Jan 122015
 

‘ಸೌಂದರ್ಯದುತ್ಕರ್ಷಮಯ್’ ಎಂಬ ಪಾದಾಂತ್ಯದಿಂದ ಪದ್ಯಪೂರಣವನ್ನು ಮಾಡಿರಿ.

ಪಂಚಮಾತ್ರಾಚೌಪದಿ/ಮತ್ತೇಭ/ಶಾರ್ದೂಲವಿಕ್ರೀಡಿತ ಛಂದಸ್ಸುಗಳಿಗೆ ಪಾದಾಂತ್ಯವು ಹೊಂದುತ್ತದೆ

  77 Responses to “ಪದ್ಯಸಪ್ತಾಹ ೧೩೩: ಪದ್ಯಪೂರಣ”

 1. ಅತ್ಯುತ್ಸುಕರ್ಗಳಿಂ ತುಂಬಿರಲ್ಕೊಳ್ಪ ಸಾ-
  ಹಿತ್ಯದೋದುಗಬಳಗಮವರೆ ಪೇಳ್ವರ್
  ನಿತ್ಯಜೀವನಕಥೆಗೆ ಸನಿಹಮಪ್ಪಂತಿರ್ಪ
  ಸತ್ಯದಿಂ ಸೌಂದರ್ಯದುತ್ಕರ್ಷಮೈ!

 2. ಅನುಭವಿಸುತೆಲ್ಲಮಂ ಬಾಳ್ತೆಯೊಳ್ ಸಂದುದಂ
  ದಿನಮುಮಾನಂದಮಯಮೆಂದು ಬಗೆಯಲ್
  ಘನಕಷ್ಟಮೆಲ್ಲಮುಂ ಕರಗಿ ಪರಿಯಲ್ಕೆ ಜೀ
  ವನದೊಳಗೆ ಸೌಂದರ್ಯದುತ್ಕರ್ಷಮೈ!
  (ಮೊದಲು ಹಾಕಿದ ಪದ್ಯ ಏನೋ ತೊಂದರೆಯಿಂದ ಪ್ರಕಟವಾಗಿರಲಿಲ್ಲ ಎಂದು ಇನ್ನೊಮ್ಮೆ ಹಾಕಿದೆ. ಈಗ ಎರಡೂ ಪ್ರಕಟವಾಗಿಬಿಟ್ಟ ಕಾರಣ ಇದನ್ನು ತಿದ್ದಿ ಬೇರೆಯ ಪದ್ಯವನ್ನಾಗಿ ಮಾಡಿದ್ದೇನೆ.)

  • ಗದ್ಯಭಾಗವು ಪಂಚಮಾತ್ರಕ್ಕೆ ಎಷ್ಟೊಮ-
   ಟ್ಟಿಗೆ ಹೊಂದುತಿದೆಯಿಲ್ಲಿ ಕೊಪ್ಪಲಲ್ಲಿ|
   “ಮೊದಲು ಹಾಕಿದ ಪದ್ಯ ಏನೊತೊಂದರೆಯಿಂದ
   ಪ್ರಕಟವಾಗಿರಲಿಲ್ಲ ಎಂದುಮಿನ್ನುಂ||
   ಹಾಕಿದೆನು, ಈಗ ಎರಡೂ ಪ್ರಕಟವಾಗಿರುವ
   ಕಾರಣ ಇದನ್ನು ತಿದ್ದಿಬರೆದಿರ್ಪೆಂ|”
   ಸಿಂಹಮಂ ಶರಭ-ಗಜ-ವೃಷಭಮಂ ತರ್ಪಯಾ
   ಮಿ(೩), ಪ್ರಾಸಮಂ ತರ್ಪಯಾಮಿ(೩)ಯೆಂಬೆಂ||

   ಇಲ್ಲಿ ‘ಸಿಂಹ’ಶಬ್ದವನ್ನು ಬಳಸಿರದಿದ್ದಿದ್ದರೆ ವೃಷಭಸಂಕರವೊಂದಾದರೂ ತಪ್ಪುತ್ತಿತ್ತು! ಇತರ ಸಂಕರಗಳಂತೂ ಆಗಿಯೇ ಇವೆ.
   ಸಿಂಹ-ಕಂಜರ(ಗಜ)-ರಿಶ್ಯ(ಶರಭ)ಪ್ರಾ-
   ಸಸಾಂಕರ್ಯಕೆ ಶೋಚನಂ|
   ಗೈಯದಿರ್ದೊಡಮುಕ್ಷಾಣ-(ಉಕ್ಷಾಣ=ವೃಷಭ)
   ಪ್ರಾಸಸ್ಖಲನಮಿರ್ದುದೇಂ?
   (ಅನುಷ್ಟುಭ್ ಆದ್ದರಿಂದ ಇಲ್ಲಿ ಪ್ರಾಸನಿಯಮಗಳನ್ನು ಪಾಲಿಸಿಲ್ಲ)

 3. ನಿಂದು ತುಹಿನಾಚಲದೆ ನೋಡಲೆಲ್ಲೆಡೆಯುಮಿರು-
  ವೊಂದೆ ಬಿಳುಪಂ ದಿಟ್ಟಿ ಪೋಪನ್ನೆಗಂ|
  ಕುಂದದಿಹ ಮಿಂಚ ಸಂಚಾರಮನು ಗೈವುದಾ
  ಸೌಂದರ್ಯದುತ್ಕರ್ಷ ಮೈ-ಮನದೊಳೈ||

  • ಸೌ೦ದರ್ಯದುತ್ಕ… ಇದು ಮೊದಲ ಮೂರು ಸಾಲುಗಳ ಅಡಿಪ್ರಾಸಾಕ್ಕೆ ಹೊ೦ದುತ್ತದೆಯೆ?

  • ೧) ’ಅಡಿಪ್ರಾಸಾ’ ಎಂದರೇನು? 🙂
   ೨) ನಿಮ್ಮ ಚಕಾರವು ನಿ-ವೊ-ಕು-ಗಳು ಹ್ರಸ್ವ, ಸೌ ದೀರ್ಘ ಎಂಬ ಬಗೆಗಾದರೆ, ನಿಂ-ವೊಂ-ಕುಂ-ಸೌಂ-ಗಳೆಲ್ಲವೂ ಗುರುವಾದ್ದರಿಂದ ಪ್ರಯೋಗವು ಸಾಧು.

   • ನನ್ನ ಚಕಾರವು ದರ್ ಬಗ್ಗೆ ಇದೆ 🙂

    • ಪ್ರಾಸಾಕ್ಷರವು ಲಘು-ಗುರು ಯಾವುದೂ ಆಗಬಹುದು. ಈ ಲಘು-ಗುರುಗಳನ್ನು ಸಿಂಹ-ಗಜವೆಂದು ವ್ಯಾಖ್ಯಾನಿಸಲಾಗದು; ಇಲ್ಲಿ ವೃಷಭ-ಅಜ-ಹಯ-ಶರಭಗಳ ಅಸ್ತಿತ್ವವಿಲ್ಲ.

 4. ಬೆಂಗಾಡಬಿಸಿಲಿನಿಂ ನಲಗಿರ್ದೆದೆಯೊಳು ರಸ
  ಗಂಗೆಯಂ ಹರಿಸಿ ಹಸಿರಾಗಿಸಲ್ಕೆ
  ಸಿಂಗಾರಗೊಂಡ ಜಡ ಜೀವಿಗಳ್ ಮುದದಿಂದೆ
  ಕಂಗೊಳಿಸೆ , ಸೌಂದರ್ಯದುತ್ಕರ್ಷಮೈ

  • ಬಿಸಿಲಿನಿಂ ಅನ್ನುವುದು ಸರಿಯೇ? ನನ್ನ ಮೊದಲನೇ ಪದ್ಯದಲ್ಲಿ ಇದೇ ರೀತಿಯ ಪದದ ಬಳಕೆಯನ್ನು ಮಾಡಿದ್ದೆ… you can see the corrections for my poem here.. http://padyapaana.com/?p=1375#comments ಬಿಸಿಲಿಂ ಅಥವಾ ಬಿಸಿಲಿಂದ ಎಂಬುದೇ ಸರಿ ಅನ್ನಿಸುತ್ತದೆ… ಸವರಣೆ ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ..

   • ಬಿಸಿಲಿಂ, ಬಿಸಿಲಿನಿಂ ಎಂಬ ಎರಡೂ ರೂಪಗಳೂ ಸರಿಯಾಗುತ್ತವೆ.ಉಕಾರಾಂತ/ವ್ಯಂಜನಾಂತ ಶಬ್ದಗಳ ಉದಾಹರಣೆ- ಊರ್- ತೃತೀಯಾ ವಿಭಕ್ತಿ ಊರಿಂ, ಊರಿನಿಂ ಎರಡೂ ಆಗಿತ್ತದೆಯಲ್ಲ. ಅದೇರೀತಿ ಕಣ್ಣಿಂ-ಕಣ್ಣಿನಿಂ, ಮುಗಿಲಿಂ-ಮುಗಿಲಿನಿಂ ಇತ್ಯಾದಿ.
    ಹಾಗೆಯೇ ನಿಮ್ಮ ಪದ್ಯದಲ್ಲಿ ದ್ವಿತೀಯಾವಿಭಕ್ತಿಯಲ್ಲಿ ಬಿಸಿಲನಂ ಎಂದಾಗುವುದಿಲ್ಲ ಎಂದಿದ್ದಾರೆ. ಅದು ಬಿಸಿಲಂ ಎಂದಾಗಬೇಕು ಎಂದು. ಅದೇ ರೀತಿ ಊರಂ, ಮುಗಿಲಂ ಕಣ್ಣಂ ಇತ್ಯಾದಿ…

  • ಚೆನ್ನಾಗಿದೆ..
   ಸಿ೦ಗಾರಗೊ೦ಡ… ಬದಲು
   ಮು೦ಗಾರಿನಿ೦ದ೦ದ ಜೀವಿಗಳ್ ಮುದದಿ೦ದೆ
   ಎ೦ದರದು ಭಾವದುತ್ಕರ್ಷಮೆ೦ದುಕೊ೦ಡಿಹೆ. 🙂 ತಪ್ಪಿರ್ದಡ೦ ತಿದ್ದುವುದು..

 5. ಸುಳಿಗುರುಳ ಹಸುಳೆಯಾ ಹಸಿನಗೆಯ ಮೊಗದೊಳಾ
  ಗುಳಿಗಲ್ಲ, ಸೌಂದರ್ಯದಾಕರ್ಷಮಯ್ ।
  ಸುಳುಹಿರದೆ ಸೆಳೆದುದಾ ಹಸುಗೂಸ ಬೆಳೆವಾಟ-
  ದೊಳಮಾಟ, ಸೌಂದರ್ಯದುತ್ಕರ್ಷಮಯ್ ।।

  • ತು೦ಬ ಚೆನ್ನಾಗಿದೆ.. ಇದಕ್ಕೊ೦ದು ಕ೦ದವನ್ನೋ ಚೌಪದಿಯನ್ನೋ ಬರೆಯೋಣ ಎ೦ದುಕೊ೦ಡೆ, ನನ್ನ ಪೂರಣವನ್ನೀಗ ಮುಗಿಸಿ ಸುಸ್ತಾಗಿದೆ 🙂

   • ಸುಸ್ತಿಗಂ ಕಾರಣಂ ಕುಸ್ತಿಯುಂ ತಾನಲ್ತೆ
    ಜಾಸ್ತಿತೂಕದ ಪದಕೋಶಗಳ|ನೊಂದೊಂದ
    ಬೇಸ್ತುಬೀಳ್ಪನ್ನೆಗೆತ್ತೆತ್ತಿ||

    • ಹಹ್ಹ, ಪದಕೋಶಗಳೇ ಇಲ್ಲದೆ ಹಾಗೋ ಹೀಗೋ ಮು೦ದುವರಿಸಿದ್ದೇನೆ. ಸ್ಮೃತಿಗೆ ದಕ್ಕಿದ ಪದಗಳನ್ನು ಹೊಸಹೊಸತಾಗಿ ಪರಿಚಯವಾಗುತ್ತಿರುವ ಛ೦ದಸ್ಸುಗಳಿಗೆ ಒಗ್ಗಿಸಿ ಪಾದಗಳನ್ನು ಹೊಸೆಯುವುದೊ೦ದು ಸುಸ್ತು, ಹೊಸೆದು ಈ ಕನ್ನಡ ಕೀಲಿಮಣಿಯಲ್ಲಿ ಟಪಟಪಿಸುವುದೊ೦ದು ಸುಸ್ತು, ಆಮೇಲೆ ಎದುರಾಗುವ ಪ್ರಸಾದರ೦ತಹ ಪೈಲವಾನರೊ೦ದಿಗೆ ಕುಸ್ತಿಯಾಡುವುದೊ೦ದು ದೊಡ್ಡ ಸುಸ್ತು!! 🙂

   • “ಪದವ ಪಾದಕೆ ಪೊಂದಿಪುದುವೊಂ-
    ದದನು ಕೀಲಿಮಣೆಯೊಳು ಟಂಕಿಪು-
    ದದರ ನಂತರ ರಂಪನೊಂದಿಗೆ
    ಕದನಗೈವಗ್ಗಳಿಕೆಯು||” ಎಂಬಿರ?

    • ರ೦ಪವಿದತಿಯತಿಯಾದುದು
     ರ೦ಪರೆ, ಸೊ೦ಪಾಗಿ ‘ಮುಟ್ಟಿದರೆ ಮುನಿ’ ಬೆಳೆವೊಲ್
     ಚ೦ಪೂವಿದನ೦ ಕ೦ಡಿದೊ
     ಪ೦ಪ೦ ತಲೆಸುತ್ತಿಸುತ್ತಿ ವಿಭ್ರಮೆಗೊ೦ಡ೦

   • ಜಟ್ಟಿ ಕಾಳಗದಿ … ಪಟ್ಟು ವರಸೆಗಳು ವಿಫಲವಲ್ಲವು …. “ಗಟ್ಟಿತನ ಗರಡಿ ಫಲ” … ಅಲ್ಲವೇ ?!

    • ಒಳ್ಳೆ ಉದ್ಧರಣ. ಧನ್ಯವಾದಗಳು.

    • ಪುಣ್ಯಕ್ಕೆ ರಾಘವಾ೦ಕನ “-uನೆರಡು೦ ಹೋರೆ ಗಿಡುವಿ೦ಗೆ ಮಿತ್ತೆ೦ಬ…” ಪದ್ಯ ನೆನಪಾಗಲಿಲ್ಲವಲ್ಲ 😉
     ಅಥವ
     ರ೦ಪಮೆರಡು೦ ಹೋರೆ (ಪದ್ಯ) ಪಾನಕ್ಕೆ ಮಿತ್ತೆ೦ಬ೦ತೆ ಆದೀತು…

  • ಇದು ಯಾವ ಛಂದಸ್ಸು? ಉಳಿದ ಗಣಗಳೆಲ್ಲ ಆ ಸ್ಮೈಲಿಯಲ್ಲಿ ಅಡಗಿವೆಯೆ?
   chennagide smaili(This much is penned by you. What follows is the hidden part)ಯ ನಗೆ ಕಿವಿಯಿಂದೆ ಕಿವಿ-
   ಯನ್ನೆಗಂ ನೋಡಯ್ಯ ಶ್ರೀಧರಯ್ಯ|
   ಇನ್ನು ಬೇಕೇನು? ಆ ನಗುವೊಂದೆ ಸಾಲದೇಂ?
   ಘನ್ನವಾ ಸೌಂದರ್ಯದುತ್ಕರ್ಷಮೈ||

   • ನಿಮ್ಮ ಕಾಮೆಂಟ್ ಗಗಳಿಗದೇನುತ್ತರಿಸಲಿ ನಾಂ
    ಸುಮ್ಮನೆಯೆ ಕೈಮುಗಿವೆ ರಂಪ ಗುರುವೆ… _/\_

 6. ತಿರೆಹೊತ್ತಿಂತಿಹ ಜೀವಚೇತನದೊಳುಂ ಬಾಂಧವ್ಯದಾ ಭಾವಮುಂ
  ತೆರೆವೆತ್ತಂದದ ಮೋಡಮೋದದೊಳುವೈ ಸಂಸಾರದಾ ಸಾರಮುಂ
  ನೆರೆಯುಕ್ಕಿಂತು ವಿಲಾಸದಾ ಕಡಲೊಳುಂ ಲಾವಣ್ಯದಾ ಲಾಸ್ಯಮುಂ
  ದೊರೆಯಲ್ಕಿಂತೆಮಗಂ ಮನಂಗೊಳಿಸುವೀ ಸೌಂದರ್ಯದುತ್ಕರ್ಷಮಯ್ ।।

 7. ನನ್ನ ಮೊದಲ (ಎರಡು) ಚೌಪದಿಗಳಿವು. ಒ೦ದರಲ್ಲಿ ಪೂರಣ ಮುಗಿಸೋಣ ಎ೦ದುಕೊ೦ಡೆ. ಶಿವನ ಮಹಿಮೆ ಎರಡಕ್ಕೆ ಹಿಗ್ಗಿತು… 🙂

  ನೀಲಕ೦ಠ೦, ನೀಲಕ೦ಠದ ಸೊಬಗದಿಲ್ಲ
  ಮೌಳಿಶಶಿಯು೦, ಶಶಿಮುಖನುಮಲ್ಲವೈ
  ವ್ಯಾಲಗಳ್ ಮಿಗೆ ಮಾಲೆಯೋಲೆಗಳ್, ತಾನಿರಲ್
  ಲೀಲೆಯೊಳ್ ಕಾಮಾರಿ, ಬೈರಾಗಿಯು೦

  ನಿತ್ಯಮದು ಭಿಕ್ಷಾಟನ೦, ಗಿರಿಗುಹೆಯ ವಾಸ-
  ಮತ್ಯುನ್ಮಹಿಮ ಹಿಮಾ೦ಗ೦ಗಪತ್ಯಳ್
  ಸ್ತುತ್ಯಳ್, ಜಗನ್ಮೋಹಿನಿಯೆ ಮೋಹಿಸಲ್, ಶಿವ೦
  ಸತ್ಯಮಿದು ಸೌ೦ದರ್ಯದುತ್ಕರ್ಷಮೈ

  • ಅಯ್ಯೋ! ೨, ೪ ನೆಯ ಸಾಲುಗಳಲ್ಲಿ ಒ೦ದೊ೦ದು ಗಣ ಜಾಸ್ತಿ ಆದುವು…

   • ಕುಗ್ಗದೆ, ‘ಗಣ’ಪತಿ ಮಹಿಮೆ ಅನ್ನುದರಲ್ಲೂ ಸಮಾಧಾನವಿದೆ 🙂

    • ಹಹ್ಹ.. ಪಶುಪತಿಯ ಮಹಿಮೆಗ೦ ಗಣಪತಿಯ ಮಹಿಮೆಯ೦ ಬಲಿಗೊಟ್ಟಿಹೆನಿದೊ ಕೊಳ್ಳಿ೦, 🙂 ಮೂಲಮನೆ ತಿದ್ದಿಹೆನು..

  • ಎರಡುಪದ್ಯಗಳಾದದ್ದು ಸಹಜವೇ!
   ಹಾಲಾಹಲವು ಉಳಿದು ಗಂಟಲೊಳ್ , ಸಾವಲ್ತೆ
   ನೀಲಕಂಠಂಗೆಂದು ಗಲರಂಧ್ರದೊಳ್|
   ಭೋಲೆನಾಥಗೆ ಕೆಳಗಣದ ರುಂಡದೊಳಗೆ ಮೇಣ್
   ಮೇಲಣದ ಮುಂಡದೊಳ್ ಜೀವಮಲ್ತೆ||

   • ಅಯ್ಯೋ ದೇವರೆ! ಸಹೃದಯಮಹೋದಯರಿಗೆ೦ದೆರಡು ಪದ್ಯಗಳನ್ನು ಕೊಟ್ಟರೆ, ನನ್ನ ರು೦ಡ ಮು೦ಡಗಳನ್ನೇ ಚೆ೦ಡಾಡುತ್ತಿರುವುದು ಸರಿ ಅಲ್ಲ !!

   • ಒಂದೆ ಪದ್ಯದಲ್ಲಿ ವಸ್ತುವನ್ನು ಅಡಕಮಾಡಲಾಗದೆ ಎರಡನ್ನು ರಚಿಸಿದೆ ಎಂದು ಆಗೆಂದಿರಿ. ಈಗ ಔದಾರ್ಯವೆನ್ನುವಿರಿ!
    ಸಹೃದಯರ್ಗಿತ್ತೆ ವೆಗ್ಗಳದಿಂದಲೆನ್ನೆ ನೀಂ
    ವಿಹಿತವಹುದೇನು ಪಶ್ಚಾದ್ಮಾನದಿಂ(afterthought)!
    ತಹತಹಿಸಿ ಸೋತೆನೆಂದೆಂದಿರೈ ಮುನ್ನಮೇ
    ನಿಹಿತಮಾಗಿಸೆ ಪದ್ಯವೊಂದರಲ್ಲೇ!! 😉

    ಅಲ್ಲದೆ, ಮುಂಡವು ದುಂಡಾಗಿರುವುದರಿಂದ ಅದನ್ನು ಮಾತ್ರ ಚೆಂಡಾಡಬಹುದು.
    ಚೆಂಡಾಡಬಹುದಾದ್ದು ಮುಂಡಮಾತ್ರಮನುಮದು
    ಗುಂಡಾಗಿರುವುದರಿಂ (football)ತಂಡಕೊಪ್ಪಂ|
    ರುಂಡಮನ್ನತ್ತಲಿಂ ಧಾಂಡಿಗರು ಇತ್ತಕಂ
    ಮೊಂಡಿನಿಂ ಮಾತ್ರಹಿಟ್ಟಾಡಬಹುದೈ (hitಆಟ)||
    (ಅನುಪ್ರಾಸವನ್ನೂ ಮಾಡಿದ್ದೇನೆ; ಕೊನೆಯಪಾದದಲ್ಲಿ ವೃಷಭ-ಗಜಸಂಕರವಾಗಿದೆ ಅಷ್ಟೆ. ಯಾವುದೋ ಪ್ರಾಂತದಲ್ಲಿ ಹಿಟ್ಟಾಡು=ಹಿಟ್ಟಾಂಡು ಎಂಬ ಬಳಕೆ ಇದೆ ಎಂದು ಊಹಿಸಿಕೊಂಡು ದೋಷನಿವಾರಣೆಯನ್ನೂ ಮಾಡಿಕೊಳ್ಳಬಹುದು 🙂 )

    • ವಿಸ್ತರಣಕ್ಕೆ ಧನ್ಯವಾದಗಳು!!!! ಬಹುಶಃ ನಿಮ್ಮ ಅನುಪಸ್ಥಿತಿಯಲ್ಲಿಯೇ ಚಿ. ಉದಯಶ೦ಕರ್ ಅವರು ‘…ನಿನ್ನ ರು೦ಡಮು೦ಡಗಳನ್ನು ಚೆ೦ಡಾಡದಿದ್ದರೆ….’ ಎ೦ದೆಲ್ಲ ಬರೆದಿರಬಹುದು.. 🙂

     • ಉಪಸ್ಥಿತನಿದ್ದರೂ ನನಗಾಗ ಈ ಸೂಕ್ಷ್ಮಗಳೆಲ್ಲ ತಿಳಿದಿರಲಿಲ್ಲ. ಆದರೆ, ಇತರ ಉದ್ದಾಮ ಪಂಡಿತರಿದ್ದರಲ್ಲ ಆಗ, ಅವರಿಗೆ ಅನ್ವಯವಾದೀತು ನಿಮ್ಮ ಮಾತು, ಶ್‍ಶ್‍ಶ್!

 8. ಬನದೊಳ್ ಸ್ವಾದದ ರಂಗ ಕಂಡ ಮಧುಪಂ ಪೂವೊಂದಿಗೊಂದಪ್ಪವೊ
  ಲ್ಕನಿತುಂ ಶರ್ಕರವುಂಡಿರುಂಪೆ ಸಿಹಿಗಂ ಸೇರ್ವುತ್ತಲೇ ಸಲ್ವವೊಲ್,
  ತನಿಯಂ ಪೆರ್ಚಿಸೆ ತೋಯಿಸುರ್ತಲೆದೆಯಂ ಭಾವಾತಿರೇಕಂಗಳಿಂ
  ಮನಮಂ ನಿಲ್ಲಿಸಿ ಲಗ್ನಗೈವ ಸೊಗದೊಳ್ ಸೌಂದರ್ಯದುತ್ಕರ್ಷಮಯ್
  (ನಿಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು)

 9. ಅಸ್ವಾಸ್ಥ್ಯ ಹಾಗೂ ಕಾರ್ಯಾಂತರಬಾಹುಳ್ಯಗಳ ಕಾರಣ ಈ ಮುನ್ನವೇ ಪದ್ಯಪಾನದ ಸದ್ಯದ ಸಂಚಿಕೆಗೆ ಕಾಲಿಡಲಾಗಿರಲಿಲ್ಲ; ಇದೀಗ ಸ್ವೋಪಜ್ಞ ಪಾದಪೂರಣ:
  ನಿತ್ಯಂ ನವ್ಯನಿಸರ್ಗಸರ್ಗವಿಭವಂ ಪ್ರತ್ಯಕ್ಷಲಕ್ಷ್ಮೀಮಯಂ
  ಸತ್ಯೋದಾರಗಭೀರಮಾನುಷಮನೋವ್ಯಾಪಾರಪೂರಂ ಪರಂ|
  ಕೃತ್ಯುತ್ಕರ್ಷಮನಾವಗಂ ಸಮೆದಿರಲ್ ಹೃತ್ಕೋಶಕಂಶುಪ್ರಭಾ-
  ಸ್ತುತ್ಯೌನ್ನತ್ಯಮನೀಯುತುಂ ಸೊಗಯಿಕುಂ ಸೌಂದರ್ಯದುತ್ಕರ್ಷಮಯ್||

  • ಛಂದಂ ಸಾತ್ಮ್ಯಮುಮಾಗದನ್ನೆಗೆಮಗಂ ದುಸ್ಸಾಧ್ಯಮೀ ಮಾರ್ಗಮೈ(diction)
   ಮುಂದೇನೆಂಬುವ ಚಿಂತೆಯೇ – ಗುರುವೆ ಮೇಣ್ ಲಘ್ವಕ್ಷರಂ ಸೂತ್ರದೊಳ್|

 10. ವರ್ಷಕಾಲಕೆ ಮೋಡಗಳ್ ಕೂಡೆ ಬೆಮರುತುಂ
  ಸ್ಪರ್ಷಿಸಲ್ಕಿಳೆಯ ಸವಿ ಚುಂಬನಗಳಿಂ
  ವರ್ಷದಾ ಮೊದಲ ಮಳೆಯಂ ಕಂಡ ಸೋಗೆಗಂ
  ಹರ್ಷಮೇ! ಸೌಂದರ್ಯದುತ್ಕರ್ಷಮಯ್

 11. ಕೆಸರಿನೊಳ್ ಪುಟ್ಟಿರ್ದರೇಂ ದಿಟದೆ ಮೆರೆದಿಹುದು
  ಜಸದಿಂದೆ ಸುಮರಾಜ್ಯದೊಳ್ ಕಾಲದಿಂ
  ಬೆಸಗೊಳ್ಳಲರ್ಪಣಾ ಭಾವ, ಚೆಲ್ವಿನ ಸಮಂ
  ಬಿಸಜದೊಳ್ ಸೌಂದರ್ಯದುತ್ಕರ್ಷಮಯ್

 12. || ಶಾರ್ದೂಲವಿಕ್ರೀಡಿತವೃತ್ತ, ಉಪಮಾಲಂಕಾರ||

  ಬಾನೊಳ್ ಬೆಂಕಿಯ ಚೆಂಡಿನಂತೆಸೆಯೆ ಸೂರ್ಯಂ ಮೂಡಿ ಮುಂಜಾವದೊಳ್,
  ಗಾನಾಲಾಪದ ಪಾಂಗಿನಿಂದುಲಿಯೆ ಚೂತಾಗ್ರಂಗಳೊಳ್ ಕೋಕಿಲಂ,|
  ಪಾನಂಗೈಯುತೆ ಚಿಟ್ಟೆಗಳ್ ಮಧುವ, ಪೂವಿಂ ಪಾರ್ದು ಪೂವಿಂಗಿರಲ್,
  ಸ್ವಾನಂದಂಗೊಳೆ ವೀಕ್ಷಕರ್ ಪ್ರಕೃತಿಯಿಂ,ಸೌಂದರ್ಯದುತ್ಕರ್ಷಮೈ ||

  • ||ಪಂಚಮಾತ್ರಾ. ದೃಷ್ಟಿವ್ಯಂಜಕಾ(ಬೊಟ್ಟು)ಲಂಕಾರ||
   ತಿಳಿದುದೌ ಕವನಿಪಾಗಿದ ನೀಂ ವಿಮಾನದೊಳು
   ಕುಳಿತು ಯಾನಿಸಿಹಿರೈ ಪೂರ್ವದಶಕಂ|
   ಬಳಸಿಬರೆವಷ್ಟರೊಳಗೆಳೆವಿಸಿಲಿಗಾಪರಿಯ
   ಝಳವೈದಲಪರಮಾರ್ಗಮದುಮುಂಟೇಂ| 🙂 Your verse is fine.

   • ಧನ್ಯವಾದಗಳು ಪ್ರಸಾದರೆ. 🙂

 13. ಬಿರಿದನೆಲನಂ ತಣಿಸೆ ಕುವಲಯಂಗಳ ನಗಿಸೆ
  ಹರಿವರ್ಣದಾ ಪೈರು ಬರ್ಚುಗುಡದಂಕುರಿಸೆ
  ಕರುಷಕರ ಹರ್ಷ ಮಿಗೆ ಕಾರ್ಮೋಡ ಹೊಡಕರಿಸೆ ಬಲ್ಸರಿಯು ಕಣ್ತುಂಬಿತೈ |
  ಗರಿಗೆದರಿದಾಚಾದಗೆಯವೊಡಲುಕುಮ್ಮರಿಸೆ
  ತರುವಲ್ಲಿಗಳನಪ್ಪೆ ಹಿಳ್ಳಿತಾ ಕೊನರೊಡೆಯೆ
  ಸುರಿವಸರಿ ಸಕಲಜೀವಂಗಳಲಿ ತಾ ನೆರೆಯೆ ಸೌಂದರ್ಯದುತ್ಕರ್ಷಮೈ ||

  ಬರ್ಚುಗುಡು – ಬತ್ತಿಹೋಗು
  ಚಾದಗೆ – ಚಾತಕ ಪಕ್ಷಿ
  ಕುಮ್ಮರಿಸು – ತುಂಬು
  ಹಿಳ್ಳಿ – ಮರದ ಟೊಂಗೆ

  • ತರುವಲ್ಲಿಗಳನಪ್ಪೆ … (ತರುವು ವಲ್ಲಿಗಳನಪ್ಪೆ ಎಂಬರ್ಥದಲ್ಲಿ)
   ಎನಿತೋ ವಲ್ಲಿಗಳಂ ಸದಾ ನಿರುಕಿಸಿರ್ಪೆಂ ವೃಕ್ಷಮಾಶ್ಲೇಷಿತಂ
   ಮುನಿಯುತ್ತುಂ ಮರ ನಿಂದಿರಲ್ ಕರಗಳಂಟಿರ್ಪಂತೆ ವೋಲ್ ದೇಹಕಂ|
   ಸನಿಹಕ್ಕೈದುತೆ ವೃಕ್ಷಮೇ ಲತೆಯ ತಾಂ ಆಲಿಂಗನಂ ಗೈದಿಹೀ
   ಬಿನದಕ್ಕೋರ್ವರೆ ಸಾಕ್ಷಿಯೈ ಭುವನದೊಳ್, ನೀಮೇನೆ ಧನ್ಯರ್ ಗಡಾ|| 🙂

 14. YaavaaglU baLLiyE yaake appikoLLabEku… Paapa maranU apkoLlibiDi praasada deseyimda…

  • LoL

  • ಅಪ್ಪಿದೊಡೆ ಬಳ್ಳಿ ಮರನ೦
   ತಪ್ಪದೆ ಹಿತಮನವರೀರ್ವರು೦ ಮಿಗೆ ಪಡೆವರ್
   ತಪ್ಪಿದಡೆ ಮರ ಮುರಿದು ತಾ-
   ನಪ್ಪಲದಪ್ಪಚ್ಚಿಗೈವುದಾ ಬಳ್ಳಿಯನು೦

   • clap clap. ’ಅಪ್ಪಚ್ಚಿ’ ಸಾಧುಶಬ್ದವೆ?

    • ಖ೦ಡಿತ ಅಲ್ಲ. ಯಾರನ್ನಾದರೂ ಅಪ್ಪಚ್ಚಿ ಮಾಡುವ ಸೂಚಕ ಶಬ್ದ ಸಾಧುವಾದೀತೆ?!!
     (ನನಗೆ ಗೊತ್ತಿಲ್ಲ. ಸ೦ಶಯ ಏಕೆ?)

     • ಮೇಲಿನ ಕೆಲವು ಪದ್ಯಗಳಿಂದ ಉಂಟಾದ ಹೊಸತನಕ್ಕೆ ಒಂದು ಪೂರಣ .. (ವಿನೋದಕ್ಕಾಗಿ )
      ಪಶುಪತಿಯೆ ತಾ ಹಿಗ್ಗಿ ಪೂರಣವನೊರೆವಾಗ
      ದೆಸೆಬದಲೆ ಗಣಪತಿಯು ಮುನ್ನುಗ್ಗಿ ಬರಲು
      ಕೊಸರಲಾರದೆ ವೃಕ್ಷ ಲತೆಯ ಬಳಿ ತಾ ಬಂದು
      ಹೊಸೆದರ್ಥ ಸೌ೦ದರ್ಯದುತ್ಕರ್ಷಮಯ್

    • ಪಶುಪತಿಯೆ ತಾ ಹಿಗ್ಗಿ ಪೂರಣವನರೆವಾಗ (ಕಡುಬಿನ ಹೂರಣವನ್ನು ರುಬ್ಬುವಾಗ)
     ರಸನೆ ನೀರಾಡಿ ಗಣಪತಿಯು ನುಗ್ಗಲ್
     ಕೊಸರಲಾರದೆ ಬ೦ಡೆಗಲ್ ಮೇಲೆ ಕೋರೆಯ೦
     ಮಸೆದದ್ದು ಸೌ೦ದರ್ಯದುತ್ಕರ್ಷಮೈ

     • 🙂 ಅಪ್ಪ, ಮಗನ ವರಸೆ ನೋಡಿ ಅಮ್ಮನೂ ಹಾಜರು ..

     • ಅಮ್ಮ ಬ೦ದಿಲ್ಲ ಸರ್!!! ಅಪ್ಪನೆ ರುಬ್ಬುತ್ತಿದ್ದಾನೆ 🙁

     • ನೀಲಕ೦ಠರೆ , ನಾನು ಪದ್ಯಪಾನದಲ್ಲಿ ‘ಭಾಲ’ ಅಂತ ನನ್ನನ್ನು ಗುರುತಿಸಿಕೊಂಡಿರುವುದು ನೀವು “ಸರ್”
      ಅಂದ ಕ್ಷಣಕ್ಕೆ ಸಾರ್ಥಕವಾಯಿತು . ಹೆಸರು ಭಾಗ್ಯಲಕ್ಷ್ಮಿ. ಬರೆಯುವುದು , ಗಂಡೋ ,ಹೆಣ್ಣೋ ಎಂದು ತಿಳಿಯ ಬಾರದೆಂದು ಹಾಗೆ ಗುರುತಿಸಿಕೊಂಡಿದ್ದೆ . ಆದರೂ ಅನಿವಾರ್ಯವಾಗಿ ನಾನು ತಿಳಿಸಬೇಕಾಗಿ ಬಂದುದರಿಂದ ಕೆಲವರಿಗೆ ನನ್ನ ಹೆಸರು ಈಗಾಗಲೇ ತಿಳಿದಿದೆ .
      ಕೆಳಗೆ Sl.no ೧೯ ಒಂದು ಸೊಗಸಾದ ಪದ್ಯವಿದೆ ( ಅಮ್ಮನ ಆಶಯದ ಪದ್ಯ ). ಅಲ್ಲಿಂದ ಓದುತ್ತಾ ಬಂದು ನಿಮ್ಮ ಪದ್ಯಕ್ಕೆ ತಲುಪಿದಾಗ ರುಬ್ಬುವ ಶಿವ , ಕೋರೆ ಮಸೆಯುವ ಗಣಪನ ಜತೆಗೆ ಅವನ ಅಮ್ಮ ಗೌರಿಯನ್ನು ಸೇರಿಸಿದೆ . 🙂

     • ಅಯ್ಯೋ, ಪ್ರಮಾದವಾಯಿತು .ಭಾಲಚ೦ದ್ರ ಇರಬೇಕು ಎ೦ದುಕೊ೦ಡೆ..

 15. ಬಿಗಿದ ಬಾಸಿಂಗದೊಡೆ ಸಿಂಗರದೆ, ಸಿರಿವಧುವ
  ಮಿಗೆನಲಿವು, ಸೌಂದರ್ಯದುತ್ಕರ್ಷಮಯ್ ।
  ಬಗೆಯ ಭಾವಾಂತರದೆ ಸಡಗರವು, ದೊರಕಲಿಂ-
  ತೊಗೆತನವು, ಬಾಂಧವ್ಯದಾಸ್ಪರ್ಶಮಯ್ ।।

 16. On the unfortunate passing away of movie actor Soundarya:
  ಮಧುರಕಲೆಯೊಳ್ ನಾಮಿಯಿರ್ದಳಂ ದೈವಸ-
  ನ್ನಿಧಿಗಂದು ನಿರ್ದಯದಿನೊಯ್ಯೆ ಸೆಸ್ನ(Cessna aircraft)|
  ಸುಧೆ-ಗರಲಗಳಭೇದ ತಿಳಿದೊಡಂ ಗೈಯುವುದೆ
  ವಿಧಿಯಂತು ಸೌಂದರ್ಯದುತ್ಕರ್ಷಮೈ||
  (ವಿಮಾನವು ಉತ್=ಮೇಲಕ್ಕೆ, ಕರ್ಷ= ಎಳೆಯುವುದು)

 17. || ಪಂಚಮಾತ್ರಾಚೌಪದಿ,ರೂಪಕಾಲಂಕಾರ ||

  ರಾತ್ರಿಯೊಳ್ ಬಾಂದಳದೆ ಪೊಳೆವಂಥ ಚಿಕ್ಕೆಗಳ್
  ನೇತ್ರಂಗಳಂ ಸೆಳೆವ ವಜ್ರಂಗಳೇ |
  ಗಾತ್ರದೊಳ್ ಕಿರಿದಾದೊಡೇಂ? ನೆರೆದು ಸೃಜಿಸಿರಲ್
  ಜಾತ್ರೆಯಂ, ಸೌಂದರ್ಯದುತ್ಕರ್ಷಮೈ ||

  • ಪೂರ್ವಾರ್ಧದಲ್ಲಿ ಒಂದು ಉಪಮೆ, ಉತ್ತರಾರ್ಧದಲ್ಲಿ ಒಂದು ವಿವೃತಿ – ಇವು ಮಾತ್ರ ನನ್ನ ಗ್ರಹಿಕೆಗೆ ನಿಲುಕಿವೆ. ಹಲವುಬಾರಿ ಓದಿಕೊಂಡರೂ ರೂಪಕವನ್ನು ತಿಳಿಯಲಾಗಲಿಲ್ಲ. ದಯಮಾಡಿ ವಿವರಿಸಿ.

  • ಪ್ರಸಾದರೆ, ಪದ್ಯದ ಪೂರ್ವಾರ್ಧದಲ್ಲಿ ರೂಪಕದ ಬಳಕೆಯಾಗಿಲ್ಲ. ಉಪಮೇಯವನ್ನೂ ಉಪಮಾನವನ್ನೂ ಅಭೇದವಾಗಿ ಕಲ್ಪಿಸಿರುವುದು ರೂಪಕಾಲಂಕಾರವಾಗುವುದರ ಬಗ್ಗೆ ಸಂದೇಹವುಂಟಾಗಿದೆ. ರೂಪಕವನ್ನು ಬಳಸಿ ಕೆಳಗಿನಂತೆ ಸವರಿದ್ದೇನೆ. ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.ನೀಲಕಂಠರೆಂದಂತೆ ಪೂರ್ವಾರ್ಧದಲ್ಲಿ ಉಪಮಾಲಂಕಾರವಿಲ್ಲ.

   ನೇತ್ರಮಂ ಸೆಳೆವ ನಕ್ಷತ್ರವಜ್ರಂಗಳಿಂ
   ರಾತ್ರಿಯೊಳ್ ಬಾಂದಳಂ ರಮ್ಯಮಲ್ತೇ ? |
   ಗಾತ್ರದೊಳ್ ಕಿರಿದಾದೊಡೇಂ ನೆರೆದು ಸೃಜಿಸೆ ತಾಂ
   ಜಾತ್ರೆಯಂ ಸೌಂದರ್ಯದುತ್ಕರ್ಷಮೈ ||

   ಅಂದ ಹಾಗೆ ರೂಪಕಾಲಂಕಾರವನ್ನು ಬಳಸಿ ಹೇಳುವುದಾದರೆ, ಜನವರಿ ಹನ್ನೊಂದರ ಅವಧಾನದಲ್ಲಿ ನಿಮ್ಮ ಮುಖಕಮಲದ ದರ್ಶನವಾಗಿ ಪ್ರಸಾದ ಸಿಗಲಿಲ್ಲವಲ್ಲಾ !

 18. I am not able my songs wrtten by me. please help.

  “ಹೆಸರುಳಿಸು”

  ಮೊದಲಸಲ ನೀನನ್ನ|
  ಅಮ್ಮ! ಎಂದಾಗ ಚಿನ್ನ||
  ಸ್ವರ್ಗ ಭುವಿಗಿಳಿದೆನ್ನ|
  ಅಂಗಳವ ತುಂಬಿತ್ತು||

  ತೊದಲುನುಡಿ ಮೊದಲನುಡಿ|
  ತನುಮನವ ತಣಿಸಿತ್ತು||
  ಮುತ್ತಿನಂತ ನಿನ್ನನುಡಿ|
  ಹೃದಯವನು ಕಲಕಿತ್ತು||

  ಅಂಬೆಗಾಲಿಲಿ ನೀನಿಟ್ಟ|
  ಮೊದಲಹೆಜ್ಜೆಯ ಗೆಜ್ಜೆ||
  ನಾಧಮಾಡುತ ಪ್ರತಿಪುಟ್ಟ|
  ಹೆಜ್ಜೆಕುಣಿಕುಣಿಯುತಿದೆ||

  ಬಾಲಚಂದ್ರನ ತೆರನ|
  ದಿನದಿನಕೆ ನೀಬೆಳೆದು||
  ನಾಡುನುಡಿಮನೆತನದ|
  ಹೆಸರುಳಿಸು ಹರಸುವೆನು||

  ಕೆ. ಎಂಕಟಪ್ಪ ಐತಾಂಡಹಳ್ಳಿ,
  ಪಾಂಡೇಲ್, ಕ್ಯಾಲಿಫ಼ೋರ್ನಿಯ.

  • ಎಂಕಟಪ್ಪನವರಿಗೆ ಪದ್ಯಪಾನಕ್ಕೆ ಸ್ವಾಗತ. ನಿಮ್ಮಲ್ಲಿ ಪದ್ಯರಚನೆಗೆ ಒಲವು ಇದೆ ಎಂಬುದು ಸುಸ್ಪಷ್ಟ. ದಯವಿಟ್ಟು ಈ ಪುಟದ ಆದಿಯಲ್ಲಿರುವ ’ಪದ್ಯವಿದ್ಯೆ’ಗೆ ಭೇಟಿಯಿತ್ತು, ಛಂದಸ್ಸುಗಳ ಪರಿಚಯಪಡೆದುಕೊಳ್ಳಿ. ಆಗ ’Please help’ ಎಂದು ಕೇಳುವ ಪ್ರಮೇಯವೇ ಇರುವುದಿಲ್ಲ. ನಿಮ್ಮೀ ಪದ್ಯಗಳನ್ನು ನೀವೇ ಪುನಾರಚಿಸಬಲ್ಲವರಾಗುವಿರಿ. ನಿಯತವಾಗಿ ದಿನವೊಂದಕ್ಕೆ ಒಂದಷ್ಟು ಸಮಯವನ್ನು ಇದಕ್ಕೆ ಮೀಸಲಿಡಿ.

 19. ಭಾವನೆಯ ತುಂಬಿರ್ಪ ನುಡಿ ನಾದಗಳ್ ದಿಟದೆ
  ಜೀವತಳೆಯುತ್ತೆ ತಾಂ ಸೊಗಮಪ್ಪವೊಲ್
  ಲಾವಣಿಸೆ ವಾಚ್ಯದೊಡೆ ವ್ಯಂಗ್ಯಾರ್ಥ ಕಾವ್ಯದೊಳ್,
  ಸಾವುಂಟೆ? ಸೌಂದರ್ಯದುತ್ಕರ್ಷಮೈ!

  • ನುಡಿ ನಾದಗಳ್ – ಅರಿಸಾಮಾಸ ಅಲ್ಲವೆ?

  • ಕಲ್ಪನೆ-ಶಿಲ್ಪನೆಗಳೆಲ್ಲ ಚೆನ್ನಾಗಿವೆ. ’ವ್ಯಂಗ್ಯಾರ್ಥದ ಕಾವ್ಯದೊಳ್’ ಎಂಬ ಅರ್ಥವನ್ನು ತೊಡೆಯಲು ’ವ್ಯಂಗ್ಯಾರ್ಥ’ ಪದವನ್ನು ಪ್ರತ್ಯಯಯುಕ್ತವನ್ನಾಗಿಸಿದರೆ ೧೦೦% ಶುದ್ಧವಾಗುತ್ತದೆ. ಲಾವಣಿಸೆ ವಾಚ್ಯ-ವಕ್ರಾರ್ಥಗಳ್ ಕಬ್ಬದೊಳ್ ಎಂದು ನನ್ನ ಸವರಣೆ. ತಮ್ಮ ಸುಧಾರಣೆ ಬೇರೆ ಇದ್ದೀತು.

 20. ಕನ್ನಡದೊಳೊಂದು ಯತ್ನ. ಬಹಳದಿನಗಳ ಬಳಿಕ.
  ಶಾ॥
  ನಾಸಾಭೂಷಣಮಾಯ್ತಿದುಂಗುರಮದೋ! ಮೂಗೇರಿತಯ್ ತರ್ಜನಿ !
  ಶ್ವಾಸಂ ಸ್ತಬ್ಧವದಾಯ್ತು ಮಾನಸಜಲಂ ಶಾಂತಂ ಶುಭಂ ನಿರ್ಮಲಮ್ |
  ಲೇಸಂ ಕಂಡನಿಮೇಷನಾದೆನಮಮೀ ದೇವತ್ವಕೇನ್ ಕಾರಣಂ |
  ರಾಸಿಕ್ಯಂ ಗಡ ಹೇತುವೇನಿದಕೆ ಪೇಳ್ ಸೌಂದರ್ಯದುತ್ಕರ್ಷಮಯ್ |

  ಈ ಉಂಗುರವು ಮೂಗುತಿಯಾಗಿದೆ; ಏಕೆಂದರೆ ತೋರ್ಬೆರಳು ಮೂಗಿನ ಮೇಲಿದೆ (ಸೋಜಿಗದಿಂದ).
  ಉಸಿರು ನಿಯಂತ್ರಿತವಾಯ್ತು. ಪ್ರಾಣದ ನಿಯಂತ್ರಣದಿಂದ ಮನಸ್ಸು ಶಾಂತವಾಯ್ತು; ಪ್ರಸನ್ನವಾಯ್ತು.
  ಈ ಚೆಂದವನ್ನು ಕಂಡ ಕಣ್ಣು ಎವೆಯಿಕ್ಕದೆ ನೋಡಿ ದೇವತ್ವವನ್ನು ಪಡೆದೆವು. (ದೇವತೆಗಳು ಅನಿಮೇಷರು).
  ಇವೆಲ್ಲಕ್ಕೂ ಕಾರಣ ರಾಸಿಕ್ಯ. ರಾಸಿಕ್ಯಕ್ಕೂ ಮೂಲ ಸೌಂದರ್ಯದ ಉತ್ಕರ್ಷವೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)