Sep 222014
 

Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ

  56 Responses to “ಪದ್ಯಸಪ್ತಾಹ ೧೨೭: ದತ್ತಪದಿ”

 1. ಸೊಗದಿಂಬಾರಿಸೆವಾದ್ಯಮಂ, ಕರೆವರೈ ದುರ್ಗಾಂಬನಾ ಮೂರ್ತಿಯಂ
  ಪೆಗಲೊಳ್ಪೇರಿಸಿಜಾರದಂತೆ ಕುಣಿವರ್ ಪಾಡುತ್ತೆ ಸಾನಂದದಿಂ
  ಬಗೆಯಿಂದರ್ಚಿಸಿ ನವ್ಯರೂಪಮನುತೋರಿರ್ಪರ್ಪ್ರತೀವಾರವೀ
  ಜಗದಾಸೃಷ್ಟಿಗೆನೀನೆಕಾರಣಮೆನುತ್ತುಂ ಪೂಜಿಪರ್ ನಿತ್ಯಮುಂ

  • ದತ್ತಪದನಿರ್ವಹಣೆ ಚೆನ್ನಾಗಿದೆ.
   ಮೊದಲಪಾದದಲ್ಲಿ “ದುರ್ಗಾಂಬೆಯಾ ಮೂರ್ತಿ” ಎಂದಾಗಬೇಕಲ್ಲವೇ, ‘ಪ್ರತೀವಾರ’ಎಂಬ ಶಬ್ದದ ಸಾಧುತ್ವದಲ್ಲಿ ಅನುಮಾನವಿದೆ!

   • ಒಪ್ಪಿದೆನಯ್ಯಾ! ಕೊಪ್ಪಲತೋಟ!
    ತಪ್ಪದು ಚೀದಿಗೆ ತಿದ್ದುಗೆಯು:-)
    ಜಪ್ಪಿಸೆ ಮತ್ತೂ ಪಳವಾತುಗಳ-
    ನ್ನೊಪ್ಪುವುದಯ್ ಕವಿತಾರಸಮುಂ||
    (ಪಳವಾತು = ಹಳಗನ್ನಡ)

 2. ಅಹಮನಂಬಾರಿಯಿಂದಿಳಿಸಿ ದರ್ಬಾರಳಿಯೆ
  ಸಹಕಾರ್ಯಮಾಗೆ ಸರ್ವಾಧಿಕಾರಂ
  ಸಹಜವಾರ್ಷಿಕ ದಸರೆಗನಿವಾರ್ಯ ಮಾತೃತ್ವ
  ಮಹಿಗೆಧ್ವಜಾರೋಹ ಪೂಜಾರ್ಹಮಲ್ತೆ !

  ಅಹಂಕಾರವನ್ನು ಅಪಾಯದ ಅಂಬಾರಿಯಿಂದ ಕೆಳಗಿಳಿಸಿ, ಅದರ ಆಳ್ವಿಕೆ ನಾಶವಾದಾಗ, ಸರ್ವಾಧಿಕಾರವೆಂಬ ಸ್ವಾರ್ಥ, ಸರ್ವಜನ ಸಹಕಾರಿಯಾಗಿ, ಋತುಮಾರ್ಗಕ್ಕೆ ತಿರುಗುತ್ತದೆ. ಅದನ್ನು ಗಳಿಸಲು ಮಾತೃತ್ವ ಅನಿವಾರ್ಯ. ಮಾತೃತ್ವವೆಂದರೆ ತನಗಾಗಿ ಏನನ್ನೂ ಬಯಸದ ತಾಯಿಯ ಮಮತಾಪ್ರಕೃತಿಯಲ್ಲವೆ! ಅದಕ್ಕೆ ಪ್ರತೀಕವಾದ (ತ್ರಿಮೂರ್ತಿಗಳ ಪತ್ನಿಯರ, ಸಪ್ತ ಮಾತೃಕೆಯರ ಸಮಾಹಾರ) ಮಾತೃಮಹಾಶಕ್ತಿಯ ಸೂತ್ರನೀತಿ ನಮಗೆ ತಿಳಿದಿದ್ದರೂ ಪೂಜಿಸಿ ಮರೆತುಬಿಡುತ್ತೇವೆ. ಆ ಮಾತೃತ್ವವನ್ನು ನೆನಪಿಸಲು, ದಸರೆಯಲ್ಲಿ ದುರ್ಗಾಪೂಜೆ.
  ದುರ್ಗೆ ಅಭಯಹಸ್ತದ್ವಯಗಳಿಂದ ದತ್ತಪದಗಳನ್ನು ದ್ವಿಗುಣೀಕೃತಗೊಳಿಸಿದ್ದಾಳೆ ! 🙂

  • ಆಹಾ!! ಒಂದೇ ಸಾಲಿನಲ್ಲಿ ಎರಡೆರಡು ಬಾರಿ ದತ್ತಪದಗಳನ್ನು ತಂದಿರುವ ಬಗೆ ಬಹಳ ಚೆನ್ನಾಗಿದೆ..

   • ಅಹಹ! ದ್ವಿರುಕ್ತಿಯ ಚಮತ್ಕೃತಿಯಿನೀ ಪದ್ಯ-
    ಮಹಿತಮರ್ದನಿಯಂದಮೆಣ್ದೋಳ್ಗಳಿಂ|
    ವಹಿಲದಿಂ ರಸವಿಸ್ಮಯಮನೀವುದಲ್ತೆ ಭೂ-
    ರುಹದಂತೆ ಸತ್ಪಥಪ್ರಣಯಿಯಾಗಿ||

    • ಪೊಡಮಟ್ಟೆನುಡಿಯ ಗುಡಿಯಡಿಗೆ, ಕುಸುರಿಯಕಜ್ಜ
     ಮಿಡುತ ತಿದ್ದುವ ಕಬ್ಬಮಳೆಯಗಡೆದವೊಲೇ !
     ಬಿಡತೆಯಿಲ್ಲದೆ ಸಭೆಯಲಲ್ಲೆಪುಟ್ಟುವ ಕಬ್ಬ
     ಕೆಡೆಯೆ ಮುಗಿವಿರದ ಕಬ್ಬಿನರಸಕೆ ನಿಮ್ಮಾ

   • ಪ್ರಿಯ ಚೇದಿ,

    ತಪ್ಪಿದೆ ನಮಿಸಲು
    ಒಪ್ಪುಗೆಗುಂಮೇಣ್
    ತಪ್ಪಿದ ತಪ್ಪಿಗೆನಮನವಿದು

  • ಸೊಗಸಾಗಿದೆ.

 3. || ಮತ್ತೇಭವಿಕ್ರೀಡಿತವೃತ್ತ, ಉಪಮಾಲಂಕಾರ ||

  ನವರಾತ್ರ್ಯುತ್ಸವದೊಳ್ ವಿರಾಜಿಸುತೆ ಚಾಮುಂಡಾಂಬೆಯಂಬಾರಿಯೊಳ್,
  ಬುವಿಯಂ ರಕ್ಷಿಪ ಕಾರ್ಯದೊಳ್ ದುರುಳರಂ ಕಾಠಿಣ್ಯದಿಂ ವಾರಿಸಲ್,|
  ಕವಿಗಳ್ ಬಣ್ಣಿಪ ರೂಪದಿಂದೆಸೆದು,ಸದ್ಭಕ್ತಪ್ರಜಾರಾಜ್ಯಮಂ
  ತವಕಂಗೊಳ್ಳುತೆ ತಾಯವೊಲ್ ಪೊರೆಯಲೆಂದಾಸೀನೆಯಾಗಿರ್ಪಳೈ ||

  ತಿದ್ದಿದ ಮೊದಲನೆಯ ಪಾದ:

  ನವರಾತ್ರೋತ್ಸವದೊಳ್ ವಿರಾಜಿಸುತೆ ಚಾಮುಂಡಾಂಬೆಯಂಬಾರಿಯೊಳ್,

  • ತಾಯಿಯೊಲ್ ಪ್ರಯೋಗ ಸಾಧುವೇ! ತಾಯವೊಲ್ ಅಥವಾ ತಾಯಿಯವೊಲ್ ಎಂದಾಗಬೇಕಲ್ಲವೇ? ಪ್ರಷ್ಣೆ ತಪ್ಪಿದ್ದರೆ ಕ್ಷಮಿಸಿ…

   • ಹೌದು ಚೀದಿಯವರೇ. ತಪ್ಪಾಗಿದೆಯೆಂದು ಸರಿಪಡಿಸಲು ಬಂದೆ…. ನಿಮ್ಮ ಪ್ರಶ್ನೆ ನನ್ನನ್ನು ಸ್ವಾಗತಿಸುತ್ತಿದೆ ! 🙂
    ತಾಯಿ ಎಂಬುದು ಅಚ್ಚಗನ್ನಡದ ಪದವೆಂದು ಭಾವಿಸಿ ಮೊದಲು ಹಾಗೆ ಬರೆದೆ.ಬಳಿಕ ಸಂದೇಹವಾಗಿ ಅರ್ಥಕೋಶ ನೋಡಿದಾಗ “ತಾಯ್” ಎಂಬ ಪದ ಸಂಸ್ಕೃತದಲ್ಲೂ ಕಂಡು ಬಂತು.
    “ಅಬ್ಬೆ” ಎಂಬುದು ಅಚ್ಚಗನ್ನಡವೆಂದು ಭಾವಿಸಿ “ತವಕಂಗೊಳ್ಳುತುಮಬ್ಬೆಯೊಲ್” ಎಂದು ತಿದ್ದಬಹುದೆಂದುಕೊಂಡೆ. ಆದರೆ ಅಂಬೆಯಿಂದ ಅಬ್ಬೆ ಬಂದಿರಬಹುದೇ ಎಂಬ ಸಂದೇಹ… 🙂 “ತಾಯಿಯವೊಲ್” ಎಂಬುದೇ ಸರಿಯೇ ಅಥವಾ “ತಾಯವೊಲ್” ಎಂಬುದೂ ಸರಿಯೇ ?ಆದರೂ ಸದ್ಯಕ್ಕೆ ಮೂಲದಲ್ಲಿ “ತಾಯವೊಲ್” ಎಂದು ಸವರಿದ್ದೇನೆ.

    • ಪದ್ಯ ಚೆನ್ನಾಗಿದೆ; ಚೀದಿಯ ತಿದ್ದುಗೆ ಸರಿಯಾಗಿಯೇ ಇದೆ. ನವರಾತ್ರಿ + ಉತ್ಸವ ಎಂಬಂತೆ ಸಂಧಿ ಅಸಾಧು; ಸಂಖ್ಯಾವಾಚಕ ಮತ್ತು ಕಾಲಸ್ಥಿತಿವಾಚಕಪದಗಳೊಡನೆ ರಾತ್ರಿ ಶಬ್ದವು ಬಂದಾಗ ಅದು ರಾತ್ರ ಎಂದಾಗುತ್ತದೆ: ಪಂಚರಾತ್ರ, ತ್ರಿರಾತ್ರ, ನವರಾತ್ರ ಇತ್ಯಾದಿ; ಹಾಗೆಯೇ ಮಧ್ಯರಾತ್ರ, ಪರರಾತ್ರ, ಪೂರ್ವರಾತ್ರ, ಅಹೋರಾತ್ರ, ದಿವಾರಾತ್ರ ಇತ್ಯಾದಿ. ಆದರೆ ಶಿವರಾತ್ರಿ, ರಾತಿರಾತ್ರಿಗಳೆಲ್ಲ ಹಾಗೆಯೇ ಇರುತ್ತವೆ:-). ಹೀಗಾಗಿ ನವರಾತ್ರೋತ್ಸವ ಎಂಬ ಗುಣಸಂಧಿಯಲ್ಲದೆ ನವರಾತ್ರ್ಯುತ್ಸವ ಎಂಬ ಯಣ್ ಸಂಧಿಯಾಗದು.

     • ಪದ್ಯವನ್ನು ಮೆಚ್ಚಿ,ತಪ್ಪನ್ನು ತಿದ್ದಿ, ನವರಾತ್ರೋತ್ಸವದ ಗುಣಸಂಧಿಯ ಬಗೆಗೆ ಬಹಳ ಉಪಯುಕ್ತವಾದ ಮಾಹಿತಿಗಳನ್ನಿತ್ತ ಸಹೋದರರಿಗೆ ತುಂಬ ಧನ್ಯವಾದಗಳು.

  • ಚೆನ್ನಾಗಿದೆ. ಸಂಸ್ಕೃತದಲ್ಲಿಯೂ ‘ತಾಯ್’ ಎಂಬ ಶಬ್ದವಿದೆಯೇ?!

   • ಇಲ್ಲ; ಅಬ್ಬೆ , ಅಮ್ಮ ಎಂಬುದಕ್ಕೆ ಮಾತ್ರ ಸಂಸ್ಕೃತದ ಮೂಲವಿದೆ(ಅಂಬಾ).

    • ಸಂಸ್ಕೃತದ ಅರ್ಥಕೋಶದಲ್ಲಿ( Apte)”ತಾಯ್” ಎಂಬ ಪದಕ್ಕೆ “to protect” ಎಂಬ ಅರ್ಥವನ್ನೂ ಕೊಟ್ಟಿದ್ದಾರೆ.ಹೀಗಾಗಿ ಕನ್ನಡದ “ತಾಯಿ” ಎಂಬುದು ಸಂಸ್ಕೃತದ “ತಾಯ್” ಯಿಂದ ಬಂದಿರಬಹುದೇ ಎಂಬ ಸಂದೇಹವಾಯಿತು.ಮಾಹಿತಿಗಾಗಿ ಧನ್ಯವಾದಗಳು.

   • ಪದ್ಯವನ್ನು ಮೆಚ್ಚಿದ್ದಕ್ಕಾಗಿ ಕೊಪ್ಪಲತೋಟದವರಿಗೆ ಧನ್ಯವಾದಗಳು.

  • ಚೆನ್ನಾಗಿದೆ

 4. ವಾರಿಜಾಸನೆಯೆ ಹಸೆಯೇರುಬಾರೆನುತ ಪೂ-
  ಜಾರತಿಯ ಬೆಳಗುತಲಿ ನವರಾತ್ರಿಯೊಳ್ ।
  ಧಾರಿಣಿಯೊಳಿಂತೆಮ್ಮ ಸೌಖ್ಯ ಕಾರಣಕೆ ಕುಲ-
  ನಾರಿಯರು ನುತಿಸಿಹರು ತಾಯೆನಿನ್ನಂ ।।

  • ಚೆನ್ನಾಗಿದೆ

   • _/\_

    (ಚಂದ್ರಮೌಳಿ ಸರ್ ರವರ ಈ ಪ್ರಸ್ತಾರ ರೂಪದ “ವಂದನಂ” ತುಂಬಾ ಚೆನ್ನಾಗಿದೆ, ಅಲ್ಲವೇ?!.)

    • ಪೂರಣ ಪದ್ಯಗಳು ನನ್ನವು. ಈ ನಮಸ್ಕಾರ ಚಿಹ್ನೆ ಎರವಲು ಪಡೆದಿದ್ದು, ನನ್ನ ಸೃಷ್ಟಿಯಲ್ಲ. ಆದರೆ ಮೆಚ್ಚುಗೆ ಸಂದಿದ್ದು ಚಿಹ್ನೆಗೆ ! ಅರ್ಥಪೂರ್ಣವಾದ ವಿಮರ್ಶೆ 🙂

     • ಚಂದ್ರಮೌಳಿ ಸರ್,
      ಮೇಲ್ನೋಟಕ್ಕೆ “ರ”ಗಣ (- U -)ದಂತೆ ಭಾಸವಾಗಿರಲು ಸಹಜವಾಗಿ ಬಂದ ಮೆಚ್ಚುಗೆ.
      ಬಿಡಿಸಿ ನೋಡಲು _ / \ _ (ಎರಡು ಗುರು ಒಂದುಸೇರಿ ಲಗುವಾದ / ಲಗುವು ಮೇಲ್ಮುಖವಾದ ಆಕೃತಿ / ಗುರುವಿಂದ-ಗುರುವಿನೊಡನೆ-ಗುರುವಿನೆಡೆಗೆ ಸಾಗುತ್ತಿರುವ ಪದ್ಯಪಾನ ಯಾನದ ವಿಶಿಷ್ಟ ಸಂಕೇತ !!
      ಪೂರಣ -ಪ್ರೇರಣದಿಂದ ಪರಿಚಯಿಸುತ್ತಿರುವ ನಿಮಗೂ ಸೂಕ್ತವಾಗಿ ಸಂದ ಮೆಚ್ಚುಗೆ.

  • ಅವಧಾನಿಗಳು ವಿಶದಪಡಿಸಿರುವಂತೆ, ನವರಾತ್ರದೊಳ್ ಎಂದು ಸವರಿಸಿ. ಪದ್ಯ ಚೆನ್ನಾಗಿದೆ.

   • ಧನ್ಯವಾದಗಳು ಪ್ರಸಾದ್ ಸರ್,
    ತಿದ್ದಿದ ಪದ್ಯ :

    ವಾರಿಜಾಸನೆಯೆ ಹಸೆಯೇರುಬಾರೆನುತ ಪೂ-
    ಜಾರತಿಯ ಬೆಳಗುತಲಿ ನವರಾತ್ರದೊಳ್ ।
    ಧಾರಿಣಿಯೊಳಿಂತೆಮ್ಮ ಸೌಖ್ಯ ಕಾರಣಕೆ ಕುಲ-
    ನಾರಿಯರು ನುತಿಸಿಹರು ತಾಯೆನಿನ್ನಂ ।।

    (ವಿಶದಪಡಿಸಿದ್ದು ಯಾರು? ಗಣೇಶ್ ಸರ್ ರವರೋ, ಕೊಪ್ಪಲತೋಟ ಅವಧಾನಿಗಳೋ?! )

 5. ಕಾರ್ಗತ್ತಲಂ ತರಿದ ಮಿಂಚದು,ಮೇಘಮಂ ತಾಂ
  ತೂರ್ಗಾಲಲೋಡಿಸುತೆ ವೃಷ್ಟಿಯ ಜಾರಿಪಂತೇ
  ಸೇರ್ಗೊಂಡ ಮೂಢತೆಯ ಭಾರವ ವೇಗದಿಂ ,ನೀಂ,
  ದುರ್ಗೇ!ನಿವಾರಣೆಯ ಮಾಡುತೆ ತೇಲಿಸೆನ್ನಂ

 6. ಮಹಾಸ್ರಗ್ಧರಾ||
  ನವರೂಪಂಬೊತ್ತೊಡಂ ಲೋಕದೆ ನವರಸಮಾದತ್ತು ಸಾಂಬಾರ್ಧಕಾಯೇ!
  ಭವತಪ್ತರ್ಗಾದ ತಾಪಂ ಕಳೆದುದು ತವಕಾರುಣ್ಯಚಂದ್ರಾಂಶುವಿಂದಂ
  ಶಿವನಾ ಪತ್ನಿತ್ವಮಿರ್ದುಂ ಸುರನಿಕರಕೆ ದಲ್ ವಾರದಿಂದಾದೆ ಗಂಡಂ
  ಜವದಿಂ ಕಾಯೌ ಮನೋಜಾರಿಯ ಸಖಿ ನುತಿಪರ್ಗೊಳ್ಪನೀಯುತ್ತುಮೇಗಳ್||
  (ಸಾಂಬನ ಅರ್ಧಾಂಗಿಯೇ- ನೀನು ನವರೂಪಗಳನ್ನು ಪಡೆದಾಗ ಲೋಕದಲ್ಲಿ ನವರಸಗಳಾದವು.(ನವ=ಹೊಸ/ಒಂಬತ್ತು, ಇಲ್ಲಿ ಶ್ಲೇಷಾಲಂಕಾರವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ), ಭವದಲ್ಲಿ ತಪ್ತರಾದವರ ತಾಪವು ನಿನ್ನ ಕಾರುಣ್ಯವೆಂಬ ಚಂದ್ರಕಿರಣಗಳಿಂದ ಕಳೆದುದು (ರೂಪಕಾಲಂಕಾರ), ಶಿವನ ಪತ್ನಿತ್ವವಿದ್ದರೂ ನೀನು ವಾರದಿಂದ ಸುರನಿಕರಕೆ ಗಂಡ ಆದೆ.(ಪತಿ-ಎಂಬರ್ಥದಲ್ಲಿ ವಿರೋಧಾಭಾಸ, ಆಪತ್ತು ಎಂಬರ್ಥದಲ್ಲಿ ವಿರೋಧ ಪರಿಹಾರ; ಗಣಪತಿಯ ಶಿರಸ್ಸನ್ನು ಕಡಿದಾಗ ಪಾರ್ವತಿ ವಿವಿಧ ರೂಪದಿಂದ ದೇವತೆಗಳನ್ನು ಪೀಡಿಸಿದ್ದಳು.) ಮನೋಜಾರಿಯ ಸಖಿಯೇ! ಸದಾ ನಿನ್ನನ್ನು ನುತಿಸುವವರಿಗೆ ಒಳ್ಳೆಯದನ್ನು ಮಾಡುತ್ತ ಕಾಯೌ)

  • ನುಡಿ ಮೂಡಿತ್ತೈ ಮಹಾಸ್ರಗ್ಧರೆಗೆ ನಲಿವಳೈ ದುರ್ಗೆ ಸಾಲಂಕೃತಾತ್ಮಳ್

 7. ಗಜಮುಖನತಾಯೆ ಕಾರುಣ್ಯದಿಂನೋಡೇನೀ
  ತ್ರಿಜಗದೊಡೆಯನಸತಿಯೆಬಾರೆಧರೆಗೆ|
  ಬಿಜಯಮಂ ನೀಡೆನ್ನ ಬನ್ನವನಿವಾರಿಸೈ
  ಭಜಿಪೆ ಪೂಜಾರಾಧನೆಯ ಸಲ್ಲಿಸಿ|

 8. ಹರನ ತೋಳ್ಬಲಕಾರಳುಂ ನೀಂ,ಮಹಾ-
  ದುರುಳ ನಾಶನಕಂ ತಲವಾರವುಂ |
  ಕರುಣೆ ತೋರುತುಂ ಬರಬಾರದೇಂ
  ನರನ ಸಂಕಟವೆಂಬಿಳಿಜಾರದೊಳ್?||

  • ಯಾವ ಛಂದಸ್ಸಿದು?

  • ಪ್ರಿಯ ಚೀದಿ, ಇದು ದೃತವಿಲಂಬಿತವೃತ್ತವಿರಬೇಕು. ಆದರೆ ಕೆಲವೊಂದು ಛಂದೋಭಂಗಗಳಾಗಿವೆ. ಅವನ್ನೂ ಅರಿಸಮಾಸಗಳನ್ನೂ ತಿದ್ದಿದರೆ ಹೀಗಾದೀತು:
   ಹರನ ತೋಳ್ವಲದಾಕೆಯೆ! ನೀಂ ಮಹಾ-
   ದುರಿತನಾಶಕೆನಲ್ ಕರವಾಲ(ರ)ಮಂ| (ತಲವಾರ್ ಎಂಬುದು ಹಿಂದಿಯ ಪದ)
   ಧರಿಸಿ ಕಾಪಿಡೆಲೇಂ ಬರಬಾರದೇ?
   ನರರ ಸಂಕಟಮೆಂಬಿಳಿಜಾರಿನೊಳ್||

   • ಹೌದು ಸರ್. ಇದನ್ನು ದೃತವಿಲಂಬಿತವೆಂದೇ ಬರೆದದ್ದು 🙂
    ಪದ್ಯವನ್ನು ಸರಿಮಾಡಿಕೊಟ್ಟಿರುವುದಕ್ಕೆ ಧನ್ಯವಾದಗಳು.
    ಆದರೆ ನನ್ನ ‘ಕಾರ್’ ಕಳೆದುಹೋಗಿದೆ ಅಷ್ಟೇ 🙂
    ಅದಕ್ಕೆ ಮೊದಲಸಾಲನ್ನು ಹೀಗೆ ಮಾಡಬಹುದೇ?-
    “ಧರೆಯ ಬಲ್ಮೆಯಕಾರಿಣಿ ನೀಂ!ಮಹಾ-“

    • ಕಾರಿಲ್ಲದ ನಾನು ನಿಮ್ಮ ಪಾಲಿನ ಕಾರನ್ನು ಕಳೆದುದರಲ್ಲಿ ಯಾವುದೇ ಅಚ್ಚರಿಯಿಲ್ಲ:-) ಅದನ್ನು ಮತ್ತೆ ಹುಡುಕಿ ದಕ್ಕಿಸಿಕೊಂಡ ನಿಮ್ಮ ಕೌಶಲ ಮೆಚ್ಚುವಂತಿದೆ. ಅಡ್ಡಿಯಿಲ್ಲ, ನಿಮ್ಮ ಈಗಿನ ಕಾರ್ ಯಾವುದೇ ರಿಪೇರಿಯ ಆವಶ್ಯಕತೆಯಿಲ್ಲದೆ ಸಲೀಲವಾಗಿ ಸಾಗುತ್ತದೆ:-)

     • 🙂

      ನನ್ನ(?) ಪದ್ಯವು ಹೀಗಿದೆ:

      ಧರೆಯ ಬಲ್ಮೆಯಕಾರಿಣಿ ನೀಂ! ಮಹಾ
      ದುರಿತನಾಶನಕೆನಲ್ ಕರವಾರಮಂ
      ಧರಿಸಿ ಕಾಪಿಡಲೇಂ ಬರಬಾರದೇ?
      ನರರ ಸಂಕಟಮೆಂಬಿಳಿಜಾರಿನೊಳ್

 9. ಭಕ್ತಾನುಗ್ರಹಮಂದಹಾಸವದನಂ ಮಾಂಗಲ್ಯಕಾರ್ಯಾತುರಾ –
  ಸಕ್ತಳ್ ಲೋಕವಿಶೋಕಕಾರಣಕರೀ ಅಂಬಾರಸಾಸ್ವಾದಿನೀ
  ರಕ್ತಾಲಂಕೃತಭೀಕರಾಸ್ತ್ರಮಸುರಾಂತಾಪೀತ ಕಂಜಾರದೊಲ್
  ಶಕ್ತಾಶಕ್ತರಿಗೆಲ್ಲ ನೀಳ್ಗೆ ಕಸುವಾರಕ್ಷಂ ಕುಡಲ್ ಬಾಳಿಗಂ

  [ಕಂಜಾರ = ನವಿಲು, ಹೊಟ್ಟೆ]

  [ಭಕ್ತರನ್ನು ಅನುಗ್ರಹಿಸುವ ಮಂದಹಾಸವದನದ ಮಂಗಳ ಕಾರ್ಯಗಳನ್ನು ಬೇಗ ಮಾಡುವುದರಲ್ಲಿ ಆಸಕ್ತಳಾದ ಲೇಕದ ಶೋಕ ನಿವಾರಿಸಲು ಕಾರಣಳಾದ, (ನವ)ರಸಗಳ [ಶೃಂಗಾರ, ವೀರ, ಭಯಾನಕ, ಭೀಬತ್ಸ, …] ಆಸ್ವಾದನೆಯು, ಅಸುರರನ್ನು ಕೊಂದು ಅಲಂಕೃತವಾದ, ರಕ್ತವನ್ನು ಕುಡಿದ ಹೊಟ್ಟೆಯಂತಿರುವ ಅಸ್ತ್ರಗಳನ್ನುಳ್ಳವಳು, ಶಕ್ತರು ಹಾಗು ಅಶಕ್ತರಿಗೆಲ್ಲಾ ಕಸುವನ್ನು ಕೊಡಲಿ ಹಾಗೂ ಬಾಳಿಗೆ ರಕ್ಷಣೆಯನ್ನು ನೀಡಲಿ]

  [ಈ ಸಮಾಸಗಳಲ್ಲಿ ತಪ್ಪುಗಳಗಿರುವ ಸಂಭಾವನೆ ಹೆಚ್ಚಿರಲಾಗಿ, ತೋರಿಸಿಕೊಟ್ಟರೆ ಉಪಕಾರವಾಗುತ್ತದೆ]

 10. ಮಲ್ಲಿಕಾ || ಚಂಡವೈರಿವಿಭಂಜಿನೀ ನಿರಯಾಸ್ಯಸನ್ನಿಭಧರ್ಷಿಣೀ
  ಭಂಡಪರ್ವತವಜ್ರರೂಪಿಣಿ ಶತ್ರುವಿಹ್ವಲಕಾರಣೋ
  ದ್ದಂಡವಿಕ್ರಮವಾರಿಣೀ ಶಿರನೀರಜಾರುಣರಂಜನೀ
  ಚಂಡಿಕಾಂಬೆಯೆ ಬಾರ್ತೆಗೆಯ್ವುದು ಕಂದನನ್ನೊಲವಿಂ ಸದಾ

  ನಿರಯ – ನರಕ
  ಬಾರ್ತೆಗೆಯ್ – ಗಮನಿಸು, ಲಕ್ಷಿಸು
  ಭಂಡಪರ್ವತವಜ್ರರೂಪಿಣಿ – ಭಂಡಾಸುರನೆಂಬ ಪರ್ವತಕ್ಕೆ ವಜ್ರಾಯುಧಪ್ರಾಯಳಾದವಳು (Ref. ಲಲಿತೋಪಾಖ್ಯಾನ)
  ವಾರಿಣಿ – ಹೆಣ್ಣಾನೆ

  • ಬಹುಕಾಲದ ಬಳಿಕ ಕಂಡ ಮೌರ್ಯಮಹಾರಾಜನಿಗೆ ಮತ್ತೆ ಹಾರ್ದಿಕಸ್ವಾಗತ:-) ನಿನ್ನೀ ಮಲ್ಲಿಕಾಮಾಲೆಯು ಒಳ್ಳೆಯ ಪದ್ಯವೇ ಹೌದು. ಆದರೆ ಕೆಲವೊಂದು ವ್ಯಾಕರಣದ ಸವರಣೆಗಳು ಬೇಕಿವೆ. ಅವು ಇಂತಿರಬಹುದು:
   ……………………..ವಿಭಂಜನೀ…………..
   ……………………………………………..
   …………………..ಕರನೀರಜಾರುಣಿಮಾಂಚಿತೇ
   …………………ಕಂದನಂ ನಲವಿಂ…………

   • ವಿಭಂಜನೀ ಹಾಗೂ ವಿಭಂಜಿನೀ ಇವುಗಳ ನಡುವೆ ಗೊಂದಲವಿತ್ತು….ಈಗ ತಿಳಿಯಾಯಿತು….ಧನ್ಯವಾದಗಳು ಗುರುಗಳೇ!

 11. ಸರ್ವಾಲಂಕಾರದೊಳುಂ
  ಪರ್ವವಿದೈ ದೇವಿಯೇರಲಂಬಾರಿಯನುಂ ।
  ನಿರ್ವಹಿಸೆನೆ ನವರಾತ್ರಿಯ-
  ಪೂರ್ವವಿಧಿಯ ಹೊತ್ತ ವಾರು ಪೂಜಾರಿಯು ತಾಂ ।।

  ವಾರು = ವಿಜಯದಾನೆ
  ಇದು ಕಂದನ ಅಂಬಾ(ರಿ)ಸ್ತುತಿ ಆದೀತೇ?!

 12. ಶಿವನ ಮೂರನೆಯ ಕಣ್ಣು ಉರಿಗಣ್ಣು. ತ್ರ್ಯಂಬಕೆಯೆ, ನಿನ್ನ ಫಾಲನೇತ್ರವು ಜ್ಞಾನಾಕ್ಷಿಯಾದರೂ, ನಿನ್ನ ಎಡಗಣ್ಣು ಬಯಕೆಯ ಪ್ರತೀಕ. ಬಯಕೆಯ ಸಾಕಾರವಾದ ಮನ್ಮಥನನ್ನು ಶಿವನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟನು. ಈ ವಿಕಲ್ಪದ ಕಣ್ಣುಗಳು ಸಂಧಿಸದಂತೆ ಹಾಗೂ ಇಚ್ಛಾನುಸಾರ ಎವೆಯಿಕ್ಕದಂತಾದುವೆ! ಕವಿಗಳಿಗೆ ಗ್ರಾಸವಾಗಲು ನೀವು ಅರ್ಥನಾರೀಶ್ವರರಾದಿರೆ!

  ಶಿವನೊಳ್ ಮೇಗಳ ದಿಟ್ಟಿ ಸಂತಪಿಸೆ ತಾಂ ಸನ್ನದ್ಧಗೊಂಡಿರ್ದಿರಲ್
  ಜವನಂ ಕಾಣಿಪ, ಜಾರನಿಂಗಿವನಿರಲ್ (ಇವ=ಜಾ/ಮಾರ) ತೃಷ್ಣಾರ್ತಿಸಾಕಾರ ತಾಂ|
  ಶಿವೆ ನಿನ್ನಾ ಫಣೆಕಣ್ಣ ದೀಪ್ತಿಯಿರಲೇಂ, ಜಾಜ್ಜ್ವಲ್ಯಜ್ಞಾನಾಕ್ಷಿವೋಲ್
  ತವೆ ತೃಷ್ಣಾರ್ತಪ್ರತೀಕ ನಿನ್ನ, ಲಲಿತೇ, ವಾಮಾಂಬಕದೃಷ್ಟಿಯುಂ||

  ಛವಿಯಿಂ ಭೇದಗಳಿಂತುಮಿರ್ದಿರುತಿರಲ್ ನಿಮ್ಮೀರ್ವರೊಳ್ ತಾಯೆ ಪೇಳ್
  ಧವನಂ ಸಂಧಿಸದೋಲು ನೀಂ, ಸತಿಯನಾ ಮಾಹೇಶ್ವರಂ ಶಾಶ್ವತಂ||
  ಎವೆಯಿಕ್ಕಲ್ಕದೊ ಸ್ವೈರದಿಂದೊರುಮೆಯುಂ ತಾಂ ಬಾರದಾಯ್ತೇಂ ವಲಂ
  ಕವಿಸ್ವಾರ್ಥಕ್ಕನುವಾಗಲಿಂತು ಜೊತೆಯೇಂ ನೀಮರ್ಧನಾರೀಶ್ವರರ್||

  ಬಹಳ ಶಿ.ದ್ವಿ.ಗಳಿವೆ; ಅದೂ ಸಂಸ್ಕೃತಸಮಾಸಗಳಲ್ಲಿ! ಎರಡನೆಯ ಪದ್ಯದ ಉತ್ತರಾರ್ಧದ ಆದಿಯಲ್ಲಿ ವಿಸಂಧಿದೋಷವಿದೆ. ಇವೆಲ್ಲವನ್ನೂ ಮನ್ನಾಮಾಡಬೇಕೆಂದು ಕೋರಿಕೆ 🙁

  • ತಿಳಿದು ತಿಳಿದೂ ಮಾಳ್ಪ ತಪ್ಪಿಗೆ ದಂಡಮತ್ಯಧಿಕಂ ಗಡಂ:-)

   • ತರಳದಂತಹ ಮುಗ್ಧಛಂದದೆ ಗೈದು ದುಷ್ಟಿಯ,ನೆನ್ನನುಂ
    ಜರಿವುದಂದವೆ ಪೇಳಿರಾರ್ಯರೆ ನಾನಿರಲ್ ಶರಣಾಗತಂ|
    “ಬರಿದೆ ಗದ್ಯದೆ ಪೇಳ್ದೆ, ಪದ್ಯವದಲ್ಲವಾಂ ಬರೆದಿರ್ಪುದುಂ”
    ತಿರುಗಿಸುತ್ತಲಿ ಮಾತನಿಂತೆನುತೆಂಬಿರೈ ಗಡ ಬಲ್ಲೆನಾಂ|| 🙂

 13. ಚೌಪದಿಯಲ್ಲಿ ಒಂದು ಪ್ರಯತ್ನ:

  ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ
  ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ
  ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು
  ಬಳಿ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!

  ಬಹಳ ದಿನಗಳ ನಂತರ ಪದ್ಯಪಾನದಲ್ಲಿ ಒಂದು ಪ್ರಯತ್ನ. ಅಲಂಕಾರಯುಕ್ತವಾಗಿದೆಯೋ ಇಲ್ಲವೋ ತಿಳಿಯದು! ( ಮೊಗಕಾರ್ಮುಗಿಲು, ಭವಾರ್ಣವ ಇವು ರೂಪಕಾಲಂಕಾರಗಳಿರಬಹುದು ಎಂದುಕೊಂಡಿದ್ದೇನೆ), ಆದಷ್ಟೂ ಅರ್ಧಾಕ್ಷರಗಳೇ ಬರಲಿ ಎಂದು ಪ್ರಯತ್ನಿಸಿದೆ ( ಕಾರ್,ವಾರ್,ಜಾರ್) – ಆದರೆ ಬಾರ್ ಅನ್ನುವುದನ್ನು ಹಾಗೆ ತರಲಾರದೆ ಬಾರೆ ಎಂಬುದರಲ್ಲಿ ಅಡಕ ಮಾಡಬೇಕಾಯಿತು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)