Feb 102015
 

123

  72 Responses to “ಪದ್ಯಸಪ್ತಾಹ ೧೩೭: ಚಿತ್ರಕ್ಕೆ ಪದ್ಯ”

  1. ನರ್ತನಮಲಾ! ಪಸಿರನು-
    ಟ್ಟಾರ್ತತೆಯಿ೦ ವೃಕ್ಷಭೈರವ೦ ಗೈದುದಿದೈ
    ಮರ್ತ್ಯರ ಮಣ್ಣಾಸೆಯ ದು-
    ರ್ವರ್ತನೆಗೆಲೆ ಹೇಸಿ ತಾ೦ ತೊರೆದು ಮೇಣ್ ನೆಲನ೦

    • ದುಷ್ಕರಮಪ್ಪೀ ಪ್ರಾಸದೆ
      ಶುಷ್ಕಮದಾಗದವೊಲೆಂತೊ ವರ್ಣಿಸಿದಿರಿ ನೀಂ
      ವಿಷ್ಕಂಭಂ ದಲ್ ಪ್ರಾಸಚ-
      ತುಷ್ಕದೊಳಿರ್ಕುಂ ತೃತೀಯಪಾದದೆ ನೋಡಿಂ!

      • ಕೊಪ್ಪಲತೋಟರೆ, ಬಲುಸವಿ-
        ಯಪ್ಪೀ ನುಡಿಮುಡಿಗೆ ಸಲ್ವುದೆನ್ನಯ ನಮನ೦
        ತಪ್ಪನಿದೊ ತಿದ್ದುವೆ೦ ನಾ-
        ನೊಪ್ಪಿ ನೆಲದ ಮೋಹಿ ಮರ್ತ್ಯನ೦ ಧೂರ್ತನೆನಲ್

  2. ಮೊಗಸಾಲ್ಗಳ್ ಪಸಿ ಹಾಸಮಂ ಮೆರೆದೊಡಂ ಸೊರ್ಕೇರ್ದುಮೀ ವೃಕ್ಷದೊಳ್
    ಜಗಮಂ ಬಾಚುತುಮಾಗಿರಲ್ ಕರಚಯಂ ದೈತ್ಯಾಭಿಲಾಷಾಯುಧಂ
    ಬಗೆದುಂ ತೋಡಿರೆ ಜೀವನಂ ಸೃಜಿಸದೀ ಶುಷ್ಕಾತ್ಮನಂ, ವೃಕ್ಷನಂ
    ಸೊಗಮೆಂದೇ ಪೊಗಳಾಡುತುಂ ನುತಿಪರೈ ಲಂಕೇಶನಂತಿರ್ಪನಂ

    • ಅತಿ+ಅಧಿಕ=ಅತ್ಯಧಿಕ

    • Also, last foot aadipraasa missing

    • Meaning please…

      • ಈ ಮರವು ರಾಕ್ಷಸನಂತೆ ಕಂಡರೂ ಜನ್ ಇದರ ಕೊಂಡಾಟದಲ್ಲಿ ತೊಡಗಿದ್ದಾರೆ.(ಮೊಗದ ಸಾಲುಗಳು ಸೊಕ್ಕಿನ ನಗೆಯನ್ನು ಬೀರಿವೆ,ಜಗತ್ತನ್ನೇ ಬಾಚುತ್ತಲಿರುವ ಕರಗಳೇ ದೈತ್ಯ ಅಭಿಲಾಷೆಯ ಆಯುಧವಾಗಿದೆ, ಹೃದಯವನ್ನು ಬಗೆದರೂ ಜಲವಿಲ್ಲ(ಶುಷ್ಕಹೃದಯಿ). ಹೀಗೇ ಲಂಕೇಶನಂತಿರುವ ಮರವನ್ನು ಹೊಗಳುತ್ತಿದ್ದಾರೆ)

        • ಪದ್ಯ ಭಾವ ತುಂಬಾ ಚೆನ್ನಾಗಿದೆ ಮೇಡಂ.. ‘ಕಾಣದಿರ್ದೊಡಂ ನೆತ್ತರ್’ — ‘ಕಾಣ್ದರು ನೆತ್ತರುಂ’ ಎಂದು ಬಳಸಬಾರದಲ್ಲವೇ..

          (ಬಗೆಯಲ್ಕಾಣ್ದರು ನೆತ್ತರುಂ)

        • ಕಾ೦ಚನಮೃಗದಾಟದೆ ತಾ೦
          ವ೦ಚಿಸಿದಾ ದೈತ್ಯಗ೦ ಸಲಲ್ ಪೋಲಿಸಿ ನಿ-
          ರ್ವ೦ಚನೆಯಿ೦ ತರುವ೦ ನೀ೦
          ಕಾ೦ಚನನಾಮದೊಳೆ ಕವನಿಸಿದಿರೌ, ನಮನ೦

          ತು೦ಬ ಚೆನ್ನಾಗಿದೆ ಮೇಡಮ್!

    • ಪದ್ಯದ ಭಾವ ಚೆನ್ನಾಗಿದೆ. ಕೆಲುವು ಸವರಣೆ ಹೀಗೆ ಮಾಡಿದರೆ ಚೆನ್ನ.
      ….. ಮೆರೆದೊಡಂ…
      .. ಬಾಚುತುಮಾಗಿರಲ್ ಕರಚಯಂ..
      … ಕಾಣದು ನೆತ್ತರುಂ(ರಾಗಮುಂ?) …ಜಾತ್ಯಂಧರೆಂಬಂತೆವೊಲ್
      ಸೊಗಮೆಂದೇ ಪೊಗಳಿರ್ಪರೈ ಮರನನೀ ಲಂಕೇಶನಂತಿರ್ಪನಂ.

      • ತಮ್ಮಿಬ್ಬರಿಗೂ ಸವರಣೆ ಮತ್ತು ಸಲಹೆಗಳಿಗಾಗಿ ಧನ್ಯವಾದಗಳು. ಈಗ ಪದ್ಯವನ್ನು ತಿದ್ದಿದ್ದೇನೆ.(ಪೂರ್ತಿ ಪದ್ಯವೇ ನಿಮ್ಮದಾಗುವ ಭೀತಿಯಿಂದ ನನ್ನದಾದ ಸವರಣೆಯನ್ನೂ ತಿಳಿದಮಟ್ಟಿಗೆ ಮಾಡಿಕೊಂಡಿದ್ದೇನೆ 🙂 )

  3. ಬಳಿಸಂದರೆ,ಮರುಸಾರ್ದರೆ
    ಖಳರೆಂಬಿನವೋಲ್ ಅಡಂಗಿ ದಿಟ್ಟಿಪ ತರು ತಾ-
    ನುಳಿದುದು ನೆಲದಿಂ ಮೇಗಡೆ
    ತಳಿತಪಸುರಿನಿಂ, ಕುಠಾರಿಘಾತದ ಬೆರ್ಚಿಂ

    ಕುಠಾರಿ – ಕೊಡಲಿ
    ಬೆರ್ಚಿಂ – ಹೆದರಿಕೆಯಿಂದ..
    ಮೇಗಡೆ -ಮೇಲ್ಗಡೆ

    ಮರಕಡಿಯುವವರು ಮತ್ತೆ ಹತ್ತಿರ ಬಂದರೇ? ಎಂಬ ಭಯದಿಂದ, ಸರವಿನಿಂದ ಇಣುಕಿ ನೋಡುತ್ತಿರಬಹುದೇ..

    • ಚೆನ್ನಾಗಿರ್ಪುದು ಪದ್ಯಂ
      ಮುನ್ನಂ ತರುವಂತು ಕಾಣ್ಬುದಕೆ ಕಾರಣಮುಂ!

  4. ಕುಸಿಯುತ್ತಿರ್ಪ ಪದಂಗಳಂ ತಡೆಯುತುಂ ಸಾವಂ ಗಡಾ ದೂಡುತುಂ
    ಕಸು ಸೋತಿರ್ದೊಡೆ ಸೀಳ್ವ ಶಕ್ತಿಯೊಡಲಂ ಕಾಡಿರ್ದ ಸಂಕಷ್ಟದೊಳ್
    ಪಸಿವಂ ನೀಗಿಸೆ ಬೇಡಲೊಲ್ಲದ ಕರಂಗಳ್ ಭೂಮಿಯಂ ಕಚ್ಚೆ ದು –
    ರ್ದೆಸೆಯಂ ಧಿಕ್ಕರಿಸುತ್ತಲೆತ್ತಿ ತಲೆಯಂ ತೋರಿರ್ಪೆಯೈ ಸತ್ವಮಂ ಸತ್ತ್ವಮಂ

    [ಕಾಲ್ಗಳು ಕುಸಿಯುತ್ತಲಿರಲು, ಸಾವನ್ನು ದೂಡುತ್ತಲೆ, ಮೈಯ ಕಸುವು ಸೋಲುತ್ತಲಿರಲು, ಒಡಲನ್ನು ಸೀಳುವ ಶಕ್ತಿ ಕಾಡುತ್ತ ಸಂಕಷ್ಟವನ್ನು ನೀಡಿರಲಾಗಿ,ಹಸಿವನ್ನು ನೀಗಿಸಿಕೊಳ್ಳಲು ಬೇಡಲಾರದೆ ಕೈಗಳಿಂದ ನೆಲವನ್ನು ಕಚ್ಚಿ ಹಿಡಿದು, ದುರ್ದೆಸೆಯನ್ನು ಧಿಕ್ಕರಿಸುತ್ತ ತಲೆಯನೆತ್ತಿ ಹಿಡಿದು ನಿನ್ನ ಸತ್ವವನ್ನು ತೋರುತ್ತಿರುವೆ ]

    • ಸೊಗಸಾಗಿರ್ಪುದು ನಿಮ್ಮ ಪದ್ಯಮಿದು ದಲ್ ಸತ್ತ್ವಾನ್ವಿತಾಲಂಕೃತಂ |

    • ರಾಮ್! ಸೊಗಸಾದ ಪದ್ಯ; ತುಂಬ ಚೆನ್ನಾದ ಭಾವ ಮತ್ತು ಭಣಿತಿ. ಒಂದು ಸಣ್ಣ ಸವರಣೆ: ಸತ್ತ್ವ ಎಂದೇ ಟ್ಂಕಿಸಬೇಕು, ಸತ್ವ ಎಂದಲ್ಲ; ಸತ್ (ತನ್ನ) + ತ್ವ (ತನ) = ಸತ್ತ್ವ ಎಂದು ಸಂಧಿ.

    • ಗಣೇಶರಿಬ್ಬರಿಗೂ ಧನ್ಯವಾದಗಳು. ‘ಸತ್ತ್ವ’ ದಲ್ಲಿ ‘ತ’ ವೊತ್ತು ಬರಬೇಕೆಂದು ತಿಳಿದಿರಲಿಲ್ಲ. ತಿಳಿಸಿಕೊಟ್ಟದ್ದಕ್ಕಾಗಿ ವಿಶೇಷವಾದ ಧನ್ಯವಾದಗಳು.
      ಪದ್ಯವನ್ನು ಮೇಲೆಯೇ ಸರಿಪಡಿಸಿದ್ದೇನೆ. 🙂

  5. NATURE ALWAYS FINDS WAY TO SURVIVE !!

    ಜಾರಿರಲುಂ ಹೋರಾಡಿದು-
    ದೇಂ ರಹದಾರಿಯನು ದಾಂಟಲೆನೆ ತಾಂ ಮರವುಂ !
    ಜೀರುತೆತಾಂ ಜೋಲಾಡಿದು-
    ದೈ ರಸೆ ಹೃದಯಮನೆ ಮೀಂಟುತದೊ ನೇಸರವುಂ ।।

    ರಸೆ = ಭೂಮಿ

    • ಎರಡನೆ ಸಾಲಿನ ಪ್ರಾಸಂ
      ವರಮಾದಾ ಬಿಂದುದೋಷದಿಂದಂ ನಿಂದೀ
      ಸುರುಚಿರಪದ್ಯಕೆ ಕಜ್ಜಲ-
      ದೆರಕಂಬೋಲ್ತಿರ್ಪುದಲ್ತೆ ದಿಟ್ಟಿಯ ಬೊಟ್ಟೇಂ?!

      • ಏಳ್ವಾಗ ಕಂದsಗೆ ಬೀಳ್ವುsದು ಕಣ್ಣೆಂದು
        ಕಾಲ್ವೆರಳ್ಗಿರಿಸಿಯೇ ಚಿಕ್ಕಿ । ಅದರಿಂದೆ
        ಕಾಲ್ತೊಡರಿ ಬಿದ್ದಿತೇ ಮುಕ್ಕಿ ।।

        ಅಂತ ಅಣಕಿಸುತ್ತಿದ್ದೀಯ ಕೊಪ್ಪಲತೋಟ? “ಐ”ಕಾರದ ಮತ್ತೊಂದು ಉಂಗುರವನ್ನೇ ಕೈ ಬೆರಳಿಗೆ ತೊಡಿಸಿಬಿಡುವೆ. ಆಗ ಕಂದ ಎಡವದು, ಅಲ್ಲವೇ ?!

        ಜಾರಿರಲುಂ ಹೋರಾಡಿದು-
        ದೈ ರಹದಾರಿಯನು ದಾಂಟಲೆನೆ ತಾಂ ಮರವುಂ ।
        ಜೀರುತೆತಾಂ ಜೋಲಾಡಿದು-
        ದೈ ರಸೆ ಹೃದಯಮನೆ ಮೀಂಟುತದೊ ನೇಸರವುಂ ।।

  6. ವೇಲೆಯೆ ಕಾಣದ ತೆರದೆ ವಿ-
    ಶಾಲತೆ ಸಂದಿರ್ಪ ವೃಕ್ಷದೆಳ್ತರಕಳವೇ!
    ಕಾಲನ ಲೀಲೆಯಿದೇನೋ
    ಮೂಲದೆ ಶೈಥಿಲ್ಯಮಿರ್ಪ ವಿಕಟತೆ ಚಿತ್ರಂ!!
    (ವೇಲೆ(ಕೊನೆ/ಗಡಿ)ಯೇ ಕಾಣದಂತಿರುವ ವಿಶಾಲತೆಯನ್ನು ಸಂದಿರುವ ವೃಕ್ಷದ ಎತ್ತರಕ್ಕೆ ಅಳತೆಯುಂಟೇ! ಕಾಲನ ಲೀಲೆಯೋ ಏನೋ.. ಮೂಲದಲ್ಲಿ ಶೈಥಿಲ್ಯವಿರುವ ವಿಕಟತೆ ಆಶ್ಚರ್ಯಕರ!!)

    • ಪದ್ಯಫಣಿತಿಯ ಪದ್ಧತಿ ಸೊಗಸಾಗಿದೆ.

      • ರಾಗಮಹಾಶಯರೆ, ನಮನ-
        ಮೀಗಳ್ ಮಿಗೆ ಸಲ್ವುದೆನ್ನ ಸ೦ದೆಗದ ಮನ೦
        ಬೇಗದೆ ತಾನೊಪ್ಪದು ಮೇಣ್
        ಸಾಗಿರೆ ಕೀಲಿಬೆರಳಾಟ, ಭಣಿತಿ ಫಣಿತಿಯೈ

        ನಾನೆ ತಪ್ಪಾಗಿ ತಿಳಿದುಕೊ೦ಡಿದ್ದರೆ ಕ್ಷಮಿಸಿ.. 🙂

      • ರಾಗಮಹಾಶಯರೆ೦ದೊಡೆ
        ನಾಗಮಹಾಶಯರನು೦ ನೆನೆದುದೆನ್ನ ಮನ೦
        ಯೋಗದೊಳಮೀ ಜಗತಿಯಿ೦-
        ದಾಗಳೆ ನಿಜಮನದ ಬೇರ ಬೇರ್ಪಡಿಸಿಹರೈ

        … ಈ ಮರದ೦ತೆ 🙂

      • ಧನ್ಯವಾದಗಳು ಸರ್

        • ಹೃದಯರಾಮರೇ! ಫಣಿತಿ ಮತ್ತು ಭಣಿತಿ ಎಂಬೆರಡು ಶಬ್ದರೂಪಗಳೂ ಇವೆ; ಅವುಗಳ ಅರ್ಥ ಮಾತ್ರ ಒಂದೇ, ಉಕ್ತಿ ಎಂದು.

  7. ಎಲ್ಲ ಸಹಪದ್ಯಪಾನಿಗಳ ಕಲ್ಪನೆ-ಕವನಗಳನ್ನು ಗಮನಿಸುತ್ತಿದ್ದಂತೆಯೇ ನನ್ನ ಕಲ್ಪನೆಗಳು ಕರಗಿ ಜಾರುತ್ತಿರುವ ಹಾಗಿದೆ! ಆದರೂ ಹೇಗೋ ಹವಣಿಸಿದ ಪದ್ಯವಿದು:

    ಕಂದಕಂಗಳನದೆಂತೊ ಕೂಡಿಸ-
    ಲ್ಕೆಂದು ಸಾಲವರ! ಮೂಲಜಾಲಸಂ-
    ಸ್ಪಂದಶಕ್ತಿಯನೆ ಮೀಸಲಿಟ್ಟೆಯೇಂ?
    ಅಂದರೆಂದುಮಿದರೊಳ್ ನರರ್ ವಲಂ||

    (ಅಂತರಗಳನ್ನು ತಗ್ಗಿಸುವ, ಮನಸ್ಸುಗಳನ್ನು ಬೆಸೆಯುವ ಮಹತ್ಕಾರ್ಯದಲ್ಲಿ ತೊಡಗಿರುವಂತೆ ಈ ಮರವು ತನ್ನ ಬೇರುಗಳನ್ನೇ ಇದಕ್ಕೆ ಮೀಸಲಿಟ್ಟು ಧನ್ಯವಾಗಿದೆ. ಆದರೆ ಮಾನವರು ಮಾತ್ರ ಇಂಥ ಸತ್ಕಾರ್ಯದಲ್ಲಿ ತೊಡಗರೆಂಬುದು ಇದರ ಭಾವ)

    ಲಂಘಿಸುವಂದದೆ ತೋರ್ಕುಂ
    ಜಂಘಾಲಂ ಶಾಖಿಶೇಖರಂ ಪಾವನಿವೊಲ್|
    ಸಾಂಘಿಕಮೂಲಸ್ಥಾವರ-
    ಜಾಂಘಿಕಜಾಂಗಮಿಕಭಾವಮೇನೊಪ್ಪುಗುಮೋ!

    ಇದೊಂದು ಕೇವಲ ಶಬ್ದಕೋಲಾಹಲಪದ್ಯ. ದುಷ್ಕರಪ್ರಾಸವೇ ಇಲ್ಲಿ ಮಿಗಿಲಾದ ಸವಾಲು. (ಈ ಮರವು ಕಡಲನ್ನು ಹಾರಿದ ಹನೂಮಂತನಂತೆ (ಪಾವನಿ; ಪವನನ ಮಗ) ನೆಗೆಯುವ ಕೌಶಲವುಳ್ಳದ್ದಾಗಿ (ಜಂಘಾಲ) ತೋರಿದೆ. ಇದರ ಬೇರುಗಳ ಮೊತ್ತದ (ಸಾಂಘಿಕ) ಸ್ಥಾವರತೆಯು ಹೀಗೆ ಓಟವನ್ನೇ ಬದುಕನ್ನಾಗಿ ಉಳ್ಳ (ಜಾಂಘಿಕ) ಜಂಗಮಶೀಲತೆಯಾಗಿ ತೋರುವ ಪರಿ ಬಲು ಸೊಗಸಾಗಿದೆ)

    • ನನಗೆ ಎರಡನೆಯ ಪದ್ಯವೂ ಬಹಳ ಚೆನ್ನಾಗಿದೆಯೆನಿಸಿತು. ಸ್ಥಾವರ ಜಂಗಮಗಳ ದೃಷ್ಠಿಯಿಲ್ಲಿ ಸಾರ್ಥಕ ಹಾಗೂ ಸಾಧುವಾಗಿದೆ.

    • ಸ್ಥಾವರಕಳಿವು೦ಟೈ ಮೇ-
      ಣಾವ ಪರಿಯೊಳು೦ ಪರಾ೦ಬರಿಸೆ ಜ೦ಗಮಕಿ-
      ಲ್ಲೈ, ವಚನಬೋಧೆಯಿದರಿ೦
      ಭಾವಿಸಿ ಕಿತ್ತುದಡಿಯ೦ ತರುವು ತಾವಿ೦ದ೦

    • ಎರಡುಂ ಸೊಗಸಾಗಿರ್ಕುಂ
      ಸರಳತೆಯಿಂದೆಸೆವ ಭಾವಮುಂ ಪ್ರಾಸದೆ ದು-
      ಷ್ಕರಮಾಗಿರ್ಪುದುಮೆಂದೊಡೆ
      ಸರಾಗಮೆಲ್ಲಮುಮವಲ್ತೆ ರಾಗರ್ಗೇಗಳ್!

      • ಕವಿತೆಯನ್ನು ಮೆಚ್ಚಿಕೊಂಡ ನೀಲಕಂಠ-ರಾಮಚಂದ್ರ-ಗಣೇಶರಿಗೆ ವಂದನೆ:-)

    • ಶಬ್ದ-ಅರ್ಥಾದಿ ಕೋಲಾಹಲಗಳೇನಿದ್ದೇನು, ನನಗೆ ನುಸುಳಲು (ಮೇಘಘೋಷವನ್ನು ಗೈಯಲು) ಅವಕಾಶವಿಲ್ಲದ ಮೇಲೆ!
      ಶಬ್ದಚ್ಚಲಮರ್ಥಚ್ಚಲಮೇನಿದ್ದೊಡಮೇನೈ
      ಅಬ್ದಪ್ರತಿಘೋಷಂ ನಿಜಗೈಯಲ್ ಸಮಯಂ(opportunity) नै|
      (Some rhythm struck me and I penned this. Does this conform to any vRtta?)

      • ಇದಕ್ಕೆ ಶ್ರೀ ಗಣೇಶರಿಂದ ಮಿಂಚೆಯಲ್ಲಿ ನನಗೆ ಸಂದ ಸಮಾಧಾನ: … your comment is really nice and evokes intended rasa. The couplet is essentially set in a regular metrical rhythm and it is termed as ಸಂತುಲಿತದ್ರುತಾವರ್ತಗತಿ by the great scholar Sri SeDiyaapu.
        {I am flattered. ಓಙ್ಕಾರದ ಶಙ್ಖನಾದಕಿಂತ ಕಿಞ್ಚಿದೂನ (ಅಷ್ಟೆ!)- ದ. ರಾ. ಬೇಂದ್ರೆ}

  8. ಬಸಿರಂ ತೆತ್ತುಂ ಜತನದೊ
    ಳೊಸಗೆಯೊಳೇ ಕಾಯ್ದ ಭುವಿಯನೀ ಸತ್ ವೃಕ್ಷಂ
    ಪಸರಿಸಿದ ತೋಳ್ಗಳಿಂದಂ
    ಕುಸಿದ ಘಟಿಯೊಳಪ್ಪಿ ಕಾಪಿಡುವ ಪರಿ ರಮ್ಯಂ!

    (ಸಲಹಿದ ತಾಯಿಯು ಕುಸಿಯುತ್ತಿರುವ ಸಮಯದಲ್ಲಿ ಬಾಹುಗಳಿಂದ ಅಪ್ಪಿ ರಕ್ಷಿಸುತ್ತಿರುವ ಪರಿ ಇದೇನು?)

    • ಕಂದಪದ್ಯದಲ್ಲಿ ಕೆಲವೊಂದು ವ್ಯಾಕರಣಪರಿಷ್ಕಾರ ಬೇಕಿದೆ. ಅಲ್ಲದೆ ಎರಡನೆಯ ಸಾಲಿನ ಲಘುಬಾಹುಳ್ಯದ ಕಾರಣ ಗಣವಿಭಾಗದಲ್ಲಿ ಗತಿಸೌಂದರ್ಯವು ಕೊರೆಯಾಗಿದೆ.
      ಮುಖತಃ ಇವುಗಳನ್ನು ವಿವರಿಸುವೆ.

  9. ಮರವಾಗಿs ಹುಟ್ಟುತ್ತೆs ಮರವಾಗೇ ಬೆಳೆದಿರ್ಕೆs
    ಮರವಾಗೇ ಉಳಿಯೋ ಮಹನೀಯs – ಕುದುರೆsಯs
    ತೆರನಾದs ನೆಗೆತs ನಿನಗಲ್ಲs

    ಕುಕ್ಕsರsಗಾಲಲ್ಲಿs ಪಕ್ಕsನೆs ಕುಂತsರೆs
    ನಕ್ಕಾರುs ಜನರುs ನಿನ ಕಂಡುs – ವನದಾಗೆs
    ತಕ್ಕsನಲ್ಲೆಂದುs ಜರೆದಾರುs

    ಡೊಂಕಾದs ನೆಲದಲ್ಲಿs ಬಿಂಕsದೆs ಕುಣಿವಾಗs
    ಸಂಕsಟsವೊರೆಯೆs ಹಿರಿಯsರುs – ನೆಪವೆಂದುs
    ಕೊಂಕಿsನs ಕುಹsಕs ನುಡಿವsರುs

    • ಮನುಷ್ಯರಂತಲ್ಲದೆ, ವೃಕ್ಷವು ಬುಡದಲ್ಲಿ ಕೊಚ್ಚೆಯನ್ನುಂಡು ಮೇಲ್ಗಡೆಯಲ್ಲಿ ತನಿವಣ್ಣುಗಳನ್ನು ಈಯುತ್ತದೆ ಎಂಬ ಪದ್ಯವೊಂದಿದೆ ಮಾಸ್ತಿಯವರದು. ಈ ಮರವು ಅದಕ್ಕೆ ಅಪವಾದ ಎಂದು ಬರೆಯುವವನಿದ್ದೆ. ಈಗ ನೀವು ಅದನ್ನೆ ವಾಚ್ಯವಾಗಿಸಿಬಿಟ್ಟಿರಿ ಎರಡನೆಯ ಪದ್ಯದಲ್ಲಿ! ಈ ಪದ್ಯದ ಏಳನೆಯ ಶಬ್ದದಲ್ಲಿನ ಅಕ್ಷರಗಳನ್ನಂತೂ ಬಹಳ ವಿವೇಕದಿಂದ ಆಯ್ದುಕೊಂಡಂತಿದೆ 🙂

      • ಇನಿತು ಚೆಲ್ವೆನಿಸಿರ್ಪ; ಮೇಣ್ ಚಮತ್ಕೃತಿಯಿರ್ಪ
        ಮನನೀಯಕವಿತೆಯಂ ರಾಮಚಂದ್ರಂ|
        ಧ್ವನಿಮಾರ್ಗದಿಂದೊರೆಯೆ ನೀವೇ ಸ್ವಯಂ ವಾಚ್ಯ-
        ಕನುವಾದಿರಯ್ಯಯ್ಯೊ ಹಾದಿರಂಪ!

        • haha
          ವನದೊಽಳಗಲ್ಲಽದೆ ಸನಿಹಽದೆ ಪುರದೊಽಳು
          ಗುನುಗುಽತೆ ಪಾಡಽ ಕುಂತಽರೆ| ಕುಕ್ಕಽರು
          ಕನಲಽರೆ, ನಗರೆಽ ಪೌರಽರು||

    • ತಪ್ಪದೆ ಬಂದಿರ್ಕುಮಪ್ಪಟ ಶೈಲಿಯು
      ಯೊಪ್ಪುವರೆಲ್ಲ ರಸಿಕರು|ನಿಮ್ಮಯ
      ಕುಪ್ಪಳಿಸಿರ್ಪ ತ್ರಿಪದಿಯಿಂ||
      (ಮರವಾಗೆ ಉಳಿಯೋ ಮಹನೀಯ! ಕುಕ್ಕರಗಾಲಲ್ಲಿ… ಎರಡೂ ಸೂಪರ್!!)

  10. ಸನಾತನವೃಕ್ಷದ ಉಳಿವಿಗೆ ಅಧ್ಯಾತ್ಮಜ್ಞಾನವೆಂಬ ತಾಯ್ವೇರು ಬೇಕೇ. ಆ ಮೂಲತತ್ತ್ವವನ್ನು (ಷೋಡಶ)ಸಂಸ್ಕಾರ-ವೃತ್ತಿ-ಕಾವ್ಯಗಳ ಪರಿವೇಶಮೂಲಗಳಲ್ಲಿ (peripheral roots) ದಾಸ್ತಾನುಮಾಡಿಟ್ಟರೆ, ಒಂದೊಮ್ಮೆ ತಾಯ್‍ಬೇರಿಗೆ ತುಸು ಸಂಚಕಾರವುಂಟಾದರೂ, ವೃಕ್ಷವು ಇನ್ನು ಅಷ್ಟುಕಾಲ ಉಳಿದುಕೊಳ್ಳುತ್ತದೆ. ಅಷ್ಟರಲ್ಲಿ ’ಸಂಭವಾಮಿ ಯುಗೇಯುಗೇ’ ಎಂಬಂತೆ ಒಬ್ಬ ಮಹಾಪುರುಷನ ಉದಯವಾಗಿ ಪುನರುತ್ಥಾನಕಾರ್ಯವಾಗುತ್ತದೆ.

    ಅಧ್ಯಾತ್ಮಮಲ್ತೆ ತಾಯ್ವೇರ್ ಸನಾತನವೃಕ್ಷಕದ ನಿಹಿತಗೈದರಿಂತೆಮ್ಮ ಪೂರ್ವರ್|
    ಸಂಸ್ಕಾರ-ವೆವಸಾಯ-ಕಾವ್ಯಂಗಳೆಂಬುವುಪಮೂಲದೊಳಗೇನೆಂಬೆನವರ ಮತಿಯಂ!
    ಮೂಲತತ್ತ್ವಕಮತ್ಯಯವದೊಮ್ಮೆಯೊದಗಿದೊಡಮುಳಿಯುವುದುಮಿನ್ನಿನಿತು ವೃಕ್ಷಮೆಂತೋ|
    ಪೋಷಕದ್ರವ್ಯಮದು ಮಿತಮಾದೊಡಂ ಕುಟುಕುಜೀವಮಂ ತರುವು ಪಿಡಿದಿರಿಸಿಕೊಳ್ಳಲ್|
    ಸಂಭವಿಪೆನುಮಾನು ಯುಗಯುಗಂಗಳೊಳಗೆಂ-
    ದಾಗಳಾಗ ಬರ್ಪ ಪುರುಷನೊರ್ವಂ|
    ಶಿಥಿಲಗೊಂಡ ಜೀವಿತಮನಾಗ ಮಗುಳೆ ತಾಂ
    ನಿಲ್ಲಿಪನಲೆ ಜೀವದುಂಬುತದಕಂ||

    • ಗಂಭೀರವೇದಾಂತಗರ್ಭಿತಂ ಸೀಸಪ-
      ದ್ಯಂ ಭಾವುಕಾರಾಧ್ಯಮಲ್ತೆ ಬಗೆಯಲ್|
      ಶುಂಭಚ್ಚಮತ್ಕಾರಚಂಚುರಮೆನಿಕ್ಕುಂ ಕ-
      ರಂಭದಂತಾರ್ಷೇಯಗಂಧಗಾಢಂ||

  11. ಪಡುವಲ ಮೂಡಲ ಸಾರವ
    ಪಡೆದುಂ ನಳನಳಿಸೆ ನಾಗರಿಕತೆಯ ತರುವುಂ ।
    ಕಡೆಗುಳಿದುದುವದೊ ಕಂದಕ-
    ವಡಿಯೊಳ್ ತಳಮಳಿಸೆ ಮೂಲಮೆ ಕಳೆದಿರುವಿರವಿಂ ।।

    (ಜಾಗತೀಕರಣದ ಪರಿಣಾಮದ ಬದುಕಿನ ಚಿತ್ರಣ)

    • Aha!

      • ಧನ್ಯವಾದಗಳು ಪ್ರಸಾದ್ ಸರ್,
        ನಿಮ್ಮ ಪ್ರತಿಕ್ರಿಯೆ ಆಹ್ಲಾದ ತಂದಿದೆ !!

    • ಆಟವೆಲದಿ|| ತಂದಿರುವುದೆ (ಆ)ಹ್ಲಾದಮೆನ್ನ ಪ್ರತಿಕ್ರಿಯೆಯು
      ವಂದಿಸುವೆನು ಮಾತ್ರಮಿನಿತ ಪೇಳಿ|
      ಚಂದದ್Ahaಮನ್ನು ನೀಡಿಹೆನು ಕೇವಲಂ
      ಹೊಂದಿಸಿದಿರಿ ’laada’ಮೆಂತದಕ್ಕಂ?

  12. ವ್ಯಾಪಿಸಿ ಭೂಮಿಯ ಭಾಗವನಿಂದುಂ
    ಭೂಪನವೊಲ್ ದಿಟ ಸಂದೊಡೆ ಮತ್ತಂ
    ನೀಂ ಪುಲು ಗಹ್ವರ ಕಾವಲಿಗಾದಯ್
    ಗೋಪಿತ ಸಂಪದ ನಿನ್ನದೆ?ಪೇಳಯ್

  13. ಕುಸಿಯಲೆಳಸೆ ಭೂಮಿ ಬೇರ
    ಕಸುವನೊಗೆದು ತಡೆಯುತುಂ
    ಎಸೆವಪಂದಿಗೊಸಗೆಯೀಯ
    ಲೆಸೆದುದೇಂ ಕರಂಗಳಂ?

    • Carnivorous tree!
      ಪೀರಲಾರದಡಿಯಿನನ್ನ
      ಬೀರಿತೇನು ಕರಮನು|
      ಗೋರಿಕೊಂಡು ತಿನಲು ಮೇವ (ಮೇಯುತ್ತಿರುವ)
      ಸಾರಯುಕ್ತ ಹಂದಿಯಂ (ಎಸೆವ ಪಂದಿ)|| 🙂

  14. ತಳುಕಿಸಲಬ್ಬೆಬೇರ ಮರೆತೊರ್ಮೆಯು ಕಾಣದಿಳಾಂತರಂಗದೊಳ್
    ಕಳರಿತೆ ವೃಕ್ಷಚಿತ್ತಮದು ಕಾಣದುಪಾಯವು ನೋಡಲಂಘ್ರಿಯಂ
    ಬಳಸುತ ತೋಡಲುರ್ವರೆಯ ಕಂಡುದು ಜಾಳದನೀಳ ತಂತು ಭೂ-
    ತಳದೊಳಗಂ ದಿಗಂಬರನ ಮಾಳ್ಕೆಯೊಳಿರ್ಪುದು ವೃದ್ಧನೆಂಬಿನಂ

    ಸಸಿ ಹುಟ್ಟುತ್ತಲೇ, ಗಿಡದಿಂದ ತಾಯಿ ಬೇರು ಮರೆಯಾಗುತ್ತಾ ಹೋಗುತ್ತದೆ, ಗಿಡವು ಮರವಾದರೂ ತಾಯಿ ಬೇರು ಮಾತ್ರ ಅದರಿಂದ ಅಗೋಚರ..

    ವೃಕ್ಷವೊಂದು ತನ್ನ ತಾಯಿ ಬೇರನ್ನು ಕಾಣುವ ಸಲುವಾಗಿ,
    ಮನಕದಡಿ, ನೆಲವನ್ನು ಅಗೆದು ಕೊನೆಯಲ್ಲಿ ದಿಗಂಬರನಂತೆ ನಿಂತುಕೊಂಡಿತು.

    ತಳುಕಿಸು – ಸಿಕ್ಕಿಸು
    ಅಬ್ಬೆ ಬೇರು – ತಾಯಿ ಬೇರು
    ಕಳರು – ಕದಡು
    ಉರ್ವರೆ -ಭೂಮಿ
    ಭೂತಳದೊಳ್ + ಅಗಂ

  15. ಭೂರಾಶಿ ನಿನ್ನ ತೊರೆಯಲ್ ಧೃಡಚಿತ್ತ ತಾಳ್ದಯ್
    ಆರಾದರಿಂದು ಸಖಿಯೇ ನಿನಗಾತ್ಮನಿಷ್ಠರ್?
    ಬೇರಾದೊಡಂ ಬೆಳಗಿ ಬಾಳ್ದರಪೆಂಡಿರೇ? ಮೇಣ್
    ಕಾರುಣ್ಯವಂಚಿತೆಳೆ ಪಾಂಡವರಾಣಿಯೇನೌ?

    ಅರಪೆಂಡಿರು=ರಾಮನ ಪತ್ನಿ
    ಪಾಂಡವರಾಣಿ=ದ್ರೌಪದಿ

  16. Is the tree smart enough? Instead of lazing by perching its arms on a cozy chair, it has just to slide downward a bit and settle on earth. It will regain its lease of life soon thereafter!
    ಬುದ್ಧಿಯುಂಟೆನುವೆಯೇನು ವೃಕ್ಷಕಂ
    (tied)ನದ್ಧಗೊಂಡಿರಲದೇಕೊ ಪಾರ್ಶ್ವದೊಳ್|
    (laziness)ಮಿದ್ಧಮಂ ತೊರೆದು ಕೂರೆ ಭೂಮಿಯೊಳ್
    ವೃದ್ಧಿಯುಂಗೊಳದೆ ಜೀವದುಂಬುತುಂ||

  17. ತೂರಿ ಹೀರುತೆ ಕಸುವ, ಹಿಸಿದು ತಣಿಸುತೆ ಪಸೆಯ
    ಬೇರೆಯಾಗುತೆ ಬೇರೆ ಬಗೆದ ಬಗೆಯೊಳ್
    ಸೇರ ಹೊರಟಿರೆ ನೆಲೆಯ, ಹೊಸೆದು ಗಳಿಸುತೆ ಪಸಿರ
    ತೋರಿಕೊಂಡುದೆ ಮರವೆ ಬಳಸಿ ಮರವಂ ।।

    ಅರ್ಥವಿಲ್ಲಿ(ಲ್ಲ) – ಸ್ವಾರ್ಥ(ವೆ)ವಿಲ್ಲ …. !!

  18. ಬಾಡಿದ ಕಾಂಡದೆ ಮೂಡಲು ಪಸುರದು
    ದೂಡಿದೆ ಜೀವ ಭಯವನು -ಜಗದೊಳು
    ಪಾಡಿದೆ ಮನಸ ಬಲವನು||

  19. || ಮದಿರಾವೃತ್ತ ||

    ಪಚ್ಚೆಯ ರೆಂಕೆಗಳಂತೆ ಸುಶೋಭಿಪ ರೆಂಬೆಗಳಿರ್ದೊಡಮಂದದ ವೃಕ್ಷಂ,
    ನಿಚ್ಚಮುಮಾಗಸದೊಳ್ ವಿಹರಿಪ್ಪ ಖಗಂಗಳ ಪೋಲುತೆ ಪಾರ್ವುದಸಾಧ್ಯಂ |
    ತುಚ್ಚರ ದಾಳಿಗೆ ಸಿಲ್ಕುತೆ ನೊಂದಿರೆ,ಮೂಲದ ಭಾಗದೆ ಪೊರ್ದದೆ ಮಣ್ಣಂ,
    ಬೆಚ್ಚುತೆ ,ರಕ್ಷಿಸಲಾರಿಹರೆಂದಳಲುತ್ತಿರೆ ದೈನ್ಯದೆ, ದಾರುಣದೃಶ್ಯಂ ||

    • ಮಚ್ಚಿಮಲೆ ಶಂಕರನಾರಾಯಣರಾಯರು ತಮ್ಮ ’ಮಂಗಗಳ ಉಪವಾಸ’ ಚತುರ್ಮಾತ್ರಾಕವಿತೆಯಲ್ಲಿ ವಿಶೇಷವಾಗಿ ಭಗಣಗಳನ್ನೇ ಬಳಸಿದ್ದಾರೆ (ಜಗಿದೂ ಜಗಿದೂ ನುಂಗಿದವೆಲ್ಲ, ಆಗಲೆ ಮುಗಿಯಿತು ಉಪವಾಸ ಎಂಬ ಸಾಲನ್ನು ಹೊರತುಪಡಿಸಿ). ಕೊನೆಯ ಊನಗಣದ ಬದಲು ಈ ವೃತ್ತದಲ್ಲಿ ಎರಡು ಗುರುಗಳಿವೆ. ಇದನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.
      ಭಗಣಯುಕ್ತ ಚತುರ್ಮಾತ್ರಾಪದ್ಯಾರ್ಧದಲ್ಲಿ ಮೊದಲನೆಯ ಗಣದ ಗುರ್ವಕ್ಷರವನ್ನು ಲಘುಗಳಾಗಿ ಒಡೆದರೆ ಅದು “ಹಂಸಗತಿ ಎಂಬ ಸತಾನವರ್ಗದ ವರ್ಣವೃತ್ತ. ತೆಲುಗರು ಇದನ್ನು ಕವಿರಾಜವಿರಾಜಿತ ಎಂದೂ ಕರೆಯುತ್ತಾರೆ” ಎಂದು ಶ್ರೀ ಗಣೇಶರು http://padyapaana.com/?p=1317 ರಲ್ಲಿ ಹೇಳಿದ್ದಾರೆ.

      • ಧನ್ಯವಾದಗಳು ಪ್ರಸಾದರೆ. ನನಗೆ ತಿಳಿದಿರುವ ವೃತ್ತಗಳಲ್ಲಿ, ಮದಿರಾ,ಹಂಸಗತಿ,ವನಮಂಜರೀ ಹಾಗೂ ಜಗದ್ವಂದಿತವೃತ್ತಗಳು ಅವುಗಳ ನಡುವಿನ ಹೋಲಿಕೆಯಿಂದಾಗಿ, ಒಡಹುಟ್ಟಿದವರಂತಿವೆ:-)

  20. ಪುರವೆಂಬ ಬಂಧನದಿ ಭೂದೇವಕಿಯು ಮತ್ತೆ
    ಹೆರಲುಹಸಿರನ್ನದುವು ಸಾಲದಾಯ್ತೇ?
    ಹೊರಲು ವಸುದೇವಗಿರಿ ಭುಜಬೆಂಬಲವನೀಡೆ-
    ತಿರೆಯ ಕಂಸರದೃಷ್ಟಿ ತಪ್ಪಬಹುದೇ?

    – ನಗರ ಎಂಬ ಕಾರಾಗೃಹದಲ್ಲಿ ಭೂಮಿ ಎಂಬ ದೇವಕಿಯು ಮತ್ತೆ ಮತ್ತೆ ಹಸಿರನ್ನು ಹೆರುವುದು ಸಾಲದಾಯ್ತೇ? ಬೆಟ್ಟಗಳು ಎಂಬ ವಸುದೇವರು ಅವನ್ನು(ಮರಗಳನ್ನು) ಮೇಲಕ್ಕೆತ್ತಿ(ನಗರದಿಂದ ದೂರಕ್ಕೆ) ಸಲಹಿದರೂ ಭೂಮಿಯಲ್ಲಿನ ಜನರ ಕಂಸದೃಷ್ಟಿಯಿಂದ ತಪ್ಪಿಸಬಹುದೇ?

  21. ಅರರೇ ಮಹಾ ತರುವೆನಿ
    ನ್ನಿರುವಂಪ್ರಷ್ಣಿಸುತೆ, ಭೂಮಿಯಂ ಪೊಡೆಯುತ್ತೀ|
    ಸ್ಥಿರತೆಯ ನಿಲುವಂ ದೋರುತೆ
    ಮೆರೆದಪೆಯೈ ಚಿತ್ತದಾಳದೊಳ್ ಬೇರಿಡುತುಂ|

    ತಡವಾಗಿ ಬಂದು ಈ ಸಡಿಲವಾದ ಪದ್ಯವನ್ನು ನೀಡಿದ್ದಕ್ಕಾಗಿ ಕ್ಷಮೆಯಿರಲಿ..

  22. ಹಣ್ಣನು ಕೊಯ್ಯಲು ಚಿಣ್ಣರು ಬಂದಾರು
    ಬಣ್ಣಿಪ ಮಾತನುಲಿದಾರು-ಎಂಬುವ
    ಸಣ್ಣನ ಸುಖವು ಇಂದಿಲ್ಲ||

    • ಮರದ ಮನದೊಳಗೆ ಆವಾಹನೆಗೊಳ್ಳದೆ ಈ ಆಲೋಚನೆ ಬರುವುದಿಲ್ಲ. ಚೆನ್ನಾಗಿದೆ.

  23. ಮನುಷ್ಯ ಕಷ್ಟದಲ್ಲಿದ್ದಾಗ ನೇಲವೇ ಕುಸುದಿದೆ ಎನ್ನುವುದನ್ನು ಕುರಿತು ಈ ವೃಕ್ಷದ ಸ್ವಗತ

    ನೆಲಮೇ ಕುಸಿದವೊಲೆಂಬಂ
    ಚಲಿಸಲ್ ತಾಂ ಶಕ್ಯನಿರ್ದುಮಕಟಾ ಎನ್ನೊಳ್
    ತುಲನಂ ಗೆಯ್ದೊಡಮಾಸೆಯಿ-
    ನುಲಿದಪನೇಂ ಬಾಳ್ವೆನೆನುತೆಯೆಂಬುದೆ ವೃಕ್ಷಂ

    ಆಸೆ – hope

  24. ಹೊತ್ತಿsರಲರಗsನು ಮೆತ್ತಿರ್ದುದರಮsನೆ,
    ಯೆತ್ತಾರುಮಂದಿsಯನಂತುs
    ಹೊತ್ತೋಡ್ದ ಭೀಮನೊಲ್ ಕಿತ್ತೋಡುತಿರ್ಕುsದೆ
    ಚಿತ್ತಾರದಾಮsರವಿಂತುs ।।

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)