Mar 082015
 

ಮಾರುದ್ದಮಾಗಿರೆ ಮೊಗಂ ಸತಿಯಾ ಮನೋಜ್ಞಂ

  46 Responses to “ಪದ್ಯಸಪ್ತಾಹ ೧೪೧: ಸಮಸ್ಯಾಪೂರಣ”

  1. (cascade)ಜಾರುತ್ತೆ ಜಾನುವರೆಗಂ ಜೆಡೆಯಿರ್ದಿರಲ್ ದಲ್
    ನೀರೆ ಪ್ರಮೋದಿಪಳೆ ತಾಂ ಬಿಡಿಪೂವಿನಿಂದಂ|
    ನೌರಾಗಿ ತಾಂ ಮುಡಿದಿಹಾ ಕನಕಾಂಬರಂ ತಾಂ
    ಮಾರುದ್ದಮಾಗಿರೆ, ಮೊಗಂ ಸತಿಯಾ ಮನೋಜ್ಞಂ||

  2. ಮಾರುದ್ದಮಾಗಿರೆ ಮೊಗಂ ಸತಿಯಾ ಮನೋಜ್ಞಂ
    ಯಾರೆಂದರಿಂತುಮೆನುತೆಂಬೆಯೊ? ಕಬ್ಬಿಗಂ ಕೇಳ್|
    “ನಾರೀಮುಖಂ ನಗುತಲಿರ್ದೊಡಮುಂ ಸುಖಂ ಮೇಣ್
    ತೌರಿಂಗೆ ಪೋಗುವಮುದಲ್ (bloat)ಶ್ವಿತಗೊಂಡೊಡಾಗಳ್||”

  3. ದೂರಿಂದ, ಗೇಹದೊಳು ಬಂದೊಡನೊರ್ಮೆಗೇ ತಾಂ
    ಸಾರುತ್ತಲೇ ಮಲರತೋಂಟಕೆ ಸಲ್ಲೆ ,ಕಂಡುಂ
    ತಾರುಣ್ಯಕಾಂತಿಯಿನೆ ಮಲ್ಲೆಯವಲ್ಲಿಯೊಂದುಂ
    ಮಾರುದ್ದಮಾಗಿರೆ,ಮೊಗಂ ಸತಿಯಾ ಮನೋಜ್ಞಂ

  4. ಜೀರುತ್ತಲೇ ನೊಗಕೆ ಮಂಗಳಸೂತ್ರಮನ್ನುಂ
    ನೇರಂ ಗೃಹಾಂತರಕೆ ಪತ್ನಿಯನೊಯ್ಯುತಾಗಳ್
    ತೋರಲ್ ನಗಂಗಳನುಮೆಲ್ಲಮನಿಟ್ಟಿಹಾ ಅಲ್ (ಇಟ್ಟಿಹ ಆ ಅಲ್ಮಾರ್ ಉದ್ದಮಾಗಿರೆ)
    ಮಾರುದ್ದಮಾಗಿರೆ ಮೊಗಂ ಸತಿಯಾ ಮನೋಜ್ಞಂ||

  5. ತೌರೂರಿಗಂ ಪೊರಟು ವಂಡಿಯನೇರಿಯೆನ್ನಂ
    ಪೇರೊಲ್ಮೆಯಿಂ ಕಿಟಕಿಯಿಂ ಬಿಡದೀಕ್ಷಿಸುತ್ತುಂ |
    ಬೀರಲ್ಕೆ ಚೆಲ್ವನಗೆಯಂ, ವರಕಂಬುಕಂಠಂ
    ಮಾರುದ್ದಮಾಗಿರೆ, ಮೊಗಂ ಸತಿಯಾ ಮನೋಜ್ಞಂ||

  6. ಭಾರೀ ರಿಯಾಯಿತಿಯ ಸೇಲಿದು ಮೇಣಮೋಘ೦
    ಮಾರೀಚನಾ ಮೃಗದವೊಲ್ ಮನಸೂರೆಗೊಳ್ಳಲ್
    ನೀರ೦ತೆ ಚೆಲ್ಲಿ ಹಣಮ೦ ಪಡೆದಾ ರಿಟೇಲ್ ಬಿಲ್
    ಮಾರುದ್ದಮಾಗಿರೆ, ಮೊಗ೦ ಸತಿಯಾ ಮನೋಜ್ಞ೦

    • Would you prefer that the woman appear elongate?
      Wouldn’t it be fair for an innoxious bill to be long?
      Set right the order of your likes in marital matters
      And ye shall live to be a hundred ‘n twenty now on||

      Lots of ಶಿ.ದ್ವಿ. as usual. Nearest possible phonetic transliteration conforming to vasantatilaka:
      ವುಡ್ಯು ಪ್ರಿಫರ್ ದೆ ದ ವುಮsನಪಿಯರ್ ಎಲಾಂಗೇಟ್?
      ವುಣ್ಟಿಟ್ಬಿ ಫೇರ್ ಫರೆನ್ ಇನಾಕ್ಶಿಯಸ್ (harmless) ಬಿಲ್ ಟು ಬೀ ಲಾಂಗ್?
      ಸೆಟ್ ರೈಟ್ ದಿ ಆರ್ಡರ್ ಅಫ್ ಯ’ ಲೈಕ್ಸ್ ಇನ್ ಮೆರೈಟಲ್ ಮ್ಯಾಟರ್ಸ್
      ಅಂಡ್ ಯೆ ಶ(ಲ್) ಲಿವ್ ಟು ಬಿ ಎ ಹsಣ್ಡ್ರಡೆಣ್ಟ್ವೆಣ್ಟಿ ನೌ ಆನ್||

  7. ಸಾರಿರ್ದು ನೂತನವಧೂವರರಂ,ಸುಹಾಸಂ-
    ವೀರುತ್ತೆ,ತೊಟ್ಟೊಡವೆಯಂ,ಜರತಾರಿಯುಟ್ಟೆ- |
    ನ್ನಾರಾಧ್ಯೆ ಕೋರೆ ಶುಭಮಂ, ಸೆರಗುಳ್ಳ ಭಾಗಂ
    ಮಾರುದ್ದಮಾಗಿರೆ ,ಮೊಗಂ ಸತಿಯಾ ಮನೋಜ್ಞಂ ||

    • ಆರಾಧ್ಯೆಯುಂ ನವವಧೂಗಳುಮೀರ್ವರುಂ ತಾಂ
      ಸೇರಲ್ ವಿವಾಹದೊಳುಮಾರದೊ ಮುಂದೆ ಎಂದೋ|
      ಮಾರುದ್ದಪಲ್ಲುವಿನ ಸೀರೆಯ ಮತ್ತೆ ನೋಡಲ್
      ಪೋರಳ್, ಹಿರೀಕಳ ಮೊಗಂ ಗಡ ಬಹ್ವವಜ್ಞಂ||

      • ಆರಾಧ್ಯೆಯಿರ್ದು ಪತಿಗಂ ಬಹುಮಾನ್ಯೆಯೆಂದುಂ,
        ತೋರಂ ಸೆರಂಗಿಗೊಲವಂ, ಸತಿಯಲ್ತೆ ಮುಖ್ಯಳ್?
        ಪೋರಳ್ಗೆ ಸೀರೆಯೊಳೆ ಮೋಹಮಿರುತ್ತೆ ಗಾಢಂ,
        ಸಾರುತ್ತೆ ದಿಟ್ಟಿಸಲದಂ, ಮೊಗಮೆಂತು ಗಣ್ಯಂ?

        • fine

          • ಧನ್ಯವಾದಗಳು, ಪ್ರಸಾದರೆ. 🙂

        • ಯಾರ್ಯಾರ್ಗೆ ಯಾವ್ದ್ಯಾವ್ದು ಗಣ್ಯವೆನ್ನುಸ್ತೈತೊ
          ಧೈರ್ಯದಿಂದದನೇಯ ನೋಡ್ಲಾ-|
          ಚಾರ್ಯsರು ಸತಿಯನ್ನೆ ಕಣ್ತುಂಬ ನೋಡ್ಲಿ ಕೌ
          ಮಾರ್ಯೆಯು ನೋಡ್ತಿರ್ಲಿ ಸೆರಗ||

  8. ನೂರಾರು ಕನ್ನಡಿಗಳಂಗಡಿಯೊಳ್ ಪೊಗುತ್ತುಂ
    ತೋರುತ್ತಿಲಿರ್ಪುದುವಿಕಾರಮನೊಂದರೊಳ್ ಮುಂ
    ಬಾರೆಂದು ಗಂಡನವಳಿಂಗದ ನೋಡೆನಲ್ ಹಾ!
    ಮಾರುದ್ದಮಾಗಿರೆ ಮೊಗಂ ಸತಿಯಾ ಮನೋಜ್ಞ೦

  9. ಪ್ರಸಾದು (ಅಲ್ಮಾರ್ ಉದ್ದಮಾಗಿರೆ), ಪೆಜತ್ತಾಯ, ಕಾಂಚನಾ, ನೀಲಕಂಠ, ಶಕುಂತಲಾ, ಚೀದೀ! ನಿಮ್ಮೆಲ್ಲರ ಪೂರಣಗಳೂ ಸೊಗಸಾಗಿವೆ. ಪ್ರಸಾದರ ಪದ್ಯಗಳಲ್ಲಿ ಸ್ವಲ್ಪ ಹಳಗನ್ನಡವ್ಯಾಕರಣದ ಸವರಣೆ ಬೇಕು. ಆದರೂ ವಸಂತತಿಲಕವನ್ನು ಸೊಗಸಾಗಿ ನಿರ್ವಹಿಸಿ ದುಷ್ಕರಸಮಸ್ಯೆಗೆ ಸುಬೋಧಪೂರಣಗಳನ್ನು ನೀಡಿದ ನಿಮಗೆಲ್ಲ ಅಭಿನಂದನೆ.

  10. ಬೇರಾರುಮಿಲ್ಲಮೆನುತುಂ ತವೆ ಮೆಚ್ಚಿಗೊಂಬಂ
    ನೀರಾಗಿಪೋಪ ಚಣದಾರ್ಧದೊಳಾಕೆಗಂ ತಾ
    ಮೂರುದ್ದಮಾಗಿರಲಹಾ!ಯೆನಲೊಪ್ಪನೇ? ಮೇ-
    ಣ್ಮಾರುದ್ದಮಾಗಿರೆ ! ಮೊಗಂ ಸತಿಯಾ ಮನೋಜ್ಞಂ (ಆತಗಂ)

    (ಊರುದ್ದವಾದಗಲೇ ಆಹಾ! ಎಂದೊಪ್ಪಿಕೊಳ್ಳುವವನು,ಕೇವಲ ಮಾರುದ್ದಮಾದಗ ಒಪ್ಪನೇನು?:ಹೇಗಿದ್ದರೂ ಸತಿಯ ಮೊಗವೇ ಆತಂಗೆ ಸುಂದರ)

  11. ಅರ್ಜುನನು ಲಕ್ಷ್ಯಭೇದ ಮಾಡುವಾಗ ದ್ರೌಪದಿಯ ಮುಖಭಾವ…

    ಬೀರುತ್ತೆ ದೃಷ್ಟಿಯನೆ ಲಕ್ಷ್ಯದ ತೈಲಬಿ೦ಬ೦
    ತೋರಲ್ ಶರಾಗ್ರದೊಳೆ ಮೇಣೆನೆ, ಛದ್ಮಬ್ರಾಹ್ಮ೦
    ನಾರಾಚಮ೦ ತೊಡಲು, ಹಿಗ್ಗಿದ ಬಿಲ್ಲ ಪಾತ್ರ೦
    ಮಾರುದ್ದಮಾಗಿರೆ, ಮೊಗ೦ ಸತಿಯಾ ಮನೋಜ್ಞ೦

    • ಛದ್ಮಬ್ರಾಹ್ಮಂ – ಇಲ್ಲಿ ಶಿ.ದ್ವಿ. ಸಾಧುವೆ?
      ಪಾತ್ರಂ~ಸೂತ್ರಂ.

      • ಪ್ರಸಾದು, ನೀವೆಂದಂತೆ ಶಿ.ದ್ವಿ ಗೆ ಇಲ್ಲಿ ಎಡೆಯಿಲ್ಲ. ’ಬಿಲ್ಲ ಗಾತ್ರ’ ಎಂದು ಸವರಿಸಿದರೆ ಮತ್ತೂ ಒಳಿತೇನೋ..

        • ಛದ್ಮವಿಪ್ರ೦ ಎ೦ದು ತಿದ್ದಿಕೊಳ್ಳಿ. ಧನ್ಯವಾದಗಳು. ಈ ಶಿ. ದ್ವಿ. ಏಕೋ ನನ್ನ ಮನಸ್ಸಿನಿ೦ದ ಸರಿಯುತ್ತಿಲ್ಲ 🙂

  12. ತಾರುಣ್ಯ ವರ್ಧಿಸೆನೆ ಕಾಣ್ ರತಿಯಂತೆಯೋಲ್ ತಾಂ
    ತೋರಲ್ಕೆ ಭಾಮಿನಿ ಗಡಾ ತುಟಿಗೆಂಪ ಸಾಲಂ-
    ಕಾರಾರ್ಥದಿಂ ಸುಳಿದಿರಲ್, ಬಳಿಗಿಂತೆ ದೂರಂ
    ಮಾರುದ್ದಮಾಗಿರೆ, ಮೊಗ೦ ಸತಿಯಾ ಮನೋಜ್ಞ೦ ।।

    (ಮೇಕಪ್ ಮಾಡಿಕೊಂಡ ಹೆಂಡತಿ ಹತ್ತಿರಕ್ಕಿಂತ, ಮಾರುದ್ದದೂರದಿಂದ ಚಂದ ಕಂಡಳೇ ?!)

  13. ಮಾರುತ್ತತಾಕಲಿವೆನೆಂದೆಳೆಬಾಲನಿಂದಂ
    ಮಾರುದ್ದಪೂವ ಪಡೆದುಂ ದಿನ ಮೋಸಗೊಂಡುಂ
    ಬೇರೋರ್ವಳಿಂ,ಕುಪಿಸಿ, ಕೊಂಡಿರೆ, ಸಂದ ಪೂವೊಳ್,
    ಮಾರು,(ಉ)ದ್ದಮಾಗಿರೆ ಮೊಗಂ ಸತಿಯಾ ಮನೋಜ್ಞಂ

  14. ಸೌರೂಪ್ಯಸಾರಕರಮಾಗಿರೆ ಕುಂಕುಮಂ ಮೇಣ್
    ತಾರಾಪ್ರಭಾಲಸಿತಮಾಗಿರೆ ಮೂಗ ನತ್ತು |
    ದ್ವೈರೇಫ್ಯದಿಂದಿರೆ ಕುರುಳ್, ಮಿಗೆ ಕರ್ಣಪೂರಂ
    ಮಾರುದ್ದಮಾಗಿರೆ, ಮೊಗಂ ಸತಿಯಾ ಮನೋಜ್ಞಂ ||
    ದ್ವೈರೇಫ್ಯ = ದ್ವಿರೇಫ(ದುಂಬಿ)ದ ಭಾವ.

    • I should have added this to my appreciation of your verse in Sl. No. 5: …..ed, even by you. 😀
      Well, it is thus in the comparative sense only. In absolute terms your this verse is fine too 😉

  15. ಆರಂಬದೊಳ್ ಫಲಿಸಿರಲ್ ಬಹುವಲ್ಲಿಸಸ್ಯಂ
    ಸ್ವಾರಸ್ಯ ದಂಪತಿಗದುಂ ಬಗೆಯಾರಹಸ್ಯಂ
    ತೋರಿರ್ದುದಾ ಲತೆಯೊಳಾಗ ಪಟೋಳ ಕಾಯ್ಗಳ್
    ಮಾರುದ್ದಮಾಗಿರೆ, ಮೊಗ೦ ಸತಿಯಾ ಮನೋಜ್ಞ೦ ।।

    (ದಂಪತಿಗಳು ಅಕರಾಸ್ಥೆಯಿಂದ ಸಲಹಿದ್ದ ಹಿತ್ತಲಲ್ಲಿ, ಮಾರುದ್ದದ ಪಡವಲಕಾಯಿ ಕಂಡು ಹಿಗ್ಗಿತ್ತು ಸತಿಯ ಮೊಗ !!)

  16. ಮಗಳ ಮದುವೆಗೆ ಅರೆಮನಸ್ಸಿನಿ೦ದ ದಕ್ಷನು ಒಪ್ಪಿದಾಗ….

    ಈರೇಳು ಲೋಕದೊಳೆ ತಾ೦ ತಿರಿವ೦, ವಿರೂಪ೦,
    ಬೈರಾಗಿಯೆ೦ದು ಮನದರ್ಧದಿ ಲಗ್ನಕೊಪ್ಪಲ್
    ತೋರುತ್ತೆ ತನ್ನ ಮುಳಿಸ೦ ಮಿಗೆ, ದಕ್ಷನಾಸ್ಯ೦
    ಮಾರುದ್ದಮಾಗಿರೆ, ಮೊಗ೦ ಸತಿಯಾ ಮನೋಜ್ಞ೦

    • ಕೆಟ್ಟಿರ್ಪುದೆಂಬರಿದೊ ಕಾಲಮನಪ್ರಬುದ್ಧರ್
      (ಇಗೋ ಇಂದು) ಉಟ್ಟಿರ್ಪ ಬಟ್ಟೆಯೊಳೆ ನಲ್ಲನ ಸಾರ್ವಳಿಂಗಿಂ (elope)|
      ಗಿಟ್ಟಲ್ ಶಿವಂ, ತವರನಿಂತುಪಹಾಸ ಗೈದಾ
      (ಅಪರ್ಣೆ) ದಿಟ್ಟಳ್ ಗಡೆಂತು ಮಿಗೆ ಮೇಲ್ ಗರಲಯ್ಯ ಪೇಳೈ||

  17. ಚೀರುತ್ತೆ ದುಃಖಿಸಿರೆ ತೊಟ್ಟಿಲ ಪುತ್ರರತ್ನಂ,
    ಬಾರೆಂದು ಮಾತೆಯೊಲವಿಂ ಮೊಲೆವಾಲನೀಯಲ್,|
    ಪೀರುತ್ತೆ,ಲೀಲೆಗಳ ತೋರುತೆ,ಸಂದು ಕಾಲಂ,
    ಮಾರುದ್ದಮಾ(ನಾ)ಗಿರೆ,ಮೊಗಂ ಸತಿಯಾ ಮನೋಜ್ಞಂ||

  18. ಗೌರೀಮನೋಹರಿಯಿರಲ್ ಸೊಗಸಾದ ರಾಗಂ,
    ಸಾರಸ್ವತೋನ್ನತವರಂ ,ರಸಭಾವಪೂರ್ಣಂ |
    ಪಾರಂಗತಂ ಸ್ವರವ ಕಲ್ಪಿಸಿ ಪಾಡುವಾಗಳ್,
    ಮಾರುದ್ದಮಾಗಿರೆ,ಮೊಗಂ ಸತಿಯಾ ಮನೋಜ್ಞಂ ||

  19. ಸಾರಂಗಿಗಿರ್ದು ಮಧುರೋತ್ತಮವಾದ್ಯನಾದಂ,
    ಸೇರುತ್ತೆ ರಂಜಿಪುದು ಕರ್ಣವ,ಲೀಲೆಯಿಂದಂ|
    ಬಾ ರಂಗನೆಂದು ನುಡಿಸಲ್ ಶ್ರುತಿತಾಲbaddhan,
    ಮಾರುದ್ದಮಾಗಿರೆ, ಮೊಗಂ ಸತಿಯಾ ಮನೋಜ್ಞಂ||

  20. ತೋರಿರ್ದವಳ್ ತೊನೆಯುತಂದು ಗೇಣುದ್ದಕೂದಲ್
    ಸೈರಿಕ್ಕುತುಂ ಬಗೆಯೊಳಂತು, ವಿವಾಹಕಾಲಂ
    ಚೌರೀಯೊಡಂ ನುಸುಳಿಸಿಂ ಹೆಣೆದಿರ್ಕ ಕೇಶಂ
    ಮಾರುದ್ದಮಾಗಿರೆ, ಮೊಗ೦ ಸತಿಯಾ ಮನೋಜ್ಞ೦ ।।

    (ಹರಡಿದ ಗೇಣುದ್ದಕೂದಲ ಸುಂದರಿ, ಮದುವೆಯ ವೇಳೆ (ಕಷ್ಟಪಟ್ಟು) ಹಾಕಿದ ಮಾರುದ್ದ ಚೌರಿಜಡೆಯಲ್ಲಿ ಮತ್ತೂ ಸೊಗಸಾಗಿ ಕಂಡಳೇ ?!)

  21. ನೂರಾರು ಪದ್ಯಗಳ ನಾನಿರುಳೆಲ್ಲ ಕಟ್ಟಲ್
    ದೂರುತ್ತೆ ಗಂಡನನಿದೇಂ ಚಟಮೆಂದುಮೇಗಳ್|
    When once a samasyApUraNa proves to be a tough nut to crack…
    ಭಾರೀ ಸಮಸ್ಯೆಯ ತೊಡಂಕಿನಿನೆನ್ನ ವಕ್ತ್ರಂ
    ಮಾರುದ್ದಮಾಗಿರೆ, ಮೊಗ೦ ಸತಿಯಾ ಮನೋಜ್ಞ೦(teasingly)||

  22. Her son studies at a distant boarding school, and visits hometown just once or twice a year during vacations. On one such occasion, she holds her son by his arms and lifts her head high up to look fondly into the eyes of her growing son…
    ದೂರಾಧಿವಾಸಗುರುಸಂಘದಿನಿಂದೆ ಸಾಲೊಳ್
    ಪೋರಂ ವಿರಾಮದೊಳಗೊರ್ಮೆ ಬರಲ್ ಗೃಹಕ್ಕಂ|
    ತಾರುಣ್ಯಕೈದಿ ಜವದಿಂ ತನಗಿಂತಲಾತಂ
    ಮಾರುದ್ದಮಾಗಿರೆ, ಮೊಗ೦ ಸತಿಯಾ ಮನೋಜ್ಞ೦||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)