾಳ ವೃಕ್ಷಂ
    ಗಳಿಗೆ, ಬಾಣದೊಂದುಸಿರಾಗೆ ಮೃತ್ಯುಲಕ್ಷ್ಯಂ
    ಒಳಿತಿಗಾಧಾರ ಶ್ರುತಿಯೆನೆ ಶುಭವಿಜಯದ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

  17. ಮುಳಿದ ತಾಯನೊಲಿಸಲ್ ಮುದದೆ ಬಾಲಕೃಷ್ನಂ
    ಕೊಳಲನೂದಿದಂ, ಶ್ರೀರಾಮನೊಲವಿನಿಂದಂ
    ಕಳಿತಪೂವ ನಗೆಯಂ ಬೀರ್ದು ನಾಟ್ಯಗೆಯ್ದಂ
    ಭಳಿರೆ ! ಆ ಯಶೋದೆಯ ಭಾಗ್ಯಕೇನನೆಂಬೆಂ !
    ಶ್ರೀರಾಮ – ಬಲರಾಮ.

      • ಪ್ರಿಯ ಪೆಜೆತ್ತಾಯರೇ! ಪೂರಣ ಚೆನ್ನಾಗಿದೆ.. ಆದರೆ “ಬೀರಿ” ಎಂಬ ಪದವು “ಬೀರ್ದು” ಎಂಬಲ್ಲಿ ಬಳಕೆಯಾದರೆ ವ್ಯಾಕರಣವೂ ಪ್ರಸಂಗಶುದ್ಧಿಯೂ ಬರುವುವು.

    • ಪೂರಣ ಚೆನ್ನಾಗಿದೆ

  18. ಬಹುದಿನಗಳ ಬಳಿಕದ ನನ್ನ ಬಳಕೆ

    ಪೊಳಲಂ ತೊರೆದೊಡನಡವಿಯಂ ಪೊಕ್ಕಲೆದು
    ಬಳಲ್ದ ಬಳಿಕಮುಮೊಲೆಮುಂದೆ ಬಾಡುತ್ತಿರ್ಪಳ್
    ಇಳಿಲೆಗುಫ್ಫೆನ್ನಲ್ಕುಂ ತ್ರಾಣಮಿಲ್ಲೆನುತ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    ಇಳಿಲೆ- ಚೆಲುವೆ (ಸೀತೆ)
    ಕೊಳಲ್- ಊದುಗೊಳವೆ

    • The wait was worth it. You are back with a bang. Nice verse. Thanks.
      ‘ಬಳಲ್ದ’ ಎಂಬುದು ಲಗಾದಿ. ಅಂಶದ ಕರ್ಷಣಾವಕಾಶವಿದ್ದೂ ನಮ್ಮಲ್ಲಿ ಇದು ಬಳಕೆಯಿಲ್ಲ. (ಶಿಥಿಲದ್ವಿತ್ವ ಎಂದು ಹೇಳಿ ಕೊಸರಿಕೊಳ್ಳಬೇಡಿ 🙂 )
      ‘ನುತ’ – ನ ನ ನಾ, ನಾ ನಾ, ನಾ ನs, ನ ನ ನs ಇವಿಷ್ಟೆ ಬ್ರಹ್ಮ. ನನ ಇಲ್ಲ. ‘ನ್ನುತ್ತುಂ’ ಎನ್ನಬಹುದಲ್ಲವೆ?

      • ಧನ್ಯವಾದಗಳು ಪ್ರಸಾದು. ಬಳಲ್ದ ಶಿಥಿಲದ್ವಿತ್ಚವೆ ಹೌದು. ಬಿಡಿಸಿ ಹೇಳಲಿಲ್ಲ ಅಷ್ಟೆ. ನಾನು ಕೊನೆಗೆ ಒಂದು ರುದ್ರಗಣವಾಗಿ ಪರಿಗಣಿಸಿ ಅಕ್ಕರದ ಪ್ರಭೇದವಾಗಿ ರಚಿಸಿದ್ದರಿಂದ ಎರಡು ಬ್ರಹ್ಮಗಳಾಗಿ ಬಿಡಿಸಿದಾಗ ಸರಿಗೆ ಕೂರುವುದಿಲ್ಲ

        • ಬಲುದಿನಗಳ ಬಳಿಕ ಬರುತ್ತಿರುವ ನಿಮಗೆ ಮತ್ತೆ ಹಾರ್ದಿಕಸ್ವಾಗತ. ಎಲ್ಲ ಕುಶಲವಷ್ಟೆ? ನಿಮ್ಮ ಕೆಲವೊಂದು ಸಂಗೀತರಚನೆಗಳನ್ನು ಈಚೆಗೆ ಹಂಸಾನಂದಿಯವರ ಮೂಲಕ ವಿಶದವಾಗಿ ಅರಿಯುವುದಾಯಿತು; ತುಂಬ ಸಮರ್ಥಪ್ರಯೋಗಗಳವು; ಅಭಿನಂದನೆಗಳು. ಸದ್ಯದ ಪೂರಣದಲ್ಲಿ ತೇಟಗೀತಿಯ ಗತಿ ತಪ್ಪಿದೆ.

    • ಶ್ರೀಕಾಂತರೆ ಹೇಗಿದ್ದೀರಿ :), ಇಷ್ಟು ಅಪರೂಪವಾಗಿಬಿಟ್ಟಿರಲ್ಲ. ಪದ್ಯಪಾನದೊಡನೆ ನಿಮ್ಮ ಒಡನಾಟ ಹೆಚ್ಚಾಗಲಿ ಎಂದು ಕೇಳಿಕೊಳ್ಳುತ್ತೇನೆ

  19. ಮುಳಿದು ಪಗೆಯಾಗಿ ಕುಳ್ಳಿರ್ದ ಕುಮಾರರಂ
    ಬಳಿಗೆ ಕರೆತಂದು ಸಂತೈಸಲಿವರೀರ್ವರಂ
    ಮೊಳಗಿಸುತ್ತ ಪೊಸರಾಗಮೊಂದನೊರೆಯುತಲೆ
    ಕೊಳಲನೂದಿದo ಶ್ರೀ ರಾಮನೊಲವಿನಿ೦ದಂ

    ಶ್ರೀ ರಾಮ ಎಂಬ ಹೆಸರಿನ ಸಂಗೀತ ಶಿಕ್ಷಕ ಜಗಳಾಡಿ ಕೋಪಿಸಿಕೊಂಡ ತನ್ನ ಮಕ್ಕಳನ್ನು ಸಮಾಧಾನ ಪಡಿಸಲು ಅವರಿಗೆ ಹೊಸ ರಾಗವೊಂದನ್ನು ಕಲಿಸಿಕೊಡುತ್ತೇನೆ ಎಂದು ಹೇಳುವ ಪ್ರಸಂಗದ ಕಲ್ಪನೆ

    • ಕುಮಾ, ರರಂ, ವರಂ – ಇವುಗಳು ಲಗಂ. ಅಲ್ಲಿಲ್ಲಿ ಇನ್ನೊಂದಿಷ್ಟು ಸವರಿದ್ದೇನೆ
      ಮುಳಿದು ಪಗೆಯಾಗಿ ಕುಳ್ಳಿರ್ದ ಕುವರರನ್ನುಂ
      ಬಳಿಗೆ ಕರೆತಂದು ಸಂತೈಸುತಿರುವರನ್ನುಂ|
      ಮೊಳಗಿಸುತ್ತೆ ಪೊಸರಾಗಮೊಂದನೊರೆಯುತಲಿ
      ಕೊಳಲನೂದಿದಂ ಶ್ರೀರಾಮನೊಲವಿನಿಂದಂ||

      • ಸರ್ , ಸರಿಪಡಿಸಿರುವುದಕ್ಕೆ ಧನ್ಯವಾದಗಳು .
        ಮೇಲೆ ಕೊಟ್ಟ ಉದಾಹರಣೆಗಳನ್ನು , ಅಂಶ ಗಣ ವಿನ್ಯಾಸದ ಉದಾಹರಣೆಯನ್ನು ಮೊದಲು ಗಮನಿಸಿರಲಿಲ್ಲ . ನನ್ನ ಬಳಿ ಇದ್ದ ಪುಸ್ತಕದಲ್ಲಿ( ಕನ್ನಡ ಛಂದಸ್ಸಿನ ಪ್ರವೇಶಿಕೆ ) ಕೊಟ್ಟ ಗಣ ವಿನ್ಯಾಸವನ್ನು ನೋಡಿ ಆ ತಪ್ಪು ಮಾಡಿದ್ದೇನೆ . ಆದರೆ ಅದರಲ್ಲೇ ಬ್ರಹ್ಮ್ಹ ಗಣದ ಅಂಶದ ವಿವರಣೆಯನ್ನು ಓದಿದಾಗ ಅಲ್ಲಿ ಕೊಟ್ಟ ಗಣ ವಿನ್ಯಾಸದ ಉದಾಹರಣೆಯಷ್ಟೆ ತಪ್ಪಾಗಿದೆ ಎಂದು ತಿಳಿಯಿತು .
        ಈಗ ಹೊಸ ಸಮಸ್ಯೆಯೊಂದು ಉದ್ಭವಿಸಿದೆ—
        ”ಕನ್ನಡ ಛಂದ:ಕೋಶ” ಎಂಬ ಪುಸ್ತಕದಲ್ಲಿ ತೇಟಗೀತಿಯಲ್ಲಿ ಬರೆದ ಸೀಸ ಪದ್ಯದ ಲಕ್ಷಣ …

        ಆರು ಸುರರಾಜ ಗಣವಿರಲದರ ಮುಂದೆ
        ಭಾನುಗಣ ಯುಗ್ಮ ಬಂದಿರಲ್ ಪಾದವಾಯ್ತು
        ಚದುರರೀ ರೀತಿಯಲಿ ನಾಲ್ಕು ಚರಣ ಪೇಳಿ
        ಭರದ ತುದಿ ಗೀತವಿದೆ ಸೀಸಪದ್ಯ ತರುಣಿ II

        ೩+೫+೫+೩+೩ ಈ ರೀತಿಯಲ್ಲಿ ( ಒಂದು ಬ್ರಹ್ಮ್ಹ ಗಣವು ೨ ಅಂಶ ಎಂದು ಪರಿಗಣಿಸುವುದಾದರೆ ) ನೋಡಿದಾಗ ಮೇಲಿನ ಪದ್ಯದ ಮೊದಲಿನ ಗೆರೆ ಸರಿ ಇದೆಯೇ ?ಎಂಬುದು ನನ್ನ ಸಮಸ್ಯೆ . ಸರಿಯಾಗಿದ್ದರೆ ಅದನ್ನು ಯಾವ ರೀತಿ ವಿಭಾಗಿಸಬಹುದು ?

    • ಪರಿಹಾರದ ಕಲ್ಪನೆ ಚೆನ್ನಾಗಿದೆ,,

  20. See prasadu, anyone who likes any padyapaana post on FB their name would become the last post…

    • Cheedi, you didn’t get me right. If I write “I don’t like you xyz”, xyz’s FB posting will still read “xyz liked this post” 🙂

  21. ಕಳೆದುಕೊಂಬುದಂ ಚಿಂತೆಗೈಯದೆಯೆ,ನಿಂದಂ
    ಉಳಿಸಲೆನೆ ಪಿತನ ವಚನವಂ,ಹರುಷದಿಂದಂ
    ತುಳಿದು ಪೋಗುತುಂ ಕಾಡಿಗಂ,ಧರ್ಮ ಪಥದ
    ಕೊಳಲನೂದಿದಂ,ಶ್ರೀರಾಮನೊಲವಿನಿಂದಂ

    • ಸರಳಗಂಭೀರಮಾಗಿರ್ಪ ಸರಸಕವಿತಾ
      ಪರಿಹರಣಮಾರ್ಗಮೊಪ್ಪುಗುಂ ಪದ್ಯಯುಗದೊಳ್||
      ಮೂರನೆಯ ಸಾಲಿನ ಕೊನೆಯ ಗಣ “ಪಂಥದ”ಎಂದಾದರೆ ನಿಯಮಕ್ಕೆ ಭಂಗವಾಗುತ್ತದೆ. “ಪಥದ” ಎಂದು ಸರಿಮಾಡಬಹುದು.

    • ಕಾಂಚನ ಅವರೇ ಬಹಳ ಚೆನ್ನಾಗಿದೆ ಪದ್ಯ

  22. ಪ್ರಿಯಮಿತ್ರರೆ,

    ತೇಟಗೀತಿಯಬಗ್ಗೆ ಎರಡುಮಾತು.

    ಕನ್ನಡಕ್ಕೆ ಮಾತ್ರಾಗಣವಾಗಿ ಮಾರ್ಪಾಡಾದ ತೇಟಗೀತಿಯಲ್ಲಿ ಕೆಲವು ಮೂಲನಿಬಂಧನೆಗಳು ಸಡಿಲವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ. ನಾವೆಲ್ಲಾ ಅದನ್ನೇ ಅನುಸರಿಸುತ್ತಿದ್ದರೂ, ಮೂಲ ಲಯಕ್ಕೆ ಭಂಗಬಾರದಂತಿರುವುದು ಅಗತ್ಯ.

    ಮೂಲನಿಯಮದಪಾಲನೆ ಕನ್ನಡದಲ್ಲಿ ಅನಗತ್ಯವಾದರೂ, ತಾಳೆನೋಡಿಕೊಳ್ಳಲು ಗಮನಿಸಿದಾಗ, ಮೂಲನಿಯಮದಲ್ಲಿ, ಮೊದಲನೆಯ ಮತ್ತು ನಾಲ್ಕನೆಯಗಣಗಳ ಆದ್ಯಕ್ಷರಗಳಿಗೆ ಯತಿ (ಅಕ್ಷರ+ಸ್ವರ)ಯಾಗಲಿ ಪ್ರಾಸವಾಗಲಿ ಇರಬೇಕು. ಕನ್ನಡದಲ್ಲಿ ನಾವು ಬ್ರಹ್ಮಗಣವೆನ್ನುವ ತೆಲುಗಿನ ಸೂರ್ಯಗಣಗಳು (ತ್ರಿಮಾತ್ರಾ)ಎರಡೇ – ’ನನನ’ ’ನಾನ’. ಈ ನಿಯಮಗಳಿಂದಲೇ ಆ ಬಂಧಕ್ಕೆ ಒಂದುಸೊಗಸು, ಲಯ, ಲಾಸ್ಯ. ಪ್ರತಿಸಾಲಿನ ಕೊನೆಯಲ್ಲಿ ನನನ- ನನನ; ಅಥವಾ ನಾನ-ನನನ; ಅಥವಾ ನಾನ-ನಾನ ಎಂಬ ತ್ರಿಶ್ರದ್ವಯಘಾತವಿಶೇಷ ಇದರ ನಾಡಿ.
    ನಿದರ್ಶನಕ್ಕಾಗಿ ’ತೇಟಗೀತಿಯ’ ಮೂಲರೂಪದಲ್ಲಿರುವಂತೆ ನನ್ನ ಪೂರಣವನ್ನು ಸವರಿಸಿದ್ದೇನೆ.

    ತಳೆದ ಸಪ್ತವೇಣುಗಳಲ್ತೆ, ತಾಳ ವೃಕ್ಷ
    ಸೆಳೆದ ಬಾಣದೊಂದುಸಿರಾಗೆ ಕಳೆವಲಕ್ಷ್ಯ
    ಒಳಿತಿಗಾಧಾರ ಶ್ರುತಿಯೆನೆ ಯುಗದ ಜಯದ
    ಕೊಳಲನೂದಿದಂ ಶ್ರೀರಾಮನೊಲವಿನಿಂದ

    ವಂದನೆಗಳು

    • ಮೌಳಿಯವರೇ, ನಿಮ್ಮ ಸವರಣೆ ಚೆನ್ನಾಗಿದೆ. ಆದರೆ ಯತಿಮೈತ್ರಿಯು ಕೇವಲ ತೇಟಗೀತಿಗಷ್ಟೇ ಅಲ್ಲದೆ ತೆಲುಗಿನಲ್ಲಿ ಬಳಕೆಗೊಳ್ಳುವ ಎಲ್ಲ ವೃತ್ತ-ಕಂದ-ಸೀಸ-ಗೀತಿ-ಅಕ್ಕರ-ದ್ವಿಪದ-ರಗಳೆಗಳಿಗೂ ಉಂಟಲ್ಲವೇ! ಕನ್ನಡದಲ್ಲಿ ಈ ಎಲ್ಲ ಬಂಧಗಳ ಬಳಕೆಯಿದ್ದರೂ ಯತಿಮೈತ್ರಿಯು ಕನ್ನಡದ ಅನೂಚಾನವಿಧಿಯಲ್ಲದ ಕಾರಣ ಅದಿಲ್ಲಿ ಸಹಜವಾಗಿಯೇ ಅನ್ವಿತವಾಗಿಲ್ಲ. ಹೇಗೆ ಸಂಸ್ಕೃತಕ್ಕೆ ಅನಿವಾರ್ಯವಾದ ಯತಿಸ್ಥಾನದ ವಿರಾಮನಿಯಮವು ಕನ್ನಡಕ್ಕೆ ಸಂದಿಲ್ಲವೋ ಹಾಗೆಯೇ ಇದು ಕೂಡ ತಾನೆ!…. ಆದರೆ ಈ ತೇಟಗೀತಿಯಲ್ಲಿ ಪಂಚಮಾತ್ರಾಗಣಸ್ಥಾನದಲ್ಲಿ ಕೇವಲ ತಗಣ, ರಗಣ, ನಗಣ ಮತ್ತೊಂದು ಗುರು ಎಂಬ ಮೂರು ಬಗೆಯ ವಿನ್ಯಾಸಗಳಷ್ಟೇ ಬರಬೇಕೆಂಬ ನಿಯಮವನ್ನು ಸಡಿಲಗೊಳಿಸಿಕೊಳ್ಳಲಾಗಿದೆ. ಸೂಕ್ಷ್ಮವಾಗಿ ಗಮನಿಸಿದಲ್ಲಿ ನಾನು ನನ್ನ ಪೂರಣಗಳಲ್ಲಿ ಈ ನಿಯಮವನ್ನು ತಪ್ಪದೆ ಪಾಲಿಸಿರುವುದು ಕಾಣದಿರದು. ಪ್ರಕೃತಸಮಸ್ಯೆಯಲ್ಲಿಯೂ ಇದು ಪಾಲಿತವಾಗಿದೆ.

      • ಶ್ರೀಗಣೇಶರಿಗೆ ನಮನ. ಧನ್ಯವಾದಗಳು. ಒಂದು ಸ್ಪಷ್ಟನೆ. ನೀವೆಂದಂತೆ ಯತಿಮೈತ್ರಿ ತೆಲುಗಿನ ಎಲ್ಲಾ ಬಂಧಗಳಿಗೂ ಉಂಟು. ಯತಿಯಪ್ರಸ್ತಾಪ ನನ್ನ ಮಾತಿನ ಉದ್ದೇಶವಲ್ಲ. ಕನ್ನಡದಲ್ಲಿ ಯತಿಯನ್ನು ತರಬೇಕೆಂಬುದೂ ಅಲ್ಲ. ನಿದರ್ಶನಕ್ಕಾಗಿ ನನ್ನ ಸವರಣೆಯಪದ್ಯವಷ್ಟೆ. ನನ್ನ ಅಭಿಪ್ರಾಯ ವ್ಯಕ್ತವಾಗದಿದ್ದರೆ ಅದು ನನ್ನ ಬರವಣಿಗೆಯಮಿತಿ. ಕ್ಷಮಿಸಿ.ತೇಟಗೀತಿ ಪ್ರಸ್ತುತ ಛಂದೋಬಂಧವಾದ್ದರಿಂದ ಅದರ ಮೂಲರೂಪದ ಕೊನೆಯ ಎರಡು ಗಣಗಳ ಸೊಗಸು ಹೇಗೆ ಲಯದಾಯಿಎಂಬುದನ್ನು ಮನವರಿಕೆ ಮಾಡಿಕೊಡುವುದಷ್ಟೆ ಉದ್ದೇಶ. ಸೀಸಪದ್ಯದಲ್ಲೂ ಈ ತ್ರಿಮಾತ್ರಾದ್ವಯಾಂತ್ಯದ್ದೇ ಸೊಗಸು. ನಿಮ್ಮ ಪದ್ಯಗಳಲ್ಲಿ ಅದು ಪಾಲಿತವಾಗಿರುವುದನ್ನು ಚೆನ್ನಾಗಿ ಬಲ್ಲೆ. ಪಂಚಮಾತ್ರಾಗಣದ (ತೆಲುಗಿನ ಇಂದ್ರಗಣ ನಿಯಮವಿರದ) ಸೌಲಭ್ಯ ಕನ್ನಡದ ಸೊಗಸು. ನನ್ನ ಮಾತೇನಿದ್ದರೂ ಕೊನೆಯ ಎರಡು ಗಣಗಳನ್ನು ಕುರಿತು. ಇಲ್ಲಿ ನಮ್ಮಸ್ನೇಹಿತರ ಅನೇಕ ಪೂರಣಗಳಲ್ಲಿ ಪಾದಾಂತ್ಯದ ಎರಡು ಗಣಗಳು ಗತಿ ತಪ್ಪಿದ್ದರಿಂದ, ಆ ಎರಡು ಮಾತನ್ನು ಬರೆದೆ. ವಂದನೆಗಳು

        • ಕ್ಷಮೆಯ ಮಾತೇಕೆ? ನಿಮ್ಮಿಂದ ಕಾವ್ಯಕಲನ-
          ವಿಮಲಹೃದಯ! ಕ್ಷಮಾಭ್ಯರ್ಥಿ ವಿನತನಿಲ್ಲಿ|
          ಸಮೆದೆನಂಜಲಿಮುದ್ರೆಯಂ; ಶಂಕರಮಲಾ
          ವಿಮತವೈರಸ್ಯಮಿಲ್ಲದೀ ವಿನಿಮಯಂಗಳ್ 🙂

          • ವಿದಿತ ಶಾಸ್ತ್ರಾಳಿವಸ್ತ್ರ, ಛಂದಸ್ಸು ನಡಿಗೆ
            ಹೃದಯ ಕಾವ್ಯಾಬ್ಧಿ, ಯವಧಾನ ಭಾವದಡುಗೆ
            ನದಿಯ ಗಮನವೆ ಮಾತಾಗಿ ತರ್ಕ ಗುಡುಗೆ
            ಬದುಕು ಸಾಗಿಪ್ಪ ಸಿದ್ಧನೆ, ಮಣಿದೆನಡಿಗೆ

          • ಯತಿಮೈತ್ರಿಯ ಅಂಜಲಿಗೆ ಆದ್ಯಂತಪ್ರಾಸಗಳ ಪ್ರಣಾಮ ! 🙂

    • ತೇಟಗೀಟೀಯ ನಿಯಮವನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟದ್ದಕ್ಕೆ ಗಣೇಶ್ ಸರ್ ಮತ್ತು ಮೌಳಿಯವರಿಗೆ ಧನ್ಯವಾದಗಳು

  23. ಮಳೆಯ ಧಾರೆಯಂದದೆ ಸುರಿದು ತಣಿಪ ಪರಿಯಿಂ
    ಇಳೆಯ ಮಾಧುರ್ಯಮೊಂದಾಗಿ ಬಂದ ಸಿರಿಯಿಂ

    ನಳಿನಮುಖಿ ಕಂದಕೃಷ್ಣನೇ ನುಡಿಪ ತೆರದಿಂ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    • ಪೂರಣದ ನಾವೀನ್ಯ ಪ್ರಶಂಸನೀಯ. ಆದರೆ ನಳಿನ ಎಂಬ ವಿಶೇಷಣಕ್ಕೆ ಅರ್ಥಸಮಗ್ರತೆಯಿಲ್ಲದ ಕಾರಣ ಹೊಂದುತ್ತಿಲ್ಲ; ಇದು ಪ್ರಾಸಕ್ಕಾಗಿ ಮಾಡಿದ ತ್ರಾಸವಾಗಿದೆ:-) ಜೊತೆಗೆ ಧಾರೆಯವೊಲ್, ನಿಂದವೊಲ್ ಎಂದು ವ್ಯಾಕರಣಶುದ್ಧಿಯಾಗಬೇಕಿದೆ.

      • ಪದ್ಯವೀಗ ಸರಿಯಾಗಿದೆ ಎಂದುಕೊಂಡಿರುವೆನು ಸರ್ ,ಧನ್ಯವಾದಗಳು.

    • ಚೆನ್ನಾಗಿದೆ

  24. ಕಳೆದ ರಾಮಾಯಣಾಂತಃಕರಣದ ಭಾವಂ
    ತಳೆದು ಭಕ್ತಿರಸಮಾರ್ದ್ರಾಭಿರಾಮಪೂರ್ಣಂ
    ತಳಿತಶೃತಿರಾಗಸಂಗೀತರಚನಲೋಲಂ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    “ಶ್ರೀರಾಮನು ಒಲವಿನಿಂದ” ಅಲ್ಲ, ಆದರೆ “ಶ್ರೀರಾಮನ ಒಲವಿನಿಂದ”

    [ರಾಮಾಯಣದ ಅಂತಃಕರಣದ ಭಾವವನ್ನು ತಳೆದು ಮಧುರವಾದ ಪ್ರೇಮಭಕ್ತಿರಸದಿಂದ ಸಂಗೀತರಚನಾಲೋಲನು (ತ್ಯಾಗರಾಜ!), ಶ್ರೀರಾಮನ ಒಲವಿನಿಂದ ಕೊಳಲನೂದಿದಂ ]

  25. ಮೊಳೆತ ಮತ್ಸರಂ ಕೌಸಲ್ಯೆಯಂ ಸುಡುತಿರೆ
    “ಸೆಳೆದ ಸವತಿಯ”ನ್ನೆಂಬಶೋಕದೊಳು ನವೆಯು –
    ತ್ತಳುವ ತಾಯ ಶೋಕಕ್ಕೆ ತಂಪನ್ನೆರೆಯಲೆಂ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    [ಸವತಿಮಾತ್ಸರ್ಯದಿಂದ ಅಳುತ್ತಿದ್ದ ಕೌಸಲ್ಯೆಯ ದುಃಖಶಮನಕ್ಕಾಗಿ ಬಾಲರಾಮನು ಒಲವಿನಿಂದ ಕೊಳಲನೂದಿದನು]

    • ಪೂರಣದ ನಾವಿನ್ಯ ನಿಜಕ್ಕೂ ಮೆಚ್ಚುವಂತಿದೆ…ಅಭಿನಂದನೆಗಳು.

    • ರಾಮ್ ಎಲ್ಲಾ ಸರಿ, ಬಾಲರಾಮನಿಗೆ ಅದುಹೇಗೋ ಕೊಳಲು ನುಡಿಸಲು ಬಂದುಬಿಟ್ಟಿತಲ್ಲ ಅದು ಇನ್ನೂ ಸಮಸ್ಯೆಯೇ ಆಗಿ ಉಳಿದಿದೆಯಲ್ಲ 🙂

      • ಪ್ರಿಯ ಸೋಮ,
        ಕೊಳಲನ್ನು ಯಾವುದೇ (ಯಃಕಶ್ಚಿತ್) ಬಾಲರಿಗೆ ಕೊಟ್ಟರೆ, ಮಾನವ (even ವಾನರ) ಸಹಜವಾದ ಕುತೂಹಲಾದಿ ಸ್ವಪ್ರೇರಣೆಯಿಂದ ಅದನ್ನು ಊದಬಲ್ಲವರಾಗಿರುತ್ತಿರಲಾಗಿ, ಬಾಲರಾಮನು ಕೊಳಲನ್ನೂದಿದರೆ ಆಶ್ಚರ್ಯ ಪಡಬೇಕಿಲ್ಲ 🙂

        ಅವನು ಕೊಳಲಿನಲ್ಲಿ ನಳಿನಕಾಂತಿ ಮುಂತಾದ ರಾಗಗಳನ್ನು ಊದಿದನೆಂದೇನೂ ಪದ್ಯದಲ್ಲಿ ಇಲ್ಲವಲ್ಲ 😀

        • ನಿಜ ರಾಮ್ :), ನಿಮ್ಮ ಪೂರಣವು ಮತ್ತು ನಾನು ತೆಗೆದ ತಗಾದೆಗೆ ಪ್ರತಿಕ್ರಿಯೆಯೂ ಚೆನ್ನಾಗಿದೆ 🙂

      • ಬಲರಾಮನು ಕೊಳಲನ್ನು ಊದಿದ ಉಲ್ಲೇಖ ಭಾಗವತದಲ್ಲಿ ಇದೆ.

  26. ಮತ್ತೊಂದು ಪರಿಹಾರಕ್ಕೆ ಬೇರೆ ಮಾರ್ಗ ಕಾಣದೆ, ’ಬ್ರಹ್ಮಚಾರಿ’ ಗೆಳೆಯರ ಕ್ಷಮೆಕೋರಿ.

    ಕಳೆದ ವಿಪ್ರಲಂಭದ ಶೇಷ ಕೂಡಿ ಬಲಿಯೆ
    ಬಳಸಿ ಬಿಗಿಯಪ್ಪಿ ಮುದ್ದಿಸುತಾಟ ಮುಗಿಯೆ
    ಗುಳುಗು ಳುಕುಗುಳ್ಳು ಪಿಸುಮಾತ ಸತಿಯಕಿವಿಗೆ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

  27. ಕಾಕಾಸುರನ ಘಾತಕ್ಕೆ ನಿಸ್ತ್ರಾಣಳಾದ ಸೀತೆಯನ್ನು ಶ್ರೀರಾಮ ಉಪಚರಿಸಿದ ರೀತಿಯ ಕಲ್ಪನೆ

    ಬಳಲಿ ಸ್ಪೃಹೆದಪ್ಪೆ ಕಾಕಾಸುರಾಕ್ರಮಣದಿ
    ಮಿಳಿತ ಮೂಲಿಕಾಭಸ್ಮವಂಗೈದು ಪಿಡಿದು
    ಇಳಿತದೋರ್ವಂತೆ ಹಿತಮೊಂದೆ ಮುಖದ ಮೇಲ
    ಕ್ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    ಮುಖದ ಮೇಲಕ್ಕೆ, ಒಳಲೆಯನ್ನು (ಭಸ್ಮವಿರುವ) ಊದಿದ.
    ಮಕ್ಕಳಿಗೆ ಹಾಲುಕುಡಿಸುವ ಲೋಹದ ಒಳಲೆ ಕಾಡಿನಲ್ಲಿ ಹೇಗೆ ಬಂತೆಂಬ ಅನುಮಾನ ಬೇಡ. ಆ ಆಕಾರದ್ದು ಬಿದಿರಿನದೋ ಎಲೆಯಿಂದ ಮಾಡಿದ್ದೋ ಆಗಬಹುದು 🙂

    • ತುಂಬ ಹೊಸಬಗೆಯ ಕೀಲಕಪದದಿಂದ ಪೂರಣವನ್ನು ಸಾಧಿಸಿದ ಪರಿ ಸುತರಾಂ ಸ್ತುತ್ಯ.

    • ಮೌಳಿಯವರೇ ಒಳಲೆಯ ಕೀಲಕವನ್ನು ಬಹಳ ಚೆನ್ನಾಗಿದೆ ಹೊಂದಿಸಿರುವಿರಿ, ಚೆನ್ನಾಗಿದೆ

  28. ಕೊಳವೆಯಿಂದೂದುತೊಲೆಯ ಕೆಂಡಂಗಳುರಿಸ –
    ಲೆಳಸಿ ಸೋಲ್ತು ಕಣ್ಣೀರಮೊಗಮಾದ ಬಾಲೆಗೆ
    ತಿಳಿಸಿ ತೋರಿ ಪರಿಯಗ್ನಿ ನಲಿದಾಡೊ ಗೀತಕೆ

    ಲೆಳಸಿ ಕಣ್ಣೀರಮೊಗದ ಬಾಲಿಕೆಯ ರಮಿಸಿ
    ತಿಳಿಸುತಗ್ನಿ ಸಂಗೀತಕ್ಕೆ ನೆಗೆದು ನಲಿಯೆ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    [ಬಾಲೆಯೊಬ್ಬಳು ಒಲೆಯುರಿಸಲು ಕೊಳವೆಯಲ್ಲಿ ಊದಿ ಸೋತು ಕಣ್ಣೀರ ಮೊಗವಾಗಿದ್ದಳು. ಅವಳಿಗೆ ಕೊಳಲನ್ನೂದುತ್ತಾ ಅಗ್ನಿಯನ್ನು ನಲಿಸುವ (ಉರಿಸುವ) ಪರಿಯನ್ನು ಶ್ರೀರಾಮನು ಒಲವಿನಿಂದ ತೋರಿಸಿದನು]

    • Dear Ram, krishnaleela of Srirama is good ! Please finetune 2nd and 3rd line. The comments on tetageethi may through some light.

      • ಪ್ರಿಯ ಮೌಳಿ,

        ತೇಟಗೀತೆಯ ಧಾಟಿ ತಿಳಿಯದೆಯೇ construction ಕೆಲಸ ಮಾಡುತ್ತಿದ್ದೇನೆ. ಮೊದಲು ಅಂಶ ಛಂದಸ್ಸಿನಡಿಯಲ್ಲಿ ವಿವರಗಳಿದ್ದುದರಿಂದ, ಕರ್ಷಣ ಕೂಡಿಸಿ ಬರೆದಿದ್ದೆ. ಪ್ರಸಾದರು ಛಂದೋಲಕ್ಷಣ ನುಂಗಿದರೆಂಬ ಗಣೇಶರ ನುಡಿಯಿಂದ ಎಚ್ಚರಿತು, ೨ ಪದ್ಯಗಳನ್ನು ಮಾತ್ರಾ ಛಂದಸ್ಸಿಗೆ ಶರವೇಗದಲ್ಲಿ ಹೊಂದಿಸಿದ್ದಾಯಿತು. ಈಗ, ೨-೩ ಸಾಲುಗಳಲ್ಲಿ, ಹೆಚ್ಚಾಗಿ ಕೊನೆಯ ಗಣದಲ್ಲಿನ ೪ ಮಾತ್ರೆಗಳು ತೊಂದರೆಕೊಡುತ್ತಿವೆಯೆನಿಸುತ್ತದೆ. ತೋರಿದಂತೆ ಸರಿ ಮಾಡಿದ್ದೇನೆ.

        ಹಾಗೆಯೇ ಇದು ಶ್ರೀರಾಮನ ಕೃಷ್ಣಲೀಲೆಯಲ್ಲ. ಬಾಲೆ ಅಂದರೆ ಸಣ್ಣ ಹುಡುಗಿ. ರಾಮರಾಜ್ಯದಲ್ಲಿ ಪ್ರಜೆಗಳಿಗೆ ಅನುಕೂಲಗಳನ್ನು ಕಲ್ಪಿಸುತ್ತಾ ಅನೇಕ ಜನಹಿತ ಕಾರ್ಯಗಳನ್ನು ಮಾಡಿರಬಹುದಾಗಿ, ಒಲೆಯುರಿಸುವುದರಲ್ಲಿರುವ ಕಷ್ಟದ ನಿವಾರಣೆಯನ್ನು ಕೊಳಲಿನ ಮೂಲಕ ತೋರಿಸಿದ [ಅರ್ಥಾತ್, ಊದುಗೊಳವೆಯಯೊಡನೆ ಹೆಣಗುವ ಬದಲು, ಕೊಳಲನ್ನು ನುಡಿಸುತ್ತಾ ಗಾಳಿಯನ್ನು ಒಲೆಯೆಡೆಗೆ ಹರಿಸುತ್ತಾ, ಸಂಗೀತದ ಆನಂದವನ್ನೂ ಪಡೆಯುವ ಪರಿಯನ್ನು ತೋರಿಸಿದ ಎಂಬುದು ಆಶಯ] 😀

        • ಪ್ರಿಯ ರಾಮ್,

          ನಿಮ್ಮ ಶ್ರದ್ಧೆ ಪ್ರಾಮಾಣಿಕ ಪ್ರಯತ್ನ ಉತ್ಸಾಹಗಳು ಅನುಕರಣೀಯ. ಸವರಿಸಿದ ಪದ್ಯಬಂಧ ಅಪ್ಪಟ ಕನ್ನಡದ ತೇಟಗೀತಿಯೇ. ಅಭಿನಂದನೆಗಳು.ವೇಣುವಾದನ ಕೃಷ್ಣನಿಗೆ ಬಂದ ಹಣೆಪಟ್ಟಿ. ಶ್ರೀರಾಮ ಏಕೆ ನುಡಿಸಿರಬಾರದು? ರಾಮಾಯಣದಲ್ಲಿವೆಂದಮಾತ್ರಕ್ಕೆ ಕಲ್ಪನೆಗೆ ಕೊರತೆಯೇ? ’ಕೃಷ್ಣಲೀಲೆ’ ಪದವನ್ನು ಗಂಭೀರವಾಗಿ ಪರಿಗಣಿಸಿದಂತಿದೆ ! ಭಾವ ನವೀನವಾಗಿದೆ. ಕೃಷ್ಣನ ಸ್ವಭಾವವನ್ನು ನೆನಪಿಸುವುದರಿಂದ ಹಾಗೆಂದೆ 🙂 ಊದುಗೊಳವೆಯಿಂದ ಒಲೆಗೆ ಗಾಳಿಹಾಯಿಸುವ ರಾಗಪಾಕಪ್ರಯೋಗ ಮತ್ತೆ ಮತ್ತೂರಿಗೆ ಹೋದಾಗ ಮಾಡಿನೋಡೋಣ 🙂

          • ಪ್ರಿಯ ರಾಮ್, ಈ ನಿನ್ನ ಪೂರಣದ ಹೊಸತನ ತುಂಬ ಸೊಗಸಾಗಿದೆ. ಮುಖ್ಯವಾಗಿ ಕೊಳಲು ಊದುಗೊಳಲಾದ ಪರಿಯೂ ಅಗ್ನಿಯು ಈ ಮೂಲಕ ಹೊಮ್ಮಿದ ಸಂಗೀತದಿಂದ ಹಿಗ್ಗಿದ ಬಗೆಯೂ ತುಂಬ ಕಾವ್ಯಕೌಶಲಕ್ಕೆ ನಿದರ್ಶನ.

    • (ಯತಿಮೈತ್ರಿ ಸಹಿತ)
      ಮೂರು ಮಾರ್ಗಂಗಳಿಂ ತೋರ್ದು ಮತ್ತೆ ನವತಾ
      ಸ್ಫಾರಕಿರಣಾಳಿಯಿಂ ಮೆರೆದ ಸಾಹಸಮಿದೇಂ!

    • _/\_

    • ಬಹಳ ಚೆನ್ನಾಗಿದೆ ರಾಮ್, ಹೊಸ ಕಲ್ಪನೆ. ಅಗ್ನಿಸಂಗೀತ… 🙂

  29. ಭಳಿರೆ! ತಾಯಿ ತನ್ನವಳಿ ಬಾಲಕರನುಂ ಸಂ-
    ಬಳಿಸಿ ರಾಮ-ಕೃಷ್ಣರ ವೇಷ ತೊಡಿಸಲಂದುಂ ।
    ಎಳೆಯ ಕೃಷ್ಣನುಂ ಬಿಲ್ಲ ಬೇಡಿದೊಡನಿತ್ತಾಂ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ ।।

    • ಬಹಳ ಸುಂದರವಾದ ಪೂರಣ.
      ಮೂರನೆಯ ಸಾಲಿನಲ್ಲಿ ಇತ್ತು + ತಾಂ ಎಂದರೆ ಇತ್ತಾಂ ಆಗಲಾರದು. ಆದ್ದರಿಂದ “ಬೇಡಿದೊಡನಿತ್ತು” ಎಂದು ಮಾಡಬಹುದೆನಿಸುತ್ತದೆ.

    • ಭಳಿರೆ! ನೂತನದ ಪರಿಹಾರಮಾರ್ಗದಿಂದೆ
      ತಳೆದುದೇಂ ಪದ್ಯದಿಳೆಯುಷೆಯನೀಗಳಿಂತು|

      • ಓಹ್ ಇಂಥ ಸೊಗಸಾದ ಕಲ್ಪನೆ ಕವಯಿತ್ರಿಗೇ ಸಹಜವೇನೋ.ರಾಮ್ ಸೂಚಿಸದಂತೆ ಮೂರನೆಪಾದದಲ್ಲಿ ಸವರಣೆಮಾಡಿದರೆ ಚೆನ್ನ. “ಸೆಳೆಯೆ ಬಿಲ್ಲಂಬುಗಳಕೃಷ್ಣ ರಾಮನಿಂದಂ”ಎನ್ನಬಹುದು.

    • Fine pUraNa

      • ದಿಟ, ಇಷ್ಟೆಲ್ಲ ಸಾಧ್ಯತೆಗಳ ಬಳಿಕ ಹಚ್ಚಹೊಸತಾಗಿ ಮೂಡಿದ ಈ ಪೂರಣದ ಸೊಗಸು ಸುತರಾಂ ಸ್ತುತ್ಯ.

    • ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬುಹೃದಯದ ಧನ್ಯವಾದಗಳು.
      ತೇಟಗೀತಿಯ ಧಾಟಿಯಲ್ಲಿ ಕೊಂಚ ಬದಲಾವಣೆ:

      ಭಳಿರೆ! ತಾಯಿ ತನ್ನವಳಿ ಬಾಲಕರನೊಲಿಸೆ
      ಬಳಲಿ, ರಾಮ-ಕೃಷ್ಣರ ವೇಷ ತೊಡಿಸಲಂದು ।
      ಎಳೆಯ ಕೃಷ್ಣತಾಂ ಬಿಲ್ಲ ಬೇಡುತಳಲವನ
      ಕೊಳಲನೂದಿದಂ ಶ್ರೀರಾಮನೊಲವಿನಿಂದಂ ।।

      (ಅಂಶ ಛಂದಸ್ಸಿನ ಬಗ್ಗೆ ಹೆಚ್ಚು ತಿಳಿಯಬೇಕಿದೆ)

      • ಬಹಳ ಹಿಡಿಸಿತು, ಇನ್ನೊಮ್ಮೆ ಕೆಲಸದ ನೆವ ಹೇಳಿ ಪದ್ಯಪಾನಕ್ಕೆ ಗೈರುಹಾಜರಾಗುವಂತಿಲ್ಲ… ಆಯ್ತಾ 🙂

        • (crow-crew)-CROWNಗೆ ಧನ್ಯವಾದಗಳು ಸೋಮ, ಕೆಲಸಕ್ಕೆ VR ತೆಗೆದುಕೊಳ್ಳುವ ಯೋಚನೆ ಇದೆ !!

  30. ಹೊಳೆಯ ತೀರದೊಳೆ ಬೆಳೆದಿದ್ದ ನೀಳಬಿದಿರ –
    ನೆಳೆದು ಕತ್ತರಿಸಿ ಕೆಲವು ರಂಧ್ರಗಳ ಕೊರೆದು
    ನೆಳಲ ಹಾಸಿನೊಳು ತಾನೆ ಮಾಡಿದೆಳೆ ಬಿದಿರ
    ಕೊಳಲನೂದಿದ೦ ಶ್ರೀ ರಾಮನೊಲವಿನಿ೦ದ೦

    ಎಳೆ ಬಿದಿರು = ಇನ್ನೂ ಹಸಿಯಾಗಿರುವ ಬಿದಿರು

    • ರಾಮನು ಕೊಳಲನ್ನು ಹೇಗೆ ಊದಿದನು ಅನ್ನುವುದು ಸಮಸ್ಯೆಯಾಗಿದ್ದರೆ, ತಾವು ರಾಮನಿಗೆ ಕೊಳಲಿನ ಪ್ರಾಪ್ತಿ ಏಗಾಯಿತು ಎನ್ನುವ ಸಮಸ್ಯೆಯನ್ನು ಪರಿಹರಿಸಿದ್ದೀರಿ 🙂

  31. ದ್ವಿಪದಿಗಳೊಳು ಕೊಪ್ಪಲತಾನು ಪೊಸೆಯೆ ಋಚಮಂ (ಪದ್ಯ)
    ನೆಪದೆ ನುತಿಗೈಯೆ ಪಾನಿಗಳನದರ ಸೊಗಮೇ-|
    ನುಪಕೃತಿಯುಮೇನು! ಶಬ್ದಭೂಯಿಷ್ಠ ಮೇಣಾ-
    ಗಿಪುವು ಕಾವ್ಯಮಯ-ಬೋಧಪ್ರದಮೆಮಗಿಂದುಂ||

    • ಸಂಸ್ಕೃತಪದಗಳಲ್ಲಿ ಶಿಥಿಲದ್ವಿತ್ವಕ್ಕೆ ಆಸ್ಪದವಿಲ್ಲ ಪ್ರಸಾದು:-(

    • ತೇಟಗೀತಿಯೊಳ್ ಪದ್ಯರಚನಾವಿಧಾನಂ
      ತೋಟಕಂಗಿಷ್ಟಮಾಗಿರ್ದುದದರಿನೀಗಳ್
      ಮೋಟು ಮಾಡುತ್ತೆ ಬರೆಯಲ್ ದ್ವಿಪದಿಗಳಾಗ-
      ಲ್ಕಾಟದಂತೊಂದು ನೆಪಮಾಯ್ತು ಕವಿತೆಗಳ್ಗಂ||

  32. ಮಳೆಯಗಾಲದೊಂದು ದಿನದೊಳ್ ,ವಿಷದುರುಗವು
    ಸುಳಿಯೆ ಸಂಧಿಯೊಳ್,ಭಯವೊಗರೆ ಮನೆಯ ಜನದೆ,
    ಬಳಸಿ ತಂತ್ರವಂ ಹೊರಗೆಳೆವೆನೆನುತ,ತನ್ನ
    ಕೊಳಲನೂದಿದಂ ಶ್ರೀರಾಮನೊಲವಿನಿಂದ(?)

    • ನಿಮ್ಮ ಕಲ್ಪನೆಯಲ್ಲಿ ಹಾವು ಹೊರಗೆ ಬಂದ್ರೆ ‘ಒಲವು’ ಪದದ ಬದಲಿಗೆ ‘ಗೆಲುವಿ’ನಿಂದ ಅಂತ ಹೇಳಿದ್ರೆ ಚೆನ್ನಾಗಿರ್ತದೆ 🙂

    • ಅಬ್ಬಾ!….ಅಂತೂ ಪರಿಹಾರಸಾಧನೆಗಾಗಿ ಶ್ರೀರಾಮನಿಂದ ಹಾವನ್ನೂ ಹಿಡಿಸುವ ಯತ್ನ!! …..ನಿಜವಾಗಿಯೂ ಇದು ಒಳ್ಳೆಯ ಕಲ್ಪನೆ:-)

    • ರಾಮನನ್ನು ಹಾವಾಡಿಗನನ್ನಾಗಿಸಿಬಿಟ್ಟಿರಲ್ಲಾ ಅದೂ ಒಲವಿನಿಂದಂ 🙂

  33. ತುಳಿತ ತಂದಿರಲ್ ಪೊಸಜೀವ ನವಜೀವ, ದೇವಚರಣಂ –
    ಗಳಿಗೆರಗಿದಳಂ ಕುಳ್ಳಿರಿಸಿ, ಚರಣಸ್ಪರ್ಶಂ
    ಗಳಿದ ಪಾಪಪರಿಹಾರಕೆಂ ಮುದದಿ ಬೆದುರ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    [ಅಹಲ್ಯೆ ರಾಮನ ಚರಣ ಸ್ಪರ್ಶದಿಂದ ಹೊಸಜೀವ ಪಡೆದು ಆತನ ಕಾಲಿಗೆರಗಿದಳು. ಹಿರಿಯಳನ್ನು ತುಳಿದು ಉಂಟಾದ ಪಾಪದ ಪರಿಹಾರಕ್ಕೆ ಆಕೆಯನ್ನು ಕುಳ್ಳಿರಿಸಿ ಮುದದಿಂದ, ಒಲವಿನಿಂದ ಕೊಳಲನೂದಿನು]

    • ಪಿರಿಯರಂ ಪಾದದಿಂ ತಳಿದ ಪಾಪಚಯಮಂ
      ಪರಿಹರಿಸಲಾವ ಮನು-ಯಾಜ್ಞವಲ್ಕ್ಯ-ಪಾರಾ-
      ಶರಮುನೀಂದ್ರರ ಸ್ಮೃತಿಗಳೊಳ್ ಕೊಳಲನೂದಿ
      ಮೆರೆವ ಪದ್ಧತಿಗಳಿರ್ಪುವಯ್ ರಾಮಚಂದ್ರ? 🙂 🙂

      • ಪಿರಿಯ ಪರಿಹಾರಕಿನ್ನಾವ ಶಾಸ್ತ್ರದ ಮತ?
        ತೆರೆದು ಸಂತ್ರಸ್ತರಿಗೆ ನೀಡೆ ಶಾಂತಿ ಸುಖವ –
        ನರೆಘಳಿಗೆಯಾರೆ ಕಳೆಯದೇಂ ಪಾಪಚಯ ಮೇ –
        ಣೆರೆಯೆ ವಾತ್ಸಲ್ಯ ಕೂರ್ಮೆಗಳ ವರವೆ ಸಲ್ಗುಂ
        🙂

    • ರಾಮ್ ಚೆನ್ನಾಗಿದೆ. ಪೊಸಜೀವ ಅರಿಸಮಾಸವಾಯ್ತಲ್ಲ

  34. ಕೆಳೆತನಕ್ಕೆ ಹಿರಿಕಿರಿಯೆಂಬುದುಂಟೆ; ಜಗಕೆ
    ತಿಳಿಯದೆಷ್ಟೊ ಕಥೆ ಸಂದಿಪೋಗಿಹುದು ಕೇಳೈ
    ಮೊಳೆತ ನೇಹದಿಂ ಗುಹನು ನಲ್ಮೆಯಲಿ ಮಾಳ್ದ
    ಕೊಳಲನೂದಿದಂ ಶ್ರೀರಾಮನೊಲವಿನಿಂದಂ

    [ಗುಹ – ಬೇಡರ ಮುಖಂಡ ಹಾಗೂ ರಾಮನ ಗೆಳೆಯ]

  35. ಒಂದು ಕುಟುಂಬದ ಮನೆದೇವರು ಶ್ರೀರಾಮನು. ಆ ಕಟುಂಬದ ಹುಡುಗನೊಬ್ಬನಿಗೆ ಹಳೆಯ ಹಿತ್ತಾಳೆಯ ಕೊಳಲನ್ನು ಕೊಡುತ್ತ ಅವನ ತಾಯಿ ಹೀಗೆ ಹೇಳುತ್ತಾಳೆ: ಶ್ರೀರಾಮನು ದ್ವಾಪರದಲ್ಲಿ ಕೃಷ್ಣನಾಗಿ ಅವತರಿಸಿ, ಕೊಳಲು ಅವನ ಪ್ರತೀಕವೇ ಆಯಿತು. ನೀನು ಇದನ್ನು ಕಲಿ. ಶ್ರೀರಾಮನು ಹರಸುವನು. ಇದು ನಮ್ಮ ಹಿರೀಕರೊಬ್ಬರು ನುಡಿಸುತ್ತಿದ್ದ ಕೊಳಲು.

    ಎಳೆಯ ಮಗನಿಂಗೆ ಇಂತೆಂದಳವನ ಮಾತೆ
    ಪೊಳೆವ ಕೊಳಲೊಂದ ನೀಡುತ್ತೆ ಪಿರಿಯರರದಂ
    “ಕೊಳಲನೂದಿದಂ. ಶ್ರೀರಾಮನೊಲವಿನಿಂದಂ
    ’ಒಳಿತು, ಸಿದ್ಧಿಸುಗೆ ನಾದ’ಮೆನ್ನುತಲಿ ಕಾವಂ”||

    • ಪ್ರಸಾದು ಹೊಸ ಐಡಿಯಾ ಚೆನ್ನಾಗಿದೆ… ಆದರೆ ಪಿರಿಯರರದಂ ಅನ್ನ್ಯ್ ಹೇಗೆ ಬಿಡಿಸುತ್ತೀರಿ 🙂

    • ಪ್ರಸಾದು – ಕಲ್ಪನೆ ಚೆನ್ನಾಗಿದೆ. ಆದರೆ ಕೃಷ್ಣ ಮುಂತಾದವರು ಪದ್ಯದಲ್ಲಿ ತೋರಿಕೊಂಡಿಲ್ಲ. ಕೇವಲ ವ್ಯಾಖ್ಯಾನದಲ್ಲಷ್ಟೇ ಇದ್ದಾರೆ.
      ಅಥವಾ, ನೀವು ಅನೇಕ ಬಾರಿ ತಿದ್ದಿದಾಗ ಮರೆಯಾಗಿರಬಹುದೆ?

      • ಧನ್ಯವಾದಗಳು. ಇಲ್ಲ, ಆವರ್ತಿತ ತಿದ್ದುಗೆಯಲ್ಲಿ ಮರೆಯಾಗಿಲ್ಲ. 🙂 ವಿವರಣೆಯನ್ನು ಓದಿ ಹೆಚ್ಚು ಆಸ್ವಾದಿಸಬಹುದು. ’ರಾಮನೇ ಏಕೆ? ಬಹುಶಃ ಅವನು ಅವರ ಆರಾಧ್ಯದೈವವೋ ಏನೋ!’ ಎಂದು ನಾವು ಊಹಿಸುವುದಿಲ್ಲವೆ? ಅದನ್ನೇ ವಾಚ್ಯವಾಗಿ ಹೇಳಿದ್ದೇನೆ ಅಷ್ಟೆ.
        ವಿವರಣೆಯಿಲ್ಲದೆಯೇ, ತಲೆತಲಾಂತರದ ಆಸ್ತಿಯಾದ ಕೊಳಲು, ಆ ಕಲೆಯನ್ನು ಉಳಿಸಿಕೊಳ್ಳುವುದು, ರಾಮನ ಕೃಪೆಗೆ ಪಾತ್ರವಾಗುದು ಎಂಬಷ್ಟು ಸಾಕು.

  36. ಉಬ್ಬಸದಿಂದ ನರಳುತ್ತಿದ್ದವನೊಬ್ಬನು ಕೊಳಲೂದುವಾಗ ದಮ್ ಎಳೆದುಕೊಂಡನು. ಸತ್ತನು. ಆಗ ಅವನು, “నేనుమిక్కడ చచ్చిపోయష్ట్లమైతూవుంటె రామచంద్ర, నీవు కులుకుచు తిరిగేవు ఎవరికేమైతెలేనెని రామచంద్ర” ಎಂದು ನುಡಿಸುತ್ತಿದ್ದುದರಿಂದ, ಯಮಧರ್ಮನಿಗೆ ಬಿಡದೆ, ಶ್ರೀರಾಮನು ಅವನನ್ನು ಒಲವಿನಿಂದ ತನ್ನ ಕಡೆಗೆ ಸೆಳೆದುಕೊಂಡನು.

    ಕೊಳಲನೊರ್ವನುಬ್ಬಸಗ್ರಸ್ತನೂದಲಾಗಳ್
    ಕಳೆದುಕೊಂಡನಸುವ,ನ್ನೊಮ್ಮೆ ಸೆಳೆದುಕೊಳ್ಳಲ್|
    ಕೊಳಲನೂದಿ ದಮ್. ಶ್ರೀರಾಮನೊಲವಿನಿಂದಂ
    ತಳೆದು ಕಾರುಣ್ಯಮನುಮಾತನನ್ನು ಸೆಳೆದಂ||

    ಪಾಠಾಂತರ:
    ಕೊಳಲನೂದಿ ದಮ್. ಶ್ರೀರಾಮನೊಲವಿನಿಂ ದಮ್-
    ತಳೆದು (ಧೈರ್ಯಮಾಡಿ) ಬಿಡದೆ ಯಮನಿಂಗವನ ತಾನೆ ಸೆಳೆದಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)