Aug 112015
 

valcano

  88 Responses to “ಪದ್ಯಸಪ್ತಾಹ ೧೬೩: ಚಿತ್ರಕ್ಕೆಪದ್ಯ”

 1. ಬೆಳಧಿನ್ಗಳು ಇಲ್ಲದ ಬಾನು ,
  ನೀಲಿ ಮೋಡ ದ ಮಧ್ಯೆ ಹಾರುತಿರುವ ಹೊಗೆ
  ಇಧರ ಮಧ್ಯೆಯೂ ಇಣುಕುತಿರುವ ನಕ್ಷತ್ರ ರಾಶಿಗಳು
  ಏನ ಬನ್ನಿಸಲಿ ನಿಸರ್ಗದ ಚೆಲುವು, ಚೆಲುವು

 2. ಬೆಳಧಿನ್ಗಳು ಇಲ್ಲದ ಬಾನು ,
  ನೀಲಿ ಮೋಡ ದ ಮಧ್ಯೆ ಹಾರುತಿರುವ ಕರಿ ಮೋಡ
  ಇಧರ ಮಧ್ಯೆಯೂ ಇಣುಕುತಿರುವ ನಕ್ಷತ್ರ ರಾಶಿಗಳು
  ಏನ ಬನ್ನಿಸಲಿ ನಿಸರ್ಗದ ಚೆಲುವು, ಚೆಲುವು

  • ಮಾನ್ಯರೆ
   ಇಲ್ಲಿ ಬರೆಯುವ ಪದ್ಯಗಳು ಛಂದೋಬದ್ಧವಾಗಿರಬೇಕೆಂಬುದು ಮೊದಲ ನಿಯಮ. ದಯವಿಟ್ಟು ಕಲಿಕೆಯ ಸಾಮಗ್ರಿಗಳನ್ನು ಅವಲೋಕಿಸಿ ಪ್ರಾಸಛಂದಸ್ಸುಗಳಿಂದ ಕೂಡಿದ ಪದ್ಯ ಬರೆಯಿರಿ.
   ಅಲ್ಲದೇ ಮೇಲೆ ಬರೆದ ವಾಕ್ಯದಲ್ಲಿ ಕೂಡ ‘ಬೆಳಧಿನ್ಗಳು’ ಎಂಬಲ್ಲಿ “ಬೆಳದಿಂಗಳು” , ‘ಇಧರ’ ಎಂಬಲ್ಲಿ ‘ಇದರ’, ‘ಬನ್ನಿಸಲಿ’ ಎಂಬಲ್ಲಿ ‘ಬಣ್ಣಿಸಲಿ’ ಎಂದಾಗಬೇಕು. ದಯವಿಟ್ಟು ಗಮನಿಸಿ
   ಧನ್ಯವಾದಗಳು

   • ನಿಮ್ಮ ಪ್ರೀತಿಯ ಸಲಹೆಗೆ ಧನ್ಯವಾದಗಳು.ಖಂಡಿತವಾಗಿಯು ನಿಮ್ಮ ಸಲಹೆಯಂತೆ ಬರೆಯಲು ಪ್ರಯತ್ನಿಸುತ್ತೇನೆ .

  • ನಿಮ್ಮ ಪದ್ಯವನ್ನು ಛಂದೋಬದ್ಧವಾಗಿಸುವ ಪ್ರಯತ್ನ:
   ಬೆಳದಿಂಗಳಿಲ್ಲದಿಹ ಬಾನಿನಂಗಳದಲ್ಲಿ
   ಕೊಳಕು ಕಾರ್ಮೋಡಗಳ್ ಬೆಳ್ಮೋಡದೊಳ್|
   ಹೊಳೆದಿರಲ್ ಚುಕ್ಕಿಗಳು ಈ ಹಿನ್ನೆಲೆಯೊಳೆಂತೊ
   ಪುಳಕಗೊಂಡಿದೆ ಮನವು ಪ್ರಾಕೃತ್ಯದಿಂ||

 3. ಸೊಡರೊಂದು ಪುಟ್ಟಿ ನಿನ್ನೀ
  ಯೊಡಲೊಳ್,ಪೆರ್ಚಿಸಿರಲಂದಮಂ,ಸುವಿಚಾರೀ!
  ಕೊಡವುತ್ತೆ ಪೋಪುದಲ್ತೇಂ
  ಸಿಡುಗೋಪಕ್ಕೆರೆದು ಸಂದ ವಿಷಮತೆಯಂ ಮೇಣ್!

 4. ಜಲಜಸಖ ಮರೆಯಾಗೆ ತಾರೆಗಳು ಕಂಗೊಳಿಸೆ
  ನೆಲನಂಬರವ ತಿಮಿರನಾವರಿಸಿರೆ /
  ಮಲಯಶಿಖರದಿ ಮೇಘವಸಿತಛಾಯೆಯ ಪೊಂದೆ
  ಕೆಲದ ಗ್ರಾಮದೊಳ್ ದೀಪ ಬೆಳಗಿರ್ಪುದು //

 5. प्रातर्नूत्नं विशालं ग्रहमयगगनं वीक्ष्य पत्नी धरित्री
  वक्तुं “हायं” विशिष्टं सह्र्दयह्र्दयं स्वीयशैल्या स्वनाथम्।
  उद्युक्ताऽभूत् तदैवं मुखनिभगिरितो जृंभितं वायुवेगात्
  हर्षोद्गारं प्रदर्श्य प्रियजननिखिलान् तोषलोकं निनाय॥

  भूम्याकाशयो: पुराणप्रसिद्धं पतिपत्नीसम्बन्धमाधारीक्र्र्र्र्त्य प्रयत्न:।

 6. ನಾಲ್ಕನೆಯ ಪಾದವನು ಹೀಗೆ ಬದಲಿಸಬಹುದೆ ?

  ಜಲಜಸಖ ಮರೆಯಾಗೆ ತಾರೆಗಳು ಕಂಗೊಳಿಸೆ
  ನೆಲನಂಬರವ ತಿಮಿರನಾವರಿಸಿರೆ /
  ಮಲಯಶಿಖರದಿ ಮೇಘವಸಿತಛಾಯೆಯ ಪೊಂದೆ
  ನಿಲಯಗಳ ದೀಪಗಳು ಬೆಳಗಿರ್ಪುವು //

  • Chandas wise it is fine. But regarding ಮೇಘವಸಿತಛಾಯೆಯ, following sandhi rule it should be ….vasitachchhaaye.. with ottakshara on chha. The chhandas will be relooked into.

   • ಸರಿಪಡಿಸಲು ಯತ್ನಿಸಿರುವೆ.

    ಜಲಜಸಖ ಮರೆಯಾಗೆ ತಾರೆಗಳು ಕಂಗೊಳಿಸೆ
    ನೆಲನಂಬರವ ತಿಮಿರನಾವರಿಸಿರೆ /
    ಮಲಯಶಿಖರದಲಸಿತನೀರದವು ಕವಿದಿರಲು
    ನಿಲಯಗಳ ದೀಪಗಳು ಬೆಳಗಿರ್ಪುವು //

    • ನನ್ನರಿವಿನಳವಿನೊಳೀಗ ಸರಿ ಆಯ್ತು 🙂

    • ಪದ್ಯ ಚೆನ್ನಾಗಿದೆ ರಾಜಗೋಪಾಲರೆ. ಇನ್ನಷ್ಟು ಬರೆಯುವಿರೆಂದು ಆಶಿಸುತ್ತೇನೆ.

 7. ಅಟ್ಟುತ್ತಿರ್ಪರಲಾ ಸ್ವಕರ್ಮದುಣಿಸ೦ ಲೋಗರ್ಕಳೆ೦ತೋ ಸೊಗ೦-
  ಗೆಟ್ಟಿರ್ಪ೦ತಿರದಿರ್ಪ ಬಾಳ್ತೆ ನೆಱೆಯಲ್ ಕೂಡಿರ್ದದೆ೦ತೋ ಸುಡು-
  ತ್ತೊಟ್ಟಿಟ್ಟ ಸ್ವಕಮಪ್ಪ ಕಜ್ಜಮೆ ಸಮಿತ್ತೆ೦ಬ೦ದಮೆ೦ತೋ ಕಿಡ-
  ಲ್ದಟ್ಟೈಸಿತ್ತಲೆ ಧೂಮಮುರ್ವಿಯುಸಿರ೦ಗಟ್ಟುತ್ತುಮೆ೦ತೋ ನಿಲಲ್

  (ಬೆಟ್ಟದ ಅಡಿಯಲ್ಲಿ ಅಡುಗೆ ಒಲೆಯ೦ತೆ ಉರಿಯುತ್ತಿರುವ ಬೆ೦ಕಿಯೋ ದೀಪವೋ ಅದನ್ನು ಗಮನಿಸಿ) ಜನ ತಮ್ಮ ಜೀವನವನ್ನು ಹೇಗೋ ಹಸನಾಗಿಸಿಕೊಳ್ಳಲು ಹೇಗೋ ಅದೂ ಇದೂ ಮಾಡಿ ತಮ್ಮ ಕರ್ಮದ ಅಡುಗೆಯನ್ನು ಅಟ್ಟುತ್ತಿರುತ್ತಾರೆ. ಅದು ಹೇಗೋ ಕೆಟ್ಟು ಹೋದರೆ ಅದರ ಪರಿಣಾಮ ಧೂಮದ೦ತೆ ಎಲ್ಲೆಲ್ಲೂ ಉಸಿರುಗಟ್ಟುವ೦ತೆ ಹರಡುತ್ತದೆ.

  • ನೀಲಕಂಠರೆ, ನಿಮ್ಮ ಪದ್ಯದ ಕಲ್ಪನೆ ,ನಿಮ್ಮ ಅರ್ಥದಲ್ಲಿರುವಂತೆ ಚೆನ್ನಾಗಿದೆ. ಆದರೆ ಪದ್ಯವನ್ನು ಅರ್ಥೈಸಲು ನನಗೆ ಸಾಧ್ಯವಾಗುತ್ತಿಲ್ಲ. ತುಂಬ ಸಂಕೀರ್ಣವಾಗಿದೆ. 🙂

   • ಹೌದು, ನನಗೂ ಅರ್ಥೈಸಲು ಕಷ್ಟವಾಯಿತು 🙂
    ಗಣೇಶನಿಗೂ ಅರ್ಥವಾಗಲು ಕಷ್ಟಕರವಾದ ವ್ಯಾಸರ ಕೂಟಶ್ಲೋಕದ೦ತೆ ಇದು ಒ೦ದು ನನ್ನ ಕೂಟಪದ್ಯ …

    ಕೆಳಗಿನ ಅನ್ವಯ ನೋಡಿ…

    ಅಟ್ಟುತ್ತಿರ್ಪರಲಾ ಸ್ವಕರ್ಮದುಣಿಸ೦ ಲೋಗರ್ಕಳ್. ಎ೦ತೋ ಸೊಗ೦ಗೆಟ್ಟಿರ್ಪ೦ತೆ ಇರದಿರ್ಪ ಬಾಳ್ತೆ ನೆಱೆಯಲ್, ಎ೦ತೋ ಕೂಡಿರ್ದು ಸುಡುತ್ತ ಒಟ್ಟಿಟ್ಟ ಸ್ವಕಮಪ್ಪ ಕಜ್ಜಮೆ ಸಮಿತ್ತೆ೦ಬ೦ದ೦, ಎ೦ತೋ ಕಿಡಲ್ ದಟ್ಟೈಸಿತ್ತಲೆ ಧೂಮ೦ ಉರ್ವಿ ಉಸಿರ೦ಗಟ್ಟುತ್ತು೦ ಎ೦ತೋ ನಿಲಲ್.

 8. ದುರುಳರ್ ಭೂತಲದೊಳ್ ಪೊಗಲ್ಕೆ ವಿಶದಾ ಬೀಜಂಗಳಂ  ಬಿತ್ತಿರಲ್
  ನರರೀ ಕೃತ್ಯಗಳಿಂದಳುತ್ತಲಿಳೆತಾಂ ನೋಂತಿರ್ಪಳೈ ಖೇದದಿಂ
  ದುರಿವ ಜ್ವಾಲೆಯ ಪೊತ್ತಿಸಲ್ಕುದರದಿಂ ಬಿಕ್ಕುತ್ತಲೀ ಪಾಪದಾ
  ತರುವಂ ಕಾರ್ಪೊಗೆಯಾಗಿಸೆಲ್ಲಡೆಯುಸಾರ್ಚುರ್ತಿರ್ಪಳೀ ದೃಷ್ಯದೊಳ್

  • ವಿಶದಾ and ದೃಷ್ಯದೊಳ್ have exchanged across their sha, Sha??

   • Yes typo.. thanks for correction

    • ಚೆನ್ನಾಗಿದೆ…ಒಂದಿಷ್ಟು ಹಳೆಗನ್ನಡೀಕರಣ 😉 ಕೃತ್ಯಂಗಳ್ ಆಗಬೇಕು ಆದರೆ ಛಂದಸ್ಸಿಗೆ ಹೊಂದುವುದಿಲ್ಲ. ಉಳಿದಂತೆ –
     …ಪುಗಲ್ಕೆ…
     …ಅಳುತ್ತುಮಿಳೆ…
     ….ಬಿಕ್ಕುತ್ತುಮೀ…
     …ಎಲ್ಲೆಡೆಗೆ.. ಎಂದು ಮಾಡಿದರೆ ಚೆನ್ನಾಗಿರುತ್ತದೆ.

     • ನಿಮ್ಮೀ ವೃತ್ತಂ ಸೊಗಸೈ
      ನಿಮ್ಮೀ ಭಾವದೆನದೊಂದು ಕಂದದ ಯತ್ನಂ ….

      ಮನಸಿನೊಳಗಡಗಿಸಿಹಳೈ
      ಮನುಜವಿರಚಿತ ವಿಕೃತಾಗ್ನಿಪರ್ವತವಂ, ಜೀ
      ವನವಂ ರಕ್ಷಿಸುತವರೆ
      ಲ್ಲ ನೋವತಾನುಂಡ ಭುವಿನಿಶೆಯೊಳಡಗಿಹಳೇ೦?

     • ಕೊಪ್ಪಲತೋಟ ಹಾಗೂ ವೇದಪ್ರಕಾಶರಿಗೆ ಧನ್ಯವಾದಗಾಳು..

 9. ನಗರಾಜರಕ್ಷೆಯೊಳ್ ಪ್ಲುತ
  ಜಗಮೇ ಜಾರಲ್ಕೆ ನಿದಿರೆಗಮಲಂಕೃತೆಯರ್
  ಸೊಗಯಿಪರೇಂ ಪೊಳೆವೊಳೆದುಂ
  ಪುಗುವೊಡನಭಿಸಾರಕಂ, ಸುಖಾಂತಕ್ಕೋದುಂ!

  (ಪರ್ವತರಾಜನ ರಕ್ಷೆಯಲ್ಲಿ ಜಗತ್ತು ಮಲಗಿರುವಾಗ, ಸುಖಾಂತಾಪೇಕ್ಷೆಯಿಂದ ಹೊರವಂಟ ಅಭಿಸಾರಿಕೆಯರು ಹೊಳೆಯುತ್ತಿರುವರೇಂ)

 10. ನೀಲಿ ವರ್ಣದಿ ತುಂಬಿದೆ ಆಗಸ
  ನಕ್ಷತ್ರಗಳು ತುಂಬಿ ತುಳುಕ್ಕುತ್ತಿರುವ ಸೊಗಸ
  ನೋಡಿ ನಲಿವುದು ಮಾನಸ
  ತಂಪಿನಿಂದ ತಣಿಸುವುದು ಮನದ ಕೂಸ

  • ಮಾನ್ಯರೆ
   ಇಲ್ಲಿ ಬರೆಯುವ ಪದ್ಯಗಳು ಛಂದೋಬದ್ಧವಾಗಿರಬೇಕೆಂಬುದು ಮೊದಲ ನಿಯಮ. ದಯವಿಟ್ಟು ಕಲಿಕೆಯ ಸಾಮಗ್ರಿಗಳನ್ನು ಅವಲೋಕಿಸಿ ಪ್ರಾಸಛಂದಸ್ಸುಗಳಿಂದ ಕೂಡಿದ ಪದ್ಯ ಬರೆಯಿರಿ.
   (Borrowed Texts from K.tOTa) 😉

   • That’s enough cheedi. Don’t borrow any more. Because…
    ಯಾಕಾರೆ ಎರವಲಂ ಪಡೆದೆಯೋ ಗದ್ಯಮಂ
    ತಾಕತ್ತನಾ ಕಬ್ಬಿಗನದತ್ತಲಿರಿಸಿ|
    ಸಾಕುಮಾಡೈ ಚೀದಿ ಎರವುಕಜ್ಜಮನಿನ್ನು
    ಬೇಕೇನು ಕೊಪ್ಪಲನ ಬ್ರಹ್ಮಚರ್ಯಂ??

  • ಪಡೆಯದಿದ್ದರೆ ಬೇಗ ಜ್ಞಾನಮನು ಛಂದಸ್ಸ
   ಕೊಡುವೆನಷ್ಟರೊಳೆ ನಿಂಗಾನು ಗೂಸ|| 😉
   ಗಂಭೀರವಾಗಿ ತೆಗೆದುಕೊಳ್ಳಬೇಡಿ. ಕಿಡಿಯಾಗಿ ಚಿಮ್ಮಿರುವ ಈ ನಿಮ್ಮ ಆಸಕ್ತಿಗೆ ಅಭ್ಯಾಸವೆಂಬ ಗಾಳಿಯಿತ್ತು ಪೋಷಿಸಿ. ಬೇಗ ಅದು ಜ್ಯೋತಿಯಾಗುತ್ತದೆ. ಚೀದಿಯವರು ಉಲ್ಲೇಖಿಸಿರುವ ಕೊಪ್ಪಲತೋಟರ ಮಾತುಗಳನ್ನು ಗಮನಿಸಿಕೊಳ್ಳಿ.
   ನಿಮ್ಮ ಕಲ್ಪನೆಗೆ ಛಂದೋವಸ್ತ್ರವನ್ನು ತೊಡಿಸಿದ್ದೇನೆ:
   ನೀಲವರ್ಣವ ಪೊಂದಿ ನಲಿದಿರಲು ಆಗಸವು
   ಲೀಲೆಯಿಂ ಚುಕ್ಕಿಗಳು ತುಂಬುತಲ್ಲಿ|
   ತೇಲಾಡುತಲಿ ಮನವು ವಿಸ್ಮಯದೆ ಮುದಗೊಂಡು
   ಫಾಲಾಕ್ಷನಿಗೆ ಸಲ್ಲಿಸಿದೆ ಭಕ್ತಿಯಂ||

   • ಧನ್ಯವಾದ ನಾನೊರ್ವ ಪ್ರಾರಂಭಿಸುತ್ತಿರುವ ಅಂಬೆಗಾಲಿಡಲು
    ಪ್ರಯತ್ನ ಪಡುತ್ತಿರುವ ಹಸುಗೂಸು ಬರಹದಲ್ಲಿ.
    ಸಹಕರಿಸಿ ಅಜ್ಞಾನಿಯಾದೆನ್ನನು ಜ್ಞಾನದೆಡೆಗೆ ಕರೆದೊಯ್ಯಿರಿ ಎಂಬುದು ಎನ್ನ ಕೋರಿಕೆ

    • ವಿಷ್ಣು ಭಟ್ಟರೇ, ಇಲ್ಲೇನೂ ಸಂಕೋಚ ಪಡಬೇಕಿಲ್ಲ. ಹೆಚ್ಚಾಗಿ ಎಲ್ಲರೂ ಹಾಗೆಯೇ ಶುರುಮಾಡಿದವರು.
     ಇದೇ ತಾಣದಲ್ಲಿ “ಪದ್ಯ ವಿದ್ಯೆ” ಎಂಬ ಕೊಂಡಿಯಡಿಯಲ್ಲಿ, ಅನೇಕ ವಿಡಿಯೋ ಪಾಠಗಳಿವೆ. ನೋಡಿದರೆ, ಇಲ್ಲಿನ ಪದ್ಯಗಳನ್ನು ಪರಾಮರ್ಶಿಸಿದರೆ, ತನ್ನಂತಾನೇ ಛಂದಸ್ಸು ಬರುತ್ತದೆ.

 11. The volcano that has issued forth from the hilltop has burnt its surroundings and has subsided by now. Satisfied, the hill is now belching (the smoke that is wafting from the peak) after its belly fire is doused.
  ಮಾಲಿನಿ||
  ಒಡಲುರಿಯನು ನೀನಿಂತೆಂತೊ ಕಕ್ಕುತ್ತೆ ಮೇಣಿಂ-
  ದಡಿಗಡಿಗದ ಹಂಚಿರ್ಪೈ ವಲಂ ಬೇಡದರ್ಗುಂ|
  ಗಡಣಗೊಳಿಸಿ ವಾಸ್ತ್ಯವ್ಯಂಗಳಂ ಜೀವಮನ್ನೀ-
  ಗೊಡಲು ತಣಿಯಿತೆಂದುಂ ತೇಗುತಿರ್ಪೈ ನಗೇಂದ್ರನ್||

  • ಯತಿಯಿರದಲೆ ನಿಮ್ಮೀ ಮಾಲಿನೀಸ೦ಗಮೇಕಯ್?!

   • ಬರಿಯ ಮಾಲಿನಿಯನ್ನೆ ತೊಡೆದಿಹನು ಯತಿಯೈ? ಫಿ-
    ಗರುಗಳನ್ನೆಲ್ಲರಂ ತ್ಯಜಿಸಿರ್ಪನೈ!

   • – ಗುರುಗಳನ್ನೆಲ್ಲರಂ ತ್ಯಜಿಸಿರ್ಪಿರೇಂ ?!

    Figuration ಚೆನ್ನಾಗಿದೆ !!

   • ನೀಲಕಂಠರೇ..ಯತಿವಿಲಂಘನದಿಂದರಿದಲ್ತೆ ಕನ್ನಡಂ 😉

  • ಪ್ರಸಾದರೆ, ಗಡಣಂಗೊಳಿಸಿ ಎಂದಾಗಬೇಕೆ ? ( ಆಗ ಛಂದಸ್ಸಿಗೆ ಹೊಂದದು)

   • ಶಕುಂತಲಾರವರೆ, ನಿಮ್ಮ ಸಲಹೆಗಳು, ಹಳೆಗನ್ನಡದ ಸವರಣೆಗಳು, ಪದ್ಯಗಳ ಸಂಪೂರ್ಣ ಅರ್ಥೈಕೆಗಾಗಿನ ಪ್ರಯತ್ನ, ಇವೆಲ್ಲಕ್ಕಾಗಿ ಧನ್ಯವಾದಗಳು. ಹೀಗೆಯೇ ಮುಂದೆಯೂ ತೊಡಗಿಕೊಳ್ಳುವಿರಾದರೆ ಅದು ನಮ್ಮ ಭಾಗ್ಯವೇ ಸರಿ.

    • ರಾಮಚಂದ್ರರೆ, ನಿಮ್ಮ ಧನ್ಯವಾದಗಳಿಗೆ ವಂದನೆಗಳು. ನಿಮ್ಮೆಲ್ಲರಿಂದ ಕಲಿತಿರುವುದನ್ನೇ , ಅನಿಸಿಕೆಗಳನ್ನಾಗಿಸಿದ್ದೇನೆ ಅಷ್ಟೆ. ನನ್ನದೇನೂ ಹೆಚ್ಚುಗಾರಿಕೆಯಿಲ್ಲ. ಸಹಪದ್ಯಪಾನಿಗಳಿಗೆ ಉಪಕಾರವಾಗುವಂತಿದ್ದರೆ , ಸಮಯಾನುಕೂಲವಾದಾಗೆಲ್ಲಾ ಹೀಗೆ ತೊಡಗಿಕೊಳ್ಳಬಹುದು.

   • ಗಡಣಂ = ಗಡಣವು. ಗಡಣವು-ಗೊಳಿಸಿ ಎಂದರೆ ಸಾರ್ಥವಿರದು. ತಿಳಿದವರು ವಿಶದಪಡಿಸಲಿ.

 12. ಗಗನಂ ಪರ್ವತಮಂ ನೋ-
  ಳ್ದೊಗುಮಿಗೆಯಿಂ ರಚಿಪೆನೆಂದು ಕಾಪೀ ಪೇಸ್ಟಂ(copy- paste)
  ಸೊಗದಿಂದೆನ್ನ ಕಮೆಂಟಂ(comment)
  ಮಿಗೆ ಚೀದಿಯೆ ಗೈದ ತೆರದೆ ಗೈಯುತ್ತಿರ್ಕುಂ ||
  (ಸೊಗದಿಂದ ನನ್ನ ಕಮೆಂಟನ್ನು ಚೀದಿ copy- paste ಮಾಡಿದ ಹಾಗೆಯೇ ಪರ್ವತವನ್ನು ನೋಡಿ ಆಕಾಶ ಇನ್ನೊಂದನ್ನು ಮಾಡುತ್ತೇನೆ ಎಂದು copy paste ಮಾಡುತ್ತಿದೆ)

 13. ಮೊದಲೊಳೆ ಪಕ್ಷಮಂ ಸುರಪನಾಯುಧದಿಂದುರೆ ಛೇದಿಸಿರ್ದೊಡಂ
  ಹೃದಯದೆ ತಾಪದಿಂದೆ ಕುದಿಯುತ್ತಿರೆ ನಿಶ್ಚಲನಾಗಿ ಭೂಧರಂ
  ಚದುರಿದ ತಾರಕಾಳಿಯದೊ ವಜ್ರಮೆನಿಪ್ಪವೊಲಲ್ಲಿ ಕಂಡಿರ-
  ಲ್ಕಿದು ಗಡ ಶಕ್ರತಂತ್ರಮೆನುವಂದದೆ ಸುಯ್ದವೊಲಿರ್ಕುಮಾ ಮುಗಿಲ್
  (ಮೊದಲೊಮ್ಮೆ ಪಕ್ಷಗಳನ್ನು ಆ ಇಂದ್ರ ಕತ್ತರಿಸಿಬಿಟ್ಟ ಕಾರಣ ಹೃದಯದ ತಾಪದಿಂದ ಕುದಿಯುತ್ತ ನಿಶ್ಚಲನಾಗಿ ಈ ಪರ್ವತವಿರಲು ಚದುರಿರುವ ನಕ್ಷತ್ರಗಳು ವಜ್ರಾಯುಧದಂತೆ ಕಂಡಿತು. ಅದನ್ನು ನೋಡಿ “ಇದು ಇಂದ್ರನದೇ ಏನೋ ತಂತ್ರ” ಎಂದು ಬಿಸುಸುಯ್ದ ಹಾಗೆ ಮೋಡ ಕಾಣಿಸುತ್ತಿದೆ)

  • ಕೊಪ್ಪಲತೋಟರೆ, ತುಂಬ ಸೊಗಸಾದ ಕಲ್ಪನೆಯ ಪದ್ಯ. ಒಂದು ಸಂದೇಹ- ಮೂರನೇ ಪಾದದಲ್ಲಿ , “ವಜ್ರಮೆನಿಪ್ಪವೊಲಲ್ಲಿ ” ಎಂದಾಗಬೇಕೆ ? ಟಂಕನದೋಷದಿಂದಾಗಿ ” ವಜ್ರಮನಿಪ್ಪವೊಲಲ್ಲಿ” ಎಂದಾಗಿದೆಯೆ ? ಅಥವಾ ನೀವು ಬರೆದಿರುವುದು ಸರಿಯೆ?

   • ಧನ್ಯವಾದಗಳು .. ಹೌದು. ಮುದ್ರಾರಾಕ್ಷಸನ ಹಾವಳಿ. ತಿದ್ದುವೆ 🙂

 14. ಇರದಯ್ ಮೇಘಮದಂಬರಾಂಗಣದೊಳೆಂದೇ ಪರ್ವತಂ ಮೋಹದಿಂ
  ದುಸುರಂ ಗುಂಫಿಸುತಲ್ಕದಂ ಸೃಜಿಪುದುಂ! ಭಾನಿಲ್ಲದಿರ್ಪೀ ಜಗಂ
  ಕರಿದೆಂದಾ ,ಮನದೀಪ್ತಿಯಿಂದಲೆ ಬನಂ, ಕಗ್ಗಳ್ತಲಂ ತಳ್ವುದುಂ!
  ನೆರವಾದತ್ತೆನೆ ,ಲೋಕದೊಳ್ ಮನುಜಗಂ, ವೈಚಿತ್ರ್ಯಮೈ ಸೃಷ್ಟಿ ಬಲ್!

  (ಮೇಘವು ಇರದಿದ್ದಲ್ಲಿ ಅದನ್ನು ಸೃಜಿಸಿಕೊಳ್ಳುತ್ತಿರುವ ಪರ್ವತ, ಬೆಳಕೇ ಇಲ್ಲದಿರುವಾಗ ಮನಸ್ಸಿನ ಬೆಳಕಿನಿಂದ ಕತ್ತಲನ್ನು ಅಟ್ಟುತ್ತಿರುವ ಬನ…ಇವುಗಳು ಮನುಷ್ಯರಿಗೆ ನೆರವಾಗಿರುವುದಾದರೆ(ಮಾದರಿಯಾಗಿ), ಈ ಸೃಷ್ಟಿಯು ಅಚ್ಚರಿಯನ್ನೇ ಮೂಡಿಸುತ್ತದೆ!)

  • ಕಾಂಚನಾ, ಕಲ್ಪನೆ ಸೊಗಸಾಗಿದೆ. ಕೆಲವೆಡೆ ಬಿಂದುಗಳು ಬೇಕಿಲ್ಲವೇನೋ ಎಂಬ ಸಂದೇಹವಿದೆ (ಇರದುಂ, ಕರಿದೆಂದುಂ, ಸೃಷ್ಟಿಯುಂ.. )

   • ಸವರಣೆಯನ್ನು ಮಾಡಿದ್ದೇನೆ. ಇನ್ನೆರಡು ಕಡೆಯಲ್ಲಿ ಬಿಂದುವಿರುವದು ಸರಿಯಿರಬಹುದೇನೋ! ಧನ್ಯವಾದಗಳು.

    • “ವೈಚಿತ್ರ್ಯಮೈ ಸೃಷ್ಟಿ ಬಲ್ “ಎಂಬುದರ ಬದಲಾಗಿ “ವೈಚಿತ್ರ್ಯಮೈ ಸೃಷ್ಟಿಯೊಳ್” ಎಂದಾಗಿಸಿದರೆ ಸರಿಯಾಗಬಹುದು. ಉಳಿದಂತೆ ಸರಿಯಾಗಿದೆಯೆಂದುಕೊಂಡಿರುವೆ.

 15. ಒಲೆತಿಹೆಯೇನೆಲೆ ನೀಂ ಮ-
  ಮ್ಮಲ ಮುಲುಗಿ ಮಲೆತಿಹೆಯೇಂ ಮಹಾತಾಯೇ ಮೇಣ್ ।
  ಮೊಲೆವಾಲುಣಿಸೆನೆ ಹಾಲಾ-
  ಹಲವನೊಸರುತಿಂತಳಿಪಿಹೆಯೇಂ ಕವಿದಿರುಳೊಳ್ ।।

  • ಉಷಾ, ನೀವು ಪದ್ಯದ ಅರ್ಥವನ್ನು ತಿಳಿಸಿದಲ್ಲಿ ಒಳಿತು. ನಾನು ತಿಳಿದುಕೊಂಡಂತೆ ಚೆನ್ನಾಗಿದೆ.ಹಾಲಾಹಲಮನ್ ಎಂದಾಗಬೇಕು

   • ಧನ್ಯವಾದಗಳು ಶಕುಂತಲಾ.
    ಹೊಗೆ ಉಗುಳುತ್ತಿರುವ ಅಗ್ನಿಪರ್ವತ – ಮೆಲೆಹಾಲುಣಿಸುವ ಭೂಮಿತಾಯಿ ವಿಷವನ್ನುಣಿಸಿದಂತೆ ಕಂಡ ಕಲ್ಪನೆಯಲ್ಲಿ – ಅವಳ ತಳಮಳವನ್ನು ಅನುಪ್ರಾಸದಲ್ಲಿ ತರುವ ಪ್ರಯತ್ನ.

    ಒಲೆತಿಹೆಯೇನೆಲೆ ನೀಂ ಮ-
    ಮ್ಮಲ ಮುಲುಗಿ ಮಲೆತಿಹೆಯೇಂ ಮಹಾತಾಯೇ ಮೇಣ್ ।
    ಮೊಲೆವಾಲುಣಿಸೆನೆ ಹಾಲಾ-
    ಹಲಮನೊಸರುತಿಂತಳಿಪಿಹೆಯೇಂ ಕವಿದಿರುಳೊಳ್ ।।

 16. ದಿನಕರನಳ್ತಿಯಿಂದೆ ಪಡುತಾವಿಗೆ ಸಂಧ್ಯೆಯಿರಲ್ಕೆ ಪೋದೊಡಂ,
  ತನುಮನವುರ್ಕಿವಂದು ಗಗನಂ ಪೆರೆಯಾಗಮದಿಂದೆ ಭಾಸಿಸಲ್,
  ಜನಪದಮಂತು ಪೂರ್ಣಸುಖದೊಳ್, ಕನಸನ್ವರಿಸಲ್ಕೆ ರಾತ್ರಿಯೊಳ್,
  ಘನನಗಚಿತ್ತದೀ ವಿರಹತಾಪದಿನಚ್ಚರಿಗೊಂಬರೇಂ ಬುಧರ್?

  • ಕಾಂಚನಾ , ನೀವು ಅರ್ಥವನ್ನೂ ನೀಡಿದಲ್ಲಿ , ನಿಮ್ಮ ಕಲ್ಪನೆ ಏನೆಂದು ಸ್ಪಷ್ಟವಾಗಬಹುದು. ಪೆರೆಯಾಗಮಿಸಲ್ಕೆ , ಸಖಿಸೌಧಕೆ.. ಏನೆಂದು ಸರಿಯಾಗಿ ತಿಳಿಯಲಿಲ್ಲ. ನಿದಿರಾವಶ ಎಂಬುದು ನಿದ್ರಾವಶ ಎಂದಾಗಬೇಕೇನೋ ಎಂದೆನಿಸುತ್ತದೆ. (ಹಾಗಾದಲ್ಲಿ ,ಛಂದಸ್ಸಿಗೆ ಹೊಂದಲಾರದು).

   • ತುಂಬಾ ಧನ್ಯವಾದ ಶಕುಂತಲಾ .ನಿದಿರಾವಶ,ಸಖಿಸೌಧ -ತಪ್ಪೆಂದು ತಿಳಿದು ಸವರಣೆಯನ್ನು ಮಾಡಿದೆ. ೨ ನೇ ಸಾಲನ್ನು ಸರಿಯಾಗಿ ಅರ್ಥವಾಗುವಂತೆ ಬದಲಿಸಿರುವೆನೆಂದುಕೊಂಡಿರುವೆ.
    (ದಿನಕರನು ಸಂಧ್ಯೆಯ ಮನೆಗೆ ಪ್ರೀತಿಯಿಂದ ಹೋಗಿರಲಾಗಿ, ಚ್ಂದ್ರನ ಆಗಮನದಿಂದೆ ಆಗಸವು ಶೋಭಿಸುತ್ತಿರಲಾಗಿ, ಜನರಂತೂ ಸುಖದಿಂದ ಕನಸನ್ನು ವರಿಸಿರಲು, ನಗದ ಚಿತ್ತದಲ್ಲಿ ಉಂಟಾದ ವಿರಹವೇಧನೆಯನ್ನು ತಿಳಿದವರು ,ಅಚ್ಚರಿಯೆಂದೆನ್ನುತ್ತಾರೆಯೇ?)

    • ತುಂಬ ಸುಂದರವಾದ ಕಲ್ಪನೆ ಕಾಂಚನಾ.ನಾನು ತಿಳಿದಿರುವಂತೆ, ವಿರಹವೇದನೆಯೆಂಬುದು ಸರಿ. ವಿರಹವೇಧನೆ-ತಪ್ಪು. ವೇದನೆಯೆಂದರೆ ವೇದೆಯೆಂಬ ಅರ್ಥವಿದೆಯಾದರೂ ವಿರಹವೇದೆಯೆಂಬ ಸಮಾಸವು ಸರಿಯಾಗಲಾರದೆನಿಸುತ್ತದೆ. (?) ವಿರಹಶೋಕ ಅಥವಾ ವಿರಹದುಃಖ ಎಂದು ತಿದ್ದಬಹುದು ,ಅಲ್ಲವೆ ?ಪಡುಗೇಹ ಅರಿಸಮಾಸವಲ್ಲವೆ? ಇನ್ನೊಂದು ಸಂದೇಹ- ನಭತಾಂ ಎಂಬುದು ಸರಿಯೆ? ಅಥವಾ ನಭಂ ತಾಂ ಎಂದಾಗಬೇಕೆ ?

     • ಧನ್ಯವಾದಗಳು 🙂 ಈಗಳಿದು ಸರಿಯಾಗಿರ್ಪುದೆಂದು ಭಾವಿಪೆಂ

     • ವ್ಯಾಕರಣ ಸರಿಯಾಗಿದೆ. 🙂 ಕೊನೆಯ ಪಾದವನ್ನು…..ವಿರಹತಾಪದಿನಚ್ಚರಿಗೊಂಬರೇಂ ಬುಧರ್ ? ಎಂದಾಗಿಸಿದಲ್ಲಿ ಒಳಿತು. ಅಂತೆಯೇ ಮೊದಲನೇ ಪಾದವನ್ನು ಇನ್ನೂ ಚೆನ್ನಾಗಿಸಬಹುದು.

 17. ಶನಿವಾರಮಾಯ್ತೀಗಳಾದೊಡಂ ಆವೊಂದು
  ಕೊನರದೈ ಕಲ್ಪನೆಯು ಚಿತ್ರವಿದಕೆ|
  ಇನವಾಸರವು ಕಳೆದು ನವಪೇಯಕಾಗಾನು
  ದಿನವನೆಣಿಸುತೆ ಕೂತೆ ಸೋಮಗಾಗಿ(ಮಣ್ಡೆ-ಶರ್ಮ)||

 18. ಪೊಗೆವೊಲು ಬಾನಿನಿಂ ಸುರಿದುದೇಂ ಸರಿಮೋಡವು ರಾತ್ರಿಯಾದಿನಂ
  ಬಗೆದೊಗೆದಿರ್ದ ಧೂಳದೊ ಗಡಾ ಗಣಿಗಾರಿಕೆ ಸಾಗುದೇನಿದುಂ
  ಧಗೆಗೊಳೆ ಭೂಮಿತಾನೊಳಗಿನಿಂದುಗುಳಿರ್ದುದೆ ಬಾಯ್ದೆರೆರ್ದು ಮೇ-
  ಣಗಣಿತ ತಾರೆತಾಂ ಮಿಣುಕುವೇಂ ಕಿಡಿಯೋಲ್ ಸಿಡಿದಗ್ನಿಪರ್ವತಂ ।।

  • ಉಷಾ ,ವೃತ್ತದಲ್ಲಿ ಒಳ್ಳೆಯ ಯತ್ನ. ಕಲ್ಪನೆ ಚೆನ್ನಾಗಿದೆ. ಛಂದಸ್ಸು ತಪ್ಪಿಲ್ಲ. ವ್ಯಾಕರಣದಲ್ಲಿ ಕೆಲವೆಡೆ ಸವರಣೆಗಳು ಬೇಕಾಗಿವೆ. ತಪ್ಪೊಪ್ಪುಗಳ ಬಗ್ಗೆ ಚಿಂತಿಸದೆ ನಿರಂತರವಾಗಿ ವೃತ್ತದಲ್ಲಿ ಪ್ರಯತ್ನಿಸುತ್ತಿರಿ.

   • ಧನ್ಯವಾದಗಳು ಶಕುಂತಲಾ,
    ವ್ಯಾಕರಣ ದೋಷಗಳನ್ನು ದಯವಿಟ್ಟು ತಿದ್ದಿಕೊಡಿ, ಮುಂದಿನ ವೃತ್ತಗಳಲ್ಲಿ ಸರಿಪಡಿಸಿಕೊಳ್ಳಲು ಸಹಾಯವಾಗುವುದು.

  • pogevolu sariyaada prayOgavE? pogeyavol AgabEkallave?

 19. ಮೆರೆವ ನೀಲಚ್ಛಾಯೆ ಮೈವೆತ್ತು ಬ೦ದ೦ತೆ
  ಮಿರುಗುವಣಿಗಳ ಮಾಲೆ ಪೊಳೆಗಣ್ಣ ಕಾ೦ತಿಯಲಿ
  ಸುರಿವ ಭೀತಿಯ ನೋಟ, ಕಗ್ಗತ್ತಲೆಯ ಕೇಶ ಕೆದರಿರ್ದ ಮುಡಿಯಿ೦ದಲಿ
  ಹರಿಹಾಯ್ದು ಬರುತಿರಲು ಮಾ೦ತ್ರಿಕನಿರುಳಿನ೦-
  ಬರದ೦ತಮಾವಾಸ್ಯೆ ಹರಡಿರುವ ನೀರವತೆ
  ಸರಿವ೦ತೆ ಮ೦ತ್ರದಲಿ, ಹಾರಿಹೋದುದು ತಿರೆಯ ಮೆಟ್ಟಿರ್ದ ಭೂತವೀಗ

 20. ಕಡುಲಜ್ಜಾನ್ವಿತನೈದುಬಾರದೊಡೆ ರಿಕ್ತಂ ಗಾತ್ರದಿಂ ಕಾಂತಿಯಿಂ
  ದೊಡಲಂ ಪರ್ಬಿದ ಪಚ್ಚೆಯಂಬರಮದೋ ಕರ್ಪಾದುದೈ ಬೇಗೆಯಿಂ
  ತೊಡಪೊಳ್ ರನ್ನಮದಾಗುತಗ್ನಿಶಿಖೆಯೊಲ್ ಸ್ವರ್ಣಂ ಸುಡಲ್ ಕೆಂಡದೊಲ್
  ತಡೆಯಲ್ಕಾಗದ ಕೂರ್ಮೆಯೊತ್ತಡಗಳಿಂ ಪಾಲ್ಚಿಮ್ಮಿತೇಂ ಭೂಸ್ತನಂ?

  [ಗಾತ್ರದಿಂದ ಹಾಗೂ ಕಾಂತಿಯಿಂದ ರಿಕ್ತನಾದವನು (ಮಗ) ಲಜ್ಜಾನ್ವಿತನಾಗಿ ಬರದಿರಲು, (ಭೂ) ತಾಯಿಗಾದ ತಾಪದಿಂದ, ಅವಳುಟ್ಟ ಹಸಿರು ಬಟ್ಟೆ ಕಪ್ಪಾಗಿ, ಅವಳು ತೊಟ್ಟ ರತ್ನಗಳು ಅಗ್ನಿಶಿಖೆಯಂತಾಗೆ, ಚಿನ್ನವು ಕೆಂಡದಂತಾಗೆ, ಪ್ರೀತಿಯ ಒತ್ತಡಗಳನ್ನು ತಡೆಯಲಾರದೆ (ಮಗನಿಗಾಗಿ) ಸ್ತನವು ಹಾಲನ್ನು ಚಿಮ್ಮಿತೇ ?],

  • ಕಲ್ಪನೆ ಎಲ್ಲ ತು೦ಬ ಚೆನ್ನೆನಿಸಿತು ಸರ್. ಆದರೆ ಕಪ್ಪು ಬೂದು ಬಣ್ಣದ ಧೂಮರಾಶಿಗೂ ಹಾಲಿಗೂ ಏಕೋ ಸಾಮ್ಯ ಸರಿ ಕಾಣುತ್ತಿಲ್ಲ…

 21. ಉರುಳಿ ಪೋಗಿರೆ ಸೂರ್ಯನುದಧಿಯೊ –
  ಳಿರುಳು ಮೆತ್ತಗೆ ಸಾರ್ಚಿ ಬರುತಿರ –
  ಲೆರಕಮಾಗಿರೆ ದಿನದ ದಣಿಮೆಯು ಗಳಿತ ವಿಶ್ರಮದೊಳ್
  ಭರದೊಳಡುಗೆಯು ಬೇಯುತಿರ್ದೊಡೆ
  ಮೆರೆವ ತಾರೆಗಳನ್ನು ನೋಡುತೆ
  ಸುರುಳಿ ಹೊಗೆಯನ್ನುಗುಳೆ ಯತ್ನಿಸುತಿರ್ಪ ವಿಶ್ರಾಂತ
  🙂

  • Hahhaa.. chennagide

  • ರಾಮಚಂದ್ರರೆ, ವಿನೋದವಾದ ಕಲ್ಪನೆ ಚೆನ್ನಾಗಿದೆ. ಮೂರನೇ ಪಾದ ಸರಿಯಾಗಿ ಅರ್ಥವಾಗಲಿಲ್ಲ ( ಗಳಿತ ವಿಶ್ರಮ ) ಕೊನೆಗೆ, ವಿಶ್ರಾಂತಂ ಎಂದಾಗಬೇಕೆ ?

 22. ಜ್ವಾಲಾಮುಖಿಯ ಬೆಂಕಿಯಾದೊಡೇನೆಲ್ಲಮನು
  ಫಾಲಾಕ್ಷನುರಿಗಣ್ಣಿನೊಲು ಸುಟ್ಟೊಡೇಂ?
  ನೀಲಾಂಬರದೆ ಸಾಟಿಗಟ್ಟದೆಲೆ ಚುಕ್ಕಿಗಂ
  ತೇಲಿಬಿಡದಿದೆ ಕಿಡಿಯನೊಂದನುಂ ತಾಂ||

  • ಪರ್ವತವು ಜಿಪುಣವೆಂದಿರಾ ? 🙂

 23. ತಣಿಸುತುಮೆಲ್ಲರಂ ನಲಿದ ಕಾನನಮನ್ಕವಿದಿರ್ಪೊಡಂ ತಮಂ,
  ಕುಣಿದೊಗೆದೊರ್ಪುತಿರ್ಪ ನಭತಾರೆಗಳನ್ಪೊಗೆ ಕಾಡುತಿರ್ಪೊಡಂ
  ಹಣಿಯುತೆ ಘೋರಕಷ್ಟಮನೆ ನಿಂದುರೆ ಶೈಲಮೆ ಸೀಳಿಸೀವೊಡಂ,
  ಗಣನೆಗೆ ತಕ್ಕುದೇಂ ಮನುಜನಂ ಸಲೆ ಶೋಷಿಪ ರಿಕ್ತಬಾಧೆಗಳ್!

  (ಕಾಡು, ನಭತಾರೆ, ಶೈಲಗಳೇ ಸಂಧಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಮನುಜನನ್ನು ಕಾಡುವ ಸಣ್ಣಪುಟ್ಟ ನೋವುಗಳೇನು ದೊಡ್ಡದು?)

  • ಕಾಂಚನಾ,ಕಲ್ಪನೆ ಮೂಡಲು ಕಷ್ಟವಾದ ಚಿತ್ರಕ್ಕೂ ವಿವಿಧಕಲ್ಪನೆಗಳ ಪದ್ಯಗಳನ್ನು ಹಲವು ಬಗೆಯ ಛಂದಸ್ಸುಗಳಲ್ಲಿ ಉಣಬಡಿಸುವುದಕ್ಕಾಗಿ ಧನ್ಯವಾದಗಳು.
   ಕೆಲವು ಸವರಣೆಗಳು- ಕಾಡ್ವೊಡಂ ,ಗಣಿಕೆಗೆ ಎಂಬವುಗಳನ್ನು ,ಕಾಡುವೊಡಂ, ಗಣನೆಗೆ ಎಂದು ಸವರಬೇಕು.( ಕಾಡುವೊಡಂ ಛಂದಸ್ಸಿಗೆ ಹೊಂದದು )
   ಎರಡನೇ ಪಾದವನ್ನು “———–ನಭತಾರೆಗಳನ್ಪೊಗೆ ಕಾಡುತಿರ್ಪೊಡಂ “ಎಂದು ಸವರಬಹುದು.

 24. ಕರಿಗಳ್ತಲಂ ತೊಡೆಯೆ ತೋರಿದ ಭಾಸಂ,
  ಬರಿಯಾಗಸಾಂಗಣದ ತಾರೆಯ ವೃಂದಂ,
  ಚಿರಗೋಪಮಂ ತ್ಯಜಿಪ ಶಕ್ತಿಯ ಶೈಲಂ,
  ಧರೆಯೊಳ್ ದಿಟಂ ಸೊಗದೆ ಭೂಷಿಪುದಲ್ತೇಂ!

  • ಕಾಂಚನಾ, ಕಲ್ಪನೆ ಚೆನ್ನಾಗಿದೆ. ಕೆಲವು ಸಂದೇಹಗಳು-ಯಾವ ಛಂದಸ್ಸು ? ಆಗಸಾಂಗಣ- ಸರಿಯೆ? ಚಿರಗೋಪ ಎಂದರೇನು ?

   • ಚಿರಗೋಪ= ದೀರ್ಘಕಾಲದ ಸಿಟ್ಟು ?
    ಆಗಸಾಂಗಣವು ತಪ್ಪೆಂದು ತೋರುತ್ತಿದೆ “ಬರಿಯಂಬರಂ ಬೆಳಗೆ ತಾರೆಯ ವೃಂದಂ” ಎಂದು ತಿದ್ದುವೆ.
    ಇದು “ಕಲಹಂಸ”ವೃತ್ತವು.

    • ಧನ್ಯವಾದಗಳು.
     ಚಿರಕೋಪ ಎಂದಾಗುವುದು. ಮೂರನೇ ಪಾದ ಅರ್ಥವಾಗಲಿಲ್ಲ.
     ಎರಡನೇ ಪಾದವನ್ನು ಪುನಃ ತಿದ್ದಬೇಕಿದೆ.

 25. || ಮದಾಲಸಾವೃತ್ತ ||

  ಕೂಡಿರಲ್ ಪ್ರಭೆಯ,ಬಾಳುತೆ ಬೆಟ್ಟಂ ಪಚ್ಚೆಯ ಕಾಡಿನ ತಾಣದೊಳ್,
  ನೋಡುತುಂ ಬಯಸೆ,ನೀಲಿಯ ಬಾನೊಳ್ ಭಾಸಿಪ ಮೋಹಕತಾರೆಯಂ,|
  ಬಾಡಿರಲ್,ಸಿಗದೆ ದುಃಖಿಸಿ ಸೋಲಲ್,ರಮ್ಯಮನೋಹರಕಾಮಿತಂ,
  ಮೂಡೆ ಶೋಭಿಪುದು, ಲಂಬಿಸೆ ನೋವಿಂ ಶ್ವಾಸವ ,ಮೋಡದ ಚಿತ್ರಣಂ ||

  • ಬಹಳ ಚೆನ್ನಾಗಿದೆ, ಫಲಿಸದ ಆಸೆಯ ಚಿತ್ರಣ 🙂

  • New chandas.. gati chennagide.. thanks for the bringing this to light..

   • ಚೆನ್ನಾಗಿದೆ. ವಿರಳಪ್ರಚುರವಾದ ಈ ವೃತ್ತವು ಖಚರಪ್ಲುತಕ್ಕೆ ಮಧ್ಯದಲ್ಲಿ ಒಂದು ಲಘ್ವಕ್ಷರ ಹೆಚ್ಚು ಮಾಡಿದರೆ ಬರುತ್ತದೆ. 😉
    ಹೊಸ ವೃತ್ತವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  • ಕಾಂಚನಾ.ಚೀದಿ,ಕೊಪ್ಪಲತೋಟ ಹಾಗೂ ಪ್ರಸಾದರಿಗೆ ನನ್ನ ನಲ್ಮೆಯ ವಂದನೆಗಳು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)