Jan 052015
 

ಎಲೆಮನೆಯಾದತ್ತು ನೋಡ ಮದುಮನೆ ಚಣದೊಳ್

ಎಲೆಮನೆ – ಆಶ್ರಮ

  67 Responses to “ಪದ್ಯಸಪ್ತಾಹ ೧೩೨: ಸಮಸ್ಯೆ”

 1. ಒಲುಮೆಯ ಪರ್ವದೊಳನಿಬರ್
  ನಲಿಯೆ ಮದುವಣಿಗರ ಭೂಮದೂಟದೊಳಾಗಳ್|
  ಗೆಲುವಂ ಮೀರಿದ ರಟನದ
  ಕೆಲೆ(ಉತ್ಸಾಹದ ಚೀರಾಟ)ಮನೆಯಾದತ್ತು ನೋಡ ಮದುಮನೆ ಚಣದೊಳ್||

  ತಿಲಮುಂ ಬಿಡುವಿಲ್ಲೆನುತಲ್
  ಕುಲುಕುತೆ ಕೈಯಂ ವಧೂ-ವರರ, ಭೋಜನಕಂ|
  ನಿಲದೋಡಿಹ ಬಂಧುಗಳುಂ-
  ಡೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್||

  ಫಲಕಾಲಂ ಕೈಗೂಡಲ್
  ಕುಲಜೆಯು ಪಿಡಿಯಲ್ ವಿವಾಹದೊಳ್ ವರಕರಮಂ|
  ಪಲವಾರ್ ಬಾಂಧವ್ಯಂಗಳ
  ನೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್||

  A grandfather of the bride/groom suddenly takes ill and becomes likely to pass-on well within the wedding date. The wedding will have to be deferred by a year if the contingency materializes. In such instances well-meaning elders are likely to counsel the parents to hold the wedding right away by compromising on ideal Muhurtam. The guest list is scaled down and the living room becomes the wedding venue.
  ನಲುಗಿಹ ತಾತನಿನೆಂತೋ!
  ತಲೆವರವಸರಿಸಿ ವಿವಾಹಮಾಶುವಿನಾಯ್ತಯ್!
  ಗಲಿತಂ ಮುಹೂರ್ತ-ಮಂಟಪ-
  ಮೆಲೆ! ಮನೆಯಾದತ್ತು ನೋಡ ಮದುಮನೆ ಚಣದೊಳ್||

  In a film studio, what was now a wedding hall setting will morph to a hermitage in no time!
  ಅಣಿಯಿಹವು ಸರ್ವವೇದಿಕೆಗಳಾವಗಮಿಲ್ಲಿ
  ನೆಣಭೂಮಿಯೀಗಳಾಗಳ್ ಸಗ್ಗಮೈ|
  ಒಣಗಿರ್ಪ ಎಲೆಮನೆಯುಮಾದತ್ತು ಮದುಮನೆಯು
  ಚಣದೊಳೀ ಶಿಲ್ಪದಾಲಯದೆ(film studio) ನೋಡೈ||

 2. ಛಲದಿಂ ಧ್ಯಾನಿಸೆ ಮುನಿ ಕಣ್
  ಚಲಿಸಲ್ ಪೂರ್ವಾಶ್ರಮಕ್ಕೆ ಪೊಗುತುಂ ಮನದೊಳ್|
  ಕಲೆತಿರೆನೆನಪುಗಳೊಡೆ ತ-
  ನ್ನೆಲೆಮನೆಯಾದತ್ತುನೋಡ ಮಧುಮನೆ ಚಣದೊಳ್|

  ಚೆಲುವೆಯು ತನ್ನಭಿನಯದಿಂ
  ಕಲೆಯನ್ನುತ್ತುಂಗಕೆತ್ತು ನರರ್ತಿಸುತಿರಲೊ-|
  ರ್ಮೆಲೆ ಪಾತ್ರವ ಬದಲಿದಸಿರ-
  ಲ್ಕೆಲೆಮನೆಯಾದತ್ತುನೋಡ ಮಧುಮನೆ ಚಣದೊಳ್|

  ಪಲವು ಚಮತ್ಕಾರದೆ ಕ-
  ಳ್ತಲೆಯೊಳ್ಕೌತುಕದೊಳಿಂದ್ರಜಾಲಿಕನಂ ಕಣ್-|
  ಚಲಿಸುವ ಮುನ್ನಮೆ ತೆರೆಯೊಳ್
  ಎಲೆಮನೆಯಾದತ್ತುನೋಡ ಮಧುಮನೆ ಚಣದೊಳ್|

  • Oops! ಮಧುಮನೆ – ‘ದ’ ಕಾರ ಮಹಾಪ್ರಾಣ ಆಗಿಬಿಟ್ಟಿದೆ.. ಕ್ಷಮಿಸಿ…

   • ಚೀದಿಯವರೆ ಮೂರನೇ ಪದ್ಯದ ನಾಲ್ಕನೇ ಸಾಲಿನಲ್ಲಿ ಸಂಧಿಯಾಗಿಲ್ಲವಲ್ಲ 🙂

    ತೆರೆಯೊಳ್
    ಎಲೆಮನೆಯಾದತ್ತುನೋಡ

    • ಧನ್ಯವಾದಗಳು, ತೆರೆಯಿಂ – “ತೆರೆಯಿಂದೆಲೆಮನೆ” ಎಂದು ಮಾಡಿದರೆ ಸರಿಯಾಗುವುದಲ್ಲವೇ?

   • 2.2 ನರರ್ತಿಸುತಿರಲೊ => ನರ್ತಿಸುತಿರಲೊ

   • ವಿವಾಹಸಮಾರಂಭಕ್ಕೆ 24 ಗಂಟೆಗಳ ವ್ಯಾಪ್ತಿಯನ್ನು ನೀಡಲು ನೀವು ಬೇಕೆಂದೇ ಅದನ್ನು ಮಹಾಪ್ರಾಣವಾಗಿಸಿದಿರೋ ಎಂದಿದ್ದೆ 😉

  • ಕಣ್ಚಲಿಸುವ (2 ಪದ್ಯಗಳಲ್ಲಿ) – ಅರಿಸಮಾಸವಾಯ್ತಲ್ಲ!
   ಇಂದ್ರಜಾಲಿಕನುಂ, ಉತ್ತುಂಗಕ್ಕೊಯ್ಯೆ

 3. ಕಳೆಯಲ್ ಸಂಗಡ ಸಮಯಂ
  ಪಳಬರ್ ಕೂಡಿರ್ದರಲ್ತೆ ನೆನೆಯುತೆ ಪಳೆತಂ [ಪಳೆತಂ = ಹಳೆಯದು]
  ಸೆಳೆಯಲ್ಕಿಸ್ಪೀಟುಗಳಿ –
  -ನ್ನೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್

  [ಮದುವೆ ಮನೆಯಲ್ಲಿ ಇಸ್ಪೀಟಾಟ ಆಡುವ ಹಳೆಯ ಅಭ್ಯಾಸವನ್ನಾಧರಿಸಿ]

  • Super Idea Ram 😀

  • ’ಆಡುವವರನ್ನು ಇಸ್ಪೀಟುಗಳು ಸೆಳೆದವು’ ಎಂದು ಅರ್ಥೈಸಿದರೆ, ’ಇನ್ನು’ ಎಂಬುದು ರಿಡಣ್ಡೆಣ್ಟ್ ಆಗುತ್ತದೆ. ’ಇಸ್ಪೀಟುಗಳನ್ನೆಲೆಮನೆ’ ಎಂದರೆ ಸರಿಯಾಗುತ್ತದಲ್ಲವೆ?

 4. ಎಳೆಮಕ್ಕಳ ಚೆಲ್ವಾಟಂ –
  ಗಳ ಮೋದ, ವಿಲಾಸದಂದಮನುಭವವೇದ್ಯಂ
  ಕೆಳೆಯಾಗಲ್ ಶಿಶುವೃಂದ –
  ಕ್ಕೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್

  [ಎಳೆಮಕ್ಕಳ ಮದುವೆಯಾಟ ಕುರಿತು]

 5. ಕೆಲಮನೆವೆಣ್ಣಂ ಕೂರಿಸಿ
  ಯೊಲವಿಂ ತರಳಂ ವಿವಾಹಕೊಪ್ಪಿಗೆಯಂ ಕೇ-
  ಳಲೊಡಂಬಡೆಯವರಂ ತಾಂ-
  ಗೆಲೆ, ಮನೆಯಾದತ್ತು ನೋಡ ಮದುಮನೆ ಚಣದೊಳ್-

  ಪಕ್ಕದ ಮನೆ ಹುಡುಗಿಯನ್ನು ಪ್ರೀತಿಸಿ, ಖುಷಿಯಿಂದ ಹುಡುಗ ವಿವಾಹಕೊಪ್ಪಿಗೆಯನ್ನು ಕೇಳಲು, ಒಡಂಬಡೆ(ಸಮ್ಮತಿಸಲು), ಅವರ ಮನಸನ್ನು ತಾನು ಗೆಲ್ಲಲು, ‘ಮನೆ’ ‘ಮದುಮನೆ’ಯಾಗಿತ್ತು ಕ್ಷಣದೊಳ್

 6. ಮೇನಕೆಯ ದೆಸೆಯಿ೦ದ ತಪಗೆಟ್ಟ ಕೌಶಿಕನ ಎಲೆಮನೆ ಮತ್ತು ಮನದೆಲೆಗಳ ಸ್ಥಿತಿ…
  ನನ್ನ ಮೊದಲ ಕ೦ದಪದ್ಯವಿದು. ತಪ್ಪಿದ್ದರೆ ದಯವಿಟ್ಟು ತಿದ್ದಬೇಕು.

  ಸುಳಿಯಲ್ ಪ್ರಣಯದ ಗಾಳಿಯು-
  ಮಿಳುಹಲ್ ಮಿಗೆ ತಪದ ಭಾರಮ೦ ಮನದೆಲೆಯು೦
  ನಲಿಯಲ್ ಮುನೀ೦ದ್ರ ಕೌಶಿಕ-
  ನೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್

  • ಪಿರಿಯರ್ ನಿಶ್ಚಯಗೈದರೆ?
   ಬರವಾಯ್ತೆ ವಿವಾಹದೌತಣಕೆ ಬಂಧು-ಸಖರ್?
   ಮೊರೆತಂ ಮಂತ್ರದಮಿತ್ತೇಂ?
   ಬರಿಯ ನಿಷೇಕಗೃಹಮಂ ಮದುಮನೆಯೆನುವೆಯೇಂ??

   • ತಮ್ಮ ಆಕ್ಷೇಪಕ್ಕೆ ಉತ್ತರವೆ೦ದೋ, ಪದ್ಯರಚನೆಯ ಛಲಕ್ಕೋ, ಇದೊ ಕೊಳ್ವುದು… 🙂

    ಪಿರಿಯರಿಹರ್ ಗಡ ಕೌಶಿಕ-
    ವರತಾಪಸಿಗೆ ಮಿಗಿಲಾಗಿ, ವಿಶ್ವಾಮಿತ್ರ೦
    ಬರಗಾಣುವ೦ ಗಡ ಸ್ವಜನ-
    ಕರಿಯ೦ ಮಾರಿದಿಯು ಗಡ ಮದುಮನೆಯ ತೋರಲ್!

    ಮಾರಿದಿ – ಅಪರಬ್ರಹ್ಮ

 7. ಬಲಿಯಾಗಲೊಂದು ಜೋಡಿ ಮೊ
  ದಲ ಬೇಟಿಯ ಮೋಡಿಗಂ,ಬಿಡದ ಬಂಧನಕಂ
  ಒಲವೇ, ಬುಧರ ಮನಗಳಂ
  ಗೆಲೆ,ಮನೆಯಾದತ್ತು ನೋಡ ಮದುಮನೆ ಚಣದೊಳ್

 8. “ತೊಲೆ “ಲೆಕ್ಕವ ದಾಂಟಿ ಮಿಸುನಿ,
  ಕಲೆಯಾಭರಣಂಗಳಾಗಿ ಮಿಂಚಿಸೆ ವಧುವಂ,
  ಛಲಬಲ ದಿಂದೆ ವರನ,ಬ
  ಲ್ಬೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್ 🙂

 9. ಒಲವಿಂ ವನದೊಳನುಭವಿಸಿ-
  ರಲನುಗತದ ಬದುಕೊಳಿಂತುವೆ ಸಯಂಬರವಂ ।
  ವಿಲಸಿತ ಸೀತೆಯೊಳಮನದೊ-
  ಳೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್ ।।

  ವನವಾಸದ ವೇಳೆ – ಸೀತೆ ಕಂಡ “ಸ್ವಯಂವರ”ದ ನೆನಸಿನಲ್ಲಿ “ಮದುಮನೆ”ಯಾದ “ಎಲೆಮನೆ”

 10. ನಲಪಾಕಮಂ ಸವಿಯುತಿರೆ,
  ಸುಲಲಿತೆಯರ್ ಕೂಡಿ ವಧುವಿಗುಣ್ಣಿಸೆ ವರನಿಂ,|
  ಕಲಸಿದ ಕೂಳಂ,ಮೋಜಿನ
  ಸೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್ ||

 11. ಪ್ರಸಾದು, ಚೀದಿ, ರಾಮ್, ಶಕುಂತಲಾ, ಕಾಂಚನಾ, ಹೃದಯರಾಮ, ನೀಲಕಂಠ, ಉಷಾ ಮುಂತಾದವರೆಲ್ಲ ಪೂರಣಗಳು ಸೊಗಸಾಗಿವೆ. ಇಷ್ಟು ವೈವಿಧ್ಯಮಯವಾದ ಪರಿಹಾರಗಳಿಗಾಗಿ ಮತ್ತೆ ಮತ್ತೆ ಧನ್ಯವಾದಗಳು

  • ಧನ್ಯವಾದವದೇಕೆ? ಗೈದಿರುವೆನೇನನಾಂ?
   ಮನ್ಯು(passion)ವನ್ನೆನ್ನೊಳುಜ್ಜುಗಿಸಿರ್ಪರಾರ್?
   ಅನ್ಯಕೃತಮಲ್ಲ ತಮ್ಮವೆ ಪದ್ಯಗಳಿವು, ಪ-
   ರ್ಜನ್ಯನೊಲ್ ಸಾಗರಕೆ ಮರಳಿಸಿಹೆನೈ||_/_

   ಈಗ ಸಂದೀತು ಘನತರದ ವಿಶ್ಲೇಷಣೆಯು:
   “ಕಾಗೆಗಂ ತರತಮಜ್ಞಾನಮುಂಟೇಂ|
   ರಾಗನಾಂ ರಚಿಪೆನೇನಾಪರಿಯ ಪದ್ಯಗಳ
   ತೂಗಿನೋಡೈ ಹದದೆ ಹಾದಿರಂಪ”||

   • ಕೃಷ್ಣವಿವರಗಳ೦ತೆ ಸಿಕ್ಕಿದ್ದನ್ನು ಗುಳು೦ ಎನ್ನಿಸಿ ಸುಮ್ಮನೆ ಕೂಡದೆ ಯತ್ಕಿ೦ಚಿತ್ ಮರಳಿಸುವ ಯತ್ನ ಮಾಡುತ್ತೇವಲ್ಲ, ಅದಕ್ಕೆಯೇ ಸರ್ ಧನ್ಯವಾದ ಹೇಳುತ್ತಿರುವುದು.. 🙂

  • ಪ್ರಸಾದರ ಮಾತು ಸತ್ಯ, ಕೆಲವೇ ತಿಂಗಳ ಹಿಂದೆ ಹಳಗನ್ನಡದ ‘ವೊಲ್’ ಪ್ರತ್ಯಯದ ಅರ್ಥ ತಿಳಿಯದೆ ಹುಡುಕುವಾಗ ಸಿಕ್ಕಿದ್ದು ಅಂತರ್ಜಾಲದ ಈ ತಾಣ. ಸೋಮ ಶರ್ಮ, ಹಾಗೂ ಇತರರ ಪದ್ಯಗಳನ್ನು ನೋಡಿ ಆಶ್ಚರ್ಯದಿಂದ ನನಗೆ ತಲೆತಿರುಗಿದ್ದೂ ಇದೆ.. ಈ ಕಾಲದಲ್ಲೂ ಹಳಗನ್ನಡದಲ್ಲಿ ಪದ್ಯ ರಚನೆಯಾಗುವುದಲ್ಲ ಎಂದು ತಿಳಿದು ಅಂದಿನಿಂದಲೆ ತಡವರಿಸುತ್ತ ಪ್ರಾರಂಭಮಾಡಿ ಮುಂದುವರಿಯುತ್ತಿದ್ದೇನೆ. ಎಲ್ಲಾ ನಿಮ್ಮ ಕೃಪೆಯಲ್ಲವೇ..

   • ನಿಮ್ಮೆಲ್ಲರ ಆದರಾಭಿಮಾನಗಳಿಗೆ ಕೃತಜ್ಞತೆಯ ರೂಪದಲ್ಲಿ ಸದ್ಯದ ಸಮಸ್ಯೆಯನ್ನು ಹೀಗೆ ಪೂರಯ್ಸುತ್ತಿದ್ದೇನೆ:

    ಫಲಿಸೆ ವಿವಾಹಂ ವಿದ್ಯಾ-
    ವಿಲಯಮದೆಂಬರ್; ತಗುಳ್ಚಲಿಂತಿಲ್ಲಿ ಸದಾ|
    ವಿಲಸತ್ಕಾವ್ಯತಪಂ ಕೇಳ್!
    ಎಲೆಮನೆಯಾದತ್ತು ನೋಡ ಮದುಮನೆ ಚಣದೊಳ್||

 12. ಕಲಿಗಾಲದೆ ವೈವಾಹಕೆ
  ಕಲೆತುಂ ಕಲ್ಯಾಣಮಂಟಪದೊಳುಂ, ವಧುವಂ
  ಕುಲಕೊಪ್ಪಿಸೆ ಬಿದಡಿಮನೆಯೆ,
  ನೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್ !!

  ವಿವಾಹದ ನಂತರ ಛತ್ರದ ಬಿದದಿಮನೆಯಲ್ಲೇ ಹೆಣ್ಣೊಪ್ಪಿಸಿ ಕೊಡುವ ಸಂದರ್ಭ – ಆ ಕ್ಷಣದಲ್ಲಿ “ಮದುವೆ ಮನೆ”ಯೇ ವರನ “ನೆಲೆಮನೆ”(ವಾಸಸ್ಥಾನ)ಯಾಯ್ತೇ !? ( ಈ ತಿರುವುಮುರುವಿನ ಪೂರಣ ಸರಿಯಾದೀತೇ?)

  • ಚೆನ್ನಾಗಿದೆ; ಯಾವುದೇ ತಪ್ಪಿಲ್ಲ…ಬಿಡದಿಮನೆ ಮಾತ್ರ ಬಿದಡಿ ಎಂದು ತಪ್ಪಾಗಿ ಆಚ್ಚಾಗಿದೆ:-)

   • ಧನ್ಯವಾದಗಳು ಗಣೇಶ್ ಸರ್,
    ಓ.. ಗಮನಿಸಿರಲಿಲ್ಲ, ಪದ್ಯ-ಗದ್ಯ ಎರಡರಲ್ಲೂ “ಬಿಡದಿ” ತಪ್ಪಾಗಿ ಅಚ್ಚಾಗಿದೆ !

 13. ”ಚಣದೊಳ್ ” ಅನ್ನುವ ಪದಕ್ಕೆ ಹೆಚ್ಚಿನ ಒಟ್ಟು ಕೊಟ್ಟು —

  ಬಲಮಾದ ಶಿವಧನುಸ್ಸಂ
  ಕುಲತಿಲಕ ದಶರಥ ನಂದನ೦ ಭ೦ಗಿಸುವೊಲ್ I
  ಕುಲವಂತ ಜನಕನರಮನೆ
  ಎಲೆಮನೆಯಾದತ್ತು ನೋಡ ಮದುಮನೆ ಚಣದೊಳ್||

  ಜನಕ ಮಹಾರಾಜ ರಾಜರ್ಷಿಯಾಗಿದ್ದನೆ೦ಬುದು ಕಥೆಯಿಂದ ತಿಳಿಯುವ ವಿಚಾರ . ಆದ್ದರಿಂದ ಅವನ ಅರಮನೆ ಆಶ್ರಮವೇ ಆಗಿತ್ತು ಅನ್ನಬಹುದಲ್ಲವೇ? ಶ್ರೀ ರಾಮ ದಿವ್ಯ ಚಾಪವನ್ನು ಮುರಿಯುವ ಮೊದಲೂ, ಮದುವೆ ಕಳೆದ ಮೇಲೂ ಅದು ಆಶ್ರಮವೇ ಆಗಿತ್ತು ಎಂಬುದು ಈ ಪದ್ಯದ ಸಾರ .
  ಇಂತಹ ವಿಚಾರಗಳು ಪದ್ಯಕ್ಕೆ ಹೊಂದಿಕೆಯಾಗಬಹುದೇ ಎಂಬುದು ತಿಳಿದಿಲ್ಲ . ತಪ್ಪಾಗಿದ್ದರೆ ದಯವಿಟ್ಟು ತಿಳಿಸಿ .

  • ನಿಮ್ಮ ಪೂರಣವು ಅಂಗೀಕಾರ್ಯವೇ. ಆದರೆ ಸ್ವಲ್ಪ ಪರಿಷ್ಕಾರಗಳಾಗಬೇಕು:
   ಬಲಶಾಲಿಶಿವಧನುಸ್ಸಂ
   ಕುಲತಿಲಕಂ ದಾಶರಥಿಯು ಭಂಗಿಸಲಾಗಳ್|
   ಸಲೆ ರಾಜರ್ಷಿ ಜನಕನೃಪ-
   ನೆಲೆಮನೆ…………………………………..||

   ಇದೀಗ ಪದ್ಯದಲ್ಲಿಯೇ ಎಲ್ಲ ವಿವರಗಳೂ ಸೇರಿ ಸ್ವಸಂಪೂರ್ಣತೆಯನ್ನು ಪಡೆಯುತ್ತವೆ.

   • ಸರ್ , ನಾನು ಪೂರಣವೆಂದು ಗ್ರಹಿಸಿಕೊಂಡ ಪದ್ಯಭಾಗವನ್ನು ಸ್ವಲ್ಪ (ಸ್ವಲ್ಪ ಉಳಿಸಿ 🙂 ) ಪರಿಷ್ಕರಿಸಿರುವುದು ಬಹಳ ಸೊಗಸಾಗಿದೆ . ಧನ್ಯವಾದಗಳು .

 14. ಶಕುಂತಲೆಯು ದುಷ್ಯಂತನನ್ನು ಕಂಡು ಒಲವು ಮೂಡಿ, ಮನ್ಮಥನು ಒಲಿದು ಬರಲು, ಕಣ್ವಾಶ್ರಮವು ಮದುಮನೆಯಾಯ್ತು…My first try in my least favourite rasa – ಶೃಂಗಾರ ರಸ…

  ನಲವಿಂ ಪೆಣ್ಣೊಳ್ ನೆಱೆಯ
  ಲ್ಕೊಲವಿಂತಿಂತಾ ಪುರುಪ್ರಭವನಂ ಕಂಡಿಂ
  ತೊಲಿಯಲ್ಕೈಗಣೆಯಂ ತಾ
  ನೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್

  • P.S: ಎಲೆಮನೆಯಾದತ್ತು ನೋಡ ಮದುಮನೆ ಚಣದೊಳ್ Filmy effectನಲ್ಲಿ

  • ಮಧುಕರ ನೀನೈ ಮೌರ್ಯ
   (love)ರಿಧಮರಸವನಿಂತು ಛಾತ್ರದೆಸೆಯೊಳಗಧಿಕಂ|
   ನಿಧಿವೊಲ್ ಸಂಚಯಿಸುತ್ತಿಹ
   ಬುಧನೈ, ಬಳಸಲ್ ಗೃಹಸ್ಥದೆಸೆಯೊಳಗದನುಂ||

   • ನಮ್ಮಂಥವರಿಗೆ ಎಲ್ಲಿ ಸಾರ್ ಗೃಹಸ್ಥಿ? ಹಹ್ಹಹ್ಹಹ್ಹ 😀

    • ಹರೆಯದೊಳೆಂದಿಗಮೀತಂ
     ಹರೆಯದ ಪೆಣ್ಗಳ ವಿಚಾರದೊಳನಾಸಕ್ತಂ
     ದೊರೆವರದಾರಿವಗಿಂತಿಂ
     ತೊರೆಯಲ್, ಬರೆಯಲ್ಕೆ ಪದ್ಯಗದ್ಯಾದಿಗಳಂ

     ಎಂದು ನನ್ನನ್ನು ವ್ಯಾಖ್ಯಾನಿಸುತ್ತಾರೆ ಕೆಲವರು….ಏನ್ ಮಾಡ್ಲಿ?

     • ನಾನು ಹೇಳಿರುವುದೂ ಅದನ್ನೇ. ಯಾರೋ ಕೆಲವರು ಹಾಗೆನ್ನುತ್ತಾರೆಯಷ್ಟೆ, ಅದು ನಿನ್ನ ಮನೋನೆಲೆಯಲ್ಲ ಎಂದು 😉

     • ಹಾದಿರಂಪರೇ! ಮನೋನೆಲೆ ಅರಿಸಮಾಸ!!!

     • 🙁

 15. ಪಲಬರ್ ಸಿಂಗರಿಸುತ್ತಿರೆ
  ಚೆಲುವಿನ ತೋರಣವ ಕಟ್ಟುತೆಲ್ಲೆಡೆಗಾಗಳ್,|
  ಬಲಿತಿರ್ಪ, ಮಾವಿನ ಪಸಿರಿ
  ನೆಲೆಮನೆಯಾದತ್ತು ನೋಡ ಮದುಮನೆ ಚಣದೊಳ್ ||

 16. ಎಲೆವಳ್ಳಿಗಳಂ ಮರನೊಡ
  -ನೆಳವೆಯೊಳಂ ಬಳಸಿ ಸಖಿಯರೊಡನಿರ್ಪ ಶಕುಂ-
  ತಲೆಯಾ ಸಂಭ್ರಮದಿಂದಂ
  -ದೆಲೆವನೆಯಾದತ್ತು ನೋಡೆ ಮದುವನೆ ಚಣದೊಳ್||
  (ಋಷ್ಯಾಶ್ರಮದಲ್ಲಿ ಶಕುಂತಲೆ ಎಲೆಯ ಬಳ್ಳಿಗಳನ್ನು ಬೆಳೆಸಿ ಮರಗಳ ಜೊತೆ ಮದುವೆ ಮಾಡುವ ಸಂಭ್ರಮದಲ್ಲಿದ್ದಾಗ ಎಲೆವನೆ ಮದುವನೆಯಾಗಿತ್ತು)

  • ಪುರೋಹಿತೆ ಶಾಕುಂತಲೆಯನ್ನುಳಿದು ಮಿಕ್ಕೆಲ್ಲ ಸಸ್ಯಗಳೇ – ವಧು, ವರ ಹಾಗೂ ಮದುಮನೆ. ಅತಿಥಿಗಳೂ.
   ಏನದ್ವೈತಂ ಗಡಿದೈ!
   ಮಾನಿನಿಯುಂ, ಆ ವರಂ, ಮದುಮನೆಯುಮೆಲ್ಲಂ|
   ಕಾನನಪರ್ಣಮೆನಿಸಿದುವೆ!
   ಬೋನದತಿಥಿಗಳನದೇಕೆಣಿಸದೆಲೆ ಪೋದೈ? 🙂

   • ಶಾಕುಂತಲೆ ಅಲ್ಲ ಪ್ರಸಾದು! ಅವಳು ಶಕುಂತಲೆ:-) ಈ ಪರಿಯ ಶಾಕು ಸಾಕೂಂತಲೇ ನನ್ನ ಇರಾದೆ:-)

    • ಓಹ್. ವಿಸ್ಮೃತಿಯಾಗಿತ್ತು. ಇನ್ನು ಮರೆಯುವುದಿಲ್ಲ. ಧನ್ಯವಾದಗಳು.

  • ಬಹಳ ಸುಂದರ ಪರಿಹಾರ. ಖಂಡ ಪ್ರಾಸಗಳು ವಿಶೇಷವಾಗಿ ಸೊಗಸಾಗಿವೆ.

 17. ಅಲರಡಗಿರಲ್ ವಿರಹವಿಂ-
  ತೆಲೆಮರೆಯಾಗಲ್ಕೆ ನೋಡ ಮಧುಪಗೆ ಮನದೊಳ್ ।
  ಎಲರುಸಿರಲ್ಕೆದುರಾಗಿರ-
  ಲೆಲೆಮನೆಯಾದತ್ತು ನೋಡ ಮದು(ಧು)ಮನೆ ಚಣದೊಳ್ ||

  ಎಲೆಮರೆಯಲ್ಲಿ ಅಡಗಿದ ಹೂ(ವಧು) ಕಾಣದೆ ಮಧುಪ(ವರ)ಗೆ – “ವಿರಹ”
  ಗಾಳಿಬೀಸಿ, ಎಲೆ ಜರುಗಿ, ಹೂ ಕಂಡು (ಪರಸ್ಪರ ಎದುರಾದ) – ಆ ಕ್ಷಣ ಜರುಗುವ “ವಿವಾಹ” !!

 18. ಬಲುವೇಗದಿ ಮರಳಾಡಿಸೆ
  ಪಲವು ತೆರದಿ ಚಿತ್ರಲೋಕಮಂ ಸೃಷ್ಟಿಸು ತೀ|
  ಕಲೆಗಾರನ ಕೈವಾಡದೊ
  ಳೆಲೆಮನೆಯಾದತ್ತು ನೋಡ ಮದುವನೆ ಚಣದೊಳ್|

  This one is about Sand Art… on a glass..

  • ಬಲುವೇಗದಿ ಅರಿಸಮಾಸವಲ್ಲವೆ? ಬಲುಬೇಗದಿ ಎ೦ದು ತಿದ್ದಬಹುದೆ?
   ಹಾಗೆಯೇ ಪಲವು ತೆರದಿ ಚಿತ್ರ… ಓದಲು ಕಷ್ಟವಾಗುತ್ತಿದೆ. ಯತಿ ಸಮಸ್ಯೆಯೇ?
   “ಪಲವ೦ದದಿ ಚಿತ್ರನಿಕರವ ರಚಿಸುತಾಗಳ್” ಎನ್ನಬಹುದೆ?

   • ಅರಿಸಮಾಸದ ಸೂಚನೆ ಸ್ತುತ್ಯ. ಬಲುಬೇಗನೆ ಎಂಬುದು ಮತ್ತೂ ಹೃದ್ಯ. ಆದರೆ ಎರಡನೆಯ ಪಾದದಲ್ಲಿ ಚೀದಿಯ ರಚನೆಯೇ ನಿಮ್ಮ ಸವರಣೆಗಿಂತ ಹೆಚ್ಚು ಗತಿಹಿತವೆಂದು ನನ್ನ ಅಭಿಮತ. ಅಲ್ಲದೆ ಆತನ ರಚನೆಯಲ್ಲಿ ಯತಿಭಂಗವಾಗಿಲ್ಲ. ಆದರೂ ಅಲ್ಲಿ ಮತ್ತೂ ಹೃದ್ಯವಾಗಿ ಗಣವಿಭಾಗವಿರಬಹುದಿತ್ತು. ಅದು ಹೀಗೆ:
    ಪಲವುಂ ತೆರನಿಂದೆ ಚಿತ್ರಜಗಮಂ ಸೃಜಿಪೀ|

    • ಚೀದಿ! ನಿನ್ನ ಪೂರಣದ ಕಲ್ಪನಾನಾವೀನ್ಯ ತುಂಬ ಸೊಗಸಾಗಿದೆ. ಅಭಿನಂದನೆಗಳು.

    • ಹೌದೆ! ನನಗೆ ಒ೦ದು ತರಹ ಉಸಿರು ಕಟ್ದಿದ೦ತೆನಿಸುತ್ತಿದೆ, ಚೇದಿಯವರ ಸಾಲನ್ನು ಓದುವಾಗ. ಬಹುಶಃ ಮುಖತಃ ಓದಿಕೆ ಅಥವ ಕೇಳಿಕೆಯ ಕೊರತೆಯಿರಬೇಕು.. ನೋಡುವ.. ವಿವರಣೆಗೆ ಧನ್ಯವಾದಗಳು.

  • …… ಮರಳಾಡಿಸಿ ………… ಸೃಷ್ಟಿಸುವೀ….

   • Prasadu, neelakanth and ganesh sir thanks for the corrections… ನಿಮ್ಮೆಲ್ಲರ ದಿದ್ದುಗೆಗಳು ನನಗೆ ಪದ್ಯ ರಚನೆಗೆ ದಾರಿ ದೀಪವಾಗಲಿ…

    • ಕಾಗುಣಿತದೋಷದಲ್ಲಿ ಸಾಮಂಜಸ್ಯವಿರಲಿ: ನಿಮ್ಮೆಲ್ಲರ ದಿದ್ದುಗೆಕಳು ನನಕೆ ಪತ್ತಿಯ ರಜನೆಕೆ ತಾರಿತೀಬವಾಕಲಿ 🙂

 19. ಮಿಲನಮಹೋತ್ಸವ ದಿನದಂ-
  ದುಲಿದಿರೆ ಬಾನುಲಿಯೊಳೋಲಗದ ಸದ್ದಂತುಂ ।
  ಗಲಿಬಿಲಿಯೊಳ್ ಗಿಜಿಗುಟ್ಟಿದು-
  ದೆಲೆ, ಮನೆಯಾದತ್ತು ನೋಡ ಮದುಮನೆ ಚಣದೊಳ್ !!

  Get-together Partyಯಂದು “ಮದುವೆಮನೆ” ಗಲಾಟೆಯ ಚಿತ್ರಣ !!

  • ಅಹ! ಭಾವಸಹಜತೆಯೆ ಮಿಗೆ
   ಬಹುವರ್ಣ೦ಗಳನೆ ಹೊದ್ದು ಮೈದಳೆದ೦ದ೦
   ಮಹತಾಯೆ, ಕ೦ದವಿದು ಮೇ-
   ಣಿಹಭಾವಕುಷೆ ಹೊಸಬಣ್ಣವನೆ ಬಳಿದ೦ದ೦

   ಮದುಮನೆಯ ವಾತಾವರಣವನ್ನು ಕಣ್ಣಿಗೆ ಕಟ್ಟುವ೦ತೆ ಬರೆದಿದ್ದೀರಿ 🙂

   • ನನ್ನ ಕಂದನನ್ನು ಮೆಚ್ಚಿ, ನಿಮ್ಮ ಕಂದನೊಡನೆ ಕೊಂಡಾಡಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ನೀಲಕಂಠರೆ. ನಿಮ್ಮ ಕಂದವೂ ಬಹಳ ಚೆನ್ನಾಗಿದೆ.

 20. ಕೆಲ ಕಾಲದೊಳಾಗಸದೊಳ್
  ಕಲೆತು ಪಡೆಯೆ ನವ್ಯರೂಪಮಂ ತೋರುವವೊಲ್|
  ಚಲಿಸುವ ಮೇಘನಿಕರದಿಂ
  ದೆಲೆವನೆಯಾದತ್ತು ನೋಡ ಮದುವನೆ ಚಣದೊಳ್|

 21. ಅಲೆಯಲೆಯಂತೆ ಕನಸುಗಳ್
  ಸುಳಿಯಲ್ನಿದ್ರೆಯೊಳುಮೆಂದುಕಾಣದ ಲೋಕ-
  ಕ್ಕೆಳೆಯಲ್ ಭ್ರಮೆಯಂಮೂಡಿಸು
  ತೆಲೆವನೆಯಾದತ್ತು ನೋಡ ಮದುವನೆ ಚಣದೊಳ್|

 22. ಕುಲವಧುತಾಂ ಕರಿಮಣಿಸರ
  ಹಳತಾಯ್ತೆಂದು ಮರುಪೋಣಿಸೆ ಪತಿ ಕಟ್ಟಲ್ ।
  ಕುಲಧರ್ಮದಲಿರಲೀ ಹಿ-
  ನ್ನೆಲೆ, ಮನೆಯಾದತ್ತು ನೋಡ ಮದುಮನೆ ಚಣದೊಳ್ |

  (“ಹಿನ್ನೆಲೆ”ಯ ಕೀಲಕ ತರಲು ಈ ಪೂರಣ. ಹೆಚ್ಚಿದ ಕರಿಮಣಿಸರವನ್ನು ಪೋಣಿಸಿ ಪತಿಯ ಕೈಯಲ್ಲಿ ಮತ್ತೆ ಕಟ್ಟಿಸಿಕೊಳ್ಳುವ ಪದ್ಧತಿಯ ಬಗ್ಗೆ )

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)