Mar 162015
 

“ಸತ್ಪಾತ್ರರಂ ಕಾಣೆನಯ್” ಎನ್ನುವ ಪಾದಾಂತ್ಯವನ್ನು ಬಳಸಿ ಪದ್ಯಪೂರಣ ಮಾಡಿರಿ

  94 Responses to “ಪದ್ಯಸಪ್ತಾಹ ೧೪೨: ಪದ್ಯಪೂರಣ”

  1. Namaskara,
    I used my credit card (American Express) innocently and paid $299.00 for membership.
    If accounted please remove /refund. I appreciate your hrlp.
    Secondly: Do you accept already composed songs. If so how do I copy & Past it.
    Dhanyavadagalu,

    K. venkatappa Ithandahalli
    Palmdale, CA. USA
    661-965-8341
    Kris_v32@msn.com

    • Sorry, we did not get what you meant – paid for membership? where did you pay? we do not have any fee for membership here.

      And for your second question, we do not accept any poems other than those related to topics.

    • Dear Venkatappa,
      Your predicament has driven me to pen a verse. Please take it in right spirit.
      ದುಗ್ಧ್ಯರ್ (milched) ನಾವಲೆ (online) ವ್ಯಾವಹಾರದೊಳಗಾದಂತೊಲ್ ಕವೀಶರ್ಗೆ. ವೈ-
      ದಗ್ಧ್ಯಂ ಪದ್ಯದೆ ಲುಪ್ತಿಯುಂ ಬರಿದೆ ಟಂಕಾಭಾಸದಿಂ ಮಾತ್ರದಿಂ|
      ಸ್ನೈಗ್ಧ್ಯರ್ (ಜಾರಿಕೊಳ್ಳುವವರು) ತುಂಬಿಹರೆಲ್ಲಿಯುಂ ಪಿರಿಯುವರ್, ವೈದೇಶ್ಯದೊಳ್-ದೇಶದೊಳ್
      ಮೌಗ್ಧ್ಯಕ್ಕಂ ಗಡ ಶುಲ್ಕಮಿಷ್ಟೆ ಬರಿದೇ, ಒಂದ್ಕಮ್ಮಿ ಮುನ್ನೂರಕಿಂ| 🙂

  2. ಛಂದೋಲಂಕೃತಿಯುಕ್ತಕಾವ್ಯರಚನಾವಿದ್ಯಾವಿಧಾನೋತ್ಸವ-
    ಸ್ಪಂದಕ್ಕಂ ಮನಮೊಲ್ದು ಬರ್ಪ ಸಖರಂ ಸತ್ಪಾತ್ರರಂ ಕಾಣೆನಯ್|
    ನೊಂದೆಂ ನಾನೆನುತುಂ ನಿವೇದಿಸೆ ಮದೀಯಕ್ಲೇಶಮಂ ಕೃಷ್ಣನೊಳ್
    ಸಂದಾಯಂ ಸೊಗಸಾದುದೀಗಳಮಿತಂ ದಲ್ ಪದ್ಯಪಾನರ್ಧಿಯಿಂ||

    (ಪದ್ಯಪಾನ+ಋದ್ಧಿ = ಪದ್ಯಪಾನರ್ಧಿ ಅರ್ಥಾತ್ ಪದ್ಯಪಾನದ ಬೆಳೆವಳಿಗೆ)

    ವರವಿಪ್ರತ್ವದ ಕಾಂಕ್ಷೆಯಿಂದೆ ಮುನಿಯಾದಂ ಕೌಶಿಕಂ ಸ್ವೀಯನಿ-
    ರ್ಭರಗಂಭೀರತಪೋವ್ರತಪ್ರತತಿಯಿಂ; ಸತ್ಪಾತ್ರರಾರಿಪರಯ್|
    ಧರಣೀದೇವರೆನಿಪ್ಪ ಮಂತ್ರಮನನಶ್ರೀಗೆಂದು ತಾಮ್ ಚಿಂತಿಸಲ್
    ಸ್ಫುರಿಸಿರ್ಕುಂ ಗಡ ಜಾತಮಾತ್ರಜನಕಂ ಗಾಯತ್ರಿಯೆಂಬರ್ತಮೇ||

    (ವಿಶ್ವಾಮಿತ್ರನು ತಾನು ಬ್ರಾಹ್ಮಣನಾಗಬೇಕೆಂದು ತಪಿಸಿ ಗಾಯತ್ರಿಯನ್ನು ಸಾಧಿಸಿದ ಬಳಿಕ ಈ ಮಹಾಮಂತ್ರಕ್ಕೆ ಯಾರು ತಕ್ಕ ಅಧಿಕಾರಿಗಳೆಂದು ಆಲೋಚಿಸುವಾಗ ಹುಟ್ಟಿದ ಪ್ರತಿಯೊಬ್ಬ ಮನುಜನಿಗೂ ಪಾತ್ರತೆಯುಂಟೆಂಬ ಋತವು ಸ್ಫುರಿಸಿತೆಂಬ ಭಾವ ಇಲ್ಲಿದೆ. ಇದು ಮಹನೀಯರಾದ ಶ್ರೀ ದೇವುಡು ನರಸಿಂಹಶಾಸ್ತ್ರಿಗಳ “ಮಹಾಬ್ರಾಹ್ಮಣ” ಕಾದಂಬರಿಯ ದರ್ಶನವೆಂದೂ ಭಾವಿಸಬಹುದು.)

    • ಸಣ್ಣ ತಿದ್ದುಪಡಿ. ನನ್ನ ಎರಡನೆಯ ಪದ್ಯದ ಎರಡನೆಯ ಪಾದದಲ್ಲಿ “ಸತ್ಪಾತ್ರರಂ ಕಾಣೆನಯ್” ಎಂದೂ ಮೂರನೆಯ ಸಾಲಿನಲ್ಲಿ “ತಾಂ” ಎಂದೂ ಮಾರ್ಪಡಬೇಕು.

    • ಕೃಷ್ಣ೦ ತಾನೊಲಿದಿತ್ತುದೀ ಕವನದಭ್ಯಾಸ೦ ಪ್ರವೃದ್ಧಿ೦ಗೊಳಲ್
      ವೃಷ್ಣೀಶ೦ಗೆಲೆ ಮೇಣಿದರ್ಪಿತಮೆನಲ್ ಯಜ್ಞಾರ್ಥದಿ೦ ಗೈದುದೈ
      ಕೃಷ್ಣಪ್ರೀತಿಯೊಳೀ ಫಲ೦ ದೊರೆವುದಾರ್ಗ೦ ಪೇಳೆನಲ್ ಸತ್ಕವೀ೦-
      ದ್ರೋಷ್ಣೀಷ೦ಗೆನೆ ರಾಗರಾಗದಿದಕ೦, ಸತ್ಪಾತ್ರರ೦ ಕಾಣೆನೈ!

  3. ಒಳಿತಂ ಗೈವೊಡೆ ಸಾಧುಸಜ್ಜನರುಗಳ್ ಪಾತ್ರತ್ವಮಂ ನೋಳ್ಪರೇಂ?
    “ಇಳೆಯೊಳ್ ಜೀವಿಪಜೀವರೊಳ್ ದಿಟದೆ ನಾಂ ಸತ್ಪಾತ್ರರಂ ಕಾಣೆನೈ,”
    ಕಳೆವೆಂ ಬಾಳ್ವೆಯ ಬಾನೊಳೆಂದು ಬಗೆದಾ ಮೇಘಂ ಸದಾ ಇರ್ದೊಡೆಂ
    ತುಳಿಗುಂ ಧಾರಿಣಿ ಭೂಮಭೂಷಣತೆಯಿಂ ಕಣ್ಗಾವಿನೊಳ್ ಸೂರ್ಯನಾ?

    • ಪದ್ಯದ ಭಾವ-ಬಂಧಗಳೆರಡೂ ಚೆನ್ನಾಗಿವೆ. ಒಂದು ಸಣ್ಣ ಪರಿಷ್ಕಾರ ಬೇಕಿದೆ:
      ……………………………………………………………….
      ……………………………………………………………….
      ಕಳೆವೆಂ ಬಾನೊಳೆ ಬಾಳ್ವೆಯೆಂದು(ಕಾಲಮೆಂದು) ಬಗೆದಾ ಮೇಘಂ….
      ……………………………………………………………….

      • ಧನ್ಯವಾದಗಳು , ಪದ್ಯವನ್ನು ಸರಿಪಡಿಸಿಕೊಂಡಿದ್ದೇನೆ.

  4. ಗ೦ಗೆಯ ತೀರದಲ್ಲಿ ನಿ೦ತು ತಮ್ಮ ತಪಃಫಲವನ್ನೀಯಲು ಸತ್ಪಾತ್ರರಾದ ಸಾಧಕರು ಇನ್ನೂ ಬರಲಿಲ್ಲವಲ್ಲ ಎ೦ದು ಮರುಗುತ್ತಿರುವ ಶ್ರೀರಾಮಕೃಷ್ಣರು….

    ಹರಮೂರ್ಧಾ೦ಗನಿವಾಸವಾರಿಯನೆ ಮೇಣ್ ಪೊತ್ತಿರ್ಪಳೈ ಗ೦ಗೆ ತಾ೦
    ಮೊರೆದಿರ್ಪಳ್ ದೊರೆಕೊಳ್ಳದಬ್ಧಿಯನೆ ಕೇಳ್, ನಿ೦ತಿರ್ಪನಾ ತೀರದೊಳ್
    ಮರುಗುತ್ತು೦ ಪರತತ್ತ್ವಪಾನಕೆಲೆ ನಾ೦ ಸತ್ಪಾತ್ರರ೦ ಕಾಣೆನಯ್
    ಸರಿದಿರ್ಕು೦ ದಿನಮೊ೦ದು ಜೀವಿತದಿನೈ, ಹಾಯೆ೦ದು ಮತ್ತಾರ್ಚಕ೦

  5. ಗ೦ಗೆಯ ಅಳಲು…

    ಜನಿಸಿರ್ಪೆ೦ ಹರಿಪಾದಧೂಳಿಯಿನೆ ನಾ೦, ಪ೦ಕೇಜಜಾತ೦ ಸ್ವಭಾ-
    ಜನದೊಳ್ ಬ೦ಧಿಸಲಾದೆ ರಾಜಸಿಕಳಾ೦, ಫಾಲಾಕ್ಷನಾ ಧೂರ್ಜಟಾ-
    ಘನಕಾ೦ತಾರದಿ ಬಟ್ಟೆಗೆಟ್ಟೆನದರಿ೦ದ೦ ಭೂಮಿಯೊಳ್ ರಾಜನೀ
    ಪೆಣನೊಟ್ಟಿರ್ಪ ಮಹೋಗ್ರದೇಶಕೆಳೆದ೦, ಸತ್ಪಾತ್ರರ೦ ಕಾಣೆನೈ! 🙁

  6. ಮೋಹಿನಿಯ ಕೈಯಲ್ಲಿದ್ದ ಅಮೃತದ ಕಳವಳ…

    ಹರಕ೦ಠಾಶ್ರಯಪೂತಮಾದುದು ಮಹೋಗ್ರ೦ ತಾನೆ ಹಾಲಾಹಲ೦,
    ಹರಿ ಕಾಪಟ್ಯದೊಳೆನ್ನನು೦ ಪಿಡಿದಿಹ೦, ದುರ್ವ೦ಚಕ೦ ತಾನೆನಲ್,
    ಸುರಕ೦ಠ೦ ಕೊಳೆಯಾಗಿರಲ್ ಸುರೆಯೊಳೇವೇಳ್ವೆ೦ ಗಡೀ ರಕ್ಕಸರ್
    ಧರಣೀಕ್ಷೋಭಣತತ್ಪರರ್, ಸೊದೆಯಿನೇ೦, ಸತ್ಪಾತ್ರರ೦ ಕಾಣೆನೈ!

    • ಪ್ರಿಯ ನೀಲಕಂಠರೇ! ನಿಮ್ಮ ಮೂರೂ ಪದ್ಯಗಳ ಕಲ್ಪನೆ ಮತ್ತು ಶಿಲ್ಪನೆಗಳು ಚೆನ್ನಾಗಿವೆ. ಅಭಿನಂದನೆಗಳು. ಆದರೆ ನಿಂತಿಹಂ (ನಿಂತಿರ್ಪಂ) ಪಿಡಿದಿಹಂ (ಪಿಡಿದಿರ್ಪಂ) ಎಂಬಂಥ ನಡುಗನ್ನಡದ ರೂಪಗಳು ಹಳಗನ್ನಡದ ಹದಕ್ಕೆ ಸ್ವಲ್ಪ ಧಕ್ಕೆ ತಂದಿವೆ. ಇದು ನಮ್ಮ ಅನೇಕಸಹಪದ್ಯಪಾನಿಗಳ ಸಮಸ್ಯೆಯೂ ಹೌದು:-) 🙁

      • ಮೆಚ್ಚುಗೆಗೆ ಹಾಗು ತಿದ್ದುಗೆಗೆ ತು೦ಬ ಧನ್ಯವಾದಗಳು, ಸರ್!

  7. ಘನಕಾಂತಾರದೊಳಿರ್ಪ ಯೋಗಿಗಳ ಬಲ್-ಜನ್ನಕ್ಕೆ ಬನ್ನಂ ಬರಲ್
    ಮುನಿಗಳ್ ಚಿಂತಿಸಲೊರ್ವನಿಂತು ನುಡಿದಂ ಸತ್ಪಾತ್ರರಂ ಕಾಣೆನೈ
    ಎನೆ ತಾಂ ಬಲ್ಲೆನಿನಾನ್ವಯಂ ದಶರಥಂಗಿರ್ಪಂ ಸುತಂ ರಾಮನಾ
    ತನ ಬೀರಕ್ಕಿದಿರಾರೆನುತ್ತೆ ಸಲೆ ವಿಶ್ವಾಮಿತ್ರನೇ ಪೇಳ್ದಪಂ||

    • ಸೊಗಸಾದತ್ತು ಗಭಸ್ತಿಮಾಲಿಕುಲದೊಳ್ ಪುಟ್ಟಿರ್ಪನ ಪ್ರೀಣನಂ

      • ಧನ್ಯವಾದಂಗಳಿಂ ವಂದಿಪೆಂ ಪದ್ಯಕಾಂ
        ಮಾನ್ಯರೇ ನೀವೆ ಮೆಚ್ಚಲ್ಕದೇ ತೋಷಕಂ
        (ವನ್ಯಮಾಗಿರ್ಪಿಭಕ್ರೀಡೆಗಂ ಪೇಳ್ದುದೀ
        ವಿನ್ಯಸದ್ಸ್ರಗ್ವಿಣೀವೃತ್ತಮೇಂ ಯೋಗ್ಯಮೇ!)

  8. ಪ೦. ಭೀಮಸೇನ ಜೋಶಿ ಅವರಿಗಿ೦ತ ಬೇರೆ ಸತ್ಪಾತ್ರರು ರಾಗರಸಕ್ಕೆ ಸಿಗುತ್ತಿಲ್ಲ…

    ಶರವೇಗಕ್ಕಳವಲ್ಲೆನಲ್ ಸರಸದಿ೦ದಾಕಾಶಮ೦ ಸಾರುತು೦
    ಸ್ವರಹ೦ಸ೦ ವಿಹರಿಪ್ಪುದೆ೦ಬ ತೆರದಿಂ, ಮೇಘಾಳಿ ಕಾರ್ಗಾಲದೊಳ್
    ಬರೆ ನಿರ್ಘೋಷಮದುರ್ಕುವ೦ದಮಿರಲು೦ ಕ೦ಠೀರವ ಧ್ವಾನದಾ
    ವರಕ೦ಠ೦ಬುಗೆ ಭೀಮಸೇನರ ವಿನಾ ಸತ್ಪಾತ್ರರ೦ ಕಾಣೆನೈ!

    • ಎಲ್ಲ ಚೆನ್ನಾಗಿದೆ. ಆದರೆ ” ………………..ವಿಹರಿಪ್ಪುದೆಂಬ ತೆರದಿಂ……” ಎಂದು ಸವರಿಸಿದರೆ ಹಳಗನ್ನಡದ ಹದ ಮತ್ತೂ ಮಿಂಚೀತು.

    • ಇದು ನೀಲಕಂಠಾಂಕಮೀ ಪದ್ಯದಪಾನದೊಳ್
      ಮುದವೀವುದೀಸ್ಥಾಯಿಭಾವಮನಿಶಂ|
      ಬದಿಯೊಳಿಹವಿತರೆಲ್ಲ ವ್ಯಭಿಚಾರಿಭಾವಗಳು
      ಹೆದರಿ ಪೊರಮಟ್ಟಿಹನು ಹಾದಿರಂಪ||

  9. ಅರ್ಥವರ್ಷಾಂತ್ಯದೊಳ್ ವರಮಾನ ತೆರಿಗೆಯಂ
    ವ್ಯರ್ಥಭರಿಸುವಮುನ್ನವರ್ಥೈಸುತಾಂ
    ಸಾರ್ಥಗೊಳಿಸಲುವಿಂತುವಿತ್ತುವಂತಿಕೆಯಂತು
    ಸ್ವಾರ್ಥಮಿರೆ ಸತ್ಪಾತ್ರರಂ ಕಾಣೆನಯ್ !!

    (** under Section 80-G exemption ಕೋರಿ … !!)

    • ವಿಕ್ರೀಡಿತಂಗಳಂ ಚೌಪದಿಯ ಚೌಕಿಯೊಳ್
      ಸಕ್ರಮದೆ ಕೂರಿಸಿದ ನಿಮ್ಮ ಪರಿ ಯುಕ್ತಂ|
      ವಿಕ್ರಮಮಿದಾದುದೌ ಆರ್ಥಚಿಂತನೆಯಲ್ಲಿ
      ನಕ್ರಮುಖದೊಳ್ ನವೆದ ಹಸ್ತಿಯಂತೆ!!

      • ಸಕ್ರಮದಕ್ರಮವ ದಯಮಾಡಿ ಮನ್ನಿಸುವುದು ಗಣೇಶ್ ಸರ್ !!

        • ಇಲ್ಲ, ನಾನು ಆಕ್ಷೇಪ ಮಾಡಿದ್ದಲ್ಲ! ಇದನ್ನು ಮೆಚ್ಚಿಯೇ ಪದ್ಯದಲ್ಲಿ ಹೇಳಿದ್ದು!!….ಇಲ್ಲಿ ಎಲ್ಲ ಸಕ್ರಮವೇ, ಅಕ್ರಮವೇನಾಗಿಲ್ಲ….

          • ಧನ್ಯವಾದಗಳು ಗಣೇಶ್ ಸರ್,
            ನಕ್ರಮುಖದೊಳ್ ನವೆದ ಹಸ್ತಿಯಂತೆ!! (ಚೌಪದಿಯಾದ ವೃತ್ತ ಸೊಂಡಿಲು ಸವೆದ ಆನೆಯಂತೆ !!)
            ಸಾಲು ಬಹಳ ಇಷ್ಟವಾಯಿತು. ಸಕ್ರಮವಾದರೂ ವಂತಿಗೆಯೊಂದಿಗೆ ತೆರಿಗೆಯನ್ನೂ ಭರಿಸಿದ್ದೇನೆ !!

  10. ಪಾರಾವಾರದ ಮಧ್ಯದಿಂದೊಗೆದ ಲಕ್ಷ್ಮೀದೇವಿ ತಾನೊಪ್ಪುವ
    ಸ್ಫಾರೋದಾರಗಭೀರಧೀರಚರಿತಂಗರ್ಧಾಂಗಿಯೆಂದಪ್ಪೆನೆಂ-
    ದೋರಂತಾಂತು ಮಧೂಕಮಾಲಿಕೆಯನ್ “ಓ! ಸತ್ಪಾತ್ರರಂ ಕಾಣೆನಯ್;
    ಹಾ! ರುಷ್ಟಂ ವಿಧಿ”ಯೆಂದು ಸಾಗಿರಲದೋ ಕಂಜಾಕ್ಷನೇ ಕಂಡನಯ್!!

    (ಸ್ವಲ್ಪ ಶೃಂಗಾರದ ಸ್ಪರ್ಶವುಳ್ಳ ಪದ್ಯವಿರಲೆಂದು ಭಾವಿಸಿ ನಡಸಿದ ಯತ್ನವಿದು)

    • ಕಂಜಾಕ್ಷ=ಕಣ್ಣಿನಲ್ಲಿ ನೀರು ಒಸರುವುದು
      ಶುರುವಾಯ್ತಿನ್ನು ಕುಟುಂಬಯಾತನೆಗಳೆಂಬ ವ್ಯಾಜದಿಂದಾದುವೇಂ
      ಹರಿನೇತ್ರಂಗಳು ಒದ್ದೆ, ಧುತ್ತೆನುತುಮಾ ನೀರೆ ಪ್ರದೃಶ್ಯಂಗೊಳಲ್? 😀

  11. ಅರಿ ದುಶ್ಶಾಸನ ಗೈದ ಕೃತ್ಯಮನು ಕಂಡೀ ಪಾಂಡು ಪುತ್ರರ್ ಪರಾ
    ಪರಮಂ ಚಿಂತಿಸೆ ಧರ್ಮದಿಂ ಕುರುಡರಾಗಿರ್ಪರ್ ಸಭಾ ಮಧ್ಯದೊಳ್
    ಮೊರೆಯನ್ನಿತ್ತರು ಮೂಕರೊಲ್ ನಟಪರೀ ಪಾಂಚಾಲಿಯ ಪ್ರೀತಿಗಂ
    ಪುರಷಶ್ರೇಷ್ಠತಮರ್ಕಳೈವರೊಳು ಪೇಳ್ ಸತ್ಪಾತ್ರರಾರಿರ್ಪರೈ

    ಗೈದ ಕೃತ್ಯ – ಅರಿಸಮಾಸವೇ? ಹಾಗಿದ್ದಲ್ಲಿ ದಯವಿಟ್ಟು ಸವರಿಸಿ

    • ಗೈದ ಕೃತ್ಯ ಇದು ಸಮಾಸವೇ ಅಲ್ಲವಲ್ಲ!

    • ಪದ್ಯದ ಕಲ್ಪನೆ ಸೊಗಸಾಗಿದೆ. ಸ್ವಲ್ಪ ಭಾಷಾದೃಷ್ಟಿಯಿಂದ ಸುಧಾರಣೆಗಳು ಬೇಕಿವೆ ಅಷ್ಟೆ.

    • ನನ್ನ ಸವರಣೆ:
      ಅರಿದುಶ್ಶಾಸನಕೃತ್ಯಮನ್ನರಿಯರೇಂ ಆ ಪಾಂಡುಪುತ್ರರ್ ಪರಾ-
      ಪರಮಂ ಚಿಂತಿಸದಿರ್ದುಮೆಂತೊ ಕುರುಡಾಗಿರ್ಪರ್ ಸಭಾಮಧ್ಯದೊಳ್
      ಮೊರೆಯಲ್ ಸಾಧ್ವಿಯು, ವೀರ್ಯದಿಂ ಬರೆದರೇಂ ಧರ್ಮಾಂತರಾಖ್ಯಾಯೆಯಂ
      ಪುರುಷಶ್ರೇಷ್ಠನುಮೆನ್ನೆ ಐವರೊಳು ಪೇಳ್ ಸತ್ಪಾತ್ರ(ರಾ)’ನಾರಿರ್ಪ’ನೈ(ರೈ)

  12. ಜಗದೈತಿಹ್ಯದೊಳೀಕ್ಷಣಂ ಪರಿಸಲಾಶ್ಚರ್ಯಮಕ್ಕುಂ ಮಹಾನ್!
    ಸೊಗಮಂ ಬೇಡದ ಕೀರ್ತಿಕಾಂತೆಯೆ ದಿಟಂ ಸತ್ಪ್ರೀತಿ ಮೇಣ್ ನಿಷ್ಠೆಯಿಂ
    ಪುಗುತುಂ ಸೇರ್ವುದ ಕಂಡೆವೈ ಬಯಸಿತಾಂ ಸತ್ಪಾತ್ರರಂ;ಕಾಣೆನೈ(ವೈ)
    ಮೊಗೆದುಂಬಾಸೆಯ ಭೃಂಗಮೇ ಸರಿವುದಂ ಮಾಧುರ್ಯರಾಹಿತ್ಯರೊಳ್
    (ಸರ್ ತಿಳಿಸಿಕೊಟ್ಟ ತಿದ್ದುಗೆಯೊಂದಿಗೆ…)

    (ಮಹದಾಸೆಯುಳ್ಳ(ಸುಖವನ್ನು ಇಚ್ಚಿಸುವ) ದುಂಬಿಯೂ ಮಾಧುರ್ಯವಿಲ್ಲದಲ್ಲಿ ಸರಿಯುವದಿಲ್ಲ,ಹೀಗಿರುವಾಗ, ಸುಖವನ್ನೇ ಬಯಸದ ಕೀರ್ತಿಕನ್ಯೆಯು ಆಸೆ,ಪ್ರೀತಿಯಿಂದ ಸತ್ಪಾತ್ರರನ್ನು ಸೇರ್ವುದ ಕಂಡೆವು)

    • ಕಲ್ಪನೆಗಳೆಲ್ಲ ಸೊಗಸಾಗಿವೆ. ಆದರೆ ಭಾಷೆಯಲ್ಲಿ ಸ್ವಲ್ಪ ಸುಧಾರಣೆ ಬೇಕು.

  13. ವರವಿದ್ಯಾನಿಕರ೦ ಕರ೦ಗತಮೆನುತ್ತು೦ ಸದ್ಗುರುತ್ವ೦ ಸಲಲ್
    ಸುರಿದೀವೆ೦ ನಿಜವಿದ್ಯೆಯ೦, ಕುಡುವೊಡಾ೦ ಸತ್ಪಾತ್ರರ೦ ಕಾಣೆನೈ
    ಬರಮಿರ್ಕು೦ ಕಲಿವರ್ಗೆನಲ್, ಜಲಮನಾರ್ ಕೊಳ್ವರ್ ಗಡೆ೦ದು೦ ವೃಥಾ
    ಪರಿಯುತ್ತು೦ ನದಿ ಕೇಳ್ದುದಿಲ್ಲ, ಪರಿ ನೀ೦ ಸ್ವಚ್ಛ೦ದದಿ೦ ಬ೦ಧದಿ೦

    • ಅತಿಹೃದ್ಯಂ ಲಸದಾಭಿಜಾತ್ಯಭರಿತಂ ಪದ್ಯಪ್ರಕಲ್ಪಂ ಭವ-
      ನ್ಮತಿಜನ್ಯಂ ಸ್ಪೃಹಣೀಯಶೈಲಿಸಹಿತಂ ವಾಗರ್ಥಯುಕ್ತಂ ಕರಂ|

      • ಅತಿಧನ್ಯ೦ ಗಡ ನೀಲಕ೦ಠನಿರಲೀ ಸತ್ಸ್ಫೂರ್ತಿದ೦ ಸೂಕ್ತಿಯು೦

  14. ಅಪ್ರತ್ಯಕ್ಷದೆ ತೋಳತಂತ್ರಬಲದಿಂ ಸೊಕ್ಕಿರ್ದವರ್ ತೋರುತುಂ
    ತಾಂ ಪ್ರಾಬಲ್ಯವ ಬರ್ದುಕಲ್ ಬಗೆಯೊಳುಂಮಾದ್ಯಂತಕಾಲಂ ಗಡಾ ।
    ಈ ಪ್ರಸ್ಥಾನವನಪ್ಪುತುಂ ಬಗೆದಿರಲ್ ವಿದ್ವೇಷಮಂ ಸುಮ್ಮಗಿಂ-
    ತಪ್ರಾಮಾಣಿಕದವ್ಯವಸ್ಥೆಯೊಳಗಂ ಸತ್ಪಾತ್ರರಂ ಕಾಣೆನಯ್ ।।

    (ದಕ್ಷ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿಯವರ ಅಸಹಜ ಸಾವಿನ ಸಂದರ್ಭದಲ್ಲಿ – ವ್ಯವಸ್ಥೆಯ ಬಗ್ಗೆ)

    • ಸಮಯೋಚಿತವಾದ ಈ ಪದ್ಯದ ಕಲ್ಪನೆ ಬಲ್ಸೊಗಸಾಗಿದೆ; ಹೃದಯಸ್ಪರ್ಶಿಯೂ ಆಗಿದೆ. ನಿಮ್ಮ ಸದ್ಯಸ್ಸೂರ್ತಿಗೆ ಅಭಿನಂದನೆಗಳು. ಪದ್ಯಶೈಲಿಯೂ ಬಲುಮಟ್ಟಿಗೆ ಚೆನ್ನಾಗಿಯೇ ಇದೆ. ಈ ಒಂದೆರಡು ವರ್ಷಗಳಲ್ಲಿ ನೀವು ಸಾಧಿಸಿದ ಮಟ್ಟ ನಿಜಕ್ಕೂ ಮುದಾವಹ; ಸ್ತುತ್ಯರ್ಹ ಕೂಡ.

      • ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು ಗಣೇಶ್ ಸರ್,
        ನಿಮ್ಮೆಲ್ಲರ ಪದ್ಯಗಳನ್ನು ಗಮನಿಸುತ್ತಾ ಕಲಿಕೆ ಸಾಗಿದೆ. ಪದ್ಯಪಾನ ಆನಂದ ತಂದಿದೆ.

  15. ಲಯಗ್ರಾಹಿ|| “ಸತ್ಪಾತ್ರರಂ ಕಾಣೆನಯ್! ಕಲ್ಪನಾಶೀ-
    ಲೋತ್ಪಾತದೀ ಕಾವ್ಯಮಂ ಗೈವೆನಾರ್ಗಾಂ?”
    ಉತ್ಪತ್ತಿಬಾಹುಳ್ಯಮಿಂತಿರ್ದುದೇಂ ಪೇಳ್
    ವ್ಯುತ್ಪನ್ನರಿಂತೆಂದು ತಾಟಸ್ಥ್ಯರಾಗಲ್||

    • ಚೆನ್ನಾದುದಯ್ ಪದ್ಯಂ ಓ! ಹಾದಿರಂಪಾ!!
      ಇನ್ನೀ ಲಯಗ್ರಾಹಿಗೇ ಸೈನಿಕಾಖ್ಯಂ|
      ಬಿನ್ನಾಣಮೊಂದಿರ್ಪ ನಾಮಾಂತರಂ ಕೇಳ್
      ಚೆನ್ನಾಗಲೀ ಛಂದಮಿನ್ನೆಲ್ಲರ್ಗಂ ತಾಂ||

  16. ಕೃಷ್ಣನಲ್ಲದೆ ವರಕಲಾಸೌ೦ದರ್ಯಸಾನ್ನಿಧ್ಯವಾದ ಮಯೂರಪುಚ್ಛಕ್ಕೆ ಬೇರೆ ಸತ್ಪಾತ್ರರು ಯಾರಿದ್ದಾರೆ?!

    ಕೇಕೀಕ೦ಠವರಾ೦ಗವರ್ಣವರನು೦, ಸಾನ೦ದರೂಪೋಜ್ವಲ-
    ಶ್ರೀಕಾ೦ತ೦ ವರವರ್ಷಹರ್ಷಕರನು೦, ಮತ್ತಾ ಶ್ರುತಿ ಸ್ಥಾನಕ೦
    ಕೇಕೀಧ್ವಾನಮದಾಗಿರಲ್, ವರಕಲಾಸೌ೦ದರ್ಯಸಾನ್ನಿಧ್ಯಕ೦
    ಕೇಕೀಪುಚ್ಛಕಮೀತನಲ್ಲದಲೆ ನಾ೦ ಸತ್ಪಾತ್ರರ೦ ಕಾಣೆನೈ!

    ಶ್ರುತಿ ಸ್ಥಾನಕ೦ ಕೇಕೀಧ್ವಾನ೦ – ಶ್ರುತಿವಾಕ್ಯಕ್ಕೆ ಜೋರಾದ ಧ್ವನಿ ಕೊಡುವವನು / ತ೦ಬೂರಿ ಶ್ರುತಿಗೆ ಷಡ್ಜವಿದ್ದ೦ತೆ

    • ಕಲ್ಪನೆಯೇನೋ ಚೆನ್ನಾಗಿದೆ. ಆದರೆ ಕೇಕಿನ್ (ಕೇಕೀ) ಶಬ್ದವು ಸಮಾಸದಲ್ಲಿ ಹ್ರಸ್ವಸ್ವರಾಂತ್ಯವಾಗುತ್ತದೆ. ಉದಾ: ಕೇಕಿಕಲಾಪ, ಕೇಕಿಧ್ವಜ, ಕೇಕಿಕಂಠ ಇತ್ಯಾದಿ
      ಉತ್+ಜ್ವಲ= ಉಜ್ಜ್ವಲ ಎಂದು ಸಂಧಿ.

      • ಹೌದೇ! ಕೇಕೀಕ೦ಠಾಭನೀಲ೦ ಎ೦ದು ಎಲ್ಲೋ ಓದಿದ್ದ ನೆನಪು… ನನಗೆ ಸರಿಯಾಗಿ ಗೊತ್ತಿಲ್ಲ. ಧನ್ಯವಾದಗಳು.

  17. ನಡೆದೊಂದಗ್ರ ಚುನಾವಣಾ ಕದನದೊಳ್ “ಸತ್ಪಾತ್ರರಂ ಕಾಣೆನೈ”-
    ನುಡಿಯಿಂತುಂ ಪೆಡಸಾಗಿ ಪರ್ಬಿರೆ ನಿಜಂ ಕಾಳ್ಗಿಚ್ಚವೊಲ್,ರಾಜ್ಯದೊಳ್,
    ಕುಡೆವೆಂದುಂ ಮತಮೆಂದು ಮೂಢನಿಕರಂ ತಾಟಸ್ಥ್ಯಮಂ ತಾಳ್ದೊಡಂ
    ಬುಡಮೇಲಾದುದು ಕಂಡಸ್ವಪ್ನಮಕಟಾ ದುಷ್ಟಾತಿದುಷ್ಟರ್ ಗೆಲಲ್(ಶಿಥಿಲದ್ವಿತ್ವ)
    (ಸರ್ ತಿಳಿಸಿದ ಸವರಣೆಯೊಂದಿಗೆ… :-))

    • ಕಲ್ಪನೆ ಚೆನ್ನಾಗಿದೆ. ಆದರೆ ಹಲವೆಡೆ ಭಾಷಾಪರಿಷ್ಕಾರ ಬೇಕಿದೆ. ಕಾದಂಬರಿಯ ಅದ್ಯಯನಗೋಷ್ಠಿಯಲ್ಲಿ ಮುಖತಃ ತಿಳಿಸುವೆ.

      • 🙂 ಆಗಲಿ, ನಿಮ್ಮಲ್ಲಿ ಕೇಳಿ ಸರಿಪಡಿಸಿಕೊಳ್ಳುವೆ, ಧನ್ಯವಾದಗಳು ಸರ್.

      • ಅ’ದ್ಯ’ಯನಗೋಷ್ಠಿ ಎಂದರೆ ‘ವಿರಾಮವೇಳೆಯಲ್ಲಿ ಅಲ್ಪೋಪಹಾರಸೇವನೆಯಾಗುವಾಗ’ ಎಂದೆ? (ಒಂದು ಟೈಪೊವನ್ನು ಎತ್ತಿಯಾಡಿದ್ದಕ್ಕೆ ಕ್ಷಮೆ ಇರಲಿ)

        • ಎತ್ತಿ ಆಡದಿರಲು ಹಾದಿರಂಪರ ಪದವಿ
          ಎತ್ತಲೆತ್ತಲೆಲ್ಲೊ ಜಾರದಿಹುದೇ?
          ಕುತ್ತಿ ಕುತ್ತಿ ಕುತ್ತಿ ಕೆಣಕಿಯುಂ ನೀವೆಮ್ಮ
          ಚಿತ್ತಹರ್ಷಕಾರಿಚರಿತರಲ್ತೆ!

  18. ಬಂದೆಯಾ ! ಸುಧಾಮಾ ! ನೀ೦ ಬಿಸಿಲ ಝಳಕಿ೦ತು
    ನೊ೦ದೆಯಾ?ಯೆ೦ದೋಡಿ ತಳ್ಕೈಸಿ ಸಖನ ಕರೆ
    ತಂದು ತನ್ನಾಸನದೊಳಾಕುಚೇಲನ ಮೆರೆಸಿ ಪಾದಗಳ ಕೊಳೆಯ ತೊಳೆದು I
    ಇಂದುಮುಖಿ ರುಕ್ಮಿಣಿಯನೊಡಗೂಡಿ ತನ್ನಿಷ್ಟ-
    ಕಂದಾದ ಬಾಲ್ಯಮಿತ್ರನಿವನೆಂದುಪಚರಿಸಿ
    ಕುಂದಿದೆಂದು ಬಚ್ಚಿಟ್ಟವಲಕ್ಕಿ ತಿಂದಸಖ ಸತ್ಪಾತ್ರರಂ ಕಾಣೆನಯ್ II
    ಈಗ ಬೇಸಗೆಯಾದುದರಿಂದ ಇವನು ಬಿಸಿಲಿಗೆ ಬಸವಳಿದು ಬಂದ ಸುಧಾಮ . ”ಸಖ ಸತ್ಪಾತ್ರರು” ಅನ್ನುವಲ್ಲಿ ಕೃಷ್ಣ ಮತ್ತು ಸುಧಾಮರಿಬ್ಬರೂ ಸ್ನೇಹದಲ್ಲಿ ಪರಸ್ಪರ ಅನುಕೂಲರೆನ್ನುವ ಭಾವ . ಸುಧಾಮ ಹಿಂಜರಿದು ಅವಲಕ್ಕಿಯನ್ನು ಕೊಡಲೊಲ್ಲ . ಕೃಷ್ಣ ಪ್ರೀತಿಯಿಂದ ತಂದದ್ದನ್ನು ಬಿಡಲೊಲ್ಲ .

    • ಪದ್ಯಪೂರಣವನ್ನು ವಾರ್ಧಕದಲ್ಲಿ ಮಾಡಿದ್ದೀರಿ; ಅಡ್ಡಿಯಿಲ್ಲ. ಆದರೆ ಹಲವೆಡೆ ಛಂದಸ್ಸು ಕುಂಟಿದೆ. ಉದಾ: ಮೊದಲ ಸಾಲಿನಲ್ಲಿಯೇ ಸುಧಾಮಾ ಎಂದು ಲಘ್ವಾದಿಗಣ ಬಂದಿದೆ. ಐದನೆಯ ಮತ್ತು ಆರನೆಯ ಸಾಲುಗಳಲ್ಲಿ ಸಾಕಷ್ಟು ತಿದ್ದುವುದಿದೆ. ಹಲವೊಮ್ಮೆ ಛಂದೋಗತಿಸಮತ್ವವಿದ್ದರೂ ಪದಗತಿಯು ವಿಷಮಾಗಿರುತ್ತದೆ.ಇಂಥ ವೈಷಮ್ಯವೇ ಇಲ್ಲಿ ತೋರಿದೆ. “………ಪಾದಗಳ ಕೊಳೆಯ ತೊಳೆದು” ಎಂಬಲ್ಲಿ ಕೊಳೆ ಬೇಕಿಲ್ಲ:-)
      ಕೊಳೆಯು ವಾಸ್ತವವೇ ಅದರೂ ಅದನ್ನು ಹೃದ್ಯವಾಗಿ ಹೇಳಬಹುದು. “ಪಾದಪದ್ಮಗಳ ತೊಳೆದು” ಎಂದರೆ ಆಗಬಹುದೇನೋ..

      • ಸರ್ , ಧನ್ಯವಾದಗಳು . ‘ಪಾದ ಪ್ರಕ್ಷಾಲನೆ’ ಅನ್ನುವ ಪದ ಆಯ್ಕೆ ಮಾಡಿದ್ದೆ . ಅದು ಹೊ೦ದಿಕೆಯಾಗದೆ ಕೊಳೆಯನ್ನು ಅನಿವಾರ್ಯವಾಗಿ ತುರುಕಿದೆ . ನನಗೂ ಅದು ಹಿತವೆನ್ನಿಸಲಿಲ್ಲ . ‘ಪಾದಪದ್ಮ’ ಅನ್ನುವ ಪದ ಹೊಳೆಯಲೇ ಇಲ್ಲ 🙁 .

      • ಗಣೇಶರೆ, ಪದ್ಮಪಾದವೂ ಪಂಕಮಯವಲ್ಲವೆ! ಪರೋಕ್ಷಪ್ರಿಯಾ ಹಿ ವೈ ದೇವಾಃ 🙂

        • ಹಾದಿರಂಪರೇ! ನಿಮ್ಮ ಪ್ರಶ್ನೆಯಲ್ಲಿಯೇ ಉತ್ತರವೂ ಉಂಟಷ್ಟೇ!

  19. ಮೃತ್ಪುತ್ರಿ ರಾಮಂಗೆ ಪಿಂ
    ಚಿತ್ಪಲ್ಲವಂ ಸಂದವೊಲ್
    ಹೃತ್ಪದ್ಮವಿನ್ಯಾಸಕಂ
    ಸತ್ಪಾತ್ರರಂ ಕಾಣೆನೈ!
    (ಪ್ರೇಮಿಯೊಬ್ಬನ ಮಾತು- ಮೃತ್ಪುತ್ರಿ(ಮಣ್ಣಿನ ಮಗಳು-ಸೀತೆ) ಪಿಂ ರಾಮಂಗೆ ಚಿತ್ಪಲ್ಲವಂ (ಚಿನ್ಮಯ ಪಲ್ಲವದಂತೆ) ಸಿಕ್ಕ ಹಾಗೆ ಹೃತ್ಪದ್ಮ(ಹೃದಯವೆಂಬ ಪದ್ಮ) ವನ್ನಿಡಲು ಸತ್ಪಾತ್ರರನ್ನು ಕಾಣದಾದೆ)

    ಇದು ಯಾವ ವೃತ್ತವಾಗಬಹುದು?!!

    • ಅನ್ವೇಷಣಾ ವೃತ್ತವೆನ್ನಬಹುದು 🙂

    • suffeRING…?!!

    • ಸ್ವಾನುಭವವೃತ್ತ ?!

    • ಕೊಪ್ಪಲ’ತೋಟಕ’ ವೃತ್ತ 🙂

    • ಸತ್ಪಾತ್ರ’ಳ’ನ್ನು ಅಲ್ಲ! ಸತ್ಪಾತ್ರ’ರ’ನ್ನು?
      ಭುಜಂಗಪ್ರಯಾತ|| ಅನೌಚಿತ್ಯಮನ್ನಿಂತು ನೀಂ ಗೈಯಲೇಕೈ
      ಅನಾರ್ಯಂ ಗಡಂ ನೀಂ, ವರಂ ರಾಮಚಂದ್ರಂ|
      ಅನೈಕ್ಯಂ ವಧೂಸಂಖ್ಯೆಯನ್ನಿಚ್ಛಿಪಾತಂ
      ಘನೈಕಂ ಸತೀವಲ್ಲಭಂಗೇಂ ಸಮಾನಂ?

      ಆವೋರ್ವಳೂ ದಕ್ಕಳೇಂ?
      ನೋವಿಂದೆ ನೀನಾಗಳೈ
      ತಾವಿಲ್ಲದಡ್ಡಾಡೆಯೇಂ
      ಆವಾವುದೋ ವೃತ್ತದೊಳ್||

    • ಈ ವೃತ್ತಕ್ಕೆ”ಹಂಸಮಾಲಾ” ಎಂಬ ಹೆಸರಿದೆ. 🙂

  20. ಕೈಗಡಿಯಾರ…

    ಕರಕಾಭೂಷಣಮೆ೦ದು ಕಟ್ಟುವರಲಾ ಬಹ್ವರ್ಣದಿ೦ ಶೋಭಿಸಲ್
    ತರಳರ್ ಕಾಲಮದಿರ್ಪುದೇನೆನುವರೈ ಕೈಯಾಟಕೆ೦ದು೦ ಗಡಾ
    ಸರಿಯುತ್ತು೦ ಸಮಯ೦ ಬರಲ್ ದೊರೆಯದೇ೦ ಮು೦ದೆ೦ದುಮೆ೦ದೆ೦ಬರೈ
    ಮರುಳರ್ ಮನ್ನಿಸರೆನ್ನ ಯುಕ್ತತೆಯನು೦, ಸತ್ಪಾತ್ರರ೦ ಕಾಣೆನೈ!

  21. ಉತ್ತರಕುಮಾರನ ಶಾರ್ದೂಲಗರ್ಜನ! ಹೊಸದೇನಿಲ್ಲ. ಕುಮಾರವ್ಯಾಸನ ಭಾಮಿನಿಯ ವೃತ್ತನರ್ತನ ಅಷ್ಟೆ!

    ಕೋದ೦ಡ೦ ನಡುಗುತ್ತುಮಿರ್ಪ ಮುದಿಯು೦, ಭ್ರಷ್ಟಸ್ವಧರ್ಮಾಶ್ರಯ೦
    ಭೂದೇವ೦, ಕುಲಹೀನನೋರ್ವನಿರಲು೦, ಮತ್ತ೦ ಸಭಾಸ್ಥಾನಮ-
    ರ್ಯಾದೋಲ್ಲ೦ಘನವೀರರಿರ್ಪೊಡೆ ಕೆಲರ್, ಸಾಕಿ೦ತುಮಿರ್ದಾರೊಳಾ೦
    ಕಾದಿರ್ಪೆ೦, ಸ್ವಶರಾಳಿವರ್ಷಕೆಲೆ ಕೇಳ್ ಸತ್ಪಾತ್ರರ೦ ಕಾಣೆನೈ!

  22. ಪೆಣ್ಣಂಪೆತ್ತಿರೆ ಪುಣ್ಯಮೆಂಬರುವಲಾ ಸಂತಾನಭಾಗ್ಯಂ ಗಡಾ,
    ತಿಣ್ಣಂಪೊಣ್ಮಿರೆ ಪೆಣ್ಣುಪೆಣ್ಣೆನಿಸುದಾ ಸಂಭಾವ್ಯದಾ ಕಾಲದೊಳ್
    ಪಣ್ಣಾದೆನ್, ಪರಿಸೂಕ್ತಮಾದವರನಂ ಸಂಸಾರ ಸಂಯೋಗಕಂ
    ಕಣ್ಣಿಂಗೆಣ್ಣೆಯನಿಟ್ಟುತಾಮರಸುತುಂ, ಸತ್ಪಾತ್ರರ೦ ಕಾಣೆನಯ್ !

  23. “ಸತ್ಪಾತ್ರರಂ ಕಾಣೆನೈ” ನೀಳಲೆಂದುಂ
    ಉತ್ಪನ್ನಮಂ ಮಾಚುತುಂ ಕೂಡಲೆಂತುಂ !
    ಸತ್ಪಾಲಕಂ ಕಂದಗಾರಿಲ್ಲಮೆಂದುಂ
    ತತ್ಪೋಷಣಂ ಗರ್ಭದೇ ಗೈವೊಡೆಂತುಂ !!

    (ಯಾವತ್ತಾದರೂ ಇವೆರಡೂ ಕಾಣಿಸಿಕೊಳ್ಳಲೂ ಬೇಕು ಮತ್ತು ಆಚೆ ಬರಲೂಬೇಕು 🙂 )

  24. ಧರೆಯೊಳ್ ಕಾನನರಾಶಿಗಳ್ ಜನನಿವೋಲೇ ಜೀವರಂ ಪೋಷಿಸಲ್,
    ದುರುಳರ್ ಕ್ಷಿಪ್ರದೆ ಪೊರ್ದಲಕ್ರಮದಿನಷ್ಟೈಶ್ವರ್ಯಭೋಗಂಗಳಂ,|
    ತರಿಯಲ್ ಪಚ್ಚೆಯ ವೃಕ್ಷಸಂಕುಲಮನೇ,ನೀಚರ್,ಕೃತಘ್ನಾಸುರರ್,
    ಕರುಣಾಪೂರ್ಣಪರೋಪಕಾರಕಿವರೊಳ್ ಸತ್ಪಾತ್ರರಂ ಕಾಣೆನೈ ||

  25. ಸಾಂಗತ್ಯ|| ಸತ್ಪಾತ್ರರಂ ಕಾಣೆನೈ ಎನ್ನಲೇಕೆ ನೀಂ
    ವ್ಯುತ್ಪನ್ನಳಂ (daughter!) ವರಿಸುವಂಥರ್|
    ತಾತ್ಪರ್ಯವಿದ ಕೇಳು ನಿನಗಿಂ ಸಮರ್ಥಳಾ
    ತ್ವತ್ಪುತ್ರಿ ಪಾತ್ರನಂ (ತಾನೇ) ತರುವಳ್||

  26. “ಉತ್ತಿಷ್ಠತ ಜಾಗ್ರತ” ಎಂದು ಗರ್ಜಿಸಿದ ಸಿಡಿಲಸಂತ ಸ್ವಾಮಿ ವಿವೇಕಾನಂದರು ಯಾವಾಗಲೂ ಹೇಳುತ್ತಿದ್ದರು – “ನಮಗಿಂದು ಬೇಕಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನ ನರಮಂಡಲ, ವಿದ್ಯುಚ್ಛಕ್ತಿಯಂತಹ ಇಚ್ಛಾಶಕ್ತಿಯುಳ್ಳ, ತಮ್ಮ ಸಿಂಹಗರ್ಜನೆಯಿಂದ ಪರ್ವತಗಳನ್ನೇ ಉರುಳಿಸಬಲ್ಲ ಯುವಕರು. ಪ್ರತಿಯೊಬ್ಬ ಜೀವನಲ್ಲಿಯೂ ಶಿವನನ್ನು ಕಂಡು, ದೀನದಲಿತರ ಸೇವೆಗಾಗಿ ಟೊಂಕ ಕಟ್ಟಿ ನಿಲ್ಲಬಲ್ಲ ಕೆಲವು ಮಂದಿ ಯುವಕರು. ಅದರೆ ಅಂತಹ ಒಬ್ಬನನ್ನೂ ಈ ದೇಶದಲ್ಲಿ ನಾನು ಕಾಣೆ.” ಎಂದು….ಆ ಮಾತುಗಳೇ ಪದ್ಯರೂಪವನ್ನು ಪಡೆದರೆ…

    ಮೈವೇೞ್ಕುಂ ಗಡ ಲೋಹದೊಲ್ ನರನರಂಗಳ್ ವೇೞ್ಕುಮುಕ್ಕಂತೆವೋಲ್
    ರಾವಂಗೆಯ್ಯುತಿರಲ್ಕೆ ಸಿಂಗದೊಲಲಾ ಕುಧ್ರಂಗಳಿಂತುಂ ಕಿಡಲ್
    ಜೀವಂ ತಾಂ ನಿಜದಿಂ ಶಿವಾಂಶನೆನೆ ದೀನೋದ್ಧಾರಕರ್ ತಾವಲಾ
    ಸೇವಾಮಂತ್ರಜಪಾತುರರ್ ಯುವಕರಂ, ಸತ್ಪಾತ್ರರಂ ಕಾಣೆನಯ್

    “ವೃಷ್ಣೀಕುಲಭೂಷಣನಾದ ಶ್ರೀಕೃಷ್ಣನು ಸ್ಫುರದ್ರೂಪವೆಂಬ ಹಾರದ ಬೃಹತ್ ಕೌಸ್ತುಭಮಣಿಯಂತಿರುವನು. ಹರಿಣಾಕ್ಷಿಯರ ಹೃದಯವೆಂಬ ಆಕಾಶದ ಚಂದ್ರನಾಗಿ ಬೆಳಗುತ್ತಿರುವ ಆತನ ಮುಖವೇ ನನ್ನ ಮನೆಯಾಯಿತು. ಏಕೆಂದರೆ ಅಂದ-ಚಂದದಲ್ಲಿ ಕೃಷ್ಣನನ್ನು ಮೀರಿಸಿದವರನ್ನು ನಾನು ಕಾಣೆ” ಎಂದು ಮನ್ಮಥನೇ ಹೇಳಿದರೆ….

    ವರವೃಷ್ಣೀಕುಲಭೂಷಣಂ ಸುರನುತಂ ಸೌಂದರ್ಯಸಂಭಾರನಾ
    ನರಮಿತ್ರಂ ಸುರರೂಪಲಂಬನಬೃಹಚ್ಛ್ರೀಕೌಸ್ತುಭಂ ತಾನಲಾ
    ಹರಿಣಾಕ್ಷೀಹೃದಯಾಭ್ರಸೋಮನ ಮೊಗಂ ತಾನಾಯ್ತು ಮದ್ಗೇಹಮಯ್
    ಹರಿಯಂ ಮೀರಿಸಿದಂದಮಾರದೊ ಗಡಾ ? ಸತ್ಪಾತ್ರರಂ ಕಾಣೆನಯ್

    • ವಿವೇಕಾನ೦ದರ ಮಾತುಗಳು ಹಳಗನ್ನಡದಲ್ಲಿ ಅದ್ಭುತವಾಗಿ ಮೊಳಗುತ್ತಿವೆ. ಮೌರ್ಯರಿಗೆ ಹಾರ್ದಿಕ ಅಭಿನ೦ದನೆಗಳು!!

      ಪರಿಯುತ್ತು೦ ಭರತಾನ್ವಯಾ೦ಕಿತ ಕಲ೦ಕಪ್ರಾಯ ದೌರ್ಬಲ್ಯಮ೦
      ಸುರಿಸುತ್ತು೦ ನವಶಕ್ತಿವರ್ಷಮನೆ ತಾ೦ ವೇದಾ೦ತಸಾರೋದ್ಭವ೦
      ಮೊರೆದಿರ್ಕು೦ ಗಡ ಮೌರ್ಯರೊಳ್ ಯತಿ ವಿವೇಕಾನ೦ದ ಸಿ೦ಹಸ್ವನ೦
      ಸೊರಗಿರ್ದೆನ್ನ ಮನೋಬಲ೦ ಪುಟಿಯಲೀ ಶಾರ್ದೂಲವಿಕ್ರೀಡೆಯಿ೦

      • ಧನ್ಯವಾದಗಳು ಸಹೃದಯರೇ ಮತ್ತು ತಮ್ಮನ್ನೂ ಒಳಗೊಂಡಂತೆ ಎಲ್ಲ ಪದ್ಯಪಾನಿ ಸದ್ಬಾಂಧವರಿಗೆ ನೂತನ ಮನ್ಮಥ ನಾಮ ಸಂವತ್ಸರದ ಮನಸಾ ಶುಭಕಾಮನೆಗಳು _/\_ !

      • ನೀಲಕಂಠರೆ,
        ಹೈವಾನನನ್ನು (ಇಮ್ಮಡಿ ಮೌರ್ಯ) ಇಷ್ಟುಚೆನ್ನಾಗಿ ಅಭಿನಂದಿಸಲು ನನ್ನಿಂದ ಆಗದು. ನಿಮ್ಮ ಮಾತಿಗೆ ’Ditto’ ಎಂದಷ್ಟೇ ಹೇಳಬಲ್ಲೆ. ಸಿಂಹಸ್ವನ! ಶಾರ್ದೂಲವಿಕ್ರೀಡೆ! ಶಾರ್ದೂಲಛಂದ! ಭಲೆ!

    • ಈ “ದಿವ್ಯತ್ರಯ”ರನ್ನು ಕಂಡಮೇಲೆ “ಸತ್ಪಾತ್ರರ೦ ಕಾಣೆನಯ್” ಎಂದು ಹೇಳಲಾದೀತೇ ?!

      • ಸ್ಪಷ್ಟವಾಗಿ ಹೇಳಿಬಿಡಿ – ಕರ್ಣದಿವ್ಯವೋ, ನೇತ್ರದಿವ್ಯವೋ, … 🙂

        • “ಕಂಠಿeರವ”ದ ದಿವ್ಯತೆ !!

          • ದೀರ್ಘಕ್ಕೆ ಆಂಗ್ಲ-ಅಕ್ಷರವನ್ನು ಬಳಸಿಕೊಂಡಿರುವುದು ಚೆನ್ನಾಗಿದೆ.

          • ರ೦ಪರೆ,
            ಗುಡುಗಿರ್ಪ೦ ಗಡ ದೀರ್ಘಮಾಗಿ ಯತಿ ತಾನಾ೦ಗ್ಲೇಯ ಭಾಷಾಬ್ದದಿ೦
            ಮಡಗಿರ್ಪರ್ ಗಡ ದೀರ್ಘಚಿಹ್ನೆಯನೆ ಮೇಣಾ೦ಗ್ಲಾ೦ಕದೊಳ್ ಮೇಡಮರ್ (madamರ್)
            ಅಡಗಿಟ್ಟರ್ ಗಡ ಲೇಖನ೦ ತಿಳಿಪುದು೦ ಸ೦ದರ್ಭ ಸ್ವಾರಸ್ಯಮ೦
            ಬೆಡಗಾಗಿರ್ಪುದು ಮೇಣುಷಾಭಗಿನಿಯೀ ಭಾಷಾಲಿಪಿಸ್ವಾದಮು೦

          • ಆಗ “ಕಂಠೀರವ” ಎಂದು ಟೈಪಿಸಲು ಸಾಧ್ಯವಾಗದೆ ಹಾಗಾದದ್ದು !! ಆದರೂ ದಿವ್ಯದೃಷ್ಟಿ / ದಿವ್ಯವಾಣಿ ಗಳಿಗೆ ಧನ್ಯವಾದಗಳು.

  27. ಉತ್ತು ಭಂಡಾರದೊಳ್ ಮುತ್ತುರತ್ನಂಗಳಂ
    ಸುತ್ತು ಹತ್ತೂರೊಳಾಂ ವಿತ್ತವಂತರ್ ಗಡಾ !
    ಇತ್ತು ಸರ್ವಸ್ವಮಂಮುತ್ತರಾಧೀಶನಂ
    ಗೊತ್ತುಮಾಡಲ್ಕೆ ಸತ್ಪಾತ್ರರ೦ ಕಾಣೆನಯ್ !!

  28. ಎಲ್ಲರಿಗೂ ಯುಗಾದಿಯ ಶುಭಾಶಯಗಳೊ೦ದಿಗೆ…

    ಕವನೋದ್ಯಾನವಿಹಾರಖೇಲನವಿಲಾಸೋತ್ಕರ್ಷಣಾನ೦ದಮ೦
    ಸವಿಯುತ್ತು೦ ಸಹಪದ್ಯಪಾನಸಖರ೦ ಸ೦ಭಾವಿಸುತ್ತು೦ ನವೋ-
    ನವಭಾವಾಬ್ಧಿಗಳಿರ್ದೊಡ೦ ಮಿಗಲೆನಲ್ ಸತ್ಪಾತ್ರರ೦ ಕಾಣೆನೈ
    ನವಸ೦ವತ್ಸರದಾದಿಯೊಳ್ ನಮಿಸಲು೦ ಸತ್ಕಾ೦ಕ್ಷೆಯ೦ ಬೀರಲು೦

    • ೧) ರಸಿಕರಿ೦ ~ ರಸಿಕರಿ೦ಗಿಂ: ’ನವಭಾವಾರ್ಣವರಿರ್ದಿಹೀ ರಸಿಕರಿಂಗಿಂ ಕಾಣೆ ಸತ್ಪಾತ್ರರಂ’ ಎಂದು ಸವರಬಹುದು.
      ೨) ಚಾಂದ್ರ-ಸೌರಮಾನೀಯರಿಗೆ ಇದು ಮನ್ಮಥಸಂವತ್ಸರವು; ಬಾರ್ಹಸ್ಪತ್ಯರಿಗಿದು ’ಕೀಲಕ’ಸಂವತ್ಸರವು. ಪದ್ಯಪಾನಿಗಳು ಬಾರ್ಹಸ್ಪತ್ಯರಾಗೋಣ.
      ಕ್ರೋಂಚಪಾದ|| ಮನ್ಮಥಸಂವತ್ ಪದ್ಯಪಿಪಾಸಾದ್ಯರಿಗಮಿತದಿನೊದಗುವುದಲೆ ಬಲುಹಿಂ
      ಜನ್ಮಕತೀರ್ ತಾಮಿಹದೇವರ್ಕಳಗುರುಗಳನನುಸರಿಸುವವರಿಗಂ|
      ಹೃನ್ಮಯದಿರ್ಕುಂ ’ಕೀಲಕ’ಸಂವತ್ಸರಮಿದುಮೆಮಗಿರೆ ಪ್ರತಿಪದಕರಮೈ (to resort to)
      ತನ್ಮಯರಾವಾಗುತ್ತೆ ಸಮಸ್ಯಾಕವನವ ಬಿಡಿಸುತಲಿರೆವರುಷದೊಳಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)