Nov 242014
 

image

  87 Responses to “ಪದ್ಯಸಪ್ತಾಹ ೧೨೬: ಚಿತ್ರಕ್ಕೆ ಪದ್ಯ”

  1. ಬೆಚ್ಚದೆತ್ತರವೇರುತುಂ ಮದಮೆಟ್ಟಿ ಸೂರ್ಯನ ನಿಂದನಂ
    ಕೆಚ್ಚಿನಿಂದೆದುರಾದನಂ ಘನವರ್ಷಕಂ ಜಿನವಾತಕಂ
    ಮೆಚ್ಚಿಕೊಳ್ಳದೆ ಲೋಕವುಂ ಪುದುವಾಂತ ಪರ್ವತರಾಜನಂ
    ದಚ್ಚಕೂರ್ಮೆಯನುಣ್ಮಿಸುತ್ತಲೆ ನಿಚ್ಚನೊಂದರ ಕಾಯ್ದನಂ?
    (ನಿಚ್ಚನೊಂದವರು=ಕೆಳಗಿನ ಚಿಕ್ಕ ಕಲ್ಲುಗಳು)

  2. ಲಲಿತನರ್ತನಶೀಲೆಯುಧದಿಯು
    ನಲವ ನೀಲದ ಸೀರೆಯುಟ್ಟಿರ
    ಲಲರಿಕೊಂಡವು ಲೋಕಹೃದಯವು ಹೊಳೆದ ಸೊಬಗುಂಡುಂ!
    ಕಲಕಿ ತಲ್ಲಣಗೊಳಿಸದಾಯ್ತಲೆ
    ಸಲಿಲದೀಪರಿ ಬೆಡಗುಭಣಿತಿಯು!
    ಛಲದೊಳೀಶನ ಮೀರಿ ನಿಂದಿಹನಲ್ತೆ ಗಿರಿರಾಜಂ?

    • ಉತ್ತಮೋತ್ತಮಭಾಷೆ ನಿಮ್ಮಯ
      ಸೊತ್ತೆನುವವೊಲ್ ಷಟ್ಪದಿಯದೀ
      ಬಿತ್ತರಂ ಸೊಗಸಲ್ತೆ; ಆದೊಡೆ “ಭಣಿತಿ” ಎನೆ ಚೆನ್ನಂ:-)

  3. ಕಲ್ಲಕಟ್ಟಿನ ಗಾಜತೆರನಿರುವ ಗವಿಯಿಂತು-
    ಮೆಲ್ಲೆಡೆಗೆ ಪಸರಿಸಿಹ ತಿಳಿಬೆಳಕಿನೊಳ್
    ನಿಲ್ಲದಾಡುತೆ ನಡುವೆ ಕಲ್ಲಹಾಸಿನ ನಡಿಗೆ-
    ಯೆಲ್ಲಾಗುಹೋಗುಗಳುಮುಲ್ಲಸಿತವುಂ ।।

    ಕಲ್ಲಕಟ್ಟಿನಗಾಜು = ಕಲ್ಲಿನ framework ಇರುವ ಕನ್ನಡಿ

    • ಒಳ್ಳೆಯ ಚೌಪದಿಯಂ ನೀಡಿದಿರೌ
      ಕೊಳ್ಳಿಮೆನ್ನ ವಂದನೆಯನೆ ನೀಮ್|

    • ಧನ್ಯವಾದಗಳು ಗಣೇಶ್ ಸರ್ , “ವೃತ್ತ”ದ ಆಯ್ಕೆಯೇ ಸಾಧ್ಯವಾಗದೆ ಚೌಪದಿಗೆ ಮೊರೆಹೊದದ್ದು !
      (೩ನೇ ಸಾಲು ಸ್ವಲ್ಪ ಬದಲಾವಣೆ)

      **ನಿಲ್ಲಲಾರದ ನೀರ ಕಲ್ಲಹಾಸಿನ ನಡಿಗೆ-

  4. ನಮಸ್ಕಾರ, ನೀಲಕ೦ಠ ಅ೦ತ. ಇದು ನನ್ನ ಮೊದಲನೆ ಕುಡಿತ. ಎಣಿಕೆ ಮಾತ್ರದಿ೦ದ ಇದೊ೦ದು ಷಟ್ಪದಿ ಎ೦ಬ ಅರೆಬರೆ ತಿಳಿವಿನಿ೦ದ ಲಗತ್ತಿಸಿದ್ದಕ್ಕೆ ಕ್ಷಮಿಸಬೇಕು.

    ಪೂರ್ವಕರ್ಮದ ಬಲಾಢ್ಯ ಗೋಡೆಗಳ ಮಧ್ಯದಿ
    ಭವದ ಕೊಳೆನೀರ ಹರಹಿನಲಿ ಬಿದ್ದುಕೊ೦ಡಿರೆ
    ಜೀವ ಜೀವಗಳಲೊ೦ದೊ೦ದು ತಾನೊ೦ದಹಲ್ಯೆಯೆನೆ ಗತಿಹೀನಮಾಗಿ
    ಆವುದೋ ಮೂಲೆಯಲಿ ಮನಪಟಲ ತೆರೆದಿರಲು
    ದೈವದೊಲ್ಮೆಯದಿದುವೆ ಪಾರಮ್ಯ ನೋಡು ನೀ೦
    ದಿವಾಕರನ ಕರೌಘದವೊಲ್ ನುಗ್ಗುತ೦ ಬದುಕ ಮುಟ್ಟುಗೆ ಪರುಷದ೦ತೆ

    • ನೀಲಕಂಠ ಅವರಿಗೆ ನಮಸ್ಕಾರ. ನಿಮ್ಮ ಪದ್ಯ ವಾರ್ಧಕಷಟ್ಪದಿಯ ತೆರದಲ್ಲಿಯೇ ಇದ್ದರೂ ಕೆಲವೊಂದು ನಿಯಮಗಳನ್ನು ಪಾಲಿಸಿಲ್ಲ. ಯಾವ ಗಣದಲ್ಲಿಯೂ ಮೊದಲೊಂದು ಲಘು, ಬಳಿಕ ಗುರು ಇರುವ ಲಗಂ ವಿನ್ಯಾಸ(U-) ಬರಬಾರದು. ಪ್ರಾಸಾಕ್ಷರದಲ್ಲಿ ಕೂಡ ಹಾಗೆಯೇ ಆಗಿದೆ. ಈ ಸಣ್ಣ ನಿಯಮಗಳಿಗೆ ಬದ್ಧವಾದರೆ ಷಟ್ಪದಿ ಕಾವ್ಯೋದ್ಯಾನದಲ್ಲಿ ಬೇಕಾದಂತೆ ವಿಹರಿಸಬಹುದು 🙂

  5. ಗಂಗಾನದಿಯು ಹೊಸತನಕ್ಕೆ ಅಡಿಯಿಡುತ್ತಿರುವುದರಿದ ಈ ಚಿತ್ರವನ್ನು ಅದಕ್ಕೆ ಹೊಂದಿಸಿಕೊಂಡು …. ‘ ಬಾ ‘ ಎನ್ನಲು ಅಂಬಿಕಾತನಯದತ್ತರವರ ಕೃತಿಚೌರ್ಯವೆಸಗಿ

    ಹೊಂಬಿಸಿಲ ಹೊಳಪಿನಲಿ ಧಾರಿಣಿಯ ಹೊಸತನಕೆ
    ನಂಬುಗೆಯ ಬಿಂಬಿಸುವ ಚೇತನವೆ ಬಾ I
    ತಂಬೆಳಕಿನಿರುಳಂತೆ ನಟರಾಜನೊಲವಿoದೆ
    ತುಂಬು ಗಾಂಭೀರ್ಯದೊಳು ಪುಟಿಪುಟಿದು ಬಾ II

    • ಚಿತ್ರಕ್ಕೆ ಪೂರ್ತಿಯಾಗಿ ಅಳವಡದಿದ್ದರೂ, ಪದ್ಯವಂತೂ ಬಹಳ ಚೆನ್ನಾಗಿದೆ. 🙂

      • ಸರ್, ಧನ್ಯವಾದಗಳು . ಪೂರ್ತಿಯಾಗಿ ಅಳವಡುವುದಿಲ್ಲವೆಂದು ಖಚಿತವಾಗಿ ತಿಳಿದಿತ್ತು .

        ಮೈಸೂರಿನಲ್ಲಿ ಕುಮಾರವ್ಯಾಸ ಕಾವ್ಯದ ಗಮಕ ವಾಚನ ಕಾರ್ಯಕ್ರಮ ಉದ್ಘಾಟಿಸಿ ಲಕ್ಷ್ಮೀಶ ತೋಳ್ಪಾಡಿಯವರು ” ಇತ್ತೀಚಿನ ಕವಿಗಳಲ್ಲಿ ಕುಮಾರ ವ್ಯಾಸರಂತೆ ದ . ರಾ ಬೇಂದ್ರೆಯವರಿಗೆ ಮಾತ್ರ ತಾನು ಬರೆದುದನ್ನು ತಾನೇ ಸೊಗಸಾಗಿ ಹಾಡುವ ಸಾಮರ್ಥ್ಯವಿತ್ತು ” ಎಂದು ಉಲ್ಲೇಕಿಸಿದ್ದರು . ಇಳಿದು ಬಾ ತಾಯೆ… ಪದ್ಯವನ್ನು ಕೇಳಿ ಅದೇ ಗುಂಗಿನಲ್ಲಿ ಮೇಲಿನ ಚಿತ್ರವನ್ನು ವೀಕ್ಷಿಸಿಸಿರುವುದರಿಂದ ಬರೆದುದಾಗಿದೆ .

  6. ಘನಮಾಗಿರೆ ಸಾಗರದೊಳು
    ಮವಗಡಮೆಂತಿರ್ಪಪರ್ವತವ ಛೇದಿಸುತುಂ|
    ದಿನಪನ ಕಿರಣಂಗಳ ಕಂ
    ಪನಮೀ ಕಲ್ಲಂ ಕರಂಗಿಸಿರ್ಪಂತಿರ್ಕುಂ|

    • ಎರಡನೆಯ ಪಾದದ ಪ್ರಾಸವನ್ನು ಗಮನಿಸಿ ಚೀದಿ

      • ಅಯ್ಯಯ್ಯೋ, ಗಮನಿಸಲೇ ಇಲ್ಲಾ ದಯವಿಟ್ಟು ಕ್ಷಮಿಸಿ

        ಎರಡನೇ ಪಾದವನ್ನು ಸರಿಪಡಿಸಿದ್ದೇನೆ… ಜೀವನ – ಸಾಗರದ ನೀರಿಗೆ ಹಾಗೂ ಸಾಗರ ಜೀವನಕ್ಕೆ ಎಂದು 2 ಅರ್ಥ ಕಲ್ಪಿಸಿಕೊಳ್ಳಬಹುದಲ್ಲವೇ?

        ಘನಮಾಗಿರೆ ಸಾಗರ ಜೀ
        ವನಮಂ ತಡೆದಿರ್ಪಪರ್ವತವ ಛೇದಿಸುತುಂ
        ದಿನಪನ ಕಿರಣಂಗಳ ಕಂ
        ಪನಮೀ ಕಲ್ಲಂ ಕರಂಗಿಸಿರುವವೊಲಿರ್ಕುಂ|

  7. ಸಾಧನೆಯ ಹಾದಿಯೊಳು ಕಠಿಣಸಾಧ್ಯವ ಕಾಣ, ಸಂ-
    ಶೋಧನವುಮಂತರದ ಬೆಳಕೊಳಂತುವೆ ಸಾಗುತುಂ ।
    ಬೋಧಿಸಿಹ ಪರ್ವತನು ಹರಿಸಿಮೌನದೊಳಿಂತು ಸಂ-
    ವೇದನೆಯ ತಾಂ, ತೆರೆದಹೃದಯದಿಂದಿಹ “ಸಾಧಕಂ” ।।

    (ಅಂತು-ಇಂತು ಚೌಪದಿಯ ಕೋನಗಳ ಹಿಗ್ಗಿಸಿ – ಬಾಹುಗಳ ಬಗ್ಗಿಸಿ ತಂದ ವೃತ್ತ – ವೃತ್ತಾಂತ !! ದಯಮಾಡಿ ಒಪ್ಪಿ(ಸಿ)ಕೊಳ್ಳಿ)

  8. ಇನ್ನೊ೦ದು. ಛ೦ದಸ್ಸು ಗೊತ್ತಿಲ್ಲ 🙂

    ಸರಸಿಜಾತೆಯರ ಕೂಡೆ ಕೇಳಿಯಾಡುವ ನಿತ್ಯ
    ಸರಸಿ ನೇಸರನು ತಾನೆ ಚಾಚಿರಲ್ಕೈಯನವ
    ಸರಿಸಿ ಪದ್ಯಪಾನವಗೈಯೆ ಸುರುಚಿರದ ಕಾವ್ಯ
    ಸರಸಿಯಲ್ಲಿಹರರಸಮಣಿಗಳ್ಕಲ್ಗು೦ಡುಗಳವೊಲ್

    • ಒಂದೆರಡು ವಿಷಯಗಳು: ಈ ಹಿಂದೆ ಕೊಪ್ಪಲತೋಟ ಹೇಳಿದ ಹಾಗೆ, ಇಲ್ಲಿಯೂ ಕೆಲವೆಡೆ ಲಗಂ ಬಳಕೆಯಾದಂತಿದೆ.. ಹಾಗೂ ಇಲ್ಲಿ ನೀವು ಚೌಪದಿಯನ್ನು ಬರೆಯಲು ಪ್ರಯತ್ನ ಪಟ್ಟಂತಿದೆ, ಆದರೆ ಮಾತ್ರೆಗಳು ಹೆಚ್ಚುಕಡಿಮೆಯಾಗಿದೆ.. ಹಾಗೆಯೇ ನಿಮ್ಮ ಪದ್ಯದ ಕಲ್ಪನೆಯನ್ನೂ ಸ್ವಲ್ಪ ವಿವರವಾಗಿ ಹೇಳಿರೆಂದು ಕೇಳಿಕೊಳ್ಳುತ್ತೇನೆ.. ಈ ರೀತಿಯ ದೋಷಾನ್ವೇಷಣೆ ಮಾಡಿದ ನನ್ನ ಉದ್ಧಟ ತನಕ್ಕೆ ಕ್ಷಮೆ ಕೋರುತ್ತೇನೆ..

      • ನನಗೆ ಛ೦ದಸ್ಸುಗಳ ಮೇಲೆ ಹಿಡಿತ ಇಲ್ಲ. ರೂಢಿಸಿಕೊಳ್ಳಬೇಕು. ಇ೦ಥ ಪದ್ಯಗಳನ್ನು ಅ೦ಟಿಸಿದ್ದಕ್ಕೆ ನಾನೆ ಕ್ಷಮೆ ಕೋರುತ್ತೇನೆ.
        ಈ ಪದ್ಯದ ಕಲ್ಪನೆ.. ನಿತ್ಯವೂ ಕಮಲಗಳ (ಸರಸಿಜಾತೆಯರು) ಜೊತೆ ಆಟವಾಡುವ ಸೂರ್ಯನೇ (ಕಮಲಸಖ) ಇ೦ದು ಪದ್ಯಪಾನ ಮಾಡಲು ಈ ಕಾವ್ಯ ಸರಸಿಯ ಕಡೆಗೆ ಕೈ (ಬೊಗಸೆ) ಚಾಚಿದ್ದಾನೆ. ಹೀಗಿರುವಾಗ ಅದೇ ಸರಸಿಯಲ್ಲಿರುವ ಅರಸಿಕ(ಶಿರೋ)ಮಣಿಗಳು ಕಲ್ಲಿನ೦ತೆ ಬಿದ್ದಿದ್ದಾರೆ.

    • ಹೀಗೊಂದು ಸವರಣೆ:
      ಸರಸಿಜಾತರ ಕೂಡೆ ನಿತ್ಯ ಕೇಳಿಯ ಗೈವ
      ಸರಸಿ ನೇಸರ ಪದ್ಯಪಾನಕೈದಲ್|
      ಸರಸಿಯೊಳು ದಕ್ಕಿರಲ್ ರೂಕ್ಷಾಶ್ಮಮಾತ್ರ ನೇ-
      ಸರ ಸಿಟ್ಟಿಗೇಳನೇಂ ದುರದೃಷ್ಟಕಂ||
      (ನಿಮ್ಮ ಪದ್ಯದ ಭಾವ ಚೆನ್ನಾಗಿದೆ. ಅದನ್ನು ಇಲ್ಲಿ ಪೂರ್ತಿಯಾಗಿ ತರಲಾಗಲಿಲ್ಲ. ಮೊದಲ ಮೂರು ಅಕ್ಷರಗಳು ಸಮನಾಗಿದ್ದು ವಿವಿಧಾರ್ಥವುಳ್ಳವಾಗಿವೆ)

      • ಚೆನ್ನಾಗಿದೆ 🙂 ನನ್ನ ಸರಸಿಜಾತೆಯರು ಹೋಗಿ ಸರಸಿಜಾತರು ಬ೦ದದ್ದು ಸ್ವಲ್ಪ ಸಖೇದಾಶ್ಚರ್ಯ…

        • ಜಾತೆ ಎಂಬ ಸ್ತ್ರೀಲಿಂಗವಿರುವುದಾದರೂ, ಜಾತ ಎಂಬುದನ್ನು ಎರಡುಲಿಂಗಗಳಿಗೂ ಅನ್ವಯಮಾಡಬಹುದು – ಸೋದರ, ಸಹೋದರಗಳಂತೆ.

  9. ನದಿಯ ನಲ್ಲನಿನಂ ವಿರಿಂಚಿಯ ಕಜ್ಜದಿಂ ಬಹುದೂರಕಂ
    ಹೃದಯದೊಳ್ ತಳೆದಿರ್ದು ದುಃಖಮನಂತು ಪೋಗಿರೆ ರಾತ್ರಿಯೊಳ್
    ಮೃದುಲಚಿತ್ತೆ ತರಂಗಹಸ್ತಮನಲ್ಲಿ ಸಾರ್ಚುತೆ ನೊಂದಿರ-
    ಲ್ಕುದಯಕಾಲದೆ ಮತ್ತೆ ರಾಗದೆ ಪಾಣಪೀಡನಮಾದುದೇಂ!!

    • ಕೆ.ತೋಟ, ತುಂಬ ಚೆನ್ನಾಗಿದೆ..

    • ಇರುಳೊಳ್ ಬಂದುದೆ ದೂರಮಪ್ಪ ಸಮಯಂ ಮುಂಜಾನೆಯೊಳ್ ರಾಗಮೇಂ? 🙂

      ಬಹಳ ಚೆನ್ನಾಗಿದೆ.

    • ಬೆಟ್ಟ-ಗಹ್ವರಗಳು ಲೆಕ್ಕಕ್ಕಿಲ್ಲವೆ?
      ನಲ್ಲ-ನಲ್ಲೆಯರಿಂಗಮನ್ಯೋನ್ಯರರಿವಿರವ-(ಅರಿವು&ಇರವು)
      ದಲ್ಲದಿನ್ನೇನುಂಟು ಜಗದೆ ಗಣಿಸಲ್|
      ಕಿಲ್ಲೆಯೇಂ? ಭದ್ರಾಕೃತಿಯ ಪರ್ವತಮದುಮೇಂ?
      ಒಲ್ಲೆನೆಂಬರು ವಾಮ*ಕವಿಯೊಲೆಂದುಂ||
      * Means both bad and good 😉

  10. ಕಳೆಯಲೆನೆ ಕಾಲವನ್ನಿಳಿದು ಬಂದಿರೆ ಸೂರ್ಯ
    ನಳಿದು ನೇಮಮನೆ ಸುರಶರಧಿಗೆಂದೆ
    ಹೊಳೆಯು ಕೂರ್ಮೆಯದುರ್ಕೆ ಮಧುರ ಬಂಧನದಲ್ಲಿ
    ಹೊಳೆದುದಾಗಳೆ ತುಂಬುತೋವರಿಯನೇ!
    (ರಾತ್ರಿಯಲ್ಲಿ ಕಡಲನ್ನು ಸೇರುವದನ್ನು ಮೀರಿ, ಮೊದಲೇ ಸೂರ್ಯನು ಕಾಂತೆಯ ಬಳಿಸಾರಿದ್ದಾನೆ)
    ಓವರಿ=ಕೋಣೆ

  11. ||ಚಂಪಕಮಾಲಾವೃತ್ತ, ಉಪಮಾಲಂಕಾರ||

    ಕಿರಿಯ ಸುರಂಗದಿಂ ಪರಿವ ನೀರಿನ ಬಣ್ಣಮದೆಂತು ಪೀತಮೈ?
    ದೊರಕಿತೆ ಮೂಲದಿಂ ಪಿರಿಯ ಬೆಟ್ಟದ ಗರ್ಭದ ಧಾತುವಿಂದೆ? ಸಂ-|
    ಚರಿಸುತೆ ಭಾವದಿಂ ಭರತನಾಟ್ಯವ ಗೈವ ಲತಾಂಗಿಯಂತೆವೊಲ್,
    ಮೆರೆವುದು ಬೆಳ್ಪಿನಿಂದೆಸೆದು ಕರ್ಬುನದಂತೆಯೆ ಕಾಂಬ ಕಲ್ಗಳೊಳ್ ||

    • ಆಹಾ! ಒಳ್ಳೆಯ ಪ್ರಾಬಂಧಿಕಶೈಲಿಯ ಪದ್ಯ; ಅಭಿನಂದನೆಗಳು.

      • ಸಹೋದರರೆ,ಧನ್ಯವಾದಗಳು.

  12. ಬೆಟ್ಟನೊಡಲ ಛೇದನದಿಂ
    ಗಟ್ಟಿಗನಾನೆನೆ ಸಮುದ್ರನೊರೆದಪ ಜಸಮಂ
    ಜಟ್ಟಿಯವೊಲ್ ಸೂರ್ಯಂ ಪೀ-
    ರ್ದಿಟ್ಟಂ ಸಾಸಿರದ ಕರದೆ ತಪಿಸುತಲಮಮಾ

  13. ಇಹುದೆಂದುಂ ಬಲ,ಧೈರ್ಯ ನಿನ್ನೊಳತಿಯೊಳ್,ಮೈಚಾಚಿ ನಿಂದಿರ್ಪೆಯೈ
    ಇಹವೆಲ್ಲಂ ನಿಜ ಘೂರ್ಣಿಸುತ್ತೆ ಪರಿವೀ ಘೋರಾತಿಘೋರಾಭ್ದಿಯೊಳ್|
    ಮಹದಾಶಾಧೃತ ಶಕ್ತಿಶಾಲಿ ಗಜತಾಂ ನೀರ್ಗೊಂಬ ಸಂಪ್ರೀತಿಯಿಂ
    ಗುಹೆಯೊಳ್ ವಾಸಿಪ ಸಿಂಹನಾಥಮುಖದೊಳ್ ಪ್ರಾವೇಶಮಂ ಬೇಡುಗೇಂ? ||

  14. ಅಕಟಾ ಕಲ್ಪನೆಯೊಂದನುಂ ಕೆರಳಿಸಲ್ಕೀ ಚಿತ್ರದಿಂದಾಗದೆಂ-
    ಬ ಕಲಂಕಂ ಮಿಗೆ ಸಂದಿತೆಂಬುದೆ ವಲಂ ಶ್ರೀಸೋಮನೊಳ್; ನೋಂತು ನಾಂ|
    ವಿಕಟಾಲೋಚನೆಯಂ ನೆಗಳ್ಚಿ ನುಲಿದೀಗಳ್ ಪದ್ಯಮೊಂದಂ ರಸಾಂ-
    ಬಕಮಂ ಮೀಲಿಸಿ ಪೇಳ್ದಪೆಂ ಗೆಳೆಯರೇ! ಸೈರಿಪ್ಪುದೀ ಘೋರಮಂ||

    (ಮೂರು ವಿಚಿತ್ರಕಲ್ಪನೆಗಳ ಕಂದಗಳಿಲ್ಲಿವೆ; ಸಹಪದ್ಯಪಾನಿಗಳ ವಿಮರ್ಶೆಗೆ ಕಾದಿರುವೆ)

    ಆಲೀಬಾಬನ ಗವಿಯೋ?
    ಲೀಲೆಯಿನಂತಸ್ಥರುಕ್ಮಕಾಂತಿಯಿನೀಗಳ್|
    ಜಾಲಿಸುತಿರ್ಪುದೊ ಪೊರಗಿ-
    ರ್ಪೀ ಲೋಷ್ಟಾಯಸಸಮೂಹಮಂ ದಾಹದಿನೇಂ?

    ಎಲಗೇ! ಗುಹೆ! ದಹರಾಂಬರ-
    ಬಲಮೇ ನಿನ್ನೊಳ್ ಪ್ರಕಾಶಿಸಿರ್ಪುದೆ ಪೇಳೌ!
    ನೆಲಸಲ್ ಶಂಕರರುಂ ಮೇಣ್
    ಕಲೆಯಲ್ಕಭಿನವನುಮಿಲ್ಲಿ ಬರ್ಪರೆ ಪುಗುತುಂ?

    ಅಲಸಿಕೆಯೇ ಗಿರಿಯೇ? ಆ-
    ಕಳಿಸುವೆಯೇಂ ನೀನಿದಿಂತು ನೆವನದೆ ಗವಿಯಾ?
    ಮಲೆಯುವುದೇನೀ ಪರಿ? ಮು-
    ಕ್ಕುಳಿಸುವುದೇಂ ಪೊನ್ನ ನೀರನಮಮಾ ಬಾಯಿಂ!

    • ಆಹಾ ! ಮೂರುಬಾರಿ
      “ಮುಕ್ಕುಳಿಸುಸುದೇಂ “ಪೊನ್ನ” ನೀಂ ರಸಮ ಬಾಯಿಂ !!”
      ಅಲಸಗಿರಿಯ ಆಕಳಿಕೆ, ಮುಕ್ಕಳಿಕೆಯಂತು ಬಹಳ ಇಷ್ಟವಾಯಿತು, ಗಣೇಶ್ ಸರ್

    • All very nice verse… specially 3rd poem is amazing..l

    • ಹೊಸದಾದ ಕಲ್ಪನೆಗಳು ನಿಜವಾಗೂ ವಿಕಟವಾಗಿವೆ(ಚೆಲುವಾಗಿವೆ) 🙂

    • ಗವಿಯಾಕಳಿಕೆಯೂ, ಪೊನ್ನ ನೀರಿಂದೆ ಬಾಯ್ಮುಕ್ಕಳಿಕೆಯೂ ಬಹಳ ಸೊಗಸಾಗಿದೆ.
      ಎರಡನೆಯ ಪದ್ಯ ಪೂರ್ತಿಯಾಗಿ ಅರ್ಥವಾಗಲಿಲ್ಲವೆನಿಸುತ್ತದೆ. 🙂

    • In response to the 3rd verse:
      ಚೆನ್ನಿಂ ಗ್ರಹಪೂಗಮನುಂ (ಗ್ರಹಗಳೆಂಬ ಅಡಕೆ),
      ಪೊನ್ನ ನಭಸಪತ್ರಮಂ(ಬಾನೆಂಬ ವಿಳೆದೆಲೆ)-ಛುರಾಬ್ದ(ಮೋಡವೆಂಬ ಸುಣ್ಣ)ಮನುಂಡಾ|
      ಚೆನ್ನಿಗನಿನನುಚ್ಛಿಷ್ಟಮೆ
      ಪೊನ್ನೀರೊಲು ಪೊಳೆವ ತಂಬುಲರುಚಿವಿಲಾಸಂ||

    • ವಿಕಟಸುಕಲ್ಪನೆಗಳ ನೀಂ
      ಪ್ರಕಟಿಸಿರಲ್ ಪ್ರೌಢಭಾವಬಂಧಂಗಳಿನಾಂ |
      ವಿಕಲಮತಿಯೆಂತು ಬಣ್ಣಿಪೆ-
      ನಕಲಂಕಮಹಿಮೆಯ ಚತುರಪದಶೃಂಖಲೆಯಂ? ||

      • ಉತ್ತರಾರ್ಧ – ಪುರಂದರದಾಸರ ಪದವನ್ನು ಓದಿದಂತಾಯಿತು! ಪದ್ಯ-ಪದ್ಯಭಾವಗಳು ಚೆನ್ನಾಗಿದೆ.

        • ಪ್ರಸಾದರೆ,ಧನ್ಯವಾದಗಳು.

    • Who is Abhinava?

      • ಮೆಚ್ಚಿದ ಎಲ್ಲ ಪದ್ಯಪಾನಿಬಂಧುಗಳಿಗೆ ವಂದನೆ. ಎರಡನೆಯ ಪದ್ಯವು ಶಂಕರಾಚಾರ್ಯ (ಏಳನೆಯ ಶತಾಬ್ದಿಯವರು) ಮತ್ತು ಅಭಿನವಗುಪ್ತಪಾದರನ್ನು (ಹತ್ತನೆಯ ಶತಾಬ್ದಿಯವರು) ಕುರಿತದ್ದು. ಇವರಿಬ್ಬರೂ ತಮ್ಮ ತಮ್ಮ ಬಾಳಿನ ಕೊನೆಯಲ್ಲಿ ಸಜೀವವಾಗಿ ಗುಹಾಪ್ರವೇಶಮಾಡಿದರೆಂದು ಪ್ರಸಿದ್ಧಿಯಿದೆ. ವೇದಗಳಲ್ಲಿ ಹೃದಯವನ್ನು ಗುಹೆಗೆ ಹೋಲಿಸಿದ್ದಾರೆ. ಇದನ್ನು ಛಾಂದೋಗ್ಯೋಪನಿಷತ್ತಿನ ದಹರವಿದ್ಯಾಪ್ರಕರಣದಲ್ಲಿ ಚೆನ್ನಾಗಿ ಮನಗಾಣಬಹುದು. ಇವೆಲ್ಲವನ್ನೂ ಬಳಸಿಕೊಂಡು ಚಿತ್ರದ ಗುಹೆಯು ಶಂಕರ-ಅಭಿನವರ ಪ್ರವೇಶದ ಬಳಿಕ ಉಂಟಾದ ಕಾಂತಿಯಿಂದ ದಹರವಿದ್ಯಾಪ್ರಕಾಶದಂತೆ ತೋರಿದೆಯೆಂದು ಕಲ್ಪಿಸಿದ್ದೇನೆ.

  15. ಕೃತಕಮು ಸುರಂಗಮಿದು ಜೀ-
    ವಿತಮಂ ವಿಸ್ತರಿಪ ಕೌತುಕಮು ಜಗದೊಳ್ ಮೇಣ್
    ಗತಿವಿಧಿಯುಂ ಬೆಳ್ವೆಳಕೊಳ್
    ತತುಕ್ಷಣದೆ ಕಾಣ್ ಶಿಲಾವರಣಮಿದು ಸುಭಗಂ ।।

  16. ನಿಧಿಯಾಸೆ ಮನಕೆ ದೂರಮ್
    ಮುದದಿಂ ಪಡೆಯಲ್ ಮೆಕೆನ್ನ ಹಾಬಿಟ್ಟರವೊಲ್
    ಹೃದಯ ಗುಹೆಯನ್ನರಿಯುವಾ
    ವಿಧಿಯಂ ತಿಳಿಸೈ ವಿಚಾರ ಮೀರಿದ ಬೆಳಕಂ

    ಮೆಕೆನ್ನಾ’ಸ್ ಗೋಲ್ಡ್ ಮತ್ತು ಇತ್ತೀಚಿನ ಹಾಬಿಟ್ ಚಲನಚಿತ್ರಗಳಲ್ಲಿ ನಿಧಿಯನ್ನು
    ಹುಡುಕಲು ಹೊರಟ ಸಂದರ್ಭಗಳಿಂದ ಪ್ರಭಾವಿತವಾಗಿರುವ ಪದ್ಯ.

    • ಆಹಾ! ನವೀನಕಲ್ಪನೆ. ನನಗೂ ಮೊದಲಿಗೆ ಮೆಕನ್ನಾಸ್ ಗೋಲ್ಡ್ ಚಲನಚಿತ್ರದಿಂದ ಎತ್ತಿದ ಚಿತ್ರವೇ ಇದೆಂಬ ಭ್ರಾಂತಿಯಾಗಿತ್ತು….ಪದ್ಯದ ಭಾಷೆ ಮತ್ತೂ ಹಳಗನ್ನಡವಾಗಬೇಕು.

  17. In the evening when he has mellowed down, the sun thinks thus: I have scorched the heads of the mountains during the day time haughtily. The river though is considerate enough to keep the mountains cool by lapping their feet with her ripples. I bow to the selfless service of the river. (A golden strip of sunlight is passing through the gap and prostrating the entire width of the river).
    ಮೆರೆಯುತ್ತುಂ ಕ್ಷಣ-ವಾರ(ಮಧ್ಯ-ಅಹ್ನ)ದೊಳ್ ನಗಗಳಂ ಸುಟ್ಟಿರ್ದುಮೌದ್ಧತ್ಯದಿಂ
    ಕರಗುತ್ತುಂ ದಿನದಂತ್ಯದೊಳ್ ಮನನಮಂ ಗೈಯುತ್ತುಮಿಂತಾ ತಪಂ(ಸೂರ್ಯ)
    ಬಿರುಸಿಂ ಸುಟ್ಟಿರೆ ತಾನುಮದ್ರಿಶಿರಮಂ, ತತ್ಪಾದಮಂ ಜ್ಯಾನಿ(ನದಿ) ತಾಂ
    ಉರುತಂಪಿಂ ಪೊರೆಯಲ್, ತಪಂ ಸುಷಿರೆ(ನದಿ)ತಾಯ್ಗಷ್ಟಾಂಗದಿಂ ವಂದಿಪಂ

    • ಅಷ್ಟಾಂಗ ನಮಸ್ಕಾರವನ್ನು ನದಿಯ ಮೈಮೇಲೆ ಪೂರ್ತಿಯಾಗಿ ಬಿದ್ದು ಸೂರ್ಯ ಮಾಡಿದ್ದಾನೆ. 🙂
      ಹಾಗಿದ್ದರೂ, ಪದ್ಯ ಬಹಳ ಚೆನ್ನಾಗಿದೆ.
      ನಿಮ್ಮ tangential ಜಾಡನ್ನು ತೊರೆದು mainstream ಗೆ ಬಂದಿದ್ದೀರ. ಸ್ವಾಗತ 🙂

      • ಅಷ್ಟು ಮಾತ್ರ ಗಮನಿಸಿದರೆ ಸಾಲದು. ನದಿಗೆ ಪಾದವೂ ಇಲ್ಲ, ಸೂರ್ಯಕಿರಣಗಳಿಗೆ ಅಷ್ಟಾಂಗಗಳೂ ಇಲ್ಲ ಎಂಬುದನ್ನೂ ಗಮನಿಸಬೇಕು 🙂 Nevertheless, I was in anxious anticipation of this observation. Who else other than you can come first! Thanks for the appreciation.

    • ಪ್ರಸಾದ್ ಸರ್, ನಿಮ್ಮ “ಸಾಷ್ಟಾಂಗನಮಸ್ಕಾರ”ದ ಪ್ರಬುದ್ಧ ಕಲ್ಪನೆಯ ಜೊತೆಗೆ ನನ್ನದೊಂದು “ಬಾಲಿಶ” ಕಲ್ಪನೆ !!

      ತೂರುತೆ ಸುರಂಗವನಿದೋ
      ನೀರು ಬೆಳಕುಗಳೊಡನಾಟದೊಡನೋಟದೊಳುಂ ।
      ಚೀರುತೆ ತರಂಗವದು ಕಾಣ್
      ಬೋರಲು ಬಿದ್ದಿರಲು ಬೆಳಕು ತಾನೋಡುದುದಂ !!

      (ನೀರು-ಬೆಳಕುಗಳ ಜೂಟಾಟದ ವರ್ಣನೆ !!)

      • 1) You have successfully checked Ram from criticizing you the way he has criticized me 🙂
        2) Pls use the word ಕಾಣ್ sparingly. I too have to check myself from unbridled usage of the word ತಾಂ 🙁
        3) ಒಡನಾಟದೊಡನೋಟದೊಳುಂ = ಒಡನಾಟದೊಡನೆ+ಓಟದೊಳುಂ ಎಂದೇ?
        (ತಾನೋಡಿದುದುಂ spello)

        • ಹೌದು ಪ್ರಸಾದ್ ಸರ್, (ಕಾಣ್ ತಾನೋಡುದುದಂ = ಓಡುತ್ತಿರುವುದನ್ನು ನೋಡು ಎಂದಾಗದೇ?)
          “ಗುರು”ವಿನ ಹುಡುಕಾಟದಲ್ಲಿ ದಾರಿಕಾಣದೆ ಕೊನೆಯಲ್ಲಿ ಈ “ಕಾಣ್” ಬಂದುಬಿಡುತ್ತೆ !!

          • ಗುರುವ ಹಂಗನು ತೊರೆದು ನಿನ್ನೊಳೆ ಗುರುತರದನೇನಾದರಂ ಕಾಣ್ 🙂

          • ಅರಿಯಲೆನೆ ನಾನದರ ಗುರುತನರಸಿಹೆ ಕಾಣ !!

  18. ಪ್ರಯತ್ನದ ಹೆಸರಲಿ….

    ಧಗಧಗನೆಯುರಿದು ಬಿರುಬಿಸಿ
    ಯುಗುಳ್ವರವಿಬೆಮರದಿರ್ಪನೇ೦? ಶ್ರೀಜಲದೊ-
    ಳ್ಮೊಗವೊಡ್ಡಿ ಗುಟುಕನೆಳೆಯ
    ಲ್ಯುಗದಿಂದಾಗಿರ್ಪದಾಹವಂಕಡಿದಿಹನೇ೦?

    • Idea and versification are good. Find classical words for ಎಳೆಯೆ & ಕಡಿದಿಹ
      ಪದಗಳನ್ನು ವಿಂಗಡಿಸಿ ಬರೆಯಿರಿ. ’ರವಿಬೆಮರದಿರ್ಪನೇಂ’ ಎಂಬಲ್ಲಿ ’ರವಿ’ ಪದಕ್ಕೆ ಪ್ರತ್ಯಯವಿದ್ದರೆ ಪ್ರಶಸ್ತ.

      • ಪ್ರೋತ್ಸಾಹಕ್ಕೆ ಧನ್ಯವಾದಗಳು ಮಾಸ್ತರೆ.. 🙂

  19. ಬೆಟ್ಟsದ ತೆರನಾದ ಗಟ್ಟಿsಯ ಮನದೆನೀ
    ನಿಟ್ಟೊಳsಗಿವಿಯನಿದಕೇಳ। ಕಷ್ಟಕ-
    ಲ್ಲೊಟ್ಟಿsಗೆ ಜೀವನದಿ ಹಾಡ ।।

    (ಕಲ್ಲುಬಂಡೆಗಳ ಏರಿಳಿತಗಳ ನಡುವೆ ಹರಿದಾಗ ಮಾತ್ರ ಕೇಳಿಬರುವ ನದಿಯ ಜುಳುಜುಳು ನಾದದ ಕಲ್ಪನೆ )

    • **ಕಷ್ಟಶಿಲೆಯೊಟ್ಟಿsಗೆ

    • ಭವ್ಯವಾದ ಕಲ್ಪನೆ. ತೆರನಾದ~ವೋಲಿನ. ಕಷ್ಟಕಲ್ಲೊಟ್ಟಿsಗೆ~ನಲ್ಲಕಲ್ಲೊಟ್ಟಿsನ. (ಗಿವಿಯಿನಿದ spello)

      • ಧನ್ಯವಾದಗಳು ಪ್ರಸಾದ್ ಸರ್,
        ತಿದ್ದಿದ ಪದ್ಯ:
        ಬೆಟ್ಟsದವೋಲಿನ ಗಟ್ಟಿsಯ ಮನದೆನೀ
        ನಿಟ್ಟೊಳsಗಿವಿಯಿನಿದಕೇಳ। ನಲ್ಲsಕ-
        ಲ್ಲೊಟ್ಟಿsನ ಜೀವನದಿ ಹಾಡ ।।

        (ಬಿಟ್ಟೊಳಗಣ್ಣ ನೀ ನೋಡ ~ ಇಟ್ಟೊಳಗಿವಿಯನಿದಕೇಳ ಎಂದು ಬದಲಾಯಿಸಿದ್ದು !!)

  20. ಓಡುತ್ತs ಕುಣಿಯುತ್ತsಲಾಡುsವs ಜಲಧಿsಗೆs
    ಗೋಡೆsಯsನೊಂದs ಕಟ್ಟಿsರೆs, ಆಸೆsಯs
    ತಾಡಿsಸಿs ಮನದೊsಳಿಟ್ಟಂತೆs
    (ಮನದೊಳದುಮಿಟ್ಟ ಆಸೆಯು ಕಟ್ಟೆಯನ್ನು ಒಡೆದು ಹೊರ ಬರುವಂತೇ ಜಲಧಿಗೆ ಗೋಡೆಯನ್ನು ಕಟ್ಟಿದರೆ..)

    • ಚೆನ್ನಾದ ಕಲ್ಪನೆ, ಪದ್ಯ. ನನ್ನ lateral:
      ಬಂಡೆಯ ಎದೆಯನ್ನು ಖಂಡವ ಗೈಯುತ್ತಲ್
      ಒಂಡದು (ಒಂಡು=ನದಿ/ಕೆರೆ) ಸಾಧಿಸಿಹುದೇನ?|ನಾಬದಿಯೊಳ್
      ಕಂಡುಕೊಳ್ಳಲುಮೇಂ ತನ್ನನ್ನೇ?? 🙂

  21. The end of the golden shaft of sun’s rays resembles the face of a devil. Whether he is scorching at noon or is sober at the horizon, sun is sun – powerful.
    ಸತ್ಯಮೆ, ಸೂರ್ಯಗೆ ಸಾಟಿಯು ಸೂರ್ಯನೆ
    ಅತ್ಯುನ್ನತದೊಳ್ ಕ್ಷಿತಿಜದೊಳುಂ|
    ದೈತ್ಯಪ್ರತಿಭೆ(appearance) ಕರಾಗ್ರದೊಳಿರ್ಪಾ-
    ದಿತ್ಯಗೆ ನಮಿಸುವೆನೂರ್ಜನಿಗಂ|

  22. ಆಚಿನ ಬದಿಯಿಹ ಪರ್ವತಚರ್ಮವು
    ಕೋಚಿರದೆಲೆ ನುಣ್ಣಗಿಹುದು ತಾಂ|
    ಈಚಿನೊಳಿರುವೀಪರಿ ತೊನ್ನಿಗೆ ಕರ-
    ಸೇಚನ ಸಾಕೇನಿನನಿನಿತೇ? 🙂

  23. ಜಗಮಂ ಬೆಳಗಿಪ ರವಿಯೇ
    ಸೊಗದಿಂ ಬಳಿವಂದೆದೆಯೊಳೆ ನೆಲಸಿರ್ಪುದನುಂ,
    ಧಗೆಯಂ ತಣಿಸೆ ಪರಿವ ನದಿ,
    ಯುಗಪಾದಕೆರಗುತಲಿರ್ಪುದಂ, ಗಿರಿಯರಿಗೇಂ?

    • ಅರ್ಥ ಸ್ಪಷ್ಟವಾಗ್ತಾ ಇಲ್ಲ. ವಿವರಿಸುವಿರಾ?

      • ಸೂರ್ಯ ಮತ್ತು ನದಿಗಳಂತ ಉತ್ತಮರು ತೀರ ಹತ್ತಿರದಲ್ಲೇ ಇದ್ದರೂ,ಅದರ ಅರಿವು ಕೂಡಾ ಈ ಕಲ್ಲುಬಂಡೆಗಿಲ್ಲವೆನ್ನುವದೇ ಪದ್ಯದಲ್ಲಿ ನಾ ಹೇಳಹೊರಟಿದ್ದು 🙂 (ಕಲ್ಲುಬಂಡೆಯ ನಿರ್ಲಕ್ಷ್ಯವೇ ಇಲ್ಲಿ ತೋರುವದು).ಇನ್ನು ಬಂಡೆಯು ಬೆಳಕನ್ನು ಕಾಣುವದು,ತಂಪನ್ನು ಉಣ್ಣುವದು ದೂರದ ಮಾತೇ ಅಲ್ಲವೇನು? or ಸುತ್ತಲಿನ ಆಗುಹೋಗುಗಳಿಗೆ ಕಿವಿಗೊಡದೇ ಬಂಡೆಯು ಸ್ವತಂತ್ರವಾಗಿ(ಪ್ರಭಾವಿತವಾಗದೇ) ನಿಂದಿದೆಯೆಂತಲೂ ದನಿಸಿಕೊಳ್ಳಬಹುದು.

    • ಯುಗಪಾದ=ಪದಯುಗಲ ಎಂದಾಗುತ್ತದೆಯೆ?

  24. ಚಂಡಕಿರಣಂಗಳಿಂ ಮಾ-
    ರ್ತಂಡಂ ಸುಡುತಿರೆ ಬಳಲ್ದ ಭೂಧರನವಶಂ |
    ಮಂಡೆಯನೈದಿದ ಪಿತ್ತದೆ
    ಕಂಡಿರ್ದುದು ವಾಂತಿಗೆಯ್ದ ಪೀತಜಲಮಿದೋ !:-)

  25. ತೆರೆಯಿಸಲಾಗದು ಧರೆಯೊಳ್
    ದುರುಳರ ಕಂಗಳನೆನುತ್ತೆ ರವಿಗುಹೆಗೇಗಳ್ ।।
    ಕರಮಂ ಮಿತ್ರನ ಪಿಡಿದೆಳೆ-
    ದಿರೆನದಿ ಪರಿದಾಡೆ ಬೆಳಕು ನೀರೊಡನಿಳೆಯೊಳ್ ।।

    • ’ತೆರೆಯಿಸಲಾಗದು ಕಂಗಳನೆನೆ’ ಎಂದಾಗಬೇಕಲ್ಲವೆ?

      • ಪ್ರಸಾದು ಹೇಳಿದ್ದು ಸರಿ.
        “ದುರುಳರ ಕಂಗಳನೆನುತ್ತೆ ರವಿ ಗುಹೆಗೇಗಳ್ ”
        ಎಂದು ಸವರಿಸಬಹುದು.
        ಪದ್ಯದ ಕಲ್ಪನೆ ತುಂಬ ತುಂಬ ಚೆನ್ನಾಗಿದೆ.

        • ಕಣ್ಗಳ + ಎನೆ ಅಂತ ಮಾಡಿದ್ದೆ. ದ್ವಿತೀಯ ಬಂದರೆ ಹೆಚ್ಚು ಸೂಕ್ತ.
          ಸರಿಪಡಿಸಿದ್ದೇನೆ. ಧನ್ಯವಾದಗಳು.

  26. ಕಾಲಕಾಲಾಂತದೊಳ್ ದೈವದಾಲೀಲೆಯಿಂ
    ಮೂಲದಿಂ ಬೇರ್ಪಡಲ್ ಸಂದಿರಲ್ ಸೃಷ್ಟಿಯುಂ ।
    ಮೇಳಗಟ್ಟಿಂತುವುಂ ಜೀವಸಂಕೀರ್ಣವುಂ
    ಮೂಲವಂ ಸೇರ್ಪುದೈ ಸಾಗಿ ಸಂತುಷ್ಟಿಯಿಂ ।।

  27. संघर्षैर्युगशो जलस्य शिलया तत्कन्दरे सुन्दरे
    जाता घोरतरैः खगस्य किरणाः स्निग्धं वगाह्याद्य ये ।
    शान्तं शीतपथं तमो निरुपमं तीर्णा निमेषाष्टके
    तन्वन्ति प्रबलां मुदां चिरमिमां चेतोहरां वीक्षके ॥

    The beautiful cave was created by repeated friction between rocks and sea over eons. Into that cave, enter the rays of the sun which were produced by even stronger interactions, having traveled the deep, dark stillness of space for eight minutes. This creates an ever-lasting happiness in the viewer.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)