Mar 292015
 

Summer

  101 Responses to “ಪದ್ಯಸಪ್ತಾಹ ೧೪೪: ಚಿತ್ರಕ್ಕೆ ಪದ್ಯ”

  1. ಪೊಳೆಯುತ್ತಿರ್ಪ ದಿನೇಶಬಿಂಬಮನೆ ನೀರೊಳ್ ಕಂಡು ವಿಭ್ರಾಂತಿಯಿಂ
    ಭಳಿರೇ ಪೊನ್ ಪೊನಲಾದುದೆಂದು ಬಗೆಯಲ್ ಪೆರ್ಚಿರ್ದೊಡಂ ವಾಂಛೆಯುಂ
    ನಲಿಯುತ್ತುಂ ಜಿಗಿದಿರ್ಪನಲ್ತೆ ನದಿಗಂ ಚಾಂಚಲ್ಯಮಂ ಸೃಷ್ಟಿಪಾ
    ಬೆಲೆವೆಣ್ಣಲ್ತೆ ಸರೋಜಸಂಭವೆ ಸದಾ ಧೀಸ್ವಾಸ್ಥ್ಯಸಂಹಾರಕಳ್!!

    • ಆಹಾ! ಸೊಗಸಾದ ಕಲ್ಪನೆಯಿಂದ ರಂಜಿಸಿದ ಪದ್ಯ. ಶಬ್ದಾರ್ಥಗುಣಗಳೆರಡರಿಂದಲೂ ಸೊಗವಡೆದ ರಚನೆ. ಅಭಿನಂದನೆಗಳು. ಇಲ್ಲಿ ಭಾಂತಿಮದಲಂಕಾರವೂ ಅರ್ಥಾಂತರನ್ಯಾಸಾಲಂಕಾರವೂ ತೋರಿವೆ.

    • ಒಲಿದಿರ್ಪಳ್ ತಮಗಲ್ತೆ ಕಾವ್ಯವಧು ತಾ೦ ಧೀಸ್ವಾಸ್ಥ್ಯ ಸ೦ಜೀವಕಳ್
      ಕಲೆಯುತ್ತು೦ ವರಕಲ್ಪನಾರಮಣಿಯೊಳ್ ಧೀ ರೆ೦ಕೆಯ೦ ಕೊ೦ಡವೊಲ್

      • ಕೆಳೆಯಾ! ಬೇರೆಯ ಮಿತ್ರರಿಂ ಮೊದಲೆ ಪದ್ಯಂವೇಳ್ವುದೊಂದಾತುರಂ
        ಸಲೆ ಪದ್ಯತ್ರಯಮಂ ಜಲಕ್ಕನುಲಿದೆಂ! ಬೇರೇನುಮಿಲ್ಲಂ ಕೃತಂ||

        • ಜಲಕ್ಕೆ 🙂 ಮೂರು ಅರ್ಘ್ಯ. ಅದಕ್ಕೇ ದಿವ್ಯವಾಗಿವೆ ಪದ್ಯಗಳು.

    • ಬಹಳ ಸುಂದರವಾದ ಪದ್ಯ.

  2. ಜಲಧರನೆಲ್ಲಿದಂ? ನಭದೆ ಬೆಂಗದಿರಂ ಕಿಡಿಸುತ್ತುಮಿರ್ಪನೈ
    ಮಲರೆಲರೆಲ್ಲಮುಂ ಬಿಸುಪನೊಂದುತಿರಲ್ಕೆ ವಸಂತಕಾಲದೊಳ್
    ನೆಲೆಸುವುದೆಂತು? ವಾಹಿನಿಯೊಳೆಯ್ದುದು ತಣ್ಪಿನೊಳುಣ್ಮಿ ನೀರ್ಗಳಾ-
    ಗಳೆ ಜಲಕೇಳಿಗಂ ರಸಿಕಚಿತ್ತಮೊಡಂಬಡುತಿರ್ಪುದಲ್ತೆ ಪೇಳ್!!

  3. ಮುನ್ನಂ ಪೂರೈಸಿ ಮಿತ್ರರ್ ಕಲಿಕೆಯ ದಿನಮಂ ಬಂದರೆಲ್ಲರ್ ಪ್ರವಾಸ
    ಕ್ಕಿನ್ನೇನಿರ್ಕುಂ ವಿಹಾರಕ್ಕೆನೆ ನುಡಿದನದೊರ್ವಂ ದಿನೇಶಾಸ್ತಮಾನಂ
    ಚೆನ್ನಂ ನೋಡಲ್ಕೆನಲ್ ಸಾರ್ದೊಡೆ ಸಕಲರದಂ ಕಂಡು ತೋಷಿಪ್ಪರಾಗಳ್
    ಬೆನ್ನೀರೇಂ ನೋಡೆನುತ್ತುಂ ನದಿಯೆಡೆಗವನಂ ತಳ್ಳಿದರ್ ಪಿಂದಿನಿಂದಂ!!

    • ಒಳ್ಳೆಯ ಶೈಲಿಯಲ್ಲಿ ಈ ಎರಡು ಪದ್ಯಗಳೂ ಸ್ವಭಾವೋಕ್ತಿಸುಂದರವಾಗಿ ಮೂಡಿವೆ. ಅಭಿನಂದನೆಗಳು.

  4. ಜಗಮೆಲ್ಲಂ ಬಿರುಬೇಗೆಯಿಂದೆ ಬಿಸುಪೇರಲ್ ಜೀವಸರ್ವಸ್ವಮುಂ
    ಪುಗಲಾರಯ್ದು ನೆಳಲ್ಗೆ ನಾಲ್ದೆಸೆಗಳಂ; ತಾನಿಂತು ಭೀಷ್ಮೋಷ್ಮದಿಂ-
    ದಗಲಲ್ಕಾಗದೆ ನೊಂದ ಛಾಯೆಯೆ ದಿನಾಂತಂ ಸಾರೆ ತಣ್ನೀರಿನೊಳ್
    ಜಗುಳ್ದತ್ತೇಂ ನವಮಾಣವಾಕೃತಿಯೊಳೀ ಸಂಧ್ಯಾರ್ಕಸಾಕ್ಷ್ಯಂ ವಲಂ||

    ಸಸಂದೇಹಾಲಂಕಾರಚ್ಛಾಯೆಯಿರುವ ಕಾವ್ಯಲಿಂಗಾಲಂಕಾರವಿಲ್ಲಿದೆ.

    • ಅರರೇ! ಸುಂದರಮಾದಕಲ್ಪನೆಯೊಳೀ ಮೂರ್ತಿತ್ವದಿಂ ತೋರ್ದೊಡಂ
      ನರನಂಗಂ ರಸದಿಂದೆ ತಣ್ಪುವಡೆದಿತ್ತೀ ಕಾವ್ಯದಿಂ ಚಿತ್ತಮುಂ!

      • ಸರಸೋದಾರಕವಿತ್ವವಿತ್ತ್ವವಿಧಿಯಿಂ ಮೆಚ್ಚಿರ್ಪ ನಿಮ್ಮೀ ವಚ-
        ಸ್ಸ್ಫುರಣಕ್ಕಾಂ ಪ್ರಣತಿವ್ರತತ್ಯಧಿವಲತ್ಪುಷ್ಪಂಗಳಂ ನೀಳ್ದಪೆಂ:-)

    • ಅತಿ ಸುಂದರ ಪದ್ಯ, ರಮಣೀಯ ಕಲ್ಪನೆ

  5. ದಿನಪತಿಯಸ್ತಾಚಲದ-
    ತ್ತನುವಾಗೆ ಮುಳುಂಗಲೆಂದು; ಮುಕ್ತಭರಮೆನಲ್|
    ದಿನಮಿದೊ ಬಾಲನವೊಲ್ ಜೀ-
    ವನದೊಳ್ ಶೈಶಿರವಿನೋದಕೊಮ್ಮೆಲೆ ಪಾಯ್ಗುಂ||

  6. ಕಮಲದಯಿತನೀಗಳ್ ವಾರುಣೀಮಗ್ನನಾದಂ
    ಕ್ರಮದೆ ಜಗಮನೆಲ್ಲಂ ಗೆಲ್ವೆನೆಂದೀ ತಮಿಸ್ರಂ|
    ಭ್ರಮಿಸಿ ಬಳಿಕಮಿಂದೂತ್ಥಾನಮಂ ಚಿಂತಿಸುತ್ತುಂ
    ಕ್ಲಮದೆ ನಿಹತಕಾಂಕ್ಷಂ ನೀರಿನೊಳ್ ಜಾರುತಿರ್ಕುಂ||

  7. ಬಾಲಕನೀತನಾರೊ? ಗುಣ-ರೂಪ-ವಿಶೇಷವಿಚಾರಮೇನೊ? ದಿ-
    ಗ್ಜಾಲಸಮಸ್ತಮಂ ಬೆಳಗುತಿರ್ಪ ದಿನೇಶಮಹಾಪ್ರದೀಪ್ತಿಯಂ|
    ಸೋಲಿಸುವಂದದಿಂದಭಿಮುಖಂಗೊಳಲುಷ್ಣಮಯೂಖಮಾಲಿಯಂ
    ಕ್ಷಾಲಿತನಾಗನೇಂ ಖಲಕಲಂಕದ ಪಂಕದ ಕೃಷ್ಣವರ್ಣದಿಂ?

    • ನನಗಾದರೋ ಈ ಚಿತ್ರದಿಂದ ಕಲ್ಪನೆ ಗರಿಗೆದರುತ್ತಿಲ್ಲ. ಇದಕ್ಕೆ ನಿಮ್ಮೀ ಪದ್ಯವು ಅಂಥಿಂಥ ಅಪವಾದವಲ್ಲ. ಸೂರ್ಯನನ್ನೇ compete ಮಾಡಹೊರಟಿದ್ದಾನೆ ಎಂಬಲ್ಲಿಗೆ ನಿಂತುಹೋಯಿತು ನನ್ನ ಕಲ್ಪನೆ.

      • ನಿಮ್ಮ ಹಾರ್ದಿಕವಾದ ಮೆಚುಗೆಗೆ ತುಂಬ ಧನ್ಯವಾದ ಪ್ರಸಾದು; ನಿಜ, ಈ ಚಿತ್ರಕ್ಕೆ ಕಲ್ಪನೆಗಳನ್ನು ಹೂಡಿ ಪದ್ಯಕೃಷಿಯನ್ನು ಮಾಡುವುದು ಸ್ವಲ್ಪ ಕಷ್ಟವೇ ಹೌದು.

  8. ಶಾಲೆಯೊಳ್ ಪಾಠಮಂ ಕಲಿಯುವೆವು ಮೊದಲಿಗಾ-
    ಮೇಲೊಡ್ಡಿಕೊಂಬೆವು ಪರೀಕ್ಷೆಗಂ ನಾಂ|
    ಈ ಲೋಕಜೀವನದೆ ಮೊದಲು ನಿಕಷಂ ಗಡಾ-
    ಮೇಲಲ್ತೆ ಕಲಿಯುವೆವು ಪಾಠಮನ್ನುಂ||

    • ಚಿತ್ರಕ್ಕಿದೆ೦ತು ಸಲ್ಲುವುದು ರ೦ಪರೆ?

      • ಸsರಿಯಾಗಿ ಉತ್ತರಿಸುತ್ತೇನೆ ನೋಡಿ!
        ಆ ಚಿತ್ರದ ಮೇಲೆ ರೈಟ್‍ಕ್ಲಿಕ್ ಮಾಡಿ. Search Google for this imageನ್ನು ಕ್ಲಿಕ್ ಮಾಡಿ. ಅಲ್ಲಿನ ಮೊದಲನೆ ಸರ್ಚ್ ರಿಸಲ್ಟ್ ಕ್ಲಿಕ್ ಮಾಡಿ (ಒಂಟಿಚಿತ್ರ). ಬೆರಗುಗೊಳ್ಳದೆ ಬೇಸರಿಸದೆ ಮೌಸ್ ಉರುಳಿಸಿ – 960×720 ಸೀರೀಸ್‍ನ ಎರಡನೆ ಚಿತ್ರದವರೆಗೆ. ಅಲ್ಲಿನ ಬರೆವಣಿಗೆಯನ್ನು ನೋಡಿ. ಅದನ್ನು ಅನುವಾದ ಮಾಡಿ. ಅಷ್ಟೆ!
        ಸೋಮ ಕಾಣದ್ದನ್ನು ರಂಪ ಕಂಡ 😀

        • ಅಕ್ಕಟಕಟಾ… ಕಬ್ಬಿಗರ ಕಾವನದಾವನೋ ಕಾವನಪ್ಪನೋ ಕಾವನ ಸುಟ್ಟವನೋ ಮೇಣ್ ಖಾವ೦ದ ಔರ೦ಗಜೇಬನೋ!!

  9. ರವಿಯಸ್ತಮನೈಯಲ್ಕಿದೊ
    ಕವಿಯಲ್ ಮೊದಲಾಗೆ ಕತ್ತಲೆಯು ತಾನಾಗಳ್
    ಜವದಿ೦ ನಿದ್ರೆಯಿನೆದ್ದು ತ-
    ನುವನದ್ದಿದನೇ೦ ಸರಿಜ್ಜಲದೊಳು೦ ಮೀಯಲ್?!

    ಹ್ಮ! ಬರೆದಾದ ಮೇಲೆ ನೋಡಿದೆ, ಈಗಾಗಲೇ ಗಣೇಶ್ ಸರ್ ಕತ್ತಲೆಯನ್ನು personify ಮಾಡಿರುವುದನ್ನು 🙁

    • ಪಶ್ಚಾತ್ತಾಪವನ್ನು ಸಕ್ರಮಗೊಳಿಸಲಾಗಿದೆ 🙂

      • ಪಶ್ಚಾತ್ಪದ್ಯವನ್ನು ಸಕ್ರಮಗೊಳಿಸಿದ್ದೀರ?

      • ರವಿಯಸ್ತಸಂಧ್ಯೆಯೊಳಗುಂ
        ಜವದಿಂ ಗಡಿಬಿಡಿಯಿನೇಳುವನ್ನೇನೆಂಬೆಂ!
        ಕವಿಯಲ್ ಕಳ್ತಳೆಯಾಗಳ್
        ತವೆ ಪೊರಮಟ್ಟವನುಲೂಕದಾಯದನೆಂಬೆಂ|| 🙂

  10. ಜ್ಞಾನಸೂರ್ಯನಿರುವ ಆಗಸಕ್ಕೆ ಜಿಗಿಯುವುದು ಕಷ್ಟ. ಆದರೆ ಮಾಯೆಯೆಂಬ ಗುರುತ್ವಾಕರ್ಷಣ ಶಕ್ತಿಯ ಬಲದಿಂದ ಅಜ್ಞಾನತಿಮಿರದ ಕಾಸಾರಕ್ಕೆ ಜಿಗಿಯುವುದು ಸುಲಭ. ಚಿತ್ರದಲ್ಲಿರುವ ಮಾನವನು ತಿಮಿರೋನ್ಮುಖನಾಗಿ, ಜ್ಞಾನವಿಮುಖನಾಗಿರುವ ಕಾರಣ, ಆತನು ಕಪ್ಪು ಛಾಯೆಯಂತೆ ಕಂಡುಬರುತ್ತಿರುವನು…

    ಭಳಿರೇ ಮಾಯೆ ಭವತ್ಪ್ರಚೋದನೆಗಮಿಂತೊರ್ವಂ ಸುಮುಗ್ಧಂ ಕಿಡಲ್
    ಪೊಳೆಯಂ ಪೊಂಬೊಳೆಯೆನ್ನುತಜ್ಞನೊಲಲಾ ಧೀಭಾನ್ವಧೋದಿಗ್ಗಮಂ
    ಕಳೆಯುತ್ತುಂ ಸುವಿವೇಕಮಂ ಜವದಿನಾ ಕಾಸಾರದೊಳ್ ಬೀಳ್ದಪಂ
    ಮುಳುಗಲ್ ಪೋಪನ ವರ್ಣಮಿಂತದರಿನಾ ಕಾರ್ಮೋಡದೊಲ್ ತೋರ್ದುದಯ್

    • ಆಹಾ! ಮೌರ್ಯಾ! ಒಳ್ಳೆಯ ಕಲ್ಪನೆಯುಳ್ಳ ವೇದಾಂತಕವಿತೆಯನ್ನೇ ರಚಿಸಿದ್ದೀಯ; ಅಭಿನಂದನೆಗಳು. ಶೈಲಿಯೂ ಚೆನ್ನಾಗಿದೆ. ಆದರೆ ಕಡೆಯ ಸಾಲಿನಲ್ಲಿ ಕಾರ್ಮೋಡದವೊಲ್ ಎಂದರೆ ಹಳಗನ್ನಡದ ವ್ಯಾಕರಣಕ್ಕೆ ಯುಕ್ತ. ಆಗ ಛಂದಸ್ಸು ಕೆಡುವುದು. ಹೀಗಾಗಿ ಕಾರ್ಮೋಡದಂತಾದನಯ್ ಎನ್ನಬಹುದು.

      • ಧನ್ಯೋಸ್ಮಿ…ನಾನಿಲ್ಲಿ ಮನುಷ್ಯನ ವರ್ಣವನ್ನು ಕುರಿತು ಹೇಳುತ್ತಿರುವುದರಿಂದ “ಕಾರ್ಮೋಡದಂತಾದನಯ್” ಬದಲು “ಕಾರ್ಮೋಡದಂತಾದುದಯ್” ಎಂದು ಸವರಿಸಬೇಕಿದೆ..

  11. ತಾನಿತ್ತುದೀ ದಿನ೦ ಗಡ
    ಹಾನಿಯೊಳಾದುದೆಲೆ ಜನರರಿಯರಲ ಕೊಳ್ಳಲ್
    ಮೇಣಿದರ ಲಾಭಮ೦, ಬಲು-
    ಹೇನೀ ಕತ್ತಲನೆ ನು೦ಗಿರಲ್ಕೆನಲುಗಿದ೦

    • ಆ silhouetteನ್ನು ನಿಶಾಪ್ರತೀಕವಾಗಿಸಿ, ಸೂರ್ಯನಿಂದ ಆಡಿಸಿದ ಮಾತು ಚೆನ್ನಾಗಿದೆ.

      • ಧನ್ಯವಾದಗಳು ಪ್ರಸಾದ ಸರ್! ಇಷ್ಟೆಲ್ಲ ನೈಘ೦ಟಿಕ ವ್ಯಾಯಾಮ ಮಾಡುವ ನೀವು ನಿಮ್ಮ ಸಿಲುಹೊಟ್ಟೆಗೊ೦ದು ದೇಸೀ ಪದವನ್ನೇಕೆ ಹುಡುಕಿಲ್ಲ? 🙂

        • ಅದಕ್ಕೆ ಮುನ್ನ ನಿಘಂಟನ್ನು ಹುಡುಕಬೇಕಲ್ಲ! ಆಲಸ್ಯ…

  12. ದಿನನಿತ್ಯಂ ಪೊಸಕಾಂತಿಯಂ ಸುಭಗದಿಂ ತಾಚೆಲ್ಲುತುಂ ನೇಸರಂ
    ಇನಸರ್ವೋತ್ತಮನೆಂಬ ನಾಮದಿನೆ ಬಲ್ ಲೋಕಾದರಂ ಪೊಂದಿರಲ್
    ಘನನಾಥಂ ಸಲೆ ತಾಳ್ದನೇಮೊಡಲಿನೊಳ್ ಮಾತ್ಸರ್ಯಮಂ ಖೇದಮಂ ?
    ಮನಸಾ ಸ್ಪರ್ಧೆಯನೊಡ್ಡುತುಂ ಕರೆದನೇಂ ತದ್ರೂಪದೀ ಶಕ್ತಿಯಂ ?

    (ಸ್ಪರ್ಧೆಗೆ ಇಳಿದು ಮೋಡವು (ಸೂರ್ಯನೊಂದಿಗೆ), ಅವನು ಕಾಂತಿಯನ್ನು ಬೀರಿದಂತೆ….)

    • ಕಲ್ಪನೆ ಚೆನ್ನಾಗಿದೆ. ಆದರೆ ಸ್ವಲ್ಪ ಶೈಲಿಯಲ್ಲಿ ಸುಧಾರಣೆ ಬೇಕು:-)

      • 🙂 ಧನ್ಯವಾದಗಳು , ಮರಳಿ ಯತ್ನಿಸಿದ್ದೇನೆ.

        ದಿನನಿಚ್ಚಂ ಪೊಸಕಾಂತಿಯಿಂದಲಿಳೆಯಂ ಪ್ರೋದ್ಭಾಸಿಪಂ ಸೂರ್ಯನೆಂ
        ದೆನುತುಂ ಪೊಂದಿರೆ ಕೀರ್ತಿಯಂ ವಹಿಲದೊಳ್ ಬೇರಾರ್ಗು ಮುಂ ಸಲ್ಲದಾ|
        ಯೆನಗಿಂ ಶ್ರೇಷ್ಠರದಿಲ್ಲಮೆಂದು ಬಗೆದಾ ಮಾತ್ಸರ್ಯಪೂತಂ ಘನಂ
        ಮನಸಾ ಸ್ಪರ್ಧೆಯನೊಡ್ಡುತುಂ ಕರೆದನೇಂ ತದ್ರೂಪದೀ ಶಕ್ತಿಯಂ?||

  13. ಬೆಂಗದಿರನೊಳಿರ್ದಹಮಿಕೆ
    ಯುಂ ಗೀಳಂ ತ್ಯಜಿಸಿ ,ತೊರೆದು ಪೋದೊಡನಾತಂ
    ಭಂಗರಹಿತಪ್ರಕಾಶದೆ
    ಕಂಗೊಳಿಸಿದನೇಂ ಮಹಾಮಹಿಮೆಯಿಂ ಮಹಿಯೊಳ್ ?

  14. ಆ ದಿನದ ಮಟ್ಟಿಗೆ ಜಗದ ಎಲ್ಲ ಕತ್ತಲೆಯನ್ನೂ ಕಳೆದು ಕೃತಾರ್ಥತೆಯ ಭಾವದಿಂದ ನಿವೃತ್ತನಾಗಲಿದ್ದ ಸೂರ್ಯನಿಗೆ ಸವಾಲಾಗುವಂತೆ ಮಾನವನು ತನ್ನ ತಲೆಕೆಳಗಾದ ಮೌಲ್ಯಗಳ ಕಾರಣ ತನ್ನಂತರಂಗದ ಕತ್ತಲಿನ ಮೂಲಕ ಸಡ್ಡುಹೊಡೆಯುತ್ತಿದ್ದಾನೆಂಬ ಕಲ್ಪನೆಯ ಪದ್ಯವಿಲ್ಲಿದೆ:
    ಜಗದ ಕಳ್ತಲ ಶೂನ್ಯಮಂ ಕಾಂತಿಸೃಷ್ಟಿಯಿಂ
    ತುಂಬಿದೆಂ ತಾನೆಂಬ ತೋಷದಿಂದಂ
    ಜಗದ ಕಳ್ತಲ ಖಳರ್ ಕಳೆಯೆ ಜೀವಕ್ಷೇಮ-
    ದಮಲದೀಪ್ತಿಯು ಪರ್ಬಿತೆಂಬ ನಲವಿಂ
    ಜಗದ ಕಳ್ತಲ ಕಾಲಕೂಟಮಂ ಪೀರ್ದೆನೆಂ-
    ಬುದಯಾನುಬದ್ಧಸಂಮೋದದಿಂದ

    ಅಂದಿನಂದಿನಾರಂಭದಿಂ ಪಿಂದೆ ಸರಿವ
    ಕಮಲಬಂಧುವಂ ಸ್ವೀಯತಿರ್ಯಕ್ಪ್ರತಿಷ್ಠ-
    ಮೌಲ್ಯಲೌಲ್ಯದಿಂ ಮಾನವಂ ಸರ್ವತಿಮಿರಂ
    ಗೇಲಿಗಯ್ವವೊಲ್ ತೋರ್ಕುಮೀ ನಿತ್ಯಚಿತ್ರಂ||

    • ಮನ್ನಿಸಬೇಕು, ಈ ಸೀಸಪದ್ಯದ ನಾಲ್ಕನೆಯ ಸಾಲು ಅದು ಹೇಗೆಯೋ ಟಂಕನಾವಧಿಯಲ್ಲಿ ಅದೃಶ್ಯವಾದ ಕಾರಣ ಇಲ್ಲಿ ಮತ್ತೆ ಪೋಣಿಸುತ್ತಿದ್ದೇನೆ:

      ಜಗದ ಕಳ್ತಲ ಮಹಾಕ್ಷಾಮಮಂ ರುಚಿವೃಷ್ಟಿ-
      ಭರದಿಂದೆ ನೂಂಕಿದಾನಂದದೊಲವಿಂ

      • ಎಂಗೋನೆ ಪದ್ಯsವ ರಂಗsನರ್ಥೈಸಿದ್ದ
        ಪಾಂಗಿಂದಲೀಗ ಬೆಳ್ಸ್ಬುಟ್ರಿ| ಮದ್ಲಿಂದ
        (meaning)ಲಿಂಗವನರಸಬೇಕ್ರಯ್ಯೊ!! 😀

      • ಸೀಸಪದ್ಯದಿಂದ ಸರಸತಿಯೆ ತೋಷಿಪಳ್
        ಭಾಸುರತೆಯಿನಾಯ್ತು ಪೊನ್ನ ಮಕುಟಂ|

  15. ಕಾಳಮಹೋರಗ೦ ತಿರೆಯನಿ೦ತಿರೆ ತೆಕ್ಕಯಿಸುತ್ತುಮಿರ್ಪುದೇ೦
    ಖೂಳ ನಿಶಾಸುರ೦ ಗಡ ದಿವಾಕರನ೦ ಮುರಿದಿಕ್ಕಿ, ಲೋಗರೈ
    ಬಾಳುಗೆಡಲ್, ಜನಕ್ಕಭಯಮ೦ ಕುಡುತಿರ್ದವತಾರದಾಳ್ದನೇ೦
    ಕಾಳಿಯಮರ್ದನ೦ ಮಗುದೆ ಕೃಷ್ಣನಿವ೦ ಪುಗುತು೦ ಪ್ರವಾಹಮ೦

  16. ತಿರೆಯನಾವರಿಸಲ್ಕೆ ತಿಮಿರಾ-
    ವರಣದುತ್ಕಟಭಯಮದೇನೆ೦-
    ದೊರೆವೆನಾನಾ ಪಗಲದೊರೆ ತಾ೦ ಬಸವಳಿದು ಬೀಳಲ್
    ನರಮೃಗಖಗಾಳಿ ನಿಜದಿರವ೦
    ಮರೆದು ಸರಿಯಲ್ ಕತ್ತಲೆಯ ಗ-
    ಹ್ವರದೊಳು೦, ನಿತ್ಯಪ್ರಳಯಕಾಲಾ೦ತಕನೆರಗಿದ೦

    ರಾತ್ರಿ ಎ೦ಬುದು ನಿತ್ಯಪ್ರಳಯದ೦ತೆ…

  17. (ಹಾರೈಸಿ ಹಾರೈಸಿ ಹಾರಿತ್ತು ನೀರಧಿಯ ಮೀನು… ಇದರಿ೦ದಿಷ್ಟು ಸ್ಫೂರ್ತಿ ಪಡೆದು) ಜೀವವಿಕಾಸಕ್ಕೆ ರವಿ ಸಾಕ್ಷಿಯಾಗಿದ್ದಾನೆ ಎ೦ಬರ್ಥದಲ್ಲಿ..

    ಪಾರುತ್ತು೦ ಖಗಮಾದುದೈ, ಜಲಚರ೦ ಹಾರೈಸಿ ತಾನಾದಿಯೊಳ್,
    ಪೂರೈಸುತ್ತೆ ಕರೋರುರೂಪಮನೆ ಮೇಣ್ ಪಕ್ಷದ್ವಯ೦, ಭೂಚರ೦,
    ಹೋರುತ್ತು೦ ಕಲಿತಿರ್ದಪ೦ ನಡೆಯಲು೦ ಮೇಣೀಸಲು೦ ಪಾರಲು೦
    ಸಾರುತ್ತು೦ ಜಗದೀ ವಿಕಾಸಮನೆ ತಾ೦ ಸಾರ್ದ೦ ಜಗತ್ಸಾಕ್ಷಿ ಕಾಣ್

  18. ಅಡುತ ನಾ ಮರಕೋತಿಯ
    ದೂಡಲ್ ಕೆಳೆಯರ್ ದಢಾರ ಬೀಳ್ವುದ ಕಂಡುಂ |
    ಪಾಡಂ ಬರೆಯುತ್ತಿಹ ಕಾ –
    ಪಾಡಲ್ಕಿರದಿರ್ಪ ಕೈ ಕೊಡುವ ಕಲ್ಪನೆಯೇಂ?

    ಬೀಳುತ್ತಿಹ ಹುಡುಗನ ಸಂಕಟ.

  19. ಹಾರಿದನಲಾ ಹನುಮ ತಾನ೦-
    ದೋರೆಗಣ್ಣಿಲೆ ಹಣ್ಣಿದೆ೦ದಾ
    ಮೋರೆಗೆ೦ಪಿನ ಸೂರ್ಯನ೦ ಕ೦ಡೊಮ್ಮೆಲೆ ಗಗನದೊಳ್
    ಬೀರಿದ೦ ವಜ್ರಮನೆ ಸುರಪ೦
    ತೀರಿಸಲ್ಕೆನೆ ಸೇಡನಿ೦ದು೦
    ಸಾರುವ೦ ಗಗನಕ್ಕೆ ವಾನರಜಾತನೀ ನರನು೦

    • ಪಗೆಯಿನಿಂ ಭೂಮಿಯೊಳ ನೀರಿಗೆ
      ಜಿಗಿವನೀತನುಮಿಂತು ಗಗನಕೆ
      ಪುಗುವನೆಂಬೆಯೊ ಮುಳುಗಿ ನೀರೊಳ-
      ಗೊಗೆದು ಘಟವನು ಚಣದೊಳೆ|

      • ಸ್ವಲ್ಪ ದೂರದಿ೦ದ ನೋಡಿ, ಜಿಗಿದ ಮ೦ಗನ೦ತೆ ಕಾಣುತ್ತಾನಾತ..

  20. ಬೆಳಕಿನ ಲೋಕಕ್ಕೆ ತರೆದುಕೊ೦ಡಿರುವ ಕಿ೦ಡಿಯ೦ತಿರ್ಪಾದಿತ್ಯಮ೦ಡಲಮ೦ ಗ್ರಹಿಸಿ…

    ಇದೆಯೇ೦ ದಿವಾನಗರಿಗ೦
    ಪದವಿರಿಸಲ್ ಬಾಗಿಲೀತನೇ೦ ಕೌಶಿಕನೊ-
    ಪ್ಪಿದವ೦ ತ್ರಿಶ೦ಕು, ಮೇಣ್ ನೂ೦-
    ಕಿದರೇ೦ ಧರೆಗೀತನ೦ ದಿವಿಜನರ್ ದಿವಿಯಿ೦

    ಬಹುವರ್ಣದಿ೦ದತಿವಿಚಿ-
    ತ್ರಹಾಟಕಾವರಣದಿ೦ದೆಣೆಯಿರದ ಸೌ೦ದ-
    ರ್ಯಹಿತಮನೀವುದುಮಿದೆಯೇ೦
    ಮಹರ್ಷಿ ಸೃಜಿಸಿರ್ದುದಾ ತ್ರಿಶ೦ಕು ಸ್ವರ್ಗ೦!

  21. ವಿಸ್ತರಸೃಷ್ಠಿಯು ತಾಳಿದ ಚಂದಂ
    ದುಸ್ತರ ಕಾಣಲು ನಿಂತೆಡೆಯೆಂದಂ
    ಮಸ್ತಕವೇರುವ ವಾಂಛೆಯ ಮಿಂದಂ
    ಹಸ್ತವ ಚಾಚುತೆ ಖೇಚರನಾದಂ!!

  22. ಕಾಷಾಯವಸನವೆಸೆದಾ-
    ಕಾಶದೆ ಮೈಮರೆದ ಭಂಗಿಯ ದಿಗಂಬರ ಸಂ-
    ಕಾಶಂ, ಜರುಗಿದುದಿಂತವ-
    ಕಾಶಂ ಮೈದಳೆದುದಂದದೆ ದಿಗಂಬರದೊಳ್ ।।

  23. ಅಕ್ಷಯಾಮೃತ ಕಾಂತಿಯಂ ಹೊರ ಸೂಸುತುಂ ಘನನೇಸರಂ
    ವೃಕ್ಷ ಜೀವಿಗಳೇಳ್ಗೆಗಂ ಹೆಗಲೀಯುವಂ ಹೊಳೆಗಾಳಿಗಂ
    ದಕ್ಷನೆನ್ನುತೆ ಕೊರ್ಬಿನಿಂ ಪರಿದಾಡುವೀ ಹುಲುಮಾನುಷಂ
    ಮಕ್ಷಿಕಂ ಸುರಸೃಷ್ಠಿಯೊಳ್ ಗರಿ ಬಿಚ್ಚಲೇಂ! ಗಿರಿ ಸುತ್ತಲೇಂ !!

    • Ahaa, so nicely put, Kanchana madam!! Couple of points –
      nadinaalegam – arisamasa, we can use poLehaLLakam. Or naala is sanskrit?
      giri suttalEm – more appropriate to use is “giriyEralem”
      hulumaanavam is also arisamasa. Can we make it hulumaaNusam?

  24. ಪಾ೦ಡವರ್ಗಲ ಧೀರೋದಾತ್ತ-ಕಲ್ಯಾಣ-ಗುಣ-ಕರ್ಮಾಲ೦ಕೃತ ಪುರುಷೋತ್ತಮ ಕೃಷ್ಣ ತಾ೦ ಜೊತೆಯಾಗಿರಲ್, ದುರ್ಯೋಧನ೦ಗಕಟ ನಿಜೋಪಾತ್ತ ಪಾಪಕರ್ಮಫಲಕಲ೦ಕಿತ ಕೃಷ್ಣಪುರುಷನ ಜೊತೆಯಾಗಿರ್ಪುದು!

    ಬಳಿವ೦ದ೦ ನಳಿನಾಪ್ತನಸ್ತಗಿರಿಗ೦ ಕು೦ತೀಸುತರ್ ಸಾರ್ದಪರ್
    ಕೊಳಮ೦, ತಕ್ಕುದಿದಲ್ಲವಯ್ ಕುರುಪಗ೦, ಕೃಷ್ಣಾಶ್ರಿತರ್ ವೈರಿಗಳ್,
    ಬಳಿಯಿರ್ಪೆ೦ ಗಡ ಕಷ್ಟಕಾಲದೊಳೆ ನಾ೦ ಮತ್ತೋರ್ವ ಕೃಷ್ಣ೦ ವಲ೦
    ಸಲೆ ದುರ್ಯೋಧನನಿ೦ಗೆ, ಪಾಲಿಸಿದಪ೦ ಜನ್ಮಾದಿಯಿ೦ದೆನ್ನನು೦

    ಬಗೆದಿ೦ತು೦ ಪಾಪಪುರುಷ-
    ನೊಗೆದ೦ ನಿಜದೇಹಮ೦ ಸರೋವರದೊಳಗ೦
    ಹಗೆಗಳ್ಗೆಡೆಯಾಗದವೊಲ-
    ಡಗಿರ್ದ ಖಳನ೦ ವಿಕಾರಮನನ೦ ಕೂಡಲ್

    ಆ ಪುರುಷೋತ್ತಮ೦ ತರಿತತಾಪಪಯಾರ್ಣವನು೦ ಭಯಾಪಹ೦
    ಪಾಪಕುಲಾ೦ತಕ೦ ಕೆಳೆಯು ಕೃಷ್ಣನಿರಲ್ ಸಲೆ ಪಾ೦ಡವರ್ಗಲಾ
    ಕಾಪುರುಷ೦ಗೆ ಪಾಪಪುರುಷ೦ ನಿಜಕರ್ಮಸಮುದ್ಭವ೦ ಕಲ೦-
    ಕೋಪಮರೂಪಿ ಕೃಷ್ಣತನುವು೦ ಜೊತೆಯೇ೦ ಗಡ ವೈಪರೀತ್ಯಮಯ್

    • ನಿಮ್ಮ ಈ ಎಲ್ಲ ಪದ್ಯಗಳ ಗುಣ-ಗಾತ್ರಬಾಹುಳ್ಯವು ನಿಜಕ್ಕೂ ಮೆಚ್ಚುಗೆಯ ಬೆರಗನ್ನು ತರುತ್ತಿವೆ. ಕಲ್ಪನೆ ಮತ್ತು ಭಾಷೆಗಳೆರಡರಲ್ಲಿಯೂ ಆಭಿಜಾತ್ಯದ ಸೊಗಸು ಇಣಿಕಿದೆ.
      ಆದರೆ ಅಲ್ಲಲ್ಲಿ ಹೊಂಚುವ ಹೊಸಗನ್ನಡದ ಹಾಗೂ ವ್ಯಾಕರಣಶುದ್ಧವಲ್ಲದ ರೂಪಗಳನ್ನು ನೀವು ದಯಮಾಡಿ ಸವರಿಸಿಕೊಳ್ಳಬೇಕು.
      ಉದಾ: “………..ತರಿತ-ತಾಪ-ಪಯಾರ್ಣವ……..” ಎಂಬುದು
      “……………..ತೀರ್ಣ-ತಾಪ-ಪಯೋsರ್ಣವ………………..” ಎಂದಾಗಬೇಕು.
      ಇಂಥ ಮತ್ತೂ ಹಲವನ್ನು ಮುಖತಃ ವಿವರಿಸುವೆನು.

      • ಧನ್ಯ೦ ನಾ೦ ‘ಗುಣ’ಗಾತ್ರಯುಗ್ಮಪದಮ೦ ಕಾಣಲ್ ಭವಲ್ಲೇಖದೊಳ್
        ಮಾನ್ಯ೦ ಮೇಣೆನಗ೦ ಭವದ್ವಚನದೊಳ್ ಪ್ರತ್ಯಕ್ಷರ೦ ಪಥ್ಯದಿ೦

  25. ಓಹೋ… ಸೀಸಪದ್ಯವನ್ನು ಮರೆತೇ ಬಿಟ್ಟಿದ್ದೆ 🙂

    ತಲೆಯ ಮೇಗಡೆ ಕಾಲು ಕೆಳಗೆ ಕಾಂಬುದು ಬಾಹು
    ನೆಲನೆಡೆಗೆ ಬರುತಿರ್ಪ ಪರಿಯದೇನೋ
    ಕಳೆಯೆ ಪೂರ್ವಾರ್ಜಿತಫಲಂಗಳೀ ಭವದೆಡೆಗೆ
    ಮತ್ತೆ ಬರುತಿರ್ಪ ಜೀವಾತ್ಮನೇನೋ!
    ಪೊಳೆವ ಪೊಳೆಯಾದರ್ಶದಂದದಿಂ ತೋರ್ದುದೆಂ
    ದದರ ಮೂಲಕೆ ಪೋಪ ಬಯಕೆಯೇನೋ
    ಆ ತಿರೋಗಮನದಿಂ ನಿಜಜೀವನಮನಂತು
    ಕಿಡಿಸಿಕೊಳುತಿರ್ಪ ಪ್ರತೀಕಮೇನೋ!

    ಇಂತು ತೆರತೆರದ ಘಟನೆಗಳ್ ಭೂತಲದೆ ದಲ್
    ಸಾಗುತಿರ್ದತ್ತು ದಿನಮುಮೆಂತುಟೊ ವಿಚಿತ್ರಂ
    ಕಂಡುಮೆಲ್ಲಮಂ ಸಾಗುತಿರ್ಪಂ ದಿನಕರಂ
    ಜಗದ ಸರ್ವಸ್ವಕಾಗುತ್ತೆ ಸಾಕ್ಷಿಮಾತ್ರಂ||

    • ಏನತ್ಯದ್ಭುತಭೂತಭಾವನವಿಲಾಸ೦ ತೋರ್ದುದಯ್ ಪದ್ಯದೊಳ್
      ಮೇಣನ್ಯರ್ಗಿದು ಭಾವಿಸಲ್ ಸುಲಭಮೇನ್ ಭಟ್ಟರ್ಗೆ ಸ೦ದ೦ತೆವೊಲ್
      ಕಾಣುತ್ತು೦ ಗಡ ಭೂತಭವ್ಯರನೆ ಮೇಣೀ ವರ್ತಮಾನಾದ್ಯರ೦
      ತಾನಿ೦ತು೦ ಪದಪಾದಪದ್ಯಗಳನು೦ ನೈವೇದ್ಯಮೆ೦ದರ್ಪಿಪ೦

  26. ಸೆರೆಪಿಡಿಯಲ್ ಪ್ರಕೃತಿಯ
    ಚ್ಚರಿಯಂ ಮೂಡಿಸುವ ಚಿತ್ರದೊಳ್ ಮರೆಯಿಂದಂ
    ಮೆರುಗಂ ಪೆರ್ಚಿಪುದಕ್ಕಂ
    ತೆರೆಯೊಳ್ ಸೇರಲ್ಕೆ ಪಾರಿದುತ್ಕರ್ಷಮಿದೈ

    Idea: to better the beuty of a photographer’s Click this Guy jumps In time to get captured in this nature photography.. not sure if am able to depict the whole idea in this padya…

  27. ಆಕಾಶಂ ತೊಳಗಿರ್ಕು ಸೂರ್ಯನೆಸಕಂ ರಮ್ಯಾತಿರಮ್ಯಂ ಗಡಾ
    ಲೋಕಂಗೊಂಡುದು ಶುದ್ಧವಾಯುಸುಳಿವಿಂದಾನಂದದಸ್ಥಾನಮೈ
    ಸಾಕಾರಂಗೊಳೆ ತಾಯ ಹಚ್ಚ ಮಡಿಲುಂ ನೀರಾಡಿರಲ್ ನಿರ್ಮಲಂ
    ನಾಕಂ ತೋರ್ಗು ವಿಶುದ್ಧಭೂತದೊಡಲಂ ಸೋಂಕಲ್ಕೆ ಭೂತೋದ್ಭವಂ

    [ಪಂಚಭೂತಗಳಿಂದ ಉದ್ಭವನಾದವನು (ಮಾನವನು) ಆ ಭೂತಗಳ (ಅಗ್ನಿ – ಸೂರ್ಯ; ಆಕಾಶ; ವಾಯು; ಜಲ; ಭೂಮಿ) ಪರಿಶುದ್ಧತೆಯನ್ನು ಸೋಂಕಿದಾದ ಸ್ವರ್ಗವನ್ನು ಕಾಣುವನು ಎಂಬ ಭಾವ]

    • Ramachandra sir, so nice picture!! Whereas, third line is missing the chhandas – praakaaram bhootaaya…
      I am feeling like my soul is touching all the bhootas and am in heaven, while I read your poem and look at the picture 🙂

      • ಪ್ರಿಯ ನೀಲಕಂಠರೆ, ಛಂದಸ್ಸಿನ ಲೋಪವನ್ನು ತೋರಿದ್ದಕ್ಕೆ ಧನ್ಯವಾದ. ಸರಿಪಡಿಸಿದ್ದೇನೆ. ಹಾಗೆಯೇ ಮೆಚ್ಚುಗೆಗೆ ಧನ್ಯವಾದ.

  28. || ನರ್ದಟಕ(ಕನಕಾಬ್ಜನೀಯ)ವೃತ್ತ ||

    ಗಗನದೆ ಪೊನ್ನ ಕಾಂತಿಯುತಭಾಸುರಭಾನುವಿರಲ್,
    ಸೊಗಸಿನ ಬಿಂಬದಿಂ ಪಳದಿವಣ್ಣದೆ ಮಿಂಚಿರೆ ನೀರ್,|
    ಬಗೆಯಿಸುತಿರ್ಪ ಮಾನವನ ಸಾಸಮನೀಕ್ಷಿಸುತುಂ,
    ಮಗುವವೊಲೇ ಮರಂಗಳತಿತೋಷಿಸೆ, ಸುಂದರಮೈ ||

    • ಹೊಸಹೊಸ ಛ೦ದಬ೦ಧಗಳನು೦, ವರಸು೦ದರಮಾ-
      ಗೆಸೆಯುವ ಪದ್ಯಪುಷ್ಪಗಳನು೦ ಮಳೆಬೀಳ್ವವೊಲಾ-
      ಗಸದಿನೆ ಪದ್ಯಪಾನವನಕ೦ ಸುರಿಸುತ್ತಿರುವಳ್
      ರಸದೆ ಶಕು೦ತಲಾ ಭಗಿನಿಗ೦ ಸಮನ೦ ನಮನ೦

      • ಶಕುಂತಲಾ ಮತ್ತು ನೀಲಕಂಠರ ಪದ್ಯಗಳೆರಡೂ ಸೊಗಸಾಗಿವೆ. ಈ ವೃತ್ತಕ್ಕೆ ಕೋಕಿಲಕವೆಂದೂ ಹೆಸರಿದೆ. ಹೆಚ್ಚುಕಡಮೆ ನಮ್ಮ ಚಂಪಕಮಾಲೆಯನ್ನಿದು ಹೋಲುತ್ತದೆ. ನೀಲಕಂಠರ ಪದ್ಯದ ಆರಂಭದ “ಹೊಸಹೊಸ” ಎಂಬುದು ಪೊಸಪೊಸ ಎಂದಾದಲ್ಲಿ ಮತ್ತೂ ಒಳಿತು.

        • ಸಹೋದರರೆ, ಧನ್ಯವಾದಗಳು. ಕೋಕಿಲಕವೆಂಬ ಹೆಸರು ತಿಳಿದಿರಲಿಲ್ಲ.ಚಂಪಕಮಾಲೆಯ ಕೊನೆಯ “ನನಾನನಾ”ವನ್ನು ಬಿಟ್ಟರೆ ನರ್ದಟಕವೃತ್ತವಾಗುವುದೆಂದು ನಾನೂ ಗಮನಿಸಿದ್ದೆ.ಹೊಸಹೊಸತಾದ ವೃತ್ತಗಳಲ್ಲಿ ಬರೆಯುವುದು ಆನಂದದಾಯಕವಾದ ಅನುಭವವಾಗಿದೆ.

      • ನೀಲಕಂಠರೆ, ನಿಮ್ಮ ಮೆಚ್ಚಿಗೆಯ ಪದ್ಯಕ್ಕಾಗಿ ಧನ್ಯವಾದಗಳು.

  29. ಭಾವsದs ನಿರ್ಬಂಧs ಜೀವsದs ಸ್ವಚ್ಛಂದs
    ಯಾವs ಕಟ್ಟುಗಳs ಪಾಡಿಲ್ಲs – ದಿರ್ಪಂಗೆs
    ಸಾವs ಸಂಕಟಕೂ ತೆರವಿಲ್ಲs
    [ತೆರವು = leisure, freetime]

  30. ಯಾರಾದರೂ ಹಿರಿಯರು ಸೀಸಪದ್ಯವನ್ನು ರಚಿಸುವ ಕ್ರಮವನ್ನು ತಿಳಿಸಿಕೊಡಬೇಕಾಗಿ ಮನವಿ

    • ಮೋಸವಲಾ ವಿಚಾರಿಸದೆ ಮುನ್ನಮೆ ಚಿಕ್ಕವರೊಳ್, ಹಿರೀಕರ೦
      ಘಾಸಿಗೊಳಿಪ್ಪುದಿ೦ತು, ಪೊಸದರ್ಥದೊಳಾ೦ ಪೊಸಭಾವದೊಳ್ ಮನ-
      ಕ್ಕೀಸು ಸುಸಮ್ಮತ೦ ಗಡಿದೆನಲ್ ನಿಮಗುತ್ತರಮ೦ ಕುಡುತ್ತಿಹೆ೦
      ಸೀಸದ ಕಡ್ಡಿಯಿ೦ ಬರೆದಿರಲ್ ಪೆಸರಪ್ಪುದು ಸೀಸಪದ್ಯಮಯ್

      ಸೀಸ – ಶೀರ್ಷ (ಅಗ್ರಸ್ಥಾನ) ತದ್ಭವ
      ಸೀಸ – lead (an element) – lead (ಧುರೀಣ, ಅಗ್ರಸ್ಥಾನದವನು)
      ಮೇಲಿನೆರಡು ಸಮೀಕರಣಗಳಿ೦ದ ನನ್ನ ವಾಖ್ಯೆಯ ಸಾಧುತ್ವ ಸಿದ್ಧವಾಗುತ್ತದೆ 🙂

      • ಸಾರ್…ನಿಜವಾಗ್ಲೂ ಸೀಸಪದ್ಯರಚನೆಯ ಬಗೆಗೆ ಕೇಳ್ತಿದೀನಿ..ದಾರಿ ತೋರಿಸಿ…ಪ್ಲೀಸ್ !

        • ಪ್ರಿಯ ಮೌರ್ಯ,

          ಸೀಸದ ತ್ರಿಮೂರ್ತಿಗಣೀಯವಾದ ರಚನಾವಿನ್ಯಾಸ ಹೀಗೆ:
          ವಿ, ವಿ, ವಿ, ವಿ, ವಿ, ವಿ, ಬ್ರ, ಬ್ರ ಎಂಬ ವಿನ್ಯಾಸದಲ್ಲಿ ನಾಲ್ಕು ಸಾಲುಗಳು ಹಾಗೂ ಇವುಗಳಿಗೆ ಪರಿಶಿಷ್ಟ(ಶೀರ್ಷಕ)ವೆಂಬಂತೆ
          ಬ್ರ, ಬ್ರ, ಬ್ರ, ವಿ, ವಿ
          ಬ್ರ, ಬ್ರ, ಬ್ರ, ಬ್ರ, ಬ್ರ
          ಎಂಬ ವಿನ್ಯಾಸದ ಸಮ-ವಿಷಮಪಾದಗಳ ಎರಡು ಜೊತೆ ಬರುವಂತೆಯೋ ಅಥವಾ

          ಬ್ರ, ವಿ, ವಿ, ಬ್ರ, ಬ್ರ
          ಎಂಬ ನಾಲ್ಕೂ ಪಾದಗಳ ವಿನ್ಯಾಸವಿರುವಂತೆಯೋ ರೂಪಿಸಿದ ಪದ್ಯವೊಂದು ಸಮರಸವಾಗಿ ಅಂಟಿಕೊಳ್ಳಬೇಕು. ಮೊದಲ ನಿಡಿದಾದ ಸಾಲುಗಳ ರಚನೆಯೇ ಸೀಸಪದ್ಯ. ಬಳಿಕ ಬರುವ ಚಿಕ್ಕ ಚೌಪದಿಯೇ ಎತ್ತುಗೀತಿ. ಇದು ಮೊದಲ ಪ್ರಕಾರದ್ದಾದರೆ ಆಟವೆಲದಿ (ಕುಣಿಯುವ ಕನ್ಯೆ) ಎಂದೂ ಎರಡನೆಯ ಬಗೆಯದಾದರೆ ತೇಟಗೀತಿಯೆಂದೂ (ತಿಳಿಯಾದ ಹಾಡು) ಹೆಸರುಂಟು. ಆದರೆ ವಾಡಿಕೆಯಲ್ಲಿ ಸೀಸ ಮತ್ತು ಎತ್ತುಗೀತಿ ಇವೆರಡೂ ಸೇರಿ ಸೀಸಪದ್ಯ.ಇದನ್ನು ಪೂರ್ಣವಾಗಿ ಮಾತ್ರಾಗಣಬದ್ಧವೆಂಬಂತೆಯೂ ರಚಿಸಬಹುದು. ಆಗ ವಿಷ್ಣುಗಣಗಳೆಲ್ಲ ಪಂಚಮಾತ್ರಾಬದ್ಧವೂ ಬ್ರಹ್ಮಗಣಗಳೆಲ್ಲ ತ್ರಿಮಾತ್ರಾಬದ್ಧವೂ ಆಗುತ್ತವೆ. ಇಲ್ಲಿ ಆದಿಪ್ರಾಸವು ಐಚ್ಛಿಕ. ಆದರೆ ಅನುಪ್ರಾಸ, ವಡಿ, ಯತಿಮೈತ್ರಿ ಮೊದಲಾದುವು ಪದ್ಯಶಿಲ್ಪದೃಷ್ಟಿಯಿಂದ ಅಪೇಕ್ಷಣೀಯ (ಅನಿವಾರ್ಯವೇನಲ್ಲ).

    • (ಹಿರಿಯರು ಮನ್ನಿಸಬೇಕು 🙂 )

    • ಆಡುತ್ತೆ ಪಾಡಲ್ಕೆ ಪಾಡನು೦ ಬರೆಯಲ್ಕೆ
      ಕೈಪಿಡಿದು ಕಲಿಸುತ್ತಲಿರ್ಪರಿವರು
      ಅವಧಾನದಾಟವನು ಮುದದಿ೦ದಲಾಡುತ್ತೆ
      ಮುದವನ್ನೆ ನಮಗೆಲ್ಲ ಕುಡುವರಿವರು
      ನೂರಾರು ಜನರೆಲ್ಲ ಬೆರಗಾಗಿ ಬಾಯ್ದೆಗೆದು
      ಬೆರಳನ್ನಿಡುವರಯ್ಯ ಮೂಗಮೇಲೆ
      ಘನತೆಯೇನೆ೦ಬೆ ಮನದಳತೆಯೇನೆ೦ಬೆ ಕನ-
      ಸಲ್ಲು ಕಲ್ಪಿಸದ ವಿನಯ

      ಇ೦ತಿವರಿರಲ್ಕೆ ಗೋಪಾಲಬಾಲ ಕೃಷ್ಣ-
      ನ೦ತೆ, ಛ೦ದ೦ಗಳೆಲ್ಲ ಗೋವ್ಗಳವೊಲ೦ತೆ,
      ಕು೦ತಿಯ ಕುವರನೊಲೀ ಮೌರ್ಯರ೦ತೆ, ಪಾಲ-
      ನಿ೦ತು ಪೀರ್ದು ನಾ೦ ಸೀಸಮ೦ ಬರೆದೆನ೦ತೆ 🙂

  31. ಅಗೋ ನೋಡು ಸೂರ್ಯಂ ದಶಾಪೂರ್ವದೊಳ್ ತಾಂ
    ಲಗಾಯ್ತಿಂದೆ ಕಾಲಕ್ಕೆ ತಪ್ಪರ್ದೊಲೆದ್ದಂ|
    ಇಗೋ ನಮ್ಮ ಸೂರ್ಯಂ (name) ದಶಾವಂಚಿತಂ (ದಿಕ್ಕುಗಾಣದೆ) ತಾಂ
    ನಿಗೂಢಪ್ರದೇಶಕ್ಕಮೈದೊಮ್ಮೆ ಬಿದ್ದಂ||
    hmm ~ಶಂ~

    • ಇಗೋ ನೋಡು ರ೦ಪ೦ ಮನ೦ಗೊಳ್ಳುತು೦ ತಾ೦ ಸ್ವಪದ್ಯಾ೦ತದೊಳ್ ಹಮ್ಮಿನಿ೦ ಶ೦ಭುವ೦ ಮೇಣ್
      ನಗಾಧೀಶನ೦ ಪಾರ್ವತೀನಾಥನ೦ ಜ್ಞಾಪಿಸಿರ್ದ೦ ಸಲಲ್ ಹೂ೦ಕೃತ೦ ಮತ್ತಮಾ ಶ೦!!

      • hmm ಎಂಬುದು ಹೂಙ್ಕೃತಿಯಲ್ಲ. ಇದಕ್ಕಿಂತ ಒಳ್ಳೆಯ ಪದ್ಯವನ್ನು ಬರೆಯಲಾಗದಲ್ಲ ಎಂಬ ನಿಟ್ಟುಸಿರು. ಶಂ = ಪೂರ್ಣವಿರಾಮ (ಇದೇ ಕೊನೆಯ ಪದ್ಯ). ನೀವು ಹೀಗೆ ಗುಣಾರೋಪಣ ಮಾಡದಿದ್ದರೆ ಈ ಪದ್ಯ ಸಪ್ಪೆಯಾಗುಳಿಯುತ್ತಿತ್ತು:
        ಹಿಂಗಿsವೆಳ್ಡನ್ನೂ ದೈವತ್ವಕ್ಕೇರುಸ್ಬುಟ್ರೆ
        ರಾಯ್ರೆ, ತಮ್ಮಲ್ಲಿ ದೈವತ್ವವೈತೆಯೆಂದು|
        ಸಿದ್ಧವಾಯ್ತಯ್ತೆ ಮಾತ್ರಮೆ ಪದ್ಯವೆನ್ನ-
        ದೇರದೆಂಬೆನು ದೈವತ್ವಕ್ಕಿಂದೂ ಎಂದೂ||

  32. ಭರಿಸಿ ಭರ್ಗನನೆದೆಯ ತಲ್ಪದೆ
    ಪರಮ ನೇಹವ ನಿರುತ ಮಿಡಿಯ
    ಲ್ಪರಿದುದಲ್ತೇ ಪಸುರನಲವೇ ನದಿಗೆ ವರಮಾಗಿ?
    ತರಿದು ನೈಜದ ಭಾವದೊರತೆಯ
    ಶರದವೇಗಕೆ ಶರಣುಪೋಗ
    ಲ್ನರನಿಗಾದುದೆ ಕರಿಯ ಕಂದಕವಿದಿರು ಬದಿರಾಗಿ?

    (ವೇಗದ ಬದುಕಿಗೆ ತಲೆಯೊಡ್ಡಿದ ಇಂದಿನ ಮಾನವ?)

    • ಶರದೋಟಕೆ..
      ಇದಿರು ಬದಿರಾಗಿ… ಅಲ್ಲವೆ?

      • ಇದ್ದಿರಬಹುದು 🙂 ಹೀಗಾಗಿ ಸವರಣೆಯನ್ನು ಮಾಡಿಕೊಂಡಿದ್ದೇನೆ. ಇದಿರು ಮತ್ತು ಎದುರು ಸಮಾನವೆಂದು ತಿಳಿದಿರುವೆ .

  33. स वारिराशिः प्रतिभाति तैलवत्
    शिखॆव सायंतनसूर्यदीधितिः ।
    पतत्यहॊ दीपहुतः पतङ्गवत्
    नरः क्वचिद्दीर्घविलॊमविग्रहः ॥

    The water body appears like the oil and the evening sun appears like the flame of the lamp. The inverted human body falling into the water appears like the falling body of a light-fly which has just immolated itself.

    • रमणीयमिदं नवीनभाव-
      प्रकटं पद्यमहो! दिनात्ययेsपि।
      प्रतिभाति; रवेरिवोद्गतिः किं
      प्रबभूवेति विधोर्मिषेण नूनम्॥

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)