Jul 202015
 

pic

  141 Responses to “ಪದ್ಯಸಪ್ತಾಹ ೧೬೦: ಚಿತ್ರಕ್ಕೆ ಪದ್ಯ”

 1. ರಜೋಗುಣದೊಳೋರ್ವನು೦ ತಮದ ಕರ್ಪಿನಿ೦ದೋರ್ವನು೦
  ನಿಜಾ೦ಗಮನೆ ತಾಳ್ದಿರಲ್, ತ್ರಿಗುಣರ೦ಜಿತಕ್ಷೋಣಿಯೊಳ್
  ಪ್ರಜಾಮನದೊಳೆ೦ದಿಗು೦ ಚಣಚಣ೦ಗಳೊಳ್ ಪೋರುವರ್
  ನಿಜತ್ವದಿನೆ ಸತ್ತ್ವಮು೦ ಬಹುಲಸೂಕ್ಷ್ಮದಿ೦ ತೋರ್ದುದಯ್

  ದಿನದಿನವೂ ಈ ತ್ರಿಗುಣಾತ್ಮಕವಾದ ಭೂಮಿಯ ಜನರ ಮನದಲ್ಲಿ ರಕ್ತರ೦ಜಿತ ರಜೋಗುಣವೂ, ತಮದ ಕಾಲಿಮೆಯೂ ಚಣಚಣಕ್ಕೂ ಹುಟ್ಟುತ್ತ ಹೋರಾಡುತ್ತಿರುತ್ತವೆ. ಇ೦ಥದ್ದರಲ್ಲಿ, ಮೂರನೆಯದಾದ ಸತ್ವವು ಬಲು ಸೂಕ್ಷ್ಮವಾಗಿ ತೋರಿಬರುತ್ತದೆ, (ಸಿಗುವುದು ವಿರಳ, ಇದ್ದರೂ ಗುರುತಿಸುವುದು ಕಷ್ಟ)

  • Metre-dictionಗಳ ಸೊಗಸು ಹಾಗಿರಲಿ. ಇಲ್ಲಿ ಕಲ್ಪನೆಯು ಕೊನರಿದ್ದೇ ಮಹತ್ಸಾಧನೆ. ಅಭಿನಂದನೆಗಳು.

   • ಧನ್ಯವಾದಗಳು! ಕಲ್ಪನೆಗಳು ಬರುವುದರಲ್ಲಿ ನನ್ನ ಸಾಧನೆ ಏನಿದೆ ಸರ್?! 🙂

   • ನಿಮ್ಮ ಕಲ್ಪನೆ ಚೆನ್ನಾಗಿದೆ. ಪ್ರಜರ್ ಎಂಬುದು ಅಸಾಧುರೂಪ. ಅದು ಪ್ರಜೆಗಳ್ ಎಂದೇ ಅಗಬೇಕು. ಸತ್ತ್ವ, ತತ್ತ್ವ ಎಂದೇ ಬರೆಯಬೇಕು. (ಒಳಿತಿನ ತನ = ಸತ್+ತ್ವ, ಅದರ ತನ = ತತ್+ತ್ವ). ಪೋರುವರ್ ಎಂದರೆ ಮತ್ತೂ ಒಳಿತು.

    • ಧನ್ಯವಾದಗಳು ಸರ್. ತಿದ್ದಿದ್ದೇನೆ. ಪ್ರಜಾಮನ ಸಾಧುವಾಗುವುದೇ?

 2. ನಿದ್ದೆಯಿಂ ಕಣ್ಣೆಳೆದೊಡೊಂದು ಗಳಿಗೆಯ ಕಾಲ (24 min.)
  ಎದ್ದೆದ್ದು ಚಿತ್ರವನು ಕಂಡೆ ಮಾತ್ರಂ||
  ಅಷ್ಟೆ!
  ಇದ್ದುದನ್ನಿದ್ದಂತೆ ಪೇಳ್ದೊಡಂ ನೀಮೆಲ್ಲ-
  ರೆದ್ದೊದೆಯದಿರಿ ಎನ್ನ ಎದೆಗೂಡಿಗೆ||

  • ನಿದ್ದೆಯಿಂದೆದ್ದೊಡನೆ ಗುಳಿಗೆ ನುಂಗುವ ಘಳಿಗೆ
   ಜಿದ್ದಿನಿಂ ಚಿತ್ರಗಳ ನೋಡಿರ್ಪಿರೈ
   ಎದ್ದೊದೆಯೆ ಖಳಗಲ್ಲಿ ನಾಯಕನು ನೀವು ಹೆದ –
   ರಿದ್ದೇಕೆ ನಾವೇನು ರಾಜಭಟರೆ?
   🙂

 3. ವೀರರ್ಕಳ್ ಸೆಣೆದಾಡಿರಲ್ಕೆ ಭಯದಿಂದೋಡಿರ್ಪುವಾ ಮೋಡಗಳ್
  ಘೋರಂ, ಭೀಕರ ಯುದ್ಧದೊಳ್ ವೆರತ ಕಾಲಂ ಸ್ಥಬ್ಧಮಾಗಿರ್ದವೊಲ್
  ತೋರುತ್ತಿರ್ಪುದುಮೀ, ವಿಶೇಷ ಸಮರಂ ಕಾಣಲ್ಕೆ ನೈಸರ್ಗಮೇ
  ದೂರಕ್ಕಳಕಿನೊಳಿಂದ ಸೇರಿದವೊಲಿದ್ದಂತಿರ್ಪುದೀ ದೃಶ್ಯದೊಳ್

 4. The blackie is wearing quite some garments and ornaments and arms. He is safe, for at the most he may lose one garment or ornament in flight. But the reddie? He will lose everything if the one garment he is wearing gives away!
  ಈರ್ವರೊಳ್ ಸುರಕ್ಷತೆಯು ಹೆಚ್ಚಹುದು ಕರಿಯಂಗೆ
  ಸರ್ವಮಂ ತೊಟ್ಟಿಹನು ವಸ್ತ್ರ-ತೊಡವೆ|
  ಹೋರ್ವ ಲೆಖ್ಖಿಸದೆ ಬಿದ್ದೊಡಮೊಂದು, ಕೆಂಚನದು
  ಸರ್ವಮುಂ ಪೋದಂತೆ ಶಾಟಿ ಸಡಿಲಲ್||

  • Lol… 😀 ಮೊದಲನೇ ಸಾಲಿನಲ್ಲಿ ಒಂದು ಮಾತ್ರೆ ಹೆಚ್ಚಾಗಿದೆ

   • ಒಡವೆ-ವಸ್ತ್ರಗಳು ಆತನಿಗೆ ಹೆಚ್ಚಾಗಿದ್ದಂತೆ ಮಾತ್ರೆಯೂ ಹೆಚ್ಚಗಿದೆ!! ಇದೊಂದು ಬಗೆಯ ಕಾವ್ಯಧ್ವನಿ!!!

    • ಶಿಕ್ಷೆಯು ಅಪರಾಧಕ್ಕೆ ಸಮನಾಗಿರಬೇಕು (ಶ್ರೀ ಎಸ್. ಎಲ್. ಭೈರಪ್ಪನವರ ಅಂಚು ಕಾದಂಬರಿಯಲ್ಲಿ ಡಾ|| ಅಮೃತಳ ಮಾತು)

   • ಚೀದಿ, ’ಮಾತ್ರೆಯೊಂದು ಹೆಚ್ಚಾಗಿದೆ’ ಎಂಬುದಕ್ಕಿಂತ ಘೋರವಾದ ಆಕ್ಷೇಪಣೆ ಎತ್ತಬಹುದಾಗಿತ್ತು ನೀವು – ’ಲಗಂ ಆಗಿದೆ’ ಎಂದು. ಎರಡನೆಯ ಗಣದಲ್ಲಿ ’ಸುರಕ್ಷತೆಯು’ ಬದಲು ’ರಕ್ಷಣೆಯು’ ಎಂದರೆ ಸರಿಯಾಗುತ್ತದೆ.

 5. ಕವಿಗಳ್ ಬಣ್ಣಿಪುದಂ ಕೇ-
  ಳ್ದವರ್ಗಳ್ ಪೊಂದುತ್ತೆ ರೂಪನೆಯ್ದಿದರೋ ಮೇಣ್
  ರವಿಮಂದೇಹರ್ಕಳ್ ತಾಂ
  ಜವದಿಂ ಮುಂಜಾವಿನೊಳಗಮಿಂತಿದು ಕಾಣ್ಗುಂ||

  • ಆಹಾ, ಚೆನ್ನಾಗಿದೆ ರವಿ, ಮ೦ದೇಹರುಗಳ ಹೋರಟೆಯ ಕಲ್ಪನೆಯ ಚಿತ್ರಣ!

   • ಒಳ್ಳೆಯ ಕಾವ್ಯವೇ ಹೊಮ್ಮಿದೆ.

    • ಧನ್ಯವಾದಗಳು ಗಣೇಶ್ ಸರ್ ಮತ್ತು ನೀಲಕಂಠ ಅವರೇ. 🙂

  • Beautiful! Even absence of Sun in the sky justifies your imagination 🙂

 6. ಕಳವಳಮಂಬಡಲೇಕೌ
  ಝಳಮಂ ಕಂಡುಂ ಕರಂಗಳಿನಿಳಾತಳದೊಳ್,
  ಕಲಹಂ ಸಲಲ್ಕೆ ನಿಚ್ಛಂ
  ನಿಲದೇ ಪೊಯ್ದಾಡುವೀ ವಿಷಮ ಚಿತ್ತದೆ ನೀಂ!

  (ನಮ್ಮ ಚಿತ್ತದಲ್ಲೇ ದ್ವಂದ್ವ ವಿಷಯಗಳಲ್ಲಿ ಕಲಹವೇಳುವಾಗ, ಭೂಮಿಯಲ್ಲಿ ಈ ಕಲಹವನ್ನು ನೋಡಿ ಕಳವಳವಾದರೂ ಏಕೆ?)

 7. ವೈಶ೦ಪಾಯನತೀರಮೇನಿದು ಕುರುಕ್ಷೇತ್ರಕ್ಕಲೇ೦ ತೀರಮಾ-
  ವೇಶೋತ್ಕರ್ಷಭರರ್ ಭಟರ್ಕಳಿವರೇ೦ ಪುಟ್ಟಲ್ ಮೊದಲ್ಗೊ೦ಡು ದು-
  ರ್ನಾಶ೦ಕಾರಿಯೆನಿಪ್ಪವೋಲೆಸಗಿರುತ್ತಿರ್ದ೦ತು ಕಜ್ಜ೦ಗಳಾ-
  ವೇಶ೦ ದ೦ಡಮದೊರ್ವಗ೦, ಸುಕೃತಮೇ ಮತ್ತೊರ್ವಗ೦ ದ೦ಡಮಯ್

  ಸರೋವರದ ತೀರ, ಇಬ್ಬರ ಹೋರಾಟ… ಸಹಜವಾಗಿ ಕುರುಕ್ಷೇತ್ರಕ್ಕೆ (ಯುದ್ಧಕ್ಕೆ) ತೀರವಾದ (ಕೊನೆಯಾದ) ವೈಶ೦ಪಾಯನ ಸರಸ್ಸು,ದುರ್ಯೋಧನ, ಭೀಮರ ನೆನಪಾಯಿತು. ಆದರೆ ಗದೆಗಳೇ ಇಲ್ಲವಲ್ಲ. ಹುಟ್ಟಿನಿ೦ದಲೂ ಎಸಗಿದ್ದ ದುಷ್ಕಾರ್ಯಗಳ ಕರ್ಮಬಲವೇ ಒಬ್ಬನಿಗೆ ಗದಾದ೦ಡ, ಇನ್ನೊಬ್ಬನಿಗೆ ಸುಕೃತಗಳೇ ದ೦ಡವಾಗಿರುವ೦ತಿದೆ.

  • ಖಂಡಪ್ರಾಸ ಹೆಚ್ಚು ಇದ್ದಷ್ಟೂ ಕವಿತ್ವಸಿದ್ಧಿ ಹೆಚ್ಚು. ಪದ್ಯ ಚೆನ್ನಾಗಿದೆ. ಕುರುಕ್ಷೇತ್ರಕ್ಕಲೇ೦ – ಇದರ ವಿಗ್ರಹ ಹೇಗೆ?

   • Thanks, even though I dont know what khanDaprasa is 🙂
    kurukshEtrakkalA + Em?

    • ಒಂದು ಪದವು ಹಿಂದಿನ ಪಾದದಿಂದ ಖಂಡವಾಗಿ (ತುಂಡಾಗಿ) ಮುಂದಿನ ಪಾದದಲ್ಲಿ ಪ್ರಾಸಾನುಕೂಲಿತವಾಗಿ ಬಂದಾಗ ಖಂಡಪ್ರಾಸವೆನ್ನುತ್ತಾರೆ. ನಿಮ್ಮ ಪದ್ಯದಲ್ಲಿರುವ ಖಂಡಪ್ರಾಸಗಳು : ಆವೇಶ, ದುರ್ನಾಶ.
     ಈ ಪದಗಳಲ್ಲಿ ಪ್ರಾಸಾಕ್ಷರ ಮೂರನೆಯ ಸ್ಥಾನದಲ್ಲಿದ್ದರೂ, ಪದವು ಮೊದಲನೆಯ ಅಕ್ಷರದ ನಂತರ ಒಡೆದದ್ದರಿಂದ, ಪ್ರಾಸಕ್ಕೆ ಒದಗಿದೆ. ಅರ್ಥಾತ್, ಖಂಡಪ್ರಾಸವಾಗಿದೆ.

     • ಧನ್ಯವಾದಗಳು ಸರ್, ವಿವರಣೆಗೆ. ಹೆಚ್ಚಿಗೆ ತಿಳಿಯಲು ಪ್ರಯತ್ನಿಸುತ್ತೇನೆ.

    • ತಮ್ಮಲ್ಲಿ ಇಂತಹ ಶಕ್ತಿಯಿರುವುದರ ಬಗೆಗೆ ಅಜ್ಞಾತರಾಗಿರುವ ಆಂಜನೇಯಸ್ವರೂಪರು ನೀವು 😉

 8. ಜಟ್ಟಿಗಳೆಂಬೋ ಪುಗ್ಗಕೆ
  ದಿಟ್ಟತನದೆಲರ್ ನಿಮಿರ್ಚೆ ಪಾರಾಡುವುದೇಂ ||
  ನಿಟ್ಟಂಜಯಸೂತ್ರಗಳಿಂ
  ಕಟ್ಟಿರೆ ಸೊಗಮೆಂತು ಕಾಳಗಂ ಮುಗಿಲಿನೊಳುಂ
  – ಜಟ್ಟಿಗಳು ಎಂಬ ಬಲೂನಿಗೆ, ದಿಟ್ಟತನವೆಂಬ ಗಾಳಿಯನ್ನು ಹೊಡೆದರೆ ಅದು ಹಿಗ್ಗುವ ಪರಿಯೇನು. ಆ ಬಲೂನಿನ(ಪುಗ್ಗದ) ದಿಕ್ಕನ್ನು(ನಿಟ್ಟು) ಜಯಸೂತ್ರಗಳಿಂದ ಕಟ್ಟಿ ನಿರ್ದೇಶಿಸಿದರೆ, ಮುಗಿಲಿನಲ್ಲಿನ ಕಾಳಗದ ಸೊಗಸು ಬಣ್ಣಿಸಲಸದಳ.

  • ಹ್ಹಹ.. ಚೆನ್ನಾಗಿದೆ! ಕಾಳಗ೦ ಆಗಬೇಕಲ್ಲವೇ. ಇಲ್ಲದಿರೆ ಮಾತ್ರಯೂ ಒ೦ದು ಕಮ್ಮಿ ಬೀಳುತ್ತದೆ.

   • ಹೌದು. ನೀಲಕಂಠರ ತಿದ್ದುಗೆ ಸರಿ. ಆದರೆ ಪದ್ಯವು ಮಾತ್ರ ತನ್ನ ಕಲ್ಪನಾಭಿರಾಮತೆಯಿಂದ ಅನುಪಮವಾಗಿದೆ.

    • ಹೌದು…ಗಂ ಇಲ್ಲದಿದ್ದರೆ, ಛಂದಸ್ಸಿಗೆ ಈ ಪದ್ಯ ಅಂಟುತ್ತಲೇ ಇರಲಿಲ್ಲ….ಈಗ ೦ ಯನ್ನು ಅಂಟಿಸಿದ್ದೇನೆ… 🙂

     ಗಣೇಶರಿಗೆ ಮತ್ತು ನೀಲಕಂಠರಿಗೆ, ಧನ್ಯವಾದಗಳು

  • ಶ್ರೀಶ – ಒಳ್ಳೆಯ ರೂಪಕ ಪ್ರಯೋಗ. ಬಹಳ ಚೆನ್ನಾಗಿದೆ.

 9. ಅ೦ಬರ೦ ಭಿತ್ತಿಯೇ೦ ಭೂಮಿಯಿ೦ದೆದ್ದುದೇ೦
  ತು೦ಬುತು೦ ಚಿತ್ತದೊಳ್ ಮಾನವ೦ ಬಣ್ಣಮ೦
  ಬಿ೦ಬಿಸಲ್ ಸಾರ್ದನೇ೦ ಭಾವದೇರಾಟಮ೦
  ನ೦ಬಲೇನೀ ತೆರ೦ ಚಿತ್ರಮೇ೦ ತಥ್ಯಮೇ೦

  ಇದನ್ನು ಚಿತ್ರವೆನ್ನೋಣವೋ, ನಿಜವೆನ್ನೋಣವೋ?! ಭೂಮಿಯ೦ಚಿ೦ದೆದ್ದು ನಿ೦ತ ಆಗಸದ ಭಿತ್ತಿಯ ಮೇಲೆ ಮನುಷ್ಷ್ಯ ತನ್ನ ಚಿತ್ತದ ಬಟ್ಟಲಲ್ಲಿ ಬಣ್ಣಗಳನ್ನು ತು೦ಬಿ, ತನ್ನ ಭಾವದೇರಾಟವನ್ನು ಈ ರೀತಿ ಚಿತ್ರಿಸಿರುವನೇನು?!!

  • ತುಂಬ ಸೊಗಸಾದ ಕವಿತೆ!

  • ಬಹಳ ಚೆನ್ನಾಗಿದೆ. ಚಿತ್ರದಲ್ಲಿ ಅನೇಕ ಪ್ರಧಾನ ರಂಗುಗಳಿರುವುದು ಈ ಕಲ್ಪನೆಗೆ ಅನುವಾಗಿದೆ.

 10. ನೆಗೆದು ಗಗನಾಂತಕ್ಕಂ ತಕ್ಕಂತೆ ಪೋರ್ವ ಮದೋದ್ಧುರರ್
  ಬಗೆಯಲೆಳಸುತ್ತನ್ಯೋನ್ಯೋರಃಸ್ಥಳಂಗಳನಾರ್ಪಿನಿಂ |
  ನಿಗುರಿ ಗುರಿಯಂ ನೋಡಲ್ ತೀಡಲ್, ಮಹೀತಳವಾಲುಕಂ
  ನೆಗೆದೊಗೆವುದೇಂ ಸ್ಫೂರ್ತಿಸ್ಫಾರಂ ಪುಗಲ್ಕೆ ನಿಜಾಂಗದೊಳ್ !!
  (ಈ ವೀರರ ಹೋರಾಟದಿಂದ ಸ್ಫೂರ್ತಿಯನ್ನಾಂತು ಅಲ್ಲಿಯ ಮರಳೂ ಪರಾಕ್ರಮದಿಂದ ನೆಗೆದಿದೆಯೇ? ಎಂಬ ಅತಿಶಯೋಕ್ತಿ ಇಲ್ಲಿದೆ. ಇದು ನಮ್ಮಲ್ಲಿ ವಿರಳಪ್ರಚುರವಾದ ಹರಿಣೀವೃತ್ತ)

  • ತು೦ಬ ಹಿಡಿಸಿತು ಸರ್!

  • ಮರಳು ನಿಜಕ್ಕೂ ಜಿಗಿದಂತಿದೆ. ಯಾರಿಗೂ ಕಾಣದ / ಗ್ರಹಣೆಗೆ ಸಿಗದ ಈ ವಿಷಯವನ್ನು ಅತಿಶಯೋಕ್ತಿಯಾಗಿಸಿರುವುದು ಬಹಳ ಸೊಗಸಾಗಿದೆ.

 11. ಸಮದ ಪರಾಕ್ರಮಿಗಳ್ ಸಂ-
  ಗಮಿಸಲ್ ಮೇಲ್ಚಿಮ್ಮುತಬ್ಬರಿಸುತುರಿಹಾಯ್ಕಳ್|
  ಭ್ರಮೆಯೋ! ದಿಟಮಿದೊಮೆನುತೀ
  ಸಮರವಮರೆಯಿಂದ ನೋಡುತಿಹನೇ ರವಿಯುಂ|

 12. ಪ್ರೇಮಾಂತರಂಗಂ ನಭಮುಟ್ಟಿದಂದೆಂ
  ಸಮ್ಮಾನ ಮೂಡಲ್ ದಿಟಭಾವದಿಂದಂ
  ಕಾಮಾದಿವರ್ಗಂ ಮನದಿಂದ ನೂಂಕಲ್
  ದುಮ್ಮಾನ ದೂಡಲ್ ಶಿವನೃತ್ಯಯೋಗಂ।।

  • ಕಾಮಾದಿ ವರ್ಗಗಳನ್ನು ಪ್ರೇಮಾಂತರಂಗವು ದೂಡುವ ಕಲ್ಪನೆ ಚೆನ್ನಾಗಿದೆ.

 13. ನಯದಿಂದಾಪಗಮೊಂದು ಭಾಸಿಪುದುತಾಂ ಭೋರ್ನಾದದಿಂದಲ್ತು ಮೇಣ್
  ಸ್ವಯಮಂತಂಬರಮಲ್ತೆ ನೀಲತೆಯಿರಲ್ ,ಮೇಘಂ ಸದಾ ಶುಭ್ರದಿಂ,
  ಜಯಮಂತೇ ಸಲೆ ವಾಸ್ತವಕ್ಕೆ ಲಭಿಕುಂ ಭೂರಂಗದೊಳ್ ಕಾಲದಿಂ
  ಭಯಮಂ ಮಾಣ್ ,ಮುಖವಾಡಕಿಲ್ಲ ನೆಲೆಯುಂ ನೈಜತ್ವಮೇ ಘೂರ್ಣಿಕುಂ

  (ತಮ್ಮ ತಮ್ಮ ನಿಜವಾದ ಸ್ವಭಾವದಿಂದಲೇ ಹೊಳೆ,ಆಗಸ,ಮೋಡ ಶೋಭಿಸುತ್ತವೆ. ನದಿಯು ಬೋರ್ಗುಟ್ಟಾಗ,ಅಂಬರವು ನೀಲಿಯನ್ನು ಕಳಕೊಂಡು ಕರಿಯ ಬಣ್ಣವನ್ನು ಧರಿಸಿದಾಗ, ಮೋಡವು ಕಪ್ಪುಬಣ್ಣವನ್ನು ಬಳಿದುಕೊಂಡಾಗ(ವಾಸ್ತವತೆಯನ್ನು ತೊರೆದು,ಮುಖವಾಡವನ್ನು ಧರಿಸಿದಾಗ)ಶೋಭಿಸಲಾರವು, ಹಾಗೇ ಯಾವಾಗಲೂ ನೈಜತೆಗೇ ಗೆಲವು)(ಇಲ್ಲಿ ಕೃತ್ರಿಮತೆಗೆ ಮತ್ತು ನೈಜತೆಗಳೊಳಗೆ ಕದನವಾಗುತ್ತಿದೆ)

 14. ಕಲವರವುಂ, ನರರಾಕ್ಷಸ
  ಕಲಹಂ ಸಲೆ ಕಲರಿಪಟ್ಟಿ(ಪೈಟಿ)ನೊಳ್ ತಲೆವೆತ್ತಲ್ ।
  ಚಲಚಿತ್ರೀಕರಣಮ ಕಾಣ್
  ತಲಕಾಡ ಮಳಲೆಡೆಯೊಳ್, ಭಳಿರೆ ! ಭಜರಂಗಂ !!

  “ತಲಕಾಡ ಮರಳಿನಲ್ಲಿ” – “ಭಜರಂಗೀ” ಚಿತ್ರೀಕರಣದ promo ಪದ್ಯ

  • A very contemporary solution. Fine.

   • ಭಜರ೦ಗೀ ಪದನಿಷ್ಪತ್ತಿ ಏನು?

   • ಧನ್ಯವಾದಗಳು ಪ್ರಸಾದ್ ಸರ್, ಚಿತ್ರದ ಹೀರೋ – ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಥರ ಕಂಡು “ಭಜರಂಗೀ” ಸಿನೆಮಾ ನೆನೆಪಾಯಿತು. !! ಮತ್ತೆ ಆ ನದಿ,ಮರಳು, ಹಿನ್ನೆಲೆಯ ಮರಗಿಡಗಳು, ಆಕಾಶ – ಅದೇಕೋ “ತಲಕಾಡ”ನ್ನು ನೆನಪಿಸಿತು. ಹಾಗಾಗಿ ಈ

    ** ತಲಕಾಡ ಮಳಲೆಡೆಯೊಳ್, ಭಳಿರೆ ! ಭಜರಂಗೀ !!

 15. ಭರತsನೆs ಮರೆತಿsಹs ಕರಣsವs ತೋರೇವುs
  ಹರಿಸೇವುs ವೀರs ರಸಧಾರೆs – ಗರಿಮೆsಯs
  ತರುಣs ಪೌರುಷವs ಮೆರೆದೆsವುs

 16. ಯುದ್ಧವೋ? ಕಲೆಯೋ?

  ಯುದ್ಧಂ ಘೋರಂ ರೌದ್ರಮ-
  ದುದ್ದರಣಂಗೆಯ್ವುದಲ್ತೆಯೆನಿಕುಂ, ಕಲೆಯೇ
  ಬದ್ಧಮೆನಿಪುದಲ ಪಟದೆ ವಿ-
  ರುದ್ಧಮದಾಲೀಢಮೆರ್ಚಿಪುದು ಭಾವಂಗಳ್

  ಆಲೀಢ – attacking posture
  ಉದ್ಧರಣ – destruction

 17. ರಾಮ-ಸೋಮರ ನಾಟ್ಯಶಾಸ್ತ್ರೀಯ (ಸಮರಕಲೆಯ) ಪರಿಭಾಷೆಗಳಿಂದ ಕೂಡಿದ ಪದ್ಯಗಳು ಚೆನ್ನಾಗಿವೆ. ಧನ್ಯವಾದ.

 18. The blackie seems to be a wizard. But it is appreciable that he has chosen to take on the opponent without using his conjuring.
  ವಂಶಸ್ಥ|| ಪೊಗಳ್ವೆ, ಮಾಯಾವಿಯು ತೋರ್ವ ಧೈರ್ಯಮೇಂ!
  ಉಗುಳ್ವುದಂ ಬೆಂಕಿಯ ಮೇಣದೃಶ್ಯಮಂ
  ಸಗರ್ವದಿಂ ಬೀಗುತೆ ಗೈಯದೊಂದನುಂ
  ಎಗರ್ವ ಪಕ್ಕಕ್ಕಿಡುತೆಲ್ಲ ಮಾಯೆಯಂ|

 19. ಕಮನೀಯಂ ಕಾಣ್ ನೆಲಜಲದೊಡಂ ತೋರುದಾಗಸ ಮೇಣ್ ಪಂ-
  ಚಮಹಾಭೂತಂಗಳ ನಡುವೊಳಾವಿರ್ಭವಂಗೊಳೆ ಜೀವಂ ।
  ಅಮಲೇರಿರ್ದಾ ಯಮಲಗುಣದಾತ್ಮಂಗಳಾ ಸದಸತ್ ರೂ-
  ಪಮೆ ಷಡ್ಧಾತ್ವಾತ್ಮಕ ಪುರುಷನೋಲ್ ಸಂದುದಿಂತಿಡಿಚಿತ್ರಂ ।।

  ವ್ಯಕ್ತವಾಗಿರುವ ಪಂಚಮಹಾಭೂತಗಳು ಮತ್ತು ಯಮಲ ಆತ್ಮರೂಪ – ಇಡೀ ಚಿತ್ರಣ ಷಡ್ಧಾತ್ವಾತ್ಮಕ “ಪುರುಷ”ನನ್ನು ಬಿಂಬಿಸಿದೆ ಎಂಬರ್ಥದ “ಪ್ರಮದಾಕ್ರಾಂತ”

  * ಯಮಲಗುಣ = ಅವಳಿಜವಳಿ – ಸಾಧು – ಕ್ರೂರ / ರಜಸ್ಸು – ತಮಸ್ಸು / ಸತ್ಯಾಸತ್ಯ – ಪ್ರತಿ ಪುರುಷನ ದ್ವಿರೂಪ

  • ಹೊಸದೊಂದು ವೃತ್ತವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು: ಪ್ರಮದಾಕ್ರಾಂತಂ ಪ್ರಮದೆಯರಿಗೇ ಮೀಸಲಿರ್ಪ ವಿಲಾಪಂ||

   • ಧನ್ಯವಾದಗಳು ಪ್ರಸಾದ್ ಸರ್, “ವಿಲಾಪಂ” ಅನ್ನು “ವಿಶೇಷಂ”ಗೊಳಿಸಬಹುದಲ್ಲವೇ ?!!

  • ಚೆನ್ನಾಗಿದೆ ಮೇಡಮ್. ಆತ್ಮವೂ ಒ೦ದು ಧಾತು ಎನ್ನುವುದು ಮೊದಲ ಬಾರಿ ಕೇಳಿದ್ದಾಯಿತು. ಯಾವ ಸಿದ್ಧಾ೦ತ ಇದು?

   • ಗಣೇಶರನ್ನು ಕೇಳಿ. ’ಈ ದೇಹದಿಂದ ದೂರನಾದೆ ಏಕೆ ಆತ್ಮನೆ’ ಎಂಬುದಕ್ಕೆ ಅವಧಾನವೊಂದರಲ್ಲಿ ಸಖತ್ ವ್ಯಾಖ್ಯೆ ಹೇಳಿದ್ದರು.

   • ಧನ್ಯವಾದಗಳು ನೀಲಕಂಠ, ಇದು “ಆಯುರ್ವೇದ” ಸಿದ್ಧಾ೦ತ !! “ಷಡ್ಧಾತ್ವಾತ್ಮಕ”ಪದಕ್ಕಾಗಿಯೇ (ಮೂರು”ಗುರು”ಪದ) ಈ ಛಂದಸ್ಸಿನಲ್ಲಿ ಬರೆದದ್ದು. ಇನ್ನು ಗಣೇಶ್ ಸರ್ ಏನು ಹೇಳುವರೋ?!!

  • ಶತಾವಧಾನದಲ್ಲಿ ಗಣೇಶರು ಈ ಛಂದಸ್ಸಿನಲ್ಲಿ ಪದ್ಯವೊಂದನ್ನು ಹೇಳಿದ್ದಾರೆ. ಮಂದಾಕ್ರಾಂತದ ಮೊದಲ ಗುರ್ವಕ್ಷರವನ್ನು ಒಡೆದಿರುವುದಷ್ಟೇ; ನಿಮ್ಮ ಈ ಪದ್ಯದಲ್ಲಿ ಯತ್ಯುತ್ತರಭಾಗದಲ್ಲಿ ಗುರ್ವಕ್ಷರವೊಂದರ ಬದಲು ಲಘ್ವಕ್ಷರವಿದೆಯಲ್ಲ (ಕೊನೆಯಿಂದ ನಾಲ್ಕನೆಯದು)? ದಯವಿಟ್ಟು ಸ್ಪಷ್ಟೀಕರಿಸಿ.

   • ಓ ಹೌದು, ಪ್ರಸಾದ್ ಸರ್, ತಪ್ಪಾಗಿದೆ, ಗಮನಕ್ಕೇ ಬಂದಿರಲಿಲ್ಲ.
    ಪ್ರಮದಾಕಾಂತ : ನನನಾನಾನಾ । ನನನನನನಾ । ನಾನನಾ”ನಾ”ನನಾನಾ

    ಪದ್ಯವನ್ನು ಸರಿಪಡಿಸಲು ಪ್ರಯತ್ನಿಸಿದ್ದೇನೆ. ಧನ್ಯವಾದಗಳು. (ಅಂದಹಾಗೆ, ಇಷ್ಟು ದಿನಗಳ ಬಳಿಕ, ಇದು ನಿಮ್ಮ ಗಮನಕ್ಕೆ ಬಂದದ್ದಾದರೂ ಹೇಗೆ ?!)

    ಕಮನೀಯಂ ಕಾಣ್ ನೆಲಜಲದೊಡಂ ತೋರುದಾಕಾಶ ಮೇಣ್ ಪಂ-
    ಚಮಹಾಭೂತಂಗಳ ನಡುವೊಳಾವಿರ್ಭವಂಗೊಂಡ ಜೀವಂ ।
    ಅಮಲೇರಿರ್ದಾ ಯಮಲಗುಣದಾತ್ಮಂಗಳಾ ಸಾಮ್ಯ ಸತ್ ರೂ-
    ಪಮೆ ಷಡ್ಧಾತ್ವಾತ್ಮಕ ಪುರುಷನೋಲ್ ಸಂದುದಿಂತೀ ವಿಚಿತ್ರಂ ।।

    • ಅಂದು ಇದರ ಲಕ್ಷಣವನ್ನು ನಿಮ್ಮ ಪದ್ಯದಿಂದ ಗುರುತುಮಾಡಿಕೊಂಡಿದ್ದೆ. ಈಚೆಗೆ ’ಶತಾವಧಾನಶಾಶ್ವತೀ’ಯಲ್ಲಿನ ಅಪೂರ್ವದ ಛಂದಸ್ಸುಗಳನ್ನು ಗಮನಿಸಿಕೊಳ್ಳುವಾಗ ಇದನ್ನು ಹೋಲಿಸಿನೋಡುವುದಾಯಿತು. ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು.
     ಆದರೆ, ಪದ್ಯಸಪಾಹ 183ರ ಸಂಖ್ಯೆ 8ರಲ್ಲಿ (http://padyapaana.com/?p=2745) ನಿಮ್ಮ ತಪ್ಪನ್ನೇ ಅನುಸರಿಸಿ ಪದ್ಯವನ್ನು ರಚಿಸಿದ್ದೆ. ತಿದ್ದಿದ್ದೇನೆ.

 20. ಸುಂಟರ ಗಾಳಿಯ ತೆರದಲಿ ಮರಳನು
  ಬಂಟರು ಚಿಮ್ಮುತ ಸೆಳೆಯುತಲೊಯ್ಯುವ
  ನ೦ಟದು ಸಾರದೆ ? ಮಣ್ಣಿನ ಪೌರುಷ ಗುಂಟೆಯ ಸೊಬಗಿನಲಿ I
  ”ತಂಟೆಗೆ ಬಂದರೆ ತುಳಿದೊಗೆಯುವೆ ನಿನ-
  ಗೆಂಟೆದೆಯಿದ್ದರೆ ಬಾರೆಲವೋ”ಯೆಂ-
  ದ೦ಟಿದ ಪೌರುಷ ಸಮರದ ಕಲೆಯೊಳು ತೋರುವನೆ ?II

  • ಸುಂಟರ ಗಾಳಿಯ ತೆರದಲಿ ಮರಳನು
   ಬಂಟರು ಚಿಮ್ಮುತ ಸೆಳೆಯುತಲೊಯ್ಯುವ
   ನ೦ಟದು ಸಾರದೆ ? ಮಣ್ಣಿನ ಪೌರುಷ ಗುಂಟೆಯ ಸೊಬಗಿನಲಿ I
   ”ತಂಟೆಗೆ ಬಂದರೆ ತುಳಿದೊಗೆಯುವೆ ನಿನ
   ಗೆಂಟೆದೆಯಿದ್ದರೆ ಬಾರೆಲವೋ”ಯೆಂ-
   ದ೦ಟಿದ ಪೌರುಷ ಸಮರದ ಕಲೆಯೊಳು ವೀರನು ತೋರುವನೆ ?II

 21. ವೀರಾವೇಶಮೆ ವೇಷತೊಟ್ಟ ತೆರನೊಳ್ ಯುದ್ಧೋತ್ಸುಕರ್ ಚಿಮ್ಮಿರಲ್
  ಮಾರಾಮಾರಿಯನೀಕ್ಷಿಪೋಲ್ ಪ್ರಕೃತಿಯೆ ಸ್ತಬ್ಧಳ್ ಮದೋತ್ಸಾಹದಿಂ|
  ಶೋರೋರ್ವಂ ಗಡ ಹಸ್ತಖಡ್ಗದಲಗಿಂ ಕಣ್ಕೋರೈಸಲ್ ಮಿಕ್ಕ ಯೋ-
  ಧಂ ರಾರಾಜಿಪ ಪಾದಭರ್ಜಿಯೊಗೆಯಲ್ ಮಿಕ್ಕಸ್ತ್ರಗಳ್ ವೇಳ್ಕುಮೇಂ||

  [Wonderful padyas from all poets! At first, I thought this pic has very less scope for imagination.]

  • ಒಳ್ಳೆಯ ಪದ್ಯ ಪೊಳ್ಳಂ. ಕೈಕಾಲ್ಗಳೇ ಖಡ್ಗ, ಭರ್ಜಿಗಳಂತಿರುವಾಗ ಅಸ್ತ್ರಗಳದರೂ ಏಕೆ ಎಂಬ ಕಲ್ಪನೆ ಬಹಳ ಚೆನ್ನಾಗಿದೆ.
   [ಮೂರನೆಯ ಪಾದದ ಎರಡನೆ ಭಾಗದಲ್ಲಿ ಛಂದಸ್ಸು ಸ್ವಲ್ಪ ತೊಡರಿದೆ]

  • ಚೆನ್ನಾಗಿದೆ ರವೀ೦ದ್ರರೆ. ಶೋರೋರ್ವ೦ ಎ೦ದರೇನು? ಹಾಗೆಯೇ ಪಾದಭರ್ಚಿ ಅರಿಸಮಾಸವಲ್ಲವೇ? ಭರ್ಚಿ ಸ೦ಸ್ಕೃತ ಪದವೇ?

  • ಹಾಗೆಯೇ ನಾಲ್ಕನೇ ಸಾಲಿನ ಪ್ರಾಸವಿಧ ಮೊದಲಿನ ಮೂರಿನವಕ್ಕೆ ಹೊ೦ದಿಕೆ ಆಗಿಲ್ಲ.

  • ’ಮಿಕ್ಕಸ್ತ್ರಗಳ್’ ಸಹ ಅರಿಸಮಾಸವೆ. ಕಣ್ಕೋರೈಸಲ್ ಎಂಬಲ್ಲಿ ಛಂದಸ್ಸು ತಪ್ಪಿದೆ.

  • ರಾಮ್, ನೀಲ್, ಪ್ರಸಾದರಿಗೆ ಧನ್ಯವಾದಗಳು. ಶೂರೋರ್ವಂ ಎಂದಾಗಬೇಕಿತ್ತು (ಶೂರನೋರ್ವಂ ಸರಿಯಾದ ರೂಪ). ಮಿಕ್ಕಸ್ತ್ರಗಳ್ – ಸಮಾಸವಲ್ಲ. ಮಿಕ್ಕ + ಅಸ್ತ್ರಗಳ್. ತೊಡಕಿಲ್ಲ. ಪಾದಭರ್ಜಿ ಅರಿಸಮಾಸವೆನಿಸುತ್ತಿದೆ. ಭರ್ಜಿಗಾಲನೆಸೆಯಲ್ ಎಂದು ಮಾಡಬಹುದು.

  • ಮೂರನೇ ಪಾದವನ್ನು ಸರಿಪಡಿಸಿದ್ದೇನೆ:
   ಶೂರೋರ್ವಂ ಗಡ ಹಸ್ತಖಡ್ಗದಲಗಿಂ ಕೋರೈಸೆ ಮಿಕ್ಕೋರ್ವ ಯೋ-

 22. ಸುರಾಸುರರ ಪಾಂಗಿನೀ ಸಮರತಾಪದೊಳ್ ಮಿಂದೊಡಂ,
  ಸರಾಗರುಚಿಯೆಲ್ಲಮಂ ತೊರೆದು ಬಾಡಿತೇಂ ಪಾದಪಂ?
  ವಿರೋಧದೊಳಗಬ್ಬರಂ ಮೆರೆಯಲುರ್ಕಿತೇಂ ದೀರ್ಘಿಕಂ?
  ಚಿರಂ ಗುಡುಗೆ ಮೋಡಗಳ್ ಮಹದಶಾಂತಿಯಂ ತೋರ್ದವೇಂ?

  (ಮರಗಳು, ನದಿ, ಮೇಘಗಳು, ಕದನದ ಕಾವಿನಲ್ಲಿ ಮೀಯುತ್ತಲಿದ್ದರೂ ವಿಚಲಿತರಾದರೇ?-ಆಗಲಿಲ್ಲ . ಈ ಜಗಳದಿಂದ ಅವು ಪ್ರಭಾವಿತರಾಗಲಿಲ್ಲ)

 23. ಕಾಲಕ್ಷೇಪಕ್ಕಾಗಿ ಬರೆದ ಕೆಲವು ಪದ್ಯಗಳು ::

  ಒನಪಿಂ ಶೌರ್ಯ ಪರಾಕ್ರಮಂಗಳನೆ ತೋರ್ವೀ ಸಿದ್ಧರೊಳ್ ಬದ್ಧರೊಳ್
  ಕೊನೆಗಂ ಗೆಲ್ವುದುಮಾರುಮೆಂಬ ವಿವರಂ ಪ್ರಶ್ನಂ ಗಡಾ ಸೋಜಿಗಂ
  ಕನಕಾಲಂಬಿತ ಕಂಕಣಂ ತೊಡುಗೆಗಳ್ ಮೇಣಾರಿಗಂ ಸಲ್ಲುಗುಂ
  ಘನವಿಶ್ಲೇಷಣಮಾಗೆ ತೋರ್ಗು ಭವಿತವ್ಯಂಗಳ್ ಕಲಾಸಕ್ತರೊಳ್ ॥ 1 ॥

  ವೀರನ್ ಕಾಲ್ಗಳನೆತ್ತಿ ಪಾರಿ ನೆಲಕಂ ಪರ್ಬಲ್ ಸಮಾನಾಂತರಂ
  ಶೂರನ್ ಕೈಗಳ ಯುದ್ಧಭಂಗಿಯೆಸಗುತ್ತೂರ್ಧ್ವಾಭಿಗಮ್ಯಂ ಕಣಾ
  ಪೋರುತ್ತಿರ್ದೊಡಮೆಲ್ಲ ಪಣ್ಯಕಿಡುತುಂ ಸುಜ್ನಾನಮಜ್ನಾನರೊಲ್
  ನೀರಕ್ಷೀರಗಳೊಲ್ ವಿವೇಕದೊಡೆ ಹೈರಾಣಿಪ್ಪಹಂಭಾವದೊಲ್ ॥ 2 ॥

  ಸಾರುತ್ತಿರ್ಪನೆ ಭಾವನಾವಿವರಮಂ ರಕ್ತಾಂಬರಂ ನಾಯಕಂ
  ತೋರುತ್ತಿರ್ಪನೆ ಭೀತ, ಕಂಪನಗಳಂ ಮೇಣ್ಸೋಲಿನಾ ವಾಸನಾ
  ಚಾರಿತ್ರ್ಯಂ ಮುಖವಾಡದಿಂದೆ ಮರೆಸುತ್ತುಂ ಸ್ಯೂತಕೃಷ್ಣಾಂಬರಂ [ಸ್ಯೂತ = ಹೊಲಿದ]
  ಮೀರಲ್ಕಕ್ಕುಮೆ ಗೂಢಭೂಷಣಗಳಿಂದಾತಂಕಮಾಶಂಕಮಂ ॥ 3 ॥

  ಶಾರೀರಾಸ್ತ್ರದೆ ಯುದ್ಧಿಸಿರ್ಪರನಿಬರ್ ತೋಳ್ಗಾಲ್ಗಳಿಂ ಧೈರ್ಯದಿಂ
  ತೋರಲ್ಕೀರ್ವರು ಶಕ್ತಿಯುಕ್ತಿಸಮರಂತಿರ್ಪರ್ ಸಮಾಲಂಬರುಂ
  ಪೋರಲ್ಕಾವುದು ಹೇತುವೆಂಬುದರಿಯಲ್ಕಿತ್ಯರ್ಥಮಾಗುಂ ದಲಾ –
  ಧಾರಂ ಧರ್ಮದ ಪಕ್ಷಕಾಗೆ ವಿಧಿ ತಾಂ ಸಾಕಾರಕಂ ವೈಜಯಂ ॥ 4 ॥

  • ರಾಮ್, ಪದ್ಯಗಳೆಲ್ಲ ಚೆನಾಗಿವೆ… ಕಡೆಯ ಪದ್ಯದ ಎರಡನೇ ಸಾಲಿನಲ್ಲಿ ಸಮರಂತಿರ್ಪರ್ ಎಂದರೆ ತಿಳಿಯಲಿಲ್ಲ…

  • ಕಾಲಕ್ಷೇಪದ ಪದ್ಯಗಳ್ ಬಹುಲವದ್ಯ೦ಗಳ್ ಗಡಾ ರಾಮರಾ!

   ಕೊನೆ ಪದ್ಯದಲ್ಲಿ ಇತ್ಯರ್ಥ ಆಗಬೇಕಿತ್ತಲ್ಲವೇ? ಅಥವ ಇತ್ಯಾರ್ಥ ಎ೦ಬುದೊ೦ದಿದೆಯಾ?

   • _/\_
    ಹೌದು. ಟಂಕಿಸುವಾಗ ತಪ್ಪಾಗಿತ್ತು.
    ಮೊದಲು ನಿಮ್ಮ ಹೇಳಿಕೆಯ ಅರ್ಥವಾಗಲಿಲ್ಲ. ಕೊನೆಯ ಪದ್ಯದಲ್ಲಿ, ಯಾರು ಗೆಲ್ಲುತ್ತಾರೆ ಎಂಬುದು ಇತ್ಯರ್ಥವಾಗಬೇಕಿತ್ತು, ಆಗಲಿಲ್ಲ ಎಂದು ಹೇಳುತ್ತಿದ್ದೀರೆಂದುಕೊಂಡೆ 🙂

 24. ಈ ಚಿತ್ರವನ್ನು ನೋಡುತ್ತಿದ್ದರೆ ಅದಾವುದೋ Computer gameನಂತಿದೆ…ಗಣಕಯಂತ್ರದ monitor screenನ ಮೇಲೆ ಮೂಡಿದ ಚಿತ್ರವೂ ಆಗಿರಬಹುದಲ್ಲವೇ?

  ಪೊಯ್ಯಲ್ಕರಾತಿಯಂ ಗಡ
  ರೊಯ್ಯನೆ ನೆಗೆದಿರ್ಪರೇಂ ಗಣಕಯಂತ್ರದೊಳಂ
  ಮುಯ್ಯಾನ್ವಸ್ಟ್ರೀಟ್ ಫೈಟರೊ (Street fighter II)
  ಕೊಯ್ಯಲೆನೆ ನೆಗಳ್ದ ಡಿನಾಸ್ಟಿ ವಾರಿಯರ್ (Dynasty Warriors) ಗೇಮೋ ? 😛

  • ಮೌರ್ಯರೇ, ನಿಮ್ಮಿ೦ದ ಅಚ್ಚ ಹಳಗನ್ನಡದ ಸೊಗಡುದು೦ಬಿದಕ್ಕರದ ವೃತ್ತದೊಳುರ್ಕುವ ಪದ್ಯಮನಾ೦ ನಿರೀಕ್ಷಿಸುತ್ತಿರ್ದೊಡಿದೆ೦ತು… 🙂

   • ಪದ್ಯಗಳು ಸದಾ ಗಂಭೀರಛಾಯೆಯನ್ನು ಹೊಂದಿದ್ದರೆ ಕೆಲವೊಮ್ಮೆ ನೀರಸವೆನಿಸುತ್ತದೆಂದು ಗುರುಗಳು ಒಮ್ಮೆ ಹೇಳಿದ್ದುಂಟು…ಸುಮ್ಮನೆ kick ಇರಲಿ ಎಂದು ಬರೆದೆ..(ಇದಕ್ಕೆ ಶ್ರೀಹಾದಿರಂಪರದ್ದೇ ಪ್ರೇರಣೆ :P)…

    • ಆ ಕಾವ್ಯನಾಮಕ್ಕೆ ಶ್ರೀಕಾರ ಯಾಕೋ ಹೊಂದುತ್ತಿಲ್ಲ 🙁

     • ಶ್ರೀಕಾರ ಬೇಡ, ತಿರುಮಂತ್ರ ಹಾಕಿದರೆ ಹೇಗೆ? ತಿರುಹಾದಿರಂಪ -> ತಿರುಪಾದಿರಂಪ -> ತಿರುವಾದಿರಂಪ 😀

     • ’ತಿರಕಂಡ್ ತಿಂಬೋ ತಿರಬೋಕಿ’ ಎಂಬ ಅರ್ಥದಲ್ಲೆ?

 25. ದುರುಳಂ ಕೈಚಾಚಿ ಕರೆಯೆ
  ಸರಿನೀನೆನಗಲ್ಲಮೆಂದು ಪೋ ಪೋಗೆನೆ, ತ-
  ನ್ನರಿಯಂ ಪೆದರಿಸಲೆಂದೀ
  ತರುಣಂ ಮೇಲೆಗರುತೊದ್ದ ದೃಷ್ಯಮಿದೇನೈ!!?

 26. (ನದಿಯ ಅನಿಸಿಕೆ)
  ಜೋಡಿಗೆಣೆಗಾರರಾ ಪ್ರೀತಿಸಲ್ಲಾಪಮೇ
  ತೀಡಿರ್ದಿತೇಂ ಪಸುರ್ ವಣ್ಣಮಂ ತಾಂ
  ಮೋಡದಬ್ಬರದ ವೊಲ್ ಗುದ್ದಾಟಮಿಂತಿಂದು
  ಬೇಡರ್ದ ಬರಡನೇ ಬರಸೆಳೆದುದೇಂ

  (ತನ್ನ ತೀರವು ಈ ಹಿಂದೆ, ಜೋಡಿಗಳ ಪ್ರೀತಿಯ ಸಲ್ಲಾಪದಿಂದಾಗಿ ಹಸುರಾಗಿತ್ತೇ?ಈಗಳಿಲ್ಲೀ ಈ ಬಗೆಯ ಗುದ್ದಾಟದಿಂದಲದು ಬರಡಾಯಿತೇ?)

  • ತು೦ಬ ಚೆನ್ನಾಗಿದೆ ಮೇಡಮ್! ನದಿಯ ಸ೦ತೋಷಕ್ಕೆ ಅರಿಯಾಗಿ ಬ೦ದದ್ದು ಜೋಡಿಜೀವ ಅನಸ್ತದೆ 🙂

   • ಜೋಡಿಜೀವವರಿಯಾದದ್ದು ನಿಮ್ಮ ಸಂತೋಷಕ್ಕಾಗಿತ್ತಷ್ಟೇ 🙂

  • ಸಖತ್ ಕಲ್ಪನೆ. ಅಭಿನಂದನೆಗಳು.

 27. ಎರೆಗಪ್ಪು ವೇಷದೀ ಚಂಡಾಲಕನ್ಯೆ ಕಾಣ್
  ಸರಿದಾಡೊ ನಾಗದಲಿ ಬಾಹುಬಂಧಿ !
  ಅರೆಗೆಂಪು ವಸ್ತ್ರದೊಳ್ ಶೂರ ಕ್ಷತ್ರಿಯ ಪುರುಷ
  ಬರಿಗಣ್ಗೆ ಕಂಡ ಕುಜ-ರಾಹು ಸಂಧಿ !!

  ಜೋತಿಷ್ಯಶಾಸ್ತ್ರದ ಪ್ರಕಾರ :
  ರಾಹು – ಚಂಡಾಲಕನ್ಯೆ – ಬೂದುಬಣ್ಣ (ನಾಗ ಸ್ವರೂಪಿ)
  ಕುಜ – ಕ್ಷತ್ರಿಯ ಪುರುಷ – ಕೆಂಪುಬಣ್ಣ

  “ಪದ್ಯಪಾನ”ದಲ್ಲಿ ಕುಜ-ರಾಹು ಸಂಧಿ ! “ಅವಧಾನ”ದ “ಶಾಂತಿ” ಆಗಬೇಕಿದೆ !!

  • ಈ ಶನಿವಾರಕ್ಕೆ ಅದೂ ಆಗಿಬಿಡುತ್ತದೆ…ಆ ಶಾಂತಿಯಲ್ಲಿ ತಮ್ಮ ಉಪಸ್ಥಿತಿಯೂ ಇರುತ್ತದಲ್ಲ…! 🙂

  • **typo
   ಬಾಜುಬಂದಿ !

  • ಉಷಾ ಅವರೆ, ೩ನೇ ಸಾಲಿನಲ್ಲಿ ಸ್ವಲ್ಪ ಸವರಣೆ ಬೇಕಿದೆ..

  • ಹೌದು ಚೇದಿ, ಗಮನಿಸಲಿಲ್ಲ, ತಿದ್ದಿದ ಪದ್ಯ,

   ಎರೆಗಪ್ಪು ವೇಷದೀ ಚಂಡಾಲಕನ್ಯೆಗಂ
   ಸರಿದಾಡೊ ನಾಗದೊಡೆ ಬಾಜುಬಂದಿ !
   ಅರೆಗೆಂಪು ವಸ್ತ್ರದೊಳ್ ಕ್ಷಾತ್ರತೇಜದ ಪುರುಷ
   ಬರಿಗಣ್ಗೆ ಕಂಡ ಕುಜ-ರಾಹು ಸಂಧಿ !!

   ಹೌದು ಮೌರ್ಯ, ನೀನೂ ಬರುವೆತಾನೆ ?!!

 28. ವೀಚಿಹಸ್ತಂಗಳಿಂ ನೀರುಣಿಸುತಿರೆ ನದಿಯು
  ಬಾಚಿನೀಡಿತೆ ತರುವು ವಾತಮಂ ತಾಂ|
  ನೀಚನಾದೆಯ ಮನುಜ! ಜಗದ ಮುಂದಿಂದೆಲಾ!
  ಚಾಚುತೆ ಕರಂಗಳಂ ಯುಧ್ಧಕೆಂದೆ||

  • ಓಹ್! ತಮ್ಮ ಕಲ್ಪನೆ ಈ ಬಾರಿ ಪುಂಖಾನುಪುಂಖಾನುವಾಗಿ ಸಾಗಿದೆ. ಪದ್ಯವು ಚೆನ್ನಾಗಿದೆ.

 29. ಅರ್ಜುನಕಿರಾತಸಮರಮೊ
  ಸರ್ಜನಶಕ್ತಿಪ್ರಯೋಗನಿರತನಟರೊ ವಿ-
  ದ್ಯಾರ್ಜಿತಮಲ್ಲೋತ್ಸಾಹಮೊ
  ನಿರ್ಜನಪಟಕಿಟ್ಟ ತೂಗುಗೊಂಬೆಯೊ ಬೆಸೆಯಲ್||

  • ಊರ್ಜಿತಕವಿತಾಲಾಸ್ಯಮೊ
   ನಿರ್ಜರಕಲ್ಪಕವಿಲಾಸಮೋ, ಕವಿನೇತ್ರ೦
   ನಿರ್ಜಿತಮದಲ್ತೆ ದಿಟದೊಳ್
   ಮಾರ್ಜಿತಮಾದುದು ಮದೀಯಮನಮೀ ರಸದೊಳ್

 30. ಭಾರಿವೈಭೋಗದಿಂ ಮೇಘಮಾಗೇರ್ವೊಡೇಂ
  ಜಾರುತುಂ ಬೀಳದೇಂ ನೀರುತಾಂ ಭೂಮಿಗಂ!
  ಪಾರುತುಂ ಹೋರುತುಂ ಗೆಲ್ವೊಡೇನೀಕ್ಷಣಂ
  ಸಾರಿದಾ ಪಟ್ಟಮೇಂ ಶಾಶ್ವತಂ ಲೋಕದೊಳ್?

  • ಮಾಲಿನೀ|| ಜಿಗಿಪಟುಗಳ ಪಟ್ಟಂ ಶಾಶ್ವತಂ (as current or ex) ಲೋಕದೊಳ್ ಕೇಳ್
   ಮಿಗೆ ನೆಗೆದರು (ಬಾಬ್) ಬೀಮನ್ (long jump), (ಜೇವಿಯರ್) ಸೋಟೊಮೇಯರ್ಗಳೆಂತೋ (high jump)|
   (27 ಸುದೀರ್ಘವರ್ಷಗಳು) ಯುಗಯುಗಗಳ ಕಾಲಂ (ಸರ್ಗೀ) ಬುಬ್ಕ ಸಾಮ್ರಾಟನಿದ್ದೇಂ (pole vault)?
   ಒಗಟನೊಡೆವವೊಲ್ ಲಾವಿಲ್ಲೆನೀ (Renaud Lavillenie) ಗೀಟ ಪಾರ್ದಂ (current pole vault record holder)||

   • ಜಿಗಿವರ್ ಪ್ರಸಾದವರ್ಯರ್
    ಮೊಗೆವರ್ ತೆರತೆರನ ಶಬ್ದಗಿಬ್ದ೦ಗಳನೆ-
    ತ್ತೊಗೆದೊಗೆದು ಕೋಶವೃಕ್ಷದೆ
    ನೆಗೆವರ್, ಲೀಲಾವಿಹಾರಿಗಳ್ ಹನುಮನವೋಲ್

    • ಸಂ. 7ರಲ್ಲಿ ನಾನು ನಿಮ್ಮ ಬಗೆಗೆ ಹೇಳಿರುವುದಕ್ಕೆ ಸೇಡು ತೀರಿಸಿಕೊಂಡಿರೆ 🙂 ಪ್ರತಿಕ್ರಿಯಾಕಂದಪದ್ಯವು ಅದ್ಭುತವಾಗಿದೆ. ಧನ್ಯವಾದಗಳು.

     • Hahha… ತಮ್ಮ೦ಥ ಸೂಕ್ಷ್ಮಮತಿಗಳಿಗೆ ವೇದ್ಯವಾಗದ್ದೇನಿದೆ?!

     • ಹನುಮಂತನಿಗೆ ಅವನ ಸಾಮರ್ಥ್ಯವನ್ನು ನೆನಪಿಸಿದ್ದು ಸುಗ್ರೀವ ಅಲ್ಲ – “ಜಾಂಬವಂತ” ಅಲ್ಲವೇ ?! ಅಂದರೇ … !! (ಪದ್ಯ ತುಂಬಾ ಚೆನ್ನಾಗಿದೆ ನೀಲಕಂಠ)

     • haha. ಕೋತಿ-ಕರಡಿಗಳಲ್ಲಿ ಮೇಲ್ಯಾವುದ್ಕೀಳ್ಯಾವುದೋ!

     • Hahhaa… ಕೋತಿಯೇ ಮೇಲು, ಮನುಷ್ಯಜಾತಿಗೆ ಸ್ವಲ್ಪ ಹತ್ತಿರದ್ದು.
      ಧನ್ಯವಾದಗಳು, ಈ ಕೋತಿಯ ಪ್ರತಿಭೆಯನ್ನು ಮೆಚ್ಚಿದ್ದಕ್ಕೆ, ಸ್ವಯ೦ಪ್ರಭಾ ಉಷಾ ಮೇಡಮ್ 🙂

   • ಕೋಶವೃಕ್ಷಗಳೀಗ softಆಗಿ ಕುಗ್ಗಿಹವು (online dictionaries)
    ಪಾಶವಿಹುದೆನ್ನ ಕೈಯೊಳು ’search’ಇನಾ|
    ರಾಶಿಶಾಖೆಗಳೆಲ್ಲ ಬಗ್ಗುವುವು ಎನ್ನೆಡೆಗೆ
    ಲೇಶಮುಂ ಪಾರೆ ನಾಂ ಹನುಮಂತನೊಲ್ (ನಳನೊಲ್, ನೀಲನೊಲ್, …)||

    • ಆಹಾ,,, ನೀವ್ ಪಾರದಿರ್ದೊಡೇ೦! ನಿಮ್ಮದೀ ಕಲ್ಪನಾಶಕ್ತಿ ಪಾರ್ವುದು ಗಡ ಹನುಮನವೊಲ್, ಹನುಮನಪ್ಪನೊಲ್!!!

 31. || ನಿರುಪಮಾವೃತ್ತ ||

  ಮೆರೆಯೆ ನೃತ್ಯದೊಳೆ ,ಸಾಧಿಸಲ್ ನರಂ,
  ಹರುಷದಿಂ ನೆಗೆಯೆ,ಬಿಟ್ಟು ಭೂಮಿಯಂ,|
  ಕರಿಯ ತಾಮಸವ ಕೊಲ್ಲೆ,ಜಾಡಿಸಲ್,
  ಪರಿಸರಂ ಮುದದೆ ವೀಕ್ಷೆಯೊಳ್ ರತಂ ||

  • ಈ ವೃತ್ತವನ್ನು ಮತ್ತಕೋಕಿಲ ಅಥವಾ ಪ್ರಿಯಂವದಾ ಎನ್ನುತ್ತಾರೆ. ನಿರುಪಮಾ ಎಂಬ ಮೂರನೆಯ ಹೆಸರಿರುವುದು ಈಗ ಗೊತ್ತಾಯಿತು. ತತ್ಪ್ರಕಾರವಾಗಿ ಈ ಕೆಳಗಿನ ಪದ್ಯದ್ದು ರಾಜೇಂದ್ರವೃತ್ತ||
   ನೀವು ಪೇಳಿಹೀ ಬಗೆಯ ವೃತ್ತಮದು
   ಕೋವಿದರ್ಗೆ ತಾಂ ’ನಿರುಪಮಾ’ ಅಹುದೆ?
   ಹಾವದಿಂದದಂ ತಿರುಗಿಸುತ್ತೆ ಬರೆ (Write it in reverse order)!
   ದೇವ ಇಂದ್ರರಾಜನದು ಛಂದಮಿದು||
   ಈ ಎರಡು ವೃತ್ತಗಳು ಪರಸ್ಪರ mirror imageಗಳು (Not a facing mirror, but one held at right angles). ನಿರುಪಮಾ-ರಾಜೇಂದ್ರರ ಕ್ಷಮೆಯನ್ನು ಕೋರಿ

   • ಕತ್ತಿಯ೦ ಕರ೦ಗಳಿನೆ ಚೆ೦ದದೊಳ-
    ಗೆತ್ತುತು೦ ಸರಾಗದಿನೆ ತಾ೦ ವರಸೆ-
    ಯೆತ್ತುವೋಲ್ ಪ್ರಸಾದರಿದೊ ಮೋದಿಪರೊ
    ವೃತ್ತಮ೦ ಮಗುಳ್ಚಿ ಪೊಸದಾಗಿಸುತೆ

    • ಓಹ್! ಈ ನವಛಂದಸ್ಸಿನಲ್ಲಿ ಇನ್ನೊಂದು ಪದ್ಯವೂ ಲಿಖಿತವಾಯಿತೆ! ನನ್ನ ಹೆಸರು ನಿಲ್ಲುತ್ತದೆ. ಧನ್ಯವಾದಗಳು.
     ನೀವು ’ಖಣ್ಡಪ್ರಾಸಸಾಮ್ರಾಟ್’ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಲ್ಲಂತೂ, ಪಾದಾಂತ್ಯದಲ್ಲಿ ಮೂರು ಲಘುಗಳಿರುವುದರಿಂದ, ಖಣ್ಡಪ್ರಾಸವಾಗಿಸಿದರೆ ಶ್ರವಣಕಟುತ್ವ ತಪ್ಪುತ್ತದೆ.

   • ಪ್ರಸಾದರೆ, ನಾನು ಓದಿರುವಂತೆ , ನಿರುಪಮಾ ಹಾಗೂ ಪ್ರಿಯಂವದಾ(ದ್ರುತಪದ) – ಇವೆರಡೂ ತುಂಬ ಹೋಲಿಕೆಯುಳ್ಳ ವಿಭಿನ್ನವೃತ್ತಗಳು. ಪ್ರಿಯಂವದಾವೃತ್ತವು ,ನ ನ ನ ನಾ ನ ನ ನ ನಾ ನ ನ ನಾ ನಾ ಎಂಬ ಪಾದಪ್ರಸ್ತಾರವನ್ನು ಹೊಂದಿದೆ.( ವಿ ಸೂ : ದಯಮಾಡಿ ತಿಳಿದವರನ್ನು ಕೇಳಿ ತಪ್ಪೊಪ್ಪುಗಳನ್ನು ಅರಿತುಕೊಳ್ಳಿರಿ)

   • ರಥೋದ್ಧತಾ ವೃತ್ತದ ಮೊದಲ ಗುರುವನ್ನು ಎರಡು ಲಘುಗಳನ್ನಾಗಿ ಮಾಡಿದ (ನನನನಾನನನನಾನನಾನನಾ) ವೃತ್ತಕ್ಕೆ ಪ್ರಿಯಂವದಾ ಎಂಬ ಹೆಸರು ಬಳಕೆಯಲ್ಲಿದೆ. ಅದಕ್ಕೇ ಮತ್ತಕೋಕಿಲ* ಎಂಬ ಹೆಸರೂ ಇದ್ದಂತೆ ತೋರುತ್ತದೆ. ಇದಕ್ಕೇ ನಿರುಪಮಾ ಎಂಬ ಹೆಸರೂ ಇದೆ ಎಂದು ಗೊತ್ತಿರಲಿಲ್ಲ.
    ದ್ರುತಪದ ವೃತ್ತಕ್ಕೆ ಪ್ರಿಯಂವದಾ ಎಂದೂ ಬಳಕೆಯಲ್ಲಿದೆ ಎಂದು ಗೊತ್ತಿರಲಿಲ್ಲ.
    ಪ್ರಸಾದು ಅವರೇ,ಬಹುತೇಕ ವೃತ್ತಗಳೆಲ್ಲ ಗುರುವಿನಿಂದಲೇ ಅಂತ್ಯವಾಗುವುದರಿಂದ- ನೀವು ಕಂಡುಹಿಡಿದ “ರಾಜೇಂದ್ರವೃತ್ತ”ದ ಕೊನೆಯಲ್ಲಿ ಲಘು ಇರುವ ಕಾರಣ ಅಷ್ಟು ಹಿತವೆನ್ನಿಸುವುದಿಲ್ಲ ಅನಿಸಿತು. ಆದರೂ ಮಾತ್ರಗಳ ಪ್ರಕಾರ (ರಥೋದ್ಧತದಂತೆಯೇ) ಸಂತುಲಿತಮಧ್ಯಾವರ್ತದ 3+5ರ ಗತಿ ಇರುವುದರಿಂದ ಕರ್ಕಶವಾಗಿಯಂತೂ ಇಲ್ಲ.

    (*ತೆಲುಗಿನಲ್ಲಿ ಹೇಳುವ ಮತ್ತಕೋಕಿಲ ನಮ್ಮಲ್ಲಿ ಮಲ್ಲಿಕಾಮಾಲೆ ಎಂದು ಬಳಕೆಯಲ್ಲಿದೆ.)

    • ಧನ್ಯವಾದಗಳು ಕೊಪ್ಪಲತೋಟರೆ. ಒಟ್ಟಿನಲ್ಲಿ ವೃತ್ತವೊಂದು,ನಾಮ ಹಲವು ಆಗಿ, ದೈವಸಮಾನವಾಗಿದೆ.

  • ತರುಲತಾದಿಕಮನ೦ಗಳ೦ ಮನೋ-
   ಹರಕಲಾವಿಲಸನ೦ ಪ್ರಚೋದಿಸಲ್,
   ನಿರುಪಮ೦ ನಿರುಪಮಾಪ್ರಬ೦ಧಮೇ೦
   ವರಿಸದಿರ್ಪುದೆ ಮದೀಯ ಚಿತ್ತಮ೦?!

   ಸು೦ದರವಾದ ಕಲ್ಪನೆ ಮೇಡಮ್ 🙂

   ಪ್ರಸಾದರೆ, ಮತ್ತಕೋಕಿಲ ಎನ್ನುವುದು ನರ್ದಟಕ ಅಲ್ಲವೇ?

   • ನಾಲ್ಕನೆಯ ಹೆಸರೆ!!!!

    • ಇಲ್ಲ..
     ಗಗನದೆ ಪೊನ್ನ ಕಾ೦ತಿಯುತ ಭಾಸುರಭಾನುವಿರಲ್
     ಇದು ನರ್ದಟಕ ಎ೦ದು ನೆನಪು…

     • ಆ ಭಾನುವು ಅಸ್ತಂಗಮಿಸಿ ಸೋಮಂ (Luna) ಉದಯಿಸಲ್, ಆಗೇನಪ್ಪುದೊ ನೆನಪು?

    • ಸೋಮರಸಾದಿಗಳನ್ನು ಸೇವಿಸುವ ಅಭ್ಯಾಸವಿಲ್ಲದ್ದರಿ೦ದ ಆ ನೆನಪು ಹಾಗೇ ಗಟ್ಟಿಯಾಗೇ ಇರ್ತದೆ.

   • ನೀಲಕಂಠರೆ, ಪದ್ಯವನ್ನು ಮೆಚ್ಚಿರುವುದಕ್ಕೆ ಧನ್ಯವಾದಗಳು. ಸಹೋದರಗಣೇಶರು ತಿಳಿಸಿದಂತೆ ನರ್ದಟಕವೃತ್ತಕ್ಕೆ ಕೋಕಿಲಕವೃತ್ತವೆಂದು ಹೆಸರು. (ಮತ್ತಕೋಕಿಲದ ಬಗ್ಗೆ ನನಗೆ ತಿಳಿದಿಲ್ಲ) .

 32. ಪಸುರಿನಂದದ ವೃಕ್ಷಸಂಕುಲ
  ನುಸುಳಿ ಪರಿವೀ ಧವಲನಿರ್ಝರ,
  ವಸುಧೆಯಂ ಭೂಷಿಸುತುಮೀವೊಲ್ ,ನೋಟ ಸುಂದರದಾ,
  ವಸನ,ಭೂಷಣ ,ಕಡಗ ಕಂಕಣ
  ವೆಸೆದುಮಿತ್ತುದೆ ಸೊಬಗನುರ್ಕಿಸಿ
  ಪೊಸತು ರಂಗಿನ ಮೋಹಕರ್ಷಮನಾಟವೀಕ್ಷಣೆಯೊಳ್!

  (ಹಸಿರು,ನದಿ.. ಭೂಮಿಯನ್ನು ಶೃಂಗರಿಸಿ,ನಮಗೆ ಸುಂದರನೋಟವನ್ನು ನೀಡಿದಂತೆ, ಈ ಆಟವನ್ನು ವಸನ.,ಭೂಷಣ..ಗಳು ಚಂದವಾಗಿಸಿ ವೀಕ್ಷಕರನ್ನು ಆಕರ್ಷಿಸಿದವೇ?)

  • ಮುಚ್ಚಿರಿಸಿಹುದೀ ಪ್ರಕೃತಿಯು-
   ಮೆಚ್ಚರದಿಂ ನೋಡಲಾಗ ಗೋಚರಮರ್ಥಂ|
   ನಿಚ್ಚಂ (always) ದೇಶಾಂತರದೊಳ್ (everywhere)
   ಹೊಚ್ಚಹೊಸದೆನಿಪ ವಸಂತಮನೆ ಕಂಡಿಹೆಯೌ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)