May 112015
 

Mara1

  100 Responses to “ಪದ್ಯಸಪ್ತಾಹ ೧೫೦-೧: ಚಿತ್ರಕ್ಕೆ ಪದ್ಯ”

  1. ದಂಡಪಕ್ಷದ್ವಿತಯನೃತ್ತಹಸ್ತಂಬೊತ್ತು
    ಚಂಡಮೋಹಕಮಪ್ಪತಿಕ್ರಾಂತಮೋ|
    ಪಾಂಡಿತೀವಿಲಸದುದ್ವೃತ್ತಮೊ ಅಲಾತಮೋ
    ತಾಂಡವಿಸೆ ಚಾರಿಯೆನೆ ಕುಣಿದೆಯೇನೌ?
    (ದಂಡಪಕ್ಷ ಎಂಬ ನೃತ್ತಹಸ್ತಕ್ಕೆ ಅತಿಕ್ರಾಂತ, ಅಲಾತ ಮತ್ತು ಉದ್ವೃತ್ತ ಎಂಬ ಮುಬ್ಬಗೆಯ ಆಕಾಶಚಾರಿಗಳನ್ನು ಹೊಂದಿಸಿಕೊಂಡು ಈ ತರುತರುಣಿಯು ಕುಣಿಯತೊಡಗಿದಳೇ?)

    ಸ್ಥಾವರಮೆಂದೋ ಮೋಣ್ ಜಡ-
    ಜೀವನಮೆಂದೋ ಕದರ್ಥಿಸಲ್ ಕೃಪಣಜಗಂ|
    ಭಾವಿಸದೆಯೆ ತವಜಾತಿಯ-
    ನೋ! ವರತರು! ಇಂತು ನರ್ತಿಸಲ್ ಮನಮಾಯ್ತೇಂ?
    (ಎಲ್ಲ ಗಿಡ-ಮರಗಳೂ ಜಡವಾದ ಜೀವರಾಶಿಮಾತ್ರವೆಂಬ ಸಣ್ಣಮನಸ್ಸಿನವರ ಆಕ್ಷೇಪವನ್ನು ಹೀಗೆಳೆಯಲೆಂದು ಈ ತರುತರುಣಿಯು ನರ್ತನಕ್ಕೆ ನೋಂತಳೇ?)

    ತಳಿರ್ಗಳಂ ಮಲರ್ಗಳಂ ತೀವಿ ಸೊಗಮಂ ನೀಳ್ದ-
    ನೆಂದು ವಾಸಂತನಂ ಮೆಚ್ಚಿ ನಚ್ಚಿ
    ಬಾಳ್ತೆಯಂ ತಣ್ಪನುಂ ತುಂಬಿ ನಲಮಂ ನೀಳ್ದ-
    ನೆಂದು ಮೇಣ್ ವರ್ಷನಂ ರಮಿಸಿ ನಮಿಸಿ
    ಕಾಂತಿಯಂ ಭುಕ್ತಿಯಂ ಸಲಿಸಿ ಗೆಲಮಂ ನೀಳ್ದ-
    ನೆಂದು ಮಾರ್ತಂಡನಂ ನೋಂತು ಸೋಲ್ತು
    ಕಲನೆಯಂ ಚಲನೆಯಂ ಕುಡುತೆ ಮುದಮಂ ನೀಳ್ದ-
    ನೆಂದು ಮೇಣ್ ವಾಯುವಂ ಬಗೆದು ಮೊಗೆದು

    ಚುಂಬಿಸಲ್ಕಿಂತು ಮೆಯ್ ಸಾರ್ಚಿ ಕಯ್ಯ ಸಾರ್ಚಿ
    ಮೊಗಮನೆತ್ತಿ ಕಾಲೆತ್ತುತುಂ ಸಂದೆಯೇನೌ
    ತರಲತಾರುಣ್ಯಗಣ್ಯತರುತರುಣಿ! ಮೊದಲಾ
    ಮುತ್ತನೀಯೆಯೇಂ ದ್ಯಾವಾಧರಾದ್ವಿತಯಕಂ?
    (ನಿನಗೆ ಬಗೆಬಗೆಯಲ್ಲಿ ನೆರವಿತ್ತ ವಸಂತ-ವರ್ಷಾ-ಆದಿತ್ಯ-ಮಾರುತರೆಂಬ ನಲ್ಲರಿಗೆ ಮುದ್ದಿಸಲು ಹೀಗೆ ಮೈಚಾಚಿ ಮೊಗವೆತ್ತಿದ ಓ! ತರುತರುಣಿ! ನಿನ್ನ ಮೂಲಾಸ್ತಿತ್ವಕ್ಕೆ ಕಾರಣರಾದ ಬಾನು-ಬುವಿಗಳೆಂಬ ತಂದೆ-ತಾಯ್ಗಳನ್ನು ಮರೆಯದಿರು)

    ನಿತ್ಯಂ ನವೀನಜನಮೋಹನಸರ್ಗಲೀಲಾ-
    ಕೃತ್ಯಂ ತೊಡಂಗೆ ಜಗದೊಳ್ ಕಲಕೇಲಿಯಾರ್ಪಿಂ|
    ಪ್ರತ್ಯಂಗಭಂಗರಮಣೀಯಪಲಾಶಿಯೋಷೇ!
    ಸತ್ಯಂ ಪ್ರಚೋದನವಧೂಪದಮಾಂತೆಯೇನೌ?
    (ಸೃಷ್ಟಿಯೆಂಬ ನಿರಂತರಕ್ರೀಡೆಗೆ cheer girl ಆಗಿ ಸಂದಳೇ ಈ ತರುತರುಣಿ?)

    • ಎಲ್ಲೆಲ್ಲಿಯು ಕೈ ! ಎಲ್ಲೆಲ್ಲಿಯು ಕಾಲ್ !! ಎಲ್ಲೆಲ್ಲಿಯು ಕಣ್ !!! ತಾನಾದ
      ಸತ್- ಚಿತ್- ಶಕ್ತಿಯ ಆನಂದವಿರಲ್ …. ತೃಣಮಪಿ ನಚಲತಿ
      ಧನ್ಯವಾದಗಳು ಗಣೇಶ್ ಸರ್.

    • ಅಹಹಾ! ಮು೦ಚಿನ ಚಿತ್ರಕೆ
      ಮಹಾಲಸೆಯವೊಲೆಸೆದಿರ್ದ ಕವಿತಾರಮೆ ತಾ೦
      ಬಹುಲಛ್ಛ೦ದೋ ಭ೦ಗಿಯ
      ಬಹುಮೋದಮನೀವ ಲಾಸ್ಯವಾಡಿದಳೀಗಳ್!! 🙂

    • ಸೋಮನಂ ಸುಮ್ಮನಾಗಿಸಿ ತಾನು ಮಾಡಿದುದು
      ಸಾಮಿಂದಲದುವೆ ಬೇರೇನುಮಲ್ಲಂ|
      ಗೇಮೆಗವಕಾಶಮಾಗದೊಲು ಪಾನಿಗಳಿಂಗೆ
      ಭೂಮದೀ ಪದ್ಯಗಳ ರಚಿಸಿರ್ಪೆಯೇಂ||

  2. ಮೆರೆದುಂ ತಾಳ್ಮೆಯನಿತ್ತು ಶಾಂತಿ ಸುಖಮಂ ,ಪೆಣ್ಣಾಗಿರಲ್ ಭೂಮಿತಾಂ
    ಪರಿಸಲ್ ಪ್ರೀತಿಯನಾತ್ಮದಿಂದೆ, ನದಿಯೇ ಪೊಣ್ಮಿರ್ದವೋಲಾಕೆಯಿಂ,
    ಪೊರೆಯಲ್ ಕೋಮಲ ಸೌಮ್ಯಭಾವಮವಳ್ ಪುಷ್ಪಾಳಿಮೈದಾಳ್ದವೊಲ್,
    ಹರುಷಂ ಪಚ್ಚೆಯನಾಂತು ದು:ಖಮಳಿಸಲ್ ವೃಕ್ಷಂಗಳೇಂ ಮಾತೆಯೊಳ್!

    (ತಾಳ್ಮೆಯನ್ನು ಮೆರೆದು, ಸುಖಶಾಂತಿಯನಿತ್ತು ಭೂಮಿಯು ಹೆಣ್ಣೇ ಆಗಿರುವಾಗ,(ಆಕೆಯಿಂದ) ಪ್ರೀತಿಯು ಹರಿದು ನದಿಯಾದಂತೆ, ಧರಿಸಿದ ಕೋಮಲ ಭಾವದಿಂದ ಹೂಗಳು ಮೈತಾಳಿದಂತೆ, ಪಚ್ಚೆಯನಪ್ಪಿದ ಹರುಷದಿಂದ ಮರಗಳು ಹುಟ್ಟಿದವೇನು?)

  3. ಮರದ ಮೈವೆತ್ತಿ೦ತು ನರ್ತಿಪ
    ವರಕಲಾರಮೆ ಕಾಣಿವಳ್ ಭಾ-
    ವರಸಮ೦ ಪೀರ್ದೆಳೆಬಿಸಿಲ ಕಲ್ಪನೆಯ ಹೊಳಹುಗಳ
    ಸರಸಿಯೊಳ್ ಮನದಣಿಯೆ ನಲಿದನ-
    ವರತದಭ್ಯಾಸಮದು ಮೈಗೂ-
    ಡಿರಲು ಬೇರೂರಿರ್ದಗಾಧಶ್ರದ್ಧೆದು೦ಬಿರಲು

    ಭಾವವಿಸ್ತರಮಿತ್ತ ಬಹುವಿಪು-
    ಲಾವಕಾಶದ ರ೦ಗಸಜ್ಜಿಕೆ,
    ಜೀವನಾದಕೆ ತೂಗಿ ಹಿಮ್ಮೇಳವದು ಪಾಡುತಿರೆ
    ಭಾವುಕರಸಿಕವೃ೦ದಮೀಕೆಯ-
    ನೀವರೆಗೆ ಬೆಳೆಸಿರ್ದು, ಮೆಲ್ಲುವ-
    ರೈ ವರಫಲದ ರಸ್ಯವನು ಬಹುಮೋದಮನ್ನೀವಾ

    • ಚೇದಿಯಿದೇನಿತ್ತಿಹರೈ?!
      ಚೋದಿಸಿತೇನೀ ವಿಚಿತ್ರ ಸೃಷ್ಟಿವಿಲಾಸ೦
      ಮೋದಾತಿಶಯತುರೀಯದೊ-
      ಳಾದುದೆ ವಾಗ್ಬ೦ಧನ೦, ಬರಿದೆ ಪೂರ್ಣಾ೦ಕ೦?!!

  4. ಆ ಬಿರಿದ ಕ೦ಗಳರೆಹರಿದ ಸೀರೆಯ ರಮಣಿ
    ಗಾಬರಿಯ ನೋಟದಲಿ ಪತಿಯನರಸಿದಳಿಲ್ಲಿ,
    ಆ ಬಸುರಿ ಬಿಸಿಯುಸಿರನೆಳೆಯುತ್ತೆ ಹಮ್ಮೈಸಿಯೊರಗಿರ್ದಳೀಯೆಡೆಯಲ
    ಆ ಬಿಡುಮುಡಿಯ ನಿಟ್ಟುಸಿರ ಕಾ೦ತೆಯೈವರ
    ಕ್ಲೀಬತೆಗಳಲ್ದಳಿಲ್ಲಿಯೆನುತ್ತೆ ನಾರಿಯರ-
    ದೀ ಬವಣೆಗಳ ಕ೦ಡು ತೆಗೆದುಟ್ಟ ಬಟ್ಟೆಯನೆ ತೂರಿ ‘ತರು’ ಕೋಪಿಸಿದಳೇ?!

    ತನ್ನ ಕೆಲಬಲದಲ್ಲಿ ಕ೦ಡ ನಾರಿಯರ ಬವಣೆಗಳಿಗೆ ರೋಸಿಹೋಗಿ ಈ ತರು ಎ೦ಬ ಹೆಣ್ಣು ತಾನುಟ್ಟ ಬಟ್ಟೆಯನ್ನೇ (ಹಸಿರು ಸೀರೆ, ಕೈಗಳಲ್ಲಿ ಎತ್ತಿ ಹಿಡಿದದ್ದು) ಪ್ರತಿಭಟನಾತ್ಮಕವಾಗಿ ಬಿಸುಟುತ್ತಿರುವಳೇನೊ!!

    • ಅತ್ಯುತ್ತಮವಾದ ಕಲ್ಪನೆ; ರಚನೆ. ಧನ್ಯವಾದಗಳು.

      • ditto

      • ಗಣೇಶ ಸರ್, ಪ್ರಸಾದ ಸರ್ ಗೆ ಧನ್ಯವಾದಗಳು.

      • ಗಣೇಶ ಸರ್, ಕಾಲಾನುಕ್ರಮಣಿಕೆಯಲ್ಲಿ ನಳ ಮೊದಲೊ, ರಾಮ ಮೊದಲೊ?

        • ನಳನೇ. ಏಕೆಂದರೆ ರಾಮನ ಪೂರ್ವಜನಾದ ಋತುಪರ್ಣನು ನಳನ ಸಮಕಾಲೀನನೂ ಕೆಲಕಾಲದ ಆಶ್ರಯದಾತನೂ ಅಗಿದ್ದ ಕಥೆ ನಮಗೆ ತಿಳಿದೇ ಇದೆ.

  5. ಇಲ್ಲಿ ಇಬ್ಬರು ಮಿತ್ರರ ಸಂವಾದವನ್ನು ತೋರಿಸಲು ಪ್ರಯತ್ನಸಿರುವೆ… ಒಬ್ಬ ಕಣ್ಣಿದ್ದೂ ಕುರುಡನಾದ, ಮತ್ತೊಬ್ಬ ಕುರುಡನಾದರೂ ನಿಜವೇನೆಂಬುದನ್ನು ಕಂಡ..

    ಬೆರುಗಿನೊಳಿಂದಲೊರ್ವನಿದ ಕಾಣುತೆ ಮಿತ್ರನಿಗಿಂತು ಭಾಪೆನಲ್!
    “ತರುಣಿಯ ನೋಡ ತನ್ನ ಚೆಲುವಂ ಜಗಕೆಲ್ಲವ ತೋರುತಿರ್ಪಳೈ”
    ಕುರುಡನು ಮುಟ್ಟಿ ಕಂಡ ದಿಟಮೇನೆನುತುಂ ಕೆಳೆಯಂಗೆ ಪೇಳ್ದನೈ
    “ತರುಮಿದು ಕೇಳು ನೀಂ ಮರುಳನಂತೆಯೆ ನಿಚ್ಚಮ ಕಾಣದಾದೆಯೈ”

    • ಚೇದಿಯವರೆ, ತರು೦ ಸಾಧುವೇ? ತರುವಿದು ಎನ್ನಬಹುದು.

    • ಕಲ್ಪನೆ ಚೆನ್ನಾಗಿದೆ. ಆದರೆ ಸ್ವಲ್ಪ ಹಳಗನ್ನಡದ ಶಿಲ್ಪನೆ ನುಣುಪಾಗಬೇಕಷ್ಟೆ.

  6. ರೆ೦ಬೆಯಿದು ಕೊ೦ಬೆಯಿದು ಮೇಣೆಲೆ-
    ಯೆ೦ಬ ವಿಶ್ಲೇಷಣೆಯೊಳೈದೊಡೆ
    ಕಾ೦ಬುದಲ ಮರ ಬರಿದೆ, ನೋಟ ವ್ಯರ್ಥವದರಿ೦ದೆ
    ಹಿ೦ಬದಿಯೊಳೈದು ಪಿರಿದಾಗಿಸಿ
    ಕಾ೦ಬ ನೋಟವ, ನೋಡಿದೊಡೆ ನೀ-
    ನು೦ಬೆಯೈ ತರು ತಳೆದ ಸಿರಿಮೈಯಚ್ಚರಿಯ ಸವಿಯ!

    ಕುಡುವುದೊಟ್ಟ೦ದದಲೆ ನೋಳ್ಪೊಡೆ
    ಕಡುಸವಿಯ ಬಾಳ್ಗೆ ನವನೀತವ-
    ದೊಡೆವ ತೆರದೊಳ್ ಕೆನೆಮೊಸರ ಕಡೆಯಲ್ಕೆ ತೇಲುತಲಿ
    ಬಿಡಿಬಿಡಿಸಿ ನೋಡಿದಡೆ ಜಡತೆಗ-
    ಳಡವಿ ಹರಡಿಹುದಲ್ತೆ, ಒಟ್ಟಿನೊ-
    ಳಡಗಿಹುದು ಜೀವಾ೦ಶ, ಮೇಲ್ಮೇಲೇರೆ ಮೋದನವು

    • ಅಯಯಪ್ಪ!!
      ತರುವಿಗಾವುದು ಮುಂದು-ಹಿಂದುಗಳ್ ಪೇಳೆಯೇಂ
      (ಕರಡು=xerox)ಕರಡಿಗೆರಗುವೆನು ನಿನ್ನಯ ಚರಣದಾ|
      ಗಿರಿಶನಾಶಿಸಿದಂತೆ ಬೆಳೆದಿಹುದು ತರುವಂತು
      ಗರಬಡಿದು ಹಿಂಚುಮುಂಚಾಯ್ತೆ ಕಣ್ಣು||

      • ಹಹ್ಹಹ್ಹಹ್ಹಹ್ಹಾ, ಹಾಗಲ್ಲ, ಸ್ವಲ್ಪ ಹಿ೦ದಕ್ಕೆ ಸರಿದು ನೋಡು ಎ೦ದು ಬರೆದೆ. ಬೇರೆ ಪದಗಳು ಸಿಗಲಿಲ್ಲ :))

  7. ಉಸಿರನೊತ್ತಿ ಪಸಿರನೆತ್ತು-
    ತೊಸರುತೆಂತು ಮಿಸುಕದಿಂತು
    ಪಸರಿಸಿದುದುತಳದ ಕಸುವು ಮರದ ನಿಲುವಲಿ ।
    ಕುಸುರ ಕೆತ್ತೆ ಮುಸುಕಲಿಂತು
    ಪಸೆಯು ಬತ್ತಿ ಮಸುಕಲಂತು
    ಪೆಸರಳಿಪುದುವಂತು ಪುಸಿಯು ನರನ ನಿಲುವಳಿ ।।

    ಕಡಿದಷ್ಟೂ ಚಿಗುರುವುದು ಮರ, ಹಸಿರನ್ನು ನಾಶ ಪಡಿಸುವ ನರನ ಧೋರಣೆ ವ್ಯರ್ಥ.

    • ಈ ಭೋಗಷಟ್ಪದಿ ಸ್ವತಂತ್ರರಚನೆಯಾಗಿ ಚೆನ್ನಾಗಿಯೇ ಇದೆ. ಆದರೆ ಪ್ರಸ್ತುತ ಚಿತ್ರದ ಅನನ್ಯತೆಯನ್ನು ಚಿತ್ರಿಸುವಲ್ಲಿ ಸಮರ್ಥವಾಗಿಲ್ಲವೆಂದೆನಿಸುತ್ತದೆ.

  8. ಶಾಪಗ್ರಸ್ತಸುರಾಪ್ಸರೋs೦ಗನೆಯಿವಳ್ ವೃಕ್ಷಾ೦ಗಮ೦ ಪೊ೦ದಿರಲ್
    ಕೋಪೋತ್ಕ೦ಠಿತೆಯಾಗಿ ನಾಕದೆಡೆಗ೦ ತಾನುಟ್ಟ ವಸ್ತ್ರ೦ಗಳ೦
    ಶಾಪೋಚ್ಛಾಟನೆಗ೦ ಸ್ವಕೀಯ ಸಖಸಖ್ಯಾದ್ಯರ್ಗೆನೆ ಜ್ಞಾಪಿಸಲ್
    ತಾಪವ್ಯಾಕುಲಚಿತ್ತದಿ೦ ತೆಗೆದು ತೂರಾಡಿರ್ಪಳೇ೦ ತೂಗುತು೦?!!

    • ಒಳ್ಳೆಯ ಕಲ್ಪನೆ. ಚಂದದ ಬಂಧ. ಆದರೆ ಅಪ್ಸರೋಂsಗನೆ ಎಂದು ಪ್ರಯೋಗವಾಗಬೇಕು. ಅಪ್ಸರಾಃ ಎಂಬುದು ಸಕಾರಾಂತಸ್ತ್ರೀಲಿಂಗಶಬ್ದ. ಆಕಾರಾಂತವಲ್ಲ. ಅಂತೆಯೇ ಉಚ್ಚಾಟನೆ ಎಂಬುದು ಸಾಧುರೂಪ. ಜೊತೆಗೆ ಮೂರನೆಯ ಸಾಲಿನಲ್ಲಿ (……….ಸಖಸಖೀ …….ಎಂಬಲ್ಲಿ) ಒಂದು ಲಘುವು ಹೆಚ್ಚಾಗಿದೆ.

  9. ಹೇ ಕರ್ಣಿಕಾರ ಕುಣಿತಮಿ
    ದೇಕೈ? ನಿನ್ನೆದುರು ತರುಣಿ ದೋಹದ ಗೆಯ್ಯ
    ಲ್ಕಾಕೆಯನನುಕರಿಸುವೆಯೇಂ?
    ಆ ಕಲೆಯಂ ಕಲ್ತು ಗುಟ್ಟೊಳರಳುವ ಸಂಚೇಂ?

    ಕರ್ಣಿಕಾರವೆಂಬ ಹೆಸರು ಎರಡು ಜಾತಿಯ ಮರಗಳಿಗೆ ಹತ್ತಿದೆ – Pterospermum acerifolium, Cassia fistula (ಕಕ್ಕೆ). (ಕೃಪೆ: ಹಂಸಾನಂದಿ) ಈ ಚಿತ್ರದಲ್ಲಿನ ಮರ ಇವೆರಡೂ ಅಲ್ಲ.

    • ಅಡ್ಡಿಯಿಲ್ಲ, ತುಂಬ ಒಳ್ಳೆಯ ಪದ್ಯವನ್ನೇ ನಮಗೆ ಉಪಹಾರವಾಗಿ ನೀಡಿದ್ದೀರಿ. ಧನ್ಯವಾದ. ಇದನ್ನು ಕಂಡು ಸ್ಫೂರ್ತಿಯಿಂದ ಹೀಗೆ ಹೇಳಬಹುದೇ?

      ಕರ್ಣಿಕಾರದೆದುರಲ್ಲಿ ನರ್ತನೋ-
      ತ್ಕೀರ್ಣಸುಂದರಿಯರಿರ್ಪರೆಂದು ನೀ-
      ನರ್ಣವಾಭಭರತಾಗಮೋದಿತಾ-
      ಭ್ಯರ್ಣಭಾಮಿನಿಯವೊಲ್ ಪೊಣರ್ವೆಯೇಂ?

      • ನಿಶ್ಶಂಕೆಯಿಂದ ಹೇಳಬಹುದು. ನೀವು ಹೇಳಿದ್ದೆ ಚೆನ್ನಾಗಿದೆ 🙂

    • ನರ್ತನಾತ್ ಕರ್ಣಿಕಾರಃ||
      ಪೂರ್ಣಗೊಳಿಸುವೆನೀಗ ನಿನ್ನಯನುಮಾನವನು
      (specie)ವರ್ಣಮದು ಕರ್ಣಿಕಾರೇತರಂ ಸೈ|
      ಕರ್ಣಿಕಾರಂ ವಶಂ ನೃತ್ತದೋಹದಕಂತೆ
      ಪರ್ಣಿಯದು ತಾನೆ ನರ್ತಿಸದು ಕೇಳೈ|| 🙂

      • ಕರ್ಣಿಕಾರನದೇ೦ ರಹಸ್ಯಮೀ ಸಮಯದಲಿ
        ಘೂರ್ಣಿಸುತ್ತಿರ್ಪುದೈ ಕಾಣೆನೈ ನಾ೦!
        ವರ್ಣಿಸುವಿರೇ೦ ವಿವರಮಾಗಿ ಬರೆದಿತ್ತು ಕುಲ-
        ಕರ್ಣಿಗ೦ ದಯೆಯಿ೦ದೆ ಮಹನೀಯರೆ?

      • ಕುಲಕರ್ಣಿಯಿಂ ಮುಚ್ಚಿಡದೆ ಬಿಚ್ಚಿಡುವರೇನು
        ಬಲಿಹಾಕದಿರುವನೇಂ ಕಂದಾಯದಿಂ|
        ಎಲೆಮೇಲ ನೀರಂತೆ ನಡೆವುದಾತನೊಳುಚಿತ
        ಸಲುಗೆಯಿನಿತುಂ ತಿರೋಧಾನಮಿನಿತುಂ||

      • ಪದ್ಯದಾಶಯಮನ್ನೆ ಬುಡಮೇಲು ಮಾಡಿದಿರ
        ವದ್ಯಮೇಂ ಚರಿತಮಿದು ಹಾದಿರಂಪ?
        ಹೃದ್ಯಮಾದೊಡೆ ವೃಕ್ಷನರ್ತನಮದರಿದೆಂದು
        ಗದ್ಯಮಂ ಬೀಸಿರೈ ಸೋಮರತ್ತ!

        • ‘ಹೇ ಕರ್ಣಿಕಾರ ಕುಣಿತಮಿ
          ದೇಕೈ’ ಹಾಗೂ ’ಇದು ಕರ್ಣಿಕಾರ ಅಲ್ಲ’ ಎಂಬಷ್ಟನ್ನು ಮಾತ್ರ ಗಮನಿಸಿಕೊಂಡು ಹೊಸೆದ ಪ್ರತಿಕ್ರಿಯಾಪದ್ಯ.

  10. ಹರಣಮಾದುದೆ ವಸನಮಕಟಾ!
    ಹರಿಸಿ ಗೋಳನು ತರುಣಿ ನಿನ್ನೊಳು,
    ದುರುಳ ದುಶ್ಯಾಸನರ ಕಾಟಕೆ ಕೊನೆಯೆ ? ಲೋಕದೊಳು!
    ಕರವ ಝೊಂಪಿಸಿ ಕೊರಲ ಕೊಂಕಿಸಿ
    ಬರಿದೆ ದು:ಖವ ಮಿಡಿಯಲೇಂ ಫಲ?
    ಹರಿಯ ನೆನೆವುದೆ ವಿಹಿತಮಲ್ತೇ ಸಕಲ ಕಾಲದೊಳೂ?

    • ಮಲಗಿ ಪರಮಾದರದಿ ಪಾಡಿದರೆ ಕುಳಿತು ಕೇಳುವ, ಕುಳಿತರೆ ನಿಲುವ, ನಿ೦ತರೆ ನಲಿವ, ನಲಿದು ಪಾಡಿದರೆ ಒಲಿವ … ಅದಕ್ಕೆಯೇ….

      ಕರಯುಗವ ಮೇಲೆತ್ತಿ ಕುಣಿಕುಣಿ-
      ದೊರಲಿದಳು ತನ್ನಯ ಹರಿಬವನು
      ಹರಿಯೊಳೀ ತರುವನಿತೆಯಳಲೊಳು ಕೃಷ್ಣೆಗೈದ೦ತೆ 🙂

      • ಅಂತೆಯೊರಲಿರೆ ಸಂತಸಂ ದಿಟ,
        ಚಿಂತೆಯಂತೂ ದೂರಸಾರ್ದುದು
        ಸಂತರರಿದೇ ಪೇಳಿರಲ್ ಭಾಮಿನಿಯ ಬಗೆಯನ್ನ 🙂

        • ಕಾಂಚನಾಕೃತಪದ್ಯಸೌಂದ-
          ರ್ಯಾಂಚಿತಮನೋಜ್ಞತೆಯೊಡನೆ ರಸ-
          ಚಂಚುರಶ್ರೀನೀಲಕಂಠರ ಚಾಟುಪಾಟವವೂ|
          ಸಂಚುಗೊಂಡಿರೆ ಶಾರದಾಚೇ-
          ಲಾಂಚಲದ ಮೆಲ್ಲೆಲರು ಮೋದವ
          ಹಂಚದೇ ನಮ್ಮೆಲ್ಲ ಸಹೃದಯಪದ್ಯಪಾನಿಗರೊಳ್?

  11. .

    • ಚೇದಿವೊಲೆ ಗೈದೆ ನೀನಲೆ/ನೀಲನೆ!
      ಚೋದಿಸಿತೇನೀ ವಿಚಿತ್ರ ಸೃಷ್ಟಿವಿಲಾಸ೦
      ಮೋದಾತಿಶಯತುರೀಯದೊ-
      ಳಾದುದೆ ವಾಗ್ಬ೦ಧನ೦, ಬರಿದೆ ಪೂರ್ಣಾ೦ಕ೦?!! 😉

  12. ಮೊಳೆತಿಂತಿಳೆಯೊಳಗಿಂ ಮೈ-
    ದಳೆಯಲ್ ತರು ತರದೊಳೇಂ ವಿಹಂಗದ ಭಂಗೀ ।
    ತಿಳಿಗಾಳಿ ಸೋಂಕಿ ತಾಂ ಮನ-
    ಸೆಳೆಯಲ್ ಮೈಮರೆದುದೇಂ ವಿರಹದೆ ತಂಗೀ ।।

  13. || ವನಮಯೂರವೃತ್ತ ||

    ಬಾಹುಗಳನೆತ್ತಿ ನಭಮಂ ನಿರುಕಿಸುತ್ತುಂ,
    ದ್ರೋಹಕೆ ಪಲುಂಬಿ ಬುವಿಯಿಂದೆಳೆದು ಕಾಲಂ,|
    ಮೋಹಕಲತಾಂಗಿ ಜನರಿಂ ನಮೆದು ನೋವಿಂ,
    ನೇಹಮನೆ ಯಾಚಿಸುತೆ ಶೋಕಿಪಳೆ ನಿಚ್ಚಂ ? ||

    • ಬುವಿಯಿಂದೆಳೆದು ಕಾಲಂ – ಚೆನ್ನಾದ ಗಮನಿಕೆ. ಪದ್ಯ ಚೆನ್ನಾಗಿದೆ.

      • ಪ್ರಸಾದರೆ, ನಿಮ್ಮ ನಿರಂತರಪ್ರೋತ್ಸಾಹಕ್ಕಾಗಿ ಧನ್ಯವಾದಗಳು.

        • ಪ್ರೋತ್ಸಾಹವೇನು! ಸಂತೋಷಾಭಿವ್ಯಕ್ತಿ ಅಷ್ಟೆ.

  14. हे तरुणि!
    योगासनस्थे रमणीयमध्ये
    प्रसार्य वस्त्रं हरितं महौष्ण्ये।
    आनन्दयोगेन विलासिताङ्गे
    राजन्ति लोकाः चिरदर्शनेन॥

    रे रे वृक्ष ! न शिक्ष्यतां भुवि नृणां बुद्धिः कथञ्चित् स्थिता
    लोके प्राकृतिकं निजम् हि नियमं त्यक्त्वाऽऽप्य वक्रस्थितिम्।
    त्वां दृष्ट्वाऽपि न मन्यते जलनिभा लोकाविरुद्धश्चिरं
    सन्मार्गः परिपालनीय इति यन्नित्याय तत्त्वं दृढम्

    • ಎರಡನೆಯ ಪದ್ಯದ ಭಾವವು ಸ್ಫುಟವೂ ಸುಂದರವೂ ಆಗಿದೆ. ಆದರೆ ಮೊದಲ ಪದ್ಯದ ಆಶಯವು ಸ್ವಲ್ಪ ಅಸ್ಪಷ್ಟ. ಅಲ್ಲದೆ ಒಂದೆರಡು ವ್ಯಾಕರಣಪ್ರಮಾದಗಳೂ ಇರುವಂತಿವೆ. ಇವನ್ನಾದರೂ ನಿಮ್ಮ ಪದ್ಯದ ಇಂಗಿತವೇನೆಂದು ಅರಿತ ಬಳಿಕ ಮತ್ತೂ ನಿಶ್ಚಿತವಾಗಿ ವಿವರಿಸಬಹುದು. ಆದರೆ ಈಗ ಸ್ಥೂಲವಾಗಿ ಅರಥವಾದಂತೆ ಅದರ ಆಶಯವೂ ಚೆನ್ನಾಗಿದೆ. ಇದನ್ನು ನಿಖರವಾಗಿ ನಿಮ್ಮ ಪದ್ಯವು ವ್ಯಕ್ತೀಕರಿಸಿದಂತೆ ತೋರದು. ಬಿಡುವಿದ್ದಲ್ಲಿ ದಯಮಾಡಿ ಮತ್ತೊಮ್ಮೆ ಯತ್ನಿಸಿರಿ.

  15. ದ್ರುತಪದ|| ತರುವು ಕೈಗೆಟುಕಿದಷ್ಟನುಮೆಲ್ಲಂ
    ಬರಿದುಗೈದಿರಲು ಮಾನವನಿಂತುಂ|
    ದೊರಕದೊಲ್ ವಿಟಪಗಳ್ ಕರಮಂ ನೀಂ
    ಹರಡಿನಿಂದಿಹೆಯ ಮೆಟ್ಟುತೆ ಕಾಲಿಂ||

  16. ಬ್ಯಾಲೆಯೊಳ್ ರತಳೇ೦ ಮನೋಹರ
    ಬಾಲೆಯಿವಳೀ ಕೃಷ್ಣನೇಪ-
    ಥ್ಯಾಲಯದೊಳಗೆ, ತೋರುತೆಮಗ೦ ಪ್ರಕೃತಿವಿಸ್ಮಯವ
    ಕಾಲನಿದಿರಲಿ ನಡೆವುದೆಲ್ಲವು
    ಲೀಲೆಯಿ೦ದಲೆ ರೂಪುವಡೆವುವು
    ಶೀಲಸೌ೦ದರ್ಯಗಳು ಸೃಷ್ಟಿಯೊಳೆಲ್ಲೆಡೆಗೆನುತ್ತೆ

  17. ರೂಪಲಾವಣ್ಯಗಳ ಗಣಿಯೆ೦
    ದೀ ಪರಿಯ ಹಮ್ಮಿನೊಳು ಮೆರೆವೆಯ!
    ರೂಪವಡೆದುದು ಲಲಿತಕಲ್ಪನೆಯ ಸೊಬಗು ಮೊದಲೊಳೆ
    ಭಾಪು ಭಾಪೆನಲೀ ಪ್ರಕೃತಿಯಾ-
    ಲಾಪಗೈವೊಡೆ ಸೃಷ್ಟಿಗೀತನಿ-
    ರೂಪಣೆಯ ನೀಡಲೆನೆ, ಮನ ನೀ ಮನ್ನಿಸಿದ ನೋಡಿ

  18. ಒಂಟಿಗಾಲಲಿ ನಿಂತೆಯೇನೆಲೆಯೆಂತು ಹಬ್ಬಿಹೆ ಬಾಗಿನೀ-
    ನಂಟುತೀ ಬಗೆ “ದಂಟ”ಲೀ ಪರಿ ತಾಗುತುಂ ತಡಕಾಡುತುಂ ।
    ಗಂಟಲುಬ್ಬಿಸಿ ವಾಲುತುಂ ಬಲಗಾಲನೆತ್ತಿಹೆ ಬಾನಿಗಂ
    ಗಂಟ ನಂಟಿನ ಗುಂಟವೇ ಪಸರಿರ್ದುದೇ ಪಸಿರಿಂತು ತಾಂ ।।

    ನಾಲ್ಕುಮೊಳ ಮಲ್ಲಿಗೆಮಾಲೆ – ಒಪ್ಪಿಸಿಕೊಳ್ಳಿ

    • ಮಾಲೆಮಲ್ಲಿಕೆಯೊಪ್ಪಿತೌ ತರುಭಾಮಿನೀವರವೇಣಿಗ೦ 🙂

      • ಧನ್ಯವಾದಗಳು ನೀಲಕಂಠ.
        ಹೂ ಕೊಟ್ಟು ಮುಡಿದಷ್ಟು ಸಂತೋಷವಾಯಿತು !!

  19. ಬರಗಾಲಂ ಕಳೆಯಲ್ಕೀ
    ತರುವಾಗಸದತ್ತ ನೋಡೆ ಮಳೆಬರ್ಪುದೆನಲ್|
    ಭರದಿಂ ಸಂತಸದಿಂದೀ
    ಪರಿಯೊಳ್ ಮಿಂಚಂತೆ ಛಂಗೆನುತೆ ಕುಣಿದಿರ್ಪಳ್|

    • ಅ೦ತೆಯೆ ಪಿಡಿದಿರ್ಪಳ್ ಕೊಡೆ-
      ಯ೦ತೆ ಲತಾ೦ಗಿಯಿವಳೀ ತೆರದೊಳೆ ತಡೆವಳೆ೦-
      ಬ೦ತೆ ಮಳೆಯನರಿವೆಗಳೀ
      ಕ೦ತೆಯಿನೆ ಕರ೦ಗಳಿ೦ ತಲೆಯ ಮೇಗಡೆಯೊಳ್!!

  20. ಒಂಟಿಗಾಲಿನ ತಾಪಸೀ , ನರನಂದದಿಂ ತಪಗೈದೊಡೇಂ,
    ತುಂಟ ಗೊಲ್ಲನನೊಪ್ಪಿನೀಂ ಕಟುಕಷ್ಟದದ್ರಿಯನೆತ್ತಲೇಂ,
    ಕಂಟದೊಳ್ ಸಲೆ ನಿಂದುನೀಂ ಕರಿ ವಾಂಛೆಯಬ್ಧಿಯನೊತ್ತಲೇಂ,
    ಕಂಟಕಂಗಳಿಗಿರ್ಪುದೇಂ ತಡೆ ಬಾಳ್ತೆಯೀ ವರಯಾತ್ರೆಯೊಳ್?

    • So nice one. Keen observation of kanTaka’s 🙂
      ಕಡುಕಷ್ಟದಾದ್ರಿ – ಕTuಕಷ್ಟದದ್ರಿ
      ವಾಂಛೆಯಾಬ್ಧಿ – ವಾಂಛೆಯಬ್ಧಿ

      • ಕಂಟಕಪರಿಹಾರಂ ನೀಲಕಂಠನಿಂದಲ್ಲದಲಿನ್ನಾರಿಂ? 🙂 ಧನ್ಯವಾದಗಳು

        • ಪೊಗಳಿ ಪೊಗಳಿ ಪೊನ್ನ ಶೂಲಕ್ಕೇರಿಸಿರ್ಪರೆ೦ಬ೦ತೆ, ಪೊಗಳಿ ಪೊಗಳಿ ಪೊಗಳಿ ಶ್ರೀಕ೦ಠನನೆ ವಿಷಕ೦ಠನನ್ನಾಗಿಸಿದಿರೌ!

      • “Apostrophe”ಯ ಪರಿಣಾಮ ನೀಲಕಂಠ !!
        ಕಂಠ = ಕಂಟ = ಕಂಟಕ !! ( ಬಾಲ=ಬಾಲಕ)

  21. ಛಂಗನೆ ನೆಗೆದು ಸುರಾಂಗನೆ
    ರಂಗದೆ ತನ್ನಂತರಂಗರಾಗತರಂಗಂ|
    ಪೊಂಗಿಸಿ ಮೆಚ್ಚಿದನೇನಾ
    ತಂಗದಿರನೆನುತ್ತೆ ತರುತರಂಗಿಣಿ ನೋಳ್ಪಳ್||

    • ಅಹ ಧಿಗ್ಗನೆ ಪಾಲ್ಗಡಲು-
      ಕ್ಕಿಹ ಮನದಾಲಯದೊಳ೦ಗಣಕ್ಕೆಲೆ ತಾ೦ ನು-
      ಗ್ಗಿಹ ಬೆಳ್ದಾವರೆಗಳ್ ನಲಿ-
      ದಿಹ ಭಾಸದ ಕವಿರವೀ೦ದ್ರಕಲ್ಪನೆಯಲ್ತೇ೦!!

      ನ೦ಗೆ ತು೦ಬ ಹಿಡಿಸಿತು ಸರ್! ಹ೦ಗ೦ಗೆ ಗ೦ಗಾನದಿ ಹ೦ಗೆ ಭರಪೂರ ಹರಿಯೋ ಪ್ರಾಸಾನುಪ್ರಾಸಗಳು ಮನಸ್ಸಿಗೆ ತು೦ಗಾನದಿ ನೀರು ಕುಡಿಸಿಧಾ೦ಗೆ ಆಯ್ತು… 🙂

      • ಧನ್ಯವಾದಗಳು ನೀಲಕಂಠರೆ. ಇದಕ್ಕೆ ಗಣೇಶರ ನಿಮ್ಮ ಪದ್ಯಗಳ ಗುಂಗೇ ಸ್ಫೂರ್ತಿ!

  22. ವರ್ತನಮೋ ಸಮೀರಣನ ಲೀಲೆಗೆ ಸೋಲ್ತ ಪಲಾಶಿಯೋಷೆಯಾ,
    ನರ್ತನಮೋ ತರೂತ್ತಮೆ ತಿಲೋತ್ತಮೆಯಂದದೆ ಸಂದಿರಲ್, ರಸಾ-
    ವರ್ತನಮೋ ದ್ರುಮಪ್ರಮದೆಯಂ ಭ್ರಮಿಯಿಪ್ಪ, ಇದೇನುಮಲ್ತು ಕೇಳ್!
    ಕರ್ತನಮೋಡಿಸಲ್ಕೆ ನೆಲನಿಂ ನಿಜಮೂಲಮನಿಂತುಟಾದುದೇ?

  23. ಬಗೆಹರಿಸಲ್ಕೆ ಪೂರಣವ ತಾಂ ನೆಲೆ ನಿಂತಿರಲೇಕಪಾದದೊಳ್
    ಸುಗಮದೆ ಮೂಡೆ ಚಿತ್ರಕವಿತಾಕರದಿಂದವಧಾನದಾಮರಂ ।
    ಬಗೆಬಗೆ ರೀತಿ ಗೀತಗಮಕಂಗಳ ವಾಚನವಿಂತು ಸಂದಿರಲ್
    ಹಗರಣಿಸಿರ್ದು ಮೇಣ್ ಗುಣಿಸುತಿರ್ಕುದದಪ್ರಸ್ತುತಪ್ರಸಂಗ ಕಾಣ್ ।।

    ಪದ್ಯಪಾನದಲ್ಲಿ “ವೃಕ್ಷಾವಧಾನ” !!

    • ಮೂರನೆ ಸಾಲು “ದತ್ತಪದಿ” ಯಾಗಿಸೆ…!

      ಬಗೆಬಗೆ ರೀತಿ ದತ್ತಪದದಿಂದೆಲೆ ಬಲ್ ಪರಿಹಾರ ಸಂದಿರಲ್

  24. ನೀಲಕಂಠ, ಉಷಾ, ಕಾಂಚನಾ, ಶಕುಂತಲಾ, ಚೀದಿ, ರವೀಂದ್ರ ಮುಂತಾದ ಎಲ್ಲ ಗೆಳೆಯರ ಕವಿತೆಗಳೂ ಸೊಗಸಾಗಿವೆ. ವಿಶೇಷತಃ ನೀಲಕಂಠರ ಪದ್ಯಗಳ ಗುಣ-ಗಾತ್ರಗಳೆರಡೂ ಸುತರಾಂ ಸ್ತುತ್ಯ. ಅಂತೆಯೇ ನಮ್ಮ ಸಹೋದರಿಯರೆಲ್ಲರ ಪದ್ಯಗಳ ಹಿಂದಿರುವ ಕಲ್ಪನೆ ಮತ್ತು ಕವನೋತ್ಸಾಹಗಳು ಮುದಾವಹ. ಜೊತೆಗೆ ಕ್ರಿಯೆಗಿಂತ ಪ್ರತಿಕ್ರಿಯೆಯೇ ಮಿಗಿಲಾಗಿ ಸ್ವಾರಸ್ಯವೆನಿಸುವ (ನೀರಾಗಿಂತ ಹೆಂಡವೇ ಹೆಚ್ಚು ಬೇಡಿಕೆಯುಳ್ಳದ್ದೆನಿಸುವ:-) ಪ್ರಸಾದು ಅವರ ಪದ್ಯಗಳೂ ರೋಚಕವಾಗಿವೆ. ಇವರೆಲ್ಲರಿಗೂ ಮತ್ತೆ ಮತ್ತೆ ಅಭಿನಂದನೆಗಳು.

    • ನೀರಾಜಲಮೈ ನಮ್ಮೀ
      ನೂರಿಪ್ಪತ್ತು ಕವನ೦ಗಳ ಕಲಬೆರಕೆಯಿ೦,
      ಶಾರದೆಯ ಪೂಜೆಗಾದುದು
      ನೀರಾಜನದ ಸೊಡರಲ್ತೆ ನಿಮ್ಮಯ ಪದ್ಯ೦?!!

    • _/\_

    • ಧನ್ಯವಾದಗಳು ಸರ್ .

    • ಧನ್ಯವಾದಗಳು ಗಣೇಶ್ ಸರ್,
      ನಿಮ್ಮ cheer girl ಕಲ್ಪನೆಗಿಂತ ಕಲ್ಪನೆಯೇ ?!!

    • ಆರವನುಂ?! ನಿಶ್ಚಿತ ಕಂ-
      ಠೀರವನವನೀವ ನೀರವದರೊಳೆ ಪದ್ಯಂ ।
      ನೀರವಮಾಗಿರೆ ಮದ್ಯಂ(ಧ್ಯಂ)
      ನೀರವುಣಿಸುವರಸ!! ನೀರವತೆಯಾ ಮಧ್ಯಂ(ದ್ಯಂ)।।

      “ಆ ರವಮಂ…”ನ ಕ್ಷಮೆ ಕೋರಿ !!

  25. ಕಬ್ಬಮೆನಲ್ ಶರ್ವರಿಯಂ,
    ತಬ್ಬಿಬ್ಬಾಗುತಿರೆ ಅರಸಿಕರ್ಮಿಗೆ ತೋರಲ್
    ಮಬ್ಬಾದವರ್ಗೆ ದಿಟಮಂ,
    ತಬ್ಬಿದಳೇಂ ತರುವನೇ ವಿಧಿಯಿರದಲಿಂತುಂ!

    (ಕತ್ತಲೆಯನ್ನು ಕಾವ್ಯ(ಅದರಲ್ಲಿ ಸೌಂದರ್ಯವಿದೆ,ಮುದವಿದೆ)ಎಂದು ಒಪ್ಪಿಕೊಳ್ಳದವರಿಗಾಗಿ ,ಸತ್ಯವನ್ನು ತೋರಲು,ಅವಳು ತರುವನ್ನು ಅಪ್ಪಿಕೊಂಡಳು)

  26. ತರು ನಿನ್ನವಕ್ರತೆಯ ಮೈ-
    ಸಿರಿಯೊಳ್ಮೇಣೆನ್ನಭಾವವಕ್ರತೆಯೊಳ್ ಬೇ-
    ಸರಮೇ? ಶಬ್ದಾರ್ಥದೊಳಡ-
    ಸಿರೆ ವಕ್ರೋಕ್ತಿಗಳದಲ್ತೆ ಸುಂದರ ಕವಿತಂ

    ತರು, ನಿನ್ನ ವಕ್ರತೆಯ ಮೈಸಿರಿಯೊಳ್ ಮೇಣ್ ಎನ್ನ ಭಾವವಕ್ರತೆಯೊಳ್ ಬೇಸರಮೇ?, ಶಬ್ದಾರ್ಥದೊಳ್ ಅಡಸಿರೆ ವಕ್ರೋಕ್ತಿ, ಅದಲ್ತೆ ಸುಂದರ ಕವಿತಂ..

    ಕುಂತಕನ ವಕ್ರೋಕ್ತಿ ಸಿದ್ಧಾಂತ… :-).

    ಮೊದಲ ಪಾದದ ಅಂತ್ಯ ಸರಿಯಾಗಿದೆಯೇ?

    • ತುಂಬ ಚೆನ್ನಾಗಿದೆ. ’ಬೇಸರಮೆ’ಗಿಂತ ಸೂಕ್ತವಾದ ಬೇರೊಂದು ಶಬ್ದವನ್ನು ಬಳಸಬಹುದಲ್ಲವೆ?
      ….. ವಕ್ರತೆಗಳ್ ಪೇಳ್ ಪೆಱತೇಂ?

  27. That the background is very dark indicates dusk. So the photographer has used flashlight to capture the pic of the tree.
    ಮಣಿರಂಗ|| ಗಾಢ ಕಳ್ತಳೆಯೊಳ್ ಬಿಡುಬೀಸಿಂ
    ಪ್ರೌಢೆ ನೀನಿರೆ, ಚಿತ್ರಣಕಾರಂ (photographer)
    ಗೂಢದಿಂ ಗ್ರಹಿಸಿರ್ದುದ (clicked) ಕಂಡುಂ
    ರೂಢಿಯಿಂ ಮೊಗಮಂ ಮರೆಗೈದೌ (thrown back on reflex)||

  28. ಮರಕ್ಕೆ ಫ್ಲಾಶ್ ಇಂದ ನಿದ್ರಾ ಭಂಗವಾಯಿತೆ ..?

    ಇರುಳಿನೊಳ್ಯಾರಿವರ್? ಚಣಬೆಳಕ ಸೂಸುವರ್ (photo flash)
    ಹರಿಯದಿರ್ಪುದೆಲ್ಲೆಡೆ ಮಿಂಚಿರ್ದೊಡೇ೦?
    ಪುರದಮಾನವರಲ್ಲದಿನ್ಯಾರಿವರ್? ನಿಂತು
    ತೆರೆಮರೆಯೊಳೆನ್ನ ನಿದಿರೆಯ ಕಲುಕಿಪರ್ ?

  29. ಚುಟ್ಟವನೆಳೆದೆಳೆದುಸಿರಂ
    ಗಟ್ಟುತ ಮೇಣೆನ್ನ ಕಾಲನೆತ್ತುತಲುಸಿರಂ
    ಬಿಟ್ಟುಬಿಡುತ್ತ್ತೀ ತರುವಿಂ
    ಗೊಟ್ಟೊಟ್ಟಿಗೆ ಪೇಳ್ದನಿಲ್ಲಿ ರಿಸಿ ಹಠಯೋಗಂ

    ಚುಟ್ಟವನೆಳೆದೆಳೆದು ಉಸಿರಂ ಕಟ್ಟುತ, ಮೇಣ್ ಎನ್ನ ಕಾಲಂ ಎತ್ತುತ್ತಲ್ ಉಸಿರಂ ಬಿಟ್ಟುಬಿಡುತ್ತ, ಈ ತರುವಿಂಗೆ ಒಟ್ಟೊಟ್ಟಿಗೆ ಪೇಳ್ದನಿಲ್ಲಿ ರಿಸಿ ಹಠಯೋಗಂ…

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)