Dec 012014
 

ಜಾಲಿ, ಮಾಲಿ, ಗಾಲಿ, ಪೋಲಿ ಪದಗಳನ್ನು ಬಳಸಿ ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ಗೋಪಿಕಾವಸ್ತ್ರಾಪಹರಣದ ಬಗ್ಗೆ ಪದ್ಯ ರಚನೆ ಮಾಡಿರಿ

  23 Responses to “ಪದ್ಯಸಪ್ತಾಹ ೧೨೭: ದತ್ತಪದಿ”

 1. ಜಾಲಿಸಿ ಚಿತ್ತಮಂ ಜಗತಿಯಾ ಸ್ಮಿತಲೀಲೆಯೊಳಿರ್ಪ ಯೂಥಿಕಾ-
  ಮಾಲಿ ಕಲಿಂದನಂದಿನಿಯ ನೀರೊಳಗಾಡುತಲಿರ್ಪ ಪೆಣ್ಗಳಂ-
  ಗಾಲಿಗಶೋಕದಂತೆ ನೆರೆಸಲ್ವವನೊಯ್ದಿರಲೊಯ್ಯನಂಬರಂ;
  ಪೋ! ಲಿಖಿತಂ ಲಲಾಟಗತಮಪ್ಪುದೆನುತ್ತವರೊಲ್ದು ವಂದಿಪರ್

  ಯೂಥಿಕಾ=ಕಾಡುಮಲ್ಲಿಗೆ, ಕಲಿಂದನಂದಿನಿ=ಯಮುನೆ, “ಅಂಗಾಲಿಗೆ ಅಶೋಕದಂತೆ” ಇಲ್ಲಿ ದೋಹದದ ಕಲ್ಪನೆಯು ಸಂದಿದೆ. ಶ್ರೀಕೃಷ್ಣನು ಗೋಪಿಯರ ಕಾಲಿನ ಒದೆತಕ್ಕೂ ಹಿಗ್ಗಬಲ್ಲನೆಂದು ತಾತ್ಪರ್ಯ. ಗೋಪಿಯರು ತಮ್ಮ ತಮ್ಮ ವಸ್ತ್ರಗಳನ್ನು ಕಳೆದುಕೊಂಡಾಗ ಅವನ್ನೆಲ್ಲ ಮರಳಿ ಗಳಿಸಲು ಕೃಷ್ಣನಿಗೆ ಕೈಯೆತ್ತಿ ವಂದಿಸಿದ ಸಂದರ್ಭವಿಲ್ಲಿ ಗಮನೀಯ.

 2. ಗಿರಿಜಾಲಿ೦ಗಿತ ಶಿವಯೋಗಮನಾ೦
  ತೋರ್ಪೆನೆ೦ದುಮಾಲಿ೦ಗರಹಿತ೦ ಯೋಗೇಶ್ವರ೦
  ಹರಿಯು ನಮಗಾಲಿಪ್ತ ವಸನೆಯರ್ಗೆ
  ತೋರಿದನಲ್ತೆ ಮಹಸ್ತಪೋಲಿಪ್ತ ಲೀಲೆಯನು೦

  ಗೋಪಿಯರು ಕಾತ್ಯಾಯನೀ ಪೂಜೆ ಮಾಡುವ ದಿನದಲ್ಲಿ ಈ ಘಟನೆ ನಡೆದದ್ದಕ್ಕೆ ಸಾ೦ದರ್ಭಿಕವಾಗಿ ಗಿರಿಜೆಯ ಪ್ರಸ್ತಾಪ ಎ೦ದುಕೊಳ್ಳಬಹುದು. ಬಟ್ಟೆ ಬಿಚ್ಚಿದರೂ ಬಟ್ಟೆಯ ಮೇಲಿನ ಮೋಹ ಹೋಗದೆ ಇರುವ ನಮಗೆ (ಆ ಗೋಪಿಯರಿಗೆ) ಆ ಚಿದ೦ಬರತ್ವದ ರಹಸ್ಯವನ್ನು ಯೋಗೇಶ್ವರ ಕೃಷ್ಣ ತೋರುವುದು.

  • ಮಾನ್ಯರೇ, ನೀವು ಪದ್ಯಪಾನದಲ್ಲಿ ಸಕ್ರಿಯರಾಗಿರುವುದಕ್ಕಾಗಿ ಧನ್ಯವಾದಗಳು. ಆದರೆ ದಯಮಾಡಿ ಮೊತ್ತ ಮೊದಲು ಛಂದಸ್ಸಿನ ಎಲ್ಲ ಪಾಠಗಳನ್ನೂ ಚೆನ್ನಾಗಿ ಮನನಮಾಡಿಕೊಂಡು ಆ ಬಳಿಕ ಕವನಿಸಿರಿ. ವಿವಿಧಚ್ಛಂದಸ್ಸುಗಳ ಲಕ್ಷಣ, ಆದಿಪ್ರಾಸದ ಪ್ರಕಾರ, ಗಣ-ಮಾತ್ರೆ-ಯತಿ ಇತ್ಯಾದಿಗಳ ನಿಯಮಗಳನ್ನೆಲ್ಲ ಮತ್ತೆ ಮತ್ತೆ ತಿರುವಿಹಾಕಿ ಕವನಿಸಿರಿ.

 3. ಗಾಲಿಯಂತೆಯೆ ಕಾಲವೋಡಿರೆ,ಬಾಲಗೋಪನ ಚೇಷ್ಟೆಯಂ
  ಪೋಲಿಸುತ್ತಲೆ ಸಾಗಿಹರ್ ಜನ ತಮ್ಮ ಮುದ್ದಿನ ಕಂದರೊಳ್
  ಜಾಲಿಯೆನ್ನುತೆ ವಸ್ತ್ರ ಮೇಣ್ ಬಗೆ ಕೊಂಡುಪೋದನನೆಂದರೂ
  ಕಾಲುಕಟ್ಟುತೆ ಪೂಜಿಪರ್ ನರರೆಲ್ಲರೂ ವನಮಾಲಿಯಂ

  ಜಾಲಿ = ವಂಚಕ
  ಕಾಲುಕಟ್ಟು = ಶರಣಾಗು,ಕಾಲಿಗೆ ಬೀಳು
  (ಕೊಟ್ಟ ವಿಷಯಕ್ಕೆ ತಕ್ಕ ಪದ್ಯವನ್ನು ಬರೆಯಲಾಗಿಲ್ಲ )

  • ಅಡ್ಡಿಯಿಲ್ಲ; ಪದ್ಯಭಾವವು ವಿಷಯಕ್ಕೆ ಅನುಗುಣವಾಗಿಯೇ ಇದೆ. ಮಾತ್ರವಲ್ಲ, ತುಂಬ ಸಹಜವಾಗಿ ಸಲೀಲವಾಗಿ ದತ್ತಪದಗಳನ್ನೂ ತಂದಿದ್ದೀರಿ. ಅಭಿನಂದನೆಗಳು. ಆದರೆ ಸ್ವಲ್ಪ ಹಳಗನ್ನಡದ ಹದವನ್ನು ಸುಲಭದಲ್ಲಿಯೇ ತರಬಹುದಿತ್ತು.

   • ಧನ್ಯವಾದಗಳು. ಹೀಗೆ ಪದ್ಯವನ್ನು ತಿದ್ದಿದ್ದೇನೆ(ಹಳಗನ್ನಡವನ್ನು ಬಳಸಲು)

    ಗಾಲಿಯಂದದೆ ಕಾಲವೋಡಿರೆ, ಬಾಲಗೋಪನ ಚೇಷ್ಟೆಯಂ
    ಪೋಲಿಸುತ್ತಡಿಯಿಟ್ಟಿಹರ್ ಮುದದಿಂದೆ ಮೆರ್ಚಿನಕಂದರೊಳ್
    ಜಾಲಿಯೆನ್ನುತೆ,ವಸ್ತ್ರ ಮೇಣ್ ಮನಚೌರ್ಯಗೈದನನೆಂದೊಡಂ
    ಕಾಲುಕಟ್ಟುತೆ ಪೂಜಿಪರ್ ನರನಾರಿಯರ್ ವನಮಾಲಿಯಂ

  • ತುಂಬಾ ಚೆನ್ನಾಗಿದೆ.
   ಮತ್ತಷ್ಟು ಹಳೆಗನ್ನಡಿಸಲು ಬಿಟ್ಟಿ ಸಲಹೆ :-),
   ಕೊಂಡುಪೋದನನೆಂದರೂ – ಠಕ್ಕನೆಡೆಪುಸಿಮುನಿಯುತುಂ
   ನರರೆಲ್ಲರೂ -ನರರೆಲ್ಲರುಂ

 4. Without explanation nothing can be comprehended.
  Gopika (name doesn’t appear in the verse) has to attend a wedding (not stated in the verse). She is all dressed/adorned and ready (ದಂಶಿತ/ಸಂಶಿತ) except for a veil (ಜಾಲಿಕೆ) which is about a quarter (ವೇದಾಂಶ) part wet. But is the sun (ಅಂಶುಮಾಲಿ) afraid of swearwords (ಗಾಲಿ)? Will he oblige by warming up and drying up the wet veil instantly? No. So she dashes to a launderer to get it pressed dry, and on the way she trips and hurts her kneecap (ಕಪೋಲಿ-ಕಪೋಲೀ in sanskrit).
  ಅಂಶುಮಾಲಿಯು ಗಾಲಿಭೀತನೆ?
  ಸಂಶಯಮೆ, ಬೈದೊಡನವಂ ವೇ-
  ದಾಂಶಮೊಣಗದ ಜಾಲಿಕೆಯನಾಶುವಿನಿನೊಣಗಿಪನೇಂ?
  ದಂಶಿತಂಗೊಳ್ಳುತಲಿ ನೀಡಲು
  ಅಂಶುಕಾಪಹರಣಕೆ (ಅಂಶುಕ+ಆಪ/ತೇವ+ಹರಣ) ರಜಕಗೆ
  ಸಂಶಿತಳುವೋಡುತಲಿ ಬಿದ್ದು ಕಪೋಲಿಮುರಿದುದಲೆ||

 5. ಜಾಲಿಕನವತಾಂ ಮೆಟ್ಟಿಂ-
  ಗಾಲಿಟ್ಟು ವಸನವನೊಯ್ದು ಮೀಯುತಲಿರ್ದಾ
  ಮಾಲಿನಿಯರನುಂ ಪೀಡಿಪ
  ಲೋಲನ ಕಥನಂ ಕಪೋಲಕಲ್ಪಿತ ದಿಟಮೇಂ !?

  (ಜಾಲಿಕ = ತಂತ್ರಗಾರ)

 6. ಜಾಲಿಸುತ್ತಿರೆ ಬಾಲಿಕಾಳಿಯು ಮೀಹದಾಟದೆ ನೀರ,ಕಂ-
  ಗಾಲಿಗಂದೆಡೆಯಾದುದೈ ಚೆಲುಬಾಲಗೋಪನ ಲೀಲೆಯುಂ
  ಮಾಲಿಕಾಗಲಯುಕ್ತ ಪೆಣ್ಗಳ ವಸ್ತ್ರವೊಯ್ಯುತೆ ಬಾಲನಾ
  ಪೋಲಿಯಂದದ ಕೆನ್ನೆಗಳ್ ಬಿಸುಪೇರೆ ಹೋಲಿಕೆಯಾಡಿದಂ

  ಜಾಲಿಸು = ಕದಡು

  • ಪದ್ಯವೂ ದತ್ತಪದನಿವೇಶವೂ ಚೆನ್ನಾಗಿವೆ. ಆದರೆ ಸ್ವಲ್ಪ ಅರಿಸಮಾಸದ ತೊಡಕಿದೆ. ನಾಳೆ ಮುಖತಃ ತಿದ್ದುವೆ.

   • ಧನ್ಯವಾದಗಳು ಸರ್. ತಪ್ಪುಗಳನ್ನು ಪದ್ಯದಲ್ಲೀಗ ತಿದ್ದಿರುವೆ.

 7. || ಮಲ್ಲಿಕಾಮಾಲಾವೃತ್ತ || (ಗೋಪಸ್ತ್ರೀಯರ ಸ್ವಗತ)

  ಜಾಲಿಕಂ ಸೆಳೆದೊಯ್ದನೆಮ್ಮಯ ವಸ್ತ್ರಮಂ ಕಳಚಿಟ್ಟಿರಲ್,
  ಬಾಲೆಯರ್ ಜಳಕಮ್ಬೊಗುತ್ತಿರಲಿಂಥ ಮೋಸವ ಗೈಯಲಂ-|
  ಗಾಲಿನಿಂ ಚರಿಸುತ್ತೆ ಮೆಲ್ಲನೆ ಬಂದವಂ ವನಮಾಲಿಯೇಂ ?
  ಪೋಲಿಗೈವನ ಬೇಡಿಕೊಂಡೊಡೆ ನೀಳ್ಕುಮೇಂ ವಸನಂಗಳಂ? ||

  (ಜಾಲಿಕ = ಮೋಸಗಾರ , ಪೋಲಿಗೈವನ=ಹಾಳುಮಾಡುವವನ )

  • ಆಹಾ! ಬಲುಸೊಗಸಾದ ಪದ್ಯಬಂಧ; ಪದನಿವೇಶ. ಅಭಿನಂದನೆಗಳು.

   • ಸಹೋದರರೆ,ಧನ್ಯವಾದಗಳು.

 8. ತಡವಾಗಿ ಒಂದು ಪದ್ಯ… ಗೋಪಿಯರ ವಸ್ತ್ರಗಳ ಸ್ವಗತ-
  ಜಾಲಿಮರದೆಡೆಗಿವನು ಪೋದೊಡಂ ಪರಿದಪೆವು
  ಮಾಲಿಕಳ ಮಾನಮಂ ಕಳೆವೆವೀಗಳ್|
  ಗಾಲಿ(ಬಯ್ಗುಳ) ಮಾತುಗಳೆಮ್ಮ ಬಾಯ್ಗೆ ಬರುತಿಲ್ಲ ಚಿಃ
  ಪೋಲಿ! ಕೃಷ್ಣಾ! ನೀನೆ ಕಾವನಪ್ಪ!!
  (೧.ಕಾವನ>ಕಾಮನ ಅಪ್ಪ /
  ೨. ಕಾವಂ> ಕಾಯುವವನು+ ಅಪ್ಪಾ!)

  • ಕಾವನಪ್ಪ ಎಂಬ ಶ್ಲೇಷ ಚೆನ್ನಾಗಿದೆ; ಆದರೆ ಗಾಲಿಮಾತು ಅರಿಸಮಾಸವಾಯಿತು. ಅಲ್ಲದೆ ಜಾಲಿಯ ಮರಗಳು ಗೋಪಿಕಾವಸ್ತ್ರಾಪಹರಣದಂಥ ರೊಮ್ಯಾಂಟಿಕ್ ಸಂದರ್ಭಕ್ಕೆ ತಕ್ಕ ಉದ್ದೀಪನವಿಭಾವಗಳೇ? 🙂

   • ಧನ್ಯವಾದಗಳು ಸರ್.ಸ್ವಲ್ಪ ತಮಾಷೆಯಾಗಿ ಬರೆಯೋಣ ಎಂದು ವಸ್ತ್ರಗಳ ಸ್ವಗತ ಎಂದು ಆಯ್ದುಕೊಂಡೆ 🙂 ಮೂರನೇ ಸಾಲು
    “ಗಾಲಿವಾಕ್ಕಿಂತೆಮ್ಮ ಬಾಯ್ಗೆ ಬರುತಿಲ್ಲ ಚಿಃ”
    ಎಂದರೆ ಸರಿಯಾಗುವುದೇ!
    ಮೊದಲ ಸಾಲಿನ ಜಾಲಿ ಮರ ದತ್ತಪದಗುಂಫನಕ್ಕಾಗಿ ಬಂದದ್ದಷ್ಟೇ ಅಲ್ಲ.. ಬಟ್ಟೆಗಳು ಮೊದಲು ತಮ್ಮ ಬಗ್ಗೆ ಯೋಚನೆ ಮಾಡುತ್ತವೆ. ನಾವು ಬದುಕಿದ್ದರೆ(ಪೂರ್ಣವಾಗಿದ್ದರೆ) ತಾನೆ ಗೋಪಿಯರ ಮಾನ ಕಾಪಾಡಲು ಸಾಧ್ಯ 😉 ಹಾಗಾಗಿ ರೊಮ್ಯಾಂಟಿಕ್ ಸಂದರ್ಭವಾದರೂ ವಸ್ತು ಸ್ವಭಾವದ ಕಾರಣದಿಂದ ಜಾಲಿಮರದ ಪ್ರಸ್ತಾಪ ಔಚಿತ್ಯಪೂರ್ಣವೇ ಆಗಿದೆ 😉 😉 😛

 9. ಬೆಳಗು ತಂಗಾಳಿಯೊಳು ಮಿಂದಿರೆ
  ಕಲೆತು ಗೋಪಿಯರಂದು ಕೊಳದೊಳು
  ಕಳೆದು ಜಾಳಿಗೆ ದಡದೊಳಿರಿಸುತೆ ತೋಯುದೆಂದೆನುತುಂ ।
  ಕಳರ ಪೋಲಿಹ ಪೋರಕಾಣವ
  ಕೊಳಲನೂದದೆ ಕಣ್ಣ ಮಾಲಿಸಿ
  ಸೆಳೆಯುತೊಯ್ದಿಹ ಸೀರೆಯೊಡೆ ತೊಯ್ದಿದ್ದ ನೀರೆಯರಂ !!

  ಜಾಳಿಗೆ = ವಸ್ತ್ರ , ಕಳರ ಪೋಲಿಹ = ಚೋರನಂತೆ ಕಂಡ, ಮಾಲಿಸಿ = ಓರೆಗಣ್ಣಿನಿಂದ ನೋಡಿ

  “ಕಾಣ” ಬಂದುಬಿಟ್ಟಿದೆ ಪ್ರಸಾದ್ ಸರ್, ನೀವುಮಾತ್ರ ನೋಡಬೇಡಿ!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)