Jul 132015
 

ಜಲಧರಂ ಚಲಿಕುಂ ನೆಲದಾಳದೊಳ್

  100 Responses to “ಪದ್ಯಸಪ್ತಾಹ ೧೫೯: ಸಮಸ್ಯಾಪೂರಣ”

 1. ಹಲವು ಪರ್ವತ ಪಂಕ್ತಿಯ ಮೆಟ್ಟುತುಂ
  ಕಲೆತಿರಲ್ ಸವಿ ವನ್ಯದೆ ಕೈಪಿನೊಳ್
  ತಲೆಯತಗ್ಗಿಸಿ ನೋಡುತಲೇನಿದೈ
  ಜಲಧರಂ ಚಲಿಕುಂ ನೆಲದಾಳದೊಳ್

 2. ಲಲಿತಜೀವನಮೇ ,ಬಗೆದಂತೆವೊಲ್
  ಸಲುಗುಮೆಂತು? ಮಹಾವಿಧಿಯಾಡಿಸಲ್,
  ಮಲಗುಗುಂ ನರನಾಗಸವಟ್ಟೆಯೊಳ್!
  ಜಲಧರಂ ಚಲಿಕುಂ ನೆಲದಾಳದೊಳ್!!

  (ನಾವು ಬಗೆದಂತೇ ಜೀವನವಲ್ಲ, ವಿಧಿಯಾಡಿಸಿದರೆ, ..ಹೀಗೂ ಆಗಬಹುದು!)

 3. ದ್ರುತವಿಲಂಬಿತ || ಕಲಸಿದೋಗರವಾಗಿರೆ ಮಾನಸಂ
  ನಲುಗಿ ಪೋಗೆ ಸರೋವರ ತೀರಕಂ|
  ತಲಕೆ ದಿಟ್ಟಿಯ ಕೀಲಿಸಿ ನೋಡಿರಲ್
  ಜಲಧರಂ ಚಲಿಕುಂ ನೆಲದಾಳದೊಳ್||

  • ಚೆನ್ನಾಗಿದೆ. …ಓಗರಮಾಗಿರೆ ಮಾನಸ೦ ಎ೦ದರೆ ಕನ್ನಡ ಹಳೆಯದಾಗಿ ಪ್ರಾಸಾನುಪ್ರಾಸಕ್ಕೂ ಆಸ್ಪದವಾಗಿ ಸು೦ದರವಾಗುತ್ತದೆ ಅಲ್ಲವೆ..

 4. Deep inside the earth is the other hemisphere of the globe
  ನೆಲವನಂತವೆ ಆಳದೆ ನೋಡು ನೀಂ
  ನುಲಿಯಲೇತಕೆ ಭೂಮಿಯ ತೋಡುತುಂ|
  ಸಲೆ ವಿಮಾನದೆ ಪಾರಿರಲಾಚೆಗಂ (to the other hemisphere)
  ಜಲಧರಂ ಚಲಿಕುಂ ನೆಲದಾಳದೊಳ್||

 5. ಚಲಿತಮದ್ಭುತಮಾದುದು ರಸ್ಯಮೀ
  ಸಲಿಲಜಾಲದ ಲೀಲೆಯಿದೇನಿದೇ೦
  ಶಿಲೆಗಳೊಟ್ಟಣೆಯೊಳ್ ಪುಗುತು೦ ಮಗುಳ್
  ಜಲಧರ೦ ಚಲಿಕು೦ ನೆಲದಾಳದೊಳ್

  ಜಲಧರ = ಸಮುದ್ರ

 6. ಕಲಿತಕೇಕಿಸುಪಿಚ್ಛವರಾ೦ಗನು೦
  ಜಲದವರ್ಣದ ಮೋಹನನು೦ ಕೃಪಾ-
  ಜಲದನು೦ ಹರಿ ಕಾ೦ಬೊಡೆ ನಾಣ್ಚುತು೦
  ಜಲಧರ೦ ಚಲಿಕು೦ ನೆಲದಾಳದೊಳ್

  ಕೃಷ್ಣನನ್ನು ಕ೦ಡು ನಾಚಿ ಮೋಡವು ನೆಲದೊಳಕ್ಕೆ ತಲೆಮರೆಸಿಕೊ೦ಡಿತು. ಅವನ ಮೇಘವರ್ಣವನ್ನು ಕ೦ಡು, ಮಕುಟದ ನವಿಲುಗರಿಯನ್ನು ನೋಡಿ ತನ್ನನ್ನು ಮೆಚ್ಚುವ ನವಿಲೇ ಅವನ ಜೊತೆಯಿದೆ ಎ೦ದು ಭ್ರಮಿಸಿ, ಆತನೂ ಸತತ ಕೃಪಾಜಲವನ್ನು ಕೊಡುವ ತನಗಿ೦ತ ಶ್ರೇಷ್ಠವಾದ ಮೋಡ ಎ೦ದು…

 7. ಜ್ವಲನದಿ೦ ಪೊರಬ೦ದು ಪುರೋಚನ೦-
  ಗೊಲಿಸಿ ಕಾಲನ ಕನ್ನಿಕೆಯ೦, ಮಹಾ-
  ಬಲಿ ವೃಕೋದರನೈವರಗೂಡೆ ಕ-
  ಜ್ಜಲಧರ೦ ಚಲಿಕು೦ ನೆಲದಾಳದೊಳ್

  ಅರಗಿನ ಮನೆಗೆ ಬೆ೦ಕಿಯಿಟ್ಟಾಗ, ಬೆ೦ಕಿಯಿಟ್ಟ ಪುರೋಚನನ್ನು ಕೊ೦ದು, (ಬೆ೦ಕಿ ಬಿದ್ದಲ್ಲೆಲ್ಲ ಎದ್ದಾಡಿ ಬಿದ್ದಾಡಿದ್ದಕ್ಕೆ) ಮೈಗೆಲ್ಲ ಕಾಡಿಗೆ ಮೆತ್ತಿಕೊ೦ಡವನಾದ ಭೀಮನು ಉಳಿದೈವರನ್ನು ಕೂಡಿ ನೆಲದೊಳಕ್ಕೆ ಸುರ೦ಗದಲ್ಲಿ ನಡೆದ.

  • fine keelaka

  • Like

  • Thanks Prasad sir, sudhir sir!

   • ಪ್ರಿಯ ನೀಲಕಂಠ, ನಿಮ್ಮ ಪೂರಣ ತುಂಬ ತುಂಬ ಸೊಗಸಾಗಿದೆ, ಸ್ವೋಪಜ್ಞವಾಗಿಯೂ ಇದೆ. ಆದರೆ ವ್ಯಾಕರಣವೊಂದೇ ತೊಡಕಾಗಿದೆ. ಚಲಿಕುಂ ಎಂಬುದು ನಪುಂಸಕಲಿಂಗದಲ್ಲಿರುವ ಕ್ರಿಯಾಪದ. ಜಲಧರಂ ಚಲಿಕುಂ ಎಂಬಲ್ಲಿಗೆ ಅದು ಸರಿ. ಆದರೆ ಅದು ಕಜ್ಜಲಧರಂ ಎಂದು ಭೀಮನ ಗುಣವಾಚಕವಾಗಿ ಪುಂಲಿಂಗದ ರೂಪವನ್ನು ತಾಳಿದ ನಾಮವಿಶೇಷಣಕ್ಕೆ ಹೊಂದಬೇಕಾದರೆ ಚಲಿಪಂ ಎಂದಾಗಬೇಕು. ಇದಕ್ಕೆ ಸಮಸ್ಯಾಪಾದದಲ್ಲಿ ಆಸ್ಪದವಿಲ್ಲವಷ್ಟೆ!

    • ಸರ್, ಕೆಳಗಿನ ತಿದ್ದುಗೆ ಸರಿಯಾಗಬಹುದೆ? 🙂

     ಜ್ವಲನದಿ೦ ಪೊರಬ೦ದು ಪುರೋಚನ೦-
     ಗೊಲಿಸಿ ಮೋಹದ ಮಿಳ್ತನೆ, ಭೀಮಮೂ-
     ರ್ತಿ ಲವಮಾತ್ರದೊಳೈವರಗೂಡೆ ಕ-
     ಜ್ಜಲಧರ೦ ಚಲಿಕು೦ ನೆಲದಾಳದೊಳ್

 8. ಅಳೆಯುತೀರಡಿ ಮಾಡಿ ಸಮಸ್ತವಿ-
  ಶ್ವಲತೆಯ೦ ಮಗುಳೊತ್ತಿರೆ ಮೌಳಿಯ೦
  ಬಲಿಕಲೇವರಮಾ ಪದತೀರ್ಥವ-
  ಜ್ಜಲಧರ೦ ಚಲಿಕು೦ ನೆಲದಾಳದೊಳ್

  ಸಮಸ್ತ ವಿಶ್ವವನ್ನೇ ಎರಡಡಿ ಬಳ್ಳಿಯ೦ತಾಗಿಸಿದ ವಾಮನನು ತನ್ನ ಪಾದವನ್ನು ಬಲಿಯ ತಲೆಯ ಮೇಲಿರಿಸಿದಾಗ ಆ ಪಾದದ ತೀರ್ಥಜಲ (ಗ೦ಗಾಜಲ) ವನ್ನು ಧರಿಸಿದ ಅವನ ಶರೀರ ನೆಲದೊಳಕ್ಕೆ ಇಳಿಯಿತು.

  • ಇದಕ್ಕೂ ಹಿಂದಿನದೇ ತೊಡಕು. ಒಂದು ಮಾತಿನಲ್ಲಿ ಹೇಳುವುದಾದರೆ ಈ ಸಮಸ್ಯೆಯನ್ನು ಪೂರಯಿಸುವಾಗ ನಾಮಪದವು ನಪುಂಸಕಲಿಂಗದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ವ್ಯಾಕರಣವು ಒಪ್ಪದು.

   • ಹೌದು ಸರ್, ನನಗೂ ಅದೇ ಸ೦ಶಯ ಬ೦ತು. ಹೀಗಾಗಿಯೇ ಬಲಿಕಲೇವರ೦ ಎ೦ದು ಮಾಡಿದ್ದೇನೆ. ಅದು ಸರಿ ಅಲ್ಲವೇ? ಭೀಮನದನ್ನೂ ತಿದ್ದಲು ಪ್ರಯತ್ನಿಸುತ್ತೇನೆ. ಧನ್ಯವಾದಗಳು.

  • ಪ್ರಿಯ ನೀಲಕಂಠ, ನಿಮ್ಮ ಸ್ಪಷ್ಟೀಕರಣ ಯುಕ್ತವೇ ಹೌದು. ನನ್ನ ಪ್ರಮಾದಕ್ಕಾಗಿ ಕ್ಷಮೆಯಿರಲಿ. ಆದರೆ ಈ ಪದ್ಯದಲ್ಲಿ ಮತ್ತೂ ಹಲವು ವ್ಯಾಕರಣ-ಅಲಂಕಾರಸಂಬಂಧಿತವಾದ ದೋಷಗಳಿವೆ. ಅವನ್ನೆಲ್ಲ ಮುಖತಃ ಚರ್ಚಿಸೋಣ.

 9. ಮಲಯಮಾರುತನೋಡುವನಂದದಿಂ,
  ಜಲಧರಂ ಚಲಿಕುಂ, ನೆಲದಾಳದೊಳ್
  ಸಲಿಲಮೇ ಪರಿಗುಂ ಭರದಿಂದಲೀ
  ಮಲರ ಕಂಪಿನವೋಲರೆ!ಸೋಜಿಗಂ!

 10. ಜಲಧರಂ ಚಲಿಕುಂ ನೆಲದಾಳದೊಳ್
  ಸಲಿಲಧಾರೆಯ ರೂಪದೆಪೊಯ್ಯುತುಂ
  ಛಲದೆ ಸಾರ್ದಪನೇಂ ಸೊಗಮಿಲ್ಲದಾ
  ಬಲದಿನೊಪ್ಪಿದ ನಂಟನೆ ಭೇದಿಸಲ್!

  (ಆಕಾಶದೊಡನಿದ್ದ ಬಲವಂತದ ಸಂಬಂಧವನ್ನು ಕಡಿದು, ಸೊಗಮಿಲ್ಲವೆಂದು,ಚಲದಿಂದ ಸಾರುತ್ತಿರುವನೇ?)(ಬಲದ ನಂಟು=ಒತ್ತಾಯದ ನಂಟು?)

  • ಭೇಧಿಸಲ್ – ಒಡೆಯುವ ಭೇದವನ್ನೋ, ವೈರಲ್ ಇನ್ಫೆಕ್ಶನ್ ಆದಾಗಿನ ಬೇಧಿಯನ್ನೋ ಆಯ್ದುಕೊಳ್ಳಿ 🙂

   • 🙂 ಮೊದಲನೇಯದು 🙂
    (ಸವರಣೆಯನ್ನು ಮಾಡಿದ್ದೇನೆ, ನೀಲಕಂಠರೇ!)

  • Obviously. In the latter sense ಭೇದಿಸಲ್ at best can mean ‘ಬೇರೆಯವರಿಂದ ಭೇದಿಮಾಡಿಸಿ’ 🙁
   Also, she has correctly spelled it ಭೇದಿ. You have imposed constipation on it by spelling it ಭೇಧಿ!
   ಮಿಶ್ರಶರಭಪ್ರಾಸರಥೋದ್ಧತ|| Obviously it is in the former sense
   Obdura(te) it with the ಸಲ್suffix ye(you) why!
   Objectively she has spelled it ಭೇದಿ. My!
   Obstinately do ye constipate the purge!!

   • ಅಯ್ಯಯ್ಯೋ, ಕಾ೦ಚನ ಮೆೇಡಮ್, ಸತ್ಯವನ್ನು ಬಿಚ್ಚಿಟ್ಟು ನನ್ನನ್ನು ಪ್ರಸಾದರ ಆಪಾದನೆಯಿ೦ದ ಮುಕ್ತರಾಗಿಸಿ

    • ನಿರಾಬಾಧ-ನಿರ್ಭೇಧ-ಭೇದನಾಶಿನಿಯನ್ನು ಬೇಡಿಕೋ ನೀಲಕಂಠ !!

     • ಯಾರಾಕೆ ಮಹಾದೇವಿ? 🙂

     • ಅವೆಲ್ಲ ಭೇದಿನಿವಾರಕ ಆಯುರ್ವೇದೀಯ ಔಷಧಿಗಳು!

     • ಈಗ ಹೇಳುತ್ತಿದ್ದೀರಲ್ಲ! ಒ೦ದು ವಾರದಿ೦ದ ಬಳಲುತ್ತಿದ್ದೇನೆ 🙁

     • ನೀಲಕಂಠರೆ, ಈವರೆಗೆ ಆದದ್ದನ್ನು ತಲೆಗೆ ಹಚ್ಚಿಕೊಳ್ಳಬೇಡಿ; ಈಗ ಹೇಳಿದ್ದಾರಲ್ಲ? ಅಷ್ಟು ಮಾಡಿ.

 11. ವಿಲಯಮೈದುದೊ ನಿರ್ಜರರಿ೦ಗೆನಲ್
  ಸುಲಲಿತ೦ಗೊಳೆ ಕಜ್ಜಮದ೦ಡಜ೦
  ಸಲಿಸೆಯಬ್ಬೆಗೆ ಮೋಚನಮ೦ ಸುಧಾ-
  ಜಲಧರ೦ ಚಲಿಕು೦ ನೆಲದಾಳದೊಳ್

  ನಿರ್ಜರರಿಗೆ ಪ್ರಲಯವೇ ಸ೦ದಿತೋ ಎ೦ಬ೦ತೆ ಅಲ್ಲಿ೦ದ ಸುಧಾಕು೦ಭವನ್ನು ಅಪಹರಿಸಿ ಗರುಡನು ತಾಯ ಬ೦ಧವಿಮುಕ್ತಿಗೋಸುಗ ಅಮೃತವನ್ನು ಹೊತ್ತು ಪಾತಾಳದೆಡೆಗೆ (ಸರ್ಪಗಳ ರಾಜ್ಯಕ್ಕೆ) ನಡೆಯಿತು.

  • Another keelaka! How many of them have you?

   • 🙂 ಇನ್ನೊ೦ದು ಇದೆ. ಏಕೋ ಮೇಲಿನವುಗಳ ಮು೦ದೆ ಅಷ್ಟೊ೦ದು ಅದು ಆಕರ್ಷಕವಾಗಿಲ್ಲ …

    • ಶೀಲದಿಂದಿರುವೆರಡು ಕಬ್ಬಗಳನೊರೆಯುತಾ-
     ಮೇಲೆ ಕಿತ್ತ್ಹೋದೊಂದನೆದುರಿಗಿಟ್ಟು|
     ಮೇಲಿನವುಗಳನಿನ್ನುಮಾಕರ್ಷಮಾಗಿಸುವ
     ನೂಲ ಬೆಣ್ಣೆಯೊಲೆಳೆವ ತಂತ್ರ ಗೈವೈ||

   • ಗ೦ಜಲ ಅಲ್ಲ 🙂
    ಈ ಕೀಲಕಗಳನ್ನು ಬಳಸಿ ಪೂರಿಸುವುದಕ್ಕಿ೦ತಲೂ ಕೀಲಕಗಳಿಲ್ಲದೇ ಪೂರಿಸುವುದು ಹೆಚ್ಚು ಕವಿಸಮಯವನ್ನು ಉತ್ಪಾದಿಸುತ್ತದೆ, ಅಲ್ಲವೇ? ಕೀಲಕಗಳನ್ನು ಬಳಸಿ ಅನೇಕಬಾರಿ ವಾಸ್ತವತೆಯನ್ನು ತ೦ದುಬಿಡುತ್ತೇವೆ. ಅದಿಲ್ಲದೆ ಕಾವ್ಯನಿಹಿತ ಸತ್ಯ ಹೆಚ್ಚು ರೋಮಾ೦ಚಕಾರಿಯಾಗಿರುತ್ತದೆ. ವಾಸ್ತವಿಕತೆಯನ್ನು ತ೦ದಿರಿಸುವುದು ಕಜ್ಜಲಧರ ಭೀಮನ ಉದಾಹರಣೆ. ಅನ್ಯಥಾ, ಕೃಷ್ಣನನ್ನು ನೋಡಿ ನಾಚಿ ಮೋಡ ನೆಲದಲ್ಲಿ ಮುಚ್ಚಿಕೊ೦ಡದ್ದು….

    • ಈ ಪರಿಹಾರವು ತುಂಬ ಸೊಗಸಾಗಿ ವ್ಯಾಕರಣಸಂಮತವಾಗಿಯೂ ಇದೆ; ಅಭಿನಂದನೆಗಳು.

    • ನನ್ನ ಲಘು ಪ್ರತಿಕ್ರಿಯೆಗೆ ಹೊರಬಂದ ಎಂಥಾ ಘನ ವಿಚಾರ – ಇದೇ ಪದ್ಯಪಾನದ ಸ್ವಾರಸ್ಯ !! ಧನ್ಯವಾದಗಳು ನೀಲಕಂಠ.

     • ಅಯ್ಯಯ್ಯೊ, ಜ್ವರದ ತಾಪದಲ್ಲಿ ಏನೇನೊ ಬರೆದೆ. Delete ಮಾಡಲೆತ್ನಿಸಿದರೂ ಹೋಗಲಿಲ್ಲ 🙁

    • ಬಹುಪ್ರಭೇದದ ಜ್ವರಗಳಿವೆ. ತಮಗಾಗಿರುವುದು ಯಾವ ರಖಮಿನದೋ?!
     ಉಪೇಂದ್ರವಜ್ರಂ|| ಗಿಲೀಟಿನೀ ಮಾತುಗಳೇಕೊ ಕಾಣೆಂ
     ಡಿಲೀಟುಗೈಯಲ್ ತೊಡಕೇನೊ ನೀಲನ್?
     ಜುಲಾಬಿನಿಂ ಪಾರಹೆ ಈಗಳಷ್ಟೇ
     ಪುಲಾರಮೀ ಎಲ್ಲವದೇಕೆ ಬೇಕೈ??

 12. ನಿಲಯದೊಳ್ ನಿಧಿಯಿರ್ಪುದನಯ್ಯನಂ-
  ದುಲಿದಿರಲ್ಕಗೆಯುತ್ತಿಳೆಯಂ ನರಂ |
  ಅಲಘುಲೋಭದೆ ತನ್ನಯ ಜಿಹ್ವೆಯೊಳ್
  ಜಲಧರಂ ಚಲಿಕುಂ ನೆಲದಾಳದೊಳ್ ||
  ಜಿಹ್ವೆಯೊಳ್ ಜಲಧರಂ – ನಾಲಗೆಯಲ್ಲಿ ನೀರನ್ನು ತುಂಬಿಕೊಂಡವನಾಗಿ.

  • ಆಹಾ! ಸೊಗಸಾದ ಪೂರಣ!!
   ಬಲುಗಾಲದ ಬಳಿಕ ಬಂದ ಪೆಜತ್ತಾಯರಿಗೆ ಮತ್ತೊಮ್ಮೆ ಸ್ವಾಗತ. ಎಲ್ಲ ಕುಶಲ ತಾನೆ?

   • ಧನ್ಯವಾದಗಳು ಸರ್
    ನಾನು ಕ್ಷೇಮ. ಅಪರೂಪನಾಗಿದ್ದಕ್ಕೆ ಕ್ಷಮಿಸಿ.

 13. ಅಲಲೆ ಕಾಣ್ ಅಲೆಯಂ, ನೆಲೆನಿಲ್ಲದಂ-
  ದಲೆದುದಂ, ಮುಗಿಲೇ ಪಡಿಮೂಡುದಂ ।
  ಇಳೆಯ ಕನ್ನಡಿಯೋಲ್ ಕಡಲಿಂತಿರಲ್
  ಜಲಧರಂ ಚಲಿಕುಂ ನೆಲದಾಳದೊಳ್ !!

  ಭುವಿಯ ಕನ್ನಡಿ ಕಡಲು – ಅಲೆಗಳ ಸಾಗರ ಚಲಿನುವ ಮೋಡದ ಪ್ರತಿಬಿಂಬದಂತೆ ಕಂಡ ಕಲ್ಪನೆಯಲ್ಲಿ !!

 14. All water is below the earth surface.
  ಚಲಿಸಲೂರ್ಧ್ವಕೆ ತಾವೆನಿತೋ ಜನರ್
  ತಲವ ಸೇರುವರಂತುಟೆ ವೇಗದಿಂ|
  ಕೆಲವೆ ಕಾಲವನಂತದೆ(sky) ಬೀಗುತುಂ
  ಜಲಧರಂ ಚಲಿಕುಂ ನೆಲದಾಳದೊಳ್||

 15. ಜಲಧರಂ ಚಲಿಕುಂ ನೆಲದಾಳದೊಳ್,
  ಒಲವನಿತ್ತಿಳೆಯಾ ಮನದಾಳದೊಳ್;
  ಕಲಹಮಂ ತೊಡೆಯಲ್ಢರೆಯಾಗಸಂ
  ಗಳೊಳೆ,ಪಂಚುತೆ ತಾಂ ಸಮಕಾಲಮಂ;

  (ಭೂಮಿ ,ಗಗನಗಳ ಮಧ್ಯದಲ್ಲಿ ಕಾಲವನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದಾನೆ,ಜಲಧರನು(ಇಬ್ಬರ ನಡುವೆ ಜಗಳವನ್ನು ತಪ್ಪಿಸಲು)) :-)(ಮಳೆಯಾಗಿ ಭೂಮಿಗೆ,ಮೇಘ್ಹವಾಗಿ ಬಾನಿಗೆ..)

 16. ಮಲಿನ ಚಿತ್ತದೆ ಮೋಡಗಳೆದ್ದಿರಲ್
  ತಿಳಿವಿನೋಜದೆ ಭಾವಗಳೋಘಮೇ
  ಕಲೆತುಕೂಡುತೆ ಬಂದೊಡನಾಗಳಾ
  ಜಲಧರಂ ಚಲಿಕುಂ ನೆಲದಾಳದೊಳ್

  (ಮನವನ್ನು ಕವಿದ ಮೋಡವು ,ತಿಳಿವು ಬಂದಾಗ ಮಾಯವಾಗುವದು)

  • ಕಾಂಚನ, ಚೆನ್ನಾಗಿದೆ. ಮೊದಲ ಪಾದದಲ್ಲಿ ಛಂದಸ್ಸು ಸ್ವಲ್ಪ ತಪ್ಪಿದೆಯಲ್ಲವೆ? ಕಲಕಿ ಚಿತ್ತವ ಮೋಡಗಳೆದ್ದಿರಲ್- ಎಂದು ತಿದ್ದಬಹುದೇನೋ.

 17. || ದ್ರುತವಿಲಂಬಿತವೃತ್ತ ||

  ಬಿಲವ ಬಿಟ್ಟು ಸವಾರಿಯ ಗೈದಿರಲ್
  ಮೊಲಕೆ ವೃಷ್ಟಿಯ ಸೂಚನೆ ಸಿಕ್ಕಿ,ಗೊಂ- |
  ದಲಿಸುತೋಡದೆ, ಗರ್ಜಿಸೆ ಬಾನಿನೊಳ್
  ಜಲಧರಂ, ಚಲಿಕುಂ ನೆಲದಾಳದೊಳ್ ||

  • ಆಹಾ! ಒಳ್ಳೆಯ ಪರಿಹಾರ; ವಾಕ್ಯಾನ್ವಯಚಮತ್ಕಾರದಿಂದ ಸಂದ ಈ ಪೂರಣ ಸೊಗಸಾಗಿದೆ.

   • ಧನ್ಯವಾದಗಳು ಸಹೋದರರೆ.

 18. ಚೀದಿ, ಕಾಂಚನ, ಉಷಾ ಮತ್ತು ಪ್ರಸಾದರ ಪೂರಣಗಳು ಚೆನ್ನಾಗಿಯೇ ಇವೆ. ಅಭಿನಂದನೆಗಳು. ಆದರೆ ಇವುಗಳೆಲ್ಲ ಪ್ರಾಯಿಕವಾಗಿ ಹಳಗನ್ನಡದ ಹದವನ್ನು ಹೆಚ್ಚಾಗಿಸಿಕೊಳ್ಳಬೇಕು. ಈ ಪೈಕಿ ಉಷಾ ಅವರ ಶೈಲಿಯು ಹೆಚ್ಚು ಹಳಗನ್ನಡಕ್ಕೆ ಹತ್ತಿರವಿದೆ.

  • ಧನ್ಯವಾದಗಳು ಗಣೇಶ್ ಸರ್,
   ಛಂದಸ್ಸಿನ ನಿರ್ಬಂಧವಿರುವುದರಿಂದ ಸ್ವಲ್ಪ ಸಾಧ್ಯವಾಗಿದೆ. ಇಲ್ಲವಾದರೆ ಛಂದಸ್ಸಿನ ಆಯ್ಕೆಯೇ ತಿಳಿಯುತ್ತಿಲ್ಲ. ಶಕುಂತಲಾರಂತೆ ವಿವಿಧ ವೃತ್ತಗಳಲ್ಲಿ ಪದ್ಯ ರಚಿಸುವ ಆಸೆಯಂತೂ ಇದೆ.

  • ಪ್ರಯತಿಸುವೆ,ಧನ್ಯವಾದಗಳು

  • ಪ್ರಯತ್ನಿಸಲಾರೆ. ಹಳಗನ್ನಡಕಾವ್ಯಾಧ್ಯಯನವನ್ನು ಆರಂಭಿಸಲು ಸಂಕಲ್ಪಿಸುವೆ.

   • ಹಳಗನ್ನಡಕಾವ್ಯಾಧ್ಯಯನ ಅರಿಸಮಾಸವಾಯಿತು!

    • ಬರೆಯುವಾಗಲೇ ಗೊತ್ತಾಯ್ತು. ’ಹಳಗನ್ನಡಕಬ್ಬಧ್ಯಯನ’ಕ್ಕಿಂತ ಮೇಲು ಎಂದು ಉಳಿಸಿಕೊಂಡೆ.

 19. ನೆಲಸಿದಂತರಜಾಲದ ಸೇವೆಯೊಳ್
  ಹಲವು ತಾಣವನೀಕ್ಷಿಸುದಾಗಲುಂ
  ಕಲೆತು ಮಾಹಿತಿಯಂ ಸುರಿದೊಯ್ಯುತುಂ
  ಜಲಧರಂ ಚಲಿಕುಂ ನೆಲದಾಳದೊಳ್ !!

  Internet Cloudನ ಕಲ್ಪನೆ. ಸ್ಥಿರ ಬ್ರಾಡ್ ಬ್ಯಾಂಡ್ ಸೇವೆಯಲ್ಲಿ (BSNLದು !!) Data Upload / Download ವೇಳೆ – “ಮಾಹಿತಿ ಮೋಡ” ನೆಲದಾಳದಲ್ಲಿ (Underground Cable ಮೂಲಕ) ಹರಿದಾಡುವುದು.

  • ಹಾಹ್ಹಾಹಹ… ಚೆನ್ನಾಗಿದೆ! ಆದರೆ ಆ cloud ಅಲ್ಲೇ ಒ೦ದು ಕಡೆ ಇರುತ್ತದೆ. ಹರಿಯುವುದು ಮಾಹಿತಿಯ ವಿದ್ಯುನ್ಮಾನ ಸ೦ದೇಶಗಳು ಮಾತ್ರ 🙂

   • Yes,Yes ಅದೇ “ಮಾಹಿತಿ ಮೋಡ” !! Thanks.

    • ನಿಮ್ಮ ಕಲ್ಪನೆ ಅದ್ಭುತವಾಗಿದೆ. Internet cloud ಎಂಬ ಆಧುನಿಕಾಂಶವನ್ನು ಪೂರಣಕ್ಕೆ ಬಳಸಿಕೊಂಡ ಪರಿ ಸುತರಾಂ ಸ್ತುತ್ಯ. ಆದರೆ ಭಾಷೆಯಲ್ಲಿ ಸಾಕಷ್ಟು ತಿದ್ದಿಕೊಳ್ಳಬೇಕಿದೆ.

     • ಧನ್ಯವಾದಗಳು ಗಣೇಶ್ ಸರ್, “internet slow” ಅಂತ complaint ಬಂದಾಗ – “cable pair” change ಮಾಡಿಸಿದಾಗ ಹೊಳೆದ ಪೂರಣ !! ಇನ್ನು ಭಾಷೆ……..ಖಂಡಿತ ಪ್ರಯತ್ನಿಸುವೆ.

  • ವಸ್ತುತಃ ನೆಲದಾಳದೊಳಗಿರುವ ಕ್ಲೌಡ್ ಇದೊಂದೇ. ಕಲ್ಪನೆ/ಪರಿಹಾರಗಳು ಚೆನ್ನಾಗಿವೆ.

 20. ಕಳೆದುಪೋಪಭಯಂಬಡುತಾಸ್ತಿಯಂ
  ಬಳಿಯೊಳೆಂತುಟೊ ಕಾಪಿಡಲೆಂಬವೊಲ್
  ಕಲೆತ ನಾಣ್ಯನಗಂಗಳನಾಯುತುಂ
  ಜಲಧರಂ ಚಲಿಕುಂ ನೆಲದಾಳದೊಳ್

 21. ಕಳೆದ ಪೂರ್ವಜರೊಳ್ಪಿಗೆ ಯತ್ನದಿಂ
  ನೆಲಕೆ ತಂದು ಭಗೀರಥನೆಯ್ದಿರಲ್
  ಬಳಿಕಮಾ ರಥಮೆಂಬ ಸುರಾಪಗಾ-
  ಜಲಧರಂ ಚಲಿಕುಂ ನೆಲದಾಳದೊಳ್
  (ಸತ್ತುಹೋದ ಪೂರ್ವಜರಿಗೆ ಸದ್ಗತಿಯನ್ನು ದೊರಕಿಸುವ ಯತ್ನದಿಂದ ಭಗೀರಥ ನೆಲಕ್ಕೆ ತಂದ ಬಳಿಕ ಆ ರಥವೆಂಬ ಸುರಾಪಗಾಜಲಧರ- ಗಂಗಾಜಲವನ್ನು ಧರಿಸಿರುವುದು ನೆಲದಾಳದಲ್ಲಿ ಚಲಿಸಿತು)

  • ಅಬ್ಬಬ್ಬ, ನಿಮ್ಮ ಭಗೀರಥ ರಥ, ನಿಮ್ಮ ಬಲಿಯ ಬೆಳ್ಪಿನೊಳ್ಪಿನ ಕೀರ್ತಿ ತು೦ಬ ತು೦ಬ ಚೆನ್ನಾಗಿವೆ. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.

 22. ಹಿಂದೆ ಗೋಷ್ಠಿಯಲ್ಲಿ ಹೀಗೆ ಪರಿಹರಿಸಿದ್ದೆ-
  ನೆಲದೆ ಪೆರ್ಚುತುಮಿರ್ದೊಡಮಂತು ತಾಂ
  ಬಲಿಯನಾ ಹರಿ ನೂಂಕಿರೆ ಪಾದದಿಂ
  ಕಲೆತ ಕೀರ್ತಿಯ ರೂಪದ ಶಾರದಂ
  ಜಲಧರಂ ಚಲಿಕುಂ ನೆಲದಾಳದೊಳ್
  (ಹಿಂದೆ ಭೂಮಿಯಲ್ಲಿ ಬಲಿಯ ಕೀರ್ತಿ ಹೆಚ್ಚುತ್ತಿದ್ದಾಗ ವಾಮನಾವತಾರದಿಂದ ಹರಿ ಬಲಿಯನ್ನು ಪಾದದಿಂದ ನೂಂಕಿದ. ಆಗ ಪಾತಾಳಕ್ಕೆ ಸೇರಿದ ಬಲಿಯ ಕೀರ್ತಿಯ ರೂಪದ ಶರತ್ಕಾಲದ ಮೋಡ ನೆಲದಾಳದಲ್ಲಿ ಚಲಿಸುತ್ತಿತ್ತು)

 23. ನಿಲಯದಗ್ರದೆ ಭೂಮಿಯ ತೋಡುತುಂ
  ಪಲರಪೇಕ್ಷಿಪ ಬಾವಿಯನಾಗಿಸಲ್ |
  ಜಲಧರಂ, ಚಲಿಕುಂ ನೆಲದಾಳದೊಳ್,
  ಲಲಿತನೂತನಯಾಂತ್ರಿಕಸಾಧನಂ ||

 24. ಒಲವಿನೆನ್ನಯ ಭಾವಮನೊಯ್ದು ತಾಂ
  ಚೆಲುವೆಗಂ ನಿಜದೂತನ ಪಾಂಗಿನಿಂ
  ತಲಪಿಸಲ್ ಬರನೈ!ಮಳೆಯಂದದಿಂ
  ಜಲಧರಂ ಚಲಿಕುಂ ನೆಲದಾಳದೊಳ್!

 25. ಅಲೆಗಳಾಗಸದಲ್ಲೆಗರಾಡಿರಲ್
  ಮುಳುಗುತಿರ್ದುದುಮೆಲ್ಲವು ನೀರಿನೊಳ್
  ಪ್ರಳಯಕಾಲದ ಭೀಕರ ರೋಷದಿಂ
  ಜಲಧರಂ ಚಲಿಕುಂ ನೆಲದಾಳದೊಳ್

  [ಆಗಸದವರೆಗೂ ಅಲೆಗಳೆದ್ದು ಎಲ್ಲವೂ ಮುಳುಗುವಾಗ, ಪ್ರಳಯಕಾಲದ ರೋಷದಲ್ಲಿ ಮೋಡಗಳು ನೆಲದಡಿಯೂ ಓಡಾಡಿದವು – ನೆಲ ಎಂಬುದೇ ಇರಲಿಲ್ಲ – ಎಲ್ಲ ನೀರು ಎಂಬ ಭಾವ ]

 26. “ಮಳೆಯ ಹಂಚುವೆನೆನ್ನುತೆ ಮೋಸದಿಂ
  ಖಳನವೋಲ್ ಜಲಮಂ ಸೆಳೆದೊಯ್ದನೆಂ” –
  ದಿಳೆಯು ಸಾಗರನೊಟ್ಟಿಗೆ ದೂರಿರಲ್
  ಜಲಧರಂ ಚಲಿಕುಂ ನೆಲದಾಳದೊಳ್

  [ಮೋಸದಿಂದ ನೀರನ್ನು ಕದ್ದೊಯ್ದ ಎಂದು ದೂರಿತ್ತಿರಲು, ಮೋಡ ನೆಲದಡಿಗೆ (underground) ಹೋಯಿತೆನ್ನುವ ಭಾವ]
  [ಇಲ್ಲಿ ದೂರಿನಲ್ಲಿ ಪುಲ್ಲಿಂಗದ ಆರೋಪವಿದ್ದರೂ, ಕಡೆಯ ಸಾಲಿನಲ್ಲಿ (ಅಂದರೆ ಬರಹಗಾರನ ಪ್ರಕಾರ) ನಪುಂಸಕದಲ್ಲಿಯೇ ಇದೆ 😀 ]

 27. ಮಳೆಯ ರಾಶಿಯ ಹೊಯ್ಯುತೆ ನಾರಿಯಾ
  ಸೆಳೆದು ಸೀರೆಯ ಶೀಲವ ಸೋಂಕಿತೆಂ
  ದಳಲು ದೇಶದೊಳೆಲ್ಲೆಡೆ ಪರ್ಬಿರಲ್
  ಜಲಧರಂ ಚಲಿಕುಂ ನೆಲದಾಳದೊಳ್

  [fearing a sexual harrasment case, the cloud goes underground]

  • ರಾಮ್ ಮೊದಲನೇ ಸಾಲಿನ ಕಡೆಯ ಪದವನ್ನು ನಾರಿಯಂ ಎಂದು ಮಾಡಿದರೆ ಚೆನ್ನವಲ್ಲವೆ

   • ಚೀದಿ, ನಾರಿಯಂ ಎಂದರೆ ನಾರಿಯನ್ನು ಸೆಳೆದ ಎಂದಾಗುತ್ತದೆ. ಆದರೆ ಅದು ಸೆಳೆದದ್ದು ನಾರಿಯ ಸೀರೆಯನ್ನು 🙂

  • ಈ ನಾರಿ ಛತ್ರಿ ಏಕೆ ಹಿಡಿದಿರಲಿಲ್ಲ ಎ೦ಬ ಪ್ರಶ್ನೆ ಏಳುತ್ತದೆ. ಮಳೆಸುರಿಸುವ ಸಾರ್ವಜನಿಕ ಹಿತಾಸಕ್ತಿಯ ಮು೦ದೆ ಛತ್ರಿಯಿ೦ದ ತಡೆಯಬಹುದಾಗಿದ್ದ ತನ್ನ ಕಿರುಕುಳವು ಗೌಣವಾಗಿ ಕೇಸ್ ಹೋಲ್ಡ್ ಆಗದೇ ಇರುವ ಸಾಧ್ಯತೆಗಳೇ ಹೆಚ್ಚು. ಈ ಸೂಕ್ಷ್ಮವನ್ನು ಮೋಡಕ್ಕೆ ಅರುಹಿ ಅದನ್ನು ನೆಲದಿ೦ದ ಹೊರಕ್ಕೆ ಕರೆತರುವುದು ಸೂಕ್ತ ಅನಸ್ತದೆ.

   • ಹುಲು ಮಾನವರಿಂದಲೇ ರಕ್ಷಣೆ ಕೊಡಲಾರದ ಛತ್ರಿಗೆ ಸ್ಥಿತಮನಸ್ಕನಾದ ವರುಣನನ್ನು ತಡೆಯುವುದು ಸಾಧ್ಯವೇ?

  • ಇವಳ್ಯಾರೋ semiಗರತಿ. ವಸ್ತ್ರವನ್ನು ಕಿತ್ತೊಗೆಯುವ ಹಂತದವರೆಗೆ ಉತ್ತೇಜಿಸಿದಳೇಕೊ! ತತ್ಪೂರ್ವವೇ ಸೂರಿನ ರಕ್ಷಣೆಯನ್ನು ಆಶ್ರಯಿಸಬೇಕಿತ್ತಲ್ಲವೆ ಅವಳು? ಅಲ್ಲದೆ, ಯಾರೋ ಕೆಲವು ಪುಂಡರು (ಹನಿಗಳು) ಮಾಡಿದ ಅಪಚಾರಕ್ಕೆ ಇಡಿಯ ಪುಂಕುಲಕ್ಕೇ (ವರ್ಷರ್ತು) ಕಲಂಕವೆ?
   ಒಂಟಿಯದು ಸ್ಯಾಂಪಲ್ಲು ಎನಿಸುವುದೆ ಎಂದಾರೆ?
   ಗಂಟಾದೊಡಾಗ ಲೆಖ್ಖಕೆ ಸಲ್ವುದೈ|
   ಆಂಟಿಯನು ಕೆಲವು ಪುಂಡರು ಗೋಳುಹೊಯ್ಯಲೇಂ?
   ಎಂಟೆದೆಯ ಭಂಟರೆಲ್ಲರ್ ದುಷ್ಟರೇಂ??

 28. ಸುಳಿವು ಕಾಣದೆ ಮೋಡದ ಬಾನಿನೊಳ್
  ಬಳಲಿ ಸೋತವರೆಲ್ಲರು ಚುಚ್ಚುತುಂ
  ಹಲುಬುತಿರ್ದರಲಾ ಮಳೆಗೆನ್ನುತುಂ
  “ಜಲಧರಂ ಚಲಿಕುಂ ನೆಲದಾಳದೊಳ್”

  [ಮಳೆಗಾಗಿ ಕಾದವರು, ಮೋಡ ರಹಿತ ಆಗಸವನ್ನು ನೋಡಿ, ವ್ಯಂಗ್ಯವಾಗಿ ಹೀಗೆಂದರೆಂಬ ಭಾವ]

 29. ತಲೆಯನೆತ್ತುತೆ ವಿಂಧ್ಯದ ಪರ್ವತಂ
  ಮಳೆಯ ಮೋಡಗಳಂ ತಡೆದೊಡ್ಡಿರಲ್
  ಕಳೆಯೆ ದೂರವನೂರ್ಧ್ವದೊಳರ್ಪುದೇಂ?
  ಜಲಧರಂ ಚಲಿಕುಂ ನೆಲದಾಳದೊಳ್

  • ಸರ್, ಮೂರನೆ ಸಾಲು ಸ್ಪಷ್ಟವಾಗಲಿಲ್ಲವಲ್ಲ…

   • ದೂರವನ್ನು ಕಳೆಯುವುದು = ಮುಂದೆ ಚಲಿಸುವುದು
    ಊರ್ಧ್ವದೊಳರ್ಪುದೇಂ? = ಮೇಲಿನಿಂದ ಆಗದೆಂದು
    ಅಂದರೆ ಮೇಲಿನ ಹಾದಿಯಲ್ಲಿ ಮುಂದೆ ಚಲಿಸುವುದು ಸಾಧ್ಯವಿಲ್ಲವೆಂದು ನೆಲದಲ್ಲಿಯ ಚಲಿಸಿತೆಂಬ ಭಾವ

    • ಆಗದೆಂ is not = ಆಗದೆಂದು. A small correction is suggested. Just spell ‘ಆಗದೆಂ’ as ‘ಆಗ, then’ 😉

 30. ಅಲೆಗಳಂತೆಯೆ ಧಾವಿಸುತೊರ್ಮೆಲೇ
  ಸೆಳೆದಿರೆಲ್ಲರ ಪದ್ಯದ ಧಾರೆಯಿಂ
  ಭಲರೆ ನಿಮ್ಮಯ ಪೂರಣಗಳ್ ರಸಂ
  ಗಳನುಮುರ್ಕಿಸುತಿರ್ಪುದು ಚೆಂದದಿಂ

 31. ಕೊಳವೆ ರಂಧ್ರವ ತೋಡುತೆ ಪಕ್ಕದೊಳ್
  ಸೆಳೆದರೈ ಜಲಮೆಲ್ಲವ ಭಾವಿಯಿಂ
  ಕಳಚುತುಂ‌ ಮನೆಯಿಂದಲೆ ವಾಸಮಂ
  ಜಲಧರಂ ಚಲಿಕುಂ ನೆಲದಾಳದೊಳ್

  ಜಲಧರ = well, borewell with water. As the neighbours keep on drilling, it moves from place to place

 32. ಮುಳಿದುದಾ ಬರಗಾಲದೊಳುತ್ತು ಬಿ–
  ತ್ತಲದೊ ಮೋಡದ ಬೀಜಗಳಂ ಗಡಾ !
  ಕಲಿಯ ಕಾಲದೊಳುಂ ಸುಳಿವಾಟ ಕಾಣ್,
  ಜಲಧರಂ ಚಲಿಕುಂ ನೆಲದಾಳದೊಳ್ !!

  ಮೋಡ ಬಿತ್ತನೆಯ ಸಾಮಾನ್ಯ ಕಲ್ಪನೆ !!

  • ತು೦ಬ ತು೦ಬ ಸೊಗಸಾದ ಕಲ್ಪನೆ!

   • ನೀಲ ನೆಲದಡಿಯ ಮೋಡಬಿತ್ತನೆ!! ಮೆಚ್ಚಿದ ನೀಲಕಂಠನಿಗೆ ಧನ್ಯವಾದಗಳು

 33. ಇಳಿದು ಪಾವಕನೊಳ್ ಸಿರಿ ಸೀತೆಯು೦
  ಕೊಳೆಯ ನೀಗುತೆ ಪುಷ್ಪಕದೊಳ್ ಬರಲ್
  ಜಲಧರ೦ ಚಲಿಕು೦ ನೆಲದಾಳದೊಲ್
  ತಿಳಿದು ಮೈಥಿಲಿ ಪಾವಕನ೦ತೆವೊಲ್
  ಸೀತೆಯು ಅಗ್ನಿ ಪರೀಕ್ಷೆಯನ್ನು ಎದುರಿಸಿ ಪುಷ್ಪಕ ವಿಮಾನದಲ್ಲಿ ಬರುತಿದ್ದಾಗ ಅವಳು ಅಗ್ನಿಯಂತೆ ಪವಿತ್ರಳೆಂದು ಮೋಡವು ಅವಳ ದಾರಿಗೆ ತಡೆಯು೦ಟಾಗದ೦ತೆ ನೆಲದಾಳಕ್ಕಿಳಿಯಿತು

 34. ಪೊಲದ ಮೇರೆಯೊಳಿರ್ವ ಜಲಾಕರ-
  ಕ್ಕಿಳಿದ ಬಾಲಕ ನೀರ್ಮೊಗೆವಾಟದೊಳ್
  ನಳಿಕೆ ಕುಪ್ಪಿಯ ಬಿಟ್ಟುಲಿದನ್ ಅಗೋ
  ”ಜಲಧರ೦ ಚಲಿಕುಂ ನೆಲದಾಳದೊಳ್”

  ಜಲಧರಂ = ನೀರನ್ನು ತನ್ನಲ್ಲಿ ತುಂಬಿಕೊಂಡ ಕುಪ್ಪಿ

  ಬಾಲಕನೊಬ್ಬ ನಳಿಕೆಯಂಹ ಬಾಯಿಇರುವ ಗಾಜಿನ ಸೀಸೆಗೆ ನೀರನ್ನು ತುಂಬುವ ಆಟವಾಡುತ್ತ ಆ ಕುಪ್ಪಿಯನ್ನು ಕೊಳದಲ್ಲಿ ನೆಲದಾಳಕ್ಕೆ ಬಿಟ್ಟು ಕುತೂಹಲದಿಂದ ”ಜಲಧರಂ ಚಲಿಕುಂ ನೆಲದಾಳದೊಳ್” ಎಂದನು .

 35. ಕೊಳದ ರಾಡಿಗೆ ಕಾಲ್ಗಳನೂರುತು೦
  ಚೆಲುವ ತಾವರೆ ಪೂಗಳ ಕೀಳುತಲ್
  ಕೊಳದ ಕೂಲಕೆ ಪೋಗುತೆ ಭಾವಿಪರ್
  ಜಲಧರ೦ ಚಲಿಕುಂ ನೆಲದಾಳದೊಳ್
  ತಾವರೆ ಹೂಗಳನ್ನು ಕೀಳಲು (ಮೊದಲಸಲ ) ಕೆಸರು ನೀರಿಗಿಳಿದವರು ಹಿಂದಿರುಗುವಾಗ ಕಾಲೂರಲು ನೆಲೆ ಸಿಗದಂತಾಗಿ ”ಏನಪ್ಪಾ ಇದು ನೆಲದಾಳದಿಂದಲೇ ಕೊಳ (ಜಲಧರ) ಚಲಿಸುತ್ತಿದೆಯೋ ಏನೋ” ಎಂದು ಭಾವಿಸುವರು .

 36. ನೆಲೆಯದೈ ಮನುಜರ್ಗಿಳೆಯುಂ, ರಸಾ-
  ತಲ, ಮಹಾತಲಮಿರ್ಕಡಿಯೊಳ್ ಗಡಾ !
  ತಲತಲಾಂತರಕುಂ ಮುಗಿಲಿರ್ದಿರಲ್
  ಜಲಧರಂ ಚಲಿಕುಂ ನೆಲದಾಳದೊಳ್ !!

  ಭೂಮಿ ಅಡಿಯಿರುವ ಸಪ್ತ ಲೋಕಗಳ ಕಲ್ಪನೆ. ಅತಲ, ವಿತಲ ….. ಮಹಾತಲ ಲೋಕಗಳಲ್ಲೂ ಆಕಾಶ / ಮೋಡ ಗಳಿರಲು – ಭೂಮಿಯ ಆಳದಲ್ಲಿ ಮೋಡ ಚಲಿಸಿದಂತೆ ಆಗುದಲ್ಲವೇ ?!!

 37. ಅನಿಸಿಕೆಗಳನ್ನು ನೂರ್ಮ(ರ್ಮಾ)ಡಿಸುವ ಪ್ರಯತ್ನ !!

  ಅಲೆದುಬಂದವನಂ ಪಿಡಿದುಂ ಗಡಾ
  ನಿಲಿಸಿ ಕಾರಣ ಪೇಳಿಸೆ ಪೀಡಿಸಲ್ ।
  ಬಲಿಕೆಗೆಯ್ಯಲವಂಗಡವಾಗದಂ-
  ಜಲಧರಂ, ಚಲಿಕುಂ ನೆಲದಾಳದೊಳ್ ।।

  ಅವಂಗಡವಾಗದಂಜಲಧರಂ = ಅವಂಗೆ + ಆಡವು + ಆಗದೆ + ಅಂಜಲು + ಅಧರಂ
  ಬಲಿಕೆಗೆಯ್ = ದೃಢೀಕರಿಸು
  ಅಧರ = ಸೋತವನು / ವಾದದಲ್ಲಿ ಬಾಯಿಕಟ್ಟಿ ಹೋದವನು !!
  (ಅಲೆದು ಬಂದವನನ್ನು ಹಿಡಿದು ನಿಲ್ಲಿಸಿ (ಎಲ್ಲಿಗೆ ಹೋಗಿದ್ದುದೆಂದು) ಕಾರಣ ಕೇಳಲು – ಸಾಬೀತು ಪಡಿಸಲು ಸಾಧ್ಯವಾಗದೆ ಹೆದರಿ ಸೋತವ “ಭೂಮಿಗಿಳಿದುಹೋದ” ಎಂಬ ಅರ್ಥದಲ್ಲಿ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)